ಇಪ್ಪತ್ತನೇ ಶತಮಾನದ ಅತ್ಯಂತ ಪ್ರಭಾವಿ ಲೇಖಕರಲ್ಲೊಬ್ಬನೆಂದು ಖ್ಯಾತನಾದವನು ಬ್ರುನೋ ಶುಲ್ಟ್ಸ್ (Bruno Schulz, ಜುಲೈ 12, 1892 – ನವೆಂಬರ್ 19, 1942). ಈತ ಪೋಲೆಂಡ್ ದೇಶದ ಯಹೂದಿ ಸಮುದಾಯಕ್ಕೆ ಸೇರಿದ ಬರಹಗಾರ ಮತ್ತು ಚಿತ್ರಕಲೆಯ ಶಿಕ್ಷಕ. ತನ್ನದೇ ವಿಶಿಷ್ಟ ಕಥನ ಶೈಲಿಯನ್ನು ರೂಢಿಸಿಕೊಂಡಿದ್ದ ಶುಲ್ಟ್ಸ್ ಪೋಲೆಂಡಿನ ಮಾಡರ್ನಿಸ್ಟ್ ಗದ್ಯ ಬರಹಗಾರರಿಗೆ ಮೇಲ್ಪಂಕ್ತಿಯಾಗಿದ್ದವನು. ಅವನ ಜೀವಿತದ ಕಡೆಯ, ಪ್ರಾಯಶಃ ಅಪೂರ್ಣ, ಕಾದಂಬರಿ The Messaiah ಸೇರಿದಂತೆ ಅವನ ಬಹಳಷ್ಟು ಕೃತಿಗಳು ಹತ್ಯಾಕಾಂಡದ (The Holocaust) ಅವಧಿಯಲ್ಲಿ ಕಳೆದುಹೋಗಿವೆ. ಆತನ ಅಳಿದುಳಿದ ಕತೆಗಳು ‘ದಿ ಸ್ಟ್ರೀಟ್ ಕ್ರೋಕೊಡೈಲ್ಸ್’ (The Street Crocodiles, 1933) ಮತ್ತು ‘ಸ್ಯಾನಟೋರಿಯಂ ಅಂಡರ್ ದಿ ಸೈನ್ ಆಫ್ ದಿ ಅವರ್ಗ್ಲಾಸ್’ (Sanatorium Under the Sign of the Hourglass, 1937) ಎಂಬ ಎರಡು ಸಂಕಲನಗಳಲ್ಲಿ ಪ್ರಕಟವಾಗಿವೆ. ಎರಡೂ ಕಥಾಸಂಕಲನಗಳು ಅಭಿಜಾತ ಕೃತಿಗಳೆಂದೇ ಪರಿಗಣಿತವಾಗಿವೆ.

ಬ್ರುನೋನ ಕತೆಗಳ ಭಾಷೆಯು ವ್ಯಂಗ್ಯ, ವಿಡಂಬನೆ ಮತ್ತು ರೂಪಕಗಳಿಂದ ಕೂಡಿರುತ್ತದೆ. ಈ ಲೇಖಕ ಮೊದಲ ಓದಿಗೆ ರುಚಿಸಲಾರನೆಂಬುದು ಸತ್ಯವೇ. ಆಧುನಿಕ ಯುರೋಪ್ನ ಸ್ವೋಪಜ್ಞ ಪ್ರತಿಬೆ ಎಂದೇ ಗುರುತಿಸಲ್ಪಟ್ಟಿರುವ ಬ್ರುನೋ ಅತ್ಯಂತ ಆಳದಿಂದ ಬರೆಯುವ ಹಾಗೂ ಅಷ್ಟೇ ಗಾಢವಾಗಿ ಕಾಡುವ ಲೇಖಕನಾಗಿದ್ದಾನೆ. ಪ್ರಸ್ತುತ ಕತೆಯು ಆತನ ಎರಡನೇ ಕಥಾ ಸಂಕಲನದಲ್ಲಿರುವ Samotność (ಇಂಗ್ಲಿಷ್ ಅನುವಾದದಲ್ಲಿ Loneliness) ಕತೆಯ ಅನುವಾದವಾಗಿದೆ. ಸೆಲೀನಾ ವಿಯೆನಿಯೆವ್ಸ್ಕಾ ಅವರ ಇಂಗ್ಲಿಷ್ ಅನುವಾದ ನವೆಂಬರ್ 14, 1977ರ ದಿ ನ್ಯೂ ಯಾರ್ಕರ್ ಪತ್ರಿಕೆಯಲ್ಲಿ ಪ್ರಕಟವಾದಾಗ ಪೋಲೆಂಡಿನಾಚೆಗಿನ ಓದುಗರಿಗೆ ಶುಲ್ಟ್ಸ್ ಕತೆಗಳ ಪರಿಚಯವಾಗತೊಡಗಿತು.
ಬ್ರೂನೋ ಶುಲ್ಟ್ಸ್ ಸತ್ತದ್ದು ತನ್ನ ಐವತ್ತನೆಯ ವಯಸ್ಸಿನಲ್ಲಿ. ಅಂಗಡಿಯಿಂದ ಒಂದು ಲೋಫ್ ಬ್ರೆಡ್ ಕೊಂಡು ಯಹೂದಿಗಳ ಕೇರಿಯ ತನ್ನ ಮನೆಯ ಹಾದಿ ಹಿಡಿದಿದ್ದಾಗ ಗೆಸ್ತಾಪೋ ಅಧಿಕಾರಿಯೊಬ್ಬನ ಗುಂಡಿಗೆ ಬಲಿಯಾದ. ಅವನೇ ಬರೆಯಬಹುದಾಗಿದ್ದ ಕತೆಯಂತೆ ಕೊನೆ ಕಂಡ.
ಇನ್ನೀಗ ಸುಭಾಷ್ ರಾಜಮಾನೆ ಅನುವಾದದಲ್ಲಿ ಶುಲ್ಟ್ಸ್ನ Samotność.
ಒಂಟಿತನ
ನನಗೆ ಮತ್ತೊಮ್ಮೆ ಹೊರಗೆ ನಡೆದುಕೊಂಡು ಹೋಗಲು ದೊಡ್ಡ ಬಿಡುಗಡೆ ಸಿಕ್ಕಂತೆ ಭಾಸವಾಗುತ್ತಿದೆ. ಆದರೆ, ನಾನು ಎಷ್ಟೊಂದು ದೀರ್ಘ ಕಾಲದಿಂದ ಈ ಕೋಣೆಯೊಂದಿಗೆ ಬಂಧಿಯಾಗಿದ್ದೆ! ತುಂಬ ಕಹಿಯಾದ ದಿನಮಾನಗಳು. ನೋವಿನ ವರುಷಗಳೊಂದಿಗೆ ಬದುಕಿದೆ.
ಹಳೆಯ ಶಿಶುವಿಹಾರದ ಕೋಣೆಯಲ್ಲಿ ನಾನೇಕೆ ವಾಸವಾಗಿದ್ದೇನೆ ಎಂಬುದನ್ನು ವಿವರಿಸಲಾರೆ. ಬಹುಮಹಡಿ ಮನೆಯ ಹಿಂದಿನ ಕೋಣೆಯಿಂದ ಬಾಲ್ಕನಿಗೆ ಹೋಗಬಹುದಿತ್ತು. ಆ ಜಾಗ ನಮಗೆ ಸೇರಿದ್ದಲ್ಲ ಎಂದು ತಿಳಿದಿದ್ದರೂ ಹಿಂದೊಮ್ಮೆ ಅಪರೂಪವಾಗಿ ಅದನ್ನು ಬಳಸುತ್ತಿದ್ದೆ. ನಾನಲ್ಲಿಗೆ ಹೇಗೆ ಹೋಗುತ್ತಿದ್ದೆ ಎಂಬುದೇ ನನಗೀಗ ನೆನಪಿಲ್ಲ. ಅದು ಚಂದ್ರನಿಲ್ಲದ ಶುಭ್ರವರ್ಣದ ರಾತ್ರಿ. ಆ ಮಂದ ಬೆಳಕಿನಲ್ಲಿ ಪ್ರತಿಯೊಂದನ್ನೂ ನಾನು ಕಾಣಬಲ್ಲವನಾಗಿದ್ದೆ. ಯಾರೋ ಆಗಷ್ಟೇ ನಿದ್ದೆಯಿಂದ ಎದ್ದುಹೋಗಿರುವಂತೆ ಹಾಸಿಗೆ ಬಿದ್ದುಕೊಂಡಿತ್ತು. ಜನರು ನಿದ್ದೆಯಲ್ಲಿ ಸ್ಥಬ್ಧವಾಗಿರುವಂತೆ ಅವರ ಉಸಿರಾಟವನ್ನು ಆಲಿಸಿದೆ. ಆದರೆ ಇಲ್ಲಿ ನಿಜವಾಗಿಯೂ ಉಸಿರಾಡುತ್ತಿರುವವರು ಯಾರು? ಇದು ಅಂದಿನಿಂದ ನನ್ನದೇ ಕೋಣೆಯಾಯಿತು. ಎಷ್ಟೋ ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ನನಗೆ ಬೇಸರವೂ ಆಗಿದೆ. ಏನನ್ನಾದರೂ ಶೇಖರಣೆ ಮಾಡುವುದರ ಬಗ್ಗೆ ನಾನೇಕೆ ಮುಂಚಿತವಾಗಿಯೇ ಆಲೋಚಿಸುವುದಿಲ್ಲ! ಓಹೋ! ಈಗಲೂ ನಿಮಗೆ ಸಮಯವನ್ನು ನೀಡಿದ್ದರೆ ನೀವಾದರೂ ಅದನ್ನು ಮಾಡಬಹುದಿತ್ತು. ಒಳ್ಳೆಯ ಪೌಷ್ಟಿಕವಾದ ಧಾನ್ಯಗಳನ್ನು ಮುಂಬರುವ ಚಳಿಗಾಲದ ದಿನಗಳಿಗಾಗಿ ನಾನು ಕೂಡಿಡಬೇಕಿತ್ತು. ಹಸಿವಿನ ವರುಷಗಳು ಮುಂದಿವೆ. ಚಳಿಗಾಲದಲ್ಲಿ ಈಜಿಪ್ತಿನ ನೆಲ ಹಣ್ಣುಗಳನ್ನು ಬಿಡುವುದಿಲ್ಲ. ಅಯ್ಯೋ! ದೂರದೃಷ್ಟಿಯುಳ್ಳ ಮನುಷ್ಯ ನಾನಲ್ಲ. ಯಾವತ್ತೂ ನಾನೊಬ್ಬ ಹಗುರ ಹೃದಯದ ಇಲಿಯ ಹಾಗೆ. ನಾನು ನಾಳೆಯ ಚಿಂತೆಯಿಲ್ಲದೆ ಈ ದಿನವಷ್ಟೇ ಬದುಕಿರುವಾತ. ಹಸಿವಿನಿಂದ ಬಳಲುವ ಬುದ್ಧಿಯಲ್ಲಿ ನಂಬಿಕೆ ಇಟ್ಟಿರುವಾತ. ಒಂದು ಇಲಿಯಂತೆ ಹಸಿವಿನ ಬಗ್ಗೆ ಏನಂತ ಕಾಳಜಿ ವಹಿಸುವುದು? ಅಂತಹ ದಾರಿದ್ರ್ಯವೇನಾದರೂ ಬಂದರೆ ಕಟ್ಟಿಗೆಯನ್ನೋ ಅಥವಾ ಕಾಗದವನ್ನೋ ಕೊರೆಯುತ್ತೇನೆ. ಅತ್ಯಂತ ಬಡ ಪ್ರಾಣಿಯಾದ ಕಂದು ಬಣ್ಣದ ಇಲಿ ಪುಸ್ತಕದ ತುದಿಯನ್ನು ಕಚ್ಚಿ ತಿನ್ನುವಂತೆ, ಯಾವುದರ ಮೇಲೂ ನನ್ನ ಅಸ್ತಿತ್ವವೇ ಇಲ್ಲ. ಆದ್ದರಿಂದ, ನಾನು ಈ ನಿರ್ಜೀವ ಕೋಣೆಯಲ್ಲಿ ವಾಸಿಸುತ್ತೇನೆ. ಎಷ್ಟೋ ಸಮಯದ ಹಿಂದಿನಿಂದ ಅನೇಕ ನೊಣಗಳು ಸತ್ತು ಬಿದ್ದಿವೆ. ಕಟ್ಟಿಗೆ ಹುಳುವಿನ ಸದ್ದನ್ನು ಕೇಳಲು ನನ್ನ ಕಿವಿಯನ್ನು ಆ ಕಟ್ಟಿಗೆಯ ಸಮೀಪಕ್ಕೆ ಒಯ್ಯುತ್ತೇನೆ. ಸ್ಮಶಾನ ಮೌನ. ಮೇಜಿನ ಮೇಲೆ, ಶೆಲ್ಪಿನ ಮೇಲೆ, ಚೇರುಗಳ ಮೇಲೆ ಕೊನೆಯಿಲ್ಲದೆ ಓಡಾಡುತ್ತಿರುವ ಇಲಿ. ನಾನು ಕೂಡ ಅದರಂತೆಯೇ ಏಕಾಂಗಿ. ನಾನು ಕೋಣೆ ತುಂಬ ಓಡಾಡಿದಾಗ ಚಿಕ್ಕಮ್ಮಳಾದ ಥೆಕ್ಲಾಳ ಕಂದು ಬಣ್ಣದ ಉದ್ದನೆಯ ನಿಲುವಂಗಿ ನೆಲಕ್ಕೆ ತಾಗುತ್ತಿತ್ತು. ಚುರುಕಾದ, ಕ್ಷಿಪ್ರವಾದ, ಸಣ್ಣದಾದ ಬಾಲವೊಂದು ನನ್ನನ್ನು ಎಳೆಯುತ್ತಿದೆ. ನಾನೀಗ ಪ್ರಖರ ಸೂರ್ಯನ ಬೆಳಕಿನ ಮೇಜಿನ ಮೇಲೆ ಅಚಲವಾಗಿ, ಹೊರಚಾಚಿದ ಹೊಳಪಿನ ಕಣ್ಣುಗಳೊಂದಿಗೆ ಕೂತಿದ್ದೇನೆ. ಬಾಯಿ ಮುಚ್ಚಿಕೊಂಡು ಕುಳಿತಿರುವ ನಾನು, ಚಟದ ಬಲದಿಂದ ಎಷ್ಟೋ ಹೊತ್ತಿನ ನಂತರ ಬಾಯಾಡಿಸುತ್ತೇನೆ.
ಇದನ್ನೆಲ್ಲ ಒಂದು ರೂಪಕದಂತೆಯೂ ಅರ್ಥ ಮಾಡಿಕೊಳ್ಳಬಹುದು. ನಿಜವಾಗಿಯೂ ನಾನೊಬ್ಬ ನಿವೃತ್ತ ವೇತನದಾರನೇ ಹೊರತು ಒಂದು ಇಲಿಯಂತೂ ಅಲ್ಲ. ಇದು ನನ್ನ ಅಸ್ತಿತ್ವದ ಭಾಗವಾಗಿ, ನಾನು ರೂಪಕಗಳ ಮೇಲೆ ಪರಾವಲಂಬಿ ಆಗುವಂತಾಗಿದೆ. ಆದ್ದರಿಂದ ಸುಲಭವಾಗಿಯೇ ಮೊದಲು ಉಪಮೆಯನ್ನು ಹೊರಹಾಕಲು ನನಗೆ ಸಾಧ್ಯವಾಗಿದೆ. ಅವುಗಳನ್ನು ಹೊರಹಾಕಿದ ಮೇಲೆ, ನನ್ನ ಕಠಿಣ ದಿನಗಳಿಗೆ ಮತ್ತು ನಿಧಾನವಾಗಿ ನನ್ನ ಇಂದ್ರಿಯಗಳಿಗೆ ಮರಳಬೇಕು. ನಾನು ಹೇಗೆ ಕಾಣುತ್ತೇನೆ? ಕೆಲವು ಸಲ ನನ್ನನ್ನೇ ನಾನು ಕನ್ನಡಿಯಲ್ಲಿ ನೋಡಿಕೊಳ್ಳುತ್ತೇನೆ. ಇದೊಂದು ವಿಚಿತ್ರವಾದ, ಹಾಸ್ಯಾಸ್ಪದ ಮತ್ತು ನೋವಿನ ಸಂಗತಿ! ಇದನ್ನು ಒಪ್ಪುವುದೇ ಅವಮಾನಕರ. ನಾನು ಯಾವತ್ತೂ ನನ್ನ ಮುಖವನ್ನು ಸಂಪೂರ್ಣವಾಗಿ ನೋಡಿಕೊಂಡಿಲ್ಲ. ಸ್ವಲ್ಪ ದೂರ ಸರಿದರೆ ನಾನು ಕನ್ನಡಿಯೊಳಗೆ, ಅದರ ಕೇಂದ್ರದಲ್ಲೇ ನಿಲ್ಲುತ್ತೇನೆ. ನಮ್ಮ ನೋಟಗಳು ಪರಸ್ಪರ ಭೇಟಿಯಾಗುವುದನ್ನೇ ನಿಲ್ಲಿಸುತ್ತವೆ. ನಾನು ಚಲಿಸಿದರೆ ನನ್ನ ಪ್ರತಿಬಿಂಬವೂ ಚಲಿಸುತ್ತದೆ. ಅದರೆ ಅರ್ಧ ತಿರುಗಿದ ಬೆನ್ನು, ಅದು ನನ್ನ ಬಗ್ಗೆ ತಿಳಿಯದಿದ್ದರೆ, ನನ್ನ ಹಿಂಭಾಗದಲ್ಲಿ ಹಲವು ಕನ್ನಡಿಗಳಿದ್ದಿದ್ದರೆ ಹಿಂದಕ್ಕೆ ಬರುತ್ತಿರಲಿಲ್ಲ. ನಾನಿದನ್ನು ದೂರದಿಂದ ಮತ್ತು ಅಭಿನ್ನವಾಗಿ ಕಂಡಾಗ ನನ್ನೆದೆಯಲ್ಲಿ ನೆತ್ತರು ಸುರಿಯುತ್ತದೆ. ಇದು ನೀನು ಎಂದು ಘೋಷಿಸುತ್ತೇನೆ; ನೀನು ಎಂದಿಗೂ ನನ್ನ ನಂಬಿಕೆಯ ಪ್ರತಿಬಿಂಬ. ನೀನು ಬಹಳ ವರ್ಷಗಳಿಂದ ನನ್ನ ಜೊತೆಯಲ್ಲಿದ್ದೆ ಮತ್ತು ಈಗ ನನ್ನನ್ನು ಗರುತು ಹಿಡಿಯುತ್ತಿಲ್ಲ! ಓ ದೇವರೇ! ಅಪರಿಚಿತದ ಒಂದು ಬದಿಯನ್ನು ನೋಡುತ್ತಿರುವ ನನ್ನ ಪ್ರತಿಬಿಂಬ ಅಲ್ಲೇ ನಿಲ್ಲುತ್ತದೆ. ಏನನ್ನೋ ಆಲಿಸುತ್ತಿರುವಂತೆ ಕಾಣುತ್ತದೆ. ಕನ್ನಡಿಯ ಆಳದಿಂದ ಬರುವ ಒಂದು ಶಬ್ದಕ್ಕೆ ಕಾದಂತೆ, ಯಾರಿಗೋ ವಿಧೇಯವಾದಂತೆ, ಮತ್ತೊಂದು ತಾವಿನಿಂದ ಬರುವ ಆಜ್ಞೆಗಾಗಿ ಕಾಯುತ್ತಿರುವಂತೆ ಭಾಸವಾಗುತ್ತಿದೆ.
ಪ್ರಾಯಶಃ ನಾನು ಮೇಜಿನ ಮುಂದೆ ಕೂರುತ್ತೇನೆ. ಹಳದಿ ಬಣ್ಣಕ್ಕೆ ತಿರುಗಿರುವ ನನ್ನ ವಿಶ್ವವಿದ್ಯಾಲಯದ ಟಿಪ್ಪಣಿಯ ಪುಟಗಳನ್ನು ತಿರುವಿ ಹಾಕುತ್ತೇನೆ. ಇದು ನನ್ನ ಏಕೈಕ ಓದು.
ಚಳಿಗಾಲದ ತಣ್ಣನೆಯ ಗಾಳಿ ಕಿಟಕಿಯಿಂದ ಒಳಗೆ ನುಸುಳುತ್ತಿರುವಾಗ ಸೂರ್ಯನ ಬಿಸಿಲಿನಿಂದ ಮಾಸಿ ಹೋಗಿರುವ, ಧೂಳು ಮೆತ್ತಿಕೊಂಡಿರುವ ಪರದೆಯ ಕಡೆ ನನ್ನ ಗಮನ ಹರಿಯುತ್ತದೆ. ಆ ಪರದೆಗೆ ಹಾಕಿರುವ ಸಲಾಕೆಯನ್ನು ನಾನು ತಿರುಗಿಸಲು ಹೋಗುವುದಿಲ್ಲ. ಎಷ್ಟೊಂದು ಹಗುರವಾಗಿದ್ದರೂ ಅಂತರಲಾಗ ಹಾಕಿಕೊಂಡು ಬರಡಾದ ಗಾಳಿ ಬಳಲಿ ಹೋಗಿದೆ. ಯಾರಾದರೂ ಸಹಜವಾಗಿ ಸೊಗಸಾಗಿ ತನ್ನದೇ ರೀತಿಯಲ್ಲಿ ಕಲ್ಪಿಸಿಕೊಳ್ಳಬಹುದಾದ ಒಂದು ಕಸರತ್ತು ಜರುಗುತ್ತಿದೆ. ಆಯ ತಪ್ಪದಂತೆ ನಿಶ್ಯಬ್ದವಾಗಿ ತುದಿಗಾಲಲ್ಲಿ ನಿಂತುಕೊಂಡರೆ ತಲೆ ಛಾವಣಿಗೆ ತಾಗುತ್ತಿದೆ; ತಲೆ ಮೇಲಕ್ಕೆ ಎತ್ತಿದಂತೆ ಇಡೀ ದೇಹ ಬೆಚ್ಚನೆಯ ಅನುಭವದ ಭ್ರಮೆಯಲ್ಲಿ ತೇಲಾಡುತ್ತದೆ. ಬಾಲ್ಯದ ದಿನಗಳಿಂದಲೂ ಇಡೀ ಕೋಣೆಯನ್ನು ಕಣ್ಣಾಡಿಸುವುದು ನನಗೆ ಪ್ರಿಯವಾದ ಕೆಲಸವಾಗಿದೆ. ನಾನು ಕುಳಿತುಕೊಂಡು ಮೌನವನ್ನು ಆಲಿಸುತ್ತೇನೆ. ಕೋಣೆಯೆಲ್ಲ ಬಿಳುಚಿಕೊಂಡಿದೆ. ಬಿಳಿಯ ಛಾವಣಿಯಲ್ಲಿ ಕೆಲವು ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಪ್ಲಾಸ್ಟರ್ ತುಣುಕುಗಳು ಕಳಚಿ ಬೀಳುತ್ತವೆ. ಗೋಡೆಯ ಒಳಗೆ ಕೋಣೆ ಇರುವುದನ್ನು ನಾನು ಕಾಣಿಸುವಂತೆ ಮಾಡುತ್ತೇನೆಯೇ? ಇದು ಹೇಗೆ ಸಾಧ್ಯ? ಗೋಡೆಯ ಒಳಗೆ? ನಾನಿದನ್ನು ಬಿಟ್ಟು ಹೋಗುವುದು ಹೇಗೆ? ಮನಸಿದ್ದರೆ ಮಾರ್ಗವಿದೆ; ಗಾಢವಾದ ಸಂಕಲ್ಪ ಎಲ್ಲವನ್ನೂ ಜಯಿಸಬಲ್ಲದು. ನಾನು ಕೇವಲ ಒಂದು ಬಾಗಿಲನ್ನು ಕಲ್ಪಿಸಿಕೊಳ್ಳುತ್ತೇನೆ. ಬಾಲ್ಯದಲ್ಲಿ ಅಡುಗೆಮನೆಯಲ್ಲಿ ಕಂಡಿದ್ದ ಹಳೆಯ ಕಾಲದ ಒಳ್ಳೆಯ ಬಾಗಿಲು ನನಗಿಷ್ಟ. ಆ ಬಾಗಿಲಿಗೆ ಕಬ್ಬಿಣದ ಹಿಡಿಕೆ ಮತ್ತು ಒಂದು ಅಗುಳಿ ಇರಬೇಕಷ್ಟೇ. ಆ ಕೋಣೆಗೆ ಗೋಡೆಯೇ ಇರಬಾರದು. ಅದು ಏನು ಮಾಡಿದರೂ ತೆರೆಯದಷ್ಟು ನಂಬಿಕೆಗೆ ಅರ್ಹವಾದ ಬಾಗಿಲು ಆಗಿರಬೇಕು. ಅಂತಹದೊಂದು ಭದ್ರವಾದ ಬಾಗಿಲು ಇರುತ್ತದೆ ಎನ್ನುವುದು ಅದರ ಅಸ್ತಿತ್ವದಿಂದಲೇ ತಿಳಿದು ಬರಬೇಕಷ್ಟೇ.
ಸುಭಾಷ್ ರಾಜಮಾನೆ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕುಸನಾಳದ ಸುಭಾಷ್ ರಾಜಮನೆಯವರು ಹೊಸ ತಲೆಮಾರಿನ ವಿಮರ್ಶಕರು. ಹಲವು ಕೃತಿಗಳನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಂಡದ್ದು ಕಾಣದ್ದು: ಕೃತಿ ಜಗತ್ತಿಗೆ ಹೀಗೊಂದು ಪಯಣ ಎಂಬ ಅವರ ಸಾಹಿತ್ಯಿಕ ಲೇಖನಗಳ ಸಂಗ್ರಹವು ಆಕೃತಿ ಪುಸ್ತಕದಿಂದ 2024ರಲ್ಲಿ ಪ್ರಕಟವಾಗಿ ಮೆಚ್ಚುಗೆ ಗಳಿಸಿದೆ. ರಾಜಮಾನೆಯವರು ಬೆಂಗಳೂರಿನಲ್ಲಿ ನೆಲಸಿ ಸರ್ಕಾರಿ ಆರ್. ಸಿ. ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ …
ನಮ್ಮ ಕಾಲಕ್ಕೆ ತಕ್ಕುದಾದುದು ಪ್ರಹಸನ ಮಾತ್ರ
ವನ್ಯಜೀವಿ ಛಾಯಾಚಿತ್ರಕಾರರಾದ ಕೃಪಾಕರ ಸೇನಾನಿ ತಮ್ಮ ಕೆನ್ನಾಯಿಯ ಜಾಡಿನಲ್ಲಿ ಪುಸ್ತಕದಲ್ಲಿ ಆನೆಯೊಂದು ಆನೆಯಾಗುವ ಬಗೆಯನ್ನು ಹೀಗೆ ಚಿತ್ರಿಸುತ್ತಾರೆ: