ಮಾತಿಲ್ಲದವರ ಮರುದನಿಯಾಗಿ ಕನ್ನಡಕ್ಕೆ ಬಂದ ಮೂಕನಾಯಕ
ಅಂಬೇಡ್ಕರ್ ಬರವಣಿಗೆ, ಸುದ್ದಿಪತ್ರಿಕೆಗಳ ರಾಜಕಾರಣ ಮತ್ತು ಅನುವಾದದ ಸವಾಲುಗಳ ಸುತ್ತ...
ಬಾಬಾಸಾಹೇಬ್ ಅಂಬೇಡ್ಕರ್ ಅವರು 105 ವರ್ಷಗಳ ಹಿಂದೆ ಆರಂಭಿಸಿದ್ದ ಮೂಕನಾಯಕ ಮರಾಠಿ ಪತ್ರಿಕೆಯ ಎಲ್ಲಾ ಸಂಪಾದಕೀಯ ಬರಹಗಳ ಸಂಗ್ರಹರೂಪವನ್ನು ರೇಣುಕಾ ನಿಡಗುಂದಿ ಮತ್ತು ರಮೇಶ ಅರೋಲಿ ಹಿಂದಿಯಿಂದ ಕನ್ನಡಕ್ಕೆ ತಂದಿದ್ದಾರೆ. ಮಾತಿಲ್ಲದವರ ದನಿಯಾಗಿ .. ಮೂಕನಾಯಕ ಎಂಬ ಈ ಕೃತಿಯು ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಲಿದ್ದು ಬಲುಬೇಗ ಕನ್ನಡಿಗರ ಕೈಸೇರಲಿದೆ. ಈ ಪುಸ್ತಕಕ್ಕಾಗಿ ಅನುವಾದಕರು ಬರೆದ ಮಾತುಗಳು ಅಂಬೇಡ್ಕರ್ ಮೂಕನಾಯಕ ಮತ್ತಿತರ ಪತ್ರಿಕೆಗಳನ್ನು ಆರಂಭಿಸಿದ ಹಿನ್ನೆಲೆ ಮತ್ತು ಅವರ ಉದ್ದಿಶ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಆ ಸುದೀರ್ಘ ಲೇಖನದ ಬಹುಪಾಲನ್ನು ಇಲ್ಲಿ ಪ್ರಕಟಿಸಿದ್ದೇವೆ. ಪುಸ್ತಕದ ಓದಿಗೆ ಇದು ಒಂದು ಒಳ್ಳೆಯ ಪ್ರವೇಶ ಕೊಡಲಿದೆ.
2016ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಷಯದ ಪಠ್ಯ ಪರಿಷ್ಕರಣೆ ಮಾಡಲು ಕೋರಲಾಗಿತ್ತು. ಆ ಹಿಂದಿನ ಪಠ್ಯದಲ್ಲಿ ಹಿಸ್ಟರಿ ಆಫ್ ಮೀಡಿಯಾ ಪತ್ರಿಕೆಯಲ್ಲಿ ಮುದ್ರಣ ಮಾಧ್ಯಮದ ಇತಿಹಾಸ ಸೇರಿದಂತೆ ಟೆಲಿಗ್ರಾಫ್, ಗ್ರಾಮಫೋನ್, ಟಿಲಿವಿಷನ್ ಮತ್ತಿತರೆ ಸಂವಹನ ಮಾಧ್ಯಮಗಳ ಅವಿಷ್ಕಾರದ ಜೊತೆಗೆ ಭಾರತದಲ್ಲಿ ಪತ್ರಿಕೆಗಳ ಇತಿಹಾಸವೂ ಸೇರಿತ್ತು. ಇದರಲ್ಲಿ ಭಾರತದ ಆರಂಭಿಕ ಪತ್ರಿಕೆಗಳು, ಸ್ವಾತಂತ್ರ್ಯಪೂರ್ವ-ಪತ್ರಿಕೆಗಳು ಮತ್ತು ಸ್ವಾತಂತ್ರ್ಯೋತ್ತರ-ಪತ್ರಿಕೆಗಳ ಇತಿಹಾಸ ಜೊತೆಗೆ ಅವುಗಳನ್ನು ಸಂಪಾದಿಸಿದವರ ಕುರಿತು ಬೋಧಿಸುವ ಅಗತ್ಯವಿತ್ತು. ಇದರಲ್ಲಿ ಟಿಳಕರಿಂದ ಹಿಡಿದು ಗಾಂಧೀವರೆಗೂ ಅವರು ಸಂಪಾದಿಸಿದ ಪತ್ರಿಕೆಗಳು ಮತ್ತು ಆ ಪತ್ರಿಕೆಗಳ ಮೂಲಕ ಅವರು ಜನಸಮೂಹವನ್ನು ತಲುಪಲು ಮಾಡಿದ ಪ್ರಯೋಗ ಇತ್ಯಾದಿಗಳ ಚರ್ಚೆ ಇತ್ತು. ಪಠ್ಯಪುಸ್ತಕ ಪರಿಷ್ಕರಣೆ ಸಮಯದಲ್ಲಿ ನಾವೊಂದಿಬ್ಬರು ಸದಸ್ಯರು ಅಂಬೇಡ್ಕರರ ಪತ್ರಿಕಾ ಪ್ರಯೋಗದ ಕುರಿತು ಪಠ್ಯದಲ್ಲಿ ಸೇರಿಸಬೇಕೆಂದು ಒತ್ತಾಯ ತಂದೆವು. ಆ ಸಮಿತಿಯಲ್ಲಿ ಇದ್ದ ಇನ್ನಿತರೆ ಸದಸ್ಯರ ಮೊದಲ ಪ್ರತಿಕ್ರಿಯೆ “ಅಂಬೇಡ್ಕರ್ರರು ಅಂಥಾ ಪತ್ರಿಕೆಗಳನ್ನೇನು ಸಂಪಾದಿಸಿಲ್ಲ. ಮತ್ತು ಅದರ ಬಗ್ಗೆ ಮಾಹಿತಿಯು ಎಲ್ಲೂ ಲಭ್ಯವಿಲ್ಲ,” ಎಂಬುದಾಗಿತ್ತು. “ಸಂಬಂಧಪಟ್ಟ ಮಾಹಿತಿ ನಾವು ಕೊಡುತೀವಿ, ಮೊದಲು ನೀವು ಸೇರಿಸಿ,” ಅಂತ ಒತ್ತಾಯ ತಂದ ಮೇಲೆ ಸೇರಿಸಲಾಯಿತು. ಚರಿತ್ರೆಯ ಪುಟಗಳ ಉದ್ದಕ್ಕೂ ಬಾಬಾಸಾಹೇಬ್ ಅಂಬೇಡ್ಕರರನ್ನು ಗುಮಾನಿಯಿಂದ ನೋಡುವಂತೆ ಮಾಡಿದ ಇತಿಹಾಸಕಾರರು, ಅವರ ಅಕ್ಷರ ಪ್ರೀತಿಯ ಬಗ್ಗೆ, ಅದರ ಪ್ರಾಮುಖ್ಯತೆ ಕುರಿತು ವಿವರವಾಗಿ ದಾಖಲಿಸಿದ ಉದಾಹರಣೆ ಕಡಿಮೆ.
ಹತ್ತೊಂಬತ್ತನೆಯ ಶತಮಾನದ ಮಧ್ಯದಲ್ಲಿ ಜ್ಯೋತಿಬಾ ಫುಲೆ ದಂಪತಿಗಳು ಸತ್ಯಶೋಧಕ್ ಸಮಾಜ್ದೊಂದಿಗೆ ಮರಾಠಿಯಲ್ಲಿ ಒಂದು ದೀನಬಂಧು ಎಂಬ ಪತ್ರಿಕೆಯನ್ನು ಸಹ ಆರಂಬಿಸಿದರು. ಫುಲೆಯವರಿಂದ ಪ್ರೇರಿತರಾದ ಮಾಜಿ ಮಹಾರ್ ಸೈನಿಕರಾದ ಗೋಪಾಳಬಾಬಾ ವಲಂಗಕರ್ 1888ರಲ್ಲಿ ವಿಠಲ್ ವಿಧ್ವಂಸಕ್ ಪತ್ರಿಕೆ ಶುರು ಮಾಡಿದರು. ಇದೊಂದು ಜಾತಿ ವ್ಯವಸ್ಥೆ ವಿರೋಧಿ ದನಿಯಂತೆ ಮೂಡಿತು. ಈ ಪತ್ರಿಕೆಗಳು ಭಾರತದಲ್ಲಿ ತಳಸಮುದಾಯಗಳ ಸಮಸ್ಯೆಗಳಿಗೆ ಮೀಸಲಾದ ಮೊಟ್ಟ ಮೊದಲ ಪತ್ರಿಕೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾದವು. ನಂತರ ಹಿಂದಿ ಭಾಷೆಯಲ್ಲಿ 1905ರ ಹೊತ್ತಿಗೆ ಸ್ವಾಮಿ ಅಛೂತಾನಂದರು ಅಛೂತ್ ಔರ್ ಆದಿ ಹಿಂದೂ ಪತ್ರಿಕೆ ಆರಂಭಿಸುತ್ತಾರೆ. ಅಪಾರ ಓದಿನ ಹಸಿವು ಇದ್ದ ಅಂಬೇಡ್ಕರರು ಈ ಸುಧಾರಕರ ಪತ್ರಿಕೆಗಳಿಂದ ಪ್ರಭಾವಿತರಾಗಿ ಅಲ್ಲದೇ ಅಸ್ಪೃಶ್ಯರ ಸಮಸ್ಯೆ ಕುರಿತು ಚರ್ಚಿಸಲು ತಮ್ಮ ವಿಚಾರಗಳನ್ನು ಜನಸಮೂಹಕ್ಕೆ ತಲುಪಿಸಲು ಬೇಕಾದ ಪತ್ರಿಕೆಗಳ ಅನಿವಾರ್ಯತೆಯ ಮನಗಂಡು 1920ರ ಜನವರಿ ತಿಂಗಳಲ್ಲಿ ಮೂಕನಾಯಕ, 1927 ಏಪ್ರಿಲ್ನಲ್ಲಿ ಬಹಿಷ್ಕೃತ ಭಾರತ, 1928ರ ಜೂನ್ ತಿಂಗಳಲ್ಲಿ ಸಮತಾ ಪತ್ರಿಕೆ ಮತ್ತು 1930ರಲ್ಲಿ ಜನತಾ ಎಂಬ ಪತ್ರಿಕೆಗಳನ್ನು ಆರಂಭಿಸಿ ಕೆಲಕಾಲವಾದರೂ ಅವುಗಳನ್ನು ಸಂಪಾದಿಸಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಕೊನೆಯ ದಿನಗಳಲ್ಲಿ ಬ್ರಿಟಿಷ್ ಸ್ವಾಮ್ಯದ ಪತ್ರಿಕೆಗಳನ್ನು ಒಳಗೊಂಡು ಎಲ್ಲರೂ ರಾಜಕೀಯ ಅಧಿಕಾರ ಹಸ್ತಾಂತರದ ಬಗ್ಗೆ, ರಾಷ್ಟ್ರವಾದದ ಚರ್ಚೆಯಲ್ಲಿ ತೊಡಗಿದ್ದರೆ ಅಂಬೇಡ್ಕರರು ತಮ್ಮ ಸಮುದಾಯಗಳಿಗೆ ಆ ಅಧಿಕಾರ ಹಸ್ತಾಂತರದಿಂದ ಏನೂ ಪ್ರಯೋಜನವಿಲ್ಲ ಎಂದು ನಂಬಿದ್ದರು. ಭಾರತೀಯ ಸಮಾಜದಲ್ಲಿ ಸಾಮಾಜಿಕ ಸ್ವಾತಂತ್ರ್ಯ, ಸ್ವಾಭಿಮಾನದ ಬದುಕು ಎಲ್ಲರಿಗೂ ದಕ್ಕಬೇಕು ಎಂದು ಬಲವಾಗಿ ವಾದಿಸುತ್ತಿದ್ದರು. ಈ ಮೇಲಿನ ಪತ್ರಿಕೆಗಳು ದೀರ್ಘಕಾಲ ಚಾಲ್ತಿಯಲ್ಲಿ ಇರಲಿಲ್ಲವಾದರೂ ಒಂದು ಭಿನ್ನ ರಾಜಕೀಯ ಆಲೋಚನೆಯನ್ನು, ಸಾಮಾಜಿಕ ವಾಸ್ತವವನ್ನು ಆ ಕಾಲದಲ್ಲಿ ದಾಖಲಿಸುವ ಅಗತ್ಯ ಮುಖವಾಣಿಗಳಂತೆ ಅಂಬೇಡ್ಕರರು ಇವುಗಳನ್ನು ಹೊರ ತಂದರು. ಪತ್ರಿಕೆಯೆಂಬುದೇ ಒಂದು ಬಂಡವಾಳದ ಸರಕು ಆದುದರಿಂದ ಅದಕ್ಕೆ ಬೇಕಾದ ಆರ್ಥಿಕ ನೆರವು ಹಿತೈಶಿಗಳಿಂದ ಪಡೆದು ಪತ್ರಿಕೆ ನಡೆಸಿದರು.
ಈ ಮೇಲಿನ ನಾಲ್ಕು ಪತ್ರಿಕೆಗಳಲ್ಲಿ ಹೆಚ್ಚು ಓದುಗರ, ಸಂಶೋಧಕರ ಗಮನ ಸೆಳೆದದ್ದು ಮೂಕ ನಾಯಕ ಪಾಕ್ಷಿಕ ಮತ್ತು ಬಹಿಷ್ಕೃತ ಭಾರತ. ಶತಮಾನಗಳಿಂದ ಮಾತು ಇದ್ದು, ಆಡಲಾರದ ಸಾಮಾಜಿಕ ವ್ಯವಸ್ಥೆಯಲ್ಲಿ ಉಸಿರು ಬಿಗಿ ಹಿಡಿದುಕೊಂಡು, ಜಾತಿ ತಾರತಮ್ಯದ ಎಲ್ಲಾ ಅವಮಾನಗಳನ್ನು ಸಹಿಸಿದ ಮೂಕಜನಗಳ ಮಾತಿನಂತೆ ಮೂಕನಾಯಕ ಹೊರಬರುತಿತ್ತು. ಪಾಂಡುರಂಗ ಭಟ್ಕರ್ ಇದರ ಮೊದಲ ಸಂಪಾದಕರಾಗಿದ್ದರು. ತಮ್ಮ ಪತ್ರಿಕೆ ಮೂಕನಾಯಕದ ಆರಂಭದ ಕುರಿತು ಒಂದು ‘ಪೇಡ್ ಅಡ್ವರ್ಟೈಸ್ಮೆಂಟ್’ ಪ್ರಕಟಿಸಲು ಬಾಂಬೆ ಕ್ರಾನಿಕಲ್ ಮತ್ತು ಕೇಸರಿಯಂತಹ ಪತ್ರಿಕೆಗಳನ್ನು ಕೇಳಿಕೊಂಡರೂ ಯಾರೂ ಇದರ ಕುರಿತು ಎರಡು ಅಕ್ಷರ ಬರೆಯಲಿಲ್ಲ. ರಾಷ್ಟ್ರವಾದಕ್ಕೆ ಮೀಸಲಿದ್ದವಾದರೂ ಬ್ರಾಹ್ಮಣ ಸಮುದಾಯದ ಜಾಹೀರಾತು, ಧಾರ್ಮಿಕ ಸಾಹಿತ್ಯ ಕುರಿತಾದ ಸೂಚನೆಗಳನ್ನು ಪ್ರಕಟಿಸುತ್ತಿದ್ದವು. ಇದರಿಂದ ರೋಸಿ ಹೋದ ಅಂಬೇಡ್ಕರರು ತಾವು ಜಾಹೀರಾತು ರಹಿತ ಪತ್ರಿಕೆ ತರಲು ನಿರ್ಧಾರ ಮಾಡಿದರು. ಮೂಕ ನಾಯಕ ಪತ್ರಿಕೆಗೆ ಕೊಲ್ಹಾಪೂರದ ಷಾಹು ಮಹಾರಾಜರ ಆರ್ಥಿಕ ನೆರವು ಇತ್ತು. ಇದರ ಜೊತೆಯಲ್ಲೇ ಅವರು ಬಹಿಷ್ಕೃತ ಹಿತಕಾರಣಿ ಸಭಾವನ್ನು ಆರಂಭಿಸಿದರು.
ಇನ್ನು ಬಹಿಷ್ಕೃತ ಭಾರತದಲ್ಲಂತೂ ಈ ನೆಲವನ್ನು ‘ಭಾರತಮಾತೆ’ ಎಂದು ಹಾಡಿ ಹೊಗಳಿ, ಜನರನ್ನು ಪಶುಗಳಂತೆ ಹಲವು ಜಾತಿಗಳಾಗಿ ವಿಂಗಡಿಸಿ ಅದರ ಲಾಭ ಪಡೆಯುತ್ತಿದ್ದ ಚಾತುರ್ವರ್ಣ ವ್ಯವಸ್ಥೆಯ ಬ್ರಾಹ್ಮಣರ ಒಳಸಂಚನ್ನು ಧಿಕ್ಕರಿಸಿದಷ್ಟೇ ದಿಟ್ಟವಾಗಿ ‘ಪುಣ್ಯಭೂಮಿ’, ‘ಪವಿತ್ರ ನದಿ’ಗಳ ನೆಲ ಅಂದವರಿಗೆ ರಪ್ಪನೆ ಕೆನ್ನೆಗೆ ಬಾರಿಸುವಂತೆ ಇಲ್ಲೊಂದು ಹೊರಹಾಕಲ್ಪಟ್ಟ, ಬಹಿಷ್ಕರಿಸಲ್ಪಟ್ಟ ಭಾರತ ಇರುವುದನ್ನು ತಮ್ಮ ಸಂಪಾದಕೀಯಗಳಲ್ಲಿ ವಿವರವಾಗಿ ಬರೆಯುತ್ತಿದ್ದರು. ಇಂಗ್ಲಿಷ್ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರೂ ಓದಿ ಬರೆಯಬಲ್ಲವರಾಗಿದ್ದರೂ ಅಂಬೇಡ್ಕರರು ಮರಾಠಿ, ಹಿಂದಿಯಲ್ಲೇ ಪತ್ರಿಕೆ ಹೊರಡಿಸಿದ ಕಾರಣ ಹೆಚ್ಚಿನ ಜನರಿಗೆ ತಮ್ಮ ವಿಚಾರಗಳು ತಲುಪಲಿ ಎಂಬ ಉದ್ಧೇಶದಿಂದ. 1927ರಿಂದಲೂ ಬಹಿಷ್ಕೃತ ಭಾರತದ ಸಂಪಾದಕರಾಗಿದ್ದ ಬಾಬಾಸಾಹೇಬರು ಈ ಪತ್ರಿಕೆಯಲ್ಲಿ ಸಾಮಾಜಿಕ, ರಾಜಕೀಯ, ಸಾಹಿತ್ಯಿಕ, ಧಾರ್ಮಿಕ ವಿಷಯಗಳ ಕುರಿತು ಲೇಖನ ಪ್ರಕಟಿಸುತ್ತಿದ್ದರು. ಇದರಲ್ಲಿ ಬೌದ್ಧಿಕ, ತಾರ್ಕಿಕ ವಿಚಾರಗಳ ಚರ್ಚೆಯ ಜೊತೆಗೆ ಸಮಕಾಲೀನ ಚಳವಳಿಗಳ ಕುರಿತಾದ ವಿಸ್ತೃತ ವರದಿಗಳು ಪ್ರಕಟವಾಗುತಿದ್ದವು. 1927, ಜುಲೈ 1ನೆಯ ತಾರೀಖಿನ ಸಂಪಾದಕೀಯದಲ್ಲಿ ಅಂಬೇಡ್ಕರರು ಹೀಗೆ ಬರೆಯುತ್ತಾರೆ:
ಬ್ರಾಹ್ಮಣವಾದದಿಂದಾಗಿ ಹಿಂದೂ ಸಮಾಜಕ್ಕೆ ಅತ್ಯಂತ ನಷ್ಟವಾಗಿದೆ. ಇದು ಸತ್ಯ. ಬ್ರಾಹ್ಮಣವಾದದಿಂದಾಗಿ ಬ್ರಾಹ್ಮಣೇತರ ಜನ ಸಮುದಾಯಗಳನ್ನು ಕತ್ತಲಕೂಪದಲ್ಲಿಟ್ಟು ಅನಕ್ಷರಸ್ಥರು ಮತ್ತು ಅಜ್ಞಾನಿಗಳನ್ನಾಗಿ ಮಾಡಿದ್ದಾರೆ. ವೇದದಂತಹ ಧಾರ್ಮಿಕ ಗ್ರಂಥಗಳ ಓದನ್ನೇ ನಿಷೇಧಿಸಲಾಗಿದೆ. ಹುಟ್ಟಿನಿಂದಲೇ ಶ್ರೇಷ್ಠ-ಕನಿಷ್ಠ ಎಂಬ ಬೇದವನ್ನು ರೂಪಿಸಿದ ಪರಿಣಾಮ, ವ್ಯಕ್ತಿಯ ವ್ಯಕ್ತಿತ್ವದ ಉನ್ನತಿ ಮತ್ತು ಸುಧಾರಣೆಗೆ ಅವಕಾಶವೆ ಇಲ್ಲದಂತೆ ಮಾಡಲಾಗಿದೆ. ಓದಲು ಅನುವು ಮಾಡಿಕೊಡದೆ, ಜ್ಞಾನದ, ವಿಚಾರದ ಮಾರ್ಗಗಳನ್ನೇ ಮುಚ್ಚಿಬಿಟ್ಟರು. ಅಸ್ಪೃಶ್ಯತೆಯ ಕಲ್ಪನೆ ಬಿತ್ತಿ ಅದನ್ನು ಪ್ರಚಾರ ಮಾಡಿ, ಮನುಷ್ಯತ್ವದಂತಹ ಅಮೂಲ್ಯವಾದ ಮೌಲ್ಯದಿಂದ ಜನರನ್ನು ದೂರ ಉಳಿಸಿದರು.
ಹೀಗೆ ಮನುಷ್ಯರು ಮುಕ್ತವಾಗಿ ಜೀವಿಸುವ, ಆಲೋಚಿಸುವ ಮೂಲಭೂತ ಹಕ್ಕುಗಳಿಗೆ ಬ್ರಾಹ್ಮಣವಾದ ಹೇಗೆಲ್ಲ ಅಡ್ಡಿ ಉಂಟು ಮಾಡಿದೆ ಎಂಬುದನ್ನು ವಿವರಿಸಿದ್ದಾರೆ.
4ನೆಯ ಸೆಪ್ಟೆಂಬರ್ 1927ರಲ್ಲಿ ಸ್ಥಾಪನೆಯಾದ ಸಮಾಜ್ ಸಮತಾ ಸಂಘ್ನ ಕಾರ್ಯ ಚಟುವಟಿಕೆಗಳ ಭಾಗವಾಗಿ ಜೂನ್ 29, 1928ರಲ್ಲಿ ಸಮತಾ ಪತ್ರಿಕೆಯನ್ನು ಆರಂಭಿಸುತ್ತಾರೆ. ಈ ಪತ್ರಿಕೆಯ ಉದ್ಧೇಶ ತುಂಬ ಸ್ಪಷ್ಟವಾಗಿರುತ್ತದೆ. ಮಹಾಡ್ ಸತ್ಯಾಗ್ರಹ, ಮಂದಿರ ಪ್ರವೇಶ, ಅಸ್ಪೃಶ್ಯತೆಯ ನಿರ್ಮೂಲನೆ, ಸ್ತ್ರೀ ಸ್ವಾತಂತ್ರ್ಯ, ಅಸ್ಪೃಶ್ಯರಿಗೆ ಶಿಕ್ಷಣ ಮತ್ತು ಅಂತರ್ಜಾತಿ, ಅಂತರ್ಧರ್ಮೀಯ ವಿವಾಹಗಳನ್ನು ಪ್ರೋತ್ಸಾಹಿಸುವ ಅನೇಕ ಸಮಾಜಮುಖಿ ಕೆಲಸಗಳತ್ತ ತೊಡಗಿಕೊಳ್ಳುವುದು. ಒಂದರ್ಥದಲ್ಲಿ ವಿಚಾರಕ್ಕೆ, ವಾದಕ್ಕೆ ಸೀಮಿತಗೊಂಡಿದ್ದ ಈ ಮುಂಚಿನ ಪತ್ರಿಕೆಗಳಿಗಿಂತ ಸಮತಾ ಮೂಲಕ ಪ್ರಾಯೋಗಿಕವಾಗಿ ಚಳವಳಿಗಳನ್ನು ರೂಪಿಸುವಲ್ಲಿ ಹೆಚ್ಚು ತೊಡಗಿಸಿಕೊಂಡರು.
ಇನ್ನು 1930 ನವೆಂಬರ್ನಲ್ಲಿ ಅಂಬೇಡ್ಕರರು ಆರಂಭಿಸಿದ ಜನತಾ ಪತ್ರಿಕೆಯಲ್ಲಿ ಜಾತಿ ನಿರ್ಮೂಲನೆ ಕುರಿತಾದ ಸುದೀರ್ಘ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಅಂತಹ ಲೇಖನಗಳ ಬರೆಯುವ ಮೂಲಕ ದೇಶದ ನಾನಾ ಪ್ರಾಂತ್ಯಗಳಲ್ಲಿ ಅದರ ಕುರಿತು ಚರ್ಚೆ ಆಗುವಂತೆ ಮಾಡಿದರು. ಇದನ್ನು ಒಂದರ್ಥದಲ್ಲಿ ಗಾಂಧಿಯವರ ಹರಿಜನ ಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ಲೇಖನಗಳಿಗೆ ಮತ್ತು ಅವರ ‘ಅಸ್ಪೃಶ್ಯತಾ ನಿರ್ಮೂಲನ’ದ ಮಾರ್ಗಗಳು ಮತ್ತು ಅದರ ಸಂಬಂಧಿ ಚಳವಳಿಗೆ ಸವಾಲಿನಂತೆ ನೋಡಲಾಯಿತು. ಏಕೆಂದರೆ ಅಂಬೇಡ್ಕರರ ಪ್ರಕಾರ ಜಾತಿಯ ಶ್ರೇಣೀಕರಣ ನಿರ್ಮಾಣಗೊಂಡಿದ್ದೇ ಹಿಂದೂಧರ್ಮದ ವೇದಗಳಿಂದ, ಚಾತುರ್ವರ್ಣ ವ್ಯವಸ್ಥೆಯಿಂದ. ಹಾಗಾಗಿ ಆ ಶ್ರೇಣಿಯ ಬೇರನ್ನು ಅಲುಗಿಸದೆ, ಜಾತಿಯ ಟೊಂಗೆಯನ್ನು ಮತ್ತು ಅದು ಬಿಡುವ ಅಸ್ಪೃಷ್ಯತೆಯ ದುರ್ಗಂಧದ ಹೂವನ್ನು ಕೀಳಲಾಗದು ಎಂದಾಗಿತ್ತು. ಆದರೆ ಗಾಂಧೀಜಿ ಗೆ ಶ್ರೇಣಿಯನ್ನು ಕದಲಿಸದೆ, ಜಾತಿ ವ್ಯವಸ್ಥೆಯನ್ನು ಕೆಡಿಸದೆ ಕೇವಲ ಮೇಲ್ಜಾತಿ ಜನರ ಮನಪರಿವರ್ತನೆಯ ಮೂಲಕ ಅಸ್ಪೃಶ್ಯತೆಯನ್ನು ಕೊನೆಗಾಣಿಸಬೇಕೆಂಬುದಾಗಿತ್ತು. ಹಾಗಾಗಿ ಅವರು ತಮ್ಮ ಹರಿಜನ (11-2-1933), ಇಂಗ್ಲಿಷ್ ಆವೃತ್ತಿಯಲ್ಲಿ ಮತ್ತು ಒಂದು ವಾರದ ನಂತರ ಹರಿಜನ ಹಿಂದಿ ಆವೃತ್ತಿಯಲ್ಲಿ ಅಂಬೇಡ್ಕರರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸುವ ಮೂಲಕ ಜಾತಿ-ವರ್ಣ ವ್ಯವಸ್ಥೆಯ ಕುರಿತಾದ ಚರ್ಚೆಗೆ ಇಂಬು ಕೊಟ್ಟರು. ಹೀಗೆ ಇಬ್ಬರು ಜನನಾಯಕರ ನಡುವಣ ವಿಚಾರ ಮಂಡನೆಗೆ, ವಾಗ್ವಾದಕ್ಕೆ ಪತ್ರಿಕೆಗಳು ಸಾಕ್ಷಿಯಾದವು. ಈ ಚರ್ಚೆ, ಭಿನ್ನ ವಿಚಾರಗಳ ವಿರೋಧದ ಆಚೆಗೆ, ಒಂದು ಹಂತಕ್ಕೆ ಗಾಂಧೀಯ ಅನುಯಾಯಿಗಳು ಅಂಬೇಡ್ಕರರನ್ನು ಗಾಂಧೀಯವರ ಶತ್ರುವಿನಂತೆ ಕಾಣುವಂತೆ ಮಾಡಿತು. ನಂತರ 1956 ಫೆಬ್ರವರಿಯಲ್ಲಿ ಇದೇ ಪತ್ರಿಕೆ ಪ್ರಬುದ್ಧ ಭಾರತ ಎಂಬ ಹೊಸ ಹೆಸರಿನ ಅಡಿಯಲ್ಲಿ ಪುನಃ ಆರಂಭವಾಯಿತು.
1943ರಲ್ಲಿ ಪೂನಾದಲ್ಲಿ ನಡೆದ ಗೋವಿಂದ ರಾನಡೆಯವರ 101ನೆಯ ಜಯಂತಿ ಸಮಾರೋಪ ಸಮಾರಂಭದ ಪ್ರಯುಕ್ತ ಅಂಬೇಡ್ಕರರು ಮಂಡಿಸಿದ ರಾನಡೆ, ಗಾಂಧಿ ಮತ್ತು ಜಿನ್ನಾ ಪ್ರಬಂಧದಲ್ಲಿ ಹೇಳಿದಂತೆ:
ಭಾರತದಲ್ಲಿ ಪತ್ರಿಕಾರಂಗವು ಒಂದು ಕಾಲಕ್ಕೆ ವ್ಯವಸಾಯವಾಗಿತ್ತು. ಆದರೆ ಈಗ ಅದು ವ್ಯಾಪಾರವಾಗಿದೆ. ಹೀಗಾಗಿ ನೈತಿಕ ಜವಾಬ್ದಾರಿ ಇಲ್ಲದೆ ಅಧಃಪತನಕ್ಕೆ ಇಳಿದಿವೆ. ಜನರಿಗೆ ತಾವು ಜವಾಬ್ದಾರರು, ಅವರಿಗೆ ಸಲಹೆಗಾರರು ಎಂಬುದನ್ನು ಮರೆತಿವೆ. ಭಾರತದ ಪತ್ರಿಕೆಗಳು ಸಮಾಜದ ಹಿತ ಬಯಸುವವರಂತೆ ಕೆಲಸ ಮಾಡಲು, ಎಂಥ ಉನ್ನತ ಪದವಿಯಲ್ಲಿದ್ದವರೂ ತಪ್ಪು ಮಾಡಿದರೆ ಅದನ್ನು ಜನರಿಗೆ ತಿಳಿಯಪಡಿಸುವ ನೀತಿಯನ್ನು ರೂಪಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಬರಿ ವ್ಯಕ್ತಿಪೂಜೆಗೆ ತಮ್ಮನ್ನು ಮೀಸಲಿರಿಸಿಕೊಂಡು ದೇಶದ ಹಿತವನ್ನು ಬಲಿಕೊಡುವುದಕ್ಕೆ ಹಿಂಜರಿಯದ ಹಂತಕ್ಕೆ ತಲುಪುವ ಅಪಾಯವಿದೆ. ಸಂಘಟಿತ ರೂಪದಲ್ಲಿರುವ ಬಂಡವಾಳದ ಗಾಳಕ್ಕೆ ಸಿಲುಕಿ ತಮ್ಮ ಪತ್ರಿಕಾಧರ್ಮವನ್ನೇ ಮರೆತುಬಿಡುವ ಹಂತಕ್ಕೆ ಬರಬಹುದು....
ಈ ವಾಸ್ತವ ನಮ್ಮ ಕಣ್ಣೆದುರೇ ಇದೆ.
ಹೀಗೆ ಅಂಬೇಡ್ಕರರು ತಮ್ಮ ರಾಜಕೀಯ ವಿಚಾರಗಳನ್ನು ಮಂಡಿಸಲು, ತಳಸಮುದಾಯಗಳ ಹಿತ ಕಾಯಲು ಸದಾ ಬರವಣಿಗೆಯನ್ನು ನೆಚ್ಚಿಕೊಂಡಿದ್ದರು. ದಾಖಲೆಗೊಂಡ ಅವರ ವಿಚಾರಗಳೇ ಇಂದು ದಾರಿದೀಪಗಳಾಗಿ ಶೋಷಿತ ವರ್ಗಗಳಿಗೆ ಉಳಿದಿವೆ. ಇಷ್ಟೆಲ್ಲ ಪತ್ರಿಕೆಗಳನ್ನು ಆರಂಭಿಸುವ ಅಗತ್ಯ ಬಿದ್ದಿದ್ದು ಯಾಕೆಂದರೆ ಅಂದು, ಅಂಬೇಡ್ಕರರ ವಿಚಾರಗಳನ್ನು ಒಪ್ಪದ ಪತ್ರಿಕೆಗಳು, ಅವರ ಲೇಖನ ಪ್ರಕಟಿಸುವ ಗೋಜಿಗೆ ಹೋಗುತ್ತಿದ್ದಿಲ್ಲ. ಅವು ಮೇಲ್ಜಾತಿಗಳ ಮಾಲಿಕತ್ವದಲ್ಲಿದ್ದವು. ಇಂದು ಭಾರತದಲ್ಲಿ ಮಾಧ್ಯಮಗಳ ಒಡೆತನ, ಅವುಗಳ ಬದ್ಧತೆ ಸದಾ ಆಳುವವರ ಪರ ಮತ್ತು ಬ್ರಾಹ್ಮಣತ್ವದಿಂದ ಕೂಡಿರುವುದು ಗುಟ್ಟೇನಲ್ಲ. ಒಂದೆಡೆ ಭಾರತೀಯ ಪತ್ರಿಕೆಗಳ ತಾತ್ವಿಕತೆಯನ್ನು ತಮ್ಮ ಪುಸ್ತಕ (ಇಂಡಿಯಾಸ್ ನ್ಯೂಸ್ ಪೇಪರ್ ರೆವಲ್ಯೂಷನ್) ದಲ್ಲಿ ಚರ್ಚಿಸಿದ ಆಸ್ಟ್ರೇಲಿಯಾ ಮೂಲದ ಮಾಧ್ಯಮ ತಜ್ಞ ರಾಬಿನ್ ಜಫ್ರಿ 2005ರಲ್ಲಿ ಗಮನಿಸಿದಂತೆ, ಇಂದಿನವರೆಗೂ ಭಾರತದ ಟೆಲಿವಿಜನ್ಗಳಲ್ಲಿ ಒಬ್ಬರೇ ಒಬ್ಬರು ದಲಿತ ಸುದ್ಧಿವಾಚಕರು ಇಲ್ಲದಿರುವುದು ಅಶ್ಚರ್ಯವೇನಲ್ಲ. ದಿನವಿಡೀ ಬಹುತ್ವದ ಬಗ್ಗೆ, ಭಾತೃತ್ವದ ಕುರಿತು, ಒಳಗೊಳ್ಳುವಿಕೆ ಮೇಲೆ ಮತ್ತು ಪ್ರಜಾಪ್ರಭುತ್ವದ ಮೇಲೆ ತಾಸುಗಟ್ಟಲೆ ಲೈವ್ ಡಿಬೇಟ್ ಮಾಡುವ ಟಿವಿಗಳು, ಸಂಪಾದಕೀಯ ಬರೆಯುವ ಪತ್ರಿಕೆಗಳು ಅದೆಷ್ಟು ಜನ ದಲಿತರನ್ನು ತಮ್ಮ ನ್ಯೂಸ್ ರೂಮ್ಗಳಲ್ಲಿ ನೇಮಿಸಿಕೊಂಡಿದ್ದಾರೆಂದು ಒಮ್ಮೆ ಗಮನಿಸಬೇಕಿದೆ.
ಈ ನಿಟ್ಟಿನಲ್ಲಿ ಚಾರಿತ್ರಿಕವಾದ ಮೂಕನಾಯಕ ಪತ್ರಿಕೆಯ ಸಂಪಾದಕೀಯಗಳ ಓದು ಅಗತ್ಯ ಎನಿಸಿ ಪುಸ್ತಕದಂಗಡಿಗಳಿಗೆ ಅಲೆದರೆ ಒಂದೇ ಒಂದು ಪುಸ್ತಕ ಸಿಗಲಿಲ್ಲ. ಕೊನೆಗೆ ಮರಾಠಿಯಿಂದ ಹಿಂದಿಗೆ ಅನುವಾದಗೊಂಡ ಪುಸ್ತಕಗಳು ದೊರೆತವು. ಅಂಬೇಡ್ಕರರು ಆರಂಭಿಸಿ, ಸ್ವತಃ ಆ ಪತ್ರಿಕೆಗಳಿಗೆ ತಮ್ಮ ವಿಚಾರಗಳನ್ನು ಬರೆದು ಪ್ರಕಟಿಸಿದ ಮೂಕನಾಯಕ ಮತ್ತು ಬಹಿಷ್ಕೃತ ಭಾರತ ಎರಡು ಪತ್ರಿಕೆಗಳ ಸಂಪಾದಕೀಯ ಬರಹಗಳನ್ನು ಹಿಂದಿಗೆ ಅನುವಾದಿಸಿದ ದೆಹಲಿ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ಬೋಧಿಸುವ ಮತ್ತು ಹಿಂದಿ ದಲಿತ ಸಾಹಿತ್ಯದಲ್ಲಿ ಗಮನಿಸಬೇಕಾದವರು ಪ್ರೋ. ಶ್ಯೋರಾಜ್ ಸಿಂಗ್ ಬೇಚೈನ್. ನನ್ನ ಬಾಲ್ಯ ನನ್ನ ಹೆಗಲ ಮೇಲೆ, ನಾನು ಕ್ರೌಂಚ ಆಗಿದ್ದೇನೆ, ಹಿಂದಿ ದಲಿತ ಪತ್ರಿಕೋದ್ಯಮದ ಮೇಲೆ ಅಂಬೇಡ್ಕರ್ ಪ್ರಭಾವ, ಸ್ತ್ರೀವಾದದ ವಿಮರ್ಶೆ ಇತ್ಯಾದಿ ಕೃತಿ ರಚಿಸಿದ್ದಾರೆ.
ಮೂಕನಾಯಕ ಮರಾಠಿಯಿಂದ ಹಿಂದಿಗೆ ಅನುವಾದಗೊಂಡ ಬರಹಗಳನ್ನು ತಕ್ಕಮಟ್ಟಿಗೆ ಹಿಂದಿಯಲ್ಲಿ ಓದಿ, ಅರ್ಥ ಮಾಡಿಕೊಂಡು ಅನುವಾದ ಮಾಡಬಲ್ಲೆ ಅನ್ನುವ ವಿಶ್ವಾಸ ಇತ್ತಾದರೂ ಅರ್ಧ ಪುಸ್ತಕ ಓದಿ ಮುಗಿಸುವುದರಲ್ಲಿ ಸುಸ್ತಾಗಿ ಬಿಟ್ಟೆ. ಇದಕ್ಕೆ ಕಾರಣ ಹಿಂದಿ ಅನುವಾದಕ್ಕೆ ಬಳಸಿದ ಭಾಷೆ. ಇದು ನನ್ನಿಂದಾಗದು ಅನಿಸಿ, ದೆಹಲಿಯಲ್ಲಿಯೇ ವಾಸವಿರುವ ಲೇಖಕಿ, ಕವಯತ್ರಿ ಮತ್ತು ಅನುವಾದಕಿ ರೇಣುಕಾ ನಿಡಗುಂದಿ ಅವರನ್ನು ಕೇಳಿಕೊಳ್ಳಲು ತುಂಬಾ ಸಂತೋಷದಿಂದ ಒಪ್ಪಿಕೊಂಡರು.
ದೇಶದ ಶೈಕ್ಷಣಿಕ, ಸಾಂಸ್ಕೃತಿಕ, ಮತ್ತು ಬೌದ್ಧಿಕ ನೆಲೆಗಳು ನಿರಂತರವಾಗಿ ದಾಳಿಯಾಗುತ್ತಿರುವ ಬಿಕ್ಕಟ್ಟಿನಲ್ಲಿ ನಾವಿದ್ದೇವೆ. ದೇಶದ ಚರಿತ್ರೆಯ ಪಠ್ಯಕ್ರಮಗಳನ್ನು ಸಂಘ ಪರಿವಾರ ಬಣಗಳು ಕೇಸರೀಕರಣಗೊಳಿಸುತ್ತಿವೆ. ಬಹು ಸಂಸ್ಕೃತಿಯ ಭಾರತವನ್ನು ಏಕಸಂಸ್ಕೃತಿಯ ರಾಷ್ಟ್ರವನ್ನಾಗಿ ಮಾಡುವ ಮಿಷನ್ನನ್ನು ಮುನ್ನಡೆಸುತ್ತಿರುವ ನಿರಂಕುಶವಾದಿ ಶಕ್ತಿಗಳು ಪ್ರಬಲಗೊಂಡಿರುವ ಇಂದಿನ ಭಾರತಕ್ಕೆ ಬಾಬಾಸಾಹೇಬ್ ಅವರಂತಹ ಅಗತ್ಯ ತುಂಬಾ ಇದೆ. ಸನಾತನರು ಜಗತ್ತನ್ನು ಮಿಥ್ಯ ಎಂದರೆ, ಧಾರ್ಮಿಕ ಸುಧಾರಕರು ಸತ್ಯ ಎಂದರು. ಅಂಬೇಡ್ಕರರು ಪರಿಶಿಷ್ಟ ವರ್ಗಕ್ಕೆ ಮಿಥ್ಯ ಸತ್ಯಕ್ಕಿಂತ, ಅನ್ನ, ಬಟ್ಟೆ, ನೀರು, ನೆರಳು ಮುಂತಾದ ಪ್ರಾಥಮಿಕ ಅಗತ್ಯಗಳಿಗೆ ತೀವ್ರ ಹೋರಾಟವೇ ಮುಖ್ಯ ಎಂದರು.
ಬಾಬಾಸಾಹೇಬ್ ಬರೆಯುತ್ತಾರೆ: “ರಾಜಕೀಯಕ್ಕೆ ಎರಡು ಸಾಮಾನ್ಯ ಉದ್ದೇಶಗಳಿವೆ. ಒಂದು ಸರ್ಕಾರ ಮತ್ತು ಇನ್ನೊಂದು ಸಂಸ್ಕೃತಿ”. (ಮೂಕನಾಯಕ ಸಂಚಿಕೆ-II, 14 ಫೆಬ್ರವರಿ 1920) ಅನೇಕ ವಿಧಗಳಲ್ಲಿ, ಆ ಕಾಲದ ಪತ್ರಿಕೆಗಳಲ್ಲಿ ಪ್ರಚಲಿತದಲ್ಲಿದ್ದ ಬ್ರಾಹ್ಮಣ ಜಾತಿ ಸಿದ್ಧಾಂತಕ್ಕೆ ಮೂಕನಾಯಕ ನೇರ ವಿರೋಧವಾಗಿತ್ತು. 1920ರ ದಶಕವು ದೇಶದಲ್ಲಿ ಸಾಮೂಹಿಕ ನೆಲೆಯನ್ನು ಪಡೆಯುತ್ತಿದ್ದ ಜಾತಿ ವಿರೋಧಿ ಚಳುವಳಿಗಳಿಗೆ ಪರಿವರ್ತಕ ಸಮಯವಾಗಿತ್ತು. ದಲಿತ ವಿಮೋಚನಾ ಚಳವಳಿಗಳು ದೇಶದ ವಿವಿಧ ಭಾಗಗಳಿಗೆ ನುಗ್ಗುತ್ತಿದ್ದವು. ಇವುಗಳಲ್ಲಿ ಪಂಜಾಬಿನ ಆದ-ಧರ್ಮ ಆಂದೋಲನ, ಮಹಾರಾಷ್ಟ್ರದ ಮಹಾರರ ಪ್ರತಿಭಟನೆ, ಬಂಗಾಲದಲ್ಲಿ ನಾಮ-ಶೂದ್ರ ಆಂದೋಲನ ಮತ್ತು ತಮಿಳುನಾಡಿನಲ್ಲಿ ಆದಿ-ದ್ರಾವಿಡ ಆಂದೋಲನಗಳು ಮಹತ್ವದ್ದಾಗಿವೆ. ಈ ಎಲ್ಲಾ ಆಂದೋಲನಗಳ ಪ್ರತ್ಯುತ್ತರವಾಗಿ ಅನೇಕ ಕಡೆ ಉಚ್ಚಜಾತಿಗಳಿಂದ ದಲಿತರ ಮೇಲೆ ಹಿಂಸಾಚಾರಗಳೂ ನಡೆದವು.
ಮೂಕನಾಯಕ ಪತ್ರಿಕೆಯು ದನಿ ಇಲ್ಲದವರ ದನಿಯಾಗಿ ಇಂದಿಗೂ ಭಾರತವನ್ನು ಕಾಡುವ ಜಾತಿ-ಪ್ರೇರಿತ ಮತ್ತು ರಾಷ್ಟ್ರೀಯವಾದಿ ದೃಷ್ಟಿಕೋನಗಳ ಅಸ್ವಸ್ಥತೆಯನ್ನು ಪ್ರತಿನಿಧಿಸುತ್ತದೆ. ಈ ಸಂದರ್ಭದಲ್ಲಿ ಮುಖ್ಯವಾಗಿ ನೆನೆಯಬೇಕಾದ ಅಂಶವೆಂದರೆ ಬ್ರಿಟಿಷ್ ಶಿಕ್ಷಣತಜ್ಞ ಮೆಕಾಲೆ ಜಾರಿಗೆ ತಂದ ಸಾರ್ವತ್ರಿಕ ಶಿಕ್ಷಣ ನೀತಿ. ಈ ಶಿಕ್ಷಣ ನೀತಿ ಇಡೀ ದೇಶದ ಜನಸಾಮಾನ್ಯರ ಚರಿತ್ರೆಯಲ್ಲಿ, ಅದರಲ್ಲೂ ವಿಶೇಷವಾಗಿ ಈ ದೇಶದ ಶೂದ್ರಾತಿಶೂದ್ರ ಜನಕೋಟಿಯ ಸಾಮೂಹಿಕ ಜನಜಾಗೃತಿಯ ಚರಿತ್ರೆಯಲ್ಲಿ ಈ ಮೆಕಾಲೆ ಶಿಕ್ಷಣ ನೀತಿ ಒಂದು ಅಪೂರ್ವ ಮೈಲಿಗಲ್ಲು. ಅದರಲ್ಲೂ ಮುಖ್ಯವಾಗಿ ಅಂಬೇಡ್ಕರರ ಜೀವನದಲ್ಲಿ ಲಭ್ಯವಾದ ಶೈಕ್ಷಣಿಕ ಅವಕಾಶಗಳ ಮೂಲಗಳಲ್ಲಿ ಇದು ಮಹತ್ವದ ಕಾಲಘಟ್ಟವೆನ್ನಬಹುದು. ಈ ಪಾಶ್ಚಾತ್ಯ ಶಿಕ್ಷಣ ನೀತಿಯು ಭಾರತೀಯ ಜೀವನ ಸಂದರ್ಭದಲ್ಲಿ ಒಂದು ಹೊಸ ಬಗೆಯ ಧಾರ್ಮಿಕ ಹಾಗೂ ರಾಜಕೀಯ ಚಿಂತನೆಗೆ ಬುನಾದಿಯಾಯಿತು.
ಪತ್ರಿಕೆಯ ಮುಖಪುಟದ ಆರಂಭದಲ್ಲಿಯೇ ಬಾಬಾ ಸಾಹೇಬರು ಬಳಸಿದ ಸಮಾಜ ಸುಧಾರಕ ಸಂತ ತುಕಾರಾಂ ಅವರ ಅಭಂಗದ ಈ ಧೇಯವಾಕ್ಯದಿಂದ ಅವರ ಜೀವನ ದರ್ಶನ ಸ್ಪಷ್ಟವಾಗುತ್ತದೆ.
ಕಾಯ್ ಕರೂಂ ಅತಾ ಧರೂನಿಯಾ ಭೀಡ ! ನಿಃಶಂಕ ಹೆ ತೋಂಡ್ ವಾಜವಿಲೆ !! ನವ್ಹೇ ಜಗೀ ಕೋಣಿ ಮುಕಿಯಾಂಚಾ ಜಾಣ! ಸಾರ್ಥಕ ಲಾಜೂನ ನವ್ಹೇ ಹಿತ !!
ಇದರ ತಾತ್ಪರ್ಯ - ಈಗ ನಾನು ಸಂಕೋಚಪಟ್ಟುಕೊಂಡೇನು ಮಾಡಲಿ, ನಾನೀಗ ದನಿಯೆತ್ತದೆ ಉಳಿಗಾಲವಿಲ್ಲ. ದನಿಯಿಲ್ಲದವರ ಪರವಾಗಿ ಈ ಲೋಕದಲ್ಲಿ ಯಾರೂ ದನಿಯೆತ್ತುವುದಿಲ್ಲ. ಇದು ತಿಳಿದೂ ತಿಳಿದೂ ಮೌನವಾಗಿರುವುದರಲ್ಲಿ ಯಾವ ಅರ್ಥವೂ ಇಲ್ಲ.
ಮೂಕನಾಯಕ ಆ ಕಾಲದಲ್ಲಿ ಮೂಕವಾಗಿದ್ದ ಸಮಾಜಕ್ಕೆ ಧ್ವನಿ ನೀಡಿತು. ಆ ಕಾಲದ ಪತ್ರಿಕೆಗಳಿಗೆ ಎರಡು ಮುಖ್ಯ ಉದ್ದೇಶಗಳಿದ್ದವು. ಮೊದಲನೆಯದು ಸ್ವಾತಂತ್ರ್ಯ ಚಳವಳಿಯನ್ನು ವೇಗಗೊಳಿಸುವುದು ಮತ್ತು ಎರಡನೆಯದು ಸಮಾಜವನ್ನು ಸುಧಾರಿಸುವುದು. ಬಾಬಾಸಾಹೇಬರ ಪತ್ರಿಕೋದ್ಯಮವು ಇದಕ್ಕಿಂತ ಭಿನ್ನವಾಗಿತ್ತು, ಅಂದರೆ ಅದು ಸಂಪೂರ್ಣ ಮಾನವ ವಿಮೋಚನೆಯ ಉರಿಯುವ ಕೆಂಡವಾಗಿತ್ತು. ಬಾಬಾಸಾಹೇಬರು ಸಮಾಜ ಸುಧಾರಣೆಯನ್ನು ಒಪ್ಪಲಿಲ್ಲ. ಒಂದೆಡೆ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಆಕಾಶ-ಭೂಮಿಯನ್ನು ಒಗ್ಗೂಡಿಸಿದ ನಾಯಕರು ಈ ನಾಡಿನಲ್ಲಿ ಮನುಷ್ಯರನ್ನು ಮನುಷ್ಯರಂತೆ ಕಾಣುವ ಮಾತನ್ನೂ ಹೇಳಲು ಸಿದ್ಧರಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದೆಡೆ ಬಾಬಾಸಾಹೇಬರ ಪತ್ರಿಕೆಯ ಮೂಲಕ ಮನುಷ್ಯನ ಸ್ವಾಭಾವಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಪ್ರಾಮಾಣಿಕ ಪ್ರಯತ್ನ ನಡೆದಿದೆ. ಸಾವಿರಾರು ವರ್ಷಗಳಿಂದ ವ್ಯವಸ್ಥೆಯ ದನಿಯನ್ನು ಹತ್ತಿಕ್ಕಿದ್ದ ಸಮಾಜಕ್ಕೆ ಮೂಕನಾಯಕನ ರೂಪದಲ್ಲಿ ಹೊಸ ದನಿ ಸಿಕ್ಕಿತು.
ಪ್ರೊ. ಬೇಚೈನ್ ಅವರು ಹಿಂದಿ ದಲಿತ ಪತ್ರಿಕೋದ್ಯಮದಲ್ಲಿ ಪತ್ರಕರ್ತ ಡಾ.ಅಂಬೇಡ್ಕರ್ ಅವರ ಪ್ರಭಾವ ಎಂಬ ಸಂಶೋಧನಾ ಪ್ರಬಂಧಕ್ಕೆ ಪಿಎಚ್ಡಿ ಪಡೆದಿದ್ದಾರೆ. 1999ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಇವರ ಈ ಪ್ರಬಂಧವನ್ನು ಉಲ್ಲೇಖಿಸಲಾಗಿದೆ. ಇವರ ಇತರ ಕೃತಿಗಳೂ ಗಮನಾರ್ಹವಾಗಿವೆ.
ಇನ್ನು ಅನುವಾದದ ಕುರಿತು ಹೇಳಬೇಕೆಂದರೆ ಆರಂಭದಲ್ಲಿ ನಾವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಮೂಲ ಮರಾಠಿಯಿಂದ ಹಿಂದಿಗೆ ಅನುವಾದಗೊಳ್ಳುವಿಕೆಯಲ್ಲಿ ಅನೇಕ ಕಡೆ ಸಾಲುಗಳು ಒಂದಕ್ಕೊಂದು ಹೊಂದಿಕೊಳ್ಳದೇ ಹಾದಿತಪ್ಪಿಸುವಂತಿದ್ದವು. ಮತ್ತೆ ಮತ್ತೆ ಓದಿಯೋ ಇಲ್ಲಾ ಮರಾಠಿಯ ಬಿಡಿ ಲೇಖನಗಳನ್ನು ಹುಡುಕಿ ಅದಕ್ಕೂ ಹಿಂದಿಯ ಅನುವಾದಕ್ಕೂ ತಾಳೆಹಾಕಿ ವಿಚಾರಗಳನ್ನು ಗ್ರಹಿಸಿಕೊಳ್ಳಬೇಕಾಗಿತ್ತು. ಆಯಾ ಅಧ್ಯಾಯದ ಪೂರಕ ಚರಿತ್ರೆಯ ಸನ್ನಿವೇಶವನ್ನು ಅರ್ಥಮಾಡಿಕೊಂಡು ಮುಂದೆ ಸಾಗಬೇಕಾಗುತ್ತಿತ್ತು. ನೇರ ಮರಾಠಿಯಿಂದಲೇ ಅನುವಾದ ಮಾಡುವಷ್ಟು ನಾವು ಮರಾಠಿ ಬಲ್ಲವರಲ್ಲ. ಇದರ ಅನುಭವವಾಗಿದ್ದು ಸಂತ ತುಕಾರಾಮನ ಅಭಂಗವನ್ನು ನೋಡಿದಾಗ — ಅದನ್ನು ಹಿಡಿದಿಡುವಲ್ಲಿ ಹಿಂದಿ ಅನುವಾದ ಸಮರ್ಪಕವಾಗಿದ್ದಿಲ್ಲ. ಅದೊಂದೇ ಅಭಂಗಕ್ಕಾಗಿ ನಾವು ಮರಾಠಿ ಬಲ್ಲ ಗೆಳೆಯರನ್ನು ಸಂಪರ್ಕಿಸಬೇಕಾಯ್ತು.
ಪ್ರೊ. ಬೇಚೈನ್ ಗುರುತಿಸಿದಂತೆ ಡಾ. ಅಂಬೇಡ್ಕರ್ ಅವರ ಮೊದಲ ಸಂಪಾದಕೀಯದ ಭಾಷೆ ಕಾವ್ಯಾತ್ಮಕವಾಗಿದೆ. ರೂಪಕ ಅಲಂಕಾರಗಳಿಂದ ಸಂಪನ್ನವಾಗಿದೆ. ವಿಷಯ ದೇಶಕ್ಕೆ ಸಂಬಂಧಿಸಿದ್ದಾದರೆ ಶೈಲಿ ಬೌದ್ಧಿಕತೆಯಿಂದ ಸಂಪನ್ನವೂ ತಾರ್ಕಿಕವೂ ಆಗಿದೆ. ಉದಾಹರಣೆಗೆ, ಅವರ ಪ್ರಖ್ಯಾತ ರೂಪಾತ್ಮಕ ಹೇಳಿಕೆ: “ಹಿಂದೂ ಸಮಾಜ ಒಂದು ಗೋಪುರವಿದ್ದಂತೆ. ಒಂದೊಂದು ಜಾತಿಯೂ ಈ ಗೋಪುರದ ಒಂದೊಂದು ಅಂತಸ್ತಿನಂತೆ. ಒಂದು ಅಂತಸ್ತಿನಿಂದ ಇನ್ನೊಂದು ಅಂತಸ್ತಿಗೆ ಹೋಗಲು ಯಾವ ಮಾರ್ಗವೂ ಇಲ್ಲ. ಯಾರು ಯಾವ ಜಾತಿಯಲ್ಲಿ ಹುಟ್ಟುತ್ತಾನೋ ಅದೇ ಜಾತಿಯಲ್ಲಿ ಸಾಯುತ್ತಾನೆ,” ಎನ್ನುವ ಮಾತು ಸಾರ್ವಕಾಲಿಕ ಸತ್ಯವಾಗಿದೆ.
ತಮ್ಮ ಸ್ಥಿತಿಯನ್ನು ವಿಧಿನಿಯಮ ಹಣೆಬರಹವೆಂದು ತಿಳಿದು ಆತ್ಮಸಮ್ಮಾನವೇ ಇರದ ವರ್ಗಕ್ಕೆ ಪತ್ರಕರ್ತ ಡಾ. ಅಂಬೇಡ್ಕರ್ ಪೌರಾಣಿಕ ಕತೆಗಳು, ಮಹಾಭಾರತದ ಪ್ರಸಂಗಗಳ ಮೂಲಕ ತಿಳಿಹೇಳುತ್ತಾರೆ. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರೂ ಅವರ ಪತ್ರಿಕೋದ್ಯಮ, ಬರೆಹಗಳಲ್ಲಿ ಭಾರತೀಯ ಧರ್ಮಶಾಸ್ತ್ರ, ಪೌರಾಣಿಕ ಕತೆಗಳ ಉದಾಹರಣೆಗಳೇ ಹೆಚ್ಚಾಗಿ ಸಿಗುತ್ತವೆ. ಇದು ಅವರ ಸಾಹಿತ್ಯಿಕ ಅಧ್ಯಯನಕ್ಕೆ ಹಿಡಿದ ಕನ್ನಡಿಯೂ ಹೌದು. ಅದಲ್ಲದೇ ಭಾರತೀಯ ಸಾಮಾನ್ಯ ಜನರು ಅಶಿಕ್ಷಿತರಾಗಿದ್ದರೂ ಕೂಡ ಪೌರಾಣಿಕ ದಂತಕತೆಗಳ ದೊಡ್ದ ಭಂಡಾರವನ್ನೇ ತಮ್ಮೊಳಗೆ ಅಡಗಿಸಿಟ್ಟುಕೊಂಡಿರುತ್ತಾರೆಂಬ ಜ್ಞಾನವೂ ಅವರಿಗಿತ್ತು. ಆ ಕಾರಣ ಅವರು ರೋಚಕವಾದ ಕತೆ, ಉದಾಹರಣೆಗಳಿಂದ ಅಶಿಕ್ಷಿತ ವರ್ಗವನ್ನು ಎಚ್ಚರಿಸುತ್ತಾರೆ, ತಿಳಿಹೇಳುತ್ತಾರೆ. ಗಂಭೀರ ಸಂಗತಿಗಳನ್ನೂ ರೋಚಕವಾಗಿ ಆಸಕ್ತಿಕರವಾಗಿ ಬರೆಯುವ ಬಾಬಾಸಾಹೇಬರ ಶೈಲಿ ಅನನ್ಯವಾದುದು.
ಎರಡನೆಯದಾಗಿ ಅಂದಿನ ಭಾಷೆ ಸನ್ನಿವೇಶವೇ ಬೇರೆ ಇವತ್ತಿನ ಬದಲಾದ ಜಾಗತಿಕ ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶವೇ ಬೇರೆ. 1920ರಲ್ಲಿ ಭಾಷಾವಾರು ರಾಜ್ಯಗಳ ವಿಂಗಡನೆ ಆಗಿರಲಿಲ್ಲ. ಭಾರತದಲ್ಲಿ ಒಕ್ಕೂಟ ಆಡಳಿತವಿದ್ದಿರಲಿಲ್ಲ. ಸಂಪೂರ್ಣವಾಗಿ ಬ್ರಿಟಿಷರ ಆಧೀನ ಆಡಳಿತ ವ್ಯವಸ್ಥೆಯಿತ್ತು. ಗಾಂಧಿ, ನೆಹರೂ, ಸುಭಾಸಚಂದ್ರ ಬೋಸ್, ಲಾಲಾ ಲಜಪತ್ ರಾಯ್ ಮುಂತಾದ ಇಂಗ್ಲಿಷ್ ಶಿಕ್ಷಣ ಪಡೆದ ಸ್ವಾತಂತ್ರ್ಯ ಹೋರಾಟಗಾರರು ಒಂದೆಡೆಯಿದ್ದರೆ ಇನ್ನೊಂದೆಡೆ ಶಿಕ್ಷಣದ ಗಂಧವೇ ಇರದ ಜನಸಾಮಾನ್ಯರು ಮತ್ತು ವರ್ಣವ್ಯವಸ್ಥೆಯ ಕರಾಳ ಯುಗ. ಆಡಳಿತ ಸಂವಹನ ವ್ಯವಹಾರಕ್ಕೆ ಚಾಲ್ತಿಯಲ್ಲಿದ್ದದ್ದು ಹಿಂದಿ ಅಥವಾ ಇಂಗ್ಲಿಷ್ ಭಾಷೆ. ಸ್ವಾತಂತ್ರ್ಯದ ಚಳವಳಿ ರಭಸವಾಗಿ ನಡೆಯುತ್ತಿದ್ದ ಕಾಲದಲ್ಲಿ ಗಾಂಧೀಜಿ ಹಿಂದಿ ಭಾಷೆಯನ್ನು ಸಾರ್ವಜನಿಕ ಸಂವಹನದ ಭಾಷೆಯನ್ನಾಗಿ ಬಳಸತೊಡಗಿದ್ದಲ್ಲದೆ ಮುಂದೆ ಸಂವಿಧಾನದ ರಚನೆಕಾರರು ಹಿಂದಿಯನ್ನು ವಿಶೇಷವಾಗಿ ದೇವನಾಗರಿ ಲಿಪಿಯಲ್ಲಿ ಬರೆಯಲಾದ ಆವೃತ್ತಿಯನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಆಯ್ಕೆ ಮಾಡಿದರು. ಇದನ್ನು ಅಧಿಕೃತ ಭಾಷೆ ಎಂದು ಗೊತ್ತುಪಡಿಸಲಾಗಿದೆ (ರಾಷ್ಟ್ರಭಾಷೆ ಅಲ್ಲ).
ಬಾಬಾಸಾಹೇಬರು ಯಾರ ವಿಮೋಚನೆಗಾಗಿ ಯಾರ ದನಿಯಾಗಿ ಮೂಕನಾಯಕ ಪತ್ರಿಕೆಯನ್ನು ತಂದರೋ ಅವರೆಲ್ಲ ಓದಲು ಬಾರದ ಅನಕ್ಷರಸ್ಥರು. ಯಾರು ಓದಲಿ, ತಮ್ಮ ವಿಚಾರಗಳನ್ನು ಬದಲಾಯಿಸಿಕೊಳ್ಳಲಿ ಎಂದು ಬರೆದರೋ ಅವರೆಲ್ಲ ಓದಿದರೂ ಓದದವರಂತೆ ವರ್ತಿಸುತ್ತಿದ್ದರು. ತಂದೆಯೊಬ್ಬ ತನ್ನ ಮಕ್ಕಳಿಗೆ ಬುದ್ಧಿವಾದ ಹೇಳುವಂತೆ ಬಾಬಾಸಾಹೇಬರು ಅಸ್ಪೃಶ್ಯ ಮತ್ತು ಬಹಿಷ್ಕೃತ ಸಹೋದರರಿಗಾಗಿ ಬುದ್ಧಿವಾದ ಹೇಳುತ್ತಾರೆ. ನಿಷ್ಠುರವಾದಿಗಳಾಗಿದ್ದ ಅವರು ಹೇಳಬೇಕಾದ್ದನ್ನು ಯಾವ ಅಳುಕಿಲ್ಲದೇ ಹೇಳಿಬಿಡುತ್ತಿದ್ದರು. ಕಟುವಾಗಿ ವಿಡಂಬನಾತ್ಮಕವಾಗಿಯೂ ಬರೆಯುತ್ತಿದ್ದರು, ಒಮ್ಮೆ ಬಾಬಾಸಾಹೇಬರು ಲೋಕಮಾನ್ಯ ತಿಲಕರ ಬಗ್ಗೆ ಬರೆಯುತ್ತ ಇವರಿಗೆ ಲೋಕಮಾನ್ಯ ಎಂದು ಯಾರು ಕರೆದರು ಮತ್ತು ಲೋಕಮಾನ್ಯನಾಗುವ ಅರ್ಹತೆ ಇದೆಯೇ ಇವರಿಗೆ, ಎಂದು ಪ್ರಶ್ನಿಸಿದ್ದಾರೆ. ಅಂಬೇಡ್ಕರ್ ಅವರ ಅನುಯಾಯಿಯೊಬ್ಬ ಲೋಕಮಾನ್ಯ ಬೂಟು ಚಪ್ಪಲಿಗಳ ಅಂಗಡಿ ತೆರೆದ. ಈ ಚಪ್ಪಲ್ ಅಂಗಡಿಯ ಜಾಹೀರಾತನ್ನು ಮೂಕನಾಯಕ ಪತ್ರಿಕೆಯಲ್ಲಿ ಮತ್ತೆ ಮತ್ತೆ ಹಾಕಿ ಬ್ರಾಹ್ಮಣರನ್ನು ತಿವಿದಿದ್ದಿದೆ. ಸವರ್ಣ ಮೇಲ್ಜಾತಿಯವರ ಆಷಾಡಭೂತಿತನವನ್ನು ನಿಸ್ಸಂಕೋಚವಾಗಿ ನಿರ್ಭಿಡೆಯಿಂದ ಬಯಲು ಮಾಡುತ್ತಾರೆ.
ನಾವು ಬಾಂಬೆ ಪ್ರೆಸಿಡೆನ್ಸಿಯಲ್ಲಿ ಪ್ರಕಟವಾಗುವ ಪತ್ರಿಕೆಗಳ ಮೇಲೆ ಒಂದು ಕಣ್ಣು ಹಾಯಿಸಿದರೆ, ಈ ಪತ್ರಿಕೆಗಳಲ್ಲಿ ಹೆಚ್ಚಿನವು ಕೆಲವು (‘ಮೇಲಿನ’) ಜಾತಿಗಳ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಮಾತ್ರ ಕಾಳಜಿ ವಹಿಸುವುದನ್ನು ನಾವು ಕಾಣಬಹುದಾಗಿದೆ. ಇವು ಇತರ ಜಾತಿಗಳ ಹಿತಾಸಕ್ತಿಗಳ ಬಗ್ಗೆ ಯಾವ ಕಾಳಜಿಯನ್ನೂ ವಹಿಸುವುದಿಲ್ಲ. ಇದಲ್ಲದೇ ಕೆಲವೊಮ್ಮೆ, ಅವರು ಇತರ ಜಾತಿಗಳ ಹಿತಾಸಕ್ತಿಗೆ ವಿರುದ್ಧವಾಗಿ ಹೋಗುತ್ತಾರೆ. (ಮೂಕನಾಯಕ, ಪು 34). ಅನ್ಯಾಯವನ್ನು ಸಹಿಸದಿರುವುದು ಮಾನವನ ಮನಸ್ಸಿನ ಅತ್ಯುನ್ನತ ರೂಪವಾಗಿದೆ. (ಮೂಕನಾಯಕ - 14 ಆಗಸ್ಟ್ 1920ರ ಸಂಚಿಕೆ 14) ಎಂದು ನಂಬಿದ್ದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ನುಡಿದಂತೆ ನಡೆದರು, ನಡೆದಂತೆ ಬರೆದರು.
ಇನ್ನು ಭಾಷೆಯ ತೊಡಕಿನ ಕುರಿತು ಹೇಳುವುದಾದರೆ, ಮೂಕನಾಯಕ ಪತ್ರಿಕೆ ಪ್ರಕಟವಾಗಿದ್ದು ನೂರು ವರ್ಷದ ಹಿಂದೆ. ಆ ಬರಹಗಳು ಮೂಲತಃ ಮರಾಠಿ ಭಾಷೆಯಲ್ಲಿವೆ. ಅವುಗಳನ್ನು ಹಿಂದಿಗೆ ಅನುವಾದ ಮಾಡಲಾಗಿದ್ದು ತೊಂಬತ್ತು ವರ್ಷದ ಬಳಿಕ. ಹಿಂದಿ ಅನುವಾದಗಳನ್ನು ಆಧಾರವಾಗಿಟ್ಟುಕೊಂಡು ಕನ್ನಡಕ್ಕೆ ತರುವಾಗಿನ ಸವಾಲುಗಳು ಕಡಿಮೆ ಏನಲ್ಲ. 1920ರ ಆಸುಪಾಸು ಪತ್ರಿಕೆಗಳಲ್ಲಿ ಬಳಕೆಯಾದ ಭಾಷೆಯಲ್ಲಿರುವ ವಿಚಾರಗಳನ್ನು ಇಂದಿನ 21ನೆಯ ಶತಮಾನದ ಓದುಗನಿಗೆ ತಲುಪುವಂತೆ ಹೇಗೆ ತರುವುದು? ಭಾಷಾವಾರು ರಾಜ್ಯ ನಿರ್ಮಾಣ ಆಗಿದ್ದಿಲ್ಲ, ಹಕ್ಕುಗಳ ಪರಿಕಲ್ಪನೆ ಸಂಪೂರ್ಣ ಪಾಶ್ಚಾತ್ಯರ ವಾಖ್ಯಾನದಂತೆ ನೋಡಲಾಗುತಿತ್ತು, ಕಾರ್ಮಿಕರ ಒಗ್ಗಟ್ಟು, ಕಮ್ಯುನಿಜಂ, ಸಾಮಾಜಿಕ ಅಸಮಾನತೆ, ಸಂಘಟನಾ ಶಕ್ತಿ, ಅಸ್ಪೃಶ್ಯತೆಯನ್ನು ಅರ್ಥ ಮಾಡಿಕೊಳ್ಳುವ ಬಗೆ, ರಾಷ್ಟ್ರದ ಕಲ್ಪನೆ, ಬ್ರಾಹ್ಮಣ್ಯದ ಬಿಗಿ ಹಿಡಿತ, ಸ್ವರಾಜ್ಯದ ಸಾಧ್ಯತೆ, ಕಾಂಗ್ರೆಸ್ ಮತ್ತದರ ನಾಯಕರು, ಅವರ ಲೆಕ್ಕಾಚಾರ, ಬ್ರಿಟಿಷ್ ಆಳಿಕೆ ಎದುರು ಮೂಲವಿವಾಸಿಗಳ ಪರ ಪ್ರತಿನಿಧಿತ್ವದ ಪ್ರಶ್ನೆ, ಸ್ವಾತಂತ್ರ್ಯದ ಕನಸು — ಹೀಗೆ ಅನೇಕ ಸಂಗತಿಗಳ ಕುರಿತು ಬರೆಯುವಾಗ ಆ ಕಾಲದ ಪದಬಳಕೆಯನ್ನು ಸಹಜವಾಗಿ ಬರವಣಿಗೆಯಲ್ಲಿ ಬಳಸಲಾಗಿದೆ. ಆದರೆ ಆ ಬರಹಗಳನ್ನು ಹಿಂದಿಗೆ ತರುವಾಗ ಪ್ರೊ. ಬೇಚೈನ್ ಹಲವು ಮಾರ್ಪಾಟು ಮಾಡಿಕೊಂಡಿದ್ದಾರೆ. ನೂರು ವರ್ಷದ ನಂತರ ಆ ಬರಹಗಳನ್ನು ಕನ್ನಡ ಓದುಗರಿಗೆ ಪರಿಚಯಿಸಲು ಹೊರಟಿರುವ ನಮಗೆ ಆರಂಭದಲ್ಲಿ ಇದರ ಅಂದಾಜು ಇರಲಿಲ್ಲ. ಓದುತ್ತ ಹೋದಂತೆ, ಆಯಾ ಸಂದರ್ಭಕ್ಕೆ ತಕ್ಕಂತೆ ಏನೆಲ್ಲ ರಾಜಕೀಯ ಪಲ್ಲಟಗಳು ಆಗಿರಬೇಕು ಎಂಬುದನ್ನು ಗಮನಿಸುತ್ತ, ಅಲ್ಲಲ್ಲಿ ತುಸು ಬದಲಾವಣೆ ಮಾಡಿಕೊಂಡು, ಹಿಂದಿಯಿಂದ ಹೆಚ್ಚೇ ಸ್ವತಂತ್ರ ತೆಗೆದುಕೊಂಡು ಕನ್ನಡಕ್ಕೆ ಒಗ್ಗಿಸಲು ಪ್ರಯತ್ನ ಪಟ್ಟಿದ್ದೇವೆ. ಅಲ್ಲಲ್ಲಿ ಬಿಡಿಬಿಡಿಯಾಗಿ ಪ್ರಕಟವಾಗಿದ್ದ ಮೂಕನಾಯಕ ಪತ್ರಿಕೆಯ ಸಂಪಾದಕೀಯಗಳು ಒಟ್ಟು ಪುಸ್ತಕ ರೂಪದಲ್ಲಿ ಸಿಕ್ಕರೆ ಒಳ್ಳೆಯದು ಎಂಬ ಆಸೆಯಿಂದ ಈ ಪ್ರಯತ್ನ ಮಾಡಿದ್ದೇವೆ. ಇದರ ಹೊರತಾಗಿ ಮೂಲ ಮರಾಠಿಯಿಂದ ಕನ್ನಡಕ್ಕೆ ಅನುವಾದಗೊಂಡರೆ ಅಂಬೇಡ್ಕರರ ಅಧ್ಯಯನಕ್ಕೆ ತುಂಬಾ ಅನಕೂಲವಾದೀತು. ಆ ನಿಟ್ಟಿನಲ್ಲಿ ಯಾರಾದರು ಪ್ರಯತ್ನ ಮಾಡಬಹುದು. ಅಂಬೇಡ್ಕರರ ವಿಚಾರಗಳನ್ನು ತಮ್ಮ ರಾಜಕೀಯ ಗಾಳಕ್ಕೆ ಮೀನಿನಂತೆ ಬಳಸಿಕೊಳ್ಳಲು ಮತರಾಜಕಾರಣದ ದಂಡೆಯ ಮೇಲೆ ಕುಕ್ಕರುಗಾಲಲ್ಲಿ ಕುಳಿತ ಅವಕಾಶವಾದಿಗಳಿಗೆ, “ಅಂಬೇಡ್ಕರ್, ಅಂಬೇಡ್ಕರ್ ಅಂಬೇಡ್ಕರ್... ಅನ್ನುವುದು ಒಂದು ಫ್ಯಾಷನ್ನಾಗಿದೆ,” ಅನ್ನುವವರಿಗೆ ಮತ್ತೆ ಮತ್ತೆ ಅವರ ವಿಚಾರಗಳ ಅಗಾಧತೆ ಮತ್ತವುಗಳ ಮಹತ್ವ ಸಾರಿ ಹೇಳುವ ಜರೂರು ಇಂದು ಹೆಚ್ಚಿದೆ.
ದಲಿತ ಪತ್ರಿಕೋದ್ಯಮ, ದಲಿತ ಸಾಹಿತ್ಯ ಗಣನೀಯವಾಗಿ ಬೆಳೆದಿದೆಯೆಂದರೆ ಇದರ ಏಕೈಕ ರೂವಾರಿ ಡಾ. ಭೀಮರಾವ್ ಅಂಬೇಡ್ಕರ್. ಮೂಕನಾಯಕದ ಎಲ್ಲಾ ಬರೆಹಗಳು ಇಡಿಯಾಗಿ ಕನ್ನಡಿಗರಿಗೆ ತಲುಪಲೆಂದೇ ಈ ಸಾಹಸಕ್ಕೆ ಕೈಹಾಕಿದ್ದು. ಬಾಬಾಸಾಹೇಬರ ಕನಸಿನಂತೆ ದಮನಿತ ವರ್ಗ ಶಿಕ್ಷಿತವಾಗಿದ್ದರೂ ಅನೇಕ ಸಂದರ್ಭದಲ್ಲಿ ಬಾಯಿ ಇದ್ದರೂ ದನಿ ಇದ್ದರೂ ಅವರ ದನಿ ಕೊನೆಯಿರದ ಗದ್ದಲದಲ್ಲಿ ಕಳೆದುಹೋಗುತ್ತಿದೆಯೇನೋ ಎಂದು ಆತಂಕವಾಗುತ್ತಿರುವ ಹೊತ್ತಿನಲ್ಲಿ ಇಂದಿನ ತಲೆಮಾರಿಗೆ ಮೂಕನಾಯಕನ ಎಲ್ಲಾ ಬರೆಹಗಳನ್ನು ಇಡಿಯಾಗಿ ಓದಿಸುವ ಕೆಲಸ ತುರ್ತಾಗಿ ಮತ್ತು ಗಂಭೀರವಾಗಿ ಆಗಬೇಕಿದೆ ಎನಿಸುತ್ತದೆ.
ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿಯವರ ತವರೂರು ಧಾರವಾಡ. ನಾಲ್ಕು ದಶಕದಿಂದಲೂ ದೆಹಲಿಯಲ್ಲಿ ವಾಸ. ದೆಹಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯಲ್ಲಿ ಜಂಟಿಕಾರ್ಯದರ್ಶಿಯಾಗಿಯೂ ಸಂಘದ ಮುಖವಾಣಿ ಅಭಿಮತದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ ರಾಜಧಾನಿಯಲ್ಲಿ ಕರ್ನಾಟಕ ಪುಸ್ತಕವನ್ನು ಸಂಪಾದಿಸಿದ್ದು ಅನೇಕ ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟಗೊಂಡಿವೆ. ಪ್ರಕಟಿತ ಕೃತಿಗಳು - ಕಣ್ಣ ಕಣಿವೆ (ಮೊದಲ ಕವನ ಸಂಕಲನ, ಪ್ರಗತಿ ಗ್ರಾಫಿಕ್ಸ್, 2008), ದಿಲ್ಲಿ ಡೈರಿಯ ಪುಟಗಳು (ಪ್ರಬಂಧ ಬರೆಹ), ಅಮೃತ ನೆನಪುಗಳು (ಅಮೃತಾ ಪ್ರೀತಂರ ಜೀವನಗಾಥೆ ಇಮರೋಜ್ ಕಂಡಂತೆ, ಅಹರ್ನಿಶಿ ಪ್ರಕಾಶನ), ನಮ್ಮಿಬ್ಬರ ನಡುವೆ (ಕವನ ಸಂಕಲನ, ದೆಹಲಿ ಕರ್ನಾಟಕ ಸಂಘ), ಬಾ ಇಂದಾದರೂ ಮಾತಾಡೋಣ (ಅಮೃತಾ ಪ್ರೀತಮ್ ಅವರ ಆಯ್ದ ಕವಿತೆಗಳ ಅನುವಾದ), ಅಲೆಮಾರಿಯೊಬ್ಬಳ ಆತ್ಮವೃತ್ತಾಂತ (ಪಂಜಾಬಿ ಕಾದಂಬರಿಕಾರ್ತಿ ಅಜೀತ್ ಕೌರ್ ಅವರ ಆತ್ಮಕಥನದ ಅನುವಾದ, ಅಹರ್ನಿಶಿ ಪ್ರಕಾಶನ), ಯಾವ ವಿಳಾಸವೂ ಅವಳದಲ್ಲ (ಸಂತಾಲಿ ಕವಯತ್ರಿ ನಿರ್ಮಲಾ ಪುತುಲ್ ಅವರ ಅನುವಾದಿತ ಕವಿತೆಗಳ ಸಂಕಲನ, ಸಂಕಥನ). ಅವರಿಗೆ 2018ರ ಪ್ರಜಾವಾಣಿ ಪ್ರಬಂಧ ಸ್ಪರ್ಧೆಯಲ್ಲಿ ಎರಡನೆಯ ಬಹುಮಾನ, ಪ್ರೇಮಪತ್ರ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಸಂದಿವೆ. ಪ್ರಸ್ತುತ ಅವರ ಸಹಅನುವಾದದ ಡಾ. ಅಂಬೇಡ್ಕರ್ ಅವರ ಮೂಕನಾಯಕ ಪ್ರಕಟಣೆಗೆ ಸಿದ್ದವಾಗಿದೆ.
ರಮೇಶ ಅರೋಲಿ
ಕವಿ ರಮೇಶ ಅರೋಲಿ ರಾಯಚೂರು ಜಿಲ್ಲೆಯ ಅಸ್ಕಿಹಾಳದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ದೆಹಲಿಯ ಕಮಲಾ ನೆಹರು ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಎಳೆಯ ಪಾಪದ ಹೆಸರು ನಿಮ್ಮಂತೆ ಇಟ್ಟುಕೊಳ್ಳಿ (2010), ಜುಲುಮೆ (2014), ಬಿಡು ಸಾಕು ಈ ಕೇಡುಗಾಲಕ್ಕಿಷ್ಟು (2021) — ಕವನ ಸಂಕಲನಗಳು; ಒಳ ಮೀಸಲಾತಿ-ಮುಟ್ಟಲಾರದವನ ತಳಮಳ (ಸಹಸಂಪಾದನೆ, 2014), ಬಂಡಾಯದ ಬೋಳಬಂಡೆಪ್ಪ (ರಾಯಚೂರಿನ ದಲಿತ-ಬಂಡಾ ಚಳವಳಿಗಾರ ಬೋಳಬಂಡೆಪ್ಪನ ಬದುಕು-ಬರಹ); ತೀನ್ ಕಂದೀಲ್ (ನಾಟಕ), ಕೃತಿಗಳನ್ನು ರಚಿಸಿದ್ದಾರೆ. ಅವರ ಕವಿತೆಗಳು ಇಂಗ್ಲಿಷ್, ಹಿಂದಿ, ತೆಲುಗು ಭಾಷೆಗಳಿಗೆ ಅನುವಾದಗೊಂಡಿವೆ. ಅರೋಲಿ ಅವರ ಕೃತಿಗಳಿಗೆ ಶಿವಮೊಗ್ಗ ಕರ್ನಾಟಕ ಸಂಘದ ಡಾ. ಜಿ.ಎಸ್. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಡಾ. ಪು.ತಿ.ನ. ಕಾವ್ಯ ಪುರಸ್ಕಾರ; ಬಿಡಿಗವಿತೆಗಳಿಗೆ ಸಂಚಯ, ಸಂಕ್ರಮಣ, ಪ್ರಜಾವಾಣಿ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ದೊರೆತಿವೆ. ಪ್ರಸ್ತುತ ಅವರ ಸಹಅನುವಾದದ ಡಾ. ಅಂಬೇಡ್ಕರ್ ಅವರ ಮೂಕನಾಯಕ ಪ್ರಕಟಣೆಗೆ ಸಿದ್ದವಾಗಿದೆ.
ಇದನ್ನೂ ಓದಿ …
ಸರಹದ್ದುಗಳು ಅನ್ವಯಿಸದ ಅನನ್ಯ ಸಿದ್ಧಿಯ ಕವಿ
ಉರ್ದೂ ಭಾಷೆಯ ಹಿರಿಯ ಕವಿ ಮತ್ತು ಜನಪ್ರಿಯ ಸಿನೆಮಾ ಸಾಹಿತಿ ಗುಲ್ಜ಼ಾರ್ (ಸಂಪೂರಣ್ ಸಿಂಗ್ ಕಾಲ್ರಾ, 18.8.1934) ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಿತವಾದ ಸವಿಸುದ್ದಿ ಬಂದ ಬೆನ್ನಲ್ಲೇ ನದೀಮ ಸನದಿ ಅವರು ಕನ್ನಡಕ್ಕೆ ಅನುವಾದಿಸಿ ಪ್ರಕಟಣೆಗೆ ತಯಾರಾಗಿರುವ ಗುಲ್ಜ಼ಾರರ ಒಂದಷ್ಟು ಕವಿತೆಗಳು ಒಂದು ಸೊಗಸಾದ ಸೋಜಿಗದಂತೆ ನಮ್ಮ ಕೈಸೇರಿದುವು. ‘