ʼನನ್ನ ಊರಿನ ಕತೆಗಳನ್ನು ಇಂಗ್ಲಿಷ್ನಲ್ಲಿ ಬರೆಯುವುದು ಮುಖ್ಯʼ
ಟೊಟೊ ಪುರಸ್ಕೃತ ನವೀನ ತೇಜಸ್ವಿ ಸಂದರ್ಶನ
ನವೀನ ತೇಜಸ್ವಿ, ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದ ಮೊದಲ ತಲೆಮಾರಿನ ವಿದ್ಯಾರ್ಥಿ. ತಾಯಿ ಜಾನಕಮ್ಮ. ತಂದೆ ತಿಮ್ಮಪ್ಪ. ‘ಬಿಡುಗಡೆ’, ‘ಹಬ್ಬಹರಿದಿನ ಸುಗ್ಗಿ ಶಿವರಾತ್ರಿ’, ‘ಇಮಾನ’ ಇವು ಇವರು ನಿರ್ದೇಶಿಸಿದ ಕಿರುಚಿತ್ರಗಳು. ಈ ಎಲ್ಲ ಚಿತ್ರಗಳು ಊರಿನ ಜನರೊಟ್ಟಿಗೆ ಕೂಡಿ ಮಾಡಿದ ಕಿರುಚಿತ್ರಗಳು. ಇಲ್ಲಿಯವರೆಗೆ ಇವರೂರಿನ ಸುಮಾರು ನೂರು ಮಂದಿ ಇವರ ಸಿನಿಮಾಗಳಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಕಿರುಚಿತ್ರಗಳು ಜಗತ್ತಿನಾದ್ಯಂತ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿವೆ. ಇಂಗ್ಲಿಷಿನಲ್ಲಿ ಬರೆದ ಇವರ ಪ್ರಬಂಧ 'ಟ್ರ್ಯಾಕ್ 01' 2023ರ ಬಾರ್ಬ್ರ ನಾಯ್ಡು ಪ್ರಶಸ್ತಿಯನ್ನು (The Prof. Barbra Naidu Memorial Prize for the Personal Essay) ಪಡೆದಿದೆ. ಸದರಿ ಪ್ರಬಂಧ ಸಂತ ಜೋಸೆಫರ ವಿಶ್ವವಿದ್ಯಾಲಯದ ಬಿಎ ಇಂಗ್ಲಿಷ್ ಪಠ್ಯಕ್ರಮದ ಭಾಗವಾಗಿದೆ. ತಮ್ಮ ಬರಹ ಮತ್ತು ಸಿನಿಮಾದ ಮೂಲಕ ತಮ್ಮ ಊರಿನ ಕತೆಗಳನ್ನು ಹೇಳುವ ಇವರಿಗೆ 2024ನೇ ಸಾಲಿನ ಟೊಟೊ ಪುರಸ್ಕಾರ (TFA) ಸಂದಿದೆ. ಈ ಸಂದರ್ಭದಲ್ಲಿ ಕಥೆಗಾರ ಮಂಜು ನಾಯಕ ಚಳ್ಳೂರು ಇವರನ್ನು ಸಂದರ್ಶಿಸಿದ್ದಾರೆ.
ನೀವು ಮಲೆನಾಡಿನವರು. ಇತ್ತೀಚಿನ ಬೇರೆ ಯುವ ಲೇಖಕರ ಕೃತಿಗಳಲ್ಲಿ ಕಾಣಿಸದ ಮಲೆನಾಡಿನ ಮುಖಗಳನ್ನು ನಿಮ್ಮ ಕತೆಗಳು ಪರಿಚಯಿಸುತ್ತವೆ. ಅದಕ್ಕೆ ಕಾರಣ ನಿಮ್ಮ ಸಾಮಾಜಿಕ ಹಿನ್ನೆಲೆ ಇರಬಹುದೆ? ನೀವು ಹುಟ್ಟಿದ ಊರು ಪರಿಸರದ ಬಗ್ಗೆ ವಿವರಿಸಬಹುದೆ?
ಕತೆಯ ರೀತಿಗೆ ಸಾಮಾಜಿಕ ಹಿನ್ನೆಲೆ ಖಂಡಿತ ಕಾರಣವಾಗಿರುತ್ತದೆ. ಬರೆಯುವುದು, ಸಿನಿಮಾ, ಫೋಟೋಗ್ರಫಿ, ಬೇರೆ ಯಾವುದೇ ಕಲೆಯಾದರೂ, ಅದನ್ನು ಕಟ್ಟುವುದು ಒಂದು ಮಟ್ಟದ ಪ್ರಿವಿಲೇಜ್ ಬೇಡುವಂಥದ್ದು. ನಮ್ಮ ಈ ಅಸಮಾನ ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಮೇಲಿರುವವರಿಗೆ ಆ ಪ್ರಿವಿಲೇಜ್ ಸಹಜವಾಗಿ ಒದಗುತ್ತದೆ. ನಮ್ಮ ಕತೆಗಳು ಹುಟ್ಟುವುದು ನಾವು ನೋಡಿದ, ಬದುಕಿದ ಪ್ರಪಂಚದಿಂದಲೇ. ನನ್ನಂತೆಯೇ ನನ್ನ ಪ್ರದೇಶದ ತೊಂಬತ್ತು ಭಾಗ ಜನರು ಕಾಲೇಜು ಮೆಟ್ಟಿಲು ಹತ್ತಿದ ಮೊದಲ ತಲೆಮಾರಿನವರು. ನನ್ನ ಊರಿನ ಸುತ್ತಮುತ್ತಲಿನಿಂದ ಬಹಳಷ್ಟು ಬರಹಗಾರರು ಬರದೇ ಇರುವ ಕಾರಣ ಹೀಗೆ ಅನಿಸಬಹುದು. ನನಗೆ ಈ ಕಾರಣಕ್ಕೆ ಸಾಹಿತ್ಯ, ಸಿನಿಮಾ, ವಿಜ್ಞಾನ ಹೀಗೆ ಎಲ್ಲ ಕಡೆಯೂ ವೈವಿಧ್ಯತೆ ಬಹಳ ಮುಖ್ಯ ಅನಿಸುತ್ತದೆ.
ನಮ್ಮೂರು ಸೊರಬ ತಾಲೂಕಿನ ಹೊಸಬಾಳೆ ಗ್ರಾಮ. ಊರಿನಲ್ಲಿ ಓದಿದ, ಶ್ರೀಮಂತ, ಜಮೀನು ಉಳ್ಳವರೆಂದರೆ ಬ್ರಾಹ್ಮಣ ವರ್ಗ ಒಂದೇ. ಊರಿನ ಉಳಿದ ಎರಡು ಮೂರು ಜಾತಿಯ ಜನರೆಲ್ಲ ಹಿಂದಿನಿಂದಲೂ ಅವರ ಮನೆ ತೋಟದ ಕೆಲಸ ಮಾಡಿಕೊಂಡು ಬಂದಿರುವವರೇ. ಉಳುವವನೇ ಹೊಲದೊಡೆಯದ ನಂತರ ಚೂರುಪಾರು ಜಮೀನು ಸಿಕ್ಕರೂ ಕೆರೆಯ ಪಕ್ಕದ ನೀರಿನ ತೋಟಗಳು ದುಡಿಯುವ ವರ್ಗಕ್ಕೆ ಸಿಗಲಿಲ್ಲ. ಇರುವ ನಾಲ್ಕಾರು ಗುಂಟೆ ಜಮೀನಲ್ಲಿ ಮಳೆಯ ನಂಬಿ ವರುಷಕ್ಕೆ ಒಂದು ಬೆಳೆ ತೆಗೆಯುವ ಮತ್ತು ಮಣ್ಣಿನ ಒಡೆತನ ಇಲ್ಲದ ದುಡಿಯುವ ವರ್ಗಗಳಿಗೆ ಶಿಕ್ಷಣ, ಸಂಪತ್ತು ಇನ್ನೂ ಕನಸಿನ ಮಾತಾಗಿದೆ.
ಒಬ್ಬ ಬರಹಗಾರನ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಆತ ಹುಟ್ಟಿ ಬೆಳೆದ ಪರಿಸರದಷ್ಟೇ ಆತ ಓದಿ ಪ್ರಭಾವಗೊಂಡ ಲೇಖಕರೂ ಕಾರಣರಾಗಿರುತ್ತಾರೆ. ನಿಮ್ಮ ವಿಷಯದಲ್ಲಿ ಯಾವ ಲೇಖಕರು, ಚಿಂತಕರು ಮುಖ್ಯರಾಗುತ್ತಾರೆ?
ನಾನು ಶಾಲಾದಿನಗಳಲ್ಲಿ ಪೂರ್ಣಚಂದ್ರ ತೇಜಸ್ವಿಯ ಪ್ರಭಾವಕ್ಕೆ ಒಳಗಾದೆ. ನಮ್ಮ ಹೈಸ್ಕೂಲು ಕನ್ನಡ ಮೇಷ್ಟ್ರು ವಿರೂಪಾಕ್ಷಪ್ಪನವರಿಗೆ ಧನ್ಯವಾದ ಹೇಳಬೇಕು. ಹಾಗೆಯೇ ಮತ್ತೊಬ್ಬ ಕನ್ನಡ ಮೇಷ್ಟ್ರು ಭೀಮಪ್ಪನವರು ಜಾನಪದದ ಮೇಲಿನ ಪ್ರೀತಿಯ ಪೋಷಿಸಿದರು. ಅವರನ್ನೂ ನೆನಯಬೇಕು. ನಂತರದ ದಿನಗಳಲ್ಲಿ ಕುವೆಂಪು, ಸಿದ್ಧಲಿಂಗಯ್ಯನವರು ಪ್ರಭಾವಿಸಿದರು. ಸಾಕಷ್ಟು ಸಿನಿಮಾಗಳು ಮತ್ತು ಅಂಬೇಡ್ಕರ್, ಜಾರ್ಜ್ ಆರ್ವೆಲ್ ಅವರ ವಿಚಾರಗಳು ಜೀವನವನ್ನು ಹೊಸ ದೃಷ್ಟಿಕೋನದಿಂದ ನೋಡಲು ಪ್ರೇರೇಪಿಸಿದವು. ಎಲ್ಲಕ್ಕಿಂತ ಹೆಚ್ಚಾಗಿ ಊರಿನ ಜನರು ಮತ್ತು ಅವರ ಜೀವನ, ಹೋರಾಟ ನನ್ನನ್ನು ಪ್ರಭಾವಿಸಿದ್ದೇ ಹೆಚ್ಚು.
(ಸಚಿನ್ ತೀರ್ಥಹಳ್ಳಿ ಕಥೆಯಾಧಾರಿತ, ನವೀನ ತೇಜಸ್ವಿ ನಿರ್ದೇಶಿಸಿದ ಕಿರುಚಿತ್ರ ‘ಬಿಡುಗಡೆ’ ಇಲ್ಲಿದೆ)
ಕತೆ, ಕವಿತೆ ಅಥವಾ ಇನ್ಯಾವುದೇ ಸೃಜನಶೀಲ ಕ್ರಿಯೆಗಳ ಹಿಂದಿನ ಒತ್ತಡಗಳು ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತವೆ. ನಿಮ್ಮ ಬರವಣಿಗೆಯನ್ನು ನಿರ್ದೇಶಿಸುವ, ನಿಯಂತ್ರಿಸುವ ಸಂಗತಿಗಳು ಯಾವುವು? ನೀವು ಯಾವ ಕಾರಣಕ್ಕೆ ಬರೆಯುತ್ತಿದ್ದೀರಿ ಎಂದು ನಿಮಗನ್ನಿಸುತ್ತದೆ?
ನನ್ನ ಕತೆ, ಸಿನಿಮಾ, ಹಾಡು ಹುಟ್ಟುವುದು ನನ್ನ ಜೀವನದಲ್ಲಿ ನಡೆದ ಅಥವಾ ನನಗೆ ಗೊತ್ತಿರುವವರ ಜೀವನದಲ್ಲಿ ನಡೆದ ಯಾವುದೋ ಘಟನೆಯಿಂದ. ಆ ಘಟನೆಗಳು ಮನಸ್ಸಿನಲ್ಲಿ ಉಳಿದಿರುತ್ತವೆ. ಕಾಡುತ್ತವೆ. ಆಯಾ ವಿಷಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಹ ಈ ಕಾಡುವಿಕೆ ಸಹಕಾರಿಯಾಗುತ್ತದೆ. ಒಮ್ಮೆ ಕತೆಯೊ, ಸಿನಿಮಾವೊ, ಹಾಡೊ ಆಗಿ ಹೊರಬರುತ್ತವೆ. ಹಾಗೆಯೇ ಇವುಗಳನ್ನು ಓದಿದ, ಕೇಳಿದ, ನೋಡಿದವರ ಮನಸಿನ ಏನೋ ಅನಿಸಿ ಅದನ್ನು ನಾನು ಕೇಳಿದಾಗ ಖುಷಿಯಾಗುತ್ತದೆ. ಒಂದು ಮಟ್ಟಿಗೆ ಇದು ಪ್ರಾಥಮಿಕ ಕಾರಣವಲ್ಲದಿದ್ದರೂ ಅದು ಮನಸಿನ ಮೂಲೆಯಲ್ಲಿರುವುದಂತೂ ಸತ್ಯ.
ನೀವು ಇಂಗ್ಲೀಷಿನಲ್ಲೂ ಬರೆಯುತ್ತಿದ್ದೀರಿ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳ ಬ್ಯಾಗೇಜುಗಳು ಬೇರೆಬೇರೆಯೇ ಇರುತ್ತದೆ. ನಿಮ್ಮ ಅನುಭವದ ಪ್ರಕಾರ ಯಾವ ಭಾಷೆ ನಿಮ್ಮ ಅಭಿವ್ಯಕ್ತಿಗೆ ಹೆಚ್ಚು ಸರಳವಾಗಿ ದಾರಿ ಮಾಡಿಕೊಡುತ್ತದೆ?
ನನ್ನ ಯೋಚನಾ ಭಾಷೆ ಕನ್ನಡ. ಹಾಗಾಗಿ ಕನ್ನಡದಲ್ಲಿ ಅಭಿವ್ಯಕ್ತಿ ಸುಲಭ. ಆದರೆ ಊರಿನ ಕತೆಗಳನ್ನು ಇಂಗ್ಲಿಷಿನಲ್ಲಿ ಬರೆಯುವಾಗ ಸೂಕ್ತ ಪದಗಳೇ ಸಿಗುವುದಿಲ್ಲ. ಕನ್ನಡದ್ದೇ ಪದಗಳನ್ನು ಉಪಯೋಗಿಸಿ ಬರೆಯಬಹುದು. ಆದರೆ ಜಾಸ್ತಿ ಪದಗಳಾದಷ್ಟು ಓದುಗರಿಗೆ ಅರ್ಥ ತಿಳಿಯದೆ ಕಿರಿಕಿರಿಯಾಗಬಹುದು. ಕಿರಿಕಿರಿಯಾಗದೆ ಹೇಗೆ ಊರಿನ ಸತ್ವವನ್ನು ಇಂಗ್ಲಿಷ್ನಲ್ಲಿ ಹಿಡಿದಿಡಬಹುದೆಂದು ಹುಡುಕಾಟ ನಡೆಸುತ್ತಿದ್ದೇನೆ. ಊರಿನ ಕತೆಗಳನ್ನು ಇಂಗ್ಲಿಷ್ನಲ್ಲಿ ಬರೆಯುವುದು ಬಹಳ ಮುಖ್ಯ ಅಂತ ನನಗೆ ಅನಿಸುತ್ತದೆ. ಕನ್ನಡದಲ್ಲಿ ಬರೆಯುವಾಗ ಹೊಸ ತಲೆಮಾರಿನ ಇಂಗ್ಲಿಷ್ ಪದಗಳಿಗೆ ಕನ್ನಡ ಪದಗಳು ಸಿಗುವುದಿಲ್ಲ ಆದರೆ ಅಲ್ಲಿ ಹೊಸ ಪದ ಸೃಷ್ಟಿಸುವ ಅವಕಾಶ ಒಂಥರಾ ಖುಷಿ ನೀಡುತ್ತದೆ.
ಸಿನಿಮಾ, ಸಂಗೀತ, ಫೋಟೋಗ್ರಫಿ ಇವು ಕೇವಲ ಹವ್ಯಾಸವಲ್ಲ, ನಿಮ್ಮ ಬದುಕಿನೊಂದಿಗೆ ಬೆಸೆದುಕೊಂಡಂಥವು. ಈ ಬಗ್ಗೆ ವಿವರಿಸಬಹುದೆ?
ನನಗೆ ಇವೆಲ್ಲವು ಬಹಳ ಇಷ್ಟದ ವಿಷಯಗಳು. ಕೆಲವೊಮ್ಮೆ ಯಾರಾದರೂ 'ನಿಮಗೆ ಯಾಕೆ ಸಿನಿಮಾ ಇಷ್ಟ?' ಅಂತ ನನ್ನ ಕೇಳಿದ್ರೆ 'ಅದರಲ್ಲಿ ನನಗೆ ಇಷ್ಚವಾದ - ಬರವಣಿಗೆ, ಛಾಯಾಗ್ರಹಣ, ಸಂಕಲನ, ಸಂಗೀತ, ನಟನೆ, ಸುತ್ತಾಟ, ಜನ' ಎಲ್ಲವೂ ಇದೆ ಎಂದು ಹೇಳುತ್ತೇನೆ. ನಾನು ಶಾಲಾ ದಿನಗಳಿಂದಲೂ ಕವಿತೆ, ಕತೆ ಬರೆಯುವ ಹಪಾಹಪಿಯನ್ನು ಹೊಂದಿದ್ದೆ. ಊರ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಸಂಗೀತ, ಪೋಟೋಗ್ರಫಿ ಕಲಿಯಬೇಕು ಎಂಬ ಬಯಕೆ ಇತ್ತಾದರೂ ಅವಕಾಶ ಇರಲಿಲ್ಲ. ನಾನು ಚಿಕ್ಕವನಾಗಿದ್ದಾಗ ನನ್ನನ್ನು ಮದುವೆ ಇತರೆ ಸಮಾರಂಭಗಳಿಗೆ ಕರೆದುಕೊಂಡು ಹೋದರೆ ನಾನು ಫೋಟೋಗ್ರಾಫರ್ ಅಥವಾ ವಾಲಗದವರ ಬಳಿ ಇರುತ್ತಿದ್ದೆ ಅಂತ ನಮ್ಮಮ್ಮ ಹೇಳ್ತಾರೆ.
ಬೆಂಗಳೂರಿಗೆ ಬಂದ ನಂತರ ಪಾರ್ಟ್ಟೈಮ್ ಕೆಲಸಗಳನ್ನು ಮಾಡುತ್ತಿದ್ದೆ. ಅದರಲ್ಲಿ ಹತ್ತು ಸಾವಿರ ಕೊಟ್ಟು ಒಂದು ಹಳೆಯ ಡಿಎಸ್ಎಲ್ಆರ್ ಕ್ಯಾಮೆರಾ ತೆಗೆದುಕೊಂಡು ಸ್ಟ್ರೀಟ್ ಪೋಟೋಗ್ರಫಿ ಮಾಡಲು ಶುರು ಮಾಡಿದೆ. ಬೇರೆಬೇರೆ ದೇಶಗಳ ಸಿನಿಮಾ ನೋಡುವುದರಿಂದ ನಾವು ನಮ್ಮ ಊರಿನಲ್ಲಿ ಸಿನಿಮಾ ಮಾಡಬುಹುದಲ್ಲ ಎಂಬ ಯೋಚನೆ ಶುರುವಾಯಿತು. ಇದುವರೆಗೂ ನಮ್ಮೂರಿನ ಸುಮಾರು ನೂರು ಜನರು ನನ್ನ ತಂಡ ಮಾಡಿದ ಕಿರುಚಿತ್ರಗಳಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವಾರು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಯನ್ನು ಪಡೆದಿವೆ. ಕೆಲ ಸಿನಿಮಾ, ಹಾಡುಗಳಿಗೂ ಸಾಹಿತ್ಯ ಬರೆದೆ. ಈ ವರ್ಷದಿಂದ ನಾನು ಸಂಯೋಜಿಸಿದ, ಬರೆದ ಹಾಡುಗಳನ್ನು ಬಿಡುಗಡೆಗೊಳಿಸುವ ಯೋಚನೆಯಿದೆ.