ಖ್ಯಾತ ಸಾರಂಗೀವಾದಕ, ಗಾಯಕ ಉಸ್ತಾದ ಫಯಾಝ್ ಖಾನ್ ಅವರ ಜೀವನಕಥನ ಸಾರಂಗಿ ನಾದದ ಬೆನ್ನೇರಿ ಫೆ. 16ರಂದು ಧಾರವಾಡದಲ್ಲಿ ಬಿಡುಗಡೆಯಾಗುತ್ತಿದೆ. ಗಣೇಶ ಅಮೀನಗಡ ಮತ್ತು ಸಿ. ಬಿ. ಚಿಲ್ಕರಾಗಿ ಈ ಕೃತಿಯನ್ನು ನಿರೂಪಿಸಿದ್ದಾರೆ. ಈ ಸಂದರ್ಭದಲ್ಲಿ ಆಯ್ದ ಭಾಗ ನಿಮ್ಮ ಓದಿಗೆ.
ಎಂಬತ್ತರ ದಶಕದ ಧಾರವಾಡದಾಗ ಏಳು ಕೆರಿ (ಕೆರೆ) ಇದ್ವು. ಕೆಲಗೇರಿ, ಸಾಧನಕೇರಿ, ಕೊಪ್ಪದಕೇರಿ, ಎಮ್ಮಿಕೇರಿ, ನುಗ್ಗಿಕೇರಿ, ಲಕ್ಷ್ಮಿಸಿಂಗನಕೇರಿ, ಕೋಳಿಕೇರಿ. ಇವು ದೊಡ್ಡವು. ಹಿಂಗ ಏಳುಗುಡ್ಡ ಇದ್ವು. ಎಮ್ಮಿಕೇರಿ ಗುಡ್ಡ (ಮಾಳಮಡ್ಡಿ), ಸಾರಸ್ವತಪುರ ಗುಡ್ಡ, ಎತ್ತಿನಗುಡ್ಡ, ಲಕ್ಷ್ಮಿಸಿಂಗನಗುಡ್ಡ, ಸಾಧನಕೇರಿ ಗುಡ್ಡ, ವಿದ್ಯಾಗಿರಿ ಗುಡ್ಡ, ನುಗ್ಗಿಕೇರಿ ಗುಡ್ಡ. ಆಗ ಎಲ್ಲಿ ನೋಡಿದರಲ್ಲಿ ಹಸಿರು ಹಸಿರು. ಜೂನ್ ಏಳರಂದು ಮಿರುಗು ಮಳೆ ಸುರುವಾದ್ರ ೧೫ ದಿನಗಳ ತನಕ ಸಾಲಿಗೆ ಸೂಟಿ (ರಜೆ). ರಸ್ತೆಯ ಗುಂಡಿಯೊಳಗ ನೀರಾಟ ಆಡಾಕ ಹೋಗಿ ಹುಡುಗ್ರು ಬಿದ್ದು ಸಾಯ್ತಾವಂತ ಸಾಲಿಗೆ ಸೂಟಿ ಕೊಡತಿದ್ರು. ಧಾರವಾಡದ ಮಳಿನೂ ಹಂಗ, ಚಳಿನೂ ಹಂಗ.
ಚಿಕ್ಕವನಿದ್ದಾಗ ಧಾರವಾಡದಾಗ 26 ಡಿಗ್ರಿ ಸೆಲ್ಸಿಯಸ್ ದಾಟಿರಲಿಲ್ಲ. ರಸ್ತೆ ಎರಡೂ ಕಡೆ ಹುಣಸೆ, ನೀರಲ ಹಣ್ಣಿನ ಗಿಡಗಳಿದ್ವು. ಶಾಲೆಗೆ ಹೋಗ್ತಾ ಬರ್ತಾ ನೀರಲ ಹಣ್ಣು ತಿಂದು ನಾಲಿಗೆಯೆಲ್ಲಾ ನೀಲಿ ಆಗಿರತಿತ್ತು. ಜನಾ ಕಮ್ಮಿ ಇದ್ರು. ಭೆಟ್ಟಿಯಾಗೋರೆಲ್ಲಾ ಕವಿಗಳು, ಸಂಗೀತಗಾರರು, ಚಿತ್ರಗಾರರು, ಶಿಲ್ಪಗಾರರು, ನಾಟಕಕಾರರು, ಸಾಲಿ ಶಿಕ್ಷಕರು ಆಗಿರತಿದ್ರು. 'ಧಾರವಾಡದಾಗ ಕಲ್ಲು ಒಗದ್ರ ಕವಿಗಳ, ಸಂಗೀತಗಾರರ, ನಾಟಕಕಾರರ ಮನೆಗೆ ಬೀಳ್ತದ' ಅಂತ ಗಾದೆಮಾತು ಇತ್ತು. ಕವಿ ಚೆನ್ನವೀರ ಕಣವಿ ಅವರು ಹೇಳಿದಂಗ ಕಲ್ಲು ಒಗದವನೂ ಕವಿ, ಸಂಗೀತಗಾರ ಆಗಿರತಿದ್ದ.
ಸ್ಕೂಟರಲ್ಲಿ ಬಂದ್ರ ಡಾಕ್ಟರು, ಪ್ರೊಫೆಸರು ಬಂದರಂತನ ಅರ್ಥ. ಸಾಮಾನ್ಯರಿಗೆ ಟಾಂಗಾ, ಸಿಟಿ ಬಸ್ ಇದ್ವು. ನಮ್ಮ ಅಪ್ಪ ಅಬ್ದುಲ್ ಖಾದರ್ ತಿಂಗಳಿಗೊಮ್ಮೆ ಟಾಂಗಾ ಬಾಡಿಗೆ ಹಿಡೀತಿದ್ರು. ತಿಂಗಳ ಸಂತಿ ಟಾಂಗಾದಾಗ ಹಾಕ್ಕೊಂಡು ಬರ್ತಿದ್ವಿ. ಧಾರವಾಡದ ಸಿಬಿಟಿ ಹತ್ರ ವಸ್ತ್ರದ ಅವರ ಕಿರಾಣಿ ಅಂಗಡಿಯಿಂದ ಸಾಮಾನು ಖರೀದಿಸಿ ತರ್ತಿದ್ವಿ. ಟಾಂಗಾ ಹೊಡೆಯೋನ ಹತ್ರ ಕುಂತು ಬರ್ತಿದ್ದೆ. ಆ ದಿನದಾಗ ಟಿವಿ, ಮೊಬೈಲ್ ಫೋನಿರಲಿಲ್ಲ. ಟೆಲಿಫೋನ್ ಇರಲಿಲ್ಲ. ಟೆಲಿಫೋನ್ ಮಾಡಬೇಕಂದ್ರ ಪೋಸ್ಟ್ ಆಫೀಸಿಗೆ ಹೋಗಿ ಟ್ರಂಕ್ಕಾಲ್ ಬುಕ್ ಮಾಡಿ ಕಾಯಬೇಕಾಗ್ತಿತ್ತು. ಮನ್ಯಾಗ ಟೆಲಿಫೋನ್ ಇಟ್ಕೊಂಡಾರಂದ್ರ ಭಾಳ ಶ್ರೀಮಂತರು ಅದಾರಂತ ಲೆಕ್ಕ. ಪತ್ರವೇ ಸಂಪರ್ಕ ಸಾಧನ. ಪತ್ರದ ಮುಖಾಂತರ ಎಲ್ಲಾ ಸಮಾಚಾರ ತಿಳಿತಿತ್ತು.
ನಡಕೊಂಡು ಸಾಲಿಗೆ ಹೋಗತಿದ್ದೆ. ಆಕಾಶವಾಣಿ ದಾಟಿಯೇ ಹೋಗಬೇಕಿತ್ತು. ಹಂಗ ದಾಟಿ ಹೋಗುವಾಗ ಪಂ.ಮಲ್ಲಿಕಾರ್ಜುನ ಮನ್ಸೂರ, ಪಂ.ಚಂದ್ರಶೇಖರ ಪುರಾಣಿಕಮಠ, ಪಂ.ಬಸವರಾಜ ರಾಜಗುರು, ತಬಲಾ ವಾದಕರಾದ ಉಸ್ತಾದ್ ಮಮ್ಮುಲಾಲ್ ಸಾಂಗಾವಕರ್, ಪಂ.ಶೇಷಗಿರಿ ಹಾನಗಲ್, ಪಂ.ಜಿ.ಎನ್.ಪರ್ವತಿಕರ, ಗಾಯಕರಾದ ಪಂ. ಗದಗಕರ, ಪಂ.ಅರ್ಜುನಸಾ ನಾಕೋಡ, ವಯಲಿನ್ ವಾದಕರಾದ ಪಂ.ಬಿ.ಎಸ್.ಮಠ, ಪಂ.ಟಿ.ವಿ.ಕಬಾಡಿ, ಮೃದಂಗ ವಾದಕರಾದ ವಿದ್ವಾನ್ ರಾಜಕೇಸರಿ, ಕರ್ನಾಟಕಿ ವಯಲಿನ್ ವಾದಕರಾದ ವಿದ್ವಾನ್ ಕೃಷ್ಣ ಅಯ್ಯಂಗಾರ್, ಕ್ಲಾರಿಯೊನೆಟ್ ವಾದಕರಾದ ಉಸ್ತಾದ್ ಹುಸೇನಸಾಬ್ ನದಾಫ್, ಸಿತಾರ್ ವಾದಕರಾದ ಉಸ್ತಾದ್ ಬಾಲೇಖಾನ್ ಇವರನ್ನೆಲ್ಲ ನೋಡತಿದ್ದೆ.
ಮೊದಲು ನಮ್ಮ ಮನಿ ಆಕಾಶವಾಣಿ ಎದುರು ಕುರ್ಪಾಲಿಸ್ ಕಾಂಪೌಂಡಿನೊಳಗ ಇತ್ತು. ಇದರ ಎದುರಿಗೆ ಪಂ. ಮಲ್ಲಿಕಾರ್ಜುನ ಮನ್ಸೂರರ ಮನಿ ಇತ್ತು. ಸತತ ಅವರ ಗಾನಾ ಕೇಳತಿದ್ವಿ. ಅಲ್ಲಿಂದ ಸಪ್ತಾಪುರ ಮಿಚಿಗನ್ ಕಂಪೌಂಡ್ ಒಳಗ ಇದ್ವಿ. 15 ಗುಂಟೆ ಜಾಗದಾಗ 12 ಕೋಣಿ ಇದ್ವು. ಅಡುಗೆಮನಿ ಬ್ಯಾರೆ. ಸಂಗೀತಗಾರರು ಬಂದ್ರ ಉಳಿಲಾಕ ಛಲೋ ಆಗ್ತಿತ್ತು. ಇದ ಮನಿಯಾಗ ಮುಂಬೈನ ಭಾಳ ದೊಡ್ಡ ತಬಲಾ ವಾದಕರಾಗಿದ್ದ ಉಸ್ತಾದ್ ನಿಜಾಮುದ್ದಿನ್ ಖಾನ್, ಭೋಪಾಲ್ನ ಸಾರಂಗಿ ವಾದಕರಾಗಿದ್ದ ಅಬ್ದುಲ್ ಲತೀಫ್ ಖಾನ್, ಮುಂಬೈನ ಸಿತಾರ್ ವಾದಕರಾಗಿದ್ದ ಉಸ್ತಾದ್ ಹಲೀಂ ಜಾಫರ್ ಖಾನ್ ಉಳಿತಿದ್ರು. ಹುಬ್ಬಳ್ಳಿಯೊಳಗ ಕಛೇರಿ ಕೊಡಾಕ ಬಂದ್ರ ಧಾರವಾಡದ ನಮ್ಮ ಮನಿಯೊಳಗ ಉಳಿತಿದ್ರು. ಈ ಮನಿಯಿಂದ ಸಾಲಿಗೆ ಹೊಂಟ್ರ ಕೆಸಿಡಿ (ಕರ್ನಾಟಕ ಕಾಲೇಜು) ಸರ್ಕಲ್ ಹತ್ರ ಕರ್ನಾಟಕ ಕಾಲೇಜಿನ ಸಂಗೀತ ವಿಭಾಗ ಸಿಗೋದು. ನಮ್ಮ ಗುರುಗಳಾದ ಪಂ.ಬಸವರಾಜ ಬೆಂಡಿಗೇರಿ, ತಬಲಾ ವಾದಕರಾದ ಪಂ.ಗಿರೀಶ ಅವಟೆ, ಉಸ್ತಾದ್ ಬಾಲೇಖಾನ್ ಅವರ ತಂದೆ ಉಸ್ತಾದ್ ಅಬ್ದುಲ್ ಕರೀಂ ಖಾನ್, ಗಾಯಕರಾದ ವಿದುಷಿ ಕಮಲ್ ಪುರಂದರೆ, ಪಂ.ನಾರಾಯಣರಾವ್ ಮುಜುಮದಾರ ಸಿಗೋರು. ಸಿತಾರ್ ವಾದಕರಾದ ಪಂ.ಮೃತ್ಯುಂಜಯ ತರ್ಲಗಟ್ಟಿ, ಆಕಾಶವಾಣಿಯೊಳಗ ಕೊಳಲು ವಾದಕರಾಗಿದ್ದ ಪಂ.ಟಿ.ವಿ.ಚವಾಣ್, ಗಾಯಕರಾದ ಪಂ.ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ಹಾರ್ಮೋನಿಯಂ ವಾದಕರಾದ ಪಂ.ವಸಂತ ಕನಕಾಪುರ, ಸಂಗೀತ ಸಂಯೋಜಕರಾದ ಪಂ.ಕೇಶವ ಗುರಂ, ಪಂ.ಚರಣಕರ್ ಇವರೆಲ್ಲ ಕೆಸಿಡಿ ಸರ್ಕಲ್ಲಿನಲ್ಲಿ ಗುಂಪು ಗುಂಪಾಗಿ ನಿಂದರತಿದ್ರು.
ಈ ಎಲ್ರಿಗೂ 'ನಮಸ್ಕರ್ರಿ ಸರ' ಅಂದಾಗ 'ಪ್ರ್ಯಾಕ್ಟೀಸ್ ಹೆಂಗ ಮಾಡಾಕತೀಯಪಾ? ಛಲೋ ನಡದದ?' ಕೇಳೋರು.
'ಛಲೋ ಮಾಡಾಕ ಹತ್ತೀನ್ರಿ’ ಅಂತಿದ್ದೆ.
'ಮಾಡು ಮಾಡು' ಅಂತ ಬೆನ್ನು ಚಪ್ಪರಿಸೋರು.
ಉಸ್ತಾದ್ ಅಬ್ದುಲ್ ಕರೀಂ ಖಾನ್ ಅವರ ಇನ್ನೊಬ್ಬ ಮಗನಾದ ಉಸ್ತಾದ್ ಹಮೀದ್ ಖಾನ್ ಕೆಸಿಡಿಯ ಸಂಗೀತ ವಿಭಾಗಕ್ಕ ಸಿತಾರ್ ಕಲಿಸೋ ಲೆಕ್ಚರರ್ ಆದ್ರು. ಮೃತ್ಯುಂಜಯ ತರ್ಲಗಟ್ಟಿ ಅವರ ಮಗ ಪಂ. ರಾಜು ತರ್ಲಗಟ್ಟಿ ಅವ್ರು ಸಿತಾರ್ ಲೆಕ್ಚರರ್ ಆಗಿಬಂದ್ರು. ಹಿಂಗ ಭಾಳಷ್ಟು ಕಲಾವಿದರ ಮಕ್ಕಳು ಆಕಾಶವಾಣಿಗೆ, ಕೆಸಿಡಿ ಸಂಗೀತ ವಿಭಾಗಕ್ಕ ಬಂದ್ರು. ನಾನೂ ಆಕಾಶವಾಣಿಗೆ ಸಾರಂಗಿ ವಾದಕನಾಗಿ ಸೇರಬೇಕಂತ ಅರ್ಜಿ ಹಾಕ್ದೆ. ಅಲ್ಲಿದ್ದ ನಿಲಯ ನಿರ್ದೇಶಕರು ನನ್ನ ಅರ್ಜಿಯನ್ನ ದೆಹಲಿಗೆ ಕಳಿಸಲೇ ಇಲ್ಲ. 'ಕಳಿಸೀನಿ, ಬರ್ತದ' ಅಂತ ಸುಳ್ಳು ಹೇಳಿದ್ರು.
ಆಗ ಒಂದು ಕಾನೂನಿತ್ತು. ಈಗಲೂ ಅದ. ಕೇಂದ್ರ ಸರ್ಕಾರದ ನೌಕರಿ ಮಾಡೋ ನೌಕರರ ಮಕ್ಕಳಿಗೂ ಅನುಕಂಪದ ಆಧಾರದ ಮ್ಯಾಲ ನೌಕರಿ ಕೊಡಬೇಕಂತ. ಹಿಂಗಾಗಿ ನಮ್ಮಪ್ಪ ಖಾದರ್ ಖಾನ್ ಅವ್ರು ಸಾರಂಗಿ ವಾದಕರಾಗಿ 34 ವರ್ಷಗಳವರೆಗೆ ಆಕಾಶವಾಣಿಯೊಳಗ ದುಡದ್ರು. ಆಗ ಅವ್ರಿಗೆ ಲಕ್ವಾ ಹೊಡದಾಗ ಸ್ವಯಂ ನಿವೃತ್ತಿ ತಗೊಂಡ್ರು. ಅವರು 1984ರ ಸೆಪ್ಟೆಂಬರ್ 24ರಂದು ತೀರಿಕೊಂಡ್ರು. 1986ರಲ್ಲಿ ಅರ್ಜಿ ಹಾಕಿದೆ. ಯಾಕಂದ್ರ 18 ವರ್ಷಗಳಾಗುವವರೆಗೂ ಕಾಯ್ದೆ. ಆಕಾಶವಾಣಿಯಿಂದ ಬುಲಾವ್ ಬರ್ತದಂತ ಕಾದೆ. ಆಮ್ಯಾಲ ಗೊತ್ತಾತು; ಆಗಿನ ಕಾಲಕ್ಕ ಒಂದು ಲಕ್ಷ ರೂಪಾಯಿ ಲಂಚ ಪಡೆದು ಬ್ಯಾಂಡ್ ಬಾರಿಸೋ ಕಂಪನಿಯಲ್ಲಿದ್ದ ಕ್ಲಾರಿಯೊನೆಟ್ ವಾದಕರಿಗೆ ನೌಕ್ರಿ ಕೊಟ್ರು, ನನಗ ನೌಕರಿ ಸಿಗಲಿಲ್ಲ. ಇದ್ರಿಂದ ದುಃಖ ಆತು. ಮುಂದ ಅನುಕೂಲ ಆತು. ಪಾಟ್ನಾ, ಮಥುರಾ, ನೇಪಾಳ, ಭೋಪಾಲ್, ಬನಾರಸ್, ಋಷಿಕೇಶ್ ತಿರುಗಾಡಿದೆ. ಆಕಾಶವಾಣಿಯೊಳಗ ನೌಕರಿ ಸಿಕ್ಕಿದ್ರ ಬಾವ್ಯಾಗಿನ ಕಪ್ಪಿ (ಕೂಪಮಂಡೂಕ) ಹಂಗ ಧಾರವಾಡಕ್ಕಷ್ಟ ಸೀಮಿತ ಆಗಿರತಿದ್ದೆ, ಆದ್ರ ಲೋಕಸಂಚಾರಿಯಾದೆ. ಈಗ ನೋಡ್ರಿ, ಸರ್ಕಾರಿ ಸಂಸ್ಥೆಯೊಳಗ ನೌಕರಿಯಾದ್ರ ಹೊಟ್ಟಿಗೆ ಹಿಟ್ಟು ಸಿಗ್ತದಂತ ನಿಕ್ಕಿಯಾಗನ ರಿಯಾಜ಼್ ಮಾಡೋದು ಬಿಡ್ತಾರ. ಕಲಿಯಾಕ ಬಂದವ್ರಿಗೆ ಮೂಗಿಗೆ ಬೆಣ್ಣಿ ಹಚ್ಚಿದಂಗ ಮಾಡಿ 'ಅಭ್ಯಾಸ ಮಾಡಿಕೊಳ್ರಿ’ ಅಂತಾರ. ಕಾಲೇಜಿನ್ಯಾಗ ಸಂಗೀತ ಕಲಿತು ದೊಡ್ಡ ಕಲಾವಿದರು ಯಾರಾಗ್ಯಾರ ಹೇಳ್ರಿ? ಸಂಗೀತವನ್ನ ಗುರುಕುಲ ಪದ್ಧತಿಯಲ್ಲೇ ಕಲಿಬೇಕ್ರಿ.
ಕೆಸಿಡಿ ಸರ್ಕಲ್ಲಿನಿಂದ ಆಕಾಶವಾಣಿ ಕಡೆ ಹೋಗುವಾಗ ರಸ್ತೆ ಎರಡೂ ಕಡೆ ಆಕಾಶಮಲ್ಲಿಗೆ ಗಿಡ ಇದ್ವು. ತಲಿ ಎತ್ತಿ ನೋಡಬೇಕು, ಅಷ್ಟೆತ್ತರದವು ಜೊತೆಗೆ ಗುಲ್ಮೊಹರ್ ಗಿಡಗಳೂ ಇದ್ವು. ಆಕಾಶಮಲ್ಲಿಗೆಯ ಬಿಳಿ, ಗುಲ್ಮೊಹರದ ಕೆಂಪು ಹೂವೆಲ್ಲ ಆಕಾಶವಾಣಿ ರಸ್ತಾದ ಉದ್ದಕ್ಕೂ ಚೆಲ್ಲಿರತಿದ್ವು. ಹಿಂಗ ಪೌನಾ (ಮುಕ್ಕಾಲು) ಕಿ.ಮೀ. ರಸ್ತೆ ಎರಡೂ ಕಡೆ ಇದ್ವು. ಮುಂದ ರಸ್ತೆ ಅಗಲೀಕರಣಕ್ಕಂತ ಗಿಡಗಳನ್ನ ಕಡಿದಾಗ ಅತ್ತಿದ್ದೆ. ಇಂಥ ಧಾರವಾಡದಾಗ ಈ ವರ್ಷದ ಬ್ಯಾಸಿಗಿಯೊಳಗ ಸೆಖಿ 44 ಡಿಗ್ರಿ ಏರಿತ್ತು. ಎಂಬತ್ತರ ದಶಕದಲ್ಲಿದ್ದುದಕ್ಕಿಂತ ಡಬಲ್ ಆಗ್ಯದ.
ಈಗ ಕೋಳಿಕೇರಿ, ಕೆಲಗೇರಿ ಅಷ್ಟ ಉಳದಾವು. ಉಳಿದ ಕೆರಿ ಮುಚ್ಯಾವು. ಸಾಧನಕೇರಿ ಸಣ್ಣದಾಗ್ಯದ. ಕೆರಿ ಹೋಗಿ ಹೊಂಡ ಆಗ್ಯದ. ಬಾರೋ ಸಾಧನಕೇರಿಗೆ ಅಂದ ಬೇಂದ್ರೆಯವರು ಹೇಳಿದಂಗ ಹೋದ್ರ ಸಾಧನಕೇರಿ ಕಾಣಲ್ಲ; ಬೇಂದ್ರೆಯವರ ಕವನದಲ್ಲಿ ಮಾತ್ರ ಕಾಣ್ತದ. ಹಿಂಗ ಕೆರಿಗಳನ್ನೆಲ್ಲ ಮುಚ್ಚಿದ ಜಾಗದಾಗ ಕಟ್ಟಡ ಎದ್ದಾವು. ವಿಪರ್ಯಾಸ ನೋಡ್ರಿ, ಇದನ್ನ ಅಭಿವೃದ್ಧಿ ಅಂತೀವಿ!
ಆಗ ಸಂಗೀತಗಾರರು ಮನೇಲಿ ಅಭ್ಯಾಸ ಮಾಡ್ತಿದ್ರ 'ಇವತ್ತ ಮುಂಜಾನಿ ತೋಡಿ ರಾಗ ಕೇಳಿದ್ವಿ. ಭಾಳ ಛಲೋ ಅನ್ನಿಸ್ತು. ಸಂತೋಷ ಆತ್ರಿ’ ಅಂತಿದ್ರು ಕೇಳಿದವ್ರು. ಸಾಹಿತ್ಯ, ಸಂಗೀತ, ಕಲೆಯ ಆಸಕ್ತಿ ಉಳ್ಳವರು ಇದ್ರು. ಭಾಷೆ ಒರಟಾದ್ರೂ ಹೃದಯವಂತಿಕೆ ಜನರಿದ್ರು ಧಾರವಾಡದಾಗ. ಈಗ ಹಾಡಿದ್ರ 'ನಮಗ ತ್ರಾಸ ಆಗ್ತದರಿ. ಬಂದ್ ಮಾಡ್ರಿ’ ಅನ್ನೋರಿದ್ದಾರ. ಹಿಂಗ ಅನ್ನೋರು ಮೂಲ ಧಾರವಾಡದವರಲ್ಲ. ಹಿಂಗಾಗಿ ಅಭ್ಯಾಸ ಮಾಡು ಸಲುವಾಗಿ, ಅಕ್ಕಪಕ್ಕದ ಮನೆಯವ್ರ ಕಿರಿಕಿರಿಗೆ ಹೊರಗ ಬಂದೆ. ಗುಡಿಗುಂಡಾರಕ್ಕ ಹೋದೆ. ಮಂಗಳವಾರಪೇಟೆಯ ಕಾಳಮ್ಮನ ಗುಡಿಯಾಗ ರಿಯಾಜ಼್ ಮಾಡಿದೆ. ಮೊದಮೊದಲು ಅಲ್ಲಿ ಮನಿಗಳು ಖುಲ್ಲಾ ಇದ್ವು. ಆಮ್ಯಾಲ ಬಾಜೂಕ ಬಂದ್ವು.
ಒಂದು ಸಲ ಮನ್ಯಾಗ ರಿಯಾಜ಼್ ಮಾಡುವಾಗ ಒಬ್ಬರು ಬಂದು 'ಬಂದ್ ಮಾಡ್ರಿ, ತೊಂದ್ರಿ ಆಗ್ತದ' ಅಂದ್ರು.
'ನನ್ನ ಮನಿಯೊಳಗ ಕುಂತು ರಿಯಾಜ಼್ ಮಾಡದ ಎಲ್ಲಿ ಹೋಗ್ಲಿ?' ಕೇಳಿದೆ.
'ಸುಡಗಾಡಕ್ಕ ಹೋಗ್ರಿ’ ಅಂದ್ರು. ಅವ್ರ ಕಪಾಳಕ್ಕ ಹೊಡಿಯೋವಷ್ಟು ಸಿಟ್ಟು ಬಂತು. ಆಮ್ಯಾಲ ಯೋಚನೆ ಮಾಡಿದೆ. ಅವ್ರು ಛಲೋ ಅಡ್ರೆಸ್ ಹೇಳಿದ್ರಲ್ಲಂತ ವಿದ್ಯಾಗಿರಿಯ ಖಬರಸ್ತಾನದ ನಮ್ಮ ಅಪ್ಪ, ಅವ್ವನ ಸಮಾಧಿ ಮುಂದ ಕುಂತು ರಿಯಾಜ಼್ ಮಾಡಿದೆ. ಮಳಿಗಾಲ ಬಿಟ್ಟು; ಒಂದು ವರ್ಷದವರೆಗೆ. ಇದರ ಮೂಲಕ ಅಪ್ಪ, ಅವ್ವಗ ಸಂಗೀತ ಕೇಳಿಸಿದೆ. ಇದಲ್ದ ಧಾರವಾಡದ ಶಾಲ್ಮಲಾ ಹಾಸ್ಟೆಲಿನ ಹಿಂದಿದ್ದ ಕಾಡಿನ್ಯಾಗ ಕುಂತು ರಿಯಾಜ಼್ ಮಾಡ್ತಿದ್ದೆ. ಶಿರಸಿ ಹತ್ರ ಸೋಂದೆಮಠದ ಸುತ್ತಮುತ್ತ ಇರೋ ಗುಡಿಯೊಳಗ ಶಾಮಣ್ಣಾ, ರವಿ ಕೂಡ್ಲಿಗಿ ಮತ್ತ ನಾನು ಅಭ್ಯಾಸ ಮಾಡ್ತಿದ್ವಿ. ಆಗ ಕಿಸೆದಾಗ ರೊಕ್ಕ ಕಡಿಮಿ ಇರತಿದ್ವು. ಆದ್ರ ಆನಂದ ಭಾಳ ಇರತಿತ್ತು.
ಲಗ್ನಾದ ಮ್ಯಾಲ ಬೆಂಗಳೂರಲ್ಲಿದ್ದಾಗ ಹೆಂಡತಿ ಪರ್ವಿನ್ 'ಧಾರವಾಡದಾಗ ಸಣ್ಣ ಮನಿ ತಗೊಳ್ಳೋಣ' ಅಂದ್ಲು. 15-20 ದಿನಗಳ ತನಕ ಧಾರವಾಡದಾಗ ಹುಡುಕಾಡಿದ್ವಿ. ಮನಿ ಸೇರಿಕೆಯಾದ್ರ ಪರಿಸರ ಸೇರತಿರಲಿಲ್ಲ. ಪರಿಸರ ಸರಿಯಿದ್ರ ಮನಿ ಸೇರತಾ ಇರಲಿಲ್ಲ. ಮನಿ, ಪರಿಸರ ಛಲೋ ಇದ್ದಾಗ ನಮ್ಮ ಬಜೆಟ್ಗೆ ಮೀರಿರತಿತ್ತು. ಹಿಂಗಿದ್ದಾಗ ಧಾರವಾಡದಿಂದ 20 ಕಿ.ಮೀ. ದೂರದ ಕಲಕೇರಿ ಹತ್ರ ತೋಟ ಮಾರೋದದ ಅಂತ ಗೊತ್ತಾತು. ನೋಡಿಕೊಂಡ ಬರೋಣಂತ ಹೊಂಟ್ವಿ. ಪರ್ವಿನ್, ಅವರಪ್ಪ ರುಸ್ತುಂಸಾಬ್ ಕೂಡಿಕೊಂಡು ನೋಡಾಕ ಹೋದ್ವಿ. ತೋಟದ ಮನಿ ಹಾಳುಬಿದ್ದಿತ್ತು. ಯೋಚನೆ ಮಾಡಿದೆ. ರಿಯಾಜ಼್ ಮಾಡಾಕ ಮನಿ ಬಿಟ್ಟು ಗುಡಿ, ಸ್ಮಶಾನಕ್ಕ ಹೋದೆ. ಕಿರಿಕಿರಿಯಾಗ್ತದಂತ ಅಸಹನೆಯ ಮಂದಿ ಮಧ್ಯೆ ಇರೋದಕ್ಕಿಂತ ತೋಟ ತಗೊಂಡು ಇರೋಣಂತ ಅನ್ನಿಸ್ತು. ಮೂವತ್ತಡಿ, ನಲವತ್ತಡಿ ನಿವೇಶನಕ್ಕ 20-30 ಲಕ್ಷ ಕೊಟ್ಟು ಮನಿ ಕಟ್ಟಿಸಿಕೊಂಡು ಇರೋದಕ್ಕಿಂತ ತೋಟ ತಗೊಳ್ಳೋಣಂತ ಹೆಂಡತಿಗೆ ಹೇಳಿದೆ. ಆಕಿ ಒಪ್ಪಿದ್ಲು. 2006ರಾಗ ಎಂಟು ಎಕರೆಗೆ 18 ಲಕ್ಷ ಕೊಟ್ಟು ತಗೊಂಡೆ. ಅದರಾಗಿದ್ದ ಮನಿ ದುರಸ್ತಿ ಮಾಡಿಸಿದೆ. ಈಗ 200 ಮಾವಿನಗಿಡಗಳಾದವು. ಗೋವಿನಜ್ವಾಳ ಬೆಳದೀವಿ. ಸಾಗುವಾನಿ, ಹೆಬ್ಬೇವು, ಸಿಲ್ವರ್ ಓಕ್ ಸೇರಿ ಎರಡು ಸಾವಿರ ಗಿಡ ನೆಟ್ಟೀವಿ. ಇದರ ಸುತ್ತ ಕಾಯ್ದಿರಿಸಿದ ಅರಣ್ಯ. ಹಿಂಗಾಗಿ ಕಾಡುಮನೆ ಅದು. ಇಲ್ಲಿ ಎಷ್ಟೊತ್ತಿಗೆ ಬೇಕಾದ್ರ, ಎಷ್ಟೊತ್ತು ಬೇಕಾದ್ರೂ ರಿಯಾಜ಼್ ಮಾಡಬಹುದು. ಈ ತೋಟಕ್ಕ ಪರಿ ಫಾರ್ಮ್ ಅಂತ ಹೆಸರಿಟ್ಟೀವಿ. ಪರ್ವಿನ್ಗ ಪ್ರೀತಿಯಿಂದ ಪರಿ ಅಂತ ಕರಿತಿದ್ದೆ. ಪರಿ ಅಂದ್ರ ದೇವಕನ್ಯೆ ಅಂತ. ಈ ತೋಟದೊಳಗ ಇದ್ರ ಭಾಳ ಸಂತೋಷಪಡತಿದ್ಲು. ಆಕಿ ನೆನಪಿಗೆ ಪರಿ ಫಾರ್ಮ್ ಅಂತ ಹೆಸರಿಟ್ಟಿವಿ. 40 ಆಡು, ಎರಡು ಎತ್ತು, ಟ್ರ್ಯಾಕ್ಟರ್... ಹಿಂಗ ತೋಟಕ್ಕ ಬೇಕಾದವೆಲ್ಲ ಇದ್ವು. ಇವನ್ನೆಲ್ಲ ನೋಡಿಕೊಳ್ತಿದ್ದಂವ ನಮ್ಮವನ, ಏನೂ ಕೇಳದೆ ಮಾರಿದ. ತೋಟದ ಸುತ್ತ ಅರಣ್ಯ ಇರೋದ್ರಿಂದ ಸಾಕಷ್ಟು ನವಿಲು, ಜಿಂಕೆ, ಸಾರಂಗ... ಇಂಥ ಪರಿಸರದಾಗ ರಿಯಾಜ಼್ ಮಾಡೋದು ಎಂಥಾ ಸಂತೋಷ!
ಏನ ಅನ್ರಿ, ಧಾರವಾಡ ಅಂದ್ರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ತವರು. ಧಾರವಾಡದಲ್ಲೇ ಹುಟ್ಟಿ, ಬೆಳೆದ ನನಗ ತಾಯಿನಾಡು ಧಾರವಾಡ, ನನ್ನ ಉಸಿರಾಟದೊಳಗ ಧಾರವಾಡ ಅದ.
ಕೃತಿ : ಸಾರಂಗಿ ನಾದದ ಬೆನ್ನೇರಿ - ಉಸ್ತಾದ ಫಯಾಝ್ ಖಾನ್ ಜೀವನಕಥನ
ನಿರೂಪಣೆ : ಗಣೇಶ ಅಮೀನಗಡ, ಬಿ. ಸಿ. ಚಿಲಕರಾಗಿ
ಪುಟ : 84
ಬೆಲೆ : ರೂ. 200
ಮುಖಪುಟ ಫೋಟೋ : ಭಾರ್ಗವ ಕುಲಕರ್ಣಿ
ಮುಖಪುಟ ವಿನ್ಯಾಸ : ಶ್ರೀಕಾಂತ ವೈ.
ಪ್ರಕಾಶನ : ಕವಿತಾ ಪ್ರಕಾಶನ, ಮೈಸೂರು.
ಚಂದದ ನಿರೂಪಣೆ. ನನ್ನ ಹಳೇ ಧಾರವಾಡ ನೋಡಿ ಧಂಗಾತು..
ಪಂ.ಚರಣಕರ್ ಮಂಗಳವಾರಪ್ಯಾಟಿ ಈರಣ್ಣನ ಗುಡಿ ಹತ್ರ ಇದ್ರು. ಆಮ್ಯಾಲ ಮನೀ ಕಟ್ಟಿಕೊಂಡ ಹೋದ್ರು. ಏರಿಯಾ ನೆನಪಿಲ್ಲ. -- Raynuka.
ಉಸ್ತಾದ್ ಫಯಾಜ್ ಖಾನ್ ರವರ ಮಾತುಗಳು ಓದುಗರನ್ನು ಧಾರವಾಡದ ಹಿಂದೂಸ್ತಾನಿ ಸಂಗೀತ ಲೋಕಕ್ಕೆ ಕರೆದೊಯ್ಯತ್ತವೆ. ಅವರ ಗಾಯನ ಮತ್ತು ಸಾರಂಗಿ ವಾದನ ಕೂಡ ಉನ್ನತ ಮಟ್ಟದವು. ನಾನು ಮೊದಲಿಗೆ ಅವರ ದನಿಯನ್ನು ಕೇಳಿದ್ದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ "ಅರ್ಧ ಸತ್ಯ" ಧಾರಾವಾಹಿಯಲ್ಲಿ. ಅಂದಿನಿಂದ ಅವರ ಕಂಠಸಿರಿಗೆ ಮಾರುಹೋದವ ನಾನು. ಬಳಿಕ ಅವರ ಕಂಠದಿಂದ ದಾಸರ ಪದಗಳನ್ನು ಹಿಂದೂಸ್ತಾನಿ ಗಾಯನವನ್ನು ಕೇಳಿರುವೆ. ಅವರ ಸಾರಂಗಿ ವಾದನ ಕೂಡ ಬಲು ಸೊಗಸು. ಅವರೇ ಸಂದರ್ಶನವೊಂದರಲ್ಲಿ ಹೇಳಿದಂತೆ ಸಾರಂಗಿ ಕಲಿಯಲು ದೂರದ ಮುಂಬೈಗೆ ಹೋಗಿ ಬರುತ್ತಿದ್ದರಂತೆ. ಸಾಧಕರೇ ಹಾಗೆ. ಎಷ್ಟೇ ಅಡ್ಡಿ ಆತಂಕಗಳಿದ್ದರೂ ಛಲ ಬಿಡರು. ಸಾಧನೆಯ ಶಿಖರವನ್ನು ಸಾಹಸದಿಂದ ಏರಿಬಿಡುವರು. ಮಹಾನ್ ಸಾಧಕರುಗಳಲ್ಲಿ ಫಯಾಜ್ ಖಾನ್ ಮೇರು ಶಿಖರ.