ಕಪಿಲ ಪಿ. ಹುಮನಾಬಾದೆ ಅವರ ಬಣಮಿ ಕಥಾಸಂಕಲನ ಕಾವ್ಯಮನೆ ಪ್ರಕಾಶನದಿಂದ ಪ್ರಕಟವಾಗುತ್ತಿದೆ. ಇದರ ಮುಖಪುಟ ವಿನ್ಯಾಸವನ್ನು ಸಿ.ಪಿ. ಮದನ್ ಮಾಡಿದ್ದಾರೆ. ಈ ಸಂಕಲನದೊಳಗಿನ ಗೆದ್ದಲು ಕಥೆ ನಿಮ್ಮ ಓದಿಗೆ.
ಗೆದ್ದಲು
ನಡುರಾತ್ರಿ ಅಳುವ ಸದ್ದೊಂದು ದೂರದ ಬೀದಿಯೊಂದರಿಂದ ನಡೆದು ಬಂದು ಅವನ ಕಿವಿಯಲ್ಲಿ “ಡುಬಕ್” ಅಂತ ಏಕ್ದಂ ಧುಮುಕಿದಂತೆ ಆಯ್ತು. ಚಳಿಗಾಲದ ಬೀದಿಗಳು ತಮ್ಮ ಮೈತುಂಬಾ ಒಣ ಎಲೆಗಳು ಉದುರಿಸಿಕೊಂಡು ನಡುಗುತ್ತಾ ಬಿದ್ದಿದ್ದವು. ಸಾಲಾಗಿ ಹೊರಟ ಕೆಂಪಿರುವೆಗಳ ಸಾಲೊಂದು, ತಮ್ಮ ಕಾಲುಗಳ ಭಾರಕ್ಕೆ ಎಲ್ಲಿ ರಸ್ತೆ ಕುಸಿದು ಬೀಳಬಹುದು ಎಂಬಂತೆ ನಾಜೂಕಾಗಿ ನಡೆಯುತ್ತಿದ್ದವು. ಬೃಹತ್ ದೇಹದ, ಬಹು ಎತ್ತರದ ನೀಲಗಿರಿ ಮರವೊಂದರಲ್ಲಿ ದಟ್ಟ ಎಲೆಗಳು ಜೋತು ಬಿದ್ದಿದ್ದವು. ಕೆಲವು ತಿಂಗಳುಗಳಿಂದ ಮುಖ ತೋರಿಸಲು ಸಹ ನಾಚುತ್ತಿದ್ದ ಜೇನು ಗೂಡೊಂದು ಎಲ್ಲೋ ಗಾಯಗೊಂಡಂತೆ ನೆಲದ ಮೇಲೆ ರಕ್ತದ ತುಪ್ಪ ಸುರಿಸುತ್ತಿತ್ತು. ಜೇನು ನೋಣಗಳಿಲ್ಲದ ಖಾಲಿ ಜೇನು ಗೂಡು, ಅರೆ! ಈಗಷ್ಟೇ ಕಿವಿ ಸಮೀಪವೇ ಬಂದು ಗುಂಯ್ ಗುಡುತ್ತಿದ್ದ ಹುಳುಗಳು ಎಲ್ಲಿ ಆವಿ ಆಗಿ ಹೋದವು?
ಒಮ್ಮಿಂದೊಮ್ಮೆಲೆ ಖಾಲಿ ಅಂಗಳದಲ್ಲಿ ಯಾವ ಅವಸರವು ಇಲ್ಲದೆ ನಿಂತಿರುವ “ಮೂಂಗುಸಿ” ಕಣ್ಣು ಮುಂದೆ ಬಂದು “ಠಣ್” ಎಂದು ಇವನ ಕಣ್ಣಲ್ಲಿ ಬಿದ್ದ ಹಾಗಾಯಿತು. ಆದರೂ ಅವನಿಗೆ ಎಚ್ಚರವಾಗಲಿಲ್ಲ! ಫ್ರಿಜ್ಜಿನೊಳಗಿಟ್ಟ ಗಟ್ಟಿ ಮೊಸರಂತೆ ಕತ್ತಲು ಅವನಿಗೆ ಅಲುಗಾಡದಂತೆ ಮೈತುಂಬಾ ಸುತ್ತುವರೆದಿತ್ತು, ಮೈತುಂಬಾ ಹುಳ ಬಿದ್ದ ಕಜ್ಜಿ ನಾಯಿಯೊಂದು ಅವನ ಮನೆಯ ನಡು ಅಂಗಳದಲ್ಲಿ ಹಾಯಾಗಿ ಮಲಗಿರುವಂತೆ ಕನಸಲ್ಲಿ ನೋಡಿದ. ಹೀಗೆ ಹಲವು ಸಂಗತಿಗಳು ಒಂದರೊಳಗೊಂದು ಬೆರೆತು ಅವನ ಕಣ್ಣ ಮುಂದೆ ಕಲೆತು, ಒಡೆದು, ಹೋಳಾಗಿ ಕುಣಿಯುತ್ತಿದ್ದವು ಮತ್ತು ತಟ್ಟನೆ ಸತ್ತಂತೆ ಬೀಳುತ್ತಿದ್ದವು. ಮೈಮೇಲಿನ ಕೌದಿ ಕಿತ್ತೆಸೆದು ಏಳಲು ನೋಡಿದ, ನೆಲದಾಳದ ಅದೃಶ್ಯ ಕೈಗಳು ಅವನ ಕೂದಲು ಜೋರಾಗಿ ಎಳೆದು, ಕೈಯಲ್ಲಿ ಹಿಡಿದುಕೊಂಡಿದ್ದವು. ಯಾರದೋ ಓಟಕ್ಕೆ ಸತ್ತ ಕುದುರೆಯಾಗಿದ್ದ. ಕುಮ್ಯಾನ ಹಗಲು ರಾತ್ರಿಯ ಲೆಕ್ಕಕ್ಕಿಲ್ಲದ ಒದ್ದಾಟಕ್ಕೆ ಹಾಸಿಗೆಗಳೇ ಹೈರಾಣ ಆಗಿ ಹೋಗಿದ್ದವು. ಗುಬ್ಬಿ ಒಂದು ಚಿಂವ್ ಚಿಂವ್ ಸದ್ದು ಮಾಡುತ್ತಾ ಗದ್ದಲ ಎಬ್ಬಿಸಿತು. ಮನೆಮಂದಿಯೆಲ್ಲ ಹಾಸಿಗೆಯಿಂದೆದ್ದು ಹಸಿ ನಸುಕಿನಲ್ಲಿ ಅದರ ದಿಕ್ಕಿಲ್ಲದ ಅಳುವಿಗೆ ಕಾರಣವೆನ್ನೆಂದು ಹುಡುಕಾಟಕ್ಕೆ ಇಳಿದರು. ಕುಮ್ಯಾ ಒಮ್ಮಿಂದೊಮ್ಮೆಲೆ ಮೈಮೇಲಿನ ಕೌದಿ ತೆಗೆದು ಧಡಕ್ಕನೆ ಎದ್ದ. ತನ್ನ ಸುತ್ತಲೂ ವಿಚಲಿತನಾಗಿ ನೋಡಿ, ಮತ್ತೆ ಕಣ್ಣು ಮುಚ್ಚಿ ಕೂತ. ಅವನ ನೆತ್ತಿ ಮೇಲಿನ “ತಗಡದ” ಸಂದಿಯಿಂದ ಗುಬ್ಬಿಯೊಂದು ಒಣಹುಲ್ಲಿನ ಕಡ್ಡಿಗಳು ಇವನ ಮೇಲೆ ಎಸೆಯುತ್ತಿರುವುದು ಸಂಬಂಧವೇ ಇಲ್ಲವೆಂಬಂತೆ ತನ್ನೊಳಗೆ ತಾನೇ ಕಳೆದು ಹೋಗಿದ್ದ. ಹೀಗೆ ಎಷ್ಟು ಹೊತ್ತು ಕೂತಿದ್ದನೋ ಏನೋ, ಅವನಿಗೆ ಎಚ್ಚರವಾದಾಗ, ಸೂರ್ಯ ಪಡಸಾಲೆಯಲ್ಲಿ ಬಿದ್ದು ಅಲ್ಲಿಂದ ಪುಟಿದು ಒಳಕೋಣೆಗಳಿಗೆ ನುಗ್ಗಲು ಶುರುಮಾಡಿದ್ದ.
ಕುಮ್ಯಾ ತನ್ನ ಮುಖದ ಮೇಲೆ ಬಿದ್ದಿರುವ ಕಪ್ಪು ಕುಳಿಗಳು ಮುಟ್ಟಿಕೊಂಡ ನಂತರ ಅದು ತನ್ನದೇ ಮುಖವೆಂದು ಖಾತ್ರಿಗೊಂಡ. ಅವನಿಗೆ ನಿದ್ದೆ ಇಲ್ಲದ ದಿನಗಳು ನೋಡಿ ಅಳಬೇಕನಿಸಿತು. ರಾತ್ರಿಯಾದರೆ ಸಾಕು ಅವನಿಗೆ ಸಂಬಂಧವೇ ಇಲ್ಲದ ಚಿತ್ರ ವಿಚಿತ್ರ ಕನಸುಗಳು, ಘಟನೆಗಳು ಬಂದು ಅವನ ನಿದ್ದೆ ಕಿತ್ತು ತಿನ್ನುತ್ತವೆ. ಕೆಲವು ಸಂಗತಿಗಳು ಅವನಿಗೆ ಹಾಸಿಗೆಯಿಂದ ಸಹ ಏಳಲು ಬಿಡುವುದಿಲ್ಲ. ಕೆಲವು ಕಥೆಯ ಪಾತ್ರಗಳು ಆರಾಮಾಗಿ ಅವನ ಹಣೆ ಮೇಲೆ ಕೂತು, ಒಂದೊಂದು ಘಟನೆಗಳು ಅವನೊಳಗೆ ತುರುಕಿ, ನಿದ್ದೆ ಕುಕ್ಕಿ ಕುಕ್ಕಿ ತಿಂದು ಹೋಗುತ್ತವೆ.
ಇಂದೋ ನಾಳೆಯೋ ಮದುವೆಯಾಗಬೇಕಿರುವ ಮಗನೊಬ್ಬ ಇಡೀ ರಾತ್ರಿ ನಿದ್ದೆಗೆಡುವುದು ನೋಡಿ ಅವನ ತಾಯಿಯ ಕರುಳು ಚುರ್ ಅನ್ನುತ್ತದೆ. ಮನೆ ತುಂಬಾ ಕಾಲಿಟ್ಟಲ್ಲಿ ಕೈ ಚಾಚಿದಲ್ಲಿ ಪುಸ್ತಕಗಳೇ ತುಂಬಿರುವಾಗ, ಮಗನಿಗೆ ಇನ್ನೂ ಯಾವುದೇ ನೌಕರಿ ಸಿಗದಿರುವುದು ನೋಡಿದರೆ ಅವಳಿಗೆ ಸೋಜಿಗವಾಗುತ್ತದೆ. ಸಂಪೂರ್ಣವಾಗಿ ಮೆತ್ತಗಾಗಿ ಹೋಗಿರುವ ಅವನು, ಹಿರಿಯರಿಂದ ಬಳುವಳಿಯಾಗಿ ಬಂದಿರುವ ಅಳಿದುಳಿದ ಹೊಲದಲ್ಲಿ ಕಾಳು ಬಿತ್ತಿ, ಉಳುಮೆ ಮಾಡಿ ಏನಾದರೂ ಬೆಳೆಯುವ ಶಕ್ತಿ ಸಂಪೂರ್ಣ ಕಳೆದುಕೊಂಡಿದ್ದಾನೆ. ಇದೆಲ್ಲದರ ಮೇಲೆ ಅವನ ಅಸ್ತವ್ಯಸ್ತ ಬದುಕಿಗೆ ಬರೆ ಇಟ್ಟಂತೆ ಮುಖದ ಮೇಲೆ ಯಾಕೋ ಅಲ್ಲಲ್ಲಿ ಕಪ್ಪು ಕುಳಿಗಳು ಬೀಳುತ್ತಿವೆ. ಒಂದೆರಡು ಚೂರು ಆಳವಾಗಿಯೇ ಇವೆ.
ದೊಡ್ಡ ಷಹರಗಳ ಡಾಕ್ಟರಗಳಿಗೆಲ್ಲ ತೋರಿಸಿದರು, ಎಷ್ಟೇ ದುಡ್ಡು ಸುರಿದರೂ ಮೊದ ಮೊದಲು ಕಮ್ಮಿ ಆದಂತೆ ಆಗಿ ಮತ್ತೆ ಹೆಚ್ಚಾಗುತ್ತಿವೆ. ಈಗೀಗ ಅವುಗಳಿಗೆ ದುಡ್ಡು ಸುರಿಯುವುದೇ ಬಿಟ್ಟಿದ್ದಾನೆ.
ಕುಮ್ಯಾನ ಅಪ್ಪ ಸೂರಪ್ಪ ಮಾತ್ರ ಆಲದ ಮರದಂತೆ ತನ್ನಿಡೀ ಮನೆಗೆ ನೆರಳಾಗಿ, ಎಲ್ಲ ದಿಕ್ಕಿನ ಕೆಟ್ಟ ಗಾಳಿಗಳಿಗೆ ತಡೆ ಗೋಡೆಯಾಗಿದ್ದಾನೆ. ಅರವತ್ತು ವರ್ಷ ದಾಟಿದ್ದರೂ ಚಿಗುರು ಮೀಸೆ ಹುಡುಗರ ನಾಚಿಕೆ, ಉತ್ಸಾಹ ಇಟ್ಟುಕೊಂಡೇ ಓಡಾಡುವ ಸೂರಪ್ಪನಿಗೆ ಜನ ಊರಲ್ಲಿ “ಗಟ್ಟಿ ಆಳು” ಎಂದು ಕರೆಯುತ್ತಾರೆ.
ಇದೆ ಪುಟ್ಟ ಮನೆಯಲ್ಲಿ ಕುಮ್ಯಾನ ಅಜ್ಜಿ ಒಬ್ಬಳು ವಾಸಿಸುತ್ತಾಳೆ. ಯಾರಿಗೂ ಗೊತ್ತೇ ಇಲ್ಲದಂತೆ, ಆ ಮನೆಯ ಮಣ್ಣಿನ ಗೋಡೆಗಳಲ್ಲಿಯೇ ಬೆರೆತು ಹೋದವಳಂತೆ. ಹಣ್ಣು ಹಣ್ಣಾದ ಮುದುಕಿ. ಬಾಯಲ್ಲಿ ಇನ್ನೂ ಕೆಲವು ಹಲ್ಲುಗಳು ಅವಳಿಗೆ ಮಾತಾಡಲು ಸಹಾಯ ಮಾಡಲೆಂಬಂತೆ ಇವೆ. ಅವಳ ಕಿವಿಗಳೆರೆಡರ ಕೆಳಗಿನ ತೂತುಗಳು, ಇಷ್ಟು ವರ್ಷಗಳ ಕಾಲ ಜುಮುಕಿ ಹಾಕಿಕೊಂಡ ಸಾಕ್ಷಿ ಎಂಬಂತೆ ಹರಿದು ಹೋಗಿದ್ದವು. ಅವಳು ಕಾಲೂರಿ ನೆಲದ ಮೇಲೆ ನಡೆಯಲು ಶುರುಮಾಡಿದ ಹೊತ್ತಲ್ಲಿ ಚುಚ್ಚಿದ ಕಿವಿಗಳು, ಇಲ್ಲಿವರೆಗೆ ಎಷ್ಟೊಂದು ಜುಮುಕಿ ತೊಟ್ಟಿರಬೇಕು, ಈಗ ಯಾವುದೇ ಆಭರಣ ಹಾಕಿಕೊಳ್ಳಲು ಬರದಂತೆ ಕಿವಿ ಹರಿದು ಹೋಗಿರುವುದರಲ್ಲಿಯೇ ಅವಳು ಬದುಕಿನ ದರ್ಶನ ಪಡೆದಿದ್ದಳು.
ಮನೆಯ ಒಳ ಕೋಣೆಯೊಂದರಲ್ಲಿ ಕೂತಿರುತ್ತಿದ್ದ ಕುಮ್ಯಾನ ಅಜ್ಜಿ ಚಂದ್ರಮ್ಮ, ಇಂದೋ ನಾಳೆಯೋ ಕುಣಿ ಸೇರಲು ಸರ್ವ ಸಿದ್ಧತೆ ಮಾಡಿಕೊಂಡಂತೆ ಕೂತಿರುತ್ತಿದ್ದಳು. ಸೂರಪ್ಪ ಮಾತ್ರ ಹೊಲದಿಂದ ಬಂದ ತಕ್ಷಣ ವಯಸ್ಸಾದ ತನ್ನವ್ವನಿಗೆ ಪ್ರತಿದಿನ ಮಾತಾಡಿಸುತ್ತ ಕೂರುತ್ತಿದ್ದ. ಚಳಿಗಾಲದ ದಿನಗಳಲ್ಲಿ ತೊಗರಿಕಾಯಿ, ಅವರೇಕಾಯಿ ಕುದಿಸಿ ಅವಳಿಗೆ ಸುಲಿದು ಕೊಡುತ್ತ ಮಾತಿಗೆ ಕೂರುತ್ತಿದ್ದ. ಅವಳ ಕೋಣೆಯೊಳಗೆ ಸದಾ ಕತ್ತಲು ತುಂಬಿಕೊಂಡಿರುತ್ತಿತ್ತು. ಅಲ್ಲಿದ್ದ ಜ಼ೀರೋ ಬಲ್ಬವೊಂದು ಬೆಳಕು ಬಿಡಲೋ ಬೇಡವೋ ಎಂಬಂತೆ ವರ್ತಿಸುತ್ತಿತ್ತು. ಅವಳೆದುರು ಚಿಮಣಿಯೊಂದು ಹಚ್ಚಿಟ್ಟು ಸೂರಪ್ಪ ಮಾತಿಗೆ ಕೂರುತ್ತಿದ್ದ.
ಕೆಲವು ದಿನಗಳ ಕೆಳಗೆ ಸಾಯಂಕಾಲ ಹೊಲದಿಂದ ಬಂದವನೇ, ಮುದುಕಿಯೊಂದಿಗೆ ಮಾತಿಗಿಳಿದ,“ನೋಡೆವ್ವ, ಈ ಹೊಲದಾಗ ಬೆವರು ಸುರದ, ನಡು ಬಗ್ಗಿಸಿ ದುಡಿಯೋ ಕಾಲ ಬಹಳ ದಿನ ಇನ ಮುಂದ ಇರಲ್ಲ ಅನಸ್ತದ” ಅಂದ.
“ನೋಡು ಸೂರಪ್ಪ, ಮನುಷ್ಯಗ ಮಣ್ಣಿನ ಮ್ಯಾಲ ನಂಬಿಕಿ ಇರೋದು ಬಹಳ ಮುಖ್ಯ ಅದ. ಹೊಟ್ಟಿಗಿ ಜ್ವಾಳ ಹಾಕೋ ಈ ಮಣ್ಣಿನಾಗೆ ನಾಳಿಗಿ ನಮ್ಮ ದೇಹಕ್ಕ ಮುಕ್ತಿ ಸಿಗ್ತದ” ಅನ್ನುತಾ ಸುಮ್ಮನಾದಳು.
ಒಂದಕ್ಕೊಂದು ಸಂಬಂಧವೇ ಇರದ ಅವಳ ಮಾತುಗಳು ಕೇಳಿ, ಅದರ ಒಳಾರ್ಥ ಹುಡುಕಲು ಸೂರಪ್ಪ ಹಿಡಿ ಬೆಳಕಿನ ಮುಂದೆ ಕರಗಿ ಹೋದವನಂತೆ ಸ್ತಬ್ಧನಾದ. ಅವನ ಉಸಿರು ಸಹ ನಿಧಾನಗೊಂಡಿತು. ಕಪ್ಪು ಹಣೆಯ ಮೇಲೆ ಬೆವರು ಚಿಮ್ಮಿತು. ಸಣ್ಣಗೆ ಮಾತಿಗಿಳಿದರು.
ಸಂಜೆ ಶುರುವಾಗುತ್ತಿದ್ದಂತೆ ತೆವಳುತ್ತಾ ಸಾಗುವ ಮಾತುಗಳು, ಅವರಿಬ್ಬರ ಮಾತುಗಳು ರಾತ್ರಿ ಏರುತ್ತಿದ್ದಂತೆ ಸಣ್ಣಗೆ ಏರುತ್ತಿದ್ದವು. ಆ ಮಾತುಗಳೆಲ್ಲ ಸೂರಪ್ಪನ ಮಗ ಕುಮ್ಯಾನತ್ತಲೇ ತಿರುಗುತ್ತಿದ್ದವು. ಸೂರಪ್ಪ ಮಾತ್ರ ತನ್ನ ಮಗನಿಗೆ ಯಾರೋ ಭಾನಾಮತಿ ಮಾಡಿಸಿದ್ದಾರೆಂದೇ ಬಲವಾಗಿ ನಂಬಿದ್ದ. ಊರಲ್ಲಿ ಕೆಲವರಂತೂ ಅವನಿಗೆ ಇಲ್ಲ ಸಲ್ಲದ ಯೋಚನೆಗಳು ತಲೆಯಲ್ಲಿ ತುರುಕಿದರು. ತಮಗೆ ಆಗದವರ ವಿರುದ್ಧ ಸೂರಪ್ಪನಿಗೆ ಎತ್ತಿ ಕಟ್ಟಿ ಅವರೇ ಮಾಟ ಮಾಡಿಸಿರುವುದೆಂದು ಕಿವಿ ತುಂಬಿದರು. ಅವನ ಮೈಯಲ್ಲಿ ದೆವ್ವ ಹೊಕ್ಕಿರುವ ಕುರಿತು ಸಹ ಊರಲ್ಲಿ ಕಥೆಗಳು ಹುಟ್ಟಿಕೊಂಡಿದ್ದವು. ಮನೆಯಾಚೆ ಯಾರ ಕಣ್ಣಿಗೂ ಬೀಳದ ಕುಮ್ಯಾ ಜನರ ಮಾತುಗಳಿಗೆ ಇನ್ನಷ್ಟು ಭರವಸೆ ತುಂಬುತ್ತಿದ್ದ.
ಕುಮ್ಯಾನ ಅವ್ವ ಸಂಗವ್ವಳಂತೂ ಊರ ಹೊರಗಿನ ದುರ್ಗವ್ವನ ಮುಂದೆ ನಿಂತು ಮುಂದಿನ ದೇವರ ಕಾರ್ಯಕ್ಕೆ ಒಂದು ಕುರಿ ಮಾಡಿಸುವುದಾಗಿ ಬೇಡಿಕೊಂಡಿದ್ದಳು.
ಹದಿನೈದು ವರ್ಷಗಳ ಕಾಲ ನಗರದಲ್ಲಿಯೇ ಇದ್ದು, ಓದಿ ಬಂದಿದ್ದ ಕುಮ್ಯಾ. ಸಣ್ಣ ವಯಸ್ಸಿನಲ್ಲಿಯೇ ಎಪ್ಪತ್ತರ ಮುದುಕನಂತೆ ಕಾಣುತ್ತಿದ್ದ. ನಿನ್ನೆ ಮೊನ್ನೆ ತನ್ನ ಪುಟ್ಟ ನುಣುಪಾದ ಅಂಗಾಲಿನಿಂದ ಅಂಗಳದ ತುಂಬಾ ಆಡಿದ ಕೂಸೊಂದು ಬೆಳೆದು, ಯಾವುದೋ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿತ್ತು. ಅವನ ತುಸು ಬಾಗಿದ ಬೆನ್ನು, ಹಣೆ ಕೆಳಗಿನ ಅಳ ಸುರಂಗದೊಳಗೆ ಎಲ್ಲೋ ಕಳೆದು ಹೋಗಿದಂತಿರುವ ಕಣ್ಣುಗಳು, ತುಸು ಹೊತ್ತು ಬಿಸಿಲಲ್ಲಿ ನಿಂತರೂ ಸಾಕು ಮೂಗಿನಿಂದ ಸಳ್ ಅಂತ ಜಾರಿ ಬೀಳುವ ಗಂಟು ಗಂಟಾದ ರಕ್ತ, ಸರಿಯಾಗಿ ನಿದ್ದೆ ಮಾಡಲಾರದೆ ತಿಂಗಳುಗಳೇ ಕಳೆದಿರಬೇಕು. ಜೀವಂತ ಶವ ಎಂಬ ಮಾತಿಗೆ ಅರ್ಥ ತುಂಬುವವನಂತೆ ಕಾಣುತ್ತಿದ್ದ. ಅವನ ಬದುಕಿಗೆ, ಬದಲಾವಣೆಯ ಮಹಾ ಬಿರುಗಾಳಿಯ ಅವಶ್ಯಕತೆ ಇತ್ತು. ಸಾಕಷ್ಟು ಓದಿಕೊಂಡಿದ್ದ ಕುಮ್ಯಾನಿಗೆ ಸರಿಯಾದ ಉದ್ಯೋಗವೊಂದು ಸಿಗದಿರುವುದೇ ಅವನ ಹಾಳಾಗುವಿಕೆಗೆ ಕಾರಣವೆಂದು ಅವನ ಕೆಲವು ಗೆಳೆಯರು ಹೇಳುತ್ತಿದ್ದರು.
ಕುಮ್ಯಾನಿಗೆ ಖಾಸಗಿ ಉದ್ಯೋಗಗಳು ಕರೆಯುತ್ತಿದ್ದರೂ ಸಹ ಯಾಕೋ ಅವನು ಹೊರಳಿ ನೋಡುತ್ತಿರಲಿಲ್ಲ. ಇಂಜಿನಿಯರ್ ಮುಗಿಸಿಕೊಂಡು ಬಂದಿರುವ ಹುಡುಗನೊಬ್ಬ ಊರಲ್ಲಿ ಕೂತಿರುವುದು ನೋಡಿ ಆಡಿಕೊಳ್ಳುವ ಜನರ ಮಾತುಗಳಿಗೆ ಲಗಾಮು ಇಲ್ಲದಂತೆ ಆಗಿತ್ತು.
ಒಂದು ವರ್ಷದ ಕೆಳಗೆ ಬೆಂಗಳೂರಿಗೆ ದುಡಿಯಲು ಹೋಗಿದ್ದ ಕುಮ್ಯಾ ದಿಢೀರ್ ಅಂತ ಹೋಗಿದ್ದ ಒಂದೇ ತಿಂಗಳೊಳಗೆ ಮತ್ತೆ ಊರಲ್ಲಿ ಕಾಣಿಸಿಕೊಂಡ. ಕೆಲವರು ಅವನಿಗೆ ನೌಕರಿಯಿಂದ ತೆಗೆದು ಹಾಕಿದ್ದಾರೆಂದು ಮಾತಾಡುತ್ತಿದ್ದರೆ. ಇನ್ನೂ ಕೆಲವರು ಅವನ ಸುತ್ತ ನೂರೆಂಟು ಕಥೆಗಳು ಕಟ್ಟಿ ಹರಿಬಿಟ್ಟರು.
ಬೆಳೆದು ನಿಂತಿರುವ ಕುಮ್ಯಾ ತನ್ನ ತಂದೆ ಸೂರಪ್ಪನಿಗಾಗಲಿ, ತಾಯಿ ಸಂಗವ್ವನಿಗಾಗಲಿ ಕಣ್ಣಲ್ಲಿ ಕಣ್ಣಿಟ್ಟು ಹೆಚ್ಚು ಹೊತ್ತು ನಿಂತು ಮಾತಾಡಲು ಅವಕಾಶವೇ ಕೊಡುತ್ತಿರಲಿಲ್ಲ. ಅವನ ಅಜ್ಜಿ ಚಂದ್ರಮ್ಮನ ಸುತ್ತವೇ ತನ್ನಿಡೀ ಬಾಲ್ಯ ಕಳೆದಿದ್ದರೂ ಸಹ ಅವಳಿಗೆ ಸರಿಯಾಗಿ ಮಾತಾಡಿಸದೆ ಎಷ್ಟೋ ದಿನಗಳೇ ಆಗಿವೆ.
ನಾಲ್ಕೈದು ಕೋಣೆಗಳಿರುವ ಹಳೇಕಾಲದ ಆ ಹಳ್ಳಿ ಮನೆಯಲ್ಲಿ, ಪಡಸಾಲಿಯ ಎಡ ದಿಕ್ಕಿಗೊಂದು ಸಣ್ಣ ಕೋಣೆಯಿದೆ. ದಿನದ ಇಪ್ಪತ್ನಾಲ್ಕು ತಾಸು ಅಲ್ಲಿಯೇ ಅದು ಇದು ಮಾಡುತ್ತಾ ದಿನ ಕಳೆಯುವ ಕುಮ್ಯಾ. ಊರಿನ ಜನರಿಂದ ಸಂಪರ್ಕವೇ ಕಳೆದುಕೊಂಡು ಅಜ್ಞಾತನಾಗುತ್ತ ಹೊರಟಿದ್ದ. ಆಗಾಗ ಸಂಗವ್ವ, “ಊಟ ಮಾಡೋ, ನಿದ್ದಿಗೆಡಬ್ಯಾಡೋ, ಹೆಚ್ಚಿಗಿ ತಲಿ ಖರಾಬ್ ಮಾಡ್ಕೋಬ್ಯಾಡ,” ಎಂಬಂತಹ ಕೆಲವು ಮಾತುಗಳು ಬಿಟ್ಟರೆ ಹೆಚ್ಚೂ ಹೇಳುತ್ತಿರಲಿಲ್ಲ. ಸೂರಪ್ಪ ಕುಮ್ಯಾನಿಗೆ ನಿರಂತರವಾಗಿ ಧೈರ್ಯ ಕೊಡುವ ಪ್ರಯತ್ನ ಮಾಡುತ್ತಿದ್ದ. “ಮಗ ಯಾನ ಬೀ ಚಿಂತಿ ಮಾಡಬ್ಯಾಡ, ನಾ ಇದ್ದೀನಿ, ಎಲ್ಲಾ ನಾ ನೋಡಕೋತೀನಿ, ತಲಿ ಮ್ಯಾಲಿನ ವಜ್ಜಿ ಇಳಸ್ಕೋ” ಎನ್ನುತ್ತಿದ್ದ.
ಯಾರೂ ಸಹ ಕುಮ್ಯಾನ ಮೂಲ ಸಮಸ್ಯೆ ಏನೆಂಬುವುದಾಗಲಿ, ಅವನೊಳಗೆ ಯಾವ ಗೆದ್ದಲುಗಳು ಏನು ಪುಡಿ ಮಾಡುತ್ತಿವೆ ಎಂಬುವುದಾಗಲಿ ಬಿಡಿಸಿ ನೋಡುವ ಪ್ರಯತ್ನ ಮಾಡಿರಲಿಲ್ಲ. ಒಂಟಿಯಾಗಿ ಮಲಗುತ್ತಿದ್ದ ಕುಮ್ಯಾ ಒಂದಿಷ್ಟು ದಿನಗಳಿಂದ ಸಂಗವ್ವನ ಮಡಿಲಲ್ಲಿ ಮಲಗುವ ಪ್ರಯತ್ನ ಮಾಡುತ್ತಿದ್ದಾನೆ. ಸಂಗವ್ವ ಅವನ ತಲೆಯಲ್ಲಿ ಕೈಯಾಡಿಸುತ್ತಾ, ತನ್ನ ಬೆಚ್ಚನೆಯ ಬರಚು ಕೈಗಳಿಂದ ಹಣೆ ತಿಕ್ಕಿ, ತಲೆ ಒತ್ತುತ್ತಾಳೆ. ಇದರಿಂದ ನಿರಾಳ ಆದಂತೆ ಅನಿಸಿ ತುಸು ಹೊತ್ತು ಮಲಗುವ ಕುಮ್ಯಾ. ಕೆಲವೇ ಕ್ಷಣಗಳಲ್ಲಿ ನಿದ್ದೆಯಿಂದ ಕಣ್ಣು ತೆಗೆದು ಕೆಟ್ಟ ಕನಸುಗಳ ಚಕ್ರವ್ಯೂಹದಲ್ಲಿ ಸಿಲುಕಿ ಸಾಯುತ್ತಾನೆ. ಕುಮ್ಯಾ ಇಡೀ ರಾತ್ರಿ ಎಚ್ಚರದ ಕಣ್ಣುಗಳಿಂದ ದಿಟ್ಟಿಸುತ್ತಾ ಕೂರುತ್ತಾನೆ. ಅವನ ಕಣ್ಣುಗಳು ಕತ್ತಲಿಗೆ ಎಷ್ಟು ಹೊಂದಿಕೊಂಡಿವೆ ಎಂದರೆ ನಡುರಾತ್ರಿ ಅಂಗಳದಲ್ಲಿ ದಾಸವಾಳ ಹೂವು ಮಗ್ಗಿಯಿಂದ ಬಿಡಿಸಿಕೊಂಡು ಹೂವಾಗುವುದು ಸಹ ನೋಡುವಷ್ಟು ಸೂಕ್ಷ್ಮನಾಗಿ ಹೋಗಿದ್ದಾನೆ.
ಅವನ ಕೋಣೆಯ ತುಂಬಾ ಬರೆದು ಬೀಸಾಕಿದ ರದ್ದಿಗಳು, ಟೇಬಲ್ಲಿನ ಕೆಳಗೆ ಹೆಗ್ಗಣವೊಂದು ಗುದ್ದು ಮಾಡಿ ಮಣ್ಣು ಉದುರಿಸಿ ಹಾಕಿತ್ತು. ಲ್ಯಾಂಪಿನ ಅಡಿಯಲ್ಲಿ ಟ್ಯಾಬ್ಲೆಟ್ನ ಪಾಕೆಟ್ಗಳು, ಸೂರ್ಯನ ಬೆಳಕು ನೋಡಿರದ ಯಾವುದೋ ಶತಮಾನದ ಆ ಮಣ್ಣಿನ ಸಡಿಲವಾದ ಗೋಡೆಗಳು. ಯಾರಾದರೂ ಕೈತಾಕಿಸಿದರೆ ಬೀಳುತ್ತವೆಯೆನೋ ಎಂಬಂತೆ ಬಾಗಿದ್ದವಾದರೂ, ಹಲವು ಮಹಾಮಳೆಗಾಲಗಳೆಲ್ಲ ದಾಟಿ ಆ ಗೋಡೆಗಳು ನಿಂತಿದ್ದವು.
ಕುಮ್ಯಾನ ತಲೆಯಲ್ಲಿನ ಕೂದಲುಗಳೆಲ್ಲ ಉದುರಿ ಹೋಗುತ್ತಿದ್ದವು. ಕೈಗಳೆರಡು ಕಟ್ಟಿಗೆಯಂತೆ ಸಣ್ಣಗೆ ಆಗಿದ್ದವು. ಒಂದು ದಿನ ತನ್ನ ಕೋಣೆಯಲ್ಲಿ ಓಡಾಡುತ್ತಾ ಏನೋ ತಟ್ಟನೆ ಹೊಳೆದಂತೆ ಆಗಿ, ಆಯಿ ಚಂದ್ರಮ್ಮನ ಹತ್ತಿರ ಹೋದ.
ಒಂದೇ ಪುಟ್ಟ ಮನೆಯಲ್ಲಿದ್ದರೂ ಅಪರೂಪವೆಂಬಂತೆ ಮಾತಿಗೆ ಬಂದು ಕೂತಿರುವ ಮೊಮ್ಮಗ ಕುಮ್ಯಾನ ತಲೆಮೇಲೆ ಪ್ರೀತಿಯಿಂದಲೇ ಕೈಯಾಡಿಸಿದಳು. ನಡು ಮಧ್ಯಾಹ್ನದ ಸಮಯ, ಹೊರಗಡೆ ಬಿಸಿಲು ಕಿರ್ ಅನ್ನುತ್ತಿತ್ತು.
“ಯಾಕೋ ಮಗ ಉಂಡಿ ಇಲ್ಲ,” ಅಂತ ಕೇಳಿದಳು.
“ಆಗ್ಯಾದ ಆಯಿ. ನೀ ಹೊಟ್ಟಿ ತುಂಬಾ ಉಂಡಿ ಇಲ್ಲ?” ಅಂತ ಕೇಳಿದ.
ಅವನ ಧ್ವನಿಯಲ್ಲಿನ ನಿರ್ಜೀವತನ ನೋಡಿದ ಚಂದ್ರಮ್ಮ ಏನೋ ಅರಿತುಕೊಂಡವಳಂತೆ ನೇರವಾಗಿ ಬೇರಿಗೆ ಕೈಹಾಕುವ ಸಿದ್ಧತೆಯಲ್ಲಿ ಮಾತಿಗಿಳಿದರು.
“ಮಗ, ಏನೋ ಮುಚ್ಚಿಟ್ಟುಕೊಂಡು ಕುಂತಿದಿ ನೀ, ಭಾಳ ದಿವಸ ವಿಷ ಬಿಡೋ ಹುಳ ಮೈದಾಗ ಇಟ್ಟುಕೊಂಡು ಕುಂದರಬಾರದು. ಪೂರ್ತಿ ಮೈದಾಗಿನ ರಕ್ತ ಕುಡುದು, ಎಲುಬು ಕಡಿತವ,” ಅಂದಳು.
ಅವಳ ಮಾತಿನ ಆಳ ಅರ್ಥ ಮಾಡಿಕೊಂಡ ಕುಮ್ಯಾ. ಮೈತುಂಬಾ ಗುಂಗಿ ಹುಳದಂತೆ ಗುಂಯಿಗುಡುತ್ತಿದ್ದ ನಿದ್ದೆ ಕಚ್ಚುವ ಹುಳುಗಳ ಬಿಡುಗಡೆಗಾಗಿ ಹಂಬಲಿಸುತ್ತಿದ್ದ. ನನಗೆ ಬೇಕಾದ ವೈದ್ಯ ಮನೆಯಲ್ಲಿಯೇ ಇರುವಾಗ ಊರು ಸುತ್ತಿ ಬಂದೆ ಎಂದು ಮರುಕ ಪಟ್ಟ. ಒಂದೊಂದಾಗಿ ಬಿಚ್ಚುತ್ತಾ ಹೊರಟ.
ಅವನ ನಿಸ್ತೇಜ ಕಣ್ಣುಗಳಲ್ಲಿ ಸಣ್ಣ ಕಿಡಿ ಸಹ ಇರಲಿಲ್ಲ. ಅವನ ಮಾತುಗಳು ಯಾವುದೋ ನಿತ್ರಾಣಗೊಂಡ ಗುಬ್ಬಿಯ ಬಾಯಿಯಿಂದ ತಪ್ಪಿ ಬೀಳುವ ಕಾಳುಗಳಂತೆ ಒಂದೊಂದಾಗಿ ಬೀಳಲು ಶುರುಮಾಡಿದವು.
“ಆಯಿ, ಮನುಷ್ಯ ಅಂದ ಮ್ಯಾಲ ತಪ್ಪು ಒಪ್ಪು ಆಗ್ತಾ ಇರ್ತಾವ ಖರೆ, ಕೆಲವೊಮ್ಮಿ ನಾವು ಮಾಡಿದ ಯಾವುದೋ ತಪ್ಪೊಂದು ಯಾಕ ನಮ್ಮ ಮೈಮನಸು ಬಿಟ್ಟು ಇಳಿಯೋದಿಲ್ಲ?” ಅಂದ.
ಚಂದ್ರಮ್ಮ ಗಟ್ಟಿ ಮನಸಿನವಳಾದರು ಕುಮ್ಯಾ ಯಾವುದೋ ತಪ್ಪೊಂದು ಮಾಡಿ ಅದರ ಚಿಂತೆಯಲ್ಲಿ ಸುಡುತ್ತಿದ್ದಾನೆ ಎಂಬುವುದು ಅವಳಿಗೆ ಖಾತ್ರಿಯಾಯಿತು. ಅವನ ಮಾತುಗಳಲ್ಲಿದ್ದ ಪಾಪಪ್ರಜ್ಞೆ ಅವಳಿಗೆ ಕಂಗೆಡಿಸಿತು. ಅವನ ಮುಂದಿನ ಮಾತುಗಳಿಗೆ ತನ್ನ ಹರಿದ ಕಿವಿಗಳ ಹರಿತ ಮಾಡಿಕೊಂಡಳು.
“ಆಯಿ, ಮೂಲಿಮನಿ ಗಂಗಮ್ಮನ ಮಗಳು ಸಂಗೀತಾ ಇದ್ದಳಲ್ಲಾ?” ಎಂದು ಕುಮ್ಯಾ ಮುಂದೆ ಏನೋ ಹೇಳುವಷ್ಟರಲ್ಲಿಯೇ ಅವನಿಗೆ ತಡೆದಳು.
“ಅದೆ ಯಾರದೋ ಸಂಗಟ ಓಡಿ ಹೋಗಿತ್ತಲ್ಲ ಅದೆ ಪೋರಿ ಇಲ್ಲ? ಆಮ್ಯಾಲ ಹೆಣ ಆಗಿ ಬಂತು ನೋಡು, ಪಾಪ!” ಅಂದಳು.
ಕುಮ್ಯಾ ಹೌದೆಂದು ತಲೆಯಾಡಿಸುತ್ತ. ಪೂರ್ತಿ ಕಥೆ ಹೇಳಲು ಶುರುಮಾಡಿದ.
“ಆ ಪೋರಿಗಿ ಕೊನಿ ಟೈಂ ನೋಡಿ, ಮಾತಾಡಸಿದ್ದು ನಾನೇ. ಎರಡು ತಿಂಗಳು ಹಿಂದ ನಾ ನಸುಕಿನಾಗ ಹೊಲಕ್ಕ ಹೋಗೊ ಟೈಮನಾಗ ಹಾದ್ಯಾಗ ಬಂದು ‘ಯಣ್ಣಾ ! ಏನರೇ ರೊಕ್ಕ ಇದ್ರೆ ಸಹಾಯ ಮಾಡ್ರೀ,’ ಅಂತ ಕೇಳಿದಳು. ನಾ ಯಾನ ಬೀ ಕೊಟ್ಟಿರಲಿಲ್ಲ. ಕನಿಷ್ಠ ಯಾಕ ಬೇಕಾಗಿದಾವ ತಂಗಿ? ಅಂತ ಸಹ ಕೇಳಲಿಲ್ಲ. ರೊಕ್ಕ ಕೊಡೊದು ಬಿಡು ಆಯಿ, ‘ಏನು ಸಮಸ್ಯೆ ಅದ ಯವ್ವಾ?’ ಅಂತ ತಿರುಗಿ ಕೇಳಲಿಲ್ಲ ನಾ ಅಕಿಗಿ. ಹೊಲದಿಂದ ಮಧ್ಯಾಹ್ನ ವಾಪಸ್ ಬರೋ ಟೈಮಿನಾಗ ಅಕಿಂದು ಹೆಣ ಬಾಬಣ್ಣನ ಬಾವಿದಾಗ ತೇಲ್ತಾ ಇತ್ತು…” ಅನ್ನುತ್ತಲೇ, ಇಷ್ಟು ದಿವಸ ಮಂಜುಗಡ್ಡೆಯಾಗಿದ್ದ ಕಣ್ಣೀರು ಕರಗಿ ಉಕ್ಕುವಂತೆ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ.
“ನಾ ಆವತ್ತು ಕನಿಷ್ಠ ಆ ಹುಡುಗಿಗಿ ಮಾತಾಡಸಬೇಕಿತ್ತು. ನನ್ನ ದುನಿಯಾದೊಳಗ ನಾನೇ ಇದ್ದೆ. ನಾ ಎಷ್ಟು ಕೆಟ್ಟಾವ ಇದ್ದಿನಿ ನೋಡು ಆಯಿ…” ಎನ್ನುತ್ತಾ ಗಳಗಳ ಅಳಲು ಶುರುಮಾಡಿದ.
ಚಂದ್ರಮ್ಮ ಏನು ಹೇಳಬೇಕೆಂಬುವುದು ಸಹ ತಿಳಿಯದೆ ಗರಬಡಿದವರಂತೆ ಕೂತಿದ್ದಳು. ತುಸು ಹೊತ್ತು ಆದಮೇಲೆ ಸುಧಾರಿಸಿಕೊಂಡ ಅವಳು, ಅವನ ತಲೆಯನ್ನು ತನ್ನ ತೊಡೆ ಮೇಲಿಟ್ಟುಕೊಂಡು, ಅವನ ಹಣೆ ಮೇಲೆ ಕೈಯಾಡಿಸಿದಳು. ಅಲ್ಲೇ ಜಗುಲಿ ಮೇಲೆ ಬಿದ್ದಿದ್ದ ಊದಿನ ಕಡ್ಡಿಯ ಬೂದಿ ಪುಡಿ ಅವನ ಹಣೆಗೆ ಒರೆಸಿ, ಅವನ ಕಿವಿಗಳೆರೆಡು ಎಳೆದಳು. ಅವನ ಮುಂಗೈಯೊಳಗೆ ತನ್ನ ಒರಟು ಬೆರಳುಗಳು ಸೇರಿಸುತ್ತಾ, “ಪೋರಿ ಕನಸಿನಾಗ ಬಂದು ಕಾಡ್ತಾಳೇನು?” ಎಂದು ಕೇಳಿದಳು.
“ಇಲ್ಲ ಆಯಿ. ಆ ಪೋರಿ ಮುಖ ಕನಸಿನಾಗ ಬರೋದಿಲ್ಲ. ಒಣ ಜೇನು ನೋಣ ಕನಸಿನಾಗ ಬರ್ತಾವ. ಆ ಕನಸಿಗಿ ಸ್ವಲ್ಪ ದಿಟ್ಟಿಸಿ ನೋಡಿದ್ರೆ ಸಾಕು ರಕ್ತ ತುಂಬಿದ ಜೇನು ಗೂಡು ಕಣ್ಣು ಮುಂದ ಬಂದು ಹೆದರಿಕೆ ಆಗ್ತದ,” ಅಂದ.
ಚಂದ್ರಮ್ಮ ಅವನ ಕಿವಿಯೊಳಗೆ ಈ ರಾತ್ರಿ ಎಲ್ಲರೂ ಮಲಗಿದ ಮೇಲೆ ರಾತ್ರಿ ಬಂದು ತನಗೆ ಎಬ್ಬಿಸೆಂದು ಹೇಳಿದಳು. ಕುಮ್ಯಾನಿಗೆ ಇಡೀ ದಿನ ಏನು ಮಾಡಬೇಕೆಂದು ತಿಳಿಯದಿದ್ದರೂ ಚೂರು ಹಗುರಾಗಿದ್ದ. ಜೊತೆಗೆ, ನಡುರಾತ್ರಿ ಮುದುಕಿ ಏನು ಮಾಡಬಹುದೆಂದು ಭಯದಲ್ಲಿದ್ದ.
ಕತ್ತಲು ಅಂಗಳದ ತುಂಬಾ ತುಂಬಿ ಮನೆ ಒಳಗೆ ನುಗ್ಗಿ ಇಡೀ ಭೂಮಂಡಲವೇ ತನ್ನ ಬಾಹುಗಳೊಳಗೆ ಹುದುಗಿಸಿಕೊಂಡಂತೆ ಆ ರಾತ್ರಿ ದಟ್ಟವಾಗಿತ್ತು. ಸುತ್ತ ಮೌನ. ಮನೆ ಮಂದಿಯೆಲ್ಲ ಮಲಗಿರುವ ಸಮಯ. ಬರೀ ಉಸಿರಾಟಗಳ ಗದ್ದಲವಿತ್ತು. ಮುದುಕಿ ಹೊಸದಾದ ಕೆಂಪು ಇಳಕಲ್ ಸೀರೆಯೊಂದು ತೊಟ್ಟುಕೊಂಡು ಆಚೆ ಬಂದಳು. ಕುಮ್ಯಾನಿಗೆ ಮತ್ತಷ್ಟು ಭಯವಾಯ್ತು. ಅವನ ಕೈ ಹಿಡಿದು ಮುದುಕಿ ಅಂಗಳ ದಾಟಿ ಕುಮ್ಯಾನಿಗೆ ಊರ ನಡುವಿನ ವಿಶಾಲ ಬಯಲಲ್ಲಿ ಕರೆದುಕೊಂಡು ಬಂದಳು. ಅಲ್ಲಿ ದೇವರಿಗೆ ಬಿಟ್ಟ ಆಕಳು ಕರುವೊಂದು ಬಾಯಲ್ಲಿ ಹುಲ್ಲಾಡಿಸುತ್ತಿತ್ತು. ನಾಯಿಗಳ ಗುಂಪು ಒಟ್ಟಾಗಿ ಮುಗಿಲಿಗೆ ಮುಖ ಮಾಡಿ ಅಳುತ್ತಿದ್ದವು. ಊರೊಳಗಿನ ಕೆಲವು ಹಂದಿಗಳು ಅಡ್ಡಾದಿಡ್ಡಿ ಅಲ್ಲಿ ಕೆಸರು ತುಂಬಿದ ಜಾಗದಲ್ಲಿ ಕರ್ಕಶವಾಗಿ ಒದರುತ್ತ ಗದ್ದಲ ಎಬ್ಬಿಸಿದವು. ಇದರ ಮಧ್ಯೆ ಲೆಕ್ಕವಿಲ್ಲದಷ್ಟು ಹುಳುಗಳು, ಎಲೆಗಳು ಏನೇನೋ ಕ್ರಿಯೆಯಲ್ಲಿ ತೊಡಗಿದ್ದವು.
ಆ ವಿಶಾಲವಾದ ಬಯಲು ಮೈದಾನದ ಮಧ್ಯದಿಂದ ನೇರವಾಗಿ ಆಕಾಶದ ಕಡೆ ಕಣ್ಣು ಹಾಯಿಸಲು ಹೇಳಿದಳು. ಅವನೆಂದಿಗೂ ಇಂತಹದೊಂದು ರಾತ್ರಿ ನೋಡಿಯೇ ಇಲ್ಲವೆಂಬಂತೆ ನೆತ್ತಿ ಮೇಲಿನ ಮುಗಿಲಿಗೆ ಕಣ್ಣು ಹರಡಿಸಿದ, ರಾಶಿ ರಾಶಿ ನಕ್ಷತ್ರಗಳು … ಪೂರ್ಣಚಂದ್ರ … ಅಲ್ಲಲ್ಲಿ ಮಿಂಚು ಹೋಗುವ ವಿಮಾನಗಳು … ಮತ್ತೇನೋ … ಆಕಾಶದ ಮೌನ ಕುಲುಮೆಯ ಗದ್ದಲ ಗಮನಿಸಿದ. ಕೆಲವು ವರ್ಷಗಳ ಕೆಳಗೆ “ಬ್ಲ್ಯಾಕ್ ಹೋಲ್” ಕುರಿತು ಓದಿ ಚೂರು ಪಾರು ಬಾಹ್ಯಾಕಾಶದ ಬಗ್ಗೆ ತಿಳಿದುಕೊಂಡಿದ್ದ. ಅದೆಲ್ಲ ಒತ್ತಟ್ಟಿಗಿರಲಿ, ಈ ಮುದುಕಿ ಆಕಾಶಕ್ಕೂ ನನಗೂ ಯಾವ ಸಂಬಂಧ ಬೆಸೆಯುತ್ತಿದ್ದಾಳೆ? ಎಂದು ಯೋಚಿಸತೊಡಗಿದ.
ಅವಳು ಅವನ ಕೈ ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡು, “ಈ ಸೂರ್ಯ, ಚಂದ್ರ ಯಾವತ್ತರೆ ಒಂದ ದಿನ ಸಾಯುತ್ತಾರೋ ಇಲ್ಲೋ ನನಗಂತೂ ಗೊತ್ತಿಲ್ಲ, ಆದ್ರ ಮಗ ಈ ಚುಕ್ಕಿಗೋಳು ಸಾಯೋದಂತು ನಾ ನೋಡೀನಿ. ಎಷ್ಟು ಹುಟ್ಟತಾವ ಎಷ್ಟು ಸಾಯತಾವ, ಅವುಕ್ಕೆ ಬ್ಯಾಸರಕಿ ಅಂಬೋದೆ ಇಲ್ಲ ಅನಸ್ತದ. ನಾ ಹೇಳೋದು ಕೇಳು — ನಾ ನೀ ಆ ಮುಗಿಲ ಮ್ಯಾಗಿನಾಗಿಂದ ಚುಕ್ಕಿ ಇದ್ದಂಗ, ಸಾಯಬೇಕು ಮತ್ತ ಹುಟ್ಟಬೇಕು ಮತ್ತ ಮತ್ತ ಹುಟ್ಟಬೇಕು. ಸಾಯೋದಂದ್ರ ಜೀವ ಬಿಟ್ಟು ಹೋಗೊದಲ್ಲ ಮಗ. ಜೀವ ಇದ್ದಾಗೆ ಸತ್ತು ಹುಟ್ಟೋದು ಭಾಳ ಮುಖ್ಯ ಅದ!” ಅಂದಳು.
ಅವನೊಳಗೆ ಏನೋ ಒಂದು ಹೊಳೆದಂತೆ ಆಗಿ. ಮೈಮೇಲಿನ ಮಹಾ ಭಾರವೊಂದು ಕಳೆದುಕೊಂಡಂತೆ ಚೂರು ನಿರಾಳನಾಗುತ್ತಲಿದ್ದ.
ಮುದುಕಿ ಮರುಕ್ಷಣವೇ, “ಸತ್ತು ಹುಟ್ಟೊದಂದ್ರೆ ನಿಮಿಷದ ಕೆಲಸ ಅಲ್ಲ ಅದು. ಟೈಂ ಹಿಡೀತದ, ತ್ರಾಸ ಅನಸ್ತದ, ಎಲ್ಲಾ ಮೀರಬೇಕು ಅಂದಾಗಲೇ ಬದಕತಿ. ನಿನ್ನೊಳಗೆ ನೀ ಒಪ್ಪಕೋಬೇಕು, ‘ಆ ಹುಡುಗಿಗಿ ಖರೇ ಕೊಂದವ ಅಂದ್ರೆ ನೀನೆ!’ ಅಂತ. ನೀ ಒಪ್ಪೋದು ಬಿಡೋದರ ಮ್ಯಾಲ ನಿನ್ನ ಸಾವು, ಹುಟ್ಟು ನಿಂತಿರ್ತಾವ,” ಅಂದಳು.
ಅವನೊಳಗೆ ಇನ್ನಷ್ಟು ಕತ್ತಲು ಯಾರೋ ಸುರಿದ ಹಾಗಾಯ್ತು. ಅಲ್ಲಿ, ಆ ಕತ್ತಲೊಳಗಿನ ಕುಲುಮೆಯಲ್ಲಿ ಯಾರೋ ಬಣ್ಣಗಳು ಸೋಸಿ ತೆಗೆಯುತ್ತಿದ್ದರು, ಆ ಕುಲುಮೆಯ ಮುಂದೆ ಹಲವಾರು ಜನ ಹಲವು ಬಣ್ಣಗಳಿಗಾಗಿ ಬೆತ್ತಲೆಯಾಗಿ ಸರದಿ ಸಾಲಿನಲ್ಲಿ ನಿಂತಿದ್ದರು. ಕೆಲವರು ಬೆತ್ತಲಾಗುವುದೋ ಬೇಡವೋ ಎನ್ನುವ ಯೋಚನೆಯೊಳಗಿದ್ದರು.
ಕಪಿಲ ಪಿ. ಹುಮನಾಬಾದೆ
ಕಪಿಲ ಪಿ. ಹುಮನಾಬಾದೆ ಬೀದರನ ಅಲಿಯಾಬಾದ್ ಎಂಬ ಪುಟ್ಟ ಗ್ರಾಮದಲ್ಲಿ 1996 ಜನವರಿ 25ರಂದು ಜನಿಸಿದ್ದಾರೆ. ತಂದೆ ಪ್ರಭು, ತಾಯಿ ಬೇಬಾವತಿ. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಪುಸ್ತಕ ಪ್ರಾಧಿಕಾರದ ಚೊಚ್ಚಲ ಕೃತಿ ಗೌರವ ಧನಕ್ಕೆ ಆಯ್ಕೆ ಆದ ಇವರ ಹಾಣಾದಿ ಕಾದಂಬರಿಯು 2019 ರಲ್ಲಿ ಪ್ರಕಟವಾಗಿದೆ. ಈ ಕಾದಂಬರಿಗೆ ಕರ್ನಾಟಕ ಸರ್ಕಾರ ನೀಡುವ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2020 ರ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಯುವ ಪುರಸ್ಕಾರ, ಪ್ರಜಾವಾಣಿ ಸಾಧಕ -2020 ಪ್ರಶಸ್ತಿ, ಕಲಬುರ್ಗಿ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಬರಹಗಾರರು ಮತ್ತು ಪ್ರಕಾಶಕರ ಸಂಘದ ವರ್ಷದ ಸಪ್ನಾ ಯುವ ಲೇಖಕ ಪ್ರಶಸ್ತಿ ಇವರಿಗೆ ದೊರೆತಿವೆ. ಬಣಮಿ ಇವರ ಚೊಚ್ಚಲ ಕಥಾ ಸಂಕಲನ.
ಇದನ್ನೂ ಓದಿ