ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ (ಹಿಂದಿ ಮೂಲ: ಸುರೇಂದ್ರ ವರ್ಮಾ) ಅನುವಾದಿತ ನಾಟಕ ಧರ್ಮನಟಿ ಎಂಬ ಶೀರ್ಷಿಕೆಯಲ್ಲಿ ರಂಗದ ಮೇಲೆ ಪ್ರದರ್ಶಿತವಾಗಲಿದೆ. ಈ ನಾಟಕದ ಮೊದಲ ಪ್ರದರ್ಶನಗಳನ್ನು ನಾಳೆ 21.7.2014, ಭಾನುವಾರ ಮಧ್ಯಾಹ್ನ 3:30 ಮತ್ತು ಸಂಜೆ 7:30ಕ್ಕೆ ಬೆಂಗಳೂರಿನ ರಂಗಶಂಕರದಲ್ಲಿ ಆಯೋಜಿಸಲಾಗಿದೆ. ಈ ನಾಟಕಕ್ಕೆ ಆಸೀಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ಅವರ ಜಂಟಿ ನಿರ್ದೇಶನವಿದೆ ಮತ್ತು ಭಿನ್ನಷಡ್ಜ ಅವರ ಸಂಗೀತ ನಿರ್ದೇಶನವಿದೆ.
ಧರ್ಮನಟಿ ನಾಟಕದ ಒಂದು ದೃಶ್ಯ ಮತ್ತು ನಿರ್ದೇಶಕರ ಆಶಯವನ್ನು ಇಲ್ಲಿ ಓದಬಹುದಾಗಿದೆ.

ದೃಶ್ಯ – ೧೦
(ಮರುದಿನ ಮುಂಜಾನೆ) (ಓಕ್ಕಾಕನ ಕಕ್ಷೆ)
(ಓಕ್ಕಾಕ ಮಹತ್ತರಿಕಾಳ ತೊಡೆಯ ಮೇಲೆ ಮಗುವಂತೆ ಮಲಗಿದ್ದಾನೆ)
ಸಮಯ ಸೂಚಕ: ಸೂರ್ಯನ ಮೊದಲ ಕಿರಣ.....
ಮಹತ್ತರಿಕಾ: ಶುಭವಾಗಲಿ ಮಹಾರಾಜರೇ.
ಬೆಳಕು! ನಸುಕು, ಮೂಡಲ ಕೆಂಪಾಯಿತು, ಪ್ರಕಾಶ.
ಓಕ್ಕಾಕ: (ಶೂನ್ಯತೆ) ಹೌದು... ಅಂತೂ ರಾತ್ರಿ ಕಳೆಯಿತು. ಹೋಗಿ ನೋಡು, ಅಲ್ಲಿಯ ಸಮಾಚಾರವೇನು?
(ಮಹತ್ತರಿಕ ಕಿಟಕಿಯ ಬಳಿ ಹೋಗುತ್ತಿದ್ದಂತೆ, ಹೊರಗಿನಿಂದ ಅಲೇಖ್ಯಾ ಹಾಗೂ ಮಧುಕಾರಿಕಾ ಮದ್ಯದ ಬಾಟಲಿ ಹಾಗು ಲೋಟಗಳನ್ನು ಹಿಡಿದು ಒಳಬರುತ್ತಾರೆ)
(ಮಧುಕಾರಿಕಾ ಲೋಟಗಳನ್ನು ಇಟ್ಟು ಕಿಟಕಿ ಬಳಿ ಹೋದ ಮಹತ್ತರಿಕಾಳ ಬಳಿ ಹೋಗಿ ನಿಲ್ಲುತ್ತಾಳೆ. ಅಲೇಖ್ಯಾ ಓಕ್ಕಾಕನಿಗೆ ಮದ್ಯವನ್ನು ಸುರಿದುಕೊಡುತ್ತಿರುತ್ತಾಳೆ)
ಮಹತ್ತರಿಕಾ: (ಕಿಟಕಿಯಿಂದ ಹೊರಗೆ ನೋಡುತ್ತಾ)... ಮಹಾದ್ವಾರದ ಮುಂದೆ ಅಮಾತ್ಯರು, ಸೇನಾಪತಿ ಕಾಯುತ್ತಿದ್ದಾರೆ. ರಥ ಬರುತ್ತಿದೆ. ಉರಿಯುತ್ತಿರುವ ಪಂಜು ಹಿಡಿದುಕೊಂಡ ಸೈನಿಕನೊಬ್ಬ ಮುಂದೆ ಬರುತ್ತಿದ್ದಾನೆ. ಮಹಾರಾಣಿಯವರು ಕಾಣಿಸಿಕೊಂಡರು. ಎಲ್ಲರೂ ಹೊರಟರು. ಇನ್ನೇನು ಇಲ್ಲಿಗೆ ಬಂದುಬಿಡುತ್ತಾರೆ, ಅಗೋ ಬಂದೇಬಿಟ್ಟರು.
(ಗುಡುಗು ಸಿಡಿಲು ಮತ್ತು ಮಳೆ)
ಅರೇ.. ಮಳೆ, ಅಕಾಲಿಕ ಮಳೆ! ವಿಚಿತ್ರವಾಗಿದೆ. ಎಲ್ಲರೂ ಮಳೆಯಿಂದ ಆಶ್ರಯ ಪಡಲು ಓಡುತ್ತಿದ್ದಾರೆ. ಮಹಾರಾಣಿಯವರು ಮಳೆಯಲ್ಲಿ ನೆನೆಯುತ್ತಾ ಹರ್ಷಚಿತ್ತರಾಗಿದ್ದಾರೆ. ಇನ್ನೇನು ನಿಮ್ಮನ್ನು ಕಾಣಲು ಶೀಘ್ರದಲ್ಲಿಯೇ ಬಂದುಬಿಡುತ್ತಾರೆ.
ಓಕ್ಕಾಕ: ಬರಲಿ. ಅವರು ಬಂದ ಮೇಲೆ ನಾನು ಬರುತ್ತೇನೆ.
(ಓಕ್ಕಾಕ ನಿರ್ಗಮಿಸುತ್ತಾನೆ)
(ಶೀಲವತಿ ಬರುತ್ತಾಳೆ)
ಮಳೆ ಹಾಡು
ಇಳೆಯ ಗೆಳೆಯ ಮಳೆಯು ನೀನು
ತಪ್ತ ಮನದ ಸಖನು ನೀನು
ಪುಳಕ ಜಳಕ ನಿನ್ನ ಸಂಗ
ಮುದವ ಮೊರೆವ ಮಂತ್ರ ನೀನು
ಸುರಿಯಬೇಡ ತೊಳೆಯಬೇಡ
ಮೈಗಂಟಿದ ಪ್ರಣಯ ಘಮಲು
ಅಳಿಸಬೇಡ ಇಳಿಸಬೇಡ
ಆವರಿಸಿದ ಕಾಮದಮಲು
ಮೋಡ ಸೀಳಿ ಸುರಿವ ನಿನ್ನ
ಶೀತ ಸಲಿಲ ಸಿಂಚನ
ಗುಡುಗು ಮಿಂಚು ತಾಳ ಮೇಳ
ಅಣು ಅಣು ರೋಮಾಂಚನ
ರಾಚಬೇಡ ಬಾಚಬೇಡ
ಬೇಡ ಹನಿಯ ಸಿಂಗಾರ
ಅಳಿಸಿ ನಶಿಸಿ ಹೋದಾವು
ಬೆನ್ನಿನ ನಖ ಚಿತ್ತಾರ
ಆರದಿರಲಿ ತಣಿಯದಿರಲಿ
ಒಡಲ ಬಯಕೆ ಬೇಗುದಿ
ಮನ ಮಿಡಿಯಲಿ ತನು ಸಿಡಿಯಲಿ
ಉನ್ಮಾದದಿ.... ಶೃಂಗಾರದಿ...
(ಹಾಡು ಮುಗಿಯುತ್ತಿದ್ದಂತೆಯೇ ಓಕ್ಕಾಕ ಬರುತ್ತಾನೆ. ಮಹತ್ತರಿಕಾ, ಮಧುಕಾರಿಕಾ ಮತ್ತು ಅಲೇಖ್ಯಾರಿಗೆ ಹೊರಡುವಂತೆ ಸನ್ನೆ ಮಾಡುತ್ತಾನೆ. ಅವರೆಲ್ಲರ ನಿರ್ಗಮನ.)
ಓಕ್ಕಾಕ: (ಅವಳನ್ನು ದಿಟ್ಟಿಸಿ ನೋಡುತ್ತಾ) ಮ್ ಮ್... ಅಸೂರ್ಯ ಸ್ಪರ್ಶಾ!
ಶೀಲವತಿ: (ಮೌನ)
ಓಕ್ಕಾಕ: ರಾತ್ರಿ ಹೇಗೆ ಕಳೆಯಿತು?
ಶೀಲವತಿ: ಯಾವಾಗ ಬೆಳಗಾಯಿತೋ ಗೊತ್ತೇ ಆಗಲಿಲ್ಲ, ನಿಮ್ಮದು?
ಓಕ್ಕಾಕ: ಚಕ್ರವಾಕ, (ಸ್ವಗತ) ಹ್ಹ....
ಶೀಲವತಿ: ಏನು?
ಓಕ್ಕಾಕ: ಏನೂ ಇಲ್ಲ. (ಹತ್ತಿರ ಬಂದು) ಇದೆಂಥ ಮೈವಾಸನೆ? ಅಂಗರಾಗವೇ?
ಶೀಲವತಿ: ಅಲ್ಲ.
ಓಕ್ಕಾಕ: ಗೋರೋಚನ?
ಶೀಲವತಿ: ಅಲ್ಲ.
ಓಕ್ಕಾಕ: ಲಾಕ್ಷಾರಸ? ಸುರಭಿ?
ಶೀಲವತಿ: ಉಹುಂ, ಅದಾವುದೂ ಅಲ್ಲ!
ಓಕ್ಕಾಕ: ಹಾಗಾದರೆ?
ಶೀಲವತಿ: ಮತ್ತೊಮ್ಮೆ ಆಘ್ರಾಣಿಸಿ ನೋಡಿ.
ಓಕ್ಕಾಕ: (ಸಿಟ್ಟಿನಿಂದ) ಶೀಲವತಿ!
ಶೀಲವತಿ: (ನಗುತ್ತಾ) ಹೋಗಲಿಬಿಡಿ. ಈ ಪರಿಮಳದ ಪರಿಚಯ ನಿಮಗಿಲ್ಲ. ಇದ್ದಿದ್ದರೆ, ನೆನ್ನೆ ಬಂದ ಈ ರಾತ್ರಿ ನನ್ನ ಅಥವಾ ನಮ್ಮ ಜೀವನದಲ್ಲಿ ಎಂದೂ ಬರುತ್ತಿರಲಿಲ್ಲ.
ಓಕ್ಕಾಕ: ಮಹತ್ತರಿಕಾ! (ಹೊರಗಿನಿಂದ ಮಹತ್ತರಿಕಾ ಬರುತ್ತಾಳೆ) ಮಹಾದೇವಿಯವರ ಸ್ನಾನಕ್ಕೆ ವ್ಯವಸ್ಥೆ ಮಾಡು.
ಶೀಲವತಿ: ಬೇಡ ಮಹತ್ತರಿಕಾ. ಈಗಲೇ ಬೇಡ. ನೀನಿನ್ನು ಹೊರಡು. (ಮಹತ್ತರಿಕಾ ಹೊರಡುತ್ತಾಳೆ) (ಓಕ್ಕಾಕನಿಗೆ) ಓಕ್ಕಾಕ. ಇನ್ನೂ ಕೆಲ ಹೊತ್ತು ಈ ಪರಿಮಳದಲ್ಲಿ ನನ್ನನ್ನು ಬಂಧಿಯಾಗಿರಲು ಬಿಡಿ. ಇದನ್ನು ನನ್ನ ಅಸ್ತಿತ್ವದ ಜೊತೆಗೆ ಒಂದಾಗಿಸಿಕೊಳ್ಳಬೇಕು. ರೋಮರೋಮಗಳಲ್ಲಿ ತುಂಬಿಕೊಳ್ಳಬೇಕು. ನನ್ನ ಎಚ್ಚೆತ್ತ ಕನಸುಗಳಿಗೆ ಈ ಪರಿಮಳದ ಸಿಂಚನವಾಗಬೇಕು.
ಓಕ್ಕಾಕ: ಶೀಲವತಿ!
ಶೀಲವತಿ: (ಓಕ್ಕಾಕನಿಗೆ) ಈ ವಾಸನೆಯಲ್ಲಿ ಏನೆಲ್ಲಾ ಅಡಗಿದೆ ಗೊತ್ತೇ…
ಓಕ್ಕಾಕ: ಶೀಲವತಿ!
ಶೀಲವತಿ: ಆಲಿಂಗನದ ಆರ್ದ್ರತೆ. ಚುಂಬನಗಳ ಉಷ್ಣತೆ. ಹಲ್ಲಿನ ಕಡಿತಗಳ ಸೀತ್ಕಾರ. ನಖಕ್ಷತಗಳು.

ಹಾಡು (ಶೀಲವತಿಯ ಮನಸ್ಥಿತಿ)
ತಿಳಿ ಮಧುರ ಸುಗಂಧ
ಹೃದಯ ಹೂವ ಹಂದರದಿ
ಭಾವ ತರಂಗದ ಕಲರವ
ಕನಸ ಕಣಿವೆಯ ಆಳದಿ
ತಪ್ತ ಮನಸ್ಸಿನ ಸುಪ್ತ ಕಾಮನೆಗಳ
ಬಡಿದೆಬ್ಬಿಸಿದ ಆ ಸ್ಪರ್ಶ
ಪಾಳು ಕೋಟೆಯ ಹಾಳು ಮೌನದ
ಏಕಾಂತ ಕೂಗಿನ ಈ ಹರ್ಷ
ಚೆದುರಿದ ತೃಷೆಯ ಹಕ್ಕಿ
ಬೆದರಿದ ಬಾಳನು ಹೆಕ್ಕಿ
ಹಾರಿ ಬಾನೆತ್ತರದಲಿ
ದಿಗಂತದ ಶೃಂಗಾರದೋಕುಳಿ
ಓಕ್ಕಾಕ: ಸಾಕು... ಸಾಕುಮಾಡು!
ಶೀಲವತಿ: (ನಗುತ್ತಾ) ಏಕೆ? ಸಹಿಸಲಾಗುತ್ತಿಲ್ಲವೇ?
ಓಕ್ಕಾಕ: ಅರ್ಥಹೀನ ನುಡಿಗಳು!
ಶೀಲವತಿ: ಕಳೆದುಕೊಳ್ಳುವುದರಲ್ಲಿ ಪಡೆದುಕೊಳ್ಳುವುದರ ಸಂತೋಷ. ಪಡೆಯುವುದರಲ್ಲಿ ಕಳೆದುಕೊಳ್ಳುವುದರ ಆಕ್ರೋಶ. ಅರ್ಥವಾಯಿತೇ?
ಓಕ್ಕಾಕ: ಇಲ್ಲ.
ಶೀಲವತಿ: ಅರ್ಥವಾಗದು! ನೀವು ಬಯಸಿದರೂ ನಿಮಗಿದು ಅರ್ಥವಾಗದು. ನಾನು ಈಗ ಪಡೆದದ್ದು. ಇಷ್ಟು ವರ್ಷಗಳ ವೈವಾಹಿಕ ಜೀವನದಲ್ಲಿ ಕಳೆದುಕೊಂಡದ್ದು. ನಿಮ್ಮ ಕಲ್ಪನೆಗೂ ಮೀರಿದ್ದು.
ಓಕ್ಕಾಕ: ವೈವಾಹಿಕ ಜೀವನ ನಿಮ್ಮ ಆಸೆ – ಕನಸುಗಳ ರಥಯಾತ್ರೆ ಅಲ್ಲ. ಅದಕ್ಕೇ ಆದಂತಹ ನಿಯಮಗಳು ಇವೆ.
ಶೀಲವತಿ: ನಿಯಮಗಳು! ಹ್ಹ.. ನಿಮ್ಮ ಪುರುಷ ಸಮಾಜ ಮಾಡಿದ ನಿಯಮಗಳು! ಅದಕ್ಕಾಗಿ ನನ್ನ ಆಸೆ – ಕನಸು - ಬಯಕೆಗಳನ್ನು ಬಲಿ ಕೊಡಬೇಕೆ? ಪ್ರಾಕೃತಿಕ ಉನ್ಮಾದಗಳ ಪ್ರವಾಹಕ್ಕೆ ಎದುರಾಗಿ ನಿಲ್ಲುವ ಶಕ್ತಿ ಈ ನಿಮ್ಮ ‘ನಿಯಮಗಳಿಗೆ’ ಇದೆಯೇ?
ಓಕ್ಕಾಕ: ಅಸಂಬದ್ಧ ಮಾತುಗಳು!
ಶೀಲವತಿ: ಅಸಂಬದ್ಧ ಮಾತುಗಳಲ್ಲ ಓಕ್ಕಾಕ... ಅಸಂಬದ್ಧವಾಗಿದ್ದದ್ದು ನಿಮ್ಮ ಜೊತೆಗಿನ ಐದು ವರ್ಷಗಳ ವೈವಾಹಿಕ ಜೀವನ! ಇಷ್ಟು ವರ್ಷ ನನಗೆ ಯಾವುದೂ ಸೇರುತ್ತಿರಲಿಲ್ಲ. ವಿನಾಕಾರಣ ಮಹತ್ತರಿಕಾಳ ಮೇಲೆ ಸಿಟ್ಟಿಗೇಳುತ್ತಿದ್ದೆ. ಆ ಚಕ್ರವಾಕಕ್ಕೆ ಆಹಾರವನ್ನೇ ಕೊಡುತ್ತಿರಲಿಲ್ಲ. ಚಿತ್ರಗಳನ್ನು ಹರಿದು ಚೂರು ಚೂರು ಮಾಡುತ್ತಿದ್ದೆ. ಪ್ರತಿರಾತ್ರಿಯೂ ಹಾಸಿಗೆಯಲ್ಲಿ ನಿದ್ದೆ ಇಲ್ಲದೇ ಹೊರಳಾಡುತ್ತಿದ್ದೆ. ಇದರಲ್ಲೆಲ್ಲಾ ನಿಮ್ಮ ತಪ್ಪಿದ್ದರೂ ಅದನ್ನು ನಾನು ಸಹಿಸಿಕೊಂಡು, ಈ ನಿಯೋಗದ ಕಾರ್ಯಕ್ಕೆ ಮುಂದಾದೆ. ಆದರೆ ನೀವು ಮಾಡಿದ್ದೇನು? ಪ್ರೀತಿಯಿಂದ ನನ್ನಲ್ಲಿ ಧೈರ್ಯತುಂಬಿ ಕಳುಹಿಸುವುದನ್ನು ಬಿಟ್ಟು, ಜಯಮಾಲೆಯನ್ನು ನನ್ನ ಮುಖಕ್ಕೆಸೆದು, ನನ್ನನ್ನು ಅವಮಾನಿಸಿದಿರಿ. ನನ್ನಲ್ಲಿ ತಪ್ಪಿತಸ್ಥ ಮನೋಭಾವನೆ ಜಾಗೃತ ಆಗುವ ಹಾಗೆ ವ್ಯವಹರಿಸಿದಿರಿ. ನಿಮ್ಮ ಮುಖವನ್ನು ಪರಚಬೇಕೆನಿಸುತ್ತದೆ. (ತನ್ನ ಕೈಬಳೆಗಳ ಸದ್ದಿನಿಂದ ಪ್ರತೋಷನನ್ನು ನೆನಪಿಸಿಕೊಳ್ಳುತ್ತಾಳೆ)
ಪ್ರತೋಷನಿಗೆ ಬಹಳ ಅನುಭವವಿದೆ. (ನಾಚಿ ನಗುತ್ತಾಳೆ)
ಓಕ್ಕಾಕ: (ಗದ್ಗದಿತನಾಗಿ) ಶೀಲವತಿ..
ಶೀಲವತಿ: (ನಗುತ್ತಾ) ಏನು ಮಾಡಲಿ ಓಕ್ಕಾಕ.. ತುಂಬಿದ ಕೊಡದಂತೆ ತುಳುಕುತ್ತಿದ್ದೇನೆ.. ಇಷ್ಟೊಂದು ಸುಖ.. ಕಂಪನ.. ರೋಮಾಂಚನ.. ಹೊಸ ಅನುಭವ.. ತನು-ಮನಗಳ ಹೊಸಭಾಷೆ.. ನನ್ನ ಅನುಭವಗಳನ್ನು ಯಾರಿಗಾದರೂ ಹೇಳಬೇಕು.. ನನ್ನ ಉಲ್ಲಾಸವನ್ನು ಯಾರ ಮೇಲಾದರೂ ಚಿಮ್ಮಬೇಕೆನ್ನುತ್ತೇನೆ.. ಏನು ಮಾಡಲಿ? ಯಾರಿಗೆ ಹೇಳಲಿ? ಮಹತ್ತರಿಕಾ.. ಓ ವಿರಾಜನ ಸಂಗಾತಿಯೇ.. (ಕೂಗುತ್ತಾಳೆ).. ಸ್ವಲ್ಪ ಈ ಕಡೆ ಬಾ, ಪ್ರೇಮಪೂರ್ಣಳೇ.. ಓ ಕವಿತೆಯಾದವಳೇ..
ಅಲೇಖ್ಯಾ: ಅಮಾತ್ಯರು ಮತ್ತು ಸೇನಾಪತಿ ಬರುತ್ತಿದ್ದಾರೆ.
(ಅಮಾತ್ಯರು ಮತ್ತು ಸೇನಾಪತಿ ಪ್ರವೇಶ)
ಶೀಲವತಿ: ಓ.. ಅಮಾತ್ಯರೇ ಬನ್ನಿ ಬನ್ನಿ.. (ಸರಸಧ್ವನಿ) ಹೇಳಿ.. ನಿಮ್ಮ ರಾತ್ರಿ ಹೇಗೆ ಕಳೆಯಿತು?
ಅಮಾತ್ಯ: (ಬೆಚ್ಚಿ) ಮಹಾದೇವಿಯವರೆ!!
ಶೀಲವತಿ: ಹೇಳಿ! ನಾಚಬೇಡಿ.
ಓಕ್ಕಾಕ: (ತೀವ್ರವಾಗಿ) ಶೀಲವತಿ! ನೀನು ನಿನ್ನ ಹಿಡಿತದೊಳಗಿಲ್ಲ!
ಅಮಾತ್ಯ: (ಸಂಭಾಳಿಸಿಕೊಂಡು) ಮಹಾದೇವಿಯವರೇ... ಮರ್ಯಾದೆಯ ನಿಯಮವನ್ನು ಉಲ್ಲಂಘಿಸಬೇಡಿ.
ಶೀಲವತಿ: ಅದೇ ಸವಕಲು ಪದಗಳು. ಮರ್ಯಾದೆ. ನಿಯಮ. ಬಿಡಿ ನಿಮ್ಮೊಂದಿಗೇನು ಮಾತು.
(ಸೇನಾಪತಿಯ ಬಳಿಗೆ ಬಂದು) ಮ್ ಮ್.... ಸೇನಾಪತಿ. ಹೇಳಿ. ನಿಮ್ಮ ಪ್ರಕಾರ ಯುದ್ಧಭೂಮಿಯಲ್ಲಿ ವೈರಿಯನ್ನು ಸೋಲಿಸುವುದು ಗೆಲುವೋ ಅಥವಾ ಪ್ರಣಯದಲ್ಲಿ ಶರಣಾಗುವುದು ಗೆಲುವೋ?
ಸೇನಾಪತಿ: ಮಹಾದೇವಿಯವರೇ. ಮುಜುಗರಕ್ಕೀಡುಮಾಡಬೇಡಿ.
ಶೀಲವತಿ: ಅರೇ! ಮುಖ ತಗ್ಗಿಸುವಂತಹ ಮಾತು ನಾನೇನು ಹೇಳಿದೆ? ಸುಖ ನಮ್ಮ ಅಧಿಕಾರವಲ್ಲವೇ? ಸ್ತ್ರೀ ಇದರಿಂದ ಏಕೆ ವಂಚಿತಳಾಗಬೇಕು? ಅದೂ ಅವಳದ್ದಲ್ಲದ ತಪ್ಪಿಗೆ!?
ಅಮಾತ್ಯ: ಆದರೆ, ವೈವಾಹಿಕ ಬಂಧನದಲ್ಲಿ ಗೌರವಪೂರಕವಾಗಿ ಧರ್ಮವನ್ನು ಪಾಲಿಸಬೇಕಾಗುತ್ತದೆ. ಅದು ನಿಯಮ.
ಶೀಲವತಿ: ಈ ಪೊಳ್ಳು ಶಬ್ದಗಳ ಆಕರ್ಷಣೆ ಕಳಚಿಹೋಗಿದೆ ಅಮಾತ್ಯರೇ, ಸಾಕು ಮಾಡಿ! ಇದೆಲ್ಲವೂ ಆಡಂಬರ, ಗ್ರಾಂಥಿಕ, ನಾನು ಗ್ರಂಥವನ್ನು ಬದುಕಬೇಕಾಗಿಲ್ಲ. ಜೀವನವನ್ನು ಬದುಕಬೇಕಾಗಿದೆ. (ವ್ಯಂಗ್ಯವಾಗಿ) ನಿನ್ನೆ, ಗುರಿಯ ಬಗ್ಗೆ ಏನೋ ಹೇಳಿದಿರಿ. ಮತ್ತೊಮ್ಮೆ ಹೇಳಿ.
ಅಮಾತ್ಯ: ಅದು... ಹೋಗಲಿಬಿಡಿ.
ಶೀಲವತಿ: (ಕ್ರೋಧದಿಂದ) ಹೇಳಿ! ನಾನು ಮಹಾರಾಣಿ! ಆಜ್ಞೆ ಮಾಡುತ್ತಿದ್ದೇನೆ.
ಅಮಾತ್ಯ: ನೀವು ಧರ್ಮನಟಿಯಾಗಿ ಹೋದಾಗ, ಕೇವಲ ನಿಮ್ಮ ಗುರಿಯ ಬಗ್ಗೆ ಯೋಚಿಸಿ ಎಂದು ಹೇಳಿದ್ದೆ.
ಶೀಲವತಿ: ನೀವು ನಿಮ್ಮ ಪತ್ನಿಯ ಜೊತೆ ಮಲಗಿದಾಗ ಗುರಿಯ ಬಗ್ಗೆ ಯೋಚಿಸುತ್ತೀರಾ? ಅಮಾತ್ಯ ಪರಿಷತ್ತಿನ ಚುನಾವಣೆ.. ಗಡಿ ಸಂರಕ್ಷಣೆ… ಮೂರ್ಖರು ನೀವು! ಮಿಲನದ ಸಮಯದಲ್ಲಿ, ಮುಂಬರುವ ಸಂತಾನದ ಬಗ್ಗೆ ಯೋಚಿಸುವ ಹೆಣ್ಣು ನಿಮ್ಮ ಯಾವ ಪ್ರಪಂಚದಲ್ಲಿದ್ದಾಳೆ? ಸ್ತ್ರೀ - ಪುರುಷರ ಮಿಲನ ಪ್ರಾಕೃತಿಕ ಅನಿವಾರ್ಯ ಪ್ರಕ್ರಿಯೆ. ಮಾತೃತ್ವ ಅದರ ಗೌಣ ಉತ್ಪಾದನೆ ಮಾತ್ರ!
ಅಮಾತ್ಯ: ಮಹಾದೇವಿಯವರೇ, ತಾವು ಬಹಳ ದಣಿದಿದ್ದೀರಿ. ವಿಶ್ರಾಂತಿ ಪಡೆಯಿರಿ.
ಶೀಲವತಿ: ಈ ಹಗಲಿಡೀ ವಿಶ್ರಾಂತಿ ಪಡೆಯುವುದು ಇದ್ದೇ ಇದೆ. ರಾತ್ರಿ ಇಡೀ ಎಚ್ಚರವಾಗಿದ್ದೆನಲ್ಲ!
ಅಮಾತ್ಯ: ಈಗ ನಮಗೆ ಅಪ್ಪಣೆ ಕೊಡಿ. ಅಮಾತ್ಯ ಪರಿಷತ್ತು ತುಂಬ ಆತುರತೆಯಿಂದ ಶುಭ ಸಮಾಚಾರಕ್ಕಾಗಿ ಕಾದಿರುತ್ತದೆ.
ಸೇನಾಪತಿ: ನಮ್ಮ ರಾಜಸಿಂಹಾಸನಕ್ಕೆ ಒಬ್ಬ ಉತ್ತರಾಧಿಕಾರಿ ಬರಲಿ ಎಂದು ಇಡೀ ಮಲ್ಲರಾಜ್ಯ ಪ್ರಾರ್ಥಿಸುತ್ತದೆ. ಅಪ್ಪಣೆ.
(ಅಮಾತ್ಯ ಮತ್ತು ಸೇನಾಪತಿ ಹೊರಡಲನುವಾಗುತ್ತಿದ್ದಂತೆ ಶೀಲವತಿ ಅವರನ್ನು ತಡೆಯುತ್ತಾಳೆ.)
ಶೀಲವತಿ: ಸ್ವಲ್ಪ ನಿಲ್ಲಿ! ನನಗೆ ಮೂರು ಅವಕಾಶಗಳನ್ನು ನೀಡಬೇಕೆಂದು ಅಮಾತ್ಯ ಪರಿಷತ್ತು ನಿರ್ಣಯಿಸಿದೆಯಲ್ಲವೇ?
ಅಮಾತ್ಯ: ಹೌದು. ಮೂರು ಸಲ.
ಶೀಲವತಿ: ಹಾಗಿದ್ದರೆ ಈಗಲೇ ಹೋಗಿ ಘೋಷಿಸಿಬಿಡಿ - ಇಂದಿಗೆ ಸರಿಯಾಗಿ ಒಂದು ವಾರಕ್ಕೆ ಮಹಾರಾಣಿ ಶೀಲವತಿ ಧರ್ಮನಟಿಯಾಗಿ ಬರುವಳೆಂದು ಸಾರಿಬಿಡಿ.
ವೈದ್ಯ: ಕೆಲದಿನಗಳವರೆಗೆ ಕಾದಿದ್ದರೆ ಚೆನ್ನಾಗಿತ್ತು.
ಪುರೋಹಿತ: ಕಳೆದ ರಾತ್ರಿಯ ಪರಿಣಾಮವಾಗಿ.
ಶೀಲವತಿ: ರಾತ್ರಿಯ ಪರಿಣಾಮವಾಗುವುದಿಲ್ಲ ಪುರೋಹಿತರೇ, ನನ್ನ ಉಪಪತಿ ನನಗೊಂದು ನಿರೋಧಕ ಔಷಧಿ ಕೊಟ್ಟಿದ್ದಾರೆ. ಮುಂದಿನ ಸಲವೂ ಕೊಡುತ್ತಾರೆ.
ಓಕ್ಕಾಕ: (ಶೀಲವತಿಯನ್ನು ನೆಟ್ಟದೃಷ್ಟಿಯಿಂದ ನೋಡುತ್ತಾ) ರಾಣಿ ಧರ್ಮನಟಿಯಾಗಿ ಹೋಗಿದ್ದಳು. ಕಾಮನಟಿಯಾಗಿ ಮರಳಿದ್ದಾಳೆ.
ಶೀಲವತಿ: ಹರಿಯುವ ನದಿ ತನ್ನ ಪಾತ್ರವನ್ನು ತಾನಾಗಿ ಹುಡುಕಿಕೊಳ್ಳುತ್ತದೆ ಓಕ್ಕಾಕ.
(ಓಕ್ಕಾಕನಿಗೆ ವಂದಿಸಿ, ಅಮಾತ್ಯ ಪರಿಷತ್ತು ನಿರ್ಗಮಿಸುತ್ತಾರೆ.)
ಓಕ್ಕಾಕ: ನೀನು ನಿನ್ನ ಸ್ವಾರ್ಥಕ್ಕಾಗಿ ಇಷ್ಟು ದೂರ ಹೋಗಬಲ್ಲೆಯಾ?
ಶೀಲವತಿ: ಸ್ವಾರ್ಥ?! (ವ್ಯಂಗ್ಯನಗು) ಸಾಮರ್ಥ್ಯವಿಲ್ಲದಿದ್ದರೂ ಮದುವೆಯಂತಹ ಪಾಪದ ಕಾರ್ಯವನ್ನು ಮಾಡಿದ್ದೀರಲ್ಲ... ನೀವೆಂಥ ಪರಮಾರ್ಥಿಗಳು? ನಿಮಗೆ ರಾಜವೈದ್ಯರು ಹೇಳಿದ್ದರಲ್ಲವೇ... ಕಾಮದ ಸಂಪೂರ್ಣ ಉಷ್ಣತೆಯೊಂದಿಗೆ ಹೆಣ್ಣು ನಿಮ್ಮನ್ನು ಆಹ್ವಾನಿಸಿದ ಆ ಕ್ಷಣದಲ್ಲಿ ತಾನಾಗಿಯೇ... ಅಂದರೆ, ನಾನು ನಿಮ್ಮ ಪಾಲಿಗೆ ಕೇವಲ ಮೂಲಿಕೆಯೇ? ಔಷಧಿಯೇ? ಕೇವಲ ಒಂದು ಉಪಚಾರವೇ? ಒಂದು ವೇಳೆ ಈ ಚಿಕಿತ್ಸೆ ವ್ಯರ್ಥವಾದರೆ, ಈ ಜೀವಂತ ಮೂಲಿಕೆಯ ಸ್ಥಿತಿ ಏನಾಗುತ್ತದೆ ಎಂಬುದನ್ನು ನೀವು ಯೋಚಿಸಲಿಲ್ಲ!ಹೇಳಿ... ಯಾರು ಸ್ವಾರ್ಥಿಗಳು? ನಾನೋ? ನೀವೋ? ಈ ವ್ಯವಸ್ಥೆಯೋ? ಅಥವಾ ಈ ಪುರುಷ ಪ್ರಧಾನ ಸಮಾಜವೋ? ಉತ್ತರ ಹುಡುಕಿಕೊಳ್ಳಿ!
(ಶೀಲವತಿ ನಿರ್ಗಮಿಸುತ್ತಾಳೆ.)
ಓಕ್ಕಾಕ: (ರಂಗದ ಮಧ್ಯೆ ಕುಸಿಯುತ್ತಾ) ನನ್ನನ್ನು ಕ್ಷಮಿಸು ಶೀಲವತಿ... ನನ್ನನ್ನು ಕ್ಷಮಿಸು. ಇಲ್ಲಿ ಯಾರೂ ಸಂಪೂರ್ಣ ಪುರುಷರಲ್ಲ. ಯಾರೂ ಸಂಪೂರ್ಣ ಪುರುಷರಲ್ಲ!
(ಕತ್ತಲಾಗುತ್ತದೆ)
(ಬೆಳಗಾಗುತ್ತದೆ)
(ಡಂಗುರದವನು ಹಿನ್ನೆಲೆಯಲ್ಲಿ ಸಾರುತ್ತಾನೆ. ಎಲ್ಲ ಕಲಾವಿದರು ಸಾಲಾಗಿ ರಂಗದ ಮೇಲೆ ಬರುತ್ತಾರೆ.)
ಡಂಗುರದವನು: ಕೇಳಿರಿ ಕೇಳಿರಿ, ಮಲ್ಲರಾಜ್ಯದ ಪ್ರತಿಯೊಬ್ಬ ನಾಗರೀಕನಿಗೂ ಈ ಮೂಲಕ ತಿಳಿಸುವುದೇನೆಂದರೆ… ಇಂದಿನಿಂದ ಸರಿಯಾಗಿ ‘ಒಂದು ವಾರಕ್ಕೆ’, ಸಾಯಂಕಾಲ... ಮಹಾರಾಣಿ ಶೀಲವತಿಯವರು, ಧರ್ಮನಟಿಯಾಗಿ, ರಾಜ ಪ್ರಾಂಗಣದಲ್ಲಿ ಬರುತ್ತಾರೆ. ಮಲ್ಲರಾಜ್ಯದ ಪ್ರತಿಯೊಬ್ಬ ನಾಗರೀಕನಿಗೂ ಇಚ್ಛುಕನಾಗಿ ಬರಲು ಆಮಂತ್ರಣವಿದೆ. ಮಹಾರಾಣಿ ಶೀಲವತಿಯವರು, ತಮ್ಮ ಇಷ್ಟದಂತೆ ಬೇಕಾದ ಒಬ್ಬ ನಾಗರೀಕನನ್ನು ಒಂದು ರಾತ್ರಿಯ ಮಟ್ಟಿಗೆ, ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ತಮ್ಮ ಉಪಪತಿಯನ್ನಾಗಿ ಆಯ್ದುಕೊಳ್ಳುತ್ತಾರೆ.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಅಸ್ಮಿತೆಯ ಪ್ರಶ್ನೆ
ಇದು ೧೦ನೇ ಶತಮಾನದ ಮಲ್ಲರಾಜ್ಯದ ರಾಜನ ಕಥೆ. ವರ್ಷಗಳೇ ಕಳೆದರೂ ರಾಜನಿಗೆ ಮಕ್ಕಳಾಗದೇ ರಾಜಸಿಂಹಾಸನಕ್ಕೆ ಉತ್ತರಾಧಿಕಾರಿ ಸಿಗುವ ಸಂಭವ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ, ನೆರೆಯ ರಾಜ್ಯಗಳ ರಾಜರು ಮಲ್ಲರಾಜ್ಯವನ್ನು ಕಬಳಿಸುವ ಯತ್ನಗಳನ್ನು ಮಾಡತೊಡಗುತ್ತಾರೆ. ಮಲ್ಲರಾಜ್ಯದ ಅಮಾತ್ಯ ಪರಿಷತ್ತು ವೈರಿಗಳ ಯತ್ನಗಳನ್ನು ವಿಫಲಗೊಳಿಸಲು ‘ನಿಯೋಗ’ ಪದ್ಧತಿಯ ಮೂಲಕ ರಾಜಸಿಂಹಾಸನಕ್ಕೆ ಉತ್ತರಾಧಿಕಾರಿಯನ್ನು ಪಡೆಯುವ ಯೋಜನೆ ರೂಪಿಸುತ್ತದೆ. ಈ ಯೋಜನೆ ಮಹಾರಾಣಿ ಶೀಲವತಿ ಮತ್ತು ಮಹಾರಾಜ ಓಕ್ಕಾಕನ ಅಸ್ತಿತ್ವಗಳನ್ನೇ ಬುಡಮೇಲು ಮಾಡುತ್ತದೆ.
ಈ ನಾಟಕದ ವಸ್ತು ಹೆಣ್ಣಿನ ಅಸ್ಮಿತೆಯನ್ನು ಪ್ರಶ್ನಿಸುತ್ತದೆಯಲ್ಲದೇ ಅಂದಿನ ಹಾಗೂ ಇಂದಿನ ಸಾಮಾಜಿಕ ಮತ್ತು ರಾಜಕೀಯ ಸಂಕೀರ್ಣತೆಯನ್ನು ಚರ್ಚಿಸುತ್ತದೆ. ಇದಲ್ಲದೇ ಪುರುಷ ಮತ್ತು ಸ್ತ್ರೀಯರ ಭಿನ್ನತೆ ಮತ್ತು ಅಪೂರ್ಣತೆಯ ಮೂಲಕ ಪೂರ್ಣತೆಯನ್ನು ಪಡೆಯುವ ಅವರ ಆಂತರಿಕ ಹೋರಾಟವನ್ನು ವಿಶ್ಲೇಷಿಸುತ್ತದೆ.
ಶೋಷಣೆ ಅಂದಕೂಡಲೇ ನಮ್ಮ ಕಲ್ಪನೆಯಲ್ಲಿ ಬರುವುದು ಹೆಣ್ಣುಮಕ್ಕಳ ಶೋಷಣೆ. ನೂರಾರು ವರ್ಷಗಳಿಂದಲೂ ಈ ಪುರುಷ ಪ್ರಧಾನ ಸಮಾಜದ ಏಳಿಗೆಗಾಗಿ ‘ಮಹಿಳೆಯರ ಅಸ್ಮಿತೆ’ ಬಲಿಯಾಗುತ್ತಿರುವುದು ನಾವು ‘ಕೆರೆಗೆ ಹಾರ’ದಂತಹ ಜಾನಪದ ಕಥೆಗಳಲ್ಲಿ, ಮಾಸ್ತಿಕಲ್ಲುಗಳ ದಾಖಲೆಗಳಲ್ಲಿ, ಕೆಲವು ಧಾರ್ಮಿಕ ಆಚರಣೆಗಳಲ್ಲಿ, ಸಾಹಿತ್ಯ, ಸಂಸ್ಕೃತಿ ಮತ್ತು ಇನ್ನೂ ಅನೇಕ ಸಾಮಾಜಿಕ ಪದರಗಳಲ್ಲಿ ಕಾಣುತ್ತಾ ಬಂದಿದ್ದೇವೆ. ಕಾಲಕಾಲಕ್ಕೂ ಇದರ ಬಣ್ಣ, ಸ್ವರೂಪ ಬದಲಾಗುತ್ತಾ ಬಂದಿದೆ. ಈ ಆಧುನಿಕ ಯುಗದಲ್ಲೂ ಲಿಂಗತಾರತಮ್ಯ ಅವ್ಯಾಹತವಾಗಿ ನಡೆದೇ ಇದೆ. ಇದು ಅಗೋಚರವಿರಬಹುದು, ಆದರೆ ಇದರ ಪರಿಣಾಮ ಸ್ಪಷ್ಟವಾಗಿ ಗೋಚರವಾಗುತ್ತದೆ. ಒಂದು ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳನ್ನು ಹಡೆಯುವ ಹೆಣ್ಣಿಗೆ, ಅದರಲ್ಲೂ ‘ಗಂಡು’ ಮಕ್ಕಳನ್ನು ಹಡೆಯುವ ಹೆಣ್ಣಿಗೆ, ಎಲ್ಲಿಲ್ಲದ ಆದರ, ಗೌರವ. ಪುರುಷ ಲೋಕದ ವೃದ್ಧಿಗಾಗಿ, ಶಕ್ತಿಗಾಗಿ ಆಕೆ ಗಂಡುಮಕ್ಕಳನ್ನು ಹಡೆಯಲೇಬೇಕೆಂಬ ಅಲಿಖಿತ ನಿಯಮ. ಈ ಕಾರಣದಿಂದ ಇಂದಿಗೂ ಹೆಣ್ಣುಭ್ರೂಣ ಹತ್ಯೆ ತೆರೆಮರೆಯಲ್ಲಿ ನಡೆಯುತ್ತಲೇ ಇದೆ. ಮಕ್ಕಳನ್ನು ಹಡೆಯುವ ನಿರ್ಧಾರ ಅಥವಾ ಇಚ್ಛೆ ಸಂಪೂರ್ಣವಾಗಿ ಆಕೆಯದ್ದೇ. ಸಾಮಾಜಿಕ ಮತ್ತು ಅರ್ಥಿಕ ಹಿನ್ನೆಲೆಯಲ್ಲಿ, ಮಕ್ಕಳು ಬೇಕು ಬೇಡ ಅನ್ನುವ ನಿರ್ಧಾರ ಆಕೆಯ ಹಕ್ಕು.
ಮೂಲಭೂತವಾಗಿ, ಪ್ರಾಕೃತಿಕವಾಗಿ ಮತ್ತು ಜೈವಿಕವಾಗಿ, ಹೆಣ್ಣಿನ ಮತ್ತು ಗಂಡಿನ ಸಾರ್ಥಕತೆ ಪರಸ್ಪರ ಲೈಂಗಿಕವಾಗಿ ಕೂಡುವುದೇ ವಿನಾ ಮಕ್ಕಳನ್ನು ಪಡೆಯುವ ಉದ್ದೇಶವಲ್ಲ. ಮಕ್ಕಳು ಇಂತಹ ಪ್ರಾಕೃತಿಕ ಸಹಜ ಮಿಲನದ ಗೌಣ ಉತ್ಪಾದನೆ ಮಾತ್ರ.
ಪ್ರಸ್ತುತ ನಾಟಕ ಧರ್ಮನಟಿಯಲ್ಲಿ, ಒಬ್ಬ ಹೆಣ್ಣು ಮಕ್ಕಳನ್ನು ಪಡೆಯುವ ಅಥವಾ ತಡೆಯುವ ಸ್ವಾತಂತ್ರ್ಯವನ್ನು ಅನುಭವಿಸುವ ಹಕ್ಕಿನ ವಿಶ್ಲೇಷಣೆ ಇದೆ. ಒಂದು ರಾಜ್ಯದ ಮಹಾರಾಣಿಗೆ ತನ್ನ ನಪುಂಸಕ ಗಂಡನಿಂದ ಮಕ್ಕಳಾಗದೇ ಇದ್ದಾಗ ಅನ್ಯ ಪುರುಷನ ಕೂಡಿಕೆಯಿಂದ ಮಕ್ಕಳನ್ನು ಪಡೆಯುವ ರಾಜತಾಂತ್ರಿಕ ನಿರ್ಧಾರದ ವಿರುದ್ಧ ಸೊಲ್ಲೆತ್ತುವ ಸಂದರ್ಭವಿದೆ.
ಸಾಮಾಜಿಕ ತಂತ್ರ-ಮಂತ್ರಗಳ ಅಧೀನರಾಗಿ ತಮ್ಮ ಅಸ್ತಿತ್ವವನ್ನು, ಬದುಕಿನ ಅರ್ಥವನ್ನು ಕಳೆದುಕೊಂಡು ಯಾಂತ್ರಿಕವಾಗಿ ಬದುಕುವುದನ್ನು ರೂಢಿ ಮಾಡಿಕೊಂಡ ಅನೇಕಾನೇಕ ಮಹಿಳೆಯರ ಪ್ರಾಕೃತಿಕ ಹಕ್ಕನ್ನು ಕಿತ್ತುಕೊಂಡವರಾರು? ಮಹಿಳೆಯರ ಮೌನದ ಚೀತ್ಕಾರಗಳನ್ನು ದಮನಿಸಿದರಾರು? ಈ ವಿಷ ವರ್ತುಲದಲ್ಲಿ ಸಿಕ್ಕಿಹಾಕಿಕೊಂಡ ಸಹೃದಯೀ ಗಂಡಸರ ಪರ ವಹಿಸುವವರಾರು? ಅಂಧ-ಧರ್ಮಾಚರಣೆ, ಸಾಮಾಜಿಕ ಅಸಮತೋಲನ, ಕರಾಳ ಆರ್ಥಿಕ ನೀತಿ, ರಾಜಕೀಯ ಹಿತಾಸಕ್ತಿ, ಇವುಗಳ ತುಳಿತಕ್ಕೊಳಪಟ್ಟ ಗಂಡಸರೂ ಶೋಷಿತರೇ!
ಇಲ್ಲಿ ಹೋರಾಟ ಇರುವುದು ಲಿಂಗಭೇದವನ್ನು ಮೀರಿ ಪುರುಷ ಮತ್ತು ಮಹಿಳೆಯ ಆಂತರಿಕ ತುಮುಲ ಮತ್ತು ವ್ಯವಸ್ಥೆಯ ವಿರುದ್ಧದ ಸಂಘರ್ಷದಲ್ಲಿ. ಇಂತಹ ಮಾನವೀಯ ಹೋರಾಟ ಮತ್ತು ತಾತ್ವಿಕ ಚರ್ಚೆಗೆ ನಿಲುಕುವ ಅನೇಕ ನಾಟಕಗಳನ್ನು ರಂಗರಥ ಸಂಸ್ಥೆ ನಿರ್ಮಿಸಿ ಪ್ರದರ್ಶಿಸುತ್ತಾ ಬಂದಿದೆ.
ಈ ‘ಧರ್ಮನಟಿ’ ನಾಟಕ ೧೦ನೇ ಶತಮಾನದ್ದೇ ಆದರೂ ಇದರಲ್ಲಿರುವ ಹೆಣ್ಣಿನ ಸಂಘರ್ಷ, ಆಕೆಯ ತಾಯ್ತನದ ಗ್ರಹಿಕೆ, ಗಂಡಸಿನ ಅಸಹಾಯಕತೆ ಇವತ್ತಿನ ಸಮಾಜದಲ್ಲೂ ಪ್ರಸ್ತುತ. ಈ ನಾಟಕದ ತಿರುಳು ಈಗಿನ ಅನೇಕ ಪುರುಷ ಮತ್ತು ಮಹಿಳೆಯರ ಪ್ರತಿಫಲನವೇ ಆಗಿದೆ.
ಈ ನಾಟಕದ ಮೂಲ ಕಥಾಹಂದರಕ್ಕೆ ಕಿಂಚಿತ್ತೂ ಧಕ್ಕೆ ಬಾರದ ಹಾಗೆ, ಈಗಿನ ಪೇಕ್ಷಕರ ಗ್ರಹಿಕೆಗೆ ಸುಲಭ ಆಗುವ ರೀತಿಯಲ್ಲಿ, ಕೆಲವು ಸೂಕ್ತ ಬದಲಾವಣೆಗಳನ್ನು ಮಾಡಿ, ಅರ್ಥಗರ್ಭಿತ ಹಾಡುಗಳನ್ನು ಸೇರಿಸಿ ಒಂದು ಸಂಗೀತಮಯ ವಾತಾವರಣವನ್ನು ಸೃಷ್ಟಿಮಾಡಲು ಪ್ರಯತ್ನಿಸಲಾಗಿದೆ.
ಟಿಕೆಟ್ಗಳು BookMyShowನಲ್ಲಿ ಲಭ್ಯ.