ಇತ್ತೀಚೆಗೆ ಕಮಲ್ ಹಾಸನ್ ಅವರು ಕನ್ನಡವು ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಅದನ್ನು ಹಿನ್ನೆಲೆಯಲ್ಲಿಟ್ಟುಕೊಂಡು, ಗತಕಾಲದ ಬಗ್ಗೆ ನಮಗಿರುವ ಅಸಹಜ ವ್ಯಾಮೋಹವನ್ನೂ ಅದು ಉಂಟುಮಾಡುವ ಬಿಕ್ಕಟ್ಟುಗಳನ್ನೂ ಸಂಕೇತ ಪಾಟೀಲ ಈ ಸುದೀರ್ಘ ಪ್ರಬಂಧದಲ್ಲಿ ಚರ್ಚಿಸಿದ್ದಾರೆ.
1
ಆಧುನಿಕ ಮಾನವನೆಂದು (Anatomically Modern Humans /Homo Sapiens) ಕರೆಸಿಕೊಳ್ಳುವ ನಮ್ಮ ಪ್ರಭೇದವು ಪಾರ್ಥೇನಿಯಂ ಕಳೆಗಿಂತಲೂ ಆಕ್ರಾಮಕವಾಗಿ ಹರಡಿ ಇಡೀ ಭೂಮಿಯನ್ನು ಆವರಿಸಿಕೊಂಡು ಸೃಷ್ಟಿಯಲ್ಲಿಯೇ ಅತ್ಯಂತ ಯಶಸ್ವಿ ಪ್ರಭೇದವೆಂಬ ಅಗ್ಗಳಿಕೆ ಪಡೆದಿದ್ದರೂ ತಳಿಶಾಸ್ತ್ರಜ್ಞರು ನಮ್ಮನ್ನು ಒಂದು “ಸಣ್ಣ ಪ್ರಭೇದ”ವೆಂದು ಪರಿಗಣಿಸುತ್ತಾರೆ. ಇದಕ್ಕೆ ಕಾರಣ, ಮಾನವರಲ್ಲಿ ಆನುವಂಶಿಕ ವ್ಯತ್ಯಾಸದ ಪ್ರಮಾಣವು ತೀರ ಕಡಿಮೆಯಾಗಿರುವುದು. ವ್ಯಕ್ತಿಗತ ನೆಲೆಯಲ್ಲಿ ಆನುವಂಶಿಕ ವ್ಯತ್ಯಾಸಗಳು ಇದ್ದೇ ಇರುತ್ತವೆ. ಯಾವುದೇ ಇಬ್ಬರು ವ್ಯಕ್ತಿಗಳು ತದ್ರೂಪಿಗಳಾಗಿರುವುದಿಲ್ಲವಾದರೂ ಅವರಿಬ್ಬರ ಡಿಎನ್ಎದ ಮೂಲ ಜೋಡಿಗಳ ನಡುವಣ ವ್ಯತ್ಯಾಸ ಸುಮಾರು 0.1%ನಷ್ಟು ಮಾತ್ರ. ಇಷ್ಟು ಕಡಿಮೆ ಮಟ್ಟದ ವ್ಯತ್ಯಾಸಗಳು ಸಾಮಾನ್ಯವಾಗಿ ಬಹಳ ಚಿಕ್ಕ ಜನಸಂಖ್ಯೆಯನ್ನು ಹೊಂದಿರುವ ಪ್ರಭೇದಗಳಲ್ಲಿ ಕಂಡುಬರುತ್ತವೆ. ನಮ್ಮ ಹತ್ತಿರದ ಬಂಧುಗಳಾದ ಚಿಂಪಾಂಜ಼ಿಗಳನ್ನು ನೋಡೋಣ: ಸೃಷ್ಟಿಯಲ್ಲಿ ಚಿಂಪಾಂಜ಼ಿಗಳ ಸಂಖ್ಯೆ ಬಹಳವೆಂದರೆ 250ರಿಂದ 300 ಸಾವಿರದಷ್ಟು; ನಾವೋ 8 ಶತಕೋಟಿ ಸಮೀಪಿಸುತ್ತಿದ್ದೇವೆ. ಎಂದರೆ, ಭೂಮಿಯ ಮೇಲಿರುವ ಪ್ರತಿ ಚಿಂಪಾಜ಼ಿಗೆ ಸಾಟಿಯಾಗಿ 30 ಸಾವಿರ ಮಾನವರಿದ್ದಾರೆ. ಹಾಗಿದ್ದೂ ಚಿಂಪಾಂಜ಼ಿ ಮತ್ತು ಉಳಿದ ಪ್ರೈಮೇಟ್ಗಳಲ್ಲಿ ಕಂಡುಬರುವ ಆನುವಂಶಿಕ ವ್ಯತ್ಯಾಸಗಳು ಹೋಲಿಕೆಯಲ್ಲಿ ನಮಗಿಂತ ಗಮನಾರ್ಹವಾಗಿ ಹೆಚ್ಚು! ಅಷ್ಟೇ ಏಕೆ, 16 ಪ್ರಭೇದಗಳನ್ನು ಹೊಂದಿರುವ ಪಾರ್ಥೇನಿಯಂ ಕೂಡ ನಮಗಿಂತ ಹೆಚ್ಚು ವೈವಿಧ್ಯಮಯ.


ಮಾನವರಲ್ಲಿ ಆನುವಂಶಿಕ ವ್ಯತ್ಯಾಸಗಳು ಕಡಿಮೆಯಿರುವುದಕ್ಕೆ ಸ್ಪಷ್ಟ ಕಾರಣಗಳಿವೆ. ವಿಕಾಸದ ಚರಿತ್ರೆಯ ಕೆಲವು ಕಾಲಬಿಂದುಗಳಲ್ಲಿ ನಾವು ಪರಿಸರವು ತಂದೊಡ್ಡಿದ ಇರ್ಕಟ್ಟುಗಳ (ಇವಕ್ಕೆ population bottleneck ಎನ್ನುತ್ತಾರೆ) ಮೂಲಕ ಹಾದುಬರಬೇಕಾಯಿತು.1 ಇಂಥ ಒಂದು ಇರ್ಕಟ್ಟಿಗೆ ಸಿಲುಕಿ ಬಹಳಷ್ಟು ಕುಗ್ಗಿದ್ದ ಮಾನವ ಜನಸಂಖ್ಯೆಯು ಅದರಿಂದ ಹೊರಬಂದ ನಂತರ ಮತ್ತೆ ಹಿಗ್ಗತೊಡಗಿತು. ಕೃಷಿಯ ಹುಟ್ಟು ಮತ್ತು ಹರಡುವಿಕೆಯ ನಂತರ ಅದು ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ನಾವೆಲ್ಲರೂ — ಎಂದರೆ ಜಗತ್ತಿನ ಮಾನವಸಂಕುಲವೆಲ್ಲ — ಪೂರ್ವ ಆಫ್ರಿಕಾದ ಯಾವುದೋ ಪ್ರದೇಶದಿಂದ (ಪ್ರಾಯಶಃ ದಕ್ಷಿಣ ಇಥಿಯೋಪಿಯಾ) ಸುಮಾರು 70 ಸಾವಿರ ವರ್ಷಗಳ ಹಿಂದೆ ವಲಸೆ ಹೊರಟಿದ್ದ ಆದಿಮ ಹೆಂಗಸರು ಮತ್ತು ಗಂಡಸರ ಒಂದು ಸಣ್ಣ ಗುಂಪಿನ ಸಂತತಿ. ನಾವೊಂದು ಸಣ್ಣ ಆರಂಭಿಕ ಜನಸಮೂಹದಿಂದ ಉಗಮಗೊಂಡವರು; ಅಲ್ಲದೇ, ಇಲ್ಲಿ ಬಹುಕಾಲದದಿಂದ ಇದ್ದವರೂ ಅಲ್ಲ. (ಜೀವವಿಕಾಸದ ಕಾಲಕ್ರಮದಲ್ಲಿ ಹತ್ತಾರು, ಅದೇಕೆ, ನೂರಾರು ಸಾವಿರ ವರ್ಷಗಳ ಅವಧಿ ಕೂಡ ತೀರ ಕಿರಿದಾದುದು.) ಹೆಚ್ಚಿನ ಆನುವಂಶಿಕ ವೈವಿಧ್ಯವನ್ನು ಹೊಂದಲು ತಕ್ಕಷ್ಟು ಅವಕಾಶ ನಮಗಿನ್ನೂ ಸಿಕ್ಕಿಲ್ಲ. ಹೀಗಾಗಿ, ನಮ್ಮದು ಗಾತ್ರದಲ್ಲಿ ಹಿರಿದಾದರೂ ಸ್ವರೂಪದಲ್ಲಿ ಕಿರಿದಾದ ಪ್ರಾಣಿಜಾತಿ.
ಇದೆಲ್ಲದರ ಅರ್ಥವೇನು? ಪ್ರಸ್ತುತತೆಯೇನು? ನಮ್ಮ ಸುತ್ತಲೂ ಇರುವ ವೈವಿಧ್ಯ ಸುಳ್ಳೇ? ಅಲ್ಲ. ಆದರೆ, ವಿವಿಧ ಸಮುದಾಯಗಳ ನಡುವಣ ಎದ್ದುಕಾಣುವ ದೈಹಿಕ ಮತ್ತು ಜನಾಂಗೀಯ ವ್ಯತ್ಯಾಸಗಳು ಉಂಟಾದದ್ದು ಹವಾಮಾನದ ಏರುಪೇರು, ಭೌಗೋಳಿಕ ಲಕ್ಷಣಗಳು ಮೊದಲಾದ ನಮಗೆ ಹೊರತಾದ ಪಾರಿಸರಿಕ ಅಂಶಗಳಿಂದ. ನಮ್ಮ ಸಾಂಸ್ಕೃತಿಕ ಮತ್ತು ಭಾಷಿಕ ಪರಂಪರೆಯು ಚಾರಿತ್ರಿಕ ಆಕಸ್ಮಿಕಗಳ ಸರಣಿಯ ಪಡಿನೆಳಲು. ನಾಡು-ನುಡಿ-ಜಾತಿ-ಮತ-ಪಂಥಗಳನ್ನು ಒಟ್ಟುಗೂಡಿಸಿ ನಾವು ಕಟ್ಟಿಕೊಂಡಿರುವ ನಮ್ಮ ಅಸ್ಮಿತೆ ಎನ್ನುವುದು ಯಾದೃಚ್ಛಿಕ ಘಟನೆ ವಿಘಟನೆಗಳ ಮೊತ್ತ. ಹೆಚ್ಚೇನಲ್ಲ. ಕೆಲವನ್ನು ನಾವು ಸ್ವಾಭಾವಿಕವಾಗಿ ಪಡೆದಿದ್ದರೆ ಉಳಿದುವು ನಾವು ಕಟ್ಟಿಕೊಂಡುವು. ಅದೇನೇ ಇದ್ದರೂ ಇವೆಲ್ಲವೂ ಮೇಲುಮೇಲಿನವು. ಆಳದಲ್ಲಿ ನಾವೆಲ್ಲರೂ ಹೆಚ್ಚೂಕಡಿಮೆ ಒಂದೇ.
ವಾಸ್ತವದಲ್ಲಿ ಇದು ನಮಗೆ ಸಾಂತ್ವನವನ್ನೂ ಮಾನವತೆಯ ಕುರಿತ ಭರವಸೆಯನ್ನೂ ಕೊಡಬೇಕು. ಜೊತೆಗೇ, ಅರೆಗಳಿಗೆಯಾದರೂ ನಮ್ಮನ್ನು ಮಾನವಕೇಂದ್ರಿತ (anthropocentric) ದೃಷ್ಟಿಕೋನದಿಂದ ಅಲುಗಿಸಬೇಕು.
ಈ ಬರಹವು ಮಾನವನ ವಿಶಿಷ್ಟತೆಯನ್ನಾಗಲೀ ಸಾಧನೆಯನ್ನಾಗಲೀ ನಮ್ಮ ಸೃಷ್ಟಿಶೀಲತೆಯ ಆಳ ಹರಹುಗಳನ್ನೇ ಆಗಲೀ; ಈ ವಿಶಾಲ ಸಂಕೀರ್ಣ ಜಗತ್ತಿನಲ್ಲಿ ವ್ಯಕ್ತಿಯೊಬ್ಬನನ್ನು ನೆಲೆಗೊಳ್ಳಿಸಲು ಅನುವಾಗುವ ಅವನು ಕಟ್ಟಿಕೊಂಡ (ಅಥವಾ ಪಾರಂಪರಿಕವಾಗಿ ಪಡೆದುಕೊಂಡ) ಅಸ್ಮಿತೆಯ ಉಪಯುಕ್ತತೆಯನ್ನಾಗಲೀ ಕಡಿಮೆ ಮಾಡಿ ತೋರಿಸುವ ಉದ್ದೇಶವನ್ನು ಹೊಂದಿಲ್ಲ. ಅವು ಮಹತ್ವದವೇ. ಆದರೆ, ಅವಕ್ಕೆ ಅತಿಯಾದ ಹಿರಿಮೆಯನ್ನು ಆರೋಪಿಸುವುದೂ ಅನಗತ್ಯ: ಒಟ್ಟಾರೆ ಸೃಷ್ಟಿಯ ಹಳಮೆ, ಅಗಾಧತೆ ಮತ್ತು ಬಹುಳತೆಯ ಹೋಲಿಕೆಯಲ್ಲಿ ನಾವು ಯಾರೂ ಹಳಬರೂ ಶ್ರೇಷ್ಠರೂ ವಿಶಿಷ್ಟರೂ ಅಲ್ಲ.
ಇದನ್ನೆಲ್ಲ ಗಮನದಲ್ಲಿರಿಸಿಕೊಂಡು ಯೋಚಿಸಿದಾಗ, ಒಂದರೆ ಸಾವಿರವೋ ಒಂದೆರಡು ನೂರೋ ಅಥವಾ ಅಷ್ಟೂ ಹಿಂದುಮುಂದಲ್ಲದ (ಮತ್ತಿನ್ನು ಇಂಥವನ್ನು ಪ್ರತಿಪಾದಿಸಲು ಬಳಸುವ ಬಹಳಷ್ಟು ಪುರಾವೆಗಳು ಗಟ್ಟಿನೆಲೆಯ ಮೇಲೆ ನಿಂತಿರದೇ ಪ್ರಶ್ನಾರ್ಹವೂ ಆಗಿರುವ) ಸಂಸ್ಕೃತ, ತಮಿಳು, ಕನ್ನಡದಂಥ ನುಡಿಗಳ ಹಳಮೆಯ ಪ್ರಶ್ನೆಯನ್ನು ಆಗಾಗ ಮುಂದಕ್ಕೆ ತಂದು ಆ ಹುಸಿ ಮಲ್ಲಯುದ್ಧದ ಅಖಾಡಾಕ್ಕೆ ಸಾಮಾನ್ಯ ಜನರಷ್ಟೇ ಅಲ್ಲದೇ ಸಂಘಸಂಸ್ಥೆಗಳು, ಸರಕಾರಗಳು, ಕೋರ್ಟುಗಳು ಉಳಿದೆಲ್ಲ ಕೆಲಸಗಳನ್ನು ಕೈಬಿಟ್ಟು ಧುಮ್ಮಿಕ್ಕುವುದು ಪ್ರಹಸನವಲ್ಲದೇ ಮತ್ತೇನು?
2
ಮೇಲೆ ಹೇಳಿದ ಆಫ್ರಿಕಾದಿಂದ ಆದ ಮೊದಲ ವಲಸೆಯಲ್ಲದೇ ಕಳೆದ ಹತ್ತು ಸಾವಿರ ವರ್ಷಗಳ ಅವಧಿಯಲ್ಲಿ ಭಾರತ ಉಪಖಂಡಕ್ಕೆ ಮೂರು ಪ್ರಮುಖ ವಲಸೆಗಳಾಗಿವೆ. ಅವಲ್ಲದೇ ಹತ್ತಾರು ಸಣ್ಣಪುಟ್ಟ ವಲಸೆಗಳಾಗಿವೆ. ನಮ್ಮ ದೇಶದ ನಾಗರಿಕತೆ, ಜನಸಮುದಾಯಗಳ ಆನುವಂಶಿಕತೆಯ ವಿತರಣೆ, ಸಂಸ್ಕೃತಿ ಮತ್ತು ಭಾಷೆಗಳನ್ನು ರೂಪಿಸುವಲ್ಲಿ ಇವೆಲ್ಲವೂ ಪಾತ್ರ ವಹಿಸಿವೆ. ವಲಸೆ ಮತ್ತು ಜನಸಮುದಾಯಗಳ ಸಂಕರದ ಪರಿಣಾಮವಾಗಿ ಭಾರತದಲ್ಲಿ ನಾಲ್ಕು ಪ್ರಮುಖ ಭಾಷಾ ಕುಟುಂಬಗಳಿವೆ: (1) ದ್ರಾವಿಡ, (2) ಇಂಡೋ-ಆರ್ಯನ್, (3) ಟಿಬೆಟೋ-ಬರ್ಮನ್, ಮತ್ತು (4) ಆಸ್ಟ್ರೋಏಷ್ಯಾಟಿಕ್. ಇವಲ್ಲದೇ ಅಂಡಮಾನಿನ ಭಾಷೆಗಳು (ಇವು ಮೊಟ್ಟಮೊದಲ ಆಫ್ರಿಕನ್ ವಲಸಿಗರ ಭಾಷೆಗಳು) ಮತ್ತು ಕೆಲವು ಒಬ್ಬೊಂಟಿ ನುಡಿಗಳೂ ಭಾರತದಲ್ಲಿವೆ.
ಇಂದಿನಿಂದ ಸುಮಾರು 9000 ವರ್ಷಗಳ ಹಿಂದೆ (ಎಂದರೆ, ಸಾಮಾನ್ಯ ಶಕ ಪೂರ್ವ 7000ರ ಸುಮಾರು), ಈಗಿನ ಇರಾನ್, ಇರಾಕ್ ಮತ್ತು ಟರ್ಕಿ ದೇಶಗಳಗುಂಟ ಇರುವ ಜ಼ಾಗ್ರೋಸ್ ಬೆಟ್ಟಸಾಲುಗಳಿಂದ ವಲಸೆ ಹೊರಟ ಕುರಿಮಂದೆಯವರ ಸಮುದಾಯಗಳು ಬಲೂಚಿಸ್ತಾನ್ ಮೂಲಕ ಉಪಖಂಡದ ವಾಯವ್ಯಭಾಗವನ್ನು ತಲುಪಿ, ಇವರಿಗಿಂತ ಸುಮಾರು ಐವತ್ತು ಸಾವಿರ ವರ್ಷಗಳ ಮೊದಲು ಆಫ್ರಿಕಾದಿಂದ ಬಂದು ನೆಲೆನಿಂತಿದ್ದ ಮೊದಲ ಭಾರತೀಯರ ಜೊತೆ ಒಡನಾಡಿ ಹರಪ್ಪ ನಾಗರಿಕತೆಗೆ ನಾಂದಿ ಹಾಡಿದರು ಎಂಬ ಊರ್ಜಿತ ಸಿದ್ಧಾಂತವಿದೆ. ಸಿಂಧೂ ಕಣಿವೆಯಲ್ಲಿ ಆಡಲಾಗುತ್ತಿದ್ದ ಭಾಷೆಗಳ ಕುರಿತು ನಮಗೆ ಹೆಚ್ಚು ತಿಳಿದುಬಂದಿಲ್ಲ. ಅವರು ಆದಿಮ ದ್ರಾವಿಡ (Proto-Dravidian) ನುಡಿಯೊಂದನ್ನು ಆಡುತ್ತಿದ್ದರು ಎಂದು ಊಹಿಸಲಾಗಿದೆ. ಆ ಮೂಲನುಡಿಯು ಹಲವು ಕವಲುಗಳಾಗಿ ಒಡೆದು ಕಾಲಕ್ರಮೇಣ ಇಂದಿನ ದ್ರಾವಿಡ ನುಡಿಗಳಾಗಿ ಬೆಳೆದುವು ಎನ್ನಲಾಗಿದೆ. ಇದು ಹಲಬಗೆಯ ಪುರಾತತ್ವಶಾಸ್ತ್ರದ, ಭಾಷಿಕ ಮತ್ತು ಆನುವಂಶಿಕ ಪುರಾವೆಗಳನ್ನೂ ತರ್ಕಗಳನ್ನೂ ಆಧರಿಸಿದೆ. ಈ ಪ್ರಶ್ನೆಗೆ ಸಂಬಂಧಿಸಿದಂತೆ ಸಕ್ರಿಯವಾದ ಸಂಶೋಧನೆ ಇನ್ನೂ ನಡೆಯುತ್ತಿದೆ. ಹಾಗಾಗಿ ಇದರ ಕುರಿತಾದ ನಮ್ಮ ತಿಳಿವಳಿಕೆಯು ಮುಂದೆ ಬದಲಾಗಲೂಬಹುದು.
ದ್ರಾವಿಡ ಭಾಷಾ ಕುಟುಂಬವನ್ನು ಭೌಗೋಳಿಕತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ತೆಲುಗನ್ನು ಹೊರತುಪಡಿಸಿ ದಕ್ಷಿಣ ಭಾರತದ ಉಳಿದ ಬಹುತೇಕ ಭಾಷೆಗಳು ದಕ್ಷಿಣ ದ್ರಾವಿಡ (South Dravidian) ಗುಂಪಿಗೆ ಸೇರಿದುವು. ಈ ಗುಂಪಿನ ಎರಡು ಕವಲುಗಳು: ತಮಿಳ್ಗನ್ನಡ ಮತ್ತು ತುಳು. 3500 ವರ್ಷಗಳಷ್ಟು ಹಿಂದೆ, ಎಂದರೆ, ಸಾಮಾನ್ಯ ಶಕ ಪೂರ್ವ 1500ರ ಸುಮಾರು ಇವು ಮೂರು ಭಾಷೆಗಳಾಗಿ ಬೇರ್ಪಡತೊಡಗಿ ಮುಂದಿನ ಸಾವಿರ ವರ್ಷಗಳಲ್ಲಿ ಸ್ವತಂತ್ರ ಅಸ್ತಿತ್ವವನ್ನು ಹೊಂದಿದುವು ಎನ್ನಲಾಗಿದೆ. ಈ ಪ್ರಕ್ರಿಯೆ ಮುಂದುವರಿದು ಕಾಲಾನಂತರ ಕೋಟ, ತೋಡ, ಕೊಡವ, ಇರುಳ ಮೊದಲಾದುವು ತಮಿಳ್ಗನ್ನಡ ಕವಲಿನಿಂದ ಬೇರ್ಪಟ್ಟುವು; ಹೋಲಿಕೆಯಲ್ಲಿ ಇತ್ತೀಚೆಗೆ ಮಲಯಾಳವು ತಮಿಳಿನಿಂದ ಬೇರ್ಪಟ್ಟು ಪ್ರತ್ಯೇಕ ಭಾಷೆಯಾಗಿ ಗುರುತಿಸಿಕೊಂಡಿತು.
ಇಂಥ ಭಾಷಿಕ ಪ್ರಕ್ರಿಯೆಗಳು ಆಗುವುದು ನಮಗೆ ಗೊತ್ತಿರುವ ಮತ್ತು ಗೊತ್ತಿರದ ಹಲವು ಕಾರಣಗಳಿಂದ. ಮೊದಲಿನ ನುಡಿಯೊಂದು ಕವಲೊಡೆದು ಯಾವುದೋ ಘಟ್ಟದಲ್ಲಿ ಅವು ಹಲವು ನುಡಿಗಳಾಗಿ ಬೇರ್ಪಟ್ಟವು ಎಂದು ಹೇಳಬಹುದೇ ಹೊರತು ಒಂದು ಇನ್ನೊಂದರಿಂದ “ಹುಟ್ಟಿತು” ಎನ್ನುವುದು ಅಸಮಂಜಸ. ನುಡಿಗಳ ವಿಷಯದಲ್ಲಿ ನೇರಾನೇರ “ತಾಯಿ-ಮಗಳು” ಸಂಬಂಧ ಇರುವುದಿಲ್ಲ — ಅದೊಂದು ಆಕರ್ಷಕ, ರಮ್ಯ ಕಲ್ಪನೆಯಷ್ಟೇ. ಒಂದೇ ಕುಟುಂಬಕ್ಕೆ ಸೇರಿದ ಭಾಷೆಗಳ ಮೇಲೆ ಬೇರೆ ಭಾಷಾಕುಟುಂಬಗಳ ತಳಪದರದ ಪ್ರಭಾವ (substratum influence) ವಿಭಿನ್ನ ಪ್ರಮಾಣದಲ್ಲಿ ಆಗಿರುತ್ತದೆ. ಅಲ್ಲದೇ ಪ್ರತಿಯೊಂದು ಭಾಷೆಯೂ ತನ್ನದೇ ವಿಕಾಸದ ಹಾದಿಯನ್ನೂ ವೇಗವನ್ನೂ ಕಂಡುಕೊಂಡಿರುತ್ತದೆ. ಹಾಗಾದಾಗ, ಕೆಲವು ಅವುಗಳ ಮೂಲನುಡಿಗೆ ಉಳಿದುವುಕ್ಕಿಂತ ಹೆಚ್ಚು ಹತ್ತಿರವಿರಲು ಸಾಧ್ಯ. ಸಂಶೋಧಕರು ಮರುನಿರ್ಮಿಸಿದ ಆದಿಮ ದ್ರಾವಿಡ ನುಡಿಗೆ ಇಂದಿನ ಉಳಿದೆಲ್ಲ ದ್ರಾವಿಡ ನುಡಿಗಳಿಗಿಂತ ತಮಿಳು ಹೆಚ್ಚು ಹತ್ತಿರ ಎನ್ನುವುದು ಬಹುತೇಕ ಎಲ್ಲರೂ ಒಪ್ಪಿದ ವಾಸ್ತವ.2 ಹಾಗೆಂದು, ತಮಿಳು ಎಲ್ಲಕ್ಕಿಂತ ಹಳೆಯದು ಎನ್ನುವ ಹಕ್ಕುಸಾಧನೆಗೆ ಹೆಚ್ಚಿನ ಅರ್ಥವಿಲ್ಲ. ತಾರ್ಕಿಕವಾಗಿ ಯೋಚಿಸಿದಾಗ ಕನ್ನಡವು ತಮಿಳಿನಿಂದ ಹುಟ್ಟಿದ್ದಲ್ಲ; ಮಲಯಾಳ ಕೂಡ ಅಲ್ಲ ಎಂಬ ವಾಸ್ತವ ತಿಳಿದುಬರುತ್ತದೆ. ಇದೇ ರೀತಿಯಲ್ಲಿ ಸಂಸ್ಕೃತವು (ಭಾರತದ) ಎಲ್ಲ ಭಾಷೆಗಳ ಮೂಲ ಎನ್ನುವುದಂತೂ ಸುಳ್ಳು. ಅದು ಇಂಡೋ-ಆರ್ಯನ್ ಭಾಷೆಗಳ ತಾಯಿಯಾದರೂ ಹೌದು ಎಂಬಂಥ ಮಾತುಗಳೂ ಪ್ರಶ್ನಾರ್ಹ.
ಮೇಲೆ ಹೇಳಿದ್ದರಲ್ಲಿ ಹೊಸದೇನೂ ಇಲ್ಲ. ಇವು ಈಗಾಗಲೇ ನಮಗೆ ಗೊತ್ತಿರದಿದ್ದರೂ ಕೆಲ ಕಾಲ ಆಲೋಚಿಸಿದರೆ ಸ್ಪಷ್ಟವಾಗುವಂಥವು. ಅಥವಾ ಹತ್ತಾರು ನಿಮಿಷಗಳ ಗೂಗಲಿಕೆಯಲ್ಲೋ AI ಹರಟೆಮಲ್ಲರೊಂದಿಗಿನ ಅರೆಗಳಿಗೆಯ ಸಲ್ಲಾಪದಲ್ಲಿಯೋ ತಿಳಿದುಬರುವಂಥವು. ಹಾಗಿದ್ದೂ ಪದೇಪದೇ ಈ ಪ್ರಶ್ನೆಗಳು ಏಳುವುದೇಕೆ? ಅವು ವಿವಾದಗಳಾಗಿ ಜಗಳಕ್ಕೆ ತಿರುಗಿ ಜನಸಾಮಾನ್ಯರಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುವುದೇಕೆ?
3
ಮೊದಲಿಗೆ ನಮ್ಮ ಚಿಂತನಾಕ್ರಮದಲ್ಲಿನ ಕೆಲವು ಸಮಸ್ಯೆಗಳನ್ನು ಗುರುತಿಸೋಣ. ಮಾನವನಿಗೆ ಭಾಷೆಯ ಬಳಕೆ ಸಹಜವಾದರೂ ಹಲಪದರಗಳ ಆ ಸಂಕೇತ ವ್ಯವಸ್ಥೆಯ ಗ್ರಹಿಕೆಯಲ್ಲಿ, ಅದರ ಒಟ್ಟಾರೆ ಸ್ವರೂಪವನ್ನು ಅರ್ಥೈಸಿಕೊಳ್ಳುವುದರಲ್ಲಿ ಗೊಂದಲಗಳಿರುವುದು ಅಸಹಜವೇನಲ್ಲ. ನುಡಿಯೆಂಬುದರ ನೆಲೆ ಯಾವುದು ಎನ್ನುವುದರ ಬಗ್ಗೆ ಬಹಳಷ್ಟು ಜನರಿಗೆ ಸ್ಪಷ್ಟತೆಯಿರುವುದಿಲ್ಲ. ಒಂದು ಉದಾಹರಣೆಯೆಂದರೆ, ಬರೆಹದ ಲಿಪಿಗೂ ನುಡಿಗೂ ಬಿಗಿಯಾದ ಬಂಧವಿದೆ ಎಂದುಕೊಳ್ಳುವುದು. ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಸಾಮ್ಯತೆಯಿರುವುದರಿಂದ ಕನ್ನಡವು (ತಮಿಳಿಗಿಂತ) ತೆಲುಗಿಗೆ ತೀರ ಹತ್ತಿರ ಎಂಬ ತಪ್ಪು ತಿಳಿವಳಿಕೆಯಿದೆ.3 ವಾಸ್ತವದಲ್ಲಿ ಅವೆರಡೂ ಬೇರೆಬೇರೆ ಉಪಕುಟುಂಬಗಳಿಗೆ ಸೇರಿದಂಥವು. ಇನ್ನೂ ಮುಂದುವರೆದು, ಭಾರತದ ಎಲ್ಲ ಲಿಪಿಗಳೂ ಬ್ರಾಹ್ಮೀ ಮೂಲದವು, ಹೀಗಾಗಿ ಆ ಭಾಷೆಗಳ ಮೂಲವೂ ಒಂದೇ, ಎಂಬರ್ಥದ ವಾದಗಳೂ ಆಗಾಗ ಎದುರಾಗುತ್ತವೆ.4 ವಾಸ್ತವದಲ್ಲಿ, ಭಾಷೆಗಳು ಮೊದಲು ಹುಟ್ಟಿ, ಆಡುಮಾತಿನಲ್ಲಿ ಮತ್ತು ಮೌಖಿಕ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದು ಎಷ್ಟೋ ಕಾಲದ ನಂತರ ಬರವಣಿಗೆಗೆ ಬರುವುದು ಸಾಮಾನ್ಯ ವಿದ್ಯಮಾನ. ಭಾಷೆಯ ಧ್ವನಿ ಸಂಕೇತಗಳನ್ನು ಬರಹ ರೂಪದಲ್ಲಿ ಗುರುತಿಸಬೇಕಾಗಿ ಬಂದಾಗ ಲಿಪಿಗಳು ವಿಕಾಸ ಹೊಂದುತ್ತವೆ. ಅಲ್ಲದೇ ಒಂದು ಭಾಷೆಯನ್ನು ಬೇರೆ ಬೇರೆ ಕಾಲಾವಧಿಗಳಲ್ಲಿ ಮತ್ತು ಪ್ರದೇಶಗಳಲ್ಲಿ ಬೇರೆ ಬೇರೆ ಲಿಪಿಗಳನ್ನು ಬಳಸಿ ಬರೆಯುವುದೂ ಸಾಮಾನ್ಯ. ಒಟ್ಟಿನಲ್ಲಿ, ಒಂದು ಭಾಷೆಗೂ ಲಿಪಿಗೂ ಸಡಿಲವಾದ ಸಂಬಂಧವಿರುತ್ತದೆ.
ಇದಕ್ಕೂ ಗೊಂದಲಮಯವಾದ ಚಿಂತನೆ ಪದನೆರಕೆಗೆ (vocabulary) ಸಂಬಂಧಿಸಿದ್ದು. ಇತ್ತೀಚೆಗೆ ಕಮಲ್ ಹಾಸನ್ ಕನ್ನಡವು ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿದ ಬೆನ್ನಲ್ಲೇ ಭೈರಪ್ಪನವರು ಕನ್ನಡ ಭಾಷೆಯಲ್ಲಿ 60% ಸಂಸ್ಕೃತ ಪದಗಳಿರುವುದರಿಂದ (ಈ ಪ್ರಮಾಣ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ!) ಅದು ಸಂಸ್ಕೃತದಿಂದ ಹುಟ್ಟಿದ್ದು ಎಂಬ ತಮ್ಮ ಎಂದಿನ ಫರ್ಮಾನು ಹೊರಡಿಸಿದರು.5 ನುಡಿಯು ಸಂಭವಿಸುವುದು ಅದರ ಪದಗಳ ಮೂಲಕವೇ ಮತ್ತು ಪದನೆರಕೆಯ ಸದ್ಯದ ಚೌಕಟ್ಟಿನಲ್ಲೇ ಎನ್ನುವುದು ಹೌದಾದರೂ ನುಡಿಯ ಮೂಲಕ್ಕೂ ಅದರಲ್ಲಿನ ಬಹಳಷ್ಟು ಪದಗಳ ಮೂಲಕ್ಕೂ ಯಥಾರ್ಥ ಸಂಬಂಧವಿಲ್ಲ. ಒಂದು ನುಡಿಯ ಪದನೆರಕೆಯು ನೆಲೆಗೊಂಡದ್ದಲ್ಲ: ಹಳೆಯ ಪದಗಳು ಕಳೆದುಹೋಗುತ್ತವೆ, ಅರ್ಥಪಲ್ಲಟಕ್ಕೆ ಒಳಗಾಗುತ್ತವೆ; ಸಂಪರ್ಕಕ್ಕೆ ಬಂದ ಬೇರೆ ನುಡಿಗಳಿಂದ ಹೊಸ ಪದಗಳು ಕೂಡಿಕೊಳ್ಳುತ್ತವೆ. ಈ ಬದಲಾವಣೆಗೆ ನುಡಿಗಳು ಮತ್ತು ಅವುಗಳ ಆಡುಗರಿಗೆ ಹೊರತಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯಪ್ರೇರಿತ ಅಂಶಗಳೂ ತಳುಕುಹಾಕಿಕೊಂಡಿರುತ್ತವೆ. ಅಷ್ಟೇ ಅಲ್ಲದೇ, ನುಡಿಕಸುವನ್ನು ನಾವು ಸಹಜವಾಗಿ ಪಡೆದಿದ್ದರೂ ಪದಸಂಪತ್ತು ರೂಢಿಸಿಕೊಂಡದ್ದು; ನಾವಿರುವ ಪರಿಸ್ಥಿತಿ ಮತ್ತು ನಮಗೆ ಒಡ್ಡಲಾದ ಸಂದರ್ಭಗಳಿಗೆ ಅನುಗುಣವಾದದ್ದು.
ಬೆಂಗಳೂರಿನಲ್ಲಿ ಹುಟ್ಟಿಬೆಳೆದವರ ಕನ್ನಡವು 50% ಇಂಗ್ಲಿಷ್, 25% ದ್ರಾವಿಡ, 15% ಸಂಸ್ಕೃತ, ಮತ್ತು ಇನ್ನುಳಿದಂತೆ ಉರ್ದು, ಫಾರ್ಸಿ, ಕೊರಿಯನ್, ಜಾಪನೀಸ್ ಮೊದಲಾದ ಮೂಲದ್ದು ಎಂದೆಲ್ಲ ಹೇಳಲಾದೀತೇ? ಸುಶಿಕ್ಷಿತರಾದ ನಾವು ಹಣಕಾಸಿಗೆ ಸಂಬಂಧಿಸಿದಂತೆ, ಬ್ಯಾಂಕಿನಲ್ಲಿ ಡೆಪಾಸಿಟ್, accountಗೆ transfer, UPI ಮಾಡುವುದು, ಮೊದಲಾದ ಪದಗಳನ್ನು ಬಳಸುತ್ತೇವೆ. ಇಂಥ ಅಮೂರ್ತ ವ್ಯವಹಾರಗಳನ್ನು (ರೂಢಿಗತ ಅರ್ಥದಲ್ಲಿ) ಅಶಿಕ್ಷಿತನಾದ ನಮ್ಮೂರ ರೈತ ತನ್ನ ಅಚ್ಚಕನ್ನಡದಲ್ಲಿ ನಿಖರವೂ ಮೂರ್ತವೂ ಆಗಿ ಮಾಡಿಕೊಳ್ಳುತ್ತಾನೆ: ನಗದು ಇದ್ದಲ್ಲಿ ಅದನ್ನು ಯಾರದೋ ಕೈಗೆ ‘ಕೊಡು’ವುದು ಇಲ್ಲಾ ‘ಕೊಟ್ಟು ಕಳಿಸು'ವುದು; ಬ್ಯಾಂಕಿಗೇ ಹೋದರೆ ಅಲ್ಲಿ ಹಣ ‘ಕಟ್ಟು'ವುದು; ದೂರದಿಂದಲಾದರೆ ಖಾತೆಗೆ ‘ಹಾಕು’ವುದು; ಮತ್ತಿನ್ನು — ಕಳೆದ ಕೆಲವು ವರ್ಷಗಳಲ್ಲಿ — ಫೋನ್ಪೇ ಮೂಲಕವಾದರೆ ಫೋನಿನಲ್ಲಿ ಇಂತಿಷ್ಟು ಹಣವನ್ನು ‘ಬಿಡು’ವುದು; ಹೀಗೆ ಬಳಸುತ್ತಾನೆ. ಎಂದರೆ, ಅಗತ್ಯಕ್ಕೆ ತಕ್ಕಂತೆ ಪದಗಳನ್ನು ಮರುಬಳಸುವ, ಎರವಲುಪಡೆಯುವ, ಇಲ್ಲವೇ ಹೊಸದಾಗಿ ಕಟ್ಟುವ ಕೌಶಲ ನಮ್ಮೊಳಗಿರುತ್ತದೆ. ಪದಬಳಕೆಯಲ್ಲಿನ ವ್ಯತ್ಯಾಸಗಳು ಎದ್ದುಕಂಡರೂ ಆಳದಲ್ಲಿ ಇವೆರಡೂ ಕನ್ನಡಗಳೇ.
ನಮ್ಮ ಚಿಂತನೆಯ ಇನ್ನೊಂದು ಕೊರತೆ, ಸರಳವೂ ಪ್ರಿಯವೂ ಆದ ಮಾದರಿಗಳ ಕುರಿತು ನಮಗಿರುವ ಆಕರ್ಷಣೆ. ಸಂಸ್ಕೃತವು ಎಲ್ಲ ಭಾಷೆಗಳ ತಾಯಿ, ವೇದಗಳು ಎಲ್ಲ ಜ್ಞಾನದ ಆಕರ — ಇಂಥವು ನಮಗೆ ಸ್ಥಿರತೆಯನ್ನೂ ಸಾಂತ್ವನವನ್ನೂ ಬೆಚ್ಚಗಿನ ಆಪ್ತ ಭಾವವನ್ನೂ ಕೊಡುತ್ತವೆ. ನಾವು ಮಹತ್ತರವಾದುದೊಂದರ ಭಾಗ ಎನ್ನಿಸುವಂತೆ ಮಾಡುತ್ತವೆ.
“ಅಜ್ಞಾನಮೂಲದಿಂದ ಹುಟ್ಟಿರಬಹುದಾದುದಕ್ಕೆ ದುರುದ್ದೇಶವನ್ನು ಎಂದೂ ಆರೋಪಿಸದಿರಿ,” ಎಂಬ ಮಾತಿದೆ.6 ಸಾಮಾನ್ಯ ಜನರು ತಮ್ಮತಮ್ಮಲ್ಲೇ ಇಂಥ ಗೊಂದಲಗಳನ್ನು ಹುಟ್ಟುಹಾಕಿಕೊಂಡು ಅವನ್ನು ಪರಿಹರಿಸಿಕೊಂಡೋ ಇಲ್ಲದೆಯೋ ತಮ್ಮ ಪಾಡಿಗೆ ತಾವಿರುತ್ತಾರೆ. ಅದರಿಂದ ಅಂಥ ಸಮಸ್ಯೆಯೇನೂ ಆಗುವುದಿಲ್ಲ. ಅದೇ ರೀತಿಯಲ್ಲಿ, ಮೈಸೂರಿನ ಒಡೆಯರಾದ ಯದುವೀರರ ಹೇಳಿಕೆಯನ್ನು ಅವರ ಅಜ್ಞಾನ ಎಂದು ತಳ್ಳಿಹಾಕಬಹುದು. ಆದರೆ, ಕಮಲ್ ಹಾಸನ್ ಅಥವಾ ಭೈರಪ್ಪನಂಥ ‘ಅಸಾಮಾನ್ಯ’ರು ಅನಗತ್ಯ ವಿವಾದ ಹುಟ್ಟುಹಾಕಿದಾಗ ಅದು ತಿಳಿವಳಿಕೆಯ ಕೊರತೆಯಿಂದಾದದ್ದು ಎಂದು ಹೇಳಲು ಬರುವಂತಿಲ್ಲ. ಕಮಲ್ ಹಾಸನ್ ತಮಿಳು ಮತ್ತು ಕನ್ನಡ ಚಿತ್ರರಂಗದ ಬಾಂಧವ್ಯ ಮನಸ್ಸಿನಲ್ಲಿಟ್ಟುಕೊಂಡು ಸಾಂದರ್ಭಿಕವಾಗಿ ಏನೋ ಹೇಳಿದರು ಎಂದುಕೊಳ್ಳೋಣ. ಆದರೆ, ಆ ಮಾತು ವಿವಾದಕ್ಕೆ ಎಡೆಮಾಡಬಹುದು ಎಂಬ ಅರಿವು ಇಲ್ಲದಷ್ಟು ಅವರು ಅಮಾಯಕರಲ್ಲ. ದ್ರಾವಿಡ ನುಡಿಗಳ ವಿಕಾಸದ ಚರಿತ್ರೆ ಅವರಿಗೆ ಗೊತ್ತಿಲ್ಲದಷ್ಟು ಅಥವಾ ಅದನ್ನು ಅದನ್ನು ತಿಳಿದುಕೊಂಡಾದರೂ ಸ್ಪಷ್ಟೀಕರಣ ಕೊಡದಷ್ಟು ದಡ್ಡರೂ ಅಲ್ಲ. ಇನ್ನು, ಭೈರಪ್ಪನವರ ಅಧ್ಯಯನಶೀಲತೆಯೂ ನಮಗೆ ಗೊತ್ತಿಲ್ಲದಿಲ್ಲ; ಹಾಗೆಯೇ, ವರ ರಾಜಕೀಯ ಅಜೆಂಡಾ ಕೂಡ.
ಇದೆಲ್ಲದರ ನಡುವೆ ನಡೆದ ಇನ್ನೊಂದು ವಿದ್ಯಮಾನ ಕುತೂಹಲಕರ ಮತ್ತು ನಗೆಯುಕ್ಕಿಸುವಂಥದ್ದು. ಸರ್ವೇಸಾಮಾನ್ಯವಾಗಿ ಪ್ರಗತಿಪರರೆಂದೂ ಪೆರಿಯಾರ್ವಾದಿಗಳೆಂದೂ ಗುರುತಿಸಿಕೊಂಡಿರುವ ಕಮಲ್ ಹಾಸನ್ ವಿರುದ್ಧ ಕನ್ನಡದ ಪ್ರಗತಿಪರರು ದನಿಯೆತ್ತಿದ್ದೇ ತಡ ಆ ವೇದಿಕೆಯನ್ನು ಬಲಪಂಥೀಯರು ಏರಿ ಆಕ್ರಮಿಸಿಕೊಂಡರು. ಈ ದ್ರಾವಿಡನಾಡಿನ ಹರಿಕಾರರು ಕನ್ನಡಿಗರ ಅಸ್ಮಿತೆಗೆ ಧಕ್ಕೆ ತರುವಂಥವರು; ಇದಕ್ಕೆ ತಕ್ಕ ಉತ್ತರವನ್ನು ನಾವು ಕೊಡಲೇಬೇಕು. ಆ ಉತ್ತರ: ತಮಿಳು ಕನ್ನಡದ ತಾಯಿ ಎನ್ನುವುದು ಸುಳ್ಳು, ಕನ್ನಡವು ಹುಟ್ಟಿದ್ದು ಸಂಸ್ಕೃತದಿಂದ (ಇದು ಅಪ್ಪಟ ಸುಳ್ಳೆಂದು ಮತ್ತೆ ಬಿಡಿಸಿ ಹೇಳಬೇಕಿಲ್ಲವಲ್ಲ?)
ಹಳಮೆಯ, ಮೂಲದ ಪ್ರಶ್ನೆಯನ್ನು ಇವರೆಲ್ಲರೂ ಆಗಾಗ ಎತ್ತುವುದು ಯಾವ ಉದ್ದೇಶಕ್ಕಾಗಿ?
ಇಷ್ಟಕ್ಕೂ ಸಂಸ್ಕೃತವು ಅತ್ಯಂತ ಪ್ರಾಚೀನ ಭಾಷೆಯೂ ತಮಿಳು ಕನ್ನಡದ ತಾಯಿಯೂ — ವಾದಕ್ಕೋಸರವಾಗಿಯೇ ಇರಲಿ — ಆಗಿದ್ದಲ್ಲಿ ಸಮಸ್ಯೆಯಾದರೂ ಏನು? ನಾಗರಿಕತೆಗಳ, ಸಮುದಾಯಗಳ ನಡುವೆ ಕೊಡುಕೊಳೆ ಇರುವಂಥದ್ದೇ. ಉದಾಹರಣೆಗೆ, ಕಾಲಾನಂತರ ‘ಹಿಂದೂ-ಅರೇಬಿಕ್ ಸಂಖ್ಯಾ ಪದ್ಧತಿ’ ಎಂದು ಗುರುತಿಸಲಾದ ಪರಿಕಲ್ಪನೆಯು ಪ್ರಾಚೀನ ಭಾರತದಲ್ಲಿ ವಿಕಾಸಗೊಂಡು ಇಸ್ಲಾಮಿಕ್ ಜಗತ್ತಿನ ಮೂಲಕ ಯುರೋಪಿಗೆ ಪಸರಿಸಿ ಪಾಶ್ಚಿಮಾತ್ಯ ನಾಗರಿಕತೆಯನ್ನು ಆದ್ಯಂತವಾಗಿ ಪ್ರಭಾವಿಸಿತು. ಇದರಿಂದ ಗಣಿತ, ವಿಜ್ಞಾನ, ಸಮುದ್ರಯಾನ, ವ್ಯಾಪಾರ ಕ್ಷೇತ್ರಗಳಲ್ಲಿ ಏಳಿಗೆಯಾಗಿದ್ದಷ್ಟೇ ಅಲ್ಲದೇ ಸಾಕ್ಷರತೆಯನ್ನು ಹರಡಲೂ ಸಹಾಯವಾಯಿತು. ಸೊನ್ನೆಯ ಪರಿಕಲ್ಪನೆ ಹಾಗೂ ಮುಖಬೆಲೆ ಮತ್ತು ಸ್ಥಾನಬೆಲೆ ಎಂಬ ಇಬ್ಬಗೆಯ ಏರ್ಪಾಟು ಗಣಕಶಾಸ್ತ್ರದ ಅಡಿಪಾಯವಾಯಿತು. ಹಾಗಿದ್ದೂ ನಾವು ಪಶ್ಚಿಮದ ಮುನ್ನಡೆಯನ್ನು ಕಡಿಮೆಯೆಂದು ಹೇಳುವುದಿಲ್ಲವಲ್ಲ? ಮಾನವನ ಸುದೀರ್ಘ ಚರಿತ್ರೆಯಲ್ಲಿ ಒಂದು ಮೊದಲು ಇನ್ನೊಂದು ಆಮೇಲೆ ಬರುವುದು ಸಹಜ ವಿದ್ಯಮಾನವಷ್ಟೇ. ಅದರಿಂದಾಗುವ ವ್ಯತ್ಯಾಸವೇನು, ಒಪ್ಪಿಕೊಂಡು ಮುಂದುವರೆಯಲು ಸಮಸ್ಯೆಯೇನು?
ನಿಜವಾದ ಸಮಸ್ಯೆ ಇರುವುದು ಈ ಮೊದಲು ನಾವು ನೋಡಿದ ಹೇಳಿಕೆಗಳಲ್ಲಲ್ಲ. ಈ ರೀತಿಯ ವಾದಗಳು, ಅವು ಪ್ರಾಮಾಣಿಕ ಕುತೂಹಲದಿಂದ ಹುಟ್ಟಿದ್ದಲ್ಲಿ, ಅರಿವನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದಲ್ಲಿ ಸ್ವಾಗತಾರ್ಹವೇ. ಯಾವುದು ಎಷ್ಟು ಹಳೆಯದಾದರೂ ಯಾವುದರಿಂದ ಮತ್ತಾವುದು ಹುಟ್ಟಿದ್ದರೂ ನಮ್ಮ ವರ್ತಮಾನ ಮತ್ತು ಭವಿತವ್ಯಕ್ಕೆ ಅವು ಅಪ್ರಸ್ತುತ. ಸಮಸ್ಯೆಯಿರುವುದು ಈ ವಾದಗಳ ಹಿಂದಿರುವ ಸೂಚ್ಯಾರ್ಥದಲ್ಲಿ, ಕಪಟ ಉದ್ದಿಶ್ಯದಲ್ಲಿ. ಅಲ್ಲಿರುವುದು ಹಳಮೆ ಮತ್ತು ಹಿರಿಮೆಯ ವ್ಯಸನ. ನಾವು ಮೊದಲಿಗರು ಎಂಬ ಹಕ್ಕುಸಾಧನೆಯು ಒಂದು ಅರೆಕಾಲ್ಪನಿಕ ಭವ್ಯ ಗತಕಾಲದ ಗೀಳಿನ ಲಕ್ಷಣ. ಅದನ್ನು ಪದೇಪದೇ ಪ್ರಬಲವಾದ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತದೆ. ಬಹಳಷ್ಟು ಸಲ ಅದು ವರ್ತಮಾನದ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಹುನ್ನಾರವಾಗಿರುತ್ತದೆ. ಸಮಾಜದಲ್ಲಿ ಒಡಕನುಂಟುಮಾಡಿ ಸಮನ್ವಯತೆಯನ್ನು ದುರ್ಬಲಗೊಳಿಸುತ್ತದೆ. ಒಂದು ಭಾಷೆಯ ಅಥವಾ ಸಂಸ್ಕೃತಿಯ ಪ್ರಾಥಮಿಕತೆಯನ್ನು ಪ್ರತಿಪಾದಿಸಿ, ಅದನ್ನು ಶ್ರೇಷ್ಠತೆಯೊಂದಿಗೆ ಸಮೀಕರಿಸಿ, ಅದರ ಯಜಮಾನಿಕೆಯನ್ನು ನೆಲೆಗೊಳಿಸಲಾಗುತ್ತದೆ. ಅಂತಹ ಮನಸ್ಥಿತಿಯು ಚರಿತ್ರೆಯನ್ನು ತಿರುಚಿ ಅದನ್ನೊಂದು ಶೂನ್ಯ-ಮೊತ್ತದ ಆಟವನ್ನಾಗಿಸುತ್ತದೆ (zero-sum game).7 ಆ ಆಟದಲ್ಲಿ ಒಬ್ಬರು ಗೆದ್ದರೆ ಇನ್ನೊಬ್ಬರು ಸೋಲಲೇಬೇಕು. ಏಕತೆಯ ಹೆಸರಿನಲ್ಲಿ ಸಮರೂಪತೆಯ ಹಮ್ಮುಗೆಗಳನ್ನು ಮುನ್ನಡೆಸಲಾಗುತ್ತದೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಗಲಿಬಿಲಿಗೆ ಒಳಗಾಗಿರುವ, ಸಾಂಸ್ಕೃತಿಕ ಸವಕಳಿಯ ಆತಂಕದಲ್ಲಿರುವ ಜನತೆಗೆ ಪ್ರಿಯವಾಗುವ ಹುಸಿ ಸಂಕಥನಗಳನ್ನು ವ್ಯವಸ್ಥಿತವಾಗಿ ಕಟ್ಟಲಾಗುತ್ತದೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಮನ್ ಕೀ ಬಾತ್, ಕ್ರಿಕೆಟ್ ಆಟಗಾರರು, ಸಿನೆಮಾ ತಾರೆಯರು ಮೊದಲಾದ ಸೆಲೆಬ್ರಿಟಿಗಳೆಂಬ ಮೊನಚಾದ ಸೂಜಿಗಳ ಮೂಲಕ ನಮ್ಮ ನರನಾಡಿಗಳಲ್ಲಿ ಭದ್ರತೆಯ, ಪ್ರಸ್ತುತತೆಯ, ಹಿರಿಮೆಯ ಭಾವನೆಗಳನ್ನು ನಿರಂತರವಾಗಿ ಊಡಿಸಲಾಗುತ್ತದೆ.
4
ನಮ್ಮ ದೇಶದಲ್ಲಿ ಎದ್ದುಕಾಣುವ ಎಣೆಯಿಲ್ಲದ ವಿವಿಧತೆ ಪ್ರಾಚೀನ ಕಾಲದಿಂದಲೂ ಸಂಭ್ರಮಕ್ಕೆ ಕಾರಣವಾಗಿದೆ. ಹಾಗಿದ್ದೂ ನಾವು ಆಗಾಗ ನಾವು ನಿಂತು ಅದರ ನೈತಿಕ ತಳಹದಿಯನ್ನು ಪ್ರಶ್ನಿಸಿ, ಪರಿಶೀಲಿಸಿ ಮುಂದುವರೆಯುವ ಅಗತ್ಯವಿದೆ. ಏಕೆಂದರೆ, ಅನೇಕ ಸಲ ಅದಕ್ಕೊಂದು ತಾರತಮ್ಯದ ಹಿನ್ನೆಲೆ ಇರುತ್ತದೆ. ಉದಾಹರಣೆಗೆ, ಆಧುನಿಕ ಮಾನವನ ಸುಮಾರು 300 ಸಾವಿರ ವರ್ಷಗಳ ಅಸ್ತಿತ್ವದಲ್ಲಿ ಜಾತಿಪದ್ಧತಿ ಮತ್ತು ಒಳಮದುವೆಯ (endogamy) ಚರಿತ್ರೆ ಕೇವಲ ಎರಡರಿಂದ ಮೂರು ಸಾವಿರ ವರ್ಷಗಳದ್ದು. ಆದರೆ ಅದು ಹುಟ್ಟಿಹಾಕಿರುವ ಹುಸಿ ವಿವಿಧತೆಯು ಗಟ್ಟಿಯಾಗಿ ನೆಲೆಯೂರಿದೆ.
ಭಾರತದಂಥ ವಿಶಾಲ ದೇಶದಲ್ಲಿ ವಿವಿಧತೆಯು ಒಂದು ಸಂಕೀರ್ಣ ವಾಸ್ತವ ಅಷ್ಟೇ. ಆದರೆ, ಬಹುತ್ವವು ನಾವು ರೂಪಿಸಿಕೊಂಡಿರುವ ಮೌಲ್ಯವಾಗಿದೆ — ಅದು ಹೆಮ್ಮೆಗೂ ಸಂಭ್ರಮಕ್ಕೂ ಕಾರಣವಾಗಬಹುದಾದ civilizational value. ಮೊದಲಿನಿಂದಲೂ ಹಲಬಗೆಯ ನುಡಿ, ಸಂಸ್ಕೃತಿ, ನಂಬಿಕೆ, ಜೀವನಶೈಲಿಗಳ ಸಂಕರವು ಬಹುತ್ವಕ್ಕೆ, ಸಮನ್ವಯತೆಗೆ ಇಂಬುಕೊಟ್ಟಿದೆ. Pluralism ಮತ್ತು syncreticismನಂಥ ಮೌಲ್ಯಗಳನ್ನು ಕಾಪಿಟ್ಟುಕೊಂಡು ನಮ್ಮ ಸಮಾಜದ ಯಾವ ವಿದ್ಯಮಾನಗಳು ಅವಕ್ಕೆ ಪೂರಕವಾಗಿವೆ ಯಾವುವು ವ್ಯತಿರಿಕ್ತವಾಗಿವೆ ಎಂಬ ಅರಿವನ್ನು ಬೆಳೆಸಿಕೊಳ್ಳುವುದು ನಮ್ಮ ವರ್ತಮಾನದ ಅಗತ್ಯ.
ತಾರತಮ್ಯವನ್ನು ಆಧರಿಸಿದ ವಿವಿಧತೆ, ಹುಸಿ ಬೇರ್ಪಾಟುಗಳನ್ನು ತೊಡೆದುಹಾಕಲು; ‘ಹಿಂದಿ ಹಿಂದು ಹಿಂದುಸ್ತಾನ’ಗಳಂಥ ಸಮರೂಪತೆಯತ್ತಣ ಒತ್ತರಗಳನ್ನು ಎದುರಿಸಲು ನಾವು ಸಿದ್ಧವಾಗಿದ್ದೇವೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಸಂಸ್ಕೃತದ್ದೇ ಆಗಲಿ, ತಮಿಳಿನದ್ದೇ ಆಗಲಿ ಯಜಮಾನಿಕೆಯನ್ನು ಒಪ್ಪಿಕೊಳ್ಳದೇ ಕನ್ನಡವನ್ನು ಅವುಗಳ ಸಮಗಡಿಯಾಗಿ ರೂಪಿಸುವ ಸ್ಥೈರ್ಯ ನಮ್ಮಲ್ಲಿದೆಯೇ? ಜೊತೆಗೇ ಕನ್ನಡದೊಳಗೂ ಹೊಕ್ಕಿರುವ ಯಜಮಾನಿಕೆಯ ಭೂತವನ್ನು ಓಡಿಸಬಲ್ಲೆವೇ? ನಾಡಿನ ಉಳಿದ ನುಡಿಗಳೊಂದಿಗೆ, ಕನ್ನಡದ್ದೇ ಲೆಕ್ಕವಿಲ್ಲದಷ್ಟು ಆಡುಮಾತಿನ ತಳಿಗಳೊಂದಿಗೆ ಪ್ರಮಾಣಿತವೂ ಶಿಷ್ಟವೂ ಎನ್ನಿಸಿಕೊಂಡ ಕನ್ನಡದ ತಳಿಯು ಸಹಬಾಳ್ವೆ ಮಾಡಬಲ್ಲುದೇ? ಶಿಷ್ಟ ಕನ್ನಡ ಮತ್ತು ಉಳಿದ ಪ್ರಭೇದಗಳ ತಾರತಮ್ಯವನ್ನು ಅಳಿಸಲು ಸಾದ್ಯವೇ? ಬಳ್ಳಾರಿಯ ‘ಒರಟು' ಕನ್ನಡ, ಬೆಳಗಾವಿಯ ‘ಮರಾಠಿ’ ಕನ್ನಡ, ಕೊಡಗಿನ ‘ಮಜವಾದ' ಕನ್ನಡ, ದೇವನೂರರ ನಂಜನಗೂಡಿನ ‘ಕನ್ನಡಕ್ಕೆ ಅನುವಾದಿಸಬೇಕಾದ’ ಕನ್ನಡ ಮುನ್ನೆಲೆಗೆ ಬಂದು ನೆಲೆಬೆಳಕಿನಲ್ಲಿ ಮೀಯಲು ಸಾಧ್ಯವಿದೆಯೇ?
ನಾವು ಹೊರಗಿನ ದಬ್ಬಾಳಿಕೆಗಳನ್ನು ವಿರೋಧಿಸುತ್ತಲೇ ನಮ್ಮೊಳಗಿನ ವಿರೋಧಾಭಾಸಗಳನ್ನೂ ಸರಿದೂಗಿಸುವ ಅಗತ್ಯವಿದೆ. ಸಿನೆಮಾಗಳನ್ನು ಬ್ಯಾನ್ ಮಾಡುವುದೂ ಸಣ್ಣಪುಟ್ಟದ್ದಕ್ಕೆ ಬೀದಿಗಿಳಿಯುವುದೂ ಪ್ರತಿಕೃತಿಗಳನ್ನು ಸುಡುವುದೂ ನಿಜವಾದ ವಿರೋಧವಲ್ಲ. ಅವು ಅಂಬೇಡ್ಕರ್ ಹೇಳಿದ grammar of anarchyಯ ಲಕ್ಷಣಗಳಷ್ಟೇ. ಕನ್ನಡಿಗರಿಗೆ ನಿಜಕ್ಕೂ ಬೇಕಿರುವುದು ವಸ್ತುನಿಷ್ಠ ಚಿಂತನೆ, ಆಳವಾದ ಸ್ವವಿಮರ್ಶೆ, ಹಾಗೂ ನಮ್ಮ ನುಡಿ ಮತ್ತು ಸಂಸ್ಕೃತಿಗಳ ಕುರಿತು ಸಮುದಾಯದ ಅರಿವನ್ನು ಹೆಚ್ಚಿಸುವ ಯೋಜನೆಗಳು. ಹಳಮೆ ಹಿರಿಮೆಗಳ ನಿರರ್ಥಕ ವಾಗ್ವಾದಕ್ಕೆ ಈಡಾಗದೇ ಬಹುತ್ವ, ಜೀವಪರತೆ ಮತ್ತು ಸುಸ್ಥಿರತೆಯ ಸುತ್ತ ಕನ್ನಡದ ಸ್ವಸ್ವರೂಪವನ್ನು ಮರುಕಲ್ಪಿಸಿಕೊಳ್ಳುವ ಸಂಕಲ್ಪ ಮಾಡಬೇಕಾಗಿದೆ. ಹಳಮೆಯ ಮಂಪರಿನಲ್ಲಿರುವವರನ್ನು, ಹಳಹಳಿಕೆಯಲ್ಲಿ ಕಳೆದುಹೋಗುವವರನ್ನು ಮತ್ತೆಮತ್ತೆ ವರ್ತಮಾನದ ವಾಸ್ತವಕ್ಕೆ ಎಚ್ಚರಿಸಬೇಕಾಗಿದೆ.
ಮಾನವನ ಚಟುವಟಿಕೆಗಳು ಇಲ್ಲವೇ ಪರಿಸರದಲ್ಲಿನ ಏರುಪೇರುಗಳು ತಂದಿಟ್ಟ ವಿಪತ್ತು; ಅಥವಾ ಮೂಲ ಇರುನೆಲೆಗಳ ನಾಶದಂಥ ಘಟನೆಗಳಿಂದಾಗಿ ಜನಸಮುದಾಯಗಳ ಗಾತ್ರವು ಒಮ್ಮಿಂದೊಮ್ಮೆಲೇ ಕುಗ್ಗುತ್ತದೆ. ಇಂಥ ವಿದ್ಯಮಾನಗಳಿಗೆ population bottleneck ಎನ್ನುತ್ತಾರೆ. ಜೀವ ವಿಕಾಸದಲ್ಲಿ ಇದು ಸಾಮಾನ್ಯ ವಿದ್ಯಮಾನ. ಹಾಗಾದಾಗ ಪ್ರಭೇದಗಳು ಅಳಿಯುವ ಸಾಧ್ಯತೆಯೂ ಇರುತ್ತದೆ. ಮಾನವ ಪ್ರಭೇದಗಳು ಅಂಥ ಹಲವು bootleneckಗಳ ಮೂಲಕ ಹಾದು ಬಂದಿವೆ. ಸುಮಾರು 800 ಸಾವಿರ ವರ್ಷಗಳ ಹಿಂದೆ ನಮ್ಮ ಪ್ರಭೇದವೂ ಅಳಿವಿನಂಚಿಗೆ ಬಂದಿತ್ತು.
Reconstructed Proto-Dravidian. ಕಳೆದುಹೋದ ನುಡಿಗಳ ನಿಜ ಸ್ವರೂಪ ನಮಗೆ ಗೊತ್ತಾಗುವುದು ಅಸಾಧ್ಯ. ಅವನ್ನು ನಮಗೆ ಸಿಕ್ಕ ಪುರಾವೆಗಳು ಹಾಗೂ ತರ್ಕ ಮತ್ತು ಊಹೆಗಳ ಆಧಾರದ ಮೇಲೆ ಮತ್ತೆ ಕಟ್ಟಿಕೊಳ್ಳಬೇಕಾಗುತ್ತದೆ.
ಪ್ರಾಸಂಗಿಕ ಮಾತು: ಕಮಲ್ ಹಾಸನ್ಗಿಂತ ಬಹಳ ಮೊದಲೇ ರಾಜಾಜಿಯವರು ಕನ್ನಡವು ತಮಿಳಿನಿಂದ ಹುಟ್ಟಿದ ಮತ್ತು ತೆಲುಗಿನಿಂದ ತನ್ನ ಲಿಪಿ ಪಡೆದ ನುಡಿ ಎಂಬರ್ಥದ ಮಾತನ್ನು ಹೇಳಿದ್ದರು. ನಮ್ಮ ದೇಶದಲ್ಲಿ ಯಾವ ವಾಗ್ವಾದವೂ ಹೊಸತಲ್ಲ!
ಉರ್ದು ಹೊರತುಪಡಿಸಿ. ಆದರೆ ಈ ವಾದವನ್ನು ಮುಂದಿಡುವವರ ಪ್ರಕಾರ (ವಾಸ್ತವದಲ್ಲಿ ಹಿಂದಿಯ ಅವಳಿಯಾದ) ಉರ್ದು ಭಾರತದ ಭಾಷೆಯೇ ಅಲ್ಲವಲ್ಲ!
ಈ ನಿರ್ದಿಷ್ಟ ಸಂಖ್ಯೆ ಬಂದುದೆಲ್ಲಿಂದ ಎನ್ನುವುದು ಗೊತ್ತಿಲ್ಲ. ಭೈರಪ್ಪನವರದೇ ಮಾತಿನಲ್ಲಿಯೂ ಕಾದಂಬರಿಗಳಲ್ಲಿಯೂ ಈ ಮಟ್ಟದ ಸಂಸ್ಕೃತ ಪದ ಬಳಕೆ ಕಾಣಲಾರದು.
Hanlon’s Razor: “Never attribute malice to that which can be adequately explained by ignorance.”
ಶೂನ್ಯ-ಮೊತ್ತದ ಆಟ (zero-sum game) ಎನ್ನುವುದು ಗೇಮ್ ಥಿಯರಿಯ (Game Theory) ಒಂದು ಪರಿಕಲ್ಪನೆ. ಅದು ಒಬ್ಬರ ಲಾಭ ಇನ್ನೊಬ್ಬರ ನಷ್ಟಕ್ಕೆ ಸಮನಾಗುವ ಪರಿಸ್ಥಿತಿಯನ್ನು ನಿರೂಪಿಸುತ್ತದೆ. ‘ಆಟ’ವೊಂದರಲ್ಲಿ ಪಾಲ್ಗೊಳ್ಳುವರ ಲಾಭನಷ್ಟಗಳನ್ನು ಒಟ್ಟುಗೂಡಿಸಿದರೆ ಮೊತ್ತವು ಯಾವಾಗಲೂ ಸೊನ್ನೆಯಾಗಿರುತ್ತದೆ. ಒಬ್ಬರು ಗೆದ್ದರೆ ಇನ್ನೊಬ್ಬರು ಸೋಲಲೇಬೇಕು; ಒಬ್ಬರು ಮೇಲೇರಿದರೆ ಇನ್ನೊಬ್ಬರು ಕೆಳಗಿಳಿಯಲೇಬೇಕು; ಒಂದು ವಿಚಾರ ಮುನ್ನೆಲೆಗೆ ಬಂದು ನೆಲೆಗೊಂಡರೆ ಇನ್ನೊಂದು ಹಿನ್ನೆಲೆಯಲ್ಲಿ ಮಸುಕಿ ಅಳಿಯಲೇಬೇಕು.
(ಈ ಲೇಖನದ ಒಂದು ಆವೃತ್ತಿ ಜೂನ್ ತಿಂಗಳ 'ನ್ಯಾಯಪಥ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.)
ಇದನ್ನೂ ಓದಿ …
ನುಡಿ, ಸಂಸ್ಕೃತಿ, ಲೋಕದೃಷ್ಟಿ ಮತ್ತು ಸಮುದಾಯಗಳ ನಂಟು
ಕೆ ವಿ ನಾರಾಯಣರು ತಮ್ಮ ನುಡಿಗಳ ಅಳಿವು ಪ್ರಬಂಧವನ್ನು “ಇದು ಒಂದು ವಾಗ್ವಾದವನ್ನು ಬಯಸುವ ಗುರಿಯನ್ನುಳ್ಳ ಬರಹ” ಎಂದು ಹೇಳಿಯೇ ಆರಂಭಿಸುತ್ತಾರೆ. ಆ ನಿಟ್ಟಿನಲ್ಲಿ ಸಂಕೇತ ಪಾಟೀಲರ ಈ ಬರಹವು ಕೆವಿಎನ್ ಅವರ ಪ್ರಬಂಧದಲ್ಲಿರುವ ಹಲವು ಅಂಶಗಳನ್ನು ಚರ್ಚಿಸುತ್ತ ಅದಕ್ಕೆ ಪೂರಕವಾಗಿರುವ ಇನ್ನೂ ಕೆಲವು ನೋಟಗಳತ್ತ ಬೆಳಕು ಚೆಲ್ಲಲೆಳಸುತ್ತದೆ. ಈ ಬರಹವು ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಇದು ಮೊದಲನೆಯ ಭಾಗ.