ಕಲೆಗಾಗಿ ಬದುಕಿದ ನಮ್ಮ ಕಾಲದ ಕೊನೆಯ ತಂತು ಖ್ಯಾತ ಸರೋದವಾದಕ ಪಂ. ರಾಜೀವ ತಾರಾನಾಥ. ಅವರು ನಮ್ಮೊಂದಿಗೆ ಇಲ್ಲವಾಗಿ ಇಂದಿಗೆ ಏಳು ದಿನಗಳು. ಅವರ ಶಿಷ್ಯಂದಿರು, ಆಪ್ತೇಷ್ಟರು ಮಹಾಶೂನ್ಯದಲ್ಲಿದ್ದಾರೆ. ಆದರೂ ಹಿಂಜರಿಯುತ್ತಲೇ ಅವರ ಕೊನೆಯ ಶಿಷ್ಯ ಪುಣೆಯ ಅನುಪಮ ಜೋಶಿ ಅವರನ್ನು ಮಾತನಾಡಿಸುವ ಪ್ರಯತ್ನಕ್ಕಿಳಿದೆ. ಒಂದು ತಿಂಗಳ ಕಾಲ ರಾಜೀವರೊಂದಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಕಳೆದ ಅವರು, ಗುರುಗಳ ಸಂಗೀತ ಶೈಲಿ, ಅವರೊಂದಿಗಿನ ಒಡನಾಟ, ಅವರ ರಾಜಕೀಯ ನಿಲುವುಗಳ ಬಗ್ಗೆ ಹಂಚಿಕೊಂಡರು.
ಶ್ರೀದೇವಿ ಕಳಸದ
ರಾಜೀವ ತಾರಾನಾಥರ ಸರೋದವಾದನದ ಅದ್ಭುತ ಕೌಶಲ, ಆಳವಾದ ಪಾಂಡಿತ್ಯ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಸಂಗೀತಗಾರರ ಸಾಲಿನಲ್ಲಿ ನಿಲ್ಲಿಸಿತು. ಅವರಲ್ಲಿರುವ ನಾದಸೂಕ್ಷ್ಮತೆ ಅವರನ್ನು ಇತರೇ ಕಲಾವಿದರಿಂದ ಪ್ರತ್ಯೇಕಿಸಿ ಅವರ ಸಂಗೀತಕ್ಕೆ ವಿಶಿಷ್ಟ ಮೋಡಿಯನ್ನು ಸೃಷ್ಟಿಸಿತು. ರಾಗದ ಲಕ್ಷಣಗಳನ್ನು ಸಂಪೂರ್ಣ ಅರಿತು, ಸೂಕ್ಷ್ಮ ವಿವರಗಳಲ್ಲಿ ಅವುಗಳಿಗೆ ಮಾರ್ಪುಕೊಟ್ಟು, ಪರಿಣಾಮಕಾರಿಯಾದ ಹೊಸ ಅಭಿವ್ಯಕ್ತಿಗಳ ಸಾಧ್ಯತೆಯನ್ನು ರೂಪಿಸಲು ಅವರ ನುಡಿಸಾಣಿಕೆ ಇಂಬು ನೀಡಿತು. ನಾದದ ವರ್ಣಪಟಲವನ್ನು, ವಿನ್ಯಾಸಗಳ ಶ್ರೇಣಿಯನ್ನು ಕಟ್ಟುತ್ತಲೇ ತಂತಿಯ ಅನುರಣನವನ್ನು ನಿಯಂತ್ರಿಸುತ್ತ ಸುಸಂಗತತೆಯನ್ನು ಸೃಜಿಸುವ ಬೆರಗನ್ನು ಅವರ ಮನೋಮಂಡಲ ರೂಪಿಸಿತು. ಸ್ವರಭೇದದ ಸೂಕ್ಷ್ಮ ವ್ಯತ್ಯಾಸಗಳು, ನಾದಗುಣದ ಬಗ್ಗೆ ಅವರಿಗಿದ್ದ ಸಾಟಿಯಿಲ್ಲದ ಸಂವೇದನಾಶೀಲತೆಯೇ ಅವರ ವಾದನದ ಪ್ರಮುಖ ಲಕ್ಷಣವಾಯಿತು.
ಅವರು ವಾದ್ಯವನ್ನು ಅನುಸಂಧಾನ ಮಾಡುವುದೇ ಆಗಲಿ ರಾಗಪ್ರಸ್ತುತಿಯ ಸುಮಧುರ ಮೆಟ್ಟಿಲುಗಳನ್ನು ಕಟ್ಟುವುದೇ ಆಗಲಿ, ಅದು ಏಕಕಾಲಕ್ಕೆ ಹಿತವಾಗಿಯೂ ಸಂಕೀರ್ಣವಾಗಿಯೂ ಸಂಪೂರ್ಣವಾಗಿಯೂ ಆವರಿಸಿಕೊಳ್ಳುವಂತಿರುತ್ತಿತ್ತು: ಮೆಲ್ಲಗೆ ಶುದ್ಧ ಸ್ವರಗಳನ್ನು ಸುತ್ತುವರಿಯುತ್ತ ಕೋಮಲ ಸ್ವರವನ್ನೇರಿಯೋ, ಇಳಿದೋ ತೀವ್ರಭಾವ ಹೊಮ್ಮಿಸುವ ಆ ಕ್ಷಣಗಳು ಅನುಭವವೇದ್ಯ. ಒಂದರೊಳಗೊಂದು ಸ್ವರಗಳು ಮೇಳೈಸಿ ಅಗಾಧ ಹರಿವಿನ ಅಖಂಡತೆಯನ್ನು ಸೃಷ್ಟಿಸುವ ಗಳಿಗೆಗಳು ಅಪೂರ್ವ. ತಮ್ಮ ಕೈಚಳಕದಿಂದ ನಾದಕೇಂದ್ರವನ್ನು ಕದಲಿಸುತ್ತ ಸ್ವರಗಳನ್ನು ಬಿಗಿಹಿಡಿದು ತುಯ್ತಕ್ಕೆಳೆದು ಒಮ್ಮೆಲೆ ಕೇಳುಗರನ್ನು ಪಾರುಗಾಣಿಸಿ ಸಿಟ್ಟುಸಿರು ಬಿಡುವಂತೆ ಮಾಡುತ್ತಿದ್ದ ಆ ಶೈಲಿ ಅನನ್ಯ.
“ಸುಮಾರು ಒಂದು ತಿಂಗಳ ಕಾಲ ಗುರುಗಳೊಂದಿಗೆ ಆಸ್ಪತ್ರೆಯಲ್ಲಿದ್ದೆ. ನನ್ನ ಪ್ರೀತಿಯ ಗುರುಗಳು ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ನನ್ನ ಸರೋದವಾದನ ಕೇಳಿದರು. ಅಂಥವರನ್ನು ಬಿಟ್ಟುಕೊಡುವುದು ಅಷ್ಟು ಸುಲಭವಾಗಿರಲಿಲ್ಲ. ಕ್ಷಮಿಸಿ, ಅವರ ಅಂತ್ಯಕ್ರಿಯೆಗೆ ಕೂಡ ನನಗೆ ಹೋಗಲಾಗಲಿಲ್ಲ. ಇನ್ನು ಅವರು ಕೊನೆಯದಾಗಿ ನನಗೆ ಹೇಳಿದ ಮಾತುಗಳನ್ನು ಹಂಚಿಕೊಳ್ಳಲು ಕೂಡ ಕಷ್ಟವೆನ್ನಿಸುತ್ತಿದೆ,” ಎನ್ನುತ್ತಲೇ ಅನುಪಮ ಜೋಶಿ, “ತಾರಾನಾಥತನ”ದ ಬಗ್ಗೆ ಮೆಲ್ಲಗೆ ಮನಸ್ಸು ಬಿಚ್ಚಿದರು.
ಮೈಸೂರಿನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಮಾರನೇ ದಿನ ಅವರನ್ನು ನೋಡಲು ಹೋದೆ. ಅವರ ಎಡಗಾಲಿನ ನೋವಿನ ತೀವ್ರತೆ ಅವರ ಮುಖದ ಮೇಲೆ ಕಾಣುತ್ತಿತ್ತು. ಅವರ ಕಣ್ಣುಗಳು ನನ್ನ ಕಣ್ಣುಗಳೊಂದಿಗೆ ಸಂಧಿಸುವ ಗಳಿಗೆಗಾಗಿ ಕಾಯುತ್ತ ನಿಂತಿದ್ದೆ. ಅವರು ಬಾ ಎಂದರು. ತಕ್ಷಣವೇ ಕಾಫೀ ರಾಗ ಹಾಡಲು ಶುರು ಮಾಡಿದರು. ಕೆಲ ಹೊತ್ತಿನ ನಂತರ ತಮ್ಮೊಂದಿಗೆ ಹಾಡೆಂದರು. “ಸರೋದ ತಂದಿದ್ದೀಯೇನು?”, “ತಂದಿದ್ದೇನೆ, ಆದರೆ ನಿಮಗೀಗ ವಿಶ್ರಾಂತಿಯ ಅಗತ್ಯವಿದೆ”. “ನನ್ನ ನೋವಿಗೆ ಇರುವುದು ಒಂದೇ ಔಷಧಿ: ಅದು ನನ್ನ ಸಂಗೀತ, ಸ್ವರಗಳು ಮಾತ್ರ. ನೋಡು, ನಾನು ಹಾಡುತ್ತಿದ್ದರೆ ಹದಿನೆಂಟರ ಹುಡುಗ. ಆದರೆ ನನ್ನ ದೇಹಕ್ಕೆ ೯೨” ಸೀಲಿಂಗಿಗಂಟಿದ ಫ್ಯಾನಿನ ನಿರಂತರ ಸದ್ದಿನಲ್ಲಿಯೂ ಅವರ ಸಂಗೀತ ಸುಮಧುರವಾಗಿ ತೇಲಿಬರುತ್ತಿತ್ತು.
ನನ್ನದು ಪುಣೆ. ಅದಕ್ಕೇ ಏನೋ ಒಂದರ ಮೇಲೊಂದು ಮರಾಠಿ ನಾಟ್ಯಗೀತೆಗಳನ್ನು ಹಾಡಲು ಶುರು ಮಾಡಿದರು. ನನಗೆ ಕೆಲವು ನಾಟ್ಯಗೀತೆಗಳ ರೆಕಾರ್ಡಿಂಗ್ ಕೇಳಿಯಷ್ಟೇ ಗೊತ್ತಿತ್ತು. ಆದರೆ ಹೀಗೆ ಒಂದು ದಿನ ಅವು ಗುರುಗಳ ಕಂಠದಿಂದ ಹರಿದು ಬರುತ್ತವೆ ಎಂದು ಎಣಿಸಿರಲಿಲ್ಲ. ಅವುಗಳಲ್ಲಿ ಅವರಿಗಿದ್ದ ಆಳವಾದ ಜ್ಞಾನ ಮತ್ತು ಹರಹನ್ನು ನೋಡಿ ದಂಗಾದೆ. ಸ್ಫುಟವಾದ ಸಾಹಿತ್ಯದೊಂದಿಗೆ ಮೂಲಧಾಟಿಯಲ್ಲೇ ಹಾಡುತ್ತ ಅಲ್ಲಲ್ಲಿ “ತಾರಾನಾಥ ಟಚ್” ಕೊಡುತ್ತಿದ್ದರು. ಅವರು ಹಾಡಿದ ರೀತಿಗೆ ನಿಜಕ್ಕೂ ನಿಬ್ಬೆರಗಾದೆ. “ತಾರಾನಾಥ ಟಚ್” ಕೊಟ್ಟಾಗಲೆಲ್ಲಾ “ಬರೋಬರ್ ಆಹೇ ಕಾ?” ಎಂದು ಕಣ್ಣಲ್ಲೇ ನನ್ನನ್ನು ಕೇಳಿದವರಂತೆ ಅನುಮೋದನೆಗಾಗಿ ನನ್ನತ್ತ ನೋಡುತ್ತಿದ್ದರು.
ಇಂಥ ಸಂದರ್ಭದಲ್ಲಿಯೂ ಅವರ ಜೀವ ಸಂಗೀತಕ್ಕಾಗಿ ಮಾತ್ರ ತುಡಿಯುತ್ತಿದೆ ಎನ್ನುವುದನ್ನು ಅರಿತು, ಮಾರನೇ ದಿನವೇ ನನ್ನ ಸರೋದನ್ನು ಆಸ್ಪತ್ರೆಯಲ್ಲಿರಿಸಿಬಿಟ್ಟೆ. ಅಂದಹಾಗೆ ಅವರು ಆಸ್ಪತ್ರೆಯಲ್ಲಿದ್ದಷ್ಟು ದಿನ ಅನೇಕ ರಾತ್ರಿಗಳನ್ನು ಎಚ್ಚರದಲ್ಲಿಯೇ ಕಳೆಯುತ್ತಿದ್ದರು. ಕೆಲವೊಮ್ಮೆ ಒಂದು ಅಥವಾ ಎರಡು ಗಂಟೆಯ ಹೊತ್ತಿನಲ್ಲಿ, “ಈಗ ಎಷ್ಟೊಂದು ಪ್ರಶಾಂತವಾಗಿದೆಯಲ್ಲ, ಶಾಂತತೆ ಮತ್ತು ಮಾಧುರ್ಯದಿಂದ ಕೂಡಿದ ಯಾವುದಾದರೂ ಒಂದು ರಾಗವನ್ನು…" ಎನ್ನುತ್ತಲೇ ದರ್ಬಾರಿ, ಮಾಲಕಂಸದ ಲಹರಿಗೆ ತಿರುಗಿಬಿಡುತ್ತಿದ್ದರು. ಅವರು ಹಾಡಲು ಶುರು ಮಾಡುತ್ತಿದ್ದಂತೆ, ಸರೋದದಲ್ಲಿ ಅನುಸರಿಸಲು ಪ್ರಯತ್ನಿಸುತ್ತಿದ್ದೆನಾದರೂ, ನುಡಿಸುವುದನ್ನು ನಿಲ್ಲಿಸಿ ಕ್ರಮೇಣ ಅವರ ಗಾಯನಕ್ಕೆ ಶರಣಾಗಿಬಿಡುತ್ತಿದ್ದೆ. ಅವರ ಸೇವೆ, ಶುಶ್ರೂಷೆಯಲ್ಲಿ ನಾನು ಮುಳುಗಿರುತ್ತಿದ್ದರೆ, ನನಗೆ ಅವರು ಇನ್ನೇನು ಧಾರೆ ಎರೆಯುವುದಿದೆ ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಸತತ ಯೋಚಿಸಿ ನಡೆದುಕೊಳ್ಳುತ್ತಿದ್ದರು. ನಮ್ಮನ್ನು ಆದ್ಯಂತವಾಗಿ ಬಂಧಿಸಿರುವುದು, ಇದೆಲ್ಲಕ್ಕೂ ಮೊದಲು ಹತ್ತಿರ ತರುವಂತೆ ಮಾಡಿದ್ದು ಸಂಗೀತವೇ ಎಂಬುದು ಅವರ ಮನದಾಳದಲ್ಲಿ ನೆಲೆಯೂರಿದಂತಿತ್ತು. ನಿರಂತರವಾಗಿ ಕಲಿಸಬೇಕೆನ್ನುವ ಅವರ ಆ ಹಂಬಲವನ್ನು, ಅದಮ್ಯ ಪ್ರೀತಿಯನ್ನು ಬಹಳ ಹತ್ತಿರದಿಂದ ಅನುಭವಿಸಿದೆ. ನಿಜಕ್ಕೂ ಈ ಗುರು ಶಿಷ್ಯ ಸಂಬಂಧ ವಿಶೇಷ.
ಇನ್ನೊಂದು ಸುಂದರವಾದ ಸಂಗತಿಯೆಂದರೆ, ಕೆಲವೊಮ್ಮೆ ಹಳೆಯ ಪ್ರಸಂಗಗಳನ್ನು ಹೇಳಲು ಶುರು ಮಾಡುತ್ತಿದ್ದರು. ಕುತೂಹಲದಿಂದ ಕಿವಿಯಾದಾಗ, ಇದ್ದಕ್ಕಿದ್ದಂತೆ ಸಂಗೀತಕ್ಕೆ ತಿರುಗಿಕೊಳ್ಳುತ್ತಿದ್ದರು. ಆಮೇಲೆ ಮತ್ತೆ ಮೊದಲು ಹೇಳುತ್ತಿದ್ದುದಕ್ಕೆ ಮರಳುತ್ತಿದ್ದರು. ಹೀಗೆ ಸಾಕಷ್ಟು ಪ್ರಸಂಗಗಳನ್ನು ಕೇಳುತ್ತಾ ನನಗನ್ನಿಸಿದ್ದು, ಸಂಗೀತವು ಅವರ ಸ್ಮರಣಶಕ್ತಿಯೊಂದಿಗೆ ಸಂಪೂರ್ಣವಾಗಿ ಮಿಳಿತಗೊಂಡಿದೆ ಎಂದು. ಅದರೆ, ಸಂಗೀತದ ಸಾಥ್ ಇದ್ದಾಗಲೇ ಅವರ ನೆನಪುಗಳು ಸಂಪೂರ್ಣವಾಗುತ್ತಿದ್ದವು, ಘಟನೆಗಳಿಗೊಂದು ಅರ್ಥ ಸಿಗುತ್ತಿತ್ತು.
ಒಂದಿಷ್ಟು ದಿನಗಳು ಕಳೆದ ನಂತರ ಅವರು ಸರೋದದ ಸ್ಪರ್ಶವನ್ನು ಅನುಭವಿಸಲಿ ಎಂದು ಸರೋದನ್ನು ಅವರ ಬಳಿ ಇಟ್ಟೆ. ತಂತಿಗಳನ್ನು ಒಮ್ಮೆ ಮೀಟಿದರು; ತುಂಬಾ ದಿನಗಳಿಂದ ವಿರಹದಲ್ಲಿ ಬೇಯುತ್ತಿದ್ದ ಪ್ರೇಮಿಗಳು ಪರಸ್ಪರ ಹತ್ತಿರವಾದಾಗಿನ ಭಾವೋತ್ಕರ್ಷದ ಗಳಿಗೆ ಅವರ ಮುಖದಲ್ಲಿ ಅರಳಿತು. ಮೆಲ್ಲಗೆ ಅವರು ಭಾವಸಮಾಧಿಗೆ ಜಾರಿದರು. ಅದೊಂದು ಡೀಪ್ ಮೆಡಿಟೇಟಿವ್ ಟ್ರಾನ್ಸ್ ಎನ್ನಬಹುದು. ಇನ್ನು ಸಾಮಾನ್ಯವಾಗಿ ಬೆಳಗ್ಗೆ, ರಾತ್ರಿ ನನಗೆ ನುಡಿಸಲು ಹೇಳುತ್ತಿದ್ದರು. ನುಡಿಸುತ್ತಿದ್ದಾಗ ಕೆಲವೊಮ್ಮೆ “ಕ್ಯಾ ಬಾತ್ ಹೈ” ಎನ್ನುತ್ತಿದ್ದರು. ಕೆಲವೊಮ್ಮೆ ಹಾಗಲ್ಲ ಹೀಗೆ ಎನ್ನುತ್ತಿದ್ದರು. ಅವರು ನನಗೆ ಯಾವಾಗಲೂ ಹೇಳುತ್ತಿದ್ದ ಮಾತು: “ನಿರ್ಭೀತನಾಗಿ ನುಡಿಸು. ಸ್ವರಗಳು ಹೆದರದೇ ಮುಕ್ತವಾಗಿ ಸಾಗಲಿ. ನಿರ್ಭೀತಿಯ ಸೌಂದರ್ಯ ಸರೋದ್ನಲ್ಲಿ ಭವ್ಯವಾಗಿ ಕಂಗೊಳಿಸಲಿ.”
ಇಂಥ ಗುರುಗಳನ್ನು ನಾನು ಹೇಗೆ ಸಂಧಿಸಿದೆ ಎನ್ನುವ ಪ್ರಸಂಗವನ್ನು ನಾನಿಲ್ಲಿ ಅವಶ್ಯ ನೆನೆಯಬೇಕು. ಮೊದಲು ನಾನು ಅಹಮದಾಬಾದನಲ್ಲಿರುವ ಇವರ ಹಿರಿಯ ಶಿಷ್ಯ ಸೋಹನ ನೀಲಕಂಠ ಅವರ ಬಳಿ ಕಲಿಯುತ್ತಿದ್ದೆ. ಅವರ ಮೂಲಕ ಗುರೂಜಿಯ ವ್ಯಕ್ತಿತ್ವ, ಅವರ ಸಂಗೀತ ಮತ್ತು ಬದುಕಿನ ಪ್ರಸಂಗಗಳನ್ನು ಕೇಳಿ ತಿಳಿದಿದ್ದೆ. ಹಾಗಾಗಿ ಅವರನ್ನು ಭೇಟಿ ಮಾಡುವ ಬಗ್ಗೆ ಬಹಳ ಕುತೂಹಲವಿಟ್ಟುಕೊಂಡಿದ್ದೆ. ಆದರೆ ಅವರು ನನ್ನ ಕೈಗೆ ನಿಲುಕದವರು ಎಂದೇ ಭಾವಿಸಿದ್ದೆ. ಒಮ್ಮೆ ಅಹಮದಾಬಾದ್ ಏರ್ಪೋರ್ಟ್ನಿಂದ ಅವರನ್ನು ಕರೆತರಲು ಹೋಗಿದ್ದೆ. ಪಂ. ರಾಜೀವ ತಾರಾನಾಥ ಎಂದರೆ ದೊಡ್ಡ ಸಂಗೀತ ವಿದ್ವಾನರುಗಳಂತೆ ಕುರ್ತಾ ಪಾಯಿಜಾಮಾ ಧರಿಸಿ ಗತ್ತಿನಿಂದ ಬರಬಹುದು ಎಂದು ಕಲ್ಪಿಸಿಕೊಂಡು ಜನರ ಮಧ್ಯೆ ಅವರನ್ನು ನಿರೀಕ್ಷಿಸುತ್ತಿದ್ದೆ. ಆದರೆ ಜೀನ್ಸ್ ಪ್ಯಾಂಟ್, ಟೀಶರ್ಟ್, ಜಾಕೆಟ್, ಸನ್ಗ್ಲಾಸಸ್ ಧರಿಸಿದ ಆಕರ್ಷಕ ನಿಲುವಿನ ವ್ಯಕ್ತಿಯೊಬ್ಬರು ಎದುರಾದರು. ಅರೆ! ಎನ್ನಿಸಿತು.
ಕಾರಿನಲ್ಲಿ ಕುಳಿತರು. ತಕ್ಷಣವೇ ಲಹರಿಗೆ ಜಾರಿ ಆಲಾಪಿಸತೊಡಗಿದರು. ಆ ದಿನ ನನ್ನ ಸಂಗೀತದ ಸಹಪಾಠಿಯೂ ಜೊತೆಗಿದ್ದ. ಗುರುಗಳು ಹಾಡುತ್ತಲೇ ನಮ್ಮಿಬ್ಬರಿಗೂ ಅಲ್ಲಿಯೇ ಸಂಗೀತ ಪಾಠ ಶುರುಮಾಡಿಬಿಟ್ಟರು! ಅಲ್ಲದೆ, ಸವಿವರವಾಗಿ ಸಂಗೀತದ ಬಗ್ಗೆ ಮಾತನಾಡಲು ತೊಡಗಿದರು. ಅಕ್ಷರಶಃ ನಾನು ಆ ಕ್ಷಣವೇ ಅವರಿಗೆ ಶರಣಾಗಿಬಿಟ್ಟೆ. ಈ ವ್ಯಕ್ತಿಯಿಂದಲೇ ನಾನು ಸಂಗೀತ ಕಲಿಯಬೇಕು ಎಂದು ನಿರ್ಧರಿಸಿಬಿಟ್ಟೆ, ಆ ಹಂಬಲ ಎಷ್ಟೋ ರಾತ್ರಿ ನನ್ನನ್ನು ಮಲಗಲು ಬಿಡುತ್ತಿರಲಿಲ್ಲ. ಅಂತೂ ಮೂರು ವರ್ಷಗಳ ನಂತರ ಒಂದು ದಿನ ಸೋಹನ ಅವರ ಬಳಿ ನನ್ನ ಇಂಗಿತವನ್ನು ಹೇಳಿಕೊಂಡೆ. ಆಗ ಅವರು ಸಹರ್ಷದಿಂದ ಗುರುಗಳೊಂದಿಗೆ ಸಂಪರ್ಕ ಕಲ್ಪಿಸಿದರು. ಗುರುಗಳದು ಒಂದೇ ಮಾತು, “ಬೆಂಗಳೂರಿಗೆ ಬಾ. ನನ್ನ ಮನೆಯ ಬಳಿಯೇ ನಿನ್ನ ವಾಸ್ತವ್ಯದ ವ್ಯವಸ್ಥೆ ಮಾಡಿಕೋ.”
ಆಗ ಅವರು ಕುಂದನಹಳ್ಳಿಯಲ್ಲಿ (ವೈಟ್ಫೀಲ್ಡ್) ಇರುತ್ತಿದ್ದರು. ಅಲ್ಲಿ ನನ್ನ ವಾಸ್ತವ್ಯ ಏರ್ಪಾಡು ಮಾಡಿಕೊಂಡರೂ ಅನೇಕ ಸಲ ಅವರ ಮನೆಯಲ್ಲಿಯೇ ಉಳಿದುಬಿಡುತ್ತಿದ್ದೆ, ಏಕೆಂದರೆ ಸಂಗೀತ ಮತ್ತು ಪಾಠಕ್ಕೆ ವಿರಾಮವೇ ಇರುತ್ತಿರಲಿಲ್ಲ. ಇನ್ನೊಂದು ಆಸಕ್ತಿಕರ ವಿಷಯವೆಂದರೆ, ಈ ಸಂದರ್ಭದಲ್ಲಿ ಗುರುಗಳು ತಮ್ಮ ಸಂಗೀತಬದುಕಿನಲ್ಲಿ ಮತ್ತೊಂದು ಮಜಲಿಗೆ ಕಾಲಿಡುತ್ತಿದ್ದರು; ದಿನವೂ ಅವರ ವಾದನ ಕೇಳುತ್ತಿದ್ದಂತೆ ಏನೋ ವ್ಯತ್ಯಾಸವಾಗುತ್ತಿದೆಯಲ್ಲ ಅನ್ನಿಸುತ್ತಿತ್ತು. ಏಕೆಂದರೆ ಈತನಕ ಕೇಳಿದ ಅವರ ರೆಕಾರ್ಡಿಂಗ್ಗಗಳು ಈಗಿನ ಅವರ ನುಡಿಸಾಣಿಕೆಯು ಬೇರೆಯೇ ಇತ್ತು. ಆದರೆ, ಒಂದು ದಿನ ಇದರ ಒಳಹೂರಣ ತಿಳಿಯಿತು. ನಿಖಿಲ್ ಬ್ಯಾನರ್ಜಿಯವರಿಂದ ಪ್ರಭಾವಿತಗೊಂಡು, ಅವರ ಗಾಯಕಿ ಅಂಗ, ತಾನಕಾರಿಯನ್ನು ಸರೋದದಲ್ಲಿ ಹೊಮ್ಮಿಸಲು ಪ್ರಯತ್ನಿಸುತ್ತಿದ್ದರು. ಕಲಾವಿದನೊಬ್ಬ ತನ್ನನ್ನು ತಾನು ನಿರಂತರವಾಗಿ ಸಂಗೀತದಲ್ಲಿ ತೊಡಗಿಸಿಕೊಂಡು ತನ್ನಷ್ಟಕ್ಕೆ ತಾನು ಬೆಳೆಯುತ್ತಿರುವ ಲಕ್ಷಣವಿದು. ಏಕೆಂದರೆ, ಬಹಳಷ್ಟು ಕಲಾವಿದರು ಒಂದು ಹಂತದ ನಂತರ ಹಾಡಿದ್ದನ್ನೇ ಹಾಡುತ್ತ, ನುಡಿಸಿದ್ದನ್ನೇ ನುಡಿಸುತ್ತ ನಿಂತಲ್ಲೇ ನಿಂತುಬಿಡುತ್ತಾರೆ. ಆದರೆ ಇವರು ಹಾಗಲ್ಲ. ಇವರ ಪ್ರತೀ ತಾನ್, ಸಂಗತಿಗಳಲ್ಲೂ ತಾರಾನಾಥತನ, ಅವು ಸರೋದದಲ್ಲಿ ಕಾವು ಪಡೆದು ಅವರದೇ ಅನನ್ಯ ಛಾಪಿನಲ್ಲಿ ಹೊಮ್ಮುತ್ತಿದ್ದವು.
ಈ ಸಂದರ್ಭದಲ್ಲಿ ಮುಖ್ಯವಾದ ಸಂಗತಿಯೊಂದನ್ನು ನಾನಿಲ್ಲಿ ಹೇಳಲೇಬೇಕು. ಪರಂಪರಾಗತ ಗುರುಶಿಷ್ಯ ಪರಂಪರೆಯ ನಡಾವಳಿಗಳಲ್ಲಿ ಅವರಿಗೆ ನಂಬಿಕೆಯೇ ಇರಲಿಲ್ಲ. ಉದಾ: ಗುರುಗಳ ಪಾದಮುಟ್ಟಿ ನಮಸ್ಕರಿಸುವುದು ಅಥವಾ ಗುರು, ಶಿಷ್ಯನಿಂದ ಸಂಪೂರ್ಣ ಶರಣಾಗತಿ ನಿರೀಕ್ಷಿಸುವುದು, ಇತ್ಯಾದಿ. ಬದಲಾಗಿ ಅವರಷ್ಟಕ್ಕೆ ಅವರೇ ಸಂಗೀತಕ್ಕೆ ಶರಣಾದರೆ ಸಾಕು ಎನ್ನುತ್ತಿದ್ದರು. ಇನ್ನು, ಅವರ ಕಲಿಸುವಿಕೆ ಕೇವಲ ಸಂಗೀತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರ ಒಂದೊಂದು ನಡೆ-ನುಡಿಯೂ ಅನುಭವದ ಪಾಕದಲ್ಲಿ ಅದ್ದಿ ತೆಗೆದಂತೆ. ಸಾಹಿತ್ಯದ ಸಾಂಗತ್ಯವಿಲ್ಲದೆ ಪಾಠವೇ ಸಾಗುತ್ತಿರಲಿಲ್ಲ. ಅವರಿಗೆ ಉರ್ದು ಎಂದರೆ ವಿಶೇಷ ಪ್ರೀತಿ. ಯಾರೊಂದಿಗಾದರೂ ಈ ಭಾಷೆಯನ್ನು ಮಾತನಾಡಬೇಕು ಎನ್ನುವ ಹಂಬಲ ಅವರಲ್ಲಿ ತೀವ್ರವಾಗಿತ್ತು. ನನಗೂ ಈ ಭಾಷೆ ಗೊತ್ತಿದೆ ಎನ್ನುವುದನ್ನು ತಿಳಿದದ್ದೇ ಬಹಳೇ ಖುಷಿಪಟ್ಟರು. ನಾವಿಬ್ಬರೂ ಸೇರಿ ಗಾಲಿಬ್, ಮೀರ್, ಫೈಝ್, ಮೊಮೆನ್, ಧಾಗ್ ಮುಂತಾದವರ ಕಾವ್ಯವನ್ನು ಅದೆಷ್ಟು ಸಾರಿ ಓದಿದೆವೋ. ಒಟ್ಟಿನಲ್ಲಿ ಉರ್ದು ಕಾವ್ಯದ ವಿಶ್ವಕೋಶವೆಂಬಂತಿದ್ದರು. ಒಬ್ಬ ವ್ಯಕ್ತಿಯನ್ನು ಸುಂದರವಾಗಿ, ಸಮಗ್ರವಾಗಿ ಹೇಗೆ ಬೆಳೆಸಬೇಕೆನ್ನುವ ಆಸ್ಥೆ, ಅಂತಃಕರಣ, ಪ್ರೀತಿ ಅವರಲ್ಲಿತ್ತು. ವಿವಿಧ ಕಲಾಪ್ರಕಾರಗಳನ್ನು ಹೇಗೆ ಪ್ರಶಂಸಿಸಬೇಕು ಮತ್ತು ಅವುಗಳಲ್ಲಿನ ಮಹತ್ತರವಾದುದನ್ನು ನಮ್ಮ ನುಡಿಸಾಣಿಕೆಯಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ಆಗಾಗ ಹೇಳಿಕೊಡುತ್ತಿದ್ದರು. ಇದು ಅವರ ಅನನ್ಯತೆ.
ಅವರದು ಆಧುನಿಕ ವಿಚಾರಧಾರೆ. ಅದು ನನ್ನ ಜೀವನದೃಷ್ಟಿಯನ್ನೂ ಸಾಕಷ್ಟು ಬದಲಿಸಿತು. ಅವರ ರಾಜಕೀಯ ಧೋರಣೆಗಳು ಮತ್ತು ಸಿದ್ಧಾಂತಗಳ ಬಗ್ಗೆ ನಾನು ಹೆಚ್ಚಿಗೆ ಮಾತನಾಡಬಯಸುವುದಿಲ್ಲ. ಆದರೆ ಒಂದಂತೂ ನಿಜ. ಅವರು ಸದಾ ಸವಲತ್ತಿಲ್ಲದವರ, ಸಮಾಜದಲ್ಲಿ ಹಿಂದುಳಿದವರ, ಅಶಕ್ತ ಧ್ವನಿಗಳ ಪರವಾಗಿರುತ್ತಿದ್ದರು. ಬಂಡವಾಳಶಾಹಿ ವಿಚಾರಗಳನ್ನು ಎಂದೂ ಬೆಂಬಲಿಸುತ್ತಿರಲಿಲ್ಲ. ಮಹಿಳಾವಾದ, ಜಾತ್ಯಾತೀತತೆ, ಮಾನವತಾವಾದವನ್ನು ಅನುಮೋದಿಸುತ್ತಿದ್ದರು. ಸಮಾನತೆಯ ಬಗ್ಗೆ ಅವರ ವಿಚಾರಗಳು ಎಷ್ಟು ಮುಂದುವರಿದುವು ಮತ್ತು ಸ್ಪಷ್ಟವಾದುವು ಎಂದರೆ, ಮುಂದೆ ನಾನು ಪ್ರಬುದ್ಧನಾಗಿ ಇವುಗಳ ಬಗ್ಗೆ ಯೋಚಿಸತೊಡಗಿದಾಗ ಒಂದಷ್ಟು ಓದತೊಡಗಿದಾಗ ಜಗತ್ತಿನಲ್ಲಿ ಏನಾಗುತ್ತಿದೆಯೆಂದು ತಿಳಿದುಕೊಳ್ಳತೊಡಗಿದಾಗ, ಓಹ್! ನನ್ನ ತಾರಾನಾಥ ಗುರೂಜಿ ಇವನ್ನು ಹಿಂದೆಯೇ ಹೇಳಿದ್ದರಲ್ಲ, ಎನ್ನಿಸುತ್ತಿತ್ತು.
ಇನ್ನು ಅವರ ಸಿಟ್ಟಿನ ಬಗ್ಗೆ. ಹೌದು, ಅವರಿಗೆ ಸಿಟ್ಟು ಬರುತ್ತಿತ್ತು ಎನ್ನುವುದು ನಿಜ. ಆದರೆ ಎಂದೂ ಅತಿರೇಕಕ್ಕೆ ಹೋಗುತ್ತಿರಲಿಲ್ಲ. ಅಕಾರಣವಾದುದಾಗಿರುತ್ತಿರಲಿಲ್ಲ. ಮತ್ತದು ಯಾವುದೇ ವ್ಯಕ್ತಿಯ ಬಗೆಗಿನ ಕೋಪವಲ್ಲ ಎಂದು ನಂತರದ ವರ್ಷಗಳಲ್ಲಿ ತಿಳಿಯಿತು. ನಾನೇ ಆಗಲಿ, ಸಚಿನ ಆಗಲಿ, ಸೋಹನ ಆಗಲಿ ಅಥವಾ ಇನ್ನ್ಯಾವ ಶಿಷ್ಯರ ಆ ಕ್ಷಣದ ಅಸಾಮರ್ಥ್ಯ ಅವರನ್ನು ಕೋಪಕ್ಕೆ ತಳ್ಳುತ್ತಿತ್ತು. ಅವರ ಸಂಗೀತವಿಚಾರಗಳು ನಮ್ಮ ಮನಸ್ಸಿನೊಳಗೆ ಒಡಮೂಡುತ್ತಿಲ್ಲವಲ್ಲ ಎನ್ನುವುದು ಅವರ ಕಾಳಜಿಯಾಗಿರುತ್ತಿತ್ತು. ಕೆಲವೊಮ್ಮೆ ಈಗಾಗಲೇ ನಮಗೆ ಗೊತ್ತಿದ್ದ ರಾಗವನ್ನು ಅವರು ಹೇಳಿಕೊಡುತ್ತಿದ್ದು, ನಾವು ಅದರಲ್ಲಿ ತನ್ಮಯರಾಗುತ್ತಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ, “ಹಾಂ ಈ ರಾಗದ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಅದಕ್ಕೆ ಈ ರಾಗದ ಬಗ್ಗೆ ನಿಮ್ಮಲ್ಲಿ ಅಸಡ್ಡೆ, ಉದಾಸೀನ ಮೂಡಿದೆ. ಅದನ್ನು ಹೊರದೂಡಿ ಈ ರಾಗದ ಇನ್ನೊಂದು ಸುಂದರವಾದ ಮುಖವನ್ನು ತೋರಿಸಲು ಮತ್ತು ನಿಮ್ಮ ಮನಸ್ಸಿನಲ್ಲಿ ಅದು ಒಡಮೂಡುವಂತೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ನಿಮ್ಮ ಪೂರ್ವಕಲ್ಪನೆಗಳು ಅದಕ್ಕೆ ಅಡ್ಡಿ ಮಾಡುತ್ತಿದ್ದರೆ ಅವನ್ನು ಹೊರದೂಡುವ ಹೊರತು ನನ್ನಿಂದ ನೀವು ಏನು ಕಲಿತೂ ಪ್ರಯೋಜನವಿಲ್ಲ.” ಅವರ ಕೋಪದ ನೆಲೆಯಿದ್ದದ್ದು ವೈಚಾರಿಕ ಸ್ಪಷ್ಟತೆಯಲ್ಲಿ. ಇಂಥ ಗುರುಗಳು ಬಹಳ ಅಪರೂಪ.
ಬದುಕಿನುದ್ದಕ್ಕೂ ನಾದದ ಸಾಧ್ಯತೆಗಳನ್ನು ಅರಸುತ್ತಲೇ ಇದ್ದರು. ಕೊನೆಯವರೆಗೂ ಅವರ ವಾದನ ಶೈಲಿ ವಿಕಸಿಸುತ್ತಲೇ ಇತ್ತು. ನುರಿತ ಗುರುಗಳಾಗಿ ಅಸಂಖ್ಯ ಶಿಷ್ಯಂದಿರಿಗೆ ಕಲೆಯನ್ನು ಧಾರೆಯೆರೆದು ತಮ್ಮ ಸಂಗೀತದ ಮತ್ತು ವೈಚಾರಿಕ ಪರಂಪರೆ ಮುಂದುವರಿಯುವಂತೆ ನೋಡಿಕೊಂಡರು.
ಅವರು ಕೊನೆಯದಾಗಿ ಹೇಳಿದ ಮಾತುಗಳನ್ನು ಹೇಳಿಕೊಳ್ಳಲು ಬಹಳ ಕಷ್ಟವೆನ್ನಿಸುತ್ತಿದೆ, “ನೀನು ಬಹಳಷ್ಟು ಕೆಲಸ ಮಾಡುವುದಿದೆ. ನಾನು ನನ್ನ ಪಾಲಿನ ಕೆಲಸವನ್ನು ಮಾಡಿದೆ. ಮುಂದಿನದನ್ನು ನೀನು ಮಾಡಬೇಕು. ನಿರಂತರವಾಗಿ ರಿಯಾಜ಼್ನಲ್ಲಿರು. ಪ್ರತಿಯೊಬ್ಬರ ಆತ್ಮವನ್ನೂ ಸ್ಪರ್ಶಿಸುವಂಥ ಆಳ ಅನುಭವ ನಿನ್ನ ಸರೋದದಿಂದ ಹೊಮ್ಮಲಿ. ನೀನು ನುಡಿಸುವ ಒಂದೊಂದು ಸ್ವರವೂ ಪ್ರೀತಿಯಿಂದ, ತೀವ್ರತೆಯಿಂದ ಕೂಡಿರಲಿ.” ಕೊನೆಕೊನೆಯಲ್ಲಂತೂ ನನ್ನನ್ನು ಮಗನಂತೆ ಕಂಡರು. ಗಂಟೆಗಟ್ಟಲೆ ತಮ್ಮ ಕೈಯ್ಯೊಳಗೆ ನನ್ನ ಕೈ ಹಿಡಿದುಕೊಂಡಿರುತ್ತಿದ್ದರು. ಆಗೆಲ್ಲಾ ಅವರು ತಮ್ಮೊಳಗಿನ ಸಂಗೀತ ಮತ್ತು ಶಕ್ತಿಯನ್ನು ನನ್ನೊಳಗೆ ದಾಟಿಸುತ್ತಿದ್ದಾರೇನೋ ಎನ್ನಿಸುತ್ತಿತ್ತು.
Taranathians..!ಎಂದು ನಮ್ಮನ್ನು ನಾವು ಪರಿಚಯಿಸಿ ಕೊಳ್ಳಲು ಅತೀವ ಹೆಮ್ಮೆ ಪಡುವ ನಮಗೆ ತಾರನಾಥತನ ಎನ್ನುವದು ಬಹುವಾಗಿ ಆಕರ್ಷಿಸುತ್ತಿರುವ ಪದವಾಗಿದೆ. Thanks for sharing such a wonderful information.
Dr.Shivu Arakeri.
Professor and HOD,
Dept.of PG studies in surgery,Taranath Govt. Ayurvedic medical College, Bellary
ಶ್ರೀದೇವಿ ಅವರದ್ದು ಅದಮ್ಯ ಪ್ರೀತಿಯ ವ್ಯಕ್ತಿತ್ವ.. ಕಳೆದ ಒಂದು ವಾರದಿಂದ ಶೂನ್ಯ ಅವರಿಸಿಕೊಂಡಂತೆ. ಹೇಳಲಾಗದ ನೋವು..
-- ಚುಕ್ಕಿ ನಂಜುಂಡಸ್ವಾಮಿ