ನುಡಿತೇರನೆಳೆದವರು: ಬಾನುಲಿ ಕಲಿಗಳು ಶೀರ್ಷಿಕೆಯ ಕೃತಿಯು ಇದೇ ಫೆಬ್ರವರಿ ೧೫ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಲೋಕಾರ್ಪಣೆಯಾಗಲಿದೆ. ಇದನ್ನು ನವಕರ್ನಾಟಕ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಬರೆದವರು ಬೆಂಗಳೂರು ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ.ಕೆ.ಸುಮತಿ. ಈ ಕೃತಿಯು 1940ರಿಂದ 1990ರ ಅವಧಿಯಲ್ಲಿ ಕರ್ನಾಟಕದ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ ದಿಗ್ಗಜ ಪ್ರಸಾರಕರ ವ್ಯಕ್ತಿಚಿತ್ರಗಳನ್ನು ಮತ್ತು ಕರ್ನಾಟಕ ಆಕಾಶವಾಣಿ ಮಾಡಿದ ಪ್ರಯೋಗಗಳು, ಪರಿಕಲ್ಪನೆಗಳು, ಸೃಜನಶೀಲತೆಯ ಹಲವು ಆಯಾಮಗಳನ್ನು ದಾಖಲಿಸಿದೆ. ಈ ಕೃತಿಯ ಆಯ್ದ ಭಾಗ ನಿಮ್ಮ ಓದಿಗಾಗಿ.
ಡಾ.ಎಚ್.ಕೆ.ರಂಗನಾಥ್ ಕುರಿತ ನುಡಿ ಚಿತ್ರಾವಳಿಯ ಆಯ್ದ ಭಾಗ
ಪತ್ನಿ ಶಾಂತಿ ರಂಗನಾಥ್ ;
"ನಾನೂ ಆಕಾಶವಾಣಿಯ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಮುಂಚಿನಿಂದಲೂ ಇವರು ಡ್ರಾಮಾಗೆ ಫೇಮಸ್ಸು. ಅದಕ್ಕಾಗಿಯೇ ನಿರ್ದೇಶಕರು ಡ್ರಾಮಾ ವಿಭಾಗವನ್ನು ನೋಡಿಕೊಳ್ಳಲು ವಹಿಸಿದ್ದರು. ನನಗೆ ಅವರ ಸಹಾಯಕಳನ್ನಾಗಿ ನೇಮಿಸಿದ್ದರು. ಹಾಗೆ ಪರಿಚಯವಾಯಿತು. ನನ್ನನ್ನು ಅವರು ಚೆನ್ನಾಗಿ ಸ್ಟಡಿ ಮಾಡಿದ್ದರು. ಒಂದು ದಿನ ನನ್ನೊಂದಿಗೆ ನಿನ್ನ ಬಳಿ ಮಾತನಾಡಬೇಕಲ್ಲಾ ಎಂದರು. ಒಬ್ಬರಿಗೊಬ್ಬರು ಪರಿಚಯ ಆಗಿದ್ದರಿಂದ ವಿವಾಹದ ಪ್ರಸ್ತಾಪವಾಯಿತು. ಇಬ್ಬರೂ ತಂದೆತಾಯಿ ಬಳಿ ಮಾತನಾಡಬೇಕಲ್ಲಾ ಎಂದರು. ಅದೇ ಸಮಯಕ್ಕೆ ಆಗಿನ ನಿರ್ದೇಶಕರು ಒಂದೇ ಇಲಾಖೆಯ ಇಬ್ಬರು ಮದುವೆಯಾಗಬೇಕಾದರೆ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ ಎಂಬ ಅಂಶವನ್ನು ಎತ್ತಿದ್ದರು. ಗವರ್ನಮೆಂಟ್ ಸ್ಯಾಂಕ್ಷನ್ ಪಡೆಯಬೇಕು ಎನ್ನಲಾಯಿತು. ಮಿನಿಸ್ಟರ್ಗೆ ಬರೆಯುತ್ತೇನೆ, ಒಪ್ಪಿಗೆ ಪತ್ರ ಬಂದ ಮೇಲೆ ಮದುವೆಯಾಗಬಹುದು ಎಂದರು. ಅವರು ಪತ್ರ ಬರೆದರು. ನಂತರ ಸಚಿವಾಲಯದಿಂದ ಅನುಮತಿ ಪತ್ರ ಬಂತು. ಆಮೇಲೆ ದೇವಾಲಯವೊಂದರಲ್ಲಿ ಸರಳ ವಿವಾಹವಾದೆವು. ಕೇವಲ ಇನ್ನೂರು ಮಂದಿಯನ್ನು ಮಾತ್ರ ಆಹ್ವಾನಿಸಿದ್ದು. ಆದರೆ, ಸ್ಫುರದ್ರೂಪಿ ಎಚ್.ಕೆ.ರಂಗನಾಥರ ಅಭಿಮಾನಿ ಗೆಳೆಯ ಗೆಳತಿಯರು ಮದುವೆಯನ್ನು ನೋಡಬೇಕು ನಾವು ಎಂದು ಕುತೂಹಲಿಗಳಾಗಿದ್ದರು. ಯಾಕೆಂದರೆ ಅವರ 'ಉಭಯ ಕುಶಲೋಪರಿ' ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಅಭಿಮಾನಿಗಳಿದ್ದರು. ರಂಗನಾಥರ ಧ್ವನಿಯನ್ನು ಎಡಬಿಡದೇ ಅನುಸರಿಸುತ್ತಿದ್ದರು. ಹಾಗಾಗಿಯೇ ಎಚ್.ಕೆ.ರಂಗನಾಥರ ವಿವಾಹವನ್ನು ನೋಡಬೇಕು, ಅವರ ಮಡದಿಯನ್ನೂ ನೋಡಬೇಕು ಎಂದು ಜನ ಕಾತರಿಸಿದ್ದರು.
ಹಿರಿಯ ಪ್ರಸಾರಕ ದೊರೆಸ್ವಾಮಿ ಅಯ್ಯಂಗಾರ್ ಕುರಿತ ನುಡಿ ಚಿತ್ರಾವಳಿಯ ಆಯ್ದ ಭಾಗ
ವೀಣೆ ದೊರೆಸ್ವಾಮಿ ಅಯ್ಯಂಗಾರ್ ಮೈಸೂರಿನ ಒಂದು ನಗೆಪ್ರಸಂಗವನ್ನು ನೆನಪಿಸಿಕೊಂಡಿದ್ದು ಹೀಗೆ: “ಒಂದು ಸಲ ಇಂಗ್ಲೆಂಡ್ನ ರಾಜಮನೆತನಕ್ಕೆ ಸೇರಿದವರು ಮೈಸೂರಿಗೆ ಬಂದಿದ್ದರು. ಮಹಾರಾಜರು ಕೆಲವು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಅವುಗಳಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮವೂ ಒಂದು. ಅದಕ್ಕಾಗಿ ಬೇಕಾದಷ್ಟು ರಿಹರ್ಸಲ್ ನಡೆದಿತ್ತು. ನಮ್ಮ ಗುರುಗಳು ಟೈಮ್ಗೆ ಸರಿಯಾಗಿ ಒಂದು ಗಂಟೆ ಮುಂಚೆಯೇ ಬನ್ನಿ ಎಂದು ಹೇಳಿದ್ದರು. ಎಲ್ಲರೂ ಆರು ಗಂಟೆಗೆ ಸರಿಯಾಗಿ ಸೇರಿದ್ದರು. ಆದರೆ, ರಾಮರಾಯರು ಬರುವ ಸುಳಿವೇ ಕಾಣಲಿಲ್ಲ. ಕಾಲು ಗಂಟೆ ತಡವಾಗಿ ಬಂದರು. ಅಷ್ಟರಲ್ಲಿ ನಮ್ಮ ಗುರುಗಳಿಗೆ ತಳಮಳ ಶುರುವಾಗಿತ್ತು. 'ಏನು ರಾಮ್, ಇವತ್ತೂ ಇಷ್ಟು ಲೇಟಾಗಿ ಬರಬೇಕಾ ನೀನು' ಅಂತ ಗುರುಗಳು ಕೇಳಿದ್ದರು. ಈ ಸಂದರ್ಭದಲ್ಲಿ ಗುರುಗಳ ಗಮನ ಅವರ ರುಮಾಲ್ ಮೇಲೆ ಹರಿಯಿತು. ಏನಯ್ಯಾ ರಾಮ್, ಇಷ್ಟು ದಿವಸ ಆದ್ರೂ ರುಮಾಲು ಸುತ್ತೋಕೆ ಬರೋಲ್ಲ ನಿನಗೆ ಅಂತ ಹೇಳಿದ್ದರು. ರಾಮರಾಯರು ತಲೆಯ ಮೇಲೆ ಇದ್ದ ರುಮಾಲನ್ನು ನೆಲದ ಮೇಲೆ ಇಟ್ಟು ಸುತ್ತಲೂ ಸುತ್ತಿದರು. ನೋಡು, ರುಮಾಲು ಸುತ್ತೋಕೆ ನನಗೆ ಬರೋಲ್ಲ ಅಂತೀಯಲ್ಲ, ನನಗೂ ಬರುತ್ತೆ ರುಮಾಲು ಸುತ್ತೋಕೆ ಅಂದಿದ್ದರು. ಆಗ ಅಲ್ಲಿದ್ದವರೆಲ್ಲರಿಂದಲೂ ನಗು ಹೊಮ್ಮಿತ್ತು. ನಮ್ಮ ಗುರುಗಳಿಗೆ ಕೋಪ ಎಲ್ಲಾ ಕಡಿಮೆಯಾಯಿತು”
‘ಸುದ್ದಿ ಶಾರದೆ ಆಕಾಶವಾಣಿ’ ನುಡಿಚಿತ್ರಾವಳಿಯ ಆಯ್ದ ಭಾಗ
ಗಡಿಯಾರ ನಿಲ್ಲಬಹುದು. 5-10 ನಿಮಿಷ್ ಫಾಸ್ಟ್ ಸ್ಲೋ ಇರಬಹುದು. ಆದರೆ, ಆಕಾಶವಾಣಿ ವಾರ್ತೆ, ಆಕಾಶವಾಣಿ ಸುದ್ದಿ. ಅದೇ ಸಮಯ. ಅದೇ ಸತ್ಯ ಹಾಗೂ ಅದೇ ಜೀವನ. ಆಬಾಲವೃದ್ಧರಾದಿಯಾಗಿ ಎಲ್ಲರನ್ನೂ 'ಏಕಸೂತ್ರ ಸಮಯ ಬಂಧನಕ್ಕೆ' ಒಳಪಡಿಸಿದ್ದು ಆಕಾಶವಾಣಿ. ಆಕಾಶವಾಣಿ ವಾರ್ತೆ, ಪ್ರದೇಶ ಸಮಾಚಾರಗಳ ವೃತ್ತದಲ್ಲಿ 'ಭಾರತದ ಬದುಕು' ಸುತ್ತಿದ ವೇಳೆ. 23 ಭಾಷೆಗಳೂ, 179 ಉಪಭಾಷೆಗಳೂ, 647 ಸುದ್ದಿ ಸಂಚಿಕೆಗಳು ಭಾರತೀಯ ಮತ್ತು ವಿದೇಶೀ ಭಾಷೆಗಳ ಸುದ್ದಿ ಸಂಚಯ. ಒಟ್ಟು 46 ಪ್ರಾದೇಶಿಕ ಸುದ್ದಿ ವಿಭಾಗಗಳು. ರಾಷ್ಟ್ರೀಯ, ಪ್ರಾದೇಶಿಕ, ಸ್ಥಳೀಯ ಸುದ್ದಿಗಳು.
ದಿನವೊಂದಕ್ಕೆ 24 ಗಂಟೆಗಳು. ಆಕಾಶವಾಣಿ ಸಿದ್ಧಪಡಿಸುವುದು 56 ಗಂಟೆಗಳಿಗೂ ಹೆಚ್ಚು ಅವಧಿಯ ಬುಲೆಟಿನ್ಸ್. ದಿನವೊಂದಕ್ಕೆ 3:15ರಿಂದ 3:25ರವರೆಗೆ ಹೆಡ್ಲೈನ್ಸ್ ನೀಡುವ ವಿಶ್ವದ ವಿಸ್ಮಯ ಸುದ್ದಿ ಜಾಲ ಆಕಾಶವಾಣಿ. ರಂಗರಾವ್, ಸುಭಾಸಿನ್ನೂರ್ ದಾಸ್, ಲಕ್ಷ್ಮಣ ಜೋಶಿ, ಪಿ.ಮಹದೇವಯ್ಯ, ಉಪೇಂದ್ರರಾವ್, ರಾಮಕೃಷ್ಣ, ಚಂದ್ರಿಕಾ ಗುತ್ತಿಲ್ - ಇವರು ಕನ್ನಡ ವಾರ್ತಾವಾಚಕರು. ಆರಂಭದಲ್ಲಿ ಲೀಲಾರಾಮನ್, ಪಂಕಜ ರಾಷ್ಟ್ರೀಯ ಕನ್ನಡ ವಾರ್ತಾ ವಾಚಕರಾಗಿದ್ದರು.
“ಇಂಡೋಚೈನಾ ವಾರ್ ಟೈಮ್ನಲ್ಲಿ. ವಾರ್ತೆಗಳ ವ್ಯವಸ್ಥೆ ಇಷ್ಟು ಚೆನ್ನಾಗಿ ಇರುತ್ತೆ ಅನ್ನೋದು ಗೊತ್ತಿರಲಿಲ್ಲ. ಜೆನರಲ್ ನ್ಯೂಸ್ ವಿಭಾಗದಲ್ಲಿ ಒಬ್ಬ ಚೀಫ್ ಎಡಿಟರ್. ಪ್ರತಿಯೊಬ್ಬರೂ ಎಂಟು ಗಂಟೆಗಳ ಕೆಲಸ ನಿರ್ವಹಿಸಿ ಮತ್ತೊಬ್ಬರಿಗೆ ಡ್ಯೂಟಿ ವಹಿಸಿಕೊಡುತ್ತಿದ್ದರು. 24 ಗಂಟೆಗಳ ಕಾಲವೂ ಈ ವಿಭಾಗ ಕಾರ್ಯನಿರ್ವಹಿಸುತ್ತಿತ್ತು. ಈ ಜನರಲ್ ನ್ಯೂಸ್ ವಿಭಾಗ ವಿವಿಧ ಭಾಷೆಗಳಲ್ಲಿ ನ್ಯೂಸ್ ಪ್ರಸಾರವಾಗುತ್ತಿತ್ತು. ಸ್ವಾಹಿಲಿ, ನೇಪಾಲಿ ಭಾಷೆಗಳಲ್ಲೂ ನ್ಯೂಸ್ ಪ್ರಸಾರವಾಗತ್ತಿತ್ತು. ಮೊದಲು ಅಫ್ಘಾನಿಸ್ತಾನದ ಕಡೆಗೆ ಹೋಗಿದ್ದು” ಎಂದು ಮೆಲುಕು ಹಾಕಿದವರು ದೆಹಲಿಯ ರಾಷ್ಟ್ರೀಯ ವಾರ್ತೆ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಕಮಲಾ ಬಾಲು.
ಈ ಕೃತಿಯಲ್ಲಿ 52 ಸಂಚಿಕೆಗಳಿವೆ. ಆಕಾಶವಾಣಿಯಲ್ಲಿ ದಶಕಗಳ ಸೇವೆ ಸಲ್ಲಿಸಿದ ಹಿರಿಯ ದಿಗ್ಗಜ ಪ್ರಸಾರಕರ ವ್ಯಕ್ತಿಚಿತ್ರಣಗಳ ಜೊತೆಗೆ ಇಂತಹ ಅನೇಕ ರಸಪ್ರಸಂಗಗಳನ್ನು ಕಾಣಬಹುದು.
ಕೃತಿ: ನುಡಿತೇರನೆಳೆದವರು ಬಾನುಲಿ ಕಲಿಗಳು
ಲೇಖಕರು: ಬಿ.ಕೆ.ಸುಮತಿ
ಪುಟ: 328
ಬೆಲೆ: 390
ಮುಖಪುಟ ವಿನ್ಯಾಸ: ಕಿರಣ್ ಮಾಡಾಳು
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬಿ. ಕೆ. ಸುಮತಿ
ಆಕಾಶವಾಣಿಯಲ್ಲಿ ಮೂರು ದಶಕಗಳ ವೃತ್ತಿಪರಯಾನ. ಕನ್ನಡ ನಿರೂಪಣೆಯ ಭಾಷಿಕ ಅಸ್ಮಿತೆಗೆ ಸೌಜನ್ಯಪೂರ್ಣ ಸೌಂದರ್ಯದ ಸ್ಪರ್ಶ ನೀಡಿದವರು. 'ಧ್ವನಿ' ತಾಂತ್ರಿಕವೂ ಹೌದು, ಮಾಂತ್ರಿಕವೂ ಹೌದು ಎಂದು ಪ್ರಯೋಗದಲ್ಲಿ ತಿಳಿಸಿದವರು. ಇದಕ್ಕೆ ಅವರ 'ಬಾನಯಾನ', 'ಕಿವಿಮಾತು', ಸ್ವಾತಂತ್ರೋತ್ಸವ, ರಾಜ್ಯೋತ್ಸವ, ಹಬ್ಬ ಹರಿದಿನಗಳ ವಿಶೇಷ ರೂಪಕ ರಚನೆಗಳು, ನೇರ ಪ್ರಸಾರದ ಪ್ರಸ್ತುತೀಕರಣಗಳೇ ಉದಾಹರಣೆ. ಸತತ 6 ವರ್ಷ 'ಸುದ್ದಿ ಸ್ವಾರಸ್ಯ' ಕಾರ್ಯಕ್ರಮ ರಚನೆ, ನಿರೂಪಣೆ ಮಾಡಿದ್ದಾರೆ. ಇವರ 'ಕನ್ನಡ ಕಜ್ಜಾಯ' ಕಾರ್ಯಕ್ರಮ (ನಿತ್ಯ ಕನ್ನಡ ಚಿಂತನೆ) 800 ಸಂಚಿಕೆ ದಾಟಿತು. 'ನಿರೂಪಣೆ ಮಾತಲ್ಲ ಗೀತೆ' ಇವರ ಪ್ರಕಟಿತ ಕೃತಿ.