ವಿಲಿಯಂ ಫಾಕ್ನರ್ (William Faulkner, ಸೆಪ್ಟೆಂಬರ್ 25, 1897 – ಜುಲೈ 6, 1962) ಅಮೆರಿಕದ ಅತ್ಯಂತ ಪ್ರಭಾವಶಾಲಿ ಬರಹಗಾರರಲ್ಲಿ ಒಬ್ಬ. ಜನಪದ, ಕುಟುಂಬ ಇತಿಹಾಸಗಳಿಂದ ಹಿಡಿದು ಅಂತರ್ಯುದ್ಧದ ಸ್ಥಳೀಯ ದಂತಕತೆಗಳವರೆಗೆ ಮೌಖಿಕ ಕತೆ ಹೇಳುವ ಸಂಪ್ರದಾಯಗಳಲ್ಲಿ ಮಿಂದೆದ್ದವನು. ತನ್ನ ತಂದೆಯ ಮುತ್ತಜ್ಜ, ಅವನದೇ ಹೆಸರಿನ ವಿಲಿಯಂ ಕ್ಲಾರ್ಕ್ ಫಾಕ್ನರ್ (William Clark Falkner1) ಹೇಳುತ್ತಿದ್ದ ಕತೆಗಳಿಂದ ಪ್ರಭಾವಿತನಾಗಿದ್ದ. ಫಾಕ್ನರ್ನ ಅನೇಕ ಕೃತಿಗಳು ‘ಯಾಕ್ನಾಫಟಾಫ’ (Yoknapatawpha) ಎಂಬ ಕಾಲ್ಪನಿಕ ಕ್ರಿಯಾಕ್ಷೇತ್ರದಲ್ಲಿ ನಡೆಯುತ್ತವೆ. ತನ್ನ ಜೀವನದ ಬಹುಪಾಲು ಕಳೆದ ಮಿಸ್ಸಿಸ್ಸಿಪ್ಪಿಯ Lafayette County ಅದ್ಭುತ ಪುನರ್ಕಲ್ಪನೆ.
ವಾಕ್ಯ ರಚನೆಯ ಸಂಕೀರ್ಣತೆ, ಅರ್ಥಸಂದಿಗ್ಧತೆ, ಕಥಾಪರಿಸರದ ವಿಲಕ್ಷಣ ಚಿತ್ರಣ, ಪಾತ್ರಗಳಲ್ಲಿನ ವಿರೋಧಾಭಾಸಗಳು ಅವನ ಬರಹದ ಶೈಲಿಯಲ್ಲಿ ಎದ್ದುಕಾಣುವ ಅಂಶಗಳು. ಒಮ್ಮೊಮ್ಮೆ ತೀರ ಸಣ್ಣಪುಟ್ಟ ವಿವರಗಳೂ ಅರ್ಥವಾಗದ ತೀವ್ರವಾದ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತವೆ. ಅಂತೆಯೇ ಫಾಕ್ನರ್ನನ್ನು ಓದಿ ಅರ್ಥೈಸಿಕೊಳ್ಳುವುದು ಶ್ರಮ ಬೇಡುವ ಕೆಲಸ. ಅಷ್ಟೇ ಸಾರ್ಥಕ ಕೆಲಸವೂ ಹೌದು. ಮಾನವ ಮನಸ್ಸಿನ ಅತ್ಯಂತ ನಿಗೂಢ ಸ್ವಭಾವದ ಹುಡುಕಾಟಕ್ಕೆ; ವೈಯಕ್ತಿಕ, ಜನಾಂಗೀಯ, ಪ್ರಾದೇಶಿಕ ಗುರುತಿನ (ಎಲ್ಲ ಕಾಲದಲ್ಲೂ ಕಾಡುವ) ಜ್ವಲಂತ ಸಮಸ್ಯೆಗಳನ್ನು ತನಿಖೆ ಮಾಡಲು ಉದ್ದೇಶಪೂರ್ವಕವಾಗಿ ಇಂಥ ಬರಹದ ತಂತ್ರವನ್ನು ಬಳಸಿದವನು.
ವಿಲಿಯಂ ಫಾಕ್ನರ್ ಇಪ್ಪತ್ತನೆಯ ಶತಮಾನದ ಮೂರನೆಯ ದಶಕದಲ್ಲೇ ತನ್ನ ಅತ್ಯುತ್ತಮ ಕಾದಂಬರಿಗಳನ್ನು ಬರೆದ. ವಿಪರ್ಯಾಸವೆಂದರೆ ಆ ಕಾಲದಲ್ಲಿ ಓದುಗರು, ಅಷ್ಟೇಕೆ ವಿಮರ್ಶಕರು ಕೂಡ, ಆ ಕಾದಂಬರಿಗಳ ಮಹತ್ವವನ್ನು ಅರಿಯಲಾಗದೆ ಹೋದದ್ದು. ಕಾಲಕ್ರಮದಲ್ಲಿ ಆ ಕಾದಂಬರಿಗಳ ಪುನರ್ಮುದ್ರಣವಾಗದೆ ಓದುಗರ, ಹೊಸ ವಿಮರ್ಶಕರ ದೃಷ್ಟಿಯಿಂದಲೂ ಮರೆಯಾದವು. ಅಂಥ ಪರಿಸ್ಥಿತಿಯಲ್ಲಿ ಮಾಲ್ಕಂ ಕೌಲಿ ಎಂಬ ಪ್ರಸಿದ್ಧ ವಿಮರ್ಶಕ ‘ದಿ ಪೋರ್ಟಬಲ್ ಫಾಕ್ನರ್’ ಎಂಬ ಶೀರ್ಷಿಕೆಯಲ್ಲಿ ಫಾಕ್ನರ್ನ ಕೆಲವು ಅತ್ಯುತ್ತಮ ಕತೆಗಳನ್ನೂ ಕಾದಂಬರಿಗಳ ಕೆಲವು ಭಾಗಗಳನ್ನೂ ಸಂಪಾದಿಸಿ ಅದಕ್ಕೊಂದು ಅಭ್ಯಾಸಪೂರ್ಣ ಪ್ರಸ್ತಾವನೆಯನ್ನು ಬರೆಯುವ ಮೂಲಕ ಅವನೆಂಥ ಶ್ರೇಷ್ಠ ಲೇಖಕನೆಂಬುದನ್ನು ತೋರಿಸಿಕೊಟ್ಟ; ಅಸ್ತವ್ಯಸ್ತವಾಗಿ ಹರಡಿಕೊಂಡಿದ್ದ ಫಾಕ್ನರ್ನ ‘ಯಾಕ್ನಾಫಟಾಫ’ ಎಂಬ ಕಾಲ್ಪನಿಕ ಕ್ರಿಯಾಕ್ಷೇತ್ರದ ನಕಾಶೆಯೊಂದನ್ನು ರಚಿಸಿಕೊಂಡು, ಅದರೊಳಗೆ ಆ ಲೇಖಕ ಸೃಷ್ಟಿಸಿರುವ ‘ಮಾನವ ವಿಶ್ವದ ಅನುಭವ’ ಎಷ್ಟೆಲ್ಲ ವ್ಯಾಪಕವೂ ಗಾಢವೂ ಅನನ್ಯವೂ ಆಗಿದೆಯೆಂದು ವಿಶ್ಲೇಷಿಸಿದ. ಇದರ ಪರಿಣಾಮವಾಗಿ ಫಾಕ್ನರ್ಗೆ ಅದುವರೆಗೂ ಮರೀಚಿಕೆಯಾಗಿದ್ದ ಖ್ಯಾತಿಯೂ ವಿಮರ್ಶಾ ಮನ್ನಣೆಯೂ ದೊರೆಯಿತು; ಕಾಲಕ್ರಮದಲ್ಲಿ ನೊಬೆಲ್ ಪ್ರಶಸ್ತಿಯೂ ಲಭ್ಯವಾಯಿತು.
ಎಸ್ ದಿವಾಕರ್
Barn Burning (ಉರಿಸಿಂಗ2) ಕತೆ ವರ್ಗ ಸಂಘರ್ಷ, ಕುಟುಂಬ ನಿಷ್ಠೆ, ನ್ಯಾಯಕ್ಕಾಗಿ ಹೋರಾಟದಂಥ ಸಂಕೀರ್ಣ ವಿಷಯಗಳನ್ನು ಚಿಕ್ಕ ಹುಡುಗನ ನೈತಿಕ ಪ್ರಜ್ಞೆಯ ಮೂಲಕ ಶೋಧಿಸುತ್ತದೆ. ಬಡ ಹಿಡುವಳಿದಾರ ಆಬ್ನರ್ ಸ್ನೋಪ್ಸ್ ದಬ್ಬಾಳಿಕೆ ಮಾಡುವ ಶ್ರೀಮಂತ ಭೂಮಾಲಿಕರ ವಿರುದ್ಧ ಸೇಡು ತೀರಿಸಿಕೊಳ್ಳಲು ‘ಉರಿಸಿಂಗ’ನಾಗುವುದೇ ಕತೆಯ ಕೇಂದ್ರ. ಅಧಿಕಾರ-ಅಸ್ತಿತ್ವ, ಸರಿ-ತಪ್ಪು, ಪಿತೃ-ಕುಟುಂಬ ನಿಷ್ಠೆ ಜೊತೆಗೇ ಅಪ್ಪನ ಕೃತ್ಯಗಳ ಬಗ್ಗೆ ತನ್ನೊಳಗೆ ಬೆಳೆಯುತ್ತಿರುವ ಪ್ರಜ್ಞೆಯ ನಡುವೆ ಆಬ್ನರ್ ಮಗ ಸಾರ್ಟಿ ಅನುಭವಿಸುವ ಆಂತರಿಕ ಸಂಘರ್ಷವೇ ಕತೆಯ ತಿರುಳು.
ಎಲ್ಲ ಕಾಲದಲ್ಲೂ ಎಲ್ಲರಿಗೂ ಸಮಬಾಳು-ಸಮಪಾಲು ಎನ್ನುವ ಮನಸ್ಥಿತಿಯನ್ನು ತಲುಪುವುದು ನಾಗರಿಕ ಸಮಾಜಕ್ಕೊಂದು ಕಳೆ ತರುವುದರ ಜೊತೆಗೆ ಪರೀಕ್ಷೆಯೂ ಹೌದು. ಕತೆಯು ಅಮೆರಿಕ ಅಂತರ್ಯುದ್ಧದ ನಂತರದ ದಕ್ಷಿಣದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಅಲ್ಲಿ ಆಬ್ನರ್ನಂಥ ಹಿಡುವಳಿದಾರರು ದು ಸ್ಪಾಯ್ನ್ ನಂಥ ಶ್ರೀಮಂತ ಭೂಮಾಲಿಕರ ವಿರುದ್ಧ ಹೋರಾಡುತ್ತಾರೆ. ಆಬ್ನರ್ನ ‘ಕೊಟ್ಟಿಗೆಗೆ ಬೆಂಕಿ ಇಡುವ ಕೆಲಸ’ ವ್ಯವಸ್ಥೆಯ ವಿರುದ್ಧದ ದಂಗೆಯ ಒಂದು ರೂಪ. ಅಂತಿಮವಾಗಿ, ಇದರಿಂದೇನೂ ಹಿಂಸೆ ಮತ್ತು ಬಡತನದ ಚಕ್ರ ಶಾಶ್ವತವಾಗಿ ದೂರವಾಗುವುದಿಲ್ಲ: ಬದಲಿಗಿದು, ತಾನು ಬೆಳೆಸಿದ ವಿಷದ ಹಣ್ಣನ್ನು ಶತ್ರು ತಿಂದು ಸಾಯಲಿ ಎಂದು ಬಯಸುವ ಒಂದು ತೂಕದ ಕ್ರೌರ್ಯದ ಜೊತೆಗೆ; ಶತ್ರು ಬೆಳೆಸಿದ ಫಲ ಎಂಥದ್ದಾದರೂ ಆಗಿರಲಿ, ಕದ್ದು ತಿಂದು ನಷ್ಟವುಂಟು ಮಾಡಬೇಕೆಂದು ಬಯಸುವ ಇನ್ನೊಂದು ತೂಕದ ಕ್ರೌರ್ಯದಂಥ ಕೃತ್ಯವಷ್ಟೇ.
ಕತೆಯಲ್ಲಿ ಬೆಂಕಿ ಮೂಲಧಾತು. ವಿನಾಶ-ದಂಗೆ ಎರಡನ್ನೂ ಪ್ರತಿನಿಧಿಸುತ್ತದೆ. ಆಬ್ನರ್ನ ಕ್ರಿಯೆ ಅವನ ಕೋಪ-ಅಸಮಾಧಾನದ ಪ್ರಬಲ ಗುರುತಾದರೆ; ತಂದೆಯ ದಾರಿಯನ್ನು ಧಿಕ್ಕರಿಸಿ ಬೇರೆಯದೇ ಭವಿಷ್ಯವನ್ನು ಹುಡುಕುವ ಸಾರ್ಟಿ ವಿಷಯದಲ್ಲಿ ಬದಲಾವಣೆ-ರೂಪಾಂತರದ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. Barn Burning ಮಾನವೀ ಮನಸಿನ ಪ್ರಬಲ ಪರಿಶೋಧನೆಯಾಗಿದ್ದು; ವೈಯಕ್ತಿಕ ಗುರುತಿಗಾಗಿ ನ್ಯಾಯ-ನೈತಿಕತೆ-ಕುಟುಂಬ-ಸಮಾಜದ ಮಿತಿಯಲ್ಲಿ ಮನುಷ್ಯ ನಿರಂತರವಾಗಿ ಜಿದ್ದಿಗೆ ಬಿದ್ದು ಸೆಣಸಾಡುವುದನ್ನು ಚಿತ್ರಿಸುತ್ತದೆ.
ಜೆ ವಿ ಕಾರ್ಲೊ ಅನುವಾದದಲ್ಲಿ ಫಾಕ್ನರ್ನ Barn Burning.
ಉರಿಸಿಂಗ
ನ್ಯಾಯಾಧೀಶರು ಪಂಚಾಯಿತಿಗೆ ಕುಳಿತಿದ್ದ ಅಂಗಡಿ ಮಳಿಗೆ ಹಾಲಿನ ವಾಸನೆ ಹೊಡೆಯುತ್ತಿತ್ತು. ಜನರಿಂದ ಕಿಕ್ಕಿರಿದು ತುಂಬಿದ ಮಳಿಗೆಯಲ್ಲಿ ಮೊಳೆಗಳನ್ನು ತುಂಬಿಸಿದ್ದ ಒಂದು ಪೆಟ್ಟಿಗೆಯ ಮೇಲೆ ಹಿಂದೆ ಕುಳಿತಿದ್ದ ಹುಡುಗನಿಗೆ ಬರೇ ಹಾಲಿನ ವಾಸನೆಯಷ್ಟೇ ಅಲ್ಲ, ಅವನು ಕುಳಿತಲ್ಲಿನಿಂದ, ತೆರೆದ ಕಪಾಟುಗಳಲ್ಲಿ ಒತ್ತೊತ್ತಿಗೆ ಜೋಡಿಸಿದ್ದ ವಿವಿಧ ಆಕಾರದ, ಗಾತ್ರದ ಬಾಯೊಳಗೆ ನೀರೊಸರುವ ಮೀನು, ಮಾಂಸಗಳ ಖಾದ್ಯದ ಡಬ್ಬಿಗಳೂ ಕಾಣಿಸುತ್ತಿದ್ದವು. ಈ ಆಹ್ಲಾದಕರ ವಾಸನೆಯ ಜೊತೆಗೆ ಭಯ, ಹತಾಶೆ ಮತ್ತು ದುಃಖವೂ ಕಾಡುತ್ತಿತ್ತು. ಎಲ್ಲಕ್ಕಿಂತ ಮೊದಲು ರಕ್ತದ ನಂಟು ಅವನನ್ನು ಹಿಡಿದಿಟ್ಟಿತ್ತು. ಅವನು ಕುಳಿತಲ್ಲಿಂದ ನ್ಯಾಯಾಧೀಶರಾಗಲಿ, ಅವನ ತಂದೆಯಾಗಲಿ, ತಂದೆಯ ವೈರಿ (ಅಂದರೆ ನಮ್ಮ, ನನ್ನ ಮತ್ತು ನಮ್ಮಿಬ್ಬರ! ಅವನು ನನ್ನ ತಂದೆ!) ಕಾಣಿಸುತ್ತಿರಲಿಲ್ಲ. ಆದರೆ, ಅವರಿಬ್ಬರ ಮಾತುಗಳು ಅವನಿಗೆ ಕೇಳಿಸುತ್ತಿದ್ದವು. ಅವನ ತಂದೆ ಇದುವರೆಗೂ ಬಾಯಿ ಬಿಟ್ಟಿರಲಿಲ್ಲ:
“ನಿಮ್ಮ ಬಳಿ ಏನು ಪುರಾವೆ ಇದೆ ಮಿಸ್ಟರ್ ಹ್ಯಾರಿಸ್?”
“ನಾನು ನಿಮಗೆ ಮೊದಲೇ ಹೇಳಿದ್ದೆ. ಅವನ ಹಂದಿ ನನ್ನ ಜೋಳದ ಹೊಲಕ್ಕೆ ನುಗ್ಗಿತ್ತು. ಅದನ್ನು ಹಿಡಿದು ಅವನಿಗೆ ಹಿಂದಿರುಗಿಸಿದೆ. ಅದನ್ನು ಕೂಡಿ ಹಾಕಲು ಅವನ ಬಳಿ ಗೂಡಿರಲಿಲ್ಲ. ಆ ಬಗ್ಗೆ ಅವನಿಗೆ ತಿಳಿಸಿ ಎಚ್ಚರಿಸಿದ್ದೆ. ಮುಂದಿನ ಭಾರಿ ಅದನ್ನು ಹಿಡಿದು ನನ್ನ ಗೂಡೊಳಗೆ ಹಾಕಿದೆ. ಅವನು ಅದನ್ನು ಕೊಂಡೊಯ್ಯಲು ಬಂದಾಗ ಅವನು ಗೂಡನ್ನು ರಿಪೇರಿ ಮಾಡಿಸಿಕೊಳ್ಳಲು ಅಗತ್ಯವಿದ್ದ ತಂತಿ ಬಲೆಯನ್ನು ನಾನೇ ಕೊಟ್ಟಿದ್ದೆ. ಮುಂದಿನ ಭಾರಿ ಅವನ ಹಂದಿಯನ್ನು ನಾನೇ ಇಟ್ಟುಕೊಂಡೆ. ಅವನ ಮನೆಗೆ ಹೋಗಿ ನೋಡಿದಾಗ ನಾನು ಕೊಟ್ಟಿದ್ದ ತಂತಿ ಬಲೆ ಹೇಗೆ ಕೊಟ್ಟಿದ್ದೆನೋ ಹಾಗೇ ಅವನ ಅಂಗಳದಲ್ಲಿ ಬಿದ್ದಿತ್ತು. ಒಂದು ಡಾಲರನ್ನು ಪಾವತಿಸಿ ಅವನ ಹಂದಿಯನ್ನು ಕೊಂಡೊಯ್ಯಬಹುದೆಂದು ಅವನಿಗೆ ತಿಳಿಸಿ ಬಂದೆ. ಅದೇ ಸಂಜೆ ಯಾರೋ ಒಬ್ಬ ಕರಿಯ ಬಂದು ಒಂದು ಡಾಲರನ್ನು ಪಾವತಿಸಿ ಹಂದಿಯನ್ನು ಹೊತ್ತುಕೊಂಡು ಹೋದ. “ಅವನೊಬ್ಬ ಅಪರಿಚಿತ ಕರಿಯ. ಅವನು ನನಗೆ ‘ಸೌದೆ ಮತ್ತು ಹುಲ್ಲು ಉರಿಯಬಲ್ಲದು’ ಎಂದು ನಿಮಗೆ ತಿಳಿಸಲು ಹೇಳಿದ.” “ಏನು?” ನಾನು ಅರ್ಥವಾಗದೆ ಕೇಳಿದೆ. “ಸೌದೆ ಮತ್ತು ಹುಲ್ಲು ಉರಿಯಬಲ್ಲದು. ಅಷ್ಟೇ ಅವನು ಹೇಳಿದ್ದು.” “ಅಂದು ರಾತ್ರಿ ನನ್ನ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡಿತು. ಅದರೊಳಗಿದ್ದ ಸಾಮಾನುಗಳನ್ನು ಹೊರತೆಗೆದೆನಾದರೂ ಕೊಟ್ಟಿಗೆ ಬೆಂಕಿಗಾಹುತಿಯಾಯಿತು.”
“ಆ ಕರಿಯ ಎಲ್ಲಿಗೋದ? ಅವನು ಮತ್ತೆ ಸಿಕ್ಕಿದನೇ?”
“ನಾನು ಮೊದಲೇ ಹೇಳಿದಂತೆ ಅವನೊಬ್ಬ ಅಪರಿಚಿತ ಕರಿಯ.”
“ಆದರೆ, ಇದನ್ನು ಪುರಾವೆ ಎಂದು ಪರಿಗಣಿಸಲಾಗದು. ಏನಂತೀಯ?”
“ಹುಡುಗನನ್ನು ಕರೆಯಿರಿ. ಅವನಿಗೆ ಎಲ್ಲಾ ಗೊತ್ತು.” ಹುಡುಗ, ಒಂದು ಗಳಿಗೆ, ಅವನು ತನ್ನ ಅಣ್ಣನನ್ನು ಕರೆಯಲು ಹೇಳುತ್ತಿದ್ದಾನೆಂದು ಅಂದುಕೊಂಡ. ಆದರೆ, ವೈರಿ ಹ್ಯಾರಿಸ್, “ಅವನಲ್ಲ. ಸಣ್ಣವನನ್ನು ಕರೆಸಿರಿ,” ಅಂದ. ತನ್ನ ವಯಸ್ಸಿಗಿಂತಲೂ, ತಂದೆಯಂತೆಯೇ ತೆಳ್ಳಗೆ ಸಣ್ಣವನಾಗಿದ್ದು, ತನ್ನ ಅಳತೆಗಿಂತಲೂ ಕಿರಿದಾದ, ತೇಪೆ ಹಾಕಿದ್ದ ಮಾಸಲು ಜೀನ್ಸಿನೊಳಗೆ ಹುಡುಗ ಮತ್ತಷ್ಟು ಮುದುರಿ ಕುಳಿತಿದ್ದ. ಬೂದುಗಣ್ಣಿನ ಅವನ ಕೆಂದು ಕೂದಲು, ಗಾಳಿಗೆ ಸಿಲುಕಿದ ಮೋಡಗಳಂತೆ ಕೆದರಿತ್ತು. ಕುಳಿತಲ್ಲಿಂದಲೇ ಗಂಭೀರ ಮುಖಗಳನ್ನು ಹೊತ್ತ ಗಂಡಸರ ಸಾಲಿನ ತುದಿಯಲ್ಲಿ ಹೇಗೇಗೋ ಬಟ್ಟೆ ಧರಿಸಿ ಕನ್ನಡಕ ಧರಿಸಿದ್ದ ನ್ಯಾಯಾಧೀಶ ಅವನನ್ನು ಕರೆಯುತ್ತಿದ್ದ. ಬರಿಗಾಲಿನಲ್ಲಿ ಕುಳಿತಿದ್ದ ಹುಡುಗನಿಗೆ ಭೂಮಿ ಬಾಯ್ದೆರೆದು ಕುಸಿಯುತ್ತಿರುವಂತೆನಿಸಿತು. ಆದರೂ, ಭಾರವಾದ ಹೆಜ್ಜೆಗಳನ್ನೂರಿ ಅವನು ಮುಂದಡಿ ಇಟ್ಟ. ಅವನ ತಂದೆ, ಭಾನುವಾರಕ್ಕೆಂದೇ ಮೀಸಲಿಟ್ಟಿದ್ದ ಕರಿಕೋಟನ್ನು ಧರಿಸಿ, ಅವನೆಡೆಗೆ ದೃಷ್ಟಿಯನ್ನೂ ಹಾಯಿಸದೆ ನೆಟ್ಟಗೆ ಕುಳಿತುಕೊಂಡಿದ್ದ. ಅವನು, ನಾನು ಸುಳ್ಳು ಹೇಳಬೇಕೆಂದು ಬಯಸುತ್ತಿದ್ದಾನೆ, ಹುಡುಗ ಅಂದುಕೊಂಡ. ಅವನು ಹತಾಶೆ ಮತ್ತು ನೋವಿನಿಂದ ಕುಸಿಯತೊಡಗಿದ. ನಾನು ಅವನು ಬಯಸಿದಂತೆ ಹೇಳಲೇ ಬೇಕು.
“ನಿನ್ನ ಹೆಸರೇನೋ ಮರಿ?” ನ್ಯಾಯಾಧೀಶ ಕೇಳಿದ.
“ಕರ್ನಲ್ ಸಾರ್ಟೊರಿಸ್ ಸ್ನೋಪ್ಸ್,” ಹುಡುಗ ಪಿಸುಗುಟ್ಟಿದ.
“ಏಯ್, ಸ್ವಲ್ಪ ಗಟ್ಟಿಯಾಗಿ ಮಾತನಾಡೋ. ಕರ್ನಲ್ ಸಾರ್ಟೊರಿಸ್? ಈ ದೇಶದಲ್ಲಿ ಈ ಹೆಸರಿರುವ ಯಾರೇ ಆದರೂ, ಸತ್ಯವಂತರೇ ಆಗಿರುತ್ತಾರೆ. ಏನಂತೀರಾ?” ಹುಡುಗ ಏನೂ ಮಾತನಾಡಲಿಲ್ಲ. ವೈರಿ! ವೈರಿ ಅವನ ತಲೆಯೊಳಗೆ ಇದಿಷ್ಟೇ ಓಡುತ್ತಿತ್ತು. ಆ ಗಳಿಗೆಯಲ್ಲಿ ಅವನಿಗೆ ನ್ಯಾಯಾಧೀಶನ ಕರುಣಾಪೂರಿತ ಮುಖವಾಗಲೀ, ಅವನು ಹ್ಯಾರಿಸನ ಕಡೆಗೆ ತಿರುಗಿ, “ಈ ಪುಟ್ಟ ಹುಡುಗನನ್ನು ನಾನು ವಿಚಾರಿಸಬೇಕೆಂದು ನಿನಗೆ ನಿಜವಾಗಲೂ ಅನಿಸುತ್ತಿದೆಯೇ?” ಎಂದು ಕೇಳುವಾಗ ಅವನ ದನಿಯಲ್ಲಡಗಿದ್ದ ಗೊಂದಲವಾಗಲೀ ಗೋಚರಿಸಲಿಲ್ಲ. ಆದರೆ, ಕೆಲಕಾಲ ಆ ಮಳಿಗೆಯಲ್ಲಿ ಉಸಿರಾಡುವ ಶಬ್ದವೊಂದನ್ನು ಬಿಟ್ಟರೆ ನೆಲೆಸಿದ್ದ ಗಾಢಮೌನದಲ್ಲಿ ಅವನಿಗೆ; ದ್ರಾಕ್ಷಿ ಬಳ್ಳಿಯೊಂದನ್ನು ಹಿಡಿದು ಕಡಿದಾದ ಕಣಿವೆಯ ಆಚೆ ಬದಿಗೆ ಜಿಗಿಯುತ್ತಿರುವಾಗ, ತುತ್ತ ತುದಿಯಲ್ಲಿ ಸಮ್ಮೋಹನಗೊಳಿಸುವಂತೆ ಜಗ್ಗುತ್ತಿರುವ ಗುರುತ್ವಾಕರ್ಷಯಿಂದ ಎಲ್ಲವನ್ನೂ ಕಳಚಿಕೊಂಡು ಕಾಲವು ನಿಂತು ಹೋಗಿ ಭಾರರಹಿತವಾದಂತೆ ಭಾಸವಾಯಿತು.
“ಇಲ್ಲ!” ಹ್ಯಾರಿಸ್ ಗಡಸು ದನಿಯಲ್ಲಿ ಹೇಳಿದ, “ಅವನನ್ನು ಇಲ್ಲಿಂದ ಹೊರಗೆ ಕಳುಹಿಸಿ,” ಅವನ ಪಾಲಿಗೆ ನಿಂತು ಹೋದ ಕಾಲ ಮತ್ತೆ ಚಲಿಸತೊಡಗಿತು. ಮತ್ತೆ ಅದೇ ಹಾಲಿನ, ಡಬ್ಬದೊಳಗಿನ ಮಾಂಸದ ವಾಸನೆಯ ಜತೆಗೆ ಭಯ, ಹತಾಶೆ ಮತ್ತು ರಕ್ತ ಸಂಬಂಧದ ನೋವು ಅವನಿಗೆ ಕಾಡತೊಡಗಿತು:
“ಈ ಪ್ರಕರಣವನ್ನು ನಾನು ಇಲ್ಲಿಗೆ ಮುಚ್ಚಿ ಬಿಡುತ್ತೇನೆ. ನಿನ್ನ ವಿರುದ್ಧ ನನಗೆ ಯಾವುದೇ ಪುರಾವೆಗಳು ಸಿಗುತ್ತಿಲ್ಲ ಕಣಯ್ಯ ಸ್ನೋಪ್ಸ್. ಆದರೂ, ನಿನಗೆ ಕೆಲವು ಬುದ್ಧಿ ಮಾತುಗಳನ್ನು ಹೇಳಬಯಸುತ್ತೇನೆ. ಈ ಊರನ್ನು ಬಿಟ್ಟು ದೂರ ಹೋಗು. ಮತ್ತೆ ಎಂದೂ ಹಿಂದಿರುಗಿ ಬರಬೇಡ.”
ಮೊಟ್ಟ ಮೊದಲ ಭಾರಿ ಅವನ ತಂದೆ ಮಾತನಾಡತೊಡಗಿದ. ಅವನ ಧ್ವನಿ ತಣ್ಣಗೆ, ಕರ್ಕಶವಾಗಿ ಮಟ್ಟಸವಾಗಿತ್ತು. “ನನ್ನ ಉದ್ದೇಶವೂ ಅದೇ. ಈ --- (ಯಾರನ್ನೂ ನೇರವಾಗಿ ಉದ್ದೇಶಿಸದೆ ಅವನೊಂದು ಅವಾಚ್ಯ ಶಬ್ದ ಬಳಸಿದ) ಜನರ ಮಧ್ಯೆ ನಾನೂ ಇರಲು ಬಯಸುವುದಿಲ್ಲ.”
“ಸಾಕು! ಸಾಕು!!” ನ್ಯಾಯಾಧೀಶರು ಗದರಿದರು. “ಕತ್ತಲಾಗುವ ಮುನ್ನ ನಿನ್ನ ಗಾಡಿಯನ್ನು ಹೂಡಿ ಇಲ್ಲಿಂದ ಹೊರಡು. ಈ ವ್ಯಾಜ್ಯ ಇಲ್ಲಿಗೆ ಮುಕ್ತಾಯಗೊಳಿಸುತ್ತೇನೆ.”
ಅವನ ತಂದೆ ಹೊರಡಲು ತಿರುಗಿದ. ಕಪ್ಪು ಕೋಟು ಧರಿಸಿ ನೆಟ್ಟಗೆ, ಸೆಟೆದುಕೊಂಡು, ಸ್ವಲ್ಪ ಕುಂಟುತ್ತಾ ನಡೆಯುತ್ತಿದ್ದ ತಂದೆ ಎಂಬ ಆ ಸಣಕಲ ವ್ಯಕ್ತಿಯನ್ನು ಹುಡುಗ ಹಿಂಬಾಲಿಸತೊಡಗಿದ. ಮೂವತ್ತು ವರ್ಷಗಳ ಹಿಂದೆ ಅಂತರ್ಯುದ್ಧದ ಸಮಯದಲ್ಲಿ ಕದ್ದ ಕುದುರೆಯ ಮೇಲೆ ದೌಡಾಯಿಸುತ್ತಿರುವಾಗ ಸೇನಾ ಪೊಲೀಸರ ಗುಂಡು ಅವನ ಹಿಮ್ಮಡಿಯನ್ನು ಹೊಕ್ಕಿತ್ತು. ಹುಡುಗನ ಮುಂದೆ ಇಬ್ಬರಿದ್ದರು. ಅವರಲ್ಲೊಬ್ಬ ಅವನ ಅಣ್ಣ. ಜನ ಜಂಗುಳಿಯ ಮಧ್ಯದಿಂದೆಲ್ಲೋ ಬಂದು ಸೇರಿಕೊಂಡಿದ್ದ. ಅವನು ತಂದೆಗಿಂತೇನೂ ಎತ್ತರವಿರಲಿಲ್ಲ. ಆದರೆ, ದಪ್ಪಗಿದ್ದು ಬಾಯ್ತುಂಬಾ ಹೊಗೆಸೊಪ್ಪು ಅಗಿಯುತ್ತಲಿದ್ದ. ಅವರು ಗಂಭೀರ ಮುಖಭಾವ ಹೊತ್ತ ಎರಡು ಸಾಲು ಗಂಡಸರ ಮಧ್ಯದಲ್ಲಿ ನಡೆಯುತ್ತಿದ್ದರು. ಅಂಗಡಿ ಮಳಿಗೆಯಿಂದ ಹೊರಬಿದ್ದು, ಶಿಥಿಲಗೊಂಡಿದ್ದ ಮೊಗಸಾಲೆಯನ್ನು ದಾಟಿ, ಮುರುಕಲು ಮೆಟ್ಟಿಲುಗಳನ್ನು ಇಳಿದು, ಮೇ ತಿಂಗಳ ಆಹ್ಲಾದಕರ ಬಿಸಿಲಿಗೆ ನಾಯಿಗಳೂ ಮತ್ತು ಇನ್ನೂ ಹದಿವಯಸ್ಸಿಗೆ ಬಂದಿರದ ಹುಡುಗರು ನೆರೆದಿದ್ದ ಅಂಗಳಕ್ಕೆ ಇಳಿದರು. ಜನಜಂಗುಳಿಯಲ್ಲಿ ಯಾರೋ ತಂದೆಯನ್ನು ಅಣಕಿಸಿದ:
“ಕೊಟ್ಟಿಗೆ ಸುಡುವವನು!” ಎಂದು.
ಅವನು ಯಾರೆಂದು ಹುಡುಗ ತಿರುಗಿ ನೋಡಿದ, ಸರಿಯಾಗಿ ಕಾಣಿಸಲಿಲ್ಲ. ಕೆಂಪನೆಯ ಮಬ್ಬು ಬೆಳಕಿನಲ್ಲಿ ಅವನಿಗೆ ಬೆಳದಿಂಗಳ ಚಂದ್ರನಷ್ಟು ದೊಡ್ಡದಾದ ಮುಖ ಕಾಣಿಸಿತು. ಆ ಮುಖದವನು ಅವನ ಒಂದೂವರೆಯಷ್ಟಿದ್ದ. ಅವನು ಆ ಮುಖದ ಕಡೆಗೆ ಜಿಗಿದ. ಕೆಳಗೆ ಬಿದ್ದ. ಅವನ ತಲೆ ನೆಲಕ್ಕೆ ಬಡಿಯಿತು. ಆದರೂ, ಅವನಿಗೆ ನೋವಾಗಲಿ, ಆಘಾತವಾಗಲೀ ಆಗಲಿಲ್ಲ. ಅವನು ಮೇಲಕ್ಕೆದ್ದು ಮತ್ತೊಮ್ಮೆ ಆ ಮುಖದ ಕಡೆಗೆ ಜಿಗಿದ. ಈ ಭಾರಿಯೂ ಕೂಡ ಅವನಿಗೆ ಏಟಿನ ಅನುಭವವಾಗಲಿ ರಕ್ತದ ರುಚಿಯಾಗಲಿ ಅನುಭವವಾಗಲಿಲ್ಲ. ಅವನು ಮತ್ತೆ ಎದ್ದು ಜಿಗಿಯುವಷ್ಟರಲ್ಲಿ ಆ ಹುಡುಗ ಓಟಕಿತ್ತಿದ್ದ. ಇವನು ಇನ್ನೇನು ಅವನನ್ನು ಹಿಂಬಾಲಿಸಬೇಕೆನ್ನುವಷ್ಟರಲ್ಲಿ ಅವನ ತಂದೆ ಅವನನ್ನು ಹಿಂದಕ್ಕೆ ಎಳೆದು ಶೀತಲ ಗಡಸು ದ್ವನಿಯಲ್ಲಿ, “ಹೋಗಿ ಗಾಡಿ ಹತ್ತು,” ಎಂದ.
ಗಾಡಿ ರಸ್ತೆಯ ಆಚೆ ಬದಿಯಲ್ಲಿದ್ದ ಅಕೇಶಿಯ ಮತ್ತು ಹಿಪ್ಪುನೇರಳೆ ತೋಟದಲ್ಲಿತ್ತು. ಗಾಡಿಯೊಳಗೆ, ಭಾನುವಾರದ ಉಡುಪಿನಲ್ಲಿದ್ದ ಅವನ ಇಬ್ಬರು ದಢೂತಿ ಅಕ್ಕಂದಿರು, ಹ್ಯಾಟು ಧರಿಸಿದ್ದ ಅವನ ತಾಯಿ ಮತ್ತು ಚಿಕ್ಕಮ್ಮ ಮನೆಯ ಹಲವು ಸಾಮಾನುಗಳೊಟ್ಟಿಗೆ ಕುಳಿತಿದ್ದರು. ಅವನೊಮ್ಮೆ ಗಾಡಿಯೊಳಗೆ ನೋಡಿದ. ಒಂದು ಹಳೆಯ ಒಲೆ, ಮುರುಕಲು ಕುರ್ಚಿ, ಮಂಚಗಳು, ಹಾಳು ಬಿದ್ದ, ಅವನ ತಾಯಿಗೆ ವರದಕ್ಷಿಣೆಯಾಗಿ ಬಂದಿದ್ದ ಮದರ್ ಆಪ್ ಪರ್ಲ್ ಕೂರಿಸಿದ್ದ, ಎಂದೋ ಎರಡು ಗಂಟೆ ಹದಿನಾಲ್ಕು ನಿಮಿಷಕ್ಕೆ ನಿಂತು ಹೋಗಿದ್ದ ಪುರಾತನ ಗಡಿಯಾರ. ಅವನ ತಾಯಿ ಅಳುತ್ತಿದ್ದಳು. ಹುಡುಗನನ್ನು ನೋಡುತ್ತಿದ್ದಂತೆಯೇ ತೋಳಿಂದ ಕಣ್ಣುಗಳನ್ನು ಒರೆಸುತ್ತಾ ಗಾಡಿಯಿಂದ ಕೆಳಗಿಳಿದಳು. “ನೀನು ಮೇಲೆ ಹತ್ತು,” ಅಪ್ಪ ಅವಳಿಗೆ ಹೇಳಿದ.
“ಅವನಿಗೆ ಏಟಾಗಿದೆ. ನಾನು ಸ್ವಲ್ಪ ನೀರು ತಂದು ಅವನ...”
“ನೀನು ಗಾಡಿ ಹತ್ತು ಎಂದೆ,” ಎನ್ನುತ್ತಾ ಅವನೂ ಹಿಂದಿನಿಂದ ಗಾಡಿ ಹತ್ತಿ ಅವನ ಅಣ್ಣ ಆಗಲೇ ಕುಳಿತಿದ್ದ ಆಸನದಲ್ಲೇ ಕುಳಿತುಕೊಂಡು ಗಾಡಿಗೆ ಕಟ್ಟಿದ್ದ ಮುದಿ ಹೇಸರಗತ್ತೆಗಳಿಗೆ ವಿಲ್ಲೋ ಮರದ ರೆಂಬೆಯಿಂದ ರಪ್ಪನೇ ಎರಡು ಬಿಗಿದ. ಅದನ್ನೇನೂ ಕ್ರೌರ್ಯ ಎನುವಂತಿರಲಿಲ್ಲ. ಮುಂದೆ ಮೋಟರ್ ಕಾರುಗಳು ಅವಿಷ್ಕಾರಗೊಂಡಾಗ ಅವನ ಸಂತತಿ ಇದನ್ನೇ ಮಾಡುವವರಿದ್ದರು. ಕಾರನ್ನು ಚಲಿಸುವ ಮುನ್ನ ಕಾರಿನ ಎಂಜಿನನ್ನು ಏರಿಸುವುದು ಇಳಿಸುವುದು ಅಂದರೆ ಇದೇ ತಾನೆ? ಗಾಡಿ ಚಲಿಸಿತು. ಅಂಗಡಿ ಮಳಿಗೆಯಲ್ಲಿ ಹಾಜರಿದ್ದ ಜನರು ಗಾಡಿ ತಿರುವಿನಲ್ಲಿ ಮರೆಯಾಗುವವರೆಗೆ ನಿರ್ಲಿಪ್ತರಾಗಿ ಅವರೆಡೆಗೆ ನೋಡುತ್ತಲೇ ಇದ್ದರು. “ಮುಂದೆಂದೂ... ಬಹುಶಃ ಈಗ ಅವನಿಗೆ ಈಗ ತೃಪ್ತಿಯಾಗಿರಬೇಕು. ಯಾಕೆಂದರೆ ಅವನು...” ಎನ್ನುತ್ತಾ ಹುಡುಗ ಅಲ್ಲಿಗೇ ನಿಲ್ಲಿಸಿದ. ಮುಂದಿನದು ತನಗೂ ಕೇಳಿಸಬಾರದಿತ್ತು. ಅವನ ತಾಯಿ ಅವನ ಭುಜವನ್ನು ಸ್ಪರ್ಶಿಸಿದರು.
“ನೋವಾಗುತ್ತಿದೆಯಾ ಮಗಾ?”
“ಬಿಡಮ್ಮಾ ಅತ್ಲಾಗೆ… ಏನೂ ನೋವಾಗುತ್ತಿಲ್ಲ.”
“ನಿನ್ನ ಹಣೆ ಮೇಲಿರೋ ರಕ್ತನಾದ್ರೂ ಗಟ್ಟಿಯಾಗೋ ಮೊದ್ಲು ಒರೆಸೋ ಮಗ.”
“ಬಿಡಮ್ಮ, ರಾತ್ರಿ ಸ್ನಾನ ಮಾಡುವಾಗ ತೊಳೆದುಕೊಳ್ಳುತ್ತೇನೆ.”
ಗಾಡಿ ಹೋಗುತ್ತಲೇ ಇತ್ತು. ಅವರು ಎಲ್ಲಿಗೆ ಹೋಗುತ್ತಿದ್ದಾರೆಂದೇ ಅವನಿಗೆ ಗೊತ್ತಿರಲಿಲ್ಲ. ಅವರು ಯಾರೂ ಎಲ್ಲಿಗೆ, ಏನು ಎಂದು ಕೇಳುತ್ತಲೂ ಇರಲಿಲ್ಲ. ಅವರಿಗೆ ಯಾವುದಾದರೂ ಒಂದು ಜಾಗ ಕಾದಿರುತ್ತಿತ್ತು. ಅಲ್ಲಿಗೆ ತಲುಪಲು ಒಂದು ದಿನ, ಎರಡು ದಿನ, ಮೂರು ದಿನಗಳ ನಂತರವೂ ಆಗಬಹುದಿತ್ತು. ಅವನ ತಂದೆ ಯಾವ ಫಾರಮ್ಮಿನಲ್ಲಾದರೂ ಗುತ್ತಿಗೆ ಹಿಡಿಯುತ್ತಾನೆ. ನಂತರ ಯಥಾಪ್ರಕಾರ… ಅವನು ಮತ್ತೆ ತನ್ನ ಯೋಚನೆಗಳಿಗೆ ಕಡಿವಾಣ ಹಾಕಬೇಕಾಯಿತು. ಅದು ಅವನ ತಂದೆಯ ಹಳೆಯ ಚಾಳಿ. ಅವನ ತೋಳ ಸಮಾನ ಮೃಗೀಯ ಸ್ವಾತಂತ್ರ್ಯದಲ್ಲಿ ಏನೋ ವಿಶೇಷತೆ ಇತ್ತು. ಪರಿಸ್ಥಿತಿಯ ಲಾಭ ಅವನ ಕಡೆಗೆ ಇಲ್ಲದಿರುವಾಗಲೂ; ಆಗಂತುಕರೂ ಕೂಡ ಮೆಚ್ಚುವಂತಿರುತ್ತಿತ್ತುಅವನ ಧೈರ್ಯ. ಅವರು ಅವನನ್ನು ನಂಬುವಂತಿರಲಿಲ್ಲವಾದರೂ, ಅವನ ಸ್ವಸಾಮರ್ಥ್ಯದ ಮೇಲಿನ ಅಚಲ ನಂಬಿಕೆ ಅವರಿಗೂ ಉಪಯೋಗವಾಗುವುದರಲ್ಲಿ ಅನುಮಾನವಿರಲಿಲ್ಲ.
ಅಂದು ರಾತ್ರಿ ಅವರು ಒಂದು ಓಕ್ ಮರಗಳ ತೋಪಿನಲ್ಲಿ ಉಳಿದುಕೊಂಡರು. ಅಲ್ಲಿಯೇ ಒಂದು ತೊರೆ ಹರಿಯುತ್ತಿತ್ತು. ವಾತಾವರಣ ಬಹಳ ತಂಪಾಗಿತ್ತು. ಪಕ್ಕದಲ್ಲೇ ಇದ್ದ ಬೇಲಿಯ ಒಂದು ಕಂಬವನ್ನು ಕಿತ್ತು, ಅದರ ಸಣ್ಣ ಪುಟ್ಟ ಚಕ್ಕೆಗಳನ್ನು ಎಗರಿಸಿ ಅವನ ತಂದೆ ಸಣ್ಣ ಬೆಂಕಿಯನ್ನು ಉರಿಸಿದ. ಈ ರೀತಿಯ ಬೆಂಕಿ ಉರಿಸುವಲ್ಲಿ ಆತ ನಿಷ್ಣಾತನಾಗಿದ್ದ. ಎಷ್ಟೇ ಚಳಿ ಇದ್ದರೂ ಅವನ ತಂದೆ ಇಷ್ಟೇ ಬೆಂಕಿ ಉರಿಸುತಿದ್ದುದು. ಹುಡುಗ ಸ್ವಲ್ಪ ದೊಡ್ಡವನಾಗಿದ್ದಿದ್ದರೆ, ಯುದ್ಧ ಕಾಲದಲ್ಲಿ ಅಪಾರ ಆಸ್ತಿ ಪಾಸ್ತಿಗಳ ಅನಗತ್ಯ ನಷ್ಟ, ದುಂದುಗಾರಿಕೆಯನ್ನು ನೋಡಿರುವ ತಂದೆ, ಅದರಲ್ಲೂ ಬೇರೆಯವರ ಸ್ವತ್ತನ್ನು ಧಾರಾಳವಾಗಿ ಬಳಸಿಕೊಳ್ಳುವ ಪ್ರವೃತ್ತಿ ಅವನ ರಕ್ತದಲ್ಲೇ ಮಿಳಿತವಾಗಿರುವಾಗ, ಬೆಂಕಿ ಉರಿಸುವ ಬಗ್ಗೆ ಯಾಕಿಷ್ಟು ಕಂಜೂಸಿತನ ತೋರಿಸುತ್ತಿದ್ದಾನೆ ಎನ್ನುವ ಕುರಿತು ಏನಾದರೂ ಹೇಳಿರುತ್ತಿದ್ದನೇನೋ? ಅದಕ್ಕಿಂತ ಇನ್ನೂ ಮುಂದಕ್ಕೆ ಯೋಚಿಸಿ, ಬಹುಶಃ, ನಾಲ್ಕು ವರ್ಷಗಳ ಕಾಲ ಕುದುರೆಗಳೊಂದಿಗೆ (ತಂದೆಯ ಪ್ರಕಾರ ಸೆರೆ ಹಿಡಿದ ಕುದುರೆಗಳು) ಎರಡೂ ಕಡೆಯ ಸೈನಿಕರಿಂದ ಅಡವಿಯಲ್ಲಿ ಅವಿತುಕೊಂಡಿರುವಾಗ ಈ ಮಂದ ಉರಿಯ ಅಭ್ಯಾಸ ಅವನ ಮೆದುಳಿನಲ್ಲಿ ಅಚ್ಚೊತ್ತಿರಬಹುದೆಂದು ತರ್ಕಿಸುತ್ತಿದ್ದನೇನೋ? ಅವನಿಗೆ ಮತ್ತಷ್ಟೂ ವಯಸ್ಸಾಗಿದ್ದಿದ್ದರೆ, ಕೆಲವರ ವ್ಯಕ್ತಿತ್ವದೊಳಗೆ ಕಬ್ಬಿಣ, ಗುಂಡಿನ ಮದ್ದು ಮೂಲಧಾತುವಾಗಿರುವಂತೆ, ಅವನ ತಂದೆಯ ವ್ಯಕ್ತಿತ್ವದ ಮೂಲಧಾತು ಬೆಂಕಿಯಾಗಿರಬಹುದೆಂದು ತರ್ಕಿಸುತಿದ್ದನೆನ್ನಬಹುದು. ಇಂಥ ಒಂದು ಮೂಲಧಾತು ಇಲ್ಲದಿದ್ದಲ್ಲಿ ಅದೊಂದು ಅಪೂರ್ಣ ವ್ಯಕ್ತಿತ್ವವೆಂದೇ ಭಾವಿಸಬಹುದೇನೋ!
ಆ ಕುರಿತು ಹುಡುಗ ಮುಂದಕ್ಕೆ ಯೋಚಿಸಲಿಲ್ಲ. ಅವನು ತನ್ನ ಪುಟ್ಟ ಬದುಕಿನುದ್ದಕ್ಕೂ ತಂದೆಯ ಇಂಥ ಪುಟ್ಟ ಪುಟ್ಟ ಕಂಜೂಸಿ ಉರಿಗಳನ್ನು ಕಂಡಿದ್ದ. ಅದೇ ಬೆಂಕಿ ಎದುರು ತೂಕಡಿಸುತ್ತಾ ಕುಳಿತು ತನ್ನ ಕಬ್ಬಿಣದ ತಟ್ಟೆಯಲ್ಲಿ ಊಟ ಮಾಡುತ್ತಿರುವಾಗ ಅವನನ್ನು ತಂದೆ ಕರೆದ. ಕುಂಟುತ್ತಾ ಬಿರುಸಾಗಿ ಏರಿಯನ್ನು ಹಿಡಿದು ನಡೆಯುತ್ತಿದ್ದ ತಂದೆಯನ್ನು ಅವನು ಹಿಂಬಾಲಿಸಿ ರಸ್ತೆಯನ್ನು ತಲುಪಿದ. ಮೇಲೆ ನಕ್ಷತ್ರಗಳ ಬೆಳಕಿಗೆ, ಅವನದಲ್ಲದ ಮಂಡಿಯವರೆಗಿನ ಕೋಟಿನೊಳಗೆ ತಂದೆಯ ಮುಖ ಕಾಣಿಸುತ್ತಿರಲಿಲ್ಲ. ಅವನು ರಕ್ತ ಮಾಂಸವಿಲ್ಲದ, ತಗಡಿನಿಂದ ಕತ್ತರಿಸಿದ ಆಕೃತಿಯಂತೆ ಮಟ್ಟಸವಾಗಿ ಕಂಡ ಅವನಿಗೆ ಅವನ ಧ್ವನಿ ತಗಡಿನಂತೆ ಗಡಸು, ನಿರ್ಭಾವುಕವಾಗಿತ್ತು:
“ನೀನು ಅವರಿಗೆ ನನ್ನ ವಿರುದ್ಧ ಸಾಕ್ಷಿ ಹೇಳಲು ತಯಾರಿದ್ದೆ ಅಲ್ವೇನೋ? ಖಂಡಿತ ನೀನು ಆ ನ್ಯಾಯಾಧೀಶನಿಗೆ ಹೇಳುವವನಿದ್ದೆ.” ಹುಡುಗ ಉತ್ತರಿಸಲಿಲ್ಲ. ತಂದೆ ತನ್ನ ಗಡಸು ಕೈಯಿಂದ ಅವನ ಕಿವಿಯ ಬದಿಗೆ ಒಂದು ಏಟು ಕೊಟ್ಟ. ಏಟು ಬಲವಾಗಿತ್ತಾದರೂ ಯಾಂತ್ರಿಕವಾಗಿತ್ತು. ಅಭ್ಯಾಸ ಬಲದಿಂದ ಹೇಸರಗತ್ತೆಗಳಿಗೆ ಹೊಡೆದಂತಿತ್ತು. ಅವುಗಳ ಬೆನ್ನ ಮೇಲೆ ಕುಳಿತಿರುವ ನೊಣಗಳಿಗೂ ಕೂಡ ಕೈಗೆ ಸಿಕ್ಕ ಬಡಿಗೆಯಲ್ಲಿ ಹೊಡೆದಂತೆ. “ನೀನು ದೊಡ್ಡವನಾಗುತ್ತಿದ್ದೀಯ. ನಿನಗೆ ಇನ್ನೂ ಕಲಿಯಲಿಕ್ಕಿದೆ. ನೀನು ಯಾವಾಗಲೂ ನಿನ್ನ ರಕ್ತದ ಹಿತವನ್ನು ಕಾಯಬೇಕು, ಇಲ್ಲದಿದ್ದಲ್ಲಿ ನಿನ್ನ ರಕ್ತದ ಹಿತ ಕಾಯುವ ರಕ್ತವಿರುವುದಿಲ್ಲ. ಬೆಳಿಗ್ಗೆ ಅಲ್ಲಿ ಇಬ್ಬರಿದ್ದರಲ್ಲ ಅವರು ನಿನ್ನ ನೆರವಿಗೆ ಬರುತ್ತಿದ್ದರೆಂದು ತಿಳಿದುಕೊಂಡಿರುವೆಯಾ? ಅವರಿಗೆ ನನ್ನನ್ನು ಕೆಡವಬೇಕೆಂದಿತ್ತು ಅಷ್ಟೇ. ಅವರಿಗೆ, ನಾನು ಅವರನ್ನು ಯಾಮಾರಿಸಿದ್ದು ಇಷ್ಟವಾಗಿರಲಿಲ್ಲ.” ಮುಂದೆ, ಇಪ್ಪತ್ತು ವರ್ಷಗಳ ನಂತರ ಅವನಿಗೆ ಅವನೇ ಹೇಳಿಕೊಳ್ಳುವ ಸಂದರ್ಭ ಬಂದಿತು: “ನಾನು ತಂದೆಗೆ, ಅವರಿಗೆ ಬರೇ ಸತ್ಯ ಮತ್ತು ನ್ಯಾಯ ಬೇಕಿತ್ತು ಅಷ್ಟೇ ಎಂದು ಹೇಳಿದ್ದರೆ ಮತ್ತೆ ಅವನ ಕೈಯಿಂದ ಏಟು ತಿನ್ನಬೇಕಿತ್ತು.” ಹಾಗೆಂದು ಅವನು ಹೇಳಿರಲೂ ಇಲ್ಲ, ಅಳಲೂ ಇಲ್ಲ. ಸುಮ್ಮನೆ ನಿಂತಿದ್ದನಷ್ಟೇ. “ಉತ್ತರ ಕೊಡು,” ಅವನ ತಂದೆ ಗರ್ಜಿಸಿದ್ದ.
“ಹೌದು.” ಅವನು ಒಪ್ಪಿಕೊಂಡ. ಅವನ ತಂದೆ ಹಿಂದಿರುಗಲು ತಿರುಗಿದ.
“ಹೋಗು, ಮಲಗು. ನಾವು ನಾಳೆ ಅಲ್ಲಿಗೆ ತಲುಪುತ್ತೇವೆ.”
ಮಾರನೆಯ ದಿನ ಮಧ್ಯಾಹ್ನದಷ್ಟೊತ್ತಿಗೆ ಅವರ ಗಾಡಿ ಒಂದು ಎರಡು ಕೊಠಡಿಗಳ ಮನೆಯ ಬಳಿಗೆ ಬಂದು ನಿಂತಿತು. ಹತ್ತು ವರ್ಷದ ವಯಸ್ಸಿನ ಹುಡುಗ ಆಗಲೇ ಇಂಥ ಹನ್ನೆರಡು ಮನೆಗಳನ್ನು ನೋಡಿದ್ದ. ಎಂದಿನಂತೆ ಅವನ ತಾಯಿ ಮತ್ತು ಚಿಕ್ಕಮ್ಮ ಗಾಡಿಯಿಂದ ಇಳಿದು ಸಾಮಾನುಗಳನ್ನು ಇಳಿಸತೊಡಗಿದರು. ಅವನ ತಂದೆ, ಅಣ್ಣ ಮತ್ತು ಇಬ್ಬರು ಸೋದರಿಯರು ಕುಳಿತಲ್ಲಿಂದ ಮೇಲೇಳಲಿಲ್ಲ.
“ಹಂದಿಗಳಿಗೂ ಲಾಯಕ್ಕಿಲ್ಲದ ಗೂಡಿರಬೇಕು!” ಒಬ್ಬಳು ಸೋದರಿ ಮೂಗು ಮುರಿಯುತ್ತಾ ಹೇಳಿದಳು.
“ಏನೂ ಹೆದರಬೇಡ. ಅದು ಹಿಡಿಸುವುದಷ್ಟೇ ಅಲ್ಲ, ಇಷ್ಟನೂ ಆಗುತ್ತೆ! ಈಗ ಕೆಳಗೆ ಇಳಿದು ನಿಮ್ಮ ತಾಯಿಗೆ ನೆರವಾಗಿ.”
ದಢೂತಿ ಹುಡುಗಿಯರಿಬ್ಬರೂ ಕೆಳಗಿಳಿದರು. ಅವರ ಕೂದಲಿಗೆ ಕಟ್ಟಿದ್ದ ಅಗ್ಗದ ರಿಬ್ಬನ್ನುಗಳು ಗಾಳಿಗೆ ಹಾರಾಡುತ್ತಿದ್ದವು. ಒಬ್ಬಳು ಗಾಡಿಯಿಂದ ನಲುಗಿ ಹೋಗಿದ್ದ ಹಾಸಿಗೆ ಮತ್ತು ಜಡ್ಡುಗಟ್ಟಿದ ಲಾಟೀನು ಎಳೆದರೆ, ಮತ್ತೊಬ್ಬಳು ಒಂದು ಹಳೆ ಪೊರಕೆಯನ್ನು ಹೊರತೆಗೆದಳು. ಸಾಮಾನುಗಳನ್ನು ಇಳಿಸಿದ ಮೇಲೆ ಹೇಸರಗತ್ತೆಗಳನ್ನು ಕೊಟ್ಟಿಗೆಯಲ್ಲಿ ಕೂಡಿ ಅವುಗಳಿಗೆ ಮೇವು ಹಾಕಲು ಹಿರಿಯ ಮಗನಿಗೆ ಹೇಳಿ ಗಾಡಿಯ ಚಕ್ರವನ್ನು ಹಿಡಿದು ಕೆಳಗಿಳಿದು, ಹುಡುಗನಿಗೆ, “ನನ್ನ ಜೊತೆ ಬಾ,” ಎಂದ ಅಪ್ಪ. ಅದು ಅಣ್ಣನಿಗೆ ಹೇಳಿರಬಹುದೆಂದು ಹುಡುಗ ಮೊದಲು ಅಂದುಕೊಂಡಿದ್ದ.
“ನಾನಾ?” ಅದು ತಾನೇ ಎಂದು ಖಾತ್ರಿಪಡಿಸಿಕೊಳ್ಳಲು ಹುಡುಗ ಕೇಳಿದ.
“ಹೌದು, ನೀನೇ,” ಅವನ ತಂದೆ ಹೇಳಿದ.
“ಆಬ್ನರ್,” ಅವನ ತಾಯಿ ತಂದೆಯನ್ನು ಉದ್ದೇಶಿಸಿ ಹೇಳಿದರು. ಅಪ್ಪ ಹಿಂದಕ್ಕೆ ತಿರುಗಿ ತಾಯಿಯನ್ನೇ ನೆರೆತ ಹುಬ್ಬುಗಳನ್ನು ಗಂಟಾಗಿಸಿಕೊಂಡು ಅಸಹನೆಯಿಂದ ದಿಟ್ಟಿಸಿದ.
“ನಾಳೆಯಿಂದ ಮುಂದಿನ ಎಂಟು ತಿಂಗಳುಗಳವರೆಗೆ ನನ್ನನ್ನು ಅಡವಿಟ್ಟುಕೊಳ್ಳುವ ಯಜಮಾನನನ್ನು ಕಾಣಲು ಹೋಗುತ್ತಿದ್ದೇನೆ.”
ಅವರು ಬಂದ ದಾರಿಯಲ್ಲೇ ಹಿಂದಕ್ಕೆ ದಿಬ್ಬ ಹತ್ತಿ ನಡೆಯತೊಡಗಿದರು. ವಾರದ ಹಿಂದೆ ಅಥವಾ ಹಿಂದಿನ ರಾತ್ರಿ ತಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಅವನು ತಂದೆಯನ್ನು ಕೇಳಲಿದ್ದ. ಆದರೆ, ಇವತ್ತು ಕೇಳುವ ಹಾಗಿರಲಿಲ್ಲ. ಹಿಂದಿನ ರಾತ್ರಿ ತಂದೆ ಅವನ ಕಿವಿಯ ಮೇಲೆ ಬಾರಿಸಿದ್ದ. ಆದರೆ, ಏಕೆ ಏನು ಎಂದು ಅವನು ಹೇಳಿರಲಿಲ್ಲ. ತಂದೆಯ ಹೊಡೆತ ತಿಂದ ನಂತರದ ನೀರವತೆ, ಅವನ ತಂದೆಯ ಗರ್ಜನೆಯ ಮಾರ್ದನಿಯಷ್ಟೇ ಅವನಿಗೆ ಅರಿವಾಗಿದ್ದು. ಅವನು ಇನ್ನೂ ಹುಡುಗನಾಗಿದ್ದುದು ತೊಡಕಾಗಿದ್ದರೆ ಅದನ್ನು ಮೀರಿ ಮೇಲಕ್ಕೇರಲು ಮತ್ತೆ ಅದೇ ತೊಡಕಾಗಿತ್ತು.
ಅವನಿಗೆ ಮನೆ ಕಾಣಿಸದಿದ್ದರೂ ಅದು ಇರಬಹುದಾದ ಓಕ್, ಸೀಡಾರ್ ಮತ್ತಿತರ ಗಿಡ ಮರಗಳ ತೋಪು ಕಾಣಿಸಿತು. ಅವರು ಹನಿ ಸಕಲ್ ಬಳ್ಳಿ ಮತ್ತು ಚೆರೋಕಿ ಗುಲಾಬಿಗಳಿಂದ ಆವೃತ್ತವಾದ ಬೇಲಿಯ ಗುಂಟ ಸಾಗಿ ಒಂದು ಗೇಟಿನ ಬಳಿ ತಲುಪಿದರು. ಎರಡು ಇಟ್ಟಿಗೆ ಕಂಬಗಳ ಮಧ್ಯೆ ಕೂರಿಸಿದ್ದ ಗೇಟು ತೆರೆದಿತ್ತು, ಗೇಟಿನಿಂದ ಅನತಿ ದೂರದಲ್ಲಿ ಅವನಿಗೆ ಮೊದಲ ಬಾರಿ ಮನೆ ಕಾಣಿಸಿತು. ಮನೆ ನೋಡುತ್ತಿದ್ದಂತೆ ಅವನು ತಂದೆಯನ್ನು ಮರೆತುಬಿಟ್ಟ, ಅದರ ಜತೆಗೆ ಆತಂಕ ಮತ್ತು ಗಾಬರಿಯನ್ನೂ ಮರೆತು ಬಿಟ್ಟ. ಅವನಿಗೆ ಮತ್ತೆ ತಂದೆಯ (ಅವನು ಮುಂದಕ್ಕೆ ಸಾಗುತ್ತಲೇ ಇದ್ದ) ನೆನಪಾದಾಗಲೂ ಕೂಡ ಆತಂಕ ಮತ್ತು ಗಾಬರಿ ಮರುಕಳಿಸಲಿಲ್ಲ. ಏಕೆಂದರೆ ಅವರು ಈ ಮೊದಲು ಬಿಟ್ಟು ಬಂದಿದ್ದ ಹನ್ನೆರಡು ಜಾಗಗಳು ಸಣ್ಣ ಸಣ್ಣ ಫಾರಮ್ಮು, ಹೊಲ ಮತ್ತು ಮನೆಗಳ ಬಡ ಊರುಗಳು. ಇಷ್ಟು ದೊಡ್ಡ ಮನೆಯನ್ನು ಅವನು ಈ ಮೊದಲು ನೋಡಿರಲೇ ಇಲ್ಲ. ಇದು ದೊಡ್ಡ ಕೋರ್ಟು ಕಚೇರಿ ಇದ್ದಂತಿದೆ ಎಂದು ಅವನು ಮನಸ್ಸಿನಲ್ಲಿಯೇ ಅಂದುಕೊಂಡ. ಅವನಿಗೆ ಒಂದು ನಮೂನೆಯ ಖುಷಿ ಮತ್ತು ಸಮಾಧಾನವಾಯಿತು. ಅದಕ್ಕೆ ಕಾರಣವನ್ನು ಮಾತಿನಲ್ಲಿ ಅಭಿವ್ಯಕ್ತಗೊಳಿಸುವಷ್ಟು ಬುದ್ಧಿ ಅವನಿಗೆ ಬಂದಿರಲಿಲ್ಲ: ನಾವು ಅವನಿಂದ ಇಲ್ಲಿ ಸುರಕ್ಷಿತ. ಈ ಶಾಂತಿ, ನೆಮ್ಮದಿಗೆ ಭಾಜನರಾದವರು ಸದ್ಯ ಅವನ ಅಂಕೆಯಿಂದ ದೂರವಿರುತ್ತಾರೆ. ಅವನು ಏನು ಮಾಡಲು ಸಾಧ್ಯ? ಹಾರುತ್ತಿರುವ ಕಣಜದಂತೆ ಆಗಲೋ ಯಾವಾಗಲೋ ಒಮ್ಮೆ ಕಚ್ಚಬಹುದಷ್ಟೇ. ಈ ಪರಿಸರದ ಶಾಂತಿ ಸಮಾಧಾನವಾಗಲೀ, ಲಾಯ, ಕೊಟ್ಟಿಗೆಯಾಗಲೀ ಖಂಡಿತವಾಗಿಯೂ ಇವನ ಪುಟಗೋಸಿ ಬೆಂಕಿಗೆ ಆಹುತಿಯಾಗಲಾರವು... ತಂದೆಯ ನೇರ ಸೆಟೆದ ಆಕೃತಿ ಆ ಮನೆಯ ಎದುರು ಕಿಂಚಿತ್ತೂ ಕುಬ್ಜಗೊಂಡಂತೆ ಕಾಣಿಸುತ್ತಿರಲಿಲ್ಲ. ಆ ಮನೆ ಯಾವ ಕೋನದಿಂದ ನೋಡಿದರೂ ಹೊರಗೆ ಬೃಹತ್ತಾಗಿ ಕಾಣಿಸುತ್ತಿರಲಿಲ್ಲ. ಸಾಲುಗಂಬಗಳ ಪ್ರಶಾಂತವಾದ ಹಿನ್ನೆಲೆಯಲ್ಲಿ ಅದು ಅಭೇದ್ಯ ತಗಡಿನಿಂದ ನಿರ್ದಯವಾಗಿ ಕತ್ತರಿಸಿ ಇಟ್ಟಂತೆ ಕಾಣಿಸುತ್ತಿತ್ತು. ಸೂರ್ಯನ ಪಥಕ್ಕೆ ವಿರುದ್ಧವಾಗಿದ್ದುದರಿಂದ ಅದರ ನೆರಳೂ ಕೂಡ ನೆಲಕ್ಕೆ ಬೀಳುತ್ತಿರಲಿಲ್ಲ. ಮನೆಯ ಕಡೆಗೆ ನೇರವಾಗಿ ನಡೆಯುತ್ತಿದ್ದ ತಂದೆ, ದಾಟಿಕೊಂಡು ಹೋಗುವ ಅಥವಾ ಪಕ್ಕಕ್ಕೆ ಸರಿದು ಹೋಗುವ ಅವಕಾಶವಿದ್ದರೂ ಕೂಡ, ದಾರಿಯಲ್ಲಿ ಬಿದ್ದಿದ್ದ ಹಸಿ ಕುದುರೆ ಲದ್ದಿಯನ್ನು ತುಳಿದಿದ್ದು ಅವನಿಗೆ ಕಾಣಿಸಿತು. ಇದಿಷ್ಟು ಅವನ ಮನಸ್ಸಿಗೆ ಹೊಳೆದಿದ್ದು ಕೆಲವು ಕ್ಷಣಕ್ಕೆ ಮಾತ್ರ. ಅದನ್ನು ಮಾತಿನ ರೂಪದಲ್ಲಿ ಅರುಹಲು ಅವನಿಗೆ ಖಂಡಿತ ಸಾಧ್ಯವಿರಲಿಲ್ಲ. ಅವನು ಆ ಮನೆಯ ವೈಭವಕ್ಕೆ ಮಂತ್ರಮುಗ್ಧನಾಗಿದ್ದ. ತನಗೂ ಅಂಥದೊಂದು ಮನೆ ಇದ್ದಿದ್ದರೆ ಎಂದು ಅವನ ಮನಸ್ಸಿಗೆ ಹೊಕ್ಕಿತಾದರೂ ಅವನಿಗೆ ಆ ಮನೆಯ ಒಡೆಯನ ಮೇಲೆ ಕಿಂಚಿತ್ತೂ ಮತ್ಸರವಿರಲಿಲ್ಲ. ಅದು ಇಲ್ಲವೆಂಬ ಕಾರಣಕ್ಕೆ ಅವನಿಗೆ ಕಿಂಚಿತ್ತೂ ದುಃಖವಿರಲಿಲ್ಲ. ಆದರೆ, ಮುಂದೆ ನಡೆಯುತ್ತಿದ್ದ ಅವನ ತಂದೆಯ ಬಗ್ಗೆ ಹೇಳುವಂತಿರಲಿಲ್ಲ; ಅಗಾಧ ಕ್ರೋಧ, ಮತ್ಸರದಿಂದ ಅವನು ದಹದಹಿಸುತ್ತಿದ್ದ. ಬಹುಶಃ ಅವನಿಗೂ ಕೂಡ ತನ್ನಂತ ಭಾವನೆಗಳು ಬರಬಹುದು. ಅವನು ಬದಲಾಗಬಹುದು.
ಅವರು ಮನೆಯ ಮೊಗಸಾಲೆಯನ್ನು ತಲುಪಿದರು. ಮರದ ನೆಲಹಾಸಿನ ಮೇಲೆ ಅವನ ತಂದೆಯ ಹೆಜ್ಜೆಗಳ ಸಪ್ಪಳ ಅವನಿಗೆ ಆ ಮೌನದೊಳಗೆ ಗಡಿಯಾರದ ಸಪ್ಪಳದಂತೆ ಕೇಳಿಸತೊಡಗಿತು. ಆ ಶಬ್ದ ಅವನ ತಂದೆಯ ಕೃಶಕಾಯದ ಭಾರಕ್ಕಿಂತಲೂ ಅದೆಷ್ಟೋ ಪಟ್ಟು ಹೆಚ್ಚಾಗಿರುವಂತೆ ಅವನಿಗೆ ಅನಿಸಿತು. ಎದುರಿಗಿದ್ದ ಬಿಳಿಯ ದ್ವಾರವೂ ಕೂಡ ಅವನ ತಂದೆಯನ್ನು ಕುಬ್ಜನನ್ನಾಗಿಸಿರಲಿಲ್ಲ. ಅವನ ತಲೆಯ ಮೇಲಿನ ಅಗಲವಾದ ಮಟ್ಟಸ ಕಪ್ಪು ಹ್ಯಾಟು, ಒಂದು ಕಾಲದಲ್ಲಿ ಕಪ್ಪು ಬಣ್ಣದಾಗಿದ್ದು ಈಗ ಸವೆದು ಹಳೆಯ ಹಸಿರು ನೊಣಗಳ ಬಣ್ಣದಂತೆ ಮಿರುಗುವ ಸಡಿಲ ಕೋಟು, ಅವನ ಪಂಜದಂತ ಕೈ, ಯಾವುದೂ ಕೂಡ ಅವನನ್ನು ಆ ಮನೆಯ ಮುಂದೆ ಕುಬ್ಜನನ್ನಾಗಿಸಿರಲಿಲ್ಲ. ಅವರನ್ನೇ ಎದುರು ನೋಡುತ್ತಿರುವಂತೆ ಬಾಗಿಲು ತೆರೆಯಿತು. ಬಾಗಿಲು ತೆರೆದಿದ್ದ ನೀಗ್ರೋ ಮುದುಕ ಅವರು ಬರುತ್ತಿದ್ದುದ್ದನ್ನು ಗಮನಿಸಿರಬೇಕೆಂದು ಹುಡುಗನಿಗೆ ಅನಿಸಿತು. ಬಾಗಿಲಿಗೆ ಅಡ್ಡ ನಿಂತಿದ್ದ ಅವನು ಸ್ವಚ್ಛ ಲಿನೆನ್ ಜಾಕೆಟ್ ಧರಿಸಿದ್ದ, ಅರೆಬರೆ ಬೆಳ್ಳಗಾಗಿದ್ದ ಕೂದಲನ್ನು ನೀಟಾಗಿ ಕತ್ತರಿಸಿದ್ದ. “ಮೇಜರ್ ಸಾಹೇಬ್ರು ಮನೇಲಿಲ್ಲ. ಒಳಗೆ ಬರುವುದಾದರೆ ಕಾಲುಗಳನ್ನುಜ್ಜಿ ಬನ್ನಿ,” ಎಂದ ಅವನು.
“ನೀನು ಪಕ್ಕಕ್ಕೆ ಸರಿಯಯ್ಯ ಕರಿಯ…” ಎನ್ನುತ್ತಾ ತಂದೆ ಬಾಗಿಲಿನ ಜತೆಗೆ ನೀಗ್ರೋನನ್ನೂ ತಳ್ಳಿ ತಲೆಯ ಮೇಲೆ ಹ್ಯಾಟು ಧರಿಸಿಕೊಂಡೇ ಒಳಗೆ ಪ್ರವೇಶಿಸಿದ. ಬಾಗಿಲ ಹೊಸ್ತಿಲ ಮೇಲೆ ತಂದೆ ತುಳಿದ ಹಸಿ ಕುದುರೆ ಲದ್ದಿಯ ಗುರುತು ಮೂಡಿದ್ದು ಹುಡುಗ ಗಮನಿಸಿದ. ಹೊಸ್ತಿಲನ್ನು ದಾಟಿ ಒಳಗೆ ಕಾಲಿಡುತ್ತಿದ್ದಂತೆಯೇ ನೆಲಕ್ಕೆ ಹಾಸಿದ್ದ ಬಿಳಿ ನೆಲಗಂಬಳಿ ಮೇಲೆ ಕೂಡ ತನ್ನ ಇದ್ದ ಬದ್ದ ಶಕ್ತಿಯನ್ನು ಹಾಕಿ ತಂದೆ ತನ್ನ ಕಾಲಿನ ಅಚ್ಚನ್ನು ಒತ್ತಿದಂತಿತ್ತು. “ಮಿಸ್ ಲೂಲ, ಮಿಸ್ ಲೂಲ!” ನೀಗ್ರೋ ಅರಚತೊಡಗಿದ. ಹುಡುಗ ಮನೆಯೊಳಗಿನ ಅಚ್ಚ ಬಿಳಿ ನೆಲಗಂಬಳಿ, ಮಿನುಗುತ್ತಿದ್ದ ತೂಗುದೀಪಗಳು ಮತ್ತು ಪ್ರಜ್ವಲಿಸುತ್ತಿದ್ದ ಬಂಗಾರದ ಕಟ್ಟುಗಳ ಚಿತ್ರಗಳಿಗೆ ಮಾರುಹೋಗಿ ಕ್ಷಣಕಾಲ ತನ್ನ ಇರುವನ್ನೇ ಮರೆತಿದ್ದ. ಹಿಂದೆ ಎಲ್ಲೋ ಹೆಜ್ಜೆ ಸಪ್ಪಳಗಳನ್ನು ಕೇಳಿ ಅವನು ಒಮ್ಮೆಲೇ ಎಚ್ಚೆತ್ತುಕೊಂಡ. ಅವನು ನೋಡನೋಡುತ್ತಿದ್ದಂತೆಯೇ ಒಬ್ಬಾಕೆ ಪ್ರತ್ಯಕ್ಷಳಾದಳು. ಹುಡುಗ ಬೆಕ್ಕಸ ಬೆರಗಾಗಿ ಅವಳನ್ನೇ ನೋಡತೊಡಗಿದ. ಆಕೆ ಬೂದು ಬಣ್ಣದ ನವಿರಾದ, ಕುತ್ತಿಗೆಯ ಬಳಿ ಕುಸುರಿ ಕೆಲಸ ಮಾಡಿದ್ದ ಗೌನ್ ಧರಿಸಿದ್ದಳು. ಸೊಂಟಕ್ಕೆ ಒಂದು ಏಪ್ರನ್ ಕಟ್ಟಿದ್ದಳು. ಅವಳು ಒಳಗೆ ಬಿಸ್ಕತ್ತೋ, ಕೇಕೋ ಮಾಡುತ್ತಿದ್ದಿರಬೇಕು, ಗೌನಿನ ತೋಳನ್ನು ಮಡಚಿದ್ದು ಹಿಟ್ಟು ಅಂಟಿದ್ದ ಕೈಗಳನ್ನು ಕೊಡವುತ್ತಿದ್ದಳು. ಅವಳು ಹಾಲಿನೊಳಗೆ ಬಂದಳು. ಅವಳ ದೃಷ್ಟಿ ತಂದೆಯ ಮೇಲಿರಲಿಲ್ಲ. ಅವಳು ಆಶ್ಚರ್ಯದಿಂದ ಅಚ್ಚ ಬಿಳಿ ಕಾರ್ಪೆಟಿನ ಮೇಲೆ ದಟ್ಟವಾಗಿ ಮೂಡಿದ್ದ ಅಪ್ಪನ ಹೆಜ್ಜೆ ಗುರುತುಗಳನ್ನೇ ನೋಡುತ್ತಿದ್ದಳು.
“ನಾನು ಅವನನ್ನು ತಡೆದೆ. ಆದರೂ…”
“ನೀವು ದಯವಿಟ್ಟು ಇಲ್ಲಿಂದ ಹೊರಟು ಹೋಗಿ,” ಅವಳ ಧ್ವನಿ ಕಂಪಿಸುತ್ತಿತ್ತು. “ಮೇಜರ್ ದು ಸ್ಪಾಯ್ನ್ ಮನೇಲಿಲ್ಲ. ದಯವಿಟ್ಟು ಹೊರಟು ಹೋಗಿ.”
ಅಪ್ಪ ಏನೂ ಮಾತನಾಡಿರಲಿಲ್ಲ. ಮುಂದೆಯೂ ಮಾತನಾಡಲಿಲ್ಲ. ಅವನು ಆಕೆಯ ಕಡೆಗೆ ತಿರುಗಿಯೂ ನೋಡಲಿಲ್ಲ. ಅವನು ತನ್ನ ಅದೇ ಕೋಟು, ಹ್ಯಾಟನ್ನು ತೊಟ್ಟುಕೊಂಡು, ಬಿಳಿ ಕಾರ್ಪೆಟಿನ ಮೇಲೆ ತನ್ನ ಭಾರವನ್ನೆಲ್ಲಾ ಊರಿ ಗತ್ತಿನಿಂದ ನಿಂತುಕೊಂಡು ತನ್ನ ಗೋಲಿ ಕಣ್ಣುಗಳಿಂದ ಮನೆಯ ಸುತ್ತ ಕಣ್ಣಾಡಿಸುತ್ತಿದ್ದ. ನಂತರ ಅದೇ ಗತ್ತಿನಿಂದ ತಿರುಗಿದ. ಹುಡುಗ ಅವನನ್ನೇ ನೋಡುತ್ತಿದ್ದ. ತನ್ನ ಒಳ್ಳೆಯ ಕಾಲಿನ ಮೇಲೆ ತಿರುಗುತ್ತಾ ಕುಂಟು ಕಾಲನ್ನು ಅರ್ಧಚಂದ್ರಕಾರವಾಗಿ ತಿರುಗಿಸುವಾಗ ಅಲ್ಲೊಂದು ಅದೇ ಆಕಾರದ ಅಸ್ಪಷ್ಟ ಗುರುತು ಮೂಡಿತು. ಅವನ ತಂದೆ ಒಮ್ಮೆಯೂ ಕಾರ್ಪೆಟಿನ ಕಡೆಗೆ ನೋಡಲಿಲ್ಲ. ನೀಗ್ರೋ ಬಾಗಿಲನ್ನು ತೆರೆದು ನಿಂತ. ಅವರು ಹೊರಗೆ ಹೋಗುತ್ತಿದ್ದಂತೆಯೇ, ಒಳಗೆ ಸಿಟ್ಟಿನಿಂದ ತಾರಕ ಸ್ಥಾಯಿಯಲ್ಲಿ ಕೂಗುತ್ತಿರುವ ಹೆಣ್ಣಿನ ಸ್ವರದೊಂದಿಗೆ ಬಾಗಿಲು ಮುಚ್ಚಿಕೊಂಡಿತು. ಅಪ್ಪ ಮತ್ತೊಮ್ಮೆ ಮೆಟ್ಟಿಲಿನ ಬಳಿ ನಿಂತು ಅದರ ಅಂಚಿಗೆ ತನ್ನ ಬೂಟುಗಾಲನ್ನು ಚೆನ್ನಾಗಿ ಉಜ್ಜಿ ಸ್ವಚ್ಛಗೊಳಿಸಿದ. ಗೇಟಿ ಬಳಿ ಮತ್ತೊಮ್ಮೆ ನಿಂತು ಅವನು ಹಿಂದೆ ನೋಡಿದ. “ಬಿಳಿ ಬಣ್ಣದ ಮನೆ ಚೆನ್ನಾಗಿದೆ ಅಲ್ವ?” ಅವನು ಹುಡುಗನಿಗೆ ಹೇಳಿದ. “ಕರಿಯರ ಶ್ರಮದಿಂದ ಕಟ್ಟಿದ ಮನೆ. ಅವನಿಗಿನ್ನೂ ತೃಪ್ತಿಯಾಗುವಷ್ಟು ಬಿಳಿ ಆಗಿಲ್ಲವೆಂದು ತೋರುತ್ತದೆ. ಅದರೊಳಗೆ ಬಿಳಿಯರ ಬೆವರೂ ಬೆರೆಯಬೇಕೆಂದು ಅವನಿಗನಿಸಿರಬೇಕು.”
ಎರಡು ತಾಸುಗಳ ನಂತರ ಹುಡುಗ ಮನೆಯ ಹಿಂಭಾಗದಲ್ಲಿ ಸೌದೆ ಸೀಳುತ್ತಿದ್ದ. ಒಳಗೆ, ತನ್ನ ಅಕ್ಕಂದಿರನ್ನು ಹೊರತುಪಡಿಸಿ, ತಾಯಿ ಮತ್ತು ಚಿಕ್ಕಮ್ಮ ಅಡುಗೆ ತಯಾರಿಯಲ್ಲಿದ್ದಾರೆಂದು ಅವನಿಗೆ ತಿಳಿಯಿತು. ಹರಟೆ ಹೊಡೆಯುತ್ತಿರುವ ಅವನ ಅಕ್ಕಂದಿರ ಗಟ್ಟಿ ಧ್ವನಿ ಗೋಡೆಯಾಚೆಯಿಂದ ಅಸ್ಪಷ್ಟವಾಗಿ ಕೇಳಿಸುತ್ತಿತ್ತು. ಅಷ್ಟರಲ್ಲಿ ಅವನಿಗೆ ಕುದುರೆಯ ಖುರಪುಟದ ಸದ್ದು ಕೇಳಿ ತಲೆ ಎತ್ತಿ ನೋಡಿದ. ಕೆಂಪು ಮಿಶ್ರಿತ ಕೆಂದು ಬಣ್ಣದ ಹೆಣ್ಣು ಕುದುರೆಯ ಮೇಲೆ; ಮನೆಯ ತಿರುವಿನಲ್ಲಿ ಮುರುಕಲು ಕುರ್ಚಿಗಳ ಮೇಲೆ ಕುಳಿತಿದ್ದ ಅವನ ತಂದೆ ಮತ್ತು ಅಣ್ಣನೆಡೆಗೆ ಲಿನೆನ್ ಬಟ್ಟೆ ಉಟ್ಟು ದೌಡಾಯಿಸಿ ಬರುತ್ತಿದ್ದವನನ್ನು ನೋಡುತ್ತಿದ್ದಂತೆ ಅವನಿಗೆ ಅದು ಯಾರೆಂದು ಗೊತ್ತಾಗಲು ತಡವಾಗಲಿಲ್ಲ. ಅವನ ಹಿಂದೆಯೇ ಸುರುಳಿ ಸುತ್ತಿಕೊಂಡಿದ್ದ ನೆಲಗಂಬಳಿಯನ್ನು ಒಬ್ಬ ನೀಗ್ರೋ ಹುಡುಗ ಕೆಂಬಣ್ಣದ ಕುದುರೆ ಕಟ್ಟಿದ್ದ ಗಾಡಿಯಲ್ಲಿ ಹೇರಿಕೊಂಡು ಬರುತ್ತಿದ್ದ. ಕುದುರೆಯನ್ನು ದೌಡಾಯಿಸಿಕೊಂಡು ಬರುತ್ತಿದ್ದವನು ಸಿಟ್ಟಿನಿಂದ ಧುಮುಗುಡುತ್ತಿರುವುದು ಹುಡುಗನಿಗೆ ಕಾಣಿಸದಿರಲಿಲ್ಲ. ಅವನು ಎತ್ತಿದ್ದ ಕೊಡಲಿಯನ್ನು ಬೀಸುವ ಮೊದಲೇ ಹೆಣ್ಣು ಕುದುರೆಯ ಮೇಲೆ ದೌಡಾಯಿಸಿ ಬಂದಿದ್ದ ಸವಾರ ಹಿಂದಿರುಗುತ್ತಿದ್ದ. ಅಷ್ಟರಲ್ಲಿ ಅವನ ತಂದೆ ಮಾಮೂಲಿಯಂತೆ ಸಿಟ್ಟಿನಿಂದ ಕೂಗಾಡುವುದು ಕೇಳಿಸಿಕೊಂಡಾಗ, ಒಂದರೆಗಳಿಗೆ ಅವನು ಅನುಭವಿಸಿದ್ದ ಶಾಂತಿ ಮತ್ತು ಮಾನಸಿಕ ನೆಮ್ಮದಿ ಜರ್ರನೇ ಇಳಿದು ಹೋಯಿತು. ಅವನು ತಲೆ ಎತ್ತಿ ಅಡುಗೆ ಮನೆಯ ಕಡೆಗೆ ನೋಡಿದ. ಅವನ ಅಕ್ಕಂದಿರು ನೆಲಗಂಬಳಿಯ ಒಂದೊಂದು ತುದಿಯನ್ನು ಹಿಡಿದುಕೊಂಡು ಬಾಗಿಲಿನಿಂದ ಹೊರಗೆ ಬರುತ್ತಿದ್ದರು.
“ನಿನಗೆ ಭಾರವನ್ನು ಹೊರಲು ಆಗದಿದ್ದರೆ ಪಾತ್ರೆ ತೊಳೆಯಲಿಕ್ಕೆ ಹೋಗು,” ಮೊದಲನೆಯವಳು ಹೇಳಿದಳು.
“ಏಯ್ ಸಾರ್ಟಿ!” ಎರಡನೆಯವಳು ಹುಡುಗನನ್ನು ಉದ್ದೇಶಿಸಿ ಕೂಗಿದಳು. “ನೀನು ಪಾತ್ರೆ ತೊಳೆಯುವ ಕಡಾಯಿಗೆ ನೀರು ತುಂಬಿಸಿಡೋ ಹೋಗು…” ಅಷ್ಟರಲ್ಲಿ, ಬಾಗಿಲ ಬಳಿ, ಸುತ್ತಲಿನ ಕೊಳಕಿನ ಚೌಕಟ್ಟಿನ ಮಧ್ಯದ ಚಿತ್ರದಂತೆ ಅವನ ತಂದೆ ಕಾಣಿಸಿಕೊಂಡ. ಅದರಿಂದ ಅವನೇನೂ ವಿಚಲಿತನಾದಂತೆ ಕಾಣಿಸಲಿಲ್ಲ. ಅವನಿಗೇನೂ ಇದು ಹೊಸ ಅನುಭವವಾಗಿರಲಿಲ್ಲ. ಅಷ್ಟರಲ್ಲಿ ತಂದೆಯ ಹೆಗಲಿನ ಹಿಂದೆ ತಾಯಿ ಕಾಣಿಸಿಕೊಂಡಳು. ಅವಳ ಮುಖದಲ್ಲಿ ಆತಂಕ ಕಾಣಿಸುತ್ತಿತ್ತು.
“ಬೇಗ, ಬೇಗ ಅದನ್ನ ಎತ್ಕೊಂಡು ನಡಿರಿ,” ಅಪ್ಪ ಅಸಹನೆಯಿಂದ ಗದರಿದ. ಮಾಸಿದ ಉಡುಪು ಧರಿಸಿದ್ದ ದಢೂತಿ ಸೋಮಾರಿ ಹುಡುಗಿಯರು ಕಷ್ಟಪಟ್ಟು ಬಗ್ಗಿದರು. ಅವರ ರಿಬ್ಬನ್ಗಳು ಗಾಳಿಗೆ ಹಾರಾಡುತ್ತಿದ್ದವು.
“ನಾನೇನಾದರೂ ಇಷ್ಟಪಟ್ಟು ಫ್ರಾನ್ಸಿನಿಂದ ಇಂಥ ಕಾರ್ಪೆಟನ್ನು ತಂದಿದ್ದರೆ, ಅದನ್ನು ಸಾಮಾನ್ಯ ಜನರು ತುಳಿದು ಓಡಾಡುವ ಜಾಗದಲ್ಲಿ ಹಾಸಿರುತ್ತಿರಲಿಲ್ಲ,” ಮೊದಲನೆಯವಳು ಹೇಳುತ್ತಿದ್ದಂತೆ ಅವರು ಅದನ್ನು ಎತ್ತಿದರು.
“ಆಬ್ನರ್, ಅದನ್ನು ನಾನು ಎತ್ತಿಕೊಂಡು ಹೋಗುತ್ತೇನೆ ಬಿಡು,” ತಾಯಿ ಹೇಳಿದಳು.
“ನೀನು ಮೊದಲು ಒಳಗೆ ಹೋಗಿ ಅಡುಗೆ ಮಾಡು. ಅದನ್ನು ನಾನು ನೋಡುತ್ತೇನೆ,” ಅಪ್ಪ ಹೇಳಿದ.
ಮಧ್ಯಾಹ್ನವಿಡೀ ಸೌದೆ ಸೀಳುವ ಕಾಯಕದಲ್ಲಿ ನಿರತನಾಗಿದ್ದ ಹುಡುಗ ತಾನು ಸೀಳಿ ಹಾಕಿದ ಕಟ್ಟಿಗೆಯ ರಾಶಿಯಿಂದ ತನ್ನ ಇಬ್ಬರು ಸೋಮಾರಿ ಅಕ್ಕಂದಿರನ್ನು ಗಮನಿಸುತ್ತಲೇ ಇದ್ದ. ನೀರು ತುಂಬಿಸಿಟ್ಟಿದ್ದ ಕಡಾಯಿಯ ಪಕ್ಕದಲ್ಲಿ ನೆಲದ ಮೇಲೆ ಕಾರ್ಪೆಟನ್ನು ಹಾಸಿ ಅವರಿಬ್ಬರೂ ಅಪ್ಪನ ಹೆಜ್ಜೆ ಗುರುತುಗಳನ್ನು ತೊಳೆಯುವ ನಾಟಕವಾಡುತ್ತಿದ್ದರು. ತಂದೆ ಅವರಿಬ್ಬರಿಗೂ, ಗಂಭೀರ ಮುಖಮುದ್ರೆಯನ್ನು ಹೊತ್ತುಕೊಂಡು ಸ್ವಲ್ಪವೂ ಸ್ವರ ಎತ್ತದೆ ಅದು ಇದು ಸಲಹೆಯನ್ನು ಕೊಡುತ್ತಾ ಮೇಲ್ವಿಚಾರಣೆ ನಡೆಸುತ್ತಿದ್ದ. ಹುಡುಗನಿಗೆ ಅವರು ಬಳಸುತ್ತಿದ್ದ, ಮನೆಯಲ್ಲೇ ತಯಾರಿಸಿದ ಮಾರ್ಜಕ ದ್ರಾವಣದ ಕಟು ವಾಸನೆ ಅಷ್ಟು ದೂರದಿಂದಲೇ ಮೂಗಿಗೆ ಬಡಿಯುತ್ತಿತ್ತು. ಅಷ್ಟರಲ್ಲಿ ಅವನ ತಾಯಿ ಅಡುಗೆ ಕೋಣೆಯ ಬಾಗಿಲ ಬಳಿ ನಿಂತು ದುಗುಡ ಹೊತ್ತ ಮುಖಭಾವದಿಂದ ಅವರ ಕಡೆಗೇ ನೋಡುತ್ತಿರುವುದು ಅವನ ಗಮನಕ್ಕೆ ಬಂದಿತು. ಅವಳು ಹತಾಶಳಾಗಿದ್ದಂತೆ ಅವನಿಗನಿಸಿತು. ಅವನ ತಂದೆ ಹಿಂದಿರುಗುತ್ತಿರುವುದನ್ನು ಹುಡುಗ ಗಮನಿಸಿದ. ಅವನು ತನ್ನ ಕಾಯಕದಲ್ಲಿ ತೊಡಗಲು ಕೊಡಲಿಯನ್ನು ಎತ್ತುತ್ತಿರುವಾಗ ಕಣ್ಣಂಚಿನಿಂದ ತಂದೆಯನ್ನು ಗಮನಿಸಿದ. ಅವನ ತಂದೆ ನೆಲಕ್ಕೆ ಬಗ್ಗಿ ಚಪ್ಪಟೆಯಾಕಾರದ ಒಂದು ಕಲ್ಲಿನ ಚೂರನ್ನು ಎತ್ತಿಕೊಂಡು ಕಣ್ಣಿನ ಎದುರಿಗಿಟ್ಟು ಪರೀಕ್ಷಿಸಿಸುತ್ತಾ ಅಡುಗೆ ಮನೆಯ ಒಲೆಯ ಮೇಲಿದ್ದ ಮಡಕೆಯ ಕಡೆಗೆ ನಡೆಯತೊಡಗಿದ. ಈ ಭಾರಿ ಅವನ ತಾಯಿ ಎಂದಿನಂತೆ ಸುಮ್ಮನಾಗಲಿಲ್ಲ: “ಆಬ್ನರ್, ಆಬ್ನರ್. ದಯವಿಟ್ಟು ಬೇಡ. ದಯವಿಟ್ಟು ಬೇಡ ಆಬ್ನರ್,” ಅವಳು ಗೋಗರೆದಳು.
ಹುಡುಗನ ಕೆಲಸವೂ ಮುಗಿದಿತ್ತು. ಆಗಲೇ ನಸುಕಿನ ಹಕ್ಕಿ ಕೂಗಲು ಶುರುವಿಟ್ಟುಕೊಂಡಿತ್ತು. ಅಡುಗೆ ಮನೆಯಿಂದ ಕಾಫಿಯ ವಾಸನೆ ಅವನ ಮೂಗಿಗೆ ಅಡರಿತು. ಸ್ವಲ್ಪ ಹೊತ್ತಿನಲ್ಲಿ ಅವರು ಅಲ್ಲೇ ಕುಳಿತುಕೊಂಡು ಮಧ್ಯಾಹ್ನ ತಿಂದುಂಡು ಉಳಿದಿದ್ದನ್ನು ತಿನ್ನಲಿದ್ದರು. ಅವನು ಮನೆಯನ್ನು ಹೊಕ್ಕಾಗ, ಎರಡು ಕುರ್ಚಿಗಳ ಮೇಲೆ ನೆಲಗಂಬಳಿಯನ್ನು ಒಣಗಲು ಹರವಿದ್ದರು. ಅದಕ್ಕಾಗಿ ಉರಿಸಿದ್ದ ಒಲೆಯಲ್ಲಿ ಇನ್ನೂ ಬೆಂಕಿ ಉರಿಯುತ್ತಿದ್ದರಿಂದ ಅವರು ಮತ್ತೊಮ್ಮೆ ಕಾಫಿಯನ್ನು ಕಾಸಿ ಕುಡಿಯಲು ಕುಳಿತಿದ್ದರು. ನೆಲಗಂಬಳಿಯ ಮೇಲೆ ಅವನ ತಂದೆಯ ಹೆಜ್ಜೆ ಗುರುತುಗಳು ಹೊರಟು ಹೋಗಿದ್ದವು. ಅವುಗಳನ್ನು ಸ್ವಚ್ಛ ಮಾಡಲು ಹೋಗಿ ಅದರ ಮೇಲೆ ಹುಲ್ಲು ಕತ್ತರಿಸುವ ಯಂತ್ರ ಓಡಿಸಿದಂತೆ ಬೇರೆ ರೀತಿಯ, ಹೆಜ್ಜೆ ಗುರುತುಗಳಿಗಿಂತ ಕೆಟ್ಟ ಕಲೆಗಳು ಮೂಡಿದ್ದವು.
ಅವರು ಮಧ್ಯಾಹ್ನದ ತಂಗಳನ್ನ ಉಂಡು ಮಲಗಲು ಹೋದಾಗಲೂ ನೆಲಗಂಬಳಿ ಕುರ್ಚಿಗಳ ಬೆನ್ನ ಮೇಲೆ ನೇತಾಡುತ್ತಿತ್ತು. ಅವರೆಲ್ಲಾ ಆ ರೂಮು, ಈ ರೂಮು, ಮೇಲೆ, ಕೆಳಗೆ ಎನ್ನದೇ ಬಿದ್ದುಕೊಂಡರು. ತಾಯಿ ಒಂದು ಮಂಚದ ಮೇಲೆ ಮಲಗಿಕೊಂಡಳು. ತಂದೆ ಕೂಡ ಯಾವಾಗಲೋ ಬಂದು ಅಲ್ಲಿಯೇ ಮಲಗುವವನಿದ್ದ. ಅವನ ಅಣ್ಣ ಮತ್ತೊಂದು ಮಂಚದ ಮೇಲೆ ಬಿದ್ದುಕೊಂಡರೆ, ಹುಡುಗ, ಅವನ ಅಕ್ಕಂದಿರು ಮತ್ತು ಚಿಕ್ಕಮ್ಮ ಮರದ ಹಲಗೆಗಳ ಮೇಲೆ ಕೆಳಗೆ ಬಿದ್ದುಕೊಂಡರು. ತಂದೆ ಇನ್ನೂ ಒಳಗೆ ಬಂದಿರಲಿಲ್ಲ. ನಿದ್ದೆಯ ಮಂಪರಿನಲ್ಲಿ ಅವನಿಗೆ ತಂದೆಯ ಹ್ಯಾಟು ಕೋಟು ಬಗ್ಗಿ ನೆಲಗಂಬಳಿಯ ಮೇಲಿನ ಕಲೆಗಳನ್ನು ಪರೀಕ್ಷಿಸುತ್ತಿರುವುದು ಕಾಣಿಸಿತು. ಅವನು ಮನುಷ್ಯನಂತೆ ಕಾಣಿಸುತ್ತಿರಲಿಲ್ಲ. ರಟ್ಟಿನಲ್ಲಿ ಕತ್ತರಿಸಿದ ಚಿತ್ರದ ನೆರಳಿನಂತೆ ಅವನಿಗೆ ಭಾಸವಾಯಿತು. ಅವನು ಕಣ್ಣುಗಳನ್ನು ಮುಚ್ಚುವ ಮೊದಲೇ ಆ ಆಕೃತಿಯು ಅವನ ಮೇಲೆ ಬಗ್ಗಿತು. ಒಲೆಯೊಳಗಿನ ಬೆಂಕಿ ಹೆಚ್ಚು ಕಮ್ಮಿ ನಂದಿ ಹೋಗಿತ್ತು. ತಂದೆಯ ಸೆಟೆದುಕೊಂಡಿದ್ದ ಕುಂಟು ಕಾಲು ಅವನನ್ನು ತಟ್ಟಿ ಎಬ್ಬಿಸಿತು, “ಹೋಗಿ ಕುದುರೆಯನ್ನು ತಾ.”
ಅವನು ಕುದುರೆಯನ್ನು ಹೊಡೆದುಕೊಂಡು ಬರುವಾಗ ತಂದೆ ಬಾಗಿಲಿನ ಎದುರು ನಿಂತಿದ್ದ. ಅವನು ನೆಲಗಂಬಳಿಯನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದ. “ಅಪ್ಪ, ನೀನು ಕುದುರೆ ಏರುವುದಿಲ್ಲವೇ?” ಅವನು ಕೇಳಿದ..
“ಇಲ್ಲ. ಎಲ್ಲಿ, ನಿನ್ನ ಮಂಡಿ ಮುಂದೆ ಮಾಡಿ ಕೊಡು.”
ಅವನು ಕಾಲನ್ನು ಮಡಚಿ ಮಂಡಿಯನ್ನು ತಂದೆಯ ಕೈಯಲ್ಲಿರಿಸಿದ. ಅವನ ತಂದೆ ನೋಡಲು ನರಪೇತಲನಂತಿದ್ದರೂ ಅವನ ತೋಳಿನಲ್ಲಿ ಅಗಾಧ ಶಕ್ತಿ ಇತ್ತು. ತಂದೆ ಹುಡುಗನನ್ನು ಲೀಲಾಜಾಲವಾಗಿ ಎತ್ತಿ ಕುದುರೆಯ ತಡಿ ಕಟ್ಟದ ಬೆನ್ನ ಮೇಲೆ ಕುಳ್ಳಿರಿಸಿದ. (ಒಂದು ಕಾಲದಲ್ಲಿ ಅವರ ಬಳಿ ತಡಿ ಇತ್ತೆನ್ನುವುದು ಹುಡುಗನಿಗೆ ಜ್ಞಾಪಕವಿತ್ತು. ಆದರೆ, ಎಲ್ಲಿ, ಯಾವಾಗ ಎನ್ನುವುದು ಗೊತ್ತಿರಲಿಲ್ಲ.) ತಂದೆ, ಅಷ್ಟೇ ಲೀಲಾಜಾಲವಾಗಿ ನೆಲಗಂಬಳಿಯನ್ನು ಎತ್ತಿ ಅವನ ಮುಂದಕ್ಕೆ ಕುಕ್ಕಿದ. ನಂತರ ಅವರು ನಕ್ಷತ್ರದ ಬೆಳಕಿನಲ್ಲಿ ಅಂದು ಮಧ್ಯಾಹ್ನ ಹೋಗಿದ್ದ ದಾರಿಯನ್ನು ಹಿಡಿದು ಗೇಟನ್ನು ದಾಟಿ ಮನೆಯ ಹಾದಿ ಗುಂಟ ಸಾಗಿ ಕತ್ತಲು ಮುಸುಕಿದ್ದ ಮನೆಯನ್ನು ತಲುಪಿದರು. ಅವನ ಮುಂದಿದ್ದ ನೆಲಗಂಬಳಿಯನ್ನು ತಂದೆ ಸರಕ್ಕನೆ ಕೆಳಗೆ ಎಳೆದಾಗ ಅದು ಅವನ ತೊಡೆಯನ್ನು ಉಜ್ಜುತ್ತಾ ಕೆಳಗೆ ಬಿದ್ದಿತು.
“ಅಪ್ಪ, ನಾನೂ ಹಿಡ್ಕೊಳ್ಳಾ?” ಅವನು ಮೆಲ್ಲಗೆ ಕೇಳಿದ. ಅಪ್ಪ ಉತ್ತರಿಸಲಿಲ್ಲ. ಅಷ್ಟು ಭಾರವನ್ನು ಹೊತ್ತು ಕೊಂಡಿದ್ದ ಅವನ ಕಾಲುಗಳು ಮೊಗಸಾಲೆಯ ಮರದ ನೆಲಹಾಸಿನ ಮೇಲೆ ದೊಡ್ಡದಾಗಿ ಕಟ ಕಟ ಶಬ್ದ ಮಾಡುತ್ತಿದ್ದವು. ಸ್ವಲ್ಪ ಹೊತ್ತಿನ ನಂತರ ನೆಲಗಂಬಳಿಯನ್ನು ದೊಪ್ಪನೆ ಕೆಳಗೆ ಬೀಳಿಸಿದ ಶಬ್ದ ಕೇಳಿಸಿತು. ಅದನ್ನು ಅಪ್ಪ ಎಸೆದಿರಲಿಲ್ಲ, ನಡುಬಗ್ಗಿಸಿ ಇಳಿಸಿದ್ದು ಎಂದು ಹುಡುಗ ಆ ಕತ್ತಲೆಯಲ್ಲೂ ಊಹಿಸಿದ. ಅದು ಗೋಡೆಗೂ ಮರದ ನೆಲಹಾಸಿಗೂ ತಾಗಿ ಅಷ್ಟೊಂದು ದೊಡ್ಡ ಸದ್ದು ಉಂಟಾಗಿತ್ತು. ಮತ್ತೆ ತಂದೆಯ ವಾಪಾಸ್ಸಾಗುತ್ತಿರುವ, ಕಿಂಚಿತ್ತೂ ಅವಸರವಿಲ್ಲದ ಹೆಜ್ಜೆ ಸಪ್ಪಳ ಅವನಿಗೆ ಕೇಳಿಸತೊಡಗಿತು. ಮನೆಯಲ್ಲಿ ದೀಪ ಬೆಳಗಿತು. ಹುಡುಗ ಅಪ್ರಜ್ಞಾಪೂರ್ವಕವಾಗಿ ಉಸಿರನ್ನು ಬಿಗಿ ಹಿಡಿದು ಮುದುರಿ ಕುಳಿತುಕೊಂಡ. ಅವನ ಎದೆ ಹೆದರಿಕೆಯಿಂದ ಹೊಡೆದುಕೊಳ್ಳತೊಡಗಿತ್ತು. ಅವನ ತಂದೆ ಕಿಂಚಿತ್ತೂ ಗಾಬರಿಗೊಳ್ಳದೆ, ಏನೂ ಅವಸರವಿಲ್ಲದೆ, ಮಾಮೂಲಿಯಂತೆ ಆರಾಮವಾಗಿ ನಡೆದು ಬರುತ್ತಿರುವಂತೆ ಕಾಣಿಸುತ್ತಿತ್ತು. ಹುಡುಗನಿಗೆ ತಂದೆಯ ಆಕೃತಿ ಕಾಣಿಸಿತು.
“ಅಪ್ಪ, ಈಗಲಾದರೂ ಕುದುರೆ ಹತ್ತುತ್ತೀಯ?” ಅವನು ತನ್ನಷ್ಟಕ್ಕೆ ಮೆಲ್ಲನೆ ಉಸುರಿದ, “ಈಗ ನಾವಿಬ್ಬರೂ ಜತೆಯಾಗಿ ಸವಾರಿ ಮಾಡಬಹುದು.”
***
ಅವನು ಈಗ ಮೆಟ್ಟಿಲುಗಳನ್ನು ಇಳಿಯುತ್ತಿರಬಹುದು ಅವನು ಯೋಚಿಸಿದ. ಅವನು ಈಗಾಗಲೇ ಹೇಸರಗತ್ತೆಯನ್ನು ಕುದುರೆ ಲಾಯದ ಬಳಿಗೆ ಹೊಡೆದುಕೊಂಡು ಹೋಗಿದ್ದ. ಅವನ ತಂದೆ ಹಿಂದೆಯೇ ಇದ್ದ. ಮುಂದೆ ಬಂದು ಹೇಸರಗತ್ತೆಯ ಲಗಾಮನ್ನು ಎರಡಾಗಿ ಮಡಚಿ ಕತ್ತೆಯ ಕುತ್ತಿಗೆಗೆ ಬಲವಾಗಿ ಬೀಸಿದ. ಅದು ಓಡಬೇಕು ಅನ್ನುವಷ್ಟರಲ್ಲಿ ಅವನು ಮತ್ತೆ ಕಟ್ಟನ್ನು ಹಿಡಿದೆಳೆದು ಅದು ಮೆಲ್ಲಗೆ ನಡೆಯುವಂತೆ ಮಾಡಿದ.
ಸೂರ್ಯನ ಹೊಂಗಿರಣಗಳು ಮೂಡುವಷ್ಟರಲ್ಲಿ ಅವರು ಹೊಲದಲ್ಲಿ ಹೇಸರಗತ್ತೆಗಳಿಗೆ ನೇಗಿಲು ಹೂಡುತ್ತಿದ್ದರು. ಅಷ್ಟರೊಳಗೆ ಕೆಂದು ಹೆಣ್ಣು ಕುದುರೆ ಅಲ್ಲಿ ಬಂದು ನಿಂತಿದ್ದು ಹುಡುಗನ ಗಮನಕ್ಕೆ ಬಂದಿರಲಿಲ್ಲ. ಸವಾರ ಕಾಲರ್ ಇಲ್ಲದ ಅಂಗಿಯನ್ನು ಧರಿಸಿದ್ದ. ತಲೆಯ ಮೇಲೆ ಟೊಪ್ಪಿಯೂ ಇರಲಿಲ್ಲ. ಅವನ ಧ್ವನಿ ಕಂಪಿಸುತ್ತಿತ್ತು. ಅವನ ತಂದೆ ಒಮ್ಮೆ ಅವನತ್ತ ನೋಡಿ ಮತ್ತೆ ನೇಗಿಲು ಕಟ್ಟುವುದರಲ್ಲಿಯೇ ಮಗ್ನನಾದ. ಕುದುರೆ ಸವಾರ ಹುಡುಗನ ತಂದೆಯ ಬೆನ್ನಿನೊಡನೆ ಮಾತನಾಡುತ್ತಿರುವಂತೆ ಕಾಣಿಸುತ್ತಿತ್ತು:
“ನೀನು ನೆಲಗಂಬಳಿಯನ್ನು ಸಂಪೂರ್ಣವಾಗಿ ಹಾಳುಗೆಡವಿದ್ದೀಯ ಎನ್ನುವುದನ್ನು ಅರ್ಥ ಮಾಡಿಕೊ. ನಿನ್ನ ಮನೆಯಲ್ಲಿ ಯಾರೂ ಹೆಂಗಸರೇ ಇಲ್ಲವೇನೂ…?” ಅವನು ಅಷ್ಟಕ್ಕೇ ನಿಲ್ಲಿಸಿದ. ಅವನು ಇನ್ನೂ ಕಂಪಿಸುತ್ತಿರುವುದನ್ನು ಹುಡುಗ ನೋಡುತ್ತಿದ್ದರೆ, ಅವನ ಅಣ್ಣ ಮೌನವಾಗಿ ಕುದುರೆ ಲಾಯದ ಬಾಗಿಲಿನ ಮರೆಯಿಂದ ಹೊಗೆಸೊಪ್ಪನ್ನು ಜಗಿಯುತ್ತಾ, ಕಣ್ಣು ಮಿಟುಕಿಸುತ್ತಾ ಇಣುಕುತ್ತಿದ್ದ. “ಆ ನೆಲಗಂಬಳಿಗೆ ನಾನು ನೂರು ಡಾಲರುಗಳನ್ನು ತೆತ್ತಿದ್ದೆ. ನಿನ್ನ ಬಳಿ ನೂರು ಡಾಲರ್ ಇರುವುದು ಬಿಡು, ನೀನು ನೋಡೂ ಇಲ್ಲ! ಅದರ ಬದಲಿಗೆ ನಿನ್ನ ಬೆಳೆಯಿಂದ ಇಪ್ಪತ್ತು ಬುಶೆಲ್3 ಜೋಳವನ್ನು ಸಂದಾಯ ಮಾಡಬೇಕಾಗುತ್ತದೆ. ಇದನ್ನು ನಿನ್ನ ಗುತ್ತಿಗೆ ಪತ್ರದಲ್ಲಿ ಬರೆದಿಡುತ್ತೇನೆ. ನೀನು ಅತ್ತ ಬಂದಾಗ ಸಹಿ ಮಾಡುವಿಯಂತೆ. ಇಷ್ಟರಿಂದಲೇ ಮೇಡಮ್ ದು ಸ್ಪಾಯ್ನ್ ಸುಮ್ಮನಾಗುವಂತೆ ಕಾಣಿಸುತ್ತಿಲ್ಲ. ಇದು, ನೀನು ಮತ್ತೊಮ್ಮೆ ಮನೆಯೊಳಗೆ ಬರುವಾಗ ಚೆನ್ನಾಗಿ ಕಾಲು ಒರೆಸಿ ಬರಬೇಕೆಂಬ ಪಾಠ ಕಲಿತಂತಾಗುತ್ತದೆ.”
ಇಷ್ಟು ಹೇಳಿ ಅವನು ಅಲ್ಲಿಂದ ಹೊರಟುಹೋದ. ಹುಡುಗ ತಂದೆಯ ಕಡೆಗೊಮ್ಮೆ ನೋಡಿದ. ತಂದೆ ಅಲ್ಲಿಯವರೆಗೂ ಒಂದೂ ಮಾತನಾಡದೆ ತನ್ನ ಕೆಲಸದಲ್ಲೇ ನಿರತನಾಗಿದ್ದ.
“ಅಪ್ಪ,” ಅವನು ಕರೆದ. ಅವನು ಕತ್ತನ್ನು ತಿರುಗಿಸಿ ಹುಡುಗನ ಕಡೆಗೆ ನೋಡಿದ. ಅವನ ದಟ್ಟ ಕೆದರಿದ್ದ ಹುಬ್ಬುಗಳ ಕೆಳಗಿನ ಮಂಜುಗಡ್ಡೆಯಂಥ ಶೀತಲ ಕಣ್ಣುಗಳು ಅವನನ್ನು ಹರಿದು ಹಾಕುವಂತೆ ದಿಟ್ಟಿಸಿದವು. ಹುಡುಗ ಒಮ್ಮೆಲೇ, ಏಕಾಏಕಿ ಅವನ ಕಡೆಗೆ ಹೆಜ್ಜೆ ಹಾಕುತ್ತಾ ತಕ್ಷಣ ನಿಂತುಬಿಟ್ಟ. “ನೀನು ನಿನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸ್ವಚ್ಛ ಮಾಡಿದ್ದೀಯ,” ಹುಡುಗ ಅನ್ಯಾಯಗೊಂಡವನಂತೆ ಸಣ್ಣ ದನಿಯಲ್ಲಿ ಹೇಳಿದ, “ಅವನು ತನಗೆ ಯಾವ ರೀತಿ ಬೇಕೆಂದು ಆವಾಗಲೇ ಏಕೆ ಹೇಳಲಿಲ್ಲ? ಅವನಿಗೆ ಇಪ್ಪತ್ತು ಬುಶೆಲ್ ಜೋಳ ಕೊಡಬೇಡ! ಏನೂ ಕೊಡಬೇಡ! ನಾವು ಜೋಳವನ್ನು ಕೊಯ್ಲು ಮಾಡಿದ ಮೇಲೆ ಅದನ್ನು ಬಚ್ಚಿಡೋಣ. ನಾನು ಕಾಯುತ್ತೇನೆ…”
“ಅಂದ್ಹಾಗೆ ನೀನು ಆ ಕಟ್ಟರ್ ಅನ್ನು ನಾನು ಹೇಳಿದ ಜಾಗದಲ್ಲಿ ಇಟ್ಟಿದ್ದೀಯೋ ಇಲ್ವೋ?”
“ಇನ್ನೂ ಇಲ್ಲ ಕಣಪ್ಪ,” ಅವನು ಹೇಳಿದ.
“ಮೊದಲು ಹೋಗಿ ಇಟ್ಟು ಬಾ.”
ಅಂದು ಬುಧವಾರ. ಆ ವಾರವೆಲ್ಲಾ ಅವನು ತನ್ನ ಕೈಲಾದ, ಮತ್ತು ಕೆಲವು ಆಗದೆಯೂ ಇರುವಂಥ ಕೆಲಸಗಳನ್ನು ಮಾಡುತ್ತಲೇ ಇದ್ದ. ಅವನು ತನಗಾಗುವ ಕೆಲಸಗಳನ್ನು ಮಾಡುತ್ತಿರುವಾಗ ಖುಷಿಯಿಂದಲೇ ಮಾಡುತ್ತಿದ್ದ. ಇದು ಅವನ ತಾಯಿಯ ಕಡೆಯಿಂದ ಬಳುವಳಿಯಾಗಿ ಬಂದಿತ್ತು. ಅವನು ಚಿಕ್ಕ ಕೊಡಲಿಯಿಂದ ಸೌದೆ ಸೀಳುವ ಕೆಲಸವನ್ನು ತುಂಬಾ ಮುತುವರ್ಜಿಯಿಂದ ಮಾಡುತ್ತಿದ್ದ. ಆ ಕೊಡಲಿಯನ್ನು ಅವನ ತಾಯಿ ಮತ್ತು ಚಿಕ್ಕಮ್ಮ, ಹೇಗೋ ಹಣವನ್ನು ಉಳಿತಾಯ ಮಾಡಿ, ಅವನಿಗೆ ಕಳೆದ ವರ್ಷ ಕ್ರಿಸ್ಮಸ್ ಕಾಣಿಕೆಯನ್ನಾಗಿ ಕೊಟ್ಟಿದ್ದರು. ಒಂದು ದಿನ ಮಧ್ಯಾಹ್ನ, ತಂದೆ ಮನೆಯಲ್ಲಿಲ್ಲದಿದ್ದಾಗ ಅವನು ತನ್ನ ತಾಯಿ, ಚಿಕ್ಕಮ್ಮ ಮತ್ತು ಒಬ್ಬ ಅಕ್ಕನೊಂದಿಗೆ ಸೇರಿ ಹಂದಿ ಮರಿ ಮತ್ತು ಆಕಳನ್ನು ಕೂಡಿ ಹಾಕಲು ಒಂದು ತಡೆ ಬೇಲಿಯನ್ನು ತಯಾರಿಸಿದ್ದ. ಈ ಕೆಲಸ ಅವನ ತಂದೆಯ ಮತ್ತು ಜಮೀನುದಾರನ ಒಪ್ಪಂದ ಪತ್ರದಲ್ಲಿತ್ತು. ಮತ್ತೊಂದು ದಿನ ಮಧ್ಯಾಹ್ನ ತಂದೆ ಒಂದು ಹೇಸರಗತ್ತೆಯ ಮೇಲೆ ಕುಳಿತುಕೊಂಡು ಎಲ್ಲಿಗೋ ಹೋಗಿದ್ದಾಗ ಅವನು ಹೊಲದ ಕಡೆಗೆ ಹೋಗಿದ್ದ.
ಅವರು ಜೋಳದ ಸಾಲುಗಳಿಗೆ ಮಣ್ಣು ಪೇರಿಸುತ್ತಿದ್ದರು. ಅಣ್ಣ ನೇಗಿಲ ಹಿಡಿಕೆಯನ್ನು ನೇರವಾಗಿ ಹಿಡಿದುಕೊಂಡಿದ್ದರೆ, ಹುಡುಗ ಹಗ್ಗಗಳನ್ನು ಹಿಡಿದುಕೊಂಡು ಹೇಸರಗತ್ತೆಯ ಹಿಂದೆ ಸಾಗುತ್ತಿದ್ದ. ಸಾಲುಗಳ ಮಧ್ಯದ ತಂಪಾದ ಕಪ್ಪು ಮಣ್ಣು ಕಣಕಾಲಿನ ಮೇಲೆ ಬಿದ್ದಾಗ ಅವನಿಗೆ ಹಿತವೆನಿಸುತ್ತಿತ್ತು. ಉಳುವುದರ ಹಿಂದೆಯೇ ಹುಡುಗನ ಯೋಚನೆಗಳೂ ಓಡುತ್ತಿದ್ದವು: ಇದೇ ಕೊನೆ ಇರಬಹುದೇನೋ? ಹಾಗೇನಾದರೂ ಆದರೆ, ತಂದೆ ಇದುವರೆಗೆ ಮಾಡುತ್ತಾ ಬಂದಿರುವ ಕೃತ್ಯಕ್ಕೆ ಒಡೆಯನಿಗೆ ದಂಡ ಕಟ್ಟಬೇಕಿರುವ ಇಪ್ಪತ್ತು ಬುಶೆಲ್ ಜೋಳವೇನೂ ದುಬಾರಿಯಾಗಲಾರದು; ಅವನು ಯೋಚಿಸುತ್ತಾ ಕನಸು ಕಾಣಲಾರಂಭಿಸಿದ. ಹೇಸರಗತ್ತೆ ದಾರಿ ತಪ್ಪುತ್ತಿರುವುದು ನೋಡಿದಾಗ ಅಣ್ಣ ಅವನನ್ನು ಗದರಿ ಎಚ್ಚರಿಸಬೇಕಾಯಿತು. ಒಡೆಯ ದಂಡ ಕಟ್ಟಿಸಿಕೊಳ್ಳಲಾರ ಎನಿಸುತ್ತದೆ ಅಥವಾ ಎಲ್ಲವೂ ಸುಖಾಂತ್ಯವಾಗಿ ಈ ಜೋಳ, ನೆಲಗಂಬಳಿ, ಬೆಂಕಿಯ ವಿಷಯ ಮರೆತೇ ಹೋಗಬಹುದು. ಕೊನೆಗೂ ಅದರಿಂದ, ಎರಡೂ ಕಡೆಯ ತಿಕ್ಕಾಟದಲ್ಲಿ, ತನ್ನೊಳಗೆ ಉಂಟಾಗುವ ಮಾನಸಿಕ ತುಮುಲ ಎಂದೆಂದಿಗೂ ಶಮನವಾಗಬಹುದು.
ಅಂದು ಶನಿವಾರ. ಹೇಸರಗತ್ತೆಯನ್ನು ನೇಗಿಲಿಗೆ ಕಟ್ಟುತ್ತಿದ್ದವನು ಕೆಳಗಿನಿಂದ ಕಪ್ಪು ಕೋಟು ಮತ್ತು ಹ್ಯಾಟು ಧರಿಸಿದ್ದ ತಂದೆಯನ್ನು ನೋಡಿದ. “ಅದಕ್ಕಲ್ಲ, ಗಾಡಿಗೆ ಕಟ್ಟು,” ಅಪ್ಪ ಹೇಳಿದ. ಎರಡು ಗಂಟೆಯ ನಂತರ ಅವನು ತಂದೆ ಮತ್ತು ಅಣ್ಣನ ಜೊತೆ ಗಾಡಿಯಲ್ಲಿ ಹಿಂದೆ ಕುಳಿತುಕೊಂಡಿದ್ದ. ಅವರಿಬ್ಬರು ಮುಂದೆ ಕುಳಿತುಕೊಂಡಿದ್ದರು. ಗಾಡಿ ತಿರುವನ್ನು ದಾಟಿಕೊಂಡು ಮುಂದೆ ಹೋಯಿತು. ಮುಂದೆ ಅವನಿಗೆ ಬಣ್ಣ ಕಳೆದುಕೊಂಡಿದ್ದ ಒಂದು ಸ್ಟೋರ್ ರೂಮು ಮತ್ತು ಅದರ ಗೋಡೆಯ ಮೇಲೆ ಹರಿದು ಗಾಳಿಗೆ ಹಾರಾಡುತ್ತಿದ್ದ ಹೊಗೆ ಸೊಪ್ಪು ಮತ್ತು ಔಷಧಿ ಕಂಪನಿಗಳ ಜಾಹೀರಾತುಗಳ ಪೋಸ್ಟರ್ಗಳು ಕಾಣಿಸಿದವು. ಹೊರಗೆ ಸಜ್ಜಾಗಿ ನಿಲ್ಲಿಸಿದ್ದ ಗಾಡಿಗಳು ಮತ್ತು ತಡಿ ತೊಟ್ಟಿದ್ದ ಕುದುರೆಗಳಿದ್ದವು. ಅವನು ತಂದೆ ಮತ್ತು ಅಣ್ಣನ ಹಿಂದಿನಿಂದ ಕೆಳಗಿಳಿದ. ಅವರು ನಡೆದುಕೊಂಡು ಹೋಗುತ್ತಿರುವಾಗ ಮತ್ತೊಮ್ಮೆ ಆ ಹಾದಿಯಲ್ಲಿ ಸಾಲುಗಟ್ಟಿ ನಿಂತಿದ್ದ ಜನರು ಅವರನ್ನು ಸದ್ದಿಲ್ಲದೇ ಕುತೂಹಲದಿಂದ ನೋಡುತ್ತಿದ್ದರು. ಮುಂದೆ, ಒಂದು ಮರದ ಮೇಜಿನ ಬಳಿ ಕನ್ನಡಕ ಧರಿಸಿದ್ದ ವ್ಯಕ್ತಿ ಕುಳಿತುಕೊಂಡಿದ್ದ. ಅವನು ನ್ಯಾಯಾಧೀಶನೆಂದು ಹುಡುಗನಿಗೆ ನೋಡಿದ ಕೂಡಲೇ ಗೊತ್ತಾಯಿತು. ಹುಡುಗ ಅವನನ್ನು ಎದುರು ಹಾಕಿಕೊಳ್ಳುವವನಂತೆ ದುರುಗುಟ್ಟಿ ನೋಡಿದ. ಹುಡುಗ ನ್ಯಾಯಾಧೀಶನನ್ನು ಈಗ ಎರಡನೆಯ ಭಾರಿ ನೋಡುತ್ತಿರುವುದು. ಮೊದಲನೆಯ ಭಾರಿ ಅವನು ದೌಡಾಯಿಸುತ್ತಿರುವ ಕುದುರೆಯ ಮೇಲಿದ್ದ. ಅವನ ಮುಖದ ಮೇಲೆ ಸಿಟ್ಟಿಗಿಂತ ಆಶ್ಚರ್ಯದ ಭಾವವು ಎದ್ದುಕಾಣುತ್ತಿತ್ತು. ಏಕೆಂದರೆ, ಇಲ್ಲಿ ಒಬ್ಬ ಗೇಣಿದಾರನೇ ತನ್ನ ಒಡೆಯನ ಮೇಲೆ ದೂರು ಕೊಟ್ಟಿದ್ದ ಅಪೂರ್ವ ವಿದ್ಯಮಾನ! ಹುಡುಗ ತನ್ನ ತಂದೆಯ ಬಗಲಿಗೆ ನಿಂತು: “ಅಪ್ಪನಲ್ಲ ಬೆಂಕಿ ಇಟ್ಟಿದ್ದು!” ಎಂದ.
“ಬೆಂಕಿ ಇಟ್ಟಿದ್ದಾ? ಏನು, ನೆಲಗಂಬಳಿಯನ್ನು ಸುಟ್ಟಿದ್ದಾರಾ?” ಕೇಳಿದ ನ್ಯಾಯಾಧೀಶ.
“ನೆಲಗಂಬಳಿಯನ್ನು ಸುಟ್ಟಿರುವುದರ ಕುರಿತು ಯಾರೂ ದೂರು ಕೊಟ್ಟಿಲ್ಲ,” ಎನ್ನುತ್ತಾ ಹುಡುಗನ ತಂದೆ ಮಗನಿಗೆ, “ನೀನು ಹೋಗಿ ಗಾಡಿಯಲ್ಲಿ ಕುಳಿತುಕೊ,” ಎಂದ. ಅವನು ಗಾಡಿಯ ಬಳಿಗೆ ಹೋಗಲಿಲ್ಲ. ಹಿಂದಕ್ಕೆ ಹೋಗಿ ಜನಜಂಗುಳಿಯ ಮಧ್ಯೆ ಸೇರಿಕೊಂಡ.
“ನೀನು ಹಾಳುಗೆಡವಿದ ನೆಲಗಂಬಳಿಗೆ ಇಪ್ಪತ್ತು ಬುಶೆಲ್ ಜೋಳ ದಂಡ ವಿಧಿಸಿದ್ದು ಅತಿಯಾಯ್ತು ಎಂದು ನಿನ್ನ ಭಾವನೆ?”
“ಅವರು ನೆಲಗಂಬಳಿಯನ್ನು ನನ್ನ ಬಳಿಗೆ ತಂದು ಅದರ ಮೇಲಿನ ಹೆಜ್ಜೆಯ ಗುರುತುಗಳನ್ನು ತೊಳೆದು ಕೊಡಬೇಕೆಂದು ಕೇಳಿಕೊಂಡರು. ನಾನು ಅದನ್ನು ತೊಳೆದು ಅವರಿಗೆ ಹಿಂದಿರುಗಿಸಿದೆ.”
“ಆದರೆ, ನೀನು ಅದರ ಮೇಲೆ ಹೆಜ್ಜೆ ಗುರುತುಗಳನ್ನು ಮೂಡಿಸುವ ಮುನ್ನ ಅದು ಹೇಗಿತ್ತೋ ಆ ಸ್ಥಿತಿಯಲ್ಲಿ ಅದನ್ನು ಹಿಂದಿರುಗಿಸಲಿಲ್ಲ?”
ಅವನ ತಂದೆ ಉತ್ತರಿಸಲಿಲ್ಲ. ಸುಮಾರು ಅರ್ಧ ನಿಮಿಷ, ಅವನು ಉಸಿರಾಡುವ ಶಬ್ದವೊಂದನ್ನು ಬಿಟ್ಟರೆ ಅಲ್ಲಿ ಗಾಢವಾದ ಮೌನ ಕವಿಯಿತು. “ನೀನು ನನ್ನ ಪ್ರಶ್ನೆಗೆ ಉತ್ತರಿಸಲು ನಿರಾಕರಿಸುತ್ತೀಯ ಮಿಸ್ಟರ್ ಸ್ನೋಪ್ಸ್?” ಮತ್ತೆ ಅದೇ ಮೌನ.
“ನೀನು ಮೇಜರ್ ದು ಸ್ಪಾಯ್ನ್ ಅವರ ನೆಲಗಂಬಳಿಯನ್ನು ಹಾಳುಗೆಡವಿದ್ದೀಯ ಎಂದು ತೀರ್ಮಾನಿಸುತ್ತಿದ್ದೇನೆ ಮಿಸ್ಟರ್ ಸ್ನೋಪ್ಸ್. ನಿನ್ನ ಆರ್ಥಿಕ ಸ್ಥಿತಿಗತಿಗೆ ಇಪ್ಪತ್ತು ಬುಶೆಲ್ ಜೋಳ ತೆರುವ ದಂಡ ತುಸು ಹೆಚ್ಚೇ ಆಯಿತೆಂದು ನನ್ನ ಭಾವನೆ. ಮೇಜರ್ ದು ಸ್ಪಾಯ್ನ್ ಅವರು ಹೇಳುವಂತೆ ಆ ನೆಲಗಂಬಳಿಯ ಬೆಲೆ ನೂರು ಡಾಲರುಗಳು. ಅಕ್ಟೋಬರ್ ತಿಂಗಳಿನಲ್ಲಿ ಜೋಳದ ಬೆಲೆ ಬುಶೆಲಿಗೆ ಐವತ್ತು ಸೆಂಟ್ಸ್ ಆಗಬಹುದೆಂದು ಅಂದಾಜಿಸೋಣ. ಮೇಜರ್ ದು ಸ್ಪಾಯ್ನ್, ತಾವು ಖರೀದಿಸಿದ್ದ ನೆಲಗಂಬಳಿಯಲ್ಲಿ ತೊಂಭತ್ತೊಂದು ಡಾಲರು ನಷ್ಟ ತಡೆದುಕೊಳ್ಳಬಹುದಾದರೆ, ನೀನು, ಇನ್ನೂ ಕೊಯ್ಲಾಗದ ಜೋಳದಲ್ಲಿ ಐದು ಡಾಲರ್ ನಷ್ಟವನ್ನು ತಡೆದುಕೊಳ್ಳಬಹುದೆಂದು ಭಾವಿಸುತ್ತೇನೆ. ಮೇಜರ್ ದು ಸ್ಪಾಯ್ನ್ ಅವರ ನೆಲಗಂಬಳಿಯನ್ನು ಹಾಳುಗೆಡವಿದ ಕಾರಣಕ್ಕಾಗಿ, ಒಪ್ಪಂದದ ಪ್ರಕಾರ ನೀನು ಕೊಡಬೇಕಾಗಿರುವ ಜೋಳದ ಮೇಲೆ ಹೆಚ್ಚುವರಿ ಹತ್ತು ಬುಶೆಲ್ ಜೋಳವನ್ನು ಕೊಡಬೇಕೆಂದು ತೀರ್ಮಾನಿಸಿರುತ್ತೇನೆ.”
ನ್ಯಾಯಾಧೀಶರು ತೀರ್ಪು ಓದಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಬೆಳಿಗಿನ ಹೊತ್ತು ಇನ್ನೂ ಬಾಕಿ ಇತ್ತು. ತಂದೆ, ಮನೆಗೆ ಅಥವಾ ಹೊಲಕ್ಕೆ ಹೋಗಬಹುದೆಂದು ಹುಡುಗ ಯೋಚಿಸಿದ. ಅವರು ಬೇರೆ ರೈತರಿಗಿಂತ ತುಂಬಾ ಹಿಂದೆ ಉಳಿದಿದ್ದರು. ಆದರೆ, ಅವನ ತಂದೆ ಇವೆರಡೂ ಮಾಡಲಿಲ್ಲ. ಅವನು ಗಾಡಿ ಹತ್ತಲಿಲ್ಲ. ನಡೆದುಕೊಂಡೇ ಮುಂದೆ ಹೋಗಿ, ಅಣ್ಣನಿಗೆ ತನ್ನನ್ನು ಹಿಂಬಾಲಿಸುವಂತೆ ಹೇಳಿ ಕುಲುಮೆಯ ಕಡೆಗೆ ಹೋದ. ಅಣ್ಣ ಅವನ ಹಿಂದೆ ಗಾಡಿಯನ್ನು ಹೊಡೆದುಕೊಂಡು ಹೋದ. ತಂದೆಗಿಂತ ಮುಂದೆ ಹೋಗಿ, ಅವನು ತಂದೆಗೆ ಪಿಸುಮಾತನಲ್ಲಿ, “ಅವನಿಗೆ ಹತ್ತು ಬುಶೆಲ್ಗಳಿರಲಿ, ಒಂದು ಬುಶೆಲ್ ಕೂಡ ಕೊಡುವುದು ಬೇಡ. ನಾವು…” ತಂದೆ ಅವನನ್ನೇ ದಿಟ್ಟಿಸಿದ. ಅವನ ಕೆದರಿದ ಹುಬ್ಬುಗಳು ಗಂಟಿಕ್ಕಿಕೊಂಡಿದ್ದವು. ಅವನು ಶಾಂತವಾಗಿ:
“ಹಾಗಂತೀಯ? ಅಕ್ಟೋಬರ್ ಬರಲಿ ನೋಡೋಣ,” ಎಂದ.
ಅಣ್ಣ ಹೇಸರಗತ್ತೆಗಳನ್ನು ಬಿಚ್ಚಿ ಗಾಡಿಯನ್ನು ಕುಲುಮೆಯೊಳಗೆ ತೆಗೆದುಕೊಂಡು ಹೋದ. ರಿಪೇರಿ ಕೆಲಸ ಹೆಚ್ಚು ಹೊತ್ತು ಹಿಡಿಯಲಿಲ್ಲ. ಚಕ್ರಗಳನ್ನು ಬಿಗಿಗೊಳಿಸುವುದು, ಎರಡು ಸ್ಪೋಕ್ಸ್ ಹೊಸದಾಗಿ ಹಾಕಿಸುವುದಷ್ಟೇ ಇದ್ದಿದ್ದು. ಗಾಡಿಯ ಕೆಲಸ ಮುಗಿಯುತ್ತಿದ್ದಂತೆ ಹುಡುಗ ಗಾಡಿಯನ್ನು ಕುಲುಮೆಯ ಹಿಂದೆ ಇದ್ದ ತೊರೆಯ ಬಳಿಗೆ ಹೊಡೆದುಕೊಂಡು ಹೋದ. ಹೇಸರಗತ್ತೆಗಳು ಆಗಾಗ್ಗೆ ನೀರಿಗೆ ಬಾಯಿ ಹಾಕುತ್ತಿದ್ದವು. ಹುಡುಗ ಗಾಡಿಯ ಮೇಲೆ ಲಗಾಮುಗಳನ್ನು ಹಿಡಿದು ಕುಳಿತಲ್ಲಿಂದ ಎದುರಿನ ಇಳಿಜಾರು ರಸ್ತೆಯ ಕಡೆಗೆ ನೋಡತೊಡಗಿದ. ಕುಲುಮೆಯಲ್ಲಿ ಕಬ್ಬಿಣ ಬಡಿಯುವ ಸದ್ದು ಕೇಳಿಸುತ್ತಿತ್ತು. ತಂದೆ ಒಂದು ಕಬ್ಬಿಣದ ತುಂಡಿನ ಮೇಲೆ ಕುಳಿತು ಮಾತನಾಡುತ್ತಲೋ, ಕೇಳಿಸಿಕೊಳ್ಳುತ್ತಲೋ ಇದ್ದ. ನೀರಿನಲ್ಲಿ ನೆಂದಿದ್ದ ಗಾಡಿಯನ್ನು ಹುಡುಗ ಕುಲುಮೆಯ ಬಾಗಿಲ ಬಳಿಗೆ ಹೊಡೆದುಕೊಂಡು ಹೋದ. ತಂದೆ ಕುಳಿತಲ್ಲಿಯೇ ಇದ್ದ.
“ಗಾಡಿಯನ್ನು ನೆರಳಲ್ಲಿ ಬಿಟ್ಟು ಹೇಸರಗತ್ತೆಗಳನ್ನು ಕಟ್ಟಿಹಾಕು.” ಅವನು ಹಾಗೆಯೇ ಮಾಡಿ ಹಿಂದಿರುಗಿದ. ಅವನ ತಂದೆ, ಕಮ್ಮಾರ ಮತ್ತು ಇನ್ನೊಬ್ಬ ಕುಕ್ಕರಿಗಾಲಿನಲ್ಲಿ ಕುಳಿತುಕೊಂಡು ಮಳೆ ಬೆಳೆಯ ಬಗ್ಗೆ ಮಾತನಾಡುತ್ತಿದ್ದರು. ಹುಡುಗನೂ ಜಾಗ ಮಾಡಿಕೊಂಡು ಅಲ್ಲಿಯೇ ಧೂಳಿನಲ್ಲಿ ಕುಳಿತುಕೊಂಡನು. ತಂದೆ, ಅವನ ದೊಡ್ಡ ಮಗ ಹುಟ್ಟುವ ಮೊದಲು ತಾನೊಬ್ಬ ವೃತ್ತಿನಿರತ ಕುದುರೆ ದಲ್ಲಾಳಿಯಾಗಿದ್ದ ಕತೆ ಹೇಳುತ್ತಲಿದ್ದ. ಹುಡುಗ ಅಲ್ಲಿಂದ ಎದ್ದು ಕುಲುಮೆಯ ಹೊರಗೆ ಗೋಡೆಯ ಮೇಲೆ ಅಂಟಿಸಿದ್ದ ಕಳೆದ ವರ್ಷದ ಹರಿದು ಗಾಳಿಗೆ ಹಾರಾಡುತ್ತಿದ್ದ ಕುದುರೆಗಳ ಸ್ಟಂಟಿನ, ಜೋಕರ್ಗಳ ಆಟಾಟೋಪದ ಸರ್ಕಸ್ ಪೋಸ್ಟರ್ಗಳನ್ನು ನೋಡುತ್ತಿದ್ದ, ಅಲ್ಲಿಗೆ ಬಂದ ಅಪ್ಪ, “ಊಟದ ಹೊತ್ತಾಯಿತು,” ಎಂದ.
ಅಪ್ಪ ಊಟಕ್ಕೆ ಮನೆಗೆ ಹೋಗೋಣವೆನ್ನಲಿಲ್ಲ. ಸಮೀಪದಲ್ಲೇ ಇದ್ದ ಅಂಗಡಿಗೆ ಹೋಗಿ ಒಂದು ಪೊಟ್ಟಣವನ್ನು ಕಟ್ಟಿಸಿಕೊಂಡು ಬಂದ. ಅದರೊಳಗಿಂದ ಒಂದು ಚೀಝ್ ತುಂಡನ್ನು ಹೊರತೆಗೆದು ತನ್ನ ಪಾಕೆಟ್ ನೈಫಿನಿಂದ ಮೂರು ಭಾಗ ಮಾಡಿ ಅದೇ ಪೊಟ್ಟಣದಿಂದ ಜೋಳದ ಪುರಿಯನ್ನು ಹೊರತೆಗೆದು ಮೂವರೂ ಹಂಚಿಕೊಂಡು ಸಾವಕಾಶವಾಗಿ, ಮೌನವಾಗಿ ತಿನ್ನ ತೊಡಗಿದರು. ಅದೇ ಅಂಗಡಿಯಲ್ಲಿ ಮರದ ಬಕೆಟಿನಲ್ಲಿಟ್ಟಿದ್ದ ಸಪ್ಪೆ ನೀರನ್ನು ಕುಡಿದರು. ತಿಂದು ಮುಗಿದ ನಂತರವೂ ತಂದೆ ಮನೆಗೆ ಹೋಗುವ ಬಗ್ಗೆ ಮಾತನಾಡಲಿಲ್ಲ, ಈ ಬಾರಿ ಅವರು ಒಂದು ಕುದುರೆ ವ್ಯಾಪಾರ ಕೇಂದ್ರಕ್ಕೆ ಹೋದರು, ಎತ್ತರದ ಕಬ್ಬಿಣದ ಬೇಲಿಯ ಹಿಂದೆ ಕೆಲವರು ನಿಂತು ನೋಡುತ್ತಿದ್ದರೆ, ಮತ್ತೆ ಕೆಲವರು ಕುಳಿತಿದ್ದರು. ಬೇಲಿಯೊಳಗಿನ ಹಾದಿಯ ಮೇಲೆ ಒಂದೊಂದೇ ಕುದುರೆ ನಡೆಸಿಕೊಂಡು, ದೌಡಾಯಿಸಿಕೊಂಡು ಪ್ರದರ್ಶಿಸಿದರೆ, ರಸ್ತೆಯಲ್ಲಿ ಮೇಲೆ ಕೆಳಗೆ ನಾಗಾಲೋಟದಲ್ಲಿ ಓಡಿಸಿ ತೋರಿಸುತ್ತಿದ್ದರು. ಇದು ನಡೆಯುತ್ತಿರಬೇಕಾದರೆ ಕೊಳ್ಳುವವರು ಚೌಕಾಸಿ ಮಾಡುವುದರಲ್ಲಿ ನಿರತರಾಗಿದ್ದರು. ಪಶ್ಚಿಮದಲ್ಲಿ ಸೂರ್ಯ ಮುಳುಗುವ ತಯಾರಿ ನಡೆಸುತ್ತಿದ್ದ. ಇವರು ಮೂವರೂ ಕುದುರೆಗಳನ್ನು ನೋಡುವುದರಲ್ಲೇ ತಲ್ಲೀನರಾಗಿದ್ದರು. ಹುಡುಗನ ಅಣ್ಣ ತಂಬಾಕು ಮೆಲ್ಲುತ್ತಿದ್ದನಾದರೆ, ತಂದೆ ಅವನಷ್ಟಕ್ಕೇ ಒಂದೊಂದು ಕುದುರೆಗಳ ಬಗ್ಗೆ ವಿಮರ್ಶೆ ಮಾಡುತ್ತಿದ್ದ.
“ನಡೀರಿ ಹೋಗೋಣ…” ಅಪ್ಪ ಹೇಳಿದ.
***
ಅವರು ಮನೆ ತಲುಪಿದಾಗ ಸೂರ್ಯ ಆಗಲೇ ಮುಳುಗಿದ್ದ. ಅವರು ದೀಪದ ಬೆಳಕಿನಲ್ಲಿ ಕುಳಿತು ಊಟವನ್ನು ಮುಗಿಸಿದರು. ಹುಡುಗ, ಬಾಗಿಲಿನ ಹೊಸ್ತಿಲ ಮೇಲೆ ಕುಳಿತುಕೊಂಡು ನಸುಕಿನ ಹಕ್ಕಿಯ ಕೂಗನ್ನೂ, ಕಪ್ಪೆಗಳ ವಟಗುಟ್ಟುವಿಕೆಯನ್ನು ಕೇಳುತ್ತಾ ಹೊರಗೆ ಕತ್ತಲು ಆವರಿಸುತ್ತಿರುವುದನ್ನು ನೋಡುತ್ತಾ ಕುಳಿತುಕೊಂಡ. ಅಷ್ಟರಲ್ಲಿ ಒಳಗಿನಿಂದ ಅಮ್ಮ, “ಆಬ್ನರ್…! ಬೇಡ! ದಯವಿಟ್ಟು ಬೇಡ! ದೇವರೇ, ಬೇಡ ಆಬ್ನರ್!” ಎಂದು ಅಂಗಲಾಚುತ್ತಿರುವುದು ಕೇಳಿಸಿತು. ಅವನು ದಡಕ್ಕನೆ ಎದ್ದ. ಅಡುಗೆ ಮನೆಯಲ್ಲಿ ದೀಪದ ಬೆಳಕಿಗೆ ಬದಲು ಒಂದು ಸೀಸೆಯೊಳಗೆ ತುರುಕಿದ್ದ ಮೇಣದ ಬತ್ತಿ ಉರಿಯುತ್ತಿತ್ತು. ಅಪ್ಪ ಯಾವುದೋ ಘನಂದಾರಿ ಕೆಲಸಕ್ಕೆ ಹೊರಟವನಂತೆ ತನ್ನ ಕರಿ ಕೋಟು ಮತ್ತು ಹ್ಯಾಟು ಧರಿಸಿ ದೀಪದೊಳಗಿದ್ದ ಸೀಮೆ ಎಣ್ಣೆಯನ್ನು ಕೈಯಲ್ಲಿದ್ದ ಐದು ಗ್ಯಾಲನ್ ಸೀಮೆ ಎಣ್ಣೆ ಕ್ಯಾನಿಗೆ ತುಂಬಿಸುತ್ತಿದ್ದ. ಅಮ್ಮ ಅವನ ಕೈಯನ್ನು ಎಳೆಯುತ್ತಿದ್ದಳು. ಅವನು ದೀಪವನ್ನು ಬೇರೆ ಕೈಗೆ ವರ್ಗಾಯಿಸಿ, ಅಮ್ಮನನ್ನ ದೂರ ಸರಿಸುವಂತೆ ಗೋಡೆಯ ಕಡೆಗೆ ತಳ್ಳಿದ. ಅವಳು ಸಮತೋಲನವನ್ನು ಕಾಪಾಡಿಕೊಳ್ಳಲು ಎರಡೂ ಕೈಗಳನ್ನು ಗೋಡೆಗೆ ಆನಿಸಿ ನಿಂತಳು. ಅವಳ ಮುಖ ಹತಾಶೆಯಿಂದ ವಿವರ್ಣಗೊಂಡಿತ್ತು. ಅವನಿಗೆ ಅಪ್ಪ ಕೈಯಲ್ಲಿ ಕ್ಯಾನ್ ಹಿಡಿದು ಬಾಗಿಲ ಬಳಿ ನಿಂತಿದ್ದು ಕಾಣಿಸಿತು.
“ಬೇಗ ಕೊಟ್ಟಿಗೆಗೆ ಹೋಗಿ ನಾವು ಗಾಡಿಗೆ ಎಣ್ಣೆ ಹಾಕುತ್ತಿದ್ದ ಕ್ಯಾನನ್ನು ತೆಗೆದುಕೊಂಡು ಬಾ,” ತಂದೆ ಹುಡುಗನಿಗೆ ಹೇಳಿದ. ಹುಡುಗ ನಿಂತಲ್ಲಿಂದ ಕದಲಲಿಲ್ಲ.
“ಏನು…” ಅವನು ಭಯದಿಂದ ಕೇಳಿದ. “ನೀನು…”
“ಹೋಗಿ ಎಣ್ಣೆ ಕ್ಯಾನು ತೆಗೆದುಕೊಂಡು ಬಾ ಎಂದೆ,” ತಂದೆ ಮತ್ತೊಮ್ಮೆ ಹೇಳಿದ.
ಹುಡುಗ ಎದ್ದು ಕೊಟ್ಟಿಗೆಯ ಕಡೆಗೆ ಓಡಿದ. ಇದು ಅಪ್ಪನ ಹಳೆಯ ಚಾಳಿ. ತನಗೂ ಬಳುವಳಿಯಾಗಿ ಬಂದಿದೆ. ಅದು ತನ್ನ ಆಯ್ಕೆಯಲ್ಲ; ರಕ್ತಗತವಾಗಿ ಬಂದಿರುವುದು, ತಲೆತಲಾಂತರದಿಂದ, ಎಲ್ಲಿಂದಲೋ ತಾನೇ ತಾನಾಗಿ ಹರಿದು ಬಂದಿರುವ ಮುಂಗೋಪ, ಕ್ರೋಧ, ಕ್ರೌರ್ಯ. ಅದು ತನಗಿಂತಲೂ ಮುಂಚಿನಿಂದಲೇ ಇತ್ತು, ಈಗ ನನ್ನ ರಕ್ತದಲ್ಲಿ ಬಂದು ಸೇರಿಕೊಂಡಿದೆ. ನಾನು ಮತ್ತೆಂದೂ ಹಿಂದೆ ಬರದಂತೆ ಈಗ ಓಡಿ ಹೋಗಬಹುದು. ಅವನ ಮುಖ ನೋಡುವುದಕ್ಕೂ ನನಗೆ ಇಚ್ಛೆ ಇಲ್ಲ. ಆದರೆ, ನಾನು ಹಾಗೆ ಓಡಿಹೋಗಲಾರೆ. ಇಲ್ಲ, ಓಡಿಹೋಗಲಾರೆ ಎಂದು ಯೋಚಿಸುತ್ತಾ ಅವನು ತಂದೆ ಹೇಳಿದ್ದ ತುಕ್ಕು ಹಿಡಿದಿದ್ದ ಕ್ಯಾನನ್ನು ಕೈಯಲ್ಲಿ ಹಿಡಿದು ಮನೆಯ ಕಡೆಗೆ ಓಡತೊಡಗಿದ. ಕ್ಯಾನಿನೊಳಗೆ ಇದ್ದ ಎಣ್ಣೆ ಲೊಳ, ಲೊಳ ಎಂದು ಸದ್ದು ಮಾಡುತ್ತಿತ್ತು. ಅವನು ಮನೆಯನ್ನು ಪ್ರವೇಶಿಸುತ್ತಿದ್ದಂತೆಯೇ ಮತ್ತೊಂದು ರೂಮಿನಲ್ಲಿ ಅಮ್ಮ ಅಳುತ್ತಿರುವ ಸದ್ದು ಕೇಳಿಸತೊಡಗಿತು. ಅಡುಗೆ ಮನೆಯಲ್ಲಿಯೇ ಇದ್ದ ಅಪ್ಪನ ಕೈಗೆ ಅವನು ಎಣ್ಣೆಯ ಕ್ಯಾನನ್ನು ಒಪ್ಪಿಸಿದ.
“ಅಪ್ಪ, ಈ ಬಾರಿ ನೀನು ಸಾಹುಕಾರನ ಮನೆಗೆ ನೀಗ್ರೋ ಆಳನ್ನು ಕಳುಹಿಸುವುದಿಲ್ಲವೇ? ಕಳೆದ ಬಾರಿ ಕಳುಹಿಸಿದ್ದೆ!”
ಅಪ್ಪ ಈ ಬಾರಿ ಅವನ ಕಪಾಳಕ್ಕೆ ಬಾರಿಸಲಿಲ್ಲ. ಈ ಬಾರಿ ಅಪ್ಪನ ಕೈ ಅವನ ಏಟಿಗಿಂತಲೂ ವೇಗವಾಗಿ ಎಣ್ಣೆ ಕ್ಯಾನಿನಿಂದ ಬೇರ್ಪಟ್ಟು ಹುಡುಗನ ಕಾಲರನ್ನು ಬಿಗಿಯಾಗಿ ಹಿಡಿದು ಮುಂದಕ್ಕೆ ಎಳೆಯಿತು. ತಂದೆ ಸಿಟ್ಟಿನಿಂದ ಅವನನ್ನು ನುಂಗುವಂತೆ ದುರುಗುಟ್ಟಿ ನೋಡತೊಡಗಿದ. ಹಾಗೆಯೇ, ಮೇಜಿಗೆ ಒರಗಿಕೊಂಡು ಹೊಗೆಸೊಪ್ಪನ್ನು ಮೆಲ್ಲುತ್ತಿದ್ದ ಅವನ ಅಣ್ಣನಿಗೆ, ತುಟಿಗಳನ್ನು ಓರೆಯಾಗಿಸಿ:
“ಆ ಕ್ಯಾನಿನಿಂದ ಎಣ್ಣೆಯನ್ನು ದೊಡ್ಡ ಕ್ಯಾನಿಗೆ ಬಗ್ಗಿಸಿ ಹಿಡಿದುಕೊಂಡು ನೀನು ಮುಂದೆ ಹೋಗು. ನಾನು ಹಿಂದೆಯೇ ಬರುತ್ತೇನೆ,” ಎಂದ.
“ಅಪ್ಪ, ಅವನಿಗೆ ಮಂಚಕ್ಕೆ ಕಟ್ಟಿ ಹಾಕು! ಬಿಡಬೇಡ,” ಎಂದ ಅಣ್ಣ.
“ನೀನು ನಿನ್ನ ಕೆಲಸ ನೋಡು,” ಅಪ್ಪ ಅವನನ್ನು ಗದರಿದ. ಹುಡುಗನ ಕುತ್ತಿಗೆಯ ಬಳಿಯ ಶರ್ಟನ್ನು ಮತ್ತಷ್ಟು ತಿರುವುತ್ತಾ ಅಪ್ಪ ಹುಡುಗನನ್ನು ದರದರನೆ ಮತ್ತೊಂದು ರೂಮಿನ ಕಡೆಗೆ ಎಳೆದುಕೊಂಡು ಹೋದ. ಹುಡುಗನಿಗೆ ಹೆಜ್ಜೆ ಊರಲೂ ಅವಕಾಶ ಕೊಡಲಿಲ್ಲ. ಆ ರೂಮಿನಲ್ಲಿ ಅವನ ಇಬ್ಬರು ಅಕ್ಕಂದಿರು ತಮ್ಮ ದಪ್ಪ ದಪ್ಪ ಕಾಲುಗಳನ್ನು ಹಿಗ್ಗಲಿಸಿಕೊಂಡು ಕುರ್ಚಿಯ ಮೇಲೆ ಕುಳಿತುಕೊಂಡಿದ್ದರು. ಅಮ್ಮ ಮತ್ತು ಚಿಕ್ಕಮ್ಮ ಮಂಚದ ಮೇಲೆ ಕುಳಿತಿದ್ದರು. ಚಿಕ್ಕಮ್ಮ ತಾಯಿಯನ್ನು ಸಂತೈಸುತ್ತಿರುವಂತೆ ಕಾಣಿಸುತ್ತಿತ್ತು. ಅವಳು ಅಮ್ಮನ ಭುಜವನ್ನು ತನ್ನ ಒಂದು ಕೈಯಿಂದ ತಬ್ಬಿ ಹಿಡಿದಿದ್ದಳು.
“ಇವನನ್ನು ಹಿಡಿದಿಟ್ಟುಕೋ…” ಅಪ್ಪ ಹೇಳಿದ. ಚಿಕ್ಕಮ್ಮ, ತಾನೊಲ್ಲೆ ಎಂಬಂತೆ ಗಾಬರಿಯಿಂದ ಹಿಂದೆ ಸರಿದಳು. “ನೀನಲ್ಲ, ಬಿಡು. ಲೆನ್ನಿ, ಇವನನ್ನು ಹಿಡಿದಿಟ್ಟುಕೋ.” ಅಮ್ಮ ಎದ್ದು ಹುಡುಗನ ಮಣಿಕಟ್ಟನ್ನು ಹಿಡಿದುಕೊಂಡಳು. “ನೀನು ಅವನನ್ನು ಮತ್ತಷ್ಟು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು ಒಳ್ಳೆಯದು. ಅವನನ್ನು ಬಿಟ್ಟುಬಿಟ್ಟರೆ ಏನು ಮಾಡುತ್ತಾನೆ ಗೊತ್ತಾ…? ಖಂಡಿತ ಸಾಹುಕಾರನ ಮನೆಗೆ ಓಡಿಹೋಗುತ್ತಾನೆ. ನಾನು ಅವನನ್ನು ಕಟ್ಟಿ ಹಾಕುವುದೇ ಒಳ್ಳೆಯದು ಅನಿಸುತ್ತದೆ.”
“ನೀವೇನೂ ಹೆದರುವುದು ಬೇಡ. ನಾನು ಅವನನ್ನು ಬಿಡುವುದಿಲ್ಲ,” ಅಮ್ಮ ಮೆಲ್ಲಗೆ ಉಸುರಿದಳು.
“ಸರಿ ಹಾಗಾದರೆ,” ಎನ್ನುತ್ತಾ ಅಪ್ಪ ಹೊರಟುಹೋದ. ಮೆಲ್ಲನೆ ಅವನ ಹೆಜ್ಜೆಗಳ ಸದ್ದು ಕತ್ತಲೆಯಲ್ಲಿ ಕರಗಿ ಹೋಯಿತು.
ಹುಡುಗ ಅಮ್ಮನ ಕೈಯಿಂದ ಬಿಡಿಸಿಕೊಳ್ಳಲು ಕೊಸರಾಡತೊಡಗಿದ. ಅಮ್ಮ ಅವನನ್ನು ಎರಡೂ ಕೈಗಳಿಂದ ಹಿಡಿದುಕೊಂಡಳು. ಆದರೂ, ಅವನು ಕೊಸರಾಡುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ತಾನೇ ಗೆಲ್ಲುವುದೆಂದು ಅವನಿಗೆ ಗೊತ್ತಿದ್ದರೂ ಅವನಿಗೆ ಕೊನೆಯವರೆಗೂ ಕಾಯುವುದು ಬೇಕಿರಲಿಲ್ಲ. “ಅಮ್ಮ, ನನ್ನನ್ನು ಬಿಟ್ಟು ಬಿಡು.” “ಹಟ ಮಾಡಬೇಡ. ನಿನಗೆ ಹೊಡೆಯುವುದು ನನಗೆ ಇಷ್ಟವಿಲ್ಲ.”
“ಅವನನ್ನು ಬಿಟ್ಟು ಬಿಡು ಲೆನ್ನಿ. ನೀನು ಬಿಡದಿದ್ದರೆ; ದೇವರಾಣೆ, ನಾನೇ ಅಲ್ಲಿಗೆ ಹೋಗುತ್ತೇನೆ,” ಚಿಕ್ಕಮ್ಮ ಹೇಳಿದಳು.
“ಅವನನ್ನು ಹೇಗೆ ಬಿಡಲಿ!?” ಅವಳಿಗೆ ದುಃಖ ಉಕ್ಕಿ ಬಂತು. “ಸಾರ್ಟಿ, ಸಾರ್ಟಿ! ಬೇಡ ಕಣೋ… ಲೇ ಲಿಜ಼್ಜ಼ಿ, ಬಾರೇ ಇಲ್ಲಿ. ನನಗೆ ಸ್ವಲ್ಪ ಸಹಾಯ ಮಾಡು.”
ಕೊನೆಗೂ ಹುಡುಗ ಅಮ್ಮನ ಕೈಯಿಂದ ಬಿಡಿಸಿಕೊಂಡ. ಚಿಕ್ಕಮ್ಮ ಅವನನ್ನು ತಡೆಯಲು ಪ್ರಯತ್ನಿಸಿದಳಾದರೂ ಅವನು ತಪ್ಪಿಸಿಕೊಂಡು ಓಡತೊಡಗಿದ. ಅವನನ್ನು ಹಿಡಿಯಲು ಹೋಗಿ ಅಮ್ಮ ಕೆಳಗೆ ಬಿದ್ದುಬಿಟ್ಟಳು. ಅಲ್ಲಿಂದಲೇ ಮಗಳಿಗೆ ಕೂಗತೊಡಗಿದಳು, “ಅವನಿಗೆ ಓಡಿ ಹೋಗಲು ಬಿಡಬೇಡ ಕಣೆ, ಹಿಡಿಯೇ! ಹಿಡಿಯೇ!” ಆದರೆ, ಅದಾಗಲೇ ತಡವಾಗಿತ್ತು. ಹುಡುಗಿ, (ಹುಡುಗಿಯರಿಬ್ಬರೂ ಅವಳಿಯರಾಗಿದ್ದರು. ಒಂದೇ ಹೊತ್ತಿನಲ್ಲಿ ಹುಟ್ಟಿದವರು. ಇಬ್ಬರೂ ಕೂಡ ತೂಕ, ಗಾತ್ರದಲ್ಲಿ ಮನೆಯೊಳಗಿನ ಇತರರ ಎರಡರಷ್ಟಿದ್ದರು.) ಕುರ್ಚಿಯಿಂದ ಮೇಲೆ ಏಳುವುದಿರಲಿ ಅವಳ ತಲೆ, ಮುಖ ಹುಡುಗನತ್ತ ತಿರುಗುವಷ್ಟರಲ್ಲಿ ಅವನು ರೂಮಿನಿಂದ, ಮನೆಯಿಂದ ಗಾವುದ ದೂರ ಓಡಿದ್ದ! ಹುಡುಗ ನಕ್ಷತ್ರಗಳ ಬೆಳಕು ಚೆಲ್ಲಿದ ರಸ್ತೆಯ ಮೇಲೆ ಓಡತೊಡಗಿದ. ಹಾದಿ ಅವನ ಕಾಲಕೆಳಗೆ ನೂಲಿನುಂಡೆಯಿಂದ ದಾರ ಬಿಚ್ಚಿಕೊಳ್ಳುತ್ತಿರುವ ಹಾಗೆ ಸರಿಯುತ್ತಿತ್ತು. ಗಾಳಿಯಲ್ಲಿ ಹನಿಸಕಲ್ ಹೂಗಳ ಪರಿಮಳ ತುಂಬಿತ್ತು. ಅವನ ಹೃದಯ, ಶ್ವಾಸಕೋಶ ನಗಾರಿಯಂತೆ ಬಡಿದುಕೊಳ್ಳುತ್ತಿದ್ದವು. ಸಾಹುಕಾರನ ಮನೆಯ ತಿರುವಿನಲ್ಲಿ ಅವನು ತೆರೆದ ಗೇಟಿನಿಂದ ಒಳಗೆ ನುಗ್ಗಿ ಬೆಳಕು ತುಂಬಿದ ಮನೆಯ ಕಡೆಗೆ ಓಡತೊಡಗಿದ. ಬಾಗಿಲ ಮೇಲೂ ಬೆಳಕಿತ್ತು. ಅವನು ಬಾಗಿಲು ತಟ್ಟುವ ಕೆಲಸಕ್ಕೆ ನಿಲ್ಲದೆ ಒಮ್ಮೆಲೇ ದೂಡಿ ಒಳಗೆ ನುಗ್ಗಿ ಉಸಿರೆಳೆದುಕೊಳ್ಳಲು ಅರೆಗಳಿಗೆ ಕಣ್ಣುಮುಚ್ಚಿ ನಿಂತುಕೊಂಡ. ಅವನಿಗೆ ಮಾತನಾಡಲು ಆಗುತ್ತಿರಲಿಲ್ಲ. ಅವನು ಕಣ್ಣು ತೆರೆದಾಗ ಎದುರಿಗೆ ನಾರು ಬಟ್ಟೆಯ ಜಾಕೆಟನ್ನು ತೊಟ್ಟುಕೊಂಡಿದ್ದ ನೀಗ್ರೋ ಕೆಲಸದಾಳನ್ನು ಅಷ್ಟು ಬೇಗ ಕಂಡು ಅವನಿಗೆ ಆಶ್ಚರ್ಯವಾಯಿತು.
“ದು ಸ್ಪಾಯ್ನ್…!” ಅವನು ಏದುಸಿರು ಬಿಡುತ್ತಾ, “ಎಲ್ಲಿದ್ದಾರೆ?” ಎಂದು ಕೇಳುವಷ್ಟರಲ್ಲಿ, ಬಿಳಿ ಬಣ್ಣದ ಬಾಗಿಲನ್ನು ತೆರೆದು ಸಾಹುಕಾರ ಹಜಾರಕ್ಕೆ ಬಂದ.
“ಕೊಟ್ಟಿಗೆ!” ಅವನು ಮತ್ತೊಮ್ಮೆ ಏದುಸಿರು ಬಿಡುತ್ತಾ ಹೇಳಿದ, “ಕೊಟ್ಟಿಗೆ…!”
“ಏನು?” ಸಾಹುಕಾರ ಅರ್ಥವಾಗದೆ ಕೇಳಿದ. “ಕೊಟ್ಟಿಗೆ?”
“ಹೌದು, ಹೌದು! ಕೊಟ್ಟಿಗೆ!”
“ಅವನನ್ನು ಹಿಡಿ, ಬಿಡಬೇಡ!” ನೀಗ್ರೋ ಕೆಲಸದಾಳಿಗೆ ಹೇಳಿದ ಸಾಹುಕಾರ.
ಆದರೆ, ತಡವಾಗಿತ್ತು. ನೀಗ್ರೋ ಕೆಲಸದಾಳು ಅವನ ಶರ್ಟಿನ ತೋಳನ್ನು ಹಿಡಿದೆಳೆದ. ಒಗೆದು, ಒಗೆದು ಸವೆದಿದ್ದ ಶರ್ಟಿನ ತೋಳು ಮಾತ್ರ ನೀಗ್ರೋ ಕೆಲಸದಾಳಿನ ಕೈಯಲ್ಲುಳಿದು ಹುಡುಗ ತೆರೆದ ಬಾಗಿಲಿನಿಂದ ಹೊರಗೆ ಓಡತೊಡಗಿದ.
ಓಡುತ್ತಲೇ ಅವನು ಕಿರುಚತೊಡಗಿದ, “ಕೊಟ್ಟಿಗೆ! ಕೊಟ್ಟಿಗೆ!!”
ಅವನ ಹಿಂದೆಯೇ ಓಡಿಬರುತ್ತಿದ್ದ ಸಾಹುಕಾರ- ನೀಗ್ರೋ ಕೆಲಸದಾಳಿಗೆ, “ಹೋಗು, ಹೋಗು. ನನ್ನ ಕುದುರೆಯನ್ನು ಹೊಡೆದುಕೊಂಡು ಬಾ,” ಎಂದ.
ಹುಡುಗ ರಸ್ತೆಯನ್ನು ತಲುಪಲು ಬಳಸುದಾರಿಯಿಂದ ಹೋಗುವ ಬದಲು ಹೂದೋಟದ ಮೇಲಿಂದ ಹೋಗಿ ಬೇಲಿಯನ್ನು ಹಾರಿ ಹೋದರೆ ಹೇಗೆಂದು ಯೋಚಿಸಿದ. ಆದರೆ, ಅದು ಅವನಿಗೆ ಗೊತ್ತಿರದ ಜಾಗ. ಅಲ್ಲದೆ, ಬೇಲಿ ಎಷ್ಟು ಎತ್ತರವಿದೆಯೆಂದು ಕೂಡ ಅವನಿಗೆ ಅಂದಾಜಿರಲಿಲ್ಲ. ಅವನು ಬಂದಿದ್ದ ಬಳಸು ದಾರಿಯಲ್ಲೇ ಓಡತೊಡಗಿದ. ಅವನು ಗೊತ್ತಿಲ್ಲದೆಯೇ ರಸ್ತೆಯನ್ನು ತಲುಪಿದ್ದ. ಅದು ಅವನಿಗೆ ಕಾಣಿಸುತ್ತಿರಲಿಲ್ಲ. ಅವನಿಗೆ ಏನೂ ಕೇಳಿಸುತ್ತಿರಲೂ ಇಲ್ಲ. ಸಾಹುಕಾರನ ಕುದುರೆ ತೀರ ಸನಿಹಕ್ಕೆ ಬಂದಾಗಲೇ ಅವನಿಗೆ ಗೊತ್ತಾಗಿದ್ದು. ತಕ್ಷಣ ರಸ್ತೆಯ ಪಕ್ಕಕ್ಕೆ ಹೊರಳಿ ಕಳೆ ಬೆಳೆದಿದ್ದ ಚರಂಡಿಯಲ್ಲಿ ಅವಿತುಕೊಂಡ. ಕುದುರೆ ನಾಗಾಲೋಟದಿಂದ ಮುಂದೆ ಹೋಯಿತು. ಆ ಪ್ರಶಾಂತವಾದ ನಕ್ಷತ್ರಗಳ ಬೆಳಕಿನ ರಾತ್ರಿಯಲ್ಲಿ ಕುದುರೆ ಮತ್ತು ಸವಾರನ ಛಾಯಾ ಆಕೃತಿ ಮೂಡಿ ಕೆಲವು ಕ್ಷಣಗಳಲ್ಲಿ ಮರೆಯಾಯಿತು. ಒಮ್ಮೆಲೇ, ದೂರದಲ್ಲಿ ಯಾವುದೇ ಸದ್ದು ಗದ್ದಲವಿಲ್ಲದ ಆಸ್ಫೋಟದಂತೆ ಸುರುಳಿ ಸುರುಳಿ ಸುತ್ತಿಕೊಳ್ಳುತ್ತಾ ಧೂಮವು ನಕ್ಷತ್ರಗಳ ಮೇಲೆ ಮುಸುಕು ಹೊದೆಸಿದಂತೆ ಆಕಾಶಕ್ಕೆಲ್ಲಾ ಹರಡಿಕೊಂಡಿತು. ಇದನ್ನು ನೋಡಿದ್ದೇ ಹುಡುಗ ದಡಕ್ಕನೆ ಎದ್ದು ಮತ್ತೆ ರಸ್ತೆಯ ಮೇಲೆ ಓಡತೊಡಗಿದ. ಅವನಿಗೆ ಗುಂಡಿನ ಸದ್ದು ಕೇಳಿಸಿತು. ಕೆಲವು ಕ್ಷಣಗಳ ನಂತರ ಮತ್ತೆ ಎರಡು. ಅಪ್ರಜ್ಞಾಪೂರ್ವಕವಾಗಿ ಹುಡುಗ ಓಡುವುದನ್ನು ನಿಲ್ಲಿಸಿ, “ಅಪ್ಪ! ಅಪ್ಪ!” ಎಂದು ಬಿಕ್ಕುತ್ತಾ ಮತ್ತೆ ಓಡಲಾರಂಭಿಸಿದ. ಏನನ್ನೋ ಎಡವಿ ಬಿದ್ದು, ಮತ್ತೆ ಎದ್ದು ಆಗಾಗ್ಗೆ ಹಿಂದೆ ನೋಡುತ್ತಾ, “ಅಪ್ಪ! ಅಪ್ಪ!” ಎಂದು ಬಿಕ್ಕುತ್ತಾ ಓಡತೊಡಗಿದ.
ಮಧ್ಯರಾತ್ರಿಯಷ್ಟೊತ್ತಿಗೆ ಅವನೊಂದು ಗುಡ್ಡದ ಮೇಲೆ ಕುಳಿತುಕೊಂಡಿದ್ದ. ತಾನು ಎಲ್ಲಿದ್ದೇನೆಂದಾಗಲಿ ಅಥವಾ ಅದು ಮಧ್ಯರಾತ್ರಿಯೆಂದಾಗಲಿ ಅವನಿಗೆ ತಿಳಿದಿರಲಿಲ್ಲ. ಹಿಂದೆ ಕಡುಗತ್ತಲು ತುಂಬಿತ್ತು. ಅವನು ತನ್ನ ಮನೆ ಎಂದುಕೊಂಡಿದ್ದ ಸ್ಥಳದಿಂದ ಹೊರಟು ಇಂದಿಗೆ ನಾಲ್ಕು ದಿನಗಳಾಗಿದ್ದವು. ಎದುರಿಗೆ ದಟ್ಟ ಕಾಡು ಹರಡಿಕೊಂಡಿತ್ತು. ಹರಿದ ಶರ್ಟಿನಲ್ಲಿ ಮುದುರಿ ಕುಳಿತಿದ್ದವನಿಗೆ ಅಸಾಧ್ಯ ಚಳಿ ಕಂಗೆಡಿಸಿತ್ತು. ಸಾಕಷ್ಟು ವಿರಾಮ ಪಡೆದು ಮತ್ತೆ ಶಕ್ತಿ ಸಂಚಯವಾದೊಡನೆ ಅವನು ಮುಂದುವರಿಯುವವನಿದ್ದ. ಈಗ ಅವನ ಮನಸ್ಸಿನಲ್ಲಿ ಎಳ್ಳಷ್ಟೂ ಭಯವಿರಲಿಲ್ಲ. ಆ ಜಾಗದಲ್ಲಿ ದುಃಖ ಮತ್ತು ಹತಾಶೆಯಷ್ಟೇ ಉಳಿದುಕೊಂಡಿತ್ತು. “ಅಪ್ಪ! ನನ್ನ ಪ್ರಿತಿಯ ಅಪ್ಪ!” ಅವನು ಯೋಚಿಸತೊಡಗಿದ, “ಅವನು ನಿಜಕ್ಕೂ ಧೈರ್ಯಶಾಲಿ!” ಅವನು ದೃಢವಾಗಿ ಹೇಳಿದ, ಜೋರಾಗಿಯಲ್ಲ ಪಿಸುಮಾತಿನಲ್ಲಿ. “ಅವನು ಯುದ್ಧದಲ್ಲಿ ಭಾಗವಹಿಸಿದ್ದ! ಕರ್ನಲ್ ಸಾರ್ಟೊರಿಸ್ನ ಅಶ್ವದಳದಲ್ಲಿದ್ದ.” ಪಾಪ ಹುಡುಗನಿಗೆ ಗೊತ್ತಿರಲಿಲ್ಲ: ಅವನ ಅಪ್ಪ ಒಬ್ಬ ಸಾಮಾನ್ಯ ಯೋಧನಾಗಿ, ಸಮವಸ್ತ್ರ ಧರಿಸದೆ ಸೈನ್ಯಕ್ಕೆ ಸೇರಿದ್ದ. ಅವನಿಗೆ ಯಾವುದೇ ಸೈನ್ಯಕ್ಕಾಗಲಿ, ಧ್ವಜಕ್ಕಾಗಿಯಾಗಲೀ ಕಿಂಚಿತ್ತೂ ನಿಷ್ಠೆ ಇರಲಿಲ್ಲ. ಅವನಿಗೆ, ಯಾವ ಕಡೆಯಿಂದಾದರೂ ಸರಿಯೇ, ದೋಚುವುದಷ್ಟೇ ಮುಖ್ಯವಾಗಿತ್ತು ಎಂದು.
ನಕ್ಷತ್ರಗಳ ಗತಿ ನಿಧಾನಕ್ಕೆ ಸರಿಯುತ್ತಿತ್ತು. ಕೆಲವು ಗಂಟೆಗಳ ನಂತರ ಮುಂಜಾವು, ನಂತರ ಸೂರ್ಯೋದಯ. ಯಥಾಪ್ರಕಾರ ಮತ್ತೆ ಹಸಿವು. ಅದು ಏನಿದ್ದರೂ ನಾಳೆಯ ಮಾತು. ಪ್ರಸ್ತುತ ಅವನಿಗೆ ಚಳಿಯಾಗುತ್ತಿತ್ತು. ನಡಿಗೆಯಿಂದಷ್ಟೇ ಅದಕ್ಕೆ ಮುಕ್ತಿ. ಅವನೀಗ ಸರಾಗವಾಗಿ ಉಸಿರಾಡುತ್ತಿದ್ದ. ಎದ್ದು ನಡೆಯಲು ನಿರ್ಧರಿಸಿದ. ತಾನು ನಿದ್ರಿಸಿರಬೇಕು. ಏಕೆಂದರೆ ಆಗಲೇ ನಸುಕು ಹರಿದಿತ್ತು. ಹೆಚ್ಚು ಕಮ್ಮಿ ರಾತ್ರಿ ಕಳೆದಿತ್ತು. ಅದು ನಸುಕಿನ ಹಕ್ಕಿಗಳ ಮೌನದಿಂದಲೇ ಗೊತ್ತಾಗುತ್ತಿತ್ತು. ರಾತ್ರಿಯಿಡೀ ಅವುಗಳದೇ ನಿರಂತರ ಗದ್ದಲ. ನಸುಕಿನ ಹಕ್ಕಿಗಳ ಜಾಗವನ್ನು ಈಗ ಹಗಲು ಪಕ್ಷಿಗಳು ವಹಿಸಿಕೊಂಡಿದ್ದವು. ಕೊನೆಗೂ ಅವನು ಎದ್ದು ನಿಂತ. ಕಾಲಿನ ಸಂದಿಗಳು ಬಿಗಿದುಕೊಂಡಿದ್ದವು. ನಡೆಯುತ್ತಲೇ ಬಿಸಿಲಿಗೆ ಅವು ಸರಿಯಾಗುತ್ತವೆಂದು ಅವನಿಗೆ ತಿಳಿದಿತ್ತು. ಗುಡ್ಡವನ್ನು ಇಳಿದು ಕಾಡಿನತ್ತ ನಡೆದ. ಹಕ್ಕಿಗಳು ಗದ್ದಲವೆಬ್ಬಿಸುತ್ತಾ ಅವನನ್ನು ಸ್ವಾಗತಿಸಿದವು. ಅವನು ಹಿಂದಿರುಗಿ ನೋಡದೆ ಮುಂದೆ ನಡೆದ.
ವಿಲಿಯಂ ಫಾಕ್ನರ್ನ ಮನೆತನದ ಹೆಸರಿನ ಕಾಗುಣಿತ Falknerನಿಂದ Faulkner ಆಗಿದ್ದು 1918ರಲ್ಲಿ, ಅಜಾಗರೂಕ ಟೈಪ್ಸೆಟರ್ ಮಾಡಿದ typoನಿಂದಾಗಿ!
ಉರಿಸಿಂಗ ಕಾಫಿ ತೋಟಗಳಲ್ಲಿ ಕಂಡುಬರುವ ಸಣ್ಣಕೀಟ. ಇದು ಮೈಗೆ ತಾಕಿದರೆ ಚರ್ಮಕ್ಕೆ ಬೆಂಕಿ ಹಚ್ಚಿದಂತೆ ಉರಿಯೇಳುತ್ತದೆ. ಉರಿಸಿಂಗ ಎಂದರೆ ಉರಿಯುತ್ತಿರುವ ಪಂಜನ್ನು ಹಿಡಿದು ಓಡಾಡುವ, ಕುಣಿಯುವ ಕೊಳ್ಳಿದೆವ್ವವೂ ಆಗಬಹುದು!
ಒಂದು ಬುಶೆಲ್ ಎಂದರೆ ಅಂದಾಜು 25 ಕೆಜಿ.
ಜೆ ವಿ ಕಾರ್ಲೊ
ಹಾಸನದ ನಿವಾಸಿ. ಕಟ್ಟಡ ನಿರ್ಮಾಣ ವೃತ್ತಿಯಲ್ಲಿದ್ದವರು. ಓದಿನ ಜೊತೆಗೆ ಇಂಗ್ಲಿಷಿನಿಂದ ಕನ್ನಡ, ಕೊಂಕಣಿಗೆ ಅನುವಾದಗಳನ್ನು ಮಾಡುತ್ತಾ ಬಂದಿದ್ದಾರೆ. ಕೊಂಕಣಿಗೆ ಅನುವಾದಿಸಿದ Pascal Nazareth ಅವರ Gandhi’s Outstanding Leadership ಪುಸ್ತಕದ ಅನುವಾದಕ್ಕಾಗಿ ‘ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ’ ಪುರಸ್ಕಾರ ಲಭಿಸಿದೆ. ಕನ್ನಡದ ಓದುಗರನ್ನು ಸೆಳೆದ ಮತ್ತೆರಡು ಅನುವಾದಗಳೆಂದರೆ ರೊಆಲ್ಡ್ ದಾಹ್ಲ್ ಸಣ್ಣ ಕತೆಗಳ ಅನುವಾದ ಅನಿರೀಕ್ಷಿತ ಕಥೆಗಳು ಹಾಗೂ ಜಾಕ್ ಲಂಡನ್ನ ದಿ ಕಾಲ್ ಆಫ್ ದಿ ವೈಲ್ಡ್.
ಇದನ್ನೂ ಓದಿ …
ನಮ್ಮ ಕಾಲಕ್ಕೆ ತಕ್ಕುದಾದುದು ಪ್ರಹಸನ ಮಾತ್ರ
ವನ್ಯಜೀವಿ ಛಾಯಾಚಿತ್ರಕಾರರಾದ ಕೃಪಾಕರ ಸೇನಾನಿ ತಮ್ಮ ಕೆನ್ನಾಯಿಯ ಜಾಡಿನಲ್ಲಿ ಪುಸ್ತಕದಲ್ಲಿ ಆನೆಯೊಂದು ಆನೆಯಾಗುವ ಬಗೆಯನ್ನು ಹೀಗೆ ಚಿತ್ರಿಸುತ್ತಾರೆ: