ಅರ್ಜೆಂಟೀನಾದ ಕತೆಗಾರ ಹೊರ್ಹೆ ಲುಯೀಸ್ ಬೊರ್ಹೇಸ್ನಿಗೆ (Jorge Luis Borges, 24 ಆಗಸ್ಟ್ 1899 – 14 ಜೂನ್ 1986) ಗಣಿತ ಮತ್ತು ವಿಜ್ಞಾನದ ಪರಿಕಲ್ಪನೆಗಳ ಬಗ್ಗೆ, ಅದರಲ್ಲೂ ಅಪರಿಮಿತದ (infinity) ಬಗ್ಗೆ ಅಪಾರ ಆಸಕ್ತಿಯಿತ್ತು. ಆ ಪರಿಕಲ್ಪನೆಯನ್ನಿಟ್ಟುಕೊಂಡು, The Zahir, The Library of Babel, The Aleph ಮೊದಲಾದ ಹಲವು ಕತೆಗಳನ್ನು ಬರೆದಿದ್ದಾನೆ. ವಾಸ್ತವದಲ್ಲಿ 'Aleph' ಎನ್ನುವುದನ್ನು ಗಣಿತದ ಗಣ ಸಿದ್ಧಾಂತದಲ್ಲಿ (Set Theory) ಒಂದು ಅಪರಿಮಿತ ಗಣದ ಕಾರ್ಡಿನಾಲಿಟಿಯನ್ನು (cardinality) — ಎಂದರೆ, ಒಂದು ಗಣವು ಒಳಗೊಂಡಿರುವ ವಸ್ತುಗಳ/ಘಟಕಗಳ ಸಂಖ್ಯೆಯನ್ನು — ಸೂಚಿಸಲು ಬಳಸಲಾಗುತ್ತದೆ. ಗಣಿತದಲ್ಲಿ Aleph-null, Aleph-one ಹೀಗೆ ಇವುಗಳನ್ನು ವಿವಿಧ ಸ್ತರದ ಅಪರಿಮಿತಗಳನ್ನು ಅಳೆಯಲು ಬಳಸುತ್ತಾರೆ—ಅಂದರೆ ಅನಂತದ ಒಳಗೂ ಹೆಚ್ಚು-ಕಡಿಮೆ ಎಂಬ ಶ್ರೇಣಿಗಳಿವೆಯೆಂದರ್ಥ! ಆ ಪರಿಕಲ್ಪನೆಯೇ ಒಂದು ಬೆರಗು. ಜೆ ವಿ ಕಾರ್ಲೊ ಅನುವಾದಿಸಿದ ಮರಳ ಪುಸ್ತಕ ಕತೆಯಲ್ಲಿ ಬರುವ ಸನ್ನಿವೇಶವೂ ಅಂಥದ್ದೇ …

ರೇಖೆಯು ಅಪರಿಮಿತ ಬಿಂದುಗಳನ್ನು ಹೊಂದಿದೆ; ಸಮತಲವು ಅಪರಿಮಿತ ರೇಖೆಗಳನ್ನು; ಘನವು ಅಪರಿಮಿತ ಸಮತಲಗಳನ್ನು; ಅತಿಘನವು ಅಪರಿಮಿತ ಘನಗಳನ್ನು ... ಛೆ, ಇಲ್ಲ ... ನನ್ನ ಕತೆಯನ್ನು ಶುರು ಮಾಡಲು ಇದು, ಈ “ರೇಖಾಗಣಿತದ ವಿಧಾನ”, ಸೂಕ್ತವಾದುದು ಅಲ್ಲವೇ ಅಲ್ಲ. ಇತ್ತೀಚೆಗೆ ಪ್ರತಿಯೊಂದು ಕಾಲ್ಪನಿಕ ಕತೆಯೂ ಸತ್ಯ ಕತೆಯೆಂದು ಹೇಳುವ ಪರಿಪಾಟವು ಬೆಳೆದು ಬಂದಿದೆ. ಆದರೆ ನನ್ನ ಕತೆ ಮಾತ್ರ ಹಾಗಲ್ಲ, ಇದು ನಿಜವಾಗಲೂ ಸತ್ಯ ಕತೆ.
ನಾನು ಬುಯೆನೋಸ್ ಏರೀಸ್ನ ಬೆಲ್ಗ್ರಾನೋ ಬೀದಿಯಲ್ಲಿನ ಅಪಾರ್ಟ್ಮೆಂಟ್ ಒಂದರ ನಾಲ್ಕನೆಯ ಮಹಡಿಯಲ್ಲಿ ಒಬ್ಬನೇ ವಾಸಿಸುತ್ತಿದ್ದೇನೆ. ಕೆಲ ತಿಂಗಳ ಹಿಂದೆ ಒಂದು ಸಂಜೆಯ ಇಳಿ ಹೊತ್ತಿನಲ್ಲಿ ಯಾರೋ ಬಾಗಿಲು ಬಡಿದ ಸದ್ದು ಕೇಳಿ ಬಾಗಿಲನ್ನು ತೆರೆದೆ. ಒಬ್ಬ ಅಪರಿಚಿತ ವ್ಯಕ್ತಿ ಹೊಸ್ತಿಲಿನಲ್ಲಿ ನಿಂತಿದ್ದ. ತುಸು ಎತ್ತರದ, ಹೇಳಬಹುದಾದ ವಿಶಿಷ್ಟ ಲಕ್ಷಣಗಳಿಲ್ಲದ ಚಹರೆಯುಳ್ಳ ವ್ಯಕ್ತಿ. ಅಥವಾ ನನ್ನ ಸಮೀಪದೃಷ್ಟಿದೋಷದ ಕಾರಣದಿಂದಲೂ ನನಗೆ ಹಾಗೆ ಅನ್ನಿಸಿರಬಹುದು. ಬೂದುಬಣ್ಣದ ಬಟ್ಟೆ ಧರಿಸಿ, ಕೈಯಲ್ಲೊಂದು ಬೂದುಬಣ್ಣದ ಸೂಟ್ಕೇಸ್ ಹಿಡಿದಿದ್ದ ಅವನು ಎದ್ದುಕಾಣದ ಸಾಧಾರಣ ಕಳೆಯನ್ನು ಹೊತ್ತಿದ್ದ. ನೋಡಿದ ಕೂಡಲೇ ಅವನೊಬ್ಬ ಹೊರದೇಶದವನೆಂದು ನನಗೆ ಗೊತ್ತಾಯಿತು. ಮೊದಲಿಗೆ ನನಗವನು ವಯಸ್ಸಾದವನಂತೆ ಕಂಡಿದ್ದ; ಆದರೆ, ಅವನ ತೆಳುವಾದ ಹೊಂಬಣ್ಣದ ಕೂದಲು ನನ್ನನ್ನು ಹಾದಿ ತಪ್ಪಿಸಿತ್ತು ಎಂದು ನಂತರ ತಿಳಿಯಿತು. ಅವನ ಕೂದಲು ಸ್ಕ್ಯಾಂಡಿನೇವಿಯದವರ ಕೂದಲಿನಂತೆ ಹೆಚ್ಚೂಕಡಿಮೆ ಪೂರ್ಣವಾಗಿ ಬೆಳ್ಳಗಿತ್ತು. ಅನಂತರ, ನಮ್ಮಿಬ್ಬರ ಮಧ್ಯೆ ಒಂದು ತಾಸಿಗಿಂತಲೂ ಕಡಿಮೆ ನಡೆದ ಮಾತುಕತೆಯಿಂದ ಅವನು ಸ್ಕಾಟ್ಲೆಂಡಿನ ಆರ್ಕ್ನೀ ದ್ವೀಪಸಮೂಹಗಳಿಗೆ ಸೇರಿದವನು ಎಂದು ತಿಳಿದುಬಂತು.
ಅವನನ್ನು ಒಳಗೆ ಕರೆದು ಕುಳಿತುಕೊಳ್ಳಲು ಕುರ್ಚಿಯನ್ನು ತೋರಿಸಿದೆ. ಅವನು ತಕ್ಷಣ ಮಾತನಾಡಲಿಲ್ಲ. ಅವನಿಂದ ಒಂದು ವಿಷಣ್ಣತೆ ಹೊರಹೊಮ್ಮುತ್ತಿತ್ತು—ಅದೀಗ ನನ್ನಿಂದ ಹೊರಹೊಮ್ಮುತ್ತಿದ್ದಂತಿದೆ.
“ನಾನು ಬೈಬಲ್ಗಳನ್ನು ಮಾರುತ್ತೇನೆ,” ಅವನೆಂದ.
“ಈ ಮನೆಯಲ್ಲಿ ಬಹಳಷ್ಟು ಇಂಗ್ಲಿಷ್ ಬೈಬಲ್ಗಳಿವೆ, ಮೊಟ್ಟಮೊದಲ ಜಾನ್ ವೈಕ್ಲಿಫ್ನ ಬೈಬಲ್ ಸೇರಿದಂತೆ. ನನ್ನಲ್ಲಿ ಸಿಪ್ರಿಯಾನೊ ಡಿ ವಲೇರಾನ, ಸಾಹಿತ್ಯಿಕ ದೃಷ್ಟಿಕೋನದಿಂದ ತೀರ ಕಳಪೆಯಾಗಿರುವ ಲೂಥರನ ಬೈಬಲ್ ಇವೆ — ಅಷ್ಟೇ ಏಕೆ ವಲ್ಗೇಟ್ನ ಲ್ಯಾಟಿನ್ ಆವೃತ್ತಿ ಕೂಡ ಇದೆ. ಹಾಗಾಗಿ, ನನಗೆ ಬೈಬಲ್ಗಳ ಅಗತ್ಯವಂತೂ ಇಲ್ಲವೆಂದು ನಿಮಗೀಗ ಗೊತ್ತಾಗಿರಬೇಕು,” ನಾನು ತುಸು ನಿಷ್ಠುರವಾಗಿಯೇ ಪಾಂಡಿತ್ಯದ ಠೀವಿಯಲ್ಲಿ ಉತ್ತರಿಸಿದ್ದೆ.
ಸ್ವಲ್ಪ ಹೊತ್ತಿನ ಮೌನದ ಬಳಿಕ, “ನಾನು ಬೈಬಲ್ಗಳನ್ನಷ್ಟೇ ಮಾರುತ್ತಿಲ್ಲ. ಬಿಕಾನೆರ್ನ ಹೊರವಲಯದಲ್ಲಿ ನನಗೊಂದು ಅಪೂರ್ವವಾದ ಪವಿತ್ರ ಗ್ರಂಥವೊಂದು ದಕ್ಕಿತು. ನಿಮಗೆ ಅದು ಆಸಕ್ತಿಕರವಾಗಿರಬಹುದು,” ಎಂದು ಹೇಳುತ್ತಾ ಅವನು ತನ್ನ ಸೂಟ್ಕೇಸನ್ನು ತೆರೆದು ಒಂದು ಪುಸ್ತಕವನ್ನು ಹೊರತೆಗೆದು ಮೇಜಿನ ಮೇಲೆ ಇಟ್ಟ. ಅದು ಕ್ಯಾಲಿಕೊ ಬಟ್ಟೆಯಿಂದ ಕಟ್ಟಿದ್ದ ಒಕ್ಟಾವೊ ಆಕಾರದ ಪುಸ್ತಕವಾಗಿತ್ತು. ಹಲವಾರು ಕೈಗಳ ಮೂಲಕ ಹಾದು ಬಂದಿರುವ ಪುಸ್ತಕವದು ಎಂಬುದರಲ್ಲಿ ಯಾವುದೇ ಸಂದೇಹವಿರಲಿಲ್ಲ. ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಅದರ ಅಸಾಧಾರಣ ತೂಕದಿಂದ ನಾನು ಆಶ್ಚರ್ಯಚಕಿತನಾದೆ. ಪುಸ್ತಕದ ಬೆನ್ನಿನ ಮೇಲೆ ‘ಪವಿತ್ರ ಗ್ರಂಥ’ ಎಂಬ ಪದಗಳಿದ್ದುವು ಮತ್ತು ಅದರ ಕೆಳಗೆ ‘ಬಾಂಬೆ’ ಎಂದಿತ್ತು.
“ಸುಮಾರು ಹತ್ತೊಂಭತ್ತನೇ ಶತಮಾನದ್ದಿರಬೇಕು,” ನಾನೆಂದೆ.
“ನನಗೆ ಗೊತ್ತಿಲ್ಲ. ಇದುವರೆಗೆ ತಿಳಿದೂ ಇಲ್ಲ.”
ಪುಸ್ತಕದ ಹಾಳೆಗಳನ್ನು ತಿರುಗಿಸುತ್ತ ಯಾವುದೋ ಒಂದು ಪುಟವನ್ನು ತೆರೆದೆ. ಅದರಲ್ಲಿನ ಬರಹ ನನಗೆ ಅಪರಿಚಿತವಾದ ಲಿಪಿಯಲ್ಲಿತ್ತು. ಪುಟಗಳು ಹಳತಾಗಿದ್ದು, ಅಕ್ಷರ ಜೋಡಣೆ ಕೆಟ್ಟದಾಗಿತ್ತು. ಪಠ್ಯವು ಬೈಬಲಿನಂತೆ ಎರಡು ಕಾಲಂಗಳಲ್ಲಿತ್ತು. ಮುದ್ರಿತ ಅಕ್ಷರಗಳು ಒತ್ತೊತ್ತಾಗಿದ್ದು, ಪಠ್ಯ ಪ್ರಶ್ನೆ-ಉತ್ತರದ ರೂಪದಲ್ಲಿತ್ತು. ಪುಟಗಳ ಮೇಲಿನ ಮೂಲೆಗಳಲ್ಲಿ ಅರೇಬಿಕ್ ಸಂಖ್ಯೆಗಳನ್ನು ನಮೂದಿಸಲಾಗಿತ್ತು. ನಾನು ನೋಡಿದಂತೆ ಪುಸ್ತಕದ ಎಡ ಮೂಲೆಯಲ್ಲಿ, ಉದಾಹರಣೆಗೆ, 40,514 ಎಂಬ ಸಂಖ್ಯೆಯಿದೆ ಎಂದುಕೊಳ್ಳಿ; ಅದರ ಎದುರಿನ ಬಲಗಡೆಯ ಪುಟದಲ್ಲಿ 999 ಎಂಬ ಸಂಖ್ಯೆ ಇತ್ತು.ಹಾಳೆ ತಿರುಗಿಸಿದರೆ ಮುಂದಿನ ಪುಟದ ಸಂಖ್ಯೆ ಎಂಟು ಅಂಕಿಯದ್ದಾಗಿತ್ತು. ಅಲ್ಲದೇ, ಅದರಲ್ಲೊಂದು ಚಿಕ್ಕ ವಿವರಣಾತ್ಮಕ ಚಿತ್ರವೂ ಇತ್ತು, ನಿಘಂಟುಗಳಲ್ಲಿರುವಂಥದ್ದು. ಶಾಯಿಯ ಪೆನ್ನಿನಿಂದ ಚಿತ್ರಿಸಿದ್ದ ಹಿಡಿಗೂಟದಂತಿತ್ತು ಅದು—ಶಾಲೆಯ ಹುಡುಗನೊಬ್ಬನ ಒರಟು ಕೈಯಿಂದ ಚಿತ್ರ ಬರೆಸಲಾಗಿತ್ತೇನೋ ಎನ್ನುವಂತೆ.
“ಆ ಚಿತ್ರವನ್ನು ನಿಕಟವಾಗಿ ಗಮನಿಸಿ. ನೀವು ಅದನ್ನು ಮತ್ತೆಂದೂ ಕಾಣಲಾರಿರಿ,” ಆ ಆಗಂತುಕ ಹೇಳಿದ.
ನಾನು ಆ ಪುಟವನ್ನು ನೆನಪಿನಲ್ಲಿಟ್ಟುಕೊಂಡು ಪುಸ್ತಕವನ್ನು ಮುಚ್ಚಿ ತಕ್ಷಣ ಮತ್ತೆ ತೆರೆದೆ. ಆ ಹಿಡಿಗೂಟದ ಚಿತ್ರವನ್ನು ಹುಡುಕುತ್ತಾ ಮತ್ತಷ್ಟು ಪುಟಗಳನ್ನು ತೆರೆಯುತ್ತಾ ಹೋದೆ. “ಇದು ಯಾವುದೋ ಭಾರತೀಯ ಭಾಷೆಯಲ್ಲಿರುವ ಧರ್ಮಶಾಸ್ತ್ರದಂತೆ ತೋರುತ್ತದೆ, ಅಲ್ಲವೇ?” ನನ್ನ ಹತಾಶೆಯನ್ನು ಮುಚ್ಚಿಡುವ ಪ್ರಯಾಸದಲ್ಲಿ ಅವನನ್ನು ಕೇಳಿದೆ.
“ಅಲ್ಲ,” ಅವನು ಉತ್ತರಿಸಿದ. ಅನಂತರ, ಗುಟ್ಟೊಂದನ್ನು ಹೇಳುವವನಂತೆ ದನಿತಗ್ಗಿಸಿ, “ಈ ಪುಸ್ತಕವನ್ನು ನಾನು ಬಯಲುಪ್ರದೇಶದ ಒಂದು ಪಟ್ಟಣದಲ್ಲಿ ಒಂದು ಬೊಗಸೆಯಷ್ಟು ರೂಪಾಯಿಗಳು ಮತ್ತು ಒಂದು ಬೈಬಲ್ ಅನ್ನು ಕೊಟ್ಟು ಪಡೆದುಕೊಂಡೆ. ಈ ಪುಸ್ತಕವನ್ನು ಮಾರಿದವನು ಒಬ್ಬ ಅನಕ್ಷರಸ್ಥ. ಬಹುಶಃ ಅವನಿಗೆ ಆ ‘ಗ್ರಂಥಗಳ ಗ್ರಂಥ’ ಒಂದು ಅದೃಷ್ಟ ರಕ್ಷೆಯಂತೆ ಕಂಡಿರಬೇಕೆಂದು ನನ್ನ ಅನುಮಾನ. ಅವನು ಅತ್ಯಂತ ಕೆಳಜಾತಿಯವನು; ಉಳಿದ ಅಸ್ಪೃಶ್ಯರಿಗಲ್ಲದೆ ಬೇರೆಲ್ಲರಿಗೂ ಅವನ ನೆರಳು ಕೂಡ ಮೈಲಿಗೆ. ಅವನಲ್ಲಿದ್ದ ಪುಸ್ತಕಕ್ಕೆ ‘ಮರಳ ಪುಸ್ತಕ’ವೆಂದು ಕರೆಯುತ್ತಾರೆ ಎಂದು ಹೇಳಿದ್ದ. ಏಕೆಂದರೆ, ಆ ಪುಸ್ತಕಕ್ಕಾಗಲೀ ಮರಳಿಗಾಗಲೀ ಮೊದಲಿಲ್ಲ, ಕೊನೆಯೂ ಇಲ್ಲ.
ಆಗಂತುಕನು ನನಗೆ ‘ಮರಳ ಪುಸ್ತಕ’ದ ಮೊದಲ ಪುಟವನ್ನು ತೆರೆಯಲು ಹೇಳಿದ.
ನಾನು ನನ್ನ ಎಡಗೈಯನ್ನು ಹೊದಿಕೆಯ ಮೇಲಿಟ್ಟು ಹೆಬ್ಬೆರಳನ್ನು ಮೊದಲಿನ ಖಾಲಿಹಾಳೆಯಿರುವಲ್ಲಿ ತೂರುತ್ತ ಪುಸ್ತಕವನ್ನು ತೆರೆದೆ. ಏನೂ ಪ್ರಯೋಜನವಾಗಲಿಲ್ಲ. ಪ್ರತಿ ಸಲವೂ ನಾನು ತೆರೆದಂತೆಲ್ಲ ಹೊದಿಕೆಯ ಮೇಲಿದ್ದ ನನ್ನ ಅಂಗೈ ಮತ್ತು ಪುಸ್ತಕದೊಳಗಡೆ ತೂರಿದ್ದ ನನ್ನ ಹೆಬ್ಬೆರಳಿನ ಮಧ್ಯದಲ್ಲಿ ಹಲವಾರು ಪುಟಗಳು ಪಟಪಟನೆ ಮೂಡತೊಡಗಿದವು. ಅವು ಪುಸ್ತಕದಿಂದಲೇ ಹೊಸದಾಗಿ ಹುಟ್ಟುತ್ತಿರುವಂತೆ ಭಾಸವಾಗುತ್ತಿತ್ತು.
“ಈಗ ಕೊನೆಯ ಪುಟವನ್ನು ತೆರೆಯಿರಿ ನೋಡೋಣ,” ಎಂದ ಆಗಂತುಕ.
ಆ ಪ್ರಯತ್ನದಲ್ಲೂ ನಾನು ವಿಫಲನಾದೆ. ನನ್ನದಲ್ಲದ ದನಿಯಿಂದ ಹೇಗೋ ಕಷ್ಟಪಟ್ಟು “ಇದು ಹೀಗಿರಲು ಸಾಧ್ಯವಿಲ್ಲ,” ಎಂದು ತೊದಲಿದೆ.
ತಗ್ಗಿದ ದನಿಯಲ್ಲಿಯೇ ಮಾತನಾಡುತ್ತ, “ಹೀಗಿರಲು ಸಾಧ್ಯವಿಲ್ಲ, ಅದರೆ ಹೀಗೆಯೇ ಇದೆ. ಈ ಪುಸ್ತಕದಲ್ಲಿರುವ ಪುಟಗಳ ಸಂಖ್ಯೆ ಅಪರಿಮಿತದಷ್ಟೇ—ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ. ಯಾವುದೂ ಮೊದಲ ಪುಟವಲ್ಲ, ಯಾವುದೂ ಕೊನೆಯ ಪುಟವಲ್ಲ. ಪುಟಗಳಿಗೆ ಹೀಗೆ ಬೇಕಾಬಿಟ್ಟಿಯಾಗಿ ಸಂಖ್ಯೆಯನ್ನು ಏಕೆ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಬಹುಶಃ ಒಂದು ಅಪರಿಮಿತ ಸರಣಿಯ ಘಟಕಗಳಿಗೆ ಯಾವುದೇ ಸಂಖ್ಯೆಯನ್ನು ಅನ್ವಯಿಸಬಹುದು ಎಂದು ಸೂಚಿಸಲು ಹಾಗೆ ಮಾಡಿರಬಹುದು.”
ಅನಂತರ, ಪ್ರಕಟವಾಗಿ ಯೋಚಿಸುತ್ತಿದ್ದವನಂತೆ, “ದೇಶವು ಎಲ್ಲೆಯಿಲ್ಲದ್ದಾಗಿದ್ದಲ್ಲಿ ನಾವು ದೇಶದ ಯಾವುದೇ ಬಿಂದುವಿನಲ್ಲಿರಬಹುದು. ಕಾಲವು ಅಳೆಯಲಾಗದ್ದು ಎಂದಾದರೆ, ನಾವು ಕಾಲದ ಯಾವುದೇ ಬಿಂದುವಿನಲ್ಲಿರಬಹುದು.”
ಅವನ ಊಹಾಪೋಹಗಳು ನನಗೆ ಕಿರಿಕಿರಿಯನ್ನುಂಟುಮಾಡತೊಡಗಿದುವು. “ನೀವು ಧರ್ಮಶ್ರದ್ಧೆಯುಳ್ಳವರು, ಸಂದೇಶವಿಲ್ಲವಷ್ಟೇ?,” ನಾನು ಹೇಳಿದೆ.
“ಹೌದು. ನಾನೊಬ್ಬ ಪ್ರೆಸ್ಬೀಟೇರಿಯನ್. ನನ್ನ ಅಂತಃಸಾಕ್ಷಿ ನಿರ್ಮಲವಾಗಿದೆ. ಆ ದೇಸೀ ವ್ಯಕ್ತಿಗೆ, ಅವನ ಪೈಶಾಚಿಕ ಪುಸ್ತಕದ ಬದಲಿಗೆ ‘ದೇವರ ನುಡಿ’ಯ ಪುಸ್ತಕವನ್ನು ಕೊಟ್ಟು ಅವನಿಗೆ ಮೋಸ ಮಾಡಿಲ್ಲವೆಂದು ನನಗೆ ತಕ್ಕಮಟ್ಟಿಗೆ ಖಾತ್ರಿಯಿದೆ.”
ಅವನು ಆ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲವೆಂದು ಸಮಾಧಾನಪಡಿಸಿ, ಅವನು ಈ ಊರಿನಲ್ಲಿ ಹಾಗೆಯೇ ಹಾದುಹೋಗುತ್ತಿರುವುದೋ ಇಲ್ಲ ಕೆಲಸದ ನಿಮಿತ್ತ ಬಂದಿರುವುದೋ ಎಂದು ಕೇಳಿದೆ. ಅದಕ್ಕೆ ಅವನು ಕೆಲವು ದಿನಗಳ ನಂತರ ತನ್ನ ದೇಶಕ್ಕೆ ಹಿಂದಿರುಗುವುದಾಗಿ ಹೇಳಿದ. ಅವನೊಬ್ಬ ಸ್ಕಾಟ್, ಆರ್ಕ್ನೀ ದ್ವೀಪಸಮೂಹದವನು ಎಂದು ನನಗೆ ತಿಳಿದದ್ದು ಆಗ. ಸ್ಟೀವನ್ಸನ್ ಮತ್ತು ಹ್ಯೂಮ್ರ ದೆಸೆಯಿಂದ ನನಗೆ ಸ್ಕಾಟ್ಲೆಂಡ್ ಎಂದರೆ ಬಹಳ ಇಷ್ಟವೆಂದು ಅವನಿಗೆ ಹೇಳಿದೆ.
“ನೀವು ಸ್ಟೀವನ್ಸನ್ ಮತ್ತು ರಾಬೀ ಬರ್ನ್ಸ್ ಬಗ್ಗೆ ಹೇಳುತ್ತಿರಬೇಕು,” ಅವನು ತಿದ್ದಿದ.
ನಾವು ಮಾತನಾಡುತ್ತಿರುವಂತೆಯೇ ನಾನು ಆ ಅನಂತ ಪುಸ್ತಕವನ್ನು ತಿರುವಿ ಹಾಕುತ್ತಲಿದ್ದೆ. “ನಿಮಗೆ ಈ ಕೌತುಕವನ್ನು ಬ್ರಿಟಿಷ್ ಮ್ಯೂಸಿಯಂಗೆ ಕೊಡುವ ಆಲೋಚನೆ ಏನಾದರೂ ಇದೆಯೇ?” ಅನಾಸಕ್ತಿಯನ್ನು ನಟಿಸುತ್ತ ಕೇಳಿದೆ.
“ಇಲ್ಲ. ಅದನ್ನು ನಾನು ನಿಮಗೆ ಕೊಡಲಿಚ್ಛಿಸುತ್ತೇನೆ,” ಎನ್ನುತ್ತಾ ಅವನು ಒಂದು ದೊಡ್ಡ ಮೊಬಲಗಿನ ಬೇಡಿಕೆಯಿಟ್ಟ.
ಅಷ್ಟು ದೊಡ್ಡ ಮೊತ್ತ ನನ್ನ ಕೈಗೆಟಕದ್ದು ಎಂದು ಪ್ರಾಮಾಣಿಕವಾಗಿ ಅವನಿಗೆ ಹೇಳಿ ನಾನು ಯೋಚಿಸತೊಡಗಿದೆ. ಒಂದೆರಡು ನಿಮಿಷಗಳಲ್ಲಿ ನಾನೊಂದು ಯೋಜನೆ ಹಾಕಿದೆ.
“ನಾನೊಂದು ಪ್ರಸ್ತಾಪ ಎದುರಿಡುತ್ತೇನೆ. ನೀವು ಈ ಪುಸ್ತಕವನ್ನು ಬೊಗಸೆಯಷ್ಟು ರೂಪಾಯಿಗಳು ಮತ್ತು ಬೈಬಲ್ನ ಒಂದು ಪ್ರತಿ ಕೊಟ್ಟು ಪಡೆದುಕೊಂಡಿರಲ್ಲವೇ, ಹಾಗೆಯೇ ನಾನು ನಿಮಗೆ, ಈಗಷ್ಟೇ ನನ್ನ ಕೈಸೇರಿರುವ ನನ್ನ ಪಿಂಚಣಿ ಹಣ ಮತ್ತು ಪೂರ್ವಜರಿಂದ ನಾನು ಬಳುವಳಿಯಾಗಿ ಪಡೆದಿರುವ ಗಾಢ ಕಪ್ಪು ಶಾಯಿಯಲ್ಲಿ ಮುದ್ರಣಗೊಂಡಿರುವ ವೈಕ್ಲಿಫ್ ಬೈಬಲ್ ಕೊಡುತ್ತೇನೆ. ಆಗದೇ?” ಎಂದೆ.
“ಕಪ್ಪು ಅಕ್ಷರಗಳ ವೈಕ್ಲಿಫ್ ಬೈಬಲ್!” ಅವನು ಮೆಲುನುಡಿದ.
ನನ್ನ ಮಲಗುವ ಕೋಣೆಗೆ ಹೋಗಿ ಹಣ ಮತ್ತು ಪುಸ್ತಕವನ್ನು ತಂದುಕೊಟ್ಟೆ. ಒಬ್ಬ ನಿಜವಾದ ಪುಸ್ತಕಪ್ರೇಮಿಯ ಉತ್ಸಾಹದಿಂದ ಅವನು ಹಾಳೆಗಳನ್ನು ತಿರುವುತ್ತ ಅದರ ಶೀರ್ಷಿಕೆಯ ಪುಟ ಮತ್ತು ಒಳಪುಟಗಳನ್ನು ಪರಾಮರ್ಶಿಸಿದ.
“ನನಗೆ ಒಪ್ಪಿಗೆಯಾಯಿತು,” ಅವನೆಂದ.
ಅವನು ಕಿಂಚಿತ್ತೂ ಚೌಕಾಸಿ ಮಾಡದಿದ್ದುದ್ದನ್ನು ಕಂಡು ನನಗೆ ಬೆರಗಾಯಿತು. ನನಗೆ ಪುಸ್ತಕವನ್ನು ಹೇಗಾದರೂ ಮಾರಲೇಬೇಕೆಂದು ನಿರ್ಧರಿಸಿಯೇ ಅವನು ಮನೆಯೊಳಗೆ ಬಂದಿದ್ದನೆಂದು ನಾನು ಆಮೇಲೆ ಮನಗಂಡೆ. ಎಣಿಸದೆಯೇ ಹಣವನ್ನು ಜೇಬಿಗಿಳಿಸಿಕೊಂಡ.
ಅನಂತರ ನಾವು ಭಾರತ, ಆರ್ಕ್ನೀ ಮತ್ತು ಹಿಂದೆ ಅದನ್ನು ಆಳುತ್ತಿದ್ದ ನಾರ್ವೇಜಿಯನ್ ಸಾಮಂತರ ಬಗ್ಗೆ ಮಾತನಾಡಿದೆವು. ಅವನು ಹೊರಟಾಗ ರಾತ್ರಿಯಾಗಿತ್ತು. ಅವನನ್ನು ನಾನು ಮತ್ತೆಂದೂ ಕಾಣಲಿಲ್ಲ. ಅವನು ಹೆಸರು ಕೂಡ ನನಗೆ ಗೊತ್ತಿಲ್ಲ.
ಮೊದಲು ನಾನು ‘ಮರಳ ಪುಸ್ತಕ’ವನ್ನು ವೈಕ್ಲಿಫ್ ಬೈಬಲ್ ಇಟ್ಟಿದ್ದ ಜಾಗದಲ್ಲಿ ಇಡಲು ಯೋಚಿಸಿದ್ದೆ. ಅಮೇಲೆ ಮನಸ್ಸು ಬದಲಾಯಿಸಿ ಹಳತಾಗಿ ಛಿದ್ರಗೊಂಡಿದ್ದ ‘ಸಾವಿರದೊಂದು ರಾತ್ರಿಗಳು’ ಪುಸ್ತಕಗಳ ಸೆಟ್ಟಿನ ಹಿಂದೆ ಅದನ್ನು ಅಡಗಿಸಿಡಲು ತೀರ್ಮಾನಿಸಿದೆ. ಮಲಗಿದ್ದೇನೋ ಹೌದು ಆದರೆ ನಿದ್ದೆ ಬರಲಿಲ್ಲ. ಬೆಳಗಿನ ಜಾವ ಮೂರು ಅಥವಾ ನಾಲ್ಕಕ್ಕೆ ಹಾಸಿಗೆಯಿಂದೆದ್ದು ದೀಪ ಉರಿಸಿದೆ. ಆ ಅಸಂಭವ ಪುಸ್ತಕವನ್ನು ಕೆಳಗಿಳಿಸಿಕೊಂಡು ಬಂದು ಹಾಳೆಗಳನ್ನು ತಿರುವತೊಡಗಿದೆ. ಯಾವುದೋ ಒಂದು ಪುಟದಲ್ಲಿ ಅಚ್ಚೊತ್ತಿದ ಮುಖವಾಡದ ಚಿತ್ರ ಕಾಣಿಸಿತು. ಪುಟದ ಮೇಲಿನ ಮೂಲೆಯಲ್ಲಿ ಒಂದು ಸಂಖ್ಯೆಯನ್ನು ನಮೂದಿಸಲಾಗಿತ್ತು. ಅದು ನನಗೀಗ ಮರೆತು ಹೋಗಿದೆ. ಅದು ಒಂಭತ್ತನೇ ಘಾತಕ್ಕೆ ಏರಿಸಲ್ಪಟ್ಟಿತ್ತು ಎಂದಷ್ಟೇ ನೆನಪಿದೆ.
ನನ್ನ ಈ ನಿಧಿಯನ್ನು ಯಾರಿಗೂ ತೋರಿಸಲಿಲ್ಲ. ಅದರ ಒಡೆತನದ ಅದೃಷ್ಟದ ಜೊತೆಗೆ ಯಾರಾದರೂ ಕದ್ದಾರು ಎಂಬ ಹೆದರಿಕೆಯೂ ಅಲ್ಲದೆ ಅದು ಒಂದು ವೇಳೆ ನಿಜಕ್ಕೂ ಅನಂತವಾಗಿಲ್ಲದಿದ್ದರೆ ಎಂಬ ಸಂಶಯದ ಭೀತಿಯೂ ಸೇರಿಕೊಂಡಿತ್ತು. ಇವೆರಡು ಭಯಗಳು ನನ್ನೊಳಗಿನ ಸಂಶಯ ಪ್ರವೃತ್ತಿಯನ್ನು ಮತ್ತಷ್ಟು ಹೆಚ್ಚಿಸಿದವು. ನನಗೆ ಕೆಲವೇ ಕೆಲವು ಸ್ನೇಹಿತರು ಉಳಿದುಕೊಂಡಿದ್ದರು. ನಾನು ಅವರನ್ನು ಕಾಣುವುದನ್ನೂ ಬಿಟ್ಟುಬಿಟ್ಟೆ. ಕೊನೆಗೆ ಈ ಪುಸ್ತಕದ ಬಂಧಿಯಾಗಿಬಿಟ್ಟು ಹೊರಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟೆ. ಪುಸ್ತಕವನ್ನು ಭೂತಕನ್ನಡಿಯಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ ಅದು ನಕಲಿ ಅಲ್ಲವೆಂದು ಖಚಿತಪಡಿಸಿಕೊಂಡೆ. ಆ ಪುಟ್ಟ ಚಿತ್ರಗಳು ಎರಡು ಸಾವಿರ ಪುಟಗಳ ಅಂತರದಲ್ಲಿ ಇದ್ದುದ್ದನ್ನು ನಾನು ಖಚಿತಪಡಿಸಿಕೊಂಡೆ. ನಾನು ಅವುಗಳನ್ನು ಒಂದು ಟಿಪ್ಪಣಿ ಪುಸ್ತಕದಲ್ಲಿ ವರ್ಣಮಾಲೆಯ ಕ್ರಮದಲ್ಲಿ ದಾಖಲಿಸುತ್ತಾ ಹೋದೆ. ಅದು ಭರ್ತಿಯಾಗಲು ಹೆಚ್ಚು ಸಮಯವೇನೂ ಹಿಡಿಯಲಿಲ್ಲ. ಆಶ್ಚರ್ಯವೆಂದರೆ ಒಂದು ಚಿತ್ರವೂ ಪುನರಾವರ್ತಿತವಾಗಿರಲಿಲ್ಲ. ರಾತ್ರಿ ಹೊತ್ತು, ನಿದ್ರಾಹೀನತೆ ನನ್ನ ಮೇಲೆ ಕರುಣೆ ತೋರಿದಾಗಲೆಲ್ಲಾ ನಾನು ಪುಸ್ತಕದ ಕನಸುಗಳನ್ನೇ ಕಂಡೆ.
ಬೇಸಿಗೆಯೂ ಬಂದು ಹೋಯಿತು. ಪುಸ್ತಕವು ದೈತ್ಯರೂಪಿ ಎಂಬುದು ನನಗೀಗ ಅರಿವಾಯಿತು. ಅದನ್ನು ಕೈಯಲ್ಲಿ ಹಿಡಿದು ಕಣ್ಣಾಡಿಸಿದಾಗ ನನಗೆ ಅದೇನು ಮಹಾ ಗಾತ್ರದಲ್ಲವೆಂದು ಅನ್ನಿಸುತ್ತೇನೋ ಹೌದು. ಆದರೆ, ಆ ಯೋಚನೆಯಿಂದ ಆದ ಪ್ರಯೋಜನವಾದರೂ ಏನು? ಆ ಪುಸ್ತಕವು ಒಂದು ಭಯಾನಕ ಕನಸಿನಂತಿತ್ತು; ದುತ್ತನೆ ಎದುರಾಗಿ ಮುಜುಗರಪಡಿಸುವಷ್ಟು ಅಸಭ್ಯವಾಗಿತ್ತಷ್ಟೇ ಅಲ್ಲದೆ ವಾಸ್ತವವನ್ನೇ ಕಲುಷಿತಗೊಳಿಸುವಂತಿತ್ತು. ನಾನು ಅದನ್ನು ಸುಡಬೇಕೆಂದು ಅಂದುಕೊಂಡೆ. ಆದರೆ ಕೊನೆಯಿಲ್ಲದ ಆ ಪುಸ್ತಕವನ್ನು ಉರಿಸುವ ಬೆಂಕಿಯೂ ಕೊನೆಯಿಲ್ಲದ್ದಾಗಿದ್ದು ಅದು ಸುಡುತ್ತ ಹೋದಂತೆ ಹೊಗೆಯು ಇಡೀ ಗ್ರಹವನ್ನೇ ಉಸಿರುಗಟ್ಟಿಸೀತು. ಹಾಗಾದರೆ ಏನು ಗತಿ ಎಂದು ಹೆದರಿಕೊಂಡೆ. ಒಂದು ಎಲೆಯನ್ನು ಅಡಗಿಸಲು ಅತ್ಯಂತ ಸೂಕ್ತವಾದ ಜಾಗ ಕಾಡು ಎಂದು ಎಲ್ಲೋ ಓದಿದ ನೆನಪಾಯಿತು. ನಿವೃತ್ತನಾಗುವ ಮುನ್ನ ನಾನು ಮೆಕ್ಸಿಕೋ ಬೀದಿಯಲ್ಲಿನ ಅರ್ಜೆಂಟೈನ್ ನ್ಯಾಶನಲ್ ಲೈಬ್ರೆರಿಯಲ್ಲಿ ಕೆಲಸ ಮಾಡುತ್ತಿದ್ದೆ. ಆ ಲೈಬ್ರೆರಿಯಲ್ಲಿ ಒಂಭೈನೂರು ಸಾವಿರ ಪುಸಕ್ತಗಳಿವೆ. ಲೈಬ್ರೆರಿಯ ಮುಖ್ಯ ಧ್ವಾರದ ಬಲಗಡೆ ನೆಲ ಮಾಳಿಗೆಗೆ ಇಳಿಯುವ ಸುರುಳಿಯಾಕಾರದ ಮೆಟ್ಟಿಲುಗಳಿವೆ. ಅಲ್ಲಿ ಪುಸ್ತಕಗಳು, ನಿಯತಕಾಲಿಕಗಳು ಮತ್ತು ನಕ್ಷೆಗಳನ್ನು ಜೋಡಿಸಿಡಲಾಗಿದೆ. ಒಂದು ದಿನ ನಾನು ಅಲ್ಲಿಗೆ ಹೋಗಿ, ಕೆಲಸಗಾರನ ಕಣ್ತಪ್ಪಿಸಿ, ಬಾಗಿಲಿನಿಂದ ಎಷ್ಟು ದೂರವೆಂದಾಗಲೀ, ಎಷ್ಟು ಎತ್ತರವೆಂದಾಗಲೀ ಪರಿಗಣಿಸದೆ ಬೂಷ್ಟು ಹಿಡಿದಿದ್ದ ಒಂದು ಶೆಲ್ಫಿನ ಮೇಲೆ ಒಟ್ಟಿದ್ದ ಪುಸ್ತಕಗಳ ಮಧ್ಯೆ ಮರಳ ಪುಸ್ತಕವನ್ನು ಕಳೆದುಕೊಂಡೆ.
ಜೆ ವಿ ಕಾರ್ಲೊ
ಹಾಸನದ ನಿವಾಸಿ. ಕಟ್ಟಡ ನಿರ್ಮಾಣ ವೃತ್ತಿಯಲ್ಲಿದ್ದವರು. ಓದಿನ ಜೊತೆಗೆ ಇಂಗ್ಲಿಷಿನಿಂದ ಕನ್ನಡ, ಕೊಂಕಣಿಗೆ ಅನುವಾದಗಳನ್ನು ಮಾಡುತ್ತಾ ಬಂದಿದ್ದಾರೆ. ಕೊಂಕಣಿಗೆ ಅನುವಾದಿಸಿದ Pascal Nazareth ಅವರ Gandhi’s Outstanding Leadership ಪುಸ್ತಕದ ಅನುವಾದಕ್ಕಾಗಿ ‘ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ’ ಪುರಸ್ಕಾರ ಲಭಿಸಿದೆ. ಕನ್ನಡದ ಓದುಗರನ್ನು ಸೆಳೆದ ಮತ್ತೆರಡು ಅನುವಾದಗಳೆಂದರೆ ರೊಆಲ್ಡ್ ದಾಹ್ಲ್ ಸಣ್ಣ ಕತೆಗಳ ಅನುವಾದ ಅನಿರೀಕ್ಷಿತ ಕಥೆಗಳು ಹಾಗೂ ಜಾಕ್ ಲಂಡನ್ನ ದಿ ಕಾಲ್ ಆಫ್ ದಿ ವೈಲ್ಡ್. ಜೆ ವಿ ಕಾರ್ಲೊ ಅವರಿಗೆ 'ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ' 2025ನೇ ಸಾಲಿನ ಗೌರವ ಪ್ರಶಸ್ತಿ ದೊರಕಿದೆ.
ಇದನ್ನೂ ಓದಿ …
ಗೂಗೆಕೊಳ್ಳದ ಸೇತುವೆಯ ಮೇಲಿನ ಪ್ರಸಂಗ
ಅಮೆರಿಕಾದ ಲೇಖಕ ಆಂಬ್ರೋಸ್ ಬಿಯರ್ಸ್ (Ambrose Bierce, 1842-1914) ಬಹುಮುಖ ಪ್ರತಿಭೆಯ ಅಮೆರಿಕಾದ ಲೇಖಕ. 1861ರಲ್ಲಿ ಸೈನ್ಯಕ್ಕೆ ಸೇರಿ ಅಂತರ್ಯುದ್ಧದಲ್ಲಿ (Americal Civil War, 1861-65) ಭಾಗವಹಿಸುತ್ತಾನೆ. 1864ರಲ್ಲಿ ಅವನು ಗಂಭೀರವಾಗಿ ಗಾಯಗೊಂಡರೂ ಕೊನೆಯವರೆಗೂ ಸೈನ್ಯದಲ್ಲೇ ಉಳಿದುಕೊಂಡು ಮೇಜರ್ ಹುದ್ದೆ ಪಡೆಯುತ್ತಾನೆ. ಸಾಹಿತ್ಯದ ಒಲವಿದ್ದು ಬಹಳಷ್ಟು ಪತ್ರಿಕೆಗಳಲ್ಲಿ ಕೆಲಸ ಮಾಡಿ ಸಂಪಾದಕನೂ ಆಗುತ್ತಾನೆ. ಅವನ ಬಹಳಷ್ಟು …



