ಹತ್ಯಾಕಾಂಡದಲ್ಲಿ ಬದುಕುಳಿದವರು (Holocaust Survivors) ಬರೆದ ಕೆಲವು ಪುಸ್ತಕಗಳನ್ನು ಪರಿಚಯಿಸುತ್ತ, ಜೊತೆಗೇ ಅಪಾರ್ಥೈಡ್ನ ಅವಧಿಯನ್ನು ಕ್ಯಾನ್ವಾಸ್ ಆಗಿ ಮಾಡಿಕೊಂಡ ಎರಡು ಕಾದಂಬರಿಗಳನ್ನು ಗಮನಿಸುತ್ತ, ಮನುಷ್ಯನ ಅಸ್ತಿತ್ವದ ಜೀವಶಕ್ತಿ ಮತ್ತು ಅವನ ಹುಡುಕಾಟದ ಗುರಿಗಳ ಕುರಿತು ಕೆಲವು ವಿಚಾರಗಳನ್ನು ಸಂಕೇತ ಪಾಟೀಲ ಈ ಪ್ರಬಂಧದಲ್ಲಿ ನಮ್ಮ ಮುಂದಿಡುತ್ತಾರೆ. ಇದು ಮೂರು ಭಾಗಗಳಲ್ಲಿ ಪ್ರಕಟವಾಗಿದ್ದು ಪ್ರಸ್ತುತ ಬರಹವು ಕೊನೆಯ ಭಾಗವಾಗಿರುತ್ತದೆ. ಈ ಪ್ರಬಂಧದ ಮೊದಲ ಭಾಗ ಮತ್ತು ಎರಡನೆಯ ಭಾಗ ಇಲ್ಲಿವೆ.
ರಷ್ಯಾದ ಕ್ರಾಂತಿ, ವಿಶ್ವ ಯುದ್ಧಗಳು, ಯಹೂದಿ ಹತ್ಯಾಕಾಂಡ, ಯುರೋಪಿಯನ್ ವಸಾಹತುಶಾಹಿ, ಗುಲಾಮಗಿರಿ, ಭಾರತದ ವಿಭಜನೆ, 9/11, ಅರಬ್ ವಸಂತ, ಇವೇ ಮೊದಲಾದ ಪ್ರಪಂಚದ ಪ್ರಮುಖ ಘಟನೆಗಳು, ಪ್ರಭುತ್ವಗಳು ಮತ್ತು ಪ್ರಕ್ಷುಬ್ಧತೆಯ ಮಹಾನ್ ಅವಧಿಗಳ ಕುರಿತಾದ ತಕ್ಕಮಟ್ಟಿಗೆ ವಸ್ತುನಿಷ್ಠವಾದ ಚರಿತ್ರೆಗಳು (ಅಥವಾ "ವಸ್ತುನಿಷ್ಠ ಚರಿತ್ರೆ”ಗಳ ಹಲವು ಆವೃತ್ತಿಗಳು) ಇವೆ. ಈ ಚರಿತ್ರೆಗಳು ಸುದೀರ್ಘವೂ ಸಂಕೀರ್ಣವೂ ವಿಚ್ಛಿನ್ನವೂ ಆಗಿರುವಂಥವು. ಆದಾಗ್ಯೂ, ಕಾಲಾನಂತರ ಅವನ್ನು ಸರಳಗೊಳಿಸಲಾಗುತ್ತದೆ, ಬಿರುಕುಗಳನ್ನು ತುಂಬಲಾಗುತ್ತದೆ. ಆ ಅವಧಿಯಲ್ಲಿ ನಡೆದಿರಬಹುದಾದ ಹಲವಾರು ಘಟನೆಗಳನ್ನು ಸುಸಂಬದ್ಧವಾಗಿ ಅಣಿಗೊಳಿಸಬಹುದಾದ ಒಂದು ಅರೆನಿರ್ದಿಷ್ಟ ಸರಳರೇಖಾತ್ಮಕ ಕಾಲಕ್ರಮವನ್ನು ಗೊತ್ತುಮಾಡಲಾಗುತ್ತದೆ. ಸಾಮುದಾಯಿಕ ಸ್ಮೃತಿಕೋಶವೊಂದರ ರೂಪುಗೊಳ್ಳುವಿಕೆ ಆರಂಭವಾಗುತ್ತದೆ. ಮೊದಲಿಗೆ ಸಂಪೂರ್ಣವಾಗಿ ಯಾದೃಚ್ಛಿಕವಾದ, ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುತ್ತಿದ್ದ ವಿವಿಧ ಅಂಶಗಳು ಮತ್ತು ಘಟನೆಗಳ ಪರಸ್ಪರ ಪ್ರಭಾವಗಳು, ಅವುಗಳ ಸಂಪರ್ಕಗಳು ಆಗಮಾಡಿರಬಹುದಾದ ಹೊಸ ಘಟನಾವಳಿಗಳ ಬಗ್ಗೆ ಅಭ್ಯಸಿಸಲು, ತರ್ಕಿಸಲು ತೊಡಗಬಹುದು. ನಮ್ಮ ಅದೃಷ್ಟ ಚೆನ್ನಾಗಿದ್ದರೆ ಅಂತಿಮವಾಗಿ ಒಪ್ಪಿತವಾದ ಕಾರ್ಯಕಾರಣ ಸರಪಳಿಗಳು ಹೊರಹೊಮ್ಮಿ ಎಲ್ಲವನ್ನೂ ಅಚ್ಚುಕಟ್ಟಾಗಿ ವಿವರಿಸಲೂಬಹುದು: ಮೊದಲಿಗೆ ಆದದ್ದು ಇದು — ಅದೇ ಕಾಲಕ್ಕೆ ಸಂಭವಿಸಿದ್ದು ಈ ಇನ್ನೊಂದು — ಇವೆರಡೂ ಒಟ್ಟಾಗಿ ಈ ಮೂರನೆಯದಕ್ಕೆ ಎಡೆಮಾಡಿಕೊಟ್ಟುವು; ಏತನ್ಮಧ್ಯೆ, ಒಂದಕ್ಕೊಂದು ದೂರದ ಹಲವು ಪ್ರದೇಶಗಳಲ್ಲಿ ಏಕಕಾಲದಲ್ಲಿ ಒಂದೇ ಬಗೆಯ ವಿಘಟನೆಗಳು ಸಂಭವಿಸಿದುವು; ಇವೆಲ್ಲವೂ ಸೇರಿಕೊಂಡು ಕಡೆಗೆ ನಾವು ನಿಜಕ್ಕೂ ಯಾವುದನ್ನು ಪರಿಶೀಲಿಸುತ್ತಿರುವೆವೋ ಆ ಪ್ರಮುಖ ಘಟನೆಗೆ ಕಾರಣವಾಯಿತು. ಒಮ್ಮೆ ಇದಾಯಿತೋ ಮುಂದೆ ಇತಿಹಾಸದ ಹಾದಿಯಲ್ಲಿ ಮುಂದುವರಿಯುವುದು ನೇರ ಮತ್ತು ಸರಾಗ — ಲೆಕ್ಕವಿಲ್ಲದಷ್ಟು ಚಿಕ್ಕಪುಟ್ಟ ಸಂಗತಿಗಳು, ಅಂಕಿಅಂಶಗಳು, ಪಠ್ಯದಾಖಲೆಗಳ ಸಮುದ್ರದಲ್ಲಿ ನೀವು ಮುಳುಗಿಹೋಗದಿದ್ದರಂತೂ ಇನ್ನೂ ಸುಲಭ. ಹೀಗೆ ನೂರಾರು ವರ್ಷಗಳ ಏರುಪೇರಿನ ಚರಿತ್ರೆಯನ್ನು ಓರಣಗೊಳಿಸಿ ಹತ್ತಾರು ವಾಕ್ಯಗಳಲ್ಲಿ ಸುಲಭವಾಗಿ ವಿವರಿಸಬಹುದು. Popular History ಎಂಬ ಪ್ರಕಾರಕ್ಕೆ ಸೇರುವ ಬಹುತೇಕ ಪುಸ್ತಕಗಳು ಮಾಡುವುದು ಇದನ್ನೇ.
ಇವುಗಳ ಹೊರತಾಗಿ ಇಂಥ ಮಹತ್ತರ ವಿದ್ಯಮಾನಗಳಲ್ಲಿ ಪಾಲ್ಗೊಂಡ, ಅಥವಾ ಬಹುಪಾಲು ಬೇಡವಾಗಿ ಒತ್ತಾಯದಿಂದ ಸಿಲುಕಿಕೊಂಡ ವ್ಯಕ್ತಿಗಳ ಮುನ್ನೆಲೆಗೆ ಬಾರದ ವೈಯಕ್ತಿಕ ಚರಿತ್ರೆಗಳೂ ಇರುತ್ತವೆ. ತಮಗಾದ ಅನುಭವಗಳು, ಆಘಾತಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ; ನೆನಪುಗಳ ಬಿಚ್ಚುವಿಕೆ ಮತ್ತು ಮರುಜೋಡಿಸುವಿಕೆ; ನಡೆದುದರ ಮರುಕಳಿಕೆಗಳು, ಮರುನಿರೂಪಣೆಗಳು. ಇದು ಮತ್ತೆ ಮತ್ತೆ ಆಗುವಂಥದ್ದು, ಮುಗಿತಾಯವಿಲ್ಲದ್ದು. ಸಾಮುದಾಯಿಕ ಸ್ಮೃತಿಯನ್ನು ನಿಯಂತ್ರಿಸುವ ಕಾಲಕಾಲಕ್ಕೆ ಬದಲಿಸುವ ಬಾಹ್ಯ ರಾಜಕಾರಣವಿದ್ದಂತೆ ವೈಯಕ್ತಿಕ ಸ್ಮೃತಿಗೂ ಅದರದೇ ಆಂತರಿಕ ರಾಜಕಾರಣವಿರುತ್ತದೆ. The politics of memory. ಸಾಮುದಾಯಿಕ ಚರಿತ್ರೆಯಂತೆಯೇ ವೈಯಕ್ತಿಕ ಚರಿತ್ರೆಗಳೂ ಅನೂಹ್ಯವಾದುವು, ಸಂಕೀರ್ಣವಾದುವು, ಅಗಾಧವಾದುವು. ಆದರೆ ಅದರಂತೆ ಇವಕ್ಕೆ ನಿರಿಹಾಕಲಾಗುವುದಿಲ್ಲ. ನೆಟ್ಟಗೆ ಮಾಡಲಾಗುವುದಿಲ್ಲ. ಅವು ಮುದುರಿಕೊಂಡೇ ಉಳಿಯುವಂಥವು.
ಚಾರಿತ್ರಿಕ ವಿದ್ಯಮಾನಗಳ ಬಂಡಿಗಾಲಿಗೆ ಸಿಲುಕಿ ಪಾರಾದವರಿಗೆ ಅದಾಗುತ್ತಿದ್ದಾಗಿನ ಕರಾಳ ಅನುಭವದ ಹೊರೆಯನ್ನಷ್ಟೇ ಅಲ್ಲದೇ ಅದು ಮುಗಿದ ಮೇಲೂ ನಿರೀಕ್ಷೆಯ ಭಾರವನ್ನು ಹೊರುವ ದೌರ್ಭಾಗ್ಯ ಕಾದಿರುತ್ತದೆ.
ಪ್ರೀಮೋ ಲೆವಿ, ವಿಕ್ಟರ್ ಫ್ರಾಂಕ್ಲ್ ಅಂಥವರು, ಮೈಕಲ್ ಕೆ ಅಂಥವರು ಕೂಡ, ಇದೆಲ್ಲದರ ಆರಂಭದಲ್ಲಿ ಎದುರಿಸುವ ಪ್ರಶ್ನೆಯೆಂದರೆ: ನಾನು ಯಾವುದೇ ತಪ್ಪು ಮಾಡಿರದಿದ್ದರೂ ನನಗೊದಗಿದ ಈ ಶಿಕ್ಷೆಯನ್ನು, ಕಣ್ಣು ಮಿಟುಕಿಸುವುದರೊಳಗೆ ನಾನು ಎಸೆಯಲ್ಪಟ್ಟ ಈ ಕತ್ತಲ ಕೂಪದ ಭಯಾನಕ ಪರಿಸ್ಥಿತಿಯನ್ನು ಎದುರಿಸಿ ನಾನು ಬದುಕುವುದಾದರೂ ಹೇಗೆ? ಎದೆಗುಂದದಿರುವುದು ಹೇಗೆ? ಹತಾಶನಾಗದಿರುವುದು ಹೇಗೆ? ಈ ಅಗ್ನಿಪರೀಕ್ಷೆಯನ್ನು ದಾಟಿ ಹೊರಬರಲು ಸಾಕಾಗುವಷ್ಟು ನೈತಿಕ ಸ್ಥೈರ್ಯವನ್ನು ಉಳಿಸಿಕೊಳ್ಳುವುದು ಹೇಗೆ?
ಬಹುತೇಕರಿಗೆ ಇದು ಸಾಧ್ಯವಾಗುವುದಿಲ್ಲ: ಅವರು ಪರಿಸ್ಥಿತಿಯೆದುರು ತಲೆಬಾಗುತ್ತಾರೆ; ಸ್ಥೈರ್ಯವನ್ನೂ, ಚೈತನ್ಯವನ್ನೂ ಕೊನೆಗೆ ಜೀವವನ್ನೂ ಕಳೆದುಕೊಳ್ಳುತ್ತಾರೆ. ಸಾಮುದಾಯಿಕ ಚರಿತ್ರೆಯ ಭಾಗವಾಗಿ ಹಿನ್ನೆಲೆಗೆ ಮರಳುತ್ತಾರೆ. ಬದುಕುಳಿದವರ ಕತೆಯೇ ಬೇರೆ. ಅವರಿಗೆ ಮುಂದಿನ ಬಾಳು ಸವೆಸುವ ಅನಿವಾರ್ಯತೆ ಎದುರಾಗುತ್ತದೆ. ಒಂದು ಸತ್ತ್ವಪರೀಕ್ಷೆ ಮುಗಿಯುತ್ತಿದ್ದಂತೆಯೇ ಹೊಸದೊಂದು ಶುರುವಾಗುತ್ತದೆ. ಅನುಭವದ ದಬ್ಬಾಳಿಕೆಯಿಂದ ನಿರೀಕ್ಷೆಗಳ ದಬ್ಬಾಳಿಕೆಗೆ ಅವರು ಸಾಗಿಸಲ್ಪಡುತ್ತಾರೆ. ತಮ್ಮವೇ ನಿರೀಕ್ಷೆಗಳು ಮತ್ತು ಜಗತ್ತಿನ ನಿರೀಕ್ಷೆಗಳು. ತಮ್ಮ ಅನನ್ಯ ನಂಬಲಸಾಧ್ಯವಾದ ಭಯಾನಕ ಕತೆಯನ್ನು ಹೇಗೆ ತಿಳಿಹೇಳುವುದು ಎಂಬುದರ ಕುರಿತಾದ ನಿರೀಕ್ಷೆ. ತಾವು ಹೇಗಾದರೂ ಮಾಡಿ ಹಿಂದೆ ನಡೆದದ್ದನ್ನು ಮರೆತು, ಅದಕ್ಕೊಂದು ಘೋರ ದೌರ್ಭಾಗ್ಯದ ಹೆಸರು ಹೊರೆಸಿ, ಭೂತದ ಭಾರವನ್ನು ತೊಡೆದುಹಾಕಿ ಮುನ್ನಡೆಯುತ್ತೇವೆ, ಬದುಕಲೊಂದು ಹಾದಿ ಕಂಡುಕೊಳ್ಳುತ್ತೇವೆ ಎಂಬ ನಿರೀಕ್ಷೆ. ಹಾಗೆಂದರೇನೆಂದು ಸ್ಪಷ್ಟವಾಗಿ ಗೊತ್ತಿರದಿದ್ದರೂ ಸಹಜತೆಯನ್ನು ಕಂಡುಕೊಳ್ಳುವ, ಹೊಸ ಬಾಳನ್ನು ಪಡೆದುಕೊಳ್ಳುವ ನಿರೀಕ್ಷೆ.
ಆದರೆ ಇದು ನಿಜಕ್ಕೂ ಸಾಧ್ಯವಾಗುವಂಥದ್ದೇ? ಇಷ್ಟಕ್ಕೂ ಬದುಕುಳಿದವರ ಮೇಲೆ ಇಂಥ ನಿರೀಕ್ಷೆಗಳ ಭಾರವಾದರೂ ಏಕೆ?
ಇಮ್ರೆ ಕೆರ್ಟೆಸ್ (Imre Kertész) ಅವರ ಭಾಗಶಃ ಆತ್ಮಚರಿತ್ರಾತ್ಮಕ ಕೃತಿಯಾದ ‘ಫೇಟ್ಲೆಸ್ನೆಸ್’ (Fatelessness, ಕೆಲವು ಅನುವಾದಗಳಲ್ಲಿ Fateless) ಸ್ಥಿತವಾಗಿರುವುದು ಎರಡನೆಯ ವಿಶ್ವ ಯುದ್ಧದ ಕಾಲದ ಹಂಗೆರಿಯಲ್ಲಿ. ಕಾದಂಬರಿ ಶುರುವಾಗುವುದು ಯುದ್ಧ ಕೊನೆಯಾಗುತ್ತಿರುವಾಗ. ಅದು ಹಂಗೆರಿಯ ಯಹೂದಿಗಳು ತಮ್ಮ ಮೇಲರಿವೆಗಳ ಮೇಲೆ ಹಳದಿ ನಕ್ಷತ್ರದ ಚಿಹ್ನೆಯನ್ನು ಅಂಟಿಸಿಕೊಂಡು ತಮ್ಮನ್ನು ತಾವು ಗುರುತಿಸಿಕೊಳ್ಳಬೇಕಾಗಿದ್ದ ಕಾಲ. ಆಹಾರ ಮತ್ತಿತರ ಅಗತ್ಯ ವಸ್ತುಗಳ ಕೊರತೆ, ಯಹೂದಿಗಳ ಪಾಲಿಗಂತೂ ಅದು ಇನ್ನೂ ಹೆಚ್ಚು. ಪ್ರತಿನಿತ್ಯವೂ ಜನರನ್ನು ದುಡಿಮೆಗೆ ಬಲವಂತವಾಗಿ ನೇಮಿಸಿಕೊಳ್ಳಲಾಗುತ್ತಿತ್ತು; ಕಾನ್ಸಂಟ್ರೇಶನ್ ಕ್ಯಾಂಪ್ಗಳಿಗೆ ಸಾಗಿಸಲಾಗುತ್ತಿತ್ತು.
ಕಾದಂಬರಿಯ ಉತ್ತಮಪುರುಷ ನಿರೂಪಕ ಜಾರ್ಜ್ “ಜೂರಿ” ಕುವೇಶ್ (György “Gyuri” Köves) ಎಂಬ 14 ವರ್ಷದ ಹುಡುಗ. ಅವನು ತನ್ನ ತಂದೆ ಮತ್ತು ಮಲತಾಯಿಯರೊಂದಿಗೆ ಬುಡಾಪೆಸ್ಟ್ನಲ್ಲಿ ವಾಸಿಸುತ್ತಿರುತ್ತಾನೆ. ಅನತಿ ದೂರದಲ್ಲೇ ಇರುವ ಹುಟ್ಟುತಾಯಿಯ ಮನೆಗೆ ಅವನು ಪ್ರತಿ ಗುರುವಾರ ಭೇಟಿ ಕೊಟ್ಟು ರವಿವಾರದವರೆಗೆ ಅವಳ ಜೊತೆ ಇರುತ್ತಾನೆ. ಅವನ ಹುಟ್ಟುತಂದೆತಾಯಿಯರ ಮದುವೆ ಮುರಿದುಹೋದುದರ ಹೊರತಾಗಿ ಜೂರಿಗೆ ಬೇರೇ ಬಾಧೆಗಳೇನೂ ಇಲ್ಲ. ಮಧ್ಯಮವರ್ಗದ ಏರಿಳಿತವಿಲ್ಲದ ಯಥಾಸ್ಥಿತಿಯ ಬದುಕು ಅವನದು ಮತ್ತು ಅವನ ಕುಟುಂಬದ್ದು — ಆಗಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯಡಿಯಲ್ಲಿ ಯಾವುದನ್ನು ಯಥಾಸ್ಥಿತಿ ಎನ್ನಬಹುದಿತ್ತೋ ಅಂಥದ್ದು.
ಹಾಗಿದ್ದೂ, ಜೂರಿಯ ತಂದೆಗೆ ಹೊರಡಲು ಬುಲಾವು ಬಂದಿದೆ ಎನ್ನುವುದು ನಮಗೆ ಶೀಘ್ರದಲ್ಲೇ ತಿಳಿದುಬರುತ್ತದೆ. ಅವನು ಯಾವುದೋ ಹೆಸರು ಗೊತ್ತಿರದ ಕಾನ್ಸಂಟ್ರೇಶನ್ ಕ್ಯಾಂಪ್ಗೆ ಹೋಗಬೇಕಾಗಿದೆ. ಅವನು ಬಹುತೇಕ ಮತ್ತೆಂದೂ ಹಿಂದಿರುಗಲಾರ. ಕಾದಂಬರಿ ಪ್ರಾರಂಭವಾಗುವುದು ಆ ಹೊರಗೆಡಹುವಿಕೆಯಿಂದ. ಒಬ್ಬ ಓದುಗನಾಗಿ ನನ್ನನ್ನು ತಕ್ಷಣವೇ ತಟ್ಟಿದ್ದು ನಿರೂಪಕನ ನೇರ, ತಣ್ಣಗಿನ, ವಾಸ್ತವಿಕ ಧ್ವನಿ: ತನ್ನ ಸುತ್ತಲೂ ನಡೆಯುತ್ತಿರುವುದನ್ನು ಅನುದ್ರಿಕ್ತತೆಯಿಂದ — ಅನಾಸಕ್ತಿಯೇ ಎನ್ನಬಹುದು! — ಸ್ವಲ್ಪಮಟ್ಟಿಗೆ ವಾಚಾಳಿತನದ, ಒಮ್ಮೊಮ್ಮೆ ಬೇಸರದಿಂದ ಬಳಲಿಸುವಂಥ, ಭಾವನೆಗಳಿಗೂ ರೂಢಿಗತ ಶಿಷ್ಟಾಚಾರಕ್ಕೂ ಇನಿತು ಆಸ್ಪದವೂ ಇರದಂಥ ವರದಿ ಸಲ್ಲಿಸುವಿಕೆ. ಅವನಿಗೆ ಇದರ ಅರಿವು ಇಲ್ಲದಿಲ್ಲ. ಒಂದೊಮ್ಮೆ ಅವನು ಉಳಿದವರೆಲ್ಲರ ತೃಪ್ತಿಗಾಗಿ — ಕನಿಷ್ಠ ಪಕ್ಷ ಅವನ ಮನಸ್ಸಿನಲ್ಲಾದರೂ — ಸಮರ್ಪಕವಾಗಿ ಭಾವುಕನಾಗಲು ಸಾಧ್ಯವಾದಾಗ ತಲೆಯ ಮೇಲಿನ ದೊಡ್ಡ ಹೊರೆ ಇಳಿದಂತೆ ನಿರಾಳನಾಗುತ್ತಾನೆ, ಸಮಾಧಾನ ತಾಳುತ್ತಾನೆ. ಯಾಕೆಂದರೆ, ಓದುಗರೂ ಸೇರಿದಂತೆ ಕತೆ ಕೇಳುವವರು ಕತೆ ಹೇಳುವವರ ಮೇಲೆ ಹಾಕುವ ನಿರೀಕ್ಷೆಯ ಭಾರವೇ ಅಂಥದ್ದು.
ಇದಾಗಿ ಕೆಲಕಾಲದಲ್ಲಿಯೇ ಅವನು ಹತ್ತಿರದ ಪಟ್ಟಣವೊಂದರಲ್ಲಿ ಕೂಲಿಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಮನೆ ನಡೆಸಲು ಎಲ್ಲರೂ ಕೈಜೋಡಿಸಲೇಬೇಕಲ್ಲ. ಒಂದು ದಿನ ಅವನು ಮತ್ತು ಉಳಿದ ಕೆಲಸಗಾರರನ್ನು ಅವರು ಕೆಲಸಕ್ಕೆ ಹೋಗುವ ಹಾದಿಯಲ್ಲಿ ಯಾವುದೇ ಕಾರಣ ಕೊಡದೆ ತಡೆಹಿಡಿಯಲಾಗುತ್ತದೆ. ಮೊದಲು ಒಂದು ಸ್ಥಳದಲ್ಲಿ ಕಾಯುವಂತೆ ಹೇಳಲಾಗುತ್ತದೆ, ಮುಂದೆ ಇನ್ನೊಂದು, ಮಗದೊಂದು, ಎಷ್ಟೋ ವೇಳೆ ಇದು ಹೀಗೆಯೇ ನಡೆಯುತ್ತ ಹೋಗುತ್ತದೆ — ಕೊನೆಗೊಮ್ಮೆ ಅವನನ್ನು ಒಂದು ರೈಲಿನ ಬೋಗಿಗೆ ಹತ್ತಿಸುವವರೆಗೆ. ಅಷ್ಟೇ. ಅಲ್ಲಿಗೆ ಅವನ ಅದುವರೆಗಿನ ಬದುಕಿನ ಅಧ್ಯಾಯ ಮುಗಿದು ಹೊಸದು ಶುರುವಾದಂತೆ. ಸಾವಿರಾರು ಅಪರಿಚಿತರೊಂದಿಗೆ ಕಿಕ್ಕಿರಿದ ರೈಲಿನಲ್ಲಿ ಪ್ರಯಾಣ. ಎಲ್ಲಿಗೆಂದು ದೇವರಿಗೇ ಗೊತ್ತು. ರೈಲಿನಲ್ಲಿ ತಿನ್ನಲು ಅಷ್ಟಿಷ್ಟು ಆಹಾರ ಒದಗಿಸುತ್ತಾರೆ, ಆದರೆ ನೀರು ಮಾತ್ರ ನಾಕು ಹನಿಯೂ ಇಲ್ಲ.
ಸುದೀರ್ಘ ಕಾಲದ ನಂತರ, ಪ್ರಾಯಶಃ ಹಲವಾರು ದಿನಗಳು ರಾತ್ರಿಗಳು ಬಂದು ಹೋದ ಮೇಲೆ, ಅವನು ಔಷ್ವಿಟ್ಜ಼್ ತಲುಪಿದ. ಸರದಿಯ ಸಾಲಿನ ಜೊತೆ ನಿಧಾನವಾಗಿ ಚಲಿಸುತ್ತಿದ್ದ ಇವನ ಮೇಲೆ ಕರುಣೆ ತಳೆದ ಯಾವನೋ ಕೈದಿ ಯಾವುದೋ ಭಾಷೆಯಲ್ಲಿ “ಹದಿನಾರು” ಎಂಬರ್ಥದ ಏನನ್ನೋ ಒದರಿ ಹೋಗಿದು ಇವನ ಅದೃಷ್ಟ. ಕೂಲಿಕೆಲಸ ಮಾಡುವಾಸೆಯಿದ್ದರೆ ತಾನು ತನ್ನ ವಯಸ್ಸು ಹದಿನಾರು ಎಂದು ಹೇಳಬೇಕು ಎಂದು ಹೊಳೆಯುತ್ತದೆ. ಏಕೆಂದರೆ, ಅದಕ್ಕೆ ಪರ್ಯಾಯ ಸಾಲು ಬಹುತೇಕ ನೇರವಾಗಿ ಗ್ಯಾಸ್ ಚೇಂಬರಿನತ್ತ ಹೊರಟಿರುವುದು. ಸುಳ್ಳು ವಯಸ್ಸನ್ನು ಹೇಳಿದ್ದಕ್ಕೆ ನಾತ್ಸೀಗಳ ಬೇರ್ಪಡಿಕೆಯ ಆಟದಲ್ಲಿ ಸರಿಯಾದ ಪಕ್ಷಕ್ಕೆ ಸೇರಿಕೊಳ್ಳುತ್ತಾನೆ. ಸಹಜವಾಗಿ ಇದೊಂದು ದೊಡ್ಡ ಗೆಲುವು ಎಂದೇ ಭಾವಿಸುತ್ತಾನೆ. ಅಲ್ಲಿಂದೀಚೆಗೆ ಕಾದಂಬರಿಯ ಹೆಚ್ಚಿನ ಪಾಲು ಕೂಲಿಯಾಳುಗಳ ಶಿಬಿರದಲ್ಲಿರುವ ಕೈದಿಗಳ ಬದುಕಿನ ದೈನಂದಿನ ಆಗುಹೋಗುಗಳ ಬಗೆಗೆ ಇದೆ. ಅದರಲ್ಲಿ ಜೂರಿ ನಿರ್ಭಾವುಕ, ನಿರ್ಲಿಪ್ತ ಮತ್ತು ವಾಸ್ತವಿಕ ನೆಲೆಯ ನಿರೂಪಕನ ಪಾತ್ರವನ್ನು ನಿರ್ವಹಿಸುತ್ತಾನೆ.
ಕಾಫ್ಕಾನ ಕೃತಿಗಳ ನಾವು ಸಾಮಾನ್ಯವಾಗಿ, ಕಥಾನಾಯಕರು ಈಗಾಗಲೇ ಯಾರೋ ತೀರ್ಮಾನ ಮಾಡಿ ಅವರಿಗೆ ಕೊಟ್ಟ ಶಿಕ್ಷೆಗೆ ತಕ್ಕುದಾದ, ಅವರು ಮಾಡಿದ ಅಥವಾ ಮಾಡದ ತಪ್ಪನ್ನು ಕಂಡುಕೊಳ್ಳಲು ಎಳಸುತ್ತಿರುವುದನ್ನು ಕಾಣುತ್ತೇವೆ. (ಇದರ ಬಗ್ಗೆ ಹಿಂದೆ ಇನ್ನೊಂದು ಲೇಖನದಲ್ಲಿ ಚರ್ಚಿಸಿದ್ದೇವೆ.) ಕುಂದೇರಾ ಹೇಳುವಂತೆ: "ಕಾಫ್ಕಾನಲ್ಲಿ [ಅಪರಾಧ ಮತ್ತು ಶಿಕ್ಷೆಯ] ತರ್ಕವು ವ್ಯತಿರಿಕ್ತವಾಗಿದೆ. ಶಿಕ್ಷೆಗೊಳಗಾದವರಿಗೆ ಶಿಕ್ಷೆಯ ಕಾರಣ ತಿಳಿದಿರುವುದಿಲ್ಲ. ಆ ಶಿಕ್ಷೆಯ ಅಸಂಬದ್ಧತೆಯು ಎಷ್ಟು ಅಸಹನೀಯವಾಗಿರುತ್ತದೆಂದರೆ, ನೆಮ್ಮದಿ ದೊರಕಿಸಿಕೊಳ್ಳಲು ಆರೋಪಿಯು ತನಗಾದ ಶಿಕ್ಷೆಗೆ ಸಮರ್ಥನೆಯನ್ನು ಕಂಡುಕೊಳ್ಳಲೇಬೇಕು: ಶಿಕ್ಷೆಯು ಮೊದಲಾಗಿ ನಂತರ ಅದು ಅದಕ್ಕೆ ತಕ್ಕ ತಪ್ಪನ್ನು ಅರಸುತ್ತದೆ.” ಕೆರ್ಟೆಸ್ನ ನಿರೂಪಕನಲ್ಲೂ ನಾವು ಅದಕ್ಕೆ ಸಾದೃಶ್ಯವಾದದ್ದನ್ನು ಕಾಣುತ್ತೇವೆ. ಅವನು ತನ್ನ ಸುತ್ತಲಿನ ಭಯಾನಕತೆಯನ್ನು, ನಡೆಯುತ್ತಿರುವ ಅನ್ಯಾಯವನ್ನು ನೋಡುತ್ತಲೇ, ತನ್ನ ಮೇಲಿನ ದೌರ್ಜನ್ಯವನ್ನು ಅನುಭವಿಸುತ್ತಿರುವಾಗಲೇ ಅದರೊಂದಿಗೆ ಅನುಸಂಧಾನ ಮಾಡಿಕೊಳ್ಳುತ್ತ ಅದನ್ನೊಂದು ತಾರ್ಕಿಕ ನೆಲೆಗಟ್ಟಿನೊಳಗೆ ಹಿಡಿದಿಡುವ ಪ್ರಯತ್ನವನ್ನೂ ಮಾಡುತ್ತಿರುತ್ತಾನೆ. ಇದನ್ನೊಂದು ಸಾಕ್ಷ್ಯಚಿತ್ರದಂತೆ ನೋಡುತ್ತಾ ತೋರಿಸುತ್ತಾ ಹೋಗುತ್ತಾನೆ: ನಮ್ಮೆದುರಿಗಿರುವುದು ಸಂಯಮ, ನ್ಯೂನೋಕ್ತಿ, ವಿಪರ್ಯಾಸ, ಪರಿಸ್ಥಿತಿಯ ವಿಡಂಬನೆಗಳು ಸಂತುಲಿತವಾದ ಒಬ್ಬ ನಿರೂಪಕನ ಮಾದರಿ. ಅವನಿಗೆ ಗೊಂದಲಗಳೇ ಇದ್ದಂತಿಲ್ಲ, ಮಾತು ಯಾವಾಗಲೂ ನೇರ ಮತ್ತು ಸ್ಪಷ್ಟ — ಕೆಲವೊಮ್ಮೆ ಓದುವ ನಮಗೇ ಕಿರಿಕಿರಿಯಾಗಬೇಕು! ಉದಾಹರಣೆಗೆ, ಅಧ್ಯಾಯ ಮೂರು ಶುರುವಾಗುವುದು ಹೀಗೆ: “ಅದರ ಮರುದಿನ ತುಸು ವಿಚಿತ್ರವೆನ್ನಬಹುದಾದ ಸಂಗತಿ ನಡೆಯಿತು.” ಆ “ತುಸು ವಿಚಿತ್ರ”ವಾಗಿ ಶುರುವಾದ ಘಟನಾವಳಿಯು ಇವನನ್ನು ಕೊನೆಗೆ ಔಷ್ವಿಟ್ಜ಼್ಗೆ ತಂದಿಳಿಸಿತಷ್ಟೇ, ಹೆಚ್ಚೇನಿಲ್ಲ.
ಜೂರಿ ಬೇರೆಬೇರೆ ಶಿಬಿರಗಳಲ್ಲಿ ಒಂದು ವರ್ಷದಷ್ಟು ಕಾಲ ಕಳೆಯುತ್ತಾನೆ. “ಒಳ್ಳೆಯ ಕೈದಿಯಾಗಬೇಕು” ಎಂಬ ಏಕಮೇವ ಉದ್ದೇಶದಿಂದ ಬಗೆಬಗೆಯ ಸಂಕಷ್ಟಗಳನ್ನು ಎದುರಿಸುತ್ತಾನೆ. ಅವನಿಗೆ ಅಲ್ಲಿ ಭೇಟಿಯಾಗುವ ಜನರು ಹಲವು ವಿಭಿನ್ನ ದೇಶದವರು. ಅವನಿಗೆ ಎಲ್ಲವೂ ಹೊಸತು. ಯಹೂದಿಗಳು ಆಯಾ ದೇಶದ ಪ್ರಮುಖ ಭಾಷೆಯನ್ನು ಆಡುವುದಲ್ಲದೇ ಅವನಿಗೆ ನಸು ಪರಿಚಿತವಿರುವ ಆದರೆ ಅಷ್ಟಾಗಿ ತಿಳಿಯದ ಮತ್ತು ಮಾತಾಡಲು ಬಾರದ ಹೀಬ್ರೂ ಕೂಡ ಆಡುತ್ತಾರೆ; ಅದಷ್ಟೇ ಅಲ್ಲ, ಯಿಡ್ಡಿಶ್ ಎಂಬ ಇನ್ನೊಂದು ನುಡಿಯನ್ನಾಡುವ ಯಹೂದಿಗಳೂ ಇರುತ್ತಾರೆ, ಎಂದು ತಿಳಿಯುತ್ತದೆ. ಯಿಡ್ಡಿಶ್ ಮಾತಾಡುವ ಆ ಯಹೂದಿಗಳೋ ಇವನ ಯಹೂದಿತನವನ್ನೇ ಸಂಶಯದಿಂದ ನೋಡುವಂಥವರು. ಅವನು ನಿಜವಾದ ಯಹೂದಿಯಲ್ಲ ಎನ್ನುವವರು. ಜೂರಿ ಅವರ ಮಾತನ್ನು ತಕರಾರಿಲ್ಲದೇ ಒಪ್ಪಿಕೊಳ್ಳುತ್ತಾನೆ ಕೂಡ. ಅವನಿಗೆ ತನ್ನ ಯಹೂದಿ ಎಂಬ ಗುರುತನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನಿಜವಾಗಿಯೂ ಆಗಿರುವುದಿಲ್ಲ; ಆದರೆ ಆ ಯಹೂದಿತನವೆಂಬುದೇ ತನ್ನ ಈ ವಿಪತ್ತಿಗೆ ಕಾರಣವಾಗಿದೆ ಎಂಬುದರ ಸಂಪೂರ್ಣ ಅರಿವಿರುತ್ತದೆ. ಇವೆರಡೂ ಪರಸ್ಪರ ವಿರುದ್ಧ ವಿಚಾರಗಳನ್ನು ಹೊಂದಾಣಿಕೆಗೆ ತರುವುದು ಮಾತ್ರ ಅವನಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಅವೆರಡನ್ನೂ ಅವನು ಹೆಚ್ಚು ಪ್ರಶ್ನಿಸದೇ ಸ್ವೀಕರಿಸಲು ನಿರ್ಧರಿಸುತ್ತಾನೆ.
ಅಲ್ಲಿನ ವಾಸ್ತವ್ಯದ ಅವಧಿಯಲ್ಲಿ ಹಲವು ಬಾರಿ ಅವನು ತೀವ್ರ ಅನಾರೋಗ್ಯಕ್ಕೊಳಗಾಗಿ ಸಾವನ್ನೆದುರಿಸುವ ಪ್ರಸಂಗಗಳು ಬರುತ್ತವೆ. ಇನ್ನೇನು ಹತಾಶೆ ಮಡುಗಟ್ಟಬೇಕು, ಸಾವನ್ನಪ್ಪಬೇಕು, ಆದರೆ ಹೇಗೋ ಬದುಕುಳಿಯುತ್ತಾನೆ. ಮುಂದೆ ಆಸ್ಪತ್ರೆಯೊಂದರಲ್ಲಿ ಅಲ್ಲಿನ ಕೆಲ ಆರೈಕೆದಾರರ ಮಾನವತೆಯಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಾನೆ. ಕೊನೆಗೊಮ್ಮೆ ಸೆರೆಗೊಳಗಾದವರ ಸ್ವಾತಂತ್ರ್ಯದ ಸುದ್ದಿ ಬಂದು ತಲುಪಿದಾಗ ಅದು ಅವನನ್ನು ತಟ್ಟುವುದೇ ಇಲ್ಲ, ಅವನೊಳಗೆ ಇಳಿಯುವುದೇ ಇಲ್ಲ; ಅವನ ಸದ್ಯದ ಆಲೋಚನೆ ಬೇರೆಲ್ಲೋ ಇರುತ್ತದೆ.
[…] ನಾನು ಲಕ್ಷ್ಯಕೊಟ್ಟು ಮತ್ತೆ ಮತ್ತೆ ಕೇಳಿಸಿಕೊಂಡೆ. ಅವನ ಬಾಯಿಂದ ಬರುತ್ತಿದ್ದುದು ಸ್ವಾತಂತ್ರ್ಯದ ಕುರಿತಾದ ಮಾತುಗಳೇ ಹೊರತಾಗಿ ನಮಗೆ ಸಿಗದಿರುವ, ಅಲ್ಲಿ ಇಲ್ಲದಿರುವ ಸೂಪಿನ ಬಗ್ಗೆ ಚಕಾರವೂ ಕೇಳಿಬರಲಿಲ್ಲ. ನಾವಿನ್ನು ಸ್ವತಂತ್ರರಾಗುವುದರ ಬಗ್ಗೆ ನನಗೆ ಸ್ವಾಭಾವಿಕವಾಗಿ ಅತೀವ ಆನಂದವಾಗಿತ್ತು, ಇಲ್ಲವೆಂದಲ್ಲ, ಆದರೆ ಇದನ್ನು ಇನ್ನೊಂದು ನಿಟ್ಟಿನಿಂದ ನನಗೆ ನೋಡದೇ ಇರಲಾಗಲಿಲ್ಲ. ಉದಾಹರಣೆಗೆ ಹೇಳುವುದಾದರೆ, ನಿನ್ನೆಯ ದಿನ ಇಂಥದ್ದು ಆಗುವ ಸಂಭವವೇ ಇರಲಿಲ್ಲ. […]
[…] ಕೊನೆಗೂ ಧ್ವನಿವರ್ಧಕದಲ್ಲಿ ಮತ್ತೊಮ್ಮೆ ಶಿಬಿರದ ನಾಯಕರ ಧ್ವನಿ ಬಂದಿತು. ಈ ಸಲ ಅವರು ಮನವಿ ಮಾಡಿಕೊಂಡರು […] ಏಕೆಂದರೆ, ಅವರೀಗ ಗಟ್ಟಿಯಾದ ಗೂಲಾಶ್ ಸೂಪನ್ನು ತಯಾರು ಮಾಡಲು ಶುರು ಮಾಡಿದ್ದರು. ಇದೀಗ ನಾನು ನಿರಾಳವಾಗಿ ನನ್ನ ದಿಂಬಿನ ಮೇಲೆ ಒರಗಿಕೊಂಡೆ. ಅದಾದ ಮೇಲೆಯೇ ನನ್ನೊಳಗನ್ನು ಬಿಗಿಯಾಗಿ ಹಿಡಿದಿದ್ದ ಏನೋ ಸಡಿಲಿಸಿತು ಹಾಗೂ ಆಗಲಷ್ಟೇ ನಾನು ಬಹುತೇಕ ಮೊದಲನೆಯ ಸಲ ಗಂಭೀರವಾಗಿ ಸ್ವಾತಂತ್ರ್ಯದ ಕುರಿತು ಯೋಚಿಸತೊಡಗಿದೆ.
ಬುಡಾಪೆಸ್ಟ್ಗೆ ಹಿಂದಿರುಗಿದ ನಂತರ ಜೂರಿಯು ತನ್ನ ಅದುವರೆಗಿನ ಇಡೀ ಅನುಭವ ವಲಯದಿಂದ ಪೂರ್ತಿಯಾಗಿ ಹೊರಗಿದ್ದ ಜನರೊಂದಿಗೆ ವ್ಯವಹರಿಸಬೇಕು. ಅವರು ಒಳ್ಳೆಯವರು, ಸಹಾಯ ಮಾಡಬಯಸುವವರು, ಅನುಕಂಪವುಳ್ಳವರು ಎನ್ನುವುದು ನಿಸ್ಸಂಶಯ, ಆದರೆ ಅವರು ಅಸಾಧಾರಣ ಕುತೂಹಲವನ್ನು ಹೊಂದಿದವರೂ ಹೌದು. ಇವನ ಸಂಯಮದ, ಅನುದ್ವಿಗ್ನ ನಡವಳಿಕೆ ಅವರಲ್ಲಿ ಪ್ರತಿಕ್ಷಣವೂ ಅಚ್ಚರಿ ಮೂಡಿಸುವಂಥದ್ದು. ಇವನೊಂದಿಗೆ ವ್ಯವಹರಿಸುವಾಗ ಅವರು ಕೆರಳುತ್ತಾರೆ, ಉದ್ರೇಕದ ಅಂಚಿನಲ್ಲಿ ಚಡಪಡಿಸುತ್ತಾರೆ. ಇವನಿಗೆ ಅವರ ವರ್ತನೆ ತಕ್ಕುದಲ್ಲದ್ದು ಎನ್ನಿಸುತ್ತದೆ: ಇವರು ನನ್ನೊಂದಿಗೆ ಹೊಂದಿಕೊಳ್ಳುವ ಅಗತ್ಯವಿಲ್ಲ, ಇವರಿಗೆ ನಾನು ಅರ್ಥವಾಗಬೇಕಿಲ್ಲ; ಎಲ್ಲವೂ ಬದಲಾಗಿಹೋಗಿರುವ ಈ ಹೊಸ ಜಗತ್ತಿಗೆ ಹೊಂದಿಕೊಳ್ಳುವ ಅನಿವಾರ್ಯತೆಯಿರುವುದು ನನಗೆ. ಅವನ ತಂದೆ ಬಹುಶಃ ತೀರಿಹೋಗಿದ್ದಾನೆ. ಅವನ ಮಲತಾಯಿ ಮರುಮದುವೆಯಾಗಿದ್ದಾಳೆ. ಅವನ ತಾಯಿಯನ್ನು ಬಿಟ್ಟರೆ ಅವನಿಗೀಗ ಹತ್ತಿರವಿರುವವರೆಂದರೆ ಅವನ ಪರಿಚಯದ ಬದುಕುಳಿದ ಕೆಲವು ಕೈದಿಗಳು, ಶಿಬಿರದ ಕಾವಲುಗಾರರು ಮತ್ತು ಉಸ್ತುವಾರಿಯವರು. ಆಷ್ಟೇ. ಅಲ್ಲಿದ್ದಾಗ ಬದುಕಿಗೆ ಎಷ್ಟು ಸರಳತೆ ಮತ್ತು ಸಂಪೂರ್ಣ ಸ್ಪಷ್ಟತೆಯಿತ್ತು — ತಾನು ಕಳೆದುಕೊಂಡುದರ ಬಗ್ಗೆ ಅವನಿಗೊಂದು ವಿಲಕ್ಷಣ ಹಂಬಲ, ಗೀಳು. ಇಲ್ಲಿ ನೋಡಿದರೆ ಪ್ರತಿಯೊಂದನ್ನೂ ಹೊಸದಾಗಿ ಕಂಡುಕೊಳ್ಳಬೇಕಾಗಿದೆ — ಸುತ್ತಣ ಜನರೊಂದಿಗೆ ಹೇಗೆ ಬೆರೆಯುವುದು ಅವರಿಗೆ ಸರಿಯಾದ ರೀತಿಯಲ್ಲಿ ಹೇಗೆ ಪ್ರತಿಕ್ರಿಯಿಸುವುದು ಎನ್ನುವುದೂ ಸೇರಿದಂತೆ.
[…] “ನೀನು ಬಹಳಷ್ಟು ಭಯಾನಕ ಯಾತನೆಗಳನ್ನು ಸಹಿಸಬೇಕಾಗಿರಬೇಕಲ್ಲವೇ?” ಎಂಬ ಅವರ ಪ್ರಶ್ನೆಗೆ, ಅದು ನೀವು ಯಾವುದನ್ನು ಭಯಾನಕ ಎಂದು ಪರಿಗಣಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ, ಎಂದುತ್ತರಿಸಿದೆ. ಅವರ ಮುಖಭಾವದಲ್ಲಿ ಈಗ ಸ್ವಲ್ಪ ವ್ಯಾಕುಲತೆ ಸೇರಿಕೊಂಡಿತು. ನೀನು ಎಲ್ಲ ರೀತಿಯಲ್ಲಿ ಅಭಾವಕ್ಕೊಳಗಾದದ್ದು, ತೀವ್ರ ಹಸಿವಿನಿಂದ ಬಳಲಿದ್ದು ನಿಸ್ಸಂದೇಹ, ಅವರು ಒತ್ತಿ ಹೇಳಿದರು. ಅಲ್ಲದೇ ಅವರು ನಿನ್ನನ್ನು ಹೊಡೆಯುವುದು ಬಡಿಯುವುದು ಕೂಡ ಮಾಡಿರಲಿಕ್ಕೆ ಬೇಕು. ಅವರ ಮಾತಿಗೆ ನಾನು, ಹಾಂ, ಸ್ವಾಭಾವಿಕವೇ ಅಲ್ಲವೇ? ಎಂದೆ. ಅವರು ಗಾಬರಿಯಿಂದ ಉದ್ಗರಿಸಿದರು, “ಯಾಕೆ ಹೀಗೆ? ಮಗನೇ, ಯಾಕೆ?” ಇನ್ನೇನು ಅವರ ತಾಳ್ಮೆಯ ಮಿತಿ ಮೀರುವಂತಿತ್ತು. “ಎಲ್ಲದಕ್ಕೂ ‘ಸಹಜವಾಗಿ’, ‘ಸ್ವಾಭಾವಿಕವಾಗಿ’ ಎನ್ನುತ್ತಿರುತ್ತೀಯಲ್ಲ, ಅದರಲ್ಲೂ ತೀರ ಅಸಹಜ ಅಸ್ವಾಭಾವಿಕ ಸಂಗತಿಗಳ ಕುರಿತಾಗಿ?” ಕಾನ್ಸಂಟ್ರೇಶನ್ ಕ್ಯಾಂಪ್ ಎಂಬಂಥ ಜಾಗದಲ್ಲಿ ಇವೆಲ್ಲ ಸಹಜ ಸ್ವಾಭಾವಿಕ ಸಂಗತಿಗಳೇ ಎಂದು ನಾನವರಿಗೆ ಹೇಳಿದೆ. […]
ಯಾವುದೇ ಸ್ಥಳದಲ್ಲಿ ಸಮಯದಲ್ಲಿ , ಎಂಥದೇ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳಿರುತ್ತವೆ, ಮಾಡಬೇಕಾದ ಆಯ್ಕೆಗಳಿರುತ್ತವೆ, ಇಡಬೇಕಾದ ಹೆಜ್ಜೆಗಳಿರುತ್ತವೆ. ಬದುಕಬೇಕೆಂದರೆ, ತಲೆಯೆತ್ತಿ ನಿಲ್ಲಬೇಕೆಂದರೆ, ನೀರಿನಲ್ಲಿ ಮುಳುಗದೇ ಈಜುತ್ತಲಿರಬೇಕೆಂದರೆ. ಪ್ರತಿಯೊಬ್ಬರೂ ಇವನ್ನು ಮಾಡಲೇಬೇಕಾಗುತ್ತದೆ. ಕಾನ್ಸಂಟ್ರೇಶನ್ ಕ್ಯಾಂಪ್ಗೆ ಹೋಗುವುದರಿಂದ ತಪ್ಪಿಸಿಕೊಂಡು ಹೊರಗೆಯೇ ಇದ್ದವರು ಹೊರಜಗತ್ತಿನಲ್ಲಿ ಬದುಕಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡರು. ಕ್ಯಾಂಪ್ನ ಒಳಗೆ ಸಿಕ್ಕಿಹಾಕಿಕೊಂಡವರು ಕೂಡ ಅದನ್ನೇ ಮಾಡಿದರು — ಅವರಿಗೆ ಅದು ಸಾಧ್ಯವಾಗುವವರೆಗಾದರೂ. ತನಗೆ ಎದುರಾಗಿ ತನ್ನ ವಿಚಾರಣೆ ನಡೆಸುವ ಪ್ರತಿಯೊಬ್ಬರಿಗೂ ಜೂರಿಯು ತಿಳಿಸಿ ಹೇಳಬೇಕಾಗಿರುವುದು ಇದಿಷ್ಟನ್ನೇ. ಅವರಿಗೆ ಅರ್ಥಮಾಡಿಸುವ ಪ್ರತಿಯೊಂದು ಯತ್ನವೂ ವಿಫಲವಾಗುತ್ತಿದೆ.
“[…] ನಾವು ಎಂದಿಗೂ ಹೊಸ ಬದುಕನ್ನು ಪ್ರಾರಂಭಿಸಲು ಸಾಧ್ಯವಿಲ್ಲ, ಹಳೆಯದನ್ನೇ ಮುಂದುವರಿಸುತ್ತ ಹೋಗುತ್ತೇವಷ್ಟೇ. ಮುಂದೆ ಅಡಿಯಿಟ್ಟದ್ದು ನಾನು, ಬೇರಾರೂ ಅಲ್ಲ. ನಾನು ನನ್ನ ಹಣೆಬರಹಕ್ಕೆ, ಪಡೆದುಕೊಂಡು ಬಂದ ವಿಧಿಗೆ ಯಾವತ್ತೂ ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ ಎಂದು ದೃಢವಾಗಿ ಹೇಳಿದೆ.
ಕೊನೆಯ ಕೆಲವು ಪುಟಗಳಲ್ಲಿ, ನಿಯತಿ, ಸ್ವಾತಂತ್ಯ, ಮತ್ತು ಸೌಖ್ಯದ ಪ್ರಶ್ನೆಗಳನ್ನು ಕುರಿತು ನಿರೂಪಕನ ಮೂಲಕ ಕೆರ್ಟೆಸ್ ತನ್ನ ವಿಚಾರಗಳನ್ನು ಗಮನಾರ್ಹ ಸ್ಪಷ್ಟತೆಯೊಂದಿಗೆ ಮಂಡಿಸುತ್ತಾರೆ.
[…] ನಿಯತಿ ಎಂಬಂಥದ್ದೇನಾದರೂ ಇದ್ದಲ್ಲಿ ಸ್ವಾತಂತ್ರ್ಯವೆನ್ನುವುದು ಸಾಧ್ಯವಿಲ್ಲದ್ದು ಎಂಬ ವಿಷಯವನ್ನು ಒಪ್ಪಲು ಇವರೇಕೆ ಸಿದ್ಧರಾಗುವುದಿಲ್ಲ? ಆದರೆ, ಅದೇ ಸ್ವಾತಂತ್ರ್ಯ ಎಂಬಂಥದ್ದೇನಾದರೂ ಇದ್ದಲ್ಲಿ — ನಾನು ಹೇಳುತ್ತ ಹೋದೆ, ನನ್ನಷ್ಟಕ್ಕೆ ನಾನೇ ಇನ್ನಷ್ಟು ಮತ್ತಷ್ಟು ಬೆರಗಾಗುತ್ತ, ನಾನು ಮಾಡಬೇಕಾದ ಕೆಲಸಗಳಿಂದಾಗಿ ಉತ್ಸಾಹಿತನಾಗುತ್ತ, ಬೆಚ್ಚಗಾಗುತ್ತ ಮುನ್ನಡೆದೆ — ಹಾಗಿದ್ದಲ್ಲಿ, ನಿಯತಿ ಎನ್ನುವುದು ಇರುವುದಿಲ್ಲ; ಅದರರ್ಥ — ನಾನು ತಡೆದೆ, ಅರೆಗಳಿಗೆಯಷ್ಟೇ, ಉಸಿರೆಳೆದುಕೊಳ್ಳುವ ಸಲುವಾಗಿ — ಅದರರ್ಥ, ನಮ್ಮ ಪಾಲಿಗೆ ನಾವೇ ನಿಯತಿ. ನಾನು ಹಿಂದೆಂದೂ ಅನುಭವಿಸಿರದ ಸ್ಪಷ್ಟತೆಯ ಸೆಳಕಿನೊಂದಿಗೆ ಇದೆಲ್ಲವನ್ನೂ ನಾನು ಒಮ್ಮೆಲೇ ಮನಗಂಡೆ.
ಇಷ್ಟೆಲ್ಲ ಆದ ಮೇಲೂ ತನಗೊಂದು ಭವಿತವ್ಯವಿದೆಯೆಂದು ಜೂರಿಗೆ ಗೊತ್ತಿದೆ. ಮನುಷ್ಯ ಬದುಕಿರುವವರೆಗೂ ಯಾವುದೇ ಪರಿಸ್ಥಿತಿಯಲ್ಲೂ ಸುಖದ ದಾರಿಯ ಹುಡುಕಾಟದಲ್ಲಿರುತ್ತಾನೆ, ತಾನು ಈಗಲೂ ಸಂತೋಷವಾಗಿರಬಹುದು, ಒಳ್ಳೆಯ ಬದುಕನ್ನೂ ನಡೆಸಬಹುದು, ಎಂಬ ನಂಬಿಕೆಯಿದೆ ಅವನಿಗೆ.
[…] ಮುಂದೆ ಸೌಖ್ಯವಿರುತ್ತದೆ ಎಂದು ನನಗೆ ಈಗಾಗಲೇ ಗೊತ್ತಿದೆ. ಏಕೆಂದರೆ, ಅಂಥಲ್ಲಿಯೂ, ಮನುಷ್ಯರನ್ನು ಆಹುತಿ ಪಡೆದು ಹೊಗೆಯುಗುಳುತ್ತಿದ್ದ ಚಿಮಣಿಗಳ ಪಕ್ಕದಲ್ಲಿಯೂ, ಹಿಂಸೆಯ ದೌರ್ಜನ್ಯದ ಸರಣಿಯ ನಡುವಿನ ಬಿಡುವುಗಳಲ್ಲಿ ಸಂತೋಷವನ್ನು ಹೋಲುವ ಏನೋ ಒಂದಿತ್ತು. ಪ್ರತಿಯೊಬ್ಬರೂ ಅಲ್ಲಿಯ ಕಾರ್ಪಣ್ಯಗಳ ಬಗ್ಗೆ, “ಘೋರ ದೌರ್ಜನ್ಯಗಳ” ಬಗ್ಗೆ ಮಾತ್ರ ಕೇಳುತ್ತಾರೆ. ಆದರೆ, ಪ್ರಾಯಶಃ ನನ್ನ ಪಾಲಿಗೆ ಆ ಅನುಭವವೇ ಅತ್ಯಂತ ಸ್ಮರಣೀಯವಾಗಿ ಉಳಿಯುವಂಥದ್ದು. ಹೌದು, ಮುಂದಿನ ಸಲ ಯಾರಾದರೂ ನನ್ನನ್ನು ಕೇಳಿದರೆ ನಾನು ಅದರ ಬಗ್ಗೆ ಹೇಳಲೇಬೇಕು, ಕಾನ್ಸಂಟ್ರೇಶನ್ ಕ್ಯಾಂಪ್ನ ಸಂತೋಷದ ಗಳಿಗೆಗಳ ಬಗ್ಗೆ.
ಎಂದರೆ, ನಿಜಕ್ಕೂ ಯಾರಾದರೂ ನನ್ನನ್ನು ಕೇಳಿದರೆ. ಹಾಗೂ ನನಗೇ ಅದು ಮರೆತುಹೋಗದಿದ್ದರೆ.
ಕಾನ್ಸಂಟ್ರೇಶನ್ ಕ್ಯಾಂಪ್ನಂಥಲ್ಲೂ ಘನತೆಯನ್ನು ಕಾಪಿಟ್ಟುಕೊಳ್ಳಬಹುದು ಎನ್ನುವ ಪ್ರೀಮೋ ಲೆವಿ, ಯಾವುದೇ ಸಂದರ್ಭದಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳುವ, ಜೀವನದಲ್ಲಿ ಸಾರ್ಥಕತೆ ಮತ್ತು ಉದ್ದೇಶವನ್ನು ಕಂಡುಕೊಳ್ಳಬಹುದು ಎನ್ನುವ ವಿಕ್ಟರ್ ಫ್ರ್ಯಾಂಕ್ಲ್, ಸಮುದಾಯದ ಹಂಗಿಲ್ಲದೇ, ಜಗತ್ತಿನ ಕರುಣೆಯ ಅಗತ್ಯವಿಲ್ಲದೇ ಸ್ವತಂತ್ರವಾಗಿ ತನ್ನಷ್ಟಕ್ಕೇ ಬದುಕಲು ಸಮಯವಿದೆ ಎನ್ನುವ ಮೈಕಲ್ ಕೆ, ಹಾಗೂ ಭಯಾನಕತೆಯ ನಡುವೆಯೂ ದಕ್ಕಬಲ್ಲ ಸುಖದ ಗಳಿಗೆಗಳನ್ನು ನೆನಪಿಟ್ಟುಕೊಳ್ಳಬಯಸುವ ಜೂರಿ. ಇಮ್ರೆ ಕೆರ್ಟೆಸ್ರ Fatelessness ಹಲಬಗೆಗಳಲ್ಲಿ ಸಮುದಾಯದ ಸಂಘಟಿತ ಸಂಕಲ್ಪದ ಎದುರು ವ್ಯಕ್ತಿಯೊಬ್ಬನ ಸಂಕಲ್ಪದ, ಕರ್ತೃತ್ವಶಕ್ತಿಯ ಗಮನಾರ್ಹ ವಿಜಯವಾಗಿದೆ. ವ್ಯಕ್ತಿಯೊಬ್ಬ ಆಳ್ವಿಕೆಯ ದಬ್ಬಾಳಿಕೆಯಿಂದಷ್ಟೇ ಅಲ್ಲದೇ ಸಮಾಜದ ನಿರೀಕ್ಷೆಗಳ ಹೊರೆಯನ್ನೂ ನೀಗಿಸಿಕೊಳ್ಳುವ ಪ್ರಯತ್ನವಿದು.