ಕತೆಯನ್ನು ನಿರ್ದೇಶಿಸುವ ಕೊರಳು, ಕಿವಿ ಮತ್ತು ಕಣ್ಣು
ಒಂದು ಚಿತ್ರಕ ಮತ್ತು ಎರಡು ಅವಲೋಕನಾತ್ಮಕ ಕಾದಂಬರಿಗಳ ಕುರಿತು
ಫ಼್ರೆಂಚ್ ಕಾದಂಬರಿಕಾರ ಜಾರ್ಜ್ ಪೆರೆಕ್ (Georges Perec) ಅವರ ‘Things: A Story of the Sixties’ ಮತ್ತು ‘A Man Asleep’; ಈಟಾಲೊ ಕಾಲ್ವೀನೋ (Italo Calvino) ಅವರ ‘The Castle of Crossed Destinies’ ಈ ಮೂರು ಕಾದಂಬರಿಗಳನ್ನು ಸಂಕೇತ ಪಾಟೀಲ ಇಲ್ಲಿ ಪರಿಚಯಿಸಿದ್ದಾರೆ. ಇವು ಕಾದಂಬರಿಯ ಸ್ವರೂಪದಲ್ಲಿನ ವಿಶಿಷ್ಟ ಪ್ರಯೋಗಗಳು.
ನನಗೆ ಜಾರ್ಜ್ ಪೆರೆಕ್ (Georges Perec) ಎದುರಾದದ್ದು ಒಂದು ಸುತ್ತುಬಳಸಿನ ಹಾದಿಯ ಮೂಲಕ. ಕೆಲವು ವರ್ಷಗಳ ಹಿಂದೆ, ಈಟಾಲೊ ಕಾಲ್ವೀನೋರ ‘Numbers in the Dark’ ಮತ್ತು ‘Cosmicomics’ ಪುಸ್ತಕಗಳಲ್ಲಿನ ಕತೆಗಳನ್ನು ಓದುತ್ತಿದ್ದಾಗ, ಅವುಗಳಲ್ಲಿನ ಕೆಲವು ಸಣ್ಣಕತೆಗಳು ಅವುಗಳ ವಿಲಕ್ಷಣ ಸಂರಚನೆಯಿಂದ ಇನ್ನಿಲ್ಲದ ಕುತೂಹಲ ಕೆರಳಿಸಿದವು. ಗಣಿತ, ಗಣಕ ಶಾಸ್ತ್ರ ಮತ್ತು ಖಗೋಳಶಾಸ್ತ್ರಗಳಲ್ಲಿ ಕಾಲ್ವೀನೋಗೆ ಆಳವಾದ ಆಸಕ್ತಿಯಿದ್ದುದು ನನಗೆ ಗೊತ್ತಿತ್ತು. ಅವರು 1967ರಲ್ಲಿ ಬರೆದ “Cybernetics and Ghosts” ಎಂಬ ಪ್ರಬಂಧದಲ್ಲಿ ಭಾಷೆ ಮತ್ತು ಕತೆಗಾರಿಕೆಯ ಹುಟ್ಟು ಮತ್ತು ವಿಕಸನದ ಬಗ್ಗೆ ಧೇನಿಸುತ್ತ, ಮನುಷ್ಯನ ಮನಸ್ಸೆಂಬ ಯಂತ್ರ ಆಸಕ್ತಿಕರ ಮತ್ತು ಅಪೂರ್ವ ಪದಸಂಯೋಜನೆಗಳ ಮೂಲಕ ಕವಿತೆಯ ವಿಶಿಷ್ಟ ಅನುಭೂತಿ ಕೊಡಬಲ್ಲುದಾದರೆ ಮುಂದೊಂದು ದಿನ ಕಂಪ್ಯೂಟರ್ಗಳು ಅಂಥ ಸಾಮರ್ಥ್ಯ ಪಡೆಯಬಹುದೇ, ಸಾಹಿತ್ಯವನ್ನು ಒಂದು ಸಂಕೀರ್ಣ ಆದರೆ ಸಾಧಿಸಬಹುದಾದ Computational ಪ್ರಕ್ರಿಯೆಯ ಮಟ್ಟಕ್ಕೆ ಇಳಿಸಬಹುದೇ ಎಂಬ ಚರ್ಚೆಯನ್ನು ಬೆಳೆಸುತ್ತ “The Literature Machine” ಎಂಬ ಪ್ರಚೋದಕ ಪರಿಕಲ್ಪನೆಯನ್ನು ನಮ್ಮ ಮುಂದಿಟ್ಟದ್ದನ್ನೂ ಓದಿದ್ದೆ.
ಅದೇ ವೇಳೆಗೆ ಆಕಸ್ಮಿಕವಾಗಿ ಸಿಕ್ಕ ಅವರ ‘The Burning of the Abominable House’1 ಎಂಬ ಸಣ್ಣಕತೆಯನ್ನು ಓದಿ ದಂಗಾಗಿ ಅದರ ಬೆನ್ನು ಹತ್ತಿ ಹೋದಾಗ ನನಗೆ ಫ಼್ರಾನ್ಸಿನ ‘ಊಲಿಪೊ’ (OuLiPo) ಎಂಬ ಕುತೂಹಲಕರ ಸಾಹಿತ್ಯಕ ಚಳುವಳಿಯ ಬಗ್ಗೆಯೂ ಕಾಲ್ವೀನೋ ಅದರ ಜೊತೆ ಒಡನಾಟ ಇಟ್ಟುಕೊಂಡದ್ದರ ಬಗ್ಗೆಯೂ ತಿಳಿದಿತ್ತು.

ಫ಼್ರೆಂಚ್ನಲ್ಲಿ ಊಲಿಪೊದ ವಿಸ್ತೃತ ರೂಪ ‘Ouvroir de littérature potentielle’ (ಸರಿಸುಮಾರಿನ ಅನುವಾದದಲ್ಲಿ — Workshop for Potential Literature / ಸಾಹಿತ್ಯದ ಸಾಧ್ಯತೆಗಳ ಕಾರ್ಯಾಗಾರ). ಅದು ಯುರೋಪಿಯನ್ (ಬಹುತೇಕ ಫ಼್ರೆಂಚ್) ಸಾಹಿತಿಗಳು ಮತ್ತು ಗಣಿತಜ್ಞರ ಒಂದು ಅನೌಪಚಾರಿಕ ಕೂಟವಾಗಿತ್ತು. ಅವರ ಉದ್ದೇಶ: “ಬರಹಗಾರರು ಅವರ ಆಸಕ್ತಿಗೆ ಮತ್ತು ಆನಂದಕ್ಕೆ ಅನುವಾಗಬಲ್ಲಂಥ ಹೊಸ ಸಂರಚನೆಗಳು ಮತ್ತು ವಿನ್ಯಾಸಗಳ ಹುಡುಕಾಟ.” ಅದರಲ್ಲಿ ಭಾಗವಹಿಸುವವರು: “ತಾವೇ ತೊಡಕುದಾರಿಗಳನ್ನು ನಿರ್ಮಿಸಿ ಅದರಿಂದ ಬಿಡುಗಡೆ ಹೊಂದಿ ಹೊರಹೋಗಬಯಸುವ ಇಲಿಗಳು.” ಊಲಿಪೊದ ಬರಹಗಾರರು ಅಕ್ಷರಲೋಪ, ಪದಲೋಪ, ಮೊದಲಾದ ‘ನಿರ್ಬಂಧಿತ ಬರವಣಿಗೆ’ಯ (Constrained Writing) ತಂತ್ರಗಳು, ಶಬ್ದಚಮತ್ಕಾರ, ಗಣಿತದ ವಿನ್ಯಾಸಗಳು, ಇವನ್ನೆಲ್ಲ ಬಳಸಿಕೊಂಡು ಸಾಹಿತ್ಯ ಕೃತಿಗಳನ್ನು ರಚಿಸುವ ಪ್ರಯತ್ನದಲ್ಲಿದ್ದರು. ಸಂಸ್ಕೃತ, ಕನ್ನಡ ಇತ್ಯಾದಿ ಭಾಷೆಗಳ, ಬಹುತೇಕ ಸಂಸ್ಕೃತಿಗಳ ಚರಿತ್ರೆಯನ್ನು ನಾವು ಗಮನಿಸಿದರೆ ಇಂಥ ಪ್ರಯತ್ನಗಳ ಉದಾಹರಣೆಗಳು ನಮಗೆ ಕಂಡುಬರುತ್ತವೆ. ಆದರೂ ಆಧುನಿಕ ಯುಗದಲ್ಲಿ ಇಂಥದೊಂದು ಚಳುವಳಿಯ ಮೂಲಕ ಹಲವು ಶಿಸ್ತುಗಳನ್ನು ಸುಸಂಬದ್ಧವಾಗಿ ಒಗ್ಗೂಡಿಸಿ ಬಹುದೊಡ್ಡ ಸಾಹಿತಿಗಳು ಮತ್ತು ವಿಜ್ಞಾನಿಗಳು ಗಂಭೀರ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡದ್ದು ಮಹತ್ವದ್ದು.
***
ಕಾಲ್ವೀನೋರ ‘The Castle of Crossed Destinies’ ಎಂಬ ಕಿರುಕಾದಂಬರಿಯನ್ನು ಊಲಿಪೊ ಸಾಹಿತ್ಯವೆಂದು ಗಣಿಸಲಾಗುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಅದು ರೂಢಿಗತವಾದ ಕಾದಂಬರಿಯಂತೂ ಅಲ್ಲ.
ಒಂದು ಕತೆ ಕತೆಯಾಗುವುದು ಯಾವಾಗ? ಕತೆಯ ಬೀಜವೊಂದು ಕತೆಗಾರನ ಮನದಾಳದಲ್ಲಿ ಇಳಿದಾಗ ಕತೆ ಹುಟ್ಟುತ್ತದೋ? ಅದನ್ನವನು ಹೇಳುವ ಕ್ರಿಯೆಯೇ ಅದರ ಹುಟ್ಟೋ? ಅಥವಾ ಕತೆಗಾರನಿಂದ ಹೊರಬರುತ್ತಿರುವ ಪದಗಳನ್ನು, ಅವುಗಳ ಧ್ವನಿಗಳನ್ನು ಕೇಳಿಸಿಕೊಂಡವರು ಅವನ್ನು ಬಳಸಿಕೊಂಡು ತಮ್ಮವೇ ವಿಶ್ವಗಳನ್ನು ಕಟ್ಟಿಕೊಂಡಾಗಲೋ? ಕತೆಗೆ ಅರ್ಥ ದತ್ತವಾಗುವುದು ಆಗಲೇ ಏನು?
ಕಾಲ್ವೀನೋರ ಕಾದಂಬರಿಯನ್ನು ಓದುವಾಗ ಇಂಥ ಪ್ರಶ್ನೆಗಳು ಕಾಡುತ್ತವೆ. ಒಬ್ಬ ಓದುಗ ತನ್ನ ಓದುವಿಕೆಯ ಮೂಲಕ ಸಾವಿರ ಬಾಳುವೆಗಳನ್ನು ಬಾಳಲು ಸಾಧ್ಯ ಎಂಬರ್ಥದ ಮಾತೊಂದಿದೆ. ಇದೇ ಮಾತನ್ನು ಕತೆ ಹೇಳುವವರಿಗೂ ಅನ್ವಯಿಸಬಹುದೇನೋ. ಓದುಗರು ಕಟ್ಟಿಕೊಂಡ ಸಾವಿರಾರು ದಟ್ಟ ಹಾಗೂ ವೈವಿಧ್ಯಮಯ ಕತೆಗಳ ಮೂಲಕ ಕತೆ ಹೇಳುವವರೂ ಬದುಕುತ್ತ ಹೋಗುತ್ತಾರೆ — ಕತೆ ಹೇಳುವವರಿಗೆ ಆ ಅದೃಷ್ಟವಿದ್ದರೆ!
ಇದನ್ನೇ ಕಾಲ್ವೀನೋರ ಮಾರ್ಕೋ ಪೋಲೋ ಇನ್ನೊಂದು ರೀತಿ ಹೇಳುತ್ತಾನೆ. “Invisible Cities” ಎಂಬ ಇನ್ನೊಂದು ವಿಲಕ್ಷಣ ಕಾದಂಬರಿಯಲ್ಲಿ ವೆನಿಸ್ನ ವ್ಯಾಪಾರಿ ಮತ್ತು ಅನ್ವೇಷಕ ಮಾರ್ಕೋ ಪೋಲೋ, ಮೊಂಗೋಲ್ ಸಾಮ್ರಾಟ ಕುಬ್ಲಾಇ ಖಾನನಿಗೆ ಗದ್ಯಕವಿತೆಗಳಂಥ ಬರಹಗಳ ಮೂಲಕ 55 (ಕಾಲ್ಪನಿಕ) ನಗರಗಳ ಬಗ್ಗೆ ಹೇಳುತ್ತಾ ಹೋಗುತ್ತಾನೆ. ಒಂದೊಮ್ಮೆ ಮಾರ್ಕೋನನ್ನು ತಡೆದ ಕುಬ್ಲಾಇ ಹೀಗೆ ಕೇಳುತ್ತಾನೆ: “ನೀನು ಪಶ್ಚಿಮಕ್ಕೆ ಹಿಂದಿರುಗಿದಾಗ ನಿನ್ನ ಜನರಿಗೂ ನನಗೆ ಹೇಳುವ ಕತೆಗಳನ್ನೇ ಮತ್ತೆ ಹೇಳುತ್ತೀಯಾ?” ಇದಕ್ಕೆ ಮಾರ್ಕೋನ ಉತ್ತರ: “ನಾನು ಹೇಳುತ್ತೇನೆ, ಹೇಳುತ್ತಲೇ ಹೋಗುತ್ತೇನೆ. ಆದರೆ ಕೇಳುವವರು ತಾವು ನಿರೀಕ್ಷಿಸಿದ್ದ ಪದಗಳನ್ನಷ್ಟೇ ಇಟ್ಟುಕೊಳ್ಳುತ್ತಾರೆ. […] ಕತೆಯನ್ನು ನಿರ್ದೇಶಿಸುವುದು ಕೊರಳಲ್ಲ, ಕಿವಿ.” It is not the voice that commands the story: it is the ear.
“The act of reading is a partnership. The author builds a house, but the reader makes it a home.” ಎಂಬ ಮಾತೂ ಇದೆ. ಅರ್ಥಾತ್, ಕತೆಗಾರ ತನಗೆ ನೀಗಿದ ಹಾಗೆ ನೀಗಿದಷ್ಟು ಪದಗಳನ್ನು ಪೇರಿಸಿ ಕತೆ ಕಟ್ಟಬಲ್ಲನಷ್ಟೇ. ಅದನ್ನು ತಮ್ಮ ಮನದಲ್ಲಿ ಸಜೀವಗೊಳಿಸುವುದು ಕೇಳುವವರು (ಅಥವಾ ಓದುವವರು). ಕತೆ ಸಜೀವವಾಗಿ ಸೃಷ್ಟಿ ತಳೆಯುವುದು ಅಲ್ಲಿ. ಒಂದೆರಡಲ್ಲ, ಲೆಕ್ಕವಿಲ್ಲದಷ್ಟು — ಏಕೆಂದರೆ ಪ್ರತಿಯೊಬ್ಬ ಓದುಗರು ತಮ್ಮದೇ ಕತೆಯನ್ನು ಸೃಷ್ಟಿಸಿಕೊಳ್ಳುತ್ತಾರೆ.

ಹೀಗಿರುವಾಗ, ಈ ಸಮೀಕರಣದಿಂದ ಹೇಳುವುದನ್ನು ಮತ್ತು ಕೇಳುವುದನ್ನು ತೆಗೆದು ಹಾಕಿದರೆ? ಕತೆಯನ್ನು ನಿರ್ದೇಶಿಸಲು ಕೊರಳು ಮತ್ತು ಕಿವಿ ಎರಡೂ ಇಲ್ಲದೇ ಹೋದರೆ? ಆಗ ಕತೆಯ ಗತಿಯೇನು? ಅದು ರೂಪುಗೊಳ್ಳುವುದು ಎಲ್ಲಿ?
ಕಾಲ್ವೀನೋ ‘The Castle of Crossed Destinies’ಯಲ್ಲಿ ಇಂಥದೇ ಒಂದು ಸನ್ನಿವೇಶಕ್ಕೆ ಓದುಗರನ್ನು ತಳ್ಳುತ್ತಾರೆ. ಒಬ್ಬರಿಗೊಬ್ಬರು ಅಪರಿಚಿತರಾದ ಒಂದಷ್ಟು ದಾರಿಹೋಕರು ಒಂದು ಪುರಾತನ ಕೋಟೆಮನೆಗೆ ಬಂದು ತಲುಪುತ್ತಾರೆ. ಪ್ರತಿಯೊಬ್ಬರೂ ತಮ್ಮವೇ ಬೇರಾರಿಗೂ ಗೊತ್ತಿಲ್ಲದ ಹಾದಿಗಳ ಮೂಲಕ ಬಂದಿದ್ದಾರೆ. ಅಲ್ಲಿಗೆ ತಲುಪಿದ ಕೂಡಲೇ ತಾವು ಮಾತು ಕಳಕೊಂಡದ್ದು ಅವರ ಅರಿವಿಗೆ ಬರುತ್ತದೆ. ಪ್ರತಿಯೊಬ್ಬರೂ ಉಳಿದವರಿಗೆ ತಮ್ಮ ಕತೆಯನ್ನು ಹೇಳಲು ಹಾತೊರೆಯುತ್ತಿದ್ದಾರೆ. ಆದರೆ ಹೇಳಲಾಗುತ್ತಿಲ್ಲ. ಉದ್ರಿಕ್ತರಾಗಿ ಕತೆ ಹೇಳುವ ಮಾರ್ಗವನ್ನು ಅರಸುತ್ತಿದ್ದಾಗ ಅವರಿಗೆ ಟ್ಯಾರೋ ಕಾರ್ಡ್ಗಳ (Tarot Card)2 ಒಂದು ಕಟ್ಟು ಸಿಗುತ್ತದೆ. ಇದೇ ಸರಿಯಾದ ಅವಕಾಶವೆಂದು ಕಂಡುಕೊಂಡು, ಟ್ಯಾರೋ ಕಾರ್ಡುಗಳ ಚಿತ್ರಕ ಶಕ್ತಿ, ಅವುಗಳಲ್ಲಿನ ಹೇರಳವಾದ ಪ್ರತಿಮೆಗಳ ಮೂಲಕ ತಮ್ಮ ತಮ್ಮ ಕತೆಗಳನ್ನು ಹೇಳತೊಡಗುತ್ತಾರೆ. ಟ್ಯಾರೋ ಕಾರ್ಡುಗಳ ಕಟ್ಟಿನ ವಿಶ್ವದಿಂದ ನಿರ್ಬಂಧಿತರಾದ ಅವರು ತಮ್ಮ ಕೇಳುಗರಿಗಾಗಿ (ವಾಸ್ತವದಲ್ಲಿ, ನೋಡುಗರಿಗಾಗಿ) ತಮ್ಮ ಕತೆಗಳನ್ನು ಎಷ್ಟು ಪರಿಣಾಮಕಾರಿಯಾಗಿ ಕಟ್ಟಬಲ್ಲರು? ಧ್ವನಿಯಿಲ್ಲದೇ ಕೇವಲ ಚಿತ್ರಗಳ ಮೂಲಕ ಹೇಳಲಾಗುತ್ತಿರುವ ಕಥೆಯನ್ನು ನೋಡುಗರು ಎಷ್ಟರಮಟ್ಟಿಗೆ ಅನುಸರಿಸಬಲ್ಲರು? ಪ್ರತಿಯೊಬ್ಬರೂ ಹಿಂದಿನವರ ಕತೆಗಳಿಗೆ ತಮ್ಮ ಕಾರ್ಡುಗಳನ್ನು ಜೋಡಿಸಿ, ಕೆಲವನ್ನು ಬದಲಿಸಿ ತಮ್ಮ ಕತೆಯನ್ನು ಹೇಳುತ್ತ ಹೋದಂತೆ ಅವರೆಲ್ಲಾ ನೂರಾರು ಬಣ್ಣಗಳ ಚಿತ್ತಾರದ ಬಟ್ಟೆಯೊಂದರ ಸಂಕೀರ್ಣ ಹೆಣಿಗೆಯಲ್ಲಿ ಸಿಲುಕಿಕೊಳ್ಳುತ್ತ ಹೋದಂತೆ ಭಾಸವಾಗುತ್ತದೆ.
ಸಾಹಿತ್ಯ ಕೃತಿಗಳ ಸ್ವರೂಪದೊಂದಿಗೆ ಕಾಲ್ವೀನೋ ಮಾಡಿದ ಪ್ರಯೋಗಳು ಅನನ್ಯವಾದುವು. ಈ ಪುಸ್ತಕದಲ್ಲಿ ಕತೆಯ ಗದ್ಯದ ಜೊತೆಗೆ ಪಕ್ಕದಲ್ಲಿ ಟ್ಯಾರೋ ಕಾರ್ಡುಗಳ ಚಿತ್ರಗಳಿವೆ. ಹೀಗಾಗಿ ಓದುಗರಾದ ನಮಗೂ ನಮ್ಮವೇ ಕತೆಗಳನ್ನು ಕಟ್ಟಿಕೊಳ್ಳುವ ಅವಕಾಶವಿದೆ! ಇದೊಂದು ಸಮ್ಮೋಹಕ ಪರಿಕಲ್ಪನೆಯಂತೂ ಹೌದು. ಕಾಲ್ವೀನೋನ ಪ್ರಯೋಗ ಆಸಕ್ತಿಕರವಾಗಿದ್ದರೂ ಅದರ ನಿರ್ವಹಣೆ ನನಗೆ ತುಸು ನಿರಾಸೆಯನ್ನುಂಟುಮಾಡಿತು. ಅವರ ಬರವಣಿಗೆಯ ಮೌಲ್ಯಗಳಲ್ಲಿ ಮುಖ್ಯವಾದುವು ಹಗುರತನ (lighness) ಮತ್ತು ನಿಖರತೆ (exactitude) — ಇವಕ್ಕೆ ಕುಂದು ಬಾರದಂತೆ ಅವನ ಬರವಣಿಗೆಯಲ್ಲಿ ಪಾಲಿಸುತ್ತಾರೆ. ಅವರ ಬಹುತೇಕ ಕೃತಿಗಳಲ್ಲಿ ಅತ್ಯಂತ ಆಕರ್ಷಕವಾದ ಗದ್ಯ ನಿರಾಯಾಸವಾಗಿ ಹರಿಯುತ್ತದೆ, ಓದುವವರನ್ನು ತೇಲಿಸಿಕೊಂಡು ಹೋಗುತ್ತದೆ. ಆದರೆ ಈ ಪುಸ್ತಕವನ್ನು ಓದುವಾಗ ನಾನು ಹಲವೆಡೆ ಹೆಣಗಬೇಕಾಯಿತು. ಕಾಲ್ವೀನೋ ಕೂಡ ಬರೆಯುವಾಗ ಹೆಣಗಿರಬಹುದೇ? ಪುಸ್ತಕದ ಕೊನೆಯಲ್ಲಿ, ಈ ಕಲ್ಪನೆ ತನ್ನನ್ನು ಹೇಗೆ ಆವರಿಸಿತು ಎಂಬ ಬಗ್ಗೆ ವಿವರವಾದ ಟಿಪ್ಪಣಿಯನ್ನು ಬರೆದಿದ್ದಾರೆ. ಮೊದಲಿಗೆ ಟ್ಯಾರೋ ಕಾರ್ಡುಗಳನ್ನು ಅಭ್ಯಸಿಸುತ್ತ, ಎಲ್ಲರಿಗೂ ಗೊತ್ತಿರುವ ಜಾನಪದ ಕತೆಗಳು, ದಂತಕತೆಗಳ ಸಿದ್ಧಮಾದರಿಗಳನ್ನು ಎರವಲು ತೆಗೆದುಕೊಂಡು, ತನ್ನವೇ ಹೊಸ ಕತೆಗಳನ್ನೂ ರಚಿಸುತ್ತ, ಅವುಗಳ ಸುತ್ತಲೂ ಕತೆಗಳನ್ನು ಹೇಗೆ ಹೆಣೆಯಬಹುದು ಎಂದು ಧೇನಿಸುತ್ತ ಪ್ರತಿಯೊಂದರ ಜೊತೆ ತಿಂಗಳುಗಟ್ಟಲೇ ಕಳೆದಿದ್ದರಂತೆ.
ಇದು ಕಾಲ್ವೀನೋರ ಅತ್ಯುತ್ತಮ ಕೃತಿಗಳಲ್ಲಿ ಒಂದಲ್ಲವಾದರೂ ಅವರ ಸೃಜನಶೀಲತೆಯ ಹರಹು, ಅವರ ಕಲ್ಪಕತೆಯ ಸಾಂದ್ರತೆ, ಮತ್ತು ಬರೆಹಗಳ ಸಮೃದ್ಧಿ ನನ್ನನ್ನು ಬೆರಗುಗೊಳಿಸುತ್ತಲೇ ಇರುತ್ತದೆ.
***
ಮೊದಲಿಗೇ ಹೇಳಿದಂತೆ ನನಗೆ ಜಾರ್ಜ್ ಪೆರೆಕ್ ಎದುರಾದದ್ದೂ ಇಂದಿನಂಥದ್ದೇ ಒಂದು ದಿನದಂದು, ನಾನು ಎಂದಿನಂತೆ ಸುತ್ತುಬಳಸಿನ ಹಾದಿಗಳ ಮೂಲಕ ಸುಳಿದಾಡುತ್ತಿದ್ದಾಗ. ಊಲಿಪೊದ ಬೆನ್ನುಹಿಡಿದು ಹೋಗುತ್ತಿದ್ದಾಗ ಅದರ ಸಂಸ್ಥಾಪಕರಲ್ಲೊಬ್ಬರಾದ ಅವರು ಸಿಕ್ಕಿದ್ದರು. ಅವನ ‘La Disparition’ (ಕಾಣೆಯಾಗುವುದು / ತೆರಪು) ಎಂಬ 300 ಪುಟಗಳ ಕಾದಂಬರಿಯು ‘e’ ಅಕ್ಷರಲೋಪ ಮಾಡಿ ಬರೆದ ಒಂದು lipogram. ನಿರ್ಬಂಧಗಳಡಿಯಲ್ಲೇ ಸಂಕೀರ್ಣ ವಿನ್ಯಾಸಗಳನ್ನೂ ಬಹುಪದರಗಳ ಕಥಾ ಹಂದರವನ್ನೂ ಒಳಗೊಂಡ ‘Life: A User’s Manual’ ಎಂಬುದು ಅವರ ಪ್ರಸಿದ್ಧ ಮತ್ತು ಬಹುಚರ್ಚಿತ ಬೃಹತ್ ಕಾದಂಬರಿ. ಇಡೀ ಕಾದಂಬರಿ ನಡೆಯುವುದು ಪ್ಯಾರಿಸ್ಸಿನ ಒಂದು ಅಪಾರ್ಟ್ಮೆಂಟ್ ಕಟ್ಟದ ಒಂದು ಪಾರ್ಶ್ವದಲ್ಲಿ — ಹೆಪ್ಪುಗಟ್ಟಿದ ಒಂದು ಗಳಿಗೆಯಲ್ಲಿ.
ನಾನು ಮೊದಲು ಓದಿದ ಪೆರೆಕ್ರ ಕೃತಿಗಳು ಶುರುವಾತಿನವು — ಊಲಿಪೊ ದಿನಗಳಿಗಿಂದ ಹಿಂದಿನ — ಎರಡು ಕಿರುಕಾದಂಬರಿಗಳು: ‘Things: A Story of the Sixties’, ಮತ್ತು ‘A Man Asleep’. ಇವೆರಡನ್ನೂ ‘ಅವಲೋಕನಾತ್ಮಕ ಕಾದಂಬರಿಗಳು’ (‘observational novels’) ಎನ್ನಬಹುದೇನೋ. ಹೇಳಬಹುದಾದ ಕಥಾವಸ್ತು ಅಥವಾ ಮಹತ್ವದ ಘಟನೆಗಳಿಲ್ಲದ, ಹೆಚ್ಚು ಪಾತ್ರಗಳಿಲ್ಲದ, ಇದ್ದವುಗಳ ಪಾತ್ರ ಬೆಳವಣಿಗೆಯೂ ಇಲ್ಲದ — ಒಟ್ಟಿನಲ್ಲಿ ಸಾಂಪ್ರದಾಯಿಕ ಕಾದಂಬರಿಯ ಉಪಯುಕ್ತ ಪರಿಕರಗಳನ್ನೆಲ್ಲ ತ್ಯಜಿಸಿ ಬರೆದ ಕಾದಂಬರಿಯಿದು. ಹಲವು ಯುರೋಪಿಯನ್ ಕಾದಂಬರಿಗಳಂತೆ ಇದೂ ಪ್ರಬಂಧಾತ್ಮಕ ಶೈಲಿಯನ್ನು ಅಳವಡಿಸಿಕೊಂಡಿದೆ.
‘ವಸ್ತುಗಳು’ ಕಾದಂಬರಿಯಲ್ಲಿ ಪೆರೆಕ್, ಸದಾ ಇನ್ನೂ ಹೆಚ್ಚನ್ನು ಬಯಸುವ ಇನ್ನೂ ಎತ್ತರದ ಬದುಕಿನ ಕನಸು ಕಾಣುವ ಪ್ಯಾರಿಸ್ನ ಒಂದು ಯುವ ಜೋಡಿಯನ್ನು ಪರಿಚಯಿಸಿ ಅವರ ದಿನನಿತ್ಯದ ಬಾಳುವೆಯನ್ನು ನಮಗೆ ತೋರಿಸುತ್ತಾ ಹೋಗುತ್ತಾರೆ. ಒಳ್ಳೆಯ ಬಾಳ್ವೆಯ ಅವರ ಒಟ್ಟೂ ಕಲ್ಪನೆ ‘ವಸ್ತು’ಗಳ ಸುತ್ತ ತಿರುಗುತ್ತದೆ. ಶ್ರೀಮಂತಿಕೆಯನ್ನು ಹಂಬಲಿಸುತ್ತ, ವಸ್ತುಗಳನ್ನು, ಸುಖವನ್ನು, ಸೌಕರ್ಯಗಳನ್ನು ಗಳಿಸುವ ಹಗಲುಗನಸು ಕಾಣುತ್ತ ಸಮಯ ಕಳೆಯುವ ಅವರು ಅವಕ್ಕಾಗಿ ಕಷ್ಟಪಡಲೊಲ್ಲರು. ಅವು ಸುಲಭವಾಗಿ ಹಠಾತ್ತನೆ ಕೈಗೆ ಹತ್ತಬೇಕು ಎಂದು ಉತ್ಕಟವಾಗಿ ಬಯಸುತ್ತಾರೆ — ಇಷ್ಟು ದಿನ ಅವರ ಇರುವಿಕೆಯ ಸುಳಿವೇ ಇಲ್ಲದ ಯಾವುದೋ ದೂರದ ಸಂಬಂಧಿಯೊಬ್ಬರು ತಮ್ಮ ಅಪಾರ ಸಂಪತ್ತಿಯನ್ನೆಲ್ಲ ಇವರ ಹೆಸರಿಗೆ ಮಾಡಿಟ್ಟು ತೀರಿಹೋದ ಸುದ್ದಿಯಿರುವ ಪತ್ರ ಬಂದುಬಿಟ್ಟಂತೆ. ಸಾಮಾನ್ಯ ನೌಕರಿಗಳ ಕಂತೆಪುರಾಣಗಳನ್ನು ಕಂಡರೆ ಅವರಿಗೆ ಹೇಸಿಗೆ. ದಿನಗಟ್ಟಳೆಯ ತಿರುಗಣಿ ಮಡುವಿನಿಂದ ಪಾರಾಗಬೇಕಿದೆ.
ಯಾವುದೇ ಧ್ಯೇಯವಿಲ್ಲದೇ ಹೀಗೆ ಕನವರಿಸುತ್ತ ವಸ್ತುಗಳನ್ನು ಪಡೆದುಕೊಳ್ಳುತ್ತ ಬದುಕೆಂಬ ಹುದುಲಿನಲ್ಲಿ ಕಾಲೆಳೆಯುತ್ತ ಹೋಗುತ್ತಿರುವ ಈ ಜೋಡಿಯ tragicomic ಪಾಡನ್ನು ನಿಖರವಾದ ವಿವರಗಳಲ್ಲಿ ‘ವಸ್ತುಗಳು’ ಕಾದಂಬರಿ ದಾಖಲಿಸುತ್ತದೆ. ಕಾದಂಬರಿಯ ಕೊನೆಯಲ್ಲಿ, ತಮ್ಮ ನೀರಸ ಇರುವಿಕೆಯಿಂದ ಸುಗಮವಾದ ಬಿಡುಗಡೆಯಿಲ್ಲ, ಯಾವ ಪವಾಡವೂ ಸಂಭವಿಸುವುದಿಲ್ಲ ಎಂಬ ಅರಿವು ಅವರಲ್ಲಿ ಇಳಿಯತೊಡಗಿ ತಮ್ಮ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವ ಲಕ್ಷಣ ತೋರುತ್ತಾರೆ.
‘ಮಲಗಿರುವ ಮನುಷ್ಯ’ ಕಾದಂಬರಿ ‘ವಸ್ತುಗಳು’ ಕಾದಂಬರಿಯ ವಿವಾದಿ ಸ್ವರದಂತಿದೆ. ‘ವಸ್ತುಗಳು’ವಿನ ಯುವ ಜೋಡಿಯಾದ ಜೆರೋಮ್ ಮತ್ತು ಸಿಲ್ವೀ ಇಬ್ಬರಿಗೂ ಜಗತ್ತು ಒಂದು ಮೋಡಿಯ ತಡೆಯಲಾಗದಷ್ಟೂ ಸೆಳೆತದ ಮಾರುಕಟ್ಟೆ; ಅವರು ಎಲ್ಲವನ್ನೂ ಅನುಭೋಗಿಸಬೇಕು. ಆದರೆ ಇಲ್ಲಿ ಪೆರೆಕ್, 25 ವರ್ಷ ವಯಸ್ಸಿನ ಒಬ್ಬ ಅನಾಮಿಕ ಮಾಜಿ ವಿದ್ಯಾರ್ಥಿಯ ಜೀವನವನ್ನು ತೋರಿಸುತ್ತಾರೆ. ವಾಸ್ತವದಲ್ಲಿ ತೋರಿಸಲು ಅಲ್ಲಿ ಏನೂ ಇಲ್ಲ. ಆ ಯುವಕ ಬದುಕಿನಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ, ಉದಾಸೀನತೆಯೇ ಮೂರ್ತಿವೆತ್ತಂತಿದ್ದಾನೆ; ಅವನು ಬದುಕಿನ ಆಗುಹೋಗುಗಳನ್ನು ನಿರ್ಲಿಪ್ತತೆಯಿಂದ, ಅವಕ್ಕೆ ಯಾವುದೇ ಮೌಲ್ಯ ಅಥವಾ ಭಾವನೆಗಳನ್ನು ಹಚ್ಚದೇ, ಗಮನಿಸುತ್ತ ಇರಬಯಸುತ್ತಾನೆ.
‘ಮಲಗಿರುವ ಮನುಷ್ಯ’ ಮಧ್ಯಮ ಪುರುಷ (Second Person) ನಿರೂಪಣೆಯಿರುವ ಕಾದಂಬರಿ. ಈ ನಿರೂಪಣಾ ತಂತ್ರದ ಬಳಕೆ ಬಹಳ ವಿರಳ. ನನಗಂತೂ ಈ ಕಾದಂಬರಿಯ ಹೊರತಾಗಿ ಇಂಗ್ಲಿಷ್ ಅಥವಾ ಕನ್ನಡದಲ್ಲಿ ಆ ತಂತ್ರವನ್ನು ಬಳಸಿ ಬರೆದ ಯಾವ ಕೃತಿಯನ್ನೂ ಓದಿದ ನೆನಪಿಲ್ಲ. ಇದು ಕಾದಂಬರಿಗೆ ಇನ್ನೂ ಒಂದು ಆಯಾಮವನ್ನು ಒದಗಿಸುತ್ತದೆ: ಒಂದರ್ಥದಲ್ಲಿ ಎರಡು ಪಟ್ಟು ಅವಲೋಕನಾತ್ಮಕ ಕಾದಂಬರಿಯಾಗುತ್ತದೆ, ಅಥವಾ ಮೂರು ಪಟ್ಟು. ಕಥಾನಾಯಕ ನೋಡುತ್ತಿರುವುದನ್ನು ಕಾದಂಬರಿಕಾರ ಅವಲೋಕಿಸುತ್ತಿರುವನು, ಅದನ್ನೀಗ ನಿರೂಪಕರಾದ “ನೀವು” ನೋಡುತ್ತಿದ್ದೀರಿ.
ಇದು ಭಾಗಶಃ ಆತ್ಮಕಥಾತ್ಮಕ ಕಾದಂಬರಿ. ಜೀವಿತದ ನಾಲ್ವತ್ತಾರನೇ ವಯಸ್ಸಿಗೇ ತೀರಿಹೋದ ಪೆರೆಕ್ ತಮ್ಮ ಇಪ್ಪತ್ತರ ದಶಕದಲ್ಲಿ ತೀವ್ರ ಖಿನ್ನತೆಯಿಂದ ಬಳಲಿದ್ದರಂತೆ. ಖಿನ್ನತೆ ಮತ್ತು ಔದಾಸೀನ್ಯದ ವೈಯಕ್ತಿಕ ಅನುಭವಗಳನ್ನು ಅವರು ಈ ಕಾದಂಬರಿಯಲ್ಲಿ ಕಲಾಕೃತಿಯ ಎತ್ತರಕ್ಕೆ ಏರಿಸಿದ್ದಾರ. ಕಾದಂಬರಿ ನಿರೂಪಣೆಯಲ್ಲಿ ಕಣ್ಣಿಗೆ ಕಟ್ಟುವ ದೃಶ್ಯ ವಿವರಗಳಿವೆ — ಸಿನೆಮಾದ ಪ್ರೊಜೆಕ್ಟರ್ ರೀಲಿನ ಸುರುಳಿ ಬಿಡಿಸಿ ಪರದೆಯ ಮೇಲೆ ಒಂದಾದ ಮೇಲೊಂದು ಚಿತ್ರವನ್ನು ತೋರಿಸುವಂತೆ.3
ಎರಡೂ ಕಾದಂಬರಿಗಳಲ್ಲಿ ಪೆರೆಕ್ ಯಾವುದೇ ತೀರ್ಮಾನಗಳಿಗೆ ಬರುವುದಿಲ್ಲ. ತನ್ನ ಕತೆಗಳ ಪಾತ್ರಗಳ ಬದುಕನ್ನು ಉದ್ಧರಿಸುವುದು ಅಥವಾ ಅವರನ್ನು ಇನ್ನೂ ಕೆಳಕ್ಕೆ ತಳ್ಳುವುದರ ಜವಾಬ್ದಾರಿ ತನಗಿಂತ ಓದುಗರಾದ “ನಿಮ್ಮ” ಮೇಲೆ ಹೆಚ್ಚಿದ್ದಂತೆ ಅನ್ನಿಸುತ್ತದೆ. “ಮಲಗಿರುವ ಮನುಷ್ಯ”ದ ಕೊನೆಯಲ್ಲಿ ಮರುಎಚ್ಚರದ, ವಾಸ್ತವಕ್ಕೆ ಹಿಂದಿರುಗುವ ಸುಳಿವುಗಳಿವೆ. ಆದರೆ ಆ ಕಾದಂಬರಿಯಲ್ಲಿ ಮುಗಿತಾಯ ತಲುಪದ ಭಾವನೆ “ವಸ್ತುಗಳು” ಕಾದಂಬರಿಯಲ್ಲಿಗಿಂತ ತೀಕ್ಷ್ಣವಾಗಿದೆ.
ಮೋಜಿನ ಸಂಗತಿಯೆಂದರೆ ಈ ಸಣ್ಣಕತೆ ಪ್ರಕಟವಾದದ್ದು 1973ರಲ್ಲಿ ಪ್ಲೇಬಾಯ್ (Playboy) ಪತ್ರಿಕೆಯ ಇಟ್ಯಾಲಿಯನ್ ಆವೃತ್ತಿಯಲ್ಲಿ! ಈ ಕತೆಯಲ್ಲಿ ಒಳ್ಳೆಯ crime/ಪತ್ತೇದಾರಿ ಸಿನೆಮಾಗಳಿಗಿಂತ ಹೆಚ್ಚಿನ ಸಂಕೀರ್ಣತೆ ಮತ್ತು ನಿಗೂಢತೆಯಿದೆ. ನೀವು ಹಳೆಯ Film Noir ಸಿನೆಮಾಗಳ ಆಸಕ್ತರಾಗಿದ್ದರೆ Double Indemnityಯಂಥ ಸಿನೆಮಾಗಳನ್ನು ನೋಡಿರಬಹುದು. ಇತ್ತೀಚೆಗಿನ The Minority Report ಎಂಬ ಚಿತ್ರ ಅಥವಾ The Black Mirror ಎಂಬ series ನೋಡಿರಬಹುದು. ಕಾಲ್ವೀನೋನ ಕತೆ ಇವೆಲ್ಲಕ್ಕಿಂತ ರಸವತ್ತಾಗಿಯೂ ಹೆಚ್ಚು futuristic ಆಗಿಯೂ ಇದೆ. ಅದನ್ನು ನೀವು ಈ ಕೊಂಡಿಯಲ್ಲಿ ಓದಬಹುದು.
ಇವು ಬಣ್ಣಬಣ್ಣದ ಇಸ್ಪೀಟಿನ ಎಲೆಗಳಂಥವು. ಹಲವು ಬಗೆಯ ಆಟಗಳನ್ನು ಆಡುತ್ತಾರೆ. ಹಾಗೆಯೇ, ಗಿಣಿಶಾಸ್ತ್ರದಂಥ ಭವಿಷ್ಯ ಹೇಳಲೂ ಇವುಗಳ ಬಳಕೆಯಾಗುತ್ತದೆ.
ಆದರೆ ನನ್ನ ಪ್ರಶ್ನೆ ಏನೆಂದರೆ; ಕತೆಯನ್ನು ಹೇಳಲೇ ಬೇಕು ಎನ್ನುವ ದರ್ದು ಮನುಷ್ಯನಿಗೆ ಏಕಿದೆ? ಇಲ್ಲಿರುವ ಕತೆಯನ್ನೇ ನೋಡುವುದಾದರೆ(ಉದಾಹರಣೆಗೆ) ಮಾತೇ ಮರೆತ ಮನುಷ್ಯ ಯಾರಾದರೂ ಸಿಕ್ಕಾಗ ಮಾತಾಡಲು ಏಕೆ ಹಾತೊರೆಯುತ್ತಾನೆ? ಅಂದರೆ ಅವನು ಶಬ್ದಗಳ ಆಚೆಗೆ(?) ಹೋಗಲಾರನೇ? ಆಚೆಗೆ ಏನೋ ಇರಬಹುದಲ್ಲವೇ? ಆ ಇರುವಿಕೆಯನ್ನು ಸುಮ್ಮನೆ ಅನುಭವಿಸಲಾರದೆ ಆ ಅನುಭವವನ್ನು ಶಬ್ದಕ್ಕೇಕೆ ಅಂಟಿಸುತ್ತಾನೆ? ಮಾತಿಗೇಕೆ ಇಷ್ಟು ಜೋತು ಬೀಳುತ್ತಾನೆ? ತನ್ನನ್ನು ದಾಟಿಸಿಕೊಳ್ಳಲೆಂದೇ? ಅಥವಾ ಹಗುರಾಗಲೆಂದೇ? ಹಗುರಾಗುವುದಾದರೆ ಮತ್ತೆ ಶಬ್ದದ ಹಂಗಿಗೇಕೆ ಬೀಳುವುದು?.......
-- ಸಂಪತ್ ಕುಮಾರ್