ಕವಿ, ಕಥೆಗಾರ ಜಯಂತ ಕಾಯ್ಕಿಣಿ ಅವರ ತಾರಿ ದಂಡೆ 17.3.2024ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಈ ಪುಸ್ತಕದೊಳಗಿನ ಮಿಸ್ ಕೋಡಂಗಿಯ ವ್ಯಾನಿಟಿ ಬ್ಯಾಗ್ ಬರಹವನ್ನು ನೀವಿಲ್ಲಿ ಓದಬಹುದು.
ಅಕಸ್ಮಾತ್ ಅತಿಥಿಗಳು ಬಂದಾಗ ಪಕ್ಕದ ಮನೆಗೆ ಓಡಿ ಒಂದು ವಾಟಿ ಚಹಾ ಪುಡಿ ತರುವುದು, ಕೆಲಸಕ್ಕಾಗಿನ ಇಂಟರ್ವ್ಯೂಗೆ ಹೋಗುವಾಗ ಗೆಳೆಯನ ಬೂಟು ಹಾಕಿಕೊಂಡು ಹೋಗುವುದು, ಊರಿನ ಕೊನೆಯ ಬಸ್ಸು ತಪ್ಪಿದರೆ ನಿಲ್ದಾಣದ ಸಮೀಪದ ಅಪರಿಚಿತರ ಮನೆಯಲ್ಲಿ ಉಳಿದುಕೊಳ್ಳುವುದು, ಇಷ್ಟದ ಹಿರಿಯ ವಿದ್ಯಾರ್ಥಿಯ ಬಳಸಿ ಮಾಗಿದ ಪಠ್ಯ ಪುಸ್ತಕಗಳನ್ನೆ ಕಾಲು ಕಿಮ್ಮತ್ತಿಗೆ ಪಡೆದು ಎದೆಗವಚಿಕೊಂಡು ಮನೆಗೆ ತಂದು ಹೊಸ ಬೈಂಡ್ ಹಾಕಿ ಓದಲು ಆರಂಭಿಸುವುದು.. ಎಲ್ಲವೂ ಅಮೂಲ್ಯ ಸಾಮಾಜಿಕ ಋಣದ ವಿಸ್ತರಣೆ, ಬರವಣಿಗೆ ಸಹ ಅದರದೇ ಒಂದು ಕಿಂಚಿತ್ ಆಚರಣೆ.
ಜಯಂತ ಕಾಯ್ಕಿಣಿ
ಮಿಸ್ ಕೋಡಂಗಿಯ ವ್ಯಾನಿಟಿ ಬ್ಯಾಗ್
ಶಾಲೆ, ಕಾಲೇಜು ದಿನಗಳಿಂದಲೂ ನಾನಾ ನಮೂನೆಯ 'ಛದ್ಮವೇಷ' ಅಥವಾ 'ಫ್ಯಾನ್ಸಿ ಡ್ರೆಸ್' ಸ್ಪರ್ಧೆಗಳನ್ನು ನೋಡಿಕೊಂಡೇ ಬೆಳೆದವರು ನಾವೆಲ್ಲ. ಸಂಪೂರ್ಣ ವ್ಯತಿರಿಕ್ತವಾದ ವ್ಯಕ್ತಿಯನ್ನು ಅನುಕರಿಸುವುದು, ಅಣಕ ಮಾಡುವುದು ಇತ್ಯಾದಿ ಇದರಲ್ಲಿ ನಡೆಯುತ್ತಿತ್ತು. ಇದನ್ನು ಮೊಟ್ಟಮೊದಲು ನಾನು ನೋಡಿದ್ದು ನಮ್ಮ ಊರಿನ ಸುಗ್ಗಿಯ ಹಗಣ ಅಥವಾ ಹಗರಣದಲ್ಲಿ, ಅದರಲ್ಲಿ ನಾನಾ ಚಕ್ಕಡಿಗಳಲ್ಲಿ ವಿಧ ವಿಧ ವೇಷಧಾರಿಗಳಿರುತ್ತಿದ್ದರು. ನಮ್ಮ ಪಾಲಿನ ಜಂಬೂ ಸವಾರಿ ಅದು ಅಥವಾ ರಿಪಬ್ಲಿಕ್ಡೇ ಮೆರವಣಿಗೆ ಹಾಲಕ್ಕಿ ಸಮುದಾಯದವರ ಸುಗ್ಗಿಯ ಆಚರಣೆಯ ಕಲಾಭಿವ್ಯಕ್ತಿಯ ಸಂಭ್ರಮದ ಹುಣ್ಣಿಮೆ ಸಂಜೆ ಅದು. ಟೇಲರ್, ಪೋಸ್ಟ್ಮನ್, ಭೀಮ, ಹನುಮಂತ, ಶನಿ ಹೀಗೆ ನಾನಾ 'ನಮ್ಮಿ' ವೇಷ, ಭೀಮನ ಕೈಲಿ ಗದೆಯ ಬದಲಿಗೆ ತೆಂಗಿನ ಹೆಡೆ ಪೆಂಟೆ. ಹನುಮಂತನ ಸುರುಳಿ ಸುರುಳಿ ಬಾಲದ ತುದಿಗೆ ಸುರುಸುರು ಬತ್ತಿ ಇದ್ದರೆ, ಪೋಸ್ಟ್ಮನ್ 'ಕಾಗದ ಉಂಟ್ರೋ, ಮನಿ ಆರ್ಡರ್' ಎಂದು ಕೂಗುತ್ತ ಸೈಕಲ್ ಮೇಲೆ ಹಿಂದೆ ಮುಂದೆ ಘನಕಾರ್ಯ ಇದ್ದವನಂತೆ ಸುತ್ತುತ್ತಿದ್ದ. ಕೆಲವರಿಗೆ, “ಓಯ್ ನಿಲ್ಲಿ ನಿಮಗೆ ಕಾಗದ ಬಂದಿದೆ' ಎಂದು ಹರುಕು ರದ್ದಿ ಕಾಗದ ಕೊಟ್ಟು ಮುಂದುವರೆಯುತ್ತಿದ್ದ. ಈ ನಡುವೆ ನಮ್ಮೆಲ್ಲರ ಗಮನವನ್ನು ತುರ್ತಿನಲ್ಲಿ ಸೆಳೆಯುವ ವೇಷ ಅಂದರೆ ಅದು 'ಲೇಡಿ'. ಹೌದು. ಹೆಂಗಸಿನ ಪಾತ್ರ ವಹಿಸಿದ ಗಂಡಿನ ಆ ಚಕಪಕ ಸಣ್ಣ ಲಂಗ, ಅದರ ಮೇಲೆ ಬಣ್ಣದ ಬೆಲ್ಟು, ಬೆಳದಿಂಗಳ ರಾತ್ರಿಯಲ್ಲೂ ಕಣ್ಣಿಗೆ ಹಳದಿ ಅಂಚಿನ ಕಡುಗಪ್ಪು ಕನ್ನಡಕ, ಚೌರಿಯಲ್ಲಿ ಪುಟಾಣಿ ಚಕಪಕ ಬಲ್ಬುಗಳಿಂದ ಸಿಂಗರಿಸಲ್ಪಟ್ಟ ದಿವ್ಯ ಬ್ಯಾಂಡು ಮತ್ತು ಕೈಲಿ ಒಳ್ಳೆ ಆಟಿಗೆಯ ಗಿರಗಿಟ್ಟೆಯಂತೆ ಬೆರಳ ಸುತ್ತ ಚಿಮ್ಮಿಸುವ ವ್ಯಾನಿಟಿ ಬ್ಯಾಗು, ಅದು ಬೇಗಡೆ ಕಾಗದದಿಂದ ಲೇಪಿತವಾಗಿ ಚಕಪಕ ಮಿನುಗುತ್ತಿತ್ತು, ಕೆಲವು ಸಿಗರೇಟು ಪ್ಯಾಕುಗಳೊಳಗೆ ಇರುತ್ತಿದ್ದ ಹಳದಿ ಬೇಗಡೆಯ ಕಾಗದದಂತೆ.
ಕುತೂಹಲಕಾರಿ ಅಂಶವೆಂದರೆ ಆಗ ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗಳ ಸುಳಿವೇ ಇರಲಿಲ್ಲ. ಆದರೂ ಭವಿಷ್ಯದ ಹೊಳಹಿನಂತೆ, ಈ 'ಲೇಡಿ'ಯ ಸ್ವರೂಪವಿತ್ತಲ್ಲ ಅಂತ ಈಗ ಕೌತುಕ ಅನಿಸುತ್ತದೆ. ಏಕೆಂದರೆ, ಆ 'ಲೇಡಿ' ಮಾತಾಡುವುದು ಇಂಗ್ಲಿಷಿನಲ್ಲೇ ಇತ್ತು. 'ಗುಡ್ ಮಾರ್ನಿಂಗ್, ಹೌ ಡು ಯು ಡು, ಟಾಟಾ, ಬೈಬೈ' – ಎಂದಾಕೆ ಎಲ್ಲರತ್ತ ಕೈಬೀಸಿ ಒಂದು ಕೈಲಿ ಸಿಗರೇಟನ್ನೂ ಸೇದುತ್ತ ಚಿಮ್ಮುತ್ತ ನಡೆದರೆ ವೀಕ್ಷಕರಿಗೆ ಅದರಲ್ಲೂ ಹೆಂಗಳೆಯರಿಗೇ ಭಯಂಕರ ಸಂಭ್ರಮವಾಗುತ್ತಿತ್ತು. ಕೇಕೆ ಹಾಕಿ ಖುಷಿ ಪಡುತ್ತಿದ್ದರು. ಈ ನಡುವೆ ನಿಜವಾದ ಹಾವನ್ನು ಕೊರಳಿಗೆ ಸುತ್ತಿಕೊಂಡ ಮುಖಕ್ಕೆ ಮಾತ್ರ ನೀಲಿ ಮೆತ್ತಿಕೊಂಡ ಈಶ್ವರರೂ ಸುತ್ತಾಡುತ್ತಿದ್ದರು. ಒಂದು ಚಕ್ಕಡಿಯಲ್ಲಿ, ಟೇಲರ್ ವೇಷದವನು, ಕಿವಿಗೆ ಪೆನ್ಸಿಲ್ ಸಿಕ್ಕಿಸಿಕೊಂಡು, ಕೈಲಿ ಟೇಪ್ ಹಿಡಿದು ಗಿರಾಕಿಗಳ ವೇಷ ಹಾಕಿದವರ ಸೊಂಟದ ಮಾಪು ಹಿಡಿಯುವ ನೆಪದಲ್ಲಿ ಅವರಿಗೆ ಕಚಗುಳಿ ಮಾಡಿ ಅವರನ್ನೂ ವೀಕ್ಷಕರನ್ನೂ ನಗಿಸುತ್ತಿದ್ದನು. ಸ್ತ್ರೀ ಗಿರಾಕಿಯ ಪಾತ್ರಕ್ಕಂತೂ ಕುಬುಸದ ಮಾಪಿನ ನೆಪದಲ್ಲಿ ಕಂಕುಳಿಗೆಲ್ಲ ಕಚಗುಳಿ ಇಡುತ್ತ, ಆಕೆ ಆವೇಶದಿಂದ ಹೌಹಾರಿ ನಾಚುವಂತೆ ಮಾಡಿ ಜನರಿಗೆ ರಂಜನೆಯ ರಸದೌತಣವನ್ನು ಈಯುತ್ತಿದ್ದನು. ಹೀಗೆ ದೈನಿಕದಲ್ಲಿ ನೋಡಿದ್ದ, ಆದರೆ ಎಟುಕದ, ನಿಲುಕದ ಪಾತ್ರಗಳನ್ನು ಅಭಿನಯಿಸುತ್ತಲೇ ಅವುಗಳನ್ನು ಹಂಗಿಸುತ್ತಲೇ ಅದರಾಚೆ ಹೋಗುವ ನೆಗೆತ ಇದು. ವಿದೇಶಗಳಲ್ಲಿ ನಡೆಯುವ ಹ್ಯಾಲೋವೀನ್ (halloween) ಮೆರವಣಿಗೆ, ಆಶಯದಲ್ಲಿ ಬೇರೆ ಇದ್ದರೂ ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಛದ್ಮವೇಷದ ಆಕೃತಿಯಲ್ಲಿ ನಮ್ಮ ಹಗರಣಕ್ಕಿಂತ ಭಿನ್ನವಿಲ್ಲ.
ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳ ವಾರ್ಷಿಕೋತ್ಸವದ ಛದ್ಮವೇಷಗಳೂ ಆಯಾ ಊರಿನ, ಪರಿಸರದ ಪ್ರತಿಫಲನಗಳೇ ಆಗಿರುತ್ತಿದ್ದವು. ರೈತ, ವ್ಯಾಪಾರಿ, ಬಳೆಗಾರ, ರೈಲ್ವೇ ಕೂಲಿ, ಮೀನುಗಾರ್ತಿ, ಡಾಕ್ಟರ್, ಕೈಲಿ ಬೆತ್ತ ಹಿಡಿದ ಟೀಚರ್ ಹೀಗೆ. ನೋಡಿದ ಸಿನಿಮಾ, ನಾಟಕ, ಟೆಲಿವಿಜನ್ಗಳ ಮೂಲಕ ಪರಿಚಿತವಾದ ಸಂಗತಿಗಳೂ - ಬರತೊಡಗಿದವು. ಒನಕೆ ಓಬವ್ವ, ಕಿತ್ತೂರ ಚೆನ್ನಮ್ಮ, ಕ್ಯಾಲೆಂಡರಿನಿಂದಲೇ ಹುಬೇಹೂಬು ಇಳಿದು ಬಂದಂತಿದ್ದ, ಕೈಗೆ ಮುಡಿಗೆ ಮಲ್ಲಿಗೆ ಮಾಲೆ ಕಟ್ಟಿಕೊಂಡ ಶ್ವೇತಾಂಬರಿ ಶಕುಂತಲೆ, ಮುಂಡಾಸು ಸಂಭಾಳಿಸುವಲ್ಲೇ ಕಂಗಾಲಾಗಿ ನಿರತನಾದ ಪುಟಾಣಿ ಸಂಗೊಳ್ಳಿ ರಾಯಣ್ಣ, ಕೋಟು ಹಾಕಿದ ಕುವೆಂಪು, ಕೊಡೆ ಹಿಡಿದ ಬೇಂದ್ರೆ, ಮುಖದ ಎದುರು ಟಿವಿಯಂಥ ಚೌಕತೂತಿನ ರಟ್ಟು ಹಿಡಿದುಕೊಂಡು ಬಂದು ನಿಂತು ವಟವಟಗುಡುವ ವಾರ್ತಾವಾಚಕಿ, ರಟ್ಟಿನ ಮರದಲ್ಲಿ ಮುಖ ತೂರಿಸಿ, 'ನಾನು ಮರ ನಿಮಗೆ ಪ್ರಾಣವಾಯು ಕೊಡುತ್ತೇನೆ. ದಯವಿಟ್ಟು ನನ್ನ ಕಡಿಯಬೇಡಿ' ಎನ್ನುವ ವನದೇವಿ... ಹೀಗೆ, ಎಲ್ಲರೂ ಚಪ್ಪಾಳೆ ತಟ್ಟುವಾಗ ಪಾಲಕರು ಅತ್ತ ವೇಷಧಾರಿ ಮಕ್ಕಳನ್ನೂ ನೋಡದೆ ಇತ್ತ ಪ್ರೇಕ್ಷಕರನ್ನೂ ನೋಡದೆ ತೀರ್ಪುಗಾರರ ಮುಖವನ್ನೇ ನೋಡುವರು.
ಸುಮಾರು ಎಂಬತ್ತರ ದಶಕದಲ್ಲಿ ಮುಂಬಯಿಯ ಒಂದು ಶಾಲೆಯಲ್ಲಿ ನಡೆದ ಛದ್ಮವೇಷ ಸ್ಪರ್ಧೆಯ ಒಂದು ವೇಷ ಸೂಕ್ಷ್ಮ ವಿವಾದವನ್ನೇ ಸೃಷ್ಟಿಸಿತು. ಶಿವಾಜಿ ಮಹಾರಾಜ, ಚಾರ್ಲಿ ಚಾಪ್ಲಿನ್, ಟ್ರಾಫಿಕ್ ಪೊಲೀಸ್, ಕರಮ್ಚಂದ್, ಪಾನ್ವಾಲಾ - ಇವರೆಲ್ಲರ ನಡುವೆ ಪುಟ್ಟ ಸೀರೆ ಉಟ್ಟು, ದೊಡ್ಡ ಮಂಗಳಸೂತ್ರ ತೊಟ್ಟು, ಬಾಸಿಂಗ ಕಟ್ಟಿಕೊಂಡು ಬಂದ ಎಳೆ ಮದುವಣಗಿತ್ತಿ ಎಲ್ಲರನ್ನು ಸದ್ದಿಲ್ಲದೆ ಕಲಕಿಬಿಟ್ಟಳು. ಏಕೆಂದರೆ, ಅವಳು ಒಂದು ಕೈಲಿ 'ವರದಕ್ಷಿಣೆ' ಎಂದು ಬರೆದಿದ್ದ ಸೀಮೆಎಣ್ಣೆ ಕ್ಯಾನನ್ನು ಹಿಡಿದುಕೊಂಡು ಬಂದು ನಿಂತಿದ್ದಳು ಒಂದೂ ಮಾತನ್ನೂ ಆಡದೆ! ಯಾವ ವ್ಯಾಖ್ಯಾನ ವಿವರಣೆಯ ಹಂಗಿಲ್ಲದೆ ದಾರುಣ ವಾಸ್ತವದ ಎಳೆಯೊಂದನ್ನು ಜಗ್ಗಿ ಬಿಟ್ಟ ಆ ಎಳೆ ಮದುಮಗಳಿಗೆ ಮೊದಲ ಬಹುಮಾನ ಬಂತು. ಆದರೆ, ಅನಂತರ, ಅಳವನ್ನು ಮೀರಿದ ದಾರುಣತೆಯನ್ನು ಮಕ್ಕಳಲ್ಲಿ ಈಗಲೇ ಬಿತ್ತುವುದು ಸರಿಯೆ? ಅದು ವಯಸ್ಕರ, ಪಾಲಕರ ನಿಲುವಾಗಲಿಲ್ಲವೆ? - ಹೀಗೆಲ್ಲ ಪ್ರಶ್ನೆ ಬಂದವು. ಅದಕ್ಕೆ ಮಕ್ಕಳು ಟಿವಿ ಸೀರಿಯಲ್ಲು, ಸಿನಿಮಾ ನೋಡುವುದಿಲ್ಲವೆ, ಅವರ ಗ್ರಹಿಕೆಗೆ ಅದು ಬರುವುದಿಲ್ಲವೆ, ಅವರ ಅಕ್ಕಪಕ್ಕದಲ್ಲಿ ಅಥವಾ ಕುಟುಂಬದಲ್ಲೇ ವಧೂ ದಹನದಂಥ ಪ್ರಸಂಗಗಳು ಆಗಿರಬಹುದಲ್ಲವೆ? ಎಂಬ ಪ್ರತಿ ಪ್ರಶ್ನೆಗಳೂ ಬಂದವು. ಇರಬಹುದು, ಆದರೆ ಬದುಕಿನ ಕುರಿತ, ಭವಿಷ್ಯದ ಕುರಿತ ಕಲ್ಪನೆಯನ್ನೇ ವಿಕೃತಗೊಳಿಸಬಹುದಾದ ಇಂಥ ಸಂಗತಿಗಳನ್ನು ಈ ರೀತಿಯಲ್ಲಿ ಅಧಿಕೃತಗೊಳಿಸಿದಂತಾಗುವುದಿಲ್ಲವೆ ಎಂದೂ ಒಂದಿಷ್ಟು ದಿನ ಚರ್ಚೆ ನಡೆಯಿತು.
ಹೀಗೆ ಛದ್ಮವೇಷಗಾರಿಕೆ ಆಗಾಗ ಆಯಾ ಕಾಲದ ಸಾಮಾಜಿಕ ಕಲ್ಪನಾಶೀಲತೆಯನ್ನು ಪ್ರತಿಫಲಿಸುತ್ತ ಬಂದಿದೆ. ಕೇವಲ ವೇಷಭೂಷಣಗಳ ವಿಶೇಷತೆಗೆಂದೇ ಇರುವ ಕೊಡಗಿನ ಮಹಿಳೆ ಅಥವಾ ಗುಜರಾಥಿ ಮಹಿಳೆ ಅಥವಾ ನರ್ಸು - ಇಂಥವು ನಿರುಪದ್ರವಿಯಾದ ಛದ್ಮವೇಷಗಳಾಗಿದ್ದರೆ, ಕೆಲವೊಮ್ಮೆ ಅತ್ಯಂತ ಅಸೂಕ್ಷ್ಮವಾದ ಅಪಾಯಕಾರಿಯಾದ 'ಭಿಕ್ಷುಕ', 'ಹುಚ್ಚ', 'ಮೂಗ', 'ಅಂಧ' - ಹೀಗೆಲ್ಲ ಶೀರ್ಷಿಕೆ ಹೊಂದಿದ ಬೇಜವಾಬ್ದಾರಿ ಛದ್ಮವೇಷಗಳೂ ಅಣಕಗಳೂ ರಂಗಕ್ಕೆ ಬರುತ್ತವೆ. ಕೆಲವರು ಊರಲ್ಲೇ ಇರುವ ಅಂಥ ನಿಜವಾದ ಅಸಹಾಯಕ ಭಿನ್ನರನ್ನು ನೋಡಿ ಸ್ಫೂರ್ತಿ ಪಡೆದರೆ ಕೆಲವರು ತಮ್ಮ ಭಯಂಕರ ಕಲ್ಪನಾಶೀಲತೆಯನ್ನು ಅದರಲ್ಲಿ ಹಾಕುವುದುಂಟು. ಈ ಕೃತ್ಯ ಆ ಬಗೆಯ ಅಸಂಖ್ಯ ಭಿನ್ನರಿಗೆ ಯಾವ ರೀತಿಯ ಕಿಂಚಿತ್ ನೆರವನ್ನೂ ನೀಡದೆ, ಅವರ ಕುರಿತ ಕಾಳಜಿಯನ್ನೂ ಅರಿವನ್ನೂ ಎಚ್ಚರಿಸದೆ, ಅವರನ್ನು ಅಣಕ ಮಾಡಿ ಹಂಗಿಸುವಂತಾಗುತ್ತದೆ ಎಂಬುದರ ಚೂರೂ ಅರಿವಿಲ್ಲದ ಅಸೂಕ್ಷ್ಮ ರಂಜನೆ ಇದು.
ಮತಿಭ್ರಮಣೆಗೊಳಗಾದ ಭಿಕ್ಷುಕಿ ಅಂದ ತಕ್ಷಣ ಕೆದರಿದ ಕೂದಲು, ಹರಕು ಕಾಗದಗಳು, ವಿಚಿತ್ರ ಹಾವಭಾವ, ಹರಕಲು ಸೀರೆ, ನಾಟಕೀಯ ಚೀರಾಟ, ದೃಷ್ಟಿಮಾಂದ್ಯರು ಅಂದ ತಕ್ಷಣ ಕೈಲಿ ಕೋಲು ಹಿಡಿದು ಅಥವಾ ಎರಡೂ ಕೈ ಮುಂದು ಮಾಡಿ (ಸಿನಿಮಾ ಪ್ರಭಾವ) ಎಡವುತ್ತ ನಡೆಯುವುದು, ಎಡವಿದಾಗೆಲ್ಲ ಪ್ರೇಕ್ಷಕರಲ್ಲಿರುವ ವಿದ್ಯಾರ್ಥಿ ವೃಂದ ಕೇಕೆ ಹಾಕಿ ನಗುವುದು – ಇವೆಲ್ಲ ಅಕ್ಷಮ್ಯ ಸಂಗತಿಗಳು, ಮಾನವೀಯ ಕಳಕಳಿಯನ್ನೂ ಜವಾಬ್ದಾರಿಯನ್ನೂ ಎಚ್ಚರಿಸದ ಇಂಥ ಕಲಾಪ ಮಕ್ಕಳ ಮನಸ್ಸನ್ನು ಅಸೂಕ್ಷ್ಮಗೊಳಿಸು ತದೆ ಮತ್ತು ಯಾರ ಕುಟುಂಬದಲ್ಲಿ, ಬಳಗದಲ್ಲಿ ಅಂಥ ಭಿನ್ನರಿರುತ್ತಾರೋ ಅವರಿಗೆ ಮೂಕ ಹತಾಶ ವೇದನೆಯನ್ನುಂಟು ಮಾಡುತ್ತದೆ. ಅಂಥವರ ಬಗ್ಗೆ ಮನೆಯಲ್ಲಿ ಪಾಲಕರು ಯಾವ ರೀತಿಯಲ್ಲಿ ಧಾಟಿಯಲ್ಲಿ ಮಾತನಾಡುತ್ತಾರೆ ಎಂಬುದು ಸಹ ಮಕ್ಕಳ ಮನೋಭೂಮಿಕೆಯನ್ನು ರೂಪಿಸುತ್ತದೆ. ಒಂದು ಕಣ್ಣು ಅಥವಾ ಕೈ, ಕಾಲು ದುರ್ಬಲವಾಗಿರುವವರನ್ನೂ ಸ್ಫೂಲಕಾಯರನ್ನೂ ಎತ್ತರ ಕಡಿಮೆ ಇರುವವರನ್ನೂ ಸಹ ಸಮಾಜ ತುಂಬ ಅಸೂಕ್ಷ್ಮವಾಗಿ ಪ್ರಸ್ತಾಪಿಸುತ್ತಿರುತ್ತದೆ.
ಜ್ಞಾನೇಂದ್ರಿಯಗಳಲ್ಲಿ ಒಂದು ದುರ್ಬಲವಾಗಿದ್ದರೆ ಆ ವ್ಯಕ್ತಿಯ ಇತರ ಜ್ಞಾನೇಂದ್ರಿಯಗಳು ಹೆಚ್ಚಿನ ಚುರುಕನ್ನು, ಕಸುವನ್ನು ಹೊಂದಿರುವುದರ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದರ ಅಗತ್ಯ ಇದೆ. ಅವರನ್ನು ಭಿನ್ನ ಸಮರ್ಥರನ್ನಾಗಿ ಬಿಂಬಿಸಬೇಕಿದೆ. ಅದನ್ನು ಬಿಟ್ಟು ಒಂದು ನಿಷ್ಟ್ರಯೋಜಕ ‘ಕನಿಕರ’ದ ಅಚ್ಚಿನಲ್ಲಿ ಅವರನ್ನು ನೂಕಿ ಛದ್ಮವೇಷ ವ್ಯಂಗ್ಯ ಸ್ಥಿರ ಚಿತ್ರವಾಗಿಸಿಬಿಡುತ್ತದೆ.
ಸಾಹಿತ್ಯ, ಚಲನಚಿತ್ರ, ನಾಟಕಗಳಲ್ಲಿ ಅವುಗಳು ಬರುವ ರೀತಿಯೇ ಬೇರೆ. ಅಲ್ಲಿ ಒಂದು ಸಂಘರ್ಷದ, ಕಥನದ ಯಾನ ಇರುತ್ತದೆ. ಅದೊಂದು ಚಪ್ಪಟೆ ಸ್ಥಿರ ಚಿತ್ರವಾಗದೆ ಒಂದು ಜೀವಂತ ಪಾತ್ರವಾಗುತ್ತದೆ. ಅದರೊಡನೆ ಒಂದು ನಂಟು ಪ್ರಾಪ್ತವಾಗುತ್ತದೆ. ಅಲ್ಲೂ ನಡೆಯುವುದು ಪರಕಾಯ ಛದ್ಮವೇಷವೇ. ಮನುಜ ಪ್ರಪಂಚದ ವಿವಿಧ ಸ್ಥಿತಿ ಮತ್ತು ಸಾಧ್ಯತೆಗಳ ವಿನ್ಯಾಸಗಳಲ್ಲಿ ಪೃಥಃಕ್ಕರಿಸಿ ಹಾಯುವ ಛದ್ಮವೇಷಗಾರಿಕೆ ಅದು. ಪ್ರತಿ ವೇಷವೂ ಒಂದು ಪರ್ಯಾಯ ಜೀವನದ ಪ್ರವೇಶ ದ್ವಾರ. ವಾಡಿಕೆಯಿಂದ ಸಹಾನುಭೂತಿ ಪದದ ಅರ್ಥ ಕೇವಲ ಕನಿಕರ ಅಥವಾ ಕರುಣೆ ಎನ್ನುವಷ್ಟು ಸರಳೀಕೃತಗೊಂಡಿದೆ. ಸಹ ಅನುಭೂತಿ ಅದು. ಅಂತರಂಗದ ನಿಲುಕು ಅಥವಾ ವಿಸ್ತರಣೆ ಇಲ್ಲದೆ ಸಹಾನುಭೂತಿ ಇಲ್ಲ. ಇಂಥ ಸಹಾನುಭೂತಿಯ, ಪರಾನುಭೂತಿಯ ಛದ್ಮಗಾರಿಕೆಯ ಪರಮ ರೂಪಕವೇ ಕೋಡಂಗಿ ಅಥವಾ ವಿದೂಷಕ, ಯಕ್ಷಗಾನದಿಂದ ಹಿಡಿದು ಎಲ್ಲ ನಾಟಕ ರೂಪಗಳಲ್ಲೂ ಮಂಡಿತ ಕಥಾನಕದ alter-ego ಅಥವಾ ಪರ್ಯಾಯ ಸಾಕ್ಷಿಪ್ರಜ್ಞೆಯಂತೆ ಕೋಡಂಗಿ ಬರುತ್ತಾನೆ. ಉತ್ತರದ ಹಂಗಿಲ್ಲದ ಪ್ರಶ್ನೆಗಳನ್ನು ಕೇಳುವುದೇ ಅವನ ಕೆಲಸ. ಕಥನಕ್ಕೂ ತನ್ನದೇ ವ್ಯಾನಿಟಿಯ, ಜಂಭದ ಕೊಬ್ಬು ಬರುವ ಸಾಧ್ಯತೆ ಇರುತ್ತದೆ. ಆ ಬಲೂನಿಗೆ ಸೂಜಿ ಮೊನೆ ಚುಚ್ಚುವುದೂ ಅವನ ಕೆಲಸ.
ಛದ್ಮಗಾರಿಕೆಗೆ ಒಂದು ದಾರ್ಶನಿಕ ಶುಶ್ರೂಷೆ ನೀಡಿದ ಮಹಾನ್ ಕೋಡಂಗಿ ಚಾರ್ಲಿ ಚಾಪ್ಲಿನ್! ರಾಜ್ ಕಪೂರ್ನ ‘ತನ್ನ ನೋವನ್ನು ಮರೆಸಿ ಲೋಕವನ್ನು ನಗಿಸುವ ಜೋಕರ್’ನ ಕಲ್ಪನೆ ಸ್ವಲ್ಪ ಸರಳೀಕೃತವಾದದ್ದು. ದಶಕಗಳಷ್ಟು ತಯಾರಿ ಮಾಡಿ ರೂಪಿಸಿದ್ದ ಅವನ ಮಹತ್ವಾಕಾಂಕ್ಷೆಯ ಮೂರಂಕಿನ ‘ಮೇರಾ ನಾಮ್ ಜೋಕರ್’ ಜನಮನ್ನಣೆ ಪಡೆಯದೇ ಹೋದ ಬಗ್ಗೆ ಸಾಕಷ್ಟು ಜಿಜ್ಞಾಸೆ ನಡೆದಿದೆ. ನನ್ನ ಪ್ರಕಾರ ಅದರ ಸೋಲಿಗೆ ಎರಡು ಮಧ್ಯಂತರಗಳ ಕಥನದ ಸುದೀರ್ಘತೆ ಅಥವಾ ಭಗ್ನ ಪ್ರೇಮದ ಸರಮಾಲೆ - ಇವು ಕಾರಣವಲ್ಲ. ಬದಲಿಗೆ ಚಿತ್ರದುದ್ದಕ್ಕೂ ಮೆರೆದ ಕೋಡಂಗಿಯ ಆತ್ಮ ಮರುಕ ಅಥವಾ ಆತ್ಮಸಮ್ಮೋಹ. ಅದೇ ಆ ಚಿತ್ರದ ಜೀವಾಂಶವನ್ನು ನಿಸ್ತೇಜಗೊಳಿಸಿತು. ತನಗಾದ ಗಾಯಗಳನ್ನು ಸಿಂಗರಿಸಿಕೊಂಡು ಸಹಾನುಭೂತಿಗಾಗಿ ಯಾಚಿಸುವ ಜೋಕರ್ ವೀಕ್ಷಕನನ್ನು ಸೆಳೆದು ಬಿಡುಗಡೆ ಮಾಡಲಿಲ್ಲ. ಹಾಗೆ ನೋಡಿದರೆ, ‘ಚೋರ ಚರಣದಾಸ’ ನಾಟಕದ ಕಳ್ಳ ಚರಣದಾಸ, ಚಾಪ್ಲಿನ್ ಶಾಲೆಯ ಅದ್ಭುತ ಪಾತ್ರ. ಶೇಕ್ಸ್ಪಿಯರ್ನ ನಾಟಕಗಳಲ್ಲಿ ಬರುವ ಮೂರ್ಖ, ಮೃಚ್ಛಕಟಿಕದ ಅಸಂಗತ ಶಕಾರ, ತೆನಾಲಿರಾಮ, ಮುಲ್ಲಾ ನಸ್ರುದ್ದೀನ್, ಬೀರ್ಬಲ್ ಇವರೆಲ್ಲ ಅಂಥ ಛದ್ಮಭೂಷಣರೇ. ಆತ್ಮ ವಿಮುಖತೆಯೇ ಅವರೆಲ್ಲರ ಛದಗಾರಿಕೆಯ ಚಿಮ್ಮುಹಲಗೆ.
ಆತ್ಮ ನಿವೇದನೆ, ಆತ್ಮ ಪರಾಮರ್ಶೆ, ಆತ್ಮ ವಿಮುಖತೆ ಎಂದು ಹೇಳುವಾಗ ಈ ಆತ್ಮ ಅನ್ನೋದು ಕೇವಲ ಒಬ್ಬ ವ್ಯಕ್ತಿಯ ಅಥವಾ ಪಾತ್ರದ ಅಥವಾ ಪ್ರತಿಪಾದಕನ ಅಥವಾ ನಿರೂಪಕನ ಆತ್ಮವಾಗದೆ ಎಲ್ಲರಲ್ಲೂ ಬೆರೆತು ಹೋಗಿರುವ ಸಂಯುಕ್ತವಾದ ಆತ್ಮ ಎಂದು ಅಂದುಕೊಂಡರೆ ಮಾತ್ರ ಅಲ್ಲಿ ದರ್ಶನದ ಸಾಧ್ಯತೆ ಇದೆ. ಆತ್ಮ ವಿಮುಖತೆಯೇ ಎಲ್ಲ ಕಲೆಯ ಹವಣು, ಚಡಪಡಿಕೆ, ಸ್ವಂತದಿಂದ ವಿಮುಖನಾದಾಗಲೇ ಅವನು ಕೋಡಂಗಿ! ಆಗಲೇ ಆತ ಮನುಜ ಸಮಾಜದ ಆತ್ಮಸಾಕ್ಷಿಯಾಗುತ್ತಾನೆ. ಸೂಕ್ಷ್ಮ ಗೆರೆ ದಾಟುವ ಮಾಯಾ ಕ್ಷಣ ಅದು. ಕೋಡಂಗಿಯ ಛದ್ಮಗಾರಿಕೆ ಎಲ್ಲ ಕಲೆಗಳ ಆತ್ಯಂತಿಕ ನೆಲೆಯ ಸೂಕ್ಷ್ಮರೂಪಕ. ‘ದರ್ಶನ’ ಕಲೆಯಾಗಬೇಕಿದ್ದ ಎಲ್ಲವೂ ಹುಲು ‘ಪ್ರದರ್ಶನ’ ಕಲೆ ಮಾತ್ರ ಆಗಿ ಬಿಡುತ್ತಿರುವ ಇಂದಿನ ಸಂಕಟದ ಮೂಲ ಕಾರಣ: ಕೇವಲ ಓರ್ವನಲ್ಲೇ ಮನೆಮಾಡಿದೆ ಎಂದುಕೊಂಡ ಆತ್ಮದ ಕುರಿತ ವ್ಯಾಮೋಹವೇ ಆಗಿದೆ. ಚೂರು ಕಣ್ಣುಜ್ಜಿ, ಕಣ್ಣೆತ್ತಿ ಆಚೆ ನೋಡಿದರೂ ಸಾಕು, ಸುಗ್ಗಿಯ ಹಗರಣದ ಸಂತೆಯಲ್ಲಿ ವ್ಯಾನಿಟಿ ಬ್ಯಾಗ್ ತಿರುಗಿಸುತ್ತಿರುವ ‘ಲೇಡಿ’ ಕಣ್ಣು ಹೊಡೆದು ನಕ್ಕು ನಮ್ಮನ್ನು ಛಕ್ಕೆಂದು ಗೆರೆ ದಾಟಿಸಿ ಬಿಡಬಹುದು.
ಕೃತಿ : ತಾರಿ ದಂಡೆ (ಪ್ರತಿಫಲನಗಳು)
ಲೇಖಕರು : ಜಯಂತ ಕಾಯ್ಕಿಣಿ
ಪ್ರಕಾಶನ : ಅಂಕಿತ ಪುಸ್ತಕ
ಪುಟ : 192
ಬೆಲೆ : 250
ಮುಖಪುಟ ಕಲೆ : ರಾವ್ ಬೈಲ್
ಮುಖಪುಟ ವಿನ್ಯಾಸ : ಅಪಾರ
ಖರೀದಿಗೆ ಸಂಪರ್ಕ : 90191 90502
ಜಯಂತ ಕಾಯ್ಕಿಣಿ
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಕಾಯ್ಕಿಣಿಯವರು ವಾಸವಾಗಿರುವುದು ಬೆಂಗಳೂರಿನಲ್ಲಿ. ಕನ್ನಡದ ಪ್ರಮುಖ ಕಥೆಗಾರರು ಮತ್ತು ಕವಿಗಳಾದ ಇವರು ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ, ಗೀತರಚನೆ ಮತ್ತು ಹಲವಾರು ಪ್ರಕಾರ ಬರೆವಣಿಗೆಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ನೀಲಿಮಳೆ, ಒಂದು ಜಿಲೇಬಿ, ವಿಚಿತ್ರಸೇನನ ವೈಖರಿ- ಕವನ ಸಂಕಲನಗಳು. ತೆರೆದಷ್ಟೇ ಬಾಗಿಲು, ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ, ಬಣ್ಣದ ಕಾಲು, ತೂಫಾನ್ ಮೇಲ್, ಚಾರ್ ಮಿನಾರ್, ಅನಾರ್ಕಲಿಯ ಸೇಫ್ಟಿ ಪಿನ್- ಕಥಾಸಂಕಲನಗಳು. ಸೇವಂತ ಪ್ರಸಂಗ, ಜತೆಗಿರುವನು ಚಂದಿರ, ಇತಿ ನಿನ್ನ ಅಮೃತಾ-ನಾಟಕಗಳು. ಬೊಗಸೆಯಲ್ಲಿ ಮಳೆ, ಶಬ್ದತೀರ ಇವು ಅಂಕಣಗಳು. ಎಲ್ಲೋ ಮಳೆಯಾಗಿದೆ- ಚಿತ್ರಗೀತೆಗಳ ಸಂಕಲನ.
ಮುದ್ರಣಕ್ಕೆ/ಬಿಡುಗಡೆಗೆ ಸಿದ್ಧವಾಗುತ್ತಿರುವ ನಿಮ್ಮ ಕೃತಿಗಳ ಆಯ್ದ ಭಾಗಗಳ ಪ್ರಕಟಣೆಗಾಗಿ ಸಂಪರ್ಕಿಸಿ team@konaru.org
ಇದನ್ನೂ ಕಣ್ಣಾಡಿಸಿ…