ಗತದ ಹೊರೆಯಡಿ ಸಿಲುಕಿರುವ ಅಸ್ತಿತ್ವಗಳ ಬಿಡುಗಡೆಯ ಪ್ರಯತ್ನ
ಶೆಹಾನ್ ಕರುಣಾತಿಲಕರ 'ಚೈನಾಮನ್' ಎಂಬ ಕ್ರಿಕೆಟ್ ಕಾದಂಬರಿ
2010ರಲ್ಲಿ ಪ್ರಕಟವಾದ ಚೈನಾಮನ್ ಶ್ರೀಲಂಕಾದ ಕಾದಂಬರಿಕಾರ ಶೆಹಾನ್ ಕರುಣಾತಿಲಕ (Shehan Karunatilaka, 1975) ಅವರ ಮೊದಲ ಕಾದಂಬರಿ. ಅದು ಹಲವು ಪ್ರಶಸ್ತಿ ಮನ್ನಣೆಗಳನ್ನು ಗಳಿಸಿ, ಕ್ರಿಕೆಟ್ನ ಪವಿತ್ರ ಗ್ರಂಥವೆಂದು ಪರಿಗಣಿತವಾದ ವಿಸ್ಡನ್ ಆಲ್ಮನ್ಯಾಕ್ನಿಂದ (Wisden Cricketers' Almanack) ‘ಜಗತ್ತಿನ ಅತ್ಯುತ್ತಮ ಕ್ರಿಕೆಟ್ ಪುಸ್ತಕಗಳಲ್ಲಿ ಒಂದು’ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಆ ಕಾದಂಬರಿಯ ಕುರಿತು ಸಂಕೇತ ಪಾಟೀಲ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಶೆಹಾನ್ ಕರುಣಾತಿಲಕ ಅವರ ‘ಚೈನಾಮನ್: ದಿ ಲೆಜೆಂಡ್ ಆಫ್ ಪ್ರದೀಪ್ ಮ್ಯಾಥ್ಯೂ’ (Chinaman: The Legend of Pradeep Mathew) ಕಾದಂಬರಿಯ ನಾಯಕ ಮತ್ತು ಉತ್ತಮಪುರುಷ ನಿರೂಪಕನಾದ ಡಬ್ಲ್ಯೂ. ಜಿ. ಕರುಣಾಸೇನ ಅಪಾರ ಪ್ರತಿಭೆ ಮತ್ತು ಸಾಧ್ಯತೆಗಳುಳ್ಳ ಕ್ರೀಡಾ ಬರಹಗಾರ. ಆದರೆ ಮುಖ್ಯವಾಹಿನಿಯಿಂದ ಹೊರಗೆಸೆಯಲ್ಪಟ್ಟವನು; ವೈಯಕ್ತಿಕ ಜೀವನ, ವೃತ್ತಿ ಮತ್ತು ಬರವಣಿಗೆ, ಯಾವುದರಲ್ಲೂ ಪೂರ್ಣತೆಯನ್ನು ಕಾಣದೇ ಯಶಸ್ಸಿನ ಹಲವು ಅವಕಾಶಗಳಿದ್ದಾಗಲೂ ತನ್ನ ಶ್ರೇಷ್ಠತೆಯ ಕ್ಷಣ ಕೈಚಾಚಿನಲ್ಲೇ ಮಿಣುಗುಟ್ಟುತ್ತಿದ್ದುದನ್ನು ಕಂಡೂ ಕಣ್ಮುಚ್ಚಿಕೊಂಡು ಹಿಂದುಳಿದವನು. ತನ್ನೊಳಗಿನ ತಳಮಳ, ಆಲಸ್ಯ, ಶ್ರದ್ಧೆಯ ಕೊರತೆ, ಅತಿಯಾದ ಕುಡಿತ, ನಿಯಂತ್ರಣದಲ್ಲಿಲ್ಲದ ಕೋಪ, ಹೀಗೆ ಹತ್ತು ಹಲವು ಕಾರಣಗಳಿಂದ ತಾನು ಮಾಡಬೇಕಾದ್ದನ್ನು ಮಾಡಲಾಗದ ಆದರೆ ಅದೇ ವೇಳೆಗೆ ತನ್ನ ಸ್ವಭಾವ, ಮನೋಧರ್ಮ, ಪರಿಸ್ಥಿತಿಯೊಂದಿಗೆ ಸಂಧಾನವನ್ನೂ ಮಾಡಿಕೊಳ್ಳಲಾಗದ ಅರೆಬರೆ ವ್ಯಕ್ತಿತ್ವ. ಕೊನೆಗೊಮ್ಮೆ, ಕುಡಿತವು ತನ್ನನ್ನು ಪೂರ್ತಿಯಾಗಿ ನುಂಗಿಹಾಕುವ ಮುನ್ನ ಅಳಿದುಳಿದ ಜೀವಿತವನ್ನು ಪ್ರದೀಪ್ ಮ್ಯಾಥ್ಯೂ ಎಂಬ ಎಲ್ಲರೂ ಬಹುತೇಕ ಮರೆತಿರುವ, ವ್ಯವಸ್ಥೆಯು ಸಕ್ರಿಯವಾಗಿ ಚರಿತ್ರೆಯಿಂದ ಅಳಿಸಿಹಾಕಲೂ ಯತ್ನಿಸುತ್ತಿರುವ ಮಹಾಮೇಧಾವಿಯ ಹುಡುಕಾಟಕ್ಕೆ ಮೀಸಲಿಡುತ್ತಾನೆ.

ಕರುಣಾಸೇನ ಮತ್ತು ಅವನ ಕೆಲವು ಗೆಳೆಯರ ಪ್ರಕಾರ ಪ್ರದೀಪ್ ಮ್ಯಾಥ್ಯೂ ಎಂಬ ಕ್ರಿಕೆಟಿಗ ಶ್ರೀಲಂಕಾ ಅಷ್ಟೇ ಅಲ್ಲ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಸ್ಪಿನ್ ಬೌಲರ್. ಒಂದು ಬಗೆಯಲ್ಲಿ ಕರುಣಾಸೇನ ಮ್ಯಾಥ್ಯೂನದೇ ಪ್ರತಿರೂಪ — ಆಂಶಿಕವಾಗಿಯಾದರೂ. ಹೀಗಾಗಿ ಕ್ರಿಕೆಟ್ ಜಗತ್ತು ಮತ್ತು ಶ್ರೀಲಂಕಾದ ಚರಿತ್ರೆಯ ಪುಟಗಳಿಂದಲೂ ವಾಸ್ತವದಲ್ಲಿಯೂ ಕಣ್ಮರೆಯಾಗಿರುವ ಪ್ರದೀಪ್ ಮ್ಯಾಥ್ಯೂನನ್ನು ಹುಡುಕಿ ಅವನ ಹಿರಿಮೆಯನ್ನು ಜನಮಾನಸದಲ್ಲಿ ಮತ್ತೆ ನೆಲೆಗೊಳಿಸುವುದನ್ನು ಕರುಣಾಸೇನ ತನ್ನ ಘನಸಂಕಲ್ಪವನ್ನಾಗಿ ಮಾಡಿಕೊಂಡು ಆ ಗೀಳಿನಲ್ಲಿಯೇ ಹಗಲಿರುಳು ಕಳೆಯುತ್ತಾನೆ. ಇನ್ನೊಂದು ಬಗೆಯಲ್ಲಿ ಅವನು, ವಸಾಹತುಶಾಹಿ, ಜನಾಂಗೀಯ ಘರ್ಷಣೆ, ಅಂತರ್ಯುದ್ಧ, ಆರ್ಥಿಕ ಬಿಕ್ಕಟ್ಟುಗಳ ಮೂಲಕ ಸಾಗಿಬಂದ ಆಳವಾದ ಚಾರಿತ್ರಿಕ ಬಿರುಕುಗಳಿಂದ ಇಂದಿಗೂ ನಲುಗುತ್ತಿರುವ ಶ್ರೀಲಂಕಾವೆಂಬ ದೇಶದ ನಿಜ ಪ್ರತಿನಿಧಿಯೂ ಹೌದು. ಮ್ಯಾಥ್ಯೂ, ಶ್ರೀಲಂಕಾ ಮತ್ತು ಕರುಣಾಸೇನ — ತಮ್ಮ ಗತದ ಹೊರೆಯಡಿ ಸಿಲುಕಿ ನರಳುತ್ತಿರುವ ಈ ಮೂರೂ ಅಸ್ತಿತ್ವಗಳ ಬಿಡುಗಡೆ ಮತ್ತು ಅವುಗಳು ಏರಬಹುದಾದ ಎತ್ತರವನ್ನು ಕಾಣಿಸುವ ಪ್ರಯತ್ನದ ನಿರೂಪಣೆಯೇ ಈ ಕಾದಂಬರಿ. ಆ ಪ್ರಯತ್ನ ಮತ್ತು ಈ ಕಾದಂಬರಿ ಎಷ್ಟರಮಟ್ಟಿಗೆ ಸಫಲವಾಗಿವೆ ಎನ್ನುವುದು ಆಸಕ್ತಿಕರ ಹಾಗೂ ಚರ್ಚಾಸ್ಪದ.
ಇಂಗ್ಲಿಷ್ನಲ್ಲಿ ಬರೆಯುವ ಹೊಸ ತಲೆಮಾರಿನ ಶ್ರೀಲಂಕಾದ ಲೇಖಕ ಶೆಹಾನ್ ಕರುಣಾತಿಲಕ ಹುಟ್ಟಿದ್ದು 1975ರಲ್ಲಿ, ದಕ್ಷಿಣ ಶ್ರೀಲಂಕಾದ ಗಾಲ್ನಲ್ಲಿ. ಬೆಳೆದದ್ದು ಕೊಲಂಬೊನಲ್ಲಿ. ಇಂಗ್ಲಿಷ್ ಸಾಹಿತ್ಯವನ್ನು ಅಭ್ಯಸಿಸಿ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡಿದವರು. 2011ರಲ್ಲಿ ಪ್ರಕಟವಾದ ‘ಚೈನಾಮನ್’ ಅವರ ಮೊದಲ ಕೃತಿ. ಅವರ ‘ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇದಾ’ (The Seven Moons of Maali Almeida) ಕಾದಂಬರಿಗೆ 2022ರ ಸಾಲಿನ ಬುಕರ್ ಪ್ರಶಸ್ತಿಯೂ ಲಭಿಸಿದೆ. ಶ್ರೀಲಂಕಾ ಮೂಲದ ಹಲವು ಬರಹಗಾರರು ಅಂತರ್ರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ. ಅವರಲ್ಲಿ ಮುಂಚೂಣಿಯಲ್ಲಿದ್ದವರು ‘ದಿ ಇಂಗ್ಲಿಷ್ ಪೇಶಂಟ್’ (The English Patient) ಖ್ಯಾತಿಯ ಮೈಕಲ್ ಒಂದಾಚಿ (Michael Ondaatje). ಸಮಕಾಲೀನರಲ್ಲಿ ರೊಮೇಶ್ ಗುಣಶೇಖರ, ಶ್ಯಾಮ್ ಸೆಲ್ವದುರೈ ಮೊದಲಾದವರು ಪ್ರಸಿದ್ಧಿ ಹೊಂದಿದ್ದಾರೆ. ಆದರೆ ಇಂಗ್ಲಿಷ್ನಲ್ಲಿ ಬರೆಯುವ ಬಹುತೇಕರ ಅನಿವಾಸಿಗಳು — ಕೆನಡಾ, ಇಂಗ್ಲಂಡ್, ಅಮೆರಿಕಾ, ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ನೆಲಸಿದವರು. ಕರುಣಾತಿಲಕರ ವೈಶಿಷ್ಟ್ಯವೆಂದರೆ ಅವರು ತಮ್ಮ ಜೀವಿತದ ಬಹುಪಾಲು ಶ್ರೀಲಂಕಾದಲ್ಲಿಯೇ ಇದ್ದು ಅಲ್ಲಿಯ ಸಮಾಜ, ಜನಜೀವನ ಮತ್ತು ಅಲ್ಲಿಯದೇ ಎಂದು ಗುರುತಿಸಬಹುದಾದ ಗುಣಲಕ್ಷಣಗಳನ್ನು ತಮ್ಮ ಬರವಣಿಗೆಯಲ್ಲಿ ಮೈಗೂಡಿಸಿಕೊಂಡಿದ್ದಾರೆ. ಅದನ್ನು ಅಭಿವ್ಯಕ್ತಿಸಲು ತಮ್ಮದೇ ಶ್ರೀಲಂಕಾದ ಇಂಗ್ಲಿಷ್ ನುಡಿಗಟ್ಟನ್ನೂ ಕಟ್ಟಿಕೊಂಡಿದ್ದಾರೆ.
‘ಚೈನಾಮನ್' ಅದ್ಯಂತವಾಗಿ ಒಂದು ಕ್ರಿಕೆಟ್ ಕಾದಂಬರಿ. ಕ್ರಿಕೆಟ್ ಅಥವಾ ಇನ್ನಿತರ ಕ್ರೀಡೆಗಳನ್ನು popular fictionನಲ್ಲಿ, ಸಿನೆಮಾಗಳಲ್ಲಿ ಸಫಲವಾಗಿಯೂ ಪರಿಣಾಮಕಾರಿಯಾಗಿಯೂ ಬಳಸಿಕೊಂಡಿರುವುದು ಸಾಮಾನ್ಯ ಸಂಗತಿ. ಆದರೆ ಇಂಥ ಜನಪ್ರಿಯ ವಸ್ತುವಿಷಯವನ್ನು ಗಂಭೀರ ಸಾಹಿತ್ಯ ಕೃತಿಗಳಲ್ಲಿ ಬಳಸಿಕೊಂಡಿರುವ ಉದಾಹರಣೆಗಳು ಕಡಿಮೆ. ಗಂಭೀರ ಸಾಹಿತ್ಯವು ಜನಪ್ರಿಯ ಸಂಸ್ಕೃತಿಯಿಂದ (popular culture) ಸುರಕ್ಷಿತ ಅಂತರವನ್ನು ಇಟ್ಟುಕೊಂಡೇ ಬಂದಿದೆ. ಆದರೆ ಕ್ರಿಕೆಟ್ ಈ ಕಾದಂಬರಿಯ ರಂಗಮಂಚವೂ ಹೌದು ಮುಖ್ಯಪಾತ್ರವೂ ಹೌದು. ಹಾಗಿದ್ದೂ ಕಾದಂಬರಿಯ ಶುರುವಾತಿನಲ್ಲಿಯೇ, ನಿಮಗೆ ಕ್ರಿಕೆಟ್ ಎಂಬ ಆಟದ ಬಗ್ಗೆ ಏನೂ ಗೊತ್ತಿಲ್ಲದಿದ್ದಲ್ಲಿ, ಈ ಕಾದಂಬರಿ ಇರುವುದೇ ನಿಮಗಾಗಿ, ಎಂಬ ಅಲ್ಲಗಳೆತವಿದೆ. ಕಾದಂಬರಿಯುದ್ದಕ್ಕೂ ಕ್ರಿಕೆಟ್ಗೆ ಸಂಬಂಧಿಸಿದ ಅಂಕಿಅಂಶಗಳು, ಘಟನೆಗಳು, ಕತೆಗಳು, ಐತಿಹ್ಯಗಳು, ವ್ಯಕ್ತಿಗಳನ್ನು ಯಾವುದು ದಿಟ ಯಾವುದು ಸಟೆ ಎಂದು ಗೊತ್ತಾಗದಷ್ಟು ಚಾತುರ್ಯದಿಂದ ಕರುಣಾತಿಲಕೆ ಕತೆಯಲ್ಲಿ ಹೆಣೆಯುತ್ತಾರೆ.
ಕಾದಂಬರಿ ಶುರುವಾಗುವುದು ಪ್ರದೀಪನ್ ಶಿವನಾಥನ್ ಅಥವಾ ಪ್ರದೀಪ್ ಎಸ್. ಮ್ಯಾಥ್ಯೂ ಎಂಬ ಅಭೂತಪೂರ್ವ ಮೇಧಾವಿಯನ್ನು ತಾನು ಸಾಯುವುದರೊಳಗಾಗಿ ಹುಡುಕಿ ಮಾತಾಡಿಸಿ ಅವನ ಬಗ್ಗೆ ಬರೆಯಬೇಕು ಎಂಬ ಕರುಣಾಸೇನನ ಸಂಕಲ್ಪದಿಂದ. ಈ ಪ್ರದೀಪನ್ ಇರ್ಕೈಚಳಕದ ಚೆಂಡೆಸೆತಗಾರ: ತಾನೆಸೆವ ಚೆಂಡನ್ನು ತನಗೆ ಬೇಕಾದಂತೆ ಪುಟಿಸಿ, ಕುಣಿಸಿ, ಮಣಿಸಿ, ತಿರುಗಿಸಿ ನಿಯಂತ್ರಿಸಬಲ್ಲವ. ಅವನ ಜೊತೆಗಾರರಿಗೂ ಎದುರಾಳಿಗಳಿಗೂ ಅವನೊಂದು ಒಗಟು. ಒಮ್ಮೆಲೇ ಕಣ್ಣುಕುಕ್ಕುವಂತೆ ಬೆಳಗಿ ಅಷ್ಟೇ ಶೀಘ್ರವಾಗಿ ಮಾಯವಾಗಿಹೋದವನು. ಕರುಣಾಸೇನ ಅವನನ್ನು ಹುಡುಕುತ್ತ ಹೋದಂತೆ ಇದೆಲ್ಲದರ ಹಿಂದಿನ ರಾಜಕಾರಣ, ಶ್ರೀಲಂಕಾದ ಜನಾಂಗೀಯ ಕಲಹಗಳು, ಭ್ರಷ್ಟ ವ್ಯವಸ್ಥೆ, ಭ್ರಮನಿರಸನಗೊಳ್ಳುತ್ತಿರುವ ಸಮಾಜ, ಎಲ್ಲವೂ ಅನಾವರಣಗೊಳ್ಳುತ್ತ ಹೋಗುತ್ತದೆ. ಕ್ರಿಕೆಟ್ ಮಂಡಳಿಯ ಪಟ್ಟಭದ್ರರು, ನೈತಿಕತೆ ಕಳೆದುಕೊಂಡಿರುವ ಪತ್ರಕರ್ತರು, ಭ್ರಷ್ಟ ರಾಜಕಾರಣಿಗಳು, ಅವರೊಂದಿಗೆ ಶಾಮೀಲಾಗಿರುವ ಮಾಜೀ ಕ್ರಿಕೆಟಿಗರು, ಇವರನ್ನೆಲ್ಲ ನಿಯಂತ್ರಿಸುತ್ತಿರುವ ಬುಕ್ಕಿಗಳು, ಈ ಹುಡುಕಾಟದಲ್ಲಿ ಕರುಣಾಸೇನನ ಹಾದಿಗೆ ಅಡ್ಡಿಯಾಗುತ್ತಾರೆ. ಜೊತೆಗೇ ಕ್ರಿಕೆಟ್ ಪಂದ್ಯಗಳ ಭವಿಷ್ಯ ಹೇಳುವವರು, ಮೊದಲ ವಸಾಹತುದಾರರಾದ ಪೋರ್ಚುಗೀಸರು, ನಂತರ ಬ್ರಿಟಿಷರು ಯುದ್ಧಕಾಲದಲ್ಲಿ ಬಳಸುತ್ತಿದ್ದು ಈಗ ಕ್ರೀಡಾಂಗಣದ ಕೆಳಗಿರುವ ಬಂಕರ್ಗಳು, ಅಲ್ಲಿ ರಹಸ್ಯವಾಗಿ ದಾಖಲಿಸಿಕೊಳ್ಳಲಾಗಿದ್ದ ಹಳೆಯ ಧ್ವನಿಮುದ್ರಿಕೆಗಳು, ಮೊದಲಾದ ಸುಳುಹುಗಳು ಎದುರಾಗಿ ಕಾದಂಬರಿ ಕುತೂಹಲಕರವಾಗಿ ಬೆಳೆಯುತ್ತ ಹೋಗುತ್ತದೆ. ಒಂದು ಮಹತ್ತರ ತಿರುವಿನಲ್ಲಿ LTTE ಏಜೆಂಟರು ಮ್ಯಾಥ್ಯೂವಿನ ಹುಡುಕಾಟದಲ್ಲಿ ಆಸಕ್ತ ಪಾಲುದಾರರಾದಾಗ ಅವನನ್ನು ಅಳಿಸಿಹಾಕುವ ಪ್ರಯತ್ನಕ್ಕೂ ಅವನ ತಮಿಳು ಹಿನ್ನೆಲೆಗೂ ನಂಟಿದ್ದಂತೆ ಕಂಡುಬರುತ್ತದೆ. ತಮಿಳು ತಂದೆ ಮತ್ತು ಸಿಂಹಳ ತಾಯಿಗೆ ಹುಟ್ಟಿದ ಪ್ರದೀಪನ್ ಶಿವನಾಥನ್ ಮುಂದೆ ತನ್ನ ಹೆಸರಲ್ಲಿನ ತಮಿಳನ್ನು ಆದಷ್ಟು ತ್ಯಜಿಸಿ ಪ್ರದೀಪ್ ಮ್ಯಾಥ್ಯೂ ಆದರೂ ಅವನನ್ನು ಅವನ ದೇಶ ಪೂರ್ತಿಯಾಗಿ ಒಳಗೊಳ್ಳುವುದಿಲ್ಲ.
ಬ್ರಿಟಿಷ್ ಆಳ್ವಿಕೆಯಿಂದ 1948ರಲ್ಲಿ ಸ್ವಾತಂತ್ರ್ಯ ಪಡೆದ ಸಿಲೋನ್ 1956ರಲ್ಲಿ “ಸಿಂಹಳ ಮಾತ್ರ” (Sinhala only) ಕಾಯ್ದೆಯಡಿ, ಸಿಂಹಳವು ದೇಶದ ಏಕೈಕ ಅಧಿಕೃತ ಭಾಷೆಯೆಂದು ಘೋಷಿಸಿತು. ಈ ಕಾಯ್ದೆ ಕಿತ್ತೆಸೆದದ್ದು ಇಂಗ್ಲಿಷನ್ನಷ್ಟೇ ಅಲ್ಲ, ತಮಿಳನ್ನೂ. ಅಲ್ಪಸಂಖ್ಯಾತ ತಮಿಳರು ಮತ್ತು ಬಹುಸಂಖ್ಯಾತ ಸಿಂಹಳೀಯರ ನಡುವಿನ ಸಮಸ್ಯೆಗಳು ಉಲ್ಬಣಗೊಳ್ಳುವುದಕ್ಕೆ ಇದು ಮುಖ್ಯ ಕಾರಣವಾಯಿತು. ಬೌದ್ಧಮತಾನುಯಾಯಿಗಳು ಬಹುಸಂಖ್ಯಾತರಾಗಿರುವ ಶ್ರೀಲಂಕಾ, ಮಾಯ್ನ್ಮಾರ್ನಂಥ ದೇಶಗಳು ತಮ್ಮ ಪ್ರಜೆಗಳ ಮೇಲೆಯೇ ನಡೆಸುತ್ತ ಬಂದಿರುವ ಹಿಂಸೆ ಚರಿತ್ರೆಯ ಬಹುದೊಡ್ಡ ದುರಂತ ವಿಪರ್ಯಾಸ.
ಇಂಥ ಶ್ರೀಲಂಕಾ (ಸಿಲೋನ್ ಶ್ರೀಲಂಕಾ ಆದದ್ದು 1972ರಲ್ಲಿ) ಅಪಾರವಾದ ಕ್ರಿಕೆಟ್ ಹುಚ್ಚಿನ ದೇಶ. ಕ್ರೀಡೆಗಳು, ವಿಶೇಷವಾಗಿ ಅವುಗಳಲ್ಲಿ ಆಗೊಮ್ಮೆ ಈಗೊಮ್ಮೆ ದಕ್ಕುವ ದೊಡ್ಡ ಗೆಲುವುಗಳು, ಸಮುದಾಯಗಳ ನಡುವಿನ ಅಂತರವನ್ನು ತಗ್ಗಿಸುತ್ತವೆ, ದೇಶವನ್ನು ಒಗ್ಗೂಡಿಸುತ್ತವೆ — ಆ ಗಳಿಗೆಯಲ್ಲಾದರೂ. 1992ರ ವಿಶ್ವಕಪ್ ಅಂಥ ಒಂದು ಗಳಿಗೆ. ಅದು ಒದಗಿದ್ದು ಆಳವಾದ ಗಾಯಕ್ಕೆ ತಾತ್ಕಾಲಿಕ ಉಪಶಮನದಂತೆ. ಬಾಂಬುಗಳು ಬೀಳುತ್ತಲೇ ಹೋದುವು. ರಾಜಪಾಕ್ಸೆಯಂಥ ಬಲಿಷ್ಠ ರಾಜಕೀಯ ಕುಟುಂಬಗಳು ಆಳ್ವಿಕೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಮೇ 18, 2009ರಂದು ಅಂತರ್ಯುದ್ಧ ಕೊನೆಗೊಂಡಿತು ಎಂದು ಹೇಳಲಾಯಿತು. ಆದರೆ ನಿಜಕ್ಕೂ ಅದು ಮುಗಿದಿತ್ತೇ? ಮುಗಿದಿದೆಯೇ?
ಕರುಣಾತಿಲಕರ ಕಾದಂಬರಿಯ ಮುನ್ನೆಲೆಯಲ್ಲಿ ಕ್ರಿಕೆಟ್ ಇದ್ದರೂ ಹಿನ್ನೆಲೆಯಲ್ಲಿ ದೇಶದ ರಾಜಕೀಯ ವಿಪ್ಲವಗಳನ್ನು, ಪ್ರಕ್ಷುಬ್ಧತೆಯನ್ನು ಕಟ್ಟಿಕೊಡುವ ಪ್ರಯತ್ನವಿದೆ. ಆದರೆ ಇದು ಅರೆಮನಸ್ಸಿನ ಪ್ರಯತ್ನದಂತೆ ತೋರುತ್ತದೆ. ಒಂದು ರಾಜಕೀಯ ಕಾದಂಬರಿಯು ರಾಜಕೀಯದ ದಟ್ಟ ವಾಸನೆಯನ್ನು ಸೂಸಬೇಕೆಂದಿಲ್ಲ. ಆದರೆ ಅದನ್ನು ಆಗಮಾಡಿಸುವ ಬದ್ದತೆಯೂ ಸ್ಥೈರ್ಯವೂ ಬೇಕಾಗುತ್ತದೆ. ಕ್ರಿಕೆಟ್ನ ವಿಷಯದಲ್ಲಿ ಕಾಣುವ ಶಿಸ್ತು ಮತ್ತು ನಿಖರತೆ ಸಮಾಜ ಮತ್ತು ರಾಜಕಾರಣದಕ್ಕೆ ಬಂದಾಗ ಕಾಣದೇ ಮೇಲುಮೇಲಿನ ಹವಣಿಕೆಯಂತೆ ತೋರಿ ಆ ನಿಟ್ಟಿನಲ್ಲಿ ಕಾದಂಬರಿ ಸೋಲುತ್ತದೆ. ಐದುನೂರಕ್ಕೂ ಹೆಚ್ಚು ಪುಟಗಳುದ್ದದ ಕಾದಂಬರಿಯು ಬಹುಪಾಲು ಮನರಂಜನೆಗೆ ಪ್ರಾಧಾನ್ಯ ಕೊಡುತ್ತದೆ. ನಿರೂಪಣೆಯು ಆಳಕ್ಕಿಳಿಯದೇ ವಾಸ್ತವಿಕ ಅನುಭವವನ್ನು ದರ್ಶಿಸದೇ ಪ್ರತಿ ದುರಂತವನ್ನೂ ಅಂಕಿಅಂಶಗಳಿಗೆ ಭಟ್ಟಿ ಇಳಿಸಿಬಿಡುತ್ತದೆ. ಭಾಷೆಯ ಬಳಕೆಯ ಗಮನವು ವಿನೋದ ಮತ್ತು ಹಾಸ್ಯದ ಮಟ್ಟದಲ್ಲಿಯೇ ಉಳಿಯುವುದರಿಂದ ಪರಿಸ್ಥಿತಿಯ ಗಂಭೀರತೆ ಓದುಗನನ್ನು ಬಾಧಿಸದಂತಾಗುತ್ತದೆ. ಕಾದಂಬರಿಕಾರರ ಉದ್ದೇಶವೂ ಅದೇ ಆಗಿದ್ದಿತೇನೋ ಎಂಬ ಸಂದೇಹವೂ ಬರದಿರದು. ಚೈನಾಮನ್ ಒಂದು ಒಳ್ಳೆಯ ಕಾದಂಬರಿಯೇ. ಹಾಗಿದ್ದೂ ಅದರ ಕೊರತೆಗಳನ್ನು ಎತ್ತಿ ಹೇಳಲೇಬೇಕಾದದ್ದಕ್ಕೆ ಇನ್ನೊಂದು ಕಾರಣವಿದೆ: ಅದು ಈ ಕಾದಂಬರಿಗೆ ಇಂಗ್ಲಿಷ್ನಲ್ಲಿ ಸಂದ ಅತಿಯೆನ್ನಿಸುವ ಮನ್ನಣೆ. ಕೆಲವು ವಿಮರ್ಶಕರು ಇದನ್ನು ‘ದಿ ಗ್ರೇಟ್ ಶ್ರೀಲಂಕನ್ ನಾವೆಲ್’ ಎಂದು ಕರೆಯುವವರೆಗೂ ಹೋಗಿದ್ದಾರೆ. ಇದು ನಿಜಕ್ಕೂ ಆ ದೇಶದ ಮಹತ್ತ್ವದ ಮತ್ತು ಪ್ರಾತಿನಿಧಿಕ ಕಾದಂಬರಿಯೇ, ಸಿಂಹಳ ಅಥವಾ ತಮಿಳಿನಲ್ಲಿ ಉತ್ತಮ ಸಾಹಿತ್ಯ ಹೊರಬಂದಿಲ್ಲವೇ, ಬಂದರೂ ಅವು ಅನುವಾದಗೊಂಡಿಲ್ಲವೇ — ಇವೇ ಮೊದಲಾದ ಪ್ರಶ್ನೆಗಳು ನಮ್ಮಲ್ಲಿ ಏಳಲೇಬೇಕು. ಏಕೆಂದರೆ ಇಲ್ಲಿಯೂ ಒಂದು ನುಡಿರಾಜಕಾರಣ ಕೆಲಸ ಮಾಡುತ್ತಿದೆ.
ಕರುಣಾಸೇನನಿಗೆ ಕೊನೆಗೂ ಪ್ರದೀಪ್ ಮ್ಯಾಥ್ಯೂ ಸಿಗದಿದ್ದರೂ ಅವನ ಹುಡುಕಾಟಕ್ಕೆ ಒಂದು ತೃಪ್ತಿಕರ ಅಂತ್ಯವಂತೂ ದಕ್ಕುತ್ತದೆ. ಪ್ರದೀಪ್ ಮ್ಯಾಥ್ಯೂ ಕೂಡ ತನ್ನ ಭೂತದಿಂದ ದೂರ ಸರಿದು ಹೊಸ ಬದುಕನ್ನು ಕಟ್ಟಿಕೊಂಡಿದ್ದಾನೆ. 2022ರಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ ಶ್ರೀಲಂಕಾ ನಿಧಾನವಾಗಿ ಚೇತರಿಸಿಕೊಳ್ಳುತ್ತಲಿದೆ. ಆದರೆ ಅದನ್ನೂ ಮೀರಿ ಮತ್ತು ಅದಕ್ಕೂ ಮುಖ್ಯವಾಗಿ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ತನ್ನ ಗತಕಾಲದ ಭಾರವನ್ನು ನಿವಾರಿಸಿಕೊಂಡು ಮುನ್ನಡೆಯಬಲುದೇ? ತನ್ನ ಶ್ರೇಷ್ಠತೆಯ ಕ್ಷಣವನ್ನು ತಲುಪಬಲ್ಲುದೇ? ಬಹುತ್ವವನ್ನು ನಿರಾಕರಿಸುವ, ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ದಮನಿಸುವ ದೇಶಗಳು ನಿಜಕ್ಕೂ ಬಹುಕಾಲ ತಾಳಬಲ್ಲ ಶಾಂತಿಯನ್ನೂ ಏಳಿಗೆಯನ್ನೂ ಪಡೆಯಬಲ್ಲುವೇ ಎಂಬ ಪ್ರಶ್ನೆ ಕೊನೆಗೂ ಉಳಿಯುತ್ತದೆ.
(ಈ ಲೇಖನದ ಒಂದು ಆವೃತ್ತಿ ಈ ಮೊದಲು ಮೇ ತಿಂಗಳ 'ಸಮಾಜಮುಖಿ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.)
ಇದನ್ನೂ ಓದಿ …
ಅನುಭವಿಸಬಹುದಾದ ಆದರೆ ಅರಿಯಲಾಗದ ದುಮ್ಮಾನ
ನೊಬೆಲ್ ಪ್ರಶಸ್ತಿ ವಿಜೇತ ಟರ್ಕಿಶ್ ಕಾದಂಬರಿಕಾರ ಓರ್ಹಾನ್ ಪಮುಕ್ನ (7 ಜೂನ್ 1952) Snow (ಮೂಲ ಟರ್ಕಿಯಲ್ಲಿ ‘ಕಾರ್’) ಕಾದಂಬರಿಯ ಬಗ್ಗೆ ಕೆಲ ವಿಚಾರಗಳನ್ನು ಸಂಕೇತ ಪಾಟೀಲ ಹಂಚಿಕೊಂಡಿದ್ದಾರೆ.