ರೇಮಂಡ್ ಕಾರ್ವರ್ನ ಸಣ್ಣಕತೆಗಳಲ್ಲೊಂದಾದ The Father ಎಂಬ ಎರಡೇ ಪುಟಗಳ ಕತೆಯನ್ನು ಸಂಕೇತ ಪಾಟೀಲ ಅನುವಾದಿಸಿ ಕಾರ್ವರ್ನ ಬರವಣಿಗೆಯನ್ನು ಮತ್ತು ಈ ಕತೆಯನ್ನು ಸ್ಥೂಲವಾಗಿ ಅವಲೋಕಿಸಿದ್ದಾರೆ.
ಅಮೆರಿಕನ್ ಕತೆಗಾರ, ಕವಿ ರೇಮಂಡ್ ಕಾರ್ವರ್ (May 25, 1938 – August 2, 1988) ತಡವಾಗಿ ಅರಳಿದ ಪ್ರತಿಭೆ. ಹತ್ತೊಂಬತ್ತನೆಯ ವರ್ಷಕ್ಕೇ ಮದುವೆಯಾಗಿ ಕೌಟುಂಬಿಕ ಹೊಣೆಯಿಂದಾಗಿ ಸಿಕ್ಕ ಕೆಲಸಗಳನ್ನೆಲ್ಲ ಮಾಡುತ್ತ, ತನ್ನ ಓದುಬರೆಹದ ಆಸಕ್ತಿ ಮತ್ತು ಹೆಂಡತಿಯ ಒತ್ತಾಸೆಯಿಂದ “ಸೃಜನಶೀಲ ಬರವಣಿಗೆ” (Creative Writing) ಅಭ್ಯಸಿಸುತ್ತ, ಆದರೆ ಸದಾಕಾಲ ಅತಿಯಾಗಿ ಕುಡಿಯುತ್ತ ಮಾಡಿದ್ದೆಲ್ಲವನ್ನೂ ಕೇಡುಮಾಡುತ್ತ, ಇನ್ನೇನು ಸತ್ತುಸತ್ತು ಬದುಕುಳಿದವನು. ಅವನು ಕತೆಗಾರನೆಂದು ಗುರುತಿಸಲ್ಪಟ್ಟದ್ದೇ ಅವನ ಬದುಕಿನ ನಲವತ್ತನೇ ವಯಸ್ಸಿನ ನಂತರ. ಅವನು ಬದುಕಿದ್ದು ಕೇವಲ ಐವತ್ತು ವರ್ಷಗಳು. ಅವನ ಎರಡನೇ ಜೀವಿತದಲ್ಲಿ, ಎಂದರೆ ಅವನು ಕುಡಿತವನ್ನು ಬಿಟ್ಟ ನಂತರ ಜೀವಿಸಿದ ಹನ್ನೊಂದು ವರ್ಷಗಳಲ್ಲಿ, ಸಮೃದ್ಧವಾಗಿ ಬರೆದು ಮೂರು ಕಥಾಸಂಕಲನಗಳನ್ನೂ, ಮೂರು ಕವನ ಸಂಕಲನಗಳನ್ನೂ, ಒಂದಷ್ಟು ಪ್ರಬಂಧ, ಚಿತ್ರಕಥೆ, ಇತ್ಯಾದಿ ಪ್ರಕಟಿಸಿದನು.
ತನ್ನ ಬರವಣಿಗೆಯ ಶೈಲಿಯ ಬಗ್ಗೆ, “ನನ್ನ ಒಲವು ಹೃಸ್ವತೆ ಮತ್ತು ತೀವ್ರತೆಯತ್ತ” ಎಂದು ಹೇಳುತ್ತಿದ್ದ ಕಾರ್ವರ್ ಪ್ರಕಾರ, "ಸಾಮಾನ್ಯ ಸಂಗತಿಗಳು ಹಾಗೂ ವಸ್ತುಗಳ — ಒಂದು ಕುರ್ಚಿ, ಕಿಟಕಿಯ ಪರದೆ, ಫೋರ್ಕ್, ಕಲ್ಲು, ಒಬ್ಬ ಹೆಂಗಸಿನ ಕಿವಿಯೋಲೆ — ಬಗ್ಗೆ ಸಾಮಾನ್ಯ ಆದರೆ ಕರಾರುವಾಕ್ಕಾದ ಭಾಷೆಯ ಬಳಕೆಯ ಮೂಲಕವೇ ಅವಕ್ಕೆ ಅಪಾರವಾದ, ಬೆಚ್ಚಿಬೀಳಿಸುವಂತಹ ಕಸುವನ್ನು ದತ್ತವಾಗಿಸಬಹುದು.” ಸರಳಭಾಷೆಯಲ್ಲೇ ಏನನ್ನೂ ಒತ್ತಿ ಹೇಳದೆಯೇ ಅತ್ಯಂತ ಗಹನವಾದ ಕಾಣ್ಕೆಯನ್ನು ಓದುಗರಿಗೆ ಮನಗಾಣಿಸಬಹುದು. ನಾವು ತೀವ್ರವಾದದ್ದೇನೋ ಅನುಭವಿಸುತ್ತಿರುವಾಗ ಅನುಭವಿಸುತ್ತಿರುತ್ತೇವಷ್ಟೇ; ಅದನ್ನು ಬಣ್ಣಿಸಲು ಘನಶಬ್ದಗಳನ್ನು ಹುಡುಕುತ್ತಿರುವುದಿಲ್ಲ. ಬದುಕಿನ ಗಹನತೆಯೇ ಅಂಥದ್ದು. ಇದು ಕಾರ್ವರ್ನ ಕತೆಗಳನ್ನು ಓದಿದಾಗ ಮನದಟ್ಟಾಗುತ್ತದೆ.
ರೇಮಂಡ್ ಕಾರ್ವರ್ನ ಸಣ್ಣಕತೆಗಳನ್ನು ಓದುತ್ತಿದ್ದಾಗ, ಅವನ ಮೊದಲಿನ ಕತೆಗಳಲ್ಲೊಂದಾದ 'The Father' ಎಂಬ ಎರಡೇ ಎರಡು ಪುಟಗಳ ಕತೆ ನನ್ನನ್ನು ತೀವ್ರವಾಗಿ ಕಾಡಿತು. ಎಷ್ಟರ ಮಟ್ಟಿಗಂದರೆ ಅದನ್ನು ಅನುವಾದಿಸಿದರಾದರೂ ಅದರ ಬಾಧೆ ತಗ್ಗುವುದೇನೋ ಎನ್ನಿಸಿತು. ರೇಮಂಡ್ ಕಾರ್ವರ್ನ ಬಗ್ಗೆ, ಅವನ ಕತೆ, ಕವಿತೆಗಳ ಬಗ್ಗೆ ಹೇಳುವುದಕ್ಕೆ ಇನ್ನೂ ಬಹಳಷ್ಟಿದೆ. ಅದು ಇನ್ನೊಮ್ಮೆ. ಸದ್ಯಕ್ಕೆ The Father.
ಅಪ್ಪ
ಮಂಚದ ಮಗ್ಗುಲಿದ್ದ ತೊಟ್ಟಿಲಿನಲ್ಲಿ ಕೂಸು ಮಲಗಿತ್ತು. ಅದಕ್ಕೆ ಕುಲಾಯಿ ಮತ್ತು ಮಲಗುವ ಉಡುಪು ತೊಡಿಸಲಾಗಿತ್ತು. ತೊಟ್ಟಿಲಿಗೆ ಹೊಸದಾಗಿ ಬಣ್ಣ ಬಳಿದು ತಿಳಿ ನೀಲಿ ರಿಬ್ಬನ್ನುಗಳನ್ನು ಕಟ್ಟಲಾಗಿತ್ತು. ಒಳಗೆ ನೀಲಿ ಕವುದಿಗಳ ಮೆತ್ತೆಯಿತ್ತು. ಮೂವರೂ ಪುಟ್ಟ ಅಕ್ಕತಂಗಿಯರು, ಆಗಿನ್ನೂ ಹಾಸಿಗೆ ಬಿಟ್ಟೆದ್ದ ಇನ್ನೂ ಪೂರ್ತಿ ಚೇತರಿಸಿಕೊಂಡಿರದ ಅಮ್ಮ, ಮತ್ತು ಅಜ್ಜಿ , ಎಲ್ಲರೂ ಕೂಸಿನ ಸುತ್ತ ಸೇರಿ ಅದು ಇವರತ್ತ ದಿಟ್ಟಿಸುವುದನ್ನೂ ಆಗೀಗ ಮುಷ್ಠಿಯನ್ನು ತನ್ನ ಬಾಯಿಯತ್ತ ಒಯ್ಯುವುದನ್ನೂ ನೋಡುತ್ತ ನಿಂತಿದ್ದರು. ಅವನು ಮಂದಹಾಸ ಬೀರುತ್ತಿರಲಿಲ್ಲ, ನಗುತ್ತಿರಲಿಲ್ಲ, ಆದರೆ ಆಗೊಮ್ಮೆ ಈಗೊಮ್ಮೆ ತನ್ನ ಕಣ್ಣುಗಳನ್ನು ಪಿಳುಕಿಸುತ್ತಿದ್ದ ಮತ್ತು ಹುಡುಗಿಯರಲ್ಲೊಬ್ಬಳು ಅವನ ಗದ್ದ ಸವರಿದಾಗ ನಾಲಗೆಯನ್ನು ಹಿಂದೆ ಮುಂದೆ ಬಡಿದು ಆಡಿಸುತ್ತಿದ್ದ.
ಅಪ್ಪ ಅಡುಗೆಮನೆಯಲ್ಲಿದ್ದ. ಅವನಿಗೆ ಅವರು ಮಗುವಿನೊಂದಿಗೆ ಆಡುವುದು ಕೇಳಿಸುತ್ತಿತ್ತು.
“ನಿನಗೆ ಯಾರಿಷ್ಟ, ಕೂಸೇ?” ಅವನ ಗದ್ದಕ್ಕೆ ಕಚಗುಳಿಯಿಡುತ್ತ ಫಿಲಿಸ್ ಕೇಳಿದಳು.
“ಅವನಿಗೆ ನಾವೆಲ್ಲರೂ ಇಷ್ಟ,” ಫಿಲಿಸ್ ಹೇಳಿದಳು, “ಆದರೂ ಅಪ್ಪನ ಮೇಲೇ ತುಂಬಾ ಪ್ರೀತಿ, ಯಾಕೆಂದರೆ ಅಪ್ಪನೂ ಒಬ್ಬ ಹುಡುಗನಲ್ಲವೆ!”
ಅಜ್ಜಿ ಮಂಚದ ತುದಿಗೆ ಕುಳಿತುಕೊಂಡು ಹೇಳಿದಳು, “ಅದರ ಪುಟ್ಟ ತೋಳನ್ನು ನೋಡಿರಲ್ಲ! ಎಷ್ಟು ಗುಂಡುಗುಂಡಾಗಿದೆ. ಮತ್ತೆ ಆ ಪುಟ್ಟ ಬೆರಳುಗಳು! ಥೇಟ್ ಅದರಮ್ಮನಂತೆ.”
“ಮುದ್ದಾಗಿದ್ದಾನಲ್ಲವಾ? ಎಷ್ಟೊಂದು ಗುಂಡಗೆ ಕಳೆಕಳೆಯಾಗಿದೆ ನನ್ನ ಪುಟ್ಟ ಕಂದ,” ಅಮ್ಮ ಹಾಗೆನ್ನುತ್ತ ಬಗ್ಗಿ ಮಗುವಿನ ಹಣೆಗೆ ಮುತ್ತು ಕೊಟ್ಟು ಅದರ ತೋಳಿನ ಮೇಲಿದ್ದ ಹೊದಿಕೆಯನ್ನು ಸವರಿದಳು. “ನಮಗೂ ಇವನೆಂದರೆ ಪ್ರೀತಿ.”
“ಅದು ಸರಿ, ಆದರೆ ಅವನು ಯಾರಂತೆ ಕಾಣುತ್ತಾನೆ, ಯಾರಂತೆ ಕಾಣುತ್ತಾನೆ ಅವನು?” ಆಲಿಸ್ ಕೂಗಿಕೊಂಡಾಗ ಅವರೆಲ್ಲ ಇನ್ನೂ ಹತ್ತಿರ ಸರಿದು ತೊಟ್ಟಿಲಿನ ಸುತ್ತ ನಿಂತು ಮಗು ಯಾರಂತೆ ಕಾಣುತ್ತದೆ ಎಂದು ನೋಡತೊಡಗಿದರು.
“ಅವನ ಕಣ್ಣುಗಳು ಅಂದವಾಗಿವೆ,” ಕ್ಯಾರಲ್ ಎಂದಳು.
“ಎಲ್ಲಾಽ ಚಿಕ್ಕಮಕ್ಕಳ ಕಣ್ಣುಗಳು ಅಂದವಾಗಿರುತ್ತವೆ.” ಫಿಲಿಸ್ ಎದುರು ನುಡಿದಳು.
“ಅವನಿಗೆ ಅವನ ಅಜ್ಜನ ತುಟಿಗಳಿವೆ,” ಅಜ್ಜಿಯೆಂದಳು. “ಆ ತುಟಿಗಳನ್ನು ನೋಡಿರಲ್ಲ.”
“ಹೌದಾ? ಗೊತ್ತಿಲ್ಲ... ನನಗೆ ಹಾಗನ್ನಿಸಲ್ಲ,” ಅಮ್ಮನೆಂದಳು.
“ಆ ಮೂಗು! ಆ ಮೂಗು!” ಆಲಿಸ್ ಕಿರುಚಿದಳು.
“ಮೂಗಿನ ಕತೆ ಏನಂತೆ ಈಗ?” ಅಮ್ಮ ಕೇಳಿದಳು.
“ಅದು ಯಾರದೋಽ ಮೂಗಿನಂತಿದೆ,” ಮಗಳು ಉತ್ತರಿಸಿದಳು.
“ಇಲ್ಲ, ಹಾಗೇನಿಲ್ಲ, ಗೊತ್ತಾಗುತ್ತಿಲ್ಲಲ್ಲ,” ಅಮ್ಮನೆಂದಳು.
“ಆ ತುಟಿಗಳು …” ಅಜ್ಜಿ ಗುಣುಗುಟ್ಟಿದಳು. “ಆ ಪುಟ್ಟ ಬೆರಳುಗಳು….” ಮಗುವಿನ ಕೈಮೇಲಿಂದ ಹೊದಿಕೆ ಸರಿಸಿ ಅದರ ಬೆರಳುಗಳನ್ನು ಬಿಡಿಸುತ್ತ ಹೇಳಿದಳು.
“ಯಾರಂತಿದೆ ಈ ಮಗು?”
“ಅವನು ಯಾರಂತೆಯೂ ಇಲ್ಲ,” ಫಿಲಿಸ್ ಹೇಳಿದಳು. ಅವರು ಇನ್ನೂ ಹತ್ತಿರಕ್ಕೆ ಸರಿದರು.
“ನಂಗೊತ್ತು! ನಂಗೊತ್ತು!” ಕ್ಯಾರಲ್ ಕೂಗಿದಳು. “ಅವನು ಅಪ್ಪನಂತೆ ಕಾಣುತ್ತಾನೆ!” ಅವರು ಮಗುವನ್ನು ಹತ್ತಿರದಿಂದ ಜಾಗ್ರತೆಯಿಂದ ನೋಡಿದರು.
“ಆದರೆ… ಅಪ್ಪ ಯಾಽರ ಹಾಗೆ ಕಾಣುತ್ತಾನೆಽ?” ಫಿಲಿಸ್ ಕೇಳಿದಳು.
“ಅಪ್ಪ ಯಾರ ಹಾಗೆ ಕಾಣುತ್ತಾನೇಽ?" ಆಲಿಸ್ ಮರುನುಡಿದಳು. ಕೂಡಲೇ ಅವರೆಲ್ಲ ತಿರುಗಿ ಅಡುಗೆಮನೆಯತ್ತ ನೋಡಿದರು. ಅಪ್ಪ ಅವರಿಗೆ ಬೆನ್ನು ಮಾಡಿ ಟೇಬಲ್ ಎದುರಿಗೆ ಕುಳಿತುಕೊಂಡಿದ್ದ.
“ಅಯ್ಯೋ! ಅವನು ಯಾರ ಹಾಗೆಯೂ ಇಲ್ಲ!” ಫಿಲಿಸ್ ನುಡಿದು ಸಣ್ಣಗೆ ಅಳತೊಡಗಿದಳು.
ಅಜ್ಜಿ “ಹುಶ್… ಶ್ಶ್,” ಎನ್ನುತ್ತ ಮುಖ ತಿರುಗಿಸಿದಳು. ಮತ್ತೆ ಮಗುವಿನತ್ತ ದೃಷ್ಟಿ ನೆಟ್ಟಳು.
“ಅಪ್ಪ ಯಾಽರ ಹಾಗೆಯೂ ಕಾಣುವುದಿಲ್ಲ!” ಆಲಿಸ್ ಎಂದಳು.
“ಆದರೆ ಅವನು ಯಾಽರಂತಾದರೂ ಕಾಽಣಲೇಬೇಕಲ್ಲ,” ಫಿಲಿಸ್ ರಿಬ್ಬನ್ನುಗಳಲ್ಲೊಂದರಿಂದ ಕಣ್ಣೊರಿಸಿಕೊಳ್ಳುತ್ತ ಹೇಳಿದಳು. ಅಜ್ಜಿಯ ಹೊರತಾಗಿ ಉಳಿದೆಲ್ಲರೂ ಟೇಬಲ್ಲಿನ ಬಳಿ ಕುರ್ಚಿಯ ಮೇಲೆ ಕುಳಿತಿದ್ದ ಅಪ್ಪನನ್ನು ನೋಡುತ್ತಲೇ ಇದ್ದರು.
ಅವನು ಕೂತಲ್ಲಿಂದಲೇ ಇತ್ತ ತಿರುಗಿದ್ದ. ಅವನ ಮುಖ ಬಿಳಿಚಿಕೊಂಡಿತ್ತು. ಅಲ್ಲಿ ಯಾವ ಭಾವವೂ ವ್ಯಕ್ತವಾಗಿರಲಿಲ್ಲ.
***
ತೀರಾ ಸರಳವಾದ, ಏನನ್ನೂ ಹೇಳುವ ಪ್ರಯತ್ನದಲ್ಲೇ ಇಲ್ಲದಿರುವಂತೆ ತೋರುವ ಈ ಕತೆಯುದ್ದಕ್ಕೂ ಮಡುಗಟ್ಟಿದ ವಿಷಾದವಿದೆ. ಸಂಕೀರ್ಣ ಭಾವಗಳ ತಿಕ್ಕಾಟವಿದೆ. ಒಂದು ಹೊಸಹುಟ್ಟಿನ ಸಂಭ್ರಮ, ಅದರ ಜೊತೆಗೇ ಹೊಸ ಹೊಣೆಗಾರಿಕೆಯ ಅರಿವು, ಆಗಿಹೋಗಿದ್ದರ ನೆನಪು, ಹೊಸದರೊಂದಿಗೆ ಹೊಸೆದುಕೊಳ್ಳುವ ಹುರುಪು. ಎಳವೆಯ ಕುತೂಹಲದೊಟ್ಟಿಗೆ ವಯಸ್ಕರ ಬಾಧೆಗಳು ಸೂಕ್ಷ್ಮವಾಗಿ ಕಂಡುಬರುತ್ತವೆ.
ಗುರುತು ಅಥವಾ identityಯ ಪ್ರಶ್ನೆಯೂ ಕಾಣುತ್ತದೆ. ಮಕ್ಕಳಿಗೆ ಸಹಜ ಕುತೂಹಲ, ಸಂಭ್ರಮ. ತಾಯಿಗೆ ವಾತ್ಸಲ್ಯ, ಕೌತುಕದ ಜೊತೆಗೇ ಹಡೆದ ದಣಿವು, ಲಾಲನೆಯ ಭಾರ. ಮಗು ಯಾರಂತಾದರೂ ಇರಲಿ, ಆರೋಗ್ಯವಾಗಿದೆಯಲ್ಲ, ಅದು ಅವಳ ಸದ್ಯದ ಕಾಳಜಿ. ಅಜ್ಜಿಗೆ ಹೊಸಹುಟ್ಟನ್ನು ಹಳೆಯದಕ್ಕೆ, ತನ್ನ ಸತ್ತ ಗಂಡನಿಗೆ, ಹೊಸೆಯುವ ಹುನ್ನಾರ. ಅವಳಿಗಷ್ಟೇ ಮಗು ಯಾರಂತಿದೆ ಎನ್ನುವುದು ಸ್ಪಷ್ಟ. ಅವಳ ದೃಷ್ಟಿ ಮಗುವಿನ ಕಡೆಗಷ್ಟೇ. ಅವಳೊಬ್ಬಳೇ ಮಗುವಿನ ಅಪ್ಪನತ್ತ ತಿರುಗಿ ನೋಡುವುದಿಲ್ಲ.
ಹುಟ್ಟುವ ಮಕ್ಕಳು ತಂದೆತಾಯಂತಿದ್ದಾರು. ಸಹಜ. ಆದರೆ ತಂದೆತಾಯಿ ಯಾರಂತಿರುವರು? ಮಕ್ಕಳಿಗೆ ಈ ಪ್ರಶ್ನೆಯನ್ನು ನಿವಾರಿಸಲು ರೂಢಿಯ ಮಾನದಂಡಗಳಿಲ್ಲ. ಅವರಿಗೊಂದು frame of reference ಇರುವುದಿಲ್ಲ. ನನ್ನ ಅಪ್ಪ ಯಾರಂತೆಯೂ ಇಲ್ಲವಲ್ಲ ಎಂದು ದುಃಖಿಸುವ ಹುಡುಗಿಗೆ ಏನೋ ಕಳಕೊಂಡಂತಹ ಭಾವ — ಮುಗ್ಧತೆ ಕಳೆಯುತ್ತಲೇ, ದೊಡ್ಡವರಾಗುತ್ತಲೇ, ನಾವು ಮತ್ತೇನೇನು ಕಳೆದುಕೊಳ್ಳುತ್ತೇವೋ ಎಂಬ ತಲ್ಲಣ ಒಮ್ಮೆಲೇ ಉಂಟಾದಂತೆ.
ಇತ್ತ ಅಪ್ಪ, ಮೂರು ಮತ್ತು ಈಗ ನಾಕನೆಯ ಮಗುವಿನ ಹೊಣೆಯ ಭಾರದಿಂದಲೋ, ಅಥವಾ ಆತ ಅಪ್ಪನಾಗಿರುವುದರಿಂದ ಅದು ಸಹಜವಾಗಿಯೇ ಹೀಗಾಗುತ್ತದೋ, ಒಟ್ಟಾರೆ ಇದೆಲ್ಲದರಿಂದ ಅವನು ಒಂದಷ್ಟು ದೂರ. ಅವರು ಮಗುವಿನ ಹತ್ತಿರ ಹೋದಷ್ಟೂ, ಆ ಪುಟ್ಟ ಮನೆಯಲ್ಲೂ, ಅವನು ಇನ್ನೂ ತುಸು ದೂರವಾಗುತ್ತಾನೆ. ಅಪ್ಪನ ಮುಖದ ಮೇಲೆ ಯಾರದೋ ಚಹರೆ ಯಾವುದೋ ಗುರುತು ಕಾಣಬಯಸುವ ಇವರಿಗೆಲ್ಲ ಕೊನೆಗೆ ಎದುರಾಗುವುದು ಅವನ ವಿವರ್ಣ, ಭಾವವಿಹೀನ ಮುಖವಷ್ಟೇ.
ಅದೊಂದು ಗಳಿಗೆ. ಒಂದು ಚಿಟಿಕೆಚಿತ್ರ. ಅದು ಕಳೆಯುವುದು, ಮತ್ತೊಂದು ಗಳಿಗೆ ಬರುವುದು. ಮಡುಗಟ್ಟಿದ ವಿಷಾದ ಕರಗುವುದು. ಆದರೂ ಆ ಒಂದು ಗಳಿಗೆಯಲ್ಲೇ ಒಂದು ವಿಶ್ವವಿದೆ.
ಈ ಕತೆಯನ್ನು ಗರ್ಭವಾಗಿಸಿಕೊಂಡ ನಿಮ್ಮೀ ಲೇಖನದಲ್ಲಿ ನಿಮ್ಮ ಆಶಯ, ಅನ್ವೇಷಣೆ ಅರ್ಥವಾಯಿತು, ಮನವರಿಕೆ ಆಯಿತು. ಆದರೆ ಅದು ತಾನೇ ತಾನಾಗಿ ಅಭಿವ್ಯಕ್ತವಾಗಲು ಈ ಕತೆಯಲ್ಲಿ ಇನ್ನೊಂದಿಷ್ಟೇನಾದರೂ ಇರಬೇಕಿತ್ತೇ, ವ್ಯಾಖ್ಯಾನಸಾಪೇಕ್ಷವಾಯಿತೇ ಎಂಬ ಕೊರತೆಯ ಕಾಟ ನನಗೆ. ನಿಮಗೆ ಅದು ದೊರೆತಿದೆ ಎಂಬುದು ಸಂತೋಷ. ರಸಪರಿವೇಷದ ಪರಿಧಿಯ ಮಿತಿಯಲ್ಲೇ ಲೇಖಕ, ಕತೆಗಾರ ಎಷ್ಟೆಷ್ಟು ಹೆಚ್ಚು ಜನರಿಗೆ ತಲುಪುವ ಹಾಗೆ ಎಷ್ಟರ ಮಟ್ಟಿಗೆ ಬರೆಯಬಲ್ಲ ಎಂಬುದೊಂದು ಯೋಚನೀಯ ಅಂಶ. ಅದರ ಇನ್ನೊಂದು ಮಗ್ಗುಲಿನ ತವಕವೇ ನಾನು ಆ ಮಟ್ಟದ ಕೃತಿಯನ್ನು ಆಸ್ವಾದಿಸಬಲ್ಲ ಸಹೃದಯರ ಪೈಕಿ ಇದ್ದೇನೆಯೇ ಎಂಬ ಪ್ರಶ್ನೆಯೂ ಕೂಡ! ಇಲ್ಲವೆಂದವರಿಗೆ ನಿಮ್ಮಂಥವರು ದಾರಿದೀವಿಗೆ. ಧನ್ಯವಾದಗಳು.