ಬ್ರಿಟಿಷ್ ಅಮೆರಿಕನ್ ಕವಿ ಟಿ. ಎಸ್. ಎಲಿಯಟ್ (T. S. Eliot, 26.9.1888 - 4.1.1965) ತನ್ನ ಪ್ರಸಿದ್ಧ The Love Song of J. Alfred Prufrock ಕವಿತೆಯನ್ನು ಬರೆಯಲು ಶುರು ಮಾಡಿದ್ದು 1910ರಲ್ಲಿ. ಶಿಕಾಗೋನಿಂದ ಪ್ರಕಟವಾಗುತ್ತಿದ್ದ Poetry: A Magazine of Verse ಪತ್ರಿಕೆಯ ಜೂನ್ 1915ರ ಸಂಚಿಕೆಯಲ್ಲಿ ಕವಿ ಎಜ಼್ರಾ ಪೌಂಡ್ನ ಒತ್ತಾಸೆಯಿಂದ ಪ್ರಕಟವಾಗಿತ್ತು. ಪ್ರಜ್ಞಾಪ್ರವಾಹ ತಂತ್ರ ಬಳಸಿ ಬರೆದಿರುವ, ಸಾಂದ್ರವಾಗಿರುವ, ವ್ಯಾಪಕವಾಗಿ ಪ್ರತಿಮೆಗಳನ್ನೂ ಅನ್ಯೋಕ್ತಿಗಳನ್ನೂ ಪೂರ್ವಕಥೆಗಳನ್ನೂ ಹೊಂದಿರುವ ಈ ಕವಿತೆ ಮೊದಲಿಗೆ ತೀರ ವಿಲಕ್ಷಣವಾಗಿ ತೋರಿದ್ದು ಮುಂದಿನ ದಿನಗಳಲ್ಲಿ ನವ್ಯ ಕಾವ್ಯದ ಮೂಲಮಾದರಿಯಾಗಿ ಬೆಳೆಯಿತು.
ಸಂಕೇತ ಪಾಟೀಲ ಇದನ್ನು ಮೊದಲಿಗೆ ಅನುವಾದಿಸಿದ್ದು 2008ರ ಸುಮಾರು. ಅದಾದ ನಂತರ ಇವರು ಮತ್ತೆ ಇದನ್ನೇ ಸಾಕಷ್ಟು ಸಲ ಅನುವಾದಿಸುವ ಪ್ರಯತ್ನ ಮಾಡಿದ್ದಿದೆ, ಒಂದೊಮ್ಮೆ ತೃಪ್ತಿಕರವಾದುದು ದಕ್ಕೀತೆಂಬ ಆಶಯದಿಂದ. ಸದ್ಯಕ್ಕೆ ಇತ್ತೀಚಿನ ಪ್ರಯತ್ನ ನಿಮ್ಮ ಓದಿಗೆ.
S’io credesse che mia risposta fosse
A persona che mai tornasse al mondo,
Questa fiamma staria senza piu scosse.
Ma percioche giammai di questo fondo
Non torno vivo alcun, s’i’odo il vero,
Senza tema d’infamia ti rispondo.
ಜೀವಜಗತ್ತಿಗೆ ಮರಳುವ
ಯಾರಿಗಾದರೂ ನಾನು ಉತ್ತರವೀಯುತ್ತಿದ್ದಲ್ಲಿ
ಈ ಉರಿ ಹೀಗೆ ಮಿಣುಕದೆ ನಿಶ್ಚಲವಾಗಿರುತ್ತಿತ್ತು.
ಆದರೆ ನಾ ಕೇಳಿ ತಿಳಿದಂತೆ ಈ
ಗಹ್ವರದಿಂದ ಮರಳಿ ಹೋದವರಿಲ್ಲ.
ಅಪವಾದದ ಭಯವಿಲ್ಲದೆ
ಕೊಡುವೆ ನಿನಗುತ್ತರ1
ಹೋಗೋಣಲ್ಲವೆ ನೀನೂ ನಾನೂ
ಟೇಬಲ್ಲಿನ ಮೇಲೆ ಮಂಪರುಕವಿದ ಪೇಶಂಟಿನ ಹಾಗೆ ಇಳಿಸಂಜೆ
ಆಕಾಶದಗಲಕ್ಕೂ ಹರಡಿಕೊಂಡಿರುವಾಗ;
ಹೋಗೋಣಲ್ಲ, ಆ ಅರೆನಿರ್ಜನ ಓಣಿಗಳ
ರಾತ್ರಿಯೊಪ್ಪತ್ತಿನ ತಹತಹಿಕೆಗೆಟಕುವ ಸೋವಿ ಹೋಟೆಲುಗಳ
ಕಟ್ಟಿಗೆ ಹೊಟ್ಟು ಆಯ್ಸ್ಟರ್ ಚಿಪ್ಪುಗಳ ನೆಲಹಾಸಿನ ರೆಸ್ಟೊರಾಂಟುಗಳ
ಕನವರಿಕೆಗಳ ಮರೆಯಲ್ಲಿ:
ಕಪಟ ಉದ್ದಿಶ್ಶದ ವಾಗ್ವಾದದಿಂದ
ಬಳಲಿಸುವಂಥ ಬೀದಿಗಳು
ಎರಗಿ ಮಾತುಮರೆಸುವ ಪ್ರಶ್ನೆಯತ್ತ ಒಯ್ಯುವ ಬೀದಿಗಳು …
ಓಹ್, ಕೇಳದಿರು, “ಅದು ಯಾವುದು?” ಎಂದು.
ಹೋಗೋಣ. ಭೇಟಿ ಕೊಡೋಣ.
ಕೋಣೆಯೊಳಗೆ ಹೆಂಗಸರು ಬಂದುಹೋಗಿ ಮಾಡುತ್ತಾರೆ.
ಮೈಕೆಲ್ಯಾಂಜೆಲೋನ ಕುರಿತು ಮಾತಾಡುತ್ತಾರೆ.
ಕಿಟಕಿಗಾಜಿಗೆ ಬೆನ್ನುತಿಕ್ಕುವ ಹಳದಿಯ ಮಂಜು,
ಕಿಟಕಿಗಾಜಿಗೆ ಮುಸುಡಿಯುಜ್ಜುವ ಹಳದಿಯ ಹೊಗೆ
ಸಂಜೆಯ ಮೂಲೆಮೂಲೆಗೂ ನಾಲಗೆ ಚಾಚಿತು,
ಕೊಳಚೆಗಟ್ಟಿದ ಕೊಳಗಳ ಮೇಲೆ ಸುಳಿದಾಡಿತು,
ಚಿಮಣಿಗಳಿಂದುದುರುವ ಮಸಿಗೆ ಬೆನ್ನು ಕೊಟ್ಟಿತು,
ಜಗಲಿಯಿಂದ ಜಾರಿತು ಒಮ್ಮೆಗೆಲೆ ಹಾರಿತು,
ಅಷ್ಟರಲ್ಲಿ ಇದು ಅಕ್ಟೋಬರ್ನ ಮೆದುರಾತ್ರಿಯೆಂದು ಮನಗಂಡು,
ಮನೆಯ ಸುತ್ತ ಒಮ್ಮೆ ಸುತ್ತಿ ಉಂಗುರಾಗಿ ನಿದ್ದೆಹೋಯಿತು.
ಸಮಯವಂತೂ ಇದ್ದೇ ಇದೆ
ಕಿಟಕಿಗಾಜುಗಳ ಮೇಲೆ ಬೆನ್ನು ತಿಕ್ಕುತ್ತ
ಬೀದಿಯುದ್ದಕ್ಕೂ ತೆವಳುವ ಹಳದಿ ಹೊಗೆಗೆ;
ಸಮಯವಿದೆ ಸಮಯವಿದೆ
ನಾವು ಕಾಣುವ ಮುಖಗಳ ಕಾಣುವ ಮುಖಗಳ ಧರಿಸಲು;
ಸಮಯವಿದೆ ಹುಟ್ಟಿಸಲು ಸಾಯಿಸಲು
ಸಮಯವಿದೆ ಮಾಡಬೇಕಾದ ಎಲ್ಲ ಕೆಲಸಗಳಿಗೆ,
ಸಮಯವಿದೆ ಪ್ರಶ್ನೆಯೊಂದನು ಎತ್ತಿ
ತಟ್ಟೆಗೆ ಬಡಿಸುವ ಕೈಗಳ ನಿತ್ಯಗಟ್ಟಳೆಗೆ;
ನಿನಗಾಗಿ ಸಮಯವಿದೆ ನನಗಾಗಿ ಸಮಯವಿದೆ
ಸಮಯವಿದೆ ನೂರಾರು ಮೀನಮೇಷಗಳಿಗೆ,
ನೂರಾರು ದರ್ಶನಗಳಿಗೆ ಸಂಸ್ಕರಣಗಳಿಗೆ
ಸಮಯವಿದೆ ಟೋಸ್ಟು ಚಹಾ ತೊಗೊಳ್ಳುವ ಮುಂಚೆ.
ಕೋಣೆಯೊಳಗೆ ಹೆಂಗಸರು ಬಂದುಹೋಗಿ ಮಾಡುತ್ತಾರೆ.
ಮೈಕೆಲ್ಯಾಂಜೆಲೋನ ಕುರಿತು ಮಾತಾಡುತ್ತಾರೆ.
ಸಮಯ ಇದ್ದೇ ಇದೆ
“ಧೈರ್ಯವಿದೆಯೇ ನನಗೆ? ಧೈರ್ಯವಿದೆಯೇ?” ಧೇನಿಸಲು
ಸಮಯವಿದೆ ಹಿಂದಿರುಗಿ ಮೆಟ್ಟಲಿಳಿಯಲು
ನಡುವೆ ಬೋಡಾಗುತ್ತಿರುವ ತಲೆಬಾಗಿಸಲು
(ಅವರೆನ್ನುವರು: “ಎಷ್ಟುದುರಿವೆ ನೋಡು ಅವನ ಕೂದಲು!”)
ನನ್ನ ಮಾರ್ನಿಂಗ್ ಕೋಟು, ಗದ್ದಕ್ಕೊತ್ತಿದಂತಿರುವ ಕಾಲರು
ನೆಕ್ಟೈ ಸುಂದರ ನಿರಾಡಂಬರ, ಆದರೆ ಸಣ್ಣ ಪಿನ್ನಿನಿಂದ ಬಂಧಿತ
(ಅವರೆನ್ನುವರು: “ಅಯ್ಯೋ, ಅವನ ಕೈಕಾಲುಗಳೆಷ್ಟು ಬಡಕಲು!”)
ವಿಶ್ವವನು ಅಲುಗಿಸುವ
ಸಾಹಸ ಇದೆಯೇ?
ಸಮಯವಿದೆ ನಿಮಿಷದಲ್ಲೇ
ನಿರ್ಧರಿಸಲು ವಿಮರ್ಶಿಸಲು, ಮರುನಿಮಿಷದಿ ಕವುಚಿಹಾಕಲು.
ಯಾಕೆಂದರೆ ಇವೆಲ್ಲವ ನಾನು ಈಗಾಗಲೇ ಬಲ್ಲೆ, ಎಲ್ಲವನು ಅರಿತಿರುವೆ:
ಸಂಜೆಗಳ ನಸುಕುಗಳ ಅಪರಾಹ್ಣಗಳ ಬಲ್ಲೆ
ನನ್ನ ಬಾಳುವೆಯನು ಕಾಫೀ ಚಮ್ಮಚೆಗಳಿಂದ ಅಳೆದು ಸುರಿದಿರುವೆ;
ದೂರದ ರೂಮಿನಿಂದ ಬರುತ್ತಿರುವ ಸಂಗೀತದಡಿಯಲ್ಲಿ
ನೆಲಕ್ಕಚ್ಚುತ್ತಿರುವ ದನಿಗಳ ಕೊನೆಯುಸಿರನೂ ಅರಿತಿರುವೆ.
ಹೀಗಿರುವಾಗ ಹೇಗೆ ಮುಂದರಿಯಲಿ?
ಆ ಕಣ್ಣುಗಳೂ ನನಗೆ ಗೊತ್ತು, ಅವೆಲ್ಲವೂ —
ಎಲ್ಲರನ್ನೂ ಸೂತ್ರಬದ್ಧ ನುಡಿಗಟ್ಟಿನಿಂದ ಕಟ್ಟಿಹಾಕಬಲ್ಲ ನೋಟಗಳು,
ಹೀಗೆ ನಾನೊಂದು ಸೂತ್ರವಾದಾಗ, ಪಿನ್ನಿಗಂಟಿ ಅಸ್ತವ್ಯಸ್ತ ಚಾಚಿಕೊಂಡಿರುವಾಗ,
ಪಿನ್ನೆರಗಿ ಗೋಡೆಗೊರಗಿ ಓರೆಕೋರೆ ಹೊರಳಾಡುತ್ತಿರುವಾಗ,
ಹೇಗೆ ಶುರು ಮಾಡಲಿ, ಹೇಳಿ?
ನನ್ನ ನಿತ್ಯದ ರೀತಿಗಳ ಸುಟ್ಟ ಮೋಟುಗಳನ್ನು ಹೇಗೆ ಉಗಿಯಲಿ?
ಹೇಗೆ ಮುಂದರಿಯುವ ಸಾಹಸಪಡಲಿ?
ಮತ್ತೆ ನನಗೆ ಆ ಕೈಗಳೂ ಗೊತ್ತು, ಅವೆಲ್ಲವೂ —
ಬಳೆಗಳಿರುವ ಕೈಗಳು, ಕೂದಲಿಲ್ಲದ ಬೆಳ್ಳನೆಯ ಕೈಗಳು
(ಆದರೆ ದೀಪದ ಬೆಳಕಿನಲ್ಲಿ ಕಂಡು ಕೈಕೊಡುವ ಕಂದು ಕೂದಲು!)
ಇದೇನು, ಯಾರದೋ ಬಟ್ಟೆಗಳ ಪರಿಮಳ
ಹೀಗೆ ನನ್ನ ದಾರಿ ತಪ್ಪಿಸುತ್ತಿದೆಯೇ?
ಟೇಬಲ್ಲಿನ ಮೇಲೆ ಒರಗಿರುವ ಕೈಗಳು, ಶಾಲು ಸುತ್ತಿಕೊಂಡಿರುವ ಕೈಗಳು.
ಮತ್ತೀಗ ಮುಂದೆ ಹೆಜ್ಜೆಯಿಡಲೆ?
ಆದರೆ... ಎಲ್ಲಿಂದ ಶುರು ಮಾಡಲಿ?
ಮುಸ್ಸಂಜೆಗಳ ಸಂದಿಗಳಲ್ಲಿ ಹಾದುಹೋಗಿರುವೆ,
ಕಿಟಕಿಗಳಲ್ಲಿ ಬಾಗಿ ನಿಂತ ಒಂಟಿ ಗಂಡಸರ
ಪೈಪುಗಳಿಂದೊಸರಿ ಮೇಲೆರುವ ಹೊಗೆ ನೋಡಿರುವೆನೆಂದು ಹೇಳಲೆ? ...
ನನಗೊಂದು ಜೋಡಿ ಪರಪರಕು ಉಗುರುಗಳಿರಬೇಕಿತ್ತು
ನಿ:ಶಬ್ದ ಸಮುದ್ರಗಳಡಿಯಲ್ಲಿ ಗರಗರ ತಿರುಗುತ್ತಿದ್ದೆ.
ಮತ್ತೆ ಈ ಮಧ್ಯಾಹ್ನ, ಈ ಸಂಜೆ ಎಷ್ಟು ನಿರುಂಬಳ ಮಲಗಿದೆ!
ನೀಳವಾದ ಬೆರಳುಗಳಿಂದ ನೀವಿಸಿಕೊಂಡು,
ನಿದ್ರಿಸುತ್ತಿದೆ … ಸುಸ್ತಾಗಿದೆ ... ಅಥವಾ ಸೋಗು ಹಾಕುತ್ತಿದೆ,
ನೆಲಹಾಸಿನ ಮೇಲೆ ಮೈಚಾಚಿ, ಇಲ್ಲಿಯೇ ನಿನ್ನ ನನ್ನ ಪಕ್ಕದಲ್ಲಿಯೇ.
ಚಹಾ, ಕೇಕು, ಐಸ್ಕ್ರೀಮುಗಳ ನಂತರ ಪ್ರಸಕ್ತ ಕ್ಷಣವನ್ನು
ತೀರಾ ಸಂದಿಗ್ಧಕ್ಕೆ ತಳ್ಳುವ ಚೇತನ ನನ್ನಲ್ಲಿರಲೇಬೇಕೆ?
ನಾನು ಅತ್ತುಕರೆದು ಹೊಟ್ಟೆಗಟ್ಟಿ ಗೋಳಾಡಿ ಪ್ರಾರ್ಥಿಸಿದ್ದರೂ
ನನ್ನ (ಈಗ ಸ್ವಲ್ಪ ಬಕ್ಕ) ತಲೆಯನ್ನು ತಟ್ಟೆಯಲ್ಲಿ ಹೊತ್ತು ತಂದದ್ದನ್ನು ನೋಡಿದ್ದರೂ
ನಾನೇನು ಪ್ರವಾದಿಯಲ್ಲ — ಹೇಳಲೇಬೇಕಾದ ಮಹತ್ವದ ಸಂಗತಿಯೂ ನನ್ನಲ್ಲಿಲ್ಲ;
ನೋಡಿರುವೆ ನನ್ನ ಶ್ರೇಷ್ಠತೆಯ ಕ್ಷಣ ಮಿಣುಗುಟ್ಟಿದ್ದನ್ನೂ,
ನೋಡಿರುವೆ ಕಾಲನ ನಿತ್ಯ ಕಿಂಕರ ನನ್ನ ಕೋಟನ್ನು ಇಸಿದುಕೊಳ್ಳುವುದನ್ನು ಮುಸಿನಗುವುದನ್ನು,
ಒಂದೇ ಮಾತಲ್ಲಿ ಹೇಳಬೇಕೆಂದರೆ — ನಾನು ಹೆದರಿದ್ದೆ.
ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಆ ಕಪ್ಪುಗಳು ಆ ಮುರಬ್ಬ ಚಹಾಗಳ ನಂತರ
ಪಿಂಗಾಣಿ ಕಪ್ಪು-ಬಸಿಗಳ ನಡುವೆ ನಿನ್ನ ನನ್ನ ಬಗೆಗಿನ ಮಾತುಗಳ ನಡುವೆ,
ವಿಷಯದ ಕೊಂಡಿಯನ್ನು ಒಂದು ಮುಗುಳ್ನಗೆಯಿಂದ ತುಂಡು ಮಾಡುವುದು,
ಬ್ರಹ್ಮಾಂಡದಂಥದನು ಹಿಂಡಿ ಚೆಂಡು ಮಾಡುವುದು,
ಮಾತುಮರೆಸುವ ಪ್ರಶ್ನೆಯಂಥದರತ್ತ ದುಂಡಗುರುಳಿಸುವುದು,
“ನಾನು ಲೆಜ಼ಾರಸ್, ಸತ್ತವನೆದ್ದು ಬಂದಿದ್ದೇನೆ,
ಎಲ್ಲ ಹೇಳಲು ಮರಳಿ ಬಂದಿದ್ದೇನೆ, ನಿಮಗೆಲ್ಲ ಹೇಳಲು,” ಎಂದು ಬಿಡುವುದು —
ಅವಳ ತಲೆಗೆ ದಿಂಬಿರಿಸಿ, “ನಾನು ಹೇಳಿದರರ್ಥ
ಅದಲ್ಲ, ಅದಲ್ಲವೇ ಅಲ್ಲ,” ಎಂದು ಹೇಳಿದ್ದಲ್ಲಿ,
ಉಪಯುಕ್ತವಾದುದಾಗುತ್ತಿತ್ತೆ?
ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಉಪಯುಕ್ತವಾದುದಾಗುತ್ತಿತ್ತೆ?
ಆ ಸೂರ್ಯಾಸ್ತಗಳು ಆ ಹಿತ್ತಿಲುಗಳು ನೀರು ಚಿಮುಕಿಸಿದ್ದ ಬೀದಿಗಳು,
ಕಾದಂಬರಿಗಳು ಚಹಾಕಪ್ಪುಗಳು ನೆಲಹಾಸಿನುದ್ದಕ್ಕೂ ಎಳೆವ ಸ್ಕರ್ಟುಗಳು —
ಇವೆಲ್ಲ ಮತ್ತು ಇನ್ನೆಷ್ಟೋ ಸಂಗತಿಗಳ ನಂತರ? —
ನನಗನ್ನಿಸ್ಸಿದ್ದನ್ನು ಯಥಾರ್ಥ ಹೇಳುವುದು ಸಾಧ್ಯವೇ ಇಲ್ಲ!
ಆದರೆ ಒಂದು ಮಾಯಾವಿ ಲಾಟೀನು ತಳಮಳದ ವಿನ್ಯಾಸವ ಪರದೆಯ ಮೇಲೆ ಎಸೆದಂತೆ:
ತಲೆದಿಂಬು ಅತ್ತಿತ್ತ ಸರಿಸಿ, ಶಾಲನ್ನು ಕಿತ್ತೆಸೆದು,
ಕಿಟಕಿಯತ್ತ ಮುಖ ತಿರುಗಿಸಿ, “ಅಲ್ಲ, ನಾನು ಹೇಳಿದ್ದರ ಅರ್ಥ
ಅದಲ್ಲ. ಅದಲ್ಲವೇ ಅಲ್ಲ,” ಎಂದು ಹೇಳಿದ್ದರೆ,
ಆವಾಗ ಅದು ಸರಿಹೋಗುತ್ತಿತ್ತೇ?
ಅಲ್ಲ! ನಾನು ಪ್ರಿನ್ಸ್ ಹ್ಯಾಮ್ಲೆಟ್ ಅಲ್ಲ, ಅದಾಗುವುದು ಸಾಧ್ಯವೂ ಇಲ್ಲ;
ನಾನೊಬ್ಬ ಸಹಚರ ಬೆಂಗಾವಲಿನವ ಜಂಗುಳಿಯ ಹಿಗ್ಗಿಸಿ ಮುಂಬರಿಸಬಲ್ಲವ
ಒಂದೆರಡು ದೃಶ್ಯಗಳ ಶುರುಮಾಡಬಲ್ಲವ ಸಲಹೆ ಕೊಡಬಲ್ಲವ
ರಾಜಕುವರನಿಗೆ; ಸುಲಭ ಸಲಕರಣೆ, ಸಂಶಯವಿಲ್ಲ,
ಆದರಿಸುವವ, ಕೃತಕೃತ್ಯೆಯಿಂದ ಉಪಯೋಗಕ್ಕೆ ಬರುವವ,
ವ್ಯಾವಹಾರಿಕ, ಜಾಗರೂಕ, ಕೂಲಂಕಷ;
ಅತಿ ಮಾತುಗಾರ ಆದರೆ ತುಸು ಮೊದ್ದು
ಕೆಲವೊಮ್ಮೆ ನಿಜಕ್ಕೂ ಹಾಸ್ಯಾಸ್ಪದ
ಒಮ್ಮೊಮ್ಮೆಯಂತೂ ಹೆಚ್ಚೂಕಡಿಮೆ ವಿದೂಷಕ.
ವಯಸ್ಸಾಗುತ್ತಿದೆ… ಮುದುಕನಾಗುತ್ತಿದ್ದೇನೆ…
ಕೆಳಗೆ ಮಡಿಕೆ ಹಾಕಿ ಪ್ಯಾಂಟು ತೊಡುತ್ತೇನೆ.
ಕೂದಲು ಹಿಂದಕ್ಕೆ ಬಾಚಲೆ? ಪೀಚ್ ತಿನ್ನುವ ಸಾಹಸ ಮಾಡಲೆ?
ನಾನು ಬಿಳಿಯ ಫ್ಲ್ಯಾನೆಲ್ ಟ್ರೌಸರ್ಸ್ ತೊಟ್ಟು, ಬೀಚ್ ಮೇಲೆ ಓಡಾಡುವೆ.
ನಾನು ಮತ್ಸ್ಯಕನ್ನಿಕೆಯರ ಹಾಡು ಪ್ರತಿಹಾಡುಗಳನ್ನು ಕೇಳಿರುವೆ.
ಅವರು ನನಗಾಗಿ ಹಾಡುವರೆಂದು ಎನ್ನಿಸುವುದಿಲ್ಲ.
ಅವರನ್ನು ನೋಡಿದ್ದೇನೆ ಅಲೆಗಳ ಸವಾರಿ ಮಾಡುತ್ತ ಸಮುದ್ರದತ್ತ ಹೋಗುವಾಗ
ಗಾಳಿ ಬೀಸಿ ನೀರನ್ನು ಕಪ್ಪುಬಿಳುಪಾಗಿ ಹರಡುವಾಗ
ಅಲೆಗಳ ಬೆಳ್ಳನೆಯ ಕೂದಲನ್ನು ಹಿಂದೆ ಹಿಂದೆ ಹಿಕ್ಕುವಾಗ.
ತಿರುಗಿದ್ದೇವೆ ನಾವು ಸಮುದ್ರದ ಅನೇಕ ಕಕ್ಷೆಗಳಲ್ಲಿ
ಕೆಂಪು ಕಂದು ಜೊಂಡಿನ ಮಾಲೆ ಧರಿಸಿರುವ ಸಾಗರಕನ್ನಿಕೆಯರ ಸುತ್ತಲೂ
ಮನುಷ್ಯ ದನಿಗಳು ನಮ್ಮನ್ನೆಬ್ಬಿಸುವ ತನಕ, ಮುಳುಗಿಸುವ ತನಕ.
ಡಾಂಟೆಯ ಡಿವೈನ್ ಕಾಮಿಡಿಯ ಇನ್ಫ಼ರ್ನೋದ ಸಾಲುಗಳಿವು. ಇದು ಗಿಡೊ ಡ ಮಾಂಟೆಫ಼ೆಲ್ಟ್ರೋ ನರಕದ ಎಂಟನೇ ವರ್ತುಲದೊಳಗಿಂದ ಹೇಳುವ ಮಾತು. ಗಿಡೊ ಡ ಮಾಂಟೆಫ಼ೆಲ್ಟ್ರೋ ಡಾಂಟೆಯ ಪ್ರಕಾರ ನರಕದ ಎಂಟನೇ ವರ್ತುಲಕ್ಕೆ ತಳ್ಳಲ್ಪಟ್ಟಿದ್ದಾನೆ. ಕಾರಣ: ದುರುದ್ದೇಶಪೂರಿತ ಸಲಹೆ. ಆದರೆ ಇಲ್ಲಿ ಮುಖ್ಯವಾದದ್ದೇನೆಂದರೆ, ಪ್ರುಫ಼್ರಾಕ್ ಮೊನೊಲಾಗ್ಗೆ ಸಂಬಂಧಿಸಿದಂತೆ ಈ ಸಾಲುಗಳ ವ್ಯಾಖ್ಯಾನ: ಗಿಡೊ ಅಂದುಕೊಂಡಿರುವುದೇನೆಂದರೆ ಡಾಂಟೆ ಕೂಡ ನರಕಕ್ಕೆ ತಳ್ಳಲ್ಪಟ್ಟಿದ್ದಾನೆ; ಹೀಗಾಗಿ ನಾನು ಯಾರಿಗೂ ಹೇಳಬಾರದೆಂದುಕೊಂಡಿದ್ದ ಸಂಗತಿಗಳನ್ನು ಇವನಿಗೆ ಹೇಳಬಹುದು; ಅವನು ಮರಳಿ ಹೋಗಿ ಭೂಮಿಯಲ್ಲಿ ತನ್ನ ಅಪಖ್ಯಾತಿ ಹಬ್ಬಿಸಲು ಸಾಧ್ಯವಿಲ್ಲ; ಇದೇ ರೀತಿ, ಪ್ರುಫ಼್ರಾಕ್ನಿಗೆ ಕೂಡ ತಾನು ಈ ಪದ್ಯದಲ್ಲಿ ಹೇಳುತ್ತಿರುವುದನ್ನು ಹೇಳುವ ಮನಸ್ಸಿರಲಿಲ್ಲ.