ದಕ್ಷಿಣ ಆಫ಼್ರಿಕದ ಖ್ಯಾತ ಕಾದಂಬರಿಕಾರ, ನೊಬೆಲ್ ಪ್ರಶಸ್ತಿ ವಿಜೇತ, ಜಾನ್ ಮ್ಯಾಕ್ಸ್ವೆಲ್ ಕೂಟ್ಸಿ1 (John Maxwell / J. M. Coetzee) ಅವರ ಇತ್ತೀಚಿಗಿನ ಕಾದಂಬರಿ The Pole2 ಕುರಿತು ಪ್ರಕಾಶ್ ನಾಯಕ್ ಬರೆದಿದ್ದಾರೆ.

ಭಾವನೆಗಳನ್ನು ಹಂಚಿಕೊಳ್ಳಲು ಇರುವ ದಾರಿ ಹುಡುಕುವುದು ಮನುಷ್ಯನ ಮೂಲಭೂತ ಹುಡುಕಾಟಗಳಲ್ಲಿ ಒಂದಿರಬೇಕು. ಮೌನದ ಅರ್ಥವನ್ನು ಮನಗಾಣಿಸಲು ಸಂಗೀತವನ್ನು ಬಳಸಿಕೊಂಡ ಹಾಗೆ, ಭಾಷೆಯ ಮಿತಿಯನ್ನು ತೋರಿಸುವ ಸಾಹಿತ್ಯ ಕೃತಿಗಳು ಬಹಳ ಇವೆ. Read between the lines ಆಗಿದ್ದರೆ ಶಬ್ದಗಳು ತುಂಬಿದ ಸಾಲುಗಳೇಕೆ ಎಂದು ಕೇಳುವ ಹಾಗಿಲ್ಲ, ಯಾಕೆಂದರೆ ಅವೇ ಸಾಲುಗಳನ್ನು ಬಳಸಿ ಅವುಗಳಿಗೆ ಮೀರಿದ ಅರ್ಥ ಹುಡುಕಬೇಕು. ಭಾವನೆಯ ನವಿರನ್ನು ಹಿಡಿಯಲು ಭಾಷೆ ಬಲು ಒರಟು. ಭಾಷೆಗೆ ಸಾಧ್ಯತೆಗಳು ಬಹಳ. ಶಬ್ದಗಳಿಗೆ ಅವುಗಳದೇ ಆದ ಅರ್ಥವಿದೆಯೇ? ಸಂದರ್ಭ ತಿಳಿದರೂ ಆಡುವ, ಕೇಳುವ ವ್ಯಕ್ತಿಯ ಸಂಸ್ಕೃತಿಯ ಹಿನ್ನೆಲೆ, ಸಂದರ್ಭ ಅವುಗಳ ಅರ್ಥ ಬದಲಿಸಬಹುದು. ಅನುಪಮ ಖೇರನ ಜನಪ್ರಿಯ ನಾಟಕ “ಮೇರಾ ವೋಹ್ ಮತಲಬ್ ನಹೀ ಥಾ” ನಾಟಕದಲ್ಲಿ ಕಥಾನಾಯಕ “ನಾನಂದದ್ದು ಆ ಅರ್ಥದಲ್ಲಿ ಅಲ್ಲ!” ಎಂದು ಪದೇಪದೇ ಸಮಜಾಯಿಷಿ ಕೊಡುತ್ತಿರುತ್ತಾನೆ. ಈ ತೊಡಕು ಅಥವಾ ಬಹು ಸಾಧ್ಯತೆಗಳು ಕೇವಲ ಭಾಷೆಗೆ — ಅಂದರೆ ಆಡುವ ಮಾತು ಅಥವಾ ಕಥನಗಳಿಗೆ ಸೀಮಿತವಾಗಿರದೇ, ಸಂಗೀತ, ಹಾವ-ಭಾವ ಮೊದಲಾಗಿ ಎಲ್ಲ ಅಭಿವ್ಯಕ್ತಿಗಳಿಗೂ ವಿಸ್ತರಿಸುವ ಸಾದ್ಯತೆ ಈ ಕಾದಂಬರಿಯಲ್ಲಿ ಕಾಣಿಸಿಕೊಳ್ಳುತ್ತದೆ.
ದಕ್ಷಿಣ ಆಫ಼್ರಿಕಾ ಮೂಲದ, ಅಮೆರಿಕೆಯಲ್ಲಿ ಕಲಿತು, ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ 84ರ ಹರೆಯದ ಜೆ. ಎಂ. ಕೂಟ್ಸಿ, ಇಂಗ್ಲಿಷ್ ಭಾಷೆಯಲ್ಲಿನ ಸಾಹಿತ್ಯಕ್ಕಾಗಿ ೨೦೦೩ರಲ್ಲಿ ನೊಬೆಲ್ ಪುರಸ್ಕಾರ ಪಡೆದಿರುವ ಖ್ಯಾತ ಲೇಖಕ. ಭಾಷೆಯ ಬಳಕೆಯಲ್ಲಿ ಕೂಟ್ಸಿ ಮಿತವ್ಯಯಿ. ಹೇಳಬೇಕಾದುದನ್ನು ಬಲು ಎಚ್ಚರದಿಂದ, ಆದರೆ ಬೇಕಾದ ಯಾವುದನ್ನೂ ಹೇಳದೇ ಸುಮ್ಮನಿರಲಾರದ ಲೇಖಕ. ಇಂಗ್ಲೀಷಿನಲ್ಲಿ ಬರೆದೂ, ಅದರ ಸ್ಪ್ಯಾನಿಷ್ ಅನುವಾದ ಮೊದಲು ಪ್ರಕಟವಾಗುವಂತೆ ಆಯೋಜಿಸಿ, ಭಾಷೆಗಳ ನಡುವೆ ಸಮಾನತೆ ತರಲು ಪ್ರಯತ್ನ ನಡೆಸುವ, ದೇಶ-ಭಾಷೆಗಳ ಗಡಿ ಮೀರಲು ಪ್ರಯತ್ನಿಸುವ ಲೇಖಕ. ಅವನ ಇತ್ತೀಚಿನ ಈ ಕಾದಂಬರಿ The Pole (2023), ಸಂಬಂಧಗಳು, ಮತ್ತು ಅವುಗಳನ್ನು ಬೆಸೆಯುವಲ್ಲಿ ಇರುವ ತೊಡಕುಗಳನ್ನು ಸುಂದರವಾಗಿ ಕಟ್ಟಿಕೊಡುತ್ತದೆ.
ಪೋಲೆಂಡ ದೇಶದ ಕರೆಯಲು ಕಷ್ಟವೆನಿಸುವ, ವೀಟೋಲ್ಡ್ ವಾಲ್ಚಿಕಿಎವಿಜ಼್ (Witold Walczykiewicz), ಎಂಬ ಹೆಸರಿನ, ಅದೇ ಕಾರಣಕ್ಕೆ ಅವನ ಆತಿಥೇಯರಿಂದ ಪೋಲ್ ಎಂದೇ ಕರೆಯಲ್ಪಪಡುವ ಎಪ್ಪತ್ತರ ಹರೆಯದ ಸಂಗೀತಗಾರ ಮತ್ತು ನಲವತ್ತು ದಾಟಿರುವ ಸಂಸಾರಸ್ಥೆ ಬೀಯಾತ್ರೀಜ಼್ (Beatriz) ನಡುವಿನ ಪ್ರಣಯದ ಸುತ್ತ ನಡೆಯುವ ಕತೆ “ದ ಪೋಲ್”. ಅವರ ನಡುವೆ ದೇಶ-ಕಾಲ-ಭಾಷೆಗಳ ಅಂತರ; ಹೆಂಡತಿಯನ್ನು ಕಳೆದುಕೊಂಡು ಏಕಾಂಗಿಯಾಗಿರುವ, ಪೋಲೆಂಡಿನ ಸಂಗೀತಗಾರ ಫ಼್ರೆಡ್ರೀಕ್ ಶೋಪ್ಯಾನ್ನ (Frédéric Chopin) ಸಂಗೀತವನ್ನು (Chopin ಘರಾನಾ ಎನ್ನಬಹುದೇನೋ!) ಜನರಿಗೆ ತಲುಪಿಸಲು ಜಗತ್ತು ಸುತ್ತುವ ಪೋಲ್; ಜರ್ಮನಿಯಲ್ಲಿ ಹೋಟೆಲ್ ಕೆಲಸ ಮಾಡುವ ಮಗಳಿದ್ದರೂ ಅವನದು ಒಂಟಿ ಜೀವನ. ಸ್ಪೇನಿನ ಬಾರ್ಸಿಲೋನದಲ್ಲಿ ಬ್ಯಾಂಕರ್ ಗಂಡ, ಮಕ್ಕಳು, ಪ್ರತಿ ತಿಂಗಳೂ ಕಾರ್ಯಕ್ರಮಗಳನ್ನು ನಡೆಸುವ ಸಾಂಸ್ಕೃತಿಕ ಸಂಘದ ಗೆಳತಿಯರೊಡನೆ, ಅತಿಯಾದ ಸ್ವವಿಮರ್ಶೆ ಇಚ್ಛಾಶಕ್ತಿಯನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂದುಕೊಂಡು, ಬದುಕಿನ ಆ ಕ್ಷಣದಲ್ಲಿ ನೆಮ್ಮದಿಕಾಣುವ ಬುದ್ಧಿವಂತ ಗೃಹಿಣಿ ಬೀಯಾತ್ರೀಜ಼್. ಅವಳ ಗೆಳತಿಯೊಬ್ಬಳು ಕೊನೆಯ ಗಳಿಗೆಯಲ್ಲಿ ಹಿಂದೆ ಸರಿದುದ್ದದರಿಂದ ಅತಿಥಿ ಪಿಯಾನಿಸ್ಟ್ ವೀಟೋಲ್ಡ್ಗೆ ಸಾಂಸ್ಕೃತಿಕ ಸಂಘದ ಆತಿಥೇಯಳಾಗಿ ಔತಣ ಕೂಟಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗುತ್ತದೆ. ಶೋಪ್ಯಾನ್ ಸಂಗೀತದ ಮೂಲಕ ಯಾಕೆ ಬದುಕಬೇಕು? ನಮಗದರ ಮಹತ್ವ ಏನು ಎನ್ನುವ ಅವಳ ನೇರ ಪ್ರಶ್ನೆಗೆ, ಶೋಪ್ಯಾನ್ನ ಸಂಗೀತ ಹೇಳುವುದೂ ನಮ್ಮ ಬಯಕೆಗಳ ಕುರಿತೇ. ಅದನ್ನು ನಾನು ಇಂಗ್ಲೀಷಿನಲ್ಲಾಗಲೀ, ಪೋಲಿಷಿನಲ್ಲಾಗಲಿ ವಿವರಿಸಲಾರೆ. ನೀನೇ ಕೇಳಿ ಅನುಭವಿಸಬೇಕು ಎಂದು ಪೋಲ್ ಶೋಪ್ಯಾನ್ನ ಸಂಗೀತದ CDಗಳನ್ನು ಕಳುಹಿಸುವ ಮೂಲಕ ಅವರ ನಡುವೆ ಬಂಧವೊಂದು ಹುಟ್ಟಿಕೊಳ್ಳುತ್ತದೆ.
ಪಾತ್ರಗಳನ್ನು ಕೂಟ್ಸಿ ಪರಿಚಯಿಸುವ ರೀತಿ ವಿಶಿಷ್ಟವಾದದ್ದು. “ತನ್ನ ಕಡೆ ಹಾಯುವ ಗಂಡಸರ ನೋಟಗಳಿಂದ ಬೀಯಾತ್ರೀಜ಼್ ತಪ್ಪಿಸಿಕೊಳ್ಳುತ್ತಾಳೆ, ಅದು ಅನಪೇಕ್ಷಣೀಯ ಅಂತ ಅಲ್ಲ, ಆ ಕುರಿತು ಅವಳು ಮುಂದಡಿಯಿಟ್ಟಿಲ್ಲ; ಆ ನಿರ್ಧಾರ ಪೂರ್ತಿಯಾಗಿ ಅವಳದ್ದೇ,” ಎಂದು ಮೊದಲೇ ಹೇಳುವ ಮೂಲಕ ನಂತರದ ಕತೆಯಲ್ಲಿ ಪೋಲ್ ಮುಂದಿಟ್ಟ ಪ್ರೇಮಯಾಚನೆಗೆ ಓಗೊಡುವುದರಲ್ಲಿ ಅವಳು ದುಡುಕಿದಳು ಎನ್ನುವ ನಿರ್ಣಯಕ್ಕೆ ಓದುಗ ಬರದಂತೆ ತಡೆಯುತ್ತಾರೆ.
ಕಥಾನಾಯಕ ಪೋಲ್ಗೂ ಇಂಗ್ಲಿಷ್ ಭಾಷೆ ಸ್ವಂತದ್ದಲ್ಲ, ಸ್ಪ್ಯಾನಿಷ್ ಮನೆಮಾತಿನ ಬೀಯಾತ್ರೀಜ಼್ಗೂ ಇಂಗ್ಲಿಷ್ ಸ್ವಂತದ್ದಲ್ಲ. ಪೋಲ್ನ ಶೋಪ್ಯಾನ್ ಬೀಯಾತ್ರೀಜ಼್ಗೆ ಸಪ್ಪೆ. ಪಟ್ಟಿ ಮಾಡಿದಷ್ಟೂ ಅಂತರಗಳೇ ಜಾಸ್ತಿ. ಹಾಗಾದರೆ ಈ ಆಕರ್ಷಣೆ ಹುಟ್ಟಿದ್ದು ಹೇಗೆ? ಅಂತರಗಳನ್ನು ಮೀರಲು, ಪ್ರೀತಿಯನ್ನು ಅರುಹಲು ಅಥವಾ ತಿಳಿಯಲು ಭಾಷೆ, ಸಂಗೀತ, ಸಂವೇದನೆಗಳ ತಾಕಲಾಟ. ಪೋಲ್ನನ್ನು ದೂರವಿಡಲು ಪ್ರಯತ್ನಿಸುತ್ತಲೇ ಅವನಿಗೆ ಒಪ್ಪಿಸಿಕೊಳ್ಳುವ, ಅವನ ಪ್ರೇಮ ನಿವೇದನೆಯ ಕವಿತೆಗಳನ್ನು ಪೋಲಿಷ್ನಿಂದ ಅನುವಾದಿಸಿ, ಅದರಲ್ಲಿ ತನ್ನ ಬಗ್ಗೆ ಏನು ಬರೆದಿರಬಹುದು ಎಂದು ತಿಳಿಯುವ ತವಕಿಸುವ ಬೀಯಾತ್ರೀಜ಼್ ಅವನಲ್ಲಿ ಏನನ್ನು ಹುಡುಕುತ್ತಿದ್ದಳು ಎನ್ನುವುದು ಅವಳಂತೆಯೇ ನಮಗೂ ಕುತೂಹಲ ಹುಟ್ಟಿಸುತ್ತದೆ. ಪೋಲ್ ಪ್ರಸ್ತುತಪಡಿಸುವ ಶೋಪ್ಯಾನ್ನ ಸಂಗೀತವಾಗಲೀ, ಪೋಲ್ನ ನಿಲುವುಗಳಾಗಲೀ ಅವಳನ್ನು ಸೆಳೆದ ಸುಳಿಹಿಲ್ಲ. What an old clown! ಎನ್ನುವ ಅವಳು ಬಯಸಿದ್ದು ತನ್ನೆಡೆಗಿನ ಅವನ ಆರಾಧನೆಯನ್ನೇ? ಸಂಗೀತದ ಗರಿಮೆಯನ್ನು ಶಬ್ದಗಳಲ್ಲಿ ಹೇಳಲಾಗದು ಎಂದು ಒಪ್ಪಿಕೊಳ್ಳುವ ಪೋಲ್, ತನ್ನ ಅಂತಿಮ ಸಂದೇಶವೆನ್ನುವಂತೆ ಕವನಗಳನ್ನು ಅವಳಿಗಾಗಿಯೇ ರಚಿಸಿ ಏನನ್ನು ಸಾಧಿಸಲು ಬಯಸಿದ? ಇಲ್ಲಿನ ಸಂಬಂಧದ ಮೂಲಧಾತುವಿನ ಹುಡುಕಾಟ ಮನೋಜ್ಞವಾಗಿದೆ. ಇಟಲಿಯ ಮಹಾಕವಿ, ತತ್ವಶಾಸ್ತ್ರಜ್ಞ ಡಾಂಟೆ ಮತ್ತು ಅವನು ಗುಟ್ಟಾಗಿ ಪ್ರೀತಿಸಿದ ಬಿಯಾಟ್ರಿಸ್ (Beatrice) ನಡುವಿನ ನನಸಾಗದ ಪ್ರೇಮ ಸಂಬಂಧ, ಡಾಂಟೆಯ ಕಾವ್ಯ ಕನ್ನಿಕೆಯಾಗುವ ಬಿಯಾಟ್ರಿಸ್ ಇಲ್ಲಿ ನೆರಳಾಗಿಯೋ, ಕಾರಣವಾಗಿಯೋ ಕಾಣಿಸಿಕೊಳ್ಳುತ್ತದೆ. ಪೋಲ್ ಬೀಯಾತ್ರೀಜ಼್ಳ ಕಡೆ ಆಕರ್ಷಿತವಾಗಲು ಡಾಂಟೆಯ ಬಿಯಾಟ್ರಿಸ್ ಕಾರಣವೇ? ನೀನು ಡಾಂಟೆಯಾಗಿದ್ದರೆ ನಿನ್ನ ಸ್ಪೂರ್ತಿಸೆಲೆಯಾಗಿರುವ ನಾನೂ ಇತಿಹಾಸದ ಪುಟಗಳಲ್ಲಿ ದಾಖಲಾಗಿಬಿಡುತ್ತಿದ್ದೆ. ಆದರೆ ನೀನು ಡಾಂಟೆಯಂತೆ ಕವಿಯಲ್ಲ, ಮತ್ಯಾಕೆ ನನ್ನ ಕುರಿತ ಈ ಕವಿತೆಗಳನ್ನು ಬರೆಯಲು ವ್ಯರ್ಥ ಹೆಣಗಿದೆ ಎಂದು ಖೇದದಿಂದ ಹೇಳುತ್ತಾಳೆ. ನಮ್ಮ ಮೂಲ ಗುರಿ ಇತಿಹಾಸದ ಪುಟಗಳಲ್ಲಿ ಅಮರತ್ವ ಪಡೆಯುವ ಹವಣಿಕೆಯೇ?
ನಾವು ಹೇಳುವ, ಏನನ್ನು ಹೇಳಬಯಸುತ್ತೇವೆ ಎನ್ನುವುದರ ನಡುವಿನ ಅಂತರವೇ ಈ ಕಾದಂಬರಿಯ ಜೀವಾಳ. ಪೋಲ್ನ ಸಂದೇಶಗಳನ್ನು ಒಗಟಿನಂತೆ ಸ್ವೀಕರಿಸುವ ಬೀಯಾತ್ರೀಜ಼್, ಉದಾಹರಣೆಗೆ “I am here for you,” ಎಂದು ತಿಳಿಸಿದಾಗ, ‘ನಾನು ನಿನಗಾಗಿ ಬಂದಿದ್ದೇನೆ’ ಎಂದರೆ ಏನು ಅರ್ಥ? ಬ್ರೆಡ್ಡಿಗಾಗಿ ಬೇಕರಿಗೆ ಬರುವ ಗ್ರಾಹಕಕನಂತೆಯೇ ಅಥವಾ ಚರ್ಚಿನಲ್ಲಿ ದೇವರನ್ನು ‘ನೀನಲ್ಲದೆನಗಿಲ್ಲ’ ಎಂದು ಅರಸಿ ಬರುವ ಭಕ್ತನಂತೆಯೇ ಎನ್ನುವ ಸಂದೇಹ ಅವಳಿಗೆ. ಇಂತಹ ಒಗಟುಗಳನ್ನು ಚರ್ಚಿಸುತ್ತಲೇ ನಮ್ಮನ್ನೂ ಆ ಯೋಚನೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾಳೆ.
ಕೂಟ್ಸಿಯ ಕಥನಗಳ ಪರಂಪರೆಯನ್ನು ‘The Pole’ ಸಮರ್ಥವಾಗಿ ಮುಂದುವರೆಸುತ್ತದೆ.
ದಕ್ಷಿಣ ಆಫ಼್ರಿಕಾದ ಪ್ರಮುಖ ಭಾಷೆಗಳಲ್ಲಿ ಒಂದಾದ ಆಫ಼್ರಿಕಾನ್ಸ್ (Afrikaans) ಭಾಷೆಯಲ್ಲಿ Coetzee ಹೆಸರನ್ನು ಸಾಮಾನ್ಯವಾಗಿ ಕೂ-ಟ್ಸಿ-ಅ / ಕೂಟ್ಸಿಯ ಎಂದು ಉಚ್ಚರಿಸುತ್ತಾರಾದರೂ, ಸ್ವತಃ Coetzee ತಮ್ಮ ಹೆಸರನ್ನು ‘ಕೂಟ್ಸಿ’ ಎಂದುಚ್ಚರಿಸುವುದರಿಂದ ಈ ಸಂದರ್ಭದಲ್ಲಿ ಅದೇ ಬಳಕೆ ಸರಿಯಾದುದು.
ಇದು UK, ಆಸ್ಟ್ರೇಲಿಯ ಮತ್ತು ಕೆನಡಾಗಳಲ್ಲಿ The Pole and Other Stories ಎಂದು ಪ್ರಕಟವಾಗಿದ್ದು ಅದರಲ್ಲಿ ಈ ಕಿರು ಕಾದಂಬರಿಯ (novella) ಜೊತೆಗೆ ಐದು ಸಣ್ಣಕತೆಗಳೂ ಇವೆ. ಅಮೆರಿಕದಲ್ಲಿ ಈ ಕಾದಂಬರಿಯಷ್ಟೇ The Pole ಎಂದು ಪ್ರಕಟವಾಗಿದೆ.
ಪ್ರಕಾಶ್ ನಾಯಕ್
ಲೇಖಕ, ಸಾಹಿತ್ಯಾಸಕ್ತ ಪ್ರಕಾಶ್ ನಾಯಕ್ ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯವರು. ವೃತ್ತಿಯಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರ್. ಅಮೆರಿಕಾದಲ್ಲಿ ವಾಸ. ‘ಅಮೂರ್ತ ಚಿತ್ತ’, ‘ಪೆಸಿಫಿಕ್ ತೀರದ ಪಾತಿ’ ಕಥಾಸಂಕಲನಗಳು, 'ಅಂತು’ ಕಾದಂಬರಿ ಪ್ರಕಟಿತ ಕೃತಿಗಳು. ಕಾಮೂನ (Albert Camus) The Stranger ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.