ಪೋರ್ಟ್ ಬ್ಲೇರ್ನಲ್ಲಿರುವ ಸೆಲ್ಯುಲರ್ ಜೈಲಿನಲ್ಲಿ ಪ್ರತಿದಿನ ನಡೆಯುವ ‘Light and Sound Show’ ಅಲ್ಲಿಗೆ ಹೋಗುವ ಪ್ರವಾಸಿಗಳು ಬೆರಗಿನಿಂದ ವೀಕ್ಷಿಸುವ ಭವ್ಯ ವಿದ್ಯಮಾನ. ಸುಮಾರು ನಲವತ್ತು ನಿಮಿಷಗಳ ಕಾಲಾವಧಿಯಲ್ಲಿ ಅದು ಬ್ರಿಟಿಷ್ ವಸಾಹತುಶಾಹಿ, ಜಪಾನಿನ ಆಕ್ರಮಣ, ಸ್ವಾತಂತ್ರ್ಯ ಸಂಗ್ರಾಮ ಹಾಗೂ ರಾಜಕೀಯ ಕೈದಿಗಳ ಮೇಲೆ ನಡೆದ ದೌರ್ಜನ್ಯಗಳ ಚರಿತ್ರೆಯನ್ನು ತೆರೆದಿಡುತ್ತದೆ. ಅದೊಂದು ಕಣ್ಣುಕೋರೈಸುವ, ಕಿವಿಗಡಚಿಕ್ಕುವ, ಎದೆ ನಡುಗಿಸುವ ತೀವ್ರವಾದ ಅನುಭವ. ಹಾಗಿದ್ದೂ ಆ ಪ್ರದರ್ಶನವು — ವಿಶೇಷವಾಗಿ ಅದರ ಕೊನೆಯ ಘట్టವು — ಅಂಡಮಾನ್ನ ಚರಿತ್ರೆಯನ್ನು ಕುರಿತ ಒಳನೋಟಗಳನ್ನು ಕೊಡುವುದಕ್ಕಿಂತ ಹೆಚ್ಚಾಗಿ, ಪ್ರಾಪಗ್ಯಾಂಡಾದಂತೆ ತೋರುತ್ತದೆ. ಆ ದ್ವೀಪಗಳ ಸಂಕೀರ್ಣ ಚರಿತ್ರೆಯನ್ನು ಒಂದು ಅನುಕೂಲಕರ ರಾಜಕೀಯ ನಿಲುವಿನ ಪ್ರತಿಪಾದನೆಯ ಮಟ್ಟಕ್ಕೆ ಇಳಿಸಿಬಿಟ್ಟಂತೆ ಭಾಸವಾಗುತ್ತದೆ. ಅದರ ಒಟ್ಟಾರೆ ಉದ್ದಿಶ್ಯವು ಪ್ರಸ್ತುತ ಆಳ್ವಿಕೆಯ ಮತ್ತು ಅದನ್ನು ಪ್ರಶ್ನಾತೀತವಾಗಿ ಬೆಂಬಲಿಸುತ್ತಿರುವ ಮುಖ್ಯವಾಹಿನಿಯ ಪ್ರಜ್ಞೆಯ ಕೇಂದ್ರಬಿಂದುವಿನಲ್ಲಿರುವ ಒಬ್ಬನೇ 'ವೀರ'ನ ಕೊಂಡಾಟದ ಹೊರತು ಮತ್ತೇನಲ್ಲ ಎಂದೆನ್ನಿಸದಿರದು — ನಮ್ಮಂಥ ಕೆಲವರಿಗಾದರೂ!
ಹೀಗೆ ಅನುಕೂಲಕರವಾದುದನ್ನು ಮಾತ್ರ ಹೆಕ್ಕಿಕೊಂಡು ಚರಿತ್ರೆಯನ್ನು ತಿದ್ದುವ, ಬದಲಿಸುವ ಪ್ರಕ್ರಿಯೆಯು ಬಹುಕಾಲದಿಂದ ನಡೆಯುತ್ತಲೇ ಇದೆ. ಅಂಡಮಾನ್ನ ವಿಮಾನ ನಿಲ್ದಾಣದ ಹೆಸರಿನಿಂದ ಹಿಡಿದು ಸೆಲ್ಲ್ಯುಲರ್ ಜೈಲಿನ ಗೈಡ್ಗಳು ನಮಗೆ ಹೇಳುವ ದಿಟ-ಸಟೆ ಹದಬೆರೆತ ಕತೆಗಳವರೆಗೆ ಇದು ಚಾಚಿಕೊಂಡಿದೆ. ಒಂದು ಕತೆಯನ್ನು ಮೇಲೆತ್ತಿ ತೋರುವ ಆತುರದಲ್ಲಿ ಉಳಿದ ಕತೆಗಳ ಬಾಯನ್ನು ವ್ಯವಸ್ಥಿತವಾಗಿ ಮುಚ್ಚಿಸಲಾಗುತ್ತದೆ. ನಮ್ಮೆದುರು ಜೀವ ತಳೆಯುವ ಆಕರ್ಷಕ ದೃಶ್ಯಾವಳಿಯು, ಆ ಅಂದದ ಹೊಗರಸಾಲು ಏನನ್ನೋ ಮರೆಮಾಚುತ್ತಿದೆ; ಯಾವುದಕ್ಕೋ ನಮ್ಮನ್ನು ಕುರುಡರನ್ನಾಗಿಸಿದೆ.
ಪಂಕಜ್ ಸೆಖ್ಸಾರಿಯಾ ಅವರು ಐಐಟಿ ಬಾಂಬೆಯ ಗ್ರಾಮೀಣ ಪ್ರದೇಶಗಳ ಪರ್ಯಾಯ ತಂತ್ರಜ್ಞಾನ ಕೇಂದ್ರದಲ್ಲಿ (Centre for Technology Alternatives for Rural Areas (C-TARA), IIT Bombay) ಸಹ ಪ್ರಾಧ್ಯಾಪಕರಾಗಿದ್ದಾರೆ. ಅವರು ಸಂಶೋಧಕರು, ಲೇಖಕರು, ಛಾಯಾಗ್ರಾಹಕರು, ಶಿಕ್ಷಣತಜ್ಞರು ಮತ್ತು ಬಹುಮುಖ್ಯವಾಗಿ ಹೋರಾಟಗಾರರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಕುರಿತು ವಿಶೇಷ ಗಮನಹರಿಸಿ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ವ್ಯಾಪಕವಾದ ಕೆಲಸ ಮಾಡುತ್ತಿದ್ದಾರೆ. Islands in Flux: The Andaman and Nicobar Story ಪುಸ್ತಕದಲ್ಲಿ ಅವರು ಒಂದು ಕಡೆ ಹೀಗೆ ಹೇಳುತ್ತಾರೆ:
ಈ ದ್ವೀಪಗಳ ಸುದೀರ್ಘ ಚರಿತ್ರೆಯನ್ನು ಕುರಿತು ಒಂದು ಪುಸ್ತಕವನ್ನು ಬರೆದದ್ದೇ ಆದರೆ, ಬ್ರಿಟಿಷ್ ವಸಾಹತುಶಾಹಿಯ ಸಲುವಾಗಿ ಬಹಳವೆಂದರೆ ಒಂದು ಪುಟವನ್ನು ಮೀಸಲಿಡಬಹುದು; ಇನ್ನು ಭಾರತದ ಆಡಳಿತಕ್ಕೋ ಅದರಲ್ಲಿ ಒಂದು ಪ್ಯಾರಾಗ್ರಾಫ್ ದಕ್ಕಬಹುದಷ್ಟೇ.
ಆದರೆ, ವಾಸ್ತವದಲ್ಲಿ ಅಲ್ಲಿ ನಡೆಯುತ್ತಿರುವುದು ಈ ದ್ವೀಪಗಳ ಅತ್ಯಂತ ಹಳೆಯ ಕತೆಯ ಸಂಪೂರ್ಣ ಅಳಿಸುವಿಕೆ: ಅದರ ಸ್ಥಳೀಯ ಮೂಲನಿವಾಸಿಗಳ ಸಹಸ್ರಮಾನಗಳ ಇತಿಹಾಸವನ್ನು ಕುರಿತಾದ ದಿವ್ಯ ನಿರ್ಲಕ್ಷ್ಯ. ವಿಪರ್ಯಾಸವೆಂದರೆ, ಸ್ವತಃ ವಸಾಹತುಶಾಹಿಗೆ ತುತ್ತಾಗಿದ್ದ ಭಾರತವು ವಸಾಹತುಶಾಹಿಯನ್ನು ಮುಂದುವರೆಸುವುದರಲ್ಲಿ ತನ್ನ ಪಾತ್ರವನ್ನು ಮಾತ್ರ ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಅಂಥ ವಾದಗಳನ್ನು ನಿರಾಕರಿಸುತ್ತದೆ. ವಾಸ್ತವವನ್ನು ಎದುರಿಸಲಾಗದ ನಾವೆಲ್ಲ ಒಂದು ವಿಚಿತ್ರ ಬಗೆಯ ಅರಿವಿನ ಅಸಂಗತತೆಯಿಂದ (cognitive dissonance) ಬಳಲುತ್ತಿದ್ದೇವೆ. ಇದು ನಮ್ಮನ್ನೆಲ್ಲ ಕಳವಳಕ್ಕೀಡುಮಾಡಬೇಕಾದ ಸಂಗತಿ.
ಭಾರತದ ಸ್ವಾತಂತ್ರ್ಯೋತ್ತರ ಅವಧಿಯು ಆಳ್ವಿಕೆಯು ಪ್ರಾಯೋಜಿಸಿದ ಕ್ಷಿಪ್ರಗತಿಯ ವಸಾಹತುಶಾಹಿಯ ಯುಗವಾಗಿತ್ತು. ಅಂಡಮಾನ್ ಮತ್ತು ನಿಕೊಬಾರ್ನಲ್ಲಿ ಇದು ಶುರುವಾದದ್ದು 1960ರ ದಶಕದಲ್ಲಿ: ವಸಾಹತನ್ನು ನಿರ್ಮಿಸುವ ಯೋಜನೆಗೆ ಜನರನ್ನು ಪೂರೈಸುವ ಮೂಲಕ. ಆ ಕಾಲದ ಅಧಿಕೃತ ಸರ್ಕಾರಿ ದಾಖಲೆಗಳನ್ನು ನಾವು ಪರಿಶೀಲಿಸಿದರೆ, ಅವನ್ನು ಸ್ಪಷ್ಟವಾಗಿ ‘ವಸಾಹತುಶಾಹಿ ಯೋಜನೆಗಳು’ (Colonisation Schemes) ಎಂದೇ ಕರೆಯಲಾಗಿದೆ ಎಂದು ಸೆಖ್ಸಾರಿಯಾ ಉಲ್ಲೇಖಿಸುತ್ತಾರೆ. ವಲಸೆಯನ್ನು ಪ್ರೋತ್ಸಾಹಿಸಲು ಭಾರತದ ಮುಖ್ಯ ಭೂಭಾಗದಿಂದ ಬಂದ ಕುಟುಂಬಗಳಿಗೆ ಒಂದು ಪ್ಯಾಕೇಜ್ ನೀಡಲಾಯಿತು: ಬತ್ತ ಬೆಳೆಯಲು 5 ಎಕರೆ ಫಲವತ್ತಾದ ಭೂಮಿ, 5 ಎಕರೆ ಗುಡ್ಡಗಾಡು ಜಮೀನು, ಜಾನುವಾರು ಕೊಳ್ಳಲು ಸಾಲ, ಮತ್ತು ಮನೆ ಕಟ್ಟಿಕೊಳ್ಳಲು ಅಗತ್ಯವಿದ್ದಷ್ಟು ಮರಮುಟ್ಟು.
ಹಾಗೆ ನೋಡಿದರೆ, ಚಾರಿತ್ರಿಕವಾಗಿ ಭಾರತದ ಮುಖ್ಯಭೂಮಿಗೂ ಈ ನಡುಗಡ್ಡೆಗಳಿಗೂ ಸಂಪರ್ಕವೇ ಇರಲಿಲ್ಲ. ಬ್ರಿಟಿಷರು ಅವನ್ನು ತಮ್ಮ ವಸಾಹತನ್ನಾಗಿ ಮಾಡಿಕೊಂಡಿರದಿದ್ದರೆ ಆ ದ್ವೀಪಸಮೂಹವು ಭಾರತದ ಆಳ್ವಿಕೆಯ ಭಾಗವಾಗಿರುವುದನ್ನು ಕಲ್ಪಿಸಿಕೊಳ್ಳುವುದೇ ಅಸಂಭವನೀಯ. ಅವು ಬ್ರಿಟಿಷರಿಂದ ನಮಗೆ ಬಂದ ಬಳುವಳಿ. ಆ ಅರ್ಥದಲ್ಲಿ, ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ಮೇಲಿನ ಭಾರತದ ಹಕ್ಕು ವಸಾಹತುಶಾಹಿಯ ಮುಂದುವರಿಕೆಯಷ್ಟೇ.
ಈ ಪ್ರಕ್ರಿಯೆಯು ಇಂದಿಗೂ ಮುಂದುವರೆದಿದೆ. ಅದರ ಒಂದು ರೂಪ ಮರುನಾಮಕರಣ: ಪೋರ್ಟ್ ಬ್ಲೇರ್ ‘ಶ್ರೀ ವಿಜಯ ಪುರಂ’ ಆಗಿದೆ, ಹ್ಯಾವ್ಲಾಕ್ ದ್ವೀಪ ಈಗ ಅಧಿಕೃತವಾಗಿ ‘ಸ್ವರಾಜ್ ದ್ವೀಪ್’, ನೀಲ್ ದ್ವೀಪವು ‘ಶಹೀದ್ ದ್ವೀಪ’, ಹೀಗೆ. ವಸಾಹತುಶಾಹಿಯ ಭೂತದ ಕುರುಹುಗಳನ್ನು ಅಳಿಸಿಹಾಕುವ ಭರದಲ್ಲಿರುವ ನಾವು ವರ್ತಮಾನದಲ್ಲಿ ನಡೆದಿರುವ ನವವಸಾಹತುಶಾಹಿಯ ಬಗ್ಗೆ ಚಿಂತಿಸುತ್ತೇವೆಯೇ? ಉದಾಹರಣೆಗೆ, ನಮಗೆ ಅಗತ್ಯವೂ ಸೂಕ್ತವೂ ಎನ್ನಿಸುವ ಇಂಥ ಹೆಸರುಗಳು ಅಲ್ಲಿನ ಮೂಲ ನಿವಾಸಿಗಳಿಗೆ ಎಷ್ಟು ವಿಚಿತ್ರವಾಗಿ ತೋರುತ್ತಿರಬಹುದು, ಅನಗತ್ಯವೆನ್ನಿಸುತ್ತಿರಬಹುದು! ಈ ದ್ವೀಪಗಳಿಗೆ ಅವರೇ ಕೊಟ್ಟ ಮೊದಲಿನ ಹೆಸರುಗಳಿರಲಿಲ್ಲವೇ? ಖಂಡಿತವಾಗಿಯೂ ಇದ್ದುವು. ಹ್ಯಾವ್ಲಾಕ್ ದ್ವೀಪದ ಮೂಲ ಹೆಸರು ‘ಥಿ-ತಾರ್-ಸಿರೊ’, ಎಂದರೆ ‘ತೆರೆದ ಕಡಲಿನ ಬಳಿಯ ನಾಡು’. ಪೋರ್ಟ್ ಬ್ಲೇರ್ ಎಂಬುದು ಗ್ರೇಟ್ ಅಂಡಮಾನೀಸ್ ಜನರಿಗೆ ‘ಲಾವೊ-ತಾರಾ ನ್ಯೊ’, ಎಂದರೆ ‘ಕೆಡುಕಿನ ಅಥವಾ ಹೊರಗಿನವರ ನೆಲೆ’. ಆ ಹೆಸರಂತೂ ಸರಿಯಾಗಿಯೇ ಇದೆಯಲ್ಲವೇ?
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಆಫ್ರಿಕಾದಿಂದ ಹೊರಬಂದ ಮೊದಲ ವಲಸಿಗರ ನೆಲೆಗಳು. ಈ ವಲಸೆಗಾರರು ಸುಮಾರು 65000 ವರ್ಷಗಳ ಹಿಂದೆ ಬಂದವರು. ಒಂದರ್ಥದಲ್ಲಿ ಇವರು ಈ ನಾಡಿನ ಮೊದಲ ವಸಾಹತುದಾರರು. ಆದರೆ ಆಧುನಿಕ ಮಾನವರಿಗಷ್ಟೇ ನಮ್ಮ ದೃಷ್ಟಿಕೋನವನ್ನು ಸೀಮಿತಗೊಳಿಸಿಕೊಂಡರೆ ನಿಜಾರ್ಥದಲ್ಲಿ ಇವರು ಈ ನಾಡಿನ ಮೂಲನಿವಾಸಿಗಳು. ಇಲ್ಲಿನ ಬುಡಕಟ್ಟು ಸಮುದಾಯಗಳು ಹತ್ತಾರು ಸಾವಿರ ವರ್ಷಗಳಷ್ಟು ಕಾಲ ಹೊರಜಗತ್ತಿನ ಸಂಪರ್ಕವಿಲ್ಲದೇ ತಮ್ಮ ಪಾಡಿಗೆ ತಾವು ಬದುಕುತ್ತ ಬಂದಂಥವು. 19ನೆಯ ಶತಮಾನದ ಶುರುವಾತಿನಲ್ಲಿ ಸುಮಾರು 5000 ಮೂಲನಿವಾಸಿಗಳು ಈ ದ್ವೀಪಗಳಲ್ಲಿ ವಾಸವಾಗಿದ್ದರು. ಇಲ್ಲಿದ್ದ ಬುಡಕಟ್ಟುಗಳಲ್ಲಿ ಮುಖ್ಯವಾದುವು, ಓಂಗೆ, ಗ್ರೇಟ್ ಅಂಡಮಾನೀಸ್, ಸೆಂಟಿನೆಲೀಸ್, ಜಾರವಾ, ನಿಕೋಬರೀಸ್, ಮತ್ತು ಶೋಂಪೆನ್. ಇಂದು, ಅವರ ಒಟ್ಟಾರೆ ಸಂಖ್ಯೆ 500ಕ್ಕಿಂತ ಕಡಿಮೆಗೆ ಕುಸಿದಿದೆ. ಅಷ್ಟೇ ಅಲ್ಲ, ಗ್ರೇಟ್ ಅಂಡಮಾನೀಸ್ ಬುಡಕಟ್ಟುಗಳ ಹಲವು ಪಂಗಡಗಳು ಸಂಪೂರ್ಣವಾಗಿ ಕಣ್ಮರೆಯಾಗಿವೆ. ‘ಪುಜ್ಜುಕರ್’ ನಂತಹ ಅವರ ನುಡಿಗಳೂ ಅಳಿದುಹೋಗಿವೆ. ಒಂದು ಕಾಲದಲ್ಲಿ ದ್ವೀಪಸಮೂಹದಾದ್ಯಂತ ಹರಡಿದ್ದ ಅವರನ್ನೀಗ ಕೆಲವು ಮೀಸಲು ಪ್ರದೇಶಗಳಿಗೆ ಸೀಮಿತಗೊಳಿಸಲಾಗಿದೆ. ಆದರೆ, ಮುಖ್ಯಭೂಮಿಯಿಂದ ಬಂದ ವಸಾಹತುಗಾರರು ಅವರ ತಾಯ್ನೆಲದ ಬಹುತೇಕ ಭಾಗಗಳನ್ನು ಆಕ್ರಮಿಸಿಕೊಳ್ಳುತ್ತ ಸಾಗಿದ್ದಾರೆ.
ಇದು ಜಗತ್ತಿನಾದ್ಯಂತ ಮರುಕಳಿಸುವ ಬುಡಕಟ್ಟು ಸಮುದಾಯಗಳ ಕಥೆ. ದಕ್ಷಿಣ ಅಮೇರಿಕಾ, ಮಧ್ಯ ಭಾರತ, ಅಥವಾ ಅಂಡಮಾನ್ — ಎಲ್ಲಿಯೇ ಇರಲಿ. ‘ನಾಗರಿಕ’ ಪ್ರಪಂಚದೊಂದಿಗಿನ ಸಂಪರ್ಕವು ಸಾಂಕ್ರಾಮಿಕ ರೋಗಗಳ ದಾಳಿಯನ್ನು ತರುತ್ತದೆ; ಕಳ್ಳಬೇಟೆಗಾರರು ಮತ್ತು ಅಕ್ರಮ ಮಾಫಿಯಾಗಳು ಮದ್ಯ ಮತ್ತು ತಂಬಾಕನ್ನು ಪರಿಚಯಿಸಿ, ಹಲ ಬಗೆಯ ವ್ಯಸನಗಳಿಗೆ ದಾರಿ ಮಾಡಿಕೊಡುತ್ತಾರೆ. ಲೈಂಗಿಕ ಶೋಷಣೆಯೂ ತಡೆಯಿಲ್ಲದೆಯೇ ನಡೆಯುತ್ತದೆ. ಇನ್ನೊಂದು ಬದಿಯಿಂದ ಆಳ್ವಿಕೆಯು ಬಾಗಿಲನ್ನು ತಳ್ಳಿ ಒಳನುಗ್ಗುತ್ತದೆ. ‘ಸಹಾಯ’ ಮಾಡುವ ಸೋಗನ್ನು ಹಾಕಿಕೊಂಡು; ಪಡಿತರ ಮತ್ತಿತರ ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಮೂಲಕ. ಅದುವರೆವಿಗೂ ತಮ್ಮ ಪಾಡಿಗೆ ತಾವಿದ್ದು ಸ್ವಾವಲಂಬಿಗಳಾಗಿದ್ದ ಸಮುದಾಯಗಳಿಗೆ ಮತ್ತೊಂದು ರೀತಿಯ ವ್ಯಸನಕ್ಕೆ ಗುರಿಮಾಡಲಾಗುತ್ತದೆ. ಆ ಕೆಟ್ಟ ಚಟದ ಹೆಸರು ಪರಾವಲಂಬನೆ. ನಾಗರಿಕತೆಯ ಪ್ರವೇಶದಿಂದ ಒಳ್ಳೆಯದೇನೂ ಆಗುವುದಿಲ್ಲವೆಂದಲ್ಲ. ಉಚಿತ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯವು ಅವರಿಗೆ ದಕ್ಕುವಂತಾಗುತ್ತದೆ. ಆದರೆ, ಇಲ್ಲಿ ಯೋಚಿಸಬೇಕಾದ ವಿಷಯವೆಂದರೆ, ನಿಜಕ್ಕೂ ಅವರಿಗೆ ಅದು ಬೇಕಾಗಿದ್ದಿತೇ ಅಥವಾ ಅವರ ಮೇಲೆ ಹೇರಲಾದ ಬಲವಂತದ ಸಂಪರ್ಕದ ಕಾರಣದಿಂದ ಆ ಅಗತ್ಯವನ್ನು ಕೃತಕವಾಗಿ ಸೃಷ್ಟಿಸಲಾಯಿತೇ ಎಂದು.
ಜಾರವಾ ಬುಡಕಟ್ಟಿಗೆ ಮೀಸಲಾದ ಅಭಯಾರಣ್ಯದ ಮೂಲಕ ಹಾದುಹೋಗುವ ‘ಗ್ರೇಟ್ ಅಂಡಮಾನ್ ಟ್ರಂಕ್ ರೋಡ್’ ಈ ಹೇರಿಕೆಗೆ ಸಾಕ್ಷಿಯಾಗಿ ನೂರಾರು ಕಿಲೋಮೀಟರುಗಳಷ್ಟು ಹಬ್ಬಿಕೊಂಡಿದೆ. ಇದು ದಕ್ಷಿಣದ ಪೋರ್ಟ್ ಬ್ಲೇರ್ ಅನ್ನು ಬಾರಾಟಾಂಗ್, ಮಾಯಾಬಂದರ್ ಮತ್ತು ಡಿಗ್ಲಿಪುರದಂತಹ ಉತ್ತರದ ಪಟ್ಟಣಗಳೊಂದಿಗೆ ಸಂಪರ್ಕಿಸುವ ಮಾರ್ಗ. ಬುಡಕಟ್ಟು ಹಿತಾಸಕ್ತಿ ಸಂಘಟನೆಗಳ ಹಲವಾರು ಪ್ರತಿಭಟನೆಗಳು ಮತ್ತು ಸ್ವತಃ ಜಾರವಾ ಜನರ ವಿರೋಧದ ನಡುವೆಯೂ ಸರ್ಕಾರವು ಈ ರಸ್ತೆಯನ್ನು ನಿರ್ಮಿಸಿತು. ಮುಂದುವರಿದ ವಿರೋಧದಿಂದಾಗಿ ಆ ರಸ್ತೆಯನ್ನು ಮುಚ್ಚಲು, ಕಡೆಯ ಪಕ್ಷ ವಾಹನ ಸಂಚಾರವನ್ನು ಸೀಮಿತಗೊಳಿಸಲು ಸುಪ್ರೀಂ ಕೋರ್ಟ್ನಿಂದ ಹಲವು ಆದೇಶಗಳು ಬಂದಿವೆ. ಅವುಗಳ ಹೊರತಾಗಿಯೂ ಏನೂ ಬದಲಾಗಿಲ್ಲ. ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣವು ನಿರಂತರವಾಗಿ ಮುಂದುವರೆದಿದೆ.
‘ಜಾರವಾ’ ಎಂಬ ಹೆಸರಿನ ಹಿಂದೆಯೇ ಒಂದು ಕುತೂಹಲಕಾರಿ ಕತೆಯಿದೆ. ಜಾರವಾ ಎಂದು ಯಾರನ್ನು ಕರೆಯಲಾಗುತ್ತದೇ ಆ ಜನರ ನುಡಿಯಲ್ಲಿ ಅಂಥ ಪದವೇ ಇಲ್ಲ. ವಾಸ್ತವದಲ್ಲಿ ಅದು ಅವರ ನೆರೆಯ ಗ್ರೇಟ್ ಅಂಡಮಾನೀಸ್ ಸಮುದಾಯದ ನುಡಿಯಲ್ಲಿ 'ಅನ್ಯ', ‘ಅಪರಿಚಿತ’ ಅಥವಾ ‘ಬೇರೆಯ’ ಎಂಬರ್ಥ ಕೊಡುವ ಪದ. ಹಾಗಿದ್ದರೆ, ‘ಜಾರವಾ’ ಜನರು ತಮ್ಮನ್ನು ತಾವು ಏನೆಂದು ಕರೆದುಕೊಳ್ಳುತ್ತಾರೆ? ಅವರ ನುಡಿಯಲ್ಲಿ ‘ಆಂಗ್’ (Aong) ಎಂಬ ಪದವಿದೆ. ಅದು ‘ನಾವು’ ಅಥವಾ ‘ನಮ್ಮವರು’ ಅಥವಾ ‘ನಮ್ಮ ಜನ’ ಎಂಬರ್ಥವನ್ನು ಸೂಚಿಸುತ್ತದೆ. ಆದರೆ, ಅದು ಅವರು ತಮ್ಮ ಬುಡಕಟ್ಟಿನ ಗುರುತಾಗಿ ಬಳಸುವ ಪದವೇ, ಅಥವಾ ಕೇವಲ ಸಾಮಾನ್ಯ ಬಳಕೆಯ ಒಂದು ಪದವೇ? ಒಂದು ಸಮುದಾಯವು ಬೇರೆಯವರ ಹಂಗಿಲ್ಲದೇ ತನ್ನಷ್ಟಕ್ಕೆ ತಾನು ಇರುವಾಗ ತನಗೊಂದು ಗುರುತು ಕೊಟ್ಟುಕೊಳ್ಳುವ, ಇತರರಿಂದ ಪ್ರತ್ಯೇಕಿಸಿಕೊಳ್ಳುವ ಅಗತ್ಯವಾದರೂ ಇರುತ್ತದೆಯೇ? ಗುರುತಿನ ರಾಜಕಾರಣವು ಬಹುತೇಕ ಹೊರಗಿನ ಒತ್ತರಗಳ ಉತ್ಪನ್ನವಲ್ಲವೇ? ಅದು ನೆಲೆಗೊಳ್ಳುವುದು ಸಂಘರ್ಷಗಳ ಕಾರಣದಿಂದಲೇ ಅಲ್ಲವೇ?
ಇರಲಿ, ನಾನು ವಿಷಯಾಂತರ ಮಾಡುತ್ತಿದ್ದೇನೆ. ಮತ್ತೆ ಮೊದಲಿನ ವಿಷಯಕ್ಕೆ ಮರಳುವುದಾದರೆ ...
… ನಾನು ಅಂಡಮಾನ್ ಪ್ರವಾಸವನ್ನು ಹಮ್ಮಿಕೊಳ್ಳುತ್ತಿದ್ದಾಗ ಕೆಲವು ಪ್ರವಾಸಿ ಏಜೆನ್ಸಿಗಳನ್ನು ಸಂಪರ್ಕಿಸಿದ್ದೆ. ಬಹುತೇಕ ಪ್ರವಾಸಿಗಳು ಹೋಗುವ ಜಾಗಗಳಂತೂ ಇದ್ದೇ ಇವೆ, ಆದರೆ ಜಾರವಾ ಅಭಯಾರಣ್ಯದ ಮೂಲಕ ಪ್ರಯಾಣಿಸುವುದು ಒಂದು ಅದ್ಭುತ ಅನುಭವ ಎಂದವರು ಹೇಳಿದ್ದು ನನ್ನ ಕುತೂಹಲವನ್ನು ಕೆರಳಿಸಿತ್ತು. (ಹೌದು, ನಾನು ತುಸುಮಟ್ಟಿಗೆ ಕಪಟಿಯೇ, ಅದರಲ್ಲಿ ಸಂದೇಹವೇ ಇಲ್ಲ.) ದಟ್ಟ, ಸುಂದರ ಮಳೆಕಾಡುಗಳ ಮೂಲಕ ವಾಹನಗಳು ಬೆಂಗಾವಲು ಪಡೆಯೊಟ್ಟಿಗೆ (convoy) ಗುಂಪುಗುಂಪಾಗಿ ಚಲಿಸುತ್ತವೆ; ಎಲ್ಲಿಯೂ ನಿಲ್ಲಿಸಲು ಅನುಮತಿ ಇಲ್ಲ; ಫೋಟೋ ತೆಗೆಯುವಂತಿಲ್ಲ; ಒಂದು ವೇಳೆ ಜಾರವಾ ಜನರು ಎದುರಾದರೂ ನೋಡಿಯೂ ನೋಡದಂತೆ ಮುಂದೆ ಸಾಗುತ್ತಲಿರಬೇಕು, ಅವರೊಂದಿಗೆ ಯಾವುದೇ ರೀತಿಯ ಸಂಪರ್ಕದ ಪ್ರಯತ್ನ ಕೂಡ ಶಿಕ್ಷಾರ್ಹ ಅಪರಾಧ; ಅಲ್ಲದೇ, ಅವರಿಗೆ ನಿಮ್ಮಿಂದ ಕಿರಿಕಿರಿಯೆನ್ನಿಸಿದರೆ ನಿಮ್ಮತ್ತ ಬಾಣಗಳನ್ನೂ ಬಿಡಬಹುದು — ಇವೇ ಮೊದಲಾದ ವಿಸ್ತೃತವಾದ ಸೂಚನೆಗಳನ್ನೂ ನಮಗೆ ಕೊಡಲಾಗಿತ್ತು.
ನಸುಕಿಗೂ ಮುಂಚೆ ಅಭಯಾರಣ್ಯದ ಗೇಟ್ನ ಹೊರಗೆ ತಲುಪಿ ಕಾಯುತ್ತ ನಿಂತೆವು. ಆರು ಗಂಟೆಯ ಸುಮಾರು ಗೇಟು ತೆರೆದು ನಾವು ಅಭಯಾರಣ್ಯದೊಳಗೆ ಪ್ರವೇಶಿಸುತ್ತಿದ್ದಾಗ ನಮ್ಮ ಟ್ಯಾಕ್ಸಿಯ ಚಾಲಕನನ್ನು ಕೇಳಿದೆ, “ಜಾರವಾಗಳು ಕಾಣಿಸಬಹುದಾ?” (ನಮ್ಮ ಪೂರ್ವಜರು, ಎಲ್ಲರಿಗೂ ಹಳಬರು, ಭಾರತದ ಇನ್ನೂ ಅಸ್ತಿತ್ವದಲ್ಲಿರುವ ಮೊದಲ ಮಾನವರ ವಂಶಜರು ಹೇಗಿರಬಹುದೆಂದು ನೋಡಲು ನಾನು ಬಯಸಿದ್ದಂತೂ ನಿಜ.) ನನ್ನ ದನಿಯಲ್ಲಿದ್ದ ಕಾತರವನ್ನು ಅವನು ಕಡೆಗಣಿಸಿ, “ನಿಮ್ಮ ನಸೀಬಿನಲ್ಲಿದ್ದರೆ,” ಎಂದು ತಣ್ಣಗೆ ಉತ್ತರಿಸಿದ್ದ. ಹೌದಲ್ಲವೇ? ಇತ್ತೀಚಿನ ಅಂದಾಜಿನ ಪ್ರಕಾರ ಅವರ ಇಡೀ ಸಮುದಾಯದಲ್ಲಿ ಉಳಿದಿರುವವರು ಸುಮಾರು 400ರಷ್ಟು ಜನ. ಹಾಗಿರುವಾಗ ಈ ದಟ್ಟವಾದ ಮಳೆಕಾಡುಗಳಲ್ಲಿ ಎಲ್ಲಿಯೂ ಇರಬಹುದಾದ ಅವರು ನಮಗೆ ಎದುರಾಗುವ ಸಾಧ್ಯತೆ ತೀರ ಕಡಿಮೆಯಲ್ಲವೇ, ಎಂದುಕೊಂಡೆ. ಆದರೆ, ಕೊನೆಗೆ ಆದದ್ದೇ ಬೇರೆ. ನಮ್ಮ ಸುತ್ತುಪಯಣ ಮುಗಿಯುವಷ್ಟತಲ್ಲಿ ನಾವು ಜಾರವಾ ಜನರನ್ನು ಅವರ ಹಲವಾರು ರೂಪಗಳಲ್ಲಿ, ಭಾವಭಂಗಿಗಳಲ್ಲಿ, ಅವತಾರಗಳಲ್ಲಿ ಕಂಡಿದ್ದೆವು — ಎಷ್ಟರಮಟ್ಟಿಗಂದರೆ, “ನಾವು ಬಹುತೇಕ ಅವರ ಇಡೀ ಕುಲವನ್ನೇ ಭೇಟಿಯಾದಂತೆ ಕಾಣುತ್ತದೆ,” ಸ್ವಗತವೆಂಬಂತೆ ನುಡಿದಿದ್ದೆ. ನಾನದನ್ನು ನನ್ನ ಜೊತೆಯಲ್ಲಿದ್ದವರಿಗೆ ತಮಾಷೆಯಾಗಿ ಹೇಳಲು ಪ್ರಯತ್ನಿಸುತ್ತಿದ್ದೆ. ಆದರೆ, ನನ್ನಲ್ಲೊಂದು ಹೇಳಲಾಗದ ಅಪರಾಧ ಪ್ರಜ್ಞೆ ಮತ್ತು ಅವಮಾನದ ಭಾವನೆ ಮೂಡುತ್ತಿತ್ತು. ವಿಚಿತ್ರ ದುಗುಡ. ನಾವೇನು ಮಾಡಿದೆವು? ಏನು ಮಾಡುತ್ತಿದ್ದೇವೆ?
ಹಾಗೆ ಇದು ಬಹಳ ಹಿಂದಿನ ಮಾತೇನಲ್ಲ. ಕೆಲವು ದಶಕಗಳ ಹಿಂದಿನವರೆಗೂ ಜಾರವಾಗಳು ಅವರ ಇರುನೆಲೆಗಳೊಳಗೆ ಯಾರಾದರೂ ನುಗ್ಗಿದರೆ ತೀವ್ರವಾಗಿ ವಿರೋಧಿಸುತ್ತಿದ್ದರು. ಆದರೆ, 90ರ ದಶಕದ ಅಂತ್ಯದಿಂದ ಅವರು ತಾವಾಗಿಯೇ ಹೊರಗೆ ಬರುತ್ತಿದ್ದಾರೆ, ಸ್ವ ಇಚ್ಛೆಯಿಂದ ಸಂಪರ್ಕ ಸಾಧಿಸುತ್ತಿದ್ದಾರೆ. ವಿಶೇಷವಾಗಿ ಯುವ ಪೀಳಿಗೆಯವರು. ಇಂದು ಅವರು ಕಾಡಿನಲ್ಲಿನ ತಮ್ಮ ಬಿಡಾರಗಳಿಂದ ರಸ್ತೆಯಂಚಿಗೆ ಬರುತ್ತಾರೆ, ವಾಹನಗಳ ಬರುವಿಕೆಗೆ ಕಾಯುತ್ತಿರುತ್ತಾರೆ. ತಿನ್ನಲು ಏನಾದರೂ ಕೊಡಿರೆಂದು ಬೇಡುವುದನ್ನೂ ಕಾಣಬಹುದು. ಆ ದಾರಿಯಲ್ಲಿ ಸಾಗುವ ವಾಹನಗಳ ಚಾಲಕರು, ಹೊರಗಿನಿಂದ ಬಂದ ಪ್ರವಾಸಿಗರು ಮಕ್ಕಳತ್ತ ಬಿಸ್ಕತ್ತು ಪ್ಯಾಕೆಟ್ಗಳನ್ನು ಎಸೆಯುತ್ತಾರೆ. ಅವರು ಮುಗಿಬಿದ್ದು ಕೈಗೆತ್ತಿಕೊಂಡು ಸಂತೋಷದಿಂದ ಜಿಗಿಯುತ್ತಾರೆ. ಮತ್ತದೇ ದುಗುಡ.
ಅಂಡಮಾನಿನ ಬುಡಕಟ್ಟುಗಳು ಬೇಟೆಗಾರ-ಸಂಗ್ರಾಹಕ-ಮೀನುಗಾರರು. ಕಾಡುಹಂದಿಗಳು, ಗಡ್ಡೆಗೆಣಸುಗಳು, ಜೇನು, ಹಣ್ಣುಗಳು, ಮತ್ತು ಕಡಲಿನಲ್ಲಿ ಸಿಗುವ ಹಲಬಗೆಯ ಮೀನು, ಸೀಗಡಿ, ಏಡಿಗಳು ಅವರ ಆಹಾರ. ಅಂಥವರಿಗೆ ಈಗ ಆ ಹೆದ್ದಾರಿಯು ಸುಲಭವಾಗಿ ಆಹಾರವನ್ನು ಸಂಗ್ರಹಿಸಬಹುದಾದ ಆಕರ ತಾಣವಾಗಿದೆ. ಈ ನಡವಳಿಕೆಯು ಅವರ ಮೂಲ ಜೀವನಶೈಲಿಗೆ, ಅವರ ಪಾರಂಪರಿಕ ಆಹಾರಪದ್ಧತಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾದುದಾಗಿದೆ.
ಜಾರವಾ ಜನರಲ್ಲಿರುವ ಆಳವಾದ ಸ್ಥಳೀಯ ಪರಿಸರದ ಅರಿವನ್ನು ಕುರಿತು ವಿವರಿಸುತ್ತ ಸೆಖ್ಸಾರಿಯಾ, ಓಂಗೆ ಜನರು ದೈತ್ಯ ಹೆಜ್ಜೇನುಗೂಡಿನಿಂದ ಜೇನುತುಪ್ಪವನ್ನು ತೆಗೆಯುವ ವಿಶಿಷ್ಟ ವಿಧಾನದ ಬಗ್ಗೆ ಬರೆಯುತ್ತಾರೆ. ಜೇನುನೊಣಗಳನ್ನು ಓಡಿಸಲು ಅವರು ಬೆಂಕಿ ಹಾಕುವುದಿಲ್ಲ, ಹೊಗೆಯೆಬ್ಬಿಸುವುದಿಲ್ಲ. ಅದರ ಬದಲು, ‘ಟೊಂಜೊಘೆ’ (tonjoghe) ಎಂಬ ಅಲ್ಲಿಗೆ ಸ್ಥಳೀಯವಾದ ಗಿಡದ ಎಲೆಗಳನ್ನು ಜಗಿದು, ಅದರ ಹಸಿರು ತಿರುಳನ್ನು ತಮ್ಮ ಮೈಗೆ ಲೇಪಿಸಿಕೊಳ್ಳುತ್ತಾರೆ. ಅದನ್ನು ಜೇನುಹುಟ್ಟಿನ ಮೇಲೆಯೂ ಉಗ್ಗುತ್ತಾರೆ. ಅದರ ಕಟುವಾಸನೆಯು ಜೇನುನೊಣಗಳನ್ನು ಹಿಮ್ಮೆಟ್ಟಿಸುತ್ತದೆ. ಅವು ಅಲ್ಲಿಂದ ಹಾರಿ ಹೋಗುತ್ತವೆ. ಹೀಗಾಗಿ, ಅವಕ್ಕೆ ಹಾನಿಯನ್ನು ಮಾಡದೆ ಜೇನಿನ ಕೊಯ್ಲನ್ನು ಮಾಡಲು ಸಾಧ್ಯವಾಗುತ್ತದೆ.
ನೀವಿದನ್ನು ಕೇಳಿರಬಹುದು, ಓದಿ ಮರೆತಿರಬಹುದು: 2004ರಲ್ಲಿ ಈ ದ್ವೀಪಗಳಿಗೆ ಸುನಾಮಿ ಅಪ್ಪಳಿಸಿದಾಗ ಅಂಡಮಾನಿನ ಬುಡಕಟ್ಟುಗಳಿಗೆ ಸೇರಿದ್ದ ಒಬ್ಬ ವ್ಯಕ್ತಿಯೂ ಸತ್ತ ದಾಖಲೆಯಿಲ್ಲ. (ಆದರೆ, ಬಹುತೇಕ ಮುಖ್ಯವಾಹಿನಿಯೊಳಗೆ ಬಂದಿರುವ ನಿಕೊಬರೀಸ್ ಬುಡಕಟ್ಟುಗಳಲ್ಲಿ ಸಾಕಷ್ಟು ಜೀವಹಾನಿಯಾಗಿತ್ತು.) ಅವರ ತೀಕ್ಷ್ಣವಾದ ಪರಿಸರದ ಅರಿವು ಮತ್ತು ತಲೆಮಾರುಗಳಿಂದ ತಲೆಮಾರಿಗೆ ಹರಿದುಬಂದ ಜ್ಞಾನ. ಪಾರಂಪರಿಕವಾಗಿ ಅರಿತುಕೊಂಡ ಎಚ್ಚರಿಕೆಗಳು, ವಾತಾವರಣವು ಕೊಡುವ ಸೂಚನೆಗಳು, ಸುತ್ತಲಿನ ಪ್ರಾಣಿಗಳ ನಡವಳಿಕೆಯಲ್ಲಿನ ಬದಲಾವಣೆಗಳಿಂದಾಗಿ ಒಡನೆಯೇ ಅವರು ಒಳನಾಡು ಮತ್ತು ಎತ್ತರದ ಪ್ರದೇಶಗಳತ್ತ ಹೋಗಬೇಕೆಂದು ಕಂಡುಕೊಂಡರು. ಪರಿಸರದ ಕುರಿತ ಇಷ್ಟೊಂದು ಆಳವಾದ ಜ್ಞಾನವನ್ನು, ಇಂತಹ ವಿವೇಕವನ್ನು ಹೊಂದಿರುವ ಜನರನ್ನು ನಾವು ಯಾವ ಮಟ್ಟಕ್ಕೆ ಕುಗ್ಗಿಸಿದ್ದೇವೆ!
ಪ್ರಯಾಣ ಮಾಡುವುದೆಂದರೆ ಕೇವಲ ಆನಂದಪಡುವುದಕ್ಕಾಗಿ ಅಥವಾ ವಿಶ್ರಾಂತಿ ಪಡೆಯುವುದಕ್ಕಾಗಿಯಷ್ಟೇ ಅಲ್ಲ. ಅದು ನಮ್ಮ ಚಿಂತನೆಯ ದಿಗಂತವನ್ನು ವಿಸ್ತರಿಸುತ್ತದೆ, ಜಗದರಿವನ್ನು ಹೆಚ್ಚಿಸುತ್ತದೆ. ಆದರೆ, ಅದೆಲ್ಲದರ ಜೊತೆಗೆ ಅದು ಹಲವು ಬಾರಿ ನಮ್ಮಲ್ಲಿ ತೀವ್ರವಾದ ತಪ್ಪಿನರಿವನ್ನೂ ಉಳಿಸಿಬಿಡುತ್ತದೆ. ಡಿಗ್ಲಿಪುರದ ಕಡೆಗೆ, ಉಬ್ಬುತಗ್ಗುಗಳ ಮತ್ತು ಹಲವೆಡೆ ಹಾದಿಯೇ ಇಲ್ಲದ ಹಾದಿಯಲ್ಲಿ ನಮ್ಮ ವಾಹನವು ಕುಲುಕುತ್ತ ನಿಧಾನವಾಗಿ ಚಲಿಸುತ್ತಿದ್ದಾಗ ನನಗೆ ಇದ್ದಕ್ಕಿದ್ದಂತೆ ಕೆಲವು ವರ್ಷಗಳ ಹಿಂದೆ ನಾನು ಮೇಘಾಲಯದಲ್ಲಿ ಪ್ರವಾಸ ಮಾಡುತ್ತಿದ್ದಾಗ ಆದ ಅನುಭವದ ನೆನಪು ಮರುಕಳಿಸಿತು. ಅದೊಂದು ಪರಿಚಿತ ದೇ ಜಾವೂ ಭಾವನೆ.
“‘ಸೆಲ್ಫಿ ಡೇಂಜರ್ ಜ಼ೋನ್’ ಮತ್ತು ‘ಭೂಕುಸಿತದ ಅಪಾಯವಿದೆ’”
ಪೂರ್ವ ಖಾಸಿ ಬೆಟ್ಟಗಳ ಮೇಲೆ ಕೊರೆದ ಅಂಕುಡೊಂಕಾದ ರಸ್ತೆಗಳಲ್ಲಿ ಮಾವ್ಲಿನಾಂಗ್ಗೆ ಹೋಗುವ ದಾರಿಯಲ್ಲಿ ನಾವು ನಿಧಾನವಾಗಿ ಚಲಿಸುತ್ತಿದ್ದೇವೆ. ಎಲ್ಲೆಲ್ಲೂ ಮಂಜು ಕವಿದಿದ್ದು ಅದು ನಮ್ಮ ಪಯಣದ ವೇಗವನ್ನು ಮತ್ತಷ್ಟು ಕಡಿಮೆಗೊಳಿಸುತ್ತಿದೆ. ಇಂದು ನಾವು ಸೋಹ್ರಾದಿಂದ (ಚಿರಪುಂಜಿ) ಹೊರಟದ್ದು ಸೂರ್ಯಾಸ್ತಕ್ಕೆ ಮುಂಚೆಯೇ. ಆಗಲೇ ಮಂಜು ಆವರಿಸಿಕೊಳ್ಳತೊಡಗಿತ್ತು. ಸುತ್ತಲೂ ಸ್ವರ್ಗಸದೃಶ ನೋಟ. ನೋಡಿದಲ್ಲೆಲ್ಲಾ ತಳವಿಲ್ಲದ ಕಣಿವೆಗಳು, ಜುಳುಜುಳು ಹರಿಯುವ ತೊರೆಗಳು. ಆಗೊಮ್ಮೆ ಈಗೊಮ್ಮೆ, ಕಣಿವೆಯ ವಿಶಾಲ, ಅಡೆತಡೆಯಿಲ್ಲದ ನೋಟವು ಕಾಣುವ ತಾಣಗಳಲ್ಲಿ ಎದ್ದು ನಿಂತಿರುವ, ‘ಸೆಲ್ಫಿ ಡೇಂಜರ್ ಜ಼ೋನ್’ (Selfie Danger Zone) ಎಂದು ಬರೆದ ಫಲಕಗಳು. ಅಲ್ಲಿಂದ ತುಸು ಮುಂದೆ ಹೋಗುತ್ತಲೇ ಗಣಿಗಾರಿಕೆಗಾಗಿ ಕೊರೆಯಲಾದ ಬೆಟ್ಟಗಳ ಮತ್ತು ಖನಿಜಗಳನ್ನು ಸಾಗಿಸುವ ಬೃಹತ್ ಟ್ರಕ್ಗಳ ಅಸಹನೀಯ ದೃಶ್ಯಾವಳಿ ಪ್ರಾರಂಭವಾಗುತ್ತದೆ. ಅದರ ಬೆನ್ನಲ್ಲೇ ‘ಮುಂದೆ ಭೂಕುಸಿತದ ಅಪಾಯವಿದೆ’ (Landslide Ahead) ಎಂಬ ಎಚ್ಚರಿಕೆಯ ಫಲಕಗಳು ದಾಳಿಮಾಡುತ್ತ ಬರುತ್ತವೆ. ಒಂದು ಬದಿಯಲ್ಲಿ ಸೆಲ್ಫಿ ಅಪಾಯದ ವಲಯಗಳ ಭವ್ಯ ಸುಂದರ ಕಣಿವೆಗಳು; ಇನ್ನೊಂದು ಬದಿಯಲ್ಲಿ ಭೂಕುಸಿತದ ಎಚ್ಚರಿಕೆಗಳ ಛಿದ್ರಛಿದ್ರ ಬೆಟ್ಟಗಳು.
ಕ್ಯಾಬ್ನ ಕಿಟಕಿಯಿಂದ ಹೊರಗೆ ಇಣುಕುತ್ತ ಇದೆಲ್ಲವನ್ನೂ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನನ್ನ ಮನಸ್ಸು ಹತ್ತು ದಿಕ್ಕುಗಳಲ್ಲಿ ಒಡುತ್ತಿದೆ. ತಲೆಯನ್ನು ತುಂಬಿಕೊಂಡಿರುವ ಯೋಚನೆಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಿವೆ. ಅನಾದಿ ಕಾಲದಲ್ಲಿ ಮಾನವನು ಮೊಟ್ಟಮೊದಲಿಗೆ ಪ್ರಕೃತಿಯ ಈ ಎಣೆಯಿಲ್ಲದ ಕೊಡುಗೆಗಳನ್ನು ಕಂಡುಕೊಳ್ಳುತ್ತಾನೆ; ಅವನ್ನು ಸೂರೆಗೊಳ್ಳುತ್ತಾನೆ. ಅವುಗಳ ಮಡಿಲಲ್ಲಿ ನೆಲಸುತ್ತಾನೆ. ನಾಗರಿಕತೆ ಬೆಳೆಯುತ್ತದೆ. ಕಾಲದ ನಾಗಾಲೋಟದಲ್ಲಿ ಕಾಲಕ್ರಮೇಣ ಮಾನವನು ‘ಪ್ರವಾಸ’ ಎಂಬ ಪರಿಕಲ್ಪನೆಯನ್ನು ಕಂಡುಹಿಡಿಯುತ್ತಾನೆ, ಅದು ದೂರದ ನಾಡಿನ ಜನರಿಗೆ ಈ ಆನಂದದಾಯಕ ಅನುಭವದಲ್ಲಿ ಪಾಲ್ಗೊಳ್ಳಲು ಸಹಾಯ ಮಾಡುತ್ತದೆ. ಅದು ಮುಂದೆ ಉದ್ಯಮವಾಗಿ ಬೆಳೆಯುತ್ತದೆ. ಜನರು ಹಿಂಡುಹಿಂಡಾಗಿ ಇಂಥ ತಾಣಗಳಿಗೆ ಬರಲು ಪ್ರಾರಂಭಿಸುತ್ತಾರೆ. ಬರುವವರ ದೆಸೆಯಿಂದ ದೊಡ್ಡ ರಸ್ತೆಗಳು, ಹೆಚ್ಚು ಹೋಂಸ್ಟೇಗಳು, ರೆಸಾರ್ಟ್ಗಳು, ರೆಸ್ಟೋರೆಂಟ್ಗಳು, ಪ್ಲಾಸ್ಟಿಕ್ ಬಾಟಲಿಗಳಲ್ಲಿನ ನೀರು — ಹೀಗೆ ಎಲ್ಲವೂ ಹೆಚ್ಚು ಬೇಕಾಗುತ್ತದೆ. ಇದನ್ನೆಲ್ಲ ಆಗಮಾಡಬೇಕೆಂದರೆ ಸಹಜವಾಗಿ ಹೆಚ್ಚಿನ ಭೂಕುಸಿತಗಳೂ ಆಗಬೇಕಷ್ಟೇ. ಪ್ರವಾಸೋದ್ಯಮಕ್ಕೆ ಸಮಾನಾಂತರವಾಗಿ ಇನ್ನೊಂದೆಡೆ ಮಾನವನು ಛಾಯಾಗ್ರಹಣವನ್ನು ಕಂಡುಹಿಡಿಯುತ್ತಾನೆ, ಅನಂತರ ಸಾಮಾಜಿಕ ಮಾಧ್ಯಮವನ್ನು ಕಂಡುಹಿಡಿಯುತ್ತಾನೆ, ಸ್ಮಾರ್ಟ್ಫೋನ್ಗಳಲ್ಲಿ ಅತಿ ಸಣ್ಣ ಆದರೆ ಅತ್ಯಂತ ಪರಿಣಾಮಕಾರಿ ಕ್ಯಾಮೆರಾಗಳನ್ನು ಅಳವಡಿಸುತ್ತಾನೆ. ಅವರಲ್ಲಿಯೇ ಒಬ್ಬ ಬಲು ಜಾಣನಿಗೆ “ಸೆಲ್ಫಿ”ಯ ಕಲ್ಪನೆ ಹೊಳೆಯುತ್ತದೆ! ವೈರಸ್ನಂತೆ ಹರಡುವ ಅದು ಇಂಥ ರುದ್ರರಮಣೀಯ ಕಣಿವೆಗಳಲ್ಲಿ ಕೊನೆಗೊಂಡು ಅಂತಿಮವಾಗಿ ‘ಸೆಲ್ಫಿ ಅಪಾಯದ ವಲಯ’ಗಳಿಗೆ ದಾರಿ ಮಾಡಿಕೊಡುತ್ತದೆ.
ನಾನು ಅಸಂಬದ್ಧವಾಗಿ ಪ್ರಲಾಪಿಸುತ್ತಿದ್ದೇನೆಂದು ನನಗೆ ತಿಳಿದಿದೆ. ಹತ್ತು ಕಡೆ ಸುಳಿದಾಡುತ್ತಿರುವ ಆಲೋಚನೆಗಳನ್ನು ಹಿಡಿತಕ್ಕೆ ತೆಗೆದುಕೊಂಡು ಒಳಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಸೆಲ್ಫಿಗಳು, ಸಾಮಾಜಿಕ ಜಾಲತಾಣಗಳು, ಪ್ರವಾಸೋದ್ಯಮ, ಭೂಕುಸಿತಗಳು, ಪ್ಲಾಸ್ಟಿಕ್ ಬಾಟಲಿಗಳು, ಮತ್ತು ಗುರುತಿಸಲಾಗದ ಲೆಕ್ಕವಿಲ್ಲದಷ್ಟು ಇತರ ವಿಷಯಗಳು ನನ್ನ ಮನಸ್ಸಿನಲ್ಲಿ ಬೇರ್ಪಡಿಸಲಾಗದಂತೆ ಹೆಣೆದುಕೊಂಡಿವೆ. ನಾನು ಅವುಗಳನ್ನು ಬಿಡಿಸಲು, ಅವುಗಳಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದೇನೆ. ಹಾಗಾದಾಗಲಾದರೂ ನನಗೆ ಸ್ವಲ್ಪ ಸ್ಪಷ್ಟತೆ ಸಿಗಬಹುದು. ಮಂಜು ಹರಿಯಬಹುದು. ಎದುರಿಗಿರುವುದು ಮತ್ತೆ ಕಾಣಬಹುದು.
ಇದೆಲ್ಲದರ ಜೊತೆಗೇ ನಾನು ಇದೆಲ್ಲದರ ಅವಲೋಕನವನ್ನು ಒಬ್ಬ ಪ್ರವಾಸಿಯಾಗಿಯೇ ಮಾಡುತ್ತಿರುವುದರ ವ್ಯಂಗ್ಯ ಕೂಡ ನನ್ನನ್ನು ತಟ್ಟದೇ ಇಲ್ಲ.
ಅದೇ ವ್ಯಂಗ್ಯ, ಅದೇ ವಿಪರ್ಯಾಸ ಹಲವು ವರ್ಷಗಳ ಅನಂತರ ಅಂಡಮಾನ್ನ ಈ ರಸ್ತೆಯಲ್ಲಿಯೂ ಮರುಕಳಿಸುತ್ತಿತ್ತು. ಅವೇ ಡಂಪರ್ ಟ್ರಕ್ಗಳು, ಕಾಂಕ್ರೀಟ್ ಮಿಕ್ಸರ್ಗಳು; ಅವೇ ಅಗೆದ ಬೆಟ್ಟಗಳು, ಕಡಿದುರುಳಿಸಿದ ಮರದ ದಿಮ್ಮಿಗಳು. ನೋಯುತ್ತಿರುವ ಹೆಬ್ಬೆರಳಿನಂತೆ ಚಾಚಿಕೊಂಡಿರುವ ಉಕ್ಕಿನ ಸರಳುಗಳು; ಮಣಿದು ಗಾಯಗೊಂಡಿದ್ದರೂ ಅಭಿವೃದ್ಧಿಗೊಂದು ಥಂಬ್ಸ್ ಅಪ್ ಕೊಡುವಂತೆ ತೋರುತ್ತಿದ್ದುವು.
ಭಾರತ ಸರ್ಕಾರವು ಇಲ್ಲಿನ ಪ್ರವಾಸೋದ್ಯಮವನ್ನು ಹತ್ತು ಪಟ್ಟು ಹೆಚ್ಚಿಸುವ ಸಂಕಲ್ಪ ಮಾಡಿದೆ. ಅದನ್ನು ಸಾಧಿಸಲು ತಕ್ಕ ಯೋಜನೆಗಳನ್ನೂ ಹೂಡಿಕೊಳ್ಳುತ್ತಿದೆ. ಇಲ್ಲಿನ ಪರಿಸರದ ಮೇಲೆ, ಅಳಿದುಳಿದ ಬುಡಕಟ್ಟು ಸಮುದಾಯಗಳ ಮೇಲೆ ಅದರ ಪರಿಣಾಮಗಳು ಏನಾಗಬಹುದು? ಊಹಿಸಿಕೊಳ್ಳಬಹುದಷ್ಟೇ!
ಪಂಕಜ್ ಸೆಖ್ಸಾರಿಯಾ ಅವರು ಈ ದ್ವೀಪಗಳು ಎದುರಿಸುತ್ತಿರುವ ಸವಾಲುಗಳನ್ನು ದಶಕಗಳಿಂದ ದಾಖಲಿಸುತ್ತಿದ್ದಾರೆ. ಅಲ್ಲಿನ ಪರಿಸರ ಮತ್ತು ಮೂಲನಿವಾಸಿಗಳ ರಕ್ಷಣೆಗಾಗಿ ನಡೆಯುತ್ತಿರುವ ಚಳವಳಿಗಳಲ್ಲಿ ದಣಿವಿಲ್ಲದೇ ಸಕ್ರಿಯವಾಗಿ ಪಾಲ್ಗೊಳ್ಳುತ್ತಲಿದ್ದಾರೆ. ಆದರೆ, ಈ ಹೋರಾಟದಲ್ಲಿ ಕಡೆಗೂ ಸೋಲೇ ಕಟ್ಟಿಟ್ಟ ಬುತ್ತಿ ಎಂಬ ಭಾವ ಅವರ ಬರಹಗಳಲ್ಲಿ ಕಾಣುತ್ತದೆ. ಸರಿಯಾದ ಹಾದಿಯಲ್ಲಿ ಒಂದು ಹೆಜ್ಜೆ ಮುಂದಿಡುವಷ್ಟರಲ್ಲಿ ಅವರನ್ನು ಮತ್ತು ಅವರಂಥವರನ್ನು ಎರಡು ಹೆಜ್ಜೆ ಹಿಂದೆ ತಳ್ಳಲಾಗುತ್ತದೆ ಎಂಬ ಹತಾಶೆಯನ್ನು ಅವರ ಅನೇಕ ಪ್ರಬಂಧಗಳಲ್ಲಿ ಗ್ರಹಿಸಬಹುದು. ಹಾಗಿದ್ದೂ ಅವರು ಬರೆಯುತ್ತಲೇ ಇದ್ದಾರೆ, ತಮ್ಮ ಕೆಲಸವನ್ನು ಮುಂದುವರಿಸಿಯೇ ಇದ್ದಾರೆ.

ಪ್ರಯಾಣದ ನಡುವೆ ಅವಕಾಶ ಸಿಕ್ಕಾಗಲೆಲ್ಲ ನಾನು ಅವರ ಪುಸ್ತಕವನ್ನು ಓದುತ್ತಲಿದ್ದೆ. ಓದುತ್ತಿದ್ದಾಗ ನನ್ನ ಮನಸ್ಸಿನಲ್ಲಿ ಮತ್ತೆ ಮತ್ತೆ ಮೂಡುತ್ತಿದ್ದ ಪ್ರಶ್ನೆ ಇದು: ಗ್ರೇಟ್ ಅಂಡಮಾನ್ ಟ್ರಂಕ್ ರೋಡ್ನಲ್ಲಿ ಆ ಸುದೀರ್ಘ ಪ್ರಯಾಣವನ್ನು ಕೈಗೊಳ್ಳುವ ಮೊದಲೇ ನಾನಿದನ್ನು ಓದಿದ್ದರೂ ನಾನು ಮುಂದುವರಿಯುತ್ತಿದ್ದೆನೇ? ಅದಕ್ಕೆ ನನಗೆ ಖಚಿತವಾದ ಉತ್ತರ ಗೊತ್ತಿಲ್ಲ. ಆದರೆ, ಅನಂತರದಲ್ಲಿ ಯೋಚಿಸಿದಾಗ ಪ್ರಾಯಶಃ ಮುಖ್ಯವಾದ ಪ್ರಶ್ನೆ ಅದಲ್ಲ ಎನ್ನಿಸುತ್ತಿದೆ.
Islands in Flux ಒಂದು ವಿಶಿಷ್ಟವಾದ niche ಪುಸ್ತಕ. ನಾನು ಅಂಡಮಾನ್ ಪ್ರವಾಸಕ್ಕೆ ಹೋಗದೇ ಇದ್ದರೆ ಈ ಪುಸ್ತಕದ ಬಗ್ಗೆ ನನಗೆ ತಿಳಿದುಬರುವ, ನಾನು ಅದನ್ನು ಓದುವ ಸಾಧ್ಯತೆ ತೀರಾ ಕಡಿಮೆ ಇತ್ತು ಎಂದೇ ಹೇಳಬೇಕು. ಆಕಸ್ಮಿಕವಾಗಿಯಾದರೂ ಅದನ್ನು ಓದಿದ್ದರ ಬಗ್ಗೆ ನನಗೆ ಸಂತೋಷವಿದೆ. ಇದು ಕಣ್ಣು ತೆರೆಸುವಂಥ ಪುಸ್ತಕ. ಕೇವಲ ಈ ದ್ವೀಪಗಳಿಗೆ ಸಂಬಂಧಿಸಿದಂತೆ ಮಾತ್ರವಲ್ಲ, ಒಟ್ಟಾರೆಯಾಗಿ ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ನಾವು ಉಂಟುಮಾಡುತ್ತಿರುವ ವಿನಾಶದ ಬಗ್ಗೆಯೂ.
ಈಗ ನನ್ನರಿವಿಗೆ ಬರುತ್ತಿರುವ ವ್ಯಂಗ್ಯವೆಂದರೆ, ನಾನು ಅಂಡಮಾನ್ನಲ್ಲಿ ನಡೆಯುತ್ತಿರುವ ದುರಂತವನ್ನು ಗಮನಿಸುತ್ತಿರುವ ಪ್ರವಾಸಿಗ ಮಾತ್ರನಾಗಿರಲಿಲ್ಲ; ಅದರಲ್ಲಿ ಪಾಲ್ಗೊಳ್ಳುವ ಮೂಲಕ ಅದರ ಭಾಗ ಕೂಡ ಆಗಿದ್ದೆ. ಸೆಖ್ಸಾರಿಯಾ ಅವರ ಪುಸ್ತಕದ ಓದು ನನ್ನ ಸಮಸ್ಯೆಗೆ ಪರಿಹಾರವನ್ನೇನೂ ಒದಗಿಸಲಿಲ್ಲ, ಆದರೆ ಅದು ಸಮಸ್ಯೆಯನ್ನು ಸ್ಪಷ್ಟಗೊಳಿಸಿತು. ಹೀಗಾಗಿ, ನಾನು ನನಗೆ ಮೇಲೆ ಕೇಳಿಕೊಂಡ ‘ಓದಿದ ಮೇಲೆಯೂ ಹೋಗುತ್ತಿದ್ದೆನೇ?’ ಎಂಬ ತೀರ ಸರಳ ಪ್ರಶ್ನೆಯನ್ನು ಕೈಬಿಟ್ಟು, ‘ಇದರ ಬಗ್ಗೆ ನನಗೀಗ ಹೆಚ್ಚು ತಿಳಿಯಿತಲ್ಲ, ಇನ್ನು ಮುಂದೆ ಈ ತಿಳಿವಳಿಕೆಯ ವಜ್ಜೆಯನ್ನು ಎತ್ತಿಕೊಂಡು ನಾನು ಎಲ್ಲಿಗೆ ಹೋಗಲಿ, ಹೇಗೆ ಇದನ್ನು ನಿಭಾಯಿಸಲಿ?’ ಎಂಬ ಹೆಚ್ಚು ತಲ್ಲಣಗೊಳಿಸುವ, ಹೆಚ್ಚು ಅಸಹನೀಯ ಪ್ರಶ್ನೆಯನ್ನು ತಲೆಯ ಮೇಲೆ ಹೊತ್ತುಕೊಂಡು ನಿಂತಿದ್ದೇನೆ.
ಇದನ್ನೂ ಓದಿ …
ಒಂದು ಪುಟ್ಟ ಹಕ್ಕಿಗಾಗಿ ಲೋಕವನ್ನು ಉಳಿಸಲಾದೀತೇ?
ಕವಿ, ಪತ್ರಕರ್ತೆ, ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಜಸಿಂತಾ ಕೆರ್ಕೆಟ್ಟಾ ಅವರು 2022ರಲ್ಲಿ ಪ್ರಕಟಿಸಿದ ‘ಅಂಗೋರ್' (ಕೆಂಡ) ಎಂಬ ದ್ವಿಭಾಷಾ (ಹಿಂದಿ-ಇಂಗ್ಲಿಷ್) ಕವನ ಸಂಕಲನವನ್ನು ಸಂವರ್ತ ‘ಸಾಹಿಲ್’ ಕನ್ನಡಕ್ಕೆ ‘ಗೋರಿಯ ಮೇಲೆ ರಾಗಿಯ ಕೊನರು’ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಂಕೇತ ಪಾಟೀಲ








