ರಘುನಾಥ ಚ. ಹ. ಅವರ ಕಳೆದ ವರ್ಷ ಹೊರಬಂದ ಇಲ್ಲಿಂದ ಮುಂದೆಲ್ಲ ಕಥೆ ಸಂಕಲನಕ್ಕೆ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ ಸಂದಿದೆ. ಹಿರಿಯ ಪತ್ರಕರ್ತ, ಕತೆಗಾರ ರಘುನಾಥ ಅವರಿಗೆ ಹಾರ್ದಿಕ ಅಭಿನಂದನೆಗಳು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೀರ್ಪುಗಾರರಾಗಿದ್ದ ನಿತ್ಯಾನಂದ ಬಿ ಶೆಟ್ಟಿಯವರು ಆಡಿದ ಹಾಗೂ ಸಮಯದ ಅಭಾವದಿಂದ ಆಡಲಾಗದೇ ಉಳಿದ ಮಾತುಗಳ ವಿಸ್ತೃತ ರೂಪ ಇಲ್ಲಿದೆ. ರಘುನಾಥರ ಗೋರಿ ಎಂಬ ಒಂದು ಕತೆಯ ನೆಪದಲ್ಲಿ ರಾಜಕೀಯ ತತ್ವಶಾಸ್ತ್ರದ ಕುರಿತಾದ ಪ್ರಾಥಮಿಕ ಕಿರುಪಠ್ಯದ ಮಾದರಿಯ ಆಸಕ್ತಿಕರ ಬರಹವಾಗಿ ಇದು ಮೂಡಿಬಂದಿದೆ. ನೆನೆಯಬೇಕಾದುದೆಂದರೆ, ರಘುನಾಥ ಅವರ ಸಂಕಲನದ ಬಿಡುಗಡೆಗೂ ಮುನ್ನವೇ ಅದರಲ್ಲಿರುವ ಬಣ್ಣ ಎಂಬ ಕತೆಯನ್ನು ಕಳೆದ ವರ್ಷ ಕೊನರುವಿನಲ್ಲಿ ಪ್ರಕಟಿಸಿದ್ದೆವು. ಆಸಕ್ತರು ಈ ಕೊಂಡಿಯನ್ನು ಒತ್ತುವ ಮೂಲಕ ಅದನ್ನೂ ಓದಬಹುದು.
ಪತ್ರಕರ್ತ ರಘುನಾಥ ಚ. ಹ, ಕನ್ನಡದ ಸಂದರ್ಭದಲ್ಲಿ ಲೇಖಕ, ಕವಿ, ಪ್ರಬಂಧಕಾರ ಮತ್ತು ಕಥೆಗಾರರಾಗಿಯೂ ಹೆಸರು ಗಳಿಸಿದ್ದಾರೆ. ಅವರ ಈ ಸಿದ್ಧಿ-ಪ್ರಸಿದ್ಧಿಗಳನ್ನು ಪಕ್ಕಕ್ಕಿಟ್ಟು ‘ರಘು ಬರೆದ ಕಥೆಗಳು ಹೇಗಿವೆ? ಕಲಾಕೃತಿಯಾಗಿ ಅವುಗಳ ಮಹತ್ವವೇನು?’ ಎಂದು ತೂಗಿ ನೋಡಿದ ಬಳಿಕ, ಇಲ್ಲಿಂದ ಮುಂದೆಲ್ಲ ಕಥೆ ಎಂಬ ಅವರ ಕಥಾಸಂಕಲನವನ್ನು ಈ ಬಾರಿಯ ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೊತ್ತಮೊದಲನೆಯದಾಗಿ ಅವರಿಗೆ ಅಭಿನಂದನೆಗಳು. ಈ ಪ್ರತಿಷ್ಠಿತ ಸ್ಪರ್ಧೆಗೆ ನನ್ನನ್ನು ತೀರ್ಪುಗಾರನನ್ನಾಗಿಸಿ ಕಳೆದ ವರ್ಷದ (2025) ಕೆಲವು ಉತ್ತಮ ಕಥಾಸಂಕಲನಗಳನ್ನು ಒಟ್ಟಾಗಿ ಓದುವ ಅವಕಾಶ ಒದಗಿಸಿದ; ಡಾ. ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಹೆಚ್ ಆರ್ ಸುಜಾತ, ಗೆಳೆಯರಾದ ಡಾ. ಬಿ ಆರ್ ರವಿಕಾಂತೇಗೌಡ, ಕವಿ ರಾಜೇಂದ್ರ ಪ್ರಸಾದ್ ಮತ್ತು ಟ್ರಸ್ಟ್ನ ಸಮಸ್ತ ಪದಾಧಿಕಾರಿಗಳಿಗೂ ನನ್ನ ಕೃತಜ್ಞತೆಗಳು.
ರಘು ಅವರ ಈ ಕಥಾಸಂಕಲನ ಕನ್ನಡದ ಕಥನಶಕ್ತಿಯ ಹರಿವಿಗೆ ಹೊಸಬಗೆಯ ನೀರನ್ನು ಸೇರಿಸಿದೆ. ಉಪ್ಪು-ಖಾರ ಹದವಾಗಿರುವ, ರುಚಿಕರವಾಗಿರುವ, ಗರಿಗರಿಯಾಗಿರುವ ಆದರೆ ಆಳದಲ್ಲಿ ಸತ್ತ್ವರಹಿತವಾಗಿರುವ ಕನ್ನಡದ ಇತ್ತೀಚಿಗಿನ ಸಾಹಿತ್ಯದ ಬೆಳೆಯನ್ನು ಗಮನಿಸಿ ದಣಿದಿರುವ ನನಗೆ, ರಘು ಅವರ ಈ ಕಥಾಸಂಕಲನ ನಿಜವಾಗಿಯೂ ಸಮಾಧಾನ ಮತ್ತು ಸಂತೋಷವನ್ನು ನೀಡಿದೆ. ರಘು ಅವರ ಮೊದಲ ಕಥಾಸಂಕಲನ ಹೊರಗೂ ಮಳೆ ಒಳಗೂ ಮಳೆ ಪ್ರಕಟವಾಗಿದ್ದು 2006ರಲ್ಲಿ. ಅಲ್ಲಿಂದ ಹತ್ತೊಂಬತ್ತು ವರ್ಷಗಳ ಬಳಿಕ ಈ ಕಥಾಸಂಕಲನ ಪ್ರಕಟವಾಗಿದೆ. ಈ ಸುದೀರ್ಘ ಅವಧಿಯೂ ನನಗೆ ಬಹಳ ಮುಖ್ಯವಾದ ಅಂಶವಾಗಿ ಕಂಡು ಬಂದಿದೆ. ಸರಾಸರಿ ತೆಗೆದು ನೋಡಿದರೆ ಸುಮಾರು ಎರಡೂವರೆ ವರ್ಷಕ್ಕೊಂದರಂತೆ ರಘು ಕಥೆ ಬರೆದಿದ್ದಾರೆ. ಈ ಸಾವಧಾನ, ಸಂಯಮ ಕನ್ನಡದ ಬಹುತೇಕ ಲೇಖಕ/ಕಿಯರಲ್ಲಿ ಇದ್ದಂತಿಲ್ಲ. ಕಲೆ ಎಂದರೇನು, ಕಲೆಯಾಗಿಸುವುದು ಹೇಗೆ, ಪ್ರತಿಭೆಯ ಜೀವದ್ರವ್ಯ ಎಲ್ಲಿರುತ್ತದೆ, ಭಾಷೆಯ ಸದ್ಬಳಕೆ ಯಾವುದು, ಭಾಷೆಯ ಶಕ್ತಿಯ ಬಗ್ಗೆ ಲೇಖಕನಿಗೆ ಅಂಜಿಕೆ ಇರಬೇಕಾದುದು ಏಕೆ ಎಂಬಿತ್ಯಾದಿ ಮೂಲಭೂತ ಪ್ರಶ್ನೆಗಳನ್ನು ರಘು ಗಂಭೀರವಾಗಿ ಇದಿರುಗೊಂಡಿದ್ದಾರೆ ಎಂಬುದಕ್ಕೆ ಇಲ್ಲಿಯ ಕೆಲವು ಕಥೆಗಳು ಸಾಕ್ಷಿ ಹೇಳುತ್ತವೆ. ವೇಗದ ಮತ್ತು ನಿರಾಯಾಸದ ಬರವಣಿಗೆಯನ್ನು ಸುತಾರಾಂ ಒಲ್ಲದ ರಘು ತಾಳ್ಮೆಗಿರುವ ಅಪಾರವಾದ ಶಕ್ತಿಯನ್ನು ಇಲ್ಲಿಯ ಕಥೆಗಳಲ್ಲಿ ಹಿಡಿದಿಟ್ಟಿದ್ದಾರೆ.
ಈ ಕಥಾಸಂಕಲನದಲ್ಲಿ ಒಟ್ಟು ಏಳು ಕಥೆಗಳಿವೆ. ಇವುಗಳಲ್ಲಿ ನಾನು ಮೆಚ್ಚಿಕೊಂಡ ಕಥೆಗಳೆಂದರೆ ಬಣ್ಣ, ಬಿಡುಗಡೆ, ಕನ್ನಡಿ ಮತ್ತು ಗೋರಿ. ಸಮಯದ ಮಿತಿ ಇರುವುದರಿಂದ ಗೋರಿ ಕಥೆಯನ್ನಷ್ಟೇ ಆಯ್ಕೆ ಮಾಡಿಕೊಂಡು ನನ್ನ ಕೆಲವು ಪ್ರಮೇಯಗಳನ್ನು ಮುಂದಿಡುತ್ತೇನೆ.
ಮೊದಲಿಗೆ ಗೋರಿ ಕಥೆಯ ಸ್ಥೂಲನೋಟ:
ಇಂದ್ರಮಹಲ್ ಎಂಬುದೊಂದು ಮಾಲ್. ಅದರ ಸೊಬಗು-ಸ್ವಚ್ಚತೆ ಮತ್ತು ಅದರ ಒಟ್ಟು ಕಾರ್ಯನಿರ್ವಹಣೆಗೆ ರಾಷ್ಟ್ರೀಯ ಪ್ರಶಸ್ತಿಯೂ ಅದಕ್ಕೆ ಬಂದಿದೆ. ಈಗ ಅದರ ಹತ್ತನೇ ವಾರ್ಷಿಕೋತ್ಸವ ನಡೆಯುತ್ತಿದೆ. ಈ ಉತ್ಸವದ ಭಾಗವಾಗಿ ಮಾಲ್ನ ಆಡಳಿತ ಮಂಡಳಿ ಹೊಸ ಕಾರೊಂದನ್ನು ಬಹುಮಾನವಾಗಿಸಿ ಅದನ್ನು ಗೆಲ್ಲುವ ಸ್ಪರ್ಧೆಯೊಂದನ್ನು ಆಯೋಜಿಸಿದೆ. ಗರುಡ ಎಂಬ ಕಾರ್ ತಯಾರಿಕ ಕಂಪೆನಿಯವರು ಪುಷ್ಪಕ ಎಂಬ ಹೆಸರಿನ ಕಾರ್ ಬಿಡುಗಡೆ ಮಾಡುತ್ತಿದ್ದು, ಆ ಮೊದಲ ಕಾರನ್ನು ಮಾಲ್ ಗೆ ತರಲಾಗಿದೆ. ಈ ಕಾರಿನ ಮೇಲೆ ಯಾರು ಅತ್ಯಂತ ದೀರ್ಘಾವಧಿಯವರೆಗೆ ತಮ್ಮ ಕೈಯನ್ನು ಇರಿಸುತ್ತಾರೋ ಅವರು ಅದನ್ನು ಗೆಲ್ಲುತ್ತಾರೆ. ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಲು ಐವತ್ತು ಲಕ್ಷ ಜನರು ಹೆಸರು ನೋಂದಾಯಿಸಿಕೊಂಡಿದ್ದರು. ಅವರಲ್ಲಿ ಹತ್ತು ಜನರನ್ನು ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಲಾಗಿತ್ತು. ಮೂರು ದಿನಗಳ ಹಿಂದೆ ಈ ಸ್ಪರ್ಧೆ ಆರಂಭಗೊಂಡಿದೆ. ಕಳೆದ ಐವತ್ತು ಗಂಟೆಗಳಲ್ಲಿ ಒಬ್ಬೊಬ್ಬರೇ ಸೋತು ಈಗ ಚಂದ್ರಮೋಹನ್ ಮತ್ತು ರಾಜಶೇಖರ್ ಎಂಬ ಇಬ್ಬರು ಸ್ಪರ್ಧಿಗಳು ಮಾತ್ರ ಕಣದಲ್ಲಿದ್ದಾರೆ. ಇಬ್ಬರ ಕೈಯೂ ಸೋತು ಹೋಗಿದೆ. ಆ ಸನ್ನಿವೇಶವನ್ನು ಕಥೆಗಾರ ಹೀಗೆ ವಿವರಿಸುತ್ತಾರೆ:
ಈ ಕ್ಷಣ ಕಾಲವೆನ್ನುವುದು ತನ್ನ ಕೈಗಳಲ್ಲಿ ಹೆಪ್ಪುಗಟ್ಟಿದೆ ಎಂದು ಚಂದ್ರಮೋಹನನಿಗನ್ನಿಸಿ, ಕಾಲದ ಜೊತೆಗೆ ರಕ್ತವೂ ಹೆಪ್ಪುಗಟ್ಟಿದೆಯೆಂದು ಮರುಕ್ಷಣ ಭಾಸವಾಗಿ, ಕೈಗಳಲ್ಲಿ ಅಸಾಧ್ಯ ನೋವು ಕಾಣಿಸಿಕೊಂಡಿತು. (ಪುಟ: 43)
ಈರ್ವರು ಸ್ಪರ್ಧಿಗಳ ಶರೀರದ ಪ್ರತಿ ಕದಲಿಕೆಯನ್ನೂ ದಾಖಲಿಸುವ ಕ್ಯಾಮೆರಾಗಳು ಇವರನ್ನೇ ದುರುಗುಟ್ಟಿ ನೋಡುತ್ತಿವೆ. ಚಂದ್ರಮೋಹನ, ತನ್ನ ಪ್ರಿಯತಮೆ ಜಯಂತಿಯ ಅಭೀಪ್ಸೆಯನ್ನು ಈಡೇರಿಸುವುದಕ್ಕಾಗಿ ಈ ಸ್ಪರ್ಧೆಯಲ್ಲಿದ್ದಾನೆ. ಈ ಕಾರಿನಲ್ಲೇ ಹನಿಮೂನ್ಗೆ ಹೋಗುವ ಆಸೆ ಜಯಂತಿಗೆ. ರಾಜಶೇಖರ ಒಂದು ಸಾಮಾನ್ಯ ಕುಟುಂಬದ ಹುಡುಗ. ಯಾವುದೋ ಕಾರ್ಪೊರೇಟ್ ಕಂಪೆನಿಯಲ್ಲಿ ರಾತ್ರಿ ಕೆಲಸ ಮಾಡುವವ. ಹಳ್ಳಿಯಲ್ಲಿದ್ದ ಅವನ ಜಮೀನಿನಲ್ಲಿ ಅವನ ಅಪ್ಪನನ್ನು ಮಣ್ಣು ಮಾಡಲಾಗಿತ್ತು. ಆ ಸಮಾಧಿಯನ್ನೂ ಒಳಗೊಂಡಂತೆ ಸುತ್ತುಮುತ್ತಲಿನ ಜಮೀನುಗಳನ್ನು ವಶಪಡಿಸಿಕೊಂಡ ಸರಕಾರ ಯಾವುದೋ ಕಾರು ತಯಾರಿಕಾ ಕಂಪೆನಿಗೆ ನೂರಾರು ಎಕರೆ ಭೂಮಿಯನ್ನು ಮಾರಿತ್ತು. ಅವನು ಕೂಡ ಈ ಜಾಹೀರಾತಿಗೆ, ಈ ಸ್ಪರ್ಧೆಗೆ ಮರುಳಾಗಿ ಬಂದಿದ್ದ. ಬಂದ ಬಳಿಕ ಆತನಿಗೆ ದುಃಖವೂ, ಬೇಸರವೂ ಆಗಿದೆ. ಇನ್ನೊಂದು ಯಾವುದೋ ಊರಲ್ಲಿ ತನ್ನ ಹಾಗಿನ ರೈತರ ಜಮೀನನ್ನು ನುಂಗಿ ಬಂದ ಕಾರು ಕಂಪೆನಿಯ ವ್ಯೂಹಕ್ಕೆ ತಾನು ಸಿಲುಕಿದ್ದೇನೆ ಎಂದು ಅವನಿಗೆ ಈಗ ಬಲವಾಗಿ ಅನ್ನಿಸಿದೆ. ಒಂದು ವೇಳೆ ಗೆದ್ದರೆ; ಗೆದ್ದ ಕಾರನ್ನು ಸುಡುವ, ಮಾರುವ, ಗೆದ್ದು ತಿರಸ್ಕರಿಸುವ ಹೀಗೆ ನಾನಾ ನಮೂನೆಯ ಆಲೋಚನೆಗಳು ಆತನಿಗೆ ಬಂದಿವೆ. ಸ್ಪರ್ಧೆ ಶುರುವಾಗಿ ಇಂದು ನಾಲ್ಕು ದಿನಗಳಾಗಿವೆ. ಭಾನುವಾರ ಬೇರೆ. ಜನರೆಲ್ಲ ಈ ಸಂಭ್ರಮ ನೋಡಲು ಮಾಲ್ ಗೆ ಬಂದಿದ್ದಾರೆ. ರಾಜಶೇಖರ, ಚಂದ್ರಮೋಹನ ಇಬ್ಬರೂ ಇನ್ನು ಸಾಧ್ಯವಿಲ್ಲ ಎಂಬಷ್ಟು ಸುಸ್ತಾಗಿದ್ದಾರೆ. ಅಷ್ಟು ಹೊತ್ತಿಗೆ ಮೇಲಿನ ಮಹಡಿಯಿಂದ ಕೆಳಗಿನ ಆಟ ನೋಡುತ್ತಿದ್ದ ಮಗು ತನ್ನ ಅಮ್ಮನ ಕಂಕುಳಿನಿಂದ ಜಾರಿ ಬೀಳುತ್ತದೆ. ಅಲ್ಲಿಯವರೆಗೆ ಕಾರಿಗೆ ಅಂಟಿಕೊಂಡಿದ್ದ ಆ ನಾಲ್ಕು ಕೈಗಳು ಕೆಳಗೆ ಬೀಳುತ್ತಿರುವ ಮಗುವನ್ನು ಎತ್ತಿಕೊಳ್ಳಲು ಒಮ್ಮೆಲೇ ಮೇಲೆ ಚಾಚುತ್ತವೆ - ಎಂಬಲ್ಲಿಗೆ ಕಥೆ ಮುಗಿಯುತ್ತದೆ.
ರಘು ಈ ಕಥೆಯನ್ನು ಅಂತ್ಯಗೊಳಿಸಿದ ಬಗ್ಗೆ ನನಗೆ ತಕರಾರು ಇದೆ. ಕೇಡಿನ ಜೊತೆಗೆ ಸೆಣಸಾಟ ನಡೆಸುವುದು ಹೇಗೆ ಎಂಬುದನ್ನು ಅರಿಯದೆ; ಜಗತ್ತಿನ ಎಲ್ಲ ಬಗೆಯ ಕೆಡುಕುಗಳ ಸಮ್ಮುಖದಲ್ಲಿ ಮಾನವೀಯತೆಯನ್ನು ಎತ್ತಿಹಿಡಿಯುವ ಹಳೆಯ ಮಾದರಿಯ ಪುನರಾವರ್ತನೆ ಇದು. ಆದರೆ ಆ ತಕರಾರುಗಳನ್ನು ಎತ್ತುವುದಕ್ಕಿಂತ ಮೊದಲು ಈ ಕಥೆಯ ಶಕ್ತಿಯ ಬಗ್ಗೆ ಮಾತಾಡಬೇಕು. ಕಥೆಯ ಶೀರ್ಷಿಕೆ, ಇಲ್ಲಿ ಬರುವ ಪಾತ್ರಗಳ ಹೆಸರುಗಳು, ಕಾರು ತಯಾರಿಕಾ ಕಂಪೆನಿಯ ಹೆಸರು, ಕಾರಿನ ಹೆಸರು ಇವೆಲ್ಲವೂ ರೂಪಕ ಶಕ್ತಿಯನ್ನು ಮತ್ತು ಧ್ವನಿಶಕ್ತಿಯನ್ನು ಹೊಂದಿವೆ. ಸನಾತನ ಭಾರತೀಯ ಸಂಸ್ಕೃತಿಯ ಜೊತೆಗೆ ಕನೆಕ್ಟ್ ಆಗುವ ಈ ಹೆಸರುಗಳು ಸಂಬಂಧ ಹೊಂದಿರುವುದು ಪಶ್ಚಿಮದ ಬಂಡವಾಳಶಾಹಿಯ ಜೊತೆಗೆ ಮತ್ತು ಆಧುನಿಕ ಕಾಲದ ಮಾರುಕಟ್ಟೆಯ ಸೆಳೆತದ ಜೊತೆಗೆ. ಈ ರಾಜಕಾರಣದ ಅರಿವು ಕಥೆಗಾರನಿಗೆ ಇದೆ.
ಕನ್ನಡದ ಸಂದರ್ಭದಲ್ಲಿ, ಧೀಮಂತರಾದ ಕೆಲವೇ ಕೆಲವು ಸಾಹಿತಿಗಳನ್ನು ಹೊರತುಪಡಿಸಿದರೆ ಉಳಿದಂತೆ ಅನೇಕ ಸಾಹಿತಿಗಳಿಗೆ ಪಕ್ಷ ರಾಜಕೀಯ (ಪಾರ್ಟಿ ಪೊಲಿಟಿಕ್ಸ್)ದ ಬಗ್ಗೆ ಅರಿವು ಇದೆ; ಆದರೆ ಅವರಿಗೆ ಪೊಲಿಟಿಕಲ್ ಫಿಲಾಸಫಿ ಗೊತ್ತಿದ್ದಂತಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಪರಿಣತರಾಗಿರುವ ಇವರಿಗೆ ಅರ್ಥಿಕತೆಯ, ಅರ್ಥನೀತಿಯ ತಿಳಿವಳಿಕೆ ಅಷ್ಟಾಗಿ ಇದ್ದಂತಿಲ್ಲ. ಸಾಮಾಜಿಕ ವಸ್ತು-ವಿಷಯ, ಘಟನಾವಳಿಗಳು ಕೂಡ ಇವರಿಗೆ ತಿಳಿದಿವೆ; ಆದರೆ ಸಮಾಜಶಾಸ್ತ್ರೀಯ ತತ್ತ್ವಚಿಂತನೆಗಳನ್ನು ಇವರು ಅಷ್ಟಾಗಿ ಓದಿಕೊಂಡಂತಿಲ್ಲ. ಇದನ್ನೊಂದು ದೋಷ ಎಂದು ನಾನು ಎತ್ತಿ ಆಡುತ್ತಿಲ್ಲ. ಬಹುಪಾಲು ಸಾಹಿತಿಗಳಿಗೆ ಈ ಬಗೆಯ ಮಿತಿ ಇದೆ ಎಂದು ಹೇಳುತ್ತಿದ್ದೇನೆ. ಇದು ಅವರ ಬರವಣಿಗೆಯಲ್ಲೂ ಕಂಡುಬರುತ್ತದೆ. ಕನ್ನಡದ ನವ್ಯಸಾಹಿತಿಗಳ ಬರವಣಿಗೆಯನ್ನು ಗಮನಿಸಿ.
ಎಂ. ಗೋಪಾಲಕೃಷ್ಣ ಅಡಿಗರು ಬರೆಯುತ್ತಾರೆ-
ಇಲ್ಲ, ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ, ಯಾವ ಬಂದಳಿಕೆಗೂ ಶಂಕೆ ಬೇಡ! ಎರಡು ದೋಣಿಗೆ ಕಾಲನಿಟ್ಟು ಸಾಗುವ ಶೂರ ಇಲ್ಲದ ತೃತೀಯ ಕ್ರಮಕ್ಕೆ ಠಾವೆಲ್ಲೆಂದು ಕುದಿವ ಕುವರ…
ಅಡಿಗರ ಈ ಸಾಲುಗಳು ರಾಜಕೀಯ ನಿರಕ್ಷರಸ್ಥ ಸ್ಥಿತಿಯಲ್ಲಿ (political illiteracy) ಹುಟ್ಟಿಕೊಂಡಿವೆ. ಸ್ವತಂತ್ರ ಭಾರತವನ್ನು “ಚಿಂತನಶೀಲ ಆಧುನಿಕತೆ”ಯ ಪಥದಲ್ಲಿ ಮುನ್ನಡೆಸಲು ಬಯಸಿದ, ಅದಕ್ಕಾಗಿ ಪರಿಶ್ರಮಿಸಿದ ಓರ್ವ ಧೀಮಂತ ನಾಯಕನ ಬಗ್ಗೆ ಅಡಿಗರು ಆಡುವ ದುಬಾರಿ ಮಾತುಗಳಿವು. ಇವು ರಚನಾತ್ಮಕ ಟೀಕೆಗಳೂ ಅಲ್ಲ; ಕೇವಲ ವ್ಯಂಗ್ಯದ ಮೊನಚು ಮಾತಿನ ಇರಿತ ಅಷ್ಟೇ. ಸ್ವಾತಂತ್ರ್ಯ ಬಂದ ಆರು-ಮೂರು ತಿಂಗಳುಗಳಲ್ಲಿ ಭಾರತೀಯರ ಬದುಕು ಪ್ರಕಾಶಿಸಿಲ್ಲ ಎಂದು ಹಳಹಳಿಸುವುದು, ಅದಕ್ಕಾಗಿ ರಾಜಕೀಯ ನಾಯಕತ್ವವನ್ನು ಮೂದಲಿಸುವುದು, ಛೇಡಿಸುವುದು ರಾಜಕೀಯ ಅನಕ್ಷರಸ್ಥರಿಗೆ ಮಾತ್ರ ಸಾಧ್ಯ. ಅಡಿಗರು ಎಂದಲ್ಲ; ಶ್ರೀಕೃಷ್ಣ ಆಲನಹಳ್ಳಿಯವರೂ ಸೇರಿದಂತೆ, ಆರಂಭದ ತೇಜಸ್ವಿಯವರ ಕಥೆಗಳನ್ನೂ ಒಳಗೊಂಡಂತೆ ಕೆಲವು ಪ್ರಮುಖರ ಸಾಹಿತ್ಯವನ್ನು ಈ ಹಿನ್ನೆಲೆಯಲ್ಲಿ ಒಮ್ಮೆ ಗಮನಿಸಬೇಕು. ಊರಿಗೆ ಒಂದು ರಸ್ತೆ ಬಂದರೆ ಊರೊಳಗಿನ ಸಾಮುದಾಯಿಕ ಬದುಕಿನಲ್ಲಿ; ಪೋಸ್ಟ್ ಆಫೀಸ್ ಬಂದರೆ ಕೌಟುಂಬಿಕ ಬದುಕಿನಲ್ಲಿ ಏನೋ ಒಂದು ಅವಘಡ ಆಗುವಂತಹ ಕಥನಗಳನ್ನು ಈ ನಮ್ಮ ಸಾಹಿತಿಗಳು ಕಟ್ಟಿದ್ದಾರೆ. ಟಾರು ಹಾಕಿದ ರಸ್ತೆ, ಪೋಸ್ಟ್ ಆಫೀಸ್ ಇತ್ಯಾದಿ ಆಧುನಿಕ ಸಂಗತಿಗಳು, ಹಳ್ಳಿಯಲ್ಲಿ ಇದೆ ಎಂದು ನಂಬಲಾದ ತಥಾಕಥಿತ “ಸಾವಯವ ಸಂಬಂಧ”ದ ಬದುಕನ್ನು ಛಿದ್ರಗೊಳಿಸುವುದರ ಬಗ್ಗೆ; ಅಂದರೆ ಆಧುನಿಕತೆಯಿಂದುಂಟಾಗುವ ಕೆಡುಕಿನ ಬಗ್ಗೆ ಈ ನಮ್ಮ ಲೇಖಕರು ಬರೆದಿದ್ದಾರೆ. ಆಧುನಿಕತೆಯ ಜೊತೆಗಿನ ಮುಖಾಮುಖಿ, ಆಧುನಿಕತೆಯ ಸಮ್ಮುಖದಲ್ಲಿ ಉಂಟಾಗುವ ಸಂಘರ್ಷ, ಇವುಗಳಿಂದ ಉದ್ಭವಿಸುವ ಸಂಕೀರ್ಣತೆಗಳು ಇವರ ಸಾಹಿತ್ಯದಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಈಗಾಗಲೇ ಇರುವ ಸಮಸ್ಯೆಗಳನ್ನು ಈ “ಪರಕೀಯ ಆಧುನಿಕತೆ”ಯ ಸಂರಚನೆಗಳು (ರಸ್ತೆ, ಪೋಸ್ಟ್ ಆಫೀಸು, ಆಸ್ಪತ್ರೆ, ನ್ಯಾಯಾಲಯ ಇತ್ಯಾದಿ) ಇನ್ನಷ್ಟು ತೀವ್ರಗೊಳಿಸಿವೆ ಎಂದು ಈ ಬಗೆಯ ಸಾಹಿತಿಗಳು ನಿರೂಪಣೆಯೊಂದನ್ನು ಕಟ್ಟಿದ್ದಾರೆ. ನನ್ನ ಪ್ರಶ್ನೆ ಏನೆಂದರೆ ಆಧುನಿಕತೆಯನ್ನು ಹೀಗೆ ಸಾರಾಸಗಟಾಗಿ ರಿಜೆಕ್ಟ್ ಮಾಡಬಹುದೇ? ಆಧುನಿಕತೆ ಎಂದರೆ ಒಂದೇ ಬಗೆಯ ಆಧುನಿಕತೆಯೇ?
ಕಮ್ಯೂನಿಸಂ ಕೂಡ ಆಧುನಿಕತೆಯಿಂದಲೇ ಬಂದಿದೆ. ಹಾಗೆಯೇ ಬಂಡವಾಳವಾದವೂ ಕೂಡ ಆಧುನಿಕತೆಯಿಂದಲೇ ಬಂದಿದೆ. ಗಾಂಧಿ-ಅಂಬೇಡ್ಕರ್ ಕೂಡ ಆಧುನಿಕತೆಯಿಂದಲೇ ಬಂದವರು. ಹಿಟ್ಲರ್ ಕೂಡ ಆಧುನಿಕತೆಯಿಂದಲೇ ಬಂದವನು. ನಾವು ಇಂದು ಮೇರು ವಿದ್ಯಮಾನಗಳು ಎಂದು ಪರಿಭಾವಿಸಿರುವ ಅನೇಕ ವೈಚಾರಿಕ ಮೌಲ್ಯಗಳು ಕೂಡ ಆಧುನಿಕತೆಯಿಂದಲೇ ಬಂದಿವೆ. ಪ್ರಜಾತಂತ್ರವೂ ಕೂಡ ಆಧುನಿಕತೆಯ ಕೊಡುಗೆಯೇ. “ವಿವಿಧತೆಯಲ್ಲಿ ಏಕತೆ” ಎಂಬ ನಮ್ಮ ಬಹಳ ಸಡಿಲವಾದ, ಆದರೆ ಉದಾರವಾದ ಸರ್ವಧರ್ಮ ಸಮಭಾವದ ಸೆಕ್ಯುಲರ್ ಭಾರತವನ್ನು ನಾವು ಪರಿಕಲ್ಪಿಸಿರುವುದು ಕೂಡ ಆಧುನಿಕತೆಯಿಂದಲೇ. ನಮ್ಮ ದೇಶದ ಆಧುನಿಕತೆಯನ್ನಂತೂ ಕೊಲೋನಿಯಲ್ ಮಾಡರ್ನಿಟಿ ಎಂದೇ ಕರೆಯಲಾಗುತ್ತಿದೆ. ಹಾಗಾಗಿ ನಾವು ಯಾವ ಬಗೆಯ ಅಧುನಿಕತೆ ಎಂಬುದನ್ನು ಕೇಳದೆ, ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಮುಗ್ಧ ಕುತೂಹಲವನ್ನೋ ಅಪಾರ ತಿರಸ್ಕಾರವನ್ನೋ ತೋರಿಸದೆ, ಯಾರ ಕೈಯಲ್ಲಿ ಈ ವಿಜ್ಞಾನ-ತಂತ್ರಜ್ಞಾನಗಳು ಇವೆ ಎಂಬ ಉಪಪ್ರಶ್ನೆಯನ್ನು ಪ್ರಧಾನ ಪ್ರಶ್ನೆಯಾಗಿಸಬೇಕಾಗುತ್ತದೆ. ಇದನ್ನು ಮಾಡದೆ ಹೋದರೆ ನಾವು ಕಂಡುಕೊಳ್ಳುವ ಉತ್ತರಗಳು ರಾಜಕೀಯವಾಗಿ ಕುಬ್ಜವಾಗುತ್ತವೆ.
ಈ ಹಿನ್ನೆಲೆಯನ್ನು ರಘು ಅವರ ಗೋರಿ ಕಥೆಯಲ್ಲಿರುವ ರಾಜಕಾರಣವನ್ನು ಪರಿಶೀಲಿಸುವ ಉದ್ದೇಶದಿಂದ ಪ್ರಸ್ತಾವಿಸಿದ್ದೇನೆ. ಬಂಡವಾಳಶಾಹಿ ಆಧುನಿಕತೆಯನ್ನು, ಅದು ನಡೆಸುವ ರಾಜಕಾರಣವನ್ನು ಇದಿರ್ಗೊಳ್ಳುವಂತಹ ಕಥೆ ಗೋರಿ. ಇದರಲ್ಲಿ ಭಯಾನಕವಾದ ಒಂದು ಸ್ಪರ್ಧೆ ಇದೆ. ಸ್ಪರ್ಧಿಗಳು ನೋಯುತ್ತಿದ್ದಾರೆ; ಪ್ರೇಕ್ಷಕರು ಸಂಭ್ರಮಿಸುತ್ತಿದ್ದಾರೆ. ಇನ್ನೊಬ್ಬರ ನೋವನ್ನು ಮನರಂಜನೆಯಾಗಿಸಿದ ಕ್ರೌರ್ಯದ ಇತಿಹಾಸ ಈ ನವ-ಬಂಡವಾಳಶಾಹಿ ಆಧುನಿಕತೆಗೆ ಇದೆ. ಸ್ಪರ್ಧೆ ಎನ್ನುವುದೇ ಬಂಡವಾಳಶಾಹಿ ಮಾರುಕಟ್ಟೆ ಸೃಷ್ಟಿಸಿರುವ ಒಂದು ಕ್ರೂರ ಆಕರ್ಷಣೆ.
ಆಧುನಿಕ ಯುರೋಪಿನ ಚಾರಿತ್ರಿಕ ವಿಕಾಸದಲ್ಲಿ ಬಂಡವಾಳಶಾಹಿ ಎಂಬ ಆರ್ಥಿಕವ್ಯವಸ್ಥೆಯೊಂದು ಹುಟ್ಟಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಈ ಆರ್ಥಿಕವ್ಯವಸ್ಥೆಯನ್ನು ನ್ಯಾಯಸಮ್ಮತಗೊಳಿಸಿದ್ದು ಲಿಬರಲ್ವಾದ ಎಂಬ ಒಂದು ರಾಜಕೀಯ ಚಿಂತನೆ. ಸ್ಪರ್ಧೆಯಲ್ಲಿ ತಪ್ಪಿಲ್ಲ ಎಂದು ಘೋಷಿಸಿದ್ದು ಯುರೋಪಿನ ಲಿಬರಲ್ವಾದ. ಸ್ಪರ್ಧೆಯನ್ನು ತನ್ನ ಮುಖ್ಯ ತಾತ್ತ್ವಿಕ ಭಿತ್ತಿಯಾಗಿರಿಸಿದ್ದು ಬಂಡವಾಳವಾದ. ಹಾಗಾಗಿ ಲಿಬರಲಿಸಮ್ ಮತ್ತು ಕ್ಯಾಪಿಟಲಿಸಮ್ ಅವಳಿ-ಜವಳಿಗಳಿದ್ದಂತೆ. ಇಂತಹ ಬಂಡವಾಳಶಾಹಿ ಆರ್ಥಿಕತೆಗೆ ಎದುರಾಗಿ ಹುಟ್ಟಿಕೊಂಡಿದ್ದು ಸಮಾಜವಾದ. ಹದಿನೆಂಟನೇ ಶತಮಾನದ ಯುರೋಪಿನಲ್ಲಿ ನಡೆದ ಔದ್ಯೋಗೀಕರಣದಿಂದ ರೂಪುಗೊಂಡ ಬಂಡವಾಳಶಾಹಿ ಆರ್ಥಿಕತೆ; ಬಂಡವಾಳದ ನಿರಂತರ ಹೂಡಿಕೆಯನ್ನು, ಸಂಪತ್ತಿನ ಸತತ ಶೇಖರಣೆಯನ್ನು ಮತ್ತು ಸ್ಪರ್ಧಾತ್ಮಕ ಆರ್ಥಿಕ ಚಟುವಟಿಕೆಯನ್ನು ಪ್ರತಿನಿಧಿಸಿದರೆ, ಅದಕ್ಕೆದುರಾಗಿರುವ ಸಮಾಜವಾದ ಸಂಪತ್ತಿನ ಸಾಮಾಜಿಕ ಒಡೆತನವನ್ನು ಮತ್ತು ಸಹಕಾರಿ ಜೀವನಕ್ರಮವನ್ನು ಪ್ರತಿಪಾದಿಸುತ್ತದೆ.
ಆರಂಭದ ದಿನಗಳಲ್ಲಿ ಸಮಾಜವಾದ ನೈತಿಕತೆಯ ಆಧಾರದಲ್ಲಿ ತನ್ನ ತಾತ್ತ್ವಿಕ ನೆಲೆಗಟ್ಟನ್ನು ರೂಪಿಸಿತ್ತು. ಸಮಾಜವಾದವನ್ನು ರೂಪಿಸಿದವರಲ್ಲಿ ಕ್ರಿಶ್ಚಿಯನ್ ಧರ್ಮಾನುಯಾಯಿಗಳಾಗಿ, ಧಾರ್ಮಿಕತೆಯಲ್ಲಿ ಆಳವಾದ ಶ್ರದ್ಧೆಯನ್ನು ಇಟ್ಟುಕೊಂಡ ಚಿಂತಕರೂ ಇದ್ದರು ಎಂಬುದನ್ನು ನಾವು ಮರೆಯುವಂತಿಲ್ಲ. ಸೈಂಟ್ ಸಿಮೋನ್ (Henri de Saint-Simon 1760–1825), ಚಾರ್ಲ್ಸ್ ಫ್ಯೂರಿಯೆರ್ (Charles Fourier 1772–1837), ರಾಬರ್ಟ್ ಓವೆನ್ (Robert Owen 1771–1858) ಮೊದಲಾದವರು ಈ ಸಾಲಿನಲ್ಲಿ ಬರುತ್ತಾರೆ. ಇವರು ಯಾರೂ ತಮ್ಮನ್ನು ತಾವು ‘ಕ್ರಿಶ್ಚಿಯನ್ ಸೋಶಿಯಲಿಸ್ಟ್ಸ್’ ಎಂದು ಘೋಷಿಸದೇ ಇದ್ದಿರಬಹುದು. ಆದರೆ ಇವರು ಶೋಷಣೆ ಮತ್ತು ಅಸಮಾನತೆಯ ಬಗ್ಗೆ ತಾತ್ತ್ವಿಕವಾಗಿ ತಮ್ಮ ವಿರೋಧವನ್ನು ಮಂಡಿಸಿದವರು. ಈ ವಿರೋಧ ಇವರು ಆಳವಾಗಿ ನಂಬಿದ ಕ್ರಿಶ್ಚಿಯನ್ ಧರ್ಮದ ನೈತಿಕ ಮತ್ತು ಧಾರ್ಮಿಕ ನೆಲೆಯಿಂದ ಬಂದಿತ್ತು. ಸಮಾಜವಾದದ ತತ್ತ್ವವನ್ನು ಪೋಷಿಸುವಂತಹ ಅಪೂರ್ವವಾದ ಮಾತೊಂದನ್ನು ಸ್ವತಃ ಜೀಸಸ್ ಹೇಳಿದ್ದ. ಆ ನುಡಿಗಟ್ಟು ಹೀಗಿದೆ:
ಸೂಜಿಗೆ ದಾರ ಹಾಕುವ ರಂಧ್ರದೊಳಗಿನಿಂದ (ಸೂಜಿಯ ಕಣ್ಣಿನೊಳಗಿಂದ) ಒಂಟೆಯಾದರೂ ಪ್ರವೇಶಿಸಬಹುದೇನೋ; ಆದರೆ ಶ್ರೀಮಂತರಿಗೆ ದೇವರ ರಾಜ್ಯ ಪ್ರವೇಶಿಸಲು ಸಾಧ್ಯವಿಲ್ಲ.
ದೇವರು ತನ್ನ ಮಕ್ಕಳೆಲ್ಲರಿಗೆ ಸಮಾನವಾಗಿ ಹಂಚಿರುವ ಈ ಭೂಮಿಯಲ್ಲಿ ಯಾರೋ ಒಬ್ಬ ಶ್ರೀಮಂತನಾಗಿದ್ದಾನೆಯೆಂದರೆ ಆತ ಹತ್ತಾರು ಜನರನ್ನು ಸುಲಿದಿರುತ್ತಾನೆ. ಈ ಸುಲಿಗೆ ಅಥವಾ ಶೋಷಣೆ ಪಾಪಕರವಾದುದು. ಅಂತಹ ಪಾಪಿಗೆ ಸ್ವರ್ಗ ಪ್ರಾಪ್ತಿ ಇಲ್ಲ ಎಂಬುದು ಕ್ರಿಶ್ಚಿಯಾನಿಟಿಯ ಘನವಾದ ನೈತಿಕ ನಿಲುವಾಗಿತ್ತು.
ಸಮಾಜವಾದಕ್ಕಿರುವ ಈ ಆಧ್ಯಾತ್ಮಿಕ ಇತಿಹಾಸವನ್ನು ಗಮನಿಸದೆ ಸಮಾಜವಾದವನ್ನು ಮತ್ತು ಅದರ ಮುಂದುವರಿಕೆಯಾಗಿರುವ ಕಮ್ಯೂನಿಸಮ್ ಅನ್ನು “ನಾಸ್ತಿಕ-ವಿಚಾರವಾದ”ದ ಹೆಸರಿನಲ್ಲಿ ಜನಸಾಮಾನ್ಯರ ಆಳವಾದ ಧರ್ಮಶ್ರದ್ದೆ ಮತ್ತು ದೈವನಂಬಿಕೆಗೆ ಎದುರಾಗಿ ಕಟ್ಟಿದುದೂ ಕೂಡ ಇಂದಿನ ನಮ್ಮ ಸಮಾಜದ ಈ ಪರಿಯ ದುಃಸ್ಥಿತಿಗೆ ಕಾರಣವೇನೋ ಎಂದು ನನಗೆ ಬಹಳ ಬಾರಿ ಅನ್ನಿಸಿದ್ದಿದೆ. ಸಮಾಜವಾದಕ್ಕೆ ಹೊಸ ಹೊಳಪು ಕೊಡುವುದಕ್ಕೆ ಅಥವಾ “ಭಾರತೀಯ ಸಮಾಜವಾದ” ಎಂದು ಹೊಸದಾಗಿ ನಿರೂಪಿಸುವುದಕ್ಕೆ, ನಾಸ್ತಿಕ ವಿಚಾರವಾದವೇ ಸಮಾಜವಾದದ ಅಡಿಗಲ್ಲು ಆಗಬೇಕಾಗಿಲ್ಲ ಎಂದು ಹೇಳುವುದಕ್ಕೆ, ಸ್ಪಿರಿಚುವಲ್ ರಾಶನಲಿಸಮ್ ಕೂಡ ಸಮಾಜವಾದದಲ್ಲಿ ಬಹುಮುಖ್ಯವಾದ ಒಂದು ಅಂಶ ಎಂದು ಒತ್ತಾಯಿಸುವುದಕ್ಕೆ ನಮ್ಮಲ್ಲಿ ರಾಮ ಮನೋಹರ ಲೋಹಿಯಾ ಬರಬೇಕಾಗಿ ಬಂತು. ಇರಲಿ, ಆ ಚರ್ಚೆ ನಮ್ಮನ್ನು ಬೇರೆಡೆಗೆ ಒಯ್ಯಬಹುದು.
ಕ್ರಿಶ್ಚಿಯನ್ ಧರ್ಮದಲ್ಲಿ ಆಳವಾದ ಶ್ರದ್ಧೆ ಇಟ್ಟುಕೊಂಡು ಸಮಾಜವಾದವನ್ನು ರೂಪಿಸಿದವರನ್ನು ಫ್ರೆಡರಿಕ್ ಏಂಗೆಲ್ಸ್ ಕನಸುಗಾರ ಸಮಾಜವಾದಿಗಳು (utopian socialists) ಎಂದು ಕರೆಯುತ್ತಾನೆ. ಇವರಿಗಿಂತ ಭಿನ್ನವಾಗಿ ಕಾರ್ಲ್ ಮಾರ್ಕ್ಸ್ ಪರಿಕಲ್ಪಿಸಿದ ಸಮಾಜವಾದವನ್ನು ಆತ, ವೈಜ್ಞಾನಿಕ ಸಮಾಜವಾದ ಎಂದು ಗುರುತಿಸುತ್ತಾನೆ. ಗೋರಿ ಕಥೆಯಲ್ಲಿ ಕೊಂಚಮಟ್ಟಿಗೆ ನಾನು ಈಗಾಗಲೇ ಪ್ರಸ್ತಾವಿಸಿದ ಕನಸುಗಾರ ಸಮಾಜವಾದದ ಕೆಲವು ಛಾಯೆಗಳು ಕಂಡು ಬರುತ್ತವೆ. ಆಧುನಿಕ ಬಂಡವಾಳಶಾಹಿ ಜಗತ್ತಿನ ಲೋಕವ್ಯಾಪಾರವನ್ನು ಅಚ್ಚುಕಟ್ಟಾಗಿ ಚಿತ್ರಿಸಿರುವ ಈ ಕಥೆ; ಆಕರ್ಷಣೆ-ಆಮಿಷಗಳಿಗೆ ಬಲಿಯಾಗುವ, ತೀರದ ಬಯಕೆಗಳಿಗೆ ತಮ್ಮನ್ನು ತೆತ್ತುಕೊಳ್ಳುವ ಮನುಷ್ಯರ ಮನೋವ್ಯಾಪಾರವನ್ನೂ ಅಷ್ಟೇ ಆಸ್ಥೆಯಿಂದ ಹಿಡಿದಿಟ್ಟಿದೆ. ವಿಲಕ್ಷಣವಾದ ಸ್ಪರ್ಧೆಯೊಂದು ಕಂಪೆನಿಯೊಂದರ ಪ್ರೊಮೋಷನ್ ಗಾಗಿ ನಡೆಯುತ್ತಿರುವುದು ಈ ಕಥೆಯ ಪ್ರಮುಖ ಭಾಗವಾಗಿದ್ದರೂ; ಇದನ್ನೂ ಮೀರಿದ ಹಲವು ಆಯಾಮಗಳು ಈ ಕಥೆಯನ್ನು ಸಂಕೀರ್ಣಗೊಳಿಸಿವೆ. ಲೌಕಿಕದ ಯಾವ ಆಕರ್ಷಣೆಗೂ ಮಣಿಯದ, ಸೊಪ್ಪು ಹಾಕದ ಚಂದ್ರಮೋಹನನ ಪ್ರಿಯತಮೆ ಜಯಂತಿ, ಇನ್ನೊಂದು ವಾರದಲ್ಲಿ ತಮ್ಮ ಮದುವೆ ಇದ್ದರೂ -
ಈ ಕಾರನ್ನು ನೀನು ಗೆದ್ದು ಕೊಡಬೇಕು. ನನಗಿದು ಅಮೂಲ್ಯ ಉಡುಗೊರೆ….ಬೇಕಾದರೆ ಇದು ನಿನ್ನ ಗಂಡಸುತನದ ಪರೀಕ್ಷೆ ಎಂದುಕೋ. (ಪುಟ: 50-51)
ಎಂದು ಗಂಡನಾಗುವವನನ್ನು ಪ್ರಚೋದಿಸಿ, ಈ ಆಧುನಿಕ ಸ್ಪರ್ಧೆಗೆ ಪುರಾಣ ಕಾಲದ ‘ಪರಾಕ್ರಮವೇ ಪಣ’ ಎಂಬ ಸ್ವಯಂವರದ ರೂಪವನ್ನು ತಾನಾಗಿ ಕೊಟ್ಟಿದ್ದಾಳೆ.
ಬಹಿರಂಗದ ಲೋಕಜೀವನದಲ್ಲಿ ನಾವು ಹೇಗೆ ಪಾಲ್ಗೊಂಡಿದ್ದೇವೆಯೋ ಹಾಗೆಯೇ; ಅದನ್ನು ಮೀರಿದ ಇನ್ನೊಂದು ಸಂಗತಿ ನಮ್ಮನ್ನು ಒಳಗಿನಿಂದ ಕುಟುಕುತ್ತಿದ್ದು, ಅದನ್ನೂ ತೆರೆದು ತೋರಿಸಲು ಕಥನಕಾರನಿಗೆ ಸಾಧ್ಯವಾದರೆ ಆಗ ಕಲೆಯ ಕಾಯಕ ಸಂಕೀರ್ಣಗೊಳ್ಳುತ್ತದೆ. ರಘು ಅದನ್ನು ಇಲ್ಲಿ ಮಾಡಿದ್ದಾರೆ. ಹೊರಗಿನ ಲೋಕವ್ಯವಹಾರವನ್ನು ವಿವರಿಸುವಾಗ ನಮ್ಮ ಭಾಷೆ ಸರಾಗವೂ, ಸರಳವೂ ಮತ್ತು ನಿರಾಳವೂ ಆಗಿರುತ್ತದೆ. ಆದರೆ ನಮ್ಮ ಒಳಗಿನ ಲೋಕದ ಜೊತೆ ನಾವು ಅನುಸಂಧಾನ ನಡೆಸಲು ತೊಡಗಿದಾಗ ಭಾಷೆ ಓತಃಪ್ರೋತವಾಗಿ ಉಕ್ಕುವುದಿಲ್ಲ; ಉಗ್ಗುತ್ತದೆ. ಮಾತಾಡುವವನು ಉಗ್ಗುವುದಲ್ಲ; ಸ್ವತಃ ಭಾಷೆಯೇ ಉಗ್ಗುವುದು. ಈ ಉಗ್ಗುವಿಕೆ ಒಂದು ದೋಷವಲ್ಲ; ಅದೊಂದು ಗುಣ. ಉಗ್ಗುವುದರಲ್ಲೂ ಒಂದು ಬಗೆಯ ಜೀವಂತಿಕೆ ಇದೆ. ಅಂತಹ ಜೀವಂತಿಕೆ ಇರುವ ಭಾಷೆಯನ್ನು ಮಿಡಿದಾಗ; ಬೇರೆಯೇ ಆದ ರೀತಿಯಲ್ಲಿ ಅಂತರಂಗದ ಒಳತೋಟಿಗಳನ್ನು ಹಿಡಿಯಲು ಸಾಧ್ಯವಾಗುತ್ತದೆ. ಈ ಕಥೆಯಲ್ಲಿ ರಘು ಅದನ್ನು ಸಾಧಿಸಿದ್ದಾರೆ ಮತ್ತು ಒಳ-ಹೊರಗಿನ ಲೋಕಗಳನ್ನು ಪರಸ್ಪರ ಭೇಟಿ ಮಾಡಿಸಿದ್ದಾರೆ.
ನವಬಂಡವಾಳಶಾಹಿಯು ಅನೇಕ ನಮೂನೆಗಳಲ್ಲಿ ತನ್ನ ಅಧಿಕಾರವನ್ನು ತೋರಿಸುತ್ತದೆ. ಸೂಕ್ಷ್ಮಾತಿಸೂಕ್ಷ್ಮವಾಗಿ ಅದು ತನ್ನ ಅಧಿಕಾರವನ್ನು ಚಲಾಯಿಸುತ್ತದೆ. ಸರ್ವೇಸಾಮಾನ್ಯವಾಗಿ ಯಾವುದೇ ಬಗೆಯ ಅಧಿಕಾರದ ರಂಗಪ್ರದರ್ಶನ ನಿರಾಯಾಸವಾಗಿ, ನೇರವಾಗಿ ನಮ್ಮ ಅನುಭವಕ್ಕೆ ಬರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ತ್ರಾಸ ಇಲ್ಲ. ನಿದರ್ಶನ ಕೊಡುವುದಾದರೆ, ಆಧುನಿಕ ಸ್ಟೇಟ್ ತನ್ನ ಕಾರ್ಯಾಂಗದ ಒಂದು ವಿಭಾಗವಾದ ಪೊಲೀಸರ ಮತ್ತು ಸೈನಿಕರ ದೇಹದ ಅಂಗಾಂಗಗಳನ್ನು ಕ್ರಮಬದ್ಧವಾಗಿ ತರಬೇತುಗೊಳಿಸುತ್ತದೆ. ದಿನನಿತ್ಯದ ಪೆರೇಡ್ ಗೆ ಕವಾಯತು ನಡೆಸುವ ಒಬ್ಬ ಪೇದೆ ಅಥವಾ ಸೈನಿಕ ಎಚ್ಚರದಲ್ಲಿ ಬಿಡಿ; ನಿದ್ರಿಸಿದ ಸ್ಥಿತಿಯಲ್ಲೂ ಮೇಲಧಿಕಾರಿಯ ಅಪ್ಪಣೆಗೆ ಅನುಗುಣವಾಗಿ ತನ್ನ ಅಂಗಾಂಗಗಳನ್ನು ಕದಲಿಸಬಲ್ಲ. ಹಿರಿಯ ಅಧಿಕಾರಿಗಳು ನೀಡಿದ ನಿರಂತರ ತರಬೇತಿಗನುಗುಣವಾಗಿ ಸೈನಿಕರೋ ಪೊಲೀಸರೋ ತಮ್ಮ ದೇಹವನ್ನು ಟ್ಯೂನ್ ಮಾಡಿಕೊಳ್ಳುತ್ತಾರೆ. ಈ ಪ್ರಕ್ರಿಯೆಯ ಹಿಂದೆ ಒಂದು ಬಗೆಯ ಶಿಸ್ತಿನ ಅಧಿಕಾರ ಅಥವಾ ಅಧಿಕಾರದ ಶಿಸ್ತು ಇರುತ್ತದೆ. ಹೇಳಿದಂತೆ ಕೇಳುವ, ಬಾಗಿ-ಬಳುಕುವ, ಸೆಟೆದು ನಿಲ್ಲುವ ದೇಹಗಳನ್ನು ರೂಪಿಸುವುದು ಆಧುನಿಕ ಸ್ಟೇಟ್ನ ಅಧಿಕಾರದ ಕ್ರಿಯಾಚರಣೆಯಲ್ಲಿ ಬಹುಮುಖ್ಯವಾದುದು ಮತ್ತು ಇದು ನಮ್ಮ ಬರಿಗಣ್ಣಿಗೆ ಕಾಣುತ್ತದೆ.
ಆದರೆ ನಮ್ಮ ದೇಹವನ್ನು, ಆಲೋಚನೆಯನ್ನು, ಗ್ರಹಿಕೆಯನ್ನು ನಿಯಂತ್ರಿಸುವ ಅಧಿಕಾರ ನಮ್ಮ ಅನುಭವಕ್ಕೆ ಬಂದಿದ್ದರೂ ನಾವು ಅದನ್ನು ಅಷ್ಟಾಗಿ ಗಮನಿಸಿರುವುದಿಲ್ಲ. ಈ ಕಥೆಯಲ್ಲಿ ಚಂದ್ರಮೋಹನ ಮತ್ತು ರಾಜಶೇಖರರ ದೇಹಗಳನ್ನು ಕಳೆದ ನಾಲ್ಕು ದಿನಗಳಿಂದ ಒಂದೇ ರೀತಿಯಲ್ಲಿ ನವಬಂಡವಾಳಶಾಹಿ ಟ್ಯೂನ್ ಮಾಡಿರುವುದನ್ನು ರಘು ತಣ್ಣಗೆ ನಿರೂಪಿಸಿದ್ದಾರೆ. ಸ್ಟೇಟ್ ಮಾಡುವ ಮನುಷ್ಯ ದೇಹದ ಟ್ಯೂನ್ ಕಣ್ಣಿಗೆ ರಾಚುವಂತಿದ್ದರೆ; ನವ-ಬಂಡವಾಳಶಾಹಿ ಮನುಷ್ಯರನ್ನು ಮಾಡುವ ಟ್ಯೂನ್ ಅನುಭವಿಸುವವನಿಗೂ ಗೋಚರವಾಗುವುದಿಲ್ಲ; ಅಂತೆಯೇ ನೋಡುವವನಿಗೂ ಕಂಡು ಬರುವುದಿಲ್ಲ. ನಮ್ಮಲ್ಲೀಗ ಪಿಯುಸಿಯಲ್ಲಿ ವಿಜ್ಞಾನವನ್ನು ಓದುವ ಮಕ್ಕಳು ಐಐಟಿ, ಜೆಇಇ ಮತ್ತು ನೀಟ್ ಪರೀಕ್ಷೆಗಳಿಗಾಗಿ ಕೋಚಿಂಗ್ ಕೇಂದ್ರಗಳಲ್ಲಿ ತಯಾರಾಗುವುದನ್ನು ನೋಡಿದರೆ ಅವರ ಮೆದುಳಿನ ಟ್ಯೂನಿಂಗ್ ಹೇಗೆ ನಡೆಯುತ್ತಿದೆ ಎಂಬುದನ್ನು ಗಮನಿಸಬಹುದು. ಬರಿಗಣ್ಣಿಗೆ ಕಾಣದ, ಆದರೆ ಸಹಜವೋ ಎಂಬಂತೆ ನಡೆಯುವ ಕ್ರೌರ್ಯದ ಪ್ರಾಕ್ಟೀಸ್ ಮನುಷ್ಯ ಬದುಕಿನ ದಿನನಿತ್ಯದ ಭಾಗವಾಗುವುದಿದೆಯಲ್ಲ; ಅದು ಭೀಕರ ಮತ್ತು ಭೀಭತ್ಸ.
ಮನುಷ್ಯರಲ್ಲಿ ಇರಬಹುದಾದ ಆಳವಾದ ಮಾನವೀಯ ಸೆಲೆಯ ಬಗ್ಗೆ ರಘು ಅವರಿಗೆ ಅಪಾರ ನಂಬಿಕೆ ಇದ್ದಂತಿದೆ. ಕಥೆಯ ಮುಕ್ತಾಯದಲ್ಲಿ ಮಾನವೀಯತೆಯ ಬುಗ್ಗೆ ಹಠಾತ್ತಾಗಿ ಚಿಮ್ಮಿ ಕಥೆ ಸಿನಿಮೀಯ ಅಂತ್ಯವನ್ನು ಕಂಡಿದೆ. ಅಪಾರ ತಾಳ್ಮೆ ಮತ್ತು ಸಂಯಮ ಇರುವ ರಘು ಕಥೆಯ ಕೊನೆಯಲ್ಲಿ ತಮ್ಮ ಸ್ವಭಾವಕ್ಕೆ ವಿರೋಧವಾಗಿ ನಡೆದುಕೊಂಡಿರುವುದು, ಕಥೆಯಲ್ಲಿ ಬರುವ ಜಯಂತಿಯ ವಿಲಕ್ಷಣ ಬೇಡಿಕೆಯಷ್ಟೇ ನನಗೆ ಸೋಜಿಗ ಹುಟ್ಟಿಸಿದ ವಿಷಯ. ಬಲಶಾಲಿಯಾದ, ಸರ್ವಾಂತರ್ಯಾಮಿಯಾದ ಮತ್ತು ಜಾಗತಿಕ ಮಟ್ಟದಲ್ಲಿ ಸುಳ್ಳಿಗೂ ಸಾಂಸ್ಥಿಕ ಬಲವನ್ನು (institutionalization of lying) ನೀಡಿರುವ ನವ-ಬಂಡವಾಳಶಾಹಿ ಪ್ರತಿನಿಧಿಸುವ ಕೇಡನ್ನು ಮನುಷ್ಯ ಮಾತ್ರರಾದವರು ಕೇವಲ ತಮ್ಮ ಮುಗ್ಧ ಮಾನವೀಯತೆಯ ನೇವರಿಸುವಿಕೆಯಿಂದ ತಹಬಂದಿಗೆ ತರುವುದು ಕಷ್ಟ ಎಂಬುದು ರಘು ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಹಾಗಿದ್ದೂ ಗೋರಿ ಕಥೆಯನ್ನು ಓರ್ವ ಸಮಾಜವಾದೀ ಕನಸುಗಾರನಂತೆ ರಘು ಕಾಳಜಿಯಿಂದ ಹೆಣೆದಿದ್ದಾರೆ.
ಈ ಹೆಣಿಗೆ ಎಷ್ಟು ಬಿಗಿಯಿದೆಯೆಂದರೆ, ಕೊನೆಗೆ ಅವರೇ ಈ ಕಥೆಯೊಳಗೆ ಬಂಧಿಯಾಗಿದ್ದಾರೆ. ಹೊರಬರುವ ದಾರಿ ತಿಳಿಯದೆ, ಅಂದರೆ ತಾನು ಸೃಷ್ಟಿಸಿದ ಕಥೆಯ ವಿರಾಟ್ ರೂಪವನ್ನು ಭರಿಸಲು ಸಾಧ್ಯವಾಗದೆ, ತಾನು ನಿರ್ಮಿಸಿದ ಚಕ್ರವ್ಯೂಹದಿಂದ ಹೊರಬರುವ ದಾರಿಯನ್ನು ತಾನೇ ಅರಿಯದೆ ಕಥೆಯ ಮುಕ್ತಾಯವನ್ನು ಸರಳಗೊಳಿಸಿ ಅವರು ಪಾರಾಗಿದ್ದಾರೆ ಅಥವಾ ಹತವಾಗಿದ್ದಾರೆ. ಉಡದ ಹಿಡಿತದಷ್ಟು ಬಿಗಿಯಾಗಿರುವ ಈ ಕಥೆಯಿಂದ ಪಾರಾಗಿ, ಓಡಿಬಂದು ಜೀವವುಳಿಸಿಕೊಳ್ಳುವ ಪ್ರಯತ್ನ ಮಾಡದೆ ಅವರಿಗೆ ಬೇರೆ ದಾರಿ ಇರಲಿಲ್ಲವೇನೋ? ಗೋರಿ ಕಥೆ ಪಿರಮಿಡ್ ನಂತೆ ಎಷ್ಟು ಎತ್ತರಕ್ಕೆ ಬೆಳೆದಿದೆಯೆಂದರೆ ಇದರಲ್ಲಿ ಕಥೆಗಾರನಿಗೆ ಸೋಲದೆ ಬೇರೆ ವಿಧಿಯೇ ಇಲ್ಲ. ಕಥೆಯ ಪಾತ್ರಗಳಾದ ರಾಜಶೇಖರ ಮತ್ತು ಚಂದ್ರಮೋಹನ್ ಸ್ಪರ್ಧೆಯಲ್ಲಿ ಗೆದ್ದರೋ ಅಥವಾ ಸೋತರೋ ಎಂಬ ಕುತೂಹಲಕ್ಕಿಂತಲೂ ರಘು ಈ ಕಥೆಯ ಮುಕ್ತಾಯದಲ್ಲಿ ಸೋತದ್ದು, ಕಲೆಯ ಮೀಮಾಂಸೆಯ ದೃಷ್ಟಿಯಿಂದ ಸಹಜವಾದ ಬೆಳವಣಿಗೆಯೇನೋ ಎಂದು ನನಗೆ ತೋರಿದೆ. ದಯವಿಟ್ಟು ಇದನ್ನು ಒಂದು ಟೀಕೆ ಎಂದು ಭಾವಿಸಬಾರದು. ಯಾಕೆಂದರೆ ನಾನಿಲ್ಲಿ ಕಥೆಗಾರನ ಬಗ್ಗೆ ಅಲ್ಲ, ಕಲೆಯ ಬಗ್ಗೆ ಮಾತನಾಡುತ್ತಿದ್ದೇನೆ.
ಗೋರಿ ಕಥೆಯಲ್ಲಿ ಕಥೆಗಾರ ನಲುಗಿಹೋಗಿರುವುದನ್ನು ಕಥೆಗಾರನ ಸೋಲು ಎಂದು ಭಾವಿಸುವುದಕ್ಕಿಂತಲೂ, ಇದನ್ನು ಕಲೆಯ ಗೆಲುವು ಎಂದು ಭಾವಿಸುವುದು ಸೂಕ್ತ. ಕಲೆ ಗೆಲ್ಲಬೇಕು ಮತ್ತು ಕಲಾವಿದ ಸೋಲಬೇಕು ಎಂಬುದು ನನ್ನ ವೈಯಕ್ತಿಕ ಅಭಿಮತ. ಕಲೆಯನ್ನು ಗೆಲ್ಲಿಸುತ್ತ, ಗೆಲ್ಲಿಸುತ್ತ ಕಲಾವಿದ ತನ್ನನ್ನು ತಾನು ನೀಗಿಕೊಳ್ಳಬೇಕು. ರೋಲಾಂಡ್ ಬಾತ್ಸ್ (Roland Barthes) ಹೇಳುವ “ದ ಆಥರ್ ಈಸ್ ಡೆಡ್” ಎಂಬ ಸುಪ್ರಸಿದ್ಧ ಹೇಳಿಕೆ ಕಲಾಮೀಮಾಂಸೆಯ ಸನ್ನಿವೇಶದಲ್ಲಿ ಈ ಆಯಾಮದಲ್ಲೂ ನಿಜವಾಗಬೇಕು. ಒಂದು ವೇಳೆ ಕಲಾವಿದ ಗೆದ್ದರೆ ಕಲೆ ಆತನ ಕೈಯ ಉಪಕರಣವಾಗುತ್ತದೆ, ಒಂದು ಹತ್ಯಾರು ಆಗುತ್ತದೆ. ಕಲೆ ಗೆದ್ದರೆ ಅದು ಸದ್ಯವೂ ಶಾಶ್ವತವೂ ಆಗುತ್ತದೆ. ಕಲಾವಿದ ಗೆದ್ದಾಗ ಆತ ತಾನು ಕಂಡುಕೊಂಡ ಸತ್ಯದ ಸ್ಥಾಪನೆಗೆ ಹೊರಡುತ್ತಾನೆ. ಕಲೆ ಗೆದ್ದಾಗ ಅದು ಸತ್ಯದ ಅನ್ವೇಷಣೆಗೆ ಹೊರಡುತ್ತದೆ. ನಮ್ಮಲ್ಲಿ ಬಂದ ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ, ಧುರಂಧರ್ ಇತ್ಯಾದಿ ಪ್ರೊಪಗಾಂಡ ಸಿನಿಮಾಗಳು ಸಾರ್ವಜನಿಕ ಗ್ರಹಿಕೆಯನ್ನು ಪ್ರಭಾವಿಸುವ, ನಿರ್ದಿಷ್ಟ ರಾಜಕೀಯವನ್ನು ಉದ್ದೀಪಿಸುವ, ಕಲ್ಚರಲ್ ಐಡಿಯಾಲಜಿಯೊಂದನ್ನು ಉನ್ನತೀಕರಿಸುವ ಮತ್ತು ಅದಕ್ಕೆ ತಕ್ಕುದಾದ ನಿರೂಪಣೆಗಳನ್ನು ಹುಟ್ಟಿಸುವ ಕೆಲಸವನ್ನು ಮಾಡುವಂತಿವೆ. ಇವುಗಳನ್ನು ಕಲೆ ಎಂದು ಹೇಳಬಹುದೇ? ಕಲೆಯ ವೇಷವನ್ನು ಧರಿಸಿ ನಿಂತಿರುವ ಸೈತಾನ್ ಗಳಂತೆ ಇವು ಕಾಣುವುದಿಲ್ಲವೇ?
ಕಲೆ ಮತ್ತು ಕಲಾವಿದನ ಮುಖಾಮುಖಿಯಲ್ಲಿ ಕೊನೆಗೂ ಕಲೆಯೇ ಗೆಲ್ಲಬೇಕು. ರಘು ಈ ಕಥೆಯ ಮೂಲಕ ಓದುಗರ ಮೇಲೆ ದಟ್ಟವಾದ ಪರಿಣಾಮವನ್ನು ಬೀರಿದ್ದಾರೆ. ಈ ಅರ್ಥದಲ್ಲಿ ರಘು ಓರ್ವ ಪರಿಣಾಮಕಾರೀ ಕಥನಕಾರ. ಆದರೆ ಕಥೆಯನ್ನು ಕಟ್ಟುತ್ತ, ಕಟ್ಟುತ್ತ ರಘು ತನ್ನ ಮೇಲೆ ತಾನೇ ಪರಿಣಮಿಸಿಕೊಂಡಿರುತ್ತಿದ್ದರೆ ಕಥೆಯ ಮುಕ್ತಾಯ ಬೇರೆಯೇ ರೀತಿಯಲ್ಲಿ ಆಗುತ್ತಿತ್ತೋ ಏನೋ?
ಇಷ್ಟು ಮಾತು ಹುಟ್ಟುವಂತೆ ನನ್ನನ್ನು ಪ್ರಚೋದಿಸಿದ ಆ ಕಥೆಗೆ ಮತ್ತು ಅಂತಹ ಕಥೆಯನ್ನು ಹೆಣೆದ ರಘುನಾಥ ಚ ಹ ಎಂಬ ಕಥನಕಾರನಿಗೆ ಮತ್ತೊಮ್ಮೆ ಅಭಿನಂದನೆಗಳು.
ನಮಸ್ಕಾರ.
(ಜೂನ್ 14, 2026ರಂದು ಮಂಡ್ಯದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಡಿದ ಮಾತುಗಳ ಪರಿಷ್ಕೃತ ರೂಪ)
ನಿತ್ಯಾನಂದ ಬಿ ಶೆಟ್ಟಿ
ನಿತ್ಯಾನಂದ ಬಿ ಶೆಟ್ಟಿ ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಮತ್ತು ಕನ್ನಡದ ಮಹತ್ತ್ವದ ಚಿಂತಕರು. ವಿಮರ್ಶೆ, ಅನುವಾದ, ಸಂಶೋಧನೆ ಹಾಗೂ ಸಂಪಾದನೆಯಲ್ಲಿ ಸಕ್ರಿಯರಾಗಿರುವವರು. ಕಳೆದ ಕೆಲವು ವರ್ಷಗಳಲ್ಲಿ ಪ್ರಕಟವಾದ ಇವರ ಎರಡು ಪ್ರಮುಖ ಕೃತಿಗಳು ಕನ್ನಡ ಬೌದ್ಧಿಕ ವಲಯದಲ್ಲಿ ವಿಶೇಷ ಗಮನ ಸೆಳೆಯುತ್ತಿವೆ. ಮಾರ್ಗಾನ್ವೇಷಣೆ ಸಾಹಿತ್ಯ ಸಂಶೋಧನೆಯ ರೀತಿ-ನೀತಿಗಳನ್ನು, ಮಾರ್ಗದರ್ಶಕ ಮತ್ತು ಸಂಶೋಧನಾಸಕ್ತರ ನಡುವಿನ ಸಂಭಾಷಣೆಯ ರೂಪದಲ್ಲಿ ವಿವರಿಸುವ ವಿಶಿಷ್ಟ ಕೃತಿ. ಆಧುನಿಕ ಕನ್ನಡ ಅಧ್ಯಯನದಲ್ಲಿ ಇದೊಂದು ಹೊಸ ಬಗೆಯ ಶೈಕ್ಷಣಿಕ ಚರ್ಚೆಗೆ ನಾಂದಿ ಹಾಡಿದೆ. ಕೆಲವು ತಿಂಗಳುಗಳ ಹಿಂದಷ್ಟೇ ಹೊರಬಂದ ಅಳವು ಅರಿಯದ ಭಾಷೆ (ಕಲೆ, ಸಮಾಜ, ಇತಿಹಾಸ): ಯಕ್ಷಗಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಕರಾವಳಿ ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಪಲ್ಲಟಗಳನ್ನು ಮತ್ತು ಬಿಕ್ಕಟ್ಟುಗಳನ್ನು ವಿಶ್ಲೇಷಿಸುವ ಮಹತ್ವದ ಪ್ರಯತ್ನ.
ಇದನ್ನೂ ಓದಿ …
ಕೇಡಿನ ಭಾಷೆಯೇ ಆಡುಭಾಷೆಯಾದಾಗ…
ಇತ್ತೀಚೆಗೆ ಹೊರಬಂದ ಡಾ. ನಿತ್ಯಾನಂದ ಬಿ ಶೆಟ್ಟಿಯವರ ಅಳವು ಅರಿಯದ ಭಾಷೆ: ಕಲೆ, ಸಮಾಜ, ಇತಿಹಾಸ ಪುಸ್ತಕ ಕನ್ನಡದ ಬೌದ್ಧಿಕ ವಲಯದಲ್ಲಿ ಚರ್ಚೆಗೆ ಒಳಗಾಗುತ್ತಿದೆ. ಯಕ್ಷಗಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಕರಾವಳಿಯ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳನ್ನು, ಬಿಕ್ಕಟ್ಟುಗಳನ್ನು ಗ್ರಹಿಸಿಕೊಳ್ಳುವ ಪ್ರಯತ್ನವನ್ನು ಈ ಪುಸ್ತಕ ಮಾಡುತ್ತದೆ. ಪ್ರಕಟಣೆಗೆ ಮುನ್ನ ಪುಸ್ತಕದ ಕರಡನ್ನು ಓದಿದ್ದ





