ನೀವೆಂತಹ ಓದುಗರಾಗಲು ಬಯಸುವಿರಿ?
ಕೆ. ಸತ್ಯನಾರಾಯಣರ 'ಓದುವವರೆಲ್ಲ ಓದುಗರಲ್ಲ! ಹಾಗಾದರೆ?' ಕೃತಿಯಿಂದ ಆಯ್ದ ಬರಹ.
ಕೆ. ಸತ್ಯನಾರಾಯಣ ಅವರ ‘ಓದುವ ವ್ಯಾಮೋಹ ಹಾಗೂ ಓದುವ ವಿಧಿ ವಿಧಾನಗಳನ್ನು ಕುರಿತ ಗಂಭೀರ, ತುಂಟ, ವಿನಯಪೂರ್ವಕ ಬರಹಗಳು’ ಅಮೂಲ್ಯ ಪುಸ್ತಕದವರು ಪ್ರಕಟಿಸುತ್ತಿರುವ ‘ಓದುವವರೆಲ್ಲ ಓದುಗರಲ್ಲ! ಹಾಗಾದರೆ?’ ಎಂಬ ಸಂಕಲನದ ಮೂಲಕ ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಬೆಳಕು ಕಾಣಲಿವೆ. ಪುಸ್ತಕದಿಂದ ಆಯ್ದುಕೊಂಡ ಒಂದು ಬರಹ ನಿಮ್ಮ ಓದಿಗೆ.
ಓದುಗರನ್ನು ಕುರಿತ ಅಧ್ಯಯನ, ಸಮೀಕ್ಷೆಗಳು ಒಂದೇ ಜಾಡಿನಲ್ಲಿ ಸಾಗಿಬಂದಿವೆ. ಓದುಗನನ್ನು ಗುಂಪಾಗಿ, ಸಮೂಹವಾಗಿ, ಅದರ ಭಾಗವಾಗಿ ಪರಿಗಣಿಸುವ ಅಧ್ಯಯನಗಳೇ ಹೆಚ್ಚು. ಓದುಗನು ವಿಶಿಷ್ಟ-ಅನನ್ಯ ವ್ಯಕ್ತಿ ಎಂಬ ಅಂಶಕ್ಕೆ ಹೆಚ್ಚು ಮಹತ್ವವಿಲ್ಲ. ಓದುಗನನ್ನು ಗುಂಪಾಗಿ, ಸಮೂಹವಾಗಿ, ಅದರ ಭಾಗವಾಗಿ ಗುರುತಿಸುವುದೆಂದರೆ, ಅದು ಅವನನ್ನು ಗ್ರಾಹಕನಾಗಿ ಪರಿಭಾವಿಸುವ ರೀತಿ. ಇದು ಚುನಾವಣೆಗಳಲ್ಲಿ ನಾಗರಿಕನನ್ನು ಮತದಾರನನ್ನಾಗಿ ಮಾತ್ರ ಗುರುತಿಸುವ ರೀತಿ. ಈ ಮಾದರಿಯ ಸಮೀಕ್ಷೆಗಳು ಓದುಗನು ಏನು ಓದಬೇಕು, ಹೇಗೆ ಓದಬೇಕು, ಹೇಗೆ ಕೃತಿಗಳನ್ನು/ಲೇಖಕರನ್ನು ಸ್ವೀಕರಿಸಬೇಕು ಎಂಬುದರ ಕಡೆಗೇ ಗಮನ ಕೊಡುತ್ತವೆ. ಓದುಗನನ್ನು ನಿರ್ದೇಶಿಸುವ, ನಿರ್ದೇಶಿಸುವುದು ತಮ್ಮ ಹಕ್ಕೆಂದೂ, ಏಕಸ್ವಾಮ್ಯವೆಂದೂ ಭಾವಿಸುವ ಚಿಂತನೆಯಿದು.
ಓದುಗನ ಗುಣ ಸ್ವಭಾವ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರ ಕಷ್ಟ. ಪ್ರತಿಯೊಬ್ಬ ಓದುಗನೂ ತನ್ನ ಜೀವನ ಸಂದರ್ಭದಲ್ಲಿ ಓದನ್ನು ರೂಪಿಸಿಕೊಳ್ಳುತ್ತಾನೆ. ಓದು ಅವನ ವ್ಯಕ್ತಿತ್ವದ ಒಂದು ಭಾಗವಾಗಿರುವುದರಿಂದ, ಓದುಗನ ಒಟ್ಟು ಮನುಷ್ಯ ಸ್ವಭಾವವು, ಓದಿನ ಮೇಲೂ ಪರಿಣಾಮ ಬೀರುತ್ತದೆ. ಓದುಗನ ಈ ವಲಯವನ್ನು ಗೌರವಿಸಬಹುದೇ ಹೊರತು, ತಿಳಿಯುವುದು ಕಷ್ಟ. ಓದಿನ ಪರಿಣಾಮಗಳನ್ನು ಕುರಿತು ಮಾತನಾಡುವಾಗಲೂ ನಾವು ಆತನನ್ನು ಗ್ರಾಹಕನನ್ನಾಗಿಯೇ ಹೆಚ್ಚು ನೋಡುವುದರಿಂದ, ಓದುಗನಾಗಿ ಅವನ ಗುಣ ಸ್ವಭಾವ ಹೇಗಿರಬೇಕು ಎಂಬ ಚರ್ಚೆ ಮಾಡುವ ಕಷ್ಟವನ್ನು ತಪ್ಪಿಸಿಕೊಳ್ಳುತ್ತಿದ್ದೇವೆ! ಓದಿನಿಂದ ಇರುವ ನಿರೀಕ್ಷೆ ಮತ್ತು ಓದುವ ವಿಧಾನಗಳ ಆಯ್ಕೆಯು ಓದುಗನದೇ ಆಗಿರಬೇಕು, ಆಗಿರುತ್ತದೆ ಎಂಬುದನ್ನು ಒಪ್ಪಿಕೊಂಡರೆ, ಅವನನ್ನು ನಿರ್ದೇಶಿಸುವ, ಮಾರ್ಗದರ್ಶನ ಮಾಡುವ “ಭೂಭಾರ”ದಿಂದ ಹೊರ ಬಂದಂತಾಗುತ್ತದೆ. ಹೀಗೆ ಹೊರ ಬರುವುದು ಲೇಖಕರಿಗೂ ಆವಶ್ಯಕ. ಆದರೆ ಇದು ಬರವಣಿಗೆಯ ಮೇಲೂ ಪರಿಣಾಮ ಬೀರಬಹುದು, ಸೃಜನಶೀಲತೆಯ ವ್ಯಾಪ್ತಿಯೂ ಹಿಗ್ಗಬಹುದು, ನಿರಂತರವಾಗಬಹುದು.
ಈ ಚೌಕಟ್ಟಿನೊಳಗೆ, ಪ್ರತಿಯೊಬ್ಬ ಓದುಗನಿಗೂ ಅಗತ್ಯವೆಂದು ತಿಳಿದಿರುವ ಗುಣ ಸ್ವಭಾವಗಳನ್ನು ಇಲ್ಲಿ ಚರ್ಚಿಸಲಾಗಿದೆ. ಈ ಗುಣ ಸ್ವಭಾವಗಳನ್ನು ಗುರುತಿಸುವಾಗ, ಹಲವು ಚಿಂತಕರ ವಿಚಾರಗಳನ್ನು ಒಟ್ಟಿಗೇ ಪರಿಗಣಿಸಲಾಗಿದೆ. ಹಾಗಾಗಿ, ಮೂಲ ಕೃತಿಗಳ ಲೇಖಕರ ಹೆಸರುಗಳನ್ನು ಎಲ್ಲ ಹಂತದಲ್ಲೂ ಉಲ್ಲೇಖಿಸುತ್ತಿಲ್ಲ. ಅಂತಹ ಅಗತ್ಯ ಕೂಡ ಕಂಡುಬರಲಿಲ್ಲ. ಈ ಉಲ್ಲೇಖವನ್ನು ಗಮನಿಸಿ:
‘‘Reading artfully requires a fragile poise between proclivities, thought and feeling, spontaneity and habit, deference and criticism, haste and slowness, boldness and caution, commitment and detachment.”
ಹೇಳಿಕೆಯಲ್ಲಿ ಸೂಚಿಸಿರುವ ಪಾತಳಿಗಳ ನಡುವೆ ಓದುಗನ ಮನೋಪ್ರಪಂಚ ಲಾಳಿಯಾಡುತ್ತಿರುತ್ತದೆ. ಈ ಪಾತಳಿಗಳು ಕೂಡ ಎಲ್ಲರಿಗೂ ಗೊತ್ತಿರುವಂತಹವೇ. ಆದರೆ ಒಂದೇ ವಾಕ್ಯದಲ್ಲಿ ಅಡಕವಾಗಿದೆ ಎಂಬ ಕಾರಣಕ್ಕೆ ಇಲ್ಲಿ ಉಲ್ಲೇಖಿಸಲಾಗಿದೆ.
ಭಾವನೆ ಮತ್ತು ವಿಚಾರಗಳ ನಡುವೆ ಆಯ್ಕೆಯಿಲ್ಲ. ಅವು ಒಂದಕ್ಕೊಂದು ವಿರೋಧವೂ ಅಲ್ಲ. ವಿಚಾರಗಳು ಎಂದು ನಾವು ತಿಳಿದುಕೊಂಡಿರುವುದು ಎಷ್ಟೋ ಸಲ ಭಾವನೆಯಾಗಿರಬಹುದು. ಹತ್ತೊಂಭತ್ತನೆಯ ಶತಮಾನದಲ್ಲಿ ಭಾವನೆ ಎಂದು ಗುರುತಿಸಿರುವಂಥದ್ದು ಇಪ್ಪತ್ತನೆಯ ಶತಮಾನದಲ್ಲಿ ಒಂದು ಪರಿಕಲ್ಪನೆಯಾಗಿ ನೆಲೆಯೂರಿರಬಹುದು. ಒಂದೇ ಶತಮಾನದ ಕಾಲಾವಧಿಯಲ್ಲಿ, ಬೇರೆ ಬೇರೆ ದೇಶಗಳಲ್ಲಿ, ಸಂಸ್ಕೃತಿಗಳಲ್ಲಿ, ಭಾವನೆ ಯಾವುದು, ವಿಚಾರ ಯಾವುದು ಎಂಬ ಬಗ್ಗೆ ಭಿನ್ನಾಭಿಪ್ರಾಯವಿರಬಹುದು. ಹಾಗಾಗಿ, ಈ ಮನೋಪಾತಳಿಯನ್ನು ಒಂದೇ ಮನಸ್ಸಿನ ಬೇರೆ ಬೇರೆ ಅವಸ್ಥೆಗಳೆಂದು ಗುರುತಿಸಬಹುದೇ ಹೊರತು, ತದ್ವಿರುದ್ಧ ಎಂದು ಭಾವಿಸಬಾರದು. ಮನಸ್ಸಿಗೆ ಆ ರೀತಿ ತರಬೇತಿ ನೀಡಬಾರದು. ಸ್ವಚ್ಛಂದ ಚಲನೆಗೆ, ಚಲನೆಯ ನಡುವಿನ ವಿರಾಮಕ್ಕೆ, ತಂಗುದಾಣಕ್ಕೆ, ಓದುಗ/ಮನುಷ್ಯ ತನಗೆ ತಾನೇ ಸ್ವಾತಂತ್ರ್ಯವನ್ನು ನೀಡಿಕೊಳ್ಳಬೇಕು.
ಮನಸ್ಸಿಗೆ ಹಿತವಾಗುವುದು ಮಾತ್ರವೇ ಮುಖ್ಯವೇನು? ಮನಸ್ಸು ಎಡವಿಬೀಳಬಾರದೇನು? ಜಿಗಿತ ಬೇಡವೇನು? ದಾರಿ ತಪ್ಪಬೇಡವೇನು? ಅಭ್ಯಾಸದಿಂದ ಮನಸ್ಸು comfort zoneನಲ್ಲಿರುತ್ತದೆ (ಸಂತೃಪ್ತ ವಲಯ), ಆರಾಮವಾಗಿರುತ್ತದೆ. ಅಭ್ಯಾಸದ ನಿರ್ದಿಷ್ಟ ಮಾರ್ಗದಲ್ಲೇ ನಿತ್ಯವೂ ಪಯಣ ಮಾಡುತ್ತಿದ್ದರೆ, ಮನಸ್ಸಿಗೆ ಸದ್ಯದ ಸ್ಥಿತಿಯಿಂದ ಬಿಡುಗಡೆ ಬೇಡವೇ? ಹಾಗೆಂದು ಮನಸ್ಸು ಯಾವಾಗಲೂ ಜಿಗಿತವನ್ನು, ಹೊಸ ದಿಕ್ಕನ್ನು ಮಾತ್ರ ಬಯಸುತ್ತದೆಯೇನು? ನಮ್ಮ ಮನಸ್ಸಿಗೆ ನಾವು ನೀಡುವ ಸ್ವಾತಂತ್ರ್ಯ, ನಮ್ಮದೇ ಅಭ್ಯಾಸದ ಬಲೆಯಿಂದ ಎಷ್ಟು ಹೊರ ಬಂದಿದೆ? ಓದು ಯಾವ ಅವಸ್ಥೆಯಲ್ಲಿ ಸಂವೇದನಾಶೀಲವಾಗಿರುತ್ತದೆ, ಇವೆರಡರ ಹದವಾದ ಮಿಶ್ರಣ ಓದುಗನಿಗೆ ಯಾವಾಗ ದಕ್ಕುತ್ತದೆ ಮತ್ತು ಬೇಕಾಗುತ್ತದೆ?
ಗೌರವದ, ಅಭಿಮಾನದ ನೆಲೆಯಲ್ಲೇ ಎಲ್ಲವನ್ನೂ ಓದಬೇಕೆ? ಹಾಗೆ ಓದುವುದೆಂದರೆ ಲೇಖಕನೊಬ್ಬ ತನ್ನ ಕೃತಿಯ ಓದು, ಓದುಗನಿಗೆ ಎಷ್ಟು ನೀಡಬೇಕೆಂದು ಬಯಸುತ್ತಾನೋ, ಹೇಗೆ ನೀಡಬೇಕೆಂದು ಬಯಸುತ್ತಾನೋ, ಅಷ್ಟು ಮಾತ್ರವೇ ಒಂದು ಕೃತಿಯ ಓದೇನು? ವಿಮರ್ಶಾತ್ಮಕವಾಗಿ, ವಿಶ್ಲೇಷಾತ್ಮಕವಾಗಿ ಒಂದು ಕೃತಿ, ಒಬ್ಬ ಲೇಖಕನನ್ನು ಓದುವುದೆಂದರೆ, ಕೃತಿಗೆ, ಕೃತಿಕಾರನಿಗೆ ಇರುವ ಅಗ್ರಪಟ್ಟದಿಂದ ಪಲ್ಲಟಗೊಳಿಸಿದಂತೆಯೇ ಅಲ್ಲವೇ? ಲೇಖಕ ಬಯಸುವ, ಒಪ್ಪುವ ಓದುಗ, ಯಾವ ಸ್ತರದವನು? ಕೃತಿಯನ್ನು ಸ್ವೀಕರಿಸುವ ಓದುಗನನ್ನು ಮಾತ್ರ ಬಯಸುತ್ತಾನೋ, ಇಲ್ಲ, ಕೃತಿಯನ್ನು ವಿಸ್ತರಿಸುವಂತಹ ಓದುಗನನ್ನು ಬಯಸುತ್ತಾನೋ? ಗೌರವ ಮತ್ತು ವಿಮರ್ಶೆ ಎರಡೂ ಕೂಡ ಒಟ್ಟಿಗೇ ಕೆಲಸ ಮಾಡಲಾರವೇ? ಕೃತಿ ಮತ್ತು ಕೃತಿಕಾರ ಎರಡೂ ನೆಲೆಗಳನ್ನು ಒಟ್ಟಿಗೇ ಒಳಗೊಂಡಿರಲಾರನೇ, ಓದುಗನಲ್ಲಿ ಪ್ರಚೋದಿಸಲಾರನೇ?
ಕೃತಿಗೆ ಒಂದು ಕಾಲದ ವಿನ್ಯಾಸವಿರುತ್ತದೆ, ಕಾಲದ ಒಂದು ಗತಿಯ ಸ್ವರೂಪವನ್ನು ಒಪ್ಪುತ್ತದೆ. ಕೃತಿಕಾರನನ್ನು ಮೀರಿ ಕೂಡ ಕೃತಿಯ ಬಯಕೆ, ಕಾಲದ ಚಲನೆಯ ಸ್ವರೂಪವನ್ನು ಕುರಿತಂತೆ ಬೇರೆಯಾಗಿಯೇ ಇರಬಹುದೇ? ಕೃತಿ/ಕೃತಿಕಾರನನ್ನು ಪರಿಗಣಿಸುತ್ತಿರುವ ಓದುಗನಲ್ಲಿ, ಸಮಾಜದಲ್ಲಿ, ಈ ಪರಿಕಲ್ಪನೆಗಳು ಬೇರೆ ರೀತಿ ಕೆಲಸ ಮಾಡುತ್ತಿರಬಹುದೇ? ಒಂದೇ ಕೃತಿಯ ಬೇರೆ ಬೇರೆ ಭಾಗಗಳಲ್ಲಿ ಕೂಡ ಓದನ್ನು ಬೇಡುವ ರೀತಿ, ಕಾಲದ ಬಗ್ಗೆ ಇರುವ ವಿವಿಧ ಪರಿಕಲ್ಪನೆಗಳನ್ನು ಸೂಚಿಸುವಂಥದ್ದಾಗಿರಬಹುದು. ವೇಗವೆಂಬುದು, ನಿಧಾನವೆಂಬುದು, ಮನಸ್ಸಿನ ಸ್ಥಿತಿಯೋ ಇಲ್ಲ ಕೃತಿ ಬಯಸುವ ಕಾಲದ ಬೇರೆ ಬೇರೆ ಆಯಾಮಗಳೋ? ಓದುಗ ತನ್ನ ಮನಸ್ಸಿಗನುಗುಣವಾಗಿ ಓದಬೇಕೋ, ಇಲ್ಲ ಕೃತಿ/ಕೃತಿಕಾರನ ವೇಗ, ಚಲನೆ, ನಿಧಾನ, ವ್ಯವಧಾನದ ಪರಿಕಲ್ಪನೆಗಳನ್ನು ಒಪ್ಪಬೇಕೋ?
ಓದಿನಲ್ಲಿ ಲಂಘನವಿದೆಯೇ? ಯಾವಾಗಲೂ ವಿಶ್ಲೇಷಣಾತ್ಮಕ ಎಚ್ಚರದಿಂದಲೇ ಓದಬೇಕೇನು? ಧೈರ್ಯ ಮಾಡಿ ಎಡವಬಾರದೇ? ಧೈರ್ಯವಿರುವುದು ಜಿಗಿತಕ್ಕೆ ಮಾತ್ರವೇನು? ಎಡವಲು, ತಪ್ಪು ಮಾಡಲು, ತಪ್ಪಾಗಿ ಓದಲು ಕೂಡ ಧೈರ್ಯ ಬೇಕಲ್ಲವೇ? ಎಚ್ಚರವನ್ನು ಮೀರುವುದು, ಮೈ ಮರೆಯುವುದು, ಓದುಗನ ಮನಸ್ಸಿನ ಒಂದು ಸಾಧ್ಯತೆಯೇ ಇಲ್ಲ ಕೃತಿ ಪ್ರಚೋದಿಸುವಂತಹ ಸ್ಥಿತಿಯೇ? ಓದಿನ ಪ್ರಕ್ರಿಯೆ ಮತ್ತು ಕೃತಿ ನೀಡುವ ಅನುಭವದ ಕರ್ಷಣದಲ್ಲಿ, ಎಲ್ಲವೂ ಓದುಗನಿಗೆ ದಕ್ಕಬೇಕಾದರೆ, ಓದುಗನ ಮನಸ್ಸು ವಿಶ್ಲೇಷಣಾತ್ಮಕ ಎಚ್ಚರದ ಸ್ಥಿತಿಯಲ್ಲಿರಬೇಕೋ, ಇಲ್ಲ ಮೈ ಮರೆಯುವ ಛಾತಿ, ಧೈರ್ಯ ತೋರಿಸಬೇಕೋ? ಇವೆರಡರ ನಡುವೆ ಒಂದು ಸ್ಥಿತಿಯಿದೆಯೇ? ಇವೆರಡೂ ಹದವಾಗಿ ಮಿಶ್ರಣಗೊಂಡ ಒಂದು ಸ್ಥಿತಿಯಿದೆಯೇ?
ಓದುವಾಗ ಮನಸ್ಸನ್ನು ತೊಡಗಿಸಿಕೊಂಡರೆ ಸಾಕಲ್ಲವೇ? ಕೃತಿಗೆ, ಕೃತಿಕಾರನಿಗೆ ಸಂಪೂರ್ಣವಾಗಿ ನಿಷ್ಠನಾಗಿರುವುದು, ಬದ್ಧನಾಗಿರುವುದು ಅಗತ್ಯವೇ? ಹೀಗಾದಾಗ, ಕೃತಿ ತನ್ನನ್ನು ಇಡಿಯಾಗಿ ಬಿಟ್ಟುಕೊಡುತ್ತದೆಯೇ? ಕೃತಿಯೊಡನೆ ಒಡನಾಟ, ಸಂಬಂಧ ಅರ್ಥಪೂರ್ಣವಾಗುವುದು ಬದ್ಧಸ್ಥಿತಿಯಲ್ಲೋ, ಇಲ್ಲ ಕೃತಿ, ಕೃತಿಕಾರನೊಡನೆ ಒಂದು ವಸ್ತುನಿಷ್ಠ ದೂರವನ್ನು ಕಂಡುಕೊಂಡಾಗಲೋ?
ಹೀಗೆ ವಿವಿಧ ಪಾತಳಿಗಳ ನಡುವೆ ಓಡಾಡುತ್ತಾ ತಂಗುತ್ತಾ ಓದಿಗೆ ತೊಡಗುವ ಓದುಗನಿಗೆ ಯಾವುದೇ ವಕ್ತಾರರ, ಮಧ್ಯವರ್ತಿಗಳ ನೆರವು ಅಗತ್ಯವಿರುವುದಿಲ್ಲ. ಆದರೆ, ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲಿ ಕೆಲಸ ಮಾಡುವವರಿಗೆ ವಕ್ತಾರತನದ ಪಾತ್ರ ವಹಿಸುವ ನಿರಂತರವಾದ ಗೀಳಿರುತ್ತದೆ. ಓದುಗರಾಗಲೀ, ಸಾಂಸ್ಕೃತಿಕ ಲೋಕವಾಗಲೀ, ಈ ಸ್ಥಾನವನ್ನು, ಪಾತ್ರವನ್ನು ಅವರಿಗೆ ನೀಡಿರುವುದಿಲ್ಲ. ಸ್ವಯಂ ಅವರೇ ಆರೋಪಿಸಿಕೊಂಡು ಇನ್ನೊಬ್ಬರ ಪರವಾಗಿ ಯೋಚಿಸುವ “ಭಾರ”ವನ್ನು ಹೊತ್ತುಕೊಂಡಿರುತ್ತಾರೆ.
ಈ ರೀತಿಯಲ್ಲಿ ಮನೋಪಾತಳಿಯ ವಿವಿಧ ಅವಸ್ಥೆಗಳ ನಡುವೆ ಚಲಿಸುತ್ತಾ ತಂಗುತ್ತಾ ಇರುವ ಮನಸ್ಸಿನ ಸ್ವರೂಪವನ್ನು Brothers Karamazov ಕಾದಂಬರಿಯ ಯಾವುದೇ ಕೆಲವು ಪುಟಗಳ ಓದಿನಿಂದ, (ಓದುವಾಗ ತೆರೆದ ಮನಸ್ಸಿದ್ದರೆ) ಗ್ರಹಿಸಬಹುದು.
***
ಓದಿನ ಸೂಕ್ಷ್ಮತೆಯನ್ನು ವಿಸ್ತರಿಸುವಲ್ಲಿ ಕುತೂಹಲ, ತಹತಹ, ನಿರೀಕ್ಷೆಯ ಪಾತ್ರ ಎಷ್ಟು? ಎಲ್ಲ ಪಠ್ಯಗಳು ಕುತೂಹಲವನ್ನು ತಣಿಸುವುದಿಲ್ಲ, ತಹತಹವನ್ನು, ನಿರೀಕ್ಷೆಯನ್ನು ಶಮನ ಮಾಡುವುದಿಲ್ಲ. ಲೇಖಕ ಈ ಆಯಾಮಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದಿರುತ್ತಾನೆಯೇ ಎನ್ನುವುದು ಇನ್ನೊಂದು ಪ್ರಶ್ನೆ. ಕುತೂಹಲ ಪಠ್ಯದ ಬಗ್ಗೆ ಮಾತ್ರ ಇರುತ್ತದೋ? ನಮ್ಮ ಮನಸ್ಸು ಕೆಲಸ ಮಾಡುತ್ತಿರುವ ರೀತಿಯ ಬಗ್ಗೆಯೂ ನಮಗೆ ಕುತೂಹಲ, ತೆರೆದ ಮನಸ್ಸು ಇರುತ್ತದೋ?
ತಾಳ್ಮೆ, ಸಹನೆ, ಓದುಗನಿಗೆ ಎಷ್ಟು ಅಗತ್ಯ? ಮೊದಲ ಓದಿನಲ್ಲೇ ಒಂದು ಪಠ್ಯವು ತನ್ನ ಬಹುಪಾಲು ಸೂಕ್ಷ್ಮತೆ ಮತ್ತು ಸೌಂದರ್ಯವನ್ನು ಬಿಟ್ಟುಕೊಡುತ್ತದೆ ಎಂಬ ಮಾತಿದೆ. ಅಂತಃಸ್ಫೂರ್ತಿಯಿಂದ, ಪ್ರತ್ಯುತ್ಪನ್ನಮತಿಯಿಂದ ಒಂದು ಕೃತಿಯನ್ನು ಗ್ರಹಿಸಬಹುದಲ್ಲವೆ ಎಂದು ಕೂಡ ಕೇಳಬಹುದು. ಸೃಷ್ಟಿ ಕ್ರಿಯೆಯಲ್ಲಿ ಈ ಎಲ್ಲ ಅಂಶಗಳ ಪಾತ್ರ ಗಣನೀಯ, ನಿರ್ಣಾಯಕ ಎಂಬ ಮಾತು ಸರಿ. ಓದುವಾಗ ನಾವು ‘ಪಡೆಯುವ’ ಅವಸ್ಥೆಯಲ್ಲಿರುತ್ತೇವೆ.
ಒಂದೊಂದು ಕೃತಿಯ ಸ್ವರೂಪವೂ ಭಿನ್ನ. ಎಲ್ಲ ಪದರುಗಳನ್ನೂ, ಗುಟ್ಟುಗಳನ್ನೂ, ಸೂಕ್ಷ್ಮಗಳನ್ನೂ ಒಂದೇ ಸಲಕ್ಕೆ ಯಾವ ಕೃತಿಯೂ ಬಿಟ್ಟುಕೊಡುವುದಿಲ್ಲ. ಓದಿನ ಕ್ರಿಯೆಯನ್ನು ತಕ್ಷಣದಲ್ಲೇ ಮುಗಿಸುವ ಅಗತ್ಯವಿರಬಹುದು. ಆದರೆ ತಾಳ್ಮೆ, ವ್ಯವಧಾನವಿದ್ದರೆ, ಕೃತಿ ‘ನಿಮ್ಮೊಳಗೇ’ ಇದ್ದು, ಮುಂದೆ ಎಂದಾದರೂ ಅದರ ಬಹುಮುಖತೆಯನ್ನು ‘ನಿಮ್ಮೊಳಗೇ’ ಅರಳಿಸಬಹುದು. ಅಂದರೆ, ಕೃತಿ ಓದುವಾಗ ಮಾತ್ರವಲ್ಲ, ಓದೆಂಬುದು ಮುಗಿದುಹೋಗಿದೆ ಎಂದು ನಾವು ಭಾವಿಸಿದ ಮೇಲೂ ಮುಂದೆ ತೆರೆದುಕೊಳ್ಳಬಹುದು. ಓದುವಾಗಲೂ ತಾಳ್ಮೆ ಬೇಕಾಗುತ್ತದೆ. ಇದು ತಾಳ್ಮೆಯ ತಕ್ಷಣದ ಅಥವಾ ಭೌತಿಕ ಆಯಾಮ ಎನ್ನಬಹುದು. ಕಾಯುವುದು, ಹಂಬಲಿಸುವುದು ಕೂಡ ತಾಳ್ಮೆಯ ಆಯಾಮ. ತಾಳ್ಮೆಯಿಲ್ಲದೆ ತೆರೆದ ಮನಸ್ಸು ಸಾಧ್ಯವಾಗುವುದಿಲ್ಲ.
ಸಾರ್ಥಕ ಓದಿಗೆ ಧೈರ್ಯವೂ ಬೇಕು. ಒಂದು ಕೃತಿಯ ಓದಿಗೆ ನಮ್ಮ ಮನಸ್ಸು ಸಿದ್ಧವಾಗಿಲ್ಲ, ನಮಗೆ ಅದನ್ನು ಗ್ರಹಿಸಲು ಬೇಕಾದ ಸಾಮರ್ಥ್ಯವಿಲ್ಲ ಎಂದು ಒಪ್ಪಿಕೊಳ್ಳುವ ಧೈರ್ಯವಿರಬೇಕು. ಈ ರೀತಿಯ ಧೈರ್ಯದ ಇನ್ನೊಂದು ಆಯಾಮವೇ ವಿನಯ. ನಮ್ಮ ಬಗ್ಗೆ ನಮಗೆ ಹಿಂಜರಿಕೆಯಿಲ್ಲದಿದ್ದರೆ, ಹಿಂಜರಿಕೆಯಿದೆಯೆಂದು ನಮ್ಮೊಳಗೇ ಒಪ್ಪಿಕೊಂಡು ಅದನ್ನು ನಮಗೇ ಹೇಳಿಕೊಳ್ಳುವ ಧೈರ್ಯವಿಲ್ಲದೆ ಹೋದರೆ, ಸೂಕ್ಷ್ಮ ಓದುಗರಾಗಿ ಉಳಿಯುವುದು ಕಷ್ಟ. ಪ್ರಯೋಗಶೀಲ ಕೃತಿಗಳನ್ನು ಓದುವಾಗಲಂತೂ ಈ ಗುಣಸ್ವಭಾವ ಇರಲೇಬೇಕು. ಮರು ಓದಿನಲ್ಲಿ ಒಂದು ಕೃತಿ ನಮ್ಮೊಳಗೆ ಬೆಳೆಯುವುದು ಈ ರೀತಿಯ ಧೈರ್ಯವಿದ್ದಾಗಲೇ.
ನಮ್ಮ ಅಭಿರುಚಿ, ಓದುವ ಪ್ರವೃತ್ತಿ, ಓದುವ ವೈವಿಧ್ಯದ ಬಗ್ಗೆ ನಮಗೆ ಹೆಮ್ಮೆಯಿರುತ್ತದೆ. ಎಷ್ಟು ಹೆಮ್ಮೆಯಿರುತ್ತದೆ ನಮಗೆ ನಮ್ಮ ಬಗ್ಗೆ ಎಂದು ನಮಗೆ ಗೊತ್ತೇ ಆಗುವುದಿಲ್ಲ. ಇದೇ ಭಾವ ಮನಸ್ಸನ್ನು ತುಂಬಿದರೆ, ಕೃತಿಯ ಅಂತಃಸತ್ವವು ನಮ್ಮೊಳಗೆ ಪ್ರವೇಶಿಸಲು ಜಾಗವೇ ಇರುವುದಿಲ್ಲ. ಕೆಲವು ಕೃತಿಗಳ ಸ್ವರೂಪದಲ್ಲೇ ಲೇಖಕನ ಹಮ್ಮು ಅಥವಾ ಆತ್ಮಪ್ರತ್ಯಯ ಮುಖಕ್ಕೆ ರಾಚುವಂತಿರುತ್ತದೆ. ನಮ್ಮ ಹಮ್ಮಿಗೂ, ಕೃತಿ-ಕೃತಿಕಾರನ ಹಮ್ಮಿಗೂ ಸಂಘರ್ಷ ಮೂಡಿದರೆ, ಓದುಗರಾಗಿ ನಮ್ಮ ಹಮ್ಮನ್ನು ಹಿಂದೆ ಸರಿಸುವುದೇ ಯುಕ್ತವಾದ ದಾರಿ. ಕೃತಿಯ ಬರವಣಿಗೆ ಮುಗಿದಿರುತ್ತದೆ; ಅದಕ್ಕೆ ಹಮ್ಮಿದ್ದರೂ ತಡೆದೀತು. ಆದರೆ ಕೃತಿ ನಮ್ಮೊಳಗೆ ಪಲ್ಲವಿಸಲು ಶುರುವಾಗಬೇಕಾದರೆ, ನಮ್ಮ ಹಮ್ಮೇ ಅಡ್ಡಿಯಾಗಬಾರದು. ನಮ್ಮ ಸೀಮಿತ ವ್ಯಕ್ತಿತ್ವ, ಸೀಮಿತ ಗ್ರಹಣಶಕ್ತಿಯ ಬಗ್ಗೆ ತಿಳಿದುಕೊಂಡಾಗ ಆಗುವ ಸಂತೋಷವೇ ಹೆಮ್ಮೆಯೆಂದು ಭಾವಿಸುವುದೇ ನಿಜವಾದ ಹೆಮ್ಮೆಯಾಗಿರಬಹುದೇ?
ತೆರೆದ ಮನಸ್ಸಿನ ಓದಿಗೆ ಬೇಕಾದ ಸಮತೋಲನದ ಮನೋಭಾವ ಸಾಮಾನ್ಯವಾಗಿ ಯಾರಲ್ಲೂ ಇರುವುದಿಲ್ಲ. ಇಲ್ಲ ಎಂದು ಕೂಡ ಗೊತ್ತಾಗುವುದಿಲ್ಲ. ಇದು ತಿಳುವಳಿಕೆಯ ಅಭಾವದಿಂದಲೂ ಆಗಬಹುದು. ಇಲ್ಲ ಆತ್ಮನಿಯಂತ್ರಣವಿಲ್ಲದೆಯೂ ಆಗಬಹುದು. ಮನಸ್ಸನ್ನು ಒಂದೇ ದಿಕ್ಕಿನಲ್ಲಿ ದೀರ್ಘಕಾಲ ಹರಿಯಬಿಡುವುದರಿಂದಲೂ ಆಗಬಹುದು. ಇಲ್ಲ ನಮ್ಮ ಸ್ವಭಾವವೇ, ಮಾನಸಿಕ ಪ್ರವೃತ್ತಿಯೇ ಹಾಗಿರಬಹುದು. ಒಂದು ಸಂದರ್ಭದಲ್ಲಿ ಎಚ್ಚರ ಮೂಡಿ, ಮಿತಿಯ ಅರಿವಾಗಿ, ಮನಸ್ಸು ಸಮತೋಲನ ಸ್ಥಿತಿಗೆ ತಲುಪಿದೆ ಅಂದುಕೊಂಡರೂ, ಮುಂದೆಯೂ ಅದೇ ಸ್ಥಿತಿಯಲ್ಲಿರುತ್ತದೆ ಎಂದು ತಿಳಿಯುವ ಹಾಗಿಲ್ಲ. ಈ ಸ್ಥಿತಿ ನಮ್ಮಲ್ಲಿ ಗೈರುಹಾಜರಾಗಿದ್ದಾಗ ಓದಿದರೆ ಏನಾಗುತ್ತದೆ? ಇದಕ್ಕೆ ತದ್ವಿರುದ್ಧವಾದ ಒಂದು ವಾದವೂ ಇದೆ. ನಾವು ನಮ್ಮೆಲ್ಲ ಪೂರ್ವಾಗ್ರಹಗಳೊಡನೆಯೇ ಕೃತಿಯನ್ನು ಓದಬೇಕು ಎನ್ನುವವರು ಇದ್ದಾರೆ. ಅದರಿಂದಾಗಿ, ಒಂದು ಕೃತಿಯ ಒಂದು ಓದನ್ನು ಈ ವಿಧಾನದಲ್ಲಿ ಮಾಡಬಹುದು ಅಷ್ಟೇ.
ನಮಗೆ ಕಡಿಮೆ ಪ್ರತಿಭೆಯಿರಬಹುದು. ಸೌಂದರ್ಯಪ್ರಜ್ಞೆ ಕೂಡ ಅಷ್ಟು ಹರಿತವಾಗಿಲ್ಲದೇ ಇರಬಹುದು. ನಮಗಾಗಿ ಬರೆಯದ ಒಂದು ಕೃತಿಯನ್ನು ನಾವು ಅಕಸ್ಮಾತ್ ಆಗಿ ಓದಿ ತಪ್ಪು ಮಾಡಬಹುದು. ಹೀಗೆಲ್ಲ ಮಾಡಿದಾಗ ನಾವು ಒಂದು ಕೃತಿಗೆ, ಕೃತಿಕಾರನಿಗೆ ಅನ್ಯಾಯ ಮಾಡಿದ್ದೇವೆ ಎಂಬ ‘ನ್ಯಾಯಪ್ರಜ್ಞೆ’ ಇರಬೇಕು. ನ್ಯಾಯ ಒದಗಿಸಿ ನಿಸ್ಪೃಹರಾಗುವುದಕ್ಕಾದರೂ ನಾವು ಎಷ್ಟೋ ಕೃತಿಗಳನ್ನು, ಕೃತಿಕಾರರನ್ನು ಮತ್ತೆ ಮತ್ತೆ ಓದಬೇಕಾಗುತ್ತದೆ. ನ್ಯಾಯ ಒದಗಿಸುವ ತುಡಿತ ನಮ್ಮಲ್ಲಿ ಸಾಕಷ್ಟಿದ್ದರೆ, ನಮ್ಮ ವ್ಯಕ್ತಿತ್ವದ, ಪ್ರತಿಭೆಯ ಅನೇಕ ಕಂದರಗಳ ದುಷ್ಪರಿಣಾಮ ಸಾಕಷ್ಟು ಕಡಿಮೆ ಆಗುತ್ತದೆ.
ಈ ಗುಣಸ್ವಭಾವಗಳ ಪಟ್ಟಿಗೆ ಇನ್ನೂ ಸೇರಿಸಬಹುದು. ಇದೆಲ್ಲವನ್ನೂ ಎಲ್ಲರೂ ಒಪ್ಪುತ್ತಾರೆ. ತೊಂದರೆಯಿರುವುದು ಇದಲ್ಲ, ನಮ್ಮಲ್ಲಿ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳುವುದರಲ್ಲಿ. ಸ್ವಲ್ಪ ಕಷ್ಟಪಟ್ಟರೆ, ತಿಳಿದುಕೊಂಡುಬಿಡಬಹುದು ಕೂಡ. ಆದರೆ ಇದೆಲ್ಲ ನಮ್ಮೊಳಗಿಂದ ಯಾವಾಗ ಪಲಾಯನ ಮಾಡುತ್ತದೆ, ಪಲಾಯನ ಮಾಡಿ ಎಲ್ಲಿಗೆ ಹೋಯಿತು, ಮತ್ತೆ ಎಂದಾದರೂ ನಮ್ಮ ಬಳಿ ವಾಪಸ್ ಬರುತ್ತದೆಯೇ, ಬಂದರೆ ನಮಗೆ ಗೊತ್ತಾಗುತ್ತದೆಯೇ ಎಂಬ ಈ ಪ್ರಶ್ನೆಗಳೂ ಮುಖ್ಯ.
ಪ್ರತಿಯೊಂದು ಕೃತಿಯ ಪ್ರವೇಶದ ಸಂದರ್ಭದಲ್ಲೂ ಮನಸ್ಸನ್ನು ಹೀಗೆ ಪರೀಕ್ಷೆ ಮಾಡಿಕೊಂಡು ಓದುವುದು ಸಾಧ್ಯವೇ? ಹಾಗಿದ್ದರೆ ಆರಾಮವಾದ, ಸ್ವಯಂಸ್ಫೂರ್ತಿಯಿಂದ ಜರುಗಿಬಿಡುವ ಓದಿಗೆ ಬೆಲೆಯೇ ಇಲ್ಲವೇ? ಇಷ್ಟೊಂದು ಪ್ರಜ್ಞಾಪೂರ್ವಕವಾಗಿ ಓದಲು ಪ್ರತಿಯೊಬ್ಬ ಓದುಗನೂ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನೇ, ಇಲ್ಲ ಸಾಹಿತ್ಯದ ಸ್ನಾತಕೋತ್ತರ ಪದವೀಧರನೇ? ಇಷ್ಟೊಂದು ಪ್ರಶ್ನೆಗಳು/ಅನುಮಾನಗಳು ಮೂಡಿ ಬರುವುದೇ ಈ ಗುಣ ಸ್ವಭಾವಗಳ ಅಗತ್ಯವನ್ನು ಅವುಗಳನ್ನು ರೂಢಿಸಿಕೊಳ್ಳುವ ಕಷ್ಟವನ್ನೂ ನೀವು ಕೂಡ ಒಪ್ಪುತ್ತಿದ್ದೀರಿ, ಆದರೆ, ವಾದಕ್ಕಾಗಿ ವಾದ ಮಾಡುತ್ತಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಓದಿನಲ್ಲಿ, ಬದುಕಿನಲ್ಲಿ, ಸಂಬಂಧಗಳಲ್ಲಿ ನಿಸ್ಪೃಹತೆಗೆ ಯಾವಾಗಲೂ ಬೆಲೆ ಇದ್ದೇ ಇರುತ್ತದೆ. ಬದುಕು-ಸಂಬಂಧಗಳ ನಿಸ್ಪೃಹತೆ ಬೇರೆಯಲ್ಲ, ಓದಿನ ನಿಸ್ಪೃಹತೆ ಬೇರೆಯಲ್ಲ.
ಕೃತಿ ಪ್ರವೇಶದ ಸಂದರ್ಭದಲ್ಲಿ ಸಕಲ ರೀತಿಯಲ್ಲೂ ಯುದ್ಧಸನ್ನದ್ಧರಾಗಿರಬೇಕೆಂಬ ನಿಯಮವೇನಿಲ್ಲ. ಮನಸ್ಸಿನೊಳಗೆ ಈಗಾಗಲೇ ಕಲಿತಿರುವುದರ ಪೂರ್ವಾಗ್ರಹವಿರಬಾರದು, ಹೊರೆಯಿರಬಾರದು.
ಒಂದು ಪ್ರಶ್ನೆಯನ್ನು ಮಾತ್ರ ಸದಾ ಕೇಳಿಕೊಳ್ಳುತ್ತಲೇ ಇರಬೇಕು. ಓದಿನಲ್ಲಿ, ಓದು ನಮ್ಮಲ್ಲಿ ಬದಲಾವಣೆ ತರಬಲ್ಲದು ಎಂಬ ಸಾಧ್ಯತೆಯಲ್ಲಿ ನಮಗೇ ನಂಬಿಕೆಯಿದೆಯೇ ಎಂಬ ಪ್ರಶ್ನೆಯನ್ನು ಸದಾ ಕೇಳಿಕೊಳ್ಳುತ್ತಲೇ ಇರಬೇಕು. ಹಿಂದೊಂದು ಕಾಲದಲ್ಲಿ ನಾವೆಲ್ಲ ಒಳ್ಳೆಯ, ಸೂಕ್ಷ್ಮ ಓದುಗರಾಗಿದ್ದಿರಬಹುದು. ಈಗ ಓದುವುದನ್ನು ನಿಲ್ಲಿಸಬೇಕು ಎಂದು ಅರ್ಥವಲ್ಲ. ಮನಸ್ಸು ಹಿಂದಿನ ಸ್ಥಿತಿಗೆ ಹಿಂತಿರುಗುವುದನ್ನು ಕಾಯಬೇಕು. ಅಲ್ಲಿಯ ತನಕ ಇನ್ನೊಬ್ಬರಿಗೆ ಓದಲು ಬಿಡುವು ಮಾಡಿಕೊಡಬೇಕು. ಮನಸ್ಸು ಮತ್ತೆ ಚಿಗಿತುಕೊಂಡಾಗ ‘ಮೊದಲ ಓದು’ ಮತ್ತೆ ಪ್ರಾರಂಭವಾಗಬಹುದು.
ಕೆ. ಸತ್ಯನಾರಾಯಣ
ಲೇಖಕ ಕೆ. ಸತ್ಯನಾರಾಯಣರು ಸಣ್ಣಕತೆ, ಕಾದಂಬರಿ, ಪ್ರಬಂಧ, ವಿಮರ್ಶೆ ಸೇರಿದಂತೆ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಭಾರತೀಯ ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಪೂರ್ಣಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಬಂಧ, ಕಾದಂಬರಿ ಮತ್ತು ಸಣ್ಣಕತೆಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಾಸ್ತಿ ಕಥಾ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಒಟ್ಟಾರೆ ಸಣ್ಣಕತೆಗಳ ಸಾಧನೆಗೆ ಮಾಸ್ತಿ ಪ್ರಶಸ್ತಿ ದಕ್ಕಿದೆ.