ಆಟಕೂಟಗಳ ಕೋಮುರಾಜಕಾರಣ ಹಾಗೂ ಕರಾವಳಿಯ ಸಾಮಾಜಿಕ ಚರಿತ್ರೆಯ ನಂಟು
ನಿತ್ಯಾನಂದ ಬಿ. ಶೆಟ್ಟಿಯವರ ‘ಅಳವು ಅರಿಯದ ಭಾಷೆ' ಕೃತಿಗೊಂದು ವಿಮರ್ಶಾತ್ಮಕ ಪ್ರತಿಕ್ರಿಯೆ
ಒಂದು ಜನಪ್ರಿಯ ಕಲಾಪ್ರಕಾರವು ತನ್ನ ಕಾಲದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪಲ್ಲಟಗಳಿಂದ ಹೊರತಾಗಿರುವುದಿಲ್ಲ ಎಂಬುದಕ್ಕೆ ಯಕ್ಷಗಾನ ಅತ್ಯುತ್ತಮ ಉದಾಹರಣೆ. ಕಲೆ, ಅಧಿಕಾರ, ಮತ್ತು ಮತೀಯ ರಾಜಕಾರಣದ ನಡುವಿನ ಸಂಕೀರ್ಣ ಸಂಬಂಧವನ್ನು ಶೋಧಿಸುವ ನಿತ್ಯಾನಂದ ಬಿ. ಶೆಟ್ಟಿಯವರ ಅಳವು ಅರಿಯದ ಭಾಷೆ: ಕಲೆ ಸಮಾಜ ಇತಿಹಾಸ ಕೃತಿಯ ಒಳನೋಟಗಳನ್ನು ಮೆಚ್ಚುತ್ತಲೇ ಆ ಅಧ್ಯಯನದ ಕೆಲವು ಪ್ರಮುಖ ಮಿತಿಗಳನ್ನು ತಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆಯಲ್ಲಿ ಚಲನಚಿತ್ರ ನಿರ್ದೇಶಕ, ಸಂಕಲನಕಾರ ಮತ್ತು ಬರಹಗಾರ ಪ್ರಶಾಂತ್ ಪಂಡಿತ್ ದಾಖಲಿಸಿದ್ದಾರೆ.
ಪ್ರಾಧ್ಯಾಪಕ ಮತ್ತು ಸಂಶೋಧಕರಾದ ನಿತ್ಯಾನಂದ ಬಿ. ಶೆಟ್ಟಿಯವರ ಕೃತಿ ‘ಅಳವು ಅರಿಯದ ಭಾಷೆ: ಕಲೆ ಸಮಾಜ ಇತಿಹಾಸ’ ಹಲವಾರು ಕಾರಣಗಳಿಂದ ಗಮನ ಸೆಳೆಯುವ ಪುಸ್ತಕ. ಈ ಪುಸ್ತಕದಲ್ಲಿ ಅವರು ಯಕ್ಷಗಾನ ಕಲಾಪ್ರಕಾರದ ಬೆಳವಣಿಗೆಯ ವಿವಿಧ ಹಂತಗಳನ್ನು ವಿಸ್ತೃತವಾಗಿ ಚರ್ಚಿಸುತ್ತ ವರ್ತಮಾನದಲ್ಲಿ ಈ ಜನಪ್ರಿಯ ಕಲೆಯ ಮೂಲಕ ಆಗಿರುವ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳನ್ನು ಸೋದಾಹರಣವಾಗಿ ವಿವರಿಸಿದ್ದಾರೆ. ಸಂಕೀರ್ಣವಾದ ವಿಚಾರಗಳು ಎಲ್ಲ ಬಗೆಯ ಓದುಗರಿಗೂ ದಾಟುವಂತೆ ಇಲ್ಲಿ ವಿಷಯವನ್ನು ಸರಳವಾದ ಭಾಷೆಯಲ್ಲಿ ಮಂಡಿಸಲಾಗಿದೆ. ಯಕ್ಷಗಾನದ ಆಟ-ಕೂಟಗಳ ಇತಿಹಾಸ ಮತ್ತು ವರ್ತಮಾನವನ್ನು ವಿವರವಾಗಿ ದಾಖಲಿಸುತ್ತಲೇ ಕಲೆಗೂ ಸಮಕಾಲೀನ ಸಮಾಜ ಮತ್ತು ಅಧಿಕಾರ ರಾಜಕಾರಣಕ್ಕೂ ನಡುವೆ ಇರುವ ಸಂಬಂಧದ ಸ್ವರೂಪವನ್ನು ಶೋಧಿಸುವ ಈ ಪುಸ್ತಕದಲ್ಲಿ ನಿತ್ಯಾನಂದರು ತಮ್ಮ ನೇರ ಅನುಭವಗಳನ್ನೂ ತಾವು ಒಡನಾಡಿದ ಕಲಾವಿದರಿಂದ ಕೇಳಿ ತಿಳಿದ ವಿಷಯಗಳನ್ನೂ ಒರೆಗೆ ಹಚ್ಚುತ್ತ ಚರ್ಚಿಸುವುದು ಗಮನಾರ್ಹವಾಗಿದೆ. ಸಾಮಾನ್ಯವಾಗಿ ವಿದ್ವತ್ ಅಧ್ಯಯನದ ಬರಹಗಳಲ್ಲಿ ಕಾಣದ ಕ್ರಮ ಇದಾಗಿದೆ.

ಯಕ್ಷಗಾನವನ್ನು ಕೇಂದ್ರವಾಗಿಟ್ಟುಕೊಂಡು ಕಲಾಪ್ರಕಾರವೊಂದು ಸಮಾಜ, ಭಾಷೆ ಮತ್ತು ಇತಿಹಾಸವನ್ನು ಹೇಗೆ ಪ್ರತಿನಿಧಿಸುತ್ತದೆ, ಹೇಗೆ ರೂಪಿಸುತ್ತದೆ ಎಂಬುದನ್ನು ಈ ಕೃತಿಯು ವಿವರಿಸುತ್ತದೆ. ಹಾಗಾಗಿ ಇದು ಕೇವಲ ಕಲಾವಿಮರ್ಶೆಯಲ್ಲ; ಯಕ್ಷಗಾನವನ್ನು ಸಾಂಸ್ಕೃತಿಕ ಇತಿಹಾಸದ ಸಂದರ್ಭದಲ್ಲಿಟ್ಟು ಮಾಡಿದ ಚರ್ಚೆ. ಇಲ್ಲಿನ ವಿಶ್ಲೇಷಣೆ ಹಂತಹಂತವಾಗಿ ಯಕ್ಷಗಾನ ಕಲೆಯ ಮೀಮಾಂಸೆಯ ಪರಿಧಿಯನ್ನು ದಾಟಿ ಅದರ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಪ್ರಾಮಾಣಿಕವಾಗಿ ಶೋಧಿಸುತ್ತ ಸಾಗುತ್ತದೆ. ಯಕ್ಷಗಾನದ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಆದ ಬೆಳವಣಿಗೆಗಳು, ಅದರ ರೂಪಾಂತರ ಹಾಗೂ ಸಮಕಾಲೀನ ಬದುಕಿನಲ್ಲಿ ಆದ ಪರಿಣಾಮಗಳನ್ನು ಲೇಖಕರು ಚರ್ಚಿಸುತ್ತಲೇ ಬಹಳಷ್ಟು ಓದುಗರಿಗೆ ತಿಳಿಯದೇ ಇರಬಹುದುದಾದ ಅಪರೂಪದ ಮಾಹಿತಿಗಳನ್ನು ಹೆಣೆಯುತ್ತಾ ಹೋಗುತ್ತಾರೆ. ಅದಕ್ಕೆ ಪೂರಕವಾಗಿ ಬಳಸಿಕೊಳ್ಳುವ ಚಿತ್ರಗಳು, ಆಕರ ಗ್ರಂಥಗಳ ಪಟ್ಟಿ ಇವೆಲ್ಲವೂ ಅಕೆಡೆಮಿಕ್ ಶಿಸ್ತಿನೊಂದಿಗೆ ಓದುಗರನ್ನು ಸಂವಾದದಲ್ಲಿ ಒಳಗೊಳ್ಳುವ ಬಗ್ಗೆ ಅವರಿಗಿರುವ ಕಾಳಜಿಯನ್ನೂ ಸೂಚಿಸುತ್ತದೆ. ಕೋಮುರಾಜಕಾರಣದ ಬಲಿಷ್ಠ ಹಿಡಿತ ಸಮಾಜದ ಎಲ್ಲೆಡೆ ಹೆಚ್ಚುತ್ತ ಹೋದಂತೆ ತಾನು ಪ್ರೀತಿಸುವ ಕಲೆಯನ್ನೂ ಬಳಸಿಕೊಳ್ಳುತ್ತಿರುವ ವಿದ್ಯಮಾನವನ್ನು ಸಂಕಟದಿಂದ ಹಾಗೂ ಅಪಾರವಾದ ನೈತಿಕ ಪ್ರಜ್ಞೆಯಿಂದ ಓದುಗರೆದುರು ಬಿಚ್ಚಿಡುತ್ತಾ ಹೋಗುತ್ತಾರೆ. ಹಾಗೆಯೇ ಪುಸ್ತಕದ ಕೊನೆಯ ಭಾಗದಲ್ಲಿ ಕೆಲವು ಪ್ರಾಜ್ಞರ ಅನಿಸಿಕೆಗಳನ್ನೂ ದಾಖಲಿಸಿರುವುದು ಓದುಗರಿಗೆ ಆ ಎಲ್ಲಾ ಆಯಾಮಗಳನ್ನೂ, ಹೊಳಹುಗಳನ್ನೂ ಒರೆಗೆ ಹಚ್ಚಲು ಪ್ರೇರೇಪಿಸುತ್ತವೆ. ಪುಸ್ತಕದಲ್ಲಿ ದಾಖಲಾಗಿರುವ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಪ್ರತಿಕ್ರಿಯೆಗಳ ಹೆಚ್ಚಿನಂಶವನ್ನು ಒಪ್ಪುತ್ತಲೇ ನಾನಿಲ್ಲಿ ನನಗೆ ಕಂಡ ಒಂದೆರಡು ಕೊರತೆಗಳ ಬಗ್ಗೆ ಬರೆಯಬೇಕಿದೆ.
1. ಯಕ್ಷಗಾನವು ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ವಿಶಾಲ ಪ್ರದೇಶದಲ್ಲಿ, ಮುಖ್ಯವಾಗಿ ತೆಂಕು ಮತ್ತು ಬಡಗು ಎಂಬ ಎರಡು ತಿಟ್ಟುಗಳಾಗಿ ಪ್ರಚಲಿತದಲ್ಲಿರುವ ಕಲೆಯಾಗಿದ್ದು ಈ ಪುಸ್ತಕದಲ್ಲಿ ದಕ್ಷಿಣ ಕನ್ನಡದ ಸುತ್ತಮುತ್ತಲಿನ ಕರಾವಳಿ ಭಾಗದಲ್ಲಿ ನಡೆಯುವ ಆಟ-ಕೂಟಗಳನ್ನು ಮಾತ್ರ ಕೇಂದ್ರೀಕರಿಸಿದ ಅಧ್ಯಯನ ಮತ್ತು ವಿಶ್ಲೇಷಣೆ ಕಂಡುಬರುತ್ತದೆ. ಈ ಭಾಗದಲ್ಲಿ ಕಳೆದ ಕೆಲವು ದಶಕಗಳಿಂದ ನಡೆಯುತ್ತಿರುವ ಕೋಮುಸಂಘರ್ಷಗಳ ಹಿನ್ನೆಲೆಯಲ್ಲಿ ಯಕ್ಷಗಾನದಂತಹ ಜನಪ್ರಿಯ ಕಲಾಮಾಧ್ಯಮವು ಆ ಪ್ರದೇಶದ ಜನಸಾಮಾನ್ಯರ ಮೇಲೆ ಎಂತಹ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಪ್ರಭಾವ ಬೀರುತ್ತಿದೆ ಎಂದು ವಿಸ್ತೃತವಾಗಿ ಚರ್ಚಿಸುವ ಸಲುವಾಗಿ ಈ ಚೌಕಟ್ಟು ಸಹಾಯಕವಾದರೂ ಯಕ್ಷಗಾನ ಪ್ರಚಲಿತವಿರುವ ಇನ್ನುಳಿದ ವಿಶಾಲವಾದ ಸಾಮಾಜಿಕ-ಭೌಗೋಳಿಕ ಪರಿಸರವನ್ನು ಹೊರಗಿಟ್ಟಂತೆಯೂ ಭಾಸವಾಗುತ್ತದೆ. ದಕ್ಷಿಣ ಕನ್ನಡದ ಸಾಮಾಜಿಕ-ಆರ್ಥಿಕ ಪರಿಸರವು ಇನ್ನುಳಿದ ಪ್ರದೇಶಗಳಿಗಿಂತ ಭಿನ್ನವಾಗಿರುವುದು ಹೌದಾದರೂ ಯಕ್ಷಗಾನದ ಪ್ರಭಾವ ಎಲ್ಲಾ ಕಡೆಗಳಲ್ಲಿಯೂ ಹೆಚ್ಚೂಕಡಿಮೆ ಒಂದೇ ಬಗೆಯದ್ದಾಗಿದೆ. ಆದರೆ ಇಲ್ಲಿನ ಚರ್ಚೆಯಲ್ಲಿ ಉಳಿದೆಲ್ಲಾ ಪ್ರದೇಶಗಳಲ್ಲಿ (ಕರಾವಳಿಯ ಉತ್ತರ ಭಾಗ, ಘಟ್ಟದ ಮೇಲಿನ ಮೂರ್ನಾಲ್ಕು ಜಿಲ್ಲೆಗಳು) ಕಳೆದ ಕೆಲವು ದಶಕಗಳಲ್ಲಿ ಆದ ಬೆಳವಣಿಗೆಗಳ ಬಗ್ಗೆ ಮತ್ತು ಜನಸಮೂಹದ ಮೇಲೆ ಯಕ್ಷಗಾನದ ಪ್ರಭಾವದ ಬಗ್ಗೆ ಉಲ್ಲೇಖವಿಲ್ಲ. ಲೇಖಕರೇ ಹೇಳಿಕೊಂಡಂತೆ “ಕಲೆ ಮತ್ತು ಅದನ್ನು ಕಟ್ಟಿರುವ ಜನಸಮುದಾಯದ ಸಾಮಾಜಿಕ ಇತಿಹಾಸವನ್ನು ಮರುರಚಿಸುವ” ಪ್ರಯತ್ನದಲ್ಲಿ ಈ ಚೌಕಟ್ಟೇ ಒಂದು ಮಿತಿಯಂತೆ ಭಾಸವಾಗುವ ಅಪಾಯವಿದೆ. ಕಟ್ಟಿಕೊಂಡ ಪ್ರಮೇಯವೊಂದನ್ನು ಸಮರ್ಥಿಸಿಕೊಳ್ಳಲೆಂದೇ ವಾದಗಳನ್ನು ಹೂಡುವಂತೆ ತೋರುವ ಅಪಾಯ ಅದು. ಹಿರಿಯ ಯಕ್ಷಗಾನ ಕಲಾವಿದ ಮತ್ತು ವಿದ್ವಾಂಸರಾದ ಪ್ರಭಾಕರ ಜೋಶಿಯವರು ತಮ್ಮ ಪ್ರತಿಕ್ರಿಯೆಯಲ್ಲಿ ಬಹುಶಃ ಈ ಅಪಾಯದ ಬಗ್ಗೆಯೇ ಹೇಳಹೊರಟಂತೆ ಕಾಣುತ್ತದೆ. ಕಾಲಕಾಲಕ್ಕೆ ಯಕ್ಷಗಾನದ ಪ್ರದರ್ಶನಗಳಲ್ಲಿ, ತಾಳಮದ್ದಳೆಯ ಪ್ರಸಂಗಗಳಲ್ಲಿ ಆಗುತ್ತ ಹೋದ ಬದಲಾವಣೆಗಳು ಮತ್ತು ಕುಂಬ್ಳೆಯವರಂತಹ ಕಲಾವಿದರ ಮೂಲಕ ಸಂಘಪರಿವಾರದ ಅಧಿಕಾರ ರಾಜಕಾರಣ ಇದರ ಜನಪ್ರಿಯತೆಯನ್ನು ಬಳಸಿಕೊಳ್ಳುತ್ತ ಹೋದಂತೆಯೇ ಇಂತಹ ಪ್ರಯತ್ನಗಳಿಗೆ ಪ್ರತಿರೋಧ ಕೂಡ ಇದೇ ಕಲಾಪ್ರಕಾರದಲ್ಲಿ ತೊಡಗಿರುವ ಇತರರಿಂದ ಆಗಿರುವ ಸಾಧ್ಯತೆಗಳ ಕಡೆಗೂ ಒಂದು ನೋಟ ಬೀರಬಹುದಿತ್ತು ಎನ್ನಿಸದೇ ಇರದು. ಇಂತಹ ಪ್ರತಿರೋಧಗಳು ಎಷ್ಟೇ ಕ್ಷೀಣವಾಗಿದ್ದರೂ ಅದರ ಮಹತ್ವವನ್ನು ಅಲ್ಲಗಳೆಯಲಾಗದು. ಈ ಪುಸ್ತಕವೇ ಅಂತಹ ಪ್ರತಿರೋಧವೊಂದರಿಂದ ಹುಟ್ಟಿದ್ದಲ್ಲವೇ?! ತಮ್ಮ ವೈಯಕ್ತಿಕ ಬದುಕಿನ ಕೆಲ ವಿವರಗಳೂ ಸೇರಿದಂತೆ ತಮ್ಮ ನೇರ ಒಡನಾಟದಲ್ಲಿ ಅನುಭವಿಸಿದ್ದನ್ನು ದಾಖಲಿಸುತ್ತ ಅದನ್ನು ವಿಶ್ಲೇಷಿಸುತ್ತಾ ಸಾಗುವ ಲೇಖಕರ ಪಾರದರ್ಶಕ ಪ್ರಾಮಾಣಿಕತೆ ಈ ಅಪಾಯವನ್ನು ಬಹಳಮಟ್ಟಿಗೆ ಕಡಿಮೆ ಮಾಡುತ್ತದೆ. ಹಾಗಿದ್ದೂ ಅಧ್ಯಯನದ ಸಮಗ್ರತೆಯ ದೃಷ್ಟಿಯಿಂದ ಯಕ್ಷಗಾನದಂತಹ ವ್ಯಾಪಕ ಕಲಾಪ್ರಕಾರವನ್ನು ಸೀಮಿತ ಪ್ರದೇಶದಲ್ಲಿ ಬಳಸಲಾದ ಸಾಮಾಜಿಕ-ರಾಜಕೀಯ ಅಸ್ತ್ರವಾಗಿ ಮಾತ್ರ ನೋಡದೆ ಅದರ ಇತರ ಮಗ್ಗುಲುಗಳನ್ನೂ ಚರ್ಚಿಸುತ್ತ, ಅದರಲ್ಲಿ ತೊಡಗಿರುವ ವಿವಿಧ ಪ್ರದೇಶಗಳ ಕಲಾವಿದರ ಮೌಲಿಕ ಕೊಡುಗೆಗಳಲ್ಲಿ ಕೆಲವನ್ನಾದರೂ ಉದಾಹರಿಸಿದ್ದಲ್ಲಿ ದಕ್ಷಿಣ ಕನ್ನಡದಲ್ಲಿ ನಡೆದ, ನಡೆಯುತ್ತಿರುವ ವಿದ್ಯಮಾನದ ಭೀಕರತೆ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಕಟವಾಗುತ್ತಿತ್ತೇನೋ. ಹಾಗೆಯೇ ನಂತರದಲ್ಲಿ ಈ ವಿದ್ಯಮಾನ ಹೇಗೆ ಇತರೆಡೆಗೆ ಹಬ್ಬಿರಬಹುದು ಎಂಬುದನ್ನು ಶೋಧಿಸಲೂ ಸಹಕಾರಿಯಾಗಬಹುದಿತ್ತು. ಇದರೊಟ್ಟಿಗೆ ಲೇಖಕರೇ ಕೇಳಿಕೊಂಡಂತೆ “ಜನಸಮುದಾಯದ ಈ ಕಲಾಭಿವ್ಯಕ್ತಿ ಒಂದು ರಂಗಭಾಷೆಯಾಗಿ ಹೇಗೆ ಪ್ರಕಟಗೊಂಡಿದೆ” ಎಂಬ ಪ್ರಶ್ನೆಯನ್ನು ಅದರ ಎಲ್ಲಾ ಆಯಾಮಗಳೊಂದಿಗೆ ಸಮರ್ಥವಾಗಿ ಎದುರಿಸಲೂ ಸಾಧ್ಯವಾಗುತ್ತಿತ್ತು ಎನ್ನಿಸುತ್ತದೆ.
೨. ಎಂಭತ್ತರ ದಶಕದಲ್ಲಿ ಟೇಪ್ ರೆಕಾರ್ಡರ್ ಮತ್ತು ಕ್ಯಾಸೆಟ್ಗಳು ಪ್ರಚಲಿತಕ್ಕೆ ಬಂದು ಹಂತ ಹಂತವಾಗಿ ಜನರ ನಡುವೆ ಪ್ರಸಿದ್ಧಿಯನ್ನು ಪಡೆದುಕೊಳ್ಳುವಾಗ ಯಕ್ಷಗಾನವೂ ಈ ವಿದ್ಯಮಾನಕ್ಕೆ ತೆರೆದುಕೊಂಡಿದ್ದು ಒಂದು ಮಹತ್ವದ ಬೆಳವಣಿಗೆ. ರಾತ್ರಿಯ ವೇಳೆ ನಡೆಯುವ ಬಯಲಾಟದ ಪ್ರಸಂಗಗಳು ಈಗ ಮನೆಮನೆಗೆ ತಲುಪಿ, ಹಗಲಿನಲ್ಲಿಯೂ ಕೇಳುವ ಅನುಕೂಲ ಮಾಡಿಕೊಟ್ಟದ್ದು ಈ ಕ್ಯಾಸೆಟ್ ಯುಗ. ಈ ಹಂತದಲ್ಲಿ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಪ್ರದರ್ಶಿಸುತ್ತಿದ್ದ ಯಕ್ಷಗಾನ ಮೇಳಗಳು ಹೊಸದಾಗಿ ಸಿಕ್ಕ ಜನಪ್ರಿಯ ಮಾಧ್ಯಮವನ್ನು ಬಳಸಿಕೊಂಡು ಹೊಸ ಹೊಸ ಕಾಲ್ಪನಿಕ ಪ್ರಸಂಗಗಳನ್ನು ರಚಿಸಿ ಕ್ಯಾಸೆಟ್ಗಳಾಗಿ ಬಿಡುಗಡೆ ಮಾಡುವ ಪೈಪೋಟಿಯಲ್ಲಿ ತೊಡಗಿದವು. ಹೀಗೆ ರಚನೆಯಾದ ಬಹಳಷ್ಟು ಹೊಸ ಪ್ರಸಂಗಗಳು ತೀರಾ ಅಗ್ಗದ ಮನರಂಜನೆಯ ಸರಕುಗಳಾದದ್ದಷ್ಟೇ ಅಲ್ಲ, ಟಿವಿ ಮತ್ತು ಸಿನಿಮಾದ ಪ್ರಭಾವಗಳಿಂದ ಬಯಲಾಟಗಳಿಗೆ ಕಡಿಮೆಯಾಗುತ್ತಿದ್ದ ನೋಡುಗರನ್ನು ಸೆಳೆಯಲೂ ಬಳಕೆಯಾಗತೊಡಗಿತು. ಜನಮಾನಸದ ಮೇಲೆ ವ್ಯಾಪಕ ಪ್ರಭಾವ ಹೊಂದಿದ್ದ ಸಿನಿಮಾರಂಗದ ‘ಜನಪ್ರಿಯ’ ಸೂತ್ರಗಳು ಯಕ್ಷಗಾನದ ಪ್ರದರ್ಶಗಳಲ್ಲಿ ತೂರಿಕೊಂಡು ಚಪ್ಪಾಳೆ ಗಿಟ್ಟಿಸುವ ತಂತ್ರಗಳಾಗಿ ಯಶಸ್ವಿಯಾದವು. ಒಂದೆಡೆ ಕ್ಯಾಸೆಟ್ ಕೇಳುಗರ ಸಂಖ್ಯೆ ಹೆಚ್ಚಿದಂತೆ ಯಕ್ಷಗಾನದ ಪ್ರದರ್ಶನಗಳಲ್ಲಿಯೂ ಚಪ್ಪಾಳೆ ಗಿಟ್ಟಿಸುವ ಅಗ್ಗದ ಮಾತುಗಾರಿಕೆ ಹೆಚ್ಚಾಯಿತು. ಅಲ್ಲಿಯವರೆಗೆ ಹೆಚ್ಚಿನಂಶ ತರ್ಕ ಮತ್ತು ಜಿಜ್ಞಾಸೆಯಿಂದ ಕೂಡಿದ ತೂಕದ ಮಾತುಗಳು, ಭಾವಪೂರ್ಣ ವಿಶ್ಲೇಷಣೆಗಳಿಗಿದ್ದ ಮಹತ್ವ ಕ್ರಮೇಣ ಕಡಿಮೆಯಾಗುತ್ತ ಬಂತು. ಈ ಹಂತದ ಬೆಳವಣಿಗೆಗಳು ಇಲ್ಲಿನ ಅಧ್ಯಯನದಲ್ಲಿ ಮತ್ತು ಚರ್ಚೆಗಳಲ್ಲಿ ಕಾಣದಿರುವುದು ನನಗೆ ಒಂದು ಕೊರತೆಯಾಗಿಯೇ ಕಂಡಿದೆ. ಈ ಬೆಳವಣಿಗೆಗಳಿಗೂ ಮುಂದೆ ತೊಂಭತ್ತರ ದಶಕದಲ್ಲಿ ಕುಂಬ್ಳೆಯಂತಹ ಕಲಾವಿದರ ಜನಪ್ರಿಯತೆಗೂ ಗಾಢವಾದ ಸಂಬಂಧ ಇದ್ದಂತೆ ತೋರುತ್ತದೆ. ಆರ್ಥಿಕ ಉದಾರೀಕರಣದಿಂದ ಕ್ರಮೇಣ ಹೆಚ್ಚತೊಡಗಿದ ಜನರ ಆದಾಯ, ಹೊಸ ತಲೆಮಾರಿನ ಆಶೋತ್ತರಗಳು ಮತ್ತು ಆದ್ಯತೆಗಳನ್ನು ಅರಿತ ಸಂಘಪರಿವಾರದ ಜಾಣರು ಯಕ್ಷಗಾನ ಕ್ಷೇತ್ರದಲ್ಲಿ ಆದ ಈ ಬೆಳವಣಿಗೆಗಳನ್ನು ತಮ್ಮ ಅಜೆಂಡಾವನ್ನು ಮುಂದೊತ್ತಲು ಸೂಕ್ತವಾಗಿ ಬಳಸಿಕೊಂಡಿರುವ ಸಾಧ್ಯತೆಗಳನ್ನು ವಿವರವಾಗಿ ಶೋಧಿಸುವ ಅವಕಾಶ ಇಲ್ಲಿತ್ತು ಎಂದೇ ಭಾವಿಸುತ್ತೇನೆ.
ಸಿದ್ಧಮಾದರಿಯ ವಿದ್ವತ್ ಬರಹಗಳಿಗಿಂತ ಭಿನ್ನವಾಗಿ, ವ್ಯಾಪಕ ಅಧ್ಯಯನ ಮತ್ತು ಅನುಭವಜನ್ಯ ವಿವರಗಳನ್ನಿಟ್ಟುಕೊಂಡು ಗಂಭೀರವಾದ ತಾತ್ವಿಕ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ ಈ ಕಾಲದ ಸಂಕಟಗಳನ್ನು ಎದುರುಗೊಳ್ಳುವ ನಿತ್ಯಾನಂದರ ಪ್ರಾಮಾಣಿಕ ಪ್ರಯತ್ನವನ್ನು ಮೆಚ್ಚುತ್ತಲೇ ಓದುಗನಾಗಿ ನನ್ನಲ್ಲಿ ಹುಟ್ಟಿದ ಅನುಮಾನಗಳನ್ನು ಅಷ್ಟೇ ಪ್ರಾಮಾಣಿಕತೆಯಿಂದ ಚರ್ಚಿಸುವುದು ನನ್ನ ಉದ್ದೇಶವೇ ಹೊರತು ಪುಸ್ತಕದ ಆಶಯವನ್ನು ಪ್ರಶ್ನೆಮಾಡುವುದಾಗಲಿ ಅಥವಾ ಅದರ ಮಹತ್ವವನ್ನು ಅಲ್ಲಗಳೆಯುವುದಾಗಲಿ ಅಲ್ಲ. ಕನ್ನಡದ ಸಂದರ್ಭದಲ್ಲಿ ಅಪರೂಪವಾಗಿರುವ ಇಂತಹ ಚರ್ಚೆಗಳನ್ನು, ಅಧ್ಯಯನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓದುವಂತಾಗಲಿ, ಈ ಪುಸ್ತಕ ಹೆಚ್ಚು ಎಳೆಯ ಓದುಗರನ್ನು ತಲುಪಲಿ, ಇನ್ನಷ್ಟು ಚರ್ಚೆಗಳಾಗಲಿ ಎಂದು ಹಾರೈಸುತ್ತೇನೆ.
ಪ್ರಶಾಂತ್ ಪಂಡಿತ್
ಪ್ರಶಾಂತ್ ಪಂಡಿತ್ ಮೈಸೂರಿನವರು. ಸ್ವತಂತ್ರ ಚಲನಚಿತ್ರ ನಿರ್ದೇಶಕ, ಸಂಕಲನಕಾರ ಮತ್ತು ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದ ಪಡ್ಡಾಯಿ (2018), ನೀಲಿ ಹಕ್ಕಿ (2021), ಪುಟ ತಿರುಗಿಸಿ ನೋಡಿ (2016) ಸೇರಿದಂತೆ ಎಂಟು ಚಲನಚಿತ್ರಗಳ ಸಂಕಲನ. 2023ರಲ್ಲಿ ಫರ್ಡಿನಾಂಡ್ ಕಿಟೆಲ್ ಅವರ ಜೀವನ ಮತ್ತು ಸಾಧನೆ ಕುರಿತ ಅರಿವು ಮತ್ತು ಗುರುವು ಎಂಬ ತ್ರೈಭಾಷಿಕ (ಕನ್ನಡ, ಇಂಗ್ಲಿಷ್, ಜರ್ಮನ್) ಸಾಕ್ಷ್ಯಚಿತ್ರದ ನಿರ್ದೇಶನ. ಹಳೆಯ ಕನ್ನಡ ಅಕ್ಷರಶೈಲಿಯ ಮರುಸೃಷ್ಟಿಯ ಕೆಲಸದಲ್ಲಿ ತೊಡಗಿಸಿಕೊಂಡು ಬಾಸೆಲ್ ಮಿಷನ್ ಪ್ರೆಸ್ ಬಳಸುತ್ತಿದ್ದ ಹಳೆಯ ಕಾಲದ ಕನ್ನಡ ಮುದ್ರಣ ಅಕ್ಷರಗಳನ್ನು ಡಿಜಿಟಲ್ ರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಿಶ್ವ ಸಿನಿಮಾ ಕುರಿತ ಪ್ರತಿಬಿಂಬ ಎಂಬ ಅಂಕಣ ಬರಹಗಳು.
ಇದನ್ನೂ ಓದಿ …
ಕೇಡಿನ ಭಾಷೆಯೇ ಆಡುಭಾಷೆಯಾದಾಗ…
ಇತ್ತೀಚೆಗೆ ಹೊರಬಂದ ಡಾ. ನಿತ್ಯಾನಂದ ಬಿ ಶೆಟ್ಟಿಯವರ ಅಳವು ಅರಿಯದ ಭಾಷೆ: ಕಲೆ, ಸಮಾಜ, ಇತಿಹಾಸ ಪುಸ್ತಕ ಕನ್ನಡದ ಬೌದ್ಧಿಕ ವಲಯದಲ್ಲಿ ಚರ್ಚೆಗೆ ಒಳಗಾಗುತ್ತಿದೆ. ಯಕ್ಷಗಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಕರಾವಳಿಯ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳನ್ನು, ಬಿಕ್ಕಟ್ಟುಗಳನ್ನು ಗ್ರಹಿಸಿಕೊಳ್ಳುವ ಪ್ರಯತ್ನವನ್ನು ಈ ಪುಸ್ತಕ ಮಾಡುತ್ತದೆ. ಪ್ರಕಟಣೆಗೆ ಮುನ್ನ ಪುಸ್ತಕದ ಕರಡನ್ನು ಓದಿದ್ದ




