"ಭಯದ ಕಾರಣಕ್ಕೇನೇ ಕೈಯಲ್ಲಿದ್ದದ್ದೂ ಜಾರಿ ಹೋಗತ್ತೆ"
ಫ್ಯೊದೋರ್ ದಾಸ್ತೋವ್ಸ್ಕಿಯ "ಅಪರಾಧ ಮತ್ತು ಶಿಕ್ಷೆ"ಯ ಒಂದು ಅಧ್ಯಾಯ
ಫ್ಯೊದೋರ್ ದಾಸ್ತೋವ್ಸ್ಕಿಯ ಅಪರಾಧ ಮತ್ತು ಶಿಕ್ಷೆ ಕಾದಂಬರಿಯನ್ನು ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ್ದಾರೆ. ಅಭಿರುಚಿ ಪ್ರಕಾಶನದಿಂದ ಪ್ರಕಟಗೊಂಡ ಈ ಕೃತಿಯು ನವೆಂಬರ್ 18ರಂದು ಮೈಸೂರಿನಲ್ಲಿ ಬಿಡುಗಡೆಗೊಳ್ಳುತ್ತಿದೆ. ಆಯ್ದ ಅಧ್ಯಾಯ ನಿಮ್ಮ ಓದಿಗೆ.
ಕಾದಂಬರಿಯನ್ನು ಹೇಗೆ ಕಲ್ಪಿಸಿಕೊಂಡ ಹೇಗೆ ಬರೆದ ಅನ್ನುವುದಕ್ಕಿಂತ ಅದು ನಮ್ಮ ಕಣ್ಣ ಮುಂದೆ ನೀಡುವ ಪ್ರದರ್ಶನ ಮುಖ್ಯವಾಗಬೇಕು. ಕಾದಂಬರಿಯನ್ನು ಸಾರಾಂಶ ರೂಪವಾಗಿ ಹೇಳಲು ಸಾಧ್ಯವಿಲ್ಲ. ದನಿಯಲ್ಲಿ, ಪಲುಕಿನಲ್ಲಿ, ಒಂದೊಂದು ಪಾತ್ರ ರೂಪುಗೊಳ್ಳುವ ಬಗೆಯಲ್ಲಿ ಒಂದೊಂದೂ ದೃಶ್ಯದಲ್ಲಿ ನಮಗಾಗುವ ಅನುಭವವಿದೆಯಲ್ಲ ಅದು ಕಾವ್ಯಾನುಭವ. ಈ ಅನುವಾದವೇ ಕಾದಂಬರಿಯ ಒಂದು ವ್ಯಾಖ್ಯಾನ.
ಟಾಲ್ಸ್ಟಾಯ್ನ ಲೋಕ ಮತ್ತು ಭಾಷೆ ನನಗೆ ಪರಿಚಿತ ಅನಿಸಿದ ಹಾಗೆ ದಾಸ್ತೋವ್ಸ್ಕಿಯ ಲೋಕ ಮತ್ತು ಭಾಷೆ ಪರಿಚಿತವಲ್ಲ. ಯಾವುದೇ ಒಂದು ಅನುವಾದಕ್ಕೆ ಬದ್ಧನಾಗದೆ ನಾನು ಓದಿದ ಕ್ರೈಮ್ ಅಂಡ್ ಪನಿಶ್ಮೆಂಟ್ ಕಾದಂಬರಿ ನೀಡಿದ ಅನುಭವಕ್ಕೆ ಹತ್ತಿರವಾದುದನ್ನು ಈಗಿನ ಕನ್ನಡ ಓದುಗರಿಗೆ ನೀಡಬಲ್ಲಂಥ ಅನುವಾದ ಮಾಡಲು ಯತ್ನಿಸಿದ್ದೇನೆ. ವಾಕ್ಯರಚನೆ, ಗದ್ಯದ ಲಯ ಇವೆಲ್ಲ ಕನ್ನಡಕ್ಕೆ ಸಹಜವಾಗಿರಬೇಕೇ ಹೊರತು ರಶಿಯನ್ ಭಾಷೆಯಲ್ಲಿ ಬರೆದು ಇಂಗ್ಲಿಷ್ ಭಾಷೆಯಲ್ಲಿ ನಾನು ಓದಿದ ಬರಹಕ್ಕೆ ಅಲ್ಲ ಎಂದು ನಂಬಿ ಅನುವಾದಿಸಿದ್ದೇನೆ. ಈ ಕಾದಂಬರಿಯನ್ನು ಅನುವಾದ ಮಾಡುವಾಗ ಈ ಕೆಲಸ ಬ್ರದರ್ಸ್ ಕರಮಝೋವ್ ಅನುವಾದಕ್ಕೆ ಸಿದ್ಧತೆಯಾಗಬೇಕು ಎಂಬ ಉದ್ದೇಶವಿತ್ತು. ಧರ್ಮ, ತತ್ವಶಾಸ್ತ್ರ, ಮನೋಲೋಕ, ಭೌತಿಕ ವಿವರ ಎಲ್ಲವನ್ನೂ ಒಳಗೊಂಡ ಆ ಕಾದಂಬರಿಯ ಅನುವಾದ ನನ್ನ ಅಳವಿಗೆ ಮೀರಿದ್ದು ಅನ್ನಿಸಿ ಸುಮ್ಮನಾಗಿದ್ದೇನೆ. ಎಂಎ ದಿನಗಳಿಂದಲೂ ನನ್ನೊಳಗೆ ಮನೆ ಮಾಡಿಕೊಂಡು ಸುತ್ತಾಡುತ್ತಿದ್ದ ಈ ಕಾದಂಬರಿಯನ್ನು ನನಗೆ ಸಾಧ್ಯವಾದ ಕನ್ನಡದಲ್ಲಿ ಹೀಗೆ ನಿಮಗೆ ಒಪ್ಪಿಸಿದ್ದೇನೆ.
ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ
ಜುಲೈ ಶುರುವಾಗಿತ್ತು, ಹೊತ್ತಿಳಿಯುತ್ತಿದ್ದರೂ ಬಹಳ ಧಗೆ ಇತ್ತು. ಯುವಕನೊಬ್ಬ ಎಸ್--ವೈ ಬೀದಿಯಲ್ಲಿದ್ದ ತನ್ನ ಬಾಡಿಗೆ ರೂಮಿನಿಂದ ಆಚೆಗೆ ಬಂದ. ನಿಶ್ಚಯವಿಲ್ಲದವನ ಹಾಗೆ ನಿಧಾನವಾಗಿ ಕೆ-ಎನ್ ಸೇತುವೆಯ ಕಡೆಗೆ ನಡೆದ.
ಆ ಯುವಕ ಓನರಮ್ಮನ ಕಣ್ಣು ತಪ್ಪಿಸಿ ರೂಮಿನಿಂದ ಇಳಿದು ಬಂದಿದ್ದ. ಅವನ ರೂಮು ಐದಂತಸ್ತಿನ ಎತ್ತರವಾದ ಕಟ್ಟಡದಲ್ಲಿ ಚಾವಣಿಯ ಕೆಳಗೆ ಒತ್ತಿ ತೂರಿಸಿದಂತೆ ಇತ್ತು. ಅದು ರೂಮಲ್ಲ ಇಕ್ಕಟ್ಟಾದ ಬೀರು ಅನ್ನುವ ಹಾಗಿತ್ತು. ಅವನ ರೂಮಿನ ಕೆಳಗಿನ ಮಹಡಿಯಲ್ಲಿ ಓನರಮ್ಮ ವಾಸವಾಗಿದ್ದಳು. ಅವನು ಕೊಡುವ ಬಾಡಿಗೆಗೆ ಓನರಮ್ಮನೇ ಅವನಿಗೆ ಊಟ ಕಳಿಸುತ್ತಿದ್ದಳು. ರೂಮು ಸ್ವಚ್ಛ ಮಾಡುವುದಕ್ಕೆ ಆಳನ್ನೂ ಕಳಿಸುತ್ತಿದ್ದಳು. ಅವನು ಎಲ್ಲಿಗೆ ಹೋಗಬೇಕಾದರೂ ಓನರಮ್ಮನ ಅಡುಗೆ ಮನೆ ದಾಟಿಯೇ ಹೋಗಬೇಕಾಗಿತ್ತು. ಅವಳ ಅಡುಗೆ ಮನೆಯ ಬಾಗಿಲು ಮಹಡಿ ಮೆಟ್ಟಿಲು ಕಾಣುವ ಹಾಗೆ ಸದಾ ತೆರೆದಿರುತ್ತಿತ್ತು. ಆ ಬಾಗಿಲು ದಾಟಿ ಹೋಗುವಾಗೆಲ್ಲ ಅವನಿಗೆ ಕಸಿವಿಸಿಯಾಗುತ್ತಿತ್ತು. “ನಾನು ಹೇಡಿ,” ಅನ್ನಿಸುತಿತ್ತು. ನಾಚಿಕೆಯಾಗುತ್ತಿತ್ತು. ತೀರಿಸಬೇಕಾದ ಸಾಲ ಬೆಳೆದಿತ್ತು. ಅವಳ ಮುಖ ನೋಡುವುದಕ್ಕೆ ಅಂಜಿಕೆಯಾಗುತ್ತಿತ್ತು.
ಅವನು ಹೇಡಿಯೂ ಅಲ್ಲ, ದಬ್ಬಾಳಿಕೆಗೆ ಸಿಕ್ಕಿದವನೂ ಅಲ್ಲ. ಈ ಗುಣಗಳಿಗೆ ತದ್ವಿರುದ್ಧ ಸ್ವಭಾವ ಅವನದು. ಇತ್ತೀಚೆಗೆ ಮಾತ್ರ ಬಹಳ ಬೇಗ ಕೆರಳುತ್ತಿದ್ದ. ಬಿಗಿದುಕೊಂಡಿರುತ್ತಿದ್ದ. ತಮಗೆ ಕಾಯಿಲೆ ಎಂದು ಭ್ರಮಿಸಿ ಕಳವಳಪಡುವ ಹೈಟೊಕಾಂಡ್ರಿಯಾಕ್ಗಳು ಇರುತ್ತಾರಲ್ಲ, ಹಾಗಿದ್ದ ಅವನು. ಎಲ್ಲದರಿಂದಲೂ ಎಲ್ಲರಿಂದಲೂ ದೂರವಾಗಿ ತನ್ನೊಳಗೇ ಮುಳುಗಿರುತ್ತಿದ್ದ. ಓನರಮ್ಮ ಮಾತ್ರವಲ್ಲ ಯಾರನ್ನು ಮಾತಾಡಿಸುವುದಕ್ಕೂ ಅಂಜುತ್ತಿದ್ದ. ಬಡತನಕ್ಕೆ ಸಿಕ್ಕಿ ನುಚ್ಚುನೂರಾಗಿದ್ದ, ಹಾಗಿದ್ದರೂ ಅವನಿಗೆ ಬಡತನದ ಬಗ್ಗೆ ಚಿಂತೆಯಾಗಲೀ ಕಳವಳವಾಗಲೀ ಇರಲಿಲ್ಲ. ದಿನನಿತ್ಯದ ಲೌಕಿಕ ವ್ಯವಹಾರಕ್ಕೆ ಗಮನ ಕೊಡುವುದನ್ನು ಪೂರಾ ಬಿಟ್ಟಿದ್ದ. ಯಾವ ಓನರನ್ನೂ ಕೇರು ಮಾಡುತ್ತಿರಲಿಲ್ಲ. ಮಹಡಿ ಮೆಟ್ಟಿಲ ಮೇಲೆ ಅವಳು ಅಡ್ಡಹಾಕಿ ನಿಲ್ಲಿಸುವುದು, ಅಸಂಬದ್ಧವಾಗಿ ವಟವಟ ಮಾತಾಡುತ್ತ ಬಾಡಿಗೆ ಕೊಡಬೇಕು ಅನ್ನುವ ವರಾತ ಹಚ್ಚುವುದು, ಅವಳು ಹಾಕುವ ಒಣ ಬೆದರಿಕೆಗೆ, ಕೊನೆಯಿರದ ದೂರುಗಳ ಸರಮಾಲೆಗೆ ಕೊರಳೊಡ್ಡುವುದು, ಏನು ಸುಳ್ಳು ಹೇಳಲೆಂದು ತಲೆ ಕೆಡಿಸಿಕೊಳ್ಳುವುದು ಇವನ್ನೆಲ್ಲ ಅನುಭವಿಸುವುದಕ್ಕಿಂತ ಅವಳ ಕಣ್ಣಿಗೆ ಬೀಳದೆ ನುಸುಳಿ ಬೆಕ್ಕಿನ ಹಾಗೆ ತಪ್ಪಿಸಿಕೊಂಡು ಹೋಗುವುದೇ ವಾಸಿ ಅನಿಸುತ್ತಿತ್ತು…
ಇವತ್ತು ಸಾಯಂಕಾಲ ಮಾತ್ರ ಅವನು ಹೊರಡುತ್ತಿದ್ದ ಹಾಗೇ ಸಾಲ ಕೊಟ್ಟವಳ ಬಗ್ಗೆ ಭಯ ಹುಟ್ಟಿತ್ತು.
“ಅಂಥಾ ಕೆಲಸ ಮಾಡಬೇಕು ಅಂದುಕೊಳ್ಳತೇನೆ. ಇಂಥಾ ಚಿಲ್ಲರೆ ವಿಚಾರಕ್ಕೆಲ್ಲ ಹೆದರತೇನೆ,” ಅಂದುಕೊಳ್ಳುತ್ತ ವಿಚಿತ್ರವಾಗಿ ನಕ್ಕ. 'ಹೂಂ. ಎಲ್ಲಾನೂ ಮನುಷ್ಯನ ಕೈಯಲ್ಲಿರತ್ತೆ, ಭಯದ ಕಾರಣಕ್ಕೇನೇ ಕೈಯಲ್ಲಿದ್ದದ್ದೂ ಜಾರಿ ಹೋಗತ್ತೆ. ಸತ್ಯವಾದ ಮಾತು... ಮನುಷ್ಯರಿಗೆ ಯಾವುದರ ಬಗ್ಗೆ ಜಾಸ್ತಿ ಭಯ? ಹೊಸ ದಾರಿ ಹಿಡಿಯುವುದಕ್ಕೆ ಭಯ. ಅನ್ನಿಸಿದ ಹೊಸ ಮಾತು ಆಡುವುದಕ್ಕೆ ಭಯ. ಬಹಳ ಮಾತಾಡತಿದ್ದೇನೆ... ಮಾತು ಹೆಚ್ಚು, ಅದಕ್ಕೇ ನಾನು ಏನೂ ಮಾಡತಾ ಇಲ್ಲ... ಅಥವಾ ಏನೂ ಮಾಡತಾ ಇಲ್ಲ. ಅದಕ್ಕೇ ಬಡಬಡ ಮಾತು ಆಡತಾನೂ ಇರಬಹುದು. ಹೋದ ತಿಂಗಳಿನಿಂದ ಮನಸ್ಸಿನಲ್ಲೇ ಗೊಡ್ಡು ಮಾತು ಆಡಿಕೊಳ್ಳುವುದು ಹೆಚ್ಚಾಗಿದೆ. ಹಗಲೂ ರಾತ್ರಿ ಮೂಲೆಯಲ್ಲಿ ಬಿದ್ದುಕೊಂಡು ಆಗದ ಹೋಗದ ಕನಸು ಕಾಣುವುದೇ ಆಯಿತು. ಈಗ ಯಾಕೆ ಹೋಗತಾ ಇದೇನೆ ಅಲ್ಲಿಗೆ? ನನ್ನ ಕೈಯಲ್ಲಿ ಆಗತ್ತಾ ಅದು? ನಿಜವಾಗಲೂ ಮುಖ್ಯವಾದ ಕೆಲಸವಾ ಅದು? ಇಲ್ಲ. ಸುಮ್ಮನೆ ಆಟಕಟ್ಟತಾ ಇದೇನೆ, ಖುಷಿಗೆ ಕನಸು ಕಾಣತಾ ಇದೇನೆ. ಆಟ! ನಿಜ, ಇದೆಲ್ಲ ಬರೀ ಆಟ!”
ಭಯಂಕರ ಧಗೆ ಇತ್ತು. ಗಾಳಿ ಇರಲಿಲ್ಲ. ಜನಗಳ ದಟ್ಟಣೆ, ಸಾರುವೆ, ಇಟ್ಟಿಗೆ, ಗಾರೆ; ಎಲ್ಲೆಲ್ಲೂ ಧೂಳು, ಬಿಸಿಲು ತಪ್ಪಿಸಿಕೊಳ್ಳಲು ಬೇರೆಲ್ಲೂ ಹೋಗಲಾರದವರಿಗೆ ಚೆನ್ನಾಗಿ ಗೊತ್ತಿರುವ ಪೀಟರ್ಸ್ಬರ್ಗಿನ ಬೇಸಗೆಯ ದುರ್ವಾಸನೆ, ಇವೆಲ್ಲವೂ ಒಟ್ಟುಗೂಡಿ ಮೊದಲೇ ತಳಮಳಗೊಂಡಿದ್ದ ಯುವಕನ ಮನಸ್ಸನ್ನು ಇನ್ನಷ್ಟು ಘಾಸಿ ಮಾಡಿದ್ದವು. ಊರಿನ ಆ ಭಾಗದಲ್ಲಿ ಧಂಡಿಯಾಗಿದ್ದ ಹೆಂಡದಂಗಡಿಗಳಿಂದ ಬರುತ್ತಿದ್ದ ಅಸಹ್ಯ ವಾಸನೆ, ಹೆಜ್ಜೆ ಹೆಜ್ಜೆಗೂ ಸಿಗುತ್ತಿದ್ದ ಕುಡುಕರು, ಇವೆಲ್ಲವೂ ಅವನ ಊರಿನ ಚಿತ್ರಕ್ಕೆ ವಿಷಾದದ ಬಣ್ಣ ಬಳಿದಿದ್ದವು. ಯುವಕನ ಚಂದದ ಮುಖದ ಮೇಲೆ ಅಸಹ್ಯದ ಭಾವ ಹಾದು ಹೋಯಿತು. ಅಂದ ಹಾಗೆ, ಆ ಯುವಕ ನೋಡುವುದಕ್ಕೆ ತೆಳ್ಳಗೆ ಎತ್ತರವಾಗಿ ತುಂಬ ಚೆನ್ನಾಗಿದ್ದ; ಕಪ್ಪು ಕಣ್ಣು, ತಲೆ ತುಂಬ ಕಂದು ಕೂದಲು. ಆಳವಾದ ಯೋಚನೆಯಲ್ಲಿ ಮುಳುಗಿದ್ದ ಅವನು. ಅಥವಾ, ಸರಿಯಾಗಿ ಹೇಳಬೇಕೆಂದರೆ ಅವನ ಮನಸ್ಸು ಮರವೆಯಲ್ಲಿ ಅದ್ದಿಹೋಗಿತ್ತು. ಸುತ್ತಲೂ ಇರುವ ಏನನ್ನೂ ಗಮನಿಸದೆ, ಗಮನಿಸುವ ಮನಸ್ಸಿಲ್ಲದೆ ನಡೆದ. ಆಗಾಗ ತನ್ನಷ್ಟಕ್ಕೇ ಏನೋ ಗೊಣಗಿಕೊಳ್ಳುತ್ತಿದ್ದ, ಇಂಥ ಅಭ್ಯಾಸದಿಂದ ಯಾಕೋ ಯೋಚನೆಗಳೆಲ್ಲ ಕಲಸಿ ಹೋಗುತ್ತಿವೆ, ತೀರ ಸುಸ್ತಾಗುತ್ತಿದೆ ಅನ್ನಿಸಿತು. ಹೊಟ್ಟೆಗೆ ಏನೂ ಇಲ್ಲದೆ ಎರಡು ದಿನ ಕಳೆದಿದ್ದ ಅವನು.
ಅವನು ತೊಟ್ಟಿದ್ದ ದಿರಿಸು, ಎಂತೆಂಥದೋ ತೊಟ್ಟು ಓಡಾಡುವವರು ಕೂಡ ಹಗಲು ಹೊತ್ತಿನಲ್ಲಿ ಅದನ್ನು ತೊಟ್ಟು ಬೀದಿಯಲ್ಲಿ ಹೆಜ್ಜೆ ಹಾಕುವುದಕ್ಕೆ ನಾಚುವಷ್ಟು ದರಿದ್ರವಾಗಿತ್ತು. ಆದರೂ ಊರಿನ ಆ ಭಾಗದಲ್ಲಿ ಯಾರು ಎಂಥಾ ಅಧ್ವಾನವಾದ ಬಟ್ಟೆ ತೊಟ್ಟಿದ್ದರೂ ಯಾರಿಗೂ ಆಶ್ಚರ್ಯವಾಗುತ್ತಿರಲಿಲ್ಲ. ಕುದುರೆಗೆ ಹುಲ್ಲು, ಹುರುಳಿ ಮಾರುವ ಹೇ-ಮಾರ್ಕೆಟ್ಟಿಗೆ ಹತ್ತಿರದಲ್ಲಿದ್ದ ಈ ಬೀದಿ ಈ ಗಲ್ಲಿಗಳಲ್ಲಿ ಕೆಲವು ಬಗೆಯ ವ್ಯವಹಾರಗಳು ಹೇರಳವಾಗಿ ನಡೆಯುತ್ತಿದ್ದವು. ಕಮ್ಮಾರ, ಬಡಗಿಯಂಥ ಕಸುಬುದಾರರೂ ಗಾರೆಯವರೂ, ಕೂಲಿಯವರೂ, ಹಮಾಲರೂ, ಸಣ್ಣ ಪುಟ್ಟ ಅಂಗಡಿಗಳವರೂ ಕಿಕ್ಕಿರಿದಿದ್ದ ಪೀಟರ್ಸ್ಬರ್ಗಿನ ಈ ಹೃದಯಭಾಗದಲ್ಲಿ ಎಂತೆಂಥಾ ಥರಾವರಿ ಜನ ಕಾಣಿಸುತ್ತಿದ್ದರು ಅಂದರೆ, ಎಷ್ಟೇ ವಿಚಿತ್ರವಾಗಿರುವ ಮನುಷ್ಯನನ್ನು ಕಂಡರೂ ಯಾರಿಗೂ ಆಶ್ಚರ್ಯವಾಗುತ್ತಿರಲಿಲ್ಲ. ಯುವಕ ಸೂಕ್ಷ್ಮ ಸ್ವಭಾವದವನಾಗಿದ್ದರೂ ಹರಕಲು ಬಟ್ಟೆ ತೊಡುವುದು ನಾಚಿಕೆಗೇಡು ಅನ್ನಿಸಲಾಗದಷ್ಟು ಕಹಿ, ತಿರಸ್ಕಾರ, ಅವನ ಮನಸಿನಲ್ಲಿ ತುಂಬಿದ್ದವು. ಹಳೆಯ ಗೆಳೆಯರನ್ನೂ ಭೇಟಿಯಾಗಲು ಇಷ್ಟವಿರದ ಪರಿಚಯಸ್ಥರನ್ನೋ ಕಂಡರೆ ಆ ಮಾತೇ ಬೇರೆಯಾಗುತ್ತಿತ್ತು. ಹಾಗಿದ್ದರೂ ಏನಾಯಿತೆಂದರೆ, ಅತ್ತಲೇ ಬರುತ್ತಿದ್ದ, ಭಾರೀ ಕುದುರೆಯನ್ನು ಕಟ್ಟಿದ ಭಾರೀ ಗಾಡಿಯಲ್ಲಿ ಕುಡುಕನೊಬ್ಬನನ್ನು ಯಾರೋ ಎಲ್ಲಿಗೋ ಕರೆದುಕೊಂಡು ಹೋಗುತ್ತಿದ್ದರು. ಆ ಕುಡುಕ ಯುವಕನತ್ತ ಬೆರಳು ಮಾಡಿ, “ಏಯ್, ಜರ್ಮನ್ ಹ್ಯಾಟೂ,” ಎಂದು ಗಂಟಲು ಕಿತ್ತು ಹೋಗುವ ಹಾಗೆ ಕೂಗಿದ. ಯುವಕ ತಟ್ಟನೆ ನಿಂತು ನಡುಗುತ್ತಿದ್ದ ಕೈಯಲ್ಲಿ ಹ್ಯಾಟನ್ನು ಭದ್ರವಾಗಿ ಹಿಡಿದುಕೊಂಡ. ಅದು ಉದ್ದನೆಯ ಕೊಳವೆಯ ಆಕಾರದ ಝಿಮ್ಮರ್ಮನ್* ಹ್ಯಾಟು. ನವೆದು ಹೋಗಿತ್ತು, ಬಣ್ಣ ಮಾಸಿತ್ತು, ತೂತಾಗಿತ್ತು, ಅಲ್ಲಲ್ಲಿ ಕಲೆ ಮೆತ್ತಿಕೊಂಡಿತ್ತು, ತೀರ ಅಸಡ್ಡಾಳವಾಗಿ ಒಂದು ಪಕ್ಕಕ್ಕೆ ವಾಲಿಕೊಂಡಿತ್ತು. ನಾಚಿಕೆಯಲ್ಲ, ಭಯದಂಥ ಭಾವ ಯುವಕನ ಮನಸ್ಸನ್ನು ಹಿಡಿದು ಅಲ್ಲಾಡಿಸಿತ್ತು.
“ಗೊತ್ತಿತ್ತು ನನಗೆ! ಅಂದುಕೊಂಡಿದ್ದೆ! ಹಾಗೇ ಆಯಿತು! ಈ ಹ್ಯಾಟು ಎದ್ದು ಕಾಣತ್ತೆ. ವಿಚಿತ್ರವಾಗಿದೆ, ನನ್ನ ಹಾಗೆ ಚಿಂದಿ ತೊಟ್ಟವನು ಎಂಥದಾದರೂ ಟೋಪಿ ಹಾಕಿಕೊಳ್ಳಬೇಕು. ಈ ದೆವ್ವದಂಥ ಹ್ಯಾಟನ್ನ ಯಾರೂ ಹಾಕಲ್ಲ. ಒಂದು ಮೈಲಿ ದೂರಕ್ಕೂ ಎದ್ದು ಕಾಣತ್ತೆ. ಆಮೇಲೂ ಕೂಡ ಜನ ಜ್ಞಾಪಕ ಇಟ್ಟುಕೊಳ್ಳತಾರೆ. ಹ್ಯಾಟು ಸಾಕ್ಷಿಯಾಗಿಬಿಡತ್ತೆ, ಎದ್ದು ಕಾಣಬಾರದು. ವಿಶೇಷ ಅನ್ನಿಸಬಾರದು. ವಿವರಕ್ಕೆ ಗಮನ ಕೊಡಬೇಕು...ವಿವರಕ್ಕೆ ! ಎಲ್ಲಾ ಹಾಳಾಗಕ್ಕೆ ಸಣ್ಣ ವಿವರಾನೂ ಸಾಕು..” ಯುವಕ ಗೊಣಗಿಕೊಂಡ.
ತುಂಬ ದೂರ ಹೋಗಬೇಕಾಗಿರಲಿಲ್ಲ. ಎಷ್ಟು ಹೆಜ್ಜೆ ನಡೆಯಬೇಕು ಅನ್ನುವುದೂ ಅವನಿಗೆ ಗೊತ್ತಿತ್ತು: ಅವನಿದ್ದ ಮನೆಯ ಗೇಟಿನಿಂದ ಸರಿಯಾಗಿ ಏಳು ನೂರ ಮೂವತ್ತು ಹೆಜ್ಜೆ. ಹೀಗೇ ಒಂದು ಸಾರಿ ಕನಸಿನಲ್ಲಿ ಮೈ ಮರೆತು ನಡೆಯುತ್ತಾ ಹೆಜ್ಜೆ ಎಣಿಸಿಕೊಂಡಿದ್ದ. ಆಗೆಲ್ಲ ಇಂಥ ಕನಸಿನ ಮೇಲೆ ಅವನಿಗೆ ನಂಬಿಕೆ ಇರಲಿಲ್ಲ. “ಈ ಕೆಟ್ಟ ಕನಸು ಮರುಳು ಮಾಡಿ ಸೆಳೆಯುತಿದೆಯಲ್ಲಾ!” ಎಂದು ತನ್ನ ಮೇಲೇ ರೇಗುತ್ತಿದ್ದ. ಈಗ, ಒಂದು ತಿಂಗಳಾದ ಮೇಲೆ, ಕನಸನ್ನು ನೋಡುವ ದೃಷ್ಟಿ ಬೇರೆಯಾಗಿತ್ತು. “ನಾನು ದುರ್ಬಲ, ನಿರ್ಣಯವಿಲ್ಲದ ಮನಸ್ಸು ನನ್ನದು,” ಎಂದು ತನ್ನ ಬಗ್ಗೆಯೇ ರೇಗಿ ಮನಸಿನೊಳಗೇ ಬೈದುಕೊಳ್ಳುತ್ತಿದ್ದರೂ ಅವನಿಗೇ ಅರಿವಿಲ್ಲದೆ “ಕೆಟ್ಟ ಕನಸಿಗೆ ಹೊಂದಿಕೊಂಡಿದ್ದ. ವಿಕಾರವಾದ” ಈ ಕನಸು ನಾನು ನಿಜವಾಗಿ ಮಾಡಬೇಕಾದ ಕೆಲಸ ಅಂದುಕೊಳ್ಳುವುದಕ್ಕೆ ಶುರು ಮಾಡಿದ್ದ. ಇನ್ನೂ ಪೂರ್ತಿಯಾಗಿ ನಂಬಿಕೆ ಬಂದಿರಲಿಲ್ಲ. ಆ ಕೆಲಸದ ಟ್ರಯಲ್ ಹೇಗಿರುತ್ತದೋ ನೋಡೋಣ!” ಅನ್ನಿಸಿದ್ದರಿಂದ ಈಗ ಒಂದೊಂದು ಹೆಜ್ಜೆ ಇಟ್ಟ ಹಾಗೂ ಅವನ ಉತ್ಸಾಹ ಹೆಚ್ಚಿಕೊಳ್ಳುತ್ತಿತ್ತು.
ಎದೆ ಕುಸಿಯುತ್ತಿರಲು, ಮೈಯ ನರಗಳಲ್ಲೆಲ್ಲ ನಡುಕ ಹುಟ್ಟಿರಲು ಆ ಯುವಕ ದೊಡ್ಡ ಇಮಾರತಿನ ಹತ್ತಿರ ಬಂದಿದ್ದ. ಇಮಾರತಿನ ಎದುರಿನಲ್ಲಿ ಕಾಲುವೆ, ಹಿಂಬದಿಯಲ್ಲಿ ---ಯ್ ರಸ್ತೆ ಇದ್ದವು. ಇಮಾರತಿನೊಳಗೆ ಪುಟ್ಟ ಪುಟ್ಟ ಮನೆಗಳಿದ್ದವು. ದರ್ಜಿಗಳು, ಬೀಗ ರಿಪೇರಿ ಮಾಡುವವರು, ಅಡುಗೆಯವರು, ಥರಾವರಿ ಜರ್ಮನರು, ಸೂಳೆಯರು, ಕಾರಕೂನರು ಇಂಥವರೆಲ್ಲ ವಾಸವಾಗಿದ್ದರು. ಬರುವವರು ಹೋಗುವವರು ಎಲ್ಲರೂ ಕಟ್ಟಡದ ಮುಂದಿನ ಅಂಗಳದ ಗೇಟಿನಿಂದ ಹಿಂದಿನ ಅಂಗಳದ ಗೇಟಿನಿಂದ ಸಲೀಸಾಗಿ ಓಡಾಡುತ್ತಿದ್ದರು. ಮೂರು ನಾಲ್ಕು ಜನ ವಾಚ್ಮನ್ಗಳಿದ್ದರೂ ಯಾರೂ ಕಾಣಲಿಲ್ಲವೆಂದು ಸಂತೋಷಪಡುತ್ತಾ ಯುವಕ ಗೇಟು ದಾಟಿದ; ಸೀದಾ ಬಲಗಡೆ ಇದ್ದ ಮಹಡಿ ಮೆಟ್ಟಿಲ ಹತ್ತಿರಕ್ಕೆ ಹೋದ. ಮೆಟ್ಟಿಲು ಹಿತ್ತಿಲಲ್ಲಿತ್ತು, ಇಕ್ಕಟ್ಟಾಗಿತ್ತು, ಕತ್ತಲು ಕತ್ತಲಾಗಿತ್ತು. ಇಮಾರತಿನ ವಿವರಗಳನ್ನೆಲ್ಲ ಯುವಕ ಮೊದಲೇ ಗಮನವಿಟ್ಟು ಪರಿಚಯ ಮಾಡಿಕೊಂಡಿದ್ದ. ಕತ್ತಲಲ್ಲಿ ಕುತೂಹಲದಿಂದ ಯಾರು ದಿಟ್ಟಿಸಿದರೂ ಏನೂ ಭಯಪಡಬೇಕಾಗಿಲ್ಲ ಅನ್ನಿಸುವಂಥ ಈ ಜಾಗ ಅವನಿಗೆ ಇಷ್ಟವಾಗಿತ್ತು. “ಈಗಲೇ ಹೀಗೆ ಹೆದರಿಕೊಂಡರೆ ಆ ಕೆಲಸ ನಿಜವಾಗಿ ಮಾಡಬೇಕಾಗಿ ಬಂದರೆ ಏನು ಗತಿ?” ನಾಲ್ಕನೆಯ ಮಹಡಿ ಮುಟ್ಟುವ ಹೊತ್ತಿಗೆ ಈ ಯೋಚನೆ ತನ್ನಷ್ಟಕ್ಕೆ ಅವನ ಮನಸಿಗೆ ಬಂದಿತ್ತು. ಹಮಾಲಿ ಕೆಲಸ ಮಾಡುತ್ತಿದ್ದ ಮಾಜಿ ಸೈನಿಕರು ಅಲ್ಲಿ ಅವನ ದಾರಿಗೆ ಅಡ್ಡವಾದರು. ನಾಲ್ಕನೆಯ ಮಹಡಿಯಲ್ಲಿದ್ದ ಮನೆಯ ಸಾಮಾನು ಸಾಗಿಸುತ್ತಿದ್ದರು. ಆ ಮನೆಯಲ್ಲಿದ್ದವನು ಒಬ್ಬ ಜರ್ಮನ್ ಗುಮಾಸ್ತ ಅನ್ನುವುದು ಯುವಕನಿಗೆ ಮೊದಲೇ ಗೊತ್ತಿತ್ತು. “ಹಾಗಾದರೆ, ಜರ್ಮನಿಯವನು ಮನೆ ಖಾಲಿ ಮಾಡತಿದ್ದಾನೆ. ಅಂದರೆ, ನಾಲ್ಕನೆಯ ಮಹಡಿಯಲ್ಲಿ ಆ ಮುದುಕಿ ಬಿಟ್ಟರೆ ಸದ್ಯಕ್ಕೆ ಬೇರೆ ಯಾವ ಸಂಸಾರವೂ ಇರಲ್ಲ. ಅದನ್ನ ಮಾಡಬೇಕಾಗಿ ಬಂದರೆ ಒಳ್ಳೆಯದೇ...” ಅಂದುಕೊಳ್ಳುತ್ತಾ ಮುದುಕಿಯ ಮನೆಯ ಕರೆಗಂಟೆ ಬಾರಿಸಿದ. ಕಂಚಿನ ಗಂಟೆಯಲ್ಲ, ತಗಡಿನದು ಅನ್ನುವ ಹಾಗೆ ಅದು ಸಣ್ಣಗೆ ಕಿಣಿ ಕಿಣಿ ಸದ್ದು ಮಾಡಿತು. ಇಮಾರತಿನ ಎಲ್ಲ ಪುಟ್ಟ ಮನೆಗಳಲ್ಲೂ ಅಂಥದೇ ಕರೆಗಂಟೆ ಇದ್ದವು. ಈ ಗಂಟೆಯ ಸದ್ದು ಮರೆತೇಬಿಟ್ಟಿದ್ದ. ಗಂಟೆಯ ಈ ವಿಚಿತ್ರವಾದ ಕಿಣಿಕಿಣಿ ಸದ್ದು ಕೇಳಿಸಿ, ಅದು ಅವನ ಮನಸ್ಸಿನಲ್ಲಿ ಹುದುಗಿದ್ದ ಯೋಚನೆಯನ್ನು ನಿಚ್ಚಳಗೊಳಿಸಿ, ಸ್ಪಷ್ಟ ಚಿತ್ರ ಮೂಡಿ...ಬೆಚ್ಚಿಬಿದ್ದ. ಅವನ ಮನಸ್ಸು ಈಗ ಅಷ್ಟು ಕದಡಿ ಬಲಹೀನವಾಗಿತ್ತು. ಬಿರುಕು ಬಿಟ್ಟಿತು ಅನ್ನುವ ಹಾಗೆ ಬಾಗಿಲು ಒಂದಿಷ್ಟೆ ತೆರೆದುಕೊಂಡಿತು. ಒಳಗಿದ್ದ ಹೆಂಗಸು ಕಣ್ಣ ತುಂಬ ಅನುಮಾನ ತುಂಬಿಕೊಂಡು ಬಂದವನನ್ನು ಆ ಬಿರುಕಿನಿಂದಲೇ ನೋಡಿದಳು. ಮಿನುಗಿದ ಅವಳ ಕಣ್ಣು ಬಿಟ್ಟರೆ ಕತ್ತಲಲ್ಲಿ ಇನ್ನೇನೂ ಕಾಣುತ್ತಿರಲಿಲ್ಲ. ನಾಲ್ಕನೆಯ ಮಹಡಿಯಲ್ಲಿ ಹಮಾಲರು ಓಡಾಡುತ್ತಿರುವುದು ಕಂಡು ಧೈರ್ಯ ತಂದುಕೊಂಡು, ಬಾಗಿಲು ಪೂರಾ ತೆರೆದಳು. ಯುವಕ ಹೊಸ್ತಿಲು ದಾಟಿ ಒಳಕ್ಕೆ ಕಾಲಿಟ್ಟ. ಕತ್ತಲಿತ್ತು. ಮೋಟು ಗೋಡೆಯ ಆಚೆ ಪುಟ್ಟ ಅಡುಗೆಮನೆ ಇತ್ತು. ಮುದುಕಿ ಮಾತಿಲ್ಲದೆ ಅವನ ಎದುರಿಗೇ ನಿಂತು “ಏನು?” ಅನ್ನುವ ಹಾಗೆ ನೋಡುತ್ತಿದ್ದಳು. ಚಿಕ್ಕ ಗಾತ್ರದ, ಬತ್ತಿದ ಮೈಯ, ಅರುವತ್ತು ವಯಸ್ಸಿನ, ಸಿಡುಕು ಕಣ್ಣಿನ, ಪುಟ್ಟ ಚೂಪು ಮೂಗಿನ ಮುದುಕಿ ಅವಳು. ಸ್ಕಾರ್ಫು ಇಲ್ಲದೆ ಬರಿತಲೆಯಲ್ಲಿದ್ದಳು. ಸ್ವಲ್ಪ ನೆರೆತಿದ್ದ ಕೂದಲಿಗೆ ಎಣ್ಣೆ ಚೆನ್ನಾಗಿ ಮೆತ್ತಿಕೊಂಡಿದ್ದಳು. ಉದ್ದನೆಯ ಬಡಕಲು ಕತ್ತು ಕೋಳಿಯ ಕಾಲಿನ ಹಾಗೆ ಕಾಣುತ್ತಿತ್ತು. ಕೊರಳಿಗೆ ಹಳೆಯ ಉಣ್ಣೆ ಬಟ್ಟೆ ಸುತ್ತಿಕೊಂಡಿದ್ದಳು. ಧಗೆ ಇದ್ದರೂ ಪೂರಾ ಹಳತಾಗಿ ಹಳದಿಗೆ ತಿರುಗಿದ್ದ ಸಡಿಲವಾದ ಫರ್ ಕೋಟು ತೊಟ್ಟಿದ್ದಳು. ಒಂದೇ ಸಮ ಕೆಮ್ಮುತ್ತಾ ನರಳುತ್ತಾ ಇದ್ದಳು. ಯುವಕ ಅವಳನ್ನು ಸ್ವಲ್ಪ ವಿಚಿತ್ರವಾಗಿ ನೋಡಿದನೋ ಏನೋ. ಅವಳ ಕಣ್ಣಲ್ಲಿ ಮತ್ತೆ ಸಂಶಯ ಮಿಂಚಿತು.
“ನಾನು. ರಾಸ್ಕೋಕೋವ್, ಸೂಡೆಂಟು.* ಗೌರವ ತೋರಿಸಬೇಕು ಅನ್ನುವುದು ತಟ್ಟನೆ ಜ್ಞಾಪಕ ಬಂದು ಅರ್ಧ ಬಗ್ಗಿ ನಮಸ್ಕಾರ ಮಾಡಿ, “ಹೋದ ತಿಂಗಳು ಬಂದಿದ್ದೆ,” ಎಂದು ಗೊಣಗಿದ. “ಜ್ಞಾಪಕ ಇದೇಪ್ಪಾ, ನೀನು ಬಂದಿದ್ದೆ. ಮುದುಕಿ ಸ್ಪಷ್ಟವಾಗಿ ಹೇಳಿದರೂ ಅವಳ ಕಣ್ಣಲ್ಲಿ ಸಂಶಯ ಹಾಗೇ ಇತ್ತು.
“ಮತ್ತೆ ಬಂದಿದೇನೆ ಮೇಡಂ...ಅದೇ ವ್ಯವಹಾರ...” ಮುದುಕಿಯ ಸಂಶಯಬುದ್ಧಿ ಕಂಡು ರಾಸ್ಕೋಕೋವ್ನ ನೆಮ್ಮದಿ ಕಲಕಿತ್ತು.
“ಅವಳಿಗೆ ಯಾವಾಗಲೂ ಸಂಶಯ ಅಂತ ಕಾಣತ್ತೆ. ನಾನೇ ಗಮನಿಸಿಲ್ಲವೋ ಏನೋ,” ಅಂದುಕೊಳ್ಳುತ್ತ ಕಸಿವಿಸಿಪಟ್ಟ,
ಇನ್ನೂ ಹಿಂಜರಿಕೆ ಅನ್ನುವ ಹಾಗೆ ಮುದುಕಿ ಒಂದು ಕ್ಷಣ ಸುಮ್ಮನೆ ಇದ್ದಳು. ಪಕ್ಕಕ್ಕೆ ಸರಿದು, ಒಳ ಕೋಣೆಯ ಬಾಗಿಲು ತೋರಿಸುತ್ತ, “ಬಾರಪ್ಪಾ” ಅನ್ನುತ್ತಾ ಅವನು ಮೊದಲು ಒಳಗೆ ಹೋಗಲು ಜಾಗ ಬಿಟ್ಟಳು.
ಅವನು ಕಾಲಿಟ್ಟ ಪುಟ್ಟ ಕೋಣೆಯ ಗೋಡೆಗಳಿಗೆ ಹಳದಿ ಬಣ್ಣದ ವಾಲ್ ಪೇಪರು ಇತ್ತು, ಜೆರಾನಿಯಮ್ ಹೂಗಳಿದ್ದವು, ಕಿಟಕಿಗೆ ಮಸ್ಲಿನ್ ಪರದೆ ಇತ್ತು. ಮುಳುಗುತ್ತಿದ್ದ ಸೂರ್ಯನ ಬೆಳಕು ಆ ಹೊತ್ತಿನಲ್ಲಿ ಕೋಣೆಯನ್ನು ತುಂಬಿತ್ತು.
“ಅಂದರೆ ಆವತ್ತು ಕೂಡ ಹೀಗೇ ಬಿಸಿಲು ಬಿದ್ದಿರತ್ತೆ!” ಅನ್ನುವ ಯೋಚನೆ ತಟ್ಟನೆ ಬಂದು ಹೋಯಿತು. ರೂಮಿನ ಎಲ್ಲಾ ವಿವರ ನೆನಪಿಟ್ಟುಕೊಳ್ಳಬೇಕು ಅಂದುಕೊಳ್ಳುತ್ತ ಸುತ್ತಲೂ ನೋಡಿದ... ಅಂಥ ವಿಶೇಷವೇನೂ ಇರಲಿಲ್ಲ. ಯೆಲ್ಲೋ ವುಡ್ಡಿನಲ್ಲಿ ಮಾಡಿದ, ವಿಶಾಲವಾದ ಬೆನ್ನಿದ್ದ, ತುಂಬ ಹಳೆಯ ಮರದ ಸೋಫಾ, ಬಾದಾಮಿ ಆಕಾರದ ಮೇಜು, ಎರಡು ಕಿಟಕಿಗಳ ನಡುವೆ ಕನ್ನಡಿ ಕೂರಿಸಿದ ಡ್ರೆಸಿಂಗ್ ಟೇಬಲ್ಲು, ಗೋಡೆಗೆ ಒರಗಿಸಿದ ಹಾಗೆ ಕುರ್ಚಿ, ಕೈಯಲ್ಲಿ ಹಕ್ಕಿ ಹಿಡಿದುಕೊಂಡಿರುವ ಜರ್ಮನ್ ಹುಡುಗಿಯರ ಎರಡು ಮೂರು ಪಾವಲಿ ಬೆಲೆಯ ಫೋಟೋ ಇದ್ದವು. ಪೋಟೊಗೂ ಯೆಲ್ಲೋ ವುಡ್ ಫೇಮು ಇತ್ತು. ಮೂಲೆಯಲ್ಲೊಂದು ಪುಟ್ಟ ವಿಗ್ರಹವಿತ್ತು. ಅದರ ಮುಂದೆ ಎಣ್ಣೆಯ ದೀಪ ಉರಿಯುತ್ತಿತ್ತು. ಎಲ್ಲೂ ಒಂದೇ ಒಂದು ಕಣ ಧೂಳಿಲ್ಲದೆ ನೆಲ ಕೂಡ ಚೆನ್ನಾಗಿ ಉಜ್ಜಿ ಒರೆಸಿ ಸ್ವಚ್ಛವಾಗಿ ಥಳ ಥಳಿಸುತ್ತಿದ್ದವು. “ಇದೆಲ್ಲ ಲಿಝವೆಟಾ ಕೆಲಸ. ದುಷ್ಟ ಮುಂಡೆಯರು ಹೀಗೇ ಎಲ್ಲಾ ಕ್ಲೀನಾಗಿಟ್ಟುಕೊಂಡಿರತಾರೆ,” ಅಂದುಕೊಳ್ಳುತ್ತ ಯುವಕ ಪರದೆ ಎಳೆದಿದ್ದ ಬಾಗಿಲಾಚೆಗೆ ಇದ್ದ ಇನ್ನೊಂದು ರೂಮಿನತ್ತ ಕುತೂಹಲದಿಂದ ನೋಡಿದ. ಅಲ್ಲಿ ಮುದುಕಿಯ ಮಂಚ, ಡಾಗಳಿದ್ದ ಟೇಬಲ್ಲು ಇದ್ದವು. ಅವಳ ಮನೆ ಅಂದರೆ ಈ ಎರಡು ಕೋಣೆ, ಅಷ್ಟೇ.
“ಏನು ಬಂದಿದ್ದು?” ಮುದುಕಿ ರೂಮಿನೊಳಕ್ಕೆ ಬಂದು, ಅವನ ಮುಖ ದಿಟ್ಟಿಸಿ ನೋಡುವುದಕ್ಕೆ ಅನುಕೂಲವಾಗುವ ಹಾಗೆ ನೇರ ಅವನೆದುರು ನಿಂತು ಕೇಳಿದಳು.
“ಗಿರವಿ ಇಡಬೇಕಾಗಿತ್ತು, ಇಗೋ, ತಗೊಳ್ಳಿ!” ಅನ್ನುತ್ತ ಜೇಬಿನಿಂದ ಹಳೆಯ ಬೆಳ್ಳಿಯದೊಂದು ವಾಚು ತೆಗೆದುಕೊಟ್ಟ. ಅದರ ಬೆನ್ನಿನ ಮೇಲೆ ಗೋಬಿನ ಚಿತ್ರವಿತ್ತು. ವಾಚಿಗೆ ಸ್ಟೀಲಿನ ಸರಪಳಿ ಇತ್ತು. “ನೀನು ಹೋದ ಸಾರಿ ಇಟ್ಟಿದ್ದನ್ನೇ ಇನ್ನೂ ಬಿಡಿಸಿಕೊಂಡಿಲ್ಲ. ನಿನ್ನೆಗೆ ಒಂದು ತಿಂಗಳಾಯಿತು.” “ಇನ್ನೂ ಒಂದು ತಿಂಗಳ ಬಡ್ಡಿ ಕಟ್ಟತೇನೆ, ಸ್ವಲ್ಪ ಟೈಮು ಕೊಡಿ.”
“ಟೈಮು ಕೊಡತೀನೋ ಈವಾಗಲೇ ಮಾರಿ ಹಾಕತೇನೋ ನನ್ನಿಷ್ಟ ಕಣಪ್ಪಾ”
“ಈ ಗಡಿಯಾರಕ್ಕೆ ಈಗ ಎಷ್ಟು ಕೊಡತೀರಿ, ಅಯ್ಯೋನಾ ಇವಾನೋವಾ?”
“ಬರೀ ಹಾಳೂ ಮೂಳೂ ತರುತ್ತೀಯಾ ಕಣಪ್ಪಾ. ಇದಕ್ಕೆ ಏನೂ ದುಡ್ಡು ಹುಟ್ಟಲ್ಲ. ಹೋದ ಸಾರಿ ನೀನು ಕೊಟ್ಟ ಉಂಗುರಕ್ಕೆ ಎರಡು ರೂಬಲ್ ಕೊಟ್ಟಿದೀನಿ. ಅಂಗಡಿಗೆ ಹೋದರೆ ಒಂದೂವರೆ ರೂಬಲ್ಲಿಗೆ ಹೊಸ ಉಂಗುರಾನೇ ಸಿಗತ್ತೆ.”
“ಏನಾದರೂ ಮಾಡಿ, ನಾಲ್ಕು ರೂಬಲ್ ಕೊಡಿ. ಬಿಡಿಸಿಕೊಳ್ಳತೇನೆ. ಇದು ನಮ್ಮಪ್ಪನದು. ಸದ್ಯದಲ್ಲೇ ನನಗೆ ದುಡ್ಡು ಬರತ್ತೆ.”
“ಒಂದೂವರೆ ರೂಬಲ್ಲು. ಬಡ್ಡಿ ಮುರಿದುಕೊಂಡು ಕೊಡತೇನೆ. ಆಗಬಹುದಾ?”
“ಒಂದೂವರೆ ರೂಬಲ್ಲು!” ಯುವಕ ಉದ್ಗಾರ ತೆಗೆದ.
“ನಿನ್ನಿಷ್ಟ,” ಅನ್ನುತ್ತಾ ಗಡಿಯಾರ ಅವನ ಕಡೆಗೆ ಚಾಚಿದಳು. ಯುವಕ ಅದನ್ನು ತೆಗೆದುಕೊಂಡ. ಸುಮ್ಮನೆ ಹೊರಟುಬಿಡಬೇಕು ಅನ್ನುವಷ್ಟು ಕೋಪ ಬಂದಿತ್ತು. ತಕ್ಷಣವೇ ಸಮಾಧಾನ ಮಾಡಿಕೊಂಡ. “ಬೇರೆ ಇನ್ನೆಲ್ಲೂ ಹೋಗಲಾರೆ, ನಾನು ಬಂದಿರುವುದೇ ಬೇರೆ ಕಾರಣಕ್ಕೆ” ಎಂದು ಮನಸ್ಸಿನಲ್ಲೇ ಹೇಳಿಕೊಂಡ.
ಒರಟು ದನಿಯಲ್ಲಿ, “ಸರಿ, ಅಷ್ಟೇ ಕೊಡಿ!” ಅಂದ.
ಮುದುಕಿ ಕೋಟಿನ ಜೇಬಿನಲ್ಲಿ ಬೀಗದ ಕೈ ಹುಡುಕಿಕೊಳ್ಳುತ್ತಾ ಪರದೆಯ ಹಿಂದಿದ್ದ ಇನ್ನೊಂದು ಕೋಣೆಗೆ ಹೋದಳು. ಇಲ್ಲಿ ಒಬ್ಬನೇ ಉಳಿದ ಯುವಕ ಗಮನಕೊಟ್ಟು ಆಲಿಸುತ್ತಾ ಅವಳೇನು ಮಾಡುತ್ತಿರಬಹುದು ಎಂದು ಕಲ್ಪನೆ ಮಾಡಿಕೊಂಡ. ಡ್ರಾಗಳನ್ನು ಎಳೆಯುವ ಸದ್ದು ಕೇಳಿಸಿತು.
“ಮೇಲುಗಡೆಯ ಡ್ರಾ ಇರಬೇಕು. ಬೀಗದ ಕೈ ಬಲಗಡೆ ಜೇಬಿನಲ್ಲಿ ಇಟ್ಟುಕೋತಾಳೆ... ಎಲ್ಲಾ ಬೀಗದ ಕೈ ಒಂದೇ ಸ್ಟೀಲಿನ ರಿಂಗಿಗೆ ಹಾಕಿಟ್ಟುಕೊಂಡಿದಾಳೆ. ದೊಡ್ಡದೊಂದು ಬೀಗದ ಕೈ ಇದೆ. ಮಿಕ್ಕವಕ್ಕಿಂತ ಮೂರಷ್ಟು ದೊಡ್ಡದು. ದೊಡ್ಡ ದೊಡ್ಡ ಎಸಳಿನ ಬೀಗದ ಕೈ. ಡ್ರಾದ ಕೀ ಖಂಡಿತ ಅಲ್ಲ...ಅಂದರೆ ಇನ್ನೊಂದು ದೊಡ್ಡ ಪೆಟ್ಟಿಗೆ, ಸಂದೂಕ ಇರಬಹುದು...ತಿಳಕೋ ಬೇಕು...ಸಂದೂಕದ ಬೀಗದ ಕೈ ಹೀಗೇ ದೊಡ್ಡದಾಗಿ...ಥ ಎಷ್ಟು ಕೆಟ್ಟದಾಗಿ ಯೋಚನೆ ಮಾಡತಿದೇನೆ...” ಅಂದುಕೊಂಡ ಯುವಕ.
ಮುದುಕಿ ವಾಪಸ್ಸು ಬಂದಳು.
'ತಗೋಪ್ಪಾ, ಒಂದು ರೂಬಲ್ಗೆ ತಿಂಗಳಿಗೆ ಹತ್ತು ಕೊಪೆಕ್ ಬಡ್ಡಿ, ನಿನ್ನ ಸಾಲಕ್ಕೆ ಒಂದು ತಿಂಗಳ ಬಡ್ಡಿ ಹದಿನೈದು ಕೊಪೆಕ್. ಮತ್ತೆ ಹಳೆಯ ಸಾಲ ಎರಡು ರೂಬಲ್ಗೆ ಇದೇ ಲೆಕ್ಕದಲ್ಲಿ ಇಪ್ಪತ್ತು ಕೊಪೆಕ್ ಬಾಕಿ ಇದೆ. ಒಟ್ಟಿಗೆ ಮೂವತ್ತೈದು ಕೋಪೆಕ್ ಆಯಿತು. ಈಗ ನಿನ್ನ ಗಡಿಯಾರಕ್ಕೆ ನಾನು ನಿನಗೆ ಒಂದು ರೂಬಲ್ ಹದಿನೈದು ಕೊಪೆಕ್ ಕೊಟ್ಟರೆ ಆಯಿತು. ತಗೋ.
“ಏನು! ಬರೀ ಒಂದು ರೂಲ್ ಹದಿನೈದು ಕೊಪೆಕ್!”
“ಹೌದು.”
ಯುವಕ ವಾದ ಮಾಡಲಿಲ್ಲ. ದುಡ್ಡು ತೆಗೆದುಕೊಂಡ. ಇನ್ನೂ ಏನೋ ಹೇಳುವುದಿದೆ, ಮಾಡುವುದಿದೆ ಅನ್ನುವ ಹಾಗೆ ಮುದುಕಿಯನ್ನು ದಿಟ್ಟಿಸಿದ. ಏನು ಅನ್ನುವುದು ಅವನಿಗೇ ತಿಳಿದಿರಲಿಲ್ಲ ಅನಿಸುತ್ತಿತ್ತು.
“ಅಲೋನಾ ಇವಾನೋಬ್ಬಾ, ಇಷ್ಟರಲ್ಲೇ ನಿಮಗೆ ಇನ್ನೇನೋ ತಂದುಕೊಡತೇನೆ...ಬೆಳ್ಳಿಯದು...ತುಂಬ ಚೆನ್ನಾಗಿದೆ...ಸಿಗರೇಟು ಡಬ್ಬಿ...ನನ್ನ ಸ್ನೇಹಿತ ವಾಪಸ್ಸು ಕೊಟ್ಟ ತಕ್ಷಣ ತರತೇನೆ...” ಗೊಂದಲವಾಗಿ ತಟ್ಟನೆ ಮಾತು ನಿಲ್ಲಿಸಿಬಿಟ್ಟ.
“ತಗೊಂಡು ಬಾಪ್ಪಾ, ಆಮೇಲೆ ನೋಡಣ.”
“ಸರಿ, ಹೋಗಿಬರತೇನೆ. ಮನೆಯಲ್ಲಿ ಒಬ್ಬರೇ ಇರತೀರಾ? ನಿಮ್ಮ ತಂಗಿ ಇರಲ್ಲವಾ ಇಲ್ಲಿ?” ಹೊರಕ್ಕೆ ಹೆಜ್ಜೆ ಹಾಕುತ್ತಾ ಸಾಧ್ಯವಾದಷ್ಟೂ ಮಾಮೂಲು ದನಿಯಲ್ಲಿ ಕೇಳಿದ. “ಅವಳ ಹತ್ತಿರ ಏನಪ್ಪಾ ವ್ಯವಹಾರ?”'ಏನಿಲ್ಲ. ಸುಮ್ಮನೆ ಕೇಳಿದೆ. ಬರತೇನೆ, ಅಯ್ಯೋನಾ ಇವಾನೋವಾ.
ಗೊಂದಲಪಡುತ್ತ ಹೊರಟ ರಾಸ್ಕೋಕೋವ್. ಗೊಂದಲ ಹೆಚ್ಚಾಯಿತು. ಮೆಟ್ಟಿಲಿಳಿಯುವಾಗ ತಟ್ಟನೆ ಏನೋ ಹೊಳೆದವನ ಹಾಗೆ ಮತ್ತೆ ಮತ್ತೆ ನಿಲ್ಲುತ್ತಿದ್ದ. ಒಂದೊಂದು ಸಲ ಸುಮ್ಮನೆ ನಿಂತೇ ಇರುತ್ತಿದ್ದ. ಕೊನೆಗೂ ರಸ್ತೆಗೆ ಬಂದು, ಉಸಿರುಬಿಟ್ಟ.
“ದೇವರೇ, ಎಂಥಾ ಅಸಹ್ಯ ಇದೆಲ್ಲ! ಸಾಧ್ಯವಾ, ಸಾಧ್ಯವಾ ನಾನು...ಇಲ್ಲ, ನಾನ್ಸೆನ್ಸ್, ಅಸಂಬದ್ಧ! ಅಂಥ ಭಯಂಕರ ವಿಚಾರ ನನ್ನ ತಲೆಗೆ ಹೇಗೆ ಬಂತು? ಎಂಥಾ ಕೊಳಕು ಯೋಚನೆ ಮಾಡಿದೆ...ಕೊಳಕ, ಕೆಟ್ಟ, ಅಸಹ್ಯ, ಥ...ಇಡೀ ತಿಂಗಳು ನಾನು...
ಯಾವುದೇ ಮಾತಾಗಲೀ ಎಷ್ಟೇ ಛೀ ಹೂಗಳಾಗಲೀ ಅವನ ತಳಮಳವನ್ನು ಕಡಿಮೆ ಮಾಡಲಿಲ್ಲ. ಮುದುಕಿಯ ಮನೆಗೆ ಹೋಗುತ್ತಿರುವಾಗ ಎದೆಯಲ್ಲಿ ಒತ್ತುತ್ತಿದ್ದ ಅಪರಿಮಿತ ಅಸಹ್ಯದ ಭಾವನೆ ಈಗ ಮತ್ತಷ್ಟು ಬೆಳೆದು ಸ್ಪಷ್ಟ ರೂಪ ಪಡೆದಿತ್ತು. ಈ ಕಳವಳ, ಈ ಅಸಹ್ಯ ತಪ್ಪಿಸಿಕೊಳ್ಳಲು ಏನು ಮಾಡಬೇಕೋ ಗೊತ್ತಾಗಲಿಲ್ಲ. ಕುಡಿದವರ ಹಾಗೆ ತೂರಾಡುತ್ತಾ, ಎದುರಿಗೆ ಬಂದವರನ್ನೂ ಲೆಕ್ಕಿಸದೆ ಫುಟ್ ಪಾತಿನ ಮೇಲೆ ನಡೆದ. ಮೈಮೇಲೆ ಎಚ್ಚರ ಮೂಡಿದಾಗ ಆಗಲೇ ಇನ್ನೊಂದು ಬೀದಿಗೆ ಬಂದಿದ್ದ. ಸುತ್ತಲೂ ನೋಡಿದ. ದೊಡ್ಡ ಕಟ್ಟಡದ ನೆಲಮಾಳಿಗೆಯಲ್ಲಿ ಹೆಂಡದಂಗಡಿ ಇತ್ತು. ಇಬ್ಬರು ಕುಡುಕರು ಒಬ್ಬರಿಗೆ ಇನ್ನೊಬ್ಬರು ಆಸರೆಯಾಗಿ, ಪರಸ್ಪರ ಬೈದುಕೊಳ್ಳುತ್ತಾ ಮೆಟ್ಟಿಲು ಏರಿ ಬೀದಿಗೆ ಬರುತ್ತಿದ್ದರು. ರಾಸ್ಕೋಕೋವ್ ಒಂದು ಕ್ಷಣವೂ ಯೋಚನೆ ಮಾಡದೆ ಮೆಟ್ಟಿಲಿಳಿದ. ಹೆಂಡದಂಗಡಿಗೆ ಯಾವತ್ತೂ ಹೋದವನಲ್ಲ. ತಲೆ ತಿರುಗುತ್ತಿತ್ತು. ಬಾಯಿ ಒಣಗಿ ಹಿಂಸೆಯಾಗುತ್ತಿತ್ತು. ಹೊಟ್ಟೆ ಹಸಿದು ಸುಸ್ತಾಗುತ್ತಿದೆ ತಣ್ಣನೆಯ ಬಿಯರ್ ಕುಡಿಯಬೇಕು ಅಂದುಕೊಂಡ. ಕತ್ತಲು ಮೂಲೆಯಲ್ಲಿ ಗಲೀಜಾಗಿ ಅಂಟಂಟಾಗಿದ್ದ ಟೇಬಲ್ಲಿನ ಮುಂದೆ ಕೂತು ಬಿಯರ್ ಕೇಳಿದ, ಆಸೆಬುರುಕನ ಹಾಗೆ ಒಂದು ಗ್ಲಾಸು ಕುಡಿದ ತಕ್ಷಣ ಮನಸ್ಸು ನಿರಾಳ ಅನ್ನಿಸಿತು. ಆಲೋಚನೆಗಳು ತಿಳಿಯಾದವು, ಮನಸ್ಸು ದೃಢವಾಯಿತು, ಉದ್ದೇಶ ಖಚಿತವಾಯಿತು! “ನಾನ್ಸೆನ್ಸ್, ಸುಮ್ಮನೆ ತಲೆ ಕೆಡಿಸಿಕೊಂಡೆ! ಥ! ಥ! ಎಲ್ಲ ಎಷ್ಟು ಹಲ್ಕಾ...” ಅಂದುಕೊಂಡ. ಅವನು ಹೂ ಅಂದರೂ ಭಯಂಕರವಾದ ಭಾರ ಇಳಿಸಿಕೊಂಡು ಖುಷಿಯಾದವನ ಹಾಗೆ ಕಾಣುತ್ತಿದ್ದ. ಹೆಂಡದಂಗಡಿಯಲ್ಲಿದ್ದ ಜನರ ಮೇಲೆ ಸ್ನೇಹದ ದೃಷ್ಟಿ ಬೀರಿದ. ಈ ಖುಷಿಯ ಮೂಡು ಕೂಡ ಸಹಜವಲ್ಲವೋ ಏನೋ ಅನ್ನುವ ಕೆಟ್ಟ ಭಯ ಅವನ ಮನಸ್ಸಿನಲ್ಲಿ ಇದ್ದೇ ಇತ್ತು.
ಅಷ್ಟು ಹೊತ್ತಿಗೆ ಹೆಂಡದಂಗಡಿಯಲ್ಲಿ ಜನ ಕಡಮೆಯಾಗಿದ್ದರು. ಯುವಕನಿಗೆ ಎದುರಾಗಿದ್ದ ಇಬ್ಬರು ಕುಡುಕರ ಹಿಂದೆಯೇ ಇನ್ನೂ ಐದಾರು ಜನ, ಜೊತೆಗೆ ಅಕಾರ್ಡಿಯನ್ ವಾದ್ಯ ಹಿಡಿದಿದ್ದ ಹೆಂಗಸು ಕೂಡ ಎದ್ದು ಹೋಗಿದ್ದರು. ಅಂಗಡಿ ಶಾಂತವಾಗಿತ್ತು, ವಿಶಾಲವಾಗಿದೆ ಅನ್ನಿಸುತ್ತಿತ್ತು. ಸ್ವಲ್ಪ ಕುಡಿದಿದ್ದಾನೆ ಅನ್ನಿಸುತ್ತಿದ್ದ ಯಾರೋ ಕಸುಬುದಾರ ಬಿಯರ್ ಎದುರಿಗಿಟ್ಟುಕೊಂಡು ಕೂತಿದ್ದ. ಅವನ ಗೆಳೆಯ, ದಪ್ಪ ಮೈಯವನು, ಬಿಗಿಯಾದ ವೇಸ್ಟ್ಕೋಟು ತೊಟ್ಟಿದ್ದವನು, ಬಿಳಿಯ ಗಡ್ಡ ಇದ್ದವನು ಪೂರಾ ಕುಡಿದು, ತಲೆಗೇರಿ ಹಾಗೇ ಬೆಂಚಿನ ಮೇಲೆ ಮಲಗಿಬಿಟ್ಟಿದ್ದ. ಎಚ್ಚರವಾದಾಗ ಚಿಟಿಕೆ ಹಾಕಿ, ಕೈ ಎರಡೂ ಅಗಲ ಮಾಡಿ, ಅರ್ಧ ಮೇಲೆದ್ದು ಯಾವುದೋ ಹಾಡು ಕಷ್ಟಪಟ್ಟು ಜ್ಞಾಪಿಸಿಕೊಂಡು, ಜ್ಞಾಪಿಸಿಕೊಂಡು ಹಾಡುತ್ತಿದ್ದ:
ಹೆಂಡತೀನ ಪ್ರೀತಿ ಮಾಡಿದಾ
ವರುಷಾ..ಪೂರಾ......ತೀ...ಮಾಡಿದಾ
ಸ್ವಲ್ಪ ಹೊತ್ತಾದ ಮೇಲೆ ಮತ್ತೆ ತಟ್ಟನೆ ಎದ್ದು
ಬೀದಿ ಮೇಲೆ ಹೀಗೇ ನಡೀತಿದ್ದಾ
ಗುರುತಿದ್ದ ಹುಡುಗೀನ ನೋಡತಿದ್ದಾ
ಅವನ ಖುಷಿಯನ್ನು ಕೇಳುವವರು ಯಾರೂ ಇರಲಿಲ್ಲ. ಅವನು ಹಾಡಿದಾಗೆಲ್ಲ ಅವನ ಜೊತೆಗಾರ ಕಸುಬುದಾರ ರೇಗಿ ಸಿಟ್ಟುಮಾಡಿಕೊಂಡು ಅವನತ್ತ ನೋಡುತ್ತಿದ್ದ. ಅಲ್ಲಿ ಇನ್ನೂ ಒಬ್ಬ ಇದ್ದ. ನೋಡುವುದಕ್ಕೆ ರಿಟೈರಾದ ಗುಮಾಸ್ತನ ಹಾಗೆ ಕಾಣುತ್ತಿದ್ದ. ಆಗ ಈಗ ಕುಡಿಕೆ ಎತ್ತಿ ಕುಡಿಯುತ್ತಿದ್ದ. ಅವನು ಕೂಡ ತಳಮಳದಲ್ಲಿದ್ದಾನೆ ಅನಿಸುತ್ತಿತ್ತು.
ಕೃತಿ : ಅಪರಾಧ ಮತ್ತು ಶಿಕ್ಷೆ
ಮೂಲ : ಫೊದೋರ್ ದಾಸ್ತೋವ್ಸ್ಕಿ
ಅನುವಾದ : ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ
ಪುಟ : 580
ಅಭಿರುಚಿ ಪ್ರಕಾಶನ, ಮೈಸೂರು
ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ
ಓ. ಎಲ್. ನಾಗಭೂಷಣ ಸ್ವಾಮಿಯವರು (22.09.1953) ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು ಶಿವಮೊಗ್ಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಉಪನ್ಯಾಸಕರು ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.
ನಕ್ಷತ್ರಗಳು, ವಿಮರ್ಶೆಯ ಪರಿಭಾಷೆ, ಪ್ರಜ್ಞಾಪ್ರವಾಹ ತಂತ್ರ, ಹರಿಹರ, ಪುರಾಣ, ಭಾಷಾಂತರ, ನನ್ನ ಹಿಮಾಲಯ, ನಮ್ಮ ಕನ್ನಡ ಕಾವ್ಯ (ಸಂಪಾದನೆ), ಕನ್ನಡ ಶೈಲಿ ಕೈಪಿಡಿ, (ಇತರರೊಡನೆ) ಅಲ್ಲಮ ವಚನ ಸಂಗ್ರಹ, ತತ್ವಪದಗಳು (ಪ್ರಾತಿನಿಧಿಕ ಸಂಕಲನ), ಇಂದಿನ ಹೆಜ್ಜೆ (ವಚನಗಳನ್ನು ಕುರಿತ ವಿಮರ್ಶಾ ಲೇಖನಗಳು), ಏಕಾಂತ ಲೋಕಾಂತ (ಅಂಕಣ ಬರಹ) ಮತ್ತೆ ತೆರೆದ ಬಾಗಿಲು (ಕೆ.ಎಸ್. ನರಸಿಂಹಸ್ವಾಮಿ ಅವರನ್ನು ಕುರಿತ ವಿಮರ್ಶಾ ಲೇಖನಗಳು) ಇವರ ಮುಖ್ಯ ಕೃತಿಗಳು.
ಅಕ್ಕ ತಂಗಿಯರು (ಚೆಕಾವ್ ನಾಟಕದ ಅನುವಾದ) ಕನ್ನಡಕ್ಕೆ ಬಂದ ಕವಿತೆ (ಬೇರೆ ಭಾಷೆಗಳಿಂದ ಆಯ್ದ ಕವಿತೆಗಳ ಅನುವಾದ), ಧಾರ್ಮಿಕ ಜೀವನ ಮತ್ತು ಬದುಕಿನ ಕಲೆ, ಹಿಂಸೆಯನ್ನು ಮೀರಿ ಅನುದಿನ ಚಿಂತನ, ಪ್ರೀತಿಯೆಂದರೇನು (ಮೂಲ ಜೆ.ಕೆ), ಚೀನಾದ ನಾಗರಿಕತೆ, ಯುವ ಕವಿಗೆ ಬರೆದ ಪತ್ರಗಳು (ರೇನ ಮಾರಿಯಾ ರಿಲೈ), ಯುದ್ಧ ಮತ್ತು ಶಾಂತಿ (ಟಾಲ್ಸ್ಟಾಯ್ ಕಾದಂಬರಿ) ಇವು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸಿದ ಪ್ರಮುಖ ಕೃತಿಗಳು.
ಚಂದ್ರಶೇಖರ ಕಂಬಾರರ ಚಕೋರಿ, ತುಕ್ರನ ಕನಸು, ಬೆಳಗೆರೆ ಕೃಷ್ಣಶಾಸ್ತ್ರಿಯವರ ಯೇಗ್ದಾಗೆಲ್ಲಾ ಐತೆ, ಮನು ಬಳಿಗಾರ ಅವರ ಕಥೆಗಳು, ಜಿ. ಎಸ್. ಶಿವರುದ್ರಪ್ಪ ಅವರ ಕವಿತೆಗಳು ಸೇರಿದಂತೆ ಹಲವು ಕನ್ನಡ ಕೃತಿಗಳನ್ನು ಇವರು ಇಂಗ್ಲಿಷ್ಗೆ ಅನುವಾದಿಸಿದ್ದಾರೆ.
ಇದನ್ನೂ ಓದಿ :
Ꭴ