ಉರ್ದೂ ಭಾಷೆಯ ಹಿರಿಯ ಕವಿ ಮತ್ತು ಜನಪ್ರಿಯ ಸಿನೆಮಾ ಸಾಹಿತಿ ಗುಲ್ಜ಼ಾರ್ (ಸಂಪೂರಣ್ ಸಿಂಗ್ ಕಾಲ್ರಾ, 18.8.1934) ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಿತವಾದ ಸವಿಸುದ್ದಿ ಬಂದ ಬೆನ್ನಲ್ಲೇ ನದೀಮ ಸನದಿ ಅವರು ಕನ್ನಡಕ್ಕೆ ಅನುವಾದಿಸಿ ಪ್ರಕಟಣೆಗೆ ತಯಾರಾಗಿರುವ ಗುಲ್ಜ಼ಾರರ ಒಂದಷ್ಟು ಕವಿತೆಗಳು ಒಂದು ಸೊಗಸಾದ ಸೋಜಿಗದಂತೆ ನಮ್ಮ ಕೈಸೇರಿದುವು. ‘ಸರಹದ್ದುಗಳು ಅನ್ವಯಿಸುವುದಿಲ್ಲ’ ಎಂಬ ಅನುವಾದಿತ ಕವಿತೆಗಳ ಸಂಕಲನವನ್ನು ಶೀಘ್ರದಲ್ಲಿ ಸಮಕಾಲೀನ ಪುಸ್ತಕ, ಬೆಳಗಾವಿ ಪ್ರಕಟಿಸಲಿದೆ. ಸದ್ಯಕ್ಕೆ ಸನದಿಯವರ ಒಂದಷ್ಟು ಮಾತುಗಳು ಮತ್ತು ಕವನ ಸಂಕಲನದಲ್ಲಿನ ಕೆಲವು ಕವಿತೆಗಳು ನಿಮ್ಮ ಓದಿಗೆ.

ಜಂಗಲ್ ಬುಕ್ ನ ಮೌಗ್ಲಿ ಯಾರಿಗೆ ಗೊತ್ತಿಲ್ಲ? ಬಾಲ್ಯದಲ್ಲಿ ದೂರದರ್ಶನದಲ್ಲಿ ‘ಚಡ್ಡಿ ಪೆಹೆನ್ ಕೆ ಫೂಲ್ ಖಿಲಾ ಹೈ’ ಎಂದು ಹಾಡು ಬಂದರೆ ಮನೆತುಂಬ ಕುಣಿದು ಕುಪ್ಪಳಿಸುತ್ತಿದ್ದೆ. ಕಾಲೇಜು ದಿನಗಳಲ್ಲಿ ಸಿನೇಮಾ ಹಾಡುಗಳ ಗೀಳು ಹತ್ತದಿದ್ದರೆ ಹೇಗೆ? ‘ಬೀಡಿ ಜಲೈ ಲೆ ಜಿಗರ್ ಸೆ ಪಿಯಾ’, ‘ದಿಲ್ ತೊ ಬಚ್ಚಾ ಹೈ ಜಿ’ ಎನ್ನುವ ಹಾಡುಗಳು ಮನಸೂರೆಗೊಂಡುಬಿಟ್ಟಿದ್ದವು. ಹಾಡುಗಾರರ ಹೆಸರುಗಳು ಗೊತ್ತಿದ್ದರೂ, ಗೀತೆಗಳನ್ನು ರಚಿಸಿದ್ದು ಸಂಪೂರಣ್ ಸಿಂಗ್ ಕಾಲ್ರಾ ಅಂದರೆ ಗುಲ್ಜ಼ಾರ್ ಎಂದು ತಿಳಿದಿದ್ದು ‘ಜೈ ಹೋ’ ಹಾಡಿಗೆ ಆಸ್ಕರ್ ಬಂದಾಗ. ಗುಲ್ಜ಼ಾರ್ ಎನ್ನುವ ಶಬ್ದಮಾಂತ್ರಿಕನ ಬೆನ್ನುಹತ್ತುವಿಕೆ ಪ್ರಾರಂಭವಾಗಿದ್ದು ಅಲ್ಲಿಂದಲೇ…
ಬಿಡಿ ಅಶಾರಗಳನ್ನು ಅಲ್ಲಲ್ಲಿ ಓದಿ ಆಸ್ವಾದಿಸುತ್ತ, ಯೂಟ್ಯೂಬಿನಲಿ ಸಂದರ್ಶನ ಮುಶಾಯಿರಾಗಳನ್ನು ನೋಡಿ “ವಾಹ್!” ಎಂದು ಉದ್ಗರಿಸುತ್ತ ವರುಷಗಳನ್ನೇ ಕಳೆದೆ. ಗುಲ್ಜ಼ಾರ್ ಅವರು ಹೃದಯಕ್ಕೆ ಸಮೀಪ ಬಂದದ್ದು ಗೊತ್ತಾಗಲೇ ಇಲ್ಲ. ಈ ಪ್ರಕ್ರಿಯೆ ತೀರಾಸಹಜವಾಗಿ ನಡೆದುಹೋಗಿತ್ತು. ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ ಮೇಲೆ ಅವರ ‘ದೋ ಲೋಗ್’ ಎಂಬ ಏಕಮಾತ್ರ ಕಾದಂಬರಿಯನ್ನು ಓದಿದೆ. ಆವಾಗಲೇ ಅವರಲ್ಲಿ ಅಡಗಿದ ವಿಭಜನೆಯ ವೇದನೆ ನನ್ನ ಗಮನಕ್ಕೆ ಬಂತು. ದೇಶ ಕಂಡ ಅತ್ಯಂತ ಮಧುರ ಕವಿಯ ಬದುಕಿನಲ್ಲಿ ಇಂತಹದೂ ಒಂದು ಮಜಲಿರುವುದನ್ನು ಅರಿತು ಆಶ್ಚರ್ಯವಾಗಿದ್ದೂ ಸುಳ್ಳಲ್ಲ. ಶಬ್ದಗಳನ್ನು ಉತ್ಕಟ ಪ್ರೇಮದಲ್ಲಿ ಅದ್ದಿ ಓದುಗರಿಗೆ-ಕೇಳುಗರಿಗೆ ಉಣಬಡಿಸುವ ಗುಲ್ಜ಼ಾರ್ ವಿಭಜನೆಯ ಹೊತ್ತಲ್ಲಿ ತನ್ನದೆಲ್ಲವನ್ನೂ ತೊರೆದು ಹೊಸದಾಗಿ ಹಾಕಲ್ಪಟ್ಟ ಗಡಿಯನ್ನು ದಾಟಿ ದೆಹಲಿಗೆ ಬಂದು ತದನಂತರ ಬಾಂಬೆ ಸೇರಿ ಜೀವಂತ ಘಟಾನುಘಟಿಯಾಗಿದ್ದು ಪವಾಡಸದೃಶ.
ಗುಲ್ಜ಼ಾರರ ಈ ಬೇಗೆಯ ಬೆನ್ನುಹತ್ತಿದ ನನಗೆ ಸಿಕ್ಕಿದ್ದು ಅವರ ಹಿಂದಿ ಕವನ ಸಂಗ್ರಹಗಳಾದ ‘ರಾತ್ ಪಶ್ಮೀನೆ ಕಿ’, ‘ಪುಖರಾಜ’, ‘ಪಾಜಿ ನಜ಼್ಮೆ’ ಮತ್ತು ಹತ್ತಾರು ಆಯ್ದ ಕವನಗಳ ಸಂಕಲನಗಳು. ಎಲ್ಲ ಸಂಕಲನಗಳನ್ನು ಹತ್ತಾರು ಬಾರಿ ಓದಲು ಪ್ರಾರಂಭಿಸಿ ಮುಗಿಸಿದಾಗ ಹುಚ್ಚೆದ್ದ ನನ್ನಲ್ಲಿ ಒಂದೇ ಬಾರಿಗೆ ನೂರಾರು ಭಾವಗಳು ಜೀವಂತಗೊಂಡವು. ಬರೀ ಪ್ರೇಮಕವಿ ಎಂದುಕೊಂಡ ಗುಲ್ಜ಼ಾರರ ಅಪ್ರತಿಮ ಕವಿತೆಗಳು ಅವರನ್ನು ಬಹುವಾಗಿ ಕಾಡುವ ಗಡಿ, ವಿಭಜನೆ, ಹುಟ್ಟೂರು, ಚಂದಿರ, ನಿಸರ್ಗಗಳ ಕುರಿತಾಗಿ ಇರುವುದನ್ನು ಕಂಡು ಬೆರಗಾದೆ.
ನೇರವಾಗಿ ಎದೆಗೆ ಇಳಿದ ಹತ್ತಾರು ಕವಿತೆಗಳು ಪದೇ ಪದೇ ನೆನಪಿಗೆ ಬಂದು ಕಂಠಸ್ಥಗೊಂಡು ಬಾಯಿಯಲ್ಲೇ ಅನುವಾದಗೊಂಡದ್ದು ನನ್ನ ಪಾಲಿಗೆ ಬಂದ ಸೋಜಿಗ. ಹೀಗೆ ಗುಲ್ಜ಼ಾರ್ ನನ್ನಲ್ಲಿ ಇಳಿಯುತ್ತ ಹೋದಂತೆ ಅವರ ಕವಿತೆಗಳೂ ಒಂದೊಂದಾಗಿ ಕನ್ನಡದಲ್ಲಿ ಮೂಡುತ್ತ ಹೋದವು. ಗಡಿಗಳ ಹಂಗಿಲ್ಲದೆ ಬಾಳಿ-ಬೆಳೆದ, ಭಾಷೆಗಳ ಹಂಗಿಲ್ಲದೆ ಜನರ ಹೃದಯಗಳನ್ನು ತಲುಪಿದ ಕವಿಯ ಕವಿತೆಗಳಿಗೆ ಯಾವುದೇ ಸರಹದ್ದುಗಳಿಲ್ಲ ಎಂದು ಅರಿವಿಗೆ ಬಂದ ಕ್ಷಣ ಗುಲ್ಜ಼ಾರರ ಅನುವಾದಿತ ಕವನಗಳ ಸಂಕಲನಕ್ಕೆ ‘ಸರಹದ್ದುಗಳು ಅನ್ವಯಿಸುವುದಿಲ್ಲ’ ಎಂದು ಹೆಸರಿಸಿದೆ.
ಕೆಲವೇ ದಿನಗಳಲ್ಲಿ ‘ಸರಹದ್ದುಗಳು ಅನ್ವಯಿಸುವುದಿಲ್ಲ’ ಕನ್ನಡಿಗರಿಗೆ ಓದಲು ಸಿಗಲಿದೆ. ಇಂತಹ ಸಂದರ್ಭದಲ್ಲಿ ಗುಲ್ಜ಼ಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಂದದ್ದು ನನ್ನ ಸಂತಸ ಮತ್ತು ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಮನೆಯ ದೀಪ
ತಲೆಯ ವಸ್ತ್ರವನು
ತಲೆಗೆ ಪೋಣಿಸುತ ದಾಟಿತು ಗುಂಡು
ಗೋಡೆಯ ಮೇಲೆಚೆಲ್ಲಿತು ರಕುತ
ಯಾರೋ ಪಾನ್ ಜಗಿದು ಉಗುಳಿದಂತೆ
ಬಾಂಬಿನ ಒಂದು ಲಾಡಿ ಸಿಡಿಯಿತು
ಚಿಲ್ಲಾ-ಪಿಲ್ಲಿಯಾದವು ನಾಲ್ಕೂದಿಕ್ಕಿಗೆ
ರುಂಡ ಮುಂಡ ಕೈಕಾಲುಗಳು
ಸುಟ್ಟುಹೋದರು ಎಲ್ಲ
ಒಲೆಯ ಮೇಲಿಟ್ಟಾಗ ಚುಟುಗುಟ್ಟುವ ಗೊಂಜಾಳದಂತೆ
ಎಲ್ಲೆಡೆ ಮೌನ ಆವರಿಸಿದಾಗ
ಮನೆಯ ಮೂಲೆಯೊಂದರಲಿ
ಯಾರೋ ಬಿಕ್ಕುವ ಸದ್ದು
ಹೋಗಿ ನೋಡಿದರೆ
ದೀಪವೊಂದು ನಡಗುತ್ತಿತ್ತು
ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕನಸುಗಳಿಗೆ ಸರಹದ್ದುಗಳಿಲ್ಲ
ಕಣ್ಣು ಮುಚ್ಚಿದರೆ ಸಾಕು
ಗಡಿಯಾಚೆ ತಲುಪಿ ಬಿಡುತ್ತೇನೆ ನಾನು
ಮೆಹದಿ ಹಸನ್ನನ್ನು ಭೇಟಿಯಾಗಲು
ಅವನ ದನಿಗೆ ಪೆಟ್ಟಾಗಿದೆಯಂತೆ
ಕಂಪಿಸುವ ತುಟಿಗಳ ಹೊತ್ತ ಗಜಲ್
ಅವನೆದುರು ಕುಳಿತು ರೋದಿಸುತ್ತಿಯಂತೆ
ಪುಸ್ತಕಗಳಲಿ
ಜೋಪಾನವಾಗಿರಿಸಿದ್ದ ಗುಲಾಬಿಗಳು ಬಾಡುತ್ತಿರುವಾಗ
ಗೆಳೆಯ “ಫರಾಜ್” ಕೂಡ ಇಲ್ಲವಾದರು
ಇನ್ನು ಕನಸುಗಳಲಿ ಮಾತ್ರ ಭೇಟಿಯಾದಾರು
ಕಣ್ಣು ಮುಚ್ಚಿದರೆ ಸಾಕು
ಗಡಿಯಾಚೆತಲುಪಿ ಬಿಡುತ್ತೇನೆ ನಾನು
ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕನಸುಗಳಿಗೆ ಸರಹದ್ದುಗಳಿಲ್ಲ
ರಮಜಾನಿನ ಒಂದು ದಿನ
ರಮಜಾನ್ ತಿಂಗಳ ದಿನಗಳವು
ನಾನು ಪಾಕಿಸ್ತಾನಕ್ಕೆ ಬಂದಿದ್ದೆ
ನನ್ನ ವೀಸಾದಲ್ಲಿ
‘ಇಫ್ತಾರ್’ ವರೆಗೆ ಉಳಿಯುವ
ಅವಕಾಶವಿರಲಿಲ್ಲ
ಬಾಂಬೆಗೆ ಮರಳಿದೆ
ಬರುತ್ತ;
ಕರಾಚಿಯ ಸಮುದ್ರದ ಬಳಿ
ಕಾಗದದ ದೋಣಿಯೊಂದನ್ನು ಇಟ್ಟು ಬಂದಿದ್ದೇನೆ
ಬೀಸೋ ಗಾಳಿಯ ದಿಕ್ಕು ಬದಲಾದರೆ
ನನ್ನತ್ತ ತೇಲಿ ಬಂದರೂ ಬಂದೀತು
ಇಲ್ಲವಾದರೆ
ಈದ್ನ ಚಂದಿರ
ಬಾನಿನಲಿ ಮೂಡಿದ ದಿನ
ಅದನು ನನ್ನತ್ತ ಗಟ್ಟಿಯಾಗಿ ಊದಿಬಿಡು
ನಾನು ದಡದಲ್ಲಿ ಕಾಯುತ್ತೇನೆ
ನಿನ್ನ ಭೇಟಿಯಾಗುತ್ತೇನೆ
ಮುಗ್ದ ದೇವರು
ಎಲ್ಲೆಡೆ ಮೈಕೊರೆಯುವ ಚಳಿ
ಸುತ್ತಲೂ ಮಂಜು
ಮುದಿ ಜಲಪಾತದಡಿ
ಅರ್ಧ ಹರಿವ ಬೆಳಕು ಇನ್ನರ್ಧ ನಿದ್ದೆ;
ನಾನು ಶಿಮ್ಲಾದಿಂದ ಮರಳುತ್ತಿದ್ದೆ
ಆ ಬೆಟ್ಟದ ಅಡಿಯಲ್ಲಿ
ಸಣ್ಣದೊಂದು ವಸತಿ
ಅಲ್ಲೊಂದು ಪುಟ್ಟ ಮಂದಿರ ಪರ್ಸಿನಷ್ಟೇ ಗಾತ್ರ
ಅದಕಂಟಿಕೊಂಡೇ ಮಸೀದಿ
ಅದೂ ಲಾಕೇಟಿನಷ್ಟು ಮಾತ್ರ
ಮಸೀದಿಯ ಮೀನಾರುಗಳೋ
ಮಂದಿರದ ತೆಕ್ಕೆಯಲಿ ಓಲಾಡುತ್ತಿರುವಾಗ
ಮುಗ್ಧ ದೇವರುಗಳಿಬ್ಬರು
ತಣ್ಣನೇ ನಿದ್ದೆಯಲ್ಲಿದ್ದಾರೆ
ಹೀಗೂ ಆಗಬಹುದಾಗಿದ್ದರೆ...?
ನಿದಿರೆಯಲ್ಲಿ ನೀನು
ನನ್ನ ಕನಸುಗಳ ಕಾಣಬಹುದಾಗಿದ್ದರೆ
ನನ್ನ ಬಯಕೆಗಳೆಲ್ಲವನ್ನು
ನಿನಗೆ ತೋರಿಸಿಬಿಡುತ್ತಿದ್ದೆ
ನಿನಗೆ ಗೊತ್ತಾಗುತ್ತಿತ್ತು
ನನ್ನ ಕನಸಿನಲ್ಲಿ ನಾನು; ನಿನ್ನ
ಗಡಿಯಾಚೆಯ ನನ್ನೂರಿಗೆ ಕರೆದೊಯ್ದಿದ್ದೆ
ನಾನು ಹುಟ್ಟಿದ ಮನೆ ತೋರಿಸಿದ್ದೆ
ಛಾವಣಿಯ ಮೇಲಿದ್ದ ಲೋಹದ ಜಾಲ
ಮನೆಯಂಗಳದಲಿ ಚದುರಂಗದ ಮಣೆಯನ್ನು
ಮಣೆಯಂಥ ರಂಗೋಲಿಯಂತೆ ಮೂಡಿಸುತ್ತಿತ್ತು
ಚಿತ್ರ ರಂಗೋಲಿ ಬಿಡಿಸುತ್ತಿತ್ತು
ಹಾಗೆ ಆಗುವಂತಿದ್ದರೆ;
ನಿನಗೆ ನಮ್ಮ ಸಾಸಿವೆಯ ಹೊಲಗಳನ್ನು ತೋರಿಸಿದ್ದೆ
ಅದರ ಆ ಹಳದಿ ಹೂಗಳ ಕಿತ್ತು ತಿನ್ನಿಸಿದ್ದೆ
ಮೈಲುಗಟ್ಟಲೇ ದಾರಿಯುದ್ದಕ್ಕೂ
ಹಬ್ಬಿದ ಆಲದ ಮರಗಳಿಗೆ
ಜೋಕಾಲಿ ಕಟ್ಟಿ ಜೀಕಿಸಿದ್ದೆ
ಈಗಲೂ ಅಂತಹ ಕನಸು ಕಂಡರೆ ಸಾಕು
ನೆನಪುಗಳ ಘಮಲು
ನನ್ನ ಕಂಗಳ ಬೆಳಗಿಸುತ್ತದೆ
ನನ್ನ ಕನಸುಗಳ ನಿನಗೆ ಕಾಣಿಸುವಂತಿದ್ದರೆ;
ರಹತಾಸಿನ ನಡೆದಾಡುವ ಭಾವಿಯನ್ನು ತೋರಿಸಿದ್ದು
ನಿನಗೆ ಗೊತ್ತಾಗುತ್ತಿತ್ತು
ಕೋಟೆಯನ್ನು ತೆಪ್ಪಗೇ ಹಗಲು ಕಳೆಯುವ ಭಾವಿ
ರಾತ್ರಿಯಾದರೆ ಸಾಕು
ಊರೊಳಗಿಳಿದು ಬರುತ್ತದಂತೆ
ಈಗದೆಲ್ಲ ಕನಸುಗಳಲಿ ಮಾತ್ರ ಸಾಧ್ಯ;
ಅಲ್ಲಿ ಹೋಗಬೇಕೆಂದರೆ
ನೂರಾರು ಅಡೆತಡೆಗಳು
ಎಲ್ಲವೂ ರಾಜಕಾರಣ
ಆ ನನ್ನೂರಿಗೆ ಹೋಗಬೇಕೆಂದರೆ;
ಎರಡೆರೆಡು ಸರಕಾರಗಳ
ಹತ್ತಾರು ಕಛೇರಿಗಳ
ಬಾಗಿಲು ತಟ್ಟಬೇಕಿದೆ,
ನಾ ಕಂಡ ಕನಸುಗಳ
ಸಾಬೀತು ಪಡಿಸಬೇಕಿದೆ,
ನಾನು ಹುಟ್ಟಿದ ನೆಲ
ಇದೀಗ ಬೇರೆಯದೇ ದೇಶ
ಬೆಂಕಿಯಾರಿದ ಸೂರ್ಯ
ಕೆಲವು ಕೋಟಿ ವರುಷಗಳಲ್ಲಿ
ಸೂರ್ಯನ ಬೆಂಕಿ ಆರುತ್ತದೆ
ಭಸ್ಮ ಎಲ್ಲೆಡೆ ಹಾರುತ್ತದೆ
ಆಗ ಯಾವ ಚಂದ್ರನೂ ಮುಳುಗುವುದಿಲ್ಲ
ಯಾವ ಭೂಮಿಯೂ ಬೆಳಗುವುದಿಲ್ಲ
ಆರಿಹೋದ ತುಂಡು ಕೆಂಡದಂತೆ ಅದು
ಭೂಮಿಯ ಸುತ್ತು ಹಾಕುವುದು
ತನ್ನಷ್ಟಕ್ಕೆ ತಾನು
ಮಂದ ಬೆಳಕಿನಲ್ಲಿ
ಇಂಥ ಹೊತ್ತಲ್ಲಿ
ಕಾಗದದ ಮೇಲೆ ಬರೆದ ಕವಿತೆಯೊಂದು
ಹಾರುತ್ತ - ಹಾರುತ್ತ
ಸೂರ್ಯನ ಮೇಲೆ ಬಿದ್ದರೆ
ಸೂರ್ಯ;
ಮತ್ತೆ ಹೊತ್ತಿ ಉರಿದಾನು...
ನದೀಮ ಸನದಿ
ನದೀಮ ಸನದಿ (11.7.1992) ಬೆಳಗಾವಿ ಪಕ್ಕದ ಶಿಂದೊಳ್ಳಿ ಗ್ರಾಮದವರು. ಅವರ ಹಿನ್ನೆಲೆ ಸಿವಿಲ್ ಎಂಜಿನೀಯರಿಂಗ್. Construction Technology ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ನಲ್ಲಿ ಸಹಾಯಕ ಅಭಿಯಂತರರಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದ ಬಗ್ಗೆ ಅವರಿಗೆ ವಿಶೇಷ ಒಲವು. ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ಆಟಗಾರರು ಸಹ. ಸನದಿ ಅವರ ಮೊದಲ ಕವನ ಸಂಕಲನ ‘ಹುಲಿಯ ನೆತ್ತಿಗೆ ನೆರಳು’ ಪ್ರಕಟವಾಗಿದೆ. ಇದೀಗ ಗುಲ್ಜ಼ಾರರ ಒಂದಷ್ಟು ಕವನಗಳ ಅನುವಾದಿತ ಸಂಕಲನ ಪ್ರಕಟಣೆಗೆ ಸಿದ್ಧವಾಗಿದೆ.
ಮುದ್ರಣಕ್ಕೆ/ಬಿಡುಗಡೆಗೆ ಸಿದ್ಧವಾಗುತ್ತಿರುವ ನಿಮ್ಮ ಕೃತಿಗಳ ಆಯ್ದ ಭಾಗಗಳ ಪ್ರಕಟಣೆಗಾಗಿ ಸಂಪರ್ಕಿಸಿ team@konaru.org
ನದೀಮ ಅನುವಾದಿತ ಗುಲ್ಜಾರ್ ಕವಿತೆ ಹೃದಯ ಹೃದಯಗಳು ಮಾತಾಡುವಂತಿವೆ. ಗುಲ್ಜಾರ್ ಎಲ್ಲವನ್ನೂ ಸರಾಗವಾಗಿ ಹೇಳುವ ಭಾವತೀವ್ರತೆಯ ಕವಿ. ಪುಸ್ತಕ ನದೀಮ ಅವರ ಅನುವಾದಿತ ಪುಸ್ತಕ ಓದುವ ಕುತೂಹಲದಲ್ಲಿರುವೆ...ಶುಭಾಶಯಗಳು.
ಮಧು ಬಿರಾದಾರ