ನೊಬೆಲ್ ಪ್ರಶಸ್ತಿ ವಿಜೇತ ಟರ್ಕಿಶ್ ಕಾದಂಬರಿಕಾರ ಓರ್ಹಾನ್ ಪಮುಕ್ನ (7 ಜೂನ್ 1952) Snow (ಮೂಲ ಟರ್ಕಿಯಲ್ಲಿ ‘ಕಾರ್’) ಕಾದಂಬರಿಯ ಬಗ್ಗೆ ಕೆಲ ವಿಚಾರಗಳನ್ನು ಸಂಕೇತ ಪಾಟೀಲ ಹಂಚಿಕೊಂಡಿದ್ದಾರೆ.
ಗಾರ್ಸೀಯಾ ಮಾರ್ಕೇಸ್ನ ಬಹುಪ್ರಸಿದ್ಧ One Hundred Years of Solitude ಶುರುವಾಗುವುದು ಹೀಗೆ: “Many years later, as he faced the firing squad, Colonel Aureliano Buendía was to remember that distant afternoon when his father took him to discover ice.” ನಾನು ಮೊಟ್ಟಮೊದಲ ಸಲ ಹಿಮವನ್ನು ತೀರ ಹತ್ತಿರದಿಂದ ಕಂಡದ್ದು ಹಲವಾರು ವರ್ಷಗಳ ಹಿಂದೆ ಅಮೆರಿಕಾದ ಇಂಡಿಯಾನಾ ರಾಜ್ಯದ ವೆಸ್ಟ್ ಲಫಾ಼ಯೆಟ್ನಲ್ಲಿ (West Lafayette). ಅಲ್ಲಿನ ಪರ್ಡೂ (Purdue) ಯುನಿವರ್ಸಿಟಿಯ ಪ್ರೊಫೆ಼ಸರ್ ಒಬ್ಬರು ಒಂದಷ್ಟು ಕಾಲ Visiting Scholar ಆಗಿ ಅವರ ಲ್ಯಾಬ್ನಲ್ಲಿ ನನ್ನ ಸಂಶೋಧನೆ ಮುಂದುವರಿಸಲು ಆಹ್ವಾನಿಸಿದ್ದರಿಂದ ನಾನಲ್ಲಿಗೆ ಹೋಗಿದ್ದೆ. ಬೆಂಗಳೂರಿನಲ್ಲಿ ಸಂಕ್ರಾಂತಿ ಮುಗಿಸಿಕೊಂಡು ವಿಮಾನ ಹತ್ತಿದವನು ಜನವರಿ ತಿಂಗಳ ಅತ್ಯುಗ್ರ ಚಳಿಯಲ್ಲಿ ಸುತ್ತಲೂ ಫೂ಼ಟುಗಟ್ಟಲೇ ಬಿದ್ದಿದ್ದ ಹಿಮದ ನಡುವೆ ಬಂದಿಳಿದಿದ್ದೆ.

ಪಮುಕ್ನ ‘ಸ್ನೋ’ (Snow, ಟರ್ಕಿಶ್ನಲ್ಲಿ ‘ಕಾರ್’) ಕಾದಂಬರಿಯನ್ನು ನಾನು ಮೊದಲಿಗೆ ಓದಿದ್ದೂ ಅಲ್ಲಿಯೇ. ಆದರೆ ಅದನ್ನು ನಾನು ಓದಿದ್ದು ಮಾತ್ರ ಬಿರುಬೇಸಿಗೆಯಲ್ಲಿ. ಅಲ್ಲಿನ ಚಳಿಗಾಲದಲ್ಲಿ ಓದಬೇಕಿತ್ತೇನೋ. ಆಗ ಅವನ ಹಿಮದ ವರ್ಣನೆಯ first hand ಅನುಭವವಾಗುತ್ತಿತ್ತೇನೋ: ಹಿಮದ ಹರಳೊಂದು ಷಟ್ಕೋನವಂತೆ; ಅಥವಾ, ಹೆಚ್ಚು ಹೆಪ್ಪುಗಟ್ಟುತ್ತ ಹೋದಂತೆ ರೆಂಬೆಕೊಂಬೆಗಳು ಮೂಡಿ, ಆರು ಬೆರಳುಗಳನ್ನು ಚಾಚಿದಂತೆಯೋ, ನಕ್ಷತ್ರ ಮೀನಿನಂತೆಯೋ ಕಾಣುತ್ತದಂತೆ. ಅದಾದ ಮೇಲೆ ನಾವು ಹಿಮವನ್ನು ನೋಡಿಯೇ ಇಲ್ಲ. ಎಂದಾದರೂ ಹಿಮ ಬೀಳುವ ಜಾಗಕ್ಕೆ ಹೋಗಿದ್ದು ಈ ಕಾದಂಬರಿಯನ್ನು ಮತ್ತೊಮ್ಮೆ ಓದಿ, ಪಾಮುಕ್ ವರ್ಣಿಸಿದಂತೆ ಹಿಮದ ಅನುಭವವಾಗುತ್ತದೋ ನೋಡಬೇಕು.
ಹಿಮದ ಈ ಸಮರೂಪತೆಯನ್ನು ಮೊದಲಿಗೆ ನಿದರ್ಶಿಸಿದವನು ವಿಲ್ಸನ್ ಆಲ್ವಿನ್ “ಸ್ನೋಫ಼್ಲೇಕ್” ಬೆಂಟ್ಲಿ. ಒಂದು ಮೈಕ್ರೋಸ್ಕೋಪಿಗೆ ತನ್ನ ಕ್ಯಾಮೆರಾ ಜೋಡಿಸಿ, ಸ್ನೋಫ಼್ಲೇಕ್ಗಳಲ್ಲಿ ಅಡಗಿದ ಒಟ್ಟಂದವನ್ನು ಹೊರತಂದು ತನ್ನ ಫೋಟೋಗಳ ಮೂಲಕ ತೋರಿಸಿದ. ಹಿಮ ಕರಗುವ ಮೊದಲೇ ಅವುಗಳ ಫೋಟೋ ತೆಗೆಯುವ ಸಲುವಾಗಿ ತನ್ನದೇ ವಿಶಿಷ್ಟ ತಂತ್ರವನ್ನು ಕಂಡುಕೊಂಡ. ಇದು ಸುಮಾರು 1885ರಲ್ಲಿ.
ಪಮುಕ್ನ ಕಾದಂಬರಿಯ ಮುಖ್ಯಪಾತ್ರ ಕಾ ಎಂಬ ಹೆಸರಿನ ದೇಶಭ್ರಷ್ಟ ಕವಿ. ಅವನು ಬರೆದ 19 ಕವಿತೆಗಳನ್ನು ಹಿಮದ ಹರಳುಗಳ ಅಕ್ಷರೇಖೆಗಳ ಮೇಲೆ ಜೋಡಿಸುತ್ತಾನೆ. ನೆನಪುಗಳು (memory), ಕಲ್ಪನೆ (imagination) ಮತ್ತು ವಿಚಾರ (reason); ಇವು ಮೂರು ಅಕ್ಷರೇಖೆಗಳು. ನೆನಪುಗಳು ಮತ್ತು ಕಲ್ಪನೆಯ ಪ್ರಭಾವದಿಂದ ಬರೆದ ಪದ್ಯಗಳು. ವೈಚಾರಿಕತೆ ಮತ್ತು ಹಳೆಯ ಚಾಳಿಗಳಿಂದ ಕೂಡಿದ ಪದ್ಯಗಳು, ಹೀಗೆ. ಅವನು ಪದ್ಯ ಬರೆಯದೆ ಎಷ್ಟೋ ವರ್ಷಗಳು ಸಂದಿವೆ. ಆದರೆ ಇದ್ದಕ್ಕಿದ್ದಂತೆ ಈಗ ಅವನಲ್ಲಿ ಪದ್ಯಗಳು ಒಂದಾದ ಮೇಲೊಂದು ಮೂಡುತ್ತಿವೆ. ಅದೇನು ಹಿಮದ ಅದ್ಭುತ ಸೌಂದರ್ಯದಿಂದಲೋ; ಹಳೆಯ ಗೆಳತಿಯ ಮೇಲೆ ಹುಟ್ಟಿದ ಪ್ರೇಮದಿಂದಲೋ; ಕುಡಿಯುತ್ತಲೇ ಇರುವ ಅನೇಕ ಗ್ಲಾಸು ರಾಕಿಗಳ ಪರಿಣಾಮವೋ; ಇದ್ದಕ್ಕಿದ್ದಂತೆ ಅವನಲ್ಲಿ ಭಕ್ತಿ, ನಂಬಿಕೆಗಳು ಮೂಡಿ, ದೈವಪ್ರೇರಣೆಯಾಗುತ್ತಿದೆಯೋ. ಅದೇನೇ ಇರಲಿ. ಒಟ್ಟಿನಲ್ಲಿ ಆದದ್ದೆಂದರೆ ಎರಡು ಮೂರು ದಿನಗಳ ಅವಧಿಯಲ್ಲಿ ಅವನು 19 ಶ್ರೇಷ್ಠ ಕವಿತೆಗಳನ್ನು ಬರೆದಿದ್ದಾನೆ (ಅಥವಾ ಅವು ಅವನಿಂದ ಬರೆಯಲ್ಪಟ್ಟಿವೆ). ಆ ಮೂರು ದಿನಗಳಾದ ಮೇಲೆ ಮುಂದೆ ಅವನು ಬದುಕಿದ ನಾಲ್ಕು ವರ್ಷಗಳಲ್ಲಿ ಮತ್ತೇನನ್ನೂ ಅವನು ಬರೆಯಲಿಲ್ಲ. ಆದರೆ ಆ ಸಮಯವನ್ನು ಅವನು ಆ ಪದ್ಯಗಳನ್ನು ತಿದ್ದಿ ಒಂದು ಸಂಕಲನವನ್ನು ಹೊರತರುವ ತಯಾರಿಯಲ್ಲಿ ಕಳೆದಿದ್ದಾನೆ. ಇಷ್ಟೆಲ್ಲ ಆಗಿ, ಕೊನೆಗೆ ಉಳಿದದ್ದು ಏನೂ ಇಲ್ಲ. ಅವನು ಕವಿತೆಗಳನ್ನು ಬರೆಯುತ್ತಿದ್ದ ಆ ಹಸಿರು ಡೈರಿ ಕಾಣೆಯಾಗಿದೆ. ಬಹುತೇಕ ಫ಼್ರ್ಯಾಂಕ್ಫ಼ರ್ಟ್ನಲ್ಲಿ ಕಾನನ್ನು ಗುಂಡು ಹೊಡೆದು ಕೊಂದ ಮನುಷ್ಯ ಅದನ್ನೂ ತೆಗೆದುಕೊಂಡು ಹೋಗಿದ್ದಾನೇನೋ!
ಜರ್ಮನಿಯಿಂದ 12 ವರ್ಷಗಳ ನಂತರ ತನ್ನ ತಾಯಿಯ ಅಂತ್ಯಕ್ರಿಯೆಯ ಸಲುವಾಗಿ ಕಾ ಇಸ್ತಾನ್ಬುಲ್ಗೆ ಬಂದಿದ್ದಾನೆ. ತನ್ನ ಗೆಳೆಯನ ಸಲಹೆಯ ಮೇರೆಗೆ ಕಾರ್ಸ್ ಎಂಬ ನಗರಕ್ಕೆ ಬರುತ್ತಾನೆ. ಟರ್ಕಿಯ ಪೂರ್ವಭಾಗದ ಅನತೋಲಿಯದ ಗಡಿ ಪ್ರದೇಶವದು. ಪಕ್ಕದಲ್ಲಿ ಅರ್ಮೇನಿಯ. ಸ್ವಲ್ಪ ಆಚೆ ರಷ್ಯಾ. ಕಾ ಅಲ್ಲಿಗೆ ಬಂದ ಉದ್ದೇಶ: “ಅಲ್ಲಿನ ಸ್ಥಳೀಯ ನಗರಸಭೆಯ ಚುನಾವಣೆಯನ್ನು ವೀಕ್ಷಿಸಲು,” ಮತ್ತು “ಕಾರ್ಸ್ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಹುಡುಗಿಯರ ಆತ್ಮಹತ್ಯೆಗಳ ಪಿಡುಗಿನ ಬಗ್ಗೆ ಮಾಹಿತಿ ಸಂಗ್ರಹಿಸಲು”. ಒಬ್ಬ ಪತ್ರಕರ್ತನೆಂದು ಹೇಳಿಕೊಂಡು ಅಲ್ಲಿಗೆ ಬಂದಿದ್ದಾನೆ. ಅದೇ ನಗರದಲ್ಲಿ ಕಾನ ಹಳೆಯ ಗೆಳತಿ ಐಪೆಕ್ ಇದ್ದಾಳೆ. ಇತ್ತೀಚೆಗೆ ಅವಳು ತನ್ನ ಗಂಡನಿಂದ ದೂರವಾಗಿ ತಂದೆಯ ಹಾಗೂ ತಂಗಿಯ ಜೊತೆ ಇದ್ದಾಳೆ. ಈ ವಿಷಯವೇ ಬಹಳ ಮಾಡಿ ಕಾ ಅಲ್ಲಿಗೆ ಬಂದ ಮುಖ್ಯ ಕಾರಣವಿರಬಹುದು.
ಆದರೆ ಎಂದಿನಂತೆ ಪಮುಕ್ನ ಕಾದಂಬರಿಗಳಲ್ಲಿ ಇವೆಲ್ಲ ರೆಡ್ ಹೆರ್ರಿಂಗ್ಗಳಷ್ಟೆ. ಎಲ್ಲ ನೆಪಗಳಷ್ಟೆ. ಇದಿಷ್ಟು ಶುರು ಮಾಡಿದ ಮೇಲೆ ಮುಂದೆ ಹೋದಂತೆ ನಮಗೆ ಸಿಗುವುದು ಒಂದು ವಿಲಕ್ಷಣ ಹಾಗೂ ಉತ್ಕಟ ಚಿತ್ರಣ: ಬಿಡದೆ ಬೀಳುವ ಹಿಮ; ನಿರ್ಜನ ರಸ್ತೆಗಳು; ಹೆಜ್ಜೆಗೊಂದಿವೆಯೋ ಎನ್ನಿಸುವ, ಊರಿನ ನಿರುದ್ಯೋಗಿಗಳ ಅಡ್ಡಾಗಳಿಗಿರುವ, ಚಹಾದಂಗಡಿಗಳು; ಮಫ್ತಿಯಲ್ಲಿರುವ, ಕಂಡಕಂಡಲ್ಲಿ ಕಂಡುಬರುವ ಪೊಲೀಸರು; ಅವರಿಗೆ ಮಾಹಿತಿದಾರರಾಗಿ ಕೆಲಸ ಮಾಡುವ ನೂರಾರು ನಾಗರಿಕರು; ಬೀದಿನಾಯಿಗಳು; ಧಾರ್ಮಿಕ ಶಾಲೆಯ ಹುಡುಗರು; ಸ್ಥಳೀಯ ರಾಜಕಾರಣಿಗಳು; ಒಟ್ಟಾರೆ, ಕಾರ್ಸ್ ಎಂಬ ದುಃಖದ, ದುಗುಡ ತುಂಬಿದ ಊರು.
ಪಮುಕ್ನ ಇನ್ನೊಂದು ಪುಸ್ತಕ Istanbul: Memories of a City ಎಂಬ ಆತ್ಮಚರಿತ್ರೆಯಲ್ಲಿ ಅವನು ಇಸ್ತಾನ್ಬುಲ್ನ ಇಡೀ ಸ್ವರೂಪವನ್ನು ಒಂದೇ ಶಬ್ದದಲ್ಲಿ ಬಣ್ಣಿಸುತ್ತಾನೆ: ಹೂಜ಼ೂನ್ (Hüzün) ಅಥವಾ melancholy. ಇದು ವಿಷಣ್ಣತೆ ಅಥವಾ melancholyಗಿಂತ ಭಿನ್ನವಾದದ್ದು, ಇದೊಂದು ಅನುವಾದ ಮಾಡಲಾಗದ ಪದ ಎಂದು ಅವನ ಅನ್ನಿಸಿಕೆ. ವಾಸ್ತವದಲ್ಲಿ ಅವನ ಕತೆಗಾರಿಕೆಯ ಸ್ಥಾಯಿ ಭಾವವೇ ಇಂಥ hüzün. ಇಡೀ ಇಸ್ತಾನ್ಬುಲ್ನ ಒಳಹೊಕ್ಕು ಆವರಿಸಿಕೊಂಡಿರುವ ಭಾವ ಅನುಭವಿಸಬಹುದಾದ ಆದರೆ ಅರಿಯಲಾಗದ ದುಮ್ಮಾನದ್ದು. ಅದನ್ನು ಮನಸೆಳೆಯುವಂತೆ ಬಣ್ಣಿಸುತ್ತಾನೆ ಪಾಮುಕ್.
ಟರ್ಕಿ ಒಂದು ವಿಶೇಷ ದೇಶ. ಪೂರ್ವ ಮತ್ತು ಪಶ್ಚಿಮಗಳ ಸಂಘರ್ಷ ಸದಾಕಾಲ ಇರುವಂಥ ದೇಶ. ಸ್ವಾಭಾವಿಕವಾಗಿ ಪಾಮುಕ್ನ ಕಾದಂಬರಿಗಳ ಮುಖ್ಯ ಮೋಟಿಫ಼್ ಅದೇ. ಕಾರ್ಸ್ ಪ್ರಾಂತ್ಯದಲ್ಲಿ ಇದ್ದಕ್ಕಿದ್ದಂತೆ ಆತ್ಮಹತ್ಯೆಯ ಪಿಡುಗು ಹೆಚ್ಚಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವವರೆಲ್ಲ ಯೌವನದ ಹುಡುಗಿಯರು ಅಥವಾ ಹೊಸದಾಗಿ ಮದುವೆಯಾದವರು. ಈ ಆತ್ಮಹತ್ಯೆಯ ಹಿಂದಿನ ಕಾರಣಗಳೂ ಅಸ್ಪಷ್ಟ: ಒತ್ತಾಯದಿಂದ ಬೇಡದ ಮದುವೆಯಾದದ್ದು, ವಿಫಲ ಪ್ರೇಮ, ಮನೆಯವರ ಕಾಟ. ಏನೇನೋ ಕಾರಣಗಳು. ಅದರ ಜೊತೆಗೆ ರಾಜಕೀಯ ಬೆರೆತಿದೆ. ಆತ್ಮಹತ್ಯೆಗೆ ಇನ್ನೊಂದು ಮುಖ್ಯ ಕಾರಣವೆಂದರೆ, ಸಾಮಾನ್ಯ ಜನರ ಮೇಲೆ ಸೆಕ್ಯುಲರಿಸ್ಂನ ಹೇರಿಕೆ! ಅದು ಕಾರ್ಸ್ನಲ್ಲಿ (ಹಾಗೂ ಅನತೋಲಿಯಾದಲ್ಲಿ, ಸಾರ್ವತ್ರಿಕವಾಗಿ) ಅಭಿವ್ಯಕ್ತವಾಗಿದ್ದು ಹೆಂಗಸರು ತಲೆಯ ಮೇಲೆ ಹೊದ್ದುಕೊಳ್ಳುವ ವಸ್ತ್ರಗಳ (ಹೆಡ್ಸ್ಕಾರ್ಫ಼್) ಮೇಲಿನ ನಿರ್ಬಂಧದ ಮೂಲಕ. ಹೆಚ್ಚು ಹೆಚ್ಚು ಸೆಕ್ಯುಲರ್ ಆಗಬಯಸುವ, ಹೆಚ್ಚು ಪಾಶ್ಚಾತ್ಯವಾಗಿ ತನ್ಮೂಲಕ ಪ್ರಗತಿ ಸಾಧಿಸಬೇಕೆನ್ನುವ ಸರಕಾರ, ಬುದ್ಧಿಜೀವಿಗಳು, ಹಾಗೂ ಮಧ್ಯಮ ವರ್ಗ. ದೇವರು, ಧರ್ಮ, ರಿವಾಜುಗಳು ಕೊಡುವ — ಅಲ್ಪಸ್ವಲ್ಪವೇ ಇದ್ದರೂ ಸರಿ — ಭದ್ರತೆಯಲ್ಲಿ ಬದುಕಬಯಸುವ ಬಡ ಜನ, ಪೌರ್ವಾತ್ಯರು, ಸಾಮಾನ್ಯ ಜನರು. ಇವರ ನಡುವಿನ ನಾನಾ ನಮೂನೆಯ ಸಂಘರ್ಷಗಳು ಸಮಗ್ರ ಚಿತ್ರಣ ಈ ಕಾದಂಬರಿಯಲ್ಲಿ ಸಿಗುತ್ತದೆ.
ಮತಾಂಧರ ಭಯೋತ್ಪಾದನೆಯ ರೂಢಿಯಿರುವ ನಮಗೆ ಇಲ್ಲಿ ಸೆಕ್ಯುಲರ್ ಮಂದಿಯ ಭಯೋತ್ಪಾದನೆಯ ಪರಿಚಯವಾಗುತ್ತದೆ! ಸ್ವಾತಂತ್ರ್ಯ ಎಂದರೆ ಏನು? ಬಂಧಮುಕ್ತಿ ಎಂದರೆ ಏನು? ಮುಂತಾದ ಪ್ರಶ್ನೆಗಳು ಕಾಡುತ್ತವೆ. ಧರ್ಮದ ಕಾರಣಕ್ಕಿಂತ ಸೆಕ್ಯುಲರ್ ದಬ್ಬಾಳಿಕೆಯ ವಿರುದ್ಧ ಬಂಡೇಳುವ ಉದ್ದೇಶದಿಂದಲೇ ಹೆಡ್ಸ್ಕಾರ್ಫ಼್ ಧರಿಸುವ ಹುಡುಗಿಯರು ಕಾಣಸಿಗುತ್ತಾರೆ. ಹಾಗೆಯೇ, ರಂಗದ ಮೇಲೆ, ಸಾವಿರಾರು ಮಡಿವಂತ ಪ್ರೇಕ್ಷಕರೆದುರಿಗೆ, ತಲೆಯ ಮೇಲಿನ ವಸ್ತ್ರವನ್ನು ಸೆಳೆದು ನೆಲಕ್ಕೆ ಹಾಕಿ ಸುಡುವ ದೃಶ್ಯಗಳೂ ಇವೆ. ಅಟಾಟರ್ಕ್ನ ಆದರ್ಶಗಳನ್ನು ಒಳಗೊಂಡ ಭಾಷಣಗಳು, ಆ ಆದರ್ಶಗಳನ್ನು ಸಾಕಾರಗೊಳಿಸುತ್ತೇವೆಂದುಕೊಳ್ಳುತ್ತಲೇ ಅಧಿಕಾರದ ಆಸೆಗೆ ದೌರ್ಜನ್ಯ ನಡೆಸುವ ಜನರೂ ಇದ್ದಾರೆ.
ಅವರು ಯಾವ ಬಟ್ಟೆ ತೊಡಬೇಕು ತೊಡಬಾರದು ಎಂಬುದನ್ನು ನಿರ್ಧರಿಸುವ ಹಕ್ಕು ಎಲ್ಲ ಕಾಲದಲ್ಲೂ ಎಲ್ಲೆಡೆಯಲ್ಲೂ ಹೆಣ್ಣುಮಕ್ಕಳನ್ನು ಬಿಟ್ಟು ಉಳಿದೆಲ್ಲರಿಗೂ ಇದ್ದಂತಿದೆ. ಇದಕ್ಕೆಲ್ಲ ಏನು ಪರಿಹಾರ? ಗೊತ್ತಿಲ್ಲ. ಅಂಥದನ್ನು ಕೊಡುವ ಉದ್ದೇಶವೂ ಕಾದಂಬರಿಗಿಲ್ಲ. ಅಲ್ಲದೇ, ಇದೆಲ್ಲವೂ ಒಂದು ಡಾರ್ಕ್ ಕಾಮೆಡಿ ಎಂಬಂತೆ ಭಾಸವಾಗುತ್ತದೆ ಪಮುಕ್ನ ಶೈಲಿಯ ದೆಸೆಯಿಂದ. ಪ್ರೀತಿ, ಧರ್ಮ, ಪರಂಪರೆ, ಆಧುನಿಕತೆ; ಇವೆಲ್ಲವುಗಳ ಸಲುವಾಗಿನ ಬಡಿದಾಟಗಳು; ಎಲ್ಲವೂ ದೊಡ್ಡದೊಂದು ಪ್ರಹಸನ ಎನ್ನಿಸುತ್ತದೆ.
ಪಮುಕ್ನ ಕಾದಂಬರಿಗಳಲ್ಲಿ ಸಮಯ ಅದರದೇ ವಿಶಿಷ್ಟ ಗತಿಯಲ್ಲಿ ತೆವಳುತ್ತದೆ. ಇನ್ನು ಇಪ್ಪತ್ತು ನಿಮಿಷಗಳಲ್ಲಿ ಪ್ರೇಯಸಿಯನ್ನು ಭೆಟ್ಟಿಯಾಗಬೇಕು ಎಂದು ಹೊರಟಾಗಲೂ, ಇದ್ದಕ್ಕಿದ್ದಂತೆ ಕವಿತೆಯ ಹಕ್ಕಿಯೊಂದು ಹಾರಿ ಬಂದು ಮನಸ್ಸಿನಲ್ಲಿ ಸೇರಿಕೊಳ್ಳುತ್ತದೆ. ಹಿಂಬಾಲಿಸುತ್ತಿರುವ ಗೂಢಚಾರನಿದ್ದಾಗಲೂ, ಅಲ್ಲಿಯೇ ಪಕ್ಕದಲ್ಲಿ ಸಿಗುವ ಚಹಾದಂಗಡಿಯೊಳಗೆ ನುಗ್ಗಿ, ಹಸಿರು ಬಣ್ಣದ ಡೈರಿ ತೆಗೆದು, ಪದ್ಯವೊಂದನ್ನು ಬರೆಯುವಷ್ಟು ಪುರುಸೊತ್ತಿರುತ್ತದೆ. ಈ ಸಮಯದ ಅಂದಾಜು ನಮಗೆ ಸಿಗುವುದೇ ಇಲ್ಲ. ಪ್ರತಿ ಬಾರಿಗೂ ಹೊಸದೆನ್ನಿಸುತ್ತದೆ. ಕೊನೆಗೆ ಸೋಜಿಗವೇ ಸ್ಥಾಯಿಯಾಗುತ್ತದೆ.