ʼಇವರನ್ನೆಲ್ಲ ಓದಿಕೊಂಡ ಮೇಲೆ ಕತೆ ಬರೆಯಲೇಬೇಕೆನ್ನಿಸಿತುʼ
ಪ್ರವೀಣ ಕುಮಾರ ಜಿ. ಅವರ ʼಎಡೆʼ ಯೊಳಗಿನಿಂದ ಆಯ್ದ ತುಣುಕುಗಳು
ಕತೆಗಾರ ಪ್ರವೀಣ ಕುಮಾರ ಜಿ. ಅವರ ಎಡೆ ಕಥಾಸಂಕಲನ 24.3.2024ರಂದು ಬೆಂಗಳೂರಿನಲ್ಲಿ ಬಿಡುಡೆಯಾಗುತ್ತಿದೆ. ಒಲವು ಬರಹ ಇದನ್ನು ಪ್ರಕಟಿಸಿದೆ. ಈ ಸಂದರ್ಭದಲ್ಲಿ ಪ್ರವೀಣ ಕತೆಯ ಗುಂಗು ಹಿಡಿಸಿಕೊಂಡಿದ್ದು ಹೇಗೆ ಎಂಬುದನ್ನು ನೀವಿಲ್ಲಿ ಓದಬಹುದು. ಹಾಗೇ ಕತೆಗಳ ಕೆಲ ಪ್ಯಾರಾಗಳನ್ನೂ.
ನಾಲ್ಕು ಐದನೆಯ ತರಗತಿಯಲ್ಲಿರುವಾಗ ವಾರಿಗೆಯ ಹುಡುಗ ಹುಡುಗಿಯರೆಲ್ಲರೂ ನನ್ನೆಡೆಗೆ ಕಣ್ಣು ಕಿವಿಗಳನ್ನು ನೆಟ್ಟಿರುವಾಗ ಅವರ ಗಮನವನ್ನು ಬೇರೆಡೆ ಹರಿಯದಂತೆ ನೋಡಿಕೊಳ್ಳಲು ನಾನು ಸರಿಯಾದ ಕತೆ ಹೇಳಲೇಬೇಕಾಗಿತ್ತು. ಯಾವಾಗಲೂ ಅವವೇ ಕತೆ ಹೇಳುವಾಗಿಲ್ಲ, ಹೊಸ ಬಗೆಯ ಕತೆಗಳನ್ನು ಹೇಳಬೇಕು. ಐದು ಎವೆ(ನಿಮಿಶ) ಮುಗಿಯುವ ಮೊದಲೇ ಕೇಳುಗರು ‘ಬೇರೆ ಕತೆ ಬೇಕುʼ ಎಂದುಬಿಟ್ಟರೆ ಕತೆ ಹೇಳುವುದನ್ನು ನಿಲ್ಲಿಸಿ ಹೋಗಿ ಕೂರಬೇಕಿತ್ತು. ಆಗ ಮತ್ತೊಬ್ಬರು ಕತೆ ಹೇಳುವುದನ್ನು ಮುಂದುವರಿಸುತ್ತಿದ್ದರು. ಅಂದು ಶಿಕ್ಷಕರು ಹೀಗೆ ನನ್ನೊಳಗಿನ ಕತೆಗೆ ಖೋ ಕೊಟ್ಟಿದ್ದಕ್ಕೇ ನನಗೆ ಕತೆಯ ಗುಂಗು ಹೊಕ್ಕಿತೇನೋ.
ಇನ್ನು ಅಪ್ಪ ಪೊಲೀಸ್ ಕೆಲಸದಲ್ಲಿದ್ದುದರಿಂದ ಊರಿಂದ ಊರಿಗೆ ವರ್ಗವಾಗಿ ಹೋಗುತ್ತಿದ್ದುದರಿಂದ ನನ್ನೊಳಗೆ ಹೊಸ ಕತೆಗಳು ಹುಟ್ಟಿಕೊಳ್ಳುತ್ತಿದ್ದವು ಹಾಗೆಯೇ ಹೊಸ ಕೇಳುಗ ಗೆಳೆಯರೂ. ಅಪ್ಪ ಬೇರೆ ಊರಿಗೆ ಕರ್ತವ್ಯ ನಿಮಿತ್ತ ಹೋದಾಗ ಸಣ್ಣಸಣ್ಣ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ಬೀಚಿ ಮತ್ತು ಕೈಲಾಸಂ ಅವರು ನನಗೆ ಪರಿಚಯವಾಗಿದ್ದು ಹೀಗೆ. ಮುಂದೆ ಕುವೆಂಪು, ತೇಜಸ್ವಿ, ಭೈರಪ್ಪ.
ಮುಂದೆ ನಾನು ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುವಾಗ ಇಂಗ್ಲಿಷ್ ಕಾದಂಬರಿ ಕಥೆಗಳ ಮತ್ತು ಸಿನೆಮಾದ ರುಚಿ ಹತ್ತಿತ್ತು. ಇದರಿಂದ ಬರೆವಣಿಗೆಯಲ್ಲಿ ಆಸಕ್ತಿ ಮೂಡಿತು. ಕತೆಗಳು ಹೆಚ್ಚು ಮಂದಿಯನ್ನು ಮುಟ್ಟಬೇಕು ಎನ್ನುವ ಬಯಕೆಯನ್ನು ಹೊತ್ತು ಬರೆಯುತ್ತಿದ್ದವನಿಗೆ, ಓದಲು ಬರೆಯಲು ಬಾರದೇ ಇರುವವರಿಗೂ ನನ್ನ ಕತೆಗಳನ್ನು ಅನುಭವಗಳನ್ನು ಮುಟ್ಟಿಸಬೇಕು ಎನಿಸಿತು. ಆಗ ದೊಡ್ಡ ಬೆಳಕಾಗಿ ಕಂಡಿದ್ದೇ ಸಿನಿಮಾ ಕ್ಷೇತ್ರ. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲಾರಂಭಿಸಿದೆ. ಆಗ ಪಟ್ಟಾಗಿ ಕೂತು ಓದಿದ ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಯಶವಂತ ಚಿತ್ತಾಲ, ದೇವನೂರು ಮಹಾದೇವ ಮತ್ತು ಇನ್ನೂ ಹಲವರ ಸಣ್ಣಕತೆಗಳು ಅವುಗಳ ಗಟ್ಟಿತನದಿಂದಾಗಿ ನನ್ನನ್ನು ಕಾಡಿದವು. ನನ್ನೊಳಗಿದ್ದ ಕತೆಗಳು ನನ್ನನ್ನು ಹೆಚ್ಚೆಚ್ಚು ಕಾಡಲು ಆಗಲೇ ಮೊದಲಾಗಿದ್ದು. ಆಗ ಕತೆ ಬರೆಯದೇ ಬಿಡುಗಡೆ ಇಲ್ಲ ಎಂದೆನಿಸಿತು.
ʼಎಡೆʼಯೊಳಗಿನ ಕೆಲ ತುಣುಕುಗಳು
ಎಡೆ
ಹೊಸ ಸ್ಮಶಾನದಲ್ಲಿ ಹೆಣ ಸುಡಲು ಕರೆಂಟಿನ ಮಶಿನ್ನು ಬಂದ ಸುದ್ದಿ ಕೇಳಿ ಮೊದಲ ಬಾರಿ ಅದರ ಕೆಲಸವನ್ನು ನೋಡಲು ಹೋದ ದಿನ, ಅಲ್ಲಿನ "ಕರೆಂಟು ಬಂತು, ಕರೆಂಟು ಹೋಯ್ತು" "ಈ ಸ್ವಿಚ್ಚು ಒತ್ತಿದ್ರೆ ಬೆಂಕಿ ಹತ್ತಿಗೆಂತಾತೆ, ಮತ್ತೆ ಇದುನ್ನೇ ಒತ್ತಿದ್ರೆ ಬೆಂಕಿ ಇರ್ತತೆ" "ಹೆಣ ಸುಟ್ಟು ಬೂದಿಯಾಗಾಕ ಇಷ್ಟು ಟೈಮು ಬೇಕಾಗ್ತತೆ", "ಮಡ್ಕಿಯಾಗ ನಾಕ್ ಹಿಡಿ ಬೂದಿ ಹಿಡೀತತೆ" ಎಂಬ ಲೆಕ್ಕಾಚಾರದ ಮಾತುಗಳು ಕಿವಿಗೆ ಬಿದ್ದಿದ್ದವು. ಸಂಜೆಯ ಹೊತ್ತಿಗೆ ಮಶಿನ್ನಿನ ಒಳ ಹೋಗುತ್ತಿದ್ದ ಹೆಣವೊಂದನ್ನು ದಿಟ್ಟಿಸಿ ಬಸಜ್ಜ, "ಹೋಗಿ ಬಾರಪಾ" ಎಂದಷ್ಟೇ ಹೇಳಿ ತಿರುಗಿದ. ಆ ಗಳಿಗೆ ಬಸಜ್ಜನಿಗೆ ಬದುಕಿರುವಾಗಲೇ ತನಗೆ ಯಾರೋ ಕರೆಂಟು ಹೊಡೆಸಿ ಸುಟ್ಟಂತಾಗಿತ್ತು.
ಈಗ ಲಿಂಗ ಮತ್ತೆ ಮುಂದುವರೆದು, "ವರ್ಷಾ ವರ್ಷಾ ಬಂದು ನೋಡ್ಕೆಂಡು ಹೋಗ್ಬೇಕು ಅನ್ನಾ ಕಾಟ ಇರಂಗಿಲ್ಲಲ್ಲ! ಅದಿಕ್ಕೆ ನಮ್ಮೋರು ಎಲ್ಲಾವನೂ ಸುಡಾಕ ಶುರು ಮಾಡ್ಯಾರ. ಪದ್ದತಿ ಇಲ್ಲುದ ಪರದೇಸಿಗುಳುʼʼ ಎಂದು ಬಸಜ್ಜನ ಮುಖವನ್ನೇ ನೋಡಿದ. ಬಸಜ್ಜ ಮಂಟಪದ ನೆರಳಿಗೆ ಹೋದ. ಲಿಂಗ ಹಿಂಬಾಲಿಸಿ ಬಂದು, "ಈ ರಂಗಣ್ಣನ್ ಮಕ್ಳುನ್ನ ನೋಡು, ಆ ಭೈರೇಗೌಡ್ರು ಮಕ್ಳುನ್ನ ನೋಡು. ಸತ್ತ್ ಮ್ಯಾಲೂ ತಣ್ಣುಗ ಇರಾಕ ಬಿಡಂಗಿಲ್ಲಂದ್ರೆ ಮಕ್ಳು ಯಾಕ್ ಬೇಕು?" ಎಂದು ಸಮಾಧಿ ಟೈಲ್ಸನ್ನ ಬೆರಳುಗಳಿಂದ 'ಟಕ್ಟಕ್' ಕುಟ್ಟಿದ. ನೆರಳಲ್ಲಿ ಬಸಜ್ಜನಿಗೆ ಮನಸು ಹಿಡಿತಕ್ಕೆ ಬಂದು, "ಯಾರು ಮಣ್ಣಂಗೋಗ್ಬೇಕು ಅಂತಾ ಆ ಶಿವಾ ಮೊದ್ಲೇ ಬರ್ದು ಕಳ್ಸರ್ತಾನಲೇ. ಮಣ್ಣನಾ ಆಗ್ಲಿ ಬೂದಿಯಾನ ಆಗ್ಲಿ ಸತ್ತೋರು ಭೇಷ್ ಇರ್ಬೇಕು ಅಷ್ಟೇ" ಎಂದು ಅಲ್ಲಿಂದ ಹೊರಟ. ಲಿಂಗ ಹಿಂಬಾಲಿಸಲಿಲ್ಲ.
ರಾಧಾ ಮೋಹನ
ಹುಡುಗನೊಬ್ಬ ಮೊಬೈಲಿನಲ್ಲಿ ಮಾತನಾಡುತ್ತಾ ನಾಚಿಕೊಳ್ಳುತ್ತಿದ್ದ. ರಾಧಾ ಕಾಯಿನ್ ಬಾಕ್ಸಿಗೆ ಹತ್ತಿರಕ್ಕೆ ವಯ್ಯಾರದಿಂದ ಬಂದು, "ಹ್ಞೂಂ.. ಕೊಡು" ಎಂದು ಅವನ ಮುಂದೆ ಚಪ್ಪಾಳೆ ತಟ್ಟಿದಳು. ಫೋನು ಹಿಡಿದ ಹುಡುಗ "ಇಲ್ಲ" ಎಂದು ಸನ್ನೆ ಮಾಡಿದ. ರಾಧಾ,"ಮ್ಯಾಲಿನ್ ಜೋಬಿನ್ಯಾಗ ಇರ್ತಾತೆ ತಗೀ" ಎಂದು ಜೇಬು ಮುಟ್ಟಿದಳು, ಹುಡುಗ ಫೋನು ಮುಚ್ಚಿ "ಇಲ್ಲ" ಅಂದ. ಇವಳು "ಪರ್ಸಿನ್ಯಾಗ ಇರ್ತಾತೆ ನೋಡು" ಎಂದಳು, ಅವನು ಗಟ್ಟಿಯಾಗಿ "ಇಲ್ಲ" ಎಂದನು. "ಬ್ಯಾಗಿನ್ಯಾಗ ಇಟ್ಟರ್ತೀ ತಗೀ" ಎಂದು ಬ್ಯಾಗು ಮುಟ್ಟಿದಳು ಇವಳು. ಹುಬ್ಬು ಗಂಟಿಕ್ಕಿ "ಇಲ್ಲ" ಎಂದು ತಾಳ್ಮೆಯನ್ನು ಕಳೆದುಕೊಂಡ ಅವನು. ಮರುಕ್ಷಣವೇ ರಾಧಾ ಟಪಕ್ಕನೆ ಹುಡುಗನ ಮರ್ಮಾಂಗಕ್ಕೆ ಬಡಿದು "ಇಲ್ಲಿ?" ಎಂದಳು, ಹುಡುಗ ಇನ್ನೂ ತಟಕ್ಕನೇ "ಇಲ್ಲ" ಎಂದು, ಕಕ್ಕಾಬಿಕ್ಕಿಯಾಗಿಬಿಟ್ಟ. 'ಏನಪ್ಪಾ ಹಂಗಂದ್ಬುಟ್ಟೆ?' ಎಂಬಂತಿದ್ದ ರಾಧಾಳ ಮುಖ ಇವನೆಡೆಗೆ ಹುಬ್ಬುಗಳನ್ನು ಕುಣಸಿ ನಗಲತ್ತಿದ್ದನ್ನು ಕಂಡು ‘ಥೋ' ಎಂದುಕೊಂಡ ಹುಡುಗನಿಗೆ ಭಯಂಕರ ನಾಚಿಕೆಯಾಯಿತು. ಇಷ್ಟಲ್ಲದೇ ಯಾವಾಗಲೋ ಬಂದು ನಿಂತಿದ್ದ ಸುಕನ್ಯಾಳ ಜೊತೆಗೆ ಅಂಗಡಿಯವನೂ ಜೋರು ನಗಲತ್ತಿದ್ದನ್ನು ಕಂಡು ಕೆಕ್ಕರಿಸಿ ಫೋನನ್ನು ಇಟ್ಟ ಹುಡುಗ ಅಲ್ಲಿಂದ ದಡದಡ ಹೊರಟ. ಗೆಳತಿಯರಿಬ್ಬರೂ ರಾತ್ರಿಗೆ ಬೇಕಾದ ದಿನಸಿ ತರಲು ಮಾರ್ಕೆಟ್ಟು ರೋಡು ಹಿಡಿದರು.
ಭಾನುವಾರ ರಾತ್ರಿ ಇವರಿಗೆಲ್ಲಾ ಹಬ್ಬ. ನಾಳೆಯಿಂದ ಮತ್ತೆ ರೋಡುಗಳು ಭರ್ಜರಿಯಾಗಿ ತುಂಬಿಕೊಂಡಿರುತ್ತವೆ ಎಂಬುದು ಪ್ರತೀ ವಾರದ ಆ ಖುಷಿಗೆ ಕಾರಣ. ಅಲ್ಲಿ ಇಲ್ಲಿ ಕೆಲಸಕ್ಕೆ ಸೇರಿದವರು ಊಟ ಮುಗಿಸಿ ಹೋಗಿ ಮಲಗಿಕೊಂಡರೆ ಸಿಗ್ನಲ್ಲು ಮತ್ತು ಅಂಗಡಿ ವಿಸಿಟ್ನವರು ಮಾತ್ರ ಎಚ್ಚರಿದ್ದರು. ತಮಗೆ ತೋಚಿದ್ದನ್ನು ಮಾಡಿ ಎಲ್ಲರ ಮನರಂಜಿಸುವ ಆಟ ನಡೆಯುತ್ತಿತ್ತು. ತನ್ನ ಸರದಿ ಬಂದಾಗ ರಾಧಾ ಒಳಗೆ ಓಡಿ ಹೋದಳು. ಎಲ್ಲರೂ "ಏಯ್ ಏಯ್.." ಎಂದು ಕೂಗಿದರು. ಅಲ್ಲಿಂದಲೇ "ಶ್" ಎಂದಳು ರಾಧ. ಒಳಗಿನ ಹಳದಿ ಬಲ್ಬಿನ ಬೆಳಕು ಹೊರಗಿನ ನೆಲದ ಮೇಲೆ ಅವಳ ನೆರಳನ್ನು ದಟ್ಟವಾಗಿ ಮೂಡಿಸಿತ್ತು.
ಹಲಗೆ ಬಡಿತ
ಊರಮ್ಮನ ಹಬ್ಬ. ಎಲ್ಲರ ಮನಿಯಲ್ಲೂ ಪೂಜೆಯ ಜೋರು ಸಂಭ್ರಮ. ಬೆಳಬೆಳಿಗ್ಗೆ ಶುರುವಾದ ಹಲಗೆ ಬಡಿತ ಕೇಳಿ, “ಯರ್ಲೇ ಅದು?” ಎಂದುಕೊಂಡು ಹೊರ ಬಂದ ಮಂದಿ ಅದರ ಸೊಗಸನ್ನ ಕಂಡು ಕ್ಷಣಗಳಲ್ಲಿ, “ನೋಡ್ರಿ ಅಲ್ಲಿ, ಸುಮ್ನೆ ಹೇಳಲ್ಲ ಜನಾ, ಬಡ್ತಾ ಅಂದ್ರೆ ಸಿದ್ದಪ್ಪನ ಬಡ್ತ ಅಂತ. ಅದ್ರಾಗೂ ಆತೇ ಮಾಡಿದ್ ಹಲಗೀ ಅಂದ್ರೆ ಮುಗೀತಲ್ಲಾ..” ಎಂದು ಹಿಂದೆ ಯಾವಾಗಲೋ ಯಾರದೋ ಹಲಗೆ ಬಡಿತವನ್ನು ಹೊಗಳಿದ್ದ ಮಂದಿಗೆ ಇವತ್ತು ಸಿದ್ದಪ್ಪನ ಹಲಗೆ ಬಡಿತವನ್ನು ತೋರಿಸಿ ಮೀಸಿ ತಿರುವಿದರು. ಕೇರಿಯಿಂದ ಮೈ ಸುತ್ತ ಉಟ್ಗೀ ಉಟ್ಟವರಿಗೆ, ದಾರಿಯುದ್ದಕ್ಕೂ ಸಾಷ್ಟಾಂಗ ಬಿದ್ದು ದೀಡ್ ನಮಸ್ಕಾರ ಹಾಕುವವರ ಹೆಜ್ಜೆಗೆ ನೀರು ಹಾಕುತ್ತಿದ್ದ ಮನೀಮಂದಿಗಿಂತಲೂ ಮುಂದೆ ನಡೆಯಲತ್ತಿದ ಸಿದ್ದಪ್ಪ, ಜೋರು ಜೋರು ಹಲಗೆ ಬಡಿಯುತ್ತಾ ಗುಡೀ ಕಡೆಗೆ ಹೊರಟ. ಜನ ಅವನ ಸುತ್ತ ಕುಣ ಯಲತ್ತಿದರು. ಹಲಗೆ ಬಡಿಯಲು ಜಗ್ಗು ರೊಕ್ಕಾ ಇಸಿದುಕೊಂಡಿದ್ದ ಸುತ್ತಲಿನ ಕೇರಿಯ, ಸುತ್ತಲಿನ ಊರುಗಳ ಬೇರೆ ಹಲಗೆಯವರು ಎರಡು ಕಿಲೋಮೀಟರ್ ದೂರದ ಊರ ಹೊರಗಿನ ಗುಡಿ ಮುಟ್ಟುವುದರೊಳಗೇ ಮುದುಕ ಸಿದ್ದಪ್ಪನ ಮುಂದೆ ಸುಸ್ತಾಗಿ, ಸಪ್ಪಗಾದರು. ಯಾವತ್ತೂ ಕುಣ ಯದವರೂ ಕೂಡ ಸಿದ್ದಪ್ಪನ ಹಲಗೆ ಬಡಿತಕ್ಕೆ ಮೈ ಮೇಲೆ ದೇವರು ಬಂದವರಂತೆ ಕುಣದು ಕುಣದೂ ದಣದರು. ಗುಡಿಯ ಅಂಗಳದಿಂದ ಸಂಜೆಗೆ ವಾಪಸ್ಸು ಕೇರಿ ಮುಟ್ಟಿದ ಮನಿಗಳ ತುಂಬಾ ಸಿದ್ದಪ್ಪನದೇ ಮಾತು.
ರಾತ್ರಿ ಕೇರಿ ಹುಡುಗರು ಸಿದ್ದಜ್ಜನನ್ನು ಮುಕ್ಕರಿಕೊಂಡು ಅವನಿಗೆ ಗೊತ್ತಿದ್ದ ಪದಗಳನ್ನೆಲ್ಲಾ ಹಾಡಿಸಿ ಹಲಗೆ ಬಡಿಸಿ ಕುಣ ದು ಬೆಳಕು ಹರಿಸೋಣ ಎಂದುಕೊಂಡು ಬಂದು ಅವನ ಮುಂದೆ ನಿಂತರು. ಸಿದ್ದಪ್ಪನಿಗೂ ಇದೇ ಬೇಕಾಗಿತ್ತು. ಶುರು ಮಾಡಿಕೊಂಡ, ಬಡಿತ ಜೋರಾಯಿತು. ಹುಡುಗರು ಕ್ಯಾಕಿ ಹೊಡಿಯಲತ್ತಿ ಭರ್ಜರಿ ಕುಣಯಲತ್ತಿದರು.
ಕೃತಿ : ಎಡೆ (ಕಥಾಸಂಕಲನ)
ಲೇ : ಪ್ರವೀಣ ಕುಮಾರ ಜಿ.
ಪುಟ : 121
ಬೆಲೆ : ರೂ. 150
ಮುಖಪುಟ ವಿನ್ಯಾಸ : ಪ್ರವೀಣ ಮೇಗಲಮನಿ
ಪ್ರಕಾಶನ : ಒಲವು ಬರಹ
ಖರೀದಿಗೆ ಸಂಪರ್ಕ : 9845845747
ಪ್ರವೀಣ ಕುಮಾರ ಜಿ.
ಪ್ರವೀಣ ಕುಮಾರ ಜಿ. ಮೂಲತಃ ಬಳ್ಳಾರಿಯವರು. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕನ್ನಡ ಚಲನಚಿತ್ರ ಕ್ಷೇತ್ರದ ನಿರ್ದೇಶನ ಮತ್ತು ಬರವಣಿಗೆ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೂರ್ಮಾವತಾರ, ಸಕ್ಕರೆ, ಎಂದೆಂದೂ ನಿನಗಾಗಿ, ಕಹಿ, ದನ ಕಾಯೋನು ಮತ್ತು ಮುಗುಳುನಗೆ ಚಿತ್ರಗಳ ನಿರ್ದೇಶನ ತಂಡದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಮುದ್ರಣಕ್ಕೆ/ಬಿಡುಗಡೆಗೆ ಸಿದ್ಧವಾಗುತ್ತಿರುವ ನಿಮ್ಮ ಕೃತಿಗಳ ಆಯ್ದ ಭಾಗಗಳ ಪ್ರಕಟಣೆಗಾಗಿ ಸಂಪರ್ಕಿಸಿ team@konaru.org
ಇದನ್ನೂ ಒಮ್ಮೆ ಕಣ್ಣಾಡಿಸಿ…
ತುಂಬಾ ಚೆನ್ನಾಗಿದೆ