ಕಳೆದ ವರುಷದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFES) ಎಲ್ಲರ ಗಮನ ಸೆಳೆದ ಕನ್ನಡ ಚಲನಚಿತ್ರ ಫೋಟೋ (Photo), ಮಾರ್ಚ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗೋನವಾರ ಗ್ರಾಮದ ಉತ್ಸವ ಗೋನವಾರ (Utsav Gonwar) ಅವರ ಚೊಚ್ಚಲ ಸಿನೆಮಾ ಇದಾಗಿದೆ. ಲಾಕ್ಡೌನ್ ನಂತರದ ದಿನಗಳಲ್ಲಿ ಮಸಾರಿ ಟಾಕೀಸ್ ಮೂಲಕ "ಫೋಟೋ" ಮಾಡುವ ಸಾಹಸಕ್ಕೆ ಇವರು ಕೈ ಹಾಕಿದ್ದರು. “ಹೇಳಲೇಬೇಕಾದ ಕತೆಯದು, ನನಗೆ ಪರಿಚಯವಿದ್ದ ಮಾಧ್ಯಮ ಸಿನೆಮಾ. ಹಾಗಾಗಿ ಸಿನಿಮಾ ಆಗಿ ಇದು ಹೊಮ್ಮಿತುʼʼ ಎಂದು ಉತ್ಸವ ಹೇಳುವಾಗ ಅವರ ಕಣ್ಣುಗಳಲ್ಲಿ ಹೊಳಪು ಮಿಂಚಿ ಮಾಯವಾಗುತ್ತದೆ. ಎದೆಯಲ್ಲಿ ನಿಗಿನಿಗಿ ಕೆಂಡ ಹುದುಗಿದ್ದರೂ, ಅವರ ಸಮಚಿತ್ತ ಬೆರಗುಗೊಳಿಸುತ್ತದೆ. ಮಿತಭಾಷಿಯೂ ಸಂಕೋಚ ಸ್ವಭಾವದವರೂ ಆದ ಈ ತರುಣ ಮಾತಿಗಿಂತ ಮೌನಕ್ಕೆ, ಕಾಯಕಕ್ಕೆ ಹೆಚ್ಚು ಆದ್ಯತೆ ನೀಡುವಂಥವರು. ಈ ಮೌನಿಯ ಅಂತರಾಳವನ್ನು ಅಗೆಯುವ ಸಣ್ಣ ಪ್ರಯತ್ನವನ್ನು ಡಾ. ಹರೀಶ ಗಂಗಾಧರ ಮಾಡಿದ್ದಾರೆ.
ಉತ್ಸವ, ಈ ಚಿತ್ರದಲ್ಲಿ ನಟಿಸಿದ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ ಬಗೆ ತಿಳಿಸಿ. ದುರ್ಗ್ಯಾ ಪಾತ್ರದಲ್ಲಿ ನಮ್ಮನ್ನು ಸದಾ ಕಾಡುವ ವೀರೇಶ ಹೊರತಾಗಿ ಬೇರಾರೂ ನಿಮ್ಮ ಪ್ರಾಂತ್ಯದವರಲ್ಲ. ಈ ನಟನಾ ಬಳಗವನ್ನು ಹೇಗೆ ಈ ಚಿತ್ರಕ್ಕಾಗಿ ಒಗ್ಗಿಸಿದಿರಿ ಮತ್ತು ಒಗ್ಗೂಡಿಸಿದಿರಿ?
ನಾನು ಚಿತ್ರಕಥೆ ಬರೆಯುವ ಹಂತದಿಂದಲೇ ನಮ್ಮೂರಿನ ದುರ್ಗ್ಯಾ (ವೀರೇಶ್) ನನ್ನ ಜೊತೆಗಿದ್ದ. ಮಹದೇವ ಹಡಪದರ ನಾಟಕ ನೋಡಿದ್ದೆ, ಅವರೊಬ್ಬ ಅದ್ಭುತ ನಟ ಅಂತ ಗೊತ್ತಿತ್ತು. ಸಂಧ್ಯಾ ಮತ್ತು ಜಹಾಂಗೀರ್ ಅವರ ನಟನಾ ಸಾಮರ್ಥ್ಯದ ಬಗ್ಗೆ ಕೂಡ ತಿಳಿದಿತ್ತು. ಇವರೆಲ್ಲರೂ ಪಾತ್ರದಾಳಕ್ಕೆ ಇಳಿದು, ಅರ್ಥ ಮಾಡಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ. ಸಂಧ್ಯಾ ನಮ್ಮ ಹಳ್ಳಿಯಲ್ಲಿಯೇ ಒಂದು ತಿಂಗಳಿದ್ದು, ಇಲ್ಲಿಯ ಭಾಷೆ, ಜನರ ನಡವಳಿಕೆ, ನುಡಿಗಟ್ಟನ್ನು ಗಮನಿಸಿದ್ದಾರೆ. ಪಾತ್ರದ ತಯಾರಿಗಾಗಿ ಅವರು ಆಗಾಗ ಸಂತೆಗೆ ಹೋಗಿ ಗೋನವಾರ ಭಾಷೆಯಲ್ಲಿಯೇ ಚೌಕಾಸಿ ಮಾಡಿ ವ್ಯವಹರಿಸಿಯೂ ಬಂದಿದ್ದಾರೆ. ಇಲ್ಲಿನ ಚಿಣ್ಣರ ಜೊತೆ ಆಟವಾಡಿದ್ದಾರೆ. ಕಟ್ಟೆ ಮೇಲೆ ಕುಳಿತು ಹೆಣ್ಣುಮಕ್ಕಳೊಂದಿಗೆ ಹರಟೆ ಹೊಡೆದಿದ್ದಾರೆ. ಮಂಡ್ಯದವರಾದ ಅವರು ಒಂದೇ ತಿಂಗಳಲ್ಲಿ ಗೋನವಾರದವರೇ ಎನ್ನುವಷ್ಟು ಬೆರೆತು ಹೋಗಿದ್ದರು.
ಉತ್ತರ ಕರ್ನಾಟಕದ ಭಾಷೆ ಎಲ್ಲವೂ ಒಂದೇ ಥರ ಎಂದು ಜನರಲೈಸ್ ಮಾಡುವವರಿದ್ದಾರೆ. ಆದರೆ, ಧಾರವಾಡದ ಕನ್ನಡ ಬೇರೆ, ಬೆಳಗಾವಿಯ ಕನ್ನಡ ಬೇರೆ, ಬೀದರಿನ ಕನ್ನಡ ಬೇರೆ; ಹಾಗೇ ರಾಯಚೂರಿನ ಕನ್ನಡವೂ ಬೇರೆಯೇ. ಸಂಪೂರ್ಣ ಚಿತ್ರ ಗೋನಾವರದ ಕನ್ನಡದಲ್ಲಿದೆ. ಧಾರವಾಡದವರಾದ ಮಹದೇವ ಕೂಡ ನಮ್ಮ ಭಾಗದ ಕನ್ನಡವನ್ನು ಹೊಸದಾಗಿ ಕಲಿಯಬೇಕಾಯಿತು. ಅವರಿಗೆ ನಮ್ಮೂರಿನ ಭಾಷೆಯನ್ನು ರೆಕಾರ್ಡ್ ಮಾಡಿ ಕಳಿಸುತ್ತಿದ್ದೆವು. ಆದರೆ, ಬಳ್ಳಾರಿ ಜಿಲ್ಲೆಯ ಜಹಾಂಗೀರ್ ಅವರು ಮಾತ್ರ ರಾಯಚೂರಿನ ಕನ್ನಡವನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು. ಉದಾ, ನನ್ನ ಪ್ರಾಂತ್ಯದ ಜನ 'ಹ'ಕಾರದ ಬದಲಾಗಿ 'ಅʼಕಾರ ಉಚ್ಚರಿಸುತ್ತಾರೆ; ಹಾಲು-ಆಲು, ಹಟ್ಟಿ-ಅಟ್ಟಿ ಹೀಗೆ… ಈ ಚಿತ್ರದಲ್ಲಿ ಪಾತ್ರಗಳೂ ಇದನ್ನೇ ಅನುಸರಿಸಿವೆ. ಕೆಲ ಹಾಸ್ಯದೃಶ್ಯಗಳಲ್ಲಿ ಮಾತ್ರ ಬೆಂಗಳೂರಿನ ಕನ್ನಡವಿದೆ.
ನುರಿತ ಕಲಾವಿದರು ತಮ್ಮ ಶಕ್ತಿಮೀರಿ ಕೆಲಸ ಮಾಡಿದ್ದಾರೆ, ಅಷ್ಟೊಂದು ಸಮಯ, ಶ್ರಮ ಚಿತ್ರಕ್ಕಾಗಿ ಮೀಸಲಿಟ್ಟಿದ್ದಾರೆ. ಇದು ನಿಮ್ಮ ಮೊದಲ ಸಿನೆಮಾ, ತರುಣ ನಿರ್ದೇಶಕರಾದ ನೀವು ಅವರೆಲ್ಲರ ವಿಶ್ವಾಸವನ್ನು ಹೇಗೆ ಗಳಿಸಿದಿರಿ?
ಚಿತ್ರಕತೆ ಕೇಳಿದವರೆಲ್ಲರಿಗೂ, ಕತೆ ಚಿತ್ರವಾಗಲೇಬೇಕು ಎಂದು ಅನ್ನಿಸಿತು. ದುರ್ಗ್ಯಾ ಎಲ್ಲರನ್ನೂ ಅಷ್ಟೊಂದು ಕಾಡಿದ್ದಾನೆ. ಕತೆಯ ತೀವ್ರತೆ ಹಾಗಿದ್ದಾಗ ಯಾರನ್ನೂ ಪ್ರಯತ್ನಪೂರ್ವಕವಾಗಿ ಮನವೊಲಿಸುವ ಅಗತ್ಯವೇ ಬೀಳಲಿಲ್ಲ. Everybody was convinced!
ವಲಸಿಗರ ದುಃಖ, ವೈಯಕ್ತಿಕ ದುರಂತಗಳಿಂದ ಛಿದ್ರಗೊಂಡ ಬದುಕು, ಪ್ರಾಂತೀಯ ಅಸಮಾನತೆ, ಆಳುವವರ ಅಸಡ್ಡೆ... ಈ ಪದರಗಳೇ ಚಿತ್ರವನ್ನು ಶ್ರೀಮಂತಗೊಳಿಸಿವೆ. ಇವೆಲ್ಲವೂ ಪ್ರಜ್ಞಾಪೂರ್ವಕವಾಗಿ ಮೂಡಿದ್ದವುಗಳೇ?
ಈ ಚಿತ್ರಕ್ಕೆ ಕಥೆಯನ್ನು ಸಂಶೋಧನೆ ಮಾಡಿ ಬರೆದದ್ದಲ್ಲ. ನಾನು ಹುಟ್ಟಿನಿಂದಲೂ ನೋಡಿದ ಬದುಕದು. ಗೋನಾವರದಿಂದ ಬೆಂಗಳೂರಿಗೆ ಬರುವುದು ತುಂಬಾ ನಾರ್ಮಲ್. ಹೈದರಾಬಾದ್ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಬರುವವರಿಗೂ ಧಾರವಾಡದಿಂದ ವಲಸೆ ಬರುವವರಿಗೂ ಬಹಳ ವ್ಯತ್ಯಾಸವಿರುತ್ತೆ. ಕಾರಣಗಳೂ ಬೇರೆಯವೇ ಇರುತ್ತವೆ. ಕಟ್ಟಡ ಕಾರ್ಮಿಕರ ಬದುಕಿನ ಬಗ್ಗೆ ನನಗೆ ಚೆನ್ನಾಗಿಯೇ ಪರಿಚಯವಿದೆ. ಕತೆ ವೈಯಕ್ತಿಕ ಜೀವನಾನುಭವದಿಂದ ಹುಟ್ಟಿಲ್ಲವಾದರೂ, ನನಗೆ ಆ ವರ್ಗದ ಜನರ ಬದುಕಿನ ಬವಣೆಯ ಅರಿವಿದೆ. ಬೆಂಗಳೂರಿಗೆ ಬಂದು ಫೋಟೋ ತೆಗೆಸಿಕೊಳ್ಳಬೇಕು ಎನ್ನುವುದು ದುರ್ಗ್ಯಾನ ಕನಸು ಮಾತ್ರವಲ್ಲ, ಅದು ನನ್ನ ಕನಸೂ ಹೌದು ಅಷ್ಟೇ ಯಾಕೆ ನಮ್ಮ ಪ್ರಾಂತ್ಯದವರೆಲ್ಲರ ಕನಸೂ.
ನಮ್ಮೂರಿನ ಕಡೆಯಿಂದ ಬೆಂಗಳೂರಿಗೆ ಹೋಗಿ ಬಂದವರ ಮನೆಗಳಲ್ಲಿ ವಿಧಾನಸೌಧದ ಮುಂದೆ ತೆಗೆಸಿಕೊಂಡ ಫೋಟೋ ಇದ್ದೇ ಇರುತ್ತದೆ. ಫೋಟೋ ತೆಗೆಸಿಕೊಳ್ಳುವುದು ಹೊಸದಲ್ಲ, ಫೋಟೋ ತೆಗೆಸಿಕೊಳ್ಳೋಕೆ ಆಗದೆ ಇರೋದೂ ಹೊಸದಲ್ಲ. ಏಕೆಂದರೆ, ಹಾಸನದಿಂದ ಬೆಂಗಳೂರಿಗೆ ಬರೋದು ಬೇರೆ, ಮೈಸೂರಿನಿಂದ ಬೆಂಗಳೂರಿಗೆ ಬರೋದು ಬೇರೆ, ರಾಯಚೂರಿನಿಂದ ಬೆಂಗಳೂರಿಗೆ ಬಂದಾಗ ಆಗುವ ಅನುಭವವಿದೆಯಲ್ಲ ಅದೇ “ಫೋಟೋ” ಸಿನಿಮಾ. ನಮ್ಮ ಕಡೆಯಿಂದ ಬೆಂಗಳೂರಿಗೆ ಬರುವವರಿಗೆ ಬದುಕಲ್ಲಿ ಭರವಸೆಯಾಗಲಿ, ಆತ್ಮವಿಶ್ವಾಸವಾಗಲಿ ಇರುವುದಿಲ್ಲ. ಆ ಭಾಗದಿಂದ ಬಂದ ಎಲ್ಲರ ಬದುಕಿನ ಪ್ರತೀಕ ಈ “ಫೋಟೋ”.
ಗೋನವಾರ ಗ್ರಾಮದಲ್ಲಿ ನಿಮ್ಮ ಬಾಲ್ಯ ಹೇಗಿತ್ತು?
ಆ ದಿನಗಳಲ್ಲಿ ನಮ್ಮೂರಲ್ಲಿ ಏನೇ ಕೀಟಲೆ, ಕಿಡಿಗೇಡಿತನವಾದರೂ ನಾನೇ ಕಾರಣ ಎನ್ನುವಂತಾಗಿತ್ತು! ಊರವರಿಂದ ಸಾಕಷ್ಟು ಹೊಡೆದ ತಿನ್ನುತ್ತಿದ್ದೆ. ಒಮ್ಮೆ ಶಿರಸಿಯಲ್ಲಿ ಜಾನಪದ ಕ್ಯಾಂಪ್ ನಡೀತಾ ಇತ್ತು, ಅಲ್ಲಿಗೆ ನಾ ಹೋಗಿದ್ದೆ. ಯೇಸುದಾಸ್ ಎನ್ನುವವರು ನನ್ನನ್ನು ಗುರುತಿಸಿದರು. ಮುಂದೊಮ್ಮೆ ಅವರು ನಮ್ಮ ಹಳ್ಳಿಗೆ ಬಂದಾಗ “ಈ ಹುಡುಗನನ್ನು ಕರೆದುಕೊಂಡು ಹೋಗಿಬಿಡಿ, ಬಲು ಕೀಟಲೆ ಇವ” ಎಂದು ಎಲ್ಲರೂ ದೂರುತ್ತಿದ್ದಾಗ, ಯೇಸುದಾಸ್ ನನ್ನನ್ನು ನಿಜವಾಗಿಯೂ ಹಳ್ಳಿಯಿಂದ ಕರೆದುಕೊಂಡು ಹೊರಟರು! ಮುಂದೆ ಅವರ ಆಶ್ರಯದಲ್ಲೇ ಬೆಳೆದು ಮುಂಡಗೋಡಿನಲ್ಲಿ ಪದವಿ ಪೂರ್ವ ಕಾಲೇಜಿಗೆ ಸೇರಿದೆ.
ಕಲಾ ಪ್ರಕಾರಗಳಲ್ಲಿ ಸಿನಿಮಾ ಅತ್ಯಂತ ಕಠಿಣ ಮಾಧ್ಯಮ. ಸಿನಿಮಾ ಒಲವು ಮೂಡಿದ್ದು ಹೇಗೆ? ಮೊದಲ ಸಿನಿಮಾದಲ್ಲೇ ಇಷ್ಟೊಂದು ಪ್ರೌಢಿಮೆ ಹೇಗೆ ಸಾಧ್ಯವಾಯಿತು?
ಮೊದಮೊದಲು ಸಿನಿಮಾದ ಬಗ್ಗೆ ಎಲ್ಲರಂತೆ ನನಗೂ ಆಸಕ್ತಿಯಿತ್ತು. ಸಿನಿಮಾಗಳನ್ನು ನೋಡುತ್ತಾ ನೋಡುತ್ತಾ ನಿರ್ದೇಶಕನಾಗಬೇಕೆಂಬ ಆಸೆ ಚಿಗುರೊಡೆಯಿತು. ಎಂತಹ ವಿಷಯಗಳು ಚಲನಚಿತ್ರವಾಗಬೇಕೆಂಬುದರ ಕುರಿತು ಸ್ಪಷ್ಟತೆ ಹೆಚ್ಚಿತು. ಓದು ಅರಿವನ್ನು ವಿಸ್ತರಿಸಿತು.
ನಿಮ್ಮ ಮೇಲೆ ಪ್ರಭಾವ ಬೀರಿದ ಚಿತ್ರಗಳಾವುವು?
ವಿಟ್ಟೋರಿಯೋ ಡಿ ಸಿಕಾ ಅವರ The Bicycle Thief, ನಾಗರಾಜ್ ಮಂಜುಳೆಯವರ Fandry (ಫಂಡ್ರಿ) ನನ್ನನ್ನು ಬಹಳ ಪ್ರಭಾವಿಸಿದ ಚಿತ್ರಗಳು.
ನಿಮ್ಮ ಈ ಚಿತ್ರ ದುರಿತ ಕಾಲದ ದಾಖಲೆ. ಈ ಕಾಲದ ಸಾಮೂಹಿಕ ವಿಸ್ಮೃತಿಗೆ ಹಿಡಿದ ಕನ್ನಡಿ. ಚಿತ್ರ ನಿರ್ದೇಶಿಸುವಾಗ ಯಾವುದೇ ಸಂದೇಹ, ಅಳುಕು ಎದುರಾಯಿತೇ?
ನನ್ನ ಬಳಿ ಆಯ್ಕೆಯ ಪ್ರಶ್ನೆಯೇ ಇರಲಿಲ್ಲ. ನನ್ನ ಜನರ ಅನುಭವ ನನ್ನನ್ನು ಅತಿಯಾಗಿ ಕಾಡಿತ್ತು. ದುರಿತ ಕಾಲದ ದುರಂತವನ್ನು ದಾಖಲಿಸಲೇಬೇಕೆಂದು ದೃಢನಿರ್ಧಾರ ಮಾಡಿದ್ದೆ. ದಿಟ್ಟತನದಿಂದ ಮುನ್ನಡೆದೆ.
ಸಾಂಧರ್ಬಿಕ ಒತ್ತಡಕ್ಕೆ ಸಿಲುಕಿದ ಹಲವು ವ್ಯಕ್ತಿಗಳ ಚಿತ್ರಣ ಫೋಟೋ ಚಿತ್ರದಲ್ಲಿದೆ ಅಲ್ವೇ?
ಹೌದು, ವ್ಯಕ್ತಿಗಳಿಗೆ ಅವರವರ ಆಯ್ಕೆಗಳೇ ಇಲ್ಲದ ಕಾಲವದು. ಸರ್ಕಾರವೇ ಎಲ್ಲವನ್ನೂ ನಿರ್ಧರಿಸುತ್ತಿದ್ದ ಕಾಲದಲ್ಲಿ ಹಲವರು ಮಾನವೀಯತೆ ಮರೆತರು, ಕೆಲವರು ಮಾನವೀಯತೆ ಮೆರೆದರು.
ವಾಸ್ತವಿಕ ಸಿನಿಮಾ ಬಿಟ್ಟು ಬೇರೆ ಬಗೆಯ ಚಿತ್ರ ಮಾಡಲು ನಿಮಗೆ ಅವಕಾಶ ಸಿಕ್ಕರೆ?
ಬೇರೆಬೇರೆ ಬಗೆಯ (genre) ಚಿತ್ರಕತೆಗಳನ್ನು ಬರೆದಿದ್ದೇನೆ. ಆದರೆ “ಫೋಟೋ” ಚಿತ್ರಕತೆಯನ್ನು ಹೀಗೆಯೇ ಹೇಳಬೇಕೆಂಬ ಸ್ಪಷ್ಟತೆ ನನಗಿತ್ತು. ನನಗೆ ಬೇರೆ ರೀತಿಯಲ್ಲಿ ಕತೆ ಸಿಕ್ಕರೆ ಅದಕ್ಕೆ ಪೂರಕವಾದ genre ಹುಡುಕುವೆ, ಅಲ್ಲದೇ genre ನಿರ್ಧಾರ ಮಾಡೋದು ಕಥಾವಸ್ತು. ಅಂದಹಾಗೆ ಫೋಟೋ ಚಿತ್ರದಲ್ಲಿ ಹಿನ್ನೆಲೆ ಸಂಗೀತವೇ ಇಲ್ಲ. ಏಕೆಂದರೆ, ಈ ಕತೆ ಹಿನ್ನೆಲೆ ಸಂಗೀತವನ್ನು ಡಿಮ್ಯಾಂಡ್ ಮಾಡಲಿಲ್ಲ.
ಮಸಾರಿ ಟಾಕೀಸ್ ಅಂದ್ರೆ?
ಫೋಟೋ ಸಿನಿಮಾದ ಚಿತ್ರಕತೆಯ ನಂತರ ನಿರ್ಮಾಪಕರಿಗಾಗಿ ಹುಡುಕಾಡಿದೆ. ಚಿತ್ರ ನಿರ್ಮಾಣ ಮಾಡಲು ಯಾರೂ ಮುಂದೆ ಬರದಿದ್ದಾಗ, ಗೆಳೆಯರು ಸೇರಿ ಕಟ್ಟಿದ ಕಂಪನಿಯೇ ನಮ್ಮ ಮಸಾರಿ ಟಾಕೀಸ್. ಮಸಾರಿ ಎಂದರೆ ಕೆಂಪುಮಣ್ಣಿನ ಹೊಲ. ನಮ್ಮೂರಿನಲ್ಲಿ ಕಪ್ಪುಮಣ್ಣಿನ ಹೊಲಕ್ಕಿರುವ ಬೆಲೆ, ಕೆಂಪುಮಣ್ಣಿಗಿಲ್ಲ. ಬಡವರಿಗೆ ಸಾಲ ಕೊಟ್ಟು ಭೂಮಿ ಬರೆಸಿಕೊಳ್ಳುವವರೆಲ್ಲಾ ಕಪ್ಪುಮಣ್ಣಿನ ಎರೆ ಹೊಲವನ್ನೇ ಬರೆಸಿಕೊಳ್ಳುತ್ತಿದ್ದರು. ಆಗ ನಮಗೆ ಮಸಾರಿ ಮಾತ್ರ ಉಳಿಯುತಿತ್ತು. ಆದರೆ ಇತ್ತೀಚಿಗೆ ನೀರು ಬಂದ ಮೇಲೆ ಮಸಾರಿ ಫಲವತ್ತಾದ ಭೂಮಿಯಾಗಿದೆ.
ಈ ಚಿತ್ರ ದೃಶ್ಯಕಾವ್ಯದಂತೆ ಮೂಡಿದೆ. ಇದರ ಯಶಸ್ಸು ಶ್ರೇಯಸ್ಸು ಯಾರಿಗೆಲ್ಲ ಸಲ್ಲಬೇಕು?
2016ರಿಂದ ನಾನು ಕನ್ನಡ ಚಿತ್ರರಂಗದಲ್ಲಿ (ನಿರ್ದೇಶನ ತಂಡ) ಕೆಲಸ ಮಾಡುತ್ತಿದ್ದೇನೆ. ಆಗಿನಿಂದಲೂ ನನ್ನ ಸಂಪರ್ಕಕ್ಕೆ ಬಂದ ಬೇರೆ ರಾಜ್ಯದ, ಪ್ರಾಂತ್ಯಗಳ ತಂತ್ರಜ್ಞರೆಲ್ಲ ಇದರಲ್ಲಿ ಪಾಲ್ಗೊಂಡಿದ್ದಾರೆ. ನಿರ್ದೇಶಕ ತಂಡದ ಸೃಜನ್ ಬೆಳ್ಳಿ, ಗೌತಮ್ ಸೊರಟೂರು, ರಾಕೇಶ್ ಬೋಚಳ್ಳಿ, ವಿನೋದ್ ಗೋಕಾಕ್. ಕ್ಯಾಮೆರಾ ತಂಡದಲ್ಲಿ ಓಂಕಾರ್, ಶಾಹನವಾಜ಼್ ಷಾಜಿ, ರವಿ ಶಂಕರ್, ಹರೀಶ್ ಕುಮಾರ್ ರೈ ಮತ್ತು ಸಂಕಲನಕಾರ ಶಿವು ಇವರೆಲ್ಲರೊಂದಿಗೆ ಈ ಚಿತ್ರದ ಯಶಸ್ಸನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇನ್ನು, ಬರೆಯೋದು ಸುಲಭ ಆದರೆ ನನ್ನ ಕಲ್ಪನೆಯನ್ನು ದೃಶ್ಯ ಮಾಧ್ಯಮಕ್ಕೆ ತಂದು, ನನ್ನ ಕಲ್ಪನೆಗಳಿಗೆ ರೆಕ್ಕೆ ಕೊಟ್ಟವರು ಡಿಒಪಿ ಜವಾಬ್ದಾರಿ ಹೊತ್ತ ದಿನೇಶ್ ದಿವಾಕರನ್. ಚಿತ್ರದ ಪ್ರತಿ ದೃಶ್ಯವನ್ನು ಅವರೊಡನೆ ಚರ್ಚಿಸಿಯೇ ಹೆಣೆದದ್ದು.
ಚಿತ್ರದ ಕೊನೆಯ ದೃಶ್ಯ ನನ್ನ ಮನ ಕಲುಕಿತು. ಅಸಮಾನತೆ, ಆಳುವವರ ಅಸಡ್ಡೆ ಕುರಿತು ತೀವ್ರ ಆಕ್ರೋಶವಿದೆ ಅನ್ನಿಸಿತು.
ಪ್ರಾಂತೀಯ ಅಸಮಾನತೆ ಬಗ್ಗೆ ಬಹಳ ಬೇಸರವಿದೆ. ಮೊದಲಿನಿಂದಲೂ ನಾವಾಗಿಯೇ ಹೊಂದಾಣಿಕೆ ಮಾಡಿಕೊಂಡಿದ್ದು ಹೆಚ್ಚು. ಹೊಂದಾಣಿಕೆ ಮಾಡಿಕೊಳ್ಳುತ್ತಲೇ ಸಾಗಿದ್ದೇವೆ.