ಅಡುಗೆ ಎಂಬ ಸಾಮುದಾಯಿಕ ಚರಿತ್ರೆ ಮತ್ತು ರಾಜಕಾರಣ
ರಾಜೇಂದ್ರ ಪ್ರಸಾದರ ‘ಭಿನ್ನ ರುಚಿ’ ಅಡುಗೆ ಪ್ರಬಂಧಗಳು; ಮತ್ತಿತರ ವಿಷಯಾಂತರಗಳು
ರಾಜೇಂದ್ರ ಪ್ರಸಾದರ ‘ಭಿನ್ನ ರುಚಿ’ ಅಡುಗೆ ಪ್ರಬಂಧಗಳು ಮತ್ತಿತರ ಕೆಲವು ಪುಸ್ತಕಗಳನ್ನು ಪರಿಚಯಿಸುತ್ತ ಆಹಾರ ಮತ್ತು ಅಡುಗೆಯ ಸಾಮುದಾಯಿಕ ಚರಿತ್ರೆ, ರಾಜಕಾರಣ ಮತ್ತು ಪರಿಸರವಾದಿ ನೆಲೆಯ ಕೆಲವು ಅಂಶಗಳನ್ನು ಸಂಕೇತ ಪಾಟೀಲ ಈ ಪ್ರಬಂಧದಲ್ಲಿ ಚರ್ಚಿಸಿದ್ದಾರೆ.
ಜೀವಿಗಳಿಗೆ ಆಹಾರ ಎನ್ನುವುದು ಮೂಲಭೂತ ಆವಶ್ಯಕತೆಯಾಗಿದ್ದರೂ ‘ಅಡುಗೆ’ ಎನ್ನುವುದು ಪ್ರಾಣಿಪ್ರಪಂಚದಲ್ಲಿ ಮಾನವನಿಗಷ್ಟೇ ಹಾಗೂ ಎಲ್ಲ ಮಾನವ ಸಮುದಾಯಗಳಲ್ಲೂ ಸಾರ್ವತ್ರಿಕವಾಗಿ ಒದಗಿಬಂದಿರುವ ತಂತ್ರ ಮತ್ತು ಪ್ರಕ್ರಿಯೆ. ತಮಗಾಗಿ ಅಥವಾ ತಮ್ಮ ಮಕ್ಕಳಿಗಾಗಿ ಆಹಾರವನ್ನು ಸ್ವಲ್ಪಮಟ್ಟಿಗೆ “ತಯಾರು ಮಾಡಿಕೊಡುವ” ಜೀವಿಗಳ ಕೆಲವೇ ಕೆಲವು ಉದಾಹರಣೆಗಳಿವೆ: ದೊಡ್ಡತಲೆಯ ಇರುವೆಗಳು ಅಂಗಾತ ಮಲಗಿದ ಮರಿಹುಳುಗಳ ಹೊಟ್ಟೆಯ ಮೇಲೆ ಆಹಾರವನ್ನು ಇಟ್ಟು ಅದರ ಮೇಲೆ ಎಂಜ಼ೈಮುಗಳನ್ನ ಉಗುಳಿದಾಗ ಅದು ಮರಿಗಳು ಹೆಚ್ಚು ಸುಲಭವಾಗಿ ಅರಗಿಸಿಕೊಳ್ಳಬಲ್ಲ ಊಟವಾಗುತ್ತದಂತೆ; ಕಳಿಂಗ ಹಕ್ಕಿಗಳು (Shrikes) ಮಿಡತೆಗಳನ್ನು ಮುಳ್ಳಿನ ಶೂಲಕ್ಕೇರಿಸಿ ಒಂದೆರಡು ದಿನ ಬಿಟ್ಟಾಗ ಅವುಗಳ ವಿಷವಿಳಿದು ಅವು ತಿನ್ನಲು ಯೋಗ್ಯವಾಗುತ್ತವಂತೆ; ಕೆಲಬಗೆಯ ಮಂಗಗಳು ತಾವು ಹರಿದ ಕಾಯಿ, ಹಣ್ಣು, ಬೀಜಗಳನ್ನು ಬಿಸಿಲಲ್ಲಿ ಒಣಗಿಸುವುದೋ ತೊಳೆಯುವುದೋ ಇದೆ. ಆದರೆ ಸುಟ್ಟು ಅಥವಾ ಬೇಯಿಸಿ ಸಾಮಾನ್ಯಾರ್ಥದಲ್ಲಿ ಅಡುಗೆ ಎಂದು ನಾವು ಗುರುತಿಸುವುದು ಇರುವುದು ಮಾನವರಲ್ಲಿ ಮಾತ್ರ. ಮಾನವನು ಬೆಂಕಿಯನ್ನು ಮಾಡಿ ಅದನ್ನು ಬಳಸಲು ಕಂಡುಹಿಡಿದಾಗಿನಿಂದಲೇ — ಎಂದರೆ ಸುಮಾರು ಎರಡು ಮಿಲಿಯನ್ ವರ್ಷಗಳಷ್ಟು ಹಿಂದೆಯೇ — ಅಡುಗೆಯ ಹುಟ್ಟೂ ಆಯಿತು ಎಂದು ಹೇಳಬಹುದು.
ಸಸ್ಯಗಳು, ಹಾವಸೆಗಳು ಅವುಗಳ ವಾತಾವರಣದಲ್ಲಿ ಸಿಕ್ಕುವ ಅಜೈವಿಕ ಪದಾರ್ಥಗಳನ್ನು ಬಳಸಿಕೊಂಡು ಬೆಳಕನ್ನು ಹೀರಿಕೊಂಡು ತಮ್ಮ ಆಹಾರವನ್ನು ಸೃಷ್ಟಿಸಿಕೊಳ್ಳುತ್ತವೆ (photosynthesis).1 ಅಣಬೆಗಳಿಂದ ಹಿಡಿದು ಮಾನವನವರೆಗೆ ಉಳಿದೆಲ್ಲ ಜೀವಿಗಳೂ ಆಹಾರಕ್ಕಾಗಿ ಅವುಗಳ ಪರಿಸರದಲ್ಲಿ ಇತರ ಜೈವಿಕ ಪದಾರ್ಥಗಳನ್ನು ಅವಲಂಬಿಸಿವೆ. ಆಹಾರದ ವಿಷಯದಲ್ಲಿ ಸೃಷ್ಟಿಯ ಉಳಿದೆಲ್ಲ ಜೀವಿಗಳಿಗೂ ಮಾನವನಿಗೂ ಇರುವ ಇನ್ನೊಂದು ಬಹುಮುಖ್ಯ ವ್ಯತ್ಯಾಸವೆಂದರೆ, ಅವುಗಳ ಉದ್ದೇಶ (“ಉದ್ದೇಶ" ಎನ್ನುವಂಥದ್ದು ಏನಾದರೂ ಇದ್ದರೆ) ಉಳಿವು, ಬೆಳವಣಿಗೆ ಮತ್ತು ಕಾಲಾಂತರದಲ್ಲಿ ತಮ್ಮ ಮುಂದಿನ ಪೀಳಿಗೆಯನ್ನು ಹುಟ್ಟುಹಾಕುವುದು. ಮಾನವನಿಗೆ ಇವೆಲ್ಲ ಉದ್ದೇಶಗಳಿಗೂ ಆಹಾರ ಬೇಕು; ಆದರೆ ಆಹಾರವೆನ್ನುವುದು ಇದನ್ನೆಲ್ಲ ಮೀರಿ, ಮತ್ತು ಇದಕ್ಕೂ ಮುಖ್ಯವಾಗಿ, ಒಂದು ಸಾಮುದಾಯಿಕ ಮತ್ತು ಸಾಂಸ್ಕೃತಿಕ artifact ಆಗಿದೆ. ಅದರದೊಂದು ಸಂಕಥನವೂ ಚರಿತ್ರೆಯೂ ಬೆಳೆದುಬಂದಿದೆ. ಕಾಲಕ್ರಮೇಣ ಅದರೊಟ್ಟಿಗೆ ಅದರದೇ ವಿಶಿಷ್ಟ ರಾಜಕಾರಣವೂ ತಳುಕುಹಾಕಿಕೊಂಡಿದೆ.
ಅಡುಗೆಯೆಂಬುದು ವಿಜ್ಞಾನವೋ (science), ಕಲೆಯೋ (art), ಬರಿದೆ ಕೌಶಲವೋ (craft) ಎಂಬಂಥ ಪ್ರಶ್ನೆಗಳೂ ಇವೆ. ಇದರ ಬಗ್ಗೆ ರಾಜೇಂದ್ರ ಪ್ರಸಾದರ ಪುಸ್ತಕದಲ್ಲೂ ಒಂದು ಕಿರುಪ್ರಬಂಧವಿದೆ (“ಅಡುಗೆಯು ಒಂದು ಕಲೆಯೇ!?"). ಇಂಥ ಪ್ರಶ್ನೆಗಳನ್ನು ಅಡುಗೆಗಷ್ಟೇ ಅಲ್ಲದೇ ಸಂಗೀತ, ಚಿತ್ರಕಲೆ, ಬರೆವಣಿಗೆ ಮೊದಲಾದ ಕ್ಷೇತ್ರಗಳಿಗೂ — ಇಂದಿನ AI ಉತ್ಕರ್ಷದ ಯುಗದಲ್ಲಂತೂ! — ಅನ್ವಯಗೊಳಿಸಬಹುದು. ಇದೊಂದು ಕುತರ್ಕ ಎಂದು ನನ್ನ ಅನ್ನಿಸಿಕೆ — ಒಂದು ಹುಸಿ ಮೂರ್ಬಗೆ (false trichotomy). ಇವೆಲ್ಲವೂ ಈ ಮೂರರ ಬೇರೆಬೇರೆ ಪ್ರಮಾಣಗಳ ಸಂಯೋಜನೆಗಳಾಗಿರಬಹುದು. ಅಥವಾ ಇವುಗಳ ಹೊರತಾದ ಬೇರೇನೋ ಇರಬಹುದು. ಇಲ್ಲಿ ನನ್ನ ಮೆಚ್ಚಿನ ಗಣಕ ವಿಜ್ಞಾನಿ ಡಾನಲ್ಡ್ ಕನೂತ್ (Donald Knuth) ಹೇಳಿದ ಒಂದು ಮಾತು ನೆನಪಾಗುತ್ತದೆ: “Science is what can be taught to machines; art is everything else.” ಈ ಸಂದರ್ಭಕ್ಕೆ ಅದನ್ನು ಹೊಂದಿಸಿಕೊಂದು ಮುಂದುವರಿಸಬಹುದಾದರೆ, “Craft is what can be learned, taught, and repeated; art is everything else.” ಇಷ್ಟೆಲ್ಲ ಹೇಳಿದ್ದಕ್ಕೆ ಕಾರಣವೆಂದರೆ ಸಂಗೀತದಲ್ಲೇ ಆಗಲಿ ಬರೆವಣಿಗೆಯಲ್ಲೇ ಆಗಲಿ ಮತ್ತಿನ್ನು ಅಡುಗೆಯಲ್ಲಂತೂ ಸರಿಯೇ ಸರಿ — ideaಗಳಷ್ಟೇ execution ಮಹತ್ತ್ವದ್ದು; artನಷ್ಟೇ craft ಕೂಡ ಮಹತ್ತ್ವದ್ದು. ಅಲ್ಲದೇ, ಅವು ಒಂದರೊಳಗೊಂದು ಬೇರ್ಪಡಿಸಲಾಗದಂತೆ ಅಡಕವಾದುವು.
ಮತ್ತಿನ್ನು ವಿಜ್ಞಾನ ಕೂಡ ಉಪಯುಕ್ತವೇ. ಯಾವ ಅಣಬೆ ತಿನ್ನಲು ಯೋಗ್ಯ ಮತ್ತು ಯಾವುದು ವಿಷಕಾರಿ ಎನ್ನುವುದರಿಂದ ಹಿಡಿದು ವಿಮಾನಪ್ರಯಾಣದಲ್ಲಿ ಕೊಡುವ ಬಹುತೇಕ ಪದಾರ್ಥಗಳು ರುಚಿಗೇಡು ಎನ್ನಿಸಿದರೂ ಟೊಮೇಟೋ ಸೂಪ್ ಮಾತ್ರ ರುಚಿಯೆನ್ನಿಸಲು ಕಾರಣವೇನು ಎಂಬುದನ್ನು ವೈಜ್ಞಾನಿಕವಾಗಿ ವಿವರಿಸಬಹುದು. ಕ್ರಿಶ್ ಅಶೋಕ್ರ Masala Lab: The Science of Indian Cooking ಎಂಬ ಪುಸ್ತಕವು ಅಡುಗೆಯ ವಿಜ್ಞಾನ, ಕಲೆ, ಕೌಶಲದ ಪ್ರಶ್ನೆಗೆ ಸೂಕ್ತವಾದ ಸಂತುಲಿತವಾದ ಉತ್ತರವನ್ನು ಕೊಡುತ್ತದೆ. ಅಲ್ಲದೇ ಬಹಳ ಉಪಯುಕ್ತ, ಆಸಕ್ತಿಕರ ಮತ್ತು ಮಾಹಿತಿಪೂರ್ಣ ಅಡುಗೆ ಪುಸ್ತಕವೂ ಅದಾಗಿದೆ.
ಅದೇನೇ ಇರಲಿ, ಅಡುಗೆಯೆನ್ನುವುದು ತಾತ್ಕಾಲಿಕ, ಆ ಕ್ಷಣದ ಬೆರಗು ಮಾತ್ರ ಎಂಬುದಂತೂ ಸತ್ಯ. ಟಿಬೆಟನ್ ಭಿಕ್ಕುಗಳು ಹಲಬಣ್ಣಗಳ ಉಸುಕಿನಿಂದ ಸುಂದರವೂ ಸವಿಸ್ತಾರವೂ ಆದ ಮಂಡಲವನ್ನು ಬರೆದು ಮರುಗಳಿಗೆಯೇ ಅದನ್ನು ಅಳಿಸಿಹಾಕಿದಂತೆ. ಅಡುಗೆಯೆಂಬ ಕೃತಿಯೂ ಅದನ್ನು ಅಟ್ಟು ಮುಗಿಸಿ ತಿನ್ನುವವರೆಗಷ್ಟೇ. "I cannot remember the books I've read any more than the meals I have eaten; even so, they have made me.” ಎಂಬ ಮಾತಿದೆ. “We are what we eat” ಎಂಬ truism ಕೂಡ ಇದೆ. ಒಂದು ಮಟ್ಟಿಗೆ ಇವೆಲ್ಲ ನಿಜವೇ.
ಅಡುಗೆಯೆನ್ನುವುದು ಸಾರ್ವತ್ರಿಕವಾಗಿರುವಂತೆಯೇ ನಾವು ತಿನ್ನುವ ಆಹಾರ ಹಲವು ಕಾರಣಗಳಿಂದ ವೈವಿಧ್ಯಮಯವಾಗಿದೆ: ಲಭ್ಯತೆ, ಹವಾಮಾನ, ಪ್ರಾದೇಶಿಕ ಮತ್ತು ಸಾಮುದಾಯಿಕ ನಂಬಿಕೆಗಳು, ಇದರ ಜೊತೆಗೆ ವೈಯಕ್ತಿಕ ಆಯ್ಕೆಗಳು, ಇದರ ಹಿನ್ನೆಲೆಯಲ್ಲಿವೆ. ಸರಳವಾಗಿರಬೇಕಾದ, ಸಂತೋಷದ, ಸಂಭ್ರಮದ ಮೂಲವಾಗಿರಬೇಕಾದ ಅಡುಗೆಯೆನ್ನುವುದು ನಮ್ಮಲ್ಲಿ ಅಕಾರಣ ವಿರಸಕ್ಕೂ ಎಡೆಮಾಡಿಕೊಡುತ್ತದೆ. ಇದರಲ್ಲಿ ಮುಖ್ಯವಾದ ಮತಭೇದ ಬರುವುದು ಸಸ್ಯಾಹಾರ ಮತ್ತು ಮಾಂಸಾಹಾರವೆಂಬ, ಪ್ರಾಯಶಃ ನಮ್ಮ ದೇಶಕ್ಕೇ ವಿಶಿಷ್ಟವಾದ, ಬೈನರಿಯಿಂದಾಗಿ. ಇದರ ಜೊತೆಗೇ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲದ ನಮ್ಮದೇ ಆದ “non-vegetarian” ಎಂಬ ಪದ ಮತ್ತು ಪರಿಕಲ್ಪನೆಯೂ ಕುತೂಹಲಕರವಾದುದು. ದೇಶದ ಬಹುತೇಕ ಮಂದಿ ಇಷ್ಟಪಟ್ಟು ತಿನ್ನುವ ಆಹಾರವನ್ನು vegetarian ಎಂಬ ಪದಕ್ಕೆ ವಿರುದ್ಧವಾಗಿಯೂ ಅದನ್ನು ಎಲ್ಲ ರೀತಿಯಿಂದ ಎರಡನೆಯ ಮಟ್ಟದ್ದೆಂದೂ ಬಿಂಬಿಸಲಾಗುವುದು ಬಹುತೇಕ ಭಾರತದಲ್ಲಿ ಮಾತ್ರ. ಕನ್ನಡದ ಸಸ್ಯಾಹಾರ ಮತ್ತು ಮಾಂಸಾಹಾರ ಪದಗಳಿಗೆ ಸಂವಾದಿಯಾದ ಮತ್ತು ಸರಿಯಾದ ಇಂಗ್ಲಿಷ್ ಪದಗಳು plant-based food (ಅಥವಾ vegetarian food) ಮತ್ತು meat-based food. Non-vegetarian ಅಥವಾ non-veg ಎನ್ನುವ ಬಳಕೆ ಹಲವು ಕಾರಣಗಳಿಗೆ -- ಕನಿಷ್ಠ ಪಕ್ಷ ರೂಢಿಗತವಾದ ಅರ್ಥದಲ್ಲಿ -- ತಪ್ಪು. ಇದನ್ನು ಕೇವಲ ಇಂಡಿಯನ್ ಇಂಗ್ಲಿಷ್ನ ಒಂದು ವಿಲಕ್ಷಣತೆ ಎಂದು ಕಡೆಗಣಿಸಲು ಬರುವುದಿಲ್ಲ. Non- ಎಂಬ ಉಪಸರ್ಗ ಋಣಾತ್ಮಕವಾದುದನ್ನೋ ಇಲ್ಲದಿರುವಿಕೆಯನ್ನೋ ಸೂಚಿಸುತ್ತದೆ. ಮೇಲಾಗಿ ಸೂಚ್ಯವಾಗಿಯೂ ವಾಚ್ಯವಾಗಿಯೂ ಇದು ಕ್ರಮಾಗತವಲ್ಲದ್ದನ್ನೋ ರೂಢಿಗೆ ತಪ್ಪಿದ್ದೋ ಎಂಬಂತೆ ಬಿಂಬಿಸಲಾಗುತ್ತದೆ. ಮಾಂಸಾಹಾರಕ್ಕೆ ಇವು ಯಾವುವೂ ಅನ್ವಯವಾಗುವುದಿಲ್ಲ.
ನಮ್ಮ ಸಮಾಜದ ಕೆಲವು ವಲಯಗಳಲ್ಲಿ ಕಂಡುಬರುವ ಮಾಂಸಾಹಾರದ ವಿರೋಧವನ್ನು ಹಲವು ಸ್ತರಗಳಲ್ಲಿ ನೋಡಬಹುದು. ಮೊದಲಿಗೆ, ಮಾಂಸವೆನ್ನುವುದು ಅಶುದ್ಧ, ಮೈಲಿಗೆ ಎಂಬಿತ್ಯಾದಿ ಕಲ್ಪನೆಗಳು. ಇದು ಮೇಲ್ಜಾತಿಯವರ ಶ್ರೇಷ್ಠತೆಯ ವ್ಯಸನ ಮತ್ತು ಆಧಾರವಿಲ್ಲದ ಪರಿಶುದ್ಧತೆಯ ಕಲ್ಪನೆ ಅಷ್ಟೇ. ಇಂಥ ವಾದಗಳೊಂದಿಗೆ ತೊಡಗಿಕೊಳ್ಳುವ ಅಗತ್ಯವೇ ಇಲ್ಲ.
ಇದನ್ನು ಬಿಟ್ಟರೆ ಇನ್ನು ಮೂರು ರೀತಿಯ ವಾಗ್ವಾದಗಳಿವೆ:
ಮೊದಲನೆಯದು, ಮಾಂಸಾಹಾರವು ಮನುಷ್ಯನಿಗೆ ಸಹಜವೂ ಸ್ವಾಭಾವಿಕವೂ ಅಲ್ಲದ್ದು ಎನ್ನುವಂಥದ್ದು.2 ಇದು ಮಾನವನ ವಿಕಾಸದ ಕುರಿತು ತಿಳಿವಳಿಕೆ ಇಲ್ಲದೆಯೋ ಇದ್ದೂ ಅದನ್ನು ತಮ್ಮ ಅನುಕೂಲಕ್ಕೆ ತಿರುಚಿಯೋ ಮಾಡುವ ವಾದ. ಇದರ ಬಗ್ಗೆ ರಾಜೇಂದ್ರ ಪ್ರಸಾದರ ಒಂದು ಪ್ರಬಂಧವಿದೆ (“ಆಹಾರದೊಳಗೆ ಬೈನರಿ”). ಅದು ಅವರ ಪುಸ್ತಕದ ಮಹತ್ತ್ವದ ಥೀಮ್ ಕೂಡ.
[…] ಮನುಷ್ಯನ ವಿಕಾಸದಲ್ಲಿ ಆಹಾರವು ಯಾವುದೇ ಆಯ್ಕೆಗಳಿಂದ ಕೂಡಿರಲಿಲ್ಲ ಬದಲಿಗೆ ಲಭ್ಯತೆಯ ಆಧಾರ ಮೇಲೆ ನಡೆಯುತ್ತಿತ್ತು. ಹಣ್ಣು ಹಂಪಲು, ಗೆಡ್ಡೆ ಗೆಣಸು, ಬೇಟೆಯ ಹಸಿಮಾಂಸ ನಂತರ ಬೆಂಕಿಯ ಅವಿಷ್ಕಾರವಾದ ಆಮೇಲೆ ಬೇಯಿಸಿದ ಅಥವಾ ಸುಟ್ಟ ಮಾಂಸದ ರುಚಿ ಪ್ರಸಿದ್ದಿಯು ಆಯಿತು. ಆ ನಂತರ ಬೇಟೆಗೆ ನಾನಾ ತರಹದ ತಂತ್ರಗಳು ಪ್ರವೇಶ ಮಾಡಿದುವು. ಮಾನವ ವಿಕಾಸದ ಜೊತೆಗೆ ಅವನ ಆಹಾರದ ವಿಕಾಸವು ಆಗುತ್ತಲೇ ಬಂತು. ಹಸಿಯಿಂದ ಬೇಯಿಸುವ, ಸುಡುವ ನಂತರ ಅದಕ್ಕೆ ಬೇರೆ ಬೇರೆ ಪದಾರ್ಥಗಳನ್ನು ಸೇರಿಸುವ ವಿಧಾನಗಳು ಕೂಡ ಪ್ರಯೋಗಗೊಂಡು 'ರಸ' ಪ್ರಜ್ಞೆ ಉಂಟಾಯಿತು. ಈ ರಸಪ್ರಜ್ಞೆಯ ಕಾರಣದಿಂದ ಬೇರೆ ಬೇರೆ ಮಸಾಲೆ ಪದಾರ್ಥಗಳು ಪರಿಚಯಿಸಲ್ಪಟ್ಟವು. ಮುಂದೆ ರುಚಿ ಗ್ರಹಣವು ಬಹುವಾಗಿ ನಡೆದು ಅಡುಗೆಯು ಜೀವನ ಕ್ರಮದ ಒಂದು ಅವಿಭಾಜ್ಯ ಅಂಗವಾಯಿತು. ಈ ಒಂದು ಹಂತದವರೆಗೂ ಆಹಾರ ಅನ್ನುವುದು ಮನುಷ್ಯನ ಮುಕ್ತ ಆಯ್ಕೆಯ ಪದಾರ್ಥವಾಗಿತ್ತು. ಮನುಷ್ಯನ ವಿಕಾಸ ಮತ್ತಷ್ಟು ಆಗಿ ಹೊಸ ಆವಿಷ್ಕಾರಗಳೊಂದಿಗೆ ಆತ ಧರ್ಮದ ಅಥವಾ ಮತದ ಆವಿಷ್ಕಾರವು ಮೊದಲುಗೊಂಡ ಮೇಲೆ ಆಹಾರದಲ್ಲಿ ವಿಪರೀತವಾದ ವೈಪರೀತ್ಯ ಮೊದಲಾಯಿತು. [...]
ಇದಂತೂ ಸರಿಯೇ, ಆದರೆ ಇದಷ್ಟೇ ಅಲ್ಲ. ಆದಿಮ ಮಾನವನು ತಿನ್ನಲು ಪ್ರಾಣಿಗಳನ್ನು ಆಯ್ದುಕೊಂಡದ್ದು ಸಹಜವೋ ಅಲ್ಲವೋ, ಆದರೆ ಆಲೋಚಿಸಿ ನೋಡಿದರೆ ಹೆಚ್ಚು ತರ್ಕಬದ್ಧವಂತೂ ಹೌದು. ಸುತ್ತಲೂ ಇರುವ ಹತ್ತಾರು ಸಾವಿರ ಸೊಪ್ಪುಸದೆ, ಹೂವುಹಣ್ಣುಗಳು, ಅಣಬೆಗಳಲ್ಲಿ ಯಾವುದು ತಿನ್ನಲು ಯೋಗ್ಯ ಯಾವುವು ವಿಷಕಾರಿ ಎನ್ನುವ ಕಲ್ಪನೆಯಿಲ್ಲದೆ, ತಿಳಿಯುವ ಬಗೆಯೂ ಇಲ್ಲದೆ (ಅದರಲ್ಲೂ ಅವುಗಳಲ್ಲಿ ಬಹಳಷ್ಟು ಒಂದೇ ರೀತಿ ಕಾಣುತ್ತಿದ್ದಾಗ), ಅದರ ಬದಲು ತನ್ನಂಥ ಉಳಿದ ಬೇಟೆಗಾರ ಪ್ರಾಣಿಗಳು ತಿಂದು ದಕ್ಕಿಸಿಕೊಳ್ಳುತ್ತಿದ್ದುದು (ಅದಕ್ಕೆ ಅದರದೇ ಅಪಾಯಗಳಿದ್ದಾಗ್ಯೂ) ಹೆಚ್ಚು ಒಳ್ಳೆಯ ಉಪಾಯವಾಗಿತ್ತು. ಹೀಗಾಗಿ ಅಸಹಜವೆನ್ನುವ ವಾದ ತಳವಿಲ್ಲದ್ದು.
ಎರಡನೆಯದು, ಮಾಂಸಾಹಾರದ ನೈತಿಕತೆಯ ಕುರಿತಾದ ವಾದ. ಆ ವಾದದ ತಿರುಳು ಹೀಗಿದೆ: ಈ ಹಿಂದಿನ ವಾದಸರಣಿಯನ್ನು ನಾವು ಒಪ್ಪುತ್ತೇವೆಂದುಕೊಳ್ಳೋಣ — ಒಂದು ಕಾಲದಲ್ಲಿ ಅದು ತಾರ್ಕಿಕವೂ ಸ್ವಾಭಾವಿಕವೂ ಇದ್ದಿರಬಹುದು; ಆದರೆ ಈಗ ಆ ಪರಿಸ್ಥಿತಿ ಇಲ್ಲ — ಹೀಗಾಗಿ ಅಗತ್ಯವಿಲ್ಲದೆಯೂ ಪ್ರಾಣಿಗಳನ್ನು ಕೊಂದು ತಿನ್ನುವುದು ಅನೈತಿಕ. ನನಗೆ ವೈಯಕ್ತಿಕವಾಗಿ ಈ ವಿಷಯದಲ್ಲಿ ಹೆಚ್ಚು ತಿಳಿದಿಲ್ಲ ಮತ್ತು ತೀರ ಗಟ್ಟಿಯಾದ ನಿಲವೂ ಇಲ್ಲ. ಆದರೂ ನೈತಿಕತೆಯೆನ್ನುವುದು ಬಹುಪಾಲು ವೈಯಕ್ತಿಕವಾದುದು, ನಮ್ಮ ಲೆಕ್ಕವಿಲ್ಲದಷ್ಟು — ಪರಸ್ಪರ ವ್ಯತಿರಿಕ್ತವೂ ಆಗಿರಬಹುದಾದಂಥ — ಸೂಕ್ಷ್ಮ ಆಯ್ಕೆಗಳ ಮೊತ್ತವಾಗಿರುವಂಥದ್ದು, ಎಂದು ನನ್ನ ಅನ್ನಿಸಿಕೆ. ಅಲ್ಲದೇ ಇದು ತೀರ ಮಾನವಕೇಂದ್ರಿತವೂ (anthropocentric) ಸ್ವಾರ್ಥಪರವೂ ತೋರಿಕೆಯದ್ದೂ ಆಗುವ ಅಪಾಯವಿದೆ:
ಕೃಷಿಗೆ ಬೇಕಾಗುವ ಸತತ ಉಳುಮೆಯಿಂದ ಆಗುವ ಅಪಾರ ಜೀವನಾಶ, ಸಂಪನ್ಮೂಲದ ಅತಿಯಾದ ಬಳಕೆಯಿಂದ ಉಂಟಾಗುವ ಪರಿಸರದ ಅಸಮತೋಲನದ ನೈತಿಕತೆಯ ಬಗ್ಗೆ ನಾವು ಹೆಚ್ಚು ಮಾತಾಡುವುದಿಲ್ಲ. ಆಕಳ ಹಾಲನ್ನು ಬಲವಂತವಾಗಿ ಸೆಳೆದು ಅದನ್ನು ನಮ್ಮ ಆಹಾರಕ್ಕಾಗಿ ಬಳಸುವುದು ನೈತಿಕವೋ ಅಲ್ಲವೋ? (ಬೇರೊಂದು ಜೀವ ಪ್ರಭೇದದ ಹಾಲನ್ನು ಕುಡಿಯುವ, ಅಲ್ಲದೇ ಶೈಶವದ ನಂತರವೂ ಅದನ್ನು ಮುಂದುವರಿಸುವ ಏಕೈಕ ಪ್ರಾಣಿ ಮಾನವ!3) ಪ್ರಾಣಿಗಳನ್ನು ಪಳಗಿಸಿ ನಮ್ಮ ಉಪಯೋಗಕ್ಕೋ ಮುದ್ದಿಗೋ ಸಾಕುವುದು; ಅವು ಕಾಲಕಾಲಕ್ಕೆ ನಮಗೆ ಬೇಕಾದಾಗ ಬಸಿರಾಗುವಂತೆ ಯೋಜಿಸುವುದು (ಅಥವಾ ಅವು ಬಸಿರು ಮಾಡದಂತೆ/ಆಗದಂತೆ ತಡೆಗಟ್ಟುವುದು); ಅವುಗಳ ಸ್ವಾಭಾವಿಕ ಆಯಸ್ಸನ್ನೂ ಮೀರಿ ಅವು ಬದುಕುವಂತೆ ನೋಡಿಕೊಳ್ಳುವುದು. ಪ್ರಾಣಿಗಳಲ್ಲೇ ಶ್ರೇಣೀಕೃತ ಏರ್ಪಾಟನ್ನು ಕಟ್ಟುವುದು — ಇದು ಬಹುಪಾಲು ಅವುಗಳ ಉಪಯುಕ್ತತೆ, ನಮ್ಮ ಸೌಂದರ್ಯಪ್ರಜ್ಞೆ ಹಾಗೂ ನಾವು ಅವಕ್ಕೆ ಆರೋಪಿಸುವ ಮಾನವ ಗುಣಸ್ವಭಾವಗಳನ್ನು (ನಾಯಿಗಳ ನಿಯತ್ತು, ಗೋವಿನ ಕರುಣೆ, ಬೆಕ್ಕಿನ ಚಾಣಾಕ್ಷತನ, ಇತ್ಯಾದಿ) ಆಧರಿಸಿದ್ದು. ನೈತಿಕತೆಯನ್ನೋ ಸೃಷ್ಟಿಸಹಜ ನ್ಯಾಯವನ್ನೋ ಅಲ್ಲ. ನಾಯಿಬೆಕ್ಕುಗಳನ್ನು ಅಪಾಯದಿಂದ ಪಾರುಮಾಡಿ ಅವನ್ನು ಸಾಕುವ ಮಾಂಸಾಹಾರಿಗಳು, ಬೀದಿ ನಾಯಿಗಳ ನಿರ್ಮೂಲನೆ ಮಾಡಬೇಕೆನ್ನುವ ಶುದ್ಧ ಸಸ್ಯಾಹಾರಿಗಳು — ಇಬ್ಬರ ನೈತಿಕತೆಯನ್ನು ಹೇಗೆ ಅಳೆಯುವುದು? ಕಡುಬೇಸಿಗೆಯಲ್ಲಿ ನೀವು ನಿಮ್ಮ ತಾರಸಿಯ ಮೇಲೆ ಹಕ್ಕಿಗಳಿಗೆ ನೀರು, ಧಾನ್ಯಗಳನ್ನು ಇಡುತ್ತೀರಾದರೆ ಅದರಲ್ಲೇ ಹಲವು ನೈತಿಕ ಪ್ರಶ್ನೆಗಳಿವೆ.
ಒಟ್ಟಿನಲ್ಲಿ ಇವೆಲ್ಲ ಬಹಳ ತೊಡಕಿನ ಸಂಗತಿಗಳು. ಹೀಗಾಗಿ ತಿನ್ನುವ ಆಹಾರಕ್ಕೂ ನಮ್ಮ ನೈತಿಕತೆಗೂ ಗಂಟುಹಾಕದೇ ಎರಡನ್ನೂ ವೈಯಕ್ತಿಕ ವಲಯಕ್ಕೆ ಬಿಡುವುದು ಒಳ್ಳೆಯದು.
ಇನ್ನು ಮೂರನೆಯದು, ಪರಿಸರದ ಸಮತೋಲನ, ಸ್ಥಿರತೆ ಮತ್ತು ಅದರ ತಾಳಿಕೊಳ್ಳುವಿಕೆಗೆ ಸಂಬಂಧಿಸಿದ್ದು. ಇದನ್ನು ನಾವು ಗಂಭೀರವಾಗಿ ಪರಿಗಣಿಸಿ ವ್ಯವಧಾನದಿಂದಲೂ ತರ್ಕಬದ್ಧವಾಗಿಯೂ ಯೋಚಿಸಬೇಕಾಗುತ್ತದೆ. ವಾಸ್ತವದಲ್ಲಿ ನಾವೆಲ್ಲರೂ ಇನ್ನೂ — ಇಪ್ಪತ್ತೊಂದನೆಯ ಶತಮಾನದಲ್ಲೂ! — ನಮ್ಮ ಆಹಾರದ ಪದ್ಧತಿ, ಆಯ್ಕೆಯ ಹಕ್ಕಿನ ಹುದಲಿನಲ್ಲೇ ಸಿಕ್ಕಿಕೊಂಡು ಒದ್ದಾಡುತ್ತಿರದಿದ್ದಲ್ಲಿ ನಮ್ಮ ಆಯ್ಕೆಗಳಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮಗಳು, ಪರಿಸರದ ಅಳಿವುಉಳಿವಿನ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದೆವೋ ಏನೋ. ಇರಲಿ.
ನಾನು ಮೇಲೆ ಭಾರತದ ಬಹುತೇಕ ಜನರು ಮಾಂಸಾಹಾರವನ್ನು ಇಷ್ಟಪಡುವ ಬಗ್ಗೆ ಹೇಳಿದ್ದೆ. ರಾಜೇಂದ್ರ ಪ್ರಸಾದರ ಪುಸ್ತಕದಲ್ಲಿ (ಮತ್ತು ಒಟ್ಟಾರೆ ಈ ವಿಷಯದ ಕುರಿತಾದ ಚರ್ಚೆಗಳಲ್ಲಿ) ಮಾಂಸಾಹಾರವು ಬಹುಸಂಖ್ಯಾತರ ಆಹಾರವೆಂಬ ಮಾತು ಬರುತ್ತದೆ. ಅದು ವಾಸ್ತವದಲ್ಲಿ ಸರಿಯೇ ಆಗಿದ್ದರೂ ಈ ಚರ್ಚೆಯಲ್ಲಿ ಅದನ್ನು ಮುಂದಿಟ್ಟು ವಾದಸರಣಿ ಬೆಳೆಸುವುದು ಹಲಬಗೆಯಲ್ಲಿ ಸಮಸ್ಯಾತ್ಮಕವಾಗುತ್ತದೆ:
ಮೊದಲನೆಯದಾಗಿ, ಮಾಂಸವನ್ನು ತಿನ್ನುವ ಭಾರತದ ಬಹುಸಂಖ್ಯಾತರು ಪ್ರಾಥಮಿಕವಾಗಿ ಸಸ್ಯಾಹಾರಿಗಳೇ. ಇದಕ್ಕೆ ಹಲವು ಕಾರಣಗಳಿವೆ, ಈ ಚರ್ಚೆಗೆ ಅವು ಅಪ್ರಸ್ತುತ. ಅಲ್ಲದೇ, ಯುರೋಪ್, ಅಮೆರಿಕಾಗಳಂತೆ ನಮ್ಮಲ್ಲಿ ಮಾಂಸಾಹಾರದ ಕ್ರಮವು ಏಕರೂಪದ್ದಾಗಿಲ್ಲ: ಕೆಲವು ಪ್ರಾಣಿಗಳನ್ನು — ಕೆಲವು ವಾರ / ತಿಂಗಳುಗಳಲ್ಲಿ — ಮನೆಯೊಳಗೆ / ಹೊರಗೆ — ತಿನ್ನುವ / ತಿನ್ನದ — ಹಲಬಗೆಯ ಸೂಕ್ಷ್ಮ ವ್ಯತ್ಯಾಸಗಳು, ಸಂಕೀರ್ಣತೆಗಳು ಇವೆ.4
ಎರಡನೆಯದಾಗಿ, ಬಹುಸಂಖ್ಯಾತತೆಯ ಆಧಾರದ ವಾದಗಳು ಬಲುಬೇಗ ಬಹುಸಂಖ್ಯಾತವಾದದತ್ತ (majoritarianism) ಜಾರುವ ಅಪಾಯವಿದೆ. ಸಸ್ಯಾಹಾರಿಗಳ ಮಡಿವಂತಿಕೆಯಂತೆಯೇ ಮಾಂಸಾಹಾರಿಗಳದೂ ಇದೆ. ಸಸ್ಯಾಹಾರಿಗಳು ಮಾಂಸಾಹಾರಿಗಳನ್ನು ಕೀಳಾಗಿ ಕಂಡಂತೆಯೇ ಬಹುಪಾಲು ಮಾಂಸಾಹಾರಿಗಳು ಗೋಮಾಂಸ ತಿನ್ನುವವರ ವಿರುದ್ಧ ತಿರುಗಿಬೀಳಲು ಹಿಂದೆಮುಂದೆ ನೋಡಲಿಕ್ಕಿಲ್ಲ.
ಕಡೆಯದಾಗಿ, ಬಹುಸಂಖ್ಯಾತರು ಮಾಂಸಾಹಾರ ಸೇವಿಸುವುದನ್ನು ಪರಿಸರದ ಸ್ಥಿರತೆ ಮತ್ತು ಬಹುಕಾಲದ ತಾಳಿಕೆಯ (sustainability) ನೆಲೆಯಲ್ಲೂ ಗಮನಿಸಬೇಕಾಗುತ್ತದೆ. ಮೇಲಿನ ಚಾರ್ಟ್ ಗಮನಿಸಿ: ಭಾರತದಲ್ಲಿ ಮಾಂಸದ ಸೇವನೆಯ ಪ್ರಮಾಣ ಅಮೆರಿಕಾದಂಥ ದೇಶದ ಹೋಲಿಕೆಯಲ್ಲಿ ಬಹಳ ಕಡಿಮೆ; ಬಹುತೇಕ ಅದು ಆ ಪ್ರಮಾಣಕ್ಕೆ ಎಂದೂ ಹೋಗಲಾರದು. ಹಾಗಿದ್ದೂ ಕಳೆದ ನಲವತ್ತು ವರ್ಷಗಳಲ್ಲಿ ನಮ್ಮಲ್ಲಿಯೂ ಅದು ನಾಲ್ಕು ಪಟ್ಟು ಹೆಚ್ಚಾಗಿದೆ. ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಪ್ರಗತಿಯಾಗುತ್ತಿದ್ದಂತೆ, ಕೆಳವರ್ಗದ ಜನರ ಆದಾಯ ಹೆಚ್ಚುತ್ತಿದ್ದಂತೆ ಮಾಂಸಾಹಾರದ ಸೇವನೆಯ ಪ್ರಮಾಣವೂ ಹೆಚ್ಚಾಗುತ್ತದೆ. ಆಹಾರದಲ್ಲಿ ಪೋಷಕಾಂಶಗಳ, ಅದರಲ್ಲೂ ಪ್ರೋಟೀನ್ನ ತೀವ್ರ ಕೊರತೆಯಿರುವ ನಮ್ಮ ದೇಶದಲ್ಲಿ ಇದಾಗುವುದು ಒಳ್ಳೆಯದೇ. ಆದರೆ ಇದರ ಜೊತೆಗೇ ಹೆಚ್ಚಿದ ಮಾಂಸದ ಬೇಡಿಕೆ-ಪೂರೈಕೆಗಳಿಂದಾಗಿ ನಮ್ಮ ಪರಿಸರದ ಮೇಲೆ ಆಗಬಹುದಾದ ಪರಿಣಾಮಗಳ ಕುರಿತೂ ನಾವು ಯೋಚಿಸಬೇಕಾಗುತ್ತದೆ. ಕೆಳಗಿನ ಚಿತ್ರದಲ್ಲಿ ನಿರೂಪಿಸಿರುವ ಭೂಮಿಯ ಮೇಲಿನ ಸ್ತನಿಗಳ ಒಟ್ಟಾರೆ ಜೀವರಾಶಿಯಲ್ಲಿನ ತೀವ್ರ ಅಸಮತೋಲವನ್ನು ಗಮನಿಸಬಹುದು. ಈ ವಸ್ತುಸ್ಥಿತಿಯನ್ನು ನಾವು ಒಪ್ಪಿಕೊಂಡು ಸುಮ್ಮನಿದ್ದರೆ ಇಡೀ ಸೃಷ್ಟಿಯು ಮನುಷ್ಯರು ಮತ್ತು ಅವರಿಗೆ ಅನುಕೂಲಕರವಾದ ಜೀವಿಗಳಿಗೆ ಮಾತ್ರ ಸೇರಿದ್ದು ಎಂದಂತಾಗುತ್ತದೆ.
ಇವೆಲ್ಲ ಕಾರಣಗಳಿಂದ ಆಹಾರದ ಹಕ್ಕನ್ನು (ಬಹುಸಂಖ್ಯಾತರ) ಸಾಮುದಾಯಿಕ ನೆಲೆಯಲ್ಲಿ ನೋಡದೇ ವೈಯಕ್ತಿಕ ಸ್ವಾತಂತ್ರ್ಯದ ನೆಲೆಯಲ್ಲಿ ನೋಡುವುದು ಹೆಚ್ಚು ಸೂಕ್ತ. ಜೊತೆಗೇ ನಮ್ಮ ಆಯ್ಕೆಗಳಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದೂ ಸಮುದಾಯಗಳದಷ್ಟೇ ಅಲ್ಲದೇ ವೈಯಕ್ತಿಕ ಕರ್ತವ್ಯವೂ ಆಗುತ್ತದೆ. ಚರ್ಚೆಯನ್ನು ಈ ನಿಟ್ಟಿನಲ್ಲಿ ಒಯ್ದರೆ ಅದು ಸರಿಯಾದ ಹಾದಿಯಲ್ಲಿ ಮುನ್ನಡೆಯಬಹುದು.
ರಾಜೇಂದ್ರ ಪ್ರಸಾದರು ಎತ್ತುವ ಇನ್ನೊಂದು ಮಹತ್ತ್ವದ ಪ್ರಶ್ನೆ ಅಡುಗೆ ಮತ್ತು ಲಿಂಗ ತಾರತಮ್ಯದ್ದು, ಅಡುಗೆಯ ಸ್ತ್ರೀವಾದಿ ನೆಲೆಯದ್ದು ("ಸುಸ್ಥಿರ ಅಡುಗೆಯ ಸ್ತ್ರೀವಾದಿ ಸಂಕಥನ”). ಆಹಾರವೆನ್ನುವುದು ಪ್ರತಿಯೊಬ್ಬರ ಅಗತ್ಯ. ಅಡುಗೆಯ ವಿಚಾರದಲ್ಲಿ gender roles ಇರುವುದು ವಿಚಿತ್ರ. ಹಾಗಿದ್ದೂ ಸಾವಿರಾರು ವರ್ಷಗಳಿಂದ ಗಂಡಾಳಿಕೆಯು ಅಡುಗೆ ಮತ್ತು ಅಡುಗೆಮನೆಯನ್ನು weaponize ಮಾಡಿಕೊಂಡಿದೆ. ಈ ವಿಚಾರದಲ್ಲಿ ಒಟ್ಟಾರೆಯಾಗಿ ಹೆಣ್ಣಿನ ವಿರುದ್ಧ ತಾರತಮ್ಯವಿದ್ದರೂ ಜಗತ್ತಿನ ವಿವಿಧ ಭಾಗಗಳಲ್ಲಿ ಮತ್ತು ಸಮುದಾಯಗಳಲ್ಲಿ ಕೆಲವು ಕುತೂಹಲಕರ ಬೆಳವಣಿಗೆಗಳೂ ವ್ಯತ್ಯಾಸಗಳೂ ಇವೆ. ಇದರಲ್ಲಿ ಒಂದು, “ಅಕ್ಕಿಯ ಸಂಸ್ಕೃತಿ” (rice culture) ಮತ್ತು “ಗೋಧಿಯ ಸಂಸ್ಕೃತಿ”ಯ (wheat culture) ನಡುವಣ ವ್ಯತ್ಯಾಸಗಳು; ಮತ್ತು ಅವಕ್ಕೂ ಗಂಡು-ಹೆಣ್ಣಿನ ಸಮಾನತೆಗೂ ಇರುವ ಸಂಬಂಧಗಳು. ಇದನ್ನೂ ಹಲವು ಸ್ತರಗಳಲ್ಲಿ ನೋಡಬಹುದು:
ಹಲವು ಅಧ್ಯಯನಗಳ ಪ್ರಕಾರ ಭತ್ತ ಬೆಳೆಯುವ ಸಂಸ್ಕೃತಿಗಳು, ತನ್ನ ಅಗತ್ಯಗಳಿಂದಾಗಿ ಬೇಸಾಯವು ಹೆಚ್ಚು ಸಾಮುದಾಯಿಕವಾಗಿರುತ್ತದೆ; ಅಲ್ಲದೇ, ಬೇಸಾಯದ ಕೆಲಸಗಳಲ್ಲಿ ಮತ್ತು ಅದರ ಉತ್ಪನ್ನದಲ್ಲಿ ಹೆಣ್ಣಿನ ಪಾಲ್ಗೊಳ್ಳುವಿಕೆಯು ಅಂಥ ಸಮುದಾಯಗಳನ್ನು ಹೆಚ್ಚು ಬೇಗ (ಲಿಂಗ ಸಮಾನತೆಯೂ ಸೇರಿದಂತೆ) ಸಮಾನತೆಯ ಹಾದಿಗೆ ಹಚ್ಚುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಮುಖ್ಯವಾಗಿ ಗೋಧಿ ಬೆಳೆಯುವ ಸಮಾಜಗಳು ಹೆಚ್ಚು ವ್ಯಕ್ತಿಪ್ರಧಾನವಾಗಿ ಉಳಿಯುತ್ತವೆ. ನೇಗಿಲ ಉಳುಮೆಯ ಬೇಸಾಯವು ಹೆಚ್ಚಿನ ದೈಹಿಕ ಶ್ರಮವನ್ನು ಬೇಡುವುದರಿಂದಲೂ ಯಂತ್ರೀಕರಣಕ್ಕೆ ಪೂರಕವಾಗಿರುವುದರಿಂದಲೂ ಚಾರಿತ್ರಿಕವಾಗಿ ಪುರುಷಪ್ರಧಾನವಾಗಿದೆ. ಅಂಥಲ್ಲಿ ಸಾಮುದಾಯಿಕ ಪಾಲ್ಗೊಳ್ಳುವಿಕೆ ಅಷ್ಟಾಗಿ ಇರದೇ ಹೆಚ್ಚು ಶ್ರೇಣೀಕೃತ ಸಮಾಜ (ಮತ್ತು ಊಳಿಗಮಾನ್ಯ ವ್ಯವಸ್ಥೆಗಳು) ತಲೆದೋರತೊಡಗುತ್ತವೆ.5
ಅಕ್ಕಿ ಬೆಳೆಯುವ ಹಲವು ಸಮುದಾಯಗಳು ತಾಯಿಯ ವಂಶಾವಳಿ ಮತ್ತು ತಾಯಿಯಾಳಿಕೆಯತ್ತ (ತಕ್ಕಮಟ್ಟಿಗಾದರೂ) ಒಲವು ತೋರುತ್ತವೆ. ಭಾರತದ ಕೆಲವು ಭಾಗಗಳು, ಪೂರ್ವ ಮತ್ತು ದಕ್ಷಿಣ ಏಷ್ಯಾದ ದೇಶಗಳು ಇದಕ್ಕೆ ಉದಾಹರಣೆಗಳು. ಇದಕ್ಕೆ ಎದುರಾಗಿ ಪ್ರಮುಖವಾಗಿ ಗೋಧಿ ಬೆಳೆಯುವ ಮಧ್ಯಪ್ರಾಚ್ಯ, ಯುರೋಪ್ನಂಥಲ್ಲಿ (ಹಾಗೆಯೇ ಭಾರತದ ವಾಯವ್ಯ ಮತ್ತು ಉತ್ತರ ಭಾಗಗಳಲ್ಲಿ) ಸಮುದಾಯಗಳು ಚಾರಿತ್ರಿಕವಾಗಿ ತಂದೆಯಾಳಿಕೆಯತ್ತಲೂ ಹಲಬಗೆಯ ಶ್ರೇಣೀಕೃತ ಸಾಮಾಜಿಕ ಏರ್ಪಾಟುಗಳತ್ತಲೂ ಒಲವು ತೋರಿರುವುದನ್ನು ಗಮನಿಸಬಹುದು.
ಈ ಊಹೆಗಳು, ಸಿದ್ಧಾಂತಗಳಾಚೆ ಪ್ರಾಯೋಗಿಕವಾಗಿ ಇದರ ಬಗ್ಗೆ ಯೋಚಿಸಿದರೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹೆಚ್ಚು ಮುಂದುವರಿದ ಸಮಾಜಗಳಿಗೂ ಅವುಗಳಿಗೆ ಸೇರಿದ ಹೆಣ್ಣುಮಕ್ಕಳು ಅಡುಗೆ ಕೆಲಸಕ್ಕೆ ಕೊಡಬೇಕಾದ ಸಮಯಕ್ಕೂ ಪರಸ್ಪರ ವಿಲೋಮ ಸಂಬಂಧವಿದೆ (inverse correlation). ಎಂದರೆ ಹೆಚ್ಚು ಮುಂದುವರಿದ ಸಮಾಜಗಳಲ್ಲಿ ಹೆಣ್ಣುಮಕ್ಕಳು ಅಡುಗೆಮನೆಯಲ್ಲಿ ಕಡಿಮೆ ಸಮಯ ಕಳೆಯುತ್ತಾರೆ. ಇದರಲ್ಲಿ ಯಾವುದು ಮೊದಲು ಯಾವುದು ಆಮೇಲೆ, ಯಾವ ಅಂಶ ಯಾವುದನ್ನು ಹೆಚ್ಚು ಪ್ರಭಾವಿಸುತ್ತದೆ ಎಂದು ನಿಖರವಾಗಿ ಹೇಳಲಾಗದು. ಆದರೆ ನಮ್ಮ ದೇಶದ ವಿವಿಧ ಸಮುದಾಯಗಳನ್ನು, ವಿವಿಧ ಭಾಗಗಳನ್ನು ಗಮನಿಸಿದಾಗ — ಅವುಗಳಲ್ಲಿನ ಲಿಂಗಾಧಾರಿತ ಪಾತ್ರಗಳು, ಮನೆಕೆಲಸಗಳ ಹಂಚಿಕೊಳ್ಳುವಿಕೆ, ಹೆಣ್ಣುಮಕ್ಕಳ ಶಿಕ್ಷಣ ಮಟ್ಟ, ಸಂತಾನೋತ್ಪತ್ತಿಯ ದರ, ತಲಾದಾಯ, ಮೊದಲಾದ ಸಾಮಾಜಿಕ ಆರ್ಥಿಕ ಸೂಚಕಗಳನ್ನು ಪರಿಶೀಲಿಸಿದಾಗ — ವ್ಯತ್ಯಾಸಗಳು ಎದ್ದುಕಾಣುತ್ತವೆ.
ರಾಜೇಂದ್ರ ಪ್ರಸಾದರ ಪುಸ್ತಕದ ಮತ್ತೊಂದು ಥೀಮ್ ನಮ್ಮ ಪಾಕಪದ್ಧತಿಯ ಮತ್ತು ಹಲವು ಪದಾರ್ಥಗಳ ಚಾರಿತ್ರಿಕತೆ. ಇಲ್ಲಿ ಮುಖ್ಯವಾಗಿ ಮೂರನೆಯ ಮಂಗರಸನ ‘ಸೂಪಶಾಸ್ತ್ರ’ದಲ್ಲಿರುವ ಬಗೆಬಗೆಯ (ಸಸ್ಯಾಹಾರಿ) ಭಕ್ಷ್ಯಗಳ ಚರ್ಚೆಯಿದೆ. ಇದಲ್ಲದೇ ನಾವು ಇಂದಿಗೂ ಬಳಸುವ ಹಲಬಗೆಯ ಧಾನ್ಯ, ಕಾಯಿಪಲ್ಲೆ, ಸಾಂಬಾರ ಪದಾರ್ಥಗಳ ಉಲ್ಲೇಖ ಹಲವು ಪುರಾಣಗಳಲ್ಲಿ, ವಡ್ಡಾರಾಧನೆಯಲ್ಲಿ, ವಚನಗಳಲ್ಲಿ ಉಲ್ಲೇಖವಾಗಿರುವುದು ತಿಳಿದುಬರುತ್ತದೆ. ಈ ಭಾಗಗಳನ್ನು ಓದುವಾಗ ನನಗೆ ಜ್ಯೋತ್ಸ್ನಾ ಕಾಮತ್ರ ನೇರವಾಗಿಯೂ ತಿಳಿಯಾಗಿಯೂ ಬರೆದಿರುವ, ಸೊಗಸಾದ ವಿವರಣಾತ್ಮಕ ಚಿತ್ರಗಳಿರುವ Social Life in Medieval Karnataka ಎಂಬ ಪುಸ್ತಕದ ನೆನಪಾಯಿತು.
ಅದು ಶುರುವಾಗುವುದೇ ಸೂಪದ ಶಾಸ್ತ್ರದಿಂದ ಮತ್ತು ಸೋಮೇಶ್ವರನ ‘ಮಾನಸೋಲ್ಲಾಸ’ದ ಉಲ್ಲೇಖದಿಂದ. ಸಾಮಾನ್ಯ ಶಕ 1000ರಿಂದ 1400ರವರೆಗಿನ ಒಟ್ಟಾರೆ ಜನಜೀವನದ ಕಿರುನೋಟವನ್ನು ತೋರಿಸುವ ಈ ಪುಸ್ತಕದ ಮೊದಲ ಅಧ್ಯಾಯದಲ್ಲಿ ಆ ಕಾಲದ ಊಟ-ತಿಂಡಿಗಳು, ಕಾಳುಗಳು, ಹಣ್ಣು-ಕಾಯಿಗಳು, ಮಾಂಸಗಳು, ಪೇಯಗಳು, ಅಡುಗೆಯ ವಿಧಾನಗಳು, ಪಾತ್ರೆಪಗಡೆ, ಊಟ ಮಾಡುತ್ತಿದ್ದ ಬಗೆ, ಊಟದ ಶಿಷ್ಟಾಚಾರ (table manners) ಮೊದಲಾದ ವಿಷಯಗಳ ಚರ್ಚೆಯಿದೆ. ಮಂಗರಸನ ಕೃತಿಯು ಸಸ್ಯಾಹಾರಕ್ಕೆ ಸೀಮಿತನಾಗಿದ್ದರೆ, ‘ಮಾನಸೋಲ್ಲಾಸ’ದಲ್ಲಿ ಅವುಗಳ ಜೊತೆಗೇ (ಇಂದು ನಾವು ಊಟದಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದವನ್ನೂ ಒಳಗೊಂಡ!) ಹಲಬಗೆಯ ಪ್ರಾಣಿಗಳ ನಾನಾ ರೀತಿಯ ಮಾಂಸಪದಾರ್ಥಗಳ ತಯಾರಿಯ ವಿವರಗಳಿವೆ. ‘ಲೋಕೋಪಕಾರ’ದ ಶಾಖಾಹಾರಿ ಚಾವುಂಡರಾಯ ಕೂಡ ಹಿಟ್ಟು-ಬೇಳೆ-ಕಾಳುಗಳನ್ನು ಸರಿಯಾದ ಪ್ರಮಾಣದಲ್ಲಿ ಕೂಡಿಸಿದ ತನ್ನ ಕೆಲವು ಭಕ್ಷ್ಯಗಳು ‘ಮಾಂಸದಂತೆ ಬಲಂ’ ಹಾಗೂ ‘ಮತ್ಸ್ಯದ ಗುಣಂ’ ಇರುವಂಥವು ಎಂದು ಹೇಳಿಕೊಳ್ಳುತ್ತಾನೆ.
ಇಂದು ನಮ್ಮ ಸಂಸ್ಕೃತಿಯ ಉಳಿದೆಲ್ಲ ಅಂಶಗಳಂತೆ ಆಹಾರದಲ್ಲಿಯೂ ಸಾತ್ವಿಕತೆ, ಪಾರಂಪರಿಕತೆ ಮೊದಲಾದ ಅಸ್ಪಷ್ಟ, ಅಮೂರ್ತ ಮತ್ತು ಬಹಳಷ್ಟು ಸಲ ತಪ್ಪು ಕಲ್ಪನೆಗಳ ಪ್ರತಿಪಾದನೆಯಾಗುತ್ತಿದೆ. ನಮ್ಮ ನಿತ್ಯಗಳ ಅವಿಭಾಜ್ಯ ಅಂಗಗಳಾಗಿರುವ ಬಹಳಷ್ಟು ತರಕಾರಿಗಳು ಪಾರಂಪರಿಕವಲ್ಲ. ದೇಶದೆಲ್ಲೆಡೆ ಪ್ರಚಲಿತವಿದ್ದು “ಭಾರತದ ಪ್ರಾತಿನಿಧಿಕ ಪದಾರ್ಥ”ಗಳೆನ್ನಿಸಿಕೊಳ್ಳುವ ಸಮೋಸಾ, ಗುಲಾಬ್ ಜಾಮೂನ್, ಜಿಲೇಬಿ, ಪನೀರ್ ಮೊದಲಾದುವು ಇತ್ತೀಚಿನ ಆಮದು. ಸಾಮಾನ್ಯರ ಜನಜೀವನವನ್ನು ಕಾಣಿಸುವ ಜ್ಯೋತ್ಸ್ನಾ ಕಾಮತ್ರ ಪುಸ್ತಕದಂಥವನ್ನೂ ಸಾಮುದಾಯಿಕ ಸಂಕಥನಗಳನ್ನೂ ಓದಿದಾಗ ನಮ್ಮ ಸಂಕೀರ್ಣ ಚರಿತ್ರೆಯ ಕೆಲವು ಕಾಲಘಟ್ಟಗಳಲ್ಲಿಯಾದರೂ (ಕೆಲವು ಸ್ತರಗಳಲ್ಲಿಯಾದರೂ) ಸಮಾಜವು ಇಂದಿಗಿಂತಲೂ ಮುಕ್ತವಾಗಿತ್ತು ಎಂದು ತಿಳಿದುಬರುತ್ತದೆ.
ಈ ಸುದೀರ್ಘ ಪ್ರಬಂಧದಲ್ಲಿ ನಾನು ರಾಜೇಂದ್ರ ಪ್ರಸಾದರ ಪುಸ್ತಕದ ನೆಪದಲ್ಲಿ ಹೆಚ್ಚಾಗಿ ಅವರ ಪುಸ್ತಕಕ್ಕೆ ಹೊರತಾದ — ಆದರೆ ಪ್ರಾಯಶಃ ಪೂರಕವಾದ — ವಿಷಯಗಳನ್ನೇ ಚರ್ಚಿಸಿದ್ದೇನೆ. ಇದು ಅವರ ಪುಸ್ತಕದ ವಿಮರ್ಶೆಯಲ್ಲ; ಅವರ ಪುಸ್ತಕದ ಓದು ನನ್ನಲ್ಲಿ ಉದ್ದೀಪಿಸಿದ ಮತ್ತು ನಾನು ಬಹುಕಾಲದಿಂದ ಯೋಚಿಸುತ್ತಿದ್ದ ಕೆಲವು ವಿಚಾರಗಳ ಬರೆಹರೂಪವಷ್ಟೇ. ಇಷ್ಟಕ್ಕೂ ಅವರ ಕೃತಿಯ ಕುರಿತು ಚರ್ಚಿಸುವುದಕ್ಕಿಂತ ಸ್ವಾರಸ್ಯಕರವಾದ, ಮಾಹಿತಿಪೂರ್ಣವಾದ, ಸರಾಗವಾಗಿ ಓದಿಸಿಕೊಂಡು ಹೋಗುವ ಅವರ ಕಿರುಪ್ರಬಂಧಗಳನ್ನು ಓದಿ ಎಂದು ಹೇಳುವುದು ಹೆಚ್ಚು ಸೂಕ್ತ. ಅವರ ಕಿರುಪ್ರಬಂಧಗಳಲ್ಲಿ ಕೆಲವು ಸಂಪೂರ್ಣವೆನ್ನಿಸಿದರೆ ಕೆಲವು ಅಪೂರ್ಣವೆನ್ನಿಸುವುವು; ಕೆಲವದರಲ್ಲಿ ವಿಳಂಬಿತ ರಸಾಸ್ವಾದನೆ ಕಂಡರೆ ಕೆಲವದರಲ್ಲಿ ಮುಗಿಸುವ ಆತುರ ಕಾಣುತ್ತದೆ. ಇದು ಅವರ ಬರವಣಿಗೆಯ contentನ ಗುಣಕ್ಕಿಂತ ಅದನ್ನು ಒಡಗೂಡಿಸಿದ formನ (ಅಂಕಣಬರಹ) ಗುಣವನ್ನು ಹೆಚ್ಚು ಸೂಚಿಸುತ್ತದೆ. ಇದರಲ್ಲಿನ ಕೆಲವು ಪ್ರಬಂಧಗಳನ್ನು formನ ಹಂಗಿಲ್ಲದೇ ವಿಸ್ತೃತವಾಗಿ ಬರೆಯುವುದನ್ನೋ ಮುಂದೊಮ್ಮೆ ಈ ಪುಸ್ತಕವನ್ನು ಮರುಮುದ್ರಿಸಿದರೆ ಇವನ್ನು ಪರಿಷ್ಕರಿಸುವುದನ್ನೋ ಅವರು ಪರಿಗಣಿಸಬಹುದು.
ಸಂಸ್ಕೃತಿಯು ಚಲನಶೀಲವಾದದ್ದು. ಆಹಾರವೂ ಹಾಗೆಯೇ. ಸಂಸ್ಕೃತಿಯ ಎಲ್ಲ ಸ್ತರಗಳಲ್ಲಿ ಬಹುತ್ವವನ್ನು ಒಪ್ಪಿಕೊಳ್ಳುವ, ಪೊರೆಯುವ ಗುಣವನ್ನು ಸಮುದಾಯಗಳು ಬೆಳೆಸಿಕೊಂಡಾಗ ಅವು ನಿಜಕ್ಕೂ ಪ್ರಗತಿಯತ್ತ ಸಾಗುತ್ತವೆ. ಸಂಸ್ಕೃತಿಯ ಕೇಂದ್ರದಲ್ಲಿರುವ ಆಹಾರದ ಕುರಿತಾದ ಇಂಥ ಪುಸ್ತಕಗಳೂ ಅದರ ಜೊತೆಗಿನ ಚರ್ಚೆಗಳೂ ಕನ್ನಡದಲ್ಲಿ ತೀರ ಕಡಿಮೆ. ಅವು ನಮಗೆ ಬೇಕು. ಈ ಪುಸ್ತಕದ ಮೂಲಕವೂ ಇನ್ನೂ ಅನೇಕ ಬಗೆಯಲ್ಲೂ ಅದನ್ನು ಮಾಡುತ್ತಿರುವ ರಾಜೇಂದ್ರ ಪ್ರಸಾದರಿಗೆ ಅಭಿನಂದನೆಗಳು.
ತಾವಾಗಿಯೇ ತಮ್ಮ ಆಹಾರವನ್ನು ತಯಾರಿಸಿಕೊಳ್ಳಬಲ್ಲ ಜೀವಿಗಳಿಗೆ autotrophs ಎಂದು ಹೆಸರು, ಉಳಿದವೆಲ್ಲ heterotrophs.
ಇದನ್ನೇ ಮುಂದುವರಿಸಿ ಸಾತ್ವಿಕ, ರಾಜಸಿಕ, ತಾಮಸಿಕ ಹೀಗೆಲ್ಲ ವಿಂಗಡಿಸುವುದೂ ಇದೆ. ಆಹಾರಕ್ಕೆ ಸಂಬಂಧಿಸಿದಂತೆ ಇಂಥ ಪರಿಕಲ್ಪನೆಗಳು ಬಹಳ ಸಡಿಲವೂ ಆಧಾರವಿಲ್ಲದವೂ ಆದ್ದರಿಂದ ಅವುಗಳನ್ನು ಕಡೆಗಣಿಸಬಹುದು.
ಕೆಲಬಗೆಯ ಇರುವೆಗಳು ಗಿಡಹೇನುಗಳ (Aphids) ಸ್ಪರ್ಶತಂತುಗಳನ್ನು ನೇವರಿಸುತ್ತ (ಮನುಷ್ಯರು ಆಕಳ ಹಾಲು ಕರೆದಂತೆ) ಅದರಿಂದ ಸಿಹಿಅಂಟು ಒಸರುವಂತೆ ಮಾಡುವುದುಂಟು.
ಹೀಗಾಗಿ, ಭಾರತದಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿಗಳ ಪ್ರಮಾಣದ ಕುರಿತು ಪ್ರಕಟವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸರ್ವೇಗಳು ಅಪೂರ್ಣ ಮತ್ತು ಬಹುತೇಕ ನಿರುಪಯುಕ್ತ. ಅವು sensation ಸೃಷ್ಟಿಸುವುದರ ಹೊರತಾಗಿ ಹೆಚ್ಚಿನದೇನನ್ನೂ ಮಾಡುವುದಿಲ್ಲ.
ಇದು ಹೀಗೆಯೇ ಆಗಬೇಕು ಮತ್ತು ಎಲ್ಲ ಕಡೆ ಇದೇ ರೀತಿ ಆಗಿದೆ ಎಂದು ಈ ಸಿದ್ಧಾಂತಗಳು / ಅಧ್ಯಯನಗಳು ಹೇಳುತ್ತಿಲ್ಲ. ಬಹಳಷ್ಟು ಕಡೆ ಇವೆರಡೂ ಒಟ್ಟಿಗೇ ಇರುವುದನ್ನೂ ಅವುಗಳಿಗೆ ಒಂದಕ್ಕೊಂದು ಸಂಬಂಧ (correlation) ಇರಬಹುದೆನ್ನುವುದನ್ನೂ ಸೂಚಿಸುತ್ತವಷ್ಟೇ. ಅದು ಕಾರ್ಯ-ಕಾರಣ ಸಂಬಂಧ (causation) ಇರಬೇಕೆಂದೇನಿಲ್ಲ.