ಅವಳ ಕಣ್ಣು ಬರಿದು ಬಸಿರು ತಣ್ಣಗೆ ಮಾಗಿ ಕಾಲದ ಕಪ್ಪೆಯಂತೆ
ಮನುಷ್ಯಸಹಜ ಹುಡುಕಾಟದ ಗುರಿ: ಘನತೆ - ಉದ್ದಿಶ್ಯ - ಕರ್ತೃತ್ವ ಶಕ್ತಿ
ಎರಡನೆಯ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ 1941ರಿಂದ 1945 ವರೆಗಿನ ಅವಧಿಯಲ್ಲಿ ಜರ್ಮನಿಯಲ್ಲಿ ನಾತ್ಸೀಗಳು ನಡೆಸಿದ ಯಹೂದಿಗಳ ಸಾಮೂಹಿಕ ಹತ್ಯಾಕಾಂಡಕ್ಕೆ The Holocaust ಎಂದು ಹೆಸರು. ಅದರಲ್ಲಿ ಸುಮಾರು 60 ಲಕ್ಷ ಯಹೂದಿಗಳನ್ನು ವ್ಯವಸ್ಥಿತವಾಗಿ ಕೊಲ್ಲಲಾಯಿತು. Holocaust ಎಂಬ ಪದ ಪ್ರಾಚೀನ ಗ್ರೀಕ್ನ holokaustosನಿಂದ ಲ್ಯಾಟಿನ್, ನಾರ್ಮನ್ ಮೂಲಕ ಇಂಗ್ಲಿಷ್ಗೆ ಬಂದದ್ದು. ಪ್ರಾಚೀನ ಗ್ರೀಕ್ನಲ್ಲಿ ಎರಡು ಬಗೆಯ ಪ್ರಾಣಿಬಲಿಗಳಿದ್ದುವಂತೆ: ಒಂದು, holokaustos (hólos, ಎಲ್ಲವನ್ನೂ + kaustós, ಸುಡುವುದು) — ಇದು ಪ್ರಾಣಿಗಳನ್ನು ಪೂರ್ತಿಯಾಗಿ ಸುಟ್ಟು ಬೂದಿಮಾಡಿ ದೇವರಿಗೆ ಇಡಿಯಾಗಿ ಅರ್ಪಿಸುವ ಸುಟ್ಟ ಎಡೆ (burnt-offering); ಇನ್ನೊಂದು, thúesthai — ತಿನ್ನಲು ಯೋಗ್ಯವಿರುವ ಭಾಗಗಳನ್ನು ಹುರಿದು ಭಕ್ತರಿಗೆ ಎಡೆಮಾಡಿ, ತಿನ್ನಲು ಆಗದಂಥ ಭಾಗಗಳನ್ನು ಒಲೆಗೆ ಬಿಸುಟು ಅವನ್ನು ದೇವರಿಗೆ ಎಡೆಮಾಡಿ — ಹೀಗೆ ದೇವರು ಮತ್ತು ಭಕ್ತರು ಸಹಪಂಕ್ತಿಯಾಗಿ ಊಟ ಮಾಡುವ ಬಗೆ (commensal sacrifice).
ಯಹೂದಿ ಮತದಲ್ಲೂ ಇದೇ ಬಗೆಯ ಅಗ್ನಿತರ್ಪಣಗಳಿವೆ. ಹೀಬ್ರೂ ಬೈಬಲ್ನಲ್ಲಿ qorban ōlā ಮತ್ತು zevach shelamim ಎಂಬ ಆಚರಣೆಗಳು ಮೇಲೆ ಹೇಳಿದ್ದನ್ನೇ ಹೋಲುತ್ತವೆ. ಅಗ್ನಿಗೆ ಆಹುತಿ ಕೊಡುವುದನ್ನು ಸೂಚಿಸುವ ಹೀಬ್ರೂನ ōlā ಅಥವಾ olah ಎಂಬ ಪದವು Holocaustಗೆ ಸಂವಾದಿಯಾಗಿದೆ. ಅದಕ್ಕೇ ಏನೋ ಯಹೂದಿಗಳು Holocaustನ ಬದಲು ಹೀಬ್ರೂನ ‘ಶೂವಾ’ (Shoah, ಭೀಕರ ವಿನಾಶ) ಎಂಬ ಪದವನ್ನು ಬಳಸುತ್ತಾರೆ.
ಅದೇ ರೀತಿ, ವರ್ಣಭೇದದ ಚರಿತ್ರೆಯಲ್ಲಿ ಅಪಾರ್ಥೈಡ್ನದು (aparthied) ಅತ್ಯಂತ ಕರಾಳ ಅಧ್ಯಾಯ ಎಂದು ಹೇಳಬಹುದು. 1948ರಿಂದ 1994ರವರೆಗಿನ ಅವಧಿಯಲ್ಲಿ ಸುಮಾರು 35 ಲಕ್ಷ ಕಪ್ಪು ಆಫ್ರಿಕನ್ನರನ್ನು ಬಲವಂತವಾಗಿ ಅವರ ಮೂಲ ಮನೆಗಳಿಂದ ಹೊರಹಾಕಿ ಅವರನ್ನು ಪ್ರತ್ಯೇಕವಾಗಿ ಬಿಳಿಯರಿಂದ ಮತ್ತು ಇತರ ಸೌತ್ ಆಫ್ರಿಕನ್ನರಿಂದ ದೂರ ಇರಿಸಲಾಯಿತು. ಅಪಾರ್ಥೈಡ್ಗೆ ಸಂಬಂಧಿಸಿದ ಹಿಂಸಾಚಾರದಲ್ಲಿ ಹತ್ತಾರು ಸಾವಿರ ಜನ ಜೀವ ಕಳೆದುಕೊಂಡರು.
ಹತ್ಯಾಕಾಂಡದಲ್ಲಿ ಬದುಕುಳಿದವರು (Holocaust Survivors) ಬರೆದ ಕೆಲವು ಪುಸ್ತಕಗಳನ್ನು ಪರಿಚಯಿಸುತ್ತ, ಜೊತೆಗೇ ಅಪಾರ್ಥೈಡ್ ಯುಗದ ಎರಡು ಕಾದಂಬರಿಗಳನ್ನು ಗಮನಿಸುತ್ತ, ಮನುಷ್ಯನ ಅಸ್ತಿತ್ವದ ಜೀವಶಕ್ತಿ ಮತ್ತು ಅವನ ಹುಡುಕಾಟದ ಗುರಿಗಳನ್ನು ಕುರಿತು ಕೆಲವು ವಿಚಾರಗಳನ್ನು ಸಂಕೇತ ಪಾಟೀಲ ಈ ಪ್ರಬಂಧದಲ್ಲಿ ನಮ್ಮ ಮುಂದಿಡುತ್ತಾರೆ. ಇದು ಮೂರು ಭಾಗಗಳಲ್ಲಿ ಪ್ರಕಟವಾಗಲಿದೆ. ಇದು ಮೊದಲ ಭಾಗ. ಎರಡನೆಯ ಭಾಗವನ್ನು ಇಲ್ಲಿ ಓದಬಹುದು. ಮೂರನೆಯ ಭಾಗ ಇಲ್ಲಿದೆ.
ಅಮೆರಿಕಾದ ‘ಸ್ವಾತಂತ್ರ್ಯದ ಘೋಷಣೆ’ಯು (Declaration of Independence) ಒಂದು ಬಹುಚರ್ಚಿತ ಅಭ್ಯಾಸಯೋಗ್ಯ ದಸ್ತಾವೇಜು. ಅದರ ಶುರುವಾತಿಗೆ ಬರುವ ‘unalieanable rights’ — ಯಾರೂ ಕಸಿದುಕೊಳ್ಳಲಾಗದ ಅಥವಾ ಪರಭಾರೆ ಮಾಡಲಾಗದ ಹಕ್ಕುಗಳು — ಎಂಬ ನುಡಿಗಟ್ಟು ಆಸಕ್ತಿಕರವಾಗಿದೆ. ತಾವು ಬ್ರಿಟಿಷ್ ಆಳ್ವಿಕೆಯಿಂದ ಪ್ರತ್ಯೇಕಗೊಳ್ಳುತ್ತಿರುವ, ಸ್ವಾತಂತ್ಯವನ್ನು ಘೋಷಿಸುತ್ತಿರುವ ಕಾರಣಗಳನ್ನು ಹೇಳುತ್ತ ಅದು ಕೆಲವು ಮೂಲಭೂತ ಸತ್ಯಗಳನ್ನು ನಾವು ಗುರುತಿಸಿ ಒಪ್ಪುವಂತೆ ಮನವಿ ಮಾಡಿಕೊಳ್ಳುತ್ತಿದ್ದಂತಿದೆ.
We hold these truths to be self-evident, that all men are created equal, that they are endowed by their Creator with certain unalienable Rights, that among these are Life, Liberty and the pursuit of Happiness.
ಈ ಕೆಲವು ಸತ್ಯಗಳು ಸ್ವಯಂಸಿದ್ಧವಾದುವು ಎಂದು ನಾವು ಭಾವಿಸಿದ್ದೇವೆ. ಎಲ್ಲ ಮನುಷ್ಯರನ್ನೂ ಸಮಾನರಾಗಿ ಸೃಷ್ಟಿಸಲಾಗಿದೆ. ಬೇರಾರೂ ಕಸಿದುಕೊಳ್ಳಲಾಗದ, ಬೇರಾರಿಗೂ ವರ್ಗಾಯಿಸಲಾಗದ ಕೆಲವು ಹಕ್ಕುಗಳು ಪ್ರತಿಯೊಬ್ಬರಿಗೂ ಅವರ ಸೃಷ್ಟಿಕರ್ತನಿಂದ ದತ್ತವಾಗಿವೆ. ಅವುಗಳಲ್ಲಿ, ಬದುಕು, ಸ್ವಾತಂತ್ರ್ಯ ಮತ್ತು ಸುಖದ ಗುರಿ, ಮಹತ್ತ್ವದುವು.
ಅದು pursuit of dignity ಎಂದಿರಬೇಕಾಗಿತ್ತೆನ್ನುವುದು ನನ್ನ ಯಾವತ್ತಿನ ಅನ್ನಿಸಿಕೆ. ಘನತೆಯ ಬಾಳಿನ ಹುಡುಕಾಟ, ಆತ್ಮಗೌರವದಿಂದ ಬದುಕುವ ಪ್ರಯತ್ನ ಮನುಷ್ಯನಿಗೆ ಸಹಜವಾದುದು. ಸುಖ ಎನ್ನುವುದು, ನೆಮ್ಮದಿಯಾಗಿರುವುದು ಅವುಗಳಷ್ಟಕ್ಕೇ ಗುರಿಯಾಗಲಾರವು; ಅವು ಸ್ಥಾಯಿಯಲ್ಲದವು. ಮನುಷ್ಯನ ಬದುಕುವ ರೀತಿಯಿಂದ, ಅವನ ಬೇರೇ ಯಾವುದೋ ಹುಡುಕಾಟದ ಪ್ರಕ್ರಿಯೆಯಲ್ಲಿ ಅವು ಆವಿರ್ಭವಿಸುವಂಥವು. ಅದು ಪ್ರತಿಯೊಬ್ಬರಿಗೂ ಎಷ್ಟರ ಮಟ್ಟಿಗೆ ದಕ್ಕುತ್ತದೆನ್ನುವುದು ಗೊತ್ತಿಲ್ಲ, ಆದರೆ ಪ್ರತಿ ಮನುಷ್ಯನೂ, ಅವನ ನೆಲೆ ಯಾವುದೇ ಆಗಿದ್ದರೂ ಘನತೆಯಿಂದ ಬದುಕಬಯಸುತ್ತಾನೆ ಎನ್ನುವುದು ಮಾತ್ರ ನಿಜ.
ಕುಂದೇರಾನ ಒಂದು ಬಹುಚರ್ಚಿತ ಮಾತನ್ನು ಇನ್ನೊಂದು ರೀತಿ ಹೇಳುವುದಾದರೆ, “The struggle of man against power is the struggle of dignity against an undignified life.” ಏಕೆಂದರೆ ಸಮಾಜಗಳು, ಅಧಿಕಾರಶಾಹಿ, ವ್ಯವಸ್ಥೆ ಮೊದಲು ಹೊಡೆತ ಕೊಡುವುದೇ ಮನುಷ್ಯನ ಆತ್ಮಗೌರವಕ್ಕೆ. ಅದರಿಂದ ತತ್ತರಿಸಿದವರು ಬದುಕಿರುವ, ಸ್ವತಂತ್ರವಾಗಿರುವ ಆಸೆಯನ್ನು ಕಳೆದುಕೊಳ್ಳತೊಡಗುತ್ತಾರೆ. ದೇಶಭ್ರಷ್ಟನಾಗುವ ಬದಲು ವಿಷ ಕುಡಿದು ಸಾಯುವುದನ್ನು ಆಯ್ದುಕೊಳ್ಳುವ ಸಾಕ್ರೇಟೀಸ್ ಸಾಯುವ ಮುನ್ನ ಹೇಳಿದ ಮಾತು, “The unexamined life is not worth living.” ಹಾಗೆಯೇ, “A life without dignity is less so.” ಸಾಹಿತ್ಯ ಮತ್ತು ನಿಜಜೀವನ ಎರಡರಲ್ಲೂ.
ಕಾರಂತರ ಚೋಮನೇ ಆಗಲಿ, ದೇವನೂರರ ಅಮಾಸ, ನಾಯಿಗುತ್ತಿ, ಧನಿಯರ ಸತ್ನಾರಾಯಣನ ದೆಸೆಯಿಂದ ಬಾಳೆಗೊನೆ ಕಳೆದುಕೊಂಡ ಮಕ್ಕಳು, ನಡುಬೀದಿಯಲ್ಲಿ ಅಪ್ಪ ಅಮ್ಮನ ಎಳೆದಾಟಕ್ಕೆ ಸಿಲುಕಿದ್ದ ಪುಟ್ಟ ಹುಡುಗ ರಾಮ, ಕುವೆಂಪು ಅವರ ಸುಬ್ಬಮ್ಮ, ಚಿತ್ತಾಲರ ಆಬೋಲೀನ; ಕುಟ್ಸೀಯ ಮೈಕಲ್ ಕೆ, ದಾಸ್ತೋಎವ್ಸ್ಕಿಯ ಮಿಶ್ಕಿನ್, ಅಚೇಬೆಯ ಒಕೋಂಕ್ವೋ … ಎಲ್ಲರ ತಲ್ಲಣದ ಸೆಲೆ ಒಂದೇ, ಅವರ ಹುಡುಕಾಟದ ಮೂಲ ನೆಲೆಯೂ ಒಂದೇ. ಮನುಷ್ಯನ ಕಟ್ಟಕಡೆಯ ಹೆಣಗಾಟವೇ ಅದು.
ಭಾರತದ ಸಂವಿಧಾನವು ವೈಯಕ್ತಿಕ ಘನತೆಯನ್ನು ಗುರುತಿಸುತ್ತದೆ. ಅದರ ಪೀಠಿಕೆಯಲ್ಲೇ ಎಲ್ಲ ಪ್ರಜೆಗಳಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜನೈತಿಕ ಸ್ತರಗಳಲ್ಲಿ ನ್ಯಾಯಯುತ ನಡತೆಯ ಹಾಗೂ ಹಲಬಗೆಯ ಸ್ವಾತಂತ್ರ್ಯ ಮತ್ತು ಸಮಾನತೆಯ ಹಕ್ಕುಗಳನ್ನು ಘೋಷಿಸಿ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಕಾಪಿಡುವ ವಾಗ್ದಾನವನ್ನು ನೀಡಲಾಗಿದೆ. ಅದರ ಜೊತೆಗೇ ದೇಶದ ಏಕತೆಯನ್ನೂ ಸಾಧಿಸುವ ಸಹೋದರತ್ತ್ವದ ಆಶಯವಿದೆ.
Dignity of the individual and the unity of the Nation.
ಇವೆರಡೂ ಉಪವಾಕ್ಯಗಳ ಸಹನಿಯೋಜನೆಯು (juxtaposition) ನನಗೆ ಆಸಕ್ತಿಕರವಾಗಿ ಕಂಡಿದೆ. ಮೂಲ ಉದ್ದೇಶ ಏನೇ ಇದ್ದರೂ ಕಾಲಕ್ರಮೇಣ ಅದರೊಳಗೆ ಅಡಗಿರುವ ಅಸಮಂಜಸತೆ ವ್ಯತಿರಿಕ್ತತೆಗಳ ಅರಿವು ಕಳೆದ 75 ವರ್ಷಗಳಲ್ಲಿ ನಮಗೆ ಸ್ಪಷ್ಟವಾಗಿ ಆಗುತ್ತಲೇ ಬಂದಿದೆ. ಕಳೆದ ಹಲವು ವರ್ಷಗಳಲ್ಲಂತೂ ವ್ಯಕ್ತಿಗಳ, ಸಣ್ಣ ಸಮುದಾಯಗಳ ಸಹಜ ಹಕ್ಕುಗಳ ಎದುರು ದೇಶದ ಹಿತಾಸಕ್ತಿಯನ್ನು ಎತ್ತಿಕಟ್ಟುವುದನ್ನು ನೋಡುತ್ತಲೇ ಬಂದಿದ್ದೇವೆ. ರಾಷ್ಟ್ರವಿರೋಧಿ, ಹಿಂದೂವಿರೋಧಿ, ಅರ್ಬನ್ ನಕ್ಸಲ್, ಪಾಕ್ ಏಜೆಂಟ್ ಇಂಥ ಪದಗುಚ್ಛಗಳ ಬಳಕೆ ಮುಖ್ಯಧಾರೆಗೆ ಸೇರಿಕೊಂಡಾಗ ನಮ್ಮ ಸಾಮುದಾಯಿಕ ಚಿಂತನೆಯ ಪ್ರಬುದ್ಧತೆ, ನಮ್ಮ ತತ್ತ್ವಮೀಮಾಂಸೆಯ ಗುಣಮಟ್ಟಗಳ ಬಗ್ಗೆ ಆತಂಕವಾಗದಿರದು. ನಮ್ಮ ಸಂವಿಧಾನದ ಮೂಲ ಆಶಯ ಅಮಾಯಕವೂ ಅಸಹಾಯಕವೂ ಎನ್ನಿಸದಿರದು.
ರೈತರ ಪ್ರತಿಭಟನೆಗಳು, CAA/NRC, ಕುಸ್ತಿಪಟುಗಳ ಬೇಡಿಕೆಗಳು, ಮಣಿಪುರದ ದಂಗೆ — ಇವೆಲ್ಲವುಗಳಲ್ಲಿ ಆಳ್ವಿಕೆಯು ಮನುಷ್ಯನ ಆತ್ಮಗೌರವವನ್ನೇ ಗುರಿಯಾಗಿಟ್ಟುಕೊಂಡು ತನ್ನ ಅಸ್ತ್ರಗಳನ್ನು ಚಲಾಯಿಸುತ್ತದೆ. ಒಂದು ಮತ, ಒಂದು ಭಾಷೆ, ಒಂದು ಸಂಸ್ಕೃತಿ ಎಂದು ಏಕರೂಪತೆಯನ್ನು ಹೇರಲು ಯತ್ನಿಸಿದಾಗ, ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಬಹುತ್ವವನ್ನು ಪ್ರಶ್ನಿಸತೊಡಗಿದಾಗ, ತಮ್ಮ ಆಹಾರದ ಹಕ್ಕಿಗಾಗಿ ಜನರು ರಸ್ತೆಗಿಳಿಯಬೇಕಾದಾಗ ಮೊದಲು ಹೇಳಿದ inalienable rights ನಿಜಕ್ಕೂ ನಿರಪೇಕ್ಷವೇ, ಎಂಬ ಪ್ರಶ್ನೆಯೇಳುತ್ತದೆ. ಇದು ಬಹುಸಂಸ್ಕೃತಿಯ ನಮ್ಮ ದೇಶದಲ್ಲಿ ತಮ್ಮದೇ ಅನನ್ಯ ಸ್ವರೂಪಪ್ರಜ್ಞೆಯನ್ನು ಪಡೆದುಕೊಳ್ಳುತ್ತಿದ್ದ ಸಣ್ಣ ಸಮುದಾಯಗಳ, ಅವುಗಳಿಗೆ ಸೇರಿದ ವ್ಯಕ್ತಿಗಳ ಆತ್ಮಗೌರವವನ್ನು ಮರೆಮಾಚುವ, ಅದಕ್ಕೊಂದು ಹೊಸ ರೂಪ ಬಳಿಯುವ ಯತ್ನ. ಹೊಸಬಣ್ಣದ ನೆವದಲ್ಲಿ ಕಟ್ಟಡದ ಅಂದಗೆಡಿಸಿ ಮೇಲೆ ತೇಪೆ ಹಚ್ಚುವ ಯತ್ನ.
Immanuel Kantನ ಪ್ರಕಾರ, ವ್ಯಕ್ತಿಗಳು ಯಾವುದೋ ಗುರಿಯನ್ನು ತಲುಪಲು ಅಗತ್ಯವಿರುವ ಸಾಧನಗಳಲ್ಲ; ಅವರೇ ಅಂತಿಮ ಗುರಿ. ಮನುಷ್ಯರೆಲ್ಲರಿಗೂ ಅವರ ಹಿನ್ನೆಲೆ, ಸ್ಥಾನ, ಮೊದಲಾದುವನ್ನು ಅವಲಂಬಿಸದ, ಯಾವುದೇ ಷರತ್ತಿಲ್ಲದ ಸಮಾನವಾದ ಮೌಲ್ಯವಿದೆ. ಮನುಷ್ಯನ ಘನತೆಯು ಸಾಟಿಯಿಲ್ಲದ್ದು, ಅದಕ್ಕೆ ಬೆಲೆ ಕಟ್ಟಲಾಗದ್ದು ಎಂದು ಅವನ deontology ಪ್ರತಿಪಾದಿಸುತ್ತದೆ. ಉಪಯುಕ್ತತಾವಾದವು (utilitarianism) ಪ್ರಯೋಜಕತೆಯನ್ನು, ಲೋಕಕಲ್ಯಾಣವನ್ನು ಎತ್ತಿ ಹಿಡಿಯುತ್ತದೆ. ವ್ಯಕ್ತಿಗಳು ಸಾಧನಗಳಾಗುತ್ತಾರೆ. Utilitarianismನ ಆಖೈರಾದ ರೂಪವೇ majoritarianism — ಬಹುಸಂಖ್ಯಾತವಾದ. ಅದಕ್ಕೆ ಲೋಕಕಲ್ಯಾಣ, “greater good” ಎಂಬ ವಾದವನ್ನು ಮುಂದೊಡ್ಡುತ್ತದೆ. ಇದು ದೇಶದ ಏಕತೆಯ ರೂಪವನ್ನೂ ತಾಳುತ್ತದೆ. ವ್ಯಕ್ತಿಯ ಸ್ವರೂಪಪ್ರಜ್ಞೆ, ಚಿಕ್ಕ ಸಮುದಾಯಗಳು ಕಟ್ಟಿಕೊಳ್ಳುತ್ತಿರುವ ಅಸ್ಮಿತೆಯ ಕಡೆ ಅದು ಲಕ್ಷ್ಯ ಕೊಡುವುದಿಲ್ಲವಷ್ಟೇ ಅಲ್ಲದೇ ಹುಮ್ಮಸ್ಸಿನಿಂದ ಅದನ್ನು ಸದೆಬಡೆಯುತ್ತದೆ.
ಮನುಷ್ಯನ ಆತ್ಮಗೌರವವನ್ನು ವ್ಯವಸ್ಥಿತವಾಗಿ ನಾಶ ಮಾಡಿದ ಆಧುನಿಕ ಜಗತ್ತಿನ ಅತ್ಯಂತ ಕರಾಳ ಕಾಲಘಟ್ಟಗಳಲ್ಲಿ ಎರಡನೆಯ ವಿಶ್ವಯುದ್ಧ ಮುಂಚೂಣಿಯದು. ಇಟ್ಯಾಲಿಯನ್ ವಿಜ್ಞಾನಿ ಮತ್ತು ಲೇಖಕ ಪ್ರೀಮೋ ಲೆವಿ (Primo Levi) ಬರೆದಿರುವ If this is a Man ಎಂಬ ಆತ್ಮವೃತ್ತಾಂತದ ಶುರುವಾತಿಗೆ ಈ ಪದ್ಯವಿದೆ.
ಇವನೊಬ್ಬ ಮನುಷ್ಯನೇ
ನೀವುಗಳು ನಿಮ್ಮ ಬೆಚ್ಚನೆಯ ಮನೆಗಳ
ಭದ್ರತೆಯಲಿ ಬದುಕುವವರು
ನೀವುಗಳು ಸಂಜೆಯಲಿ ಮರಳಿದಾಗ ಬಿಸಿಯೂಟದ
ಜೊತೆ ಅಕ್ಕರೆಯ ಮುಖಗಳ ಕಾಣುವವರು:
ಆಲೋಚಿಸಿ ಇವನೊಬ್ಬ ಮನುಷ್ಯನೇ
ಮಣ್ಣಿನಲಿ ದುಡಿವವನು
ನೆಮ್ಮದಿ ಗೊತ್ತಿಲ್ಲದವನು
ರೊಟ್ಟಿ ತುಂಡಿಗೆ ಅಡರಾಯಿಸುವವನು
ಒಂದೇ ಹೂಂ ಇಲ್ಲಾ ಊಹೂಂ ದೆಸೆಯಿಂದ ಸಾಯುವವನು.
ಆಲೋಚಿಸಿ ಇವಳೊಬ್ಬ ಮನುಷ್ಯಳೇ
ಕೂದಲಿಲ್ಲದೆ ಹೆಸರಿಲ್ಲದೆ ಮತ್ತಿನ್ನು
ನೆನಪು ಮಾಡಿಕೊಳ್ಳಲು ಕಸುವೂ ಇಲ್ಲದೇ
ಅವಳ ಕಣ್ಣು ಬರಿದು ಬಸಿರು ತಣ್ಣಗೆ
ಮಾಗಿ ಕಾಲದ ಕಪ್ಪೆಯಂತೆ.
ಧೇನಿಸಿ ಇದು ಇಲ್ಲಿ ಹೀಗಾಯಿತು ಎಂಬುದರ ಬಗೆಗೆ:
ನಾನು ಈ ಒಂದಷ್ಟು ನುಡಿ ನಿಮ್ಮಗಳ ಮುಂದಿಡುತ್ತೇನೆ.
ಕಡೆಯಿಸಿಕೊಳ್ಳಿ ಅವನ್ನು ನಿಮ್ಮೆದೆಗಳಲ್ಲಿ ಮನೆಯಲ್ಲಿ, ಬೀದಿಯಲ್ಲಿ
ಹಾಸಿಗೆಗೆ ಒರಗುವಾಗ, ಎದ್ದೇಳುವಾಗ;
ಮತ್ತೆ ಮತ್ತೆ ಮೆಲುಕು ಹಾಕಿ ನಿಮ್ಮ ಮಕ್ಕಳ ಮುಂದೆ,
ಇಲ್ಲೆಂದರೆ ನಿಮ್ಮ ಮನೆ ಮುರಿದು ಬೀಳಲಿ
ಬೇನೆಗಳು ನಿಮ್ಮಗಳ ಕಾಲ್ಗೆಡಿಸಲಿ
ನಿಮ್ಮ ಮಕ್ಕಳು ನಿಮ್ಮೊಟ್ಟಿಗೆ ಮುಖ ಹರಿದುಕೊಳ್ಳಲಿ.
ಲೆವಿ ಒಬ್ಬ ರಸಾಯನಶಾಸ್ತ್ರಜ್ಞರು. ಎರಡನೆಯ ವಿಶ್ವಯುದ್ಧದ ಅವಧಿಯಲ್ಲಿ ಬಂಡುಕೋರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಇಟಲಿಯ ಗುಡ್ಡಗಾಡುಗಳಲ್ಲಿ ಅಲೆಯುತ್ತಿದ್ದವರು. ಅವರಿಗೆ ಸುಮಾರು ೨೪ ವರ್ಷದವರಿದ್ದಾಗ ಉಳಿದ ಯಹೂದಿಗಳಂತೆ ಅವರನ್ನೂ ಬಂಧಿಸಿ ಔಷ್ವಿಟ್ಜ಼್ (Auschwitz) ಕ್ಯಾಂಪ್ಗೆ ಒಯ್ಯಲಾಯಿತು. ಸುಮಾರು 20 ತಿಂಗಳು ಲಾಗರ್ನಲ್ಲಿ (Lager, ಕೂಲಿಯಾಳುಗಳ ಬಿಡಾರ) ಕಳೆದ ಅನುಭವಗಳನ್ನು ಕುರಿತು ಅಲ್ಲಿಂದ ಹೊರ ಬಂದ ಕೆಲವೇ ತಿಂಗಳುಗಳಲ್ಲಿ — ಆ ನೆನಪುಗಳ ಹಸಿ ಆರುವುದರ ಮೊದಲೇ — ಬರೆದರು. ಆ ಪುಸ್ತಕವೇ If this is a Man. ಮುಂದೆ ಲಾಗರ್ನಿಂದ ಹೊರಬಿದ್ದ ಮೇಲೆ ಮರಳಿ ಊರಿಗೆ ಬಂದು ತಲುಪುವ ಹಾದಿಯಲ್ಲಿ ನಡೆದ ಘಟನೆಗಳನ್ನೂ ಭೇಟಿಯಾದ ವ್ಯಕ್ತಿಗಳನ್ನೂ ಅನುಭವಗಳನ್ನೂ ಕುರಿತು The Truce ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
ಲೆವಿಯ ವೃತ್ತಾಂತ ಶುರುವಾಗುವುದು 1943ರಲ್ಲಿ. ಆ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ತಲೆಮರೆಸಿಕೊಂಡಿದ್ದ ಅವರು ಮತ್ತು ಅವರು ಸಂಗಡಿಗರನ್ನೂ ಫ್ಯಾಸಿಸ್ಟ್ ಪ್ರಜಾಸೇನೆಯವರು (militia) ಸೆರೆಹಿಡಿದರು. ಅವರನ್ನು ಇಟಲಿಯ ಮೊಡೆನಾದ ಹತ್ತಿರದ ಕ್ಯಾಂಪ್ಗೆ ಕಳಿಸಲಾಯಿತು. ಅಲ್ಲಿ ಸುಮಾರು 650 ಇಟ್ಯಾಲಿಯನ್ ಯಹೂದಿಗಳನ್ನು ಕ್ಯಾಂಪ್ನಲ್ಲಿ ಇರಿಸಿದ್ದರು. ಬಂಧಿಗಳಲ್ಲಿ ಕೆಲವು ಕುಟುಂಬಗಳೂ ಇದ್ದುವು. ಮುಂದೇನು ಎಂದು ಗೊತ್ತಿಲ್ಲದ ಅನಿಶ್ಚಿತತೆಯಲ್ಲಿ ಎರಡು ತಿಂಗಳು ಕಳೆದ ಮೇಲೆ ಅಲ್ಲಿಗೆ ಬಂದ SS ಪಡೆ ಒಂದು ಮುಂಜಾನೆ ಮರುದಿನ ಅವರು ಅಲ್ಲಿಂದ ಹೊರಡುವವರಿದ್ದಾರೆ ಎಂದು ತಿಳಿದು ಬಂತು. ಕೆಲವು ಭ್ರಾಮಕರನ್ನು ಬಿಟ್ಟರೆ ಉಳಿದವರಿಗೆಲ್ಲ ಆ ‘ಹೊರಡುವಿಕೆ’ಯ ಅರ್ಥ ಏನೆಂದು ತಿಳಿದಿತ್ತು. ಆ ರಾತ್ರಿ ಗಂಡಸರಲ್ಲಿ ಕೆಲವರು ಪ್ರಾರ್ಥಿಸುತ್ತ, ಉಳಿದವರು ಕುಡಿಯುತ್ತ ಕಟ್ಟಕಡೆಯ ಸಲ ಕುಡಿತದ ಅಮಲಿನಲ್ಲಿ ಎಲ್ಲವನ್ನೂ ಮರೆಯುವ ಪ್ರಯತ್ನದಲ್ಲಿದ್ದರೆ ತಾಯಂದಿರು ಮಾತ್ರ ರಾತ್ರಿಯೆಲ್ಲ ಎಚ್ಚರವಿದ್ದು ಕಾಳಜಿಯಿಂದ ಪ್ರಯಾಣದ ತಯಾರಿ ನಡೆಸುತ್ತಿದ್ದರು. ಅವರ ಸನ್ನಿವೇಶದ ಕರಾಳತೆಯನ್ನು ಲೆವಿ ಕೆಲವೇ ಸರಳವಾದ ಕರಾರುವಾಕ್ಕಾದ ಸಾಲುಗಳಲ್ಲಿ ಕಟ್ಟಿಕೊಡುತ್ತಾರೆ. ಅವರು ಕೇಳುವ ಒಂದು ಪ್ರಶ್ನೆ ನಮ್ಮನ್ನು ಬಹುಕಾಲ ಕಾಡಬೇಕು.
[..] ತಮ್ಮ ಮಕ್ಕಳ ಮೈತೊಳೆದು ಸಾಮಾನು ಜೋಡಿಸಿಟ್ಟುಕೊಂಡರು; ನಸುಕು ಹರಿದಾಗ ಗಾಳಿಗೆ ಆರಲೆಂದು ತಂತಿಗಳುದ್ದಕ್ಕೂ ಒಣಹಾಕಿದ್ದ ಚಿಕ್ಕಮಕ್ಕಳ ಒಗೆದ ಬಟ್ಟೆಗಳು ಕಂಡುವು. ಅವರು ಡೈಪರ್, ಆಟಿಕೆಗಳು, ಮೆತ್ತೆಗಳು ಇವೇ ಮೊದಲಾದ ತಾಯಂದಿರಿಗಷ್ಟೇ ನೆನಪಾಗುವ ಮತ್ತು ಮಕ್ಕಳಿಗೆ ಯಾವಾಗಲೂ ಬೇಕಾಗುವ ನೂರಾರು ಸಣ್ಣಪುಟ್ಟ ವಸ್ತುಗಳನ್ನೂ ಅವರು ಮರೆಯದೇ ಎತ್ತಿಟ್ಟುಕೊಂಡರು. ನೀವೂ ಅದನ್ನೇ ಮಾಡುತ್ತಿದ್ದಿರಲ್ಲವೇ? ಹೇಳಿ, ನಿಮ್ಮ ಮಗುವನ್ನು ನಾಳೆಯೇ ಕೊಲ್ಲುತ್ತಾರೆಂದರೂ ಇಂದು ಅದಕ್ಕೆ ತಿನ್ನಲು ಏನಾದರೂ ಕೊಡದೇ ಇರುತ್ತೀರಾ?
ರೈಲು ಹತ್ತಿದ ಮೇಲೆ ಎಲ್ಲಿ ಎಂಬ ಜಿಜ್ಞಾಸೆ. ಉತ್ತರಿಸುವವರಾರು? ಕೊನೆಗೂ ಒಂದು ಸಂಜೆ ರೈಲು ಹೊರಟಾಗ ಅವರಿಗೆಲ್ಲ, “ಗಮ್ಯದ ಹೆಸರು ತಿಳಿದಾಗ ನಿರಾಳವಾಗಿತ್ತು. Auschwitz: ಆ ಕ್ಷಣದಲ್ಲಿ ಆ ಹೆಸರು ನಮ್ಮ ಪಾಲಿಗೆ ಯಾವ ಮಹತ್ತ್ವವನ್ನೂ ಹೊಂದಿರಲಿಲ್ಲ. ಆದರೆ ಕಡೆಯ ಪಕ್ಷ ಅದು ಈ ಭೂಮಿಯ ಮೇಲೆಯೇ ಇರುವ ಯಾವುದೋ ಒಂದು ಜಾಗ ಎನ್ನುವುದಷ್ಟಂತೂ ತಿಳಿದಿತ್ತು." ಎಂದರೆ, ಅದು ಆ ಕ್ಷಣದ ಯಾವುದೇ ತರ್ಕಕ್ಕೆ ನಿಲುಕದ ನಿರುಮ್ಮಳತೆ! ನರಕವಂತೂ ಅಲ್ಲವಲ್ಲ. ಆದರೆ ಆ ಜಾಗಗಳಂತೂ ಭೂಮಿಯ ಮೇಲಿನ ನರಕಗಳು. ಮನುಷ್ಯರನ್ನು ಪಶುಗಳಿಗಿಂತಲೂ ಕಡೆಗೀಡುಮಾಡಿ ಪ್ರಯೋಜನಕ್ಕೆ ಬಾರದವರ ಜೀವವನ್ನೇ ತೆಗೆದು ಇನ್ನುಳಿದವರ ಆತ್ಮಗೌರವನ್ನು ಕೊಲ್ಲುವ ಜಾಗಗಳು.
ನಾತ್ಸೀಗಳು ತಮ್ಮ ಅಧಿಕಾರಾವಧಿಯುದ್ದಕ್ಕೂ ಬೇರೆಬೇರೆ ಬಗೆಯ ಶಿಬಿರಗಳನ್ನು ಕಟ್ಟಿ ಬಳಸುತ್ತಿದ್ದರು. Concentration Camp — ಚಿಕ್ಕ ಜಾಗದಲ್ಲಿ ಬಹಳಷ್ಟು ಸಂಖ್ಯೆಯ ಕೈದಿಗಳನ್ನು ಒತ್ತಟ್ಟಿಗೇ ಯಾವುದೇ ವಿಚಾರಣೆಯಿಲ್ಲದೆ ಬಂಧಿಯಾಗಿಟ್ಟ ಶಿಬಿರಗಳು. Forced Labour Camp — ಇವು ಕೂಲಿಯಾಳುಗಳ ಶಿಬಿರಗಳು. ಹೀಗೆಯೇ ತಾತ್ಕಾಲಿಕವಾದ Tranit Camp, Prisoners of War Campಗಳೂ ಇದ್ದುವು. ಇನ್ನುಳಿದದ್ದು, Extermination Camp, ಇದು ಅವರ ಪ್ರಕಾರ ‘ಅಂತಿಮ ಪರಿಹಾರ’ (Final Solution).
ನಾಲ್ಕು ದಿನಗಳ ಪ್ರಯಾಣದ ನಂತರ ಕೊನೆಗೊಮ್ಮೆ ರೈಲು ನಿಂತಾಗ ಮುಂದಿನ ಹತ್ತೇ ನಿಮಿಷಗಳಲ್ಲಿ ಎರಡು ಗುಂಪುಗಳನ್ನು ಮಾಡಲಾಗುತ್ತದೆ: ಆರೋಗ್ಯವಂತ ಗಂಡಸರು ಒಂದು ಕಡೆ; ಹೆಂಗಸರು, ಮಕ್ಕಳು ಮತ್ತು ಆರೋಗ್ಯವಂತರಲ್ಲದ ಗಂಡಸರು ಇನ್ನೊಂದು ಕಡೆ. ಮೊದಲನೆಯ ಗುಂಪನ್ನು “ಕೆಲಸವು ಸ್ವಾತಂತ್ರ್ಯವನ್ನು ಕೊಡುತ್ತದೆ” ಎಂಬ ಬೋರ್ಡ್ ಇದ್ದ ಜಾಗಕ್ಕೆ ಕರೆದೊಯ್ಯಲಾಗುತ್ತದೆ. ಎರಡನೆಯ ಗುಂಪು ಏನಾಯಿತೆಂದು ಅವರಿಗೆ ಗೊತ್ತಾಗುವುದಿಲ್ಲ; ರಾತ್ರಿ ಕತ್ತಲೆಯು ಅವರನ್ನು ನುಂಗಿಹಾಕುತ್ತದೆ. ಮುಂದಿನ ದಿನಗಳಲ್ಲಿ ದೂರದ ಚಿಮಣಿಗಳಿಂದೇಳುವ ಹೊಗೆ ದಟ್ಟ ಮಂಜನ್ನೂ ಮೀರಿ ಕೂಲಿಯಾಳುಗಳ ಬಿಡಾರದಲ್ಲಿದ್ದವರಿಗೆ ಕಂಡು ಅವರ ಆಹುತಿಯ ಕತೆಯನ್ನು ಸಾರುತ್ತದೆ.
ಇನ್ನುಳಿದವರಿಗೆ ಹೊಸಹುಟ್ಟು. ಹೊಸ ನಾಮಕರಣ. ಪ್ರೀಮೋ ಲೆವಿಯ ಹೊಸ ಹೆಸರು ‘ಹಾಫ್ಟ್ಲಿಂಗ್ ೧೭೪೫೧೭’ (Häftling, ಕೈದಿ). ಅಂದು ಹಾಕಿದ ಹಚ್ಚೆಯು ಸಾಯುವವರೆಗೆ ತೋಳಿನ ಮೇಲಿರುವಂಥದ್ದು. ಹೀಗೆ ಅರೆಗಳಿಗೆಯಲ್ಲಿ ಒಂದಿಡೀ ಅಸ್ತಿತ್ವವನ್ನು ಒಂದು ಸಂಖ್ಯೆಗೆ ಇಳಿಸಲಾಗುತ್ತಿತ್ತು. ಮನುಷ್ಯರಿಗೆ ಮಾತ್ರ ಹೆಸರಿರಲು ಸಾಧ್ಯ; ಇವರು ಮನುಷ್ಯರಲ್ಲವಲ್ಲ.
ಲಾಗರ್ನ ಎಲ್ಲ ಕಡೆ ಹಾಫ್ಟ್ಲಿಂಗ್ಗಳ ಸ್ವಚ್ಛತೆಯ ಬಗ್ಗೆ ಸೂಚನಾ ಫಲಕಗಳು:
ಒಂದು ಹೇನು ಕೂಡ ನಿಮ್ಮನ್ನು ಕೊಲ್ಲಬಲ್ಲುದು
ಶೌಚದ ನಂತರ ಊಟಕ್ಕೆ ಮೊದಲು
ಕೈತೊಳೆದುಕೊಳ್ಳಲು ಮರೆಯದಿರಿ
ಇದು ಎಷ್ಟರಮಟ್ಟಿಗೆ ಹಾಸ್ಯಾಸ್ಪದವೆಂದರೆ ಆ ಜಾಗದಲ್ಲಿ, ಆ ರಾಸಾಯನಿಕ ಮಿಶ್ರಿತ ಹೊಲಸು ನೀರಿನಲ್ಲಿ ಸ್ವಚ್ಛತೆಯ ಉದ್ದೇಶದಿಂದ ಮೈಕೈ ತೊಳೆದುಕೊಳ್ಳುವುದು ನಿರರ್ಥಕವಾದುದು. ಅಲ್ಲಿಯ ಪಾಯಖಾನೆಗಳು ತುಂಬಿ ಹರಿದು ಎಲ್ಲೆಡೆ ಕೊಚ್ಚೆಯಾಗುತ್ತಿತ್ತು. ಕೂಲಿಯಾಳುಗಳ ಡಾರ್ಮಿಟರಿಗಳಲ್ಲಿ ಅಲ್ಲಲ್ಲಿ ಉಚ್ಚೆಹುಯ್ಯಲು ಇಟ್ಟ ಬಕೀಟುಗಳು ತುಂಬುತ್ತಿದ್ದಂತೆ ಸರದಿಯ ಪ್ರಕಾರ ಎಲುಬನ್ನು ಕೊರೆಯುವಂಥ ಚಳಿಯ ರಾತ್ರಿಗಳಲ್ಲಿ ಹೊರಗೆ ಹೋಗಿ ಅವನ್ನು ಸುರಿದು ಬರಬೇಕಿತ್ತು. ಬೆಚ್ಚಗಾಗಲೆಂದು ಬಕೆಟ್ಟಿನಲ್ಲಿದ್ದ ಉಚ್ಚೆಯನ್ನು ಬೇಕೆಂದೇ ಮೈಮೇಲೆ ತುಳುಕಿಸಿಕೊಳ್ಳುವುದೂ ನಡೆಯುತ್ತಿತ್ತು.
ಲಾಗರ್ ಎನ್ನುವ ಆ ಬೃಹತ್ತಾದ ಕ್ರೂರ ಯಂತ್ರ ಮನುಷ್ಯನನ್ನು ಎಲ್ಲ ರೀತಿಯಲ್ಲೂ ಪಶುವಿನ ದರ್ಜೆಗೆ ಇಳಿಸುವಂಥದ್ದು. ಆದರೆ ಬದುಕುಳಿಯಬೇಕೆಂದರೆ ಮನುಷ್ಯರಾಗಿ ಉಳಿಯಲೇಬೇಕು. ಅನಿಶ್ಚಿತತೆಯ ಹತಾಶೆಯ ಆ ಅಸಾಮಾನ್ಯ ಪರಿಸರದಲ್ಲಿ ಸಾಧ್ಯವಾದಷ್ಟು ಸಾಮಾನ್ಯತೆಯನ್ನು ಕಂಡುಕೊಳ್ಳಬೇಕು. ದಿನನಿತ್ಯದ ಕಾರ್ಯಕಲಾಪಗಳು ಕೈದಿಗಳ ಜೀವಚೈತನ್ಯದ ಕುರುಹುಗಳು. ಆ ಕೊಳಕು ನೀರಿನಲ್ಲೇ ಸ್ನಾನ ಮಾಡುವುದು, ತಕ್ಕಮಟ್ಟಿಗೆ ಹಸನಾಗಿರುವುದು, ನಡೆ ನಿಲುವಿನಲ್ಲಿ ಸಂಯಮ ಸಾಧಿಸುವುದು ಅವರ ನೈತಿಕ ಅಸ್ತಿತ್ವದ ಪ್ರಶ್ನೆ.
ಸ್ನಾನ ಮಾಡುವುದು; ಮುಖ ತೊಳೆದುಕೊಂಡು ತಮ್ಮದೇ ಜಾಕೆಟ್ನಿಂದ ಒರೆಸಿಕೊಳ್ಳುವುದು; ಕೂಲಿಕೆಲಸಕ್ಕೆ ಹೋಗುವ ಮುನ್ನ ಹೇಗೋ ಏನೋ ಶೂಗಳನ್ನು ಪಾಲಿಶ್ ಮಾಡಿಕೊಳ್ಳುವುದು — ಇದು ನಿಯಮ ವಿಧಿಸಿರುವುದಕ್ಕಾಗಿಯಲ್ಲ, ನಮ್ಮ ಘನತೆಯನ್ನು ನಮ್ಮ ಸಭ್ಯತೆಯನ್ನು ಕಾಪಾಡಿಕೊಳ್ಳಲು, ಎಂಬ ಭಾವ. ಕಾಲೆಳೆದು ಹಾಕದೇ ತಲೆಯೆತ್ತಿ ನಡೆಯಬೇಕು — ಅದು ನಾತ್ಸೀಗಳ ಶಿಸ್ತನ್ನು ಪಾಲಿಸುವ ಸಲುವಾಗಿಯಲ್ಲ — ಆತ್ಮದ ಸಾವಿನ ಶುರುವಾತನ್ನು ತಡೆಯುವುದರ ಸಲುವಾಗಿ.
ಒಂದು ಚೂರು ಅತ್ತಿತ್ತ ಲಕ್ಷ್ಯ ಸರಿದರೂ ಶೂಗಳು, ತಟ್ಟೆ, ಲೋಟಗಳು, ಜಾಕೆಟ್ — ಇರುವ ಅಷ್ಟೇ ಸ್ವತ್ತಿನಲ್ಲಿ ಏನೋ ಒಂದು ಕಳ್ಳತನ ಆಗುವುದು ಮಾಮೂಲಾಗಿತ್ತು. ಈ ಕದ್ದ ಮಾಲುಗಳದೇ ಮಾರುಕಟ್ಟೆಯೂ ಇತ್ತು. ಎಲ್ಲ ಕಳ್ಳರ ನಡುವೆ ಒಬ್ಬಿಬ್ಬರೇ ಸಂಭಾವಿತರಾಗಿರುವುದು ಸಾಧ್ಯವಿಲ್ಲದ ಮಾತಾಗಿತ್ತು ಎನ್ನುವುದಷ್ಟೇ ಅಲ್ಲದೇ ಚಿಕ್ಕಪುಟ್ಟ ಕಳ್ಳತನವು ಆ ಪರಿಸರಕ್ಕೆ ಸ್ವಾಭಾವಿಕವಾದ ವರ್ತನೆಯೂ ಆಗಿತ್ತು. ಅಂಥಲ್ಲಿಯೂ ಮನುಷ್ಯತ್ವದ ದರ್ಶನ ಆಗಾಗ ಆಗುತ್ತಿತ್ತು. ರೋಗಿಗಳು ಬೇಗ ಸುಧಾರಿಸಿಕೊಳ್ಳದಿದ್ದರೆ ಅವರನ್ನು ಗ್ಯಾಸ್ ಚೇಂಬರುಗಳಿಗೆ ಕಳಿಸಲಾಗುತ್ತಿತ್ತು. ಅಂಥ ಒಬ್ಬ ಕೈದಿ ಸಾಯಲು ಹೊರಟಾಗ ತನ್ನ ಚಮ್ಮಚೆ ಮತ್ತು ಚಾಕುಗಳನ್ನು ಲೆವಿ ಅವರಿಗೆ ಕೊಟ್ಟು ಹೋದ ಬಗ್ಗೆ ಬರೆಯುತ್ತಾರೆ. ಅವು ಸಾಯಲು ಹೊರಟವನ ಉಡುಗೊರೆಗಳು. ಅಂಥ ಕೆಲವರು ಮನುಷ್ಯತ್ವ ತೋರದಿದ್ದರೆ ತಾವೂ ಮನುಷ್ಯರೇ ಎನ್ನುವುದನ್ನು ಮರೆಯುವಂಥ ಪರಿಸ್ಥಿತಿ.
ಒಂದು ಕಡೆ ಲೆವಿ, “The conviction that life has a purpose is rooted in every fibre of man, it is a property of the human substance.” ಎಂದು ಹೇಳುತ್ತಾರೆ. ಆದರೆ ಬಂಧನದಲ್ಲಿ ‘ಮನುಷ್ಯತ್ವ’, 'ಸ್ವಾತಂತ್ರ್ಯ', ‘ಜೀವನೋದ್ದೇಶ’ದಂಥ ಘನವಾದ ಪದಗಳಂತೂ ಸರಿಯೇ ಸಾಮಾನ್ಯ ಪದಗಳೂ ಅರ್ಥ ಕಳೆದುಕೊಳ್ಳುತ್ತವೆ: ‘ಸುಸ್ತು’, ‘ಹೆದರಿಕೆ’, ‘ನೋವು’, ‘ಚಳಿಗಾಲ’ — ಇವನ್ನು ಸ್ವತಂತ್ರ ವ್ಯಕ್ತಿಗಳು ಹೇಳುವುದಕ್ಕೂ ಲಾಗರ್ನ ಕೈದಿಗಳು ಹೇಳಿಳುವುದಕ್ಕೂ ಯಥಾರ್ಥ ಸಂಬಂಧವೇ ಇಲ್ಲ. ಅಲ್ಲಿ ಮೈಕೊರೆಯುವ ಚಳಿಗಾಲವನ್ನು ಕಳೆದು ವಸಂತದವರೆಗೆ ಜೀವ ಹಿಡಿದಿಟ್ಟುಕೊಳ್ಳುವುದೇ ಉದ್ದಿಶ್ಯವಾಗುತ್ತದೆ.
If this is a Manನ 17 ಅಧ್ಯಾಯಗಳಲ್ಲಿ ಪ್ರೀಮೋ ಲೆವಿ ಅವರ ಈ ‘ಯಾತ್ರೆ’ಯ ಶುರುವಾದದ್ದರಿಂದ ಹಿಡಿದು ಯುದ್ಧದ ಕೊನೆಯ ಹಂತದವರೆಗೆ — ಎಂದರೆ axis powers ಸೋಲುವವರೆಗಿನ ಸುಮಾರು 20 ತಿಂಗಳ ಅವಧಿಯ ಅವರ ಅನುಭವಗಳಿವೆ. ಅದು ಕಾಲಕ್ರಮದ ಪ್ರಕಾರ ಇರದೇ ಅವರಿಗೆ ಮುಖ್ಯವೆನ್ನಿಸಿದ, ಅವರನ್ನು ತೀವ್ರವಾಗಿ ಬಾಧಿಸಿದ ಘಟನೆಗಳು ಅನುಭವಗಳ ಥಿಮ್ಯಾಟಿಕ್ ಕ್ರಮದಲ್ಲಿವೆ. ಎಲ್ಲಿಯೂ ಆತ್ಮಮರುಕ ತೋರುವುದಿಲ್ಲ, ಅತಿಭಾವುಕತೆಯಿಲ್ಲ. ಆದುದನ್ನು ಆದ ಹಾಗೆ neutral observerನ ರೀತಿಯಲ್ಲಿ ಹೇಳುತ್ತ ಹೋಗುತ್ತಾರೆ. ಅಂಥ ಸಂಕಷ್ಟಕೂಪದ ಆಳವನ್ನು ಹೊಕ್ಕು ಬಂದವರಿಗಷ್ಟೇ ಪ್ರಾಯಶಃ ಆ ರೀತಿಯ ನಿರ್ಲಿಪ್ತತೆ ಸಾಧ್ಯವೇನೋ.
1943ರ ಫೆಬ್ರವರಿಯಲ್ಲಿ ಇಟಲಿಯಿಂದ ರೈಲಿನಲ್ಲಿ ಹೊರಟ 650 ಜನರಲ್ಲಿ ಮರಳಿ ಇಟಲಿಗೆ ಬಂದವರು ಒಟ್ಟು ಮೂರು ಜನ. ಬದುಕುಳಿಯಬೇಕು, ನಾವು ನೋಡಿದ್ದನ್ನು, ಅನುಭವಿಸಿದ್ದನ್ನು ಹೇಳಲಿಕ್ಕಾದರೂ ಎಂಬ ಸಂಕಲ್ಪವೇ ಅವರನ್ನು ಇದನ್ನೆಲ್ಲ ಮೀರಿ ಬದುಕುಳಿಯುವಂತೆ ಮಾಡಿತೇನೋ.
ಪುಸ್ತಕದ ಕೊನೆಯ ಅನುಬಂಧದಲ್ಲಿ ಪ್ರೀಮೋ ಲೆವಿ, ತಮಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ. ಅದರಲ್ಲೊಂದು ಪ್ರಶ್ನೆ, “ಆ ಕಾಲದಲ್ಲಿ ತಮ್ಮ ದೇಶದಲ್ಲಿ ಏನು ನಡೆಯುತ್ತಿತ್ತೆಂದು ಸಾಮಾನ್ಯ ಜರ್ಮನ್ನರಿಗೆ ಗೊತ್ತಿತ್ತೇ?” ಅದಕ್ಕೆ ಸುದೀರ್ಘ ಉತ್ತರ ಕೊಡುವ ಲೆವಿ ಮೊದಲಿಗೆ ಕೇಳುವುದು: “ಯಾರಿಗೂ ಗೊತ್ತೇ ಆಗದಂತೆ ಯುರೋಪಿನ ಹೃದಯಸ್ಥಾನದಲ್ಲಿ ಹತ್ತಾರು ಲಕ್ಷ ಜನರ ನಿರ್ಮೂಲನೆ ನಡೆಯುತ್ತಲಿರಲು ಸಾಧ್ಯವಿತ್ತೇ?” ಜನರಿಗೆ ಎಲ್ಲ ವಿವರಗಳು ಗೊತ್ತಿರಲಿಕ್ಕಿಲ್ಲ, ಆದರೆ ಸುಳಿವಂತೂ ಸಿಕ್ಕಿರುತ್ತದೆ. ಆದರೆ ನಿರಂಕುಶ ಪ್ರಭುತ್ವದಲ್ಲಿ ಸತ್ಯವು ಸುಳ್ಳಾಗುತ್ತದೆ, ಸುಳ್ಳೇ ಸತ್ಯವಾಗುತ್ತದೆ. ಚರಿತ್ರೆಯನ್ನು ತಿರುಚಲಾಗುತ್ತದೆ, ಅಳಿಸಲಾಗುತ್ತದೆ. ಸಾಮಾನ್ಯ ಜನರೂ ಒಂದು ಬೃಹತ್ propaganda machineryಯ ಭಾಗವಾಗುತ್ತಾರೆ.

ಸೃಷ್ಟಿಯ ಚರಿತ್ರೆಯ ಕಾಲಾವಧಿಯಲ್ಲಿ ಮನುಷ್ಯನ ಅಸ್ತಿತ್ವ ಇತ್ತೀಚಿನ ಕೆಲವು ಗಳಿಗೆಗಳಷ್ಟೇ ಮತ್ತು ಪ್ರಜಾಪ್ರಭುತ್ವದ ಅಸ್ತಿತ್ವದ ಕಡೆಯ ಗಳಿಗೆಯ ಒಂದು ಸಣ್ಣ ಅಂಶವಷ್ಟೇ. ಇಪ್ಪತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ ಜಗತ್ತಿನ ಎಲ್ಲೆಡೆ ಪ್ರಜಾಪ್ರಭುತ್ವಗಳು ಅಸ್ತಿತ್ವಕ್ಕೆ ಬರತೊಡಗಿದುವು. ಹಾಗಿದ್ದೂ ೨೧ನೆಯ ಶತಮಾನದ ಮೂರನೆಯ ದಶಕದಲ್ಲಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಒಲವನ್ನು ಕಾಣುತ್ತಿದ್ದೇವೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಕೋವಿಡ್ನ ನಿರ್ವಹಣೆ, ಕಡಿಮೆಯಾಗುತ್ತಿರುವ ಮಾಧ್ಯಮಗಳ ಸ್ವಾತಂತ್ರ್ಯ, ಸಾಮಾಜಿಕ ಜಾಲತಾಣಗಳ ಮೂಲಕ ನಡೆಸಲಾಗುವ ಪ್ರಾಪಗ್ಯಾಂಡಾ — ಹೀಗೆ ಈ ವಿದ್ಯಮಾನಕ್ಕೆ ಕಾರಣಗಳು ಹತ್ತು ಹಲವು ಇರಬಹುದು. ಈ ಕುಸಿತ ತಾತ್ಕಾಲಿಕವೂ ಇರಬಹುದು. ಇದು ನಮಗೆ ಎಚ್ಚರಿಕೆಯ ಕರೆಗಂಟೆಯಾಗಬೇಕೆನ್ನುವುದಂತೂ ನಿಜ. ಡೆಮಾಕ್ರಸಿಗಳ ಕುಸಿತವೆಂದರೆ ವೈಯಕ್ತಿಕ ಸ್ವಾತಂತ್ರ್ಯದ, ಘನತೆಯ ಕುಸಿತವೇ.