ಇತ್ತೀಚಿನ ಹಲವು ವಿದ್ಯಮಾನಗಳ ಹಿನ್ನೆಲೆಯಲ್ಲಿ, ನಮ್ಮ ಸಮಾಜದಲ್ಲಿ ಹರಡುತ್ತಿರುವ ಶೂನ್ಯ-ಮೊತ್ತದ ಚಿಂತನೆಯ ಪಿಡುಗು ನಾವು ಈಗ ಎದುರಿಸುತ್ತಿರುವ ವಾಗ್ವಾದದ ಬಿಕ್ಕಟ್ಟಿಗೆ ಹೇಗೆ ಕಾರಣವಾಗಿದೆ ಎಂಬುದರ ಬಗ್ಗೆ ಈ ಸುದೀರ್ಘ ಪ್ರಬಂಧದಲ್ಲಿ ಸಂಕೇತ ಪಾಟೀಲ ಚರ್ಚಿಸುತ್ತ, ಸಾಮಾಜಿಕ-ಮನಃಶಾಸ್ತ್ರ ಮತ್ತು ಗೇಮ್ ಥಿಯರಿಯ ಚೌಕಟ್ಟಿನ ಮೂಲಕ ಈ ಸಮಸ್ಯೆಯನ್ನು ವಿಶ್ಲೇಷಿಸಿದ್ದಾರೆ.

ನಿಮ್ಮ ಮನೆಗಳಲ್ಲೋ ಗೆಳೆಯರ ಕೂಟದಲ್ಲೋ ನಡೆಯುವ ರಾಜಕೀಯದ ಮಾತುಕತೆಯೊಂದನ್ನು ಕಲ್ಪಿಸಿಕೊಳ್ಳಿ. ಸಹಜವಾಗಿಯೇ ಶುರುವಾದದ್ದಕ್ಕೆ ಇದ್ದಕ್ಕಿದ್ದಂತೆ ಕಾವೇರುತ್ತದೆ. ಯಾವುದೋ ಚರ್ಚೆಯ ವಿಷಯ ಅಥವಾ ಕಾರ್ಯನೀತಿಯ ಕುರಿತು ಸ್ಪಷ್ಟವಾದ ಪರ ಅಥವಾ ವಿರೋಧದ ನಿಲುವನ್ನು ತೆಗೆದುಕೊಳ್ಳಲು ಆ ಸನ್ನಿವೇಶವು ನಿಮ್ಮ ಮೇಲೆ ಒತ್ತಾಯ ಹೇರುತ್ತದೆ. ಅದರ ಆಧಾರದ ಮೇಲೆ ನೀವು ಮೋದಿ ಅಥವಾ ಸಿದ್ಧರಾಮಯ್ಯನವರ (ಅಥವಾ ರಾಹುಲ್ ಗಾಂಧಿಯ) ಬೆಂಬಲಿಗರೋ ವಿರೋಧಿಗಳೋ ಎಂಬುದನ್ನು ಕೂಡಲೇ ಸಿದ್ಧ ಮಾಡಿ ತೋರಿಸಲಾಗುತ್ತದೆ. ವಾಗ್ವಾದವು ಜಗಳಕ್ಕೆ ತಿರುಗುತ್ತದೆ.
ಈ ಕ್ಷಣವು ನಮ್ಮ ಸಮಾಜವನ್ನು ವ್ಯಾಪಿಸಿರುವ ಸಮಸ್ಯೆಯೊಂದರ ಚಿಟಿಕೆಚಿತ್ರವನ್ನು ಸೆರೆಹಿಡಿಯುತ್ತದೆ. ಯಾವುದೇ ಸಮಸ್ಯೆಯನ್ನು ತೀರ ಸರಳೀಕರಿಸಿ, ಎಲ್ಲದರಲ್ಲೂ ಒಂದಕ್ಕೊಂದು ವಿರುದ್ದವಾದ ಎರಡೇ ಆಯ್ಕೆಗಳನ್ನು ಕಾಣುವ ಹುಸಿಯಿಬ್ಬಗೆಯ ಗೀಳು ನಮ್ಮ ಚಿಂತನಾಕ್ರಮದ ತಾರ್ಕಿಕತೆಯ ದೋಷವನ್ನು ಎತ್ತಿ ತೋರಿಸುತ್ತದೆ. ಈ ಪ್ರವೃತ್ತಿಯು ಸಂಕೀರ್ಣತೆಯನ್ನು ಕಡೆಗಣಿಸಿ, ಸೂಕ್ಷ್ಮ ವ್ಯತ್ಯಾಸಗಳನ್ನು ಮಟ್ಟಸಗೊಳಿಸಿ, ಸಮಗ್ರ ಗ್ರಹಿಕೆಯನ್ನು ಹತ್ತಿಕ್ಕುತ್ತದೆ; ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ, ಅಲ್ಲದೇ ಜಾಗತಿಕ ಸಂಘರ್ಷಗಳಿಗೆ ನಾವು ಹೇಗೆ ಸ್ಪಂದಿಸುತ್ತೇವೆ, ಅವುಗಳೊಂದಿಗೆ ಯಾವ ಬಗೆಯಲ್ಲಿ ತೊಡಗಿಕೊಳ್ಳುತ್ತೇವೆನ್ನುವುದನ್ನು ನಿರ್ದೇಶಿಸುತ್ತದೆ.
ಈ ವಿದ್ಯಮಾನಕ್ಕೆ ಒಂದು ಉದಾಹರಣೆಯಾಗಿ 2020-21ರಲ್ಲಿ ನಡೆದ ರೈತರ ಪ್ರತಿಭಟನೆಯನ್ನು ಗಮನಿಸಬಹುದು. ದೆಹಲಿಯ ಸುತ್ತಮುತ್ತಲೂ ಶುರುವಾಗಿ ಅನಂತರ ಇಡೀ ದೇಶಕ್ಕೆ ವ್ಯಾಪಿಸಿದ ಈ ಚಳವಳಿಗೆ ಮೇಲ್ನೋಟಕ್ಕೆ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳು ಕಾರಣಗಳಾಗಿದ್ದರೂ ಅಲ್ಲಿ ಇದ್ದದ್ದು ಕೇವಲ ಸರಕಾರದ ಕಾರ್ಯನೀತಿ ಮತ್ತು ರೈತರ ಹಕ್ಕುಗಳ ಕುರಿತಾದ ವ್ಯಾಜ್ಯವಲ್ಲ, ಬದಲಿಗೆ ಆಳವಾದ ಸಾಮಾಜಿಕ ಬಿರುಕು. ಆಳ್ವಿಕೆಯು ತನ್ನ ಕಟ್ಟಾ ಬೆಂಬಲಿಗರು ಮತ್ತು ಮಾಧ್ಯಮಗಳ ಸಹಾಯದಿಂದ ರೈತರ ಪ್ರತಿಭಟನೆಯನ್ನು ಅಕ್ರಮ ಬಂಡಾಯವೆಂದು ಬಿಂಬಿಸಿತು; ಪ್ರತಿಭಟಿಸುತ್ತಿದ್ದ ರೈತರನ್ನು “ಖಾಲಿಸ್ತಾನಿ”ಗಳೆಂದೂ “ಆಂದೋಲನಜೀವಿ"ಗಳೆಂದೂ ಹಣೆಪಟ್ಟಿ ಹಚ್ಚಿತು. ಇದು ದೇಶಪ್ರೇಮಿ ಮತ್ತು ದೇಶದ್ರೋಹಿಗಳ ಸಂಘರ್ಷ ಎಂಬ ನಿರೂಪಣೆಯನ್ನು ಕಟ್ಟಲಾಯಿತು. ಇದಕ್ಕೆ ಎದುರಾಗಿ, ಪ್ರತಿಭಟನಾಕಾರರು, ಇದು ಕಾರ್ಪೋರೇಟ್ ಅತಿಕ್ರಮಣದ ವಿರುದ್ಧ ರೈತರ ಹೋರಾಟ, ತಮ್ಮ ಜೀವನೋಪಾಯಕ್ಕಾಗಿ ಪಾರಂಪರಿಕ ವಿಭಜನೆಗಳನ್ನು ಮೀರಿ ಒಗ್ಗಟ್ಟಿನಿಂದ ಮಾಡುತ್ತಿರುವ ತಳಮಟ್ಟದ ಚಳವಳಿ, ಎಂಬ ಚಿತ್ರಣವನ್ನು ಕಟ್ಟಿದರು. ವಿರೋಧಪಕ್ಷಗಳು ತಮ್ಮ ನೈತಿಕ ಶ್ರೇಷ್ಠತೆಯನ್ನು ಮೆರೆದುವು. ಚಳವಳಿಯ ತೀವ್ರತೆ ಹೆಚ್ಚಿದಂತೆ ಅದಕ್ಕೆ ಪೈಪೋಟಿಯಾಗಿ ಅದರ ಕುರಿತ ವ್ಯಾಖ್ಯಾನಗಳು ಹೆಚ್ಚು ವಿಪರೀತವಾಗುತ್ತ ಹೋದುವು. ಕೃಷಿ ಕಾಯ್ದೆಗಳು ನಿಜಕ್ಕೂ ಏನು ಹೇಳುತ್ತಿವೆ — ಬಹುತೇಕರು ಅವನ್ನು ಆಳವಾಗಿ ಪರಿಶೀಲಿಸಿರುವ ಸಾಧ್ಯತೆಯೇ ಕಡಿಮೆ! — ಅವು ಯಾವ ಅಂಶಗಳಲ್ಲಿ ರೈತರಿಗೆ ಅನುಕೂಲಕಾರಿ ಮತ್ತು ಎಲ್ಲಿ ಅಪಾಯಕಾರಿ ಎಂಬ ಚರ್ಚೆ ಹಿನ್ನೆಲೆಗೆ ಸರಿಯಿತು. ಅದು ಯಾವ ಬಿಂದುವಿನಲ್ಲೂ ಸಂಧಿಸದ, ಎಲ್ಲಿಯೂ ಹೊಂದಾಣಿಕೆಯನ್ನು ಸಾಧಿಸಲಾಗದ ಎರಡು ಜಗತ್ತುಗಳ ನಡುವಿನ ಸಂಘರ್ಷವಾಗಿತ್ತು. ಸರಕಾರವು ಕೊನೆಗೆ ಹಿಮ್ಮೆಟ್ಟಿದ್ದು ಕೂಡ ಒಂದು ರಾಜಕೀಯ ತಂತ್ರದ ಭಾಗವೇ ಹೊರತು ಸಂವಾದದ ಮೂಲಕ ಸಾಧಿಸಿದ ಒಮ್ಮತದಿಂದಲ್ಲ.
ಈ ಘಟನಾವಳಿಯು ಜಾಗತಿಕ ವಿದ್ಯಮಾನವೊಂದರ ಪ್ರಬಲ ಪ್ರತಿಮೆಯಂತೆ ತೋರುತ್ತದೆ. ನಾವೊಂದು ವಾಗ್ವಾದದ ಬಿಕ್ಕಟ್ಟಿನಲ್ಲಿ (Argumentation Crisis) ಸಿಲುಕಿಕೊಂಡಿದ್ದೇವೆ. ಮುಂದುವರಿದ ಪಾಶ್ಚಾತ್ಯ ಪ್ರಜಾಪ್ರಭುತ್ವಗಳಲ್ಲಿ ಕೂಡ ಉಂಟಾಗಿರುವ ಸಾಮಾಜಿಕ ರಾಜಕೀಯ ಇರ್ಕಟ್ಟುಗಳಿಂದ ಹಿಡಿದು ಆನ್ಲೈನ್ ಸಂವಾದಗಳಲ್ಲಿನ ವಿಷಕಾರುವಿಕೆಯವರೆಗೂ ಎಲ್ಲೆಲ್ಲೂ ಕಂಡುಬರುವ ಈ ವಾಗ್ವಾದದ ಬಿಕ್ಕಟ್ಟು ನಮ್ಮ ಸಾರ್ವಜನಿಕ ಚರ್ಚೆಗಳಲ್ಲಿನ ಸೌಜನ್ಯದ ಅವನತಿ ಮಾತ್ರವಲ್ಲ; ಅದು ಮಾನವನ ಅರಿವಿನ ಆಳದಲ್ಲಿ ಬೇರೂರಿರುವ, ಸರಳ ಮತ್ತು ಸ್ಪಷ್ಟ ಆಯ್ಕೆಗಳಿಗೆ ಆದ್ಯತೆ ಕೊಡುವ ಮೂಲ ಪ್ರವೃತ್ತಿಯ ಗಾಢವಾದ ಪರಿಣಾಮ. ಇಂದು ಸುಲಭ ಸರಕಾಗಿರುವ ರಾಜಕೀಯ ಸಿದ್ಧಾಂತ ಮತ್ತು ತಂತ್ರಜ್ಞಾನಗಳು ನಮಗೆ ಸಹಜವಾದ (ಮತ್ತು ಕೆಲವು ಸಂದರ್ಭಗಳಲ್ಲಿ ಉಪಯುಕ್ತವೂ ಆದ) ಈ ಪ್ರವೃತ್ತಿಯನ್ನು ಅಪಾಯಕಾರಿಯಾಗಿ ಉದ್ದೀಪಿಸುತ್ತಿವೆ. ಪ್ರತಿಯೊಂದು ಸಾರ್ವಜನಿಕ ಸಂವಾದವನ್ನು ಸಕ್ರಿಯವಾಗಿ ಪರ-ವಿರುದ್ಧದ ಬೈನರಿ ಆಯ್ಕೆಗಳಿಗೆ ಇಳಿಸಿದಾಗ ಸಾಮಾನ್ಯ ತಿಳಿವಳಿಕೆ ಮತ್ತು ಸಹಯೋಗದ ಸಾಧ್ಯತೆಯೇ ಅಳಿದುಹೋಗುತ್ತದೆ.
ಪಹಲ್ಗಾಮ್ನಲ್ಲಿ ನಡೆದ ಬರ್ಬರ ಹತ್ಯೆಗಳನ್ನು ಇಸ್ಲಾಮಿಕ್ ಭಯೋತ್ಪಾದನೆಯ ಕೃತ್ಯ ಎಂದು ನೇರವಾಗಿ ಹೆಸರಿಟ್ಟು ಕರೆಯುತ್ತಲೇ ಅದರೊಟ್ಟಿಗೇ ಅಂಥವನ್ನು ಬಳಸಿಕೊಳ್ಳುವ ಆಳ್ವಿಕೆಯ ಯುದ್ಧಕೋರತನವನ್ನೂ ಖಂಡಿಸುವುದರಲ್ಲಿ; ಯುದ್ಧದ ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳುತ್ತಲೂ ಅದರ ಕುರಿತು ಕಳವಳಪಡುವುದು, ಯುದ್ಧವನ್ನು ವಿರೋಧಿಸುವುದರಲ್ಲಿ ಯಾವುದೇ ತಾರ್ಕಿಕ ಅಥವಾ ಸೈದ್ಧಾಂತಿಕ ಅಸಮಂಜಸತೆಯಿಲ್ಲ. ಇಸ್ರೇಲಿನ ಜ಼ಿಯೋನಿಸ್ಟ್ ಸರಕಾರ ಮತ್ತು ಹಾಮಾಸ್ ಎರಡರ ವಿರುದ್ಧವೂ ದನಿಯೆತ್ತುತ್ತ ಜೊತೆಗೇ ಈ ಎರಡೂ ದೇಶಗಳ ಸಾಮಾನ್ಯ ಜನರೊಂದಿಗೆ ಸಹಾನುಭೂತಿ ಇರುವುದು ಸಾಧ್ಯವಿದೆ. ಪ್ಯಾಲೆಸ್ಟೈನ್ನ ಕವಿತೆಗಳ ಜೊತೆಗೇ ತಮಗೆ ಬೇಕಿಲ್ಲದ ಯುದ್ಧದಲ್ಲಿ ನಲುಗುತ್ತಿರುವ ಇಸ್ರೇಲಿಗಳ ನೋವಿನ ಕತೆಗಳನ್ನು ಹಂಚಿಕೊಂಡರೆ, ಇರಾನಿನಲ್ಲಿ ಅಹೂ ದರ್ಯಾಯಿಯಂಥ ಅಸಂಖ್ಯ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿದರೆ ನಮ್ಮ ಪ್ರಗತಿಪರತೆಯ ರುಜುವಾತು ಕಡಿಮೆಯಾಗುವುದಿಲ್ಲ. ಹಾಗಿದ್ದೂ ನಾವು ಒಂದು ಪಕ್ಷವನ್ನು ತೆಗೆದುಕೊಂಡು ಅದಕ್ಕೆ ಗಟ್ಟಿಯಾಗಿ ಅಂಟಿಕೊಳ್ಳುತ್ತೇವೆ. ಸದಾಕಾಲವೂ ನಮ್ಮ ಸಹವರ್ತಿಗಳನ್ನು ಮೆಚ್ಚಿಸುತ್ತ ಅವರ ಕೆಂಗಣ್ಣಿಗೆ ಗುರಿಯಾಗದಂತೆ ನಡೆದುಕೊಳ್ಳುತ್ತೇವೆ.
ನಮ್ಮ ಸಮಾಜ, ಆರ್ಥಿಕತೆ, ಸಂಸ್ಕೃತಿ, ಸಾಹಿತ್ಯದ ಚರ್ಚೆಗಳಲ್ಲೂ ಎಲ್ಲವನ್ನೂ ನಮಗೆ ಪ್ರಿಯವಾದ ಸಿದ್ಧಾಂತಗಳ ಚೌಕಟ್ಟಿನಲ್ಲಿಯೇ ಹಿಡಿದಿಡುವ, ಬೈನರಿ ದೃಷ್ಟಿಕೋನಗಳಿಂದ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಉದಾಹರಣೆಗೆ, ವ್ಯಕ್ತಿ-ಸಮುದಾಯ, ದಲಿತ-ಸವರ್ಣ, ಶೋಷಿತ-ಶೋಷಕ, ಬಂಡವಾಳಶಾಹಿ-ಸಮಾಜವಾದ ಮೊದಲಾದುವು. ಈ ಗ್ರಹಿಕೆಗಳು ತಪ್ಪು ಎಂದಲ್ಲ. ಅವು ಹಲಬಗೆಯಲ್ಲಿ ಸರಿಯಾದುವೇ ಮತ್ತು ಅಗತ್ಯದ್ದುವೇ. ಆದರೆ, ಅವುಗಳಷ್ಟೇ ಸಾಕಾಗುವುದಿಲ್ಲ, ಅವುಗಳಿಂದಲೇ ಎಲ್ಲವನ್ನೂ ವಿವರಿಸಲಾಗುವುದಿಲ್ಲ, ಪರಿಹರಿಸಲಾಗುವುದಿಲ್ಲ. ಇನ್ನು, ಆಹಾರದ ಕುರಿತ ಚರ್ಚೆಗಳತ್ತ ನೋಟ ಹರಿಸಿದರೆ, ಸಸ್ಯಾಹಾರಿ-ಮಾಂಸಾಹಾರಿ ಕಿತ್ತಾಟಗಳು ಕಾಣುತ್ತವೆ. ಅಷ್ಟೇ ಏಕೆ, ಶಿಕ್ಷಣದಲ್ಲಿ ಕಲಿಕೆಯ ಮಾಧ್ಯಮದ ಕುರಿತ ನಮ್ಮ ಅಸಮಗ್ರ ಗ್ರಹಿಕೆಯು ಕನ್ನಡ-ಇಂಗ್ಲಿಷ್ ಎಂಬ ಹುಸಿಯಿಬ್ಬಗೆಯನ್ನು ಈ ಕಾಲದಲ್ಲಿಯೂ ಮುಂದುವರೆಸಿದೆ. ಆಹಾರದ ಹಕ್ಕನ್ನು ಬೆಂಬಲಿಸುತ್ತಲೇ ಹೆಚ್ಚಿದ ಮಾಂಸಾಹಾರದ ಸೇವನೆಯಿಂದ ಉಂಟಾಗಬಹುದಾದ ಪರಿಸರದ ಅಸಮತೋಲದ ಕುರಿತು ಚಿಂತಿಸುವುದು; ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಲೇ ಜಾಗತೀಕರಣ, ಮುಕ್ತ ಮಾರುಕಟ್ಟೆಗಳ ಅನುಕೂಲತೆಗಳಿಗೆ ತೆರೆದುಕೊಳ್ಳುವುದು ಅಸಹಜವೇನಲ್ಲ. “ಒಂದು ವಿಚಾರವನ್ನು ಒಪ್ಪಿಕೊಳ್ಳದೆಯೂ ಅದರ ಕುರಿತು ಆಳವಾಗಿ ಯೋಚಿಸುವುದು, ಅದರೊಂದಿಗೆ ತೊಡಗಿಕೊಳ್ಳಲು ಸಾಧ್ಯವಾಗುವುದು ವಿದ್ಯಾವಂತ ಮನಸ್ಸಿನ ಲಕ್ಷಣ,” ಎಂಬ ಮಾತಿದೆ. ಮೇಲ್ನೋಟಕ್ಕೆ ವ್ಯತಿರಿಕ್ತವೆಂದು ಕಾಣುವ ಹಲವು ಕಲ್ಪನೆಗಳನ್ನು ಒಟ್ಟಿಗೇ ಪರಿಗಣಿಸಿ ಸಮನ್ವಯ ಸಾಧಿಸಬಹುದು. ಆದರೆ, ಸರಳ ವ್ಯಾಖ್ಯಾನಗಳ ಸೆಳೆತಕ್ಕೆ ಸಿಲುಕಿ ನಾವಿಂದು ಅಂಥ ಸಾಧ್ಯತೆಗಳನ್ನೇ ಕಳೆದುಕೊಳ್ಳುತ್ತಿದ್ದೇವೇನೋ ಎನ್ನಿಸುತ್ತದೆ.
ಈ ಸಮಸ್ಯೆಯು ಹೊಸದೇನಲ್ಲ. ಅಲ್ಲದೇ ಗುಂಪುಗಳಲ್ಲಿ ಕರಗಿ ಒಂದಾಗಿ ಹರಿದುಹೋಗುವುದು ಕೂಡ ಮಾನವನ ಮೂಲಪ್ರವೃತ್ತಿಯೇ ಆಗಿದೆ. ಇದನ್ನು ಗುಸ್ತಾವ್ ಲ ಬಾನ್ (Gustave Le Bon) ಎಂಬ ಫ್ರೆಂಚ್ ವೈದ್ಯ ಮತ್ತು ಬಹುಶ್ರುತ ಉಳಿದವರಿಗಿಂದ ಬಹಳ ಹಿಂದೆಯೇ ಕಂಡುಕೊಂಡಿದ್ದರು. ಲ ಬಾನ್ ಅವರ 'The Crowd: A Study of the Popular Mind' ಎಂಬ ಕೃತಿಯು ಸಾಮಾಜಿಕ ಮನೋವಿಜ್ಞಾನದ (Social Psychology) ಬುನಾದಿಯ ಕೃತಿಯಾಗಿದ್ದು, 1895 ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು. ಬಹುಶಃ, ಫ್ರೆಂಚ್ ಕ್ರಾಂತಿ, ಅದರ ನಂತರ ಸ್ಥಾಪಿತವಾದ ಮೇಲ್ದೋರಿಕೆಯ ಗಣರಾಜ್ಯ; ಮುಂದೆ ತುಸುವೇ ಕಾಲದಲ್ಲಿ ಅದರ ಪತನಕ್ಕೂ ನೆಪೋಲಿಯನ್ನ ಉದಯಕ್ಕೂ ಕಾರಣವಾದ 'ಭಯೋತ್ಪಾದಕ ಆಳ್ವಿಕೆ' (Reign of Terror); ಇವೆಲ್ಲ ವಿದ್ಯಮಾನಗಳು ನಡೆಯುತ್ತಿದ್ದಾಗ ಅವರು ಗಮನಿಸಿದ ಸಂಗತಿಗಳು, ಅವರ ವಿಚಾರಗಳನ್ನು ಸಿದ್ಧಾಂತ ರೂಪದಲ್ಲಿ ಮಂಡಿಸಲು ಸಹಾಯ ಮಾಡಿರಬಹುದು.
“Alone, we think. In a crowd, we react,” ಎಂಬುದು ಆ ಪುಸ್ತಕದ ಸಾರ. ನಾವು ಒಂಟಿಯಾಗಿದ್ದಾಗ, ಪ್ರತ್ಯೇಕ ವ್ಯಕ್ತಿಗಳಾಗಿ ಆಲೋಚಿಸುತ್ತೇವೆ, ತರ್ಕಿಸುತ್ತೇವೆ; ಆಯ್ಕೆಗಳು ಮತ್ತು ಪರಿಣಾಮಗಳನ್ನು ಪರಿಗಣಿಸುತ್ತೇವೆ, ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುತ್ತೇವೆ — ಕನಿಷ್ಠಪಕ್ಷ ಅದಕ್ಕೆ ಅವಕಾಶವಾದರೂ ಇರುತ್ತದೆ. ಆದರೆ, ಗುಂಪುಗಳಿಗೆ ತಮ್ಮದೇ ಆದ ಮನೋವೃತ್ತಿ ಇರುತ್ತದೆ. ಅನೇಕ ಸಲ ಸಣ್ಣದೊಂದು ಪ್ರಚೋದನೆ ಅಥವಾ ಆಕಸ್ಮಿಕದಿಂದ ಗುಂಪು ದೊಂಬಿಯಾಗುತ್ತದೆ (mob). ನಿಯಂತ್ರಿಸಲಾಗದ್ದಾಗುತ್ತದೆ. ದೊಂಬಿಯಲ್ಲಿ ವ್ಯಕ್ತಿತ್ವಗಳು ಕರಗಿಹೋಗುತ್ತವೆ, ತರ್ಕವು ಭಾವನೆಗೆ ಶರಣಾಗುತ್ತದೆ, ಹಾಗೂ ಜನರು ತಮ್ಮಳವಿಗೆ ಮೀರಿದ ಸಾಮೂಹಿಕ ಮನಸ್ಸೊಂದರಿಂದ ಪ್ರಚೋದನೆಗೊಳಗಾಗುತ್ತಾರೆ — ಸುಲಭವಾಗಿ ದಾರಿತಪ್ಪಿಸಲ್ಪಡುತ್ತಾರೆ, ಆತುರದಿಂದಲೂ ತೀವ್ರವಾಗಿಯೂ ನಡೆದುಕೊಳ್ಳುತ್ತಾರೆ. ನಮ್ಮ ಆದಿಮ ಪ್ರವೃತ್ತಿಯು ಮೇಲುಗೈ ಸಾಧಿಸುತ್ತದೆ. ಸಂಯಮವನ್ನು ಕಳೆದುಕೊಳ್ಳುತ್ತೇವೆ. ಏಕೆಂದರೆ, ಇನ್ನೀಗ ಮುಂದೆ ಆಗುವುದಕ್ಕೆ ಯಾವುದೇ ಒಬ್ಬ ವ್ಯಕ್ತಿ ಹೊಣೆಗಾರನಾಗಿರುವುದಿಲ್ಲ; ಬದಲಿಗೆ ಅದು ಇಡೀ ಸಮೂಹದ, ಅದರ ಮನೋವೃತ್ತಿಯ ಹೊಣೆಗಾರಿಕೆ. ಆದರೆ ಆ ದೊಂಬಿಯ ಮನೋವೃತ್ತಿಯು ನೆಲೆಗೊಂಡಿರುವುದಾದರೂ ಎಲ್ಲಿ? ಮೇಲೆ ಹೇಳಿದಂತೆ ಅದು ವ್ಯಕ್ತಿಗಳ ಅಳವಿಗೆ ನಿಲುಕದ್ದು, ಅರಿವಿಗೆ ಬಾರದ್ದು. ಹೀಗಾಗಿ, ಒಂದು ರೀತಿಯ ಸಂಮೋಹಕ ಉನ್ಮಾದವು ಸಾಂಕ್ರಾಮಿಕದಂತೆ ಹರಡುತ್ತದೆ.
ಇಲ್ಲಿ ಒಂದು ಸ್ಪಷ್ಟನೆ ಕೊಡಬೇಕಾಗಿದೆ: ದೊಂಬಿ ಮನೋವೃತ್ತಿಯ ಪರಿಣಾಮಗಳು ಯಾವಾಗಲೂ ವಿನಾಶಕಾರಿಯಾಗಿರಬೇಕಾಗಿಲ್ಲ. ಸರಿಯಾದ ಸೂಚನೆ ಅಥವಾ ಪ್ರಚೋದನೆಯ ಸಹಾಯದಿಂದ ಜನಸಮೂಹಗಳನ್ನು ಧನಾತ್ಮಕವಾದ ಫಲಿತಾಂಶಗಳಿಗಾಗಿ, ಸಾಮಾಜಿಕ ಬದಲಾವಣೆಗಳಿಗಾಗಿ ಅಣಿಗೊಳಿಸಲೂಬಹುದು. ಆದರೆ, ಅದು ಹೆಚ್ಚು ಸವಾಲಿನ ಕೆಲಸ.
ಇನ್ನೊಂದು ಆಸಕ್ತಿಕರ ಸಂಗತಿಯೆಂದರೆ, ಒಂದು 'ಗುಂಪು' ಗಲಭೆ ಮಾಡುವ ದೊಂಬಿಯಾಗಿ (mob) ಬದಲಾಗಲು ಭೌತಿಕವಾಗಿ ಒಂದೇ ಸ್ಥಳದಲ್ಲಿ ಇರಬೇಕಾದ ಅಗತ್ಯವಿಲ್ಲ. ಉದಾಹರಣೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಸತತ ನಡೆಯುವ ದೊಂಬಿಯ ಹಲ್ಲೆಗಳನ್ನೂ (lynch mobs) ಮತ್ತು ಟ್ರೋಲ್ ಸೇನೆಗಳನ್ನೂ (troll armies) ಗಮನಿಸಬಹುದು.
ಒಂದು ವಿಷಯವನ್ನು ಸಮಗ್ರವಾಗಿ ಗ್ರಹಿಸಿ ಅದರ ಕುರಿತು ಆಳವಾಗಿ ಚಿಂತಿಸುವವರು ಯಾವ ಕಾಲದಲ್ಲೂ ತೀರ ಕಡಿಮೆಯೇ. ಆದರೆ, ಹಿಂದಿನಂತಲ್ಲದೇ ಕಳೆದ ಎರಡು ದಶಕಗಳಲ್ಲಿ ಮಾಹಿತಿಯು ಸುಲಭವಾಗಿದೆ. ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳು ಒಂದು ವಿಶ್ವವ್ಯಾಪಿ ಡೆಮಾಕ್ರಟೈಜ಼ೇಶನ್ ಪ್ರಕ್ರಿಯೆಯ ಭಾಗವೆನ್ನುವುದು ನಿಜ. ಆದರೆ, ಅವು ವ್ಯವಸ್ಥಿತ ವೆಪನೈಜ಼ೇಶನ್ ಪ್ರಕ್ರಿಯೆಯ ಭಾಗವೆನ್ನುವುದೂ ನಿಜ. (ಇಷ್ಟಕ್ಕೂ ನಾಲ್ಕಾರು ದೈತ್ಯ ಕಾರ್ಪೋರೇಟ್ ಸಂಸ್ಥೆಗಳ ನಿಯಂತ್ರಣದಲ್ಲಿರುವ ಪ್ಲ್ಯಾಟ್ಫಾರ್ಮ್ಗಳು ನಿಜಕ್ಕೂ ಡೆಮಾಕ್ರಟಿಕ್ ಹೌದೇ, ಎನ್ನುವುದು ಬೇರೆಯದೇ ಪ್ರಶ್ನೆ.) ಅಲ್ಗೋರಿದಂಗಳು ಮಾಹಿತಿಯ ತುಣುಕುಗಳನ್ನು ಆಯ್ದು — ಅವುಗಳಲ್ಲಿ ಬಹಳಷ್ಟು ಅರೆಬರೆ ಮತ್ತು ಪೂರ್ವಕಲ್ಪನೆಗಳನ್ನು ಪೋಷಿಸುವಂಥವು — ಅವುಗಳಿಂದ ನಮಗೊಪ್ಪುವ ಮಾರುಲಿಗೋಣೆಗಳನ್ನು (echo chambers) ಕಟ್ಟಿಕೊಡುತ್ತಿರುವ ಈ ಕಾಲದಲ್ಲಿ; ಸಂಕೀರ್ಣ ಸಮಸ್ಯೆಯೊಂದು ಸೋಶಿಯಲ್ ಮೀಡಿಯಾ ಪೋಲ್ನ ವಸ್ತುವಾದಾಗ, ಆ್ಯಕ್ಟಿವಿಸಂ ಎನ್ನುವುದು ಆನ್ಲೈನ್ ಅಹವಾಲುಗಳಿಗೆ ಸಮ್ಮತಿಯ ಮುದ್ರೆಯೊತ್ತಿ ಹಂಚಿಕೊಳ್ಳುವುದಕ್ಕೆ ಸೀಮಿತವಾದಾಗ, ಅಧ್ಯಯನದ ವಿಷಯವೊಂದನ್ನು ಕೆಲವು ‘ಶಾರ್ಟ್ಸ್’ಗೆ ಭಟ್ಟಿಯಿಳಿಸಲು ಸಾಧ್ಯವಾದಾಗ, ನಮ್ಮೆದುರಿಗೆ ಇರುವುದು ಕೇವಲ ಒಂದು ರಾಜಕೀಯ ಅಥವಾ ಸಾಂಸ್ಕೃತಿಕ ಬಿಕ್ಕಟ್ಟಲ್ಲ. ಇದು ಒಂದು ತಲೆಮಾರಿನ ಜ್ಞಾನಮೀಮಾಂಸೆಯ ಬಿಕ್ಕಟ್ಟು. ನಾವು ಅರಿತಿರುವುದನ್ನು ನಿಜಕ್ಕೂ ಅರಿತಿದ್ದೇವೆಯೇ, ಆ ಅರಿವಿನ ಮೂಲ ಯಾವುದು, ಅರಿತ ವಿಧಾನಗಳು ಯಾವುವು, ಎಂಬ ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿದೆ. ನಮ್ಮ ಚಿಂತನೆಯಲ್ಲಿನ ಸಮಸ್ಯೆಗಳನ್ನು ಗುರುತಿಸಿಕೊಳ್ಳಲು, ತಿದ್ದಿಕೊಳ್ಳಲು ಮನಃಶಾಸ್ತ್ರ, ತರ್ಕಶಾಸ್ತ್ರ, ಅರ್ಥಶಾಸ್ತ್ರ, ಗೇಮ್ ಥಿಯರಿ ಮೊದಲಾದ ವಿವಿಧ ಜ್ಞಾನಕ್ಷೇತ್ರಗಳ ಪ್ರಾಥಮಿಕ ತತ್ವಗಳು, ಪರಿಕಲ್ಪನೆಗಳು ಮತ್ತು ಪರಿಕರಗಳನ್ನು ಬಳಸಿಕೊಳ್ಳುವ ಅಗತ್ಯವಿದೆ. ಅವು ಹಲವು ಉಪಯುಕ್ತ ಚಿಂತನಾಕ್ರಮಗಳನ್ನೂ ಮಾದರಿಗಳನ್ನೂ (mental models) ಒದಗಿಸಬಲ್ಲುವು.
ಮೇಲೆ ಹೇಳಿದಂತೆ, ಈಗ ಉಲ್ಬಣವಾಗಿರುವ ನಮ್ಮ ಬೈನರಿ ವರ್ಗೀಕರಣದ ರೋಗಲಕ್ಷಣವು ಬದುಕುಳಿಯುವಿಕೆಗಾಗಿ ವಿಕಾಸಗೊಂಡ ಆದಿಮ ತಂತ್ರವೂ ಹೌದು. ಒಂದು ಸಂಕೀರ್ಣ ಸಮಸ್ಯೆ ಅಥವಾ ಅಪಾಯ ಎದುರಾದಾಗ ಲಭ್ಯ ಮಾಹಿತಿಯನ್ನು ಸಂಸ್ಕರಿಸಿ ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಲು ಅನುವಾಗುವಂಥ ಒಳದಾರಿಗಳೂ ಪರಿಹಾರ ಹುಡುಕುವ ಸರಳ ವಿಧಾನಗಳೂ ಮೆದುಳಿನಲ್ಲಿ ವಿಕಾಸಗೊಂಡುವು. ಇವು ಹಲವು ಸಂದರ್ಭಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದರೂ ಉಳಿದಂತೆ ನಮ್ಮ ತರ್ಕದೋಷಗಳಿಗೂ ಪೂರ್ವಗ್ರಹಗಳಿಗೂ ಕಾರಣವಾಗಿ ಅಪ್ರಜ್ಞಾಪೂರ್ವಕವಾಗಿ ಕಪ್ಪುಬಿಳುಪಿನ ಲೋಕದೃಷ್ಟಿಯನ್ನು ರೂಪಿಸುತ್ತವೆ. ಹಲಬಗೆಯ ಅರಿವಿನ ಆಭಾಸಗಳು (cognitive biases) ಈ ರೀತಿಯ ಚಿಂತನೆಯನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುತ್ತವೆ. ಇದರಲ್ಲಿ ಒಂದು, ದೃಢೀಕರಣ (confirmation bias), ಎಂದರೆ ನಮಗೆ ಈಗಾಗಲೇ ಇರುವ ನಂಬಿಕೆಗಳನ್ನು ಗಟ್ಟಿಗೊಳಿಸುವ ಮಾಹಿತಿ, ವಾದ, ದತ್ತಾಂಶಗಳನ್ನು ಮಾತ್ರ ಹುಡುಕಿ, ಆಯ್ದು, ನೆನಪಿಟ್ಟುಕೊಳ್ಳುವ ಹಾಗೂ ಅದಕ್ಕೆ ವಿರುದ್ಧವಾಗಿರುವುದನ್ನು ಕಡೆಗಣಿಸುವ ಪ್ರವೃತ್ತಿ. ಇನ್ನೊಂದು, ನೇತ್ಯಾತ್ಮಕತೆ (negativity bias), ಎಂದರೆ ನಮಗಾದ ಒಳ್ಳೆಯ ಅನುಭವಗಳಿಗಿಂತ, ಕೆಟ್ಟ ಅಥವಾ ಅಹಿತಕರ ಅನುಭವಗಳಿಗೆ ಅತಿ ಹೆಚ್ಚಿನ ತೂಕ ಕೊಡುವುದು. ಮೂರನೆಯದು, ಲಭ್ಯತೆ (availability heuristic): ನಮಗೆ ಸುಲಭವಾಗಿ ಒದಗಿಬರುವ (ಹೆಚ್ಚಾಗಿ ಇತ್ತೀಚಿನ — recency bias) ಘಟನೆಗಳ ಆಧಾರದ ಮೇಲೆ ಸಾರ್ವತ್ರಿಕ ನಿರ್ಣಯಗಳನ್ನು ಹೊರಡಿಸುವುದು. ಉದಾಹರಣೆಗೆ, ವಲಸಿಗರೊಬ್ಬರ ಮೇಲೆ ಇತ್ತೀಚೆಗೆ ನಡೆದ ಹಲ್ಲೆಯ (ಅಥವಾ ವಲಸಿಗರೊಬ್ಬರು ಮಾಡಿದ ದಬ್ಬಾಳಿಕೆಯ) ಒಂದು ಘಟನೆಯು ಸುದೀರ್ಘಕಾಲದ ಶಾಂತಿ ನೆಮ್ಮದಿಯ ಸಹಬಾಳ್ವೆಯ ಲೆಕ್ಕವಿಲ್ಲದಷ್ಟು ನಿದರ್ಶನಗಳನ್ನು ಒಮ್ಮೆಲೇ ಮರೆಮಾಚುತ್ತದೆ. ಇಂಥದೇ ಇನ್ನೊಂದು ಆಭಾಸ, ಆಧಾರಾವಲಂಬನೆಯದು (anchoring effect). ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಮಗೆ ಮೊದಲಿಗೆ ಒದಗಿಸಿದ ಮಾಹಿತಿಯ (ಉದಾಹರಣೆಗೆ, ಜಾತಿಗಣತಿಯ ಕುರಿತ ಮೊದಲು ಹೊರಬಂದ ಅಥವಾ ಸೋರಿದ ವರದಿಗಳ) ಮೇಲೆ ಅತಿಯಾದ ಅವಲಂಬನೆ. ಹೀಗೆ ಇನ್ನೂ ಹತ್ತಾರು ಬಗೆಯ ಆಭಾಸಗಳಿವೆ. ಅವುಗಳ ತಿಳಿವಳಿಕೆ ನಮ್ಮ ಚಿಂತನೆಯಲ್ಲಿನ ಸಮಸ್ಯೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
ಅರಿವಿನ ಆಭಾಸ ಮತ್ತು ಪೂರ್ವಗ್ರಹಗಳು ನಮ್ಮ ಸೀಮಿತ ಚಿಂತನೆಯ ಸಮಸ್ಯೆಗಳ ಸಂರಚನೆಯನ್ನು ರೂಪಿಸಿದರೆ, ಗೇಮ್ ಥಿಯರಿ ಅದಕ್ಕೆ ಪಾರಿಭಾಷಿಕಗಳನ್ನು ಒದಗಿಸುತ್ತದೆ. “ಶೂನ್ಯ-ಮೊತ್ತದ ಚಿಂತನೆ” (zero-sum thinking), “ಗುಂಪಿನ ಅನುಸರಣೆ” (groupthink) ಮತ್ತು “ಒಲವಿನ ತೋರುಗಾಣಿಕೆ” (preference falsification) ಮೊದಲಾದ ಪರಿಕಲ್ಪನೆಗಳು, ವೈಯಕ್ತಿಕ ಪೂರ್ವಗ್ರಹಗಳು ಒಗ್ಗಡಗೊಂಡು ಸಾಮೂಹಿಕ ನಿಷ್ಕ್ರಿಯತೆಗೆ ಎಡೆಮಾಡುವ ಬಗೆಯನ್ನು ತೋರಿಸಿಕೊಡುತ್ತವೆ.
ಶೂನ್ಯ-ಮೊತ್ತದ ಆಟವೆಂಬುದು ಒಂದು “ಆಟ”ದಲ್ಲಿ (ಅದು ಸಾಮಾಜಿಕ ಸಂಬಂಧ / ಆರ್ಥಿಕ ವ್ಯವಹಾರವೂ ಆಗಿರಬಹುದು) ಪಾಲ್ಗೊಳ್ಳುವವರ ಲಾಭ ನಷ್ಟಗಳ ಒಟ್ಟು ಮೊತ್ತ ಸೊನ್ನೆಯಾಗುಳಿಯುವ ಸನ್ನಿವೇಶದ ಗಣಿತದ ಮಾದರಿ. ಇಂಥಲ್ಲಿ ಒಬ್ಬ ವ್ಯಕ್ತಿಗೆ ಲಾಭವಾದರೆ ಇನ್ನೊಬ್ಬರಿಗೆ ಅಷ್ಟೇ ಪ್ರಮಾಣದ ನಷ್ಟವಾಗಿರುತ್ತದೆ. ಕೆಲವು ಸನ್ನಿವೇಶಗಳಿಗೆ ಇದು ಸರಿ ಹೊಂದಿದರೂ ಬಹಳಷ್ಟು ವಾಸ್ತವಿಕ ಸಮಸ್ಯೆಗಳಿಗೆ ಅಪ್ರಜ್ಞಾಪೂರ್ವಕವಾಗಿ ಈ ತತ್ವವನ್ನು ಅನ್ವಯಿಸಿದಾಗ ನಿಜವಾದ ಅಪಾಯ ಎದುರಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಶೂನ್ಯ-ಮೊತ್ತದ ಚಿಂತನೆಯೆನ್ನುವುದು ಒಂದು ಮಿಥ್ಯಾಕಲ್ಪನೆ: ಸಾಮಾಜಿಕ ಸಂಬಂಧಗಳಲ್ಲಿ ಪರಸ್ಪರ ವಿರೋಧವೇ ಅಂತರ್ಗತವಾಗಿದೆ, ಒಂದು ಪಕ್ಷದ ಗೆಲುವು ಇನ್ನೊಂದು ಪಕ್ಷದ ಸೋಲಿನಿಂದ ಮಾತ್ರ ಸಾಧ್ಯ ಎಂಬ ತಪ್ಪು ಗ್ರಹಿಕೆ. ಇದು ನಮ್ಮಲ್ಲಿ ನಮ್ಮಲ್ಲಿ ಆಳವಾಗಿ ಬೇರೂರಿದೆ. ಈ ಮನಸ್ಥಿತಿಯು ಧನಾತ್ಮಕ-ಮೊತ್ತದ — ಎಂದರೆ ಹೆಚ್ಚು ಜನರಿಗೆ ಅವಕಾಶ ಸಿಕ್ಕಾಗ ಎಲ್ಲರಿಗೂ ಈಗಿನಕಿಂತ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸಬಹುದಾದ — ಸಾಧ್ಯತೆಗಳನ್ನು ಅಲ್ಲಗಳೆಯುತ್ತದೆ. ಸಹಕಾರದ, ಸಹಯೋಗದ ತಾತ್ವಿಕತೆಯ ಬದಲು ಕಹಿಯನ್ನು ಹರಡಿ ಅಕಾರಣ ಸಂಘರ್ಷಗಳಿಗೆ ಕಾರಣವಾಗುತ್ತದೆ. ಮೀಸಲಾತಿಯ ಚರ್ಚೆಯಲ್ಲಿ ಇದು ಢಾಳಾಗಿ ಕಾಣಿಸಿಕೊಳ್ಳುತ್ತದೆ. ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡಾಗಲೇ ನಿಜವಾದ ಪ್ರಗತಿ ಸಾಧ್ಯ ಮತ್ತು ಅದರಿಂದ ಎಲ್ಲರಿಗೂ ಲಾಭ ಎಂಬ ವಾದಕ್ಕೆ ಪ್ರಬಲ ಪುರಾವೆಗಳಿದ್ದಾಗಲೂ ತಳವರ್ಗದವರಿಗೆ ಸಿಗುವ ಪ್ರಯೋಜನಗಳು ಮೇಲ್ವರ್ಗದವರಿಂದ ನೇರವಾಗಿ ಕಿತ್ತುಕೊಂಡ ಅವಕಾಶಗಳೆಂದು ಬಿಂಬಿಸಲಾಗುತ್ತದೆ. ಇದೀಗ ಅದರ ಇನ್ನೊಂದು ರೂಪ ನಮ್ಮೆದುರಿಗಿದೆ. ಇದರಿಂದಾಗಿ ಸಹಕಾರದ, ಸಹಯೋಗದ ತಾತ್ವಿಕತೆಯ ಬದಲು ಕಹಿಯು ಹರಡಿ ಅಕಾರಣ ಸಂಘರ್ಷಗಳಿಗೆ ಕಾರಣವಾಗುತ್ತದೆ. ಒಟ್ಟಾರೆಯಾಗಿ ಚಾರಿತ್ರಿಕವಾಗಿ ಅವಕಾಶವಂಚಿತರಲ್ಲಿ ಹೆಚ್ಚು ಹೆಚ್ಚು ಜನರಿಗೆ ಅವಕಾಶ ಸಿಕ್ಕಾಗ ಕಾಲಕ್ರಮದಲ್ಲಿ ಎಲ್ಲರಿಗೂ ಈಗಿನಕಿಂತ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸಬಹುದಾದ ಸಾಧ್ಯತೆಗಳಿವೆ ಎಂದು ನಾವು ಮನಗಾಣಬೇಕು. ಇದು ಒಂದು ಅವಿರತ ಧನಾತ್ಮಕ ವರ್ತುಳವನ್ನು (virtuous cycle) ಸೃಷ್ಟಿಸುತ್ತದೆ ಎಂದು ನಂಬಬೇಕು. ಅದರ ಜೊತೆಗೇ ಅವಕಾಶಗಳ ಒಟ್ಟು ಪ್ರಮಾಣವನ್ನು ಹೆಚ್ಚಿಸುವುದು ಹೇಗೆ ಎಂಬುದರ ಕುರಿತೂ ಚಿಂತಿಸುವುದನ್ನು ಮುಂದುವರೆಸಬೇಕು. ಇಲ್ಲೆಂದಲ್ಲಿ ಪರ-ವಿರೋಧದ ವಾಗ್ವಾದದಲ್ಲಿ ಮುಳುಗೇಳುವುದಷ್ಟೇ ಆಗುತ್ತದೆ.
ಸಾಮಾಜಿಕ-ಮನಃಶಾಸ್ತ್ರೀಯ ಪರಿಕಲ್ಪನೆಯಾದ “ಗುಂಪಿನ ಅನುಸರಣೆ”ಗೂ ಶೂನ್ಯ-ಮೊತ್ತದ ಚಿಂತನೆಗೂ ನೇರವಾದ ಮತ್ತು ಗಟ್ಟಿಯಾದ ನಂಟಿದೆ. ಒಂದು ಗುಂಪಿನ ಆಂತರಿಕ ಸಾಮರಸ್ಯ ಮತ್ತು ಅನುಸರಣೆಯ ಬಯಕೆಯು ತೀವ್ರವಾದಾಗ ಅದು ತನ್ನೆದುರಿಗೇ ಕಾಣುವ ಸತ್ಯವನ್ನು, ವಿವೇಕವನ್ನು ತಿರಸ್ಕರಿಸತೊಡಗಿ ವಿವೇಚನಾರಹಿತವೂ ನಿಷ್ಕ್ರಿಯವೂ ಆಗುತ್ತದೆ. ಜಗತ್ತನ್ನು “ನಮ್ಮ” ಮತ್ತು “ಅವರ” ಶೂನ್ಯ-ಮೊತ್ತದ ಯುದ್ಧವೆಂದು ಗ್ರಹಿಸಿದಾಗ ಗುಂಪಿನ ಒಗ್ಗಟ್ಟೇ ಅತ್ಯುನ್ನತ ಆದ್ಯತೆಯಾಗುತ್ತದೆ. ಅಲ್ಲಿ ತರ್ಕಕ್ಕೆ, ವಾಸ್ತವದ ಮೌಲ್ಯಮಾಪನಕ್ಕೆ ಯಾವುದೇ ಅವಕಾಶವಿರುವುದಿಲ್ಲ. ಅದು ತನ್ನೊಳಗೇ ಹುದುಗಿಕೊಳ್ಳುತ್ತದೆ. ಇಂಥ ಪ್ರತಿಯೊಂದು ಗುಂಪಿಗೂ ಅದರದೇ ಶ್ರೇಷ್ಠತೆಯ, ಪರಿಶುದ್ಧತೆಯ ವ್ಯಸನ ಇರುತ್ತದೆ — ಯಾವುದೇ ರೀತಿಯ ಭಿನ್ನಮತವನ್ನು ಸೈರಿಸಲಾಗದಷ್ಟು. ಇದರ ಜೊತೆಗೇ ಎದುರಾಳಿಗಳ ದುರುಳೀಕರಣವೂ ನಡೆಯುತ್ತದೆ. ಗುಂಪಿಗೆ ಸೇರಿದ ವ್ಯಕ್ತಿಗಳು “ಕ್ಯಾನ್ಸಲ್" ಆಗಿ ಬಹಿಷ್ಕಾರಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ತಮ್ಮ ಸಂದೇಹಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲ.
ತಿಮೂರ್ ಕುರಾನ್ (Timur Kuran) ಎಂಬ ಟರ್ಕಿಶ್-ಅಮೆರಿಕನ್ ಅರ್ಥಶಾಸ್ತ್ರಜ್ಞ, 1987ರಲ್ಲಿ ಬರೆದ ಒಂದು ಲೇಖನದಲ್ಲಿ, preference falsification ಎಂಬ ಪರಿಕಲ್ಪನೆಯನ್ನು ಮುಂದಿಡುತ್ತಾರೆ. ಒಲವಿನ ತೋರುಗಾಣಿಕೆ ಎಂದರೆ ಗುಂಪಿನ ಅಥವಾ ಸಮಾಜದ ಒತ್ತಡದ ದೆಸೆಯಿಂದ ವ್ಯಕ್ತಿಯು ತನ್ನ ನಿಜವಾದ ಇಷ್ಟಾನಿಷ್ಟಗಳನ್ನು, ಅಭಿಪ್ರಾಯಗಳನ್ನು ಮರೆಮಾಚು ಮಾಡುವುದು; ಅಥವಾ ಗುಂಪಿಗೆ ಅನುಕೂಲಕರವಾದ ತೋರುಗಾಣಿಕೆಯ ಒಲವನ್ನು ವ್ಯಕ್ತಪಡಿಸುವುದು. ಖಾಸಗಿಯಾಗಿ ಸೂಕ್ಷ್ಮಗ್ರಹಿಕೆಯಿಂದ ಕಟ್ಟಿಕೊಂಡ — ಉದಾಹರಣೆಗೆ, ಭಾರತದ ಬಹುಪಾಲು ಮುಸಲ್ಮಾನರು ತಮ್ಮಂತೆಯೇ ಸಾಮಾನ್ಯ ಆಸೆ ಆಕಾಂಕ್ಷೆಗಳಿರುವ ತಮ್ಮ ಪಾಡಿಗೆ ತಾವು ನೆಮ್ಮದಿಯಿಂದ ಬದುಕಬಯಸುವವರು ಎಂಬಂಥ — ಅಭಿಪ್ರಾಯಗಳನ್ನು ಹೊಂದಿರಬಹುದಾದ ವ್ಯಕ್ತಿಗಳು ಟ್ವಿಟರ್ನಂಥ ವೇದಿಕೆಗಳಲ್ಲಿ ಇದ್ದಕ್ಕಿದ್ದಂತೆ ಉಗ್ರವಾದಿಗಳಾಗುತ್ತಾರೆ. ಹಾಗೆಯೇ ಸರಕಾರದ ಕಾರ್ಯನೀತಿಯ ಬಗ್ಗೆ ವಿರೋಧವಿದ್ದವರು “ರಾಷ್ಟ್ರವಿರೋಧಿ” ಎಂಬ ಹಣೆಪಟ್ಟಿ ಹೊರುವ ಭಯದಿಂದ ಟೀಕಿಸದೆ ಸುಮ್ಮನಿದ್ದುಬಿಡುತ್ತಾರೆ. ಬಹುಸಂಖ್ಯಾತರ ಮೌನವು ಕೂಡ ರಾಜಕೀಯ ಧ್ರುವೀಕರಣವನ್ನು ಹೆಚ್ಚಿಸುತ್ತದೆ.
ಅಮರ್ತ್ಯ ಸೇನ್ ಅವರ ಬಹುಮುಖ್ಯ ಕೃತಿ The Argumentative Indian ಶುರುವಾಗುವುದು ಭಗವದ್ಗೀತೆಯಲ್ಲಿ ಕೃಷ್ಣನು ವಿಸ್ಟ್ರತವೂ ಸುದೀರ್ಘವೂ ಆದ ತಾತ್ವಿಕ ಚರ್ಚೆಯನ್ನು ನಡೆಸುವುದರ ಉಲ್ಲೇಖದಿಂದ. ಮುಂದೆ ಗಾರ್ಗಿ ಮೈತ್ರೇಯಿಯರು ಎತ್ತುವ ಪ್ರಶ್ನೆಗಳನ್ನು ಪರಿಶೀಲಿಸುತ್ತ ಭಾರತದ ನಾಗರಿಕತೆಗಳಲ್ಲಿ ಪ್ರಾಚೀನಕಾಲದಿಂದಲೂ ಮೌಲ್ಯವಾಗಿ ಅಡಕಗೊಂಡಿರುವ heterodoxy ಕುರಿತು ಚರ್ಚೆ ಬೆಳೆಸುತ್ತಾರೆ. ನಮ್ಮ ಪರಂಪರೆಯಲ್ಲಿ ಸಂಪ್ರದಾಯ ವಿರೋಧತೆ, ಭಿನ್ನಮತೀಯತೆ ಮತ್ತು ಬಹುತ್ವಗಳು ಇದ್ದಿರಬಹುದಾದರೂ ಕಳೆದ ಕೆಲವು ದಶಕಗಳಲ್ಲಂತೂ ಅವಕ್ಕೆ ಹೊಡೆತ ಬೀಳುತ್ತಲೇ ಇರುವುದು ನಮ್ಮ ಈಗಿನ ವಾಸ್ತವ. ಸಂವಾದಗಳಷ್ಟೇ ಅಲ್ಲ ಅವುಗಳ ಸಾಧ್ಯತೆಯೇ ಕಡಿಮೆಯಾಗುತ್ತ ನಮ್ಮದು ‘ಮಾತು ಸೋತ ಭಾರತ’ವಾಗಿದೆ. ಸರಳೀಕೃತ ಗ್ರಹಿಕೆಗಳು, ಪರ-ವಿರೋಧದ ಸುಲಭ ಆಯ್ಕೆಗಳ ಮೇಲಾಟವೇ ಹೆಚ್ಚಾಗಿದೆ. ನಾವಿದನ್ನು ಮೀರುವುದೆಂದರೆ ನಮ್ಮ ವೈಯಕ್ತಿಕ ಮತ್ತು ಸಾಮುದಾಯಿಕ ಬೌದ್ಧಿಕ ಬಿಕ್ಕಟ್ಟುಗಳನ್ನು ಮೀರುವುದು ಮತ್ತು ವಾಗ್ವಾದ ಪರಂಪರೆಯನ್ನು ಮತ್ತೆ ನೆಲೆಗೊಳಿಸುವುದು. ಇದು ಸಾಧ್ಯವಿರುವ ಆದರೆ ಬಹಳಷ್ಟು ಶ್ರಮ ಬೇಡುವ ಕೆಲಸ.
(ಈ ಬರಹದ ಒಂದು ಆವೃತ್ತಿ ಸೆಪ್ಟೆಂಬರ್ ತಿಂಗಳ 'ಸಮಾಜಮುಖಿ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದು ಅದರ ವಿಸ್ತೃತ ರೂಪ.)
ಇದನ್ನೂ ಓದಿ …
ಅಡುಗೆ ಎಂಬ ಸಾಮುದಾಯಿಕ ಚರಿತ್ರೆ ಮತ್ತು ರಾಜಕಾರಣ
ರಾಜೇಂದ್ರ ಪ್ರಸಾದರ ‘ಭಿನ್ನ ರುಚಿ’ ಅಡುಗೆ ಪ್ರಬಂಧಗಳು ಮತ್ತಿತರ ಕೆಲವು ಪುಸ್ತಕಗಳನ್ನು ಪರಿಚಯಿಸುತ್ತ ಆಹಾರ ಮತ್ತು ಅಡುಗೆಯ ಸಾಮುದಾಯಿಕ ಚರಿತ್ರೆ, ರಾಜಕಾರಣ ಮತ್ತು ಪರಿಸರವಾದಿ ನೆಲೆಯ ಕೆಲವು ಅಂಶಗಳನ್ನು ಸಂಕೇತ ಪಾಟೀಲ ಈ ಪ್ರಬಂಧದಲ್ಲಿ ಚರ್ಚಿಸಿದ್ದಾರೆ.