ಅಮೆರಿಕಾದ ಲೇಖಕ ಆಂಬ್ರೋಸ್ ಬಿಯರ್ಸ್ (Ambrose Bierce, 1842-1914) ಬಹುಮುಖ ಪ್ರತಿಭೆಯ ಅಮೆರಿಕಾದ ಲೇಖಕ. 1861ರಲ್ಲಿ ಸೈನ್ಯಕ್ಕೆ ಸೇರಿ ಅಂತರ್ಯುದ್ಧದಲ್ಲಿ (Americal Civil War, 1861-65) ಭಾಗವಹಿಸುತ್ತಾನೆ. 1864ರಲ್ಲಿ ಅವನು ಗಂಭೀರವಾಗಿ ಗಾಯಗೊಂಡರೂ ಕೊನೆಯವರೆಗೂ ಸೈನ್ಯದಲ್ಲೇ ಉಳಿದುಕೊಂಡು ಮೇಜರ್ ಹುದ್ದೆ ಪಡೆಯುತ್ತಾನೆ. ಸಾಹಿತ್ಯದ ಒಲವಿದ್ದು ಬಹಳಷ್ಟು ಪತ್ರಿಕೆಗಳಲ್ಲಿ ಕೆಲಸ ಮಾಡಿ ಸಂಪಾದಕನೂ ಆಗುತ್ತಾನೆ. ಅವನ ಬಹಳಷ್ಟು ಸಣ್ಣ ಕತೆಗಳಲ್ಲಿ An Occurance at the Owl Creek Bridge ತುಂಬಾ ಜನಪ್ರಿಯವಾದ ಕತೆ.
ಬಿಯರ್ಸ್ನ ಈ ಕತೆಯನ್ನು ಓದುವ ಮುನ್ನ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಂತರ್ಯುದ್ಧದ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು ಅಗತ್ಯ. ಬಹಳಷ್ಟು ಕಾರಣಗಳಿಗಾಗಿ ಅಮೆರಿಕಾದ ಉತ್ತರ ಮತ್ತು ದಕ್ಷಿಣ ರಾಜ್ಯಗಳ ಮಧ್ಯೆ ಭಿನ್ನಮತಗಳಿದ್ದರೂ ರಿಪಬ್ಲಿಕನ್ ಪಕ್ಷದ ಅಬ್ರಹಾಂ ಲಿಂಕನ್ ಅಧ್ಯಕ್ಷನಾದ ಮೇಲೆ ಅವನ ಗುಲಾಮಿ ವಿರೋಧಿ ಧೋರಣೆಗಾಗಿ ದಕ್ಷಿಣದ ಹನ್ನೊಂದು ರಾಜ್ಯಗಳು ಬಂಡೆದ್ದು ಸಂಸ್ಥಾನದಿಂದ ಕಡಿದುಕೊಂಡು ಬೇರೆಯಾಗುತ್ತವೆ. ದಕ್ಷಿಣದ ಶ್ರೀಮಂತ ರೈತರಿಗೆ ಗುಲಾಮಗಿರಿ ಪದ್ದತಿಯನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಹೆಚ್ಚಿನ ಲಾಭವಿತ್ತು. ಹೀಗೆ ಪ್ರಾರಂಭವಾಗುತ್ತದೆ ಅಮೆರಿಕಾದ ಇತಿಹಾಸದಲ್ಲಿಯೇ ಅತ್ಯಂತ ಭೀಕರವಾದ ರಕ್ತಸಿಕ್ತ ಅಂತರ್ಯುದ್ಧ. ಹೆಚ್ಚು ಕಮ್ಮಿ 750,000 ಸೈನಿಕರು ಜೀವ ಕಳೆದುಕೊಂಡರೆ, ಸಾಮಾನ್ಯ ನಾಗರಿಕರ ಸಾವಿನ ಲೆಕ್ಕವೇ ಇಲ್ಲ. ಕೆಳಗಿನದು ಆ ಹಿನ್ನೆಲೆಯಲ್ಲಿ ಬರೆದ ಕತೆ.
1
ಉತ್ತರ ಅಲಬಾಮಾದ ಆ ರೈಲ್ವೇ ಸೇತುವೆಯ ಮೇಲೆ ಅವನು ನಿಂತಿದ್ದ. ಅವನ ದೃಷ್ಟಿ ಇಪ್ಪತ್ತು ಅಡಿ ಕೆಳಗೆ ಭೋರ್ಗರೆಯುತ್ತಿದ್ದ ನದಿಯ ನೀರಿನ ಮೇಲೆ ನೆಟ್ಟಿತ್ತು. ಅವನ ಎರಡೂ ಕೈಗಳನ್ನು ಹಿಂದಕ್ಕೆ ಬಿಗಿದು ಕಟ್ಟಲಾಗಿತ್ತು ಮತ್ತು ಅವನ ಕುತ್ತಿಗೆಯ ಸುತ್ತ ಒಂದು ಹಗ್ಗವನ್ನು ಕುಣಿಕೆ ಹಾಕಲಾಗಿತ್ತು. ಹಗ್ಗದ ಮೇಲ್ತುದಿಯನ್ನು ಸೇತುವೆಯ ಮೇಲಿನ ಅಡ್ಡ ಕಂಬಕ್ಕೆ ಕಟ್ಟಿದ್ದರೆ ಕುತ್ತಿಗೆಗೆ ಕುಣಿಕೆ ಹಾಕಿ ಉಳಿದಿದ್ದ ಹಗ್ಗ ಅವನ ಮೊಣಕಾಲಿನವರೆಗೆ ನೇತಾಡುತ್ತಿತ್ತು. ರೈಲು ಹಳಿಗಳ ಮೇಲೆ ಅವನಿಗೆ ಮತ್ತು ಅವನನ್ನು ನೇಣಿಗೇರಿಸುವವರಿಗೆ ನಿಲ್ಲಲು ಅಡ್ಡ ಹಲಗೆಗಳನ್ನು ಹಾಸಿದ್ದರು. ಈ ಕೆಲಸಕ್ಕೆಂದೇ ಇಬ್ಬರು ಫೆಡರಲ್ ಸೇನೆಯ ಸೈನಿಕರು ಮತ್ತು ಮೇಲ್ವಿಚಾರಕನನ್ನಾಗಿ ಒಬ್ಬ ಸಾರ್ಜೆಂಟ್ನನ್ನು ಹಚ್ಚಿದ್ದರು. ತುಸು ದೂರದಲ್ಲಿ, ಅದೇ ತಾತ್ಕಾಲಿಕವಾಗಿ ಹಾಸಲಾಗಿದ್ದ ಅಡ್ಡ ಹಲಗೆಯ ಮೇಲೆ ಒಬ್ಬ ಸಮವಸ್ತ್ರ ಧರಿಸಿದ್ದ ಸಶಸ್ತ್ರ ಕ್ಯಾಪ್ಟನ್ ನಿಂತಿದ್ದ. ಸೇತುವೆಯ ಎರಡೂ ತುದಿಗಳಲ್ಲಿ ಶಿಷ್ಟಾಚಾರದಂತೆ ಎಡ ಭುಜಕ್ಕೆ ನೇರವಾಗಿ ಅಂಗೈ ಆಸರೆಯಲ್ಲಿ ರೈಫಲ್ ಹಿಡಿದಿದ್ದ ಒಬ್ಬೊಬ್ಬ ಸೈನಿಕರು ಕಾವಲು ನಿಂತಿದ್ದರು. ಸೇತುವೆಯ ಮಧ್ಯ ಭಾಗದಲ್ಲಿ ಏನು ನಡೆಯುತ್ತಿದೆ ಅಥವಾ ನಡೆಯಲಿದೆ ಎನ್ನುವುದು ಅವರಿಗೆ ಕಾಣಿಸುತ್ತಿರಲಿಲ್ಲ. ಅವರಿಗೆ ಸೇತುವೆಯನ್ನು ಕಾಯುವ ಕೆಲಸಕ್ಕೆ ಹಚ್ಚಿದ್ದರು ಮತ್ತು ಅವರು ಅದನ್ನಷ್ಟೇ ನಿರ್ವಿಕಾರವಾಗಿ ಮಾಡುತ್ತಿದ್ದರು.
ಸೇತುವೆಯ ಕಾವಲಿಗೆ ನಿಂತಿದ್ದ ಸೈನಿಕರಲ್ಲಿ ಒಬ್ಬನ ತುದಿಯ ರೈಲು ಹಳಿಗಳು ಸುಮಾರು ನೂರು ಗಜಗಳವರೆಗೆ ನಿರ್ಜನವಾಗಿದ್ದು ಮುಂದಕ್ಕೆ ತಿರುವು ಪಡೆದು ಕಾಡಿನಲ್ಲಿ ಮರೆಯಾಗಿತ್ತು. ಸೇತುವೆಯ ಮತ್ತು ನದಿಯ ದಡದ ಮತ್ತೊಂದು ಬದಿ ಬಯಲು ಪ್ರದೇಶವಾಗಿತ್ತು. ಆ ತೆರೆದುಕೊಂಡಿದ್ದ ಬಯಲಿನಲ್ಲಿ ಬಹಳಷ್ಟು ಮರದ ದಿಮ್ಮಿಗಳನ್ನು ಸಾಲಾಗಿ ಒಟ್ಟಿದ್ದರು. ಅವುಗಳ ಮಧ್ಯೆ ರೈಫಲ್ ನಳಿಗೆ ಹಿಡಿಯುವಷ್ಟು ಜಾಗವಿತ್ತು. ಮತ್ತೊಂದು ಕಡೆ ಒಂದು ತೋಪಿನ ನಳಿಗೆ ಕೂರುವಷ್ಟು ಕಿಂಡಿಯನ್ನು ಬಿಟ್ಟಿದ್ದರು. ಅದರೊಳಗಿನಿಂದ ಸೇತುವೆಯ ಕಡೆಗೆ ಗುರಿ ಇಟ್ಟಿದ್ದ ತೋಪಿನ ಹಿತ್ತಾಳೆ ನಳಿಗೆ ಹೊರಗೆ ಕಾಣಿಸುತ್ತಿತ್ತು. ಸೇತುವೆಯ ಮಧ್ಯದಲ್ಲಿದ್ದ ಅವರು ನಾಲ್ವರನ್ನು ಬಿಟ್ಟರೆ ಇತ್ತ ಮರದ ದಿಮ್ಮಿಗಳು ಮತ್ತು ಸೇತುವೆಯ ಮಧ್ಯದ ತೆರೆದ ಜಾಗದಲ್ಲಿ ವಿಶ್ರಾಮ ಸ್ಥಿತಿಯಲ್ಲಿ ರೈಫಲ್ಗಳನ್ನೂರಿ ನಿಂತಿದ್ದ ಒಂದು ಸೇನಾ ತುಕಡಿ ಕಾಣಿಸುತ್ತಿತ್ತು.
ನದಿ ಹರಿಯುತ್ತಿದ್ದ ದಿಕ್ಕಿಗೆ ಮುಖ ಮಾಡಿ ನಿಂತಿದ್ದ ಆ ಸೈನಿಕರು ನದಿಯ ದಡದಲ್ಲಿ ನಿಲ್ಲಿಸಿದ್ದ ಮೂರ್ತಿಗಳಂತೆ ಕಾಣಿಸುತ್ತಿದ್ದರು. ಆ ಕಾಲ್ದಳದ ತುಕಡಿಯ ಕ್ಯಾಪ್ಟನ್ ಅವರ ಮೇಲೆ ನಿಗಾ ಇರಿಸಿ ನಿಂತುಕೊಂಡಂತೆ ಕಾಣಿಸುತ್ತಿದ್ದರೂ ಕೂಡ ಅವನೂ ನಿಶ್ಚಲ ಮೂರ್ತಿಯಂತೆ ನಿಂತಿದ್ದ. ಸಾವು ಎನ್ನುವುದು ಖಚಿತವಾಗಿರುವಾಗ ಅದಕ್ಕೆ ರಾಜ ಮರ್ಯಾದೆ ಕೊಡುವುದು ಸೇನಾ ಸಂಪ್ರದಾಯವಾಗಿತ್ತು. ಅವರು ಆ ಗಳಿಗೆಗೆ ಕಾಯುತ್ತಾ ನಿಂತಿದ್ದರು.
ನೇಣಿಗೇರಿಸಲಾಗುತ್ತಿದ್ದ ವ್ಯಕ್ತಿಯ ವಯಸ್ಸು ಸುಮಾರು ಮುವ್ವತ್ತೈದಾಗಿತ್ತು. ಅವನ ದಿರಿಸು ನೋಡಿದರೆ ಅನುಕೂಲಸ್ಥ ಜಮೀನುದಾರರಂತೆ ಕಾಣಿಸುತ್ತಿತ್ತು. ದೈಹಿಕವಾಗಿ ಸಧೃಡನಾಗಿದ್ದು ಸ್ಪುರದ್ರೂಪಿಯಾಗಿದ್ದ. ತನ್ನ ಕಪ್ಪು ಕೂದಲನ್ನು ಹಿಂದಕ್ಕೆ ಬಾಚಿದ್ದ. ಅವನ ಮುಖ ಗಡ್ಡ ಮೀಸೆಗಳಿಂದ ಕಂಗೊಳಿಸುತ್ತಿತ್ತು. ಅವನ ಕುತ್ತಿಗೆಗೆ ನೇಣಿನ ಕುಣಿಕೆ ತೊಡಿಸಿದ್ದರೂ ಅವನು ಶಾಂತಚಿತ್ತನಾಗಿದ್ದ. ಅವನು ನೇಣಿಗೇರಿಸುವಂಥ ಅಪರಾಧಿಯಂತೆ ಕಾಣಿಸುತ್ತಿರಲಿಲ್ಲವಾದರೂ ಸೇನಾ ನಿಯಮಗಳಲ್ಲಿ ಸಭ್ಯಸ್ಥರಿಗೆ ನೇಣಿಗೇರಿಸಬಾರದೆಂಬ ನಿಯಮವೇನೂ ಇರಲಿಲ್ಲ.
ನೇಣಿಗೇರಿಸುವ ತಯಾರಿ ಮುಗಿಯುತ್ತಿದ್ದಂತೆ, ಆ ಇಬ್ಬರು ಸೈನಿಕರು ಪಕ್ಕಕ್ಕೆ ಸರಿದು ರೈಲು ಕಂಬಿಗಳ ಮೇಲೆ ಅವರು ನಿಲ್ಲಲು ಹಾಸಿದ್ದ ಹಲಗೆಯನ್ನು ತೆಗೆದರು. ಸೈನಿಕರ ಕೆಲಸ ಮುಗಿಯುತ್ತಿದ್ದಂತೆ, ಮೇಲ್ವಿಚಾರಣೆ ನಡೆಸುತ್ತಿದ್ದ ಸಾರ್ಜೆಂಟ್, ಕ್ಯಾಪ್ಟನನ ಕಡೆಗೆ ತಿರುಗಿ ಸೇನಾ ಶೈಲಿಯಲ್ಲಿ ಸೆಲ್ಯೂಟ್ ಹೊಡೆದು ಮುಂದಕ್ಕೆ ಸಾಗಿ ಕ್ಯಾಪ್ಟನ್ ನಿಂತಿದ್ದ ಹಲಗೆಯ ಹಿಂಭಾದಲ್ಲಿ ಹೋಗಿ ನಿಂತುಕೊಂಡ. ಕ್ಯಾಪ್ಟನ್ ತಕ್ಷಣ ಪಕ್ಕಕ್ಕೆ ಸರಿದ. ಈಗ ಆ ಹಲಗೆಯ ಒಂದು ತುದಿಯಲ್ಲಿ ನೇಣಿಗೇರಿಸಲು ಸಿದ್ಧನಾಗಿದ್ದ ಆ ವ್ಯಕ್ತಿ ಮತ್ತು ಮತ್ತೊಂದು ತುದಿಯಲ್ಲಿ ಸಾರ್ಜೆಂಟ್ ನಿಂತಿದ್ದರು. ಹಲಗೆಯನ್ನು ರೈಲು ಸೇತುವೆಯ ಮಧ್ಯದ ಮೂರು ಮೂರು ಅಡ್ಡ ತೊಲೆಗಳ ಮೇಲೆ ಹಾಸಿದ್ದರು. ನೇಣಿಗೇರುತ್ತಿರುವ ವ್ಯಕ್ತಿಯ ಮತ್ತು ಸಾರ್ಜೆಂಟನ ಭಾರದ ಸಮತೋಲನದಿಂದ ಹಲಗೆಯು, ನದಿಗೆ ಮಗುಚಿ ಬೀಳದಂತೆ ಧೃಡವಾಗಿ ನಿಂತಿತ್ತು. ಕ್ಯಾಪ್ಟನ್ ಸನ್ನೆ ಮಾಡುತ್ತಿದ್ದಂತೆ ಸಾರ್ಜೆಂಟ್ ಹಲಗೆಯಿಂದ ಪಕ್ಕಕ್ಕೆ ಸರಿದು ನೇಣಿಗೇರುತ್ತಿರುವವನ ಭಾರದಿಂದ ಕೆಳಗೆ ಕುಸಿಯುತ್ತಿದ್ದಂತೆ ಅವನ ಕುತ್ತಿಗೆಗೆ ನೇಣು ಬಿಗಿಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದೊಂದು ತುಂಬಾ ಸರಳವಾದ ವ್ಯವಸ್ಥೆಯಾಗಿತ್ತು. ಕೈದಿಯ ಮುಖವನ್ನಾಗಲೀ ಅವನ ಕಣ್ಣುಗಳನ್ನಾಗಲೀ ಮುಚ್ಚಿರಲಿಲ್ಲ. ಕೈದಿ ತಾನು ನಿಂತಿರುವ ಬಳುಕಾಡುತ್ತಿರುವ ಹಲಗೆಯ ಮೇಲೆ ತುಸು ಹೊತ್ತು ಕಣ್ಣು ಹಾಯಿಸಿದ. ಹಾಗೆಯೇ ಅವನ ಕಾಲ ಕೆಳಗೆ ಹರಿಯುತ್ತಿರುವ ನದಿಯ ಮೇಲೆಯೂ ಕಣ್ಣಾಡಿಸಿದ.
ನೀರಿನಲ್ಲಿ ಮುಳುಗೆದ್ದು ತೇಲುತ್ತಾ ಹೋಗುತ್ತಿದ್ದ ಒಂದು ಮರದ ತುಂಡು ಅವನ ಕಣ್ಣಿಗೆ ಬಿತ್ತು. ಹಾಗೆಯೇ ಅವನ ದೃಷ್ಟಿ ಮರದ ತುಂಡನ್ನು ಹಿಂಬಾಲಿಸುತ್ತಾ ಮುಂದಕ್ಕೆ ಹೋಯಿತು. ಮರದ ತುಂಡು ತುಂಬಾ ನಿಧಾನವಾಗಿ ತೇಲುತ್ತಿರುವಂತೆ ಕಾಣಿಸುತ್ತಿತ್ತು. ಮತ್ತು ನೀರು ಕೂಡ ಆಲಸ್ಯವೇ ಮೈವೆತ್ತಂತೆ ಹರಿಯುತ್ತಿತ್ತು. ಆಗ ತಾನೆ ಮೇಲೇರುತ್ತಿದ್ದ ಸೂರ್ಯ ನೀರಿನ ಮೇಲೆ ಬಂಗಾರದ ಛಾಯೆಯನ್ನು ಹರಡಿದ್ದ. ದೂರದಲ್ಲಿ ನದಿಯ ಇಕ್ಕೆಲಗಳಲ್ಲಿ ಬೆಳಗಿನ ಮಂಜು ಮೇಲೇರುತ್ತಿತ್ತು. ದಡದಲ್ಲಿದ್ದ ಮರಗಳು ಮಂಜಿನಿಂದ ತೊಯ್ದು ತಮ್ಮ ಆಸ್ತಿತ್ವವನ್ನು ತೋರಿಸಲು ಹೆಣಗುತ್ತಿದ್ದವು. ತೇಲಿ ಹೋಗುತ್ತಿರುವ ಮರದ ತುಂಡು ಅವನ ಏಕಾಗ್ರತೆಯನ್ನು ಭಗ್ನಗೊಳಿಸಿತ್ತಾದರೂ ಕೊನೆಯ ಭಾರಿ ಅವನು ತನ್ನ ಹೆಂಡತಿ ಮಕ್ಕಳ ಚಿತ್ರಗಳನ್ನು ಮನೋಪಟಲದ ಮೇಲೆ ಮೂಡಿಸಲು ಯಶಸ್ವಿಯಾದ. ಈ ಮಧ್ಯೆ ಮತ್ತೊಂದು ಶಬ್ಧ ಅವನ ಏಕಾಗ್ರತೆಯನ್ನು ಭಂಗಗೊಳಿಸತೊಡಗಿತು. ಅದು ಕಮ್ಮಾರನು ಕಬ್ಬಿಣ ಬಡಿಯುತ್ತಿರುವ ಸದ್ದಿನಂತಿತ್ತು. ಅದು ಯಾವುದರ ಸದ್ದಿರಬಹುದೆಂದು ಅವನು ಯೋಚಿಸತೊಡಗಿದ. ಆ ಶಬ್ಧ ಹತ್ತಿರದಿಂದ ಬರುತ್ತಿದೆಯೋ ಇಲ್ಲ ದೂರದಿಂದಲೋ ಎನ್ನುವುದು ನಿಖರವಾಗಿ ಹೇಳುವಂತಿರಲಿಲ್ಲವಾದರೂ ಅದು ಅವನಿಗೆ ಕಿರಿಕಿರಿಗೊಳಿಸತೊಡಗಿತು. ಅದು ಚರ್ಚಿನಲ್ಲಿ ಮರಣವನ್ನು ಸಾರುವ ಗಂಟೆಯ ನಾದದಂತಿತ್ತು. ಒಂದೊಂದು ಸುತ್ತಿಗೆಯ ಪೆಟ್ಟನ್ನೂ ಅವನು ಆತಂಕದಿಂದ ಎದುರುನೋಡತೊಡಗಿದ. ಕಮ್ಮಾರನ ಸುತ್ತಿಗೆಯ ಬಡಿತಗಳ ಮಧ್ಯದ ಅವಧಿಯು ದೀರ್ಘವಾದಂತೆ ಅದರ ಶಬ್ಧದ ತೀವ್ರತೆಯೂ ಹೆಚ್ಚಾಗುತ್ತಾ ಅವನ ಕಿವಿಗಳನ್ನು ತೀಕ್ಷ್ಣವಾಗಿ ಘಾಸಿಗೊಳಿಸತೊಡಗಿತು. ಅವನಿಗೆ ಜೋರಾಗಿ ಕಿರುಚಬೇಕೆನಿಸಿತು. ಆದರೆ ನಿಜವಾದ ಸಂಗತಿ ಏನೆಂದರೆ ಕಮ್ಮಾರ ಕಬ್ಬಿಣ ಬಡಿಯುತ್ತಿರುವಂತೆ ಕೇಳಿಸುತ್ತಿದ್ದ ಸದ್ದು ಅವನ ಗಡಿಯಾರದಾಗಿತ್ತು!
ಅವನು ಮುಚ್ಚಿದ್ದ ಕಣ್ಣುಗಳನ್ನು ತೆರೆದು ಕೆಳಗೆ ನೋಡಿದ.
ಒಂದು ವೇಳೆ ತನ್ನ ಕೈಗಳಿಗೆ ಕಟ್ಟಿದ ಹಗ್ಗವನ್ನು ಬಿಡಿಸಿಕೊಳ್ಳಲು ತಾನು ಶಕ್ತನಾದರೆ ಕುತ್ತಿಗೆಗೆ ಕಟ್ಟಿರುವ ಕುಣಿಕೆಯಿಂದ ಬಿಡಿಸಿಕೊಳ್ಳಲು ಏನೇನೂ ಕಷ್ಟವಾಗಲಾರದು. ಸೈನಿಕರು ಜಾಗೃತರಾಗುವ ಮುನ್ನವೇ ತಾನು ಕೆಳಗೆ ನದಿಗೆ ಧುಮುಕಬಹುದು. ನೀರಿನೊಳಗೆ ಈಜುತ್ತಾ ಗುಂಡುಗಳಿಂದ ಹೇಗೋ ಬಚಾವಾಗಬಹುದು! ಈಜುವುದರಲ್ಲಿ ಅವನು ನಿಷ್ಣಾತನಾಗಿದ್ದ. ಆಚೆ ದಡವನ್ನು ತಲುಪಲು ಎಷ್ಟು ಹೊತ್ತು ಹಿಡಿಯಬಹುದು? ಆಚೆ ದಟ್ಟ ಕಾಡಿತ್ತು. ಕಾಡಿನೊಳಗೆ ಹೇಗಾದರೂ ಅವರನ್ನು ತಪ್ಪಿಸಿಕೊಂಡು ಮನೆಗೆ ತಲುಪಬಹುದು. ತನ್ನ ಮನೆ ಹೇಗೂ ಅವರ ಸೇನಾ ತುಕಡಿಯ ಪರಿಧಿಯ ಹೊರಗಿದೆ. ನಾನು ಹೇಗಾದರೂ ಮನೆಗೆ ತಲುಪಿದರೆ ತಾನು, ತನ್ನ ಮಡದಿ ಮತ್ತು ಮಕ್ಕಳು ಸುರಕ್ಷಿತರಾಗಬಹುದು.. ಹೀಗೆ ಅವನ ತಲೆಯೊಳಗೆ ಯೋಚನೆಗಳು ಸುತ್ತುತ್ತಿದ್ದವು...
ಕ್ಯಾಪ್ಟನ್ ಸನ್ನೆ ಮಾಡುತ್ತಿದ್ದಂತೆ ಹಲಗೆಯ ಮೇಲೆ ನಿಂತಿದ್ದ ಸಾರ್ಜೆಂಟ್ ಬದಿಗೆ ಸರಿದ.
2
ಪೇಟನ್ ಫಾರ್ಕ್ವಾರ್ ಅಲಬಾಮಾದ ಒಂದು ಪ್ರತಿಷ್ಠಿತ ಕುಟುಂಬದ ಶ್ರೀಮಂತ ಜಮೀನ್ದಾರನಾಗಿದ್ದ. ಸಾಮಾನ್ಯವಾಗಿ ಅಮೆರಿಕಾದ ದಕ್ಷಿಣ ಪ್ರಾಂತ್ಯದ ಎಲ್ಲಾ ಜಮೀನುದಾರರಂತೆ ಅವನಲ್ಲೂ ಕೂಡ ತುಂಬಾ ಜನ ಗುಲಾಮರು ದುಡಿಯುತ್ತಿದ್ದರು ಮತ್ತು ಸಹಜವಾಗಿ ಅವನು ದಕ್ಷಿಣ ಪ್ರಾಂತ್ಯದ ಎಲ್ಲಾ ಜಮೀನುದಾರರಂತೆ ಗುಲಾಮೀ ನಿಷೇಧ ಕಾನೂನಿಗೆ ವಿರುದ್ಧವಾಗಿದ್ದು ಬಂಡುಕೋರ ಸೈನ್ಯಕ್ಕೆ ಸೇರಿರದಿದ್ದರೂ ಅದಕ್ಕೆ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಲಿದ್ದ. ಮಿಸಿಸಿಪಿಯ ಕೊರಿಂಥ್ ಯುದ್ಧದಲ್ಲಿ ದಕ್ಷಿಣದವರ ಬಂಡುಕೋರ ಸೈನ್ಯ ಕೆಟ್ಟ ರೀತಿಯಲ್ಲಿ ಸೋಲನ್ನಪ್ಪಿತ್ತು. ಫಾರ್ಕ್ವಾರ್ನಿಗೆ ಈ ಸೋಲನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. ಪ್ರತಿಕಾರದ ಬೆಂಕಿ ಅವನೊಳಗೆ ಧಗಧಗಿಸುತ್ತಲೇ ಇತ್ತು. ಅವನು ಸೂಕ್ತ ಸಂದರ್ಭಕ್ಕೆ ಕಾಯುತ್ತಲಿದ್ದ. ಯುದ್ಧದ ಸಂದರ್ಭದಲ್ಲಿ ಅಂತಹ ಸಂದರ್ಭಗಳು ಆಗಾಗ ಒದಗಿ ಬರುತ್ತಲೇ ಇದ್ದವು. ತನ್ನ ಕೈಲಾದ ಸೇವೆಯನ್ನು ಅವನು ಮಾಡುತ್ತಲೇ ಇದ್ದ. ದಕ್ಷಿಣ ಪ್ರಾಂತ್ಯದ ಬಂಡುಕೋರ ಸೈನ್ಯಕ್ಕೆ ಸಹಾಯ ಮಾಡುವ ಸಣ್ಣಪುಟ್ಟ ಕೆಲಸಗಳನ್ನೂ ಕೂಡ ಅವನು ಅವು ನಿಕೃಷ್ಟವೆಂದಾಗಲೀ ಅಥವಾ ಅಪಾಯಕಾರಿ ಎಂದಾಗಲೀ ಭಾವಿಸುತ್ತಿರಲಿಲ್ಲ. ಅವನು ಯೋಧನಲ್ಲದಿದ್ದರೂ ಪ್ರವೃತ್ತಿಯಿಂದ ಅವನ ಗುಂಡಿಗೆ ಯೋಧನದಾಗಿತ್ತು. ಯುದ್ಧ ಮತ್ತು ಪ್ರೇಮದೊಳಗೆ ಯಾವುದೂ ನಿಷಿದ್ಧವಲ್ಲವೆನ್ನುವಂತೆ ಅವನು ಯಾವುದೇ ಕೆಲಸಕ್ಕೂ ಹಿಂದೆ ಮುಂದೆ ನೋಡದೆ ತಯಾರಾಗಿರುತ್ತಿದ್ದ.
ಒಂದು ಸಂಜೆ ಫಾರ್ಕ್ವಾರ್ ಮತ್ತು ಅವನ ಮಡದಿ ಹೂದೋಟದಲ್ಲಿದ್ದ ಒಂದು ಮರದ ಕೆಳಗಿನ ಬೆಂಚಿನ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದರು. ಅಷ್ಟರಲ್ಲಿ ಬೂದು ಬಣ್ಣದ ಸಮವಸ್ತ್ರ ಧರಿಸಿದ್ದ ದಕ್ಷಿಣದ ಸೈನಿಕನೊಬ್ಬ ಅವರ ಮನೆಯ ಗೇಟಿನ ಎದುರು ಪ್ರತ್ಯಕ್ಷನಾಗಿ ಕುಡಿಯಲು ನೀರು ಕೇಳಿದ. ನೀರು ತಂದು ಕೊಡಲೆಂದು ಫಾರ್ಕ್ವಾರ್ನ ಮಡದಿ ಎದ್ದು ಒಳಗೆ ಹೋದಳು. ಆವಳು ಹೋಗುತ್ತಿದ್ದಂತೆ ಫಾರ್ಕ್ವಾರ್ ಎದ್ದು ಗೇಟಿನ ಬಳಿಗೆ ಹೋಗಿ ಆ ಯೋಧನೊಡನೆ ಯುದ್ದಧ ಕುರಿತು ಮಾತನಾಡತೊಡಗಿದ.
“ಯಾಂಕೀ1 ಸೇನೆ ಗೂಗೆಕೊಳ್ಳದ ರೈಲು ಮಾರ್ಗವನ್ನು ದುರಸ್ತಿಗೊಳಿಸುತ್ತಿದೆ. ಗೂಗೆಕೊಳ್ಳದ ಮೇಲಿನ ಸೇತುವೆಯನ್ನು ಈಗಾಗಲೇ ದುರಸ್ತಿಗೊಳಿಸಿ ಮುಗಿಸಿರಬೇಕು ಮತ್ತು ಸೇತುವೆಯ ಉತ್ತರದಲ್ಲಿ ಶಸ್ತ್ರಾಗಾರವನ್ನೂ ನಿರ್ಮಿಸಿದ್ದಾರೆ. ರೈಲು ರಸ್ತೆ, ಕೊಳ್ಳದ ಮೇಲಿನ ಸೇತುವೆ ಮತ್ತು ರೈಲು ಸುರಂಗಕ್ಕೆ ಹಾನಿಗೊಳಿಸುವವರನ್ನು ನೇಣಿಗೇರಿಸಲಾಗುವುದೆಂದು ಯಾಂಕೀಗಳ ಕಮಾಂಡರ್ ಆಜ್ಞೆಯನ್ನು ಹೊರಡಿಸಿದ್ದಾನೆ. ಅದನ್ನು ನಾನು ನನ್ನ ಸ್ವತಃ ಕಣ್ಣುಗಳಿಂದ ಓದಿದ್ದೇನೆ.”
“ಗೂಗೆಕೊಳ್ಳದ ಮೇಲಿನ ಸೇತುವೆ ಇಲ್ಲಿಂದ ಎಷ್ಟು ದೂರದಲ್ಲಿದೆ?” ಫಾರ್ಕ್ವಾರ್ ಕುತೂಹಲದಿಂದ ಕೇಳಿದ.
“ಮುವ್ವತ್ತು ಮೈಲು.” ಆ ಸೈನಿಕ ಉತ್ತರಿಸಿದ.
“ಕೊಳ್ಳದ ಈಚೆ ಬದಿಯಲ್ಲಿ ಕಾವಲು ವ್ಯವಸ್ಥೆ ಹೇಗಿದೆ?”
“ಕೊಳ್ಳದ ಈಚೆ ಬದಿಯಲ್ಲಿ ಒಂದು ಅಡ್ಡ ಬೇಲಿಯನ್ನು ಹಾಕಿದ್ದಾರೆ ಮತ್ತು ಒಬ್ಬನೇ ಒಬ್ಬ ಸೈನಿಕ ಅಲ್ಲಿ ಗಸ್ತು ತಿರುಗುತ್ತಿದ್ದಾನೆ.”
“ಒಂದು ವೇಳೆ ನೇಣಿಗೆ ಹೆದರದ ಒಬ್ಬ ಸಾಮಾನ್ಯ ಮನುಷ್ಯ ಕಾವಲುಗಾರನ ಕಣ್ತಪ್ಪಿಸಿ ಒಳಗೆ ಹೋಗಿ ಏನು ಮಾಡಬಹುದು?” ಫಾರ್ಕ್ವಾರ್ನ ಕಣ್ಣುಗಳು ಹೊಳೆಯುತ್ತಿದ್ದವು.
ಆ ಸೈನಿಕ ಯೋಚನಾಮಗ್ನನಾದ.
“ನನಗೆ ಗೊತ್ತಿಲ್ಲ! ನಾನು ಅಲ್ಲಿಗೆ ಒಂದು ತಿಂಗಳ ಹಿಂದೆ ಹೋಗಿದ್ದೆ. ಸೇತುವೆಯ ಕೆಳಗಿನ ಕಂಬಗಳ ಬುಡದಲ್ಲಿ ಹಿಂದಿನ ವರ್ಷದ ನೆರೆಗೆ ತೇಲಿ ಬಂದಿದ್ದ ಮರದ ತುಂಡುಗಳ ಒಂದು ದೊಡ್ಡ ರಾಶಿ ಬಿದ್ದಿತ್ತು. ಅವು ಇನ್ನೂ ಅಲ್ಲೇ ಇದ್ದರೆ ಈಗ ಚೆನ್ನಾಗಿ ಒಣಗಿರಬೇಕು. ಅವುಗಳಿಗೇನಾದರೂ ಬೆಂಕಿ ಇಟ್ಟರೆ...” ಅವನು ಹೇಳತೊಡಗಿದ.
ಅಷ್ಟರಲ್ಲಿ ಫಾರ್ಕ್ವಾರ್ನ ಮಡದಿ ನೀರು ತೆಗೆದುಕೊಂಡು ಬಂದಳು. ನೀರು ಕುಡಿಯುತ್ತಲೇ ಆ ಸೈನಿಕ ಅವರನ್ನು ವಂದಿಸಿ ಅಲ್ಲಿಂದ ಮುಂದಕ್ಕೆ ಹೊರಟು ಹೋದ. ಅದೇ ಸೈನಿಕ ಸಂಜೆ ಮತ್ತೆ ಹಿಂದಿರುಗಿ ಬರುತ್ತಿದ್ದುದ್ದನ್ನು ಅವರು ನೋಡಿದರು. ವಾಸ್ತವವಾಗಿ ಅವನು ಬಂಡುಕೋರ ಸೈನಿಕನಾಗಿರದೆ ಫೆಡರಲ್ ಸೇನೆಯ ಮಾಹಿತಿದಾರನಾಗಿದ್ದ!
3
ಪೇಟನ್ ಫಾರ್ಕ್ವಾರ್ ನಿಂತುಕೊಂಡಿದ್ದ ಹಲಗೆಯ ಸಮೇತ ಸೇತುವೆಯ ಮೇಲಿನಿಂದ ಕೆಳಗೆ ಬೀಳುತ್ತಿದ್ದಂತೆ ಅವನು ಪ್ರಜ್ಞಾಶೂನ್ಯನಾದ. ಎಷ್ಟೋ ಶತಮಾನಗಳ ನಂತರ ಅವನಿಗೆ ಪ್ರಜ್ಞೆ ಮರುಕಳಿಸಿದ ಅನುಭವವಾಯಿತು. ಅವನ ಕುತ್ತಿಗೆ ಬಿಗಿದುಕೊಂಡು ಉಸಿರು ಎಳೆದುಕೊಳ್ಳಲಾಗದೆ ವೇದನೆ ಅನುಭವಿಸತೊಡಗಿದ. ಕುತ್ತಿಗೆಯಿಂದ ಕಾಲಿನ ಬೆರಳುಗಳವರೆಗೆ ಈ ಹಿಂದೆ ಅನುಭವಿಸಲಾರದಂತ ಭಯಾನಕ ನೋವು ಮತ್ತು ಉರಿ ಏಳಲಾರಂಭಿಸಿತು. ಅದು ಶಮನವಾಗುವಂತೆ ಕಾಣಿಸುತ್ತಿರಲಿಲ್ಲ. ಮತ್ತೂ ಜಾಸ್ತಿಯಾಗುತ್ತಲೇ ಇತ್ತು. ಅವನ ತಲೆ ಗಾಳಿ ತುಂಬಿಸುತ್ತಿರುವ ಬಲೂನಿನ ಹಾಗೆ ಉಬ್ಬುತ್ತಾ ಇನ್ನೇನು ಒಡೆದೇ ಹೋಗುತ್ತಿರುವಂತೆ ಭಾಸವಾಗತೊಡಗಿತು. ಈಗಾಗಲೇ ಅವನು ತನ್ನ ಯೋಚನಾ ಶಕ್ತಿಯನ್ನು ಕಳೆದುಕೊಂಡಿದ್ದು ಸಂವೇದನಾ ಶಕ್ತಿಯೊಂದು ಮಾತ್ರ ಜೀವಂತವಾಗಿತ್ತು. ಅದು ಭಯಾನಕವಾಗಿತ್ತು. ಅವನೊಂದು ಹೊಳೆಯುತ್ತಿರುವ ಮೋಡದೊಳಗೆ ಬಂಧಿಯಾಗಿದ್ದು ಲೋಲಕದಂತೆ ತೂಗಾಡುತ್ತಿದ್ದ. ಒಮ್ಮೆಲೇ ಅವನ ಸುತ್ತ ಆವರಿಸಿದ್ದ ಪ್ರಜ್ವಲಿಸುತ್ತಿದ್ದ ಮೋಡ ಭಯಾನಕ ಸದ್ದಿನೊಂದಿಗೆ ಮೇಲೇರತೊಡಗಿತು ಮತ್ತು ಕೆಳಗೆ ನೀರಿನ ಮೇಲೆ ಏನೋ ಅಪ್ಪಳಿಸಿದಂಥ ಶಬ್ದಕ್ಕೆ ಅವನ ಕಿವಿಗಳು ಕಿವುಡಾಗಿ ಅಂಧಕಾರ ಕವಿಯಿತು. ಅವನಿಗೆ ಚಳಿಯಾಗಲು ಶುರುವಾದಂತೆ ಅವನ ಯೋಚನಾ ಶಕ್ತಿ ಮರುಕಳಿಸಿತು. ಅವನ ಕುತ್ತಿಗೆಗೆ ಕಟ್ಟಿದ್ದ ಹಗ್ಗ ತುಂಡಾಗಿ ಅವನು ಕೆಳಗೆ ನದಿಗೆ ಬಿದ್ದಿದ್ದ. ಅವನ ಕುತ್ತಿಗೆಗೆ ಬಿಗಿದಿದ್ದ ಹಗ್ಗ ಹಾಗೇ ಇದ್ದುದ್ದರಿಂದ ಅವನ ಶ್ವಾಸಕೋಶಗಳಲ್ಲಿ ನೀರು ತುಂಬಿರಲಿಲ್ಲವಾದರೂ ಅವನು ಮುಳುಗುತ್ತಿದ್ದ. ನೀರಿನ ಕೆಳಗೆ ನೇಣು ಬಿಗಿದುಕೊಂಡು ಸಾಯುವುದು ಹಾಸ್ಯಾಸ್ಪದ ಎಂದು ಅವನಿಗನ್ನಿಸಿತು.
ಕಣ್ಣು ತೆರೆದ. ಎಲ್ಲೋ ದೂರದಲ್ಲಿ ಒಂದು ಬೆಳಕಿನ ಕಿರಣ ಕಾಣಿಸಿತು. ಆದರೂ ಅವನು ಮುಳುಗುತ್ತಲೇ ಇದ್ದ. ಅವನಿಗೆ ಕಾಣಿಸುತ್ತಿದ್ದ ಬೆಳಕಿನ ಕಿರಣ ಕ್ರಮೇಣ ಮಾಸುತ್ತಾ ಹೋಗಿ ಒಂದು ಸಣ್ಣ ಬಿಂದು ಮಾತ್ರ ಉಳಿದುಕೊಂಡಿತು. ಸ್ವಲ್ಪ ಹೊತ್ತಿನ ಬಳಿಗೆ ಆ ಬಿಂದು ದೊಡ್ಡದಾಗುತ್ತಾ ಪ್ರಕಾಶಮಾನವಾಗುತ್ತಿದ್ದಂತೆ ಅವನಿಗೆ ತಾನು ನೀರಿನ ಮೇಲೇರುತ್ತಿರುವಂತೆ ಭಾಸವಾಗತೊಡಗಿತು. ಅವನು ಅನುಭವಿಸುತ್ತಿದ್ದ ಬಿಗಿತ ಸಡಿಲವಾಗುತ್ತಿರುವಂತೆ ಕಾಣಿಸತೊಡಗಿತು. ‘ವೈರಿ ಸೈನಿಕರಿಂದ ಗುಂಡು ಹೊಡೆಸಿ ಸಾಯುವುದಕ್ಕಿಂತ, ನೇಣು ಬಿಗಿಸಿಕೊಂಡಿದ್ದರೂ ನೀರಿನಲ್ಲಿ ಮುಳುಗಿ ಸಾಯುವುದು ಎಷ್ಟೋ ವಾಸಿ.’ ಎಂದು ಅವನಿಗನಿಸಿತು. ಹಾಗಾಗಲು ತಾನು ಅಸ್ಪದ ಕೊಡಲಾರೆ ಎಂದು ಅವನು ನಿರ್ಧರಿಸಿದ.
ಅವನು ಹೆಚ್ಚು ಶ್ರಮಪಟ್ಟಿರಲಿಲ್ಲವಾದರೂ ಅವನ ಮುಂಗೈಗಳು ಕಠಿಣವಾಗಿ ನೋಯುತ್ತಿದ್ದವು. ಅವನು ಮುಂಗೈಗಳಿಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿಕೊಳ್ಳಲು ಅಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತಲೇ ಇದ್ದ. ಅವನು ತನ್ನ ಸಂಪೂರ್ಣ ಪ್ರಜ್ಞೆಯನ್ನುಆ ಕಡೆಗೇ ಹರಿಸಿದ್ದ. ಕೊನೆಗೂ ಹಗ್ಗ ಜಾರಿ ನೀರಿನೊಳಗೆ ಬಿತ್ತು. ಅವನ ಕೈಗಳು ಬಂಧಮುಕ್ತವಾಗಿ ಅವನು ನೀರಿನ ಮೇಲೆ ಈಜತೊಡಗಿದ. ಅವನು ಮೊಟ್ಟ ಮೊದಲ ಭಾರಿ ಎನ್ನುವಂತೆ ಆಶ್ಚರ್ಯದಿಂದ ತನ್ನ ಒಂದೊಂದೇ ಕೈಯನ್ನು ನೋಡತೊಡಗಿದ. ನಂತರ ಹೆಚ್ಚು ಕಾಲ ವ್ಯಯ ಮಾಡದೆ ತನ್ನ ಕುತ್ತಿಗೆಗೆ ಕಟ್ಟಿದ್ದ ನೇಣಿನ ಹಗ್ಗವನ್ನು ಬಿಡಿಸಿ ಎಸೆದ. ಅದು ನೀರಾವಿನಂತೆ ಬಳುಕುತ್ತಾ ಮುಳುಗತೊಡಗಿತು.
ನೇಣಿನ ಕುಣಿಕೆ ಬಿಚ್ಚುತ್ತಲೇ ಅವನ ಕತ್ತು, ಕಿವಿಗಳು, ಕಣ್ಣುಗಳು ಮತ್ತು ಹೃದಯ ಎಷ್ಟೊಂದು ಅಗಾಧ ನೋವು ಮತ್ತು ಉರಿಯಿಂದ ಯಾತನೆ ಕೊಡಲಾರಂಬಿಸಿತ್ತೆಂದರೆ ಅವನಿಗರಿವಿಲ್ಲದಂತೆಯೇ ಕಿರುಚತೊಡಗಿದ, “ಅದನ್ನು ಮತ್ತೆ ಸಿಕ್ಕಿಸಿಕೋ, ಮತ್ತೆ ಸಿಕ್ಕಿಸಿಕೋ!.” ಆ ಯಾತನೆಗಿಂತ ನೇಣಿನಿಂದ ಉಸಿರುಗಟ್ಟಿ ಸಾಯುವುದೇ ಮೇಲೆಂದು ಅವನಿಗನಿಸಿತು. ಅವನ ಹೃದಯ ಬಾಯಿಗೆ ನುಗ್ಗಿ ಬಂದು ಹೊರಕ್ಕೆ ಹಾರಲು ಹವಣಿಸುತ್ತಿರುವಂತೆ ಭಾಸವಾಗತೊಡಗಿತು. ಆದರೆ, ಇದಾವುದರ ಪರಿವೆಯೇ ಇಲ್ಲದೆ ಅವನ ಕೈಗಳು ತನ್ನ ದೇಹದೊಳಗಿನ ಶಕ್ತಿಯನ್ನೆಲ್ಲಾ ಕ್ರೋಡೀಕರಿಸಿ ತಳದಿಂದ ಮೇಲೇರಲು ನೀರನ್ನು ಬಗೆಯುತ್ತಿದ್ದವು.
ತಲೆ ನೀರಿನ ಮೇಲೆ ಬರುತ್ತಿದ್ದಂತೆ ಸೂರ್ಯನ ಪ್ರಖರ ಬೆಳಕಿಗೆ ಅವನ ಕಣ್ಣುಗಳು ಕೆಲವು ಕ್ಷಣಕ್ಕೆ ಕುರುಡಾದವು. ಅವನ ಎದೆ ವಿಸ್ತಾರಗೊಂಡಿತು ಮತ್ತು ಶ್ವಾಸಕೋಶಗಳು ಸರಸರನೆ ಗಾಳಿಯನ್ನು ಹೀರುತ್ತಾ ಹೊರಗೆ ದೂಡಲಾರಂಬಿಸಿದವು. ಆವನು ಈಗ ದೈಹಿಕವಾಗಿ ಸಂಪೂರ್ಣವಾಗಿ ಜಾಗೃತನಾಗಿದ್ದ.
ಅವನ ಮುಖಕ್ಕೆ ರಾಚುತ್ತಿದ್ದ ನೀರಿನ ಅಲೆಗಳ ತೀವ್ರತೆ ಮತ್ತು ಬೇರೆಬೇರೆ ಶಬ್ದಗಳ ಅನುಭವ ಅವನಿಗಾಗತೊಡಗಿತು. ಅವನ ದೃಷ್ಟಿ ನದಿಯ ಇಕ್ಕೆಲಗಳಲ್ಲಿ ಹಬ್ಬಿದ್ದ ದಟ್ಟ ಕಾಡಿನ ಮೇಲೆ, ಅದೂ ಪ್ರತ್ಯೇಕವಾಗಿ ಮರಗಳ ಮೇಲೆ, ಅವುಗಳ ಎಲೆಗಳ ಮೇಲೆ, ಎಲೆಗಳ ತಂತುಗಳ ಮೇಲೆ, ಎಲೆಗಳ ಮೇಲೆ ಮೇಯುತ್ತಿದ್ದ ಕೀಟಗಳ ಮೇಲೆ, ಬಣ್ಣ ಬಣ್ಣದ ದುಂಬಿಗಳ ಮೇಲೆ, ಜೇಡಗಳ ವಿವಿಧ ವಿನ್ಯಾಸದ ಬಲೆಗಳ ಮೇಲೆ, ಹುಲ್ಲಿನ ಮೇಲಿನ ಮಂಜಿನ ಮೇಲೆ ಸೂರ್ಯನು ಚೆಲ್ಲಿದ ವಿವಿಧ ರಂಗುಗಳ ಮೇಲೆ ಹರಿಯಿತು. ನೀರಿನ ಮೇಲೆ ಸುತ್ತು ಹೊಡೆಯುತ್ತಿರುವ ಗುಂಗರೆಗಳ ನಾದ. ಡ್ರಾಗನ್ ನೊಣಗಳು ರೆಕ್ಕೆ ಬಡಿಯುವ ಸದ್ದು, ನೀರು ಜೇಡಗಳು ನಡೆದು ಬರುತ್ತಿರುವ ಸದ್ದು ಅವನಿಗೆ ಅಂಬಿಗರು ಹುಟ್ಟು ಹಾಕುವ ಸದ್ದಿನಂತೆ ಕೇಳತೊಡಗಿತು.
ಅವನು ನೋಡುತ್ತಿದ್ದಂತೆಯೇ ಒಂದು ಮೀನು ಅವನ ಕಣ್ಣೆದುರೇ ನೀರಿನಲ್ಲಿ ದೊಡ್ಡ ಸಂಚಲನವನ್ನೆಬ್ಬಿಸಿ ಮರೆಯಾಯಿತು. ಅವನು ಈಗ ನೀರಿನ ಮೇಲಿದ್ದ. ಅವನಿಗೆ ಸೇತುವೆ, ಸೈನಿಕರ ಶಿಬಿರ, ಸೇತುವೆಯ ಮೇಲಿನ ಸೈನಿಕರು, ಕ್ಯಾಪ್ಟನ್, ಸಾರ್ಜೆಂಟ್, ಮತ್ತು ಅವನ ನೇಣಿನ ಹಗ್ಗ ಎಳೆದಿದ್ದ ಇಬ್ಬರು ಖಾಸಗಿ ಸೈನಿಕರು ಕಾಣಿಸತೊಡಗಿದರು. ನೀಲಿ ಅಗಸದ ಹಿನ್ನೆಲೆಯಲಿ ಕಪ್ಪು ನೆರಳುಗಳು. ಅವರು ಅವನತ್ತ ಬೊಟ್ಟು ಮಾಡಿದ್ದರು -- ಬಹುಶಃ ಅರಚುತ್ತಿದ್ದರು. ಕ್ಯಾಪ್ಟನನ ಕೈಯಲ್ಲಿ ಪಿಸ್ತೂಲಿತ್ತು. ಆದರೆ ಅವನು ಗುಂಡು ಹಾರಿಸಲಿಲ್ಲ. ಇತರರ ಕೈಯಲ್ಲಿ ಯಾವುದೇ ಆಯುಧಗಳಿರಲಿಲ್ಲ. ಅವರ ಆಕೃತಿಗಳು ವಿಚಿತ್ರವಾಗಿ ಕಾಣುತ್ತಿದ್ದವು.
ಅವನಿಗೆ ಒಮ್ಮೆಲೇ ಗುಂಡು ಹಾರಿಸಿದ ಶಬ್ದ ಕೇಳಿಸಿತು. ಅವನ ತಲೆಯ ಬಗಲಲ್ಲೇ ನೀರಿಗೆ ಒಂದು ದೊಡ್ಡ ಕಲ್ಲು ಎತ್ತಿ ಹಾಕಿದ ಶಬ್ದವಾಗಿ ನೀರು ಮೇಲಕ್ಕೆ ಚಿಮ್ಮಿತು. ಅದರ ಹಿಂದೆಯೇ ಮತ್ತಷ್ಟು ಗುಂಡುಗಳು ಹಾರಿಸಿದ ಸದ್ದು. ಅವನು ಕತ್ತನ್ನು ತಿರುಗಿಸಿ ಸೇತುವೆಯ ಕಡೆಗೆ ನೋಡಿದ. ಒಬ್ಬ ಸೈನಿಕನ ಬಂದೂಕಿನ ನಳಿಕೆಯಿಂದ ನೀಲಿ ಹೊಗೆ ಹೊರಬರುತ್ತಿತ್ತು. ಆ ಗುಂಡು ಕೂಡ ಗುರಿ ತಪ್ಪಿತ್ತು.
ಅಷ್ಟರಲ್ಲಿ, ನದಿಯ ತೀರದಿಂದ ಯಾರೋ ಗರ್ಜಿಸಿದ ಸದ್ದು ಅವನಿಗೆ ಕೇಳಿಸಿತು.
“ಕಂಪೆನಿ, ಆಟೆನ್ಶನ್! ಗೆಟ್ ರೆಡಿ! ಫಾಯರ್..!”
ಒಂದರ ಹಿಂದೆ ಒಂದು ಗುಂಡು ಹಾರಿಸುತ್ತಿರುವ ಸದ್ದು ಅವನ ಕಿವಿಗಳಿಗೆ ಮಂದವಾಗಿ ಕೇಳಿಸಿತು. ಅವನ ಸುತ್ತ ನೀರು ಮೇಲಕ್ಕೆ ಚಿಮ್ಮತೊಡಗಿತು. ಫಾರ್ಕ್ವಾರ್ ಆದಷ್ಟು ಕೆಳಗೆ ಮುಳುಗಿದ. ಒಂದು ಗುಂಡು ಅವನ ಕುತ್ತಿಗೆಯ ಹಿಂಭಾಗಕ್ಕೆ ಮೇಲ್ಮೇಲಕ್ಕೆ ನೆಟ್ಟಿತು ಮತ್ತು ಅವನು ಅದನ್ನು ತಕ್ಷಣ ಕಿತ್ತು ಹಾಕಿದ. ಆವನು ಉಸಿರನ್ನು ಎಳೆದುಕೊಳ್ಳಲು ಧಡಬಡಿಸಿ ಮೇಲಕ್ಕೆ ಬಂದಾಗ ಅವನಿಗೆ ತಾನು ಬಹಳ ಹೊತ್ತು ನೀರಿನೊಳಗೆ ಇದ್ದಂತೆ ಭಾಸವಾಯಿತು ಮತ್ತು ಹಾಗೆಯೇ ಸೇತುವೆಯಿಂದ ತುಂಬಾ ದೂರಕ್ಕೆ ಬಂದಿರುವಂತೆ ಅನಿಸಿತು. ಅವನಿಗೆ ಸೈನಿಕರಿಂದ ತಪ್ಪಿಸಿಕೊಳ್ಳುವ ಅವಕಾಶ ಧಾರಾಳವಾಗಿದೆ ಎಂದು ಮನದಟ್ಟಾಯಿತು.
ಅವನು ಈಗ ನದಿಯ ತೀರಕ್ಕೆ ಹತ್ತಿರವಾಗಿದ್ದ. ಅವನು ಮತ್ತೊಮ್ಮೆ ಹಿಂದಿರುಗಿ ನೋಡಿದ. ಸೈನಿಕರು ಕೋವಿಯನ್ನು ಎತ್ತಿ ತಯಾರಾಗಿ ನಿಂತಿದ್ದರು. ಕೆಲವೇ ಕ್ಷಣಗಳಲ್ಲಿ ಒಂದರ ಹಿಂದೆ ಒಂದು ಬೆಂಕಿ ಕಾರತೊಡಗಿದವು. ಆದರೆ ಅವರೆಲ್ಲಾ ಗಾಳಿಯಲ್ಲಿ ಗುಂಡು ಹೊಡೆಯುತ್ತಿರುವಂತೆ ಅವನಿಗೆ ಭಾಸವಾಗತೊಡಗಿತು. ಅವನು ಸೇತುವೆಯಿಂದ ಬಹಳಷ್ಟು ದೂರಕ್ಕೆ ಬಂದಿದ್ದ. ಅವನು ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ನೀರಿನ ಸೆಳೆತದ ಜೊತೆಗೆ ಈಜತೊಡಗಿದ. ಅದೃಷ್ಟವಶಾತ್ ಅವನಿಗೆ ಒಂದೂ ಗುಂಡು ತಗುಲಿರಲಿಲ್ಲ. ಹೀಗೆಯೇ ಅದೃಷ್ಟವನ್ನು ನೆಚ್ಚಿಕೊಂಡು ಇನ್ನೆಷ್ಟು ಹೊತ್ತು ಅವರ ಗುಂಡುಗಳಿAದ ಪಾರಾಗಲು ಸಾಧ್ಯ? ಬಹುಶಃ ಕ್ಯಾಪ್ಟನನು ಸೈನಿಕರಿಗೆ ತಮಗೆ ಇಷ್ಟ ಬಂದಂತೆ ಗುಂಡು ಹಾರಿಸಲು ಹೇಳಿರಬೇಕು. ಒಂದರ ಹಿಂದೆ ಒಂದು ಗುಂಡುಗಳು ಅವನ ಸುತ್ತ ಅಪ್ಪಳಿಸತೊಡಗಿದವು. ಒಂದು ಗುಂಡಂತೂ ಅವನ ತೀರಾ ಸಮೀಪದಲ್ಲಿ ಸ್ಪೋಟಿಸಿದಾಗ ಅವನ ಸುತ್ತ ನೀರು ಕೋಟೆಯಂತೆ ಸುತ್ತುವರೆದು ಎದ್ದು ನಿಂತಿತು. ಆ ಕ್ಷಣದಲ್ಲಿ ಅಲ್ಲಿ ಉಂಟಾದ ನಿರ್ವಾತ ಅವನನ್ನು ನೀರಿನಲ್ಲಿ ಮುಳುಗಿಸಿತು. ಅವನ ಗುಂಡಿಗೆ ಜೋರಾಗಿ ಸದ್ದು ಮಾಡುತ್ತಾ ಬಡಿದುಕೊಳ್ಳುತ್ತಿತ್ತು. ಮತ್ತೊಂದು ಗುಂಡು ಅವನ ಬಗಲಿನಲ್ಲೇ ನೀರಿನ ಮೇಲೆ ಚಿಮ್ಮುತ್ತಾ ನದಿ ತೀರದ ಒಂದು ಮರಕ್ಕೆ ಅಪ್ಪಳಿಸಿತು. ಅವರು ಖಂಡಿತ ಹತಾಶರಾಗಿದ್ದಾರೆ. ಕೊನೆಗೆ ತನ್ನ ಮೇಲೆ ಅವರು ಗೊಂಚಲು ಗುಂಡು (Grape Charge) ಹಾರಿಸುವದರಲ್ಲಿ ಅನುಮಾನವಿಲ್ಲವೆಂದು ಅವನಿಗೆ ಮನದಟ್ಟಾಯಿತು. ತಾನು ತುಂಬಾ ಜಾಗರೂಕನಾಗಿರಬೇಕು. ಶಬ್ದ ತಡವಾಗಿ ಕೇಳಿಸುತ್ತದೆ. ಬಂದೂಕಿನ ನಳಿಕೆಯಿಂದ ಹೊರಬರುತ್ತಿರುವ ಹೊಗೆಯನ್ನು ತಾನು ಗಮನಿಸಬೇಕು ಎಂದು ಅವನಿಗನಿಸಿತು. ಅಷ್ಟರಲ್ಲಿ ಅವನು ನೀರಿನ ಮೇಲೆ ಬುಗುರಿಯಂತೆ ಸುತ್ತತೊಡಗಿದ. ಸುತ್ತಲಿನ ನೀರು, ನದಿ ತೀರದ ಮರಗಳು, ದೂರದಲ್ಲಿ ಅವನ ಹಿಂದಿದ್ದ ಸೈನಿಕರು, ಅವರ ಶಿಬಿರ ಮತ್ತು ಸೇತುವೆ ಅವನಿಗೆ ಮಸುಕುಮಸುಕಾಗಿ ಕಾಣಿಸತೊಡಗಿದ್ದುವು. ಅವನು ನೀರಿನ ಸುಳಿಗೆ ಸಿಲುಕಿಕೊಂಡಿದ್ದ.
ಸುಳಿಯಲ್ಲಿ ಸಿಲುಕಿಕೊಂಡಿದ್ದ ಅವನು ಎಷ್ಟು ಜೋರಾಗಿ ಸುತ್ತತೊಡಗಿದನೆಂದರೆ ತಲೆ ತಿರುಗಿ ವಾಂತಿಮಾಡತೊಡಗಿದ. ಕೆಲವೇ ಕ್ಷಣಗಳಲ್ಲಿ ಅವನು ನದಿ ತೀರದ ಬಲಕ್ಕೋ ಎಡಕ್ಕೋ ಎಂದು ಗೊತ್ತಾಗದಂತೆ ಮರಳು ದಂಡೆಯ ಮೇಲೆ ಎಸೆಯಲ್ಪಟ್ಟ. ಅವನ ಅದೃಷ್ಟ ನೆಟ್ಟಗಿತ್ತು. ಅವನು ಒಂದು ಬಂಡೆಯ ಮರೆಗೆ ಬಿದ್ದಿದ್ದರಿಂದ ಸೈನಿಕರಿಗೆ ಅವನು ಕಾಣಿಸುತ್ತಿರಲಿಲ್ಲ. ಅವನು ವಾಸ್ತವ ಲೋಕಕ್ಕೆ ಮರಳಲು ಸ್ವಲ್ಪ ಸಮಯವೇ ಹಿಡಿಯಿತು. ತನ್ನ ಅದೃಷ್ಟವನ್ನು ನೆನೆದು ಅವನು ಸಂತೋಷದಿಂದ ಬಿಕ್ಕಿ ಬಿಕ್ಕಿ ಅಳತೊಡಗಿದ. ಎರಡೂ ಮುಷ್ಠಿಯಲ್ಲಿ ಮರಳನ್ನು ಬಾಚಿ ಮೇಲಕ್ಕೆ ಎಸೆಯುತ್ತಾ ದೇವರಿಗೆ ವಂದನೆಗಳನ್ನರ್ಪಿಸತೊಡಗಿದ. ಮರಳಿನ ಒಂದೊಂದು ಕಣವೂ ಅವನಿಗೆ ಹೂವಿನ ಪಕಳೆಗಳಂತೆ, ಮುತ್ತು ವಜ್ರಗಳಂತೆ ಕಾಣಿಸತೊಡಗಿತು. ಮರಳಿನಷ್ಟು ಸುಂದರವಾದ ವಸ್ತು ಈ ಜಗತ್ತಿನಲ್ಲಿಯೇ ಬೇರೊಂದಿಲ್ಲವೆಂದು ಅವನಿಗೆ ಆ ಕ್ಷಣದಲ್ಲಿ ಅನಿಸತೊಡಗಿತು.
ನದಿ ತೀರದ ಮರಗಳನ್ನು ನೋಡಿದಾಗ ಅವನ ಜೀವಕ್ಕೆ ನೆಮ್ಮದಿಯಾಯಿತು. ಆ ಮರಗಳಲ್ಲಿ ಅರಳಿದ್ದ ಹೂಗಳ ಮತ್ತು ಅರಳಲು ಸಿದ್ಧವಾಗಿದ್ದ ಮೊಗ್ಗುಗಳ ಸುವಾಸನೆಯನ್ನು ಅವನು ಹೀರತೊಡಗಿದ. ಮರಗಳ ನೆರಳಿನ ಮಧ್ಯೆ ಅಲ್ಲಲ್ಲಿ ಹರಡಿದ್ದ ಸೂರ್ಯನ ಕಿರಣಗಳು ಕಾಡಿಗೆ ವಿಶಿಷ್ಟ ಸೊಬಗನ್ನು ನೀಡಿದ್ದವು. ಎಲೆಗಳ ಮೇಲೆ ಬೀಸುತ್ತಿದ್ದ ಗಾಳಿಯ ಮರ್ಮರ ಅವನಿಗೆ ಸ್ವರ್ಗಲೋಕದ ಸಂಗೀತದಂತೆ ಕೇಳಿಸತೊಡಗಿತು.
ಬಹುಶಃ ಗೂಬೆಕೊಳ್ಳದ ಸೇತುವೆಯ ಮೇಲಿನ ಸೈನಿಕರಿಗೆ ಅವನು ತಪ್ಪಿಸಿಕೊಂಡಿದ್ದಾನೆಂದು ಮನವರಿಕೆಯಾಗಿರಬೇಕು. ಅವರು ಹತಾಶೆಯಿಂದ ಹೊಡೆದ ಗುಂಡುಗಳು ಅವನ ಎದುರಿನ ಕಾಡಿನೊಳಗೆ ಸ್ಪೋಟಗೊಳ್ಳುತ್ತಿದ್ದಂತೆಯೇ ಅವನು ತನ್ನ ರಮ್ಯಲೋಕದಿಂದ ಹೊರಬಂದು ಕಾಡಿನ ಕಡೆಗೆ ಓಡತೊಡಗಿದ. ಸೂರ್ಯನ ಚಲನೆಯ ಮೇಲೆ ಕಣ್ಣಿರಿಸಿ ಅವನು ಆ ಇಡೀ ದಿನ ನಡೆದೋಡಿದ. ಕಾಡು ದಟ್ಟವಾಗಿತ್ತು. ಅವನಿಗೆ ಎಲ್ಲೂ ಒಂದು ಕಾಲುದಾರಿಯಗಲೀ ಬಯಲಾಗಲೀ ಕಾಣಿಸಲಿಲ್ಲ. ಇಷ್ಟೊಂದು ದಟ್ಟ ಕಾಡಿನಲ್ಲಿ ತಾನು ಈವರೆಗೆ ವಾಸಿಸುತ್ತಿರುವ ಸಂಗತಿ ತನಗೆ ತಿಳಿಯದೇ ಇದ್ದದ್ದು ಅವನಿಗೆ ವಿಚಿತ್ರವೆನ್ನಿಸಿತು.
ಸೂರ್ಯ ಮುಳುಗುವಷ್ಟರಲ್ಲಿ ಅವನು ಸಂಪೂರ್ಣವಾಗಿ ಆಯಾಸಗೊಂಡಿದ್ದ. ಅವನ ಕಾಲುಗಳಲ್ಲಿ ಸ್ವಲ್ಪವೂ ತ್ರಾಣ ಉಳಿದಿರಲಿಲ್ಲ ಮಾತ್ರವಲ್ಲದೆ, ಬಾಯಾರಿಕೆ ಮತ್ತು ಹಸಿವೆಯಿಂದ ಕಂಗಾಲಾಗಿ ಮುಂದೆ ನಡೆಯಲಾರದೆ ಅಲ್ಲಿಯೇ ನಿಂತುಬಿಟ್ಟ. ಆದರೆ, ಹೆಂಡತಿ ಮಕ್ಕಳ ನೆನಪಾಗುತ್ತಲೇ ಹಟಕ್ಕೆ ಬಿದ್ದು ಮತ್ತೆ ಮುಂದಕ್ಕೆ ನಡೆಯತೊಡಗಿದ. ಕೊನೆಗೂ ಅವನಿಗೆ ಒಂದು ಕಿರಿದಾದ ಅಸ್ಪಷ್ಟ ಕಾಲುದಾರಿ ಗೋಚರಿಸಿತು. ಅದು ಖಂಡಿತವಾಗಿಯೂ ತನ್ನನ್ನು ಮನೆಗೆ ಮುಟ್ಟಿಸಬಹುದೆಂಬ ಭರವಸೆ ಅವನಲ್ಲಿ ಮೂಡಿತು. ಅವನು ಆ ಹಾದಿಯಲ್ಲಿ ನಡೆದು ಹೋಗುತ್ತಿದ್ದಂತೆ ಅವನಿಗೆ ಸುತ್ತಮುತ್ತ ತೋಟಗಳಾಗಲೀ ಹೊಲಗಳಾಗಲೀ ಮನೆಗಳಾಗಲೀ ಕಾಣಲಿಲ್ಲ. ಆ ಕಿರು ಹಾದಿಯ ಇಕ್ಕೆಲಗಳಲ್ಲೂ ರಕ್ಕಸ ಗಾತ್ರದ ಕಪ್ಪನೇ ಮರಗಳು ಬೇಲಿ ಕಂಬಗಳಂತೆ ಉದ್ದಕ್ಕೂ ಸಾಲಾಗಿ ಕಾಣಿಸುತ್ತಿದ್ದವು. ಮರಗಳ ಮಧ್ಯೆಯಿಂದ ಅವನು ಮೇಲಕ್ಕೆ ಅಗಸವನ್ನು ದಿಟ್ಟಿಸಿದ. ವಿಚಿತ್ರವಾದ ವಿನ್ಯಾಸದಲ್ಲಿ ಗುಂಪುಗೂಡಿ ಚಿನ್ನದಂತೆ ಹೊಳೆಯುತ್ತಿದ್ದ ನಕ್ಷತ್ರಗಳು ಅವನಿಗೆ ಕಾಣಿಸಿದವು. ಆ ದೃಶ್ಯ ಒಂದು ಅಪಶಕುನದಂತೆ ಅವನಿಗೆ ಭಾಸವಾಯಿತು. ಕಾಡಿನಿಂದ ಹೊರಬರುತ್ತಿದ್ದ ಸದ್ದು ಅವನಿಗೇಕೋ ಅಸ್ವಾಭಾವಿಕವೆನಿಸತೊಡಗಿತು. ಒಂದಲ್ಲ ಎರಡು ಮೂರು ಭಾರಿ ಯಾರೋ ಅವನಿಗರಿಯದ ಭಾಷೆಯಲ್ಲಿ ಪಿಸುದನಿಯಲ್ಲಿ ಮಾತನಾಡುತ್ತಿರುವಂತೆ ಅವನಿಗನಿಸಿತು.
ಅವನ ಕುತ್ತಿಗೆ ತುಂಬಾ ನೋಯುತ್ತಿತ್ತು. ತನ್ನಷ್ಟಕ್ಕೇ ಅವನ ಕೈ ಕುತ್ತಿಗೆಯ ಮೇಲೆ ಓಡಾಡಿತು. ಅದು ಊದಿಕೊಂಡು ದಪ್ಪಗಾಗಿತ್ತು. ನೇಣಿನ ಹಗ್ಗ ಬಿಗಿದಿದ್ದ ಜಾಗದಲ್ಲಿ ಆಳವಾದ ಗುರುತು ಮೂಡಿತ್ತು. ಬಹುಶಃ ಅಲ್ಲಿ ರಕ್ತ ಹೆಪ್ಪುಗಟ್ಟಿ ಕಪ್ಪಾಗಿರಲೂಬಹುದು ಎಂದು ಅವನಿಗನಿಸಿತು. ಅವನ ಕಣ್ರೆಪ್ಪೆಗಳು ಮುಚ್ಚಲೂ ಆಗದಿರುವಂತೆ ದಪ್ಪಗಾಗುತ್ತಲಿದ್ದವು. ನಾಲಿಗೆಯೂ ಕೂಡ ದಪ್ಪಗಾಗಿ ಬಾಯಿಂದ ಹೊರಗೆ ಬರಲು ಹವಣಿಸುತ್ತಿತ್ತು. ಇದುವರೆಗೆ ಆ ಕಿರಿದಾದ ಹಾದಿಯಲ್ಲಿ ಯಾರೂ ಪಾದಗಳನ್ನೂರಿಲ್ಲವೇನೋ ಎನ್ನುವಂತೆ ಅಲ್ಲಿ ದಟ್ಟವಾಗಿ ಮೃದುವಾದ ಹುಲ್ಲು ಬೆಳೆದಿರುವಂತೆ ಅವನಿಗೆ ಅನುಭವವಾಗತೊಡಗಿತು. ಅವನಿಗಾಗುತ್ತಿರುವ ಆಯಾಸ ಮತ್ತು ನೋವಿನ ಮಧ್ಯೆಯೂ ಅವನು ನಿದ್ದೆಯಲ್ಲೇ ನಡೆಯುತ್ತಿದ್ದ. ನಿದ್ದೆ ಮತ್ತು ಮಂಪರಿನ ಮಧ್ಯೆ ಕಾಲೆಳೆಯುತ್ತಾ ನಡೆಯುತ್ತಿದ್ದ ಅವನಿಗೆ ತನ್ನ ಮನೆಯ ಗೇಟಿನ ಬಳಿ ಬಂದು ನಿಂತದ್ದು ಗೊತ್ತಾಗಲೇ ಇಲ್ಲ! ವ್ಹಾಹ್! ತನ್ನ ಮನೆ! ... ತನ್ನದೇ ಮನೆಯಷ್ಟು ಸುಂದರವಾದ ಜಾಗ ಜಗತ್ತಿನಲ್ಲಿಯೇ ಬೇರೊಂದಿರಲಾರದು. ನೇಣಿನ ಹಗ್ಗ ತುಂಡಾಗಿ ಅವನು ನದಿಗೆ ಬಿದ್ದ ನಂತರದಿಂದ ಮಾರನೆಯ ದಿನದ ವರೆಗೆ ಅವನು ನಡೆಯುತ್ತಲೇ ಇದ್ದ!
ಅವನು ಗೇಟನ್ನು ತೆರೆದು ಒಳಗೆ ಕಾಲಿಡುವುದಕ್ಕೂ ಅವನ ಹೆಂಡತಿ ಮುಗುಳ್ನಗುತ್ತಾ ಮನೆಯ ಮೆಟ್ಟಿಲುಗಳನ್ನು ಇಳಿದು ಹೊರಗೆ ಬರುವುದಕ್ಕೂ ಸರಿಯಾಯಿತು. ಅವನನ್ನು ನೋಡುತ್ತಿದ್ದಂತೆಯೇ ಅವಳು ಎರಡೂ ಬಾಹುಗಳನ್ನು ಅಗಲವಾಗಿ ತೆರೆಯುತ್ತಾ ಓಡೋಡಿ ಮುಂದೆ ಬಂದಳು.
ಪೇಟನ್ ಫಾರ್ಕ್ವಾರ್ ಕೂಡ ಸಂತೋಷದಿಂದ ನಗುತ್ತಾ ಅವಳ ಬಳಿ ಸಾರಿದ. ಅವಳನ್ನು ತನ್ನ ಅಪ್ಪುಗೆಯಲ್ಲಿ ಬೆಸೆಯಬೇಕು ಎನ್ನುವಷ್ಟರಲ್ಲಿ ಕುತ್ತಿಗೆಗೆ ಬಿದ್ದ ಬಲವಾದ ಹೊಡೆತದಿಂದ ಅವನು ಒಮ್ಮೆಲೇ ತತ್ತರಿಸಿ ಹೋದ. ಅವನ ಮೈ ಮೇಲೆ ಮಿಂಚಿನಂತೆ ಪ್ರಖರವಾದ ಬಿಳಿಯ ಬೆಳಕು ಹಾದು ಹೋಯಿತು. ಸ್ವಲ್ಪ ಹೊತ್ತಿನ ನಂತರ ಕಿವಿಗಡಚಿಕ್ಕುವ ತೋಪಿನ ಸದ್ದು, ಅಂಧಕಾರ... ನಂತರ ಸಂಪೂರ್ಣ ಮೌನ ...
... ಪೇಟನ್ ಫಾರ್ಕ್ವಾರ್ ಸತ್ತು ಹೋಗಿದ್ದ. ಅವನ ಕತ್ತು ಮುರಿದಿತ್ತು. ಗೂಗೆಕೊಳ್ಳದ ರೈಲು ಸೇತುವೆಯ ಕಂಬದ ಮೇಲೆ ಅವನ ನಿರ್ಜೀವ ದೇಹ ಗಾಳಿಗೆ ಮೆಲ್ಲನೆ ತೂಗಾಡುತ್ತಿತ್ತು.
ಬೇರೆ ದೇಶದವರು ಅಮೆರಿಕಾದವರಿಗೆ ಯಾಂಕೀಗಳೆಂಬ ಅಡ್ಡ ಹೆಸರಿನಿಂದ ಕರೆಯುತ್ತಾರೆ. ಅಮೆರಿಕಾದ ಅಂತರ್ಯುದ್ಧದ ಸಮಯದಲ್ಲಿ ದಕ್ಷಿಣ ಪ್ರಾಂತ್ಯದವರು ಉತ್ತರ ಪ್ರಾಂತ್ಯದವರಿಗೆ ಯಾಂಕೀಗಳೆಂದು ತುಚ್ಛವಾಗಿ ಕರೆಯುತ್ತಿದ್ದರು
ಜೆ ವಿ ಕಾರ್ಲೊ
ಹಾಸನದ ನಿವಾಸಿ. ಕಟ್ಟಡ ನಿರ್ಮಾಣ ವೃತ್ತಿಯಲ್ಲಿದ್ದವರು. ಓದಿನ ಜೊತೆಗೆ ಇಂಗ್ಲಿಷಿನಿಂದ ಕನ್ನಡ, ಕೊಂಕಣಿಗೆ ಅನುವಾದಗಳನ್ನು ಮಾಡುತ್ತಾ ಬಂದಿದ್ದಾರೆ. ಕೊಂಕಣಿಗೆ ಅನುವಾದಿಸಿದ Pascal Nazareth ಅವರ Gandhi’s Outstanding Leadership ಪುಸ್ತಕದ ಅನುವಾದಕ್ಕಾಗಿ ‘ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ’ ಪುರಸ್ಕಾರ ಲಭಿಸಿದೆ. ಕನ್ನಡದ ಓದುಗರನ್ನು ಸೆಳೆದ ಮತ್ತೆರಡು ಅನುವಾದಗಳೆಂದರೆ ರೊಆಲ್ಡ್ ದಾಹ್ಲ್ ಸಣ್ಣ ಕತೆಗಳ ಅನುವಾದ ಅನಿರೀಕ್ಷಿತ ಕಥೆಗಳು ಹಾಗೂ ಜಾಕ್ ಲಂಡನ್ನ ದಿ ಕಾಲ್ ಆಫ್ ದಿ ವೈಲ್ಡ್. ಜೆ ವಿ ಕಾರ್ಲೊ ಅವರಿಗೆ 'ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ' 2025ನೇ ಸಾಲಿನ ಗೌರವ ಪ್ರಶಸ್ತಿ ದೊರಕಿದೆ.
ಇದನ್ನೂ ಓದಿ …
ಉರಿಸಿಂಗ
ವಿಲಿಯಂ ಫಾಕ್ನರ್ (William Faulkner, ಸೆಪ್ಟೆಂಬರ್ 25, 1897 – ಜುಲೈ 6, 1962) ಅಮೆರಿಕದ ಅತ್ಯಂತ ಪ್ರಭಾವಶಾಲಿ ಬರಹಗಾರರಲ್ಲಿ ಒಬ್ಬ. ಜನಪದ, ಕುಟುಂಬ ಇತಿಹಾಸಗಳಿಂದ ಹಿಡಿದು ಅಂತರ್ಯುದ್ಧದ ಸ್ಥಳೀಯ ದಂತಕತೆಗಳವರೆಗೆ ಮೌಖಿಕ ಕತೆ ಹೇಳುವ ಸಂಪ್ರದಾಯಗಳಲ್ಲಿ ಮಿಂದೆದ್ದವನು. ತನ್ನ ತಂದೆಯ ಮುತ್ತಜ್ಜ, ಅವನದೇ ಹೆಸರಿನ ವಿಲಿಯಂ ಕ್ಲಾರ್ಕ್ ಫಾಕ್ನರ್ (William Clark Falkner







