ಹಿರಿಯ ವಿಮರ್ಶಕ ಮತ್ತು ಅನುವಾದಕರಾದ ಎಚ್ ಎಸ್ ರಾಘವೇಂದ್ರ ರಾವ್ ಅವರು ಜೆ ಎಂ ಕುಟ್ಸಿ (John Maxwell / J. M. Coetzee)1 ಅವರ In the Heart of the Country ಕಾದಂಬರಿಯನ್ನು ಕಲ್ಲುನೆಲದ ಹಾಡುಪಾಡು ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ದಕ್ಷಿಣ ಆಫ್ರಿಕಾದ ಅಪಾರ್ಥೈಡ್ನ ಹಿನ್ನೆಲೆಯ ಬಗ್ಗೆ ಬರೆಯುತ್ತ ಸಂಕೇತ ಪಾಟೀಲ ಅವರು ಕುಟ್ಸಿಯ ಕಾದಂಬರಿಗಳನ್ನೂ HSR ಅವರ ಕೃತಿಯನ್ನೂ ಪರಿಚಯಿಸಿದ್ದಾರೆ.
ಯುರೋಪಿನಲ್ಲಿ ಸರಿಸುಮಾರು 14ರಿಂದ 17ನೆಯ ಶತಮಾನವನ್ನು ರೆನೇಸಾನ್ಸ್ (Renaissance) ಎಂಬ ಸಾಂಸ್ಕೃತಿಕ ಚಳವಳಿಯ ಚಾರಿತ್ರಿಕ ಅವಧಿಯೆಂದು ಗುರುತಿಸಲಾಗುತ್ತದೆ. ಈ ಚಳವಳಿಯು ಮೊದಲಿಗೆ ಹದಿಮೂರನೆಯ ಶತಮಾನದ ಮಧ್ಯಭಾಗ ಅಥವಾ ಹದಿನಾಲ್ಕನೆಯ ಶತಮಾನದ ಆರಂಭದಿಂದ ಇಟಲಿಯ ಫ್ಲಾರೆನ್ಸ್ನಲ್ಲಿ ಶುರುವಾಗಿ ಕಾಲಕ್ರಮೇಣ ಯುರೋಪಿನ ಉಳಿದ ಪ್ರದೇಶಗಳಿಗೆ ಪಸರಿಸಿತು. ಡಾಂಟೆ ಅಲಿಗೇರಿ (Dante Alighieri) ಮತ್ತು ಫ್ರಾಂಚೆಸ್ಕೋ ಪೆತ್ರಾರ್ಕ್ರ (Francesco Petrarch) ಬರವಣಿಗೆಯಲ್ಲಿ ರೆನೇಸಾನ್ಸ್ ಚಿಂತನೆಯ ಮೂಲವನ್ನು ಗುರುತಿಸಲಾಗುತ್ತದೆ. ಅವರು ಅದರ ಪ್ರವರ್ತಕರು ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ.
ರೆನೇಸಾನ್ಸ್ ಎಂದರೆ ಹೊಸಹುಟ್ಟು. ಆ ಕಾಲದ ಇಟ್ಯಾಲಿಯನ್ ಚಿಂತಕರು ಮತ್ತು ಕಲಾವಿದರ, ವಿಶೇಷವಾಗಿ ಪೆತ್ರಾರ್ಕ್ನ ನೋಟದಲ್ಲಿ ಅದೊಂದು ಸಾಂಸ್ಕೃತಿಕ ಮರುಹುಟ್ಟು: ಕತ್ತಲೆತುಂಬಿದ್ದ ಮಧ್ಯಯುಗದಿಂದ ಬೆಳಕಿನ ಆಧುನಿಕ ಯುಗದತ್ತ ಮನುಷ್ಯನ ಪಯಣ.2 ಡಾಂಭಿಕತೆಯಿಂದ ತಾರ್ಕಿಕತೆಯತ್ತಲೂ; ಕಲೆ, ಕಲಿಕೆ, ಸಂಸ್ಕೃತಿಗಳ ಪುನರುಜ್ಜೀವನದತ್ತಲೂ; ಮತೀಯತೆಯಿಂದ ಮಾನವತೆ, ವ್ಯಕ್ತಿಗತ ಸಾಧ್ಯತೆ ಘನತೆಗಳತ್ತಲೂ ನಡೆದ ನಡಿಗೆ. 15ನೆಯ ಶತಮಾನದ ಆರಂಭದಲ್ಲಿ ಯುರೋಪಿನ, ಮುಖ್ಯವಾಗಿ ಪೋರ್ಚುಗಲ್ನ, ನಾವಿಕರು ವ್ಯಾಪಾರದ ಉದ್ದೇಶದಿಂದ ಹೊಸ ಸಮುದ್ರಮಾರ್ಗಗಳನ್ನು ಅನ್ವೇಷಿಸತೊಡಗಿದ್ದರು. ಸಮುದ್ರಯಾನ, ಭೂಗೋಳ ಶಾಸ್ತ್ರ, ಹಡಗು ನಿರ್ಮಾಣ ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿನ ಮುನ್ನಡೆಗಳು ಒಟ್ಟಿಗೆ ಬಂದು ಪರಿಶೋಧನೆಯ ಯುಗಕ್ಕೆ (Age of Discovery) ನಾಂದಿ ಹಾಡಿದ್ದುವು.
ಪಾಶ್ಚಾತ್ಯ ನಾಗರಿಕತೆಯ ಚರಿತ್ರೆಯಲ್ಲಿ ಮುಂದಿನದು Age of Enlightenment — ಹೊಸ ಅರಿವಿನ, ವಿವೇಕದ ಯುಗ. ವೈಜ್ಞಾನಿಕ ಚಿಂತನೆ, ವ್ಯಕ್ತಿವಾದ, ಮಾನವನ ಮೂಲಭೂತ ಹಕ್ಕುಗಳು, ಸಮಾನತೆ, ಪ್ರಜಾಪ್ರಭುತ್ವ ಮೊದಲಾಗಿ ರೆನೇಸಾನ್ಸ್ನ ಮೌಲ್ಯಗಳ ಉಚ್ಛ್ರಾಯ ಸ್ಥಿತಿಯ ಕಾಲ. ಯುರೋಪಿಯನ್ ನಾಗರಿಕತೆಯು ಅತ್ಯಂತ ಶ್ರೇಷ್ಠ ಕಲೆ, ತಾತ್ವಿಕತೆ, ಚಿಂತನೆ, ಮತ್ತು ಮಾನವೀಯತೆಯ ಮೌಲ್ಯಗಳನ್ನು ಕಟ್ಟಿಕೊಳ್ಳುತ್ತಿದ್ದ ಕಾಲಘಟ್ಟದಲ್ಲಿಯೇ ಅಟ್ಲಾಂಟಿಕ್ ಸಾಗರದ ಮೂಲಕ ಆಫ್ರಿಕಾದ ಜನರನ್ನು ಯುರೋಪಿಗೆ ಸಾಗಿಸಿ ಅವರನ್ನು ಗುಲಾಮರನ್ನಾಗಿ ಮಾರುತ್ತಿದ್ದುದು ಕೂಡ ಉಚ್ಛ್ರಾಯದಲ್ಲಿತ್ತು. ಇದು ಮಾನವನ ಚರಿತ್ರೆಯ ದುರಂತ ವಿಪರ್ಯಾಸಗಳಲ್ಲೊಂದು.
ಜ್ಞಾನೋದಯ ಯುಗದ ಆದರ್ಶಗಳನ್ನು ಅನುಕೂಲಕ್ಕೆ ತಕ್ಕಂತೆ ಆಯ್ದುಕೊಂಡು ಯುರೋಪಿಯನ್ ಉಚ್ಚವರ್ಗದವರಿಗೆ ಮಾತ್ರ ಅನ್ವಯಗೊಳಿಸಲಾಯಿತು. ಜಗತ್ತಿನ ಉಳಿದೆಡೆಯ ಜನಸಮುದಾಯಗಳ ಅಧೀನಗೊಳಿಸಿಕೊಳ್ಳುವಿಕೆಯನ್ನು ಸಮರ್ಥಿಸಿಕೊಳ್ಳಲಾಯಿತು. Enlightenmentನ ತರ್ಕವನ್ನು ಬಳಸಿಕೊಂಡು ವಸಾಹತುಶಾಹಿಗೆ ಹುಸಿ ಉದ್ದೇಶಗಳನ್ನು ಅಧ್ಯಾರೋಪಿಸಲಾಯಿತು. ಅನಾಗರಿಕ ಮೂಲನಿವಾಸಿಗಳನ್ನು ನಾಗರಿಕತೆಯತ್ತ ಒಯ್ಯುವುದನ್ನು ತಮ್ಮ ಬಾಳಗುರಿಯನ್ನಾಗಿ ಮಾಡಿಕೊಂಡ ಹಲವರು ಅದನ್ನು ನಂಬಿದ್ದರು ಕೂಡ.
ಬಾರ್ತೊಲೊಮೆಯು ಡೀಯಾಸ್ (Bartolomeu Dias) 1488ರಲ್ಲಿ ಮೊದಲ ಬಾರಿ ಗುಡ್ ಹೋಪ್ ಭೂಶಿರ ತಲುಪಿದ್ದು ಮುಂದೆ ಆಫ್ರಿಕಾದ ಕರಾವಳಿಯುದ್ದಕ್ಕೂ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಲು ಕಾರಣವಾಗಿ ಕೊನೆಗೆ ಅಟ್ಲಾಂಟಿಕ್ ಸಾಗರದಾಚೆಯ ಗುಲಾಮರ ವ್ಯಾಪಾರ ಹಾಗೂ ವಸಾಹತುಶಾಹಿಗೆ ಅನುವು ಮಾಡಿಕೊಟ್ಟಿತು. ಇದು ಆಫ್ರಿಕನ್ ಸಮುದಾಯಗಳ ಮೇಲೆ ಉಂಟುಮಾಡಿದ ಆಘಾತ, ಅಲ್ಲಿಯ ಜನರ ಮೇಲೆ ಎಸಗಿದ ದಬ್ಬಾಳಿಕೆ, ಶೋಷಣೆ ಊಹಾತೀತ. ಹತ್ತೊಂಬತ್ತನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಯುರೋಪಿಯನ್ ರಾಷ್ಟ್ರಗಳ ನಡುವೆ ‘ಆಫ್ರಿಕಾಕ್ಕಾಗಿ ಕಿತ್ತಾಟ’ (Scramble for Africa) ಶುರುವಾಗಿ 1878ರ ಬರ್ಲಿನ್ ಸಮ್ಮೇಳನದಲ್ಲಿ ಯುರೋಪಿಯನ್ ರಾಷ್ಟ್ರಗಳು ಒಗ್ಗೂಡಿ, ತಾವು ಅದುವರೆಗೂ ಅಕ್ರಮವಾಗಿ ಅಧೀನಕ್ಕೆ ತೆಗೆದುಕೊಂಡಿದ್ದ ಆಫ್ರಿಕಾದ ನೆಲಗಳನ್ನು ತಾವೇ ಸಕ್ರಮವೆಂದು ಘೋಷಿಸಿಕೊಂಡು ಒಪ್ಪಂದಕ್ಕೆ ಬಂದುವು. ಆಫ್ರಿಕಾದ ಲೆಕ್ಕವಿಲ್ಲದಷ್ಟು ಭಾಷೆ, ಜನಾಂಗಗಳ ವೈವಿಧ್ಯ; ಅವುಗಳ ಪಾರಂಪರಿಕ ನಂಬಿಕೆಗಳಲ್ಲಿನ ವೈರುಧ್ಯ; ಯಾವುವನ್ನೂ ಗಣನೆಗೆ ತೆಗೆದುಕೊಳ್ಳದೇ ಯುರೋಪಿನ ದೇಶಗಳ ಪ್ರತಿನಿಧಿಗಳು ತಮ್ಮ ಪ್ರಾಬಲ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಆಫ್ರಿಕಾವನ್ನು ಕೇಕ್ನಂತೆ ಕತ್ತರಿಸಿದರು. ವಸಾಹತುಶಾಹಿಯ ಕಾಲ ಮುಗಿದು ಆಫ್ರಿಕಾದ ದೇಶಗಳು ಸ್ವತಂತ್ರವಾದ ಅನಂತರವೂ ಜನಾಂಗೀಯ ಕಲಹಗಳು ಮುಂದುವರೆಯಲು ಇದು ಕಾರಣವಾಯಿತು.

ಯುರೋಪಿಯನ್ ವಸಾಹತುಶಾಹಿ, ಗುಲಾಮಗಿರಿ ಮತ್ತು ವರ್ಣಭೇದದ ದೀರ್ಘ ಚರಿತ್ರೆಯಲ್ಲಿ ಒಂದು ಅತ್ಯಂತ ಕರಾಳ ಅಧ್ಯಾಯ ಅಪಾರ್ಥೈಡ್ನ (aparthied) ಅವಧಿ. ಅದು ತೀರ ಇತ್ತೀಚಿನವರೆಗೂ ಪ್ರಚಲಿತವಾಗಿದ್ದು ನಾವು ಪರೋಕ್ಷವಾಗಿಯಾದರೂ ಗಮನಿಸಿದ್ದ ವಿದ್ಯಮಾನ. ಇನ್ನೂ ಪೂರ್ತಿಯಾಗಿ ಮಾಯದ ಹಸಿಗಾಯದಂಥದ್ದು. ಅಪಾರ್ಥೈಡ್ ಎನ್ನುವುದು ಆಫ್ರಿಕಾನ್ಸ್ ಭಾಷೆಯ ಒಂದು ಪದ. ಆಫ್ರಿಕಾನ್ಸ್ ಭಾಷೆ ಹುಟ್ಟಿಕೊಂಡದ್ದು ದಕ್ಷಿಣ ಆಫ್ರಿಕಾದ ವಸಾಹತುದಾರ ಡಚ್ ಜನರ ಆಡುನುಡಿಯಿಂದ. ಅಪಾರ್ಥೈಡ್ ಪದದ ವಾಚ್ಯಾರ್ಥ ‘ಪ್ರತ್ಯೇಕತೆ’ ಎಂದು - ಇಂಗ್ಲಿಷ್ನಲ್ಲಿ ಅದು apart-hood ಎಂದಂತೆ, ಅದು ಡಚ್ನಲ್ಲಿ aparth-heid. ಇದು ವ್ಯವಸ್ಥಿತ ವರ್ಣಭೇದದ ಆತ್ಯಂತಿಕ ಸ್ಥಿತಿ; ಕೂಲಂಕಷವಾಗಿ ವಿನ್ಯಾಸಗೊಳಿಸಿದ ಅದರ ಪರಿಪೂರ್ಣ ಸ್ವರೂಪ. ಇಡೀ ದೇಶದ ಜನರನ್ನು ಒಂದು ವಿಸ್ತೃತವಾದ ಮತ್ತು ಸಂಕೀರ್ಣವಾದ ಜನಾಂಗೀಯ ವರ್ಗೀಕರಣದ ಮೂಲಕ — ಬಹುಸಂಖ್ಯಾತ ಕಪ್ಪು ಆಫ್ರಿಕನ್ನರು, ಅಲ್ಪಸಂಖ್ಯಾತ ಬಿಳಿಯ ಆಫ್ರಿಕನ್ನರು, ಮಿಶ್ರಜನಾಂಗಗಳ ಹಲಬಗೆಯ Colored (ಅವರು ಕಪ್ಪು ಜನರೂ ಅಲ್ಲ ಬಿಳಿಯರೂ ಅಲ್ಲ), ಮತ್ತು Indians ಎಂದು — ವಿಂಗಡಿಸಿ, ಒಂದು ಶ್ರೇಣೀಕೃತ ವ್ಯವಸ್ಥೆಯನ್ನೂ ಕಾನೂನುಗಳನ್ನೂ ಆಳ್ವಿಕೆಯೇ ಅನ್ವಯಗೊಳಿಸಿತ್ತು.
ಎಷ್ಟರಮಟ್ಟಿಗೆಂದರೆ, ಯಾವ ಜನಾಂಗದವರು ಎಲ್ಲಿ ವಾಸಿಸಬಹುದು, ಎಲ್ಲಿ ಓಡಾಡಬಹುದು, ಯಾರೊಂದಿಗೆ ಬೆರೆಯಬಹುದು, ಯಾವ ರೀತಿಯ ಕೆಲಸಗಳನ್ನು ಮಾಡಬಹುದು — ಪ್ರತಿಯೊಂದರಲ್ಲೂ ಅಚ್ಚುಕಟ್ಟಾದ ಬೇರ್ಪಾಟು. ಒಂದು ರೀತಿಯಲ್ಲಿ ಇದು ನಮ್ಮಲ್ಲಿನ ಜಾತಿಪದ್ಧತಿಯಂಥದ್ದು. ಆದರೆ, ನಮ್ಮ ಸಮಾಜದಲ್ಲಿ ಜಾತಿಪದ್ಧತಿ ತಲೆದೋರಿ ನೆಲೆಗೊಂಡಿದ್ದು ಸುಮಾರು 2000 ವರ್ಷಗಳಷ್ಟು ಹಿಂದೆ. ಅದರ ಹಿಂದಿನ ಸಾಮಾಜಿಕ ರಾಜಕೀಯ ಪ್ರಕ್ರಿಯೆಗಳ ಚರಿತ್ರೆಯು ಸುದೀರ್ಘವೂ ಸಂಕೀರ್ಣವೂ ಆದದ್ದು. ಸಾಮಾಜಿಕ ಉಪಯುಕ್ತತೆ ಮತ್ತು ದುಡಿಮೆಯ ವಿತರಣೆಯನ್ನು ಆಧರಿಸಿದ ಹಾಗೂ ಕೊರೆದಿಟ್ಟ ಗೆರೆಗಳಿರದ ಏರ್ಪಾಟು ಎನ್ನಲಾದ ವರ್ಣ ವ್ಯವಸ್ಥೆಯು ಕಾಲಕ್ರಮದಲ್ಲಿ ಭ್ರಷ್ಟಗೊಂಡು ರೂಪಾಂತರ ಹೊಂದಿ ಜಾತಿಪದ್ಧತಿಯಾಯಿತು ಎಂಬ ವಾದಗಳಿವೆ. ಒಟ್ಟಿನಲ್ಲಿ ಅದು ಒಮ್ಮೆಲೇ ಉಂಟಾದದ್ದಲ್ಲ ಮತ್ತು ಗಟ್ಟಿಯಾಗಿ ಬೇರೂರಲು ಸಾಕಷ್ಟು ಸಮಯ ತೆಗೆದುಕೊಂಡಿತು ಎನ್ನುವುದಂತೂ ಹೌದು. ಆದರೆ, ಅಪಾರ್ಥೈಡ್ ಅನ್ನು ದಕ್ಷಿಣ ಆಫ್ರಿಕಾದಲ್ಲಿ ವಸಾಹತುಶಾಹಿ ಆಳ್ವಿಕೆಯು ಶಾಸನಬದ್ಧವಾಗಿ ಕೆಲವೇ ವರ್ಷಗಳಲ್ಲಿ ನೆಲೆಗೊಳಿಸಿತು. ಅಷ್ಟು ಕ್ಷಿಪ್ರವಾಗಿಯೂ ದಕ್ಷವಾಗಿಯೂ ಅದನ್ನು ಅನುಷ್ಠಾನಗೊಳಿಸುವುದು ಪ್ರಾಯಶಃ ಆಧುನಿಕ ಕಾಲದ ತರ್ಕಬದ್ಧತೆ ಮತ್ತು ಮೌಲ್ಯಗಳಿಂದಲೇ ಸಾಧ್ಯವೇನೋ!
ಇದರ ಪರಿಣಾಮವಾಗಿ, 1948ರಿಂದ 1994ರವರೆಗಿನ ಅವಧಿಯಲ್ಲಿ ಸುಮಾರು 35 ಲಕ್ಷ ಕಪ್ಪು ಆಫ್ರಿಕನ್ನರು ತಮ್ಮ ಮೂಲ ಮನೆಗಳನ್ನ ಕಳೆದುಕೊಂಡರು. ಅವರನ್ನು ಪ್ರತ್ಯೇಕವಾಗಿ ಬಿಳಿಯರಿಂದ ಮತ್ತು ಇತರ ಸೌತ್ ಆಫ್ರಿಕನ್ನರಿಂದ ದೂರ ಇರಿಸಲಾಯಿತು. ಅಪಾರ್ಥೈಡ್ಗೆ ಸಂಬಂಧಿಸಿದ ಹಿಂಸಾಚಾರದಲ್ಲಿ ಹತ್ತಾರು ಸಾವಿರ ಜನ ಜೀವ ಕೂಡ ಕಳೆದುಕೊಂಡರು.3

ಇಂಥ ಸಂಕೀರ್ಣ, ಪ್ರಕ್ಷುಬ್ಧ ಸಾಮಾಜಿಕ ಸಂದರ್ಭವನ್ನು ಹಿನ್ನೆಲೆಯಾಗಿಟ್ಟುಕೊಂಡು ಬರೆದ ಸೌತ್ ಆಫ್ರಿಕಾದ ಬಿಳಿಯ ಜನಾಂಗದ ಇಬ್ಬರು ಮುಂಚೂಣಿಯ ಕಾದಂಬರಿಕಾರರು, ನಡೀನ್ ಗಾರ್ಡಿಮರ್ (Nadine Gordimer) ಮತ್ತು ಜೆ ಎಂ ಕುಟ್ಸಿ (J M Coetzee). ಗಾರ್ಡಿಮರ್ ಯಹೂದಿ ಸಮುದಾಯಕ್ಕೆ ಸೇರಿದವರು; ಕುಟ್ಸಿ ಆಫ್ರಿಕಾನ್ಸ್ ಮಾತಾಡುವ ಬೋಅರ್ — ಎಂದರೆ ಡಚ್ ರೈತರ — ಸಮುದಾಯಕ್ಕೆ ಸೇರಿದವರು. ಇದನ್ನು ಹೇಳಿದ್ದಕ್ಕೆ ಕಾರಣ, ಅಪಾರ್ಥೈಡ್ ನಿಯಮಗಳ ಪ್ರಕಾರ ಇವೆರಡೂ ಬಿಳಿಯ ಜನಾಂಗಗಳೇ, ಶೋಷಕ ಸಮುದಾಯವೇ. ಹಾಗಿದ್ದೂ ಅಂಚಿನಲ್ಲಿದ್ದಂಥವು. ಅವು ನಂತರದ ವಸುಹತುದಾರರಾದ ಬ್ರಿಟಿಷರಿಂದ ಶೋಷಣೆಗೆ ಒಳಗಾದ ಸಮುದಾಯಗಳೂ ಹೌದು. ಬ್ರಿಟಿಷ್ ವಸಾಹತುದಾರರು ಬೋಅರ್ ಜನಾಂಗದವರನ್ನು ದಮನಿಸಲಿಕ್ಕೆ ನೋಡಿದರೆ ಶೋಷಿತ ಬೋಅರ್ ಜನಾಂಗದವರು ಕಂದು, ಕಪ್ಪು ಜನರನ್ನು ಶೋಷಿಸುತ್ತಿದ್ದರು. ಮತ್ತಿನ್ನು, ಉಳಿದೆಲ್ಲ ಬಿಳಿಯ ಸಮುದಾಯಗಳು ಯಹೂದಿಗಳನ್ನು ದೂರವಿಟ್ಟಿದ್ದರು. ಇದರ ಜೊತೆಗೇ, ಪ್ರತಿಯೊಂದು ಸಮುದಾಯದಲ್ಲಿ ಪ್ರಚಲಿತವಾಗಿದ್ದ / ಇರುವ ಗಂಡಾಳಿಕೆ ಮತ್ತು ಅದರ ಪರಿಣಾಮವಾಗಿ ಹೆಣ್ಣಿನ ಮೇಲೆ ನಡೆಯುವ ದಬ್ಬಾಳಿಕೆಯ ವಾಸ್ತವ.

ಗಾರ್ಡಿಮರ್ 2014ರಲ್ಲಿ ತೀರಿಕೊಂಡರು, ಕುಟ್ಸಿ ನಮ್ಮೊಂದಿಗೆ ಇನ್ನೂ ಇದ್ದು ಬರೆಯುತ್ತಲಿದ್ದಾರೆ.
ಕುಟ್ಸಿಯ ಕೃತಿಗಳಲ್ಲಿ ಒಂದೆಡೆ ಸಮುದಾಯಗಳ ನಡುವಿನ ಮತ್ತು ಅವುಗಳೊಳಗಿನ ಸಂಘರ್ಷಗಳಿದ್ದರೆ, ಇನ್ನೊಂದೆಡೆ ಸಮುದಾಯಪ್ರಜ್ಞೆಗೆ ಹೊರತಾದ ಮನುಷ್ಯನ ಆಂತರಿಕ ತುಮುಲಗಳ, ಸಂಕೀರ್ಣತೆಯ, ಮೂಲಪ್ರವೃತ್ತಿಯ ಹುಡುಕಾಟ ಎದ್ದುಕಾಣುತ್ತದೆ. ಒಬ್ಬನೇ ಮನುಷ್ಯನಲ್ಲಿ ಉದಾತ್ತತೆಯ ಎತ್ತರಕೇರುವ, ಕ್ಷುದ್ರತೆಯ ಆಳಕ್ಕಿಳಿಯುವ; ಅಪಾರ ಕರುಣೆಯ, ಅಕಾರಣ ಕ್ರೌರ್ಯದ ಸಾಧ್ಯತೆಗಳೆಲ್ಲ ಇರುತ್ತವೆ. ಮಾನವನಾಗಿ ಇರುವುದು ಎಂದರೆ ಏನು, ಮನುಷ್ಯತ್ವ ಎನ್ನುವುದರ ಒಟ್ಟಾರೆ ಸ್ವರೂಪವೇನು ಎಂಬುದನ್ನು ಆಳವಾಗಿ ಪರಿಶೋಧಿಸಿ ಅದರ ದರ್ಶನವನ್ನ ಓದುಗರಿಗೆ ಮಾಡಿಸುವ ಬರಹಗಾರರಲ್ಲಿ ಕುಟ್ಸಿ ಬಹುಮುಖ್ಯರು.
ಸಾಮಾನ್ಯವಾಗಿ ನಮ್ಮಲ್ಲಿ ಕಂಡುಬರುವ — ಇತ್ತೀಚೆಗಂತೂ ಇನ್ನೂ ಹೆಚ್ಚಾಗಿರುವ — ಒಂದು ಪ್ರವೃತ್ತಿ, ಎಲ್ಲವನ್ನೂ ಬೈನರಿ ದೃಷ್ಟಿಕೋನದಿಂದ ನೋಡುವುದು. ಜಗತ್ತಿನ ಪ್ರತಿಯೊಂದು ವಿದ್ಯಮಾನವನ್ನೂ ನಮಗೆ ಪ್ರಿಯವಾದ ಸಿದ್ಧಾಂತಗಳ ಚೌಕಟ್ಟಿನಲ್ಲಿಯೇ ಹಿಡಿದಿಡುವುದು. ಉದಾಹರಣೆಗೆ, ಶೋಷಕ ಮತ್ತು ಶೋಷಿತ ಎನ್ನುವ ಲೆನ್ಸ್. ಈ ಗ್ರಹಿಕೆ ತಪ್ಪು ಎಂದಲ್ಲ. ಅದು ಅಗತ್ಯದ್ದೇ. ಆದರೆ, ಅದರಿಂದಲೇ ಎಲ್ಲವನ್ನೂ ವಿವರಿಸಲಾಗುವುದಿಲ್ಲ. ಹಾಗೆ ವಿವರಿಸಲು ಹೊರಟಾಗ ನಾವು ಪ್ರತಿಯೊಬ್ಬ ವ್ಯಕ್ತಿಗೂ ಅವನ ಸಮುದಾಯಕ್ಕೆ ಹೊರತಾದ, ಅದರ ಎಲ್ಲೆಯನ್ನು ಮೀರಬಲ್ಲ ಕರ್ತೃತ್ವಶಕ್ತಿ ಇದೆ ಎನ್ನುವುದನ್ನು ಕಡೆಗಾಣಿಸಿಸಂತಾಗುತ್ತದೆ.
ಎಲ್ಲ ಸಿದ್ಧಾಂತಗಳಿಗೂ ಇರುವ ಸೀಮಿತತೆಯನ್ನು ಗುರುತಿಸಿ ಅರಿತುಕೊಳ್ಳುವ ಅಗತ್ಯವನ್ನು ಅವರ ಕೃತಿಗಳ ಓದು ಮನಗಾಣಿಸುತ್ತದೆ. ವ್ಯಕ್ತಿಗಳನ್ನು ಅವರು ಸೇರಿದ ಸಮುದಾಯದ ಪ್ರತಿನಿಧಿಯಾಗಿ ಮಾತ್ರ ನೋಡಿದಾಗ, ಯಾವುದೇ ಸಂದರ್ಭದಲ್ಲೂ ಅವರು ವ್ಯಕ್ತಿಗಳು ಅಂತ ಪರಿಗಣಿಸದೇ ಇದ್ದಾಗ ಹಲಬಗೆಯ ಸಮಸ್ಯೆಗಳು ಎದುರಾಗುತ್ತವೆ. ಕುಟ್ಸಿಯ ಕಾದಂಬರಿಗಳಲ್ಲಿ ಸತತವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಸೈದ್ಧಾಂತಿಕ ಚೌಕಟ್ಟುಗಳ ಮೀರುವಿಕೆಯನ್ನು ಕಾಣತ್ತೇವೆ. ಮತ್ತೆಮತ್ತೆ ಮನುಷ್ಯರನ್ನು, ವ್ಯಕ್ತಿಗಳನ್ನು — ಅವರ ಎಲ್ಲಾ ತಪ್ಪುಒಪ್ಪು ಓರೆಕೋರೆಗಳ ಸಮೇತ — ಕೇಂದ್ರಕ್ಕೆ ತರುವ ಪ್ರಯತ್ನವನ್ನು ಕಾಣುತ್ತೇವೆ.
ಇದಕ್ಕೆ ನಿದರ್ಶನವಾಗಿ ಅವರ ಬಹುಚರ್ಚಿತ ಕಾದಂಬರಿ Disgraceನ ಡೇವಿಡ್ ಲೂರೀ ಎಂಬ ಪಾತ್ರವನ್ನ ನೋಡಬಹುದು. Waiting for the Barbariansನ magistrate ಪಾತ್ರವನ್ನ ನೋಡಬಹುದು. ಈ ನೆಲೆಯಲ್ಲಿ, ವೈಯಕ್ತಿಕವಾಗಿ ನನಗೆ ತೀರ ಆಪ್ತವಾದದ್ದು ಕುಟ್ಸಿಯ ಮೈಕಲ್ ಕೆ. ಕುಟ್ಸಿಯವರ ದರ್ಶನದ ಒಂದು ಪರಿಪೂರ್ಣ ಅಭಿವ್ಯಕ್ತಿ ಮೈಕಲ್ ಕೆ ಎಂಬ ಪಾತ್ರ ಅಂತ ನನಗೆ ಅನ್ನಿಸಿದೆ. ಅವನಿಗೆ ತೋಟಗಾರನಾಗುವ ಕನವರಿಕೆ; ನೆಲದಲ್ಲಿ ಬಿತ್ತಿ ಬೆಳೆದದ್ದನ್ನು ತಿಂದು ಬದುಕುವ ಬಯಕೆ. ಅವನಿಗೆ ಸಮುದಾಯದ ಹಂಗಿಲ್ಲ, ಜಗತ್ತಿನ ಕರುಣೆ ಬೇಕಿಲ್ಲ. ಅವನೊಬ್ಬ ಪೆದ್ದು ಮನುಷ್ಯನೇ ಇರಬಹುದು, ಅಥವಾ ಅದೂ ಇರದೇ ಒಂದು ಹೆಗ್ಗಣವೋ ಎರೆಹುಳವೋ ಆಗಿರಬಹುದು. ಮೈಕಲ್ನ ಪಾತ್ರದ ಮೂಲಕ ಕುಟ್ಸಿ ಮನುಷ್ಯನ ಇರುವಿಕೆಯ ಅರ್ಥವನ್ನು, ಘನತೆಯಿಂದ ಬಾಳುವುದರ ನೆಲೆಯನ್ನು ಹುಡುಕಲೆಳಸುತ್ತಾರೆ. ಇದು ಮನುಷ್ಯ ಸ್ವತಂತ್ರವಾಗಿ ತನಗೆ ಬೇಕಾದಂತೆ ಬದುಕಿದ್ದೂ ಸೃಷ್ಟಿಯ ಉಳಿದ ಯಾವುದಕ್ಕೂ ಅಡ್ಡಿಪಡಿಸದೇ ಯಾರ ಗಮನಕ್ಕೂ ಬಾರದೇ ಧೂಳಿನ ಕಣವೊಂದರಂತೆ ಹಗುರವಾಗಿದ್ದು ಕೊನೆಗೆ ಯಾವ ಕುರುಹನ್ನೂ ಹಿಂದೆ ಬಿಡದೇ ಹಾರಿಹೋಗುವ ಬಗೆಯದ್ದು.
In the Heart of the Country ಕಾದಂಬರಿಯ ನಿರೂಪಕಿ ಬಿಳಿಯಳು, ತೋಟದ ಮಾಲೀಕನ ಮಗಳು. ಆದರೆ ಅವಳು ಒಬ್ಬ ವ್ಯಕ್ತಿ ಕೂಡ ಹೌದು. ಆಗಾಗ “I am I” ಎಂದು ಅವಳು ಒತ್ತಿ ಹೇಳುವುದನ್ನು ಕಾಣುತ್ತೇವೆ. ಹೌದು, ನಾನೊಬ್ಬ ಬಿಳಿಯಳು, ಈ ತೋಟದ ಮಾಲೀಕನ ಮಗಳು, ಆದರೆ ನಾನು ನಾನೇ, ಒಬ್ಬ ಸ್ವಾಯತ್ತ ವ್ಯಕ್ತಿ — ನೀನು ಅದನ್ನೇಕೆ ನೋಡೋದಿಲ್ಲ, ಎಂದು ಅವರ ತೋಟದಲ್ಲಿ ಕೆಲಸ ಮಾಡುವ ಹೆಂಡ್ರಿಕ್ ಎಂಬ colored ವ್ಯಕ್ತಿಗೆ ಹೇಳುತ್ತಾಳೆ. ಈ ಕಲ್ಲಿನ ಮರುಭೂಮಿಯಲ್ಲಿ ಒಬ್ಬಂಟಿ ಹೆಣ್ಣಾಗಿರುವ ನಾನು ಬಿಳಿಯವಳಾದರೂ ನಿನ್ನಿಂದ ದಮನಕ್ಕೆ ಒಳಗಾಗುವ ಸಾಧ್ಯತೆ ಅಥವಾ ನಿನ್ನನ್ನು ನಾನು ಒಪ್ಪಿಕೊಳ್ಳುವ ಸಾಧ್ಯತೆ ಕೂಡ ನನ್ನಲ್ಲಿದೆ; ಅದೇ ರೀತಿ ಶೋಷಕ ಸಮುದಾಯದ ನನ್ನನ್ನು ಶೋಷಿಸುವ ಸಾಧ್ಯತೆ ಶೋಷಿತ ಸಮುದಾಯದ ವ್ಯಕ್ತಿಯಾಗಿರುವ ನಿನ್ನಲ್ಲೂ ಇದೆ, ಎಂದವಳು ಹೇಳುವುದನ್ನು ಗಮನಿಸಬಹುದು.
ಕುಟ್ಸಿಯ ಕೃತಿಗಳಲ್ಲಿ ಈ ರೀತಿಯ ಪಾತ್ರ ವಿಪರ್ಯಯ — role inversion — ಆಗುವುದನ್ನು ನಾವು ಕಾಣಬಹುದು. ಇಂಥಲ್ಲಿ ಈ ಕಾದಂಬರಿಗೂ Disgraceನ ಕೆಲವು ಸನ್ನಿವೇಶಗಳಿಗೂ ಸಾಮ್ಯತೆಯನ್ನು ಗಮನಿಸಬಹುದು. ಗಾರ್ಡಿಮರ್ ಅವರ ಜುಲೈಸ್ ಪೀಪಲ್ ಎಂಬ ಕಾದಂಬರಿಯಲ್ಲಿಯೂ — ಇಷ್ಟು ತೀವ್ರವಾಗಿ ಅಲ್ಲದಿದ್ದರೂ — ಇಂಥದ್ದನ್ನು ಕಾಣುತ್ತೇವೆ.
ಇದು ಕುಟ್ಸಿಯ ಎರಡನೆಯ ಕಾದಂಬರಿ, 1977ರಲ್ಲಿ ಪ್ರಕಟವಾಗಿದ್ದು. ಇದು ಚಿಕ್ಕ ಕಾದಂಬರಿಯೇ, ಆದರೆ ಅವರು ಆಮೇಲಿನ ಕಾದಂಬರಿಗಳಲ್ಲಿ ಸಾಧಿಸಿದ ಹೃಸ್ವತೆ ಮತ್ತು ಸರಳತೆಗೆ ಹೋಲಿಸಿದರೆ ಇದರಲ್ಲಿ ಹೆಚ್ಚು ವಿಸ್ತೃತವಾದ ಆದ ಮತ್ತು ವಿಲಕ್ಷಣವಾಗಿ ಚಿತ್ರಿಸಿದ ಶೈಲೀಕೃತ ಬರವಣಿಗೆ ಇದೆ.
ನಿರೂಪಕಿಯ ಸ್ವಗತವಾದ ಕಾದಂಬರಿಯು ಅವಳ ಡೈರಿ ದಾಖಲಾತಿಗಳ ಸರಣಿಯಂತಿದೆ. ಕಲ್ಲುನೆಲದ ಆ ತೋಟದ ಮನೆಯಲ್ಲಿ ಇರುವವರು ಇಬ್ಬರೇ, ಅವಳು ಮತ್ತು ಅಪ್ಪ.
ನಮ್ಮಪ್ಪ ನನ್ನ ಗೈರುಹಾಜರಿಯನ್ನು ಗಮನಿಸಲೇ ಇಲ್ಲ. ಅವನ ಬದುಕಿನಲ್ಲಿ ನಾನು ಯಾವಾಗಲೂ 'ಗೈರುಹಾಜರಿ'ಯೇ, ಜೀವನವೆಲ್ಲ ಹಾಗೆಯೇ ಕಳೆದಿದೆ. ಆದ್ದರಿಂದಲೇ ಈ ಮನೆಯ ಕೇಂದ್ರದಲ್ಲಿ, ಅಕ್ಕರೆ ತುಂಬಿದ ಬೆಚ್ಚನೆಯ ಹೆಣ್ಣಾಗಿ ಇರಬೇಕಾಗಿದ್ದ ನಾನು ಸೊನ್ನೆಯಾಗಿದ್ದೇನೆ, ಖಾಲಿಯಾಗಿದ್ದೇನೆ. ಎಲ್ಲ ಆಘಾತಗಳೂ ಒಳಗೆ ಕುಸಿಯುವ ನಿರ್ವಾತವಾಗಿದ್ದೇನೆ. ಗಿರಗಿರ ತಿರುಗುವ ಗಾಳಿಸುಳಿ ನಾನು, ಅದುಮಿಹಿಡಿದ ಆವೇಶ ನಾನು, ಹೇಳುವವರಿಲ್ಲದೆ ಕೇಳುವವರಿಲ್ಲದೆ ಮನಸ್ಸಿನಲ್ಲಿ ಸೇಡುತುಂಬಿಕೊಂಡು ಕಾರಿಡಾರುಗಳಲ್ಲಿ ಹರಿಯುವ, ತಣ್ಣಗೆ ಕೊರೆಯುವ ಕುಳಿರ್ಗಾಳಿ ನಾನು.
ಅವರಿಬ್ಬರ ಹೊರತಾಗಿ ಅಲ್ಲಿಗೆ ಆಕಸ್ಮಿಕವೆಂಬಂತೆ ಬಂದಿಳಿದವನು ಹೆಂಡ್ರಿಕ್. ತೋಟದ ಕೆಲಸಗಾರ. ಒಂದೊಮ್ಮೆ ಹೆಂಡ್ರಿಕ್ ಮದುವೆಯಾಗಿ ತನ್ನ ಹೊಸ ವಧುವನ್ನು ಮನೆಗೆ ಕರೆತರುತ್ತಾನೆ. ಅಲ್ಲಿಂದ ಮುಂದೆ ಎಲ್ಲವೂ ಪಲ್ಲಟಗೊಳ್ಳುತ್ತದೆ. ದಿನಬಳಕೆಯ ಮಾತುಗಳೇ ಅರ್ಥಕಳೆದುಕೊಳ್ಳುತ್ತವೆ. ವಾಸ್ತವ ಕನಸು ಭ್ರಮೆಗಳ ನಡುವಿನ ಗೆರೆಗಳು ಅಳಿಸಿದಂತಾಗುತ್ತದೆ.
ತೀವ್ರವಾಗಿ ಅನುಭವಿಸಿ ಅಷ್ಟೇ ತೀವ್ರತೆಯಿಂದ ಬರೆದ ಈ ಕಾದಂಬರಿಯಲ್ಲಿ ಕಥೆಯ ಅಂಶ ತೀರ ಕಡಿಮೆ, ಘಟನೆಗಳು ಕೂಡ ಕೆಲವೇ. ಅವೂ ನಿಜಕ್ಕೂ ನಡೆದವೋ ಇಲ್ಲವೋ, ಅವುಗಳ ಕ್ರಮ ಯಾವುದು, ಕಾಲಾಂತರ ಏನು — ಯಾವುದೂ ಸ್ಪಷ್ಟವಾಗುವುದಿಲ್ಲ. ಇಡಿಯ ಕಾದಂಬರಿ ನಡೆಯುವುದು ನಿರೂಪಕಿಯ ಮನಸ್ಸಿನಲ್ಲಿ. ಅವಳೋ ಅಳತೆಗೆ ಸಿಗದಷ್ಟು ಜಾಣೆ: ತಾನು ಹೆಂಗಸು, ತಾನು ಫಿಲಾಸಫರ್ ಆಗಲು ಸಾಧ್ಯವಿಲ್ಲ ಎನ್ನುತ್ತಲೇ ಪ್ರತಿಯೊಂದನ್ನೂ ಸವಿಸ್ತಾರವಾಗಿ ಫಿಲಾಸಫೈಜ಼್ ಮಾಡಬಲ್ಲವಳು. ಮರಳ ಕಣಗಳಿಂದ ಹಿಡಿದು ಗಿಡಮರ, ಸಣ್ಣ ಕೀಟಗಳವರೆಗೆ ಸುತ್ತಲಿನ ಎಲ್ಲದರ ಬಗ್ಗೆ ಅಪಾರ ಅರಿವುಳ್ಳವಳು. ಆದರೆ ನಿರೂಪಕಿಯಾಗಿ ಸಂಪೂರ್ಣವಾಗಿ ನಂಬಿಕೆಗೆ ಅನರ್ಹಳು! Unreliable narratorನ ಮೂಲಮಾದರಿ.
ಹಿರಿಯ ವಿಮರ್ಶಕ ಮತ್ತು ಅನುವಾದಕರಾದ ಎಚ್ ಎಸ್ ರಾಘವೇಂದ್ರರಾವ್ ಅವರು ಇಂಥ ತೀವ್ರವೂ ಭ್ರಾಮಕವೂ ಸಾಂದ್ರವೂ ಆದ ಕಾದಂಬರಿಯನ್ನು ಓದಿ ದಕ್ಕಿಸಿಕೊಂಡದ್ದಷ್ಟೇ ಅಲ್ಲದೇ ಮೂಲದ ತೀವ್ರತೆ, ಅರ್ಥಸಂದಿಗ್ಧತೆ ಮತ್ತು ಆಶಯವನ್ನು ಆದ್ಯಂತವಾಗಿ ಕನ್ನಡದ ಭಾಷೆಗೆ ಒಗ್ಗಿಸಿಕೊಂಡು ಅದನ್ನು ನಮಗೆ ಓದಲಿಕ್ಕೆ ಅನುಮಾಡಿಕೊಟ್ಟಿದ್ದಾರೆ. ಇದು ದೊಡ್ಡ ಕೆಲಸ. ಇದನ್ನು ಕನ್ನಡದ ಓದುಗರು ಶ್ರಮವಿಲ್ಲದೇ ಸರಾಗವಾಗಿ ಓದಬಹುದಾದರೆ ಅದನ್ನು ಆಗಮಾಡಿದ್ದು ಅದರ ಹಿಂದಿರುವ ಅನುವಾದಕರ ಅಪಾರವಾದ ಶ್ರಮ ಮತ್ತು ತಾಳ್ಮೆ ಅನ್ನುವುದು ಸ್ಪಷ್ಟ. ಇದು ಕನ್ನಡಕ್ಕೆ ಬರಲೇಬೇಕಾದ ಕೃತಿ.
ದಕ್ಷಿಣ ಆಫ಼್ರಿಕಾದ ಪ್ರಮುಖ ಭಾಷೆಗಳಲ್ಲಿ ಒಂದಾದ ಆಫ಼್ರಿಕಾನ್ಸ್ (Afrikaans) ಭಾಷೆಯಲ್ಲಿ Coetzee ಹೆಸರನ್ನು ಸಾಮಾನ್ಯವಾಗಿ ಕು-ಟ್ಸಿ-ಅ / ಕುಟ್ಸಿಯ ಎಂದು ಉಚ್ಚರಿಸುತ್ತಾರಾದರೂ, ಸ್ವತಃ Coetzee ತಮ್ಮ ಹೆಸರನ್ನು ‘ಕುಟ್ಸಿ’ ಎಂದುಚ್ಚರಿಸುವುದರಿಂದ ಅದೇ ಬಳಕೆ ಸರಿಯಾದುದು.
ಸಾಮಾನ್ಯ ಶಕ ಪೂರ್ವ ಎಂಟನೆಯ ಶತಮಾನದಿಂದ ಸಾಮಾನ್ಯ ಶಕ ಐದನೆಯ ಶತಮಾನದವರೆಗಿನ — ಎಂದರೆ ಹೋಮರನ ಕಾಲದಿಂದ ರೋಮನ್ ಸಾಮ್ರಾಜ್ಯದ ಪತನದವರೆಗಿನ Classical Antquityಯ ಕಾಲಾವಧಿಯು ಯುರೋಪಿಯನ್ ನಾಗರಿಕತೆಯ ಮೊದಲ ಮತ್ತು ಸುದೀರ್ಘ ಸುವರ್ಣಯುಗವೆಂಬ ರಮ್ಯ ಕಲ್ಪನೆಯಿದೆ. ಪೆತ್ರಾರ್ಕ್ನ ಪ್ರಕಾರ ಮುಂದಿನ ಒಂದಿಡೀ ಸಹಸ್ರಮಾನವು ಕತ್ತಲೆಯ ಯುಗವಾಗಿತ್ತು
ಕೆಲವು ವರ್ಷಗಳ ಹಿಂದೆ ಆಫೀಸ್ ಕೆಲಸದ ಕಾರಣದಿಂದ ನನಗೆ ಸೌತ್ ಆಫ್ರಿಕಾದಲ್ಲಿ ಕೆಲವು ದಿನಗಳನ್ನು ಕಳೆಯುವ ಅವಕಾಶ ಸಿಕ್ಕಿತ್ತು. ಅಲ್ಲಿನ ಜೊಹಾನ್ನೆಸ್ಬರ್ಗ್, ಕೇಪ್ ಟೌನ್ನಂಥ ನಗರಗಳು ಯುರೋಪು ಅಮೆರಿಕದ ನಗರಗಳನ್ನ ಮೀರಿಸುವಂತೆ ಸುಸಜ್ಜಿತವಾಗಿ ಆಧುನಿಕವಾಗಿ ತಮ್ಮ ತಾಜಾತನದಿಂದ ಕಂಗೊಳಿಸುವಂಥವು. ಈಗ ಅಲ್ಲಿ ಅಪಾರ್ಥೈಡ್ ಇಲ್ಲ. ಸ್ನೇಹಪರ ಮುಕ್ತ ವಾತಾವರಣವಿದೆ. ಆದರೆ ಬಿರುಕುಗಳು ಇದುವರೆಗೂ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ನಮಗೆ ಕೇಪ್ ಟೌನ್ ಪ್ರವಾಸ ಮಾಡಿಸುತ್ತಿದ್ದ colored ಡ್ರೈವರ್ ಅಲ್ಲಿನ District 6 ಎಂಬ ಜನವಸತಿಯನ್ನು ತೋರಿಸುತ್ತ ಅರವತ್ತರ ದಶಕದಲ್ಲಿ ಅದನ್ನು ಪುಟ್ಟಪೂರಾ ಬುಲ್ಡೋಜ಼್ ಮಾಡಿ ಬಿಳಿಯರಿಗೆ ಮಾತ್ರ ಮೀಸಲಾಗಿಟ್ಟ ಕತೆಯನ್ನು ಹೇಳಿದ್ದು, ಸೌತ್ ಆಫ್ರಿಕಾದ ವಸಾಹತುಶಾಹಿ ಚರಿತ್ರೆಯ ಕಿರುಪರಿಚಯ ಮಾಡಿಸಿದ್ದು ನೆನಪಾಗುತ್ತದೆ.
ಇದನ್ನೂ ಓದಿ …
ಇರುವೆಗಾಲ ಗೆಬರಿನಂತೆ ಚಿಟ್ಟೆ ಹಲ್ಲ ಮಸೆದಂತೆ ಮಣ್ಣಹುಡಿ ಉರುಳಿದಂತೆ
ಹತ್ಯಾಕಾಂಡದಲ್ಲಿ ಬದುಕುಳಿದವರು (Holocaust Survivors) ಬರೆದ ಕೆಲವು ಪುಸ್ತಕಗಳನ್ನು ಪರಿಚಯಿಸುತ್ತ, ಜೊತೆಗೇ ಅಪಾರ್ಥೈಡ್ನ ಅವಧಿಯನ್ನು ಕ್ಯಾನ್ವಾಸ್ ಆಗಿ ಮಾಡಿಕೊಂಡ ಎರಡು ಕಾದಂಬರಿಗಳನ್ನು ಗಮನಿಸುತ್ತ, ಮನುಷ್ಯನ ಅಸ್ತಿತ್ವದ ಜೀವಶಕ್ತಿ ಮತ್ತು ಅವನ ಹುಡುಕಾಟದ ಗುರಿಗಳನ್ನು ಕುರಿತು ಕೆಲವು ವಿಚಾರಗಳನ್ನು