ಲೇಖಕರು ಮತ್ತು ಅನುವಾದಕರಾದ ಪಾರ್ವತಿ ಜಿ ಐತಾಳ್ ಅವರ ಅಂತರಂಗದ ಸ್ವಗತ ಎಂಬ ಆತ್ಮಕತೆ ಅಂಕಿತ ಪುಸ್ತಕದಿಂದ ಮಾರ್ಚ್ 2 ರಂದು ಬಿಡುಗಡೆಯಾಗಲಿದೆ. ಆತ್ಮಕತೆಯ ಆಯ್ದ ಭಾಗ ನಿಮ್ಮ ಓದಿಗೆ.
ನನ್ನ ಸರಸ್ವತಿಯಕ್ಕನ ಮದುವೆಯಾದಾಗ ಎಲ್ಲರೂ “ಹೋ, ನಿನ್ನ ಲೈನ್ ಕ್ಲಿಯರ್ ಆಯಿತಲ್ಲ, ನಿನ್ನ ಮದುವೆ ಯಾವಾಗ ?”ಎಂದು ಕೇಳತೊಡಗಿದರು. ಆಗ ನನಗೆ ೨೫ ವರ್ಷವಾಗುತ್ತ ಬಂದಿತ್ತು. ಮೂಲ್ಕಿಯ ಕಾಲೇಜಿನಲ್ಲಿ ನನ್ನ ಕೆಲಸ ಪರ್ಮನೆಂಟ್ ಆಗಿತ್ತು. ನನ್ನ ಬೋಧನಾ ವೈಖರಿಯಿಂದ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ನಾನು ವಿದ್ಯಾರ್ಥಿಗಳೊಡನೆ ಸ್ನೇಹಪೂರ್ವಕವಾಗಿ ಒಡನಾಡುತ್ತಿದ್ದುದರಿಂದ ಆಗಲೇ ಎಲ್ಲರ ವಿಶ್ವಾಸ ಗಳಿಸಿದ್ದೆ. ನನ್ನ ಸಹೊದ್ಯೋಗಿಗಳಾಗಿದ್ದ ಒಬ್ಬರು ಪ್ರಾಧ್ಯಾಪಕರು ಮದುವೆಗಿದ್ದಾರೆಂಬ ಸುದ್ದಿ ತಿಳಿದು ನನ್ನ ಭಾವ ಶಂಕರರಾಯರು ಕಾಲೇಜಿಗೆ ನೇರವಾಗಿ ಬಂದು ಅವರಲ್ಲಿ ಮದುವೆ ಪ್ರಸ್ತಾಪ ಮಾಡಿದರು. ಆದರೆ ಅವರಿಂದ “ಆಗುವುದಿಲ್ಲ,” ಎಂಬ ಸರಿಯಾದ ಉತ್ತರ ಸಿಗಲು ತುಂಬಾ ಕಾಲ ಕಾಯಬೇಕಾಗಿ ಬಂತು. ನಾನು ಅವರನ್ನು ಆಗಲೇ ಬಹಳ ಇಷ್ಟಪಟ್ಟಿದ್ದೆ. ಆದರೆ ಅವರು ಏಳೆಂಟು ತಿಂಗಳುಗಳ ಕಾಲ ಸತಾಯಿಸಿ ಕೊನೆಗೆ ಏನೇನೋ ನೆಪಗಳನ್ನು ಮುಂದಿರಿಸಿ ಮನೆಯವರು ಒಪ್ಪುವುದಿಲ್ಲವೆಂಬ ಕಾರಣ ಹೇಳಿ ನನ್ನನ್ನು ತಿರಸ್ಕರಿಸಿದರು. ಆ ಮಧ್ಯಕಾಲೀನ ಅವಧಿಯಲ್ಲಿ ಅವರು ನನ್ನ ಹತ್ತಿರ ವರ್ತಿಸಿದ ರೀತಿ ನನ್ನನ್ನು ಅಪಾರವಾಗಿ ನೋಯಿಸಿತ್ತು. ವಿದ್ಯಾವಂತರೂ ಸುಸಂಸ್ಕೃತರೂ ಆದ ಅವರು ಹೀಗೆ ಅಪರಿಷ್ಕೃತರಂತೆ ಅಮಾನುಷವಾಗಿ ವರ್ತಿಸುತ್ತಿರುವದನ್ನು ನೋಡಿ ಆಘಾತವೂ ಆಗಿತ್ತು. ಇನ್ನೊಬ್ಬರು ಪ್ರಾಧ್ಯಾಪಕರೂ ಮೊದಮೊದಲು ನನ್ನಲ್ಲಿ ಆಸಕ್ತಿ ಇದ್ದವರಂತೆ ವರ್ತಿಸಿದರು. ನಾನು ಒಂದು ದಿನ ಅವರ ಹತ್ತಿರ ನೇರವಾಗಿ ಮದುವೆ ಪ್ರಸ್ತಾಪ ಮಾಡಿದೆ. ಅದಕ್ಕೆ ಅವರು ನಾನು "ಜೋರು" ಅಂತ ಹೇಳಿ ಪ್ರಚಾರ ಮಾಡಿ (ಯಾಕೆಂದರೆ ಸಂಪ್ರದಾಯದ ಪ್ರಕಾರ ಹೆಣ್ಣಿಗೆ ಅಷ್ಟೆಲ್ಲ ಧೈರ್ಯ ಇರಬಾರದಲ್ಲವೇ?) ಕೊನೆಗೆ ತೀರಾ ಎಳೆಯ ವಯಸ್ಸಿನ ಒಬ್ಬಳು ಚೆಂದದ ಹುಡುಗಿ ಸಿಕ್ಕಾಗ ಅವಳನ್ನೇ ಮದುವೆಯಾದರು.
ಒಂದು ಪ್ರಸ್ತಾಪ ಮನೆಯಲ್ಲಿದ್ದ ದೊಡ್ಡಣ್ಣನ ಮೂಲಕ ಬಂದಿತ್ತು. ಹುಡುಗ ಬಿ.ಕಾಂ. ಮಾಡಿ ಒಂದು ಒಳ್ಳೆಯ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ. ನೋಡಲು ಬರುವ ಶಾಸ್ತ್ರವೆಲ್ಲ ಸಾಂಪ್ರದಾಯಿಕ ಶಿಸ್ತಿನಿಂದಲೇ ಆಯಿತು. ಏಳೆಂಟು ಮಂದಿ ಬಂದಿದ್ದರು. ಉಪ್ಪಿಟ್ಟು-ಕೇಸರಿಬಾತು, ಕಾಫಿ ಎಲ್ಲವನ್ನೂ ರೆಡಿ ಮಾಡಿಟ್ಟವರು ಅತ್ತಿಗೆ. ಎಲ್ಲರಿಗೂ ಸಪ್ಲೈ ಮಾಡುವುದು ನನ್ನ ಕೆಲಸ. (ಮುಂದಿನ ದಿನಗಳಲ್ಲಿ ಸ್ತ್ರೀಪರ ಸಂವೇದನೆಗಳನ್ನು ಬೆಳೆಸಿಕೊಂಡ ನಂತರ ಹೆಣ್ಣನ್ನು ಅವಮಾನಕ್ಕೆ ಗುರಿ ಮಾಡುವ ಇಂತಹ ನೂರಾರು ಸಂಪ್ರದಾಯಗಳನ್ನು ನಾನು ವಿರೋಧಿಸಿದ್ದೆ. ಆದರೆ ಆಗ ಸಮಾಜದಲ್ಲಿ ಮಹಿಳೆಯರಿಗಾಗುವ ಅನ್ಯಾಯದ ಅರಿವೇ ನನಗಿರಲಿಲ್ಲ. ಮದುವೆಯ ಕನಸೊಂದೇ ನನ್ನ ತಲೆಯಲ್ಲಿ ತುಂಬಿತ್ತು.)
ಹುಡುಗನ ಮನೆಯವರೆಲ್ಲ ಬಹಳ ಖುಷಿಯಿಂದ ಮಾತನಾಡುತ್ತಿದ್ದರು. ನಾನು ಹುಡುಗನ ಕೈಗೆ ತಟ್ಟೆ ಕೊಡುವಾಗ ಒಮ್ಮೆ ಅವನತ್ತ ನೋಡಿದ್ದೆ. ಹುಡುಗ ಚೆನ್ನಾಗಿದ್ದ. ಬಂದವರೆಲ್ಲರೂ “ಹುಡುಗಿ ನಮಗೆ ಒಪ್ಪಿಗೆ. ಒಮ್ಮೆ ನೀವೂ ನಮ್ಮ ಮನೆಗೆ ಬನ್ನಿ. ಅನಂತರ ನಿಶ್ಚಿತಾರ್ಥ ಇಟ್ಟುಕೊಳ್ಳುವಾ,” ಅಂದರು. ನನ್ನ ಅಮ್ಮ- ಅಣ್ಣ-ಅತ್ತಿಗೆಯರಿಗೆ ಸಂಭ್ರಮವೋ ಸಂಭ್ರಮ. ಅಪ್ಪ ತೀರಿಹೋಗಿ ಒಂದು ವರ್ಷವೂ ಆಗಿರಲಿಲ್ಲ. ವರ್ಷಾಂತಕ್ಕೆ ಮೊದಲು ಮಗಳಿಗೆ ಮದುವೆಯಾದರೆ ಅಪ್ಪನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಎಲ್ಲರೂ ಹೇಳಿದರು. ಅಲ್ಲದೇ ಅಣ್ಣನಿಗೆ ಮೂವರು ಗಂಡುಮಕ್ಕಳೇ ಆದ್ದರಿಂದ ಕನ್ಯಾದಾನದ ಅವಕಾಶ ಸಿಕ್ಕಿತಲ್ಲ ಅನ್ನುವ ಸಂತಸ.
ಅಣ್ಣ ಮದುವೆಯ ತಯಾರಿಯ ಬಗ್ಗೆ ಮಾತನಾಡತೊಡಗಿದ್ದ. ಯಾರಿಗೆಲ್ಲ ಆಮಂತ್ರಣ ನೀಡುವುದು, ಎಷ್ಟು ದೊಡ್ಡ ಚಪ್ಪರ ಹಾಕುವುದು, ಊಟಕ್ಕೆ ಏನೇನಿರಬೇಕು ಇತ್ಯಾದಿ. ಹಾಸ್ಟೆಲಿನ ವಾರ್ಡನ್ ಹಾಗೂ ಹಿರಿಯ ಸಹೋದ್ಯೋಗಿ ಯಶೋಧರಾ ಮೇಡಂ ಹತ್ತಿರ ವಿಷಯವನ್ನು ಹೇಳಿದೆ. ಆ ಶನಿವಾರ ಮನೆಗೆ ಹೋಗದೆ ಹಾಸ್ಟೆಲಿನಲ್ಲಿಯೇ ಉಳಿದು ಮೇಡಂ ಜತೆಗೆ ‘ಗೆದ್ದ ಮಗ’ ಮ್ಯಾಟಿನಿ ಷೋಗೆ ಹೊರಟಿದ್ದೆ. ಅಷ್ಟರಲ್ಲಿ ದೂರದಿಂದ ಅಣ್ಣ ಬರುತ್ತಿರುವುದು ಕಾಣಿಸಿತು. ಆಗ ಫೋನ್ ಸಂಪರ್ಕವಿದ್ದ ಕಾಲವಾಗಿರಲಿಲ್ಲ. ಯಾಕೆ ಹೀಗೆ ಅನಿರೀಕ್ಷಿತವಾಗಿ ಬಂದಿರಬಹುದಪ್ಪಾ ಅಂದುಕೊಂಡೆ. ಹತ್ತಿರ ಬಂದಕೂಡಲೇ ನಾನು ಎಲ್ಲಿಗೆ ಹೊರಟದ್ದೆಂದು ಕೇಳಿದ ಅಣ್ಣ: “ನೀನು ಬೇಸರ ಮಾಡಿಕೊಳ್ಳಕೂಡದು. ಅವರು ಕೈಕೊಟ್ಟರು. ಹುಡುಗನಿಗೆ ಈ ಮದುವೆ ಇಷ್ಟವಿಲ್ಲವಂತೆ. ಹಾಗೆ ಅವರು ಪತ್ರ ಬರೆದಿದ್ದಾರೆ.” ಈ ಮಾತನ್ನು ಕೇಳಿದ ತಕ್ಷಣವೇ ನನ್ನ ಮುಖ ಕಪ್ಪಿಟ್ಟದ್ದನ್ನು ನೋಡಿ ಅಣ್ಣ ನನ್ನ ಬೆನ್ನು ನೇವರಿಸಿ ಹೇಳಿದ: “ಇದಕ್ಕೆಲ್ಲ ಧೈರ್ಯ ಕಳೆದುಕೊಳ್ಳಬಾರದು. ಇದಕ್ಕೆಂತ ಒಳ್ಳೆಯ ಸಂಬಂಧ ಕೂಡಿ ಬರಬಹುದು. ಯಾರಿಗೆ ಗೊತ್ತು? ಆಗುವುದೆಲ್ಲ ಒಳ್ಳೆಯದಕ್ಕೆ. ನೀನೀಗ ಹೋಗುವ ಸಿನಿಮಾ ‘ಗೆದ್ದ ಮಗ’. ಆದರೆ ನೀನು ಗೆದ್ದ ಮಗಳು ಆಗುತ್ತೀ ನೋಡು. ಕಣ್ಣೊರಸಿಕೋ. ಮುಂದಿನ ವಾರ ಮನೆಗೆ ಬಾ,” ಅಂತ ಹೇಳಿ ಹಿಂತಿರುಗಿ ಹೋದ. ಅವನೂ ಅಪಾರವಾಗಿ ನೊಂದಿದ್ದಅನ್ನುವುದು ಅವನ ಮುಖ ನೋಡಿದರೇ ಗೊತ್ತಾಗುತ್ತಿತ್ತು.
ಬಾಳಿಕೆಯ ಜೋಡುಮನೆಯ ಆಚೆ ಬದಿಯಲ್ಲೀಗ ದೊಡ್ಡಪ್ಪ ಮತ್ತು ಅವರ ಕುಟುಂಬ ಇರಲಿಲ್ಲ. ಅವರು ನಮ್ಮ ಊರಿನ ದೊಡ್ಡ ಕುಳವೆಂದು ಹೆಸರು ಮಾಡಿದ್ದ ಮೋಯಿದಿನ್ ಕುಞ ಬ್ಯಾರಿಗೆ ತಮ್ಮ ಆಸ್ತಿ-ಮನೆಗಳನ್ನು ಹಿಂದು-ಮುಂದು ಯೋಚಿಸದೆ ಮಾರಿ ಬಿಟ್ಟು ಯಾವುದೋ ದೂರದ ಊರಿಗೆ ಹೋಗಿ ನೆಲೆಸಿದ್ದರು. ಮನೆಗಳನ್ನು ಪ್ರತ್ಯೇಕಿಸಲು ಒಂದು ಗೋಡೆಯಷ್ಟೇ ಇರುವ ಜೋಡು ಮನೆಯಲ್ಲಿ ಒಂದು ಬದಿಯಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬವೂ ಇನ್ನೊಂದು ಬದಿಯಲ್ಲಿ ಮುಸಲ್ಮಾನ ಕುಟುಂಬವೂ ಇರತೊಡಗಿದವು. ದೊಡ್ಡದೊಡ್ಡ ಪೇಟೆಗಳಲ್ಲಾದರೆ ಈ ರೀತಿ ಇರುವುದು ಅಷ್ಟು ವಿಶೇಷವಾಗಿ ಕಾಣುವುದಿಲ್ಲ. ಆದರೆ ದೂರದೂರ ಮನೆಗಳಿರುವ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ- ಅದೂ ಸಾಲಾಗಿ ಬ್ರಾಹ್ಮಣರ ಮನೆಗಳೇ ಇದ್ದ ಜಾಗದಲ್ಲಿ ನನ್ನ ತಾಯಿ-ತಂದೆಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ನನ್ನ ತಂದೆಗೆ ಬುದ್ಧಿ ಕಲಿಸಲೆಂದೇ ದೊಡ್ಡಪ್ಪನ ಮಕ್ಕಳು ಆಸ್ತಿಯನ್ನು ಮುಸಲ್ಮಾನರಿಗೆ ಕೊಟ್ಟು ಹೋದರೆಂದು ಊರವರೆಲ್ಲ ಆಡಿಕೊಳ್ಳುತ್ತಿದ್ದರು. ಆಗ ಸರಸ್ವತಿ ಅಕ್ಕನ ಮದುವೆಯಾಗಿರಲಿಲ್ಲ. ಬಂದ ವರಗಳು ಬಿಟ್ಟು ಹೋದರೆ ಎಂಬ ಭಯ ಅಪ್ಪನನ್ನು ಕಾಡಿತು. ಸರಸ್ವತಿ ಅಕ್ಕನ ಮದುವೆ ಮುಗಿಸುವಷ್ಟರಲ್ಲಿ ಅಪ್ಪ ಸೋತು ಸುಣ್ಣವಾಗಿದ್ದರು. ಒಂದೇ ವರ್ಷದ ಒಳಗೆ ಮೋಯಿದಿನ್ ಬ್ಯಾರಿಯ ಕುಟುಂಬದವರು ಮನೆಯೊಳಗೆ ಹಾವು ಬಂದು ಕುಳಿತುಕೊಳ್ಳುತ್ತದೆ ಎಂಬ ಕಾರಣಕ್ಕೆ ಪುನಃ ಆ ಮನೆಯನ್ನು ಬ್ರಾಹ್ಮಣರಿಗೆ ಮಾರಿ ಹೊರಟು ಹೋದರು. ಆ ಬ್ರಾಹ್ಮಣ ಕುಟುಂಬದವರು ದೂರದಿಂದ ನಮ್ಮ ಸಂಬಂಧಿಕರೂ ಆಗಿದ್ದರು.
ಒಮ್ಮೆ ನನ್ನ ಮದುವೆಯ ವಿಚಾರದಲ್ಲಿ ಅಣ್ಣನ ಪರದಾಟ ನೋಡಿ ಆಚೆ ಮನೆಯವರೂ ಒಂದು ಮದುವೆಯ ಪ್ರಸ್ತಾಪ ತಂದರು. ಹುಡುಗನಿಗೆ ಮಂಗಳೂರಿನಲ್ಲಿ ಯಾವುದೋ ದೊಡ್ಡ ಸರಕಾರಿ ಉದ್ಯೋಗವಂತೆ. ಹುಡುಗಿಗೆ ಮುಲ್ಕಿಯಲ್ಲಿ ತಾನೇ ಕೆಲಸ? ಮದುವೆಯಾದರೆ ಮಂಗಳೂರಿನಲ್ಲೇ ಮನೆ ಮಾಡಿದರಾಯಿತು ಅಂದರು. ಹುಡುಗಿ ನೋಡುವ ಶಾಸ್ತ್ರಕ್ಕೆ ನಾಲ್ಕೈದು ಮಂದಿ ಬಂದರು. ಹುಡುಗ ಅಷ್ಟೇನೂ ಸಟಾಸುಟಿಯಿದ್ದಂತೆ ಕಾಣಲಿಲ್ಲ. ಪೂರ್ತಿ ಮಾತುಕತೆಯಾಡಿದ್ದು ಹುಡುಗನ ಅಣ್ಣ. ಹುಡುಗ ಒಂದಕ್ಷರವೂ ಮಾತನಾಡಲಿಲ್ಲ. ಎಲ್ಲರೂ ಒಪ್ಪಿಗೆ ಸೂಚಿಸಿ ಹೊರಟು ಹೋದರು. ನನಗೆ ಹುಡುಗ ಇಷ್ಟವಾಗಿರಲಿಲ್ಲ. ಆದರೆ ಬೇಡವೆನ್ನಲು ಕಾರಣವೂ ಇರಲಿಲ್ಲ. ಅಂದಿನ ದಿನಗಳಲ್ಲಿ ಹೆಣ್ಣಿನ ಕಡೆಯವರ ಬಗ್ಗೆ ಗಂಡಿನ ಕಡೆಯವರಿಗೆ ತಾವು ಸಮಾನರು ಅನ್ನುವ ಭಾವನೆ ಸ್ವಲ್ಪವೂ ಇರಲಿಲ್ಲ. ಎಲ್ಲಾ ವಿಷಯಗಳಲ್ಲಿ ಏರಿ ನಿಂತು ಮೇಲೆ ಕುಳಿತುಕೊಳ್ಳುವುದೇ ಪುರುಷ ಲಕ್ಷಣಂ ಅನ್ನುವ ಹಾಗೆ. ಮೊದಲು ಹೆಣ್ಣಿನ ಕಡೆಯವರೇ ಮೂರನೆಯವರ ಮೂಲಕ ಪ್ರಸ್ತಾಪವನ್ನು ಕಳುಹಿಸಿ ಜಾತಕ-ಫೋಟೋಗಳನ್ನು ಕಳುಹಿಸಬೇಕು. ಅವರು ತಕ್ಷಣವೇನೂ ಉತ್ತರಿಸುವುದಿಲ್ಲ. ಜಾತಕಗಳ ಮೇಳಾ-ಮೇಳಿ ನೋಡಿಸುವುದೂ ಇಲ್ಲ. ಗಂಡಿನ ಜಾತಕ ಹೆಣ್ಣಿನ ಕಡೆಯವರಿಗೆ ಕೊಡುವುದೂ ಇಲ್ಲ. ಹೆಣ್ಣನ್ನು ನೋಡಿ ಒಪ್ಪಿಗೆಯಾದರೆ “ಜಾತಕ ಕೂಡಿ ಬರುತ್ತದೆ.” ಇಲ್ಲದಿದ್ದರೆ “ಜಾತಕದಲ್ಲಿ ಆಗುವುದಿಲ್ಲ,” ಎಂಬ ಉತ್ತರ. ಆಗುವುದಿಲ್ಲವೆಂದಾದರೆ ಕೊಟ್ಟ ಜಾತಕ-ಫೋಟೋಗಳನ್ನು ಹಿಂದಿರುಗಿಸುವುದೂ ಇಲ್ಲ. ಇನ್ನೊಂದು ಪ್ರಸ್ತಾಪಕ್ಕೆ ಬೇಕಾದರೆ ನಾವೇ ಹೊಸ ಪ್ರತಿ ಮಾಡಿಸಿಕೊಳ್ಳಬೇಕು. ಆಗ ಜ಼ೆರಾಕ್ಸ್ ತಂತ್ರ ಕೂಡಾ ಬಂದಿರಲಿಲ್ಲ. ನಾನು ನನ್ನ ಜಾತಕದ ಅದೆಷ್ಟು ಪ್ರತಿಗಳನ್ನು ಬರೆದಿದ್ದೆನೋ ಲೆಕ್ಕವಿಲ್ಲ. ಫೋಟೋ ಪ್ರತಿಗಳಿಗಾಗಿ ಅದೆಷ್ಟು ಖರ್ಚು ಮಾಡಿದ್ದೆನೋ ಗೊತ್ತಿಲ್ಲ.
ಪಕ್ಕದ ಮನೆಯವರು ಕರೆದುಕೊಂಡು ಬಂದ ಹುಡುಗನೊಂದಿಗೆ ಮತ್ತೊಮ್ಮೆ ನನ್ನ ಮದುವೆಯ ಸಂಭ್ರಮವೆದ್ದಿತು. ನಾನು ಕಾಲೇಜಿಗೆ ಹೋದೆ. ಯಾಕೋ ನನ್ನಲ್ಲಿ ಸ್ವಲ್ಪವೂ ಉತ್ಸಾಹವಿರಲಿಲ್ಲ. ನಾನು ಸಪ್ಪೆಯಾಗಿಯೇ ಇದ್ದೆ.
ಎರಡು ದಿನಗಳ ನಂತರ ಶಂಕರ ಭಾವ ದುಡುದುಡು ಓಡಿ ಬಂದರು: “ನಿನಗೇನು ತಲೆ ಕೆಟ್ಟಿದೆಯೇ.. ಅಂಥವನನ್ನು ಮದುವೆಯಾಗಲು ಒಪ್ಪಿದ್ದೀಯಲ್ಲ? ನಿನಗೇನು ಕಡಿಮೆಯಾಗಿದೆ ಅಂತ?” ಎಂದು ಖಾರವಾಗಿಯೇ ಬೈದರು. ವಿಷಯ ಗೊತ್ತಾದ ಕೂಡಲೇ ಅವರು ಹುಡುಗ ಕೆಲಸ ಮಾಡುತ್ತಿದ್ದ ಸರಕಾರಿ ಕಛೇರಿಗೆ ನೇರವಾಗಿ ಹೋದರಂತೆ. ಹುಡುಗನನ್ನ ಭೇಟಿಯಾಗಿ ಮಾತನಾಡಿಸಿ ಬರೋಣ ಅಂತ. ಆಗ ಗೊತ್ತಾಯಿತಂತೆ ಹುಡುಗನ ಮಾತು ತೊದಲು ಅಂತ. ಕೆಲವು ಅಕ್ಷರಗಳು ಬಾಯಿಂದ ಸರಿಯಾಗಿ ಹೊರಡುತ್ತಲೇ ಇರಲಿಲ್ಲವಂತೆ. ಅಲ್ಲದೆ ಹುಡುಗನ ಕಡೆಯವರು ಹೇಳಿದಂತೆ ಅವನು ಅಲ್ಲಿ ಒಬ್ಬ ದೊಡ್ಡ ಆಫೀಸರ್ ಏನೂ ಅಲ್ಲವಂತೆ. ಒಬ್ಬ ಸೆಕೆಂಡ್ ಡಿವಿಜನ್ ಕ್ಲರ್ಕ್ ಅಂತೆ. “ನೀನು ಒಂದು ಪ್ರತಿಷ್ಠಿತ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಒಳ್ಳೆಯ ಹೆಸರು ಗಳಿಸಿದ್ದೀ. ಮಾತ್ರವಲ್ಲದೆ ಒಬ್ಬ ಲೇಖಕಿಯೂ ಆಗಿದ್ದೀ. ಯಾಕೆ ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವವಳಂತೆ ಇಂಥ ಸಂಬಂಧಗಳಿಗೆ ಒಪ್ಪಿಗೆ ಸೂಚಿಸುತ್ತಿದ್ದೀ? ಮದುವೆಯಾಗಲು ಹುಡುಗ ಸಿಕ್ಕದಿದ್ದರೂ ಪರವಾಗಿಲ್ಲ. ನೀನು ಹೀಗೆಯೇ ಉಳಿದರೂ ತೊಂದರೆಯಿಲ್ಲ. ಇಂಥ ಉರುಳುಗಳನ್ನು ಕೊರಳಿಗೆ ಹಾಕಿಕೊಳ್ಳಬೇಡ,” ಎಂದು ಶಂಕರಭಾವ ಬುದ್ಧಿವಾದ ಹೇಳಿದರು. ನನಗೆ ಅದು ಸರಿ ಕಾಣಿಸಿತು. ನಾನು ಮನೆಗೆ ಹೋಗಿ ಮದುವೆ ನಿಲ್ಲಿಸಲು ಹೇಳಿದೆ. ಇದರಿಂದಾಗಿ ಪಕ್ಕದ ಮನೆಯವರಿಗೆ ನಮ್ಮ ಮೇಲೆ ಸ್ವಲ್ಪ ಅಸಮಾಧಾನವಾಯಿತು.
ಹೆಣ್ಣು ನೋಡುವ ಶಾಸ್ತ್ರದ ಇಂಥದೇ ನಾಟಕಗಳು ಇನ್ನೂ ನಾಲ್ಕೈದು ಬಾರಿ ನಡೆದವು. ಯಾವುದೂ ಹೊಂದಿಕೆಯಾಗಲಿಲ್ಲ. ದೀರ್ಘಕಾಲದ ನಂತರ ನಡೆದ ಇನ್ನೊಂದು ಪ್ರಕರಣ ಒಂದು ಎರಡನೇ ಮದುವೆಗೆ ಬಂದ ಪ್ರಸ್ತಾಪ. ನನಗಾಗ ಮೂವತ್ತು ನಡೆಯುತ್ತಿತ್ತು. ಅವರಿಗೆ ಐದು ವರ್ಷ ಪ್ರಾಯದ ಒಬ್ಬಳು ಮಗಳೂ ಇದ್ದಳು. ಒಳ್ಳೆಯ ಕೆಲಸವೂ ಇತ್ತು. ನನಗಿಂತ ಸುಮಾರು ಹನ್ನೆರಡು ವರ್ಷ ದೊಡ್ಡವರು. ಅವರ ಫೋಟೋ ನೋಡಿ ನನಗೆ ಆಗಬಹುದು ಅನ್ನಿಸಿತು. ಹೆಣ್ಣು ನೋಡುವ ಶಾಸ್ತ್ರವೂ ಮುಗಿಯಿತು. ಈ ಸಲ ಮಾತ್ರ ಅವರು ನಮ್ಮ ಮನೆಗೆ ಬಂದದ್ದಲ್ಲ. ಅವರು ಒಂಟಿಯಾಗಿ ವಾಸವಾಗಿದ್ದ ಮನೆಗೆ ನಾವೇ ಹೋಗಿದ್ದು. ಅವರು ನನ್ನನ್ನು ಪ್ರತ್ಯೇಕವಾಗಿ ಕರೆದು, “ಎರಡನೇ ಮದುವೆ ಅಂತ ಆದರೂ ನೀವು ಯಾಕೆ ಒಪ್ಪಿದಿರಿ?”ಎಂದು ಕೇಳಿದರು. ನಾನು, “ಹಾಗೇನಿಲ್ಲ. ವ್ಯಕ್ತಿ ಇಷ್ಟವಾಗುವುದು ಮುಖ್ಯವಲ್ಲವೇ?” ಎಂದೆ. ನಂತರ ಅವರು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿದರು. ಅವರ ಮಾತುಗಳಿಂದ ಅವರು ಸಭ್ಯರು-ಸುಸಂಸ್ಕೃತರು ಎಂದು ನನಗನ್ನಿಸಿತು. ನಾವು ಹೊರಡಲೆಂದು ಎದ್ದಾಗ “ಆಲೋಚನೆ ಮಾಡಿ ನನ್ನ ಅಭಿಪ್ರಾಯ ತಿಳಿಸುವೆ,” ಅಂದರು. ಆದರೆ ಒಂದು ತಿಂಗಳಾದರೂ ಉತ್ತರವಿಲ್ಲ. ಕೊನೆಗೆ ನಾವೇ ಒಂದು ಪತ್ರ ಬರೆದೆವು. ಅದಕ್ಕೆ ಅವರು, “ನನಗೆ ಹುಡುಗಿಯ ಹತ್ತಿರ ಇನ್ನೊಮ್ಮೆ ಮಾತನಾಡಬೇಕು. ನಾನೇ ನಿಮ್ಮ ಮನೆಗೆ ಬರುತ್ತೇನೆ,” ಎಂದು ಬರೆದರು. ಎರಡು ದಿನಗಳಲ್ಲಿ ಬಂದು ನನ್ನ ಹತ್ತಿರ ಮಾತನಾಡಿದರು: “ನೀವು ಯಾಕೆ ನನ್ನನ್ನು ಒಪ್ಪಿದಿರಿ ಅನ್ನುವುದು ನನಗೆ ಅರ್ಥವಾಗುತ್ತಿಲ್ಲ. ನಿಮಗೆ ಇಷ್ಟು ಒಳ್ಳೆಯ ಕೆಲಸವಿದೆ. ಸ್ಥಾನಮಾನಗಳಿವೆ. ನೋಡಲಿಕ್ಕೂ ಲಕ್ಷಣವಾಗಿದ್ದೀರಿ. ಆದರೂ ಯಾಕೆ ಹೀಗೆ ಮಾಡುತ್ತಿದ್ದೀರಿ ಅನ್ನುವುದನ್ನು ನಾನು ತಿಳಿಯಬೇಕು. ಇತ್ತೀಚೆಗೆ — ಅಂದರೆ ಎರಡು ತಿಂಗಳ ಹಿಂದೆ — ನಾನು ಒಬ್ಬಳು ಹುಡುಗಿಯನ್ನು ನೋಡಲು ಹೋಗಿದ್ದೆ. ಅವಳಿಗೆ ೩೫ ವರ್ಷ. ನೋಡಲು ತುಂಬಾ ಸುಂದರವಾಗಿದ್ದಳು. ನಾನು ನೋಡಿದ ಕೂಡಲೇ ಒಪ್ಪಿಕೊಂಡೆ. ಮದುವೆಯ ನಿಶ್ಚಿತಾರ್ಥವೂ ನಡೆಯಿತು. ಅಷ್ಟರಲ್ಲಿ ನನಗೊಂದು ಅನಾಮಧೇಯ ಪತ್ರ ಬಂತು. ಅವಳಿಗೆ ಒಬ್ಬ ವಿವಾಹಿತ ವ್ಯಕ್ತಿಯೊಂದಿಗೆ ಸಂಬಂಧವಿದೆ ಅಂತ ಅದರಲ್ಲಿ ಬರೆದಿತ್ತು. ಅದರೊಂದಿಗೆ ಅವಳು ಆ ವ್ಯಕ್ತಿಗೆ ಬರೆದ ಒಂದು ಪತ್ರವೂ ಇತ್ತು. ನಾನು ತಕ್ಷಣವೇ ನೇರವಾಗಿ ಅವಳನ್ನೇ ಕರೆದು ವಿಚಾರಿಸಿದೆ. ಆದರೆ ಅವಳು ತನಗೇನೂ ಗೊತ್ತಿಲ್ಲವೆಮದು ಹೇಳಿದಳು. ಆ ಪತ್ರ ಬರೆದದ್ದು ತಾನಲ್ಲವೆಂದೂ ಹೇಳಿದಳು. ನಾನು ಅವಳ ಹಸ್ತಾಕ್ಷರವನ್ನು ತೆಗೆದುಕೊಂಡು ಪರಿಶೀಲಿಸಿ ನೋಡಿದೆ. ಎರಡರ ನಡುವೆ ಸಂಪೂರ್ಣ ಸಾಮ್ಯವಿದೆಯೆಂದು ನನಗನ್ನಿಸಿತು. ಆದರೂ ಖಚಿತಪಡಿಸಿಕೊಳ್ಳಲು ನಾನು ಹಸ್ತಾಕ್ಷರತಜ್ಞರಲ್ಲಿಗೆ ಹೋಗಿ ತೋರಿಸಿದೆ. ಅವರು ಎರಡೂ ಅಕ್ಷರಗಳನ್ನು ಬರೆದದ್ದು ಒಬ್ಬರೇ ಅಂದರು. ಇದಾದ ನಂತರ ನಾನು ಆ ಹುಡುಗಿಯನ್ನು ತಿರಸ್ಕರಿಸಿದೆ. ಅನಂತರ ಗೊತ್ತಾಯಿತು ಅವಳ ಜತೆಗೆ ಸಂಬಂಧವಿಟ್ಟುಕೊಂಡ ಆ ವಿವಾಹಿತ ವ್ಯಕ್ತಿ ಅವಳು ಮದುವೆಯಾಗದೆ ತನ್ನವಳಾಗಿಯೇ ಉಳಿಯಬೇಕೆಂಬ ಉದ್ದೇಶದಿಂದ ಹೀಗೆ ಅನಾಮಧೇಯ ಪತ್ರ ಬರೆದು ಕಾಟ ಕೊಡುತ್ತಿದ್ದಾನೆಂದು. ಅದೇನಿದ್ದರೂ ಅವಳು ನನ್ನಲ್ಲಿ ನಿಜ ಹೇಳಿದ್ದರೆ ನಾನು ಅವಳನ್ನು ಕ್ಷಮಿಸುತ್ತಿದ್ದೆನೇನೋ? ಆ ಮದುವೆ ತಪ್ಪಿಹೋದ ನಂತರ ಈಗ ನಿಮ್ಮಿಂದ ಪ್ರಸ್ತಾಪ ಬಂದಿದೆ. ನಿಮ್ಮಲ್ಲಿ ನಾನು ಏನೂ ದೋಷ ಕಂಡಿಲ್ಲ. ಆದರೆ ನನಗೆ ಆಲೋಚನೆ ಮಾಡಲು ಇನ್ನೂ ಸ್ವಲ್ಪ ಸಮಯ ಬೇಕು,” ಎಂದು ಹೇಳಿ ಹೊರಟುಹೋದರು. ಮತ್ತೆ ಕಾಯುವ ಪರಿಸ್ಥಿತಿ ಬಂತು. ಅವರಿಗೆ ಒಪ್ಪಿಗೆಯಾಗಿದೆ, ಸುಮ್ಮನೆ ಮುಂದೆ ದೂಡುತ್ತಿದ್ದಾರೆ ಎಂದು ಎಲ್ಲರೂ ಆರಾಮವಾಗಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ಅವರಿಂದ ನಾಲ್ಕು ಸಾಲುಗಳ ಪತ್ರ ಬಂತು: “ನಿಮ್ಮ ಹುಡುಗಿಯನ್ನು ಮದುವೆಯಾಗುವ ಅರ್ಹತೆ ನನಗಿಲ್ಲ. ಆಕೆಗೆ ಬೇರೆ ಉತ್ತಮ ವರ ಸಿಕ್ಕಿಯಾನು ಅನ್ನುವ ನಂಬಿಕೆ ನನಗಿದೆ. ಶುಭವಾಗಲಿ,” ಈ ನಿರಾಶೆಯ ಆಘಾತದಿಂದ ಚೇತರಿಸಿಕೊಳ್ಳಲು ನನಗೆ ತುಂಬಾ ಸಮಯ ಹಿಡಿಯಿತು.
ನಾನು ಸಂಪೂರ್ಣವಾಗಿ ಖಿನ್ನತೆಯ ಆಳಕ್ಕೆ ಕುಸಿದುಬಿಟ್ಟಿದ್ದೆ. ಮದುವೆಯಿಲ್ಲದೆ ಮಧ್ಯ ವಯಸ್ಸು ಮುಟ್ಟುವೆನೆಂದು ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ನನ್ನ ಸುತ್ತುಮುತ್ತಲಿನವರೆಲ್ಲ ಆಗಲೇ ವ್ಯಂಗ್ಯವಾಡತೊಡಗಿದ್ದರು. ನನ್ನ ಕಣ್ಣಮುಂದೆಯೇ ಹೊಸದಾಗಿ ಸೇರಿದ ಉಪನ್ಯಾಸಕಿಯರೆಲ್ಲ ಒಬ್ಬರಾದ ಮೇಲೆ ಒಬ್ಬರಂತೆ ಮದುವೆಯಾಗಿ ಕಾಲೇಜು ಬಿಟ್ಟು ಹೋಗುತ್ತಿದ್ದರು. “ನೀವೇನು ಪರ್ಮನೆಂಟ್ ಆಗಿ ಇಲ್ಲೇ ಇರುವ ಆಲೋಚನೆಯಾ? ಮದುವೆ ಮಾಡಿಕೊಳ್ಳುವುದಿಲ್ಲವಾ?” ಎಂದು ಎಲ್ಲರೂ ಕೇಳಿದಾಗ ಹಾರಿಕೆಯ ಉತ್ತರ ಕೊಟ್ಟರೂ ಒಳಗೊಳಗೆ ನಾನು ನೊಂದು ಬೇಯುತ್ತಿದ್ದೆ. ಕೆಲವರು “ಬಂದದ್ದನ್ನೆಲ್ಲ ಬಿಡುತ್ತಾಳೆ. ಮತ್ತೆ ಮದುವೆಯಾಗುವುದು ಹೇಗೆ?” ಎಂದು ಹಿಂದಿನಿಂದ ಹೇಳುತ್ತಿದ್ದರು. ಬಹುಶಃ ನಮ್ಮ ಸಮಾಜದಲ್ಲಿ ಅವಿವಾಹಿತ ಹೆಣ್ಣಿನ ಸ್ಥಿತಿಯೇ ಇಷ್ಟು. ಮದುವೆಯಾಗದ ಹೆಣ್ಣಿಗೆ ಬೆಲೆಯೇ ಇಲ್ಲ. ಅವಳದಲ್ಲದ ತಪ್ಪಿಗೆ ಅವಳು ನೋಯುತ್ತಲೇ ಇರುತ್ತಾಳೆ. ವ್ಯಂಗ್ಯ ಬಾಣಗಳಿಂದ ಚುಚ್ಚಿಸಿಕೊಳ್ಳುತ್ತಾಳೆ. ಅನಂತರದ ದಿನಗಳಲ್ಲಿ ಸ್ತ್ರೀವಾದದ ಬಗ್ಗೆ ಸಾಕಷ್ಟು ಓದಿಕೊಂಡಾಗ ಸಮಾಜವು ಎಷ್ಟು ಪುರುಷಪ್ರಧಾನವಾಗಿದೆ, ಇಲ್ಲಿ ಎಷ್ಟೊಂದು ಲಿಂಗತಾರತಮ್ಯ ಬೆಳೆದು ಬಂದಿದೆ, ಹೆಣ್ಣಿಗೆ ಯಾವಾಗಲೂ ಯಾವಯಾವ ರೀತಿಯಲ್ಲಿ ಅನ್ಯಾಯವಾಗುತ್ತಿದೆ ಎಂಬಿತ್ಯಾದಿ ವಿಚಾರಗಳ ಕುರಿತು ನಾನು ಹೆಚ್ಚುಹೆಚ್ಚು ಚಿಂತನೆ ಮಾಡತೊಡಗಿದೆ. ಪ್ರಾಯಶಃ ವಿವಾಹವೆಂಬ ವ್ಯವಸ್ಥೆಯನ್ನೇ ಸಮಾಜವು ಹೆಣ್ಣನ್ನು ಪೂರ್ತಿಯಾಗಿ ತನ್ನ ಬಿಗಿಮುಷ್ಠಿಯೊಳಗೆ ಇಟ್ಟುಕೊಳ್ಳಲು ಬಳಸುತ್ತಿದೆಯೇನೋ ಅನ್ನಿಸಿತ್ತು. ಹೆಣ್ಣಿಗೆ ಆದಷ್ಟು ಬೇಗ ಮದುವೆಯಾಗಬೇಕು, ಹೆಣ್ಣು ನೋಡುವ ಶಾಸ್ತ್ರದಿಂದ ಹಿಡಿದು ಮದುವೆಯ ಶಾಸ್ತ್ರದ ಕೊನೆಯತನಕವೂ ಆಕೆಗೆ ಎಲ್ಲ ವಿಷಯದಲ್ಲೂಎರಡನೇ ಸ್ಥಾನವಿರಬೇಕು, ಎಲ್ಲ ವಿಚಾರಗಳಲ್ಲೂ ಪುರುಷಾಧಿಕಾರವೇ ಮೇಲುಗೈ ಸಾಧಿಸಬೇಕು, ಮದುವೆಯಾದ ನಂತರ ಆಕೆ ತನ್ನ ಹಿಂದಿನ ಅಸ್ಮಿತೆಯನ್ನೇ ಮರೆತು ಗಂಡನ ಮನೆಯ ಸದಸ್ಯಳಾಗಬೇಕು, ಗಂಡನ ಮನೆಯಲ್ಲಿ ಅತ್ತೆ-ಮಾವ, ಗಂಡ ಮತ್ತು ಇತರರಿಗೆ ವಿಧೇಯಳಾಗಿ ತಗ್ಗಿ-ಬಗ್ಗಿ ನಡೆಯಬೇಕು, ಯಾರು ಎಷ್ಟೇ ದೌರ್ಜನ್ಯವೆಸಗಿದರೂ ಮೌನವಾಗಿ ತಾಳ್ಮೆಯಿಂದಿರಬೇಕು, ಮಕ್ಕಳನ್ನು ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿ, ಅವರು ದೊಡ್ಡವರಾಗುವತನಕದ ಸಂಪೂರ್ಣ ಹೊಣೆ ಹೊತ್ತವಳಾದರೂ ಸಮಾಜದಲ್ಲಿ ಅವರು ತಂದೆಯ ಹೆಸರಿನಿಂದಲೇ ಗುರುತಿಸಲ್ಪಟ್ಟಾಗ ಅದನ್ನು ಮೌನವಾಗಿ ಒಪ್ಪಿಕೊಳ್ಳಬೇಕು. ಹೀಗೆ ನೂರಾರು ವಿಷಯಗಳಲ್ಲಿ ಹೆಣ್ಣಿಗಾಗುವ ಅನ್ಯಾಯಗಳ ಅರಿವು ನನಗಾಯಿತು. ಇಷ್ಟಿದ್ದೂ ಮದುವೆ ಆಗಬೇಕೋ ಬೇಡವೋ ಎಂಬ ಆಯ್ಕೆಯ ಸ್ವಾತಂತ್ರ್ಯ ಗಂಡಿಗಿರುವಂತೆ ಹೆಣ್ಣಿಗಿಲ್ಲ. ಹೆಣ್ಣಿಗೆ ಸಮಾಜದಲ್ಲಿ ಸಿಗಬಹುದಾದ ಕಿಂಚಿತ್ ಸ್ಥಾನಮಾನಗಳೆಲ್ಲವೂ ಮದುವೆಯನ್ನು ಅವಲಂಬಿಸಿಯೇ ಆಗಿರುತ್ತವೆ. ಹೆಣ್ಣು "ಶ್ರೀಮತಿ"(ಬುದ್ಧಿಯ ಶ್ರೀಮಂತಿಕೆ ಇದ್ದವಳು) ಆಗುವುದೇ ಮದುವೆಯಾದರೆ ಮಾತ್ರ. ಮದುವೆಯಾಗದೆ ಉಳಿದರೆ ಅವಳಿಗೆ ೬೦ ವರ್ಷ ವಯಸ್ಸಾದರೂ ಅವಳು ಕುಮಾರಿಯಷ್ಟೇ. ಮದುವೆಯಾದ ನಂತರ ಗಂಡ-ಹೆಂಡತಿಯರಿಬ್ಬರ ಹೆಸರನ್ನೂ ಎಲ್ಲಾದರೂ ಉಲ್ಲೇಖಿಸಬೇಕಾಗಿ ಬಂದಾಗ ಅವಳ ಏಕಮಾತ್ರ ಅಸ್ಮಿತೆಯಾದ ಅವಳ ಹೆಸರೇ ಗಂಡನ ಹೆಸರಿನೊಂದಿಗೆ ಲಯವಾಗಿ ಬಿಟ್ಟು ಅವಳು ಶ್ರೀಮತಿ ಮಂಜುನಾಥ್ ಅಥವಾ ಶ್ರೀಮತಿ ನಾರಾಯಣ್ ಆಗುತ್ತಾಳೆ. ಗಂಡ ಅವಳಿಗಿಂತ ವಯಸ್ಸಿನಲ್ಲಿ ತುಂಬಾ ಹಿರಿಯನಾದರೂ ಅವಳು ಗಂಡ ಬದುಕಿರುವಾಗಲೇ ಸತ್ತರೆ “ಮುತ್ತೈದೆ”ಯಾಗಿ ಸತ್ತಳೆಂಬ ಗೌರವ. ಗಂಡನಿರುವಾಗ ತಾಳಿ, ಕುಂಕುಮ, ಸಿಂಧೂರ, ಹೂವುಗಳನ್ನು ಧರಿಸಿ ಶೋಭಿಸುತ್ತಿರಬೇಕೆಂದು ಹೇಳುವ ಸಮಾಜ ಅವಳ ಗಂಡ ಸತ್ತಾಗ ಎಲ್ಲವನ್ನೂ ಕಿತ್ತೆಸೆದು ಬೋಳು ಸಂನ್ಯಾಸಿನಿಯಂತೆ ಬಾಳಬೇಕೆಂದು ನಿರೀಕ್ಷಿಸುತ್ತದೆ. ಹೀಗೆ ಗಂಡನಿದ್ದರಷ್ಟೇ ಅವಳಿಗೆ ಅಸ್ತಿತ್ವ. ಇಲ್ಲದಿದ್ದರೆ ಅವಳು ಇದ್ದೂ ಸತ್ತಂತೆ. ಇಂಥ ಅಸಮಾನತೆಯ ನೆಲೆಗಳು ಇಂದಿನ ಆಧುನಿಕವೆಂದು ಹೇಳಲಾಗುವ ಕಾಲದಲ್ಲೂ ಉಳಿದಿರುವುದು ಬಹಳ ದೊಡ್ಡದುರಂತ.
ಮದುವೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡರೂ ಇತರರ ಚುಚ್ಚುನೋಟಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿಯಾದರೂ ಮದುವೆಯಾಗಬೇಕಿತ್ತು. ಹಾಗೆ ಶಂಕರಭಾವನ ಕೈಗೆ ಬಂದ ಒಂದು ಮದುವೆಯ ಪ್ರಸ್ತಾಪಕ್ಕೆ ಒಪ್ಪಿಕೊಂಡೆ. ಅದು ಕುಂದಾಪುರದ ಸಂತ ಮೇರಿ ಹೈಸ್ಕೂಲಿನಲ್ಲಿ ಗಣಿತ-ವಿಜ್ಞಾನ ಅಧ್ಯಾಪಕರಾದ ಗಂಗಾಧರ ಐತಾಳರದ್ದು. ಸಾಮಾನ್ಯವಾಗಿ ಕೆಳಮಟ್ಟದ ಉದ್ಯೋಗದಲ್ಲಿದ್ದವರು ಮೇಲಿರುವವರನ್ನು ಮದುವೆಯಾಗಲು ಸಿದ್ಧರಿರುವುದಿಲ್ಲ. ಏನೋ ಕೀಳರಿಮೆಯಿಂದಾಗಿ. ಆದರೆ ಗಂಗಾಧರ್ ಅವರಿಗೆ ಯಾವ ಕೀಳರಿಮೆಯೂ ಇರಲಿಲ್ಲ. “ನನ್ನ ಕ್ಷೇತ್ರದಲ್ಲಿ ಚೆನ್ನಾಗಿ ಕೆಲಸ ಮಾಡಿ ನಾನು ಈಗಾಗಲೇ ಒಳ್ಳೆಯ ಹೆಸರು ಮಾಡಿದ್ದೇನೆ. ಪ್ರಾಮಾಣಿಕವಾಗಿ ದುಡಿದು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರನಾಗಿದ್ದೇನೆ. ಮೇಲಿನ ಕೆಲಸವಾದರೇನಾಯಿತು? ನಿಮ್ಮ ಕೆಲಸ ನಿಮಗೆ, ನನ್ನ ಕೆಲಸ ನನಗೆ. ಮನೆಯೊಳಗೆ ಗಂಡ-ಹೆಂಡತಿಯರಾಗಿ ಇದ್ದರಾಯಿತು,” ಎಂದು ನಕ್ಕರು.
ಕೃತಿ: ಅಂತರಂಗದ ಸ್ವಗತ
ಲೇಖಕರು : ಪಾರ್ವತಿ ಜಿ. ಐತಾಳ್
ಪುಟಗಳು: 160
ಬೆಲೆ : ರೂ 195
ಮುಖಪುಟ ವಿನ್ಯಾಸ : ಅಪಾರ
ಪ್ರಕಾಶನ: ಅಂಕಿತ ಪುಸ್ತಕ
ಪಾರ್ವತಿ ಜಿ ಐತಾಳ್
ಕಾಸರಗೋಡು ಜಿಲ್ಲೆಗೆ ಸೇರಿದ ಧರ್ಮತ್ತಡ್ಕ ಎಂಬ ಊರಿನ ಬಾಳಿಕೆ ಮನೆಯಲ್ಲಿ ಮಹಾಲಿಂಗ ಭಟ್ ಮತ್ತು ಪರಮೇಶ್ವರಿ ಅಮ್ಮನವರ ಮಗಳಾಗಿ 1957ರ ಜುಲೈ 23ರಂದು ಜನಿಸಿದ ಪಾರ್ವತಿ ಜಿ ಐತಾಳ್ ಪ್ರಾಥಮಿಕ ಶಿಕ್ಷಣವನ್ನು ಧರ್ಮತ್ತಡ್ಕದಲ್ಕೇ ಪಡೆದು ಮಾಧ್ಯಮಿಕ ಶಿಕ್ಷಣ, ಕಾಲೇಜು ಮತ್ತು ಸ್ನಾತಕೋತ್ತರ ಶಿಕ್ಷಣಗಳನ್ನು ವಿಟ್ಲ, ಕಾಸರಗೋಡು ಮತ್ತು ಮೈಸೂರಿನ ಮಾನಸಗಂಗೋತ್ರಿಗಳಿಂದ ಪಡೆದರು. ಮಂಗಳೂರಿನ ರೋಶನಿ ನಿಲಯ, ಮೂಲ್ಕಿಯ ವಿಜಯಾ ಕಾಲೇಜು ಮತ್ತು ಕುಂದಾಪುರದ ಭಂಡಾರ್ಕರ್ಸ್ ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿ 2017ರಲ್ಲಿ ನಿವೃತ್ತರಾದರು. 1987ರಲ್ಲಿ ತಮ್ಮ ಮೊದಲ ಅನುವಾದಿತ ಕೃತಿ ‘ಅಶ್ಕರ ಕಥೆಗಳು’ ಪ್ರಕಟಿಸಿದ ನಂತರ ಅನುವಾದಿತ, ಸ್ವತಂತ್ರ, ಸಂಪಾದಿತ ಎಂದು ನೂರಕ್ಕೂ ಮಿಕ್ಕಿ ಕಥಾಸಂಕಲನ, ಕಾದಂಬರಿಗಳು, ವೈಚಾರಿಕ, ವಿಮರ್ಶೆ, ನಾಟಕಗಳನ್ನು ಪ್ರಕಟಿಸಿದ್ದಾರೆ. ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ. ಪತಿ ಗಂಗಾಧರ ಐತಾಳ್, ಮಕ್ಕಳು ಡಾ. ರಮ್ಯತಾ ಮತ್ತು ಸುಶ್ಮಿತಾ.