ಹೈದರಾಬಾದಿನಲ್ಲಿ ನೆಲಸಿರುವ ರಮೇಶ್ ಕಾರ್ತಿಕ್ ನಾಯಕ್ (14 ಡಿಸೆಂಬರ್ 1997) ಇಂಗ್ಲಿಷ್ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಕತೆ, ಕಾದಂಬರಿ, ಕವನಗಳನ್ನು ರಚಿಸುತ್ತಾರೆ. ಬಂಜಾರಾ ಸಮುದಾಯದ ನೋವು ನಲಿವುಗಳು ಹಾಗೂ ವರ್ತಮಾನದ ತಲ್ಲಣಗಳಿಗೆ ಅಭಿವ್ಯಕ್ತಿ ನೀಡುತ್ತಿರುವ ರಮೇಶ್ 2024ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರವೂ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರು. ನಮ್ಮ ನಡುವಿನ ಸಮರ್ಥ ಅನುವಾದಕರಾದ ಭಾಗ್ಯ ಸಿ ಎಚ್, ರಮೇಶ್ ಅವರ ಕೆಲವು ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ.

ಪೂರ್ವಜರು
ಬಾವಲಿಗಳು ಒಟ್ಟೊಟ್ಟಿಗೆ ಅತ್ತಾಗ
ಕತ್ತಲು ಸುರಿವುದು.
ರಾತ್ರಿಯು ಕಾಡಿಗೆಯಷ್ಟು ಕಡುಗಪ್ಪಾಗುವುದು
ಅಲ್ಲಿ ಜೀವಿಗಳು ಮರಳಿ ಗರ್ಭವನ್ನು ಹೊಗುವರು.
ಆಕಾಶದಿಂದಾಚೆ ನಮ್ಮ ಪೂರ್ವಜರು
ಭೂಮಿಯಿಂದ ಬರುವ ಸುದ್ದಿಗಾಗಿ ಕಾಯುವರು.
ಮಿಂಚುಹುಳುಗಳು ನಮ್ಮ ಇರವನ್ನು
ಹೊಳೆಯುವ ನಕ್ಷತ್ರಗಳ ಬಳಿಗೆ ಹೊತ್ತೊಯ್ಯುವವು.
ನಮ್ಮ ಪೂರ್ವಜರು
ತಾವು ಆಯ್ದ ಮೊಗ್ಗುಗಳನ್ನು ಒಗ್ಗೂಡಿಸುವರು,
ಮೊಗ್ಗುಗಳು ಬಂಗಾರದ ಬೀಜಗಳಾಗುವುವು
ಆಕಾಶದ ನೆಲದಲ್ಲಿ ಅವನ್ನು ಬಿತ್ತುವರು
ಮನುಷ್ಯರನ್ನು ಕೊಯ್ಲು ಮಾಡಲು.ರಮೇಶ್ ಕಾರ್ತಿಕ್ ನಾಯಕ್ ಅವರ ಕಾವ್ಯಕ್ಕೆ ನಾನು ಮೊದಲು ತೆರೆದುಕೊಂಡದ್ದು ನನ್ನ ಮಗಳ ಮೂಲಕ. ಅವರ “ಚಕ್ಮಕ್” (Chakmak) ಎಂಬ ಇಂಗ್ಲಿಷ್ ಕವಿತೆಗಳ ಸಂಕಲನದ ಒಂದೊಂದು ಕವಿತೆಯೂ ಬಂಜಾರಾ ಸಮುದಾಯದ ಬದುಕಿನ ಸಂಕಟ-ಸಂಭ್ರಮಗಳ; ವರ್ತಮಾನದ ತಲ್ಲಣಗಳ ರೂಪಕಗಳೆನಿಸಿದುವು.
ಅವರ ಕವಿತೆಗಳನ್ನು ಓದುತ್ತ ನನಗೆ ಥಟ್ಟನೆ ನೆನಪಾದವರು, ನಮ್ಮ ಎನ್.ಕೆ.ಹನುಮಂತಯ್ಯನವರು!
ರಮೇಶರ ಅನುಮತಿ ಪಡೆದು ಅವರ ಕವನಗಳನ್ನು ಅನುವಾದಿಸುತ್ತಾ ಹೋದೆ. ಕನ್ನಡ ಬಾರದ ರಮೇಶ್, ಅಜಯ್ ವರ್ಮಾ ಅಲ್ಲೂರಿಯವರ ಮೂಲಕ ಅವನ್ನು ಕೇಳಿ ತಿಳಿದುಕೊಂಡು ಮೆಚ್ವುಗೆ ವ್ಯಕ್ತಪಡಿಸಿದರು.
ಯೂನಿಫಾರಂ ಹಾಕಿದರೆ ಹೈಸ್ಕೂಲು ಹುಡುಗನಂತೆ ಕಾಣುವ ರಮೇಶ್ ಅವರ ಕವನಗಳು ಬದುಕಿನ ಅನುಭವಗಳಿಂದ ಜ್ವಲಿಸುತ್ತವೆ, ತದ್ವತ್ ಅವರ ಕಣ್ಣುಗಳ ಹಾಗೆಯೇ. ಅವರ ಕವನಗಳು ರೂಪಕಗಳಾಗಿ, ಪ್ರತಿಮೆಗಳಾಗಿ ನಮ್ಮೆದುರು ಎದ್ದುನಿಲ್ಲುವ ಪರಿ ಬೆರಗಾಗಿಸುತ್ತದೆ.
ಭಾಷೆ ನಕ್ಷತ್ರಪುಂಜಗಳಾಚೆ ಭಾಷೆಯ ಅಂಕುಡೊಂಕು ಚಿಹ್ನೆಗಳು ಉಲ್ಕೆಗಳ ಮೇಲೆ ಸೇರುವುವು ಗ್ರಹಗಳಿಗೆ ಪಿಸುಗುಡುತ್ತಾ ಅವು ವ್ಯೋಮದಿಂದ ಜಾರುವುವು ಮನುಕುಲವು ತನ್ನ ಕಣ್ಣುಗಳಲ್ಲಿ ಹುದುಗಿಸಿಕೊಂಡ ಗ್ರಹಣವನ್ನು ಹುಡುಕುತ್ತಾ ಭಾಷೆಯ ವಿಶಾಲ ದೇಹಗಳು ಕೊನೆಯಿಲ್ಲದ ಮರುಭೂಮಿಯೆಡೆಗೆ ಪಯಣಿಸುವುವು ಅಲ್ಲವು ಪುರಾಣಗಳಿಂದ ಎಂದೋ ಕಾಣೆಯಾದ ಹಕ್ಕಿಗಳನ್ನು ಎದುರಿಸುವುವು ಅವುಗಳ ಸಂಕಟವು ಹುಗಿದುಹೋದ ಪದಗಳನ್ನು ಸ್ಫೋಟದಿಂದ ಮೇಲೆತ್ತುವುವು ಪದಗಳು ಭಾಷೆಯಾಗುವ ಮುನ್ನ ಗರಿಗಳ ಸದ್ದಿಗೆ ಒನೆಯುತ್ತಾ ಧೂಮದಂತೆ ಮೇಲೇಳುವುವು ಆಮೇಲೆ ಅವು ನಳನಳಿಸುವ ಹೂಗಳಿಂದ ನೇಯ್ದ ಪದರವನ್ನು ಮುಟ್ಟುವುವು. ಆತ್ಮ ಶಲಾಕೆಗಳು ಕವಿತೆಗಾಗಿ ತಹತಹಿಸುತ್ತಾ ಬೆಂಕಿಗೆ ಶರಣಾಗುವುವು ಸುಟ್ಟು ಭಸ್ಮವಾಗುವುವು ಬಯಕೆಗಳ ಜ್ವಾಲೆಯಲ್ಲಿ. ಮೊಗ್ಗೊಂದು ಅರಳುವುದು ಬ್ರಹ್ಮಾಂಡದ ಹನಿಗಳ ಮೇಲೆ . ಬಿಚ್ಚಿಕೊಳ್ಳುವುದು ಕವಿತೆ ದಳದಳವಾಗಿ ಪ್ರತಿಯೊಂದರಡಿಯಲ್ಲಿ ರೂಪಕವೊಂದು ಕಾಯುತ್ತಿರುವುದು.
ಹಚ್ಚೆ
ಮುದುಕಿಯೊಬ್ಬಳು
ತನ್ನ ಸೊಂಟಕ್ಕೆ ಬುಟ್ಟಿ ಕಟ್ಟಿಕೊಂಡು
ಬದುಕಿಡೀ ಹಾಡುತ್ತಲೇ ಇರುವಳು.
ಬಣ್ಣ ತುಂಬಿದ ಸೂಜಿ
ತೂರುವುದು ರಕ್ತ ಮಾಂಸದ ಸುರಂಗದೊಳಗೆ ಮಾಂತ್ರಿಕವಾಗಿ
ದೇಹಕ್ಕೆ ರಕ್ಷಣೆ ನೀಡುವಳವಳು ಹೀಗೆ.
ಒಂದು ಚುಕ್ಕಿ:
ಸೂರ್ಯ ಚಂದ್ರ ನಕ್ಷತ್ರಗಳು ಹಾಗೂ ಗ್ರಹಗಳು.
ಚುಕ್ಕೆಯೊಳಗೊಂದು ಚುಕ್ಕಿ
ಹೂಗಳು, ಭೂಮಿಯ ಮೇಲಿನ ಪವಿತ್ರ ಹೂಗಳು.
ಮರಗಳು:
ಪೂರ್ವಜರು ಕಳೆದುಕೊಂಡ ಕಾಡು.
ಮನುಷ್ಯನ ಚಿತ್ರಗಳು:
ಸೋದರ ಸೋದರಿಯರು.
ಮುಷ್ಠಿ ಕಾಳಿನೊಡನೆ
ಅಥವಾ ಒಂದೆರಡು ತುಂಡು ಒಣಬ್ರೆಡ್ಡಿನೊಡನೆ
ತನ್ನ ಗೂಡು ಸೇರುವಳು
ಎಲ್ಲ ಮೃತ ಜೀವಿಗಳ ಅವಶೇಷಗಳು ವಿರಮಿಸಿರುವಲ್ಲಿಗೆ.ಕವಡೆ
ಕಡಲಿನ ತಡಿಯ ಹೆಜ್ಜೆಗುರುತುಗಳ ಪಕ್ಕದಲ್ಲೇ
ನೀರವ ರಾತ್ರಿಗಳಲಿ
ಹಾಡುವುದು ಗಾಳಿಯು ಕವಡೆಗಳ ಒಳಗಿಂದ
ಸಾವಿನ ಭಯದ ಎದೆಬಡಿತ
ಚುಚ್ಚುವ ಯಾತನೆ
ಅಡಗುವುದು ಕವಡೆಯೊಳಗೆ ರಕ್ಷಣೆಗಾಗಿ
ಪ್ರೀತಿಯ ಬೆಚ್ಚನೆಯ ಅಪ್ಪುಗೆ
ಸಂತಸದ ಕುರುಡು ಕುದುರೆಗಳು
ಕವಡೆಯೊಳಗಿಂದ ಹಾರುವುವು
ಜಲಕೀಟಗಳನ್ನು ಎಚ್ಚರಿಸುತ್ತಾ.
ಮುರಿದ ದೋಣಿಗಳೊಳಗೆ
ತುಕ್ಕು ಹಿಡಿಯದ ನಿಧಿ
ದೇಹಗಳನ್ನು ಕಳೆದುಕೊಂಡ ಮೀನುಗಾರರು
ಸಾವಿನಂಗಳದಲ್ಲಿ ರೋದಿಸುವರು
ಒಟ್ಟಾಗಿ ಹಾಡುವರು ಕವಡೆಗಾಗಿ
ಕವಡೆಗಳು ಗುದ್ದಾಡುವುವು ಸಿಡಿಯುವುವು
ಬಿರುಗಾಳಿಯೊಡನೆ ಮಾತಾಡುವುವು
ಜೀವಿಗಳೆಲ್ಲರ ಪಾಪ ಪುಣ್ಯದ ಬಗ್ಗೆ.ನವಿಲು
ಕಪ್ಪು ಸಾಮ್ರಾಜ್ಯದ ಪರಿಶುದ್ಧತೆಯಲ್ಲಿ
ಅವು ಮೀಯುವುವು
ಅವುಗಳ ಮೈಮೇಲಿನ
ನಕ್ಷತ್ರದ ಹುಡಿಗಳು
ಹೊಳೆಯುವ ಚಿಪ್ಪುಗಳಾಗುವುವು
ಅವು ಹಸಿವಿನಿಂದ ಗಿರಗಿರನೆ ತಿರುಗುವುವು
ಅವುಗಳ ಶಿಖಿಯು
ಖಾಲಿ ಸಾಮ್ರಾಜ್ಯ.
ಆಟದ ನವಿಲು
ಮುಖವಾಡಗಳನ್ನು ಅದರಿಂದಲೇ ಮಾಡುವರು
ಅದರ ಬಿಚ್ಚಿದ ಗರಿಯು
ಆಕಾಶ ಭೂಮಿಯು ಉಟ್ಟ ಬಟ್ಟೆಯ ಹಾಗೆ
ಹರಡಿಕೊಳ್ಳುವುದು
ಹೂಗಳ ಬಣ್ಣಗಳನ್ನು ಹೀರಿಕೊಳ್ಳುತ್ತಾ
ಅವು ಅಡಗಿದ ಪಚ್ಚೆಯ ಬಣ್ಣಗಳನ್ನು ಪ್ರತಿಫಲಿಸುವುದು.
ಯಾವ ಬೇಟೆಗಾರನೂ ಬಾರದಿರಲಿ ಯಾವ ಶತ್ರುವೂ ತಮ್ಮ ಕುಟುಂಬಕ್ಕೆ ಹಾನಿಮಾಡದಿರಲಿ
ಯಾವ ದುಷ್ಟಶಕ್ತಿಗಳೂ ಸೌಂದರ್ಯಕ್ಕಾಗಿ
ತಮ್ಮನ್ನು ಹಿಂಸಿಸದಿರಲಿ
ಯಾರೂ ತಮ್ಮ ಉದುರಿದ ಗರಿಗಳನ್ನು
ಮುಟ್ಟದಿರಲಿ
ಎಂದು ಅವು ಬಯಸುವುವು.
ಬಂಜಾರ ಆದಿವಾಸಿಗಳ ಹಾಗೆ
ಅವೂ ಕಪ್ಪು ಮೋಡಗಳೊಂದಿಗೆ ತಿರುಗಬಯಸುವುವು
ವಿಳಾಸವೇ ಇಲ್ಲದ ಭೂಮಿಯ ಮೇಲಿನ ಜನರು
ಕಾಲಯಾತ್ರೆಯ ಕಥಾನಕಗಳ ಅಲೆಮಾರಿಗಳು.ಭಾಗ್ಯ ಚಿ ಎಚ್
ಭಾಗ್ಯ ಸಿ ಎಚ್ ಸಾಹಿತ್ಯದ ಒಳ್ಳೆಯ ಓದುಗರು ಮತ್ತು ಅನುವಾದಕರು. ಗುಜರಾತಿನ ಜಯಂತ್ ಪರ್ಮಾರ್, ಒಡಿಯಾ ಕವಿ ಪ್ರವಾಸಿನಿ ಮಹಾಕೂಡ್, ಹೈದರಾದಿನ ರಮೇಶ್ ಕಾರ್ತಿಕ್ ನಾಯಕ್ ಮೊದಲಾದವರ ಕವನಗಳು; ಹಾಗೂ ಆಧುನಿಕ ಇರಾನಿಯನ್ ಕವನಗಳ ಅನುವಾದ ಮಾಡಿದ್ದಾರೆ. ಆಗೀಗ ಲೇಖನಗಳನ್ನು ಬರೆದಿರುವುದೂ ಉಂಟು. ಬರೆದದ್ದನ್ನು ಪುಸ್ತಕರೂಪದಲ್ಲಿ ತರುವುದರ ಬಗ್ಗೆ ಅವರಿಗೆ ಕೊಂಚ ಅಲರ್ಜಿ. ಅದು ಇಲ್ಲವಾಗಲೆಂದು ಅವರ ಓದುಗರಾದ ನಮ್ಮೆಲ್ಲರ ಹಾರೈಕೆಯಿದೆ.
ಇದನ್ನೂ ಓದಿ …
ಒಂದು ಪುಟ್ಟ ಹಕ್ಕಿಗಾಗಿ ಲೋಕವನ್ನು ಉಳಿಸಲಾದೀತೇ?
ಕವಿ, ಪತ್ರಕರ್ತೆ, ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಜಸಿಂತಾ ಕೆರ್ಕೆಟ್ಟಾ ಅವರು 2022ರಲ್ಲಿ ಪ್ರಕಟಿಸಿದ ‘ಅಂಗೋರ್' (ಕೆಂಡ) ಎಂಬ ದ್ವಿಭಾಷಾ (ಹಿಂದಿ-ಇಂಗ್ಲಿಷ್) ಕವನ ಸಂಕಲನವನ್ನು ಸಂವರ್ತ ‘ಸಾಹಿಲ್’ ಕನ್ನಡಕ್ಕೆ ‘ಗೋರಿಯ ಮೇಲೆ ರಾಗಿಯ ಕೊನರು’ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಂಕೇತ ಪಾಟೀಲ






nice poems and good translation...
Congrats both of them