ಲೈಂಗಿಕ ಅಲ್ಪಸಂಖ್ಯಾತರ ವಿಷಯವನ್ನು ಕೇಂದ್ರೀಕರಿಸಿ ಬರೆದ ಕಥೆ, ಕವಿತೆಗಳ ಸಂಕಲನ ಕಾಣುವಂತೆ ಕಾಣದಂತೆ, 29.6.2024ರಂದು ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ. ಇದನ್ನು ವಿಕ್ರಮ ಬಿ. ಕೆ. ಸಂಪಾದಿಸಿದ್ದಾರೆ. ಈ ಸಂದರ್ಭದಲ್ಲಿ ಆರ್ಟ್ ಆ್ಯಕ್ಟಿವಿಸ್ಟ್ ಕಾರ್ತಿಕ ಹೆಬ್ಬಾರ ಬರೆದ ಗುಲ್ಮೊಹರ್ ಕಥೆ ನಿಮ್ಮ ಓದಿಗೆ.
ಪ್ಲೇನ್ ಲ್ಯಾಂಡಿಂಗಿಗೆ ಸಿದ್ಧವಾಗ್ತಾ ಇತ್ತು. ಸೀಟ್ ಬೆಲ್ಟ್ ಸರಿಪಡಿಸಿಕೊಂಡು ಕಿಟಕಿಯಿಂದಾಚೆ ಕಾತರದಿಂದ ನೋಡಿದೆ. ಒಂಥರಾ ಕಳವಳ, ಉತ್ಸಾಹ ಎಲ್ಲಾ ಒಟ್ಟಿಗೆ ಕೂಡ್ಕೊಂಡು ಬಂತು. ಕಳೆದ ತಿಂಗಳು ನನಿಗೆ ಅರವತ್ತರ ಸಂಭ್ರಮ, ಲಂಡನ್ ಸ್ನೇಹಿತರೆಲ್ಲಾ ಸೇರಿ ಒಂದು ಸಣ್ಣ ಪಾರ್ಟಿ ಕೊಟ್ಟಿದ್ರು. ಊರಿಗೆ ಹೊರಟಿರೋ ಬಗ್ಗೆ ಹೇಳ್ತಾ ಅವಾಗಲೂ ಒಮ್ಮೆ ಕಣ್ಣು ತೇವ ಆಗಿತ್ತು. ವಯಸ್ಸೆಷ್ಟೇ ಆದರೂ, ನಮ್ಮೂರು, ನಮ್ಮ ಜನ, ನಮ್ಮ ಭಾಷೆ ಅನ್ನೋದು ಬಂದಾಗ ನಾವೆಲ್ಲಾ ಚಿಕ್ಕಮಕ್ಕಳಾಗಿಬಿಡ್ತೀವೇನೋ. ಮೂವತ್ತು ವರ್ಷದ ಹಿಂದೆ, ಮತ್ತೆ ಈ ಊರಿನ ಕಡೆ ತಿರುಗಿ ನೋಡಲ್ಲ ಅನ್ನೊಂಡು ಹೋಗಿದ್ದೆ! ಆವಾಗಲೂ ಫ್ಲೈಟ್ನಲ್ಲಿ ಕಿಟಕಿ ಸೀಟ್ನಲ್ಲೇ ಕೂತಿದ್ದೆ, ಆವಾಗಲೂ ಒಂಥರಾ ಕಳವಳ ಇತ್ತು. ಹೊಸ ದೇಶದಲ್ಲಿ ಹೊಸ ಅಸ್ತಿತ್ವ ಕಳ್ಕೊಳ್ಳೋದಕ್ಕೆ ಹೋಗ್ತಾ ಇದ್ದೆ. ಮೂವತ್ತು ವರ್ಷದಲ್ಲಿ ಒಂದು ಸಲಾನೂ ಬೆಂಗಳೂರಿಗೆ ಬಂದಿರ್ಲಿಲ್ಲಾ ಆದರೆ, ಬೆಂಗಳೂರು ನನ್ನನ್ನ ಯಾವತ್ತೂ ಬಿಟ್ಟು ಹೋಗೇ ಇರ್ಲಿಲ್ಲಾ! ಬೇರೆ ದೇಶದಲ್ಲಿ, ಬೇರೆಯವನಾಗೇ ಉಳಿದುಬಿಟ್ಟಿದ್ದೆ. ಇವಾಗ ಹಿಂತಿರುಗಿ ಬರ್ಲೇಬೇಕಾದ ಪರಿಸ್ಥಿತಿ ಬಂದಿತ್ತು. ಇದರ ಬಗ್ಗೆ ಸಂತೋಷ ಇಲ್ಲದಿದ್ರೂ ಪರ್ವಾಗಿಲ್ಲಾ, ಆದ್ರೆ ಆತಂಕ ಯಾಕಾಗ್ತಾ ಇದೆ ಅನ್ನೋದರ ಬಗ್ಗೆ ಯೋಚನೆ ಶುರುವಾಯ್ತು!
ಹೊಟ್ಟೆಯಲ್ಲಿ ಚಿಟ್ಟೆ ಪಟಪಟ ಅಂತ ರೆಕ್ಕೆ ಬಡೀತಾ ಇತ್ತು. ಮೈಯೆಲ್ಲಾ ಬೆಚ್ಚಗಾಗಿತ್ತು. ವಿಮಾನ ಲ್ಯಾಂಡ್ ಆಗ್ತಿದ್ದ ಹಾಗೆ, ಈ ನೆಲದ ಗುರುತ್ವಾಕರ್ಷಣೆಗೇನೋ ಗೊತ್ತಿಲ್ಲ ಆದರೆ ನನ್ನೊಳಗೆ ಗೊತ್ತಿಲ್ಲದ ಹಾಗೆ ಏನೋ ಒಂದು ಮಿಂಚಿ ಹೋಯ್ತು. ದೀರ್ಘವಾದ ಉಸಿರು ಬಿಟ್ಟು, ನಿಧಾನಕ್ಕೆ ಎದ್ದೆ. ಕ್ಯಾಬಿನ್ ಲಗೇಜ್ ಎಲ್ಲಾ ಇಳಿಸಿಕೊಂಡು ನಡ್ಕೊಂಡು ಆಚೆ ಬಂದೆ. ನನ್ನ ಜೀವನದಲ್ಲಿ ಇದೊಂದು ಮೈಲಿಗಲ್ಲೇನೋ ಅಂತ ಅನ್ನಿಸ್ತಾ ಇತ್ತು. ಬಹಳ ಕಾತರ, ಉತ್ಸಾಹದಿಂದ ನಡ್ಕೊಂಡು ಬರ್ತಿದ್ದೆ. ಇದ್ದಕಿದ್ದ ಹಾಗೆ ಯಾಕೋ ಗೊತ್ತಿಲ್ಲಾ ಖಿನ್ನತೆ ಆವರಿಸಿಕೊಳ್ಳೋದಕ್ಕೆ ಶುರುವಾಯ್ತು. ನನಗೇನೋ ಇದೊಂದು ಮೈಲಿಗಲ್ಲಾಗಿರಬಹುದು, ಆದರೆ ನನ್ನ ಈ ಭಾವನೆಗಳನ್ನಾ ಹಂಚ್ಕೊಳ್ಳೋದಕ್ಕೂ ಯಾರಿಲ್ಲವಲ್ಲಾ ಅಂತಾ ಬೇಸರವಾಯ್ತು. ಭಾರವಾದ ಹೆಜ್ಜೆ ಇಟ್ಕೊಂಡು ಲಗೇಜ್ ಬೆಲ್ಟ್ ಕಡೆಗೆ ಬಂದು, ತಂತಮ್ಮ ಲಗೇಜ್ಗಳಿಗೆ ಕಾಯ್ತಿರೋ ಎಲ್ಲರನ್ನಾ ನೋಡ್ತಾ ನಿಂತೆ. ನನ್ನ ಬ್ಯಾಗ್ ತೇಲ್ಕೊಂಡು ಬಂತು. ನಿಧಾನಕ್ಕೆ ಅದನ್ನಾ ಎಳ್ಕೊಂಡು ಆಚೆ ಬಂದೆ. ನಾನು ಬಿಟ್ಟು ಹೋಗಿದ್ದ ಬೆಂಗಳೂರಿಗೆ ಸಂಬಂಧಾನೇ ಇಲ್ಲವೇನೋ ಅನ್ನೋಹಾಗಿತ್ತು ಈ ಏರ್ಪೋರ್ಟು. ಆಚೆ ಫಿಲ್ಟರ್ ಕಾಫಿಯ ಘಮ ಗಾಳಿಯನ್ನೆಲ್ಲಾ ಆವರಿಸಿತ್ತು. ಸುತ್ತಲೂ ನೋಡಿದೆ, ಎಲ್ಲಾ ಅಪರಿಚಿತ ಮುಖಗಳು. ದೂರದಲ್ಲಿ ಅರ್ಜುನ್ ರಾವ್ ಅನ್ನೋ ಪರಿಚಯದ ಹೆಸರಿನ ಬೋರ್ಡ್ ಕಾಣಿಸ್ತು, ಅದನ್ನಾ ಹಿಡ್ಕೊಂಡಿದ್ದವನು ಅಪರಿಚಿತ ವ್ಯಕ್ತಿಯಾಗಿದ್ರೂ, ನನ್ನ ಹೆಸರಿನ ಬೋರ್ಡ್ ಹೊತ್ತಿದ್ದ ಅನ್ನೋ ಕಾರಣಕ್ಕೆ ಆಪ್ತ ಅನ್ನಿಸಿಬಿಟ್ಟ! ವೇವ್ ಮಾಡಿ ಅವನತ್ತ ನಡೆದು ಲಗೇಜ್ ಎಲ್ಲಾ ಅವನಿಗೆ ಕೊಟ್ಟು ಕಾರಿನಲ್ಲಿ ಕೂತೆ.
ಕಿಟಕಿ ತೆಗೆದು ನಿಧಾನಕ್ಕೆ ಬೆಂಗಳೂರಿನ ಗಾಳಿಯನ್ನ ನನ್ನೊಳಕ್ಕೆ ತುಂಬಿಸ್ಕೋತಾ ಕೂತೆ, ಬೆಂಗಳೂರು ನನ್ನನ್ನಾ, ನಾನು ಬೆಂಗಳೂರನ್ನಾ ಅವಾಕ್ಕಾಗಿ ನೋಡ್ತಾ ಪಯಣ ಮುಂದುವರೀತು, ನಾನೂ, ಈ ಊರೂ ಒಂದೇ ಅನ್ನಿಸ್ತಾ ಹೋಯ್ತು. ತಾನು ಬೇರೆ ಏನೋ ಆಗೋದಕ್ಕೆ ಹೋಗಿ, ಬೇರೆ ಆಗಿ, ಸ್ವಲ್ಪ ಒಡ್ಡು, ಸ್ವಲ್ಪ ಸುಂದರವಾಗಿ, ಸ್ವಲ್ಪ ಹಳೇದೇ ಆಗಿ ಉಳಿದು, ಸ್ವಲ್ಪ ಹೊಸತಾಗಿ ಬದಲಾಗಿ ಒಟ್ನಲ್ಲಿ ಏನೋ ಒಂದಾಗಿ ಉಳಿದ್ವಿ ನಾವಿಬ್ರೂ. ಟ್ರಾಫಿಕ್ ನಿಧಾನವಾಗಿ ಮುಂದೆ ಹೋಗ್ತಾ ಇತ್ತು, ಆಕಾಶದತ್ತ ನೋಡಿದೆ, ಮೋಡಗಳ ಚಿತ್ತಾರ ಎಲ್ಲಾಕಡೆ ಆವರಿಸಿತ್ತು. ಸಣ್ಣ ಹುಡುಗ ಆಗಿದ್ದಾಗ, ಬಸವನಗುಡಿಯ ನಮ್ಮ ಮನೆ ಹಿತ್ತಲಲ್ಲಿ ಕೂತು ಘಂಟೆಗಟ್ಟಲೆ ಮೋಡಗಳನ್ನಾ ನೋಡ್ತಾ ಇದ್ದುಬಿಡ್ತಿದ್ದೆ. ಅದೇ ಮನೆಯನ್ನಾ ಮಾರೋದಕ್ಕೆ ಈಗ, ಮೂವತ್ತು ವರ್ಷಗಳಾದಮೇಲೆ ವಾಪಾಸ್ ಬೆಂಗಳೂರಿಗೆ ಬಂದಿದ್ದು ನಾನು. ನಮ್ಮ ಮನೆ! ನಾನು ಹುಟ್ಟಿ ಬೆಳೆದ ಮನೆ, ಕನಸುಗಳನ್ನು ಕಂಡ ಮನೆ, ಆಟ ಆಡಿದ ಮನೆ, ಕೋಪ ಮಾಡ್ಕೊಂಡೋ, ಇನ್ನೊಮ್ಮೆ ಉಸಿರು ಕಟ್ಟೋ ಹಾಗೆ ಆತ್ಕೊಂಡು ಕೂತುಕೊಂಡಿರ್ತಿದ್ದ ಮನೆ. ಬೇಳೀತಾ ಬೆಳೀತಾ, ನಾನು ನಾನೇ ಆಗಿರೋದಕ್ಕಾಗದೆ ಉಸಿರು ಕಟ್ಟಿದ ಹಾಗಾಗಿ, ನಾನೇ ಬಿಟ್ಟು ಹೋದ ಮನೆ. ನನ್ನ ಮನೆ.
ಅಪ್ಪಾ ಅಮ್ಮಾ ತೀರ್ಕೊಂಡು ಎಂಟು ವರ್ಷ ಆಯ್ತು. ತಿರುಪತಿಗೆ ಹೋಗ್ತಾ ಇದ್ದಾಗ ಕಾರ್ ಆಕ್ಸಿಡೆಂಟ್ನಲ್ಲಿ ತೀರ್ಕೊಂಡಿದ್ರು ಇಬ್ರೂ. ಆ ಸಮಯದಲ್ಲಿ ನಾನು ಕೆನಡಾಗೆ ಹೋಗಿದ್ದೆ, ನನಗೆ ಸುದ್ದಿ ಮುಟ್ಟೋವಷ್ಟರಲ್ಲಿ ಎಲ್ಲಾ ಮುಗಿದಾಗಿತ್ತು. ಅವರೇ ಇಲ್ಲದಮೇಲೆ, ನನಗೆ ನಂಬಿಕೆ ಇಲ್ಲದಿರೋ ಯಾವುದ್ಯಾವುದೋ ಶಾಸ್ತ್ರಗಳ ನೆಪ ಮಾಡ್ಕೊಂಡು ಯಾಕೆ ಹೋಗಬೇಕು ಅಂತಾ ಬರ್ಲೇ ಇಲ್ಲಾ ನಾನು! ಅಪ್ಪಾ ಅಮ್ಮಾ ನನ್ನ ಹತ್ತಿರ ಒಮ್ಮೆ ಮಾತು ಬಿಟ್ಟವರು, ಕಡೆಗೂ ಹಾಗೇ ಮಾತಾಡದೇ ಹೋಗಿಬಿಟ್ಟಿದ್ರು. ಮಾತು ಕಲಿಸಿದ ಅಪ್ಪಾ ಅಮ್ಮಾನೇ ಮಾತು ಬಿಟ್ಟುಬಿಡ್ತಾರಲ್ಲಾ, ಸಂಬಂಧಗಳು ಅನ್ನೋದು ಎಷ್ಟು ವಿಚಿತ್ರ ಅಲ್ಲವಾ? ಅಪ್ಪಾ ಅಮ್ಮಾ ಹೋದಮೇಲೆ ನಮ್ಮ ಬಸವನಗುಡಿ ಮನೇನೆಲ್ಲಾ ಶ್ರೀಪತಿ ಚಿಕ್ಕಪ್ಪ ನೋಡ್ಕೊಳ್ತಾ ಇದ್ರು. ಒಂದು ತಿಂಗಳ ಹಿಂದೆ ಅವ್ರ ತೀರ್ಕೊಂಡ ಮೇಲೆ, ಅವರ ಮಗಳು ಕುಮುದಾ ಫೋನ್ ಮಾಡಿ, “ಇವಾಗಲಾದ್ರೂ ಬಂದು ಎಲ್ಲಾ ಸೆಟಲ್ ಮಾಡಿ ಹೋಗು, ನೀನು ಹೇಗೂ ಅಲ್ಲೇ ಸೆಟಲ್ ಆಗಿದ್ಯಾ, ವಾಪಸ್ ಬರೋ ಪ್ಲ್ಯಾನ್ ಇಲ್ಲಾ ಅಂದ್ರೆ ಮನೆ ಸೇಲ್ ಮಾಡು, ನನಗೆ ಒಬ್ಬಳಿಗೆ ಇದೆಲ್ಲಾ ಮಾಡಕಾಗಲ್ಲಾ!” ಅಂದಿದ್ದು. ರಕ್ತ ಹಂಚಿ, ಎದೆ ಹಾಲು ಕುಡಿಸಿ ಬೆಳೆಸಿದ್ದ ಅಪ್ಪ ಅಮ್ಮಾ ಹೋದಾಗ ಬರೋಕಾಗಿರ್ಲಿಲ್ಲಾ, ಇವಾಗ, ಕಲ್ಲು ಮಣ್ಣಿನ ಮನೆಗಾಗಿ ಹಿಂತಿರುಗಿ ಬರೋಹಾಗಾಯ್ತಲ್ಲಾ ಅನ್ನೋದು ತುಂಬಾ ಚುಚ್ಚತಾ ಹೋಯ್ತು. ಕಣ್ಣು ಮೋಡ ತುಂಬಿ ಹನಿಯಾಯ್ತು. ಹೋಟೆಲ್ ಸೇರೋವರೆಗೂ ಹೊಟ್ಟೆ ತುಂಬಾ ಅತ್ತೆ. ನಮ್ಮೂರಲ್ಲಿ ಅಳೋ ಹಾಗೆ, ಬೇರೆ ಕಡೆ ಎಲ್ಲಾದರೂ ಅಳೋದಕ್ಕಾಗತ್ತಾ?
ಹೋಟೆಲ್ನಲ್ಲಿ ಸೆಟಲ್ ಆಗಿ, ಏನೋ ತಿಂದು, ಸ್ವಲ್ಪ ಹಾಗೇ ಕಾಲು ನೀಡ್ಕೊಂಡು ಕೂತಿದ್ದೆ, ಅಷ್ಟರಲ್ಲೇ ಕುಮುದಾ ಬರ್ತೀನಿ ಅಂತ ಮೆಸೇಜ್ ಮಾಡಿದರು. ರೆಡಿಯಾಗಿ ಕಾಯ್ತಾ ಇದ್ದೆ, ಬೆಲ್ ಶಬ್ದ ಆಯ್ತು, ಬಾಗಿಲು ತೆಗೆದೆ. ಕುಮುದಾ ನಿಂತಿದ್ದಳು! ಅರ್ಜೂ, ಅಂತಾ ಅಕ್ಕರೆಯಿಂದ ಅವಳು ಕರೆದಾಗ, ಇಷ್ಟು ದಿನ ನನ್ನೊಳಗೆ ಗೊತ್ತಿಲ್ಲದೇ ಅಡಗಿ ಕೂತಿದ್ದ ಅನಾಥ ಭಾವ, ಇದ್ದಕಿದ್ದಹಾಗೆ ನರನಾಡಿಗಳನ್ನೆಲ್ಲಾ ಕಿತ್ತೊಗೆದು ಆಚೆ ಬಂದಿತ್ತು. ಅ ಕ್ಷಣಕ್ಕೆ ಮತ್ತೆ ಅದೇ ಆರು ವರ್ಷದ ವಯಸ್ಸಿನ ಪುಟ್ಟ ಅರ್ಜೂ ಹಿಂತಿರುಗಿ ಬಂದಿದ್ದ. ಒಣಗಿದ್ದ ಮರುಭೂಮಿಯಲ್ಲಿ ತುಂಬಿ ಹರಿಯೋ ಝರಿಯಾಗಿದ್ದ. ಸಮಾಧಾನ ಮಾಡೋ ಅರ್ಜೂ, ಏನೆಲ್ಲಾ ಆಗಿ ಹೋಯ್ತಲ್ಲವೇನೋ ಅಂತಾ ಹೇಳಿ ನನ್ನನ್ನಾ ಕೂರ್ಸಿ, ಪಕ್ಕದಲ್ಲಿ ಕೂತ್ಕೊಂಡರು ಕುಮುದಾ. ಚೆಲ್ಲಪಿಲ್ಲಿಯಾದ ಪದಗಳಿಂದ, ಒಂದಿಷ್ಟು ಮೌನದಿಂದ ಮತ್ತೊಂದಿಷ್ಟು ಬಿಕ್ಕಳಿಸ್ತಾ ಮಾತಾಡಿದ್ವಿ. ಇಬ್ಬರೂ ಒಂದಿಷ್ಟು ಹಗುರ ಆದ್ವಿ. ಊಟ ಮುಗಿಸ್ಕೊಂಡು ಮನೆ ಕಡೆ ಹೋಗೋದೂ ಅಂತಾ ನಿರ್ಧಾರ ಆಗಿತ್ತು. ಕುಮುದಾ ಇಲ್ಲದೆ ನನಗೇನೂ ಗೊತ್ತೇ ಆಗಲ್ಲವೇನೋ ಅನ್ನೋವಷ್ಟು ಬದಲಾಗಿಬಿಟ್ಟಿತ್ತು ಬೆಂಗಳೂರು.
ಟ್ಯಾಕ್ಸಿ ಇಳಿದು ಸ್ವಲ್ಪ ಹೊತ್ತು ಹಾಗೇ ನಿಂತುಬಿಟ್ಟೆ. ಮನೆ ನನ್ನನ್ನೇ ನೋಡ್ತಾ ಇತ್ತು ಮೂಕವಾಗಿ, ನಾನು ಕುಗ್ಗಿ ಚಿಕ್ಕವನಾಗಿ, ಮುಳುಗಿ ಹೋಗ್ತಿರೋ ಹಾಗೆ ಅನ್ನಿಸ್ತು. ಗೇಟ್ ತೆಗೆದು ಒಳಗೆ ಹೋದ್ವಿ, ಎಲ್ಲೆಲ್ಲೂ ಬಿರುಕುಗಳು ಬಿದ್ದಿದ್ದು, ಸುತ್ತಲೂ ಪಾರ್ಥೇನಿಯಂ ಗಿಡದ ಕಾಡೇ ಬೆಳೆದುಬಿಟ್ಟಿತ್ತು. ಭಾರವಾದ ಮನಸ್ಸಿನಿಂದ ಬಾಗಿಲು ತೆಗೆದು ಒಳಗೆ ಹೋದ್ವಿ. ಇಷ್ಟು ಹೊತ್ತು ಕುಮುದಾ ನನ್ನ ಜೊತೇಲಿದ್ದಿದ್ದನ್ನೇ ಮರ್ತುಬಿಟ್ಟಿದ್ದೆ. ಮನೆಯ ಒಂದೊಂದು ಮೂಲೆಯಲ್ಲೂ ಒಂದೊಂದು ನೆನಪಿನ ಚಿತ್ರ ಹಾದು ಹೋಗ್ತಾ ಇತ್ತು. ಬಿಕೋ ಅನ್ನೋ ಮೌನದೊಳಗಿಂದ ನೆನಪಿನ ಅಲೆಗಳು ಪ್ರತಿಧ್ವನಿಸ್ತಾ ಹೋದವು. ಅಪ್ಪಾ ಅಮ್ಮನ ಕೋಣೆಯೊಳಗೆ ಬಂದೆ, ವಿಷಾದ ತುಂಬ್ಕೊಳ್ತು. ಆದರೆ ಯಾಕೋ ಬೆಳಗ್ಗೆಯಿಂದ ಹರೀತಿದ್ದ ಕಣ್ಣೀರು ಇವಾಗ ಬತ್ತಿ ಹೋಗಿತ್ತು. ಕೆಲವು ದುಃಖಗಳು ಸುಲಭವಾಗಿ ಮುಕ್ತವಾಗೋದಿಲ್ಲ! ಹೆಚ್ಚು ಹೊತ್ತು ಒಳಗೆ ಇರೋದಕ್ಕಾಗದೇ ಆಚೆ ಹೋಗೋಣಾ ಅಂದೆ ಕುಮುದಾಗೆ, ಬ್ರೋಕರ್ ಬರೋವರೆಗೂ ಹಿತ್ತಲಲ್ಲಿ ಕೂತು ಕಾಫಿ ಕುಡಿಯೋಣಾ, ನೀನಿಲ್ಲೇ ಇರು, ತರ್ತೀನಿ ಅಂತಾ ಹೇಳಿ, ಫೋನ್ ಕಿವಿಗೆ ಅಂಟಿಸ್ಕೊಂಡು ಪಕ್ಕದ ದರ್ಶಿನಿ ಕಡೆ ಹೊರಟೇಬಿಟ್ಟಳು. ನಾನು ಹಿತ್ತಲಲ್ಲಿ ಬಂದು ಕೂತು ಮೋಡಗಳನ್ನ ನೋಡ್ತಾ ಕೂತೆ. ಅರವತ್ತು ವರ್ಷದ ಅರ್ಜುನ್ ಮಾಯವಾಗಿ ಹಳೇ ಅರ್ಜು ಮಾತ್ರ ಉಳಿದಿದ್ದ!
ಇದ್ದಕಿದ್ದಹಾಗೆ ಏನೋ ನೆನಪಾದ ಹಾಗಾಗಿ ಮನೆ ಸುತ್ತಮುತ್ತ ಹುಚ್ಚರ ಹಾಗೆ ಹುಡುಕಾಡೋದಕ್ಕೆ ಶುರು ಮಾಡ್ಡೆ. ಚಿನ್ನಪ್ಪ ಬಂದು, ಏನ್ ಬೇಕು ಸಾರ್ ಅಂತಾ ಕೇಳ್ದ. ಅವಸರ ಆತಂಕಗಳಿಂದ, ಇಲ್ಲಿದ್ದ ಗುಲ್ಮೊಹರ್ ಮರ ಏನಾಯ್ತು ಅಂತಾ ಕೇಳ್ದೆ. ಅಯ್ಯಾ, ಅದು ಸುಮಾರು ವರ್ಷದ ಹಿಂದೇನೇ ಕಿತ್ತಾಕಿಬಿಟ್ರು ಸಾರ್ ಅಂತಾ ನಿರ್ದಾಕ್ಷಿಣ್ಯವಾಗಿ ಹೇಳಿಬಿಟ್ಟ. ಕಣ್ಣಿಗೆ ಕಾಣದಹಾಗೆ ಆ ಮರ ಬಚ್ಚಿಟ್ಕೊಂಡಿರಬಹುದೇನೋ ಅನ್ನೋ ಹಾಗೆ ಮತ್ತೆ ಹುಡುಕ್ತಾ ಹೋದೆ. ಆಕಾಶದೆತ್ತರಕ್ಕೆ ಬೆಳೆದಿದ್ದ ಮರದ ಅವಶೇಷಗಳು ಮಾತ್ರ ನನ್ನ ಪಾಲಿಗೆ ಸಿಕ್ಕಿದ್ವು. ಮಾಯವಾಗಿದ್ದ ಮರದ ಸಾಕ್ಷಿಯಾಗಿ ಉಳಿದಿದ್ದ ಮರದ ಬುಡದ ಹತ್ತಿರ ಬಂದು ನಿಂತೆ. ಅದನ್ನ ನೋಡ್ತಾ ನನ್ನೊಳಗೆ ಖಾಲೀತನ ಆವರಿಸ್ಕೊಳ್ತಾ ಹೋಯ್ತು, ಭಾರವಾಗ್ತಾ ಹೋದೆ. ಏನನ್ನೋ ಕಳೆದುಕೊಂಡು ಭಾರ ಆಗೋದು ಇದ್ಯಲ್ಲಾ, ಅದು ತುಂಬಾ ಹಿಂಸೆ. ಅಲ್ಲೇ ಮಂಡಿ ಊರಿ ನೆಲವನ್ನ ಸವರ್ತಾ ಕೂತೆ. ದೃಶ್ಯಗಳು ತೆರ್ಕೊಳ್ತಾ ಹೋದ್ವು. ನಾನೂ ವಿಶ್ವ ಅಲ್ಲಿ ಆಡ್ತಾ ಇದ್ದಿದ್ದು, ಮರ ಹತ್ತತಿದ್ದಿದ್ದು, ಬಿದ್ದು ಬೈಸ್ಕೋತ್ತಾ ಇದ್ದಿದ್ದು, ಇಬ್ಬರೂ ಮೌನವಾಗಿ ಕಾಮಿಕ್ ಓದ್ತಾ, ಕಾಲೋ ಕೈಯ್ಯನ್ನೋ ಯಾವತ್ತೂ ತಾಗಿಸ್ಕೊಂಡಿರ್ತಿದ್ದಿದ್ದು, ವಿಶ್ವನ ತೊಡೆ ಮೇಲೆ ತಲೆ ಇಟ್ಟು ಮಲಗ್ತಾ ಇದ್ದಿದ್ದು, ಒಮ್ಮೆ ಅದೇ ಮರದ ಗುಲ್ಮೊಹರ್ ಹೂ ಬಿದ್ದಾಗ ಅದನ್ನೆತ್ತಿ ನಾನು ಕಿವಿಗೆ ಮುಡ್ಕೊಂಡಿದ್ದು, ಅದನ್ನಾ ನೋಡಿ ಮುಗುಳ್ನಕ್ಕು ವಿಶ್ವ ನನಗೆ ಮುತ್ತಿಟ್ಟಿದ್ದಿದ್ದು! ಗುಲ್ಮೊಹರ್ ಮರದ ಕೆಂಪೆಲ್ಲವೂ ನಮ್ಮ ಕೆನ್ನೆ ತುಟಿಗಳನ್ನಾ ಅವರಿಸಿಕೊಂಡಿದ್ದು.
ಆ ಕ್ಷಣದ ಕಾವು ಇಳೀತಿದ್ದ ಹಾಗೆ ಮನಸ್ಸಿನ ತುಂಬಾ ಭಯ ಆವರಿಸಿಕೊಂಡಿದ್ದು, ನಮ್ಮ ಮಧ್ಯೆ ಮಾತು ಕಮ್ಮಿಯಾಗಿ ಬರೀ ಮೌನ ಉಳ್ಕೊಂಡಿದ್ದು, ನನ್ನ ದ್ವಂದ್ವಗಳ ಸುಳಿ ಬಿಡಿಸಿಕೊಳ್ಳೋದಕ್ಕೆ ಎಲ್ಲರಿಂದಾನೂ ನಾನು ದೂರ ಆಗಿದ್ದು, ನನ್ನೊಳಗೆ ಹುಚ್ಚು ಕೋಪದ ಉರಿಯಗ್ನಿ ಹೊತ್ಕೊಂಡು, ಎಲ್ಲಾ ಸಂಬಂಧಗಳನ್ನಾ ಸುಟ್ಟು ಪರದೇಶಕ್ಕೆ ಹೋಗಿ ನಾನು ಪರದೇಶಿಯಾಗಿದ್ದು… ಹೀಗೆ, ಎಲ್ಲಾನೂ ಕಣ್ಮುಂದೆ ಮೈದಳೆದು ಬಂದುಬಿಡ್ತು. ಇದೆಲ್ಲಾ ಆದ್ಮೇಲೆ ನನ್ನನ್ನ ಒಳಗಿಂದಲೇ ತಿಂದು ಹಾಕಿದ್ದ ಗಿಲ್ಟ್ ಕಾಂಪ್ಲೆಕ್ಸಿನ ವೃತ್ತಾಂತ! ನನ್ನ ಸಂಶಯದ ಸುಳಿಯಲ್ಲಿ ನಾನು ವಿಶ್ವನ್ನ ಕಡೆಗಣಿಸಿದ್ದು! ಅವನ ಜೀವನದಿಂದ ಇದ್ದಕಿದ್ದ ಹಾಗೆ ನಾನು ಮಾಯವಾಗಿ, ಅವನಿಗೆ ನನ್ನ ಜೀವನದಲ್ಲಿ ಪ್ರವೇಶವೇ ಇಲ್ಲದ ಹಾಗೆ ನಾನು ಮರೆಯಾಗಿದ್ದು, ಇದೆಲ್ಲವೂ ಒಣಗಿದ ಚರ್ಮ ಕಿತ್ತಾಗ ಸುರಿಯೋ ರಕ್ತದ ಹಾಗೆ ಮತ್ತೆ ಹೊಸ ಗಾಯವಾಗಿ, ರಕ್ತದ ಹೊಳೆಯಾಗಿ ಉಕ್ಕಿ ಉಕ್ಕಿ ಬರೋದಕ್ಕೆ ಶುರುವಾಯ್ತು. ಗೇಟ್ ಶಬ್ದ ಆಯ್ತು, ಕಾಫಿ ಬಂದಿತ್ತು, ಅಷ್ಟರಲ್ಲೇ ಬ್ರೋಕರ್ ಕೂಡಾ ಬಂದಿದ್ದ, ಮಾತುಕತೆ ಮುಗಿಸಿ ಹೋಟೆಲ್ಗೆ ಹಿಂತಿರುಗಿ ಬಂದ್ವಿ, ಒಳಗೊಳಗೇ ನೋವಿನ ನದಿ ಗುಪ್ತಗಾಮಿನಿಯಾಗಿ ಹರೀತಾನೇ ಇತ್ತು.
ಅರ್ಜೂ, ನಾನಿನ್ನು ಬರ್ತೀನಿ ಕಣೋ, ನಾಳೆ ಸಿಗೋಣಾ, ಆರ್ ಯು ಓಕೆ? ಅಂತಾ ಕೇಳಿದ್ಳು ಕುಮುದಾ. ಸ್ವಲ್ಪ ಹೊತ್ತು ಸುಮ್ಮನಿದ್ದೆ, ಉತ್ತರ ಕೊಡೋದಕ್ಕೆ ಗೊತ್ತಾಗದೆ. ಕುಮ್ಮಿ, ನಮ್ಮ ಪಕ್ಕದ ಬೀದಿಲಿದ್ರಲ್ಲಾ ಪ್ರಕಾಶ ಮಾಮ, ಅವರ ಮನೆಯವರೆಲ್ಲಾ ಎಲ್ಲಿದ್ದಾರೆ ಇವಾಗ? ಅಂತಾ ಕೇಳೇಬಿಟ್ಟೆ! ಎಲ್ಲರ ಬಗ್ಗೆ ಗೊತ್ತಿಲ್ಲಾ, ವಿಶ್ವ ಮಾತ್ರ ಇಲ್ಲೇ ಇದ್ದಾನೆ, ನಿನಗೆ ಬೇಕಾಗಿರೋದು ಅವನ ವಿಚಾರ ತಾನೆ? ನಾನು ಅವಾಗವಾಗ ಮಾತಾಡ್ತಾ ಇರ್ತೀನಿ ಅವನ ಹತ್ತಿರ ಅಂತಾ ಹೇಳಿ ಅರ್ಥಗರ್ಭಿತವಾಗಿ ಮುಗುಳ್ಳಕ್ಕಳು. ಮಹಾಮಂಗಳಾರತಿ ಆಗೋವಾಗ ಪಟ ಸರಿದು, ನೂರು ದೀಪಗಳ ಬೆಳಕು ಕಂಡು, ಘಂಟೆ ಜಾಗಟೆ ಮೊಳಗೋ ಹಾಗಾಯ್ತು ಒಂದು ಕ್ಷಣ ನನ್ನ ಮನಸ್ಸಲ್ಲಿ. ಸ್ವಲ್ಪಮುಜುಗರದಿಂದಾನೇ, ಯಾವಾಗಲಾದರೂ ಅವನಿಗೆ ಕಾಲ್ ಮಾಡ್ತೀನಿ, ನಂಬರ್ ಕೊಡ್ತೀಯಾ ಅಂತಾ ಕೇಳ್ದೆ. ವಾಟ್ಸಾಪ್ನಲ್ಲಿ ನಂಬರ್ ಬಂದಾಗಿತ್ತು. ಕುಮುದಾ ನನ್ನನ್ನೇ ದಿಟ್ಟಿಸಿ ನೋಡಿ, ಭುಜ ಸವರಿ, ಟೇಕ್ ಕೇರ್, ಲವ್ ಯು ಅಂತಾ ಹೇಳಿ ಹೊರಟ್ಳು. ಈ ಮೌನದಲ್ಲಾಗೋ ಮಾತುಕಥೆಗಳು ತುಂಬಾ ಕಾಡೋದಂತೂ ಸತ್ಯ!
ಮೆಸೇಜ್ನಲ್ಲಿದ್ದ ನಂಬರ್ ನೋಡ್ತಾ ಕೂತುಬಿಟ್ಟೆ ಸಂಜೆ ಎಲ್ಲಾ. ರಾತ್ರಿ ಒಂದೆರಡು ಪೆಗ್ ವ್ಹಿಸ್ಕಿ ಗಂಟಲಿಗಿಳಿದಮೇಲೆ ಧೈರ್ಯ ಮಾಡಿ ಫೋನ್ ಮಾಡ್ಡೆ.
ಹೆಲ್ಲೋ, ವಿಶ್ವಾನಾ ಮಾತಾಡ್ತಾ ಇರೋದು?
ಹೌದು, ತಾವು?
(ಮೌನ)
ಹೆಲ್ಲೋ? ಯಾರು ಮಾತಾಡ್ತಿರೋದು?
ನಾನು… ಅರ್ಜುನ್
ಅರ್ಜುನ್?
ನಿನ್ನ ಜನ್ನಿ!
(ಮೌನ)
ಗೊತ್ತಾಯ್ತೇನೋ?
ಎಲ್ಲಿಂದಾ ಫೋನ್ ಮಾಡ್ತಾ ಇದ್ದೀಯಾ?
ಬೆಂಗಳೂರಿಗೆ ಬಂದಿದ್ದೀನಿ! ಸಾರಿ, ಇದ್ದಕಿದ್ದಹಾಗೆ ಫೋನ್ ಮಾಡ್ಡೆ.
ಓಹ್! ಇಲ್ಲ, ಇಟ್ಸ್ ಓಕೆ!
ನಿನಗೆ ಸಾಧ್ಯ ಆಗೋದಾದ್ರೆ ಕಾಫಿಗೆ ಸಿಗ್ತೀಯಾ? ಹೋಗೋದ್ರೊಳಗೆ ನಿನ್ನನ್ನೊಮ್ಮೆ ನೋಡಬೇಕು!
(ತುಸು ಮೌನದ ನಂತರ) ಸರಿ! ಎಲ್ಲಿ ಸಿಗೋಣಾ?
ಅದನ್ನಾ ನೀನೇ ಹೇಳಬೇಕು, ನಾನು ನಮ್ಮ ಹಳೇ ಮನೆ ಹತ್ತಿರದ ಹೋಟೆಲ್ನಲ್ಲೇ ಇರೋದು. ಇವಾಗ ಇಲ್ಲಿ ಏನೇನಾಗಿದ್ಯೋ ನನಗೆ ಏನೂ ಗೊತ್ತಿಲ್ಲ!
ಎಲಿಫೆಂಟ್ ರಾಕ್ ಕೆಫೇಲಿ ಸಿಗೋಣಾ ನಾಳೆ ಸಂಜೆ?
ಗೂಗಲ್ನಲ್ಲಿ ಹುಡಿಕ್ಕೋತೀನಿ! ಸೀ ಯೂ…
ಫೋನ್ ಕಟ್ ಮಾಡ್ಡೆ, ಕೈ ನಡಗ್ತಾ ಇತ್ತು. ಖುಷೀನೋ ಆತಂಕಾನೋ ಗೊತ್ತಾಗ್ತಾ ಇರಲಿಲ್ಲಾ, ಮೈಯೆಲ್ಲಾ ಜ್ವರ ಬಂದಹಾಗಾಯ್ತು.
ಬೆಳಗ್ಗೆ ಎದ್ದಾಗಿಂದಾ ಸಂಜೆ ಬಗ್ಗೆನೇ ಮನಸ್ಸು ಕಾತರದಿಂದ ಕಾಯ್ತಾ ಇತ್ತು. ಲಗೇಜಲ್ಲಿರೋ ಎಲ್ಲಾ ಶರ್ಟ್ಗಳನ್ನಾ ಹಾಕಿ ನೋಡಿ, ಯಾವುದೂ ಸರೀಗಿಲ್ಲಾ ಅನ್ನಿಸಿ, ಪಕ್ಕದ ಫ್ಯಾಬ್ ಇಂಡಿಯಾಗೆ ಹೋಗಿ ಹೊಸಾ ಕೆಂಪು ಕುರ್ತಾ ಕೊಂಡ್ಕೊಂಡು ಬಂದೆ. ಈ ವಯಸ್ಸಲ್ಲಿ ಇದೆಲ್ಲಾ ಬೇರೆ ಕೇಡು ಅಂತಾ ನಕ್ಕೆ ಕೂಡಾ. ನೋಡ್ತಾ ನೋಡ್ತಾ ಸಂಜೆ ಆಗಿಬಿಡ್ತು. ಹುಷಾರಿಲ್ಲಾ, ಬರಕಾಗಲ್ಲಾ ಅಂತಾ ಫೋನ್ ಮಾಡಿ ವಿಶ್ವಾಗೆ ಹೇಳಿಬಿಡೋಣಾ ಅನ್ನಿಸ್ತು. ಕಡೆಗೂ ಮನಸ್ಸು ಗಟ್ಟಿ ಮಾಡ್ಕೊಂಡು ಕೆಫೆಗೆ ಹೋದೆ.
ಸುಂದರವಾದ ಕೆಫೆ. ಹಳೇ ಮನೆಯನ್ನಾ ಕೆಫೆ ಮಾಡಿದ್ರು. ಎಲ್ಲಿ ನೋಡಿದ್ರೂ ಅಲ್ಲೊಂದು ಆ್ಯಂಟಿಕ್ ವಸ್ತು ಇಟ್ಟು ಅಲಂಕಾರ ಮಾಡಿದ್ರು. ಒಳ್ಳೇ ಧೂಪದ ಪರಿಮಳ ತುಂಬಿತ್ತು. ಮೆಲುದನಿಯಲ್ಲಿ ಗಝಲ್ಗಳು ಒಂದಾದಮೇಲೊಂದು ಬರ್ತಾ ಇದ್ವು, ಲಂಡನ್ ತುಂಬಾ ಇರೋ ಅತ್ಯಂತ ಸುಂದರ ಕೆಫೆಗಳಲ್ಲೂ ಯಾಕೋ ಈ ಅತ್ಮೀಯತೆ ಇರಲ್ಲಾ ಅಂತಾ ಅನ್ನಿಸ್ತು, ನೋಡ್ತಾ ನೋಡ್ತಾ ಒಂದು ಆಕಾರ ನನ್ನ ಕಡೆ ನಡೆದು ಬರ್ತಾ ಇದ್ದಿದ್ದು ಕಾಣಿಸ್ತು.
ವಿಶ್ವ!
ನನ್ನ ಉಸಿರು, ಎದೆಬಡಿತ ಎಲ್ಲಾ ಒಂದು ಕ್ಷಣಕ್ಕೆ ನಿಂತಿತ್ತು. ಹಾಗೇ ಇದ್ದ! ಖಾದಿ ಶರ್ಟ್ ಹಾಕಿಕೊಂಡು ಬಂದಿದ್ದ. ಬಿಳಿ ಗಡ್ಡ, ಗೋಲ್ಡನ್ ಫ್ರೇಮ್ ಕನ್ನಡಕ, ದ್ವಂದ್ವಗಳು ತುಂಬಿದ ಮುಗುಳುನಗು. ನಾನು ಎದ್ದು ಹ್ಯಾಂಡ್ ಶೇಕ್ ಮಾಡಿದೆ. ಇಬ್ಬರೂ ಕೂತ್ವಿ.
ಹಾಗೇ ಇದ್ದೀಯಾ ವಿಶು ಅಂದಿದ್ದಕ್ಕೆ ಬಲವಂತವಾಗಿ ಮುಗುಳ್ನಕ್ಕ. ಸ್ವಲ್ಪ ಹೊತ್ತು ಅದೂ ಇದೂ ಅಂತಾ ಬೇಡದೇ ಇರೋ ಮಾತುಗಳನ್ನು ಆಡ್ತಾ ಆಡ್ತಾ ಇದ್ದಕ್ಕಿದ್ದಹಾಗೆ ಮಾತೇ ಖಾಲಿ ಆದಹಾಗಾಗಿ ಮೌನವಾಗಿಬಿಟ್ವಿ. ನಿಟ್ಟುಸಿರುಬಿಟ್ಟು ನನ್ನ ಕಡೆ ನೋಡಿ, ಜನ್ನಿ, ಒಂದು ಮಾತೂ ಹೇಳ್ದೆ ಹೋಗ್ಬಿಟ್ಯಲ್ಲಾ! ನನ್ನ ಬಗ್ಗೆ ಯೋಚ್ನೆ ಮಾಡ್ಲೇ ಇಲ್ವೇನೋ? ಇಷ್ಟು ವರ್ಷಗಳಲ್ಲಿ ಮತ್ತೆ ನನ್ನ ಹತ್ತಿರ ಮಾತಾಡ್ಬೇಕು ಅಂತಾ ಯಾವತ್ತೂ ಅನ್ಸಿಲ್ವಾ ನಿನಗೆ? ಅಂತಾ ಕೇಳೇಬಿಟ್ಟ! ಸ್ವಲ್ಪ ಚಡಪಡಿಸಿ ಏನೋ ಒಂದು ಮಣ್ಣು ಉತ್ತರ ಹೇಳ್ದೆ. ನನ್ನ ಬಗ್ಗೆನೇ ನನಗೆ ಕೋಪ ಇತ್ತು ಕಣೋ. ಯಾರ ಬಗ್ಗೆನೂ ಯೋಚ್ನೆ ಮಾಡೋ ಸ್ಥಿತೀಲಿರ್ಲಿಲ್ಲಾ ನಾನು. ಅಲ್ಲಿ ಹೋಗಿ ಸ್ವಲ್ಪ ವಾತಾವರಣ ಒಗ್ಗಿ ತಲೆ ಸ್ವಲ್ಪ ಸರೀಗಾದ್ಮೇಲೆ ತುಂಬಾ ಮಾತಾಡ್ಬೇಕು ಅನ್ನಿಸ್ತಿತ್ತು. ಆವಾಗ ನನ್ನ ಸುತ್ತ ಕಟ್ಕೊಂಡಿದ್ದ ಗೋಡೆಗಳು ನನಗೆ ಅಡ್ಡ ಬಂದುಬಿಟ್ವು ಕಣೋ. ಎಲ್ಲಾರೂ ಅವರವರ ಲೈಫ್ನಲ್ಲಿ ಬಿಝಿ ಇರ್ತಾರೆ ಅಂತಾನೂ ಅನ್ನಿಸಿ, ಒಮ್ಮೊಮ್ಮೆ ಪೊಳ್ಳು ಸ್ವಾಭಿಮಾನಾನೂ ಅಡ್ಡ ಬಂದು ಸುಮ್ಮನಿದ್ದುಬಿಟ್ಟೆ ಅಂತಾ ನಿಟ್ಟುಸಿರುಬಿಟ್ಟು ಹೇಳ್ದೆ. ನನ್ನನ್ನೇ ನೋಡ್ತಾ ಇದ್ದ ನೇರವಾಗಿ, ಕಣ್ತುಂಬಾ ಹಿಮ ತುಂಬಿತ್ತು. ತೀವ್ರ ದುಃಖ, ಕೋಪ ಒಟ್ಟಿಗೇ ಹೊಳೀತಿತ್ತು. ಅವನ ಕಣ್ಣುಗಳನ್ನು ನೋಡೋಕಾಗದೇ ಮುಖ ಕೆಳಕ್ಕೆ ಮಾಡಿದೆ. ಶಾಸ್ತ್ರ ಪೂರೈಸೋದಕ್ಕೆ ಅವನ್ನೋ ಹಾಗೆ ನಾನು ಕೊಟ್ಟ ಉತ್ತರದ ಬಗ್ಗೆ ನನಗೇ ನಾಚಿಕೆ ಆಯ್ತು. ವಿಶು, ನಿನ್ನನ್ನು ಪ್ರೀತಿಸ್ತಿದ್ದೆ ಅನ್ನೋ ಸತ್ಯಾನಾ ಎದುರಿಸೋ ಧೈರ್ಯ ನನಗಿರಲಿಲ್ಲ ಕಣೋ. ಅದಕ್ಕೆ ಹೇಡಿಗಳ ಹಾಗೆ ಓಡಿಹೋದೆ ಅಂತಾ ಸುಲಭವಾಗಿ ಹೇಳೋದಕ್ಕಾಗತ್ತಾ? ಆವಾಗಿಲ್ಲದಿದ್ದ ಧೈರ್ಯ ಇವಾಗಲೂ ಬಾರದೇ ಮೌನವಾಗೇ ಇದ್ದೆ. ಅಸಹಾಯಕನಾಗಿದ್ದೆ. ಅಷ್ಟರಲ್ಲೇ ಜೋರಾಗಿ ಗುಡುಗಿನ ಶಬ್ದ ಕೇಳಿಸ್ತು.
ಹುಚ್ಚು ಗಾಳಿ ಬೀಸೋದಕ್ಕೆ ಶುರುವಾಯ್ತು. ನಮ್ಮ ಮನಸ್ಸಿನೊಳಗಿನ ತುಮುಲ ಮೈದಳೆದು ಬಂದಹಾಗಿತ್ತು. ನನಗೂ ಈ ಮೌನ ಬೇಕಾಗಿತ್ತು. ಗಾಳಿ ಮತ್ತೊಮ್ಮೆ ಬೀಸಿದಾಗ ನಮ್ಮ ಟೇಬಲ್ಮೇಲೆ ಏನೋ ಬಂದು ಬಿದ್ದಹಾಗೆ ಶಬ್ದ ಆಯ್ತು.
ಗುಲ್ಮೊಹರ್ ಹೂ!
ಹೂವನ್ನು ಎತ್ಕೊಳ್ಳೋದಕ್ಕೆ ಇಬ್ರೂ ಒಟ್ಟಿಗೇ ಹೊರಟ್ವೇನೋ. ಬೆರಳುಗಳು ಒಂದನ್ನೊಂದು ಸ್ಪರ್ಶಿಸಿದ್ವು. ಇಬ್ಬರೂ ಕೈ ಹಿಂತೆಗೀಲಿಲ್ಲಾ. ನಮ್ಮ ಬೆರಳುಗಳ ಸೇತುವೆ ಅಡಿಯಲ್ಲಿ ಗುಲ್ಮೊಹರ್ ನಗ್ತಾ ಇದ್ಳು. ಕಣ್ಣಲ್ಲಿ ಕಣ್ಣಿಟ್ಟು ಹಾಗೇ ನೋಡ್ತಾ ಕೂತ್ಬಿಟ್ಟಿದ್ವಿ. ಧೋ ಧೋ ಅಂತ ಮಳೆ ಸುರಿಯೋದಕ್ಕೆ ಶುರುವಾಯ್ತು. ಕರೆಂಟ್ ಹೋಗಿ ಕತ್ತಲಾಯ್ತು. ದೂರದ ದೀಪದ ಬೆಳಕಲ್ಲಿ ಗುಲ್ಮೊಹರ್ ಹೂವಿನ ಕೆಂಪೂ. ಅವನ ಕಣ್ಣೂ ಬೆಚ್ಚಗೆ ಹೊಳೀತಿತ್ತು.
ಕಾರ್ತಿಕ ಹೆಬ್ಬಾರ
ಬೆಂಗಳೂರಿನಲ್ಲಿ ನೆಲೆಸಿರುವ ಕರ್ನಾಟಕ ಸಂಗೀತ ಕಲಾವಿದ, ಆರ್ಟ್ ಆ್ಯಕ್ಟಿವಿಸ್ಟ್ ಕಾರ್ತಿಕ ಹೆಬ್ಬಾರ, ಸಂಗೀತ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ನಾಟಕ ರಚನೆ, ನಿರ್ದೇಶನ, ಸಂಗೀತ ಸಂಯೋಜನೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವೆತ್ತ ಇವರು ಅಂಕಣಕಾರ ಮತ್ತು ಛಾಯಾಗ್ರಾಹಕರಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಧಾರಾವಾಹಿಗಳಿಗೆ ಬರಹಗಾರರಾಗಿಯೂ ಕೆಲಸ ಮಾಡಿದ್ದಾರೆ. ಸೃಜನಶೀಲ ಪ್ರಸ್ತುತಿಗಳ ಮೂಲಕ ಶೋಷಿತ ಮತ್ತು ಎಲ್ಜಿಬಿಟಿಕ್ಯೂ ಸಮುದಾಯದ ಹಕ್ಕುಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಕೃತಿ: ಕಾಣುವಂತೆ ಕಾಣದಂತೆ (ಕನ್ನಡ ಕತೆಗಳು ಮತ್ತು ಕವನಗಳ ಸಂಕಲನ)
ಸಂ: ವಿಕ್ರಮ ಬಿ ಕೆ
ಪುಟ: 110
ಬೆಲೆ : ರೂ. 150
ಪ್ರಕಾಶನ : ತ್ರಿಲೋಕ ಬರಹ
ಮುಖಪುಟ ವಿನ್ಯಾಸ : ವಿದ್ಯಾ ಘೋಶಾಲ್
ಖರೀದಿಗೆ ಸಂಪರ್ಕಿಸಿ : 76766 25251
ಉತ್ತಮವಾದ,ಮನ ಕಲಕುವ ಕತೆ.
-- ಡಾ. ವಿಜಯಾ