“ನಿಜವಾದ ಅರಬ್ನಿಗೆ ಕೈಯಿಂದಲೇ ನೊಣ ಹಿಡಿಯುವುದು ಗೊತ್ತು”
ನೆಯೋಮಿ ಶಿಹಾಬ್ ನಾಯ್ ಅವರ ಮೂರು ಮತ್ತೊಂದು ಪದ್ಯಗಳು
ನೆಯೋಮಿ ಶಿಹಾಬ್ ನಾಯ್ (Naomi Shihab Nye, 12.3.1952) ಒಬ್ಬ ಅರಬ್-ಅಮೇರಿಕನ್ ಕವಿ. ಅವರ ತಂದೆ ಪ್ಯಾಲೆಸ್ಟೀನ್ನ ಒಬ್ಬ ನಿರಾಶ್ರಿತರು, ತಾಯಿ ಅಮೆರಿಕನ್. ಎರಡೂ ಸಂಸ್ಕೃತಿಗಳ ಪ್ರಭಾವ, ಆಂತರಿಕ ದ್ವಂದ್ವ, ಹಲವಿಚಾರಗಳ ತಿಕ್ಕಾಟ ಎಳೆದಾಟಗಳು ಅವರ ಕವಿತೆಗಳಲ್ಲಿ ಮತ್ತೆಮತ್ತೆ ಕಾಣುತ್ತವೆ. ಸಂಕೇತ ಪಾಟೀಲ ಅವರ ಕೆಲವು ಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ.
ಪ್ಯಾಲೆಸ್ಟೀನಿಯರ ಪಾಲಿಗೆ ಕಲ್ಲಂಗಡಿ ಹಣ್ಣು ಒಂದು ಪ್ರತಿರೋಧದ ಸಂಕೇತ. ಇಸ್ರೇಲಿ ಅತಿಕ್ರಮಣವನ್ನು ವಿರೋಧಿಸುವ ಕಲಾಕೃತಿಗಳು ಮತ್ತಿತರ ಅಭಿವ್ಯಕ್ತಿಗಳಲ್ಲಿ ಅದೊಂದು ಸಾಮಾನ್ಯ ಮೋಟಿಫ್. ಸಾಮಾಜಿಕ ಜಾಲತಾಣಗಳಲ್ಲಿ ಕಲ್ಲಂಗಡಿ ಹೋಳಿನ 🍉 ಈ ಇಮೋಜಿಯನ್ನು ಕೂಡ ಸಾಮಾನ್ಯವಾಗಿ ಕಾಣಬಹುದು. ಕೆಳಗಿನ ಪದ್ಯದಲ್ಲಿ ಅದೊಂದು ಪರಿಣಾಮಕಾರಿ ಪ್ರತಿಮೆಯಾಗಿ ಮೂಡಿಬಂದಿದೆ.
ನೆತ್ತರು
“ನಿಜವಾದ ಅರಬ್ನಿಗೆ ಕೈಯಿಂದಲೇ ನೊಣ ಹಿಡಿಯುವುದು ಗೊತ್ತು”
ನನ್ನಪ್ಪ ಹೇಳುವನು. ಒಡನೆಯೇ ಆ ಗುಂಯ್ಗುಡುಕನನು
ಬೊಗಸೆಯಲಿ ಹಿಡಿದಿಟ್ಟು ಸಿದ್ಧ ಮಾಡಿಯೂ ತೋರುವನು
ನೊಣಸಟ್ಟುಗ ಹಿಡಿದ ನಮ್ಮ ಆತಿಥೇಯರು ಎವೆಯಿಕ್ಕದೆ ನೋಡುವಂತೆ.
ನಮ್ಮ ಅಂಗೈಗಳು ಸುಲಿಯುವುವು ಹಾವಿನ ಪೊರೆಯಂತೆ ವಸಂತದಲಿ.
ನಿಜವಾದ ಅರಬ್ರು ನಂಬುವರು ಪೊರೆಯುವ ಐವತ್ತು ಬಗೆಯಿವೆ ಕಲ್ಲಂಗಡಿಯಲಿ.
ಸಮಯಕ್ಕೆ ತಕ್ಕಂತೆ ನಾನಿವನ್ನು ಇಂಥವನ್ನು ಬದಲಿಸಿಯೂ ಹೇಳುತಿದ್ದೆ.
ವರ್ಷಗಳ ಹಿಂದೆ ಹುಡುಗಿಯೊಬ್ಬಳು ಬಾಗಿಲು ತಟ್ಟಿದಳು
ಅವಳಿಗೆ ಅರಬ್ನನ್ನು ಕಾಣುವುದಿತ್ತು.
ನಮ್ಮಲ್ಲಿ ಅಂಥವರಾರಿಲ್ಲ ಎಂದಿದ್ದೆ.
ತಾನು ಯಾರೆಂದು ನನ್ನಪ್ಪ ನನಗೆ ಹೇಳಿದ್ದು ಅದಾದ ಮೇಲೆಯೇ,
'ಶಿಹಾಬ್' — ಎಂದರೆ ಬೀಳ್ಚುಕ್ಕಿ —
ಒಂದೊಳ್ಳೆಯ ಹೆಸರು ಬಾನಿಂದ ಕಡ ತಂದದ್ದು.
"ತೀರಿದಾಗ ಅದನ್ನು ಮರಳಿಸುವೆವೇ?" ಕೇಳಿದ್ದೆ ಒಮ್ಮೆ.
ನಿಜವಾದ ಅರಬ್ ನುಡಿಯಬಹುದಾದ ಮಾತು ಇದು ಎಂದಿದ್ದ.
ಹೆಪ್ಪುಗಟ್ಟುತ್ತಿವೆ ತಲೆಬರೆಹಗಳು ಇಂದು ನನ್ನ ನೆತ್ತರಿನಲ್ಲಿ
ಆಟಿಕೆಯ ಟ್ರಕ್ ಓಲಾಡಿಸುವ ಪುಟ್ಟ ಪ್ಯಾಲೆಸ್ಟೀನೀಯ ಮುಖಪುಟದಲ್ಲಿ
ನೆಲೆಯಿಲ್ಲದ ಅಂಜೂರವಿದು, ಈ ದುರಂತದ ಕೇಡಿನ ಬೇರು
ತೀರ ದೊಡ್ಡದು ನಮಗೆ. ಯಾವ ಬಾವುಟ ತೂಗಬಲ್ಲೆವು ನಾವು?
ಕಲ್ಲುಮಣ್ಣುಗಳ ಬೀಜಬಿತ್ತುಗಳ ಬಾವುಟವ ತೂಗಿದೆ ನಾನು
ನೀಲಿಹೊಲಿಗೆಯ ಮೇಜಹಾಸು.
ಅಪ್ಪನಿಗೆ ಕರೆ ಮಾಡಿದೆ, ಸುದ್ದಿಯ ಸುತ್ತ ಮಾತು
ಅವನಳವಿಗೆ ಮೀರಿದ್ದು ಅದು
ಅವನೆರಡು ನುಡಿಗಳೂ ತಲುಪಿಸಲಾರದ್ದು.
ಹಳ್ಳಿಹಾದಿಯ ಹಿಡಿದೆ ಅರಸುತ್ತ ಕುರಿಹಸುಗಳ
ಮೊರೆಯಿಡುತ್ತ ಗಾಳಿಗೆ:
ನಾಗರಿಕರೆನ್ನುವುದು ಯಾರು ಯಾರನ್ನು?
ಅಳುವೆದೆಯು ಊಡುವುದೆಲ್ಲಿ ಯಾವುದನ್ನು?
ನಿಜವಾದ ಅರಬ್ ಈಗ ಮಾಡುವುದಾದರೂ ಏನನ್ನು?

ಒಬ್ಬ ಪ್ಯಾಲೆಸ್ಟೀನೀಯ ಹೀಗೆನ್ನಬಹುದೇ
ಏನೆಂದಿರಿ?
ಒಂದು ಇರುಳೊಪ್ಪೊತ್ತಿನಲಿ ನಿಮ್ಮ ದೇಶದಲೇ ನಿಮಗೆ
ನೆಮ್ಮದಿಗೇಡಾಯಿತೇ ಮನೆಯಿಲ್ಲದಂತಾಯಿತೇ?
ನಿಮ್ಮ ಪ್ರೀತಿಗೆ ಪಾತ್ರವಾಗಿದ್ದ
ಒಂದಷ್ಟು ... ಸದರಕ್ಕೂ ಈಡಾಗಿದ್ದ
ಸರಳ ಸಂಗತಿಗಳೆಲ್ಲ ಇಲ್ಲವಾದುವೇ …
ಅಪಮಾನವಾಯಿತೇ ಅಗೋಚರವಾದಂತೆನ್ನಿಸಿತೇ?
ನಿಮ್ಮ ಇರುವಿಕೆಯೇ ಸುಳ್ಳೇನೊ ಎನ್ನಿಸುವಂತೆ?
ಆದರೆ ನೀವು ಇದ್ದೀರಿ. ಅಲ್ಲಿಯೇ.
ಬೆರೆಯುತ್ತಿದ್ದಿರಿ ಮೊದಲಿಗೆ ಬಿಗುಮಾನವಿಲ್ಲದೆ
ನಿಮ್ಮಂತಲ್ಲದವರೊಂದಿಗೂ…
ಅರ್ಥಮಾಡಿಕೊಳ್ಳುತ್ತಿದ್ದಿರಿ ಬೇರೆಯವರನ್ನೂ
ಒಡಕು ಹಿರಿದಾಗುತ್ತ ಹೋಯಿತಲ್ಲ ಅಂಥಲ್ಲಿ.
"ಆರಿಸಿದವರು" ಮತ್ತು "ಆರಿಸದವರು" ಎಂದಾಗ ಇದೇ ಆಗುವುದಲ್ಲ.
(ನಿಮ್ಮ ಮನೆಗಳು ಮತ್ತು ಕೈದೋಟಗಳ ಮೇಲೊಂದು ಕಣ್ಣಿಟ್ಟಿರಿ
ಕಣ್ಣಿಟ್ಟಿರಿ ಆ ಮರದ ಮೇಲೆ ಅದು ಹೂಬಿಡುವ ಕಾಲದಲ್ಲಿ.)
ಹಾಂ, ಆ ಗೋಡೆ. ನಮ್ಮದು ಬಂದದ್ದು ಆಮೇಲೆ ನಿಜ ಹೌದು … ಆದರೆ …
ಆ ದೊಡ್ಡ ಗೋಡೆಯನು ಹೊತ್ತು ನಿಂತಿರುವ
ಆ ನೆಲದ ಕೊರಗನು ಹೇಳುವವರು ಯಾರು?
ಅದೋ ಅಲ್ಲಿ ಬಿದ್ದಿದೆಯಲ್ಲ, ಅದು ಸಹಜ ನೆರಳಲ್ಲ
ನಿಮ್ಮ ಬಾಳುವೆಯನು ಆವರಿಸುತಿರುವ ಬೇರಾವುದೋ ಮಬ್ಬುಗತ್ತಲೆಯದು.
ದನಿಯೆತ್ತಿ ಇಸ್ರೇಲಿಗರನ್ನು ಪ್ರಶ್ನಿಸುವ ನಾಯ್ ಅವರು ಪ್ಯಾಲೆಸ್ಟೀನ್ನ ತಪ್ಪುಗಳನ್ನು ಇಸ್ಲಾಂನ ಒಳಗಿರುವ ಸಮಸ್ಯೆಗಳನ್ನು ಅಷ್ಟೇ ಗಟ್ಟಿಯಾಗಿ ಪ್ರಶ್ನಿಸದೇ ಬಿಟ್ಟಿಲ್ಲ.
ಮೂಲಭೂತವಾದ
ಕಣ್ಣಿನ ಚಾಚು ಕಿರಿದಾಗಿರುವುದರಿಂದಲೋ
ಸಂದಣಿಯ ತಲೆಗಳ ಆಚೆಗಿನದನು ಕಾಣಲಾಗುತ್ತಿಲ್ಲವೆಂದೋ?
ಬೇರೆಲ್ಲರೂ ನಿನಗಿಂತ ಜಾಣರಾಗಿ ತೋರಿದರೂ
ನಿನ್ನಲ್ಲಿ ನಿನ್ನದೇ ಒಳಗುಟ್ಟು ಇರಲೇಬೇಕೆಂದೋ
ತಿಳಿಯಲಾಗದ ಆ ಗುಟ್ಟು ಎಂದೂ ನಿನ್ನ ನಿಜ ಗೆಳೆಯನಾಗಿರಲಿಲ್ಲವೆಂದೋ
ಸ್ವರ್ಗದ ಎಲ್ಲೆಯಿಲ್ಲದ ಎದೆಯನು ತಣಿಸಲು
ಒಂದೇ ಬಗೆ ಸಾಕಾಗುತ್ತದಲೆಂದೋ
ನಿಂಬೆಯ ಬುಟ್ಟಿಗಳ ಹೊತ್ತಿರುವ ಹಳ್ಳಿಗರಿಗೂ ಮಿಗಿಲಾಗಿ
ಹೊನ್ನಿನ ಗದ್ದುಗೆಯ ಮೇಲಿರುವ ಒಡೆಯನೇ ನಿನಗೆ ಹಿತವಾಗಿರುವನೆಂದೋ
ಅವನ ಕಾವಲಿಗರು ಆ ಕೂಟಕ್ಕೆ ನಿನ್ನನ್ನು ಸೇರಿಸಿಕೊಳ್ಳುವರು
ಎಂಬ ನೆಚ್ಚಿಕೆಯು ಬೇಕಾಗಿರುವುದೆಂದೋ?
ಕೈಯಲ್ಲಿ ಮುರಿದ ಪೆನ್ಸಿಲ್ ಹಿಡಿದ ಹುಡುಗ ಅದನು
ತಿರುಗಿಸುತ್ತ ಸುತ್ತುತ್ತ ಪುಟ್ಟ ಚಾಕುವಿನಿಂದ ಅದನು
ಹೆರೆಯುತ್ತ ಹೋಗುತ್ತಾನೆ ಮರವೊಡೆದು
ಮೊನಚು ತುದಿ ಮರಳಿ ತಲೆದೋರುವವರೆಗೂ
ತನ್ನ ಬಾಳುವೆಯೂ ಹೀಗಿರಬಹುದೆಂದವನು ನಂಬಲಾದಲ್ಲಿ
ಹೋಗಲಾರನವನು ತನ್ನಪ್ಪನನು ಹಿಂಬಾಲಿಸಿ ಯುದ್ದದಲ್ಲಿ
ಇನ್ನು ಕೊನೆಯ ಪದ್ಯ ಇವೆಲ್ಲಕ್ಕಿಂತ ಭಿನ್ನವಾದುದು. ಇದು ನಾನು ತುಂಬ ಮೆಚ್ಚುವ ನನಗೆ ಆಪ್ತವಾದ ಪದ್ಯ. ಇದನ್ನು ನಾನು ಆಗಾಗ ಓದುತ್ತ ನನಗೆ ನಾನೇ ಹೇಳಿಕೊಳ್ಳುತ್ತಿರುತ್ತೇನೆ.
ತಲೆ ಮರೆಸಿಕೊಳ್ಳುವ ಕಲೆ
'ಗುರುತು ಹತ್ತಲಿಲ್ಲವೇ?' ಎಂದವರು ಕೇಳಿದಾಗ
ಇಲ್ಲವೆನ್ನಿ.
ಔತಣಕೂಟಗಳಿಗೆ ನಿಮಗೆ ಆಮಂತ್ರಣ ಬಂದಾಗ
ಉತ್ತರಿಸುವ ಮೊದಲು
ಪಾರ್ಟಿಗಳೆಂದರೆ ಹೇಗಿರುತ್ತವೆಂದು ನೆನಪಿಸಿಕೊಳ್ಳಿ:
ಯಾರೋ ತಾನೊಮ್ಮೆ ಪದ್ಯ ಬರೆದಿದ್ದೆನೆಂದು
ಎತ್ತರದ ದನಿಯಲ್ಲಿ ಹೇಳುತ್ತಿರುತ್ತಾರೆ;
ಕಾಗದದ ಪ್ಲೇಟುಗಳ ಮೇಲೆ ಎಣ್ಣೆಯೊಸರುವ ಮಾಂಸದ ಭಜಿಗಳು.
ಈಗ ಹೇಳಿ ನೋಡೋಣ.
ನಾವೊಮ್ಮೆ ಒಟ್ಟಿಗೆ ಸೇರಬೇಕು ಎಂದು ಅವರೆಂದರೆ
ಯಾಕೆಂದು ಕೇಳಿ.
ನಿಮಗೆ ಅವರ ಮೇಲೆ ಅಕ್ಕರೆ ಇಲ್ಲವಾಗಿದೆಯೆಂದಲ್ಲ.
ಮರೆಯಬಾರದಾದಂಥ ಮಹತ್ವದ್ದೇನನ್ನೋ
ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದೀರಷ್ಟೇ,
ಮರಗಳು ಅಥವಾ ಇಳಿಹೊತ್ತಿನ ಮಠದ ಗಂಟೆಯ ನಾದ
ಹೊಸ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆಂದು ಹೇಳಿ ಬಿಡಿ.
ಎಂದಿಗೂ ಮುಗಿಯಲಾರದಂಥದ್ದದು.
ಕಿರಾಣಿ ಅಂಗಡಿಯಲ್ಲಿ ಯಾರಾದರೂ ಭೆಟ್ಟಿ ಆದರೆ
ಸುಮ್ಮನೆ ಒಮ್ಮೆ ತಲೆಯಾಡಿಸಿ ಕೋಸುಗಡ್ಡೆಯಾಗಿಬಿಡಿ.
ಹತ್ತಾರು ವರ್ಷ ಕಾಣದವರು ಒಮ್ಮೆಲೆ
ಬಾಗಿಲೆದುರು ಉದಯಿಸಿದರೆ
ನಿಮ್ಮ ಹೊಸ ಹಾಡುಪಾಡುಗಳನ್ನು ಬಿಚ್ಚಲು ಹೋಗಬೇಡಿ.
ಕಾಲದೊಂದಿಗೆ ಮೇಳೈಸುವುದು ಸಾಧ್ಯವೇ ಇಲ್ಲ.
ನೀವೊಂದು ಎಲೆಯೆಂಬ ಅರಿವಿನೊಂದಿಗೆ ತುಯ್ದಾಡಿ.
ಯಾವುದೇ ಕ್ಷಣ ಉದುರಬಹುದೆಂಬುದು ಗೊತ್ತಿರಲಿ.
ನಿಮ್ಮ ಸಮಯ ಹೇಗೆ ಕಳೆಯುತ್ತೀರೆಂದು ನಂತರ ನಿರ್ಧರಿಸಿ.