ಕಥೆಗಾರ, ಕಾದಂಬರಿಕಾರ ಗುರುಪ್ರಸಾದ ಕಾಗಿನೆಲೆಯವರ ಸತ್ಕುಲ ಪ್ರಸೂತರು ಎಂಬ ಹೊಸ ಕಾದಂಬರಿ ಅಂಕಿತ ಪುಸ್ತಕದಿಂದ 7.7.2024ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಕಾದಂಬರಿಯ ಆಯ್ದ ಭಾಗ ನಿಮ್ಮ ಓದಿಗೆ.
ನನ್ನ ಹೆಸರು ಅನಂತಕೃಷ್ಣ ಬಂಗಾರಕೇರಿ. ನಾನೊಬ್ಬ ಮಾಧ್ವ ಬ್ರಾಹ್ಮಣ. ಮಾಧ್ವ ಬ್ರಾಹ್ಮಣನೆಂದರೆ ಶತಪ್ರತಿಶತ ಮಾಧ್ವನಲ್ಲ. ಒಂತರಾ ಅರೆಮಾಧ್ವ. ಐವತ್ತೇಳು ವರ್ಷದ ಹಿಂದೆ ನಮ್ಮಪ್ಪ ಕಿಟ್ಟಣ್ಣ ಅಥವಾ ಕೃಷ್ಣಮೂರ್ತಾಚಾರ್ ಶಿವಮೊಗ್ಗಾದ ತುಮಕೂರು ಶಾಮರಾಯರ ರಸ್ತೆಯ ಏಕೈಕ ಸ್ಮಾರ್ತಕುಟುಂಬವಾದ ಚಿದಂಬರಶಾಸ್ತ್ರಿಗಳ ಮಗಳಾದ ರುಕ್ಮಿಣಿಯನ್ನು ಮದುವೆಯಾಗಿದ್ದರು. ಹಾಗಾಗಿ ನಾನು ಐವತ್ತು ಪರ್ಸೆಂಟ್ ಮಾಧ್ವ. ಅದರ ಬಗ್ಗೆ ವಿವರವಾಗಿ ಮುಂದೆ ಹೇಳುತ್ತೇನೆ.
ನನ್ನ ಹೆಂಡತಿ ನರ್ಮದಾ ಕೂಡ ನಮ್ಮಮ್ಮನ ಹಾಗೆಯೇ ಸ್ಮಾರ್ತರವಳು. ಭದ್ರಾವತಿಯ ಶಂಕರನಾರಾಯಣ ಶಾಸ್ತ್ರಿಗಳ ಮಗಳು. ನಮ್ಮ ಮದುವೆಯಾದಾಗ ಶಂಕರನಾರಾಯಣ ಶಾಸ್ತ್ರಿಗಳು ಆಯುರ್ವೇದಿಕ್ ವೈದ್ಯರಾಗಿ ಸುಮಾರು ಮೂವತ್ತು ವರ್ಷ ಪ್ರಾಕ್ಟಿಸ್ ಮಾಡಿ ನಿವೃತ್ತಿಹೊಂದಿ ನೆಮ್ಮದಿಯಾಗಿ ನೆಲಸಿದ್ದರು.
ನರ್ಮದಾಳ ಮನೆಯಲ್ಲಿ ಬಡಗನಾಡು, ಬಬ್ಬರಕಮ್ಮೆ, ಉರಿಚಕಮ್ಮೆ, ಸಂಕೇತಿ ಹೀಗೆ ಬೇರೆಬೇರೆ ಪಂಗಡಗಳಲ್ಲಿ ಕೊಟ್ಟು, ತಂದು ಮಾಡಿದ್ದರೂ ನರ್ಮದಾಳೇ ಅವರ ಕುಟುಂಬದಲ್ಲಿ ಮೊಟ್ಟಮೊದಲ ಬಾರಿಗೆ ಮಾಧ್ವನೊಬ್ಬನನ್ನು ಮದುವೆ ಮಾಡಿಕೊಂಡಿರುವುದು. ಮೊದಲು ಮಾಧ್ವರಮನೆಗೆ ಅದರಲ್ಲೂ ಶಿವಮೊಗ್ಗೆಯ ಬಂಗಾರಕೇರಿ ಮನೆಗೆ ಹೆಣ್ಣು ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದ ನರ್ಮದಾಳ ಅಮ್ಮ, ನಮ್ಮಮ್ಮ ಕೂಡ ಸ್ಮಾರ್ತಳೇ ಎಂದು ತಿಳಿದಮೇಲೆ ಸಮಾಧಾನ ಮಾಡಿಕೊಂಡು ಒಪ್ಪಿಕೊಂಡಿದ್ದರು.
ನಮ್ಮ ಮನೆಯ ದೇವರ ಮನೆಯಲ್ಲಿ ಶ್ರೀಕೃಷ್ಣನಿಗೆ ಪೂಜೆ ಮಾಡುತ್ತಿರುವ ಮಧ್ವಾಚಾರ್ಯರ ಪಟದ ಪಕ್ಕದಲ್ಲಿಯೇ ಶಂಕರಾಚಾರ್ಯರ ಫೊಟೋ ಕೂಡ ಇದೆ. ಸಾಲಿಗ್ರಾಮ ಇಟ್ಟಿರುವ ಸಂಪುಟದ ಪಕ್ಕದಲ್ಲಿಯೇ ಶಿವಲಿಂಗವಿದೆ. ನರ್ಮದಾ ಪ್ರದೋಷ ವ್ರತ ಹಿಡಿದಾಗ ಉಪವಾಸ ಮಾಡುತ್ತಾಳೆ. ಉಪವಾಸವೆಂದರೆ ನಿಟ್ಟುಪವಾಸವಲ್ಲ. ಹಣ್ಣು, ಅವಲಕ್ಕಿ, ಹಾಲು ಫಳಾರ. ಶಿವರಾತ್ರಿಯಂದು ಜಾಗರಣೆ ಮಾಡುತ್ತಾಳೆ. ನಾನು ಯಾವತ್ತೂ ಏಕಾದಶೀ ಉಪವಾಸ ಮಾಡಿ ದ್ವಾದಶಿ ಪಾರಣೆ ಮಾಡಿಲ್ಲ. ಮಧ್ವನವಮಿಯಲ್ಲಿ ಸುಮಧ್ವವಿಜಯ, ಭಾಗವತ ಪಾರಾಯಣ ಮಾಡಿಲ್ಲ. ವಾರದಲ್ಲಿ ಕನಿಷ್ಠ ಮೂರುಬಾರಿಯಾದರೂ ಸಂಧ್ಯಾವಂದನೆ ಮಾಡಲು ಪ್ರಯತ್ನಿಸುತ್ತೇನೆ. ಮಾಡಲು ಆಗದಿದ್ದಲ್ಲಿ ಕೆಲಸಕ್ಕೆಂದು ಡ್ರೈವ್ ಮಾಡುವ ಅವಧಿಯಲ್ಲಿ ನೂರೆಂಟು ಗಾಯತ್ರಿಮಂತ್ರ ಹೇಳಿಕೊಳ್ಳುತ್ತೇನೆ. ವಾಯುಸ್ತುತಿ ಬಾಯಿಪಾಠವಾಗಿದೆ. ವರ್ಷಾವಧಿ ಹಬ್ಬಗಳಲ್ಲಿ ದೇವರಪೂಜೆ ಮಾಡುತ್ತೇನೆ.
ಕೆವಿನ್ ಮಾರ್ಮನ್ ಆಗಿದ್ದರೂ ಪರಮಹಂಸ ಯೋಗಾನಂದರ ವೇದಾಂತ, ಪತಂಜಲಿಯ ವೇದ ಸೂತ್ರಗಳು, ಪಾಣಿನಿಯ ವ್ಯಾಕರಣ ಏನೇನೋ ಓದಿಕೊಂಡಿದ್ದಾನೆ. ಅಕ್ಷರಾಳ ಜತೆ ಓಡಾಡಲು ಶುರು ಮಾಡಿದ ಮೇಲೆ ಯಾವಾಗಲೂ ಯುಟ್ಯೂಬಿನಲ್ಲಿ ಭಗವದ್ಗೀತೆ, ಉಪನಿಷತ್ತು ಹೀಗೆ ಏನನ್ನಾದರೂ ನೋಡುತ್ತಲೇ ಇರುತ್ತಾನೆ. ಅವನ ಮಾರ್ಮನ್ ನಂಬಿಕೆಗಳು ಈ ಹೊಸಾ ಹಿಂದೂ ಜ್ಞಾನದೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ ಎಂದು ನನಗಿನ್ನೂ ಗೊತ್ತಾಗಿಲ್ಲ.
ನಾನು ಎಂದೂ ಮನೆಗೆ ಪಾದಪೂಜೆಗೆಂದು ಸ್ವಾಮಿಗಳನ್ನು ಕರೆಸಿಲ್ಲ. ಕಾರ್ಪೆಟ್ ಮಡೀಗೆ ಬರಲ್ಲ ಎಂದು ಎಲ್ಲರನ್ನೂ ಹಚಾಹಚಾ ಮಾಡಿಲ್ಲ. ಕೆಲಸಕ್ಕೆ ಹೋಗಬೇಕಾದರೆ ಮುದ್ರೆ ಅಳಿಸಿಕೊಂಡು ಹೋಗುತ್ತೇನೆ. ವಾರಕ್ಕೊಮ್ಮೆ ಮನೆಯಲ್ಲಿ ರಾಜಾರೋಷವಾಗಿ ಒಂದು ಬಾಟಲ್ ಬಿಯರ್ ಕುಡಿಯುತ್ತೇನೆ. ಹೊಸವರ್ಷ, ಕ್ರಿಸ್ಮಸ್ ಪಾರ್ಟಿಗಳಲ್ಲಿ ಗುಂಡುಪಾರ್ಟಿ ಮಾಡಿದ್ದಿದೆ. ಕಾಲೇಜಿನಲ್ಲಿ ಒಮ್ಮೆ ಯಾವಾಗಲೋ ಮೀನು ತಿಂದಿದ್ದೆ. ನಂತರ ಅಮೆರಿಕಾಕ್ಕೆ ಬಂದಮೇಲೆ ಸರಿಯಾಗಿ ಆರ್ಡರ್ ಮಾಡಲು ಬರದೇ ನಾನೂ, ನರ್ಮದಾ ಇಬ್ಬರೂ ಹಪ್ಪಳ ಅಂದುಕೊಂಡು ಪ್ರಾನ್ ತಿಂದಿದ್ದೇವೆ. ಮನೆಯಲ್ಲಿ ಮಗಳ ಹದಿನಾರನೆಯ ವರ್ಷದ ಹುಟ್ಟುಹಬ್ಬದ ಪಾರ್ಟಿಯಲ್ಲಿ, ಗ್ರಾಜುಯೇಷನ್ ಪಾರ್ಟಿಗಳಲ್ಲಿ ಇಷ್ಟವಾಗುವವರಿಗೋಸ್ಕರ ಚಿಕನ್ ಬಿರಿಯಾನಿ, ಟರ್ಕಿ ಸ್ಯಾಂಡ್ವಿಚ್ ಮತ್ತು ಪೆಪರೋನಿ ಪೀಟ್ಜಾ ಕೂಡ ಆರ್ಡರ್ ಮಾಡಿದ್ದೇವೆ. ಮನೆಯಲ್ಲಿ ನರ್ಮದಾಳಾಗಲೀ ಅಕ್ಷರಾ ಆಗಲೀ ಯಾವಾಗ ಹೊರಗಾಗುತ್ತಾರೆ ಎಂದು ನನಗೆ ಗೊತ್ತಾಗುವುದೇ ಇಲ್ಲ.
ಕೆವಿನ್ ಒಂದು ದಿನವೂ ಆಲ್ಕೊಹಾಲು ಮುಟ್ಟಿದ್ದನ್ನು ನಾನು ನೋಡಿಲ್ಲ. ಕಾಫಿ ಟೀ ಕೂಡ ಮುಟ್ಟುವುದಿಲ್ಲ. ಮನೆಗೆ ಬರುವಾಗ ಹೊರಗೆ ಶೂ, ಸಾಕ್ಸು ಎರಡನ್ನೂ ಬಿಚ್ಚಿಟ್ಟು ಬರುತ್ತಾನೆ. ನಾನು ಪೂಜೆ ಮಾಡುತ್ತಾ ಇದ್ದರೆ ದೇವರಮನೆಯ ಬಾಗಿಲಲ್ಲಿಯೇ ಮಗ್ನನಾಗಿ ಕೂತು ನೋಡುತ್ತಾನೆ. ನನಗೆ ಕಸಿವಿಸಿ ಆಗುತ್ತಾ ಇದೆ ಅನಿಸಿದರೆ ತಕ್ಷಣ ಲಿವಿಂಗ್ ರೂಮಿಗೆ ಹೋಗಿ ಟೀವಿ ನೋಡುತ್ತಾ ಕೂರುತ್ತಾನೆ.
ಆತನ ಆಲ್ಕೋಹಾಲ್ ಮತ್ತು ಕೆಫೀನು ವರ್ಜ್ಯಕ್ಕೆ ಆತನ ಧರ್ಮ ಕಾರಣವಿರಬಹುದೇ ಎಂದು ಇಂಟರ್ನೆಟ್ಟಲ್ಲಿ ಹುಡುಕುತ್ತೇನೆ. ಹೌದು, ಇಲ್ಲ ಎನ್ನುವ ಎರಡೂ ಉತ್ತರಗಳೂ ಸಿಗುತ್ತವೆ. ಆತನನ್ನೇ ಕೇಳಿದಾಗ ‘ಅಂಕಲ್, ನಾಳೆಯಿಂದ ಬೇಕಾದರೆ ಶುರುಮಾಡಿಕೋತೀನಿ,’ ಎಂದು ನಗುತ್ತಾನೆ. ನಂತರ ‘ಧರ್ಮ, ಸಂಪ್ರದಾಯಗಳು ಬೇಡ ಅಂತ ಹೇಳಿದ್ದನ್ನೆಲ್ಲಾ ಮಾಡೋಕಾಗುತ್ತಾ, ಅಂಕಲ್,’ ಎಂದು ಅಕ್ಷರಾಳ ಮುಖ ನೋಡಿ ನಗುತ್ತಾನೆ.
ವಾಯುಸ್ತುತಿ ಹೇಳುವುದರಿಂದ ನಾನು ಸನಾತನವಾದಿಯೋ, ಬಿಯರ್ ಕುಡಿದು ಮೀನು ತಿಂದಿರುವುದರಿಂದ ಪ್ರಗತಿಪರನೋ ಗೊತ್ತಿಲ್ಲ. ಪ್ರಗತಿಪರ ಅಂತ ತಿಳಕೊಂಡರೂ ಕೆವಿನ್ ಮತ್ತು ಅಕ್ಷರಾ ನಾಳೆ ಮದುವೆ ಮಾಡಿಕೊಳ್ಳುತ್ತೇವೆ ಎಂದರೆ ಕೆವಿನ್ ಹಿನ್ನೆಲೆ ಅರೆಬರೆ ಗೊತ್ತಿದ್ದರೂ ನಮ್ಮ ಮನಸ್ಸಿಗೆ ಸಮಾಧಾನವಾಗುವಷ್ಟು ಆತನ ಬಗ್ಗೆ ತಿಳಕೊಳ್ಳದೇ ಮದುವೆ ಮಾಡಿಕೊಟ್ಟುಬಿಡುತ್ತೀವಿ ಎಂದು ಎದೆತಟ್ಟಿ ಹೇಳಿಕೊಳ್ಳುವ ಧೈರ್ಯ ನನಗಾಗಲೀ, ನರ್ಮದಾಳಿಗಾಗಲೀ ಇಲ್ಲ. ಹಾಗೆಂದಾಕ್ಷಣ ಅಕ್ಷರಾಳಿಗೆ ನೀನು ಕೆವಿನ್ನನ್ನು ಮದುವೆ ಮಾಡಿಕೊಂಡರೆ ನಿನಗೆ ನಮ್ಮ ಮನೆಯಲ್ಲಿ ಜಾಗ ಇಲ್ಲ, ನಾವು ನಿಮ್ಮ ಅಪ್ಪ, ಅಮ್ಮನೇ ಅಲ್ಲ ಎಂದು ಹೇಳುವಷ್ಟು ಕರ್ಮಠರೂ ಅಲ್ಲ. ಇಬ್ಬರೂ ಮದುವೆ ಮಾಡಿಕೊಳ್ಳುತ್ತೇವೆ ಎಂದು ಹಠ ಮಾಡಿದರೆ ನಾವು ಏನೂ ಮಾಡಲಿಕ್ಕಾಗದು ಎಂಬ ಅರಿವು ನಮ್ಮಿಬ್ಬರಿಗೂ ಇದೆ.
ಗೂಗಲ್ಲಿನಲ್ಲಿ ಮಾರ್ಮನ್ ಎಂದು ಟೈಪಿಸಿದಲ್ಲಿ ಮೊಟ್ಟ ಮೊದಲು ಕಾಣಿಸುವುದೇ ಅವರ ಮಡಿವಂತ ಜೀವನಶೈಲಿ. ಕೆಥಾಲಿಕ್ ಕ್ರಿಶ್ಚಿಯನ್ನರಿಗಿಂತ ಬೇರೆಯಾದ ಅವರ ಧಾರ್ಮಿಕ ನಂಬಿಕೆಗಳು, ‘ಬುಕ್ ಆಫ್ ಮಾರ್ಮನ್’ ಎಂಬ ಧಾರ್ಮಿಕ ಗ್ರಂಥ. ಎಲ್ಲದಕ್ಕಿಂತ ಎದ್ದು ಕಾಣುವುದು ಅವರ ಗಂಡಸರುಗಳ ಬಹುಪತ್ನಿತ್ವ.
ಹಾಗಾಗೇ ನನಗೂ ನರ್ಮದಾಳಿಗೂ ಕುತೂಹಲ, ಕಾತರ, ಭಯ ಎಲ್ಲವೂ ಒಟ್ಟೊಟ್ಟಿಗೇ ಆಗಿತ್ತು.
ಅಷ್ಟೇ ಅಲ್ಲ, ನಮ್ಮ ಸಂಸಾರದ ಕಥೆ ಬರಿ ಎಂದು ನನ್ನನ್ನು ಬಲವಂತ ಮಾಡುತ್ತಿರೋ ನನ್ನ ದೊಡ್ಡಪ್ಪನೇ ಈ ಕೆವಿನ್ ನಮ್ಮ ಸಂಸಾರದ ಸದಸ್ಯನಾದರೆ ‘ಇಲ್ಲಿನ ಪಾತ್ರಗಳೆಲ್ಲವೂ ಕಾಲ್ಪನಿಕ’ ಎಂದು ಮುಂಚೆಯೇ ಮುಚ್ಚಳಿಕೆ ಬರೆದಿಟ್ಟುಬಿಡು ಎನ್ನುತ್ತಾರೇನೋ ಎಂಬ ಅನುಮಾನವೂ ಇತ್ತು.
ದೊಡ್ಡಪ್ಪ ಹಾಗನ್ನುವುದರಲ್ಲಿ ಆಶ್ಚರ್ಯವಿಲ್ಲ. ನಮ್ಮಪ್ಪನ ಮತ್ತು ನನ್ನ ಸ್ಮಾರ್ತಸಂಗದಿಂದಾದ ಬೆರಕೆಯನ್ನೇ ಅರಗಿಸಿಕೊಳ್ಳಲಾಗದ ಗಲಗಲಿ, ಬಂಗಾರಕೇರಿ ವಂಶದ ಹಿರಿಯರು ಇನ್ನು ವಂಶವೃಕ್ಷದಲ್ಲಿ ಮ್ಲೇಚ್ಛನೊಬ್ಬನ ಹೆಸರು ಕವಲುಗಳನ್ನೆಲ್ಲಾ ದಾಟಿ ನಂತರದ ಸಣ್ಣ ಕಡ್ಡಿಯಂತ ಟೊಂಗೆಯಲ್ಲಿ ಕಾಣಿಸಿಕೊಂಡರೂ ಸತ್ತ ಪಿತೃಗಳೆಲ್ಲ ಪಿತೃಲೋಕದಿಂದ ಸತ್ಯಲೋಕಕ್ಕೆ ತಮ್ಮ ಊರ್ಧ್ವಮುಖ ಪ್ರಯಾಣವನ್ನು ಪೂರೈಸಲಾಗದೆ ಶಾಶ್ವತವಾಗಿ ಅಲ್ಲಿಯೇ ಕೊಳೆಯುತ್ತಾರೆಂದು ಬಲವಾಗಿ ನಂಬುವವರು.
ಇವರ ಬಗ್ಗೆ ಕೊಂಚವಾದರೂ ತಿಳಿಯಬೇಕು ಎಂದರೆ ದೊಡ್ಡಪ್ಪ ನನಗೆ ಕಾದಂಬರಿ ಬರೆಯಲು ಅನುಕೂಲವಾಗಬಹುದು ಎಂದು ನಮ್ಮಪ್ಪನ ಜತೆ ಸೇರಿ ಮಾಡಿಟ್ಟಿರುವ ವಂಶವೃಕ್ಷವನ್ನು ಒಮ್ಮೆ ನೋಡಬೇಕು.
ಕೃತಿ : ಸತ್ಕುಲ ಪ್ರಸೂತರು (ಕಾದಂಬರಿ)
ಲೇ : ಗುರುಪ್ರಸಾದ ಕಾಗಿನೆಲೆ
ಪುಟ : 256
ಬೆಲೆ : ರೂ. 295
ಪ್ರಕಾಶನ : ಅಂಕಿತ ಪುಸ್ತಕ
ಮುಖಪುಟದ ಫೋಟೋ : ಹರ್ಷವರ್ಧನ ಸುಳ್ಯ
ಮುಖಪುಟ ವಿನ್ಯಾಸ : ಅಪಾರ
ಖರೀದಿಗೆ ಸಂಪರ್ಕಿಸಿ : 94486 76770
ಗುರುಪ್ರಸಾದ ಕಾಗಿನೆಲೆ
ಶಿವಮೊಗ್ಗದಲ್ಲಿ ಹುಟ್ಟಿ ಮೈಸೂರು ಮತ್ತು ಮಂಡ್ಯದ ನಾಗಮಂಗಲದಲ್ಲಿ ಬೆಳೆದ ಕಥೆಗಾರ, ಕಾದಂಬರಿಕಾರ ಗುರುಪ್ರಸಾದ ಕಾಗಿನೆಲೆಯವರು ಈಗ ಅಮೆರಿಕದ ಮಿನೆಸೋಟಾದ ರಾಚೆಸ್ಟರ್ನಲ್ಲಿ ನೆಲೆಸಿದ್ದಾರೆ. ಅವರು ವೃತ್ತಿಯಲ್ಲಿ ವೈದ್ಯರು. ಪ್ರಕಟಿತ ಕೃತಿಗಳು: ನಿರ್ಗುಣ(೨೦೦೩), ಶಕುಂತಳಾ (೨೦೦೭) ದೇವರ ರಜಾ (೨೦೧೪) ಲೋಲ ೨೦೨೦- ಕಥಾಸಂಕಲನಗಳು; ವೈದ್ಯ, ಮತ್ತೊಬ್ಬ- ಲೇಖನ ಸಂಗ್ರಹ. (೨೦೦೫); ಬಿಳಿಯ ಚಾದರ (೨೦೦೭), ಗುಣ (೨೦೧೦), ಹಿಜಾಬ್ (೨೦೧೭), ಕಾಯಾ ೨೦೨೦ - ಕಾದಂಬರಿಗಳು. ಇವಲ್ಲದೇ ಲಲಿತ ಪ್ರಬಂಧ, ಅನುಭವ ಕಥನಗಳನ್ನೂ ಹಲವು ಸಂಪಾದಿತ ಕೃತಿಗಳನ್ನೂ ಪ್ರಕಟಿಸಿದ್ದಾರೆ. ಅವರ ಕತೆ ಕಾದಂಬರಿಗಳು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದವಾಗಿವೆ. ಕಾಗಿನೆಲೆಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಪುಸ್ತಕ ಪ್ರಶಸ್ತಿ’ಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಕೊನರುವಿನಲ್ಲಿ ಕಾದಂಬರಿ ಭಾಗದ ಪುಟವನ್ನು ಓದಿದೆ...ಇಂತಹ ತಳಮಳ ಸುಮಾರು ಜನರ ನಿತ್ಯ ಸತ್ಯ!!
-- ಕೃಷ್ನಮೂರ್ತಿ ಬಿ. ಎಸ್.
ಆಯ್ಕೆ ಬಹಳ ಚೆನ್ನಾಗಿದೆ👌🏼
ಇದನ್ನು ಓದುತ್ತಿರುವಾಗ ವಾಯುಸ್ತುತಿಯ ನೆನಪಾಯಿತು. ಬಾಲ್ಯದಲ್ಲಿ ನಾಲಗೆ ಹೊರಳಲೆಂದು ಈ ಮಂತ್ರವನ್ನು ಬಾಯಿಪಾಠ ಮಾಡಿಸಲಾಗುತ್ತಿತ್ತು.
"ಪಾಂತಸ್ಮಾನ್ ಪುರುಹೂತ ವೈರಿ ಬಲಮಮ್..."
-- ಡಾ. ವಿನೋದ್ ಛೆಬ್ಬಿ