ಲ್ಯಾಂಗ್ಸ್ಟನ್ ಹ್ಯೂಸ್ (Langston Hughes, 1901–1967) ಅಮೆರಿಕದ ಸಾಹಿತ್ಯ ಲೋಕದಲ್ಲಿ, ಅದರಲ್ಲೂ ಕಪ್ಪುಜನಾಂಗದ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. 1920ರ ದಶಕದಲ್ಲಿ ನ್ಯೂ ಯಾರ್ಕ್ ನಗರದ 'ಹಾರ್ಲೆಮ್' ಪ್ರದೇಶದಲ್ಲಿ ನಡೆದ 'ಹಾರ್ಲೆಮ್ ರೆನೈಸಾನ್ಸ್' (Harlem Renaissance) ಎಂಬ ಸಾಂಸ್ಕೃತಿಕ ಕ್ರಾಂತಿಯ ಮುಂಚೂಣಿಯಲ್ಲಿದ್ದವರು ಅವರು. ಅದು ಕಪ್ಪುಜನಾಂಗದ ಬೌದ್ಧಿಕ ಮತ್ತು ಕಲಾತ್ಮಕ ಪುನರುಜ್ಜೀವನದ ಕಾಲ; ನೂರಾರು ವರ್ಷಗಳ ಅವಧಿಯಲ್ಲಿ ದಬ್ಬಾಳಿಕೆಗೆ ಒಳಗಾದ ಜನರು ತಮ್ಮದೇ ಗುರುತನ್ನು ರೂಪಿಸಿಕೊಳ್ಳುತ್ತಿದ್ದ ಕಾಲ.

ಆಗ ಹಾರ್ಲೆಮ್ನ ದನಿಯಾಗಿ ಹೊಮ್ಮಿದವರು ಲ್ಯಾಂಗ್ಸ್ಟನ್ ಹ್ಯೂಸ್. ಸಾಮಾನ್ಯ ಜನರ ಕವಿ ಎಂದು ತಮ್ಮನ್ನು ಗುರುತಿಸಿಕೊಂಡವರು. ತಮ್ಮ ಕವಿತೆಗಳಲ್ಲಿ ಆಗಿನ ಬಿಳಿಯ ಜನರ ಆಡಂಬರದ ಸಾಹಿತ್ಯಿಕ ಭಾಷೆಯನ್ನಲ್ಲದೇ ಕಪ್ಪು ಜನರ ಆಡುಮಾತಿನ ಸೊಗಡನ್ನು, ಜಾಜ಼್ ಸಂಗೀತದ ಲಯವನ್ನು ಬಳಸಿಕೊಂಡು (Jazz Poetry) ತಳವರ್ಗದ ಜನರ, ಶೋಷಿತರ ನೋವುನಲಿವನ್ನು, ಎಲ್ಲ ಸಂಕಟಗಳ ನಡುವೆಯೂ ಅವರು ತೋರುವ ಜೀವನೋತ್ಸಾಹವನ್ನು ಕುರಿತು ಬರೆದರು.
ಕೆಲಸದ ದೆಸೆಯಿಂದ ಮೊನ್ನೆ ನಾನು ಲಾಸ್ ವೇಗಾಸ್ಗೆ ಹೋಗಿದ್ದಾಗ, ಕಸೀನೋಗಳ ಗದ್ದಲದಿಂದ ದೂರವಿರುವ The Writer's Block ಎಂಬ ಸುಂದರವಾದ ಪುಸ್ತಕದ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದೆ. ಅಲ್ಲಿ 100 Poems That Matter ಎಂಬ ಕವನ ಸಂಕಲನ ನನ್ನ ಕಣ್ಣಿಗೆ ಬಿತ್ತು. ಪುಟ ತಿರುಗಿಸುತ್ತ ಅದರ ಕವಿತೆಗಳನ್ನು ಓದುತ್ತಿದ್ದಂತೆ ಹ್ಯೂಸ್ ಅವರ My People ಎಂಬ ಪುಟ್ಟ ಪದ್ಯ ನನ್ನನ್ನು ತಡೆಹಿಡಿಯಿತು.
My People
Dream-singers,
Story-tellers,
Dancers,
Loud laughers in the hands of Fate—
My People.
Dish-washers,
Elevator-boys,
Ladies’ maids,
Crap-shooters,
Cooks,
Waiters,
Jazzers,
Nurses of babies,
Loaders of ships,
Porters,
Hairdressers,
Comedians in vaudeville
And band-men in circuses—
Dream-singers all,
Story-tellers all.
Dancers—
God! What dancers!
Singers—
God! What singers!
Singers and dancers,
Dancers and laughers.
Laughers?
Yes, laughers….laughers…..laughers—
Loud-mouthed laughers in the hands of Fate.
My People ಎಂಬ ಹೆಸರನ್ನು ಓದಿದಕೂಡಲೇ ಮೊದಲಿಗೆ ನೆನಪಾದದ್ದೇ ಸಿದ್ದಲಿಂಗಯ್ಯನವರ 'ಸಾವಿರಾರು ನದಿಗಳು' ಪದ್ಯದ 'ನನ್ನ ಜನ' (ಮತ್ತು ಅವರ 'ನನ್ನ ಜನಗಳು'). ಮುಂದೆ ಓದುತ್ತ ಹೋದಂತೆಯೂ ಅವು ಒಂದಕ್ಕೊಂದು ಸಂವಾದಿಗಳಿದ್ದಂತೆನ್ನಿಸಿತು. ಅದನ್ನು ಕನ್ನಡಕ್ಕೆ ತರಬೇಕೆನ್ನಿಸಿತು. ಆ ಪ್ರಯತ್ನ ಮತ್ತು ಕವಿತೆಯ ಚಾರಿತ್ರಿಕ ಸಾಮಾಜಿಕ ಸಂದರ್ಭವನ್ನು ಕುರಿತು ಒಂದಿಷ್ಟು ಟಿಪ್ಪಣಿಗಳು ಕೆಳಗಿವೆ.
ನನ್ನ ಜನ ನಗುವಿನವರು
ಕನಸ ಹಾಡುವವರು
ಕತೆಯ ಹೇಳುವವರು
ಕುಣಿಯುವವರು
ವಿಧಿಯ ಹಿಡಿತದಲ್ಲೂ ಗಟ್ಟಿಯಾಗಿ ನಗುವ ನಗುವಿನವರು —
ನನ್ನ ಜನ.
ಪಾತ್ರೆ ಬೆಳಗುವವರು
ಲಿಫ್ಟ್ ಹುಡುಗರು
ಒಡತಿಯರ ಸೇವೆಯ ಹೆಂಗಸರು
ಬೀದಿಬದಿಯ ಜೂಜುಕೋರರು
ಅಡುಗೆಯವರು
ಕಾದು ಬಡಿಸುವವರು
ಜಾಜ಼್ ರಸಿಕರು
ಕೂಸುಗಳ ದಾಯಂದಿರು
ಹಡಗ ಹೇರಾಳುಗಳು
ಹೊರೆಯಾಳುಗಳು
ಕೂದಲಣಿಗೊಳಿಸುವ ಹೆಣ್ಣುಗಳು
ವಿನೋದಾವಳಿಯ ವಿದೂಷಕರು
ಮತ್ತು ಸರ್ಕಸ್ಸುಗಳ ವಾದ್ಯದವರು —
ಕನಸ ಹಾಡುಗರು ಎಲ್ಲರೂ
ಕತೆಯ ಹೇಳುಗರೇ ಎಲ್ಲರೂ.
ಕುಣಿತಗಾರರು —
ಅಬ್ಬಾ! ಅದೆಂಥ ಕುಣಿತಗಾರರು!
ಹಾಡುಗಾರರು —
ಆಹಾ! ಅದೆಂಥ ಹಾಡುಗಾರರು!
ಹಾಡುಗಾರರು ಕುಣಿತಗಾರರು
ಕುಣಿತಗಾರರು ಮತ್ತು ನಗುವಿನವರು.
ನಗುವಿನವರೇ?
ಹೌದು, ನಗುವಿನವರು …. ನಗುವಿನವರು … ನಗುವಿನವರು —
ವಿಧಿಯ ಹಿಡಿತದಲ್ಲಿ ಬಾಯ್ಬಿಟ್ಟು ನಗುವ ನಗುವಿನವರು.ಮೇಲ್ನೋಟಕ್ಕೆ ಇದೊಂದು ಸರಳವಾದ ಪುಟ್ಟ ಪಟ್ಟಿಯಂತೆ ಕಂಡರೂ ಹ್ಯೂಸ್ ಈ ಕವಿತೆಯಲ್ಲಿ ಕಟ್ಟಿಕೊಡುವ ಚಿತ್ರಣ ಆ ಕಾಲದ ಅಮೆರಿಕದ ಸಾಮಾಜಿಕ ಇತಿಹಾಸದ ಕನ್ನಡಿ ಹಿಡಿದಂತಿದೆ. (ಹಾಗೆ ನೋಡಿದರೆ ಈ ಕಾಲದ್ದೂ ಕೂಡ, ಮತ್ತದು ಅಮೆರಿಕಕ್ಕೆ ಸೀಮಿತವಾದುದೇನಲ್ಲ.) ನಮ್ಮ ಸುತ್ತಲೂ ಎಲ್ಲೆಡೆ ಇದ್ದೂ ಕಾಣದಿರುವವರನ್ನು ಕಾಣುವಂತೆ ಮಾಡುವುದು ಈ ಕವಿತೆಯ ಅತ್ಯಂತ ಮುಖ್ಯವಾದ ಎಳೆ.
ಹ್ಯೂಸ್ ಹೇಳುವ 'ನನ್ನ ಜನ' (ನಮ್ಮ ಸಿದ್ದಲಿಂಗಯ್ಯನವರ 'ನನ್ನ ಜನಗಳು' ಪದ್ಯದಂತೆಯೇ) ಎಲ್ಲೆಡೆ ಇದ್ದಾರೆ. ಹೋಟೆಲ್ಲುಗಳಲ್ಲಿ, ಲಿಫ್ಟುಗಳಲ್ಲಿ, ಹಡಗುಗಳಲ್ಲಿ, ಅಡುಗೆಮನೆಗಳಲ್ಲಿ, ನಗೆನಾಟಕಗಳಲ್ಲಿ, ಸರ್ಕಸ್ಸುಗಳಲ್ಲಿ — ಸಮಾಜದ ಗಾಲಿಗಳು ಸರಾಗವಾಗಿ ಉರುಳುವಂತೆ ನೋಡಿಕೊಳ್ಳುವವರು ಅವರೇ. ಹಾಗಿದ್ದೂ ಅವರು ಅದೃಶ್ಯರು. ಅಲ್ಲದೆಯೇ, ಸಮಾಜದ ಸಭ್ಯರ ಘನತೆಯನ್ನು ಎತ್ತಿ ಹಿಡಿಯುವವರೇ ಅವರು (ಒಡತಿಯರ ಸೇವೆಯ ಹೆಂಗಸರು, ಕೂದಲಣಿಗೊಳಿಸುವವರು, ಪಾತ್ರೆ ಬೆಳಗುವವರು, ಅಡುಗೆಯವರು, ಕಾದು ಬಡಿಸುವವರು). ವಿಪರ್ಯಾಸವೆಂದರೆ, ಅವರು ಯಾರ ಘನತೆಯನ್ನು ಕಾಪಿಡುತ್ತಾರೋ ಅದೇ ಸಭ್ಯ ಸಮಾಜವು ಅವರ ಘನತೆಯನ್ನು ಕುಂದಿಸುತ್ತಲೇ ಬಂದಿದೆ. ಅವರ ಎಷ್ಟೇ ತಿಳಿವಳಿಕೆಯವರಿರಲಿ, ಸಮರ್ಥರಾಗಿರಲಿ — ಅದೂ ಹೋಗಲಿ, ಅವರ ವಯಸ್ಸಿನ ಹಿರಿತನಕ್ಕೆ ಕೂಡ ತುಸು ಗೌರವ ದಕ್ಕುದಿದ್ದ ಕಾಲವದು: ಅವರು ‘ಎಲಿವೇಟರ್ ಹುಡುಗರು' (‘boys’) ಅಥವಾ 'ಮನೆಗೆಲಸದ ಹುಡುಗಿಯರು’ (‘girls’) ಅಷ್ಟೇ, ಮತ್ತೇನಲ್ಲ. ಹಾಗೆಂದು ಕರೆದು, ಅವರನ್ನು ಕೇವಲ ಆಯಾ ಕೆಲಸಗಳಿಗೆ ಸೀಮಿತಗೊಳಿಸುವ ವ್ಯವಸ್ಥೆ ಅದು. ಮನುಷ್ಯರನ್ನು ಕೇವಲ ಅವರಿಗೆ ನಿಯಮಿಸಲಾದ ಕೆಲಸಗಳಿಗೆ ಭಟ್ಟಿಯಿಳಿಸುವ, ಅವರ ವ್ಯಕ್ತಿತ್ವವನ್ನು ಸಂಕುಚಿತಗೊಳಿಸುವ reductionistic ದಬ್ಬಾಳಿಕೆಯ ವ್ಯವಸ್ಥೆಯದು.
ಮುಂದೆ 1952ರಲ್ಲಿ ರ್ಯಾಲ್ಫ್ ಎಲಿಸನ್ (Ralph Ellison) ಬರೆದ Invisible Man ಕಾದಂಬರಿಯ ವಸ್ತು ಕೂಡ ಇದೇ. ತನ್ನನ್ನು ಒಬ್ಬ ಸಂಕೀರ್ಣ ವ್ಯಕ್ತಿತ್ವದ ಮನುಷ್ಯನನ್ನಾಗಿ ನೋಡದೆ, ಕೇವಲ ಒಂದು ಪಡಿಯಚ್ಚಿನಂತೆ ನೋಡುವ ಸಮಾಜದ ವಿರುದ್ಧದ ಹೋರಾಟ ಆ ಕಾದಂಬರಿಯ ನಾಯಕನದ್ದು. ಅಂತಿಮವಾಗಿ, ತನ್ನ ವ್ಯಕ್ತಿತ್ವವನ್ನು ಗುರುತಿಸಲು ನಿರಾಕರಿಸುವ ಈ ಸಮಾಜಕ್ಕೆ ತಾನು 'ಅದೃಶ್ಯ'ನಾಗಿಯೇ ಉಳಿದಿದ್ದೇನೆಂಬ ಅರಿವು ಅವನಿಗಾಗುತ್ತದೆ. ಇಲ್ಲಿ ಹ್ಯೂಸ್ ಈ ಕವಿತೆಯ ಮೂಲಕ, "ನಿಮ್ಮ ಸುತ್ತಲೂ ಕಣ್ಬಿಟ್ಟು ನೋಡಿ, ಜಗತ್ತನ್ನು ನಡೆಸುತ್ತಿರುವವರು ಇವರೇ" ಎಂದು ತಮ್ಮ ಜನರನ್ನು ಎತ್ತಿ ತೋರಿಸುತ್ತಿದ್ದಾರೆ.
ಪಾತ್ರೆ ತೊಳೆಯುವವರಿಂದ ಹಿಡಿದು, ಕೂಸುಗಳನ್ನು ನೋಡಿಕೊಳ್ಳುವ ದಾಯಂದಿರವರೆಗೆ ಹ್ಯೂಸ್ ಎಲ್ಲರನ್ನೂ ಹೆಸರಿಸುತ್ತಾರೆ. ಸಮಾಜದ ದೃಷ್ಟಿಯಲ್ಲಿ 'ಕೀಳು' ಎನ್ನಿಸಬಹುದಾದ ಕೆಲಸಗಳನ್ನು ಪಟ್ಟಿ ಮಾಡಿ ಅವನ್ನು ಮಾಡುತ್ತಿರುವವರೆಲ್ಲ 'ನನ್ನ ಜನ' ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅವರು 'ಹಡಗ ಹೇರಾಳುಗಳು; ಹೊರೆಯಾಳುಗಳು' ("ಸೈಜುಗಲ್ಲು ಹೊತ್ತೋರು") — ನಾಗರಿಕತೆಯ ಎಲ್ಲ ಭಾರವನ್ನು ಹೊತ್ತವರು ಅವರೇ. ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಹ್ಯೂಸ್ ಇಲ್ಲಿ ಕೇವಲ ರೂಢಿಯರ್ಥದಲ್ಲಿ 'ಒಳ್ಳೆಯವರನ್ನು' ಮಾತ್ರ ಪಟ್ಟಿ ಮಾಡಿಲ್ಲ. ಬೀದಿಬದಿಯಲ್ಲಿ ದಾಳದ ಆಟ ಆಡುವ ಜೂಜುಕೋರರನ್ನೂ (crap-shooters) ಕೂಡ “ಇವರೂ ನನ್ನವರೇ” ಎಂದು ಅಪ್ಪಿಕೊಳ್ಳುತ್ತಾರೆ.
ಇವರು ದುಡಿಯುವ ಜನರಷ್ಟೇ ಅಲ್ಲ. ಅವರು ಕತೆಯ ಹೇಳುಗರು ಕೂಡ. ತಮ್ಮ ಸಾಮುದಾಯಿಕ ಸಂಕಥನವನ್ನು ಎದೆಯಿಂದ ಎದೆಗೆ ದಾಟಿಸುವ ಬಾಯ್ದೆರೆಯ ಇತಿಹಾಸಕಾರರು. ಎಷ್ಟೇ ಸಂಕಷ್ಟಗಳಿದ್ದರೂ ನಾಳೆಯ ಭರವಸೆಯನ್ನು ತಮ್ಮ ಹಾಡಿನ ಮೂಲಕ ಜೀವಂತವಾಗಿರಿಸಿದವರು. ಹ್ಯೂಸ್ ಇಲ್ಲಿ ಬಳಸಿದ ‘Dream-singers’ ಪದ ವಿಶಿಷ್ಟವಾದುದು: ಅವರು ಬರಿಯ ಕನಸಿಗರಲ್ಲ, ಕನಸ ಹಾಡುಗರು. ಕನಸು ಕಾಣುವವರಷ್ಟೇ ಅಲ್ಲ ಅವರು; ಕನಸನ್ನು ಹಾಡು ಮಾಡಿ ತಾವು ಕಂಡ ಕಾಣ್ಕೆಯನ್ನು ಹರಡುವವರು. ಅದು ತಮ್ಮದಷ್ಟೇ ಕನಸಲ್ಲದೇ ಎಲ್ಲರನ್ನೂ ಒಳಗೊಳ್ಳುವಂತೆ ಹಬ್ಬುವಂಥದ್ದು.
ಕಪ್ಪು ಜನರ ಆಡುಮಾತಿನ ಸೊಗಡಿನ ಜಾಜ಼್ ಮತ್ತು ಬ್ಲೂಸ್ ಹಾಡುಗಾರರು ಅವರು. ಎಂಥ ಸೊಗಸಿನ ಹಾಡುಗಳವು! ಮತ್ತಲ್ಲದೇ, ಕುಣಿತಗಾರರು. ಅಬ್ಬಾ! ಅದೆಂಥ ಬಿರುಸಿನ ಕುಣಿತ ಅವರದು ("ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ" ಎನ್ನುವಂತೆ). ಹ್ಯೂಸ್ ಇಲ್ಲಿ ಜಾಜ಼್ ರಸಿಕರನ್ನು ಮತ್ತು ಕುಣಿಯುವವರನ್ನು ಪ್ರಸ್ತಾಪಿಸುವುದು ಅವರಲ್ಲಿರುವ ಅದ್ಭುತವಾದ ಜೀವಸತ್ತ್ವವನ್ನು ತೋರಿಸಲು.
ಕೊನೆಯಲ್ಲಿ, ಮತ್ತು ಅತ್ಯಂತ ಮುಖ್ಯವಾಗಿ ನನ್ನ ಜನ ನಗುವಿನವರು. ಕವಿತೆಯ ಜೀವಾಳವಿರುವುದು ಆ ನಗುವಿನಲ್ಲಿ. ಹ್ಯೂಸ್ ಅವರು ಪದಗಳ ಆಯ್ಕೆಯಲ್ಲಿ ಇಲ್ಲಿಯೂ ಒಂದು ವಿಲಕ್ಷಣತೆ ಕಾಣುತ್ತದೆ. ಇಲ್ಲಿ ಬಳಸುವ "Laughers" ಎಂಬ ಪದ ವ್ಯಾಕರಣಬದ್ಧವಾಗಿದ್ದರೂ ಇಂಗ್ಲಿಷಿನಲ್ಲಿ ಸಾಮಾನ್ಯ ಬಳಕೆಯಲ್ಲಿಲ್ಲ. ಅದರ ಸಾಮಾನ್ಯಾರ್ಥ 'ನಗುತ್ತಿರುವವರು' ಎಂದಷ್ಟೆ. ನಗುನಗುತ್ತಲಿರುವವರನ್ನು ಅಥವಾ ಜೋರಾಗಿ ನಗುವವರನ್ನು ಇಂಗ್ಲಿಷಿನಲ್ಲಿ, "They laugh a lot” ಅಥವಾ “They have a loud laugh," ಎಂದೆಲ್ಲಾ ಬಣ್ಣಿಸುತ್ತಾರೆಯೇ ಹೊರತು "laughers” ಎಂದಲ್ಲ. Singers, dancers, porters, waiters, porters ಎಂದಂತೆ ಜನರ ಗುಂಪೊಂದಕ್ಕೆ “laughers” ಎಂದು ಕರೆಯುವುದು ತೀರ ಅಪೂರ್ವ. (ಈ ಕವಿತೆಯ ಕೆಲವು ಆವೃತ್ತಿಗಳಲ್ಲಿ ಇದರ ಹೆಸರು Laughers ಎಂದೇ ಇದೆ.) ಇಲ್ಲಿ ಹ್ಯೂಸ್ ಮಾಡುತ್ತಿರುವುದು ಅದನ್ನೇ!
ಹಾಗೆ ಮಾಡುವ ಮೂಲಕ 'ನಗು' ಎನ್ನುವ ಸಹಜ ಕ್ರಿಯೆಯನ್ನು ಒಂದು ಅಸ್ಮಿತೆಯನ್ನಾಗಿ ಬದಲಿಸುತ್ತಾರೆ. ಅದು ಅವರ ಕರ್ತೃತ್ವಶಕ್ತಿಯ ದ್ಯೋತಕವಾಗುತ್ತದೆ. ಅವರು ಕೇವಲ ನಗುವವರಲ್ಲ; ನಗುವಿನವರೇ ಅವರು! ಮತ್ತಿನ್ನು ಇಲ್ಲಿ 'ವಿಧಿ' (fate) ಎನ್ನುವುದು ಕೇವಲ ದುರಾದೃಷ್ಟವಲ್ಲ, ಹಣೆಬರಹವಲ್ಲ; ಅದು ಅಮೆರಿಕದ ಕಪ್ಪುಜನಾಂಗದವರನ್ನು ನಿಯಂತ್ರಿಸುತ್ತಿದ್ದ ವರ್ಣಬೇಧದ ಕ್ರೂರ ದಬ್ಬಾಳಿಕೆಯ ವ್ಯವಸ್ಥೆ. ಕಿತ್ತು ತಿನ್ನುತ್ತಿದ್ದ ಬಡತನದ ವಾಸ್ತವ. ಆ ದಬ್ಬಾಳಿಕೆಯ ಉಸಿರುಗಟ್ಟಿಸುವ ಹಿಡಿತದಲ್ಲಿದ್ದರೂ, ಅವರು ಜೋರಾಗಿ ನಗಬಲ್ಲರು. ಅವರು ನಗೆಗಾರರಲ್ಲ; ನಗುವಿನವರು. ಅವರ ನಗು ಲಘು ಹಾಸ್ಯದ್ದಲ್ಲ; ಪ್ರತಿರೋಧದ ಕಸುವಿರುವಂಥದ್ದು. ಅವರ ಹಾಡಿನಂತೆ, ಕುಣಿತದಂತೆ. ಅದು ಎಂಥದ್ದೆಂದರೆ, ಎಂದಾದರೊಂದು ದಿನ ವಿಧಿಯ ಬಿಗಿಹಿಡಿತವನ್ನು ಸಡಿಲಗೊಳಿಸಬಲ್ಲಂಥದ್ದು.
ಇದನ್ನೂ ಓದಿ …
“ನಿಜವಾದ ಅರಬ್ನಿಗೆ ಕೈಯಿಂದಲೇ ನೊಣ ಹಿಡಿಯುವುದು ಗೊತ್ತು”
ನೆಯೋಮಿ ಶಿಹಾಬ್ ನಾಯ್ (Naomi Shihab Nye, 12.3.1952) ಒಬ್ಬ ಅರಬ್-ಅಮೇರಿಕನ್ ಕವಿ. ಅವರ ತಂದೆ ಪ್ಯಾಲೆಸ್ಟೀನ್ನ ಒಬ್ಬ ನಿರಾಶ್ರಿತರು, ತಾಯಿ ಅಮೆರಿಕನ್. ಎರಡೂ ಸಂಸ್ಕೃತಿಗಳ ಪ್ರಭಾವ, ಆಂತರಿಕ ದ್ವಂದ್ವ, ಹಲವಿಚಾರಗಳ ತಿಕ್ಕಾಟ ಎಳೆದಾಟಗಳು ಅವರ ಕವಿತೆಗಳಲ್ಲಿ ಮತ್ತೆಮತ್ತೆ ಕಾಣುತ್ತವೆ. ಸಂಕೇತ ಪಾಟೀಲ ಅವರ ಕೆಲವು ಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ.







