ತಮ್ಮ ವೈಚಾರಿಕ ಬರಹಗಳಿಂದ ಹೆಸರುವಾಸಿಯಾಗಿರುವ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಹೊಸ ಪುಸ್ತಕ ಮಮಡೇಟಾ ಮುದ್ರಣಗೊಂಡು ಓದುಗರ ಕೈಸೇರಲು ಸಿದ್ಧವಾಗಿದೆ. ಭಾರತ ಸರ್ಕಾರ ಜಾರಿಗೆ ತಂದಿರುವ ಡಿಆರ್ಡಿಪಿ (DPDP) ಕಾಯಿದೆಯ ಹಿನ್ನೆಲೆ, ಮುನ್ನೆಲೆಗಳ ವಿಶ್ಲೇಷಣೆ; ಆ ಕಾಯಿದೆ ಹಾಗೂ ಅದರ ನಿಯಮಗಳ ಕನ್ನಡ ಅನುವಾದ ಮಾತ್ರವಲ್ಲದೆಯೇ ಅದರ ಪಾಲನೆಗೆ “ಡೇಟಾ ಮೂಲ” ವ್ಯಕ್ತಿಗಳಾಗಿ ನಾಗರಿಕರು ಏನು ಮಾಡಬೇಕು, “ಡೇಟಾ ದಾಸ್ತಾನುಗಾರ”ರಾಗಿ ವ್ಯವಹಾರಸ್ಥರು ಏನು ಮಾಡಬೇಕೆಂಬ ಬಗ್ಗೆ ವಿವರಗಳು ಈ ಪುಸ್ತಕದಲ್ಲಿವೆ.
ಬುಕ್ ಬ್ರಹ್ಮ ಈ ಪುಸ್ತಕವನ್ನು ಪ್ರಕಟಿಸಿದ್ದು, 18 ಅಧ್ಯಾಯಗಳ ಈ ಪುಸ್ತಕಕ್ಕೆ ಪತ್ರಕರ್ತ ಎನ್. ಎ. ಎಂ ಇಸ್ಮಾಯಿಲ್ ಮುನ್ನುಡಿ ಬರೆದಿದ್ದಾರೆ; ಕುಮಾರ್ ಎಸ್. ಬೆನ್ನುಡಿ ಬರೆದಿದ್ದಾರೆ. 224 ಪುಟಗಳ ಈ ಪುಸ್ತಕದ ಬೆಲೆ 300 ರೂ.ಗಳು. ಆಸಕ್ತರು ನವಕರ್ನಾಟಕದ ಆನ್ಲೈನ್ ಮಳಿಗೆಯನ್ನು ಸಂಪರ್ಕಿಸಬಹುದು.
ಪುಸ್ತಕದ ಮೊದಲನೆಯ ಅಧ್ಯಾಯ ನಿಮ್ಮ ಓದಿಗೆ.
13 ಮೇ 2027
— ಈ ದಿನಾಂಕವನ್ನು ಗುರುತುಮಾಡಿಟ್ಟುಕೊಳ್ಳಿ. ಎಲ್ಲವೂ ಲೆಕ್ಕಾಚಾರಗಳ ಪ್ರಕಾರವೇ ನಡೆದರೆ, ಆ ದಿನದಂದು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣೆ ಕಾಯಿದೆಯು (DPDP Act) ದೇಶದಲ್ಲಿ ಪೂರ್ಣಪ್ರಮಾಣದಲ್ಲಿ ಜಾರಿಗೆ ಬರಲಿದೆ.
13 ನವೆಂಬರ್ 2025ರಂದು ಈ ಕಾಯಿದೆಯ ನಿಯಮಗಳನ್ನು ಭಾರತ ಸರ್ಕಾರ ಪ್ರಕಟಿಸಿದ್ದು, ಅದನ್ನು ಮೂರು ಹಂತಗಳಲ್ಲಿ ಅನುಷ್ಠಾನ ಮಾಡಲು ಉದ್ದೇಶಿಸಿದೆ. 13 ನವೆಂಬರ್ 2025ರಂದೇ ಮೊದಲ ಹಂತ ಆರಂಭಗೊಂಡಿದೆ. ಎರಡನೇ ಹಂತವು 12 ನವೆಂಬರ್ 2026ಕ್ಕೆ ಆರಂಭಗೊಳ್ಳಲಿದೆ ಮತ್ತು ಮೂರನೇ ಹಂತದ ಹಾಗೂ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ 13 ಮೇ 2027ರ ದಿನಾಂಕ ನಿಗದಿಯಾಗಿದೆ. ಆ ದಿನದ ಬಳಿಕ ಡೇಟಾ ಕಾಯಿದೆಯ ಉಲ್ಲಂಘನೆ ದಂಡನಾರ್ಹ ಅಪರಾಧ ಆಗಲಿದೆ.
ಇಂದು ಪ್ರತೀ ಮನೆ, ಪ್ರತೀ ವ್ಯವಹಾರ, ಪ್ರತೀ ವ್ಯಕ್ತಿ ಅಸಂಖ್ಯ ಡೇಟಾಗಳನ್ನು ಹೊಂದಿರುತ್ತದೆ/ತ್ತಾರೆ. ಈ ಎಲ್ಲ ಡೇಟಾಗಳೂ 24x7x365 ಜೀವಂತವಾಗಿ ನಮ್ಮಂತೆಯೇ ಬದುಕುತ್ತಿವೆ. DPDP ಕಾಯಿದೆ ಜಾರಿಗೆ ಬಂದ ದಿನಾಂಕದಿಂದ, ನಮ್ಮ ಎಲ್ಲ ಡೇಟಾಗಳ ಕಾನೂನುಬದ್ಧ ಜವಾಬ್ದಾರಿ ನಮ್ಮದಾಗಿರುತ್ತದೆ.
ಡೇಟಾ ಕುರಿತ ಅಸಡ್ಡೆ ನಮಗೆ ಅಭ್ಯಾಸವಾಗಿಬಿಟ್ಟಿದೆ. “ಏ… ಅದೆಲ್ಲಾ ತಗೊಂಡು ಏನು ಮಾಡ್ತಾರೆ? ಅದನ್ನೆಲ್ಲ ನಾವು ಈಗಾಗಲೇ ಊರು ತುಂಬಾ ಕೊಟ್ಟಾಗಿದೆ. ಈಗ ಅದನ್ನೆಲ್ಲ ನಾವು ನಿಯಂತ್ರಣ ಮಾಡೋದು ಹೇಗೆ? ಅಷ್ಟೆಲ್ಲಾ ಜಾಗ್ರತೆ ಅಗತ್ಯ ಇದೆಯಾ?” ಎಂಬೆಲ್ಲ ಪ್ರಶ್ನೆಗಳು ಹಾಗೂ ನಿರ್ಲಕ್ಷ್ಯದ ದೇಶಾವರಿ ಮಾತುಗಳು ಇಲ್ಲಿಯ ತನಕ ಮೂಡುತ್ತಿದ್ದವು. ನಮ್ಮ ಫೋನಿಗೆ, ಮನೆಗೆ ಎಲ್ಲಿಂದ ಹೊರಟಿತೆಂದು ಗೊತ್ತಾಗದಂತೆ ತಲುಪುವ ಜಾಹೀರಾತುಗಳು, ಫೋನ್ ಮಾರ್ಕೆಟಿಂಗ್ ಕರೆಗಳು, ಸೇವಾ ಫೀಡ್ಬ್ಯಾಕ್ ಕರೆಗಳು, ವಂಚನೆಯ ಉದ್ದೇಶದ ಸಂಪರ್ಕಗಳು… ಎಲ್ಲವನ್ನೂ, ಇಲ್ಲಿಯ ತನಕ ಕಿರಿಕಿರಿ ಆದರೂ ಸಹಿಸಿಕೊಂಡು ಬಂದವರು ನಾವು. ಈಗ DPDP ಕಾಯಿದೆಯ ಅಡಿಯಲ್ಲಿ ಡೇಟಾಮೂಲ ವ್ಯಕ್ತಿಗಳಾಗಿ, ನಮ್ಮ ಡೇಟಾಗಳನ್ನು ರಕ್ಷಿಸಿಕೊಳ್ಳುವ ಮತ್ತು ನಿರ್ವಹಿಸುವ ಹೊಣೆ ಕಾನೂನುಬದ್ಧವಾಗಿ ನಮ್ಮ ಕೈಗೆ ಬಂದಿದೆ.
ಅದೇ ರೀತಿ ನಾವು ದಿನನಿತ್ಯ ವ್ಯವಹರಿಸುವ ಪ್ರತಿಯೊಂದೂ ವ್ಯವಹಾರ ಸಂಸ್ಥೆಗಳು - ಅದು ಸಣ್ಣ ಕಿರಾಣಿ ಅಂಗಡಿ/ಗೂಡಂಗಡಿ ಇರಬಹುದು, ದೊಡ್ಡ ಉದ್ಯಮಗಳಿರಬಹುದು ಅಥವಾ ಬ್ಯಾಂಕು ಇತ್ಯಾದಿ ಸಂಸ್ಥೆಗಳು, ಸಾಮಾಜಿಕ ಮಾದ್ಯಮ ಸಂಸ್ಥೆಗಳು ಇರಬಹುದು - ಅವೆಲ್ಲ ತಮ್ಮಲ್ಲಿ ಹೊಂದಿರುವ ನಮ್ಮ (ಅಂದರೆ ಡೇಟಾಮೂಲ ವ್ಯಕ್ತಿಗಳ) ಡೇಟಾಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವ ಜವಾಬ್ದಾರಿಯ ಹೊಣೆ ಹೊಂದಿವೆ. ಅದು ಈಗ ಡೇಟಾ ಉಸ್ತುವಾರಿಗಳಾಗಿ ಅವರ ಕಾನೂನುಬದ್ಧ ಜವಾಬ್ದಾರಿ.
ದಿನಗಳು ವೇಗವಾಗಿ ಸಂದು ಹೋಗುತ್ತಿರುವ ಹಿನ್ನೆಲೆಯಲ್ಲಿ, ಈ ಎಲ್ಲ ವಿಚಾರಗಳ ಬಗ್ಗೆ ಅಗತ್ಯ ಮಾಹಿತಿ ಹೊಂದಿರುವುದು ಮತ್ತು 2027ರ ಮೇ13ಕ್ಕೆ ಮುನ್ನ ಕಾನೂನು ಪಾಲನೆಗೆ ಸಜ್ಜಾಗುವುದು, ನಾಗರಿಕರಾಗಿ ನಮ್ಮೆಲ್ಲರ ಜವಾಬ್ದಾರಿ. ಹಾಗಾಗಿ, ಇದೀಗ ಯುದ್ಧಕಾಲದ ಶಸ್ತ್ರಾಭ್ಯಾಸ. ಯುದ್ಧದ ಮುಹೂರ್ತ— ದಿನಾಂಕ ನಿಗದಿ ಆಗಿ ಆಗಿದೆ. ಅಷ್ಟರ ಒಳಗೆ ತಯಾರಿ ಮಾಡಿಕೊಂಡು ಸನ್ನದ್ಧರಾಗಬೇಕಾಗಿರುವುದು ಅನಿವಾರ್ಯ. ಆ ಹಿನ್ನೆಲೆಯಲ್ಲಿ ಒಂದಿಷ್ಟು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳಲು ಈ ಲೇಖನಗಳನ್ನು ಸಿದ್ಧಪಡಿಸಲಾಗಿದೆ.
ಮೂರು ದಿಕ್ಕು — ಮೂರು ಹಾದಿ
DPDP ಕಾಯಿದೆ ಪಾಲನೆ ಮೂರು ಪ್ರತ್ಯೇಕ ಹಾದಿಗಳಲ್ಲಿ ನಡೆಯಬೇಕಾಗುತ್ತದೆ.
ಒಂದು: ಡೇಟಾಮೂಲ ವ್ಯಕ್ತಿಗಳಾಗಿ ನಮ್ಮ ಡೇಟಾಗಳ ಕುರಿತು ನಮ್ಮ ನಿಯಂತ್ರಣವನ್ನು ನಾವು ವ್ಯವಸ್ಥಿತಗೊಳಿಸಿಕೊಳ್ಳುವುದು.
ಎರಡು: ಡೇಟಾ ಉಸ್ತುವಾರಿಗಳಾಗಿ ನಾವು ನಡೆಸುವ ಚಟುವಟಿಕೆ, ವ್ಯವಹಾರಗಳ ವೇಳೆ ನಮ್ಮಲ್ಲಿ ಸಂಗ್ರಹ ಇರುವ ಡೇಟಾಗಳನ್ನು ನಿರ್ವಹಿಸುವ, ಸಂಸ್ಕರಿಸುವ ವೇಳೆ ಜವಾಬ್ದಾರಿಯುತವಾಗಿ, ಕಾನೂನುಬದ್ಧವಾಗಿ ವ್ಯವಹರಿಸುವುದು, ಮತ್ತು —
ಮೂರು: ನಮ್ಮನ್ನು ಆಳುವ ಸರ್ಕಾರಗಳು ತಮ್ಮನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿರಿಸಿಕೊಂಡಿರುವುದರಿಂದ ಸರ್ಕಾರಗಳ ಜೊತೆ ನಮ್ಮ ಡೇಟಾ ಹಂಚಿಕೊಳ್ಳುವಾಗ ನಾವು ಹೊಂದಿರಬೇಕಾದ ಎಚ್ಚರಿಕೆಯ ಕ್ರಮಗಳು.
ಈ ಮೂರೂ ಅಂಶಗಳು ಕಾಯಿದೆಯನ್ನು ಮೂರು ದಿಕ್ಕುಗಳಿಂದ ಪ್ರತ್ಯೇಕವಾದ ಮೂರು ಹಾದಿಗಳಲ್ಲಿ ತಲುಪಬೇಕಾದುದು ಅನಿವಾರ್ಯ. ಆ ದಿಕ್ಕುಗಳನ್ನು ಮತ್ತು ಹಾದಿಗಳನ್ನು ಸ್ಥೂಲವಾಗಿ ಪರಿಚಯಿಸುವುದು ಇಲ್ಲಿನ ಬರೆಹಗಳ ಮುಖ್ಯ ಉದ್ದೇಶ. ಇಲ್ಲಿ ಡೇಟಾದ ಚರಿತ್ರೆ, ಹಿನ್ನೆಲೆ, ಸ್ವರೂಪಗಳು, ಡೇಟಾ ರಕ್ಷಣೆಯ ವಿಧಾನಗಳು ಇತ್ಯಾದಿಗಳನ್ನೆಲ್ಲ ವಿವರವಾಗಿ ನೀಡಲಾಗಿದೆ. ಜೊತೆಗೆ DPDP ಕಾಯಿದೆಯ ಮೂಲಪಾಠ ಹಾಗೂ ಕಾಯಿದೆಯ ಅಡಿ ಸರ್ಕಾರ ಪ್ರಕಟಿಸಿರುವ ನಿಯಮಗಳ ಮೂಲಪಾಠವನ್ನು ಎಲ್ಲರಿಗೂ ಅರ್ಥ ಆಗಬಲ್ಲಂತೆ, ಸಾಧ್ಯವಾದಷ್ಟು ಮಟ್ಟಿಗೆ ಸರಳವಾಗಿ, ಕಾನೂನಿನ ವಾಕ್ಯರಚನೆಯ ಜಿಡುಕುಗಳು ಅತ್ಯಲ್ಪ ಇರುವಂತೆ ಎಚ್ಚರವಹಿಸಿ ಅನುವಾದಿಸಿ ನೀಡಲಾಗಿದೆ. ಸುಮ್ಮನೇ ವಿವರಗಳನ್ನು ನೀಡುವ ಬದಲು, ನೇರವಾಗಿ ಕಾಯಿದೆ ಓದಿ ಅರ್ಥೈಸಿಕೊಂಡರೆ ಕೆಲಸ ಸುಲಭ ಎಂಬುದು ಈ ನಿರ್ಧಾರದ ಹಿಂದಿನ ತರ್ಕ. ಈ ಕಾಯಿದೆಯನ್ನು ಓದುವುದು ಅಗತ್ಯವೇ? ಅದರಿಂದ ಏನು ಪ್ರಯೋಜನ ನನಗೇನು ಲಾಭ? ಎಂಬ ಪ್ರಶ್ನೆಗಳು ಮೂಡಬಹುದು. ಅದಕ್ಕೆ ಸರಳವಾಗಿ ಉತ್ತರಿಸಬೇಕೆಂದರೆ, 2027ರ ಮೇ 13ರ ಬಳಿಕ, ನೀವು ಡೇಟಾ ಹೊಂದಿರುವವರಾಗಿದ್ದರೆ, ಅದರಲ್ಲೂ ವಿಶೇಷವಾಗಿ ನೀವು ಡೇಟಾಗಳಿರುವ ಯಾವುದೇ ವ್ಯವಹಾರ ನಡೆಸುತ್ತಿದ್ದರೆ, ಆ ಡೇಟಾಗಳ ನಿರ್ವಹಣೆ, ನಿಯಂತ್ರಣಗಳಿಗೆ ಕಾನೂನು ಪಾಲಿಸುವುದು ಕಡ್ಡಾಯ.

ಉದಾಹರಣೆಗೆ, ಒಂದು ಪುಟ್ಟ ಕಿರಾಣಿ ಅಂಗಡಿ ಹೊಂದಿರುವ ವ್ಯಕ್ತಿ ಎಂದಿಟ್ಟುಕೊಳ್ಳಿ. ಕಿರಾಣಿ ಅಂಗಡಿಯವರು ಕಂಪ್ಯೂಟರಿನಲ್ಲಿ ಬಿಲ್ಲಿಂಗ್ ಮಾಡುವಾಗ, ಸಹಜವಾಗಿಯೇ ಗ್ರಾಹಕರ ಗುರುತು (ಫೋನ್, ಹೆಸರು, ವಿಳಾಸ), ಆ ಗ್ರಾಹಕರು ಪ್ರತೀ ತಿಂಗಳು ಖರೀದಿಸುವ ಕಿರಾಣಿ ವಸ್ತುಗಳ ವಿವರ, ಆ ಗ್ರಾಹಕರು ವೆಚ್ಚ ಮಾಡಿದ ಹಣ, ಆ ಗ್ರಾಹಕರು ಅಂಗಡಿಗೆ ಬರುವ ದಿನಾಂಕ - ದಿನದ ಸಮಯ… ಇತ್ಯಾದಿ ಡೇಟಾಗಳೆಲ್ಲ ಅಂಗಡಿಯವರಿಗೆ ಗೊತ್ತಿಲ್ಲದೇ ಸಂಗ್ರಹ ಆಗಿರುತ್ತವೆ. ಈ ಡೇಟಾಗಳನ್ನು ತನ್ನ GST- ಆದಾಯ ತೆರಿಗೆ ಪಾವತಿ, ಪರವಾನಗಿಗೆ ಕಂದಾಯ ಪಾವತಿ ಮತ್ತು ಸರ್ಕಾರದ ಬೇರೆ ನಿಯಮಗಳ ಪಾಲನೆಗಾಗಿ ಒಂದು ಹಂತಕ್ಕೆ ಉಳಿಸಿಕೊಳ್ಳುವುದು ಕಿರಾಣಿ ಅಂಗಡಿಯವರ ಕಾನೂನುಬದ್ಧ ಜವಾಬ್ದಾರಿ. ಆದರೆ ಆ ಡೇಟಾಗಳನ್ನು ಗ್ರಾಹಕರ (ಡೇಟಾಮೂಲ ವ್ಯಕ್ತಿಯ) ಅನುಮತಿಯ ಮೇರೆಗೆ ಸಂಗ್ರಹಿಸಲಾಗಿದೆ, ಅದನ್ನು ಯಾವುದಕ್ಕೆ ಬಳಸಲಾಗುತ್ತದೆಂದು ಅವರಿಗೆ ಮಾಹಿತಿ ನೀಡಲಾಗಿದೆ ಎಂಬುದನ್ನೂ ಖಚಿತಪಡಿಸಿಕೊಳ್ಳುವುದು ಹಾಗೂ ಅದಕ್ಕೆ ದಾಖಲೆಗಳನ್ನು ಇಟ್ಟುಕೊಳ್ಳುವುದು, ಈ ಕಾಯಿದೆಯ ಪ್ರಕಾರ ಈಗ ಕಿರಾಣಿ ಅಂಗಡಿ ಮಾಲಕರ ಕಾನೂನುಬದ್ಧ ಜವಾಬ್ದಾರಿ. ಅದೇ ವೇಳೆಗೆ, ಗ್ರಾಹಕರಿಗೆ, ತನ್ನ ಕುರಿತಾದ ಮಾಹಿತಿ ಅಲ್ಲಿ ಇರುವುದು ಬೇಡ ಎನ್ನಿಸಿದರೆ, ಆ ಬಗ್ಗೆ ಅವರು ಅಧಿಕೃತವಾಗಿ ತಿಳಿಸಿದಾಗ, ಅದನ್ನು ಅಳಿಸಿ ಹಾಕುವುದು ಅಂಗಡಿಯ ಮಾಲಕರ ಹೊಣೆ.
ಎಲ್ಲವೂ ಸುಸೂತ್ರವಾಗಿ ಸಾಗುತ್ತಿದ್ದಾಗ, ಈ ಸಣ್ಣಪುಟ್ಟ ಅಂಗಡಿಗಳ ವ್ಯವಹಾರಗಳು ಯಾರದ್ದೂ ಗಮನ ಸೆಳೆಯವು. ಆದರೆ ಆಕಸ್ಮಾತ್ ಒಂದು ದಿನ, ಆ ಕಿರಾಣಿ ಅಂಗಡಿಯವರ ಕಂಪ್ಯೂಟರ್ ಕೆಟ್ಟಿತೆಂದು, ಅದನ್ನು ಗುಜರಿಗೆ ಹಾಕಿ, ಅವರು ಹೊಸ ಕಂಪ್ಯೂಟರ್ ಖರೀದಿಸಿದರು ಮತ್ತು ಗುಜರಿಗೆ ಹಾಕಿದ ಹಳೆಯ ಕಂಪ್ಯೂಟರಿನ ಹಾರ್ಡ್ ಡಿಸ್ಕ್ ಯಾರೋ ದುಷ್ಕರ್ಮಿಗಳ ಕೈಗೆ ಸಿಕ್ಕಿತೆಂದು ಇಟ್ಟುಕೊಳ್ಳಿ. ಅವರು ಆ ಕಂಪ್ಯೂಟರಿನಲ್ಲಿರುವ ಡೇಟಾಗಳನ್ನು ಬಳಸಿಕೊಂಡು ಮಾಡಿದ ಕಿತಾಪತಿಗಳು, ಒಂದಿಷ್ಟು ಗ್ರಾಹಕರ ಆರ್ಥಿಕ ನಷ್ಟಕ್ಕೆ, ಮಾನಸಿಕ ಕಿರಿಕಿರಿಗೆ ಕಾರಣವಾದವು ಎಂದಿಟ್ಟುಕೊಳ್ಳಿ. ಅವರು ಈ ಕುರಿತು ನೀಡಿದ ದೂರು ಅಂತಿಮವಾಗಿ ಡೇಟಾ ನಿರ್ವಹಣೆ ಮಂಡಳಿಗೆ ತಲುಪಿದರೆ, ಆಗ ತಪಾಸಣೆಗಳ – ತನಿಖೆಯ ವೇಳೆ, ಡೇಟಾ ಸೋರಿಕೆ ಆಗಿರುವುದು ಸದ್ರಿ ಕಿರಾಣಿ ಅಂಗಡಿಯಿಂದ ಎಂಬುದನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಆಗ ಕಿರಾಣಿ ಅಂಗಡಿಯವರ ಕಾನೂನು ಜವಾಬ್ದಾರಿ ಪಾಲನೆಯಲ್ಲಿ ಲೋಪ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ತನ್ನ ಬಳಿ ಇರುವ ತನ್ನ ಗ್ರಾಹಕರ (ಡೇಟಾಮೂಲ ವ್ಯಕ್ತಿಗಳ) ಡೇಟಾಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವುದು ಕಿರಾಣಿ ಅಂಗಡಿಯವರ ಕಾನೂನುಬದ್ಧ ಹೊಣೆಗಾರಿಕೆ. ಅವರ ಲೋಪ ಸಾಬೀತಾದರೆ, ಇಂತಹ ಪ್ರಕರಣಗಳಲ್ಲಿ ಅವರಿಗೆ ಆರ್ಥಿಕ ದಂಡನೆ ವಿಧಿಸುವ ಹಕ್ಕನ್ನು ಡೇಟಾ ನಿರ್ವಹಣೆ ಮಂಡಳಿಗೆ ಈ DPDP ಕಾಯಿದೆ ನೀಡಿದೆ.
ಈ ಕಾಯಿದೆ ಬೀರಬಹುದಾದ ಪರಿಣಾಮಗಳ ಸಾಧ್ಯತೆಯನ್ನು ವಿವರಿಸುವ ಸಣ್ಣ ಉದಾಹರಣೆ ಇದು.
ಪ್ರತಿಯೊಂದು ವ್ಯವಹಾರಕ್ಕೂ ಕೂಡ, ಆ ವ್ಯವಹಾರದ ಚಟುವಟಿಕೆಗಳ ಸ್ವರೂಪವನ್ನಾಧರಿಸಿ, ಇಂತಹ ಅಪಾಯಗಳು ಖಂಡಿತಾ ಇವೆ. ಈ ಹಿನ್ನೆಲೆಯಲ್ಲಿ, ಪ್ರತಿಯೊಬ್ಬ ವ್ಯವಹಾರಸ್ಥರೂ ಕೂಡ ತಮ್ಮ ಉಸ್ತುವಾರಿಯಲ್ಲಿರುವ ಡೇಟಾಗಳನ್ನು ಕಾಪಾಡಿಕೊಳ್ಳಲು ಅಗತ್ಯ, ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. DPDP ಕಾನೂನು ಈ ಡೇಟಾ ನಿರ್ವಹಣೆ ಹೇಗಿರಬೇಕೆಂಬ ಬಗ್ಗೆ ಚೌಕಟ್ಟನ್ನು ಒದಗಿಸಿದ್ದರೆ, DPDP ನಿಯಮಗಳು, ಆ ಕೆಲಸ ಹೇಗೆ ನಡೆಯಬೇಕೆಂದು ವಿವರವಾಗಿ ಹೇಳಿವೆ.
ಸರಳವಾಗಿ ಹೇಳಬೇಕೆಂದರೆ, DPDP ಕಾಯಿದೆ ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಾಗ, ಅದರ ಪಾಲನೆಯನ್ನು ಮಾಡುವಲ್ಲಿ ಡೇಟಾ ಉಸ್ತುವಾರಿಗಳ ಕಡೆಯಿಂದ ಹಲವಾರು ತಯಾರಿಗಳು ಅಗತ್ಯವಿರುತ್ತವೆ. ಆ ಎಲ್ಲ ತಯಾರಿಗಳಿಗೆ ವೆಚ್ಚ ಬರುತ್ತದೆ. ಒಂದು ಸಣ್ಣ ಕಿರಾಣಿ ಅಂಗಡಿ ಕೂಡ ತನ್ನ ಗ್ರಾಹಕರ ಅನುಮತಿ ಪಡೆದು, ಅವರ ಡೇಟಾ ಸಂಗ್ರಹಿಸುವುದು, ಅದಕ್ಕೆ ದಾಖಲೆಗಳನ್ನು ನಿರ್ವಹಿಸುವುದು ಮತ್ತು ಗ್ರಾಹಕರ ಬಯಕೆಯ ಮೇರೆಗೆ ಅವರ ಡೇಟಾಗಳನ್ನು ಅಳಿಸುವುದನ್ನು ಸುಸೂತ್ರವಾಗಿ ನಿರ್ವಹಿಸುವುದಕ್ಕೆ ಒಂದು ವ್ಯವಸ್ಥೆಯನ್ನು ಹೊಂದಬೇಕಾಗುತ್ತದೆ. ಆ ವ್ಯವಸ್ಥೆ ಅದರ ನಿಯಂತ್ರಕ ಅಧಿಕಾರಿಗಳಿಗೆ ಪಾರದರ್ಶಕವಾಗಿ ಇರಬೇಕಾಗುತ್ತದೆ. ಈ ನಿಯಮಗಳೆಲ್ಲ ಬಹುತೇಕ MSME ಉದ್ಯಮಗಳು, ಕೈಗಾರಿಕೆಗಳು, ವಾಣಿಜ್ಯ ವ್ಯವಹಾರಗಳು, ಲೇವಾದೇವಿಗಳು ಎಲ್ಲವಕ್ಕೂ ಅನ್ವಯ ಆಗಲಿವೆ.
ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಇಂತಹದೊಂದು ಪಾರದರ್ಶಕವಾದ, ಕಾನೂನುಬದ್ಧವಾದ ವ್ಯವಸ್ಥೆಯನ್ನು ರೂಪಿಸುವುದಕ್ಕೆ, “ಖರ್ಚು” ಬರುತ್ತದೆ. ಈ ಖರ್ಚು; ಒಂದು ಉದ್ಯಮದ, ವ್ಯವಹಾರದ ಸ್ವರೂಪ, ಗಾತ್ರಗಳನ್ನಾಧರಿಸಿ ನಿರ್ಧಾರ ಆಗುತ್ತದೆ. ಸ್ವತಃ ಈ ಲೇಖಕ ನಡೆಸುವ ವ್ಯವಹಾರೋದ್ಯಮ ಕಂಪನಿ ಸಂಪೂರ್ಣವಾಗಿ ಡೇಟಾ ಆಧರಿತವಾಗಿದ್ದು, ಅದರಲ್ಲೂ ಅಮೆರಿಕಾ, ಐರೋಪ್ಯ ಗ್ರಾಹಕರ ಜೊತೆ ವ್ಯವಹರಿಸುವ ಉದ್ಯಮ ಆಗಿದೆ. GDPR ಜಾರಿಗೆ ಬಂದ 2018ರಿಂದಲೇ ಸದ್ರಿ ಲೇಖಕರ ಉದ್ಯಮ ಅನಿವಾರ್ಯವಾಗಿ GDPR ಅನ್ವಯ ನಿಯಮಗಳನ್ನು ಪಾಲಿಸಬೇಕಿತ್ತು. ಆ ವ್ಯವಸ್ಥೆಯನ್ನು ಮಾಡಿಕೊಳ್ಳುವುದಕ್ಕಾಗಿ, ಕಂಪನಿಯಲ್ಲಿ ಲಭ್ಯವಿರುವ ಡೇಟಾಗಳನ್ನು ಶಿಸ್ತುಬದ್ಧವಾಗಿ ಸಂಗ್ರಹಿಸುವುದು, ನಿರ್ವಹಿಸುವುದು ಮತ್ತು ನಿಯಮಗಳನ್ನು ಪಾಲಿಸುವುದಕ್ಕೆ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಹಾಗೂ ಅದಕ್ಕೆ ದಾಖಲೆಗಳನ್ನು ಇರಿಸಿಕೊಳ್ಳುವುದು, ಕಾಲಕಾಲಕ್ಕೆ ಆಡಿಟ್ ನಡೆಸಿ, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಿತ್ತು. ಇದೆಲ್ಲ ಮೂಲಸೌಕರ್ಯಗಳನ್ನು ಸಿದ್ಧಪಡಿಸಲು ಆಗ ಅಂದಾಜು 4-5ಲಕ್ಷ ರೂ.ಗಳ ಖರ್ಚು ಬಂದಿತ್ತು. ಈಗ ದೇಶದ ಒಳಗೆ DPDP ಕಾನೂನು ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಅದಕ್ಕೆ ಅನ್ವಯನಗೊಳಿಸಿಕೊಳ್ಳುವುದು ಈ ಲೇಖಕರ ಸಂಸ್ಥೆಗೆ ಸ್ವಲ್ಪ ಅನುಕೂಲವೇ ಆಗುತ್ತಿದೆ.
ಈ ಖಾಸಗಿ ಸಂಗತಿಯ ವಿವರಣೆ ಯಾಕೆಂದರೆ, ಪ್ರತಿಯೊಂದೂ ವ್ಯವಹಾರ ಸಂಸ್ಥೆ, 2027ರ ಮೇ 13ಕ್ಕೆ ಮುನ್ನ DPDP ಕಾನೂನು ಪಾಲನೆಗಾಗಿ ತನ್ನ ಗಾತ್ರವನ್ನನುಸರಿಸಿಕೊಂಡು, ಡೇಟಾ ನಿರ್ವಹಣೆಗೆ ಕಾನೂನುಬದ್ಧ ವ್ಯವಸ್ಥೆ ಮಾಡಿಕೊಳ್ಳಲು ಒಂದಿಷ್ಟು ಖರ್ಚು ಮಾಡುವುದು ಅನಿವಾರ್ಯ ಆಗಲಿದೆ. ಪರಿಣತರು ಭಾರತದಲ್ಲಿ, ಉದ್ಯಮಗಳಿಗೆ ಒಟ್ಟು ಈ ವೆಚ್ಚ ಸುಮಾರು 20,000 ಕೋಟಿ ರೂ.ಗಳನ್ನು ದಾಟಬಹುದು ಎಂದು ಅಂದಾಜಿಸಿದ್ದಾರೆ. ದೊಡ್ಡ ಗಾತ್ರದ ಕಂಪನಿಗಳಿಗೆ 1ಕೋಟಿಯಿಂದ 18ಕೋಟಿ ರೂ.ಗಳ ತನಕದ ಸಿದ್ಧತಾ ವೆಚ್ಚ ಮತ್ತು ಆ ಬಳಿಕ ಪ್ರತೀ ವರ್ಷದ ನಿರ್ವಹಣಾ ವೆಚ್ಚ ಬರಬಹುದು ಎಂದು ಊಹಿಸಲಾಗುತ್ತಿದೆ.
ಒಪ್ಪಿಗೆ ನಿರ್ವಹಣೆ ಪ್ಲಾಟ್ಫಾರಂಗಳ ನಿರ್ಮಾಣ, ಡೇಟಾಗಳ ಪರಿಶೀಲನೆಯ ವ್ಯವಸ್ಥೆ, ಡೇಟಾ ಭದ್ರತೆಗೆ ಕ್ರಮಗಳು, ಡೇಟಾ ಮ್ಯಾಪಿಂಗ್ ಇತ್ಯಾದಿಗಳಿಗೆ ಮಾತ್ರವಲ್ಲದೇ, ಡೇಟಾ ನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗಳ ಸಂಬಳ... ಹೀಗೆ ಹಲವಾರು ಬಾಬ್ತುಗಳಲ್ಲಿ ವೆಚ್ಚ ಬರಲಿದೆ.
ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಇದೆ. ಬಹುಮಟ್ಟಿಗೆ ದೊಡ್ಡ ಮಧ್ಯಮ ಗಾತ್ರದ ಕಂಪನಿಗಳು, ಅದರಲ್ಲೂ ರಫ್ತು ಮುಖ್ಯ ವ್ಯವಹಾರ ಆಗಿರುವ ಕಂಪನಿಗಳು, ಟೆಕ್ ಕಂಪನಿಗಳು ಈಗಾಗಲೇ GDPR ಪಾಲನೆಗಾಗಿ ಈ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದರಿಂದ, ಅವರಿಗೆ ಪಾಲನಾ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದಕ್ಕೆ ಹೆಚ್ಚು ವೆಚ್ಚ ಬೀಳಲಾರದು. ಆದರೆ ಸಣ್ಣ MSMEಗಳು, ಪುಟ್ಟ ಅಂಗಡಿ – ವ್ಯವಹಾರಗಳು ಈ ಕಾನೂನು ಪಾಲನೆಗಾಗಿ ಆರ್ಥಿಕ ಹೊರೆಯನ್ನು ಹೊರುವುದು ಅನಿವಾರ್ಯ ಆಗಲಿದೆ. ಕಾನೂನು ಇಂತಿಷ್ಟು ಗಾತ್ರದ ವ್ಯವಹಾರದವರಿಗೆ ಮಾತ್ರ ಈ ನಿಯಮಗಳ ಪಾಲನೆ ಅನಿವಾರ್ಯ ಎಂದು ಹೇಳಿಲ್ಲ. ಹಾಗಾಗಿ, ಸಣ್ಣಪುಟ್ಟ ವ್ಯವಹಾರಗಳೂ ಕೂಡ ಈ ಕಾನೂನನ್ನು ಪಾಲಿಸಬೇಕಾಗುತ್ತದೆ ಮತ್ತು ತಮ್ಮಲ್ಲಿರುವ ಡೇಟಾಗಳ ಭದ್ರತೆಗೆ ಅಗತ್ಯಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
DPDP ಕಾಯಿದೆಯ ಅಗತ್ಯಗಳಿಗೆ ತಕ್ಕಂತೆ, ಸಂಸ್ಥೆಯ ಒಟ್ಟು ಕಾರ್ಯಾಚರಣೆಗಳಲ್ಲಿ ಬದಲಾವಣೆಗಳು ಅಗತ್ಯವಾಗುತ್ತವೆ. ಡೇಟಾ ಸಂಗ್ರಹಕ್ಕೆ ಸಂಬಂಧಿಸಿ ಇಲ್ಲಿಯತನಕ ಅನುಸರಿಸುತ್ತಿದ್ದ ವಿಧಾನಗಳ ಮರುಪರಿಶೀಲನೆ, ಹೊಸದಾಗಿ ಡೇಟಾ ಸಂಗ್ರಹಕ್ಕೆ ಕಾನೂನಿನ ಅನುಸಾರ ಡೇಟಾಮೂಲ ವ್ಯಕ್ತಿಯ ಅನುಮತಿ ಪಡೆಯುವಿಕೆ ಮತ್ತು ಆ ಬಗ್ಗೆ ದಾಖಲೆಗಳ ನಿರ್ವಹಣೆ, ಡೇಟಾ ಭದ್ರತೆಗೆ ಅಗತ್ಯಕ್ರಮಗಳು ಮತ್ತು ಹಳೆಯ ಭದ್ರತಾ ವಿಧಾನಗಳಲ್ಲಿ ಹೊಸ ಕಾನೂನಿಗೆ ಹೊಂದಿಕೆ ಆಗಬಲ್ಲ ಬದಲಾವಣೆ, ಆಂತರಿಕ ದೂರು ನಿರ್ವಹಣೆ ವ್ಯವಸ್ಥೆ ರೂಪಿಸುವುದು ಮತ್ತು ಡೇಟಾರಕ್ಷಣಾ ಅಧಿಕಾರಿಗಳ ನೇಮಕ, ಗಮನಾರ್ಹ ಡೇಟಾ ಉಸ್ತುವಾರಿ ಎಂದು ಗುರುತಿಸಲಾಗಿದ್ದರೆ, ಕಾಲಕಾಲಕ್ಕೆ ಡೇಟಾ ಸಂರಕ್ಷಣೆಯ ಪರಿಣಾಮಗಳ ವಿಶ್ಲೇಷಣೆ ಹಾಗೂ ಸ್ವತಂತ್ರ ಆಡಿಟ್ ಮುಂತಾದ ಹೆಚ್ಚುವರಿ ಹೊರೆಗಳನ್ನು ಹೊರುವುದು ಅಗತ್ಯವಿರುತ್ತದೆ.
ಇನ್ನು ಡೇಟಾ ಮೂಲ ವ್ಯಕ್ತಿಗಳು ತಮ್ಮ ಡೇಟಾಗಳನ್ನು ವ್ಯವಸ್ಥಿತಗೊಳಿಸಿಕೊಂಡು, ಯಾರಿಗೆ ಯಾವ ಡೇಟಾ ಕೊಟ್ಟಿದ್ದೇವೆ, ಯಾಕೆ ಕೊಟ್ಟಿದ್ದೇವೆ ಎಂಬ ಲೆಕ್ಕಾಚಾರ ಇರಿಸಿಕೊಳ್ಳಬೇಕಾಗುತ್ತದೆ. ವೈಯಕ್ತಿಕವಾಗಿ ನಮ್ಮ ನಮ್ಮ ಡೇಟಾಗಳ ನಿರ್ವಹಣೆಯ ಬಗ್ಗೆ ಅರಿವಾಗಲೀ, ಸುವ್ಯವಸ್ಥಿತವಾದ ಒಂದು ಚೌಕಟ್ಟಾಗಲೀ ಇಲ್ಲಿಯತನಕ ಡೇಟಾಮೂಲ ವ್ಯಕ್ತಿಗಳಲ್ಲಿ ಇರಲಿಲ್ಲ. ಈಗ ಇದು ಒಂದು ಕಾನೂನಿನ ಆವಶ್ಯಕತೆ ಆಗಿರುವುದರಿಂದ, ತಮ್ಮಲ್ಲಿರುವ ಡೇಟಾಗಳು ಯಾವುವು ಎಂದು ಗುರುತಿಸಿಕೊಂಡು, ಅವನ್ನು ಸುವ್ಯವಸ್ಥಿತವಾಗಿ ಇರಿಸಿಕೊಳ್ಳುವುದು, ಯಾರಿಗೆ ನಮ್ಮ ಡೇಟಾಗಳನ್ನು ಯಾವ ಉದ್ದೇಶಕ್ಕೆ ಕೊಟ್ಟಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು (ಎಂದರೆ, ದಾಖಲಿಸಿಕೊಳ್ಳುವುದು ಅಗತ್ಯಬೀಳಬಹುದು) ಹಾಗೂ ನಾವು ಕೊಟ್ಟಿರುವ ನಮ್ಮ ಡೇಟಾ ಬಳಕೆಯ ಹಕ್ಕನ್ನು ಆವಶ್ಯಕತೆ ಬಂದಾಗ ಹಿಂತೆಗೆದುಕೊಳ್ಳುವುದು; ದುರದೃಷ್ಟವಶಾತ್ ನಾವು ಕೊಟ್ಟಿರುವ ಡೇಟಾ ಸೋರಿಕೆ ಆಗಿ, ಅದರ ದುರ್ಬಳಕೆ ಸಂಭವಿಸಿದಾಗ ನಮ್ಮ ಪಾತ್ರ ಏನಿರಬೇಕು, ಎಂಬೆಲ್ಲ ಸಂಗತಿಗಳ ಕುರಿತು ಯೋಚನೆ ಆರಂಭಿಸಲು ಡೇಟಾಮೂಲ ವ್ಯಕ್ತಿಗಳಿಗೆ ಇದು ಸಕಾಲ.
ಮುಂದಿನ ಅಧ್ಯಾಯಗಳು ಈ ನಿಟ್ಟಿನಲ್ಲಿ ಎಲ್ಲ ವಿಧದ ಡೇಟಾಮೂಲ ವ್ಯಕ್ತಿಗಳಿಗೆ ಹಾಗೂ ಡೇಟಾ ಬಳಕೆದಾರರಿಗೆ ತಮ್ಮ ಹಕ್ಕು – ಜವಾಬ್ದಾರಿಗಳ ಕುರಿತು ವಿವರಿಸುತ್ತವೆ.

ಈ ನಡುವೆ ಇನ್ನೊಂದು ಕೌತುಕ ನಡೆದಿದೆ. ಅದು ಏನೆಂದರೆ ಭಾರತ ಸರ್ಕಾರ ತನ್ನನ್ನು ಮತ್ತು ಇತರ ರಾಜ್ಯ ಸರ್ಕಾರಗಳನ್ನು ಹಾಗೂ ತಾನು ಕಾಲಕಾಲಕ್ಕೆ ಗುರುತಿಸಬಹುದಾದ ಯಾವುದೇ ಸಂಸ್ಥೆಗಳನ್ನು ಈ DPDP ಕಾಯಿದೆಯ ವ್ಯಾಪ್ತಿಯಿಂದ ಹೊರಗಿರಿಸಿಕೊಂಡಿದೆ. ದೇಶದಲ್ಲಿಂದು ಅತೀ ಹೆಚ್ಚು ಡೇಟಾಗಳನ್ನು ಹೊಂದಿರುವ ಸಂಸ್ಥೆಗಳೆಂದರೆ ಸರ್ಕಾರಗಳು. ಪ್ರತಿಯೊಬ್ಬ ಪ್ರಜೆಯ ಹಳೆಯ ಮತ್ತು ಈಗ ಕ್ಷಣಕ್ಷಣದ ಡೇಟಾಗಳು, ಡಿಜಿಟಲ್ ಇಂಡಿಯಾದಲ್ಲಿ ಸರ್ಕಾರದ ಬಳಿ ಸಂಗ್ರಹ ಆಗುತ್ತಿರುತ್ತವೆ. ಹೊರನೋಟಕ್ಕೆ ಸರ್ಕಾರ ನಿಯಮಬದ್ಧವಾಗಿ ಕಾರ್ಯಾಚರಿಸುವ ವ್ಯವಸ್ಥೆಯಾಗಿದ್ದರೂ, ಅದಕ್ಕೆ ಬೇಲಿ ಹಾರುವ ಅವಕಾಶಗಳು ಉದ್ದಕ್ಕೂ ಸಾಕಷ್ಟಿವೆ. ಜೊತೆಗೆ ದೇಶದ ಭದ್ರತೆಯ ಹೆಸರಿನಲ್ಲೂ ಡೇಟಾಗಳಿಗೆ ಸರ್ಕಾರ ಮುಸುಕು ತೊಡಿಸಲು ಅವಕಾಶ ಇದೆ. ದೇಶದ ಹೊರಗೆ ಡೇಟಾ ಚಲನವಲನಗಳ ಮೇಲೆ ನಿಯಂತ್ರಣ ಹೇರುವ ಅವಕಾಶವನ್ನು ಸರ್ಕಾರ ಕಾದಿರಿಸಿಕೊಂಡಿದೆ. ಯಥೇಚ್ಛ ಡೇಟಾ ಸಂಪತ್ತು ಹೊಂದಿರುವ ಸರ್ಕಾರ ಅಥವಾ ಅದನ್ನು ನಡೆಸುವ ರಾಜಕೀಯ ಪಕ್ಷ ಇಲ್ಲವೇ ಕೆಲವು ವ್ಯಕ್ತಿಗಳು ಈ ಡೇಟಾಗಳನ್ನು ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಗಳನ್ನು ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ಸದ್ಯಕ್ಕೆ ಡೇಟಾ ಕಾಯಿದೆಯ ಕುರಿತು ಎಲ್ಲಕ್ಕಿಂತ ಎದುರು ಕಾಣಿಸುತ್ತಿರುವ ಅತಿದೊಡ್ಡ ಅಪಾಯ ಇದು. ಈವತ್ತಿನ ರಾಜಕೀಯ ವ್ಯವಸ್ಥೆಯ ಅನೈತಿಕ ವ್ಯವಹಾರಗಳು ಈ ಅಪಾಯಗಳ ಸ್ವರೂಪವನ್ನು ಇನ್ನಷ್ಟು ಗಂಭೀರಗೊಳಿಸಿವೆ. ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಎಲ್ಲ ಪ್ರಜೆಗಳೂ ಒಂದೇ ಎಂದಾದ ಮೇಲೆ, ಸರ್ಕಾರ ನಡೆಸುವವರು ಆ ಪ್ರಜೆಗಳಿಗಿಂತ ಭಿನ್ನ ಆಗುವುದು ಹೇಗೆ ಸಾಧ್ಯ, ಎಂಬ ಮೂಲಭೂತ ಪ್ರಶ್ನೆಗೆ ಉತ್ತರ ಕಂಡುಕೊಳ್ಳತೊಡಗಿದಾಗ ಈ ಜಿಡುಕು ಪರಿಹಾರ ಕಾಣಬಹುದೇನೋ.
ರಘುನಾಥ ಚ. ಹ.
ಹಿರಿಯ ಪತ್ರಕರ್ತ, ಲೇಖಕ ಹಾಗೂ ಅನುವಾದಕರಾದ ರಾಜಾರಾಂ ತಲ್ಲೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನವರು. ಉದಯವಾಣಿ ಆನ್ಲೈನ್ ಆವೃತ್ತಿಯ ಮೊದಲ ಸುದ್ದಿ ಸಂಪಾದಕರಾಗಿಯೂ ಸತತ 17 ವರ್ಷಗಳ ಕಾಲ ‘ಆರೋಗ್ಯವಾಣಿ’ ಪುರವಣಿಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ‘ತಲ್ಲೂರ್ಸ್ ಇನ್ಫೋವ್ಯಾಲಿಡೇಷನ್ಸ್’ ಎಂಬ ಏಷ್ಯನ್ ಭಾಷಾ ಸೇವಾ ಸಂಸ್ಥೆಯನ್ನು ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ. ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲಿದ್ದಾರೆ. ‘ಪಿಟ್ಕಾಯಣ’ (2025), ‘M ಡಾಕ್ಯುಮೆಂಟ್’, ‘ಕರಿಡಬ್ಬಿ’ (2022), ‘ದುಪ್ಪಟ್ಟು’ (2020), ‘ಏನಿದು ಪೌರತ್ವ ಕಾಯಿದೆ?’ (2019), ‘ತಲ್ಲೂರು ಎಲ್.ಎನ್.’ (2018), ಮತ್ತು ‘ನುಣ್ಣನ್ನ ಬೆಟ್ಟ’ (2017), ಇವರ ಪ್ರಕಟಿತ ಕೃತಿಗಳು ಹಾಗೂ ಅನುವಾದಗಳು. ತಲ್ಲೂರು ಅವರ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಸೇವೆಗಾಗಿ 2017ರಲ್ಲಿ ‘ಅಮ್ಮ ಪ್ರಶಸ್ತಿ’ ಹಾಗೂ 2020ರಲ್ಲಿ ‘ಶಿವರಾಮ ಕಾರಂತ ಪುರಸ್ಕಾರ’ (2019) ಒಲಿದುಬಂದಿವೆ.
ಇದನ್ನೂ ಓದಿ…
ಕತೆ ಕಟ್ಟುವ ಯಂತ್ರ ಮತ್ತು ಒಳಹೊರಗೆ ಸುಳಿವ ಪ್ರೇತಾತ್ಮ
ಬ್ರಿಟಿಷ್ ವೈಜ್ಞಾನಿಕ ಕಾದಂಬರಿಕಾರ ಆರ್ಥರ್ ಸಿ. ಕ್ಲಾರ್ಕ್ (Arthur C. Clarke) 1960ರ ದಶಕದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಪ್ರಚಲಿತಗೊಳಿಸಿದ ನಾಣ್ಣುಡಿಗಳಲ್ಲಿ ಒಂದರ ಸಾರ ಹೀಗಿದೆ: “Any sufficiently advanced technology is indistinguishable from magic.” — ಬಹಳಷ್ಟು ಮುಂದುವರಿದ ಯಾವುದೇ ತಂತ್ರಜ್ಞಾನವು ಇಂದ್ರಜಾಲಕ್ಕಿಂತ ಬೇರೆಯಲ್ಲವೆನ್ನಿಸುತ್ತದೆ. ಕೃತಕ ಬುದ್ಧಿಮತ್ತೆಯನ್ನು ಕುರಿತ ಇಂದಿನ ಚರ್ಚೆಗಳ…




